094 ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 94

ಸಾರ

ಅಗಸ್ತ್ಯಾಶ್ರಮಕ್ಕೆ ಹೋದುದು; ಲೋಮಶನು ಅಗಸ್ತ್ಯೋಪಾಖ್ಯಾನವನ್ನು ಪ್ರಾರಂಭಿಸಿದುದು (1-3). ದೈತ್ಯ ಸಹೋದರರಾದ ವಾತಾಪಿ-ಇಲ್ವಲರು ಬ್ರಾಹ್ಮಣರನ್ನು ಪೀಡಿಸುತ್ತಿರುವುದು (4-10). ಅಗಸ್ತ್ಯನು ತನ್ನ ಪಿತೃಗಳಿಗೆ ಸಂತಾನವನ್ನು ಪಡೆಯುತ್ತೇನೆಂದು ಭರವಸೆಯನ್ನು ನೀಡುವುದು (11-15). ತನ್ನ ಸಂತಾನವನ್ನು ಹಡೆಯಬಲ್ಲ ಯಾವ ಸ್ತ್ರೀಯನ್ನೂ ಕಾಣದೇ ಅಗಸ್ತ್ಯನು ಬೇರೆ ಬೇರೆ ಪ್ರಾಣಿಗಳಿಂದ ಅನುತ್ತಮ ಅಂಗಗಳನ್ನು ಒಟ್ಟುಗೂಡಿಸಿ ಓರ್ವ ಸ್ತ್ರೀಯನ್ನು ನಿರ್ಮಿಸಿ, ಮಕ್ಕಳನ್ನು ಬಯಸಿದ್ದ ವಿದರ್ಭರಾಜನಿಗೆ ಕೇಳಿದಾಗ ಕೊಡು ಎಂದು ಒಪ್ಪಿಸುವುದು; ಕನ್ಯೆಗೆ ಲೋಪಾಮುದ್ರ ಎಂಬ ಹೆಸರು (16-27).

03094001 ವೈಶಂಪಾಯನ ಉವಾಚ।
03094001a ತತಃ ಸಂಪ್ರಸ್ಥಿತೋ ರಾಜಾ ಕೌಂತೇಯೋ ಭೂರಿದಕ್ಷಿಣಃ।
03094001c ಅಗಸ್ತ್ಯಾಶ್ರಮಮಾಸಾದ್ಯ ದುರ್ಜಯಾಯಾಮುವಾಸ ಹ।।

ವೈಶಂಪಾಯನನು ಹೇಳಿದನು: “ನಂತರ ಭೂರಿದಕ್ಷಿಣ ರಾಜ ಕೌಂತೇಯನು ಅಲ್ಲಿಂದ ಹೊರಟು ಅಗಸ್ತ್ಯಾಶ್ರಮವನ್ನು ತಲುಪಿ ದುರ್ಜಯದಲ್ಲಿ ತಂಗಿದನು.

03094002a ತತ್ರ ವೈ ಲೋಮಶಂ ರಾಜಾ ಪಪ್ರಚ್ಚ ವದತಾಂ ವರಃ।
03094002c ಅಗಸ್ತ್ಯೇನೇಹ ವಾತಾಪಿಃ ಕಿಮರ್ಥಮುಪಶಾಮಿತಃ।।
03094003a ಆಸೀದ್ವಾ ಕಿಂಪ್ರಭಾವಶ್ಚ ಸ ದೈತ್ಯೋ ಮಾನವಾಂತಕಃ।
03094003c ಕಿಮರ್ಥಂ ಚೋದ್ಗತೋ ಮನ್ಯುರಗಸ್ತ್ಯಸ್ಯ ಮಹಾತ್ಮನಃ।।

ಅಲ್ಲಿ ಮಾತನಾಡುವರಲ್ಲಿ ಶ್ರೇಷ್ಠ ರಾಜನು ಲೋಮಶನಿಗೆ ಕೇಳಿದನು: “ಯಾವ ಕಾರಣಕ್ಕಾಗಿ ಅಗಸ್ತ್ಯನು ವಾತಾಪಿಯನ್ನು ಸಂಹರಿಸಿದನು ಮತ್ತು ಆ ಮಾನವಾಂತಕ ದೈತ್ಯನ ಪ್ರಭಾವವಾದರೂ ಏನಿತ್ತು? ಯಾವ ವಿಷಯವು ಮಹಾತ್ಮ ಅಗಸ್ತ್ಯನಿಗೆ ಸಿಟ್ಟುಬರುವಂತೆ ಮಾಡಿತು?”

03094004 ಲೋಮಶ ಉವಾಚ।
03094004a ಇಲ್ವಲೋ ನಾಮ ದೈತೇಯ ಆಸೀತ್ಕೌರವನಂದನ।
03094004c ಮಣಿಮತ್ಯಾಂ ಪುರಿ ಪುರಾ ವಾತಾಪಿಸ್ತಸ್ಯ ಚಾನುಜಃ।।

ಲೋಮಶನು ಹೇಳಿದನು: “ಕೌರವನಂದನ! ಹಿಂದೆ ಮಣಿಮತಿ ಪುರದಲ್ಲಿ ಇಲ್ವಲ ಎಂಬ ಹೆಸರಿನ ದೈತ್ಯನಿದ್ದನು. ವಾತಾಪಿಯು ಅವನ ಅನುಜ.

03094005a ಸ ಬ್ರಾಹ್ಮಣಂ ತಪೋಯುಕ್ತಮುವಾಚ ದಿತಿನಂದನಃ।
03094005c ಪುತ್ರಂ ಮೇ ಭಗವಾನೇಕಮಿಂದ್ರತುಲ್ಯಂ ಪ್ರಯಚ್ಚತು।।

ಆ ದಿತಿನಂದನನು ಒಮ್ಮೆ ತಪೋಯುಕ್ತನಾದ ಓರ್ವ ಬ್ರಾಹ್ಮಣನಲ್ಲಿ ಕೇಳಿಕೊಂಡನು: “ಭಗವನ್! ನನಗೆ ಇಂದ್ರನಿಗೆ ಸಮಾನ ಪುತ್ರನೋರ್ವನನ್ನು ಪರಿಪಾಲಿಸು.”

03094006a ತಸ್ಮೈ ಸ ಬ್ರಾಹ್ಮಣೋ ನಾದಾತ್ಪುತ್ರಂ ವಾಸವಸಮ್ಮಿತಂ।
03094006c ಚುಕ್ರೋಧ ಸೋಽಸುರಸ್ತಸ್ಯ ಬ್ರಾಹ್ಮಣಸ್ಯ ತತೋ ಭೃಶಂ।।

ವಾಸವನ ಸಮನಾದ ಪುತ್ರನನ್ನು ಅವನಿಗೆ ಆ ಬ್ರಾಹ್ಮಣನು ಕೊಡದೇ ಇರಲು ಆ ಅಸುರನು ಬ್ರಾಹ್ಮಣನ ಮೇಲೆ ಅತ್ಯಂತ ಕೋಪಗೊಂಡನು.

03094007a ಸಮಾಹ್ವಯತಿ ಯಂ ವಾಚಾ ಗತಂ ವೈವಸ್ವತಕ್ಷಯಂ।
03094007c ಸ ಪುನರ್ದೇಹಮಾಸ್ಥಾಯ ಜೀವನ್ಸ್ಮ ಪ್ರತಿದೃಶ್ಯತೇ।।

ಅವನು ವೈವಸ್ವತಕ್ಷಯಕ್ಕೆ ಹೋಗಿದ್ದ ಯಾರನ್ನು ಕರೆದರೂ ಅವನು ಪುನಃ ದೇಹವನ್ನು ಧರಿಸಿ ಜೀವಂತನಾಗಿ ಬಂದು ಕಾಣಿಸಿಕೊಳ್ಳುತ್ತಿದ್ದನು.

03094008a ತತೋ ವಾತಾಪಿಮಸುರಂ ಚಾಗಂ ಕೃತ್ವಾ ಸುಸಂಸ್ಕೃತಂ।
03094008c ತಂ ಬ್ರಾಹ್ಮಣಂ ಭೋಜಯಿತ್ವಾ ಪುನರೇವ ಸಮಾಹ್ವಯತ್।।

ಅವನು ಅಸುರ ವಾತಾಪಿಯನ್ನು ಆಡನ್ನಾಗಿ ಮಾಡಿ, ಅದನ್ನೇ ರುಚಿಯಾಗಿ ಬೇಯಿಸಿ ಆ ಬ್ರಾಹ್ಮಣನಿಗೆ ತಿನ್ನಿಸಿ ಪುನಃ ಅವನನ್ನು ಕೂಗಿ ಕರೆದನು.

03094009a ತಸ್ಯ ಪಾರ್ಶ್ವಂ ವಿನಿರ್ಭಿದ್ಯ ಬ್ರಾಹ್ಮಣಸ್ಯ ಮಹಾಸುರಃ।
03094009c ವಾತಾಪಿಃ ಪ್ರಹಸನ್ರಾಜನ್ನಿಶ್ಚಕ್ರಾಮ ವಿಶಾಂ ಪತೇ।।

ರಾಜನ್! ವಿಶಾಂಪತೇ! ಆಗ ಆ ಮಹಾಸುರ ವಾತಾಪಿಯು ಬ್ರಾಹ್ಮಣನ ಪಾರ್ಶ್ವವನ್ನು ಸೀಳಿ ನಗುತ್ತಾ ಹೊರಬಂದನು.

03094010a ಏವಂ ಸ ಬ್ರಾಹ್ಮಣಾನ್ರಾಜನ್ಭೋಜಯಿತ್ವಾ ಪುನಃ ಪುನಃ।
03094010c ಹಿಂಸಯಾಮಾಸ ದೈತೇಯ ಇಲ್ವಲೋ ದುಷ್ಟಚೇತನಃ।।

ರಾಜನ್! ಈ ರೀತಿಯಲ್ಲಿ ಆ ದುಷ್ಟಚೇತನ ದೈತ್ಯ ಇಲ್ವಲನು ಬ್ರಾಹ್ಮಣರಿಗೆ ಪುನಃ ಪುನಃ ಭೋಜನವನ್ನಿತ್ತು ಹಿಂಸಿಸತೊಡಗಿದನು.

03094011a ಅಗಸ್ತ್ಯಶ್ಚಾಪಿ ಭಗವಾನೇತಸ್ಮಿನ್ಕಾಲ ಏವ ತು।
03094011c ಪಿತೄನ್ದದರ್ಶ ಗರ್ತೇ ವೈ ಲಂಬಮಾನಾನಧೋಮುಖಾನ್।।

ಇದೇ ಸಮಯದಲ್ಲಿ ಭಗವಾನ್ ಅಗಸ್ತ್ಯನು ಒಂದು ಬಾವಿಯಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ತನ್ನ ಪಿತೃಗಳನ್ನು ಕಂಡನು.

03094012a ಸೋಽಪೃಚ್ಚಲ್ಲಂಬಮಾನಾಂಸ್ತಾನ್ಭವಂತ ಇಹ ಕಿಂಪರಾಃ।
03094012c ಸಂತಾನಹೇತೋರಿತಿ ತೇ ತಮೂಚುರ್ಬ್ರಹ್ಮವಾದಿನಃ।।

ಆ ರೀತಿಯಾಗಿ ನೇತಾಡುತ್ತಿರುವ ಅವರನ್ನು ಕೇಳಿದನು: “ನಿಮ್ಮ ತೊಂದರೆಯೇನು?” ಆಗ ಆ ಬ್ರಹ್ಮವಾದಿಗಳು “ಸಂತಾನ!” ಎಂದು ಹೇಳಿದರು.

03094013a ತೇ ತಸ್ಮೈ ಕಥಯಾಮಾಸುರ್ವಯಂ ತೇ ಪಿತರಃ ಸ್ವಕಾಃ।
03094013c ಗರ್ತಮೇತಮನುಪ್ರಾಪ್ತಾ ಲಂಬಾಮಃ ಪ್ರಸವಾರ್ಥಿನಃ।।

ಅವನಿಗೆ ಹೇಳಿದರು: “ನಾವು ನಿನ್ನ ಸ್ವಂತ ಪಿತೃಗಳು. ಪ್ರಸವಾರ್ಥಿಗಳಾದ ನಾವು ಈ ಕೂಪದಲ್ಲಿ ನೇತಾಡುವ ಪರಿಸ್ಥಿತಿಗೆ ಬಂದಿಳಿದಿದ್ದೇವೆ.

03094014a ಯದಿ ನೋ ಜನಯೇಥಾಸ್ತ್ವಮಗಸ್ತ್ಯಾಪತ್ಯಮುತ್ತಮಂ।
03094014c ಸ್ಯಾನ್ನೋಽಸ್ಮಾನ್ನಿರಯಾನ್ಮೋಕ್ಷಸ್ತ್ವಂ ಚ ಪುತ್ರಾಪ್ನುಯಾ ಗತಿಂ।।

ಅಗಸ್ತ್ಯ! ನೀನು ಉತ್ತಮ ಮಕ್ಕಳನ್ನೇನಾದರೂ ಪಡೆದರೆ ನಾವು ಈ ನರಕದಿಂದ ಮೋಕ್ಷಹೊಂದುತ್ತೇವೆ ಮತ್ತು ಪುತ್ರರಿಂದ ನೀನೂ ಕೂಡ ಗತಿಯನ್ನು ಹೊಂದುತ್ತೀಯೆ.”

03094015a ಸ ತಾನುವಾಚ ತೇಜಸ್ವೀ ಸತ್ಯಧರ್ಮಪರಾಯಣಃ।
03094015c ಕರಿಷ್ಯೇ ಪಿತರಃ ಕಾಮಂ ವ್ಯೇತು ವೋ ಮಾನಸೋ ಜ್ವರಃ।।

ಆ ತೇಜಸ್ವೀ ಸತ್ಯಧರ್ಮಪರಾಯಣನು ಅವರಿಗೆ ಹೇಳಿದನು: “ಪಿತೃಗಳೇ! ನಿಮ್ಮ ಇಚ್ಛೆಯಂತೆಯೇ ಮಾಡುತ್ತೇನೆ. ನಿಮ್ಮ ಮನಸ್ಸಿನ ಜ್ವರವನ್ನು ತೊರೆಯಿರಿ.”

03094016a ತತಃ ಪ್ರಸವಸಂತಾನಂ ಚಿಂತಯನ್ಭಗವಾನೃಷಿಃ।
03094016c ಆತ್ಮನಃ ಪ್ರಸವಸ್ಯಾರ್ಥೇ ನಾಪಶ್ಯತ್ಸದೃಶೀಂ ಸ್ತ್ರಿಯಂ।।

ಆಗ ಪ್ರಸವ ಸಂತಾನದ ಕುರಿತು ಚಿಂತಿಸುತ್ತಾ ಆ ಭಗವಾನ್ ಋಷಿಯು ತನ್ನ ಮಗುವನ್ನು ಹಡೆಯಬಲ್ಲಂಥ ಯಾವ ಸ್ತ್ರೀಯನ್ನೂ ಕಾಣಲಿಲ್ಲ.

03094017a ಸ ತಸ್ಯ ತಸ್ಯ ಸತ್ತ್ವಸ್ಯ ತತ್ತದಂಗಮನುತ್ತಮಂ।
03094017c ಸಂಭೃತ್ಯ ತತ್ಸಮೈರಂಗೈರ್ನಿರ್ಮಮೇ ಸ್ತ್ರಿಯಮುತ್ತಮಾಂ।।

ಆಗ ಅವನು ಬೇರೆ ಬೇರೆ ಪ್ರಾಣಿಗಳಿಂದ ಅನುತ್ತಮವಾದ ಬೇರೆ ಬೇರೆ ಅಂಗಗಳನ್ನು ಒಟ್ಟುಹಾಕಿ, ಆ ಅಂಗಗಳಿಂದ ಒಂದು ಉತ್ತಮ ಸ್ತ್ರೀಯನ್ನು ನಿರ್ಮಿಸಿದನು.

03094018a ಸ ತಾಂ ವಿದರ್ಭರಾಜಾಯ ಪುತ್ರಕಾಮಾಯ ತಾಮ್ಯತೇ।
03094018c ನಿರ್ಮಿತಾಮಾತ್ಮನೋಽರ್ಥಾಯ ಮುನಿಃ ಪ್ರಾದಾನ್ಮಹಾತಪಾಃ।।

ಆಗ ಆ ಮಹಾತಪಸ್ವಿ ಮುನಿಯು ಅವಳನ್ನು ತನಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಪುತ್ರರನ್ನು ಬಯಸುತ್ತಿದ್ದ ವಿದರ್ಭರಾಜನಿಗೆ ಕೊಟ್ಟನು.

03094019a ಸಾ ತತ್ರ ಜಜ್ಞೇ ಸುಭಗಾ ವಿದ್ಯುತ್ಸೌದಾಮಿನೀ ಯಥಾ।
03094019c ವಿಭ್ರಾಜಮಾನಾ ವಪುಸಾ ವ್ಯವರ್ಧತ ಶುಭಾನನಾ।।

ಅಲ್ಲಿ ಆ ಸುಭಗೆ ವಿದ್ಯುತ್ತಿನ ಮಾಲೆಯು ಜನಿಸಿದಳು ಮತ್ತು ಆ ಶುಭಾನನೆಯು ವಿಭ್ರಾಜಿಸುವ ಸೌಂದರ್ಯದಿಂದ ವೃದ್ಧಿಸಿದಳು.

03094020a ಜಾತಮಾತ್ರಾಂ ಚ ತಾಂ ದೃಷ್ಟ್ವಾ ವೈದರ್ಭಃ ಪೃಥಿವೀಪತಿಃ।
03094020c ಪ್ರಹರ್ಷೇಣ ದ್ವಿಜಾತಿಭ್ಯೋ ನ್ಯವೇದಯತ ಭಾರತ।।

ಭಾರತ! ಅವಳು ಹುಟ್ಟಿದೊಡನೆಯೇ ಆ ಪೃಥ್ವೀಪತಿ ವೈದರ್ಭನು ಸಂತೋಷದಿಂದ ದ್ವಿಜರಿಗೆ ಅವಳನ್ನು ನಿವೇದಿಸಿದನು.

03094021a ಅಭ್ಯನಂದಂತ ತಾಂ ಸರ್ವೇ ಬ್ರಾಹ್ಮಣಾ ವಸುಧಾಧಿಪ।
03094021c ಲೋಪಾಮುದ್ರೇತಿ ತಸ್ಯಾಶ್ಚ ಚಕ್ರಿರೇ ನಾಮ ತೇ ದ್ವಿಜಾಃ।।

ವಸುಧಾಧಿಪ! ಸರ್ವ ಬ್ರಾಹ್ಮಣರೂ ಅವಳನ್ನು ಸ್ವಾಗತಿಸಿದರು ಮತ್ತು ಆ ದ್ವಿಜರು ಅವಳಿಗೆ ಲೋಪಾಮುದ್ರ ಎನ್ನುವ ಹೆಸರನ್ನು ಇಟ್ಟರು.

03094022a ವವೃಧೇ ಸಾ ಮಹಾರಾಜ ಬಿಭ್ರತೀ ರೂಪಮುತ್ತಮಂ।
03094022c ಅಪ್ಸ್ವಿವೋತ್ಪಲಿನೀ ಶೀಘ್ರಮಗ್ನೇರಿವ ಶಿಖಾ ಶುಭಾ।।

ಮಹಾರಾಜ! ಅವಳು ಅನುತ್ತಮ ರೂಪವಂತಳಾಗಿ ಕಾಂತಿಯುಕ್ತಳಾಗಿ, ನೀರಿನಲ್ಲಿ ತಾವರೆಯಂತೆ ಅಥವಾ ಶುಭ ಅಗ್ನಿಯ ಶಿಖೆಯಂತೆ ಬೇಗನೆ ಬೆಳೆದಳು.

03094023a ತಾಂ ಯೌವನಸ್ಥಾಂ ರಾಜೇಂದ್ರ ಶತಂ ಕನ್ಯಾಃ ಸ್ವಲಂಕೃತಾಃ।
03094023c ದಾಶೀಶತಂ ಚ ಕಲ್ಯಾಣೀಮುಪತಸ್ಥುರ್ವಶಾನುಗಾಃ।।

ರಾಜೇಂದ್ರ! ಅವಳಿಗೆ ಯೌವನಪ್ರಾಪ್ತಿಯಾದಾಗ ಸ್ವಲಂಕೃತರಾದ ನೂರು ಕನ್ಯೆಯರು ಮತ್ತು ನೂರು ದಾಸಿಯರು ಆ ಕಲ್ಯಾಣಿಯ ಬೇಕುಬೇಡಗಳನ್ನು ನೋಡಿಕೊಳ್ಳುತ್ತಾ ಸೇವಿಸುತ್ತಿದ್ದರು.

03094024a ಸಾ ಸ್ಮ ದಾಸೀಶತವೃತಾ ಮಧ್ಯೇ ಕನ್ಯಾಶತಸ್ಯ ಚ।
03094024c ಆಸ್ತೇ ತೇಜಸ್ವಿನೀ ಕನ್ಯಾ ರೋಹಿಣೀವ ದಿವಿ ಪ್ರಭೋ।।

ಪ್ರಭೋ! ಸುತ್ತುವರೆದ ನೂರು ದಾಸಿಯರ ಮತ್ತು ನೂರು ಕನ್ಯೆಯರ ಮಧ್ಯೆ ಆ ಕನ್ಯೆಯು ಆಕಾಶದಲ್ಲಿ ರೋಹಿಣಿಯಂತೆ ಬೆಳಗುತ್ತಿದ್ದಳು.

03094025a ಯೌವನಸ್ಥಾಮಪಿ ಚ ತಾಂ ಶೀಲಾಚಾರಸಮನ್ವಿತಾಂ।
03094025c ನ ವವ್ರೇ ಪುರುಷಃ ಕಶ್ಚಿದ್ಭಯಾತ್ತಸ್ಯ ಮಹಾತ್ಮನಃ।।

ಯೌವನಸ್ಥೆಯಾಗಿದ್ದರೂ, ಶೀಲಾಚಾರ ಸಮನ್ವಿತಳಾಗಿದ್ದರೂ ಕೂಡ ಆ ಮಹಾತ್ಮನ ಭಯದಿಂದ ಯಾವ ಪುರುಷನೂ ಅವಳನ್ನು ವರಿಸಲಿಲ್ಲ.

03094026a ಸಾ ತು ಸತ್ಯವತೀ ಕನ್ಯಾ ರೂಪೇಣಾಪ್ಸರಸೋಽಪ್ಯತಿ।
03094026c ತೋಷಯಾಮಾಸ ಪಿತರಂ ಶೀಲೇನ ಸ್ವಜನಂ ತಥಾ।।

ಆದರೂ ರೂಪದಲ್ಲಿ ಅಪ್ಸರೆಯರನ್ನೂ ಮೀರಿಸಿದ್ದ ಆ ಸತ್ಯವತಿ ಕನ್ಯೆಯು ತನ್ನ ಶೀಲದಿಂದ ತಂದೆ ಮತ್ತು ಸ್ವಜನರಿಗೆ ಸಂತೋಷವನ್ನು ತಂದಳು.

03094027a ವೈದರ್ಭೀಂ ತು ತಥಾಯುಕ್ತಾಂ ಯುವತೀಂ ಪ್ರೇಕ್ಷ್ಯ ವೈ ಪಿತಾ।
03094027c ಮನಸಾ ಚಿಂತಯಾಮಾಸ ಕಸ್ಮೈ ದದ್ಯಾಂ ಸುತಾಮಿತಿ।।

ಆ ವೈದರ್ಭಿಯು ಹೀಗೆ ಯುವತಿಯಾಗಿದ್ದುದನ್ನು ನೊಡಿದ ಅವಳ ತಂದೆಯು ಈ ನನ್ನ ಮಗಳನ್ನು ಯಾರಿಗೆ ಕೊಡಲಿ? ಎಂದು ಮನಸ್ಸಿನಲ್ಲಿಯೇ ಚಿಂತಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ನಾಲ್ಕನೆಯ ಅಧ್ಯಾಯವು.