091 ೋಮಶತೀರ್ಥಯಾತ್ರಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 91

ಸಾರ

ಉಳಿದುಕೊಂಡ ಕೆಲವು ಬ್ರಾಹ್ಮಣರು ತಮ್ಮನ್ನೂ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬೇಕೆಂದು ಕೇಳಿಕೊಳ್ಳಲು ಯುಧಿಷ್ಠಿರನು ಒಪ್ಪಿಕೊಂಡಿದುದು (1-15). ತೀರ್ಥಯಾತ್ರೆಗೆ ಸಿದ್ಧತೆಗಳು ನಡೆಯುತ್ತಿರುವಾಗ ವ್ಯಾಸ, ನಾರದ-ಪರ್ವತರು ಬಂದು ತೀರ್ಥಯಾತ್ರೆ ಮಾಡುವಾಗ ಶರೀರ ನಿಯಮ, ಮನಸ್ಸು ಮತ್ತು ಬುದ್ಧಿಯ ಶುದ್ಧತೆಗಳ ಕುರಿತು ಹೇಳುವುದು; ಪ್ರಯಾಣ (16-28).

03091001 ವೈಶಂಪಾಯನ ಉವಾಚ।
03091001a ತತಃ ಪ್ರಯಾಂತಂ ಕೌಂತೇಯಂ ಬ್ರಾಹ್ಮಣಾ ವನವಾಸಿನಃ।
03091001c ಅಭಿಗಮ್ಯ ತದಾ ರಾಜನ್ನಿದಂ ವಚನಮಬ್ರುವನ್।।

ವೈಶಂಪಾಯನನು ಹೇಳಿದನು: “ರಾಜನ್! ವನವಾಸಿ ಬ್ರಾಹ್ಮಣರು ಪ್ರಯಾಣಕ್ಕೆ ಹೊರಡುತ್ತಿದ್ದ ಕೌಂತೇಯನ ಬಳಿ ಬಂದು ಈ ಮಾತುಗಳನ್ನಾಡಿದರು:

03091002a ರಾಜಂಸ್ತೀರ್ಥಾನಿ ಗಂತಾಸಿ ಪುಣ್ಯಾನಿ ಭ್ರಾತೃಭಿಃ ಸಹ।
03091002c ದೇವರ್ಷಿಣಾ ಚ ಸಹಿತೋ ಲೋಮಶೇನ ಮಹಾತ್ಮನಾ।।

“ರಾಜನ್! ನೀನು ನಿನ್ನ ಸಹೋದರರೊಂದಿಗೆ ಮತ್ತು ದೇವರ್ಷಿ ಮಹಾತ್ಮ ಲೋಮಶನ ಸಹಿತ ಪುಣ್ಯತೀರ್ಥಗಳಿಗೆ ಹೋಗುತ್ತಿದ್ದೀಯೆ.

03091003a ಅಸ್ಮಾನಪಿ ಮಹಾರಾಜ ನೇತುಮರ್ಹಸಿ ಪಾಂಡವ।
03091003c ಅಸ್ಮಾಭಿರ್ಹಿ ನ ಶಕ್ಯಾನಿ ತ್ವದೃತೇ ತಾನಿ ಕೌರವ।।

ಮಹಾರಾಜ! ಪಾಂಡವ! ಕೌರವ! ನಮ್ಮನ್ನು ಕೂಡ ಕರೆದುಕೊಂಡು ಹೋಗು. ನಿನ್ನ ಸಹಾಯವಿಲ್ಲದೇ ನಾವಾಗಿಯೇ ಆ ಪುಣ್ಯತೀರ್ಥಗಳಿಗೆ ಹೋಗಲು ಶಕ್ಯರಿಲ್ಲ.

03091004a ಶ್ವಾಪದೈರುಪಸೃಷ್ಟಾನಿ ದುರ್ಗಾಣಿ ವಿಷಮಾಣಿ ಚ।
03091004c ಅಗಮ್ಯಾನಿ ನರೈರಲ್ಪೈಸ್ತೀರ್ಥಾನಿ ಮನುಜೇಶ್ವರ।।

ಮನುಜೇಶ್ವರ! ಆ ದುರ್ಗ ವಿಷಮ ಪ್ರದೇಶಗಳು ಘೋರಮೃಗಗಳಿಂದ ಕೂಡಿವೆ ಮತ್ತು ಆ ತೀರ್ಥಗಳನ್ನು ಪ್ರಯಾಣಿಕರ ಸಣ್ಣ ಗುಂಪು ತಲುಪಲು ಸಾಧ್ಯವಿಲ್ಲ.

03091005a ಭವಂತೋ ಭ್ರಾತರಃ ಶೂರಾ ಧನುರ್ಧರವರಾಃ ಸದಾ।
03091005c ಭವದ್ಭಿಃ ಪಾಲಿತಾಃ ಶೂರೈರ್ಗಚ್ಚೇಮ ವಯಮಪ್ಯುತ।।

ನಿನ್ನ ಸಹೋದರರು ಶೂರರೂ ಧನುರ್ಧರರಲ್ಲಿ ಶ್ರೇಷ್ಠರೂ ಆಗಿದ್ದಾರೆ. ಶೂರರಾದ ನಿಮ್ಮಿಂದ ಸದಾ ರಕ್ಷಿತರಾಗಿ ನಾವೂ ಕೂಡ ಆ ಪ್ರದೇಶಗಳಿಗೆ ಹೋಗಬಹುದು.

03091006a ಭವತ್ಪ್ರಸಾದಾದ್ಧಿ ವಯಂ ಪ್ರಾಪ್ನುಯಾಮ ಫಲಂ ಶುಭಂ।
03091006c ತೀರ್ಥಾನಾಂ ಪೃಥಿವೀಪಾಲ ವ್ರತಾನಾಂ ಚ ವಿಶಾಂ ಪತೇ।।

ವಿಶಾಂಪತೇ! ಪೃಥಿವೀಪಾಲ! ನಿನ್ನ ಕರುಣೆಯಿಂದ ನಾವು ತೀರ್ಥಯಾತ್ರಾ ವ್ರತದ ಶುಭ ಫಲವನ್ನು ಪಡೆಯಬಹುದು.

03091007a ತವ ವೀರ್ಯಪರಿತ್ರಾತಾಃ ಶುದ್ಧಾಸ್ತೀರ್ಥಪರಿಪ್ಲುತಾಃ।
03091007c ಭವೇಮ ಧೂತಪಾಪ್ಮಾನಸ್ತೀರ್ಥಸಂದರ್ಶನಾನ್ನೃಪ।।

ನೃಪ! ನಿನ್ನ ವೀರ್ಯದಿಂದ ಪರಿರಕ್ಷಿತರಾದ ನಾವು ಆ ತೀರ್ಥಗಳನ್ನು ಭೇಟಿಮಾಡಿ ಮತ್ತು ಅಲ್ಲಿ ಸ್ನಾನಮಾಡಿ ಶುದ್ಧಾತ್ಮರಾಗುತ್ತೇವೆ.

03091008a ಭವಾನಪಿ ನರೇಂದ್ರಸ್ಯ ಕಾರ್ತವೀರ್ಯಸ್ಯ ಭಾರತ।
03091008c ಅಷ್ಟಕಸ್ಯ ಚ ರಾಜರ್ಷೇರ್ಲೋಮಪಾದಸ್ಯ ಚೈವ ಹ।।
03091009a ಭರತಸ್ಯ ಚ ವೀರಸ್ಯ ಸಾರ್ವಭೌಮಸ್ಯ ಪಾರ್ಥಿವ।
03091009c ಧ್ರುವಂ ಪ್ರಾಪ್ಸ್ಯಸಿ ದುಷ್ಪ್ರಾಪಾಽಲ್ಲೋಕಾಂಸ್ತೀರ್ಥಪರಿಪ್ಲುತಃ।।

ಭಾರತ! ನೀನೂ ಕೂಡ ಈ ತೀರ್ಥಗಳಲ್ಲಿ ಸ್ನಾನಮಾಡಿ ನರೇಂದ್ರ ಕಾರ್ತವೀರ್ಯನಂತೆ, ಅಷ್ಟಕನಂತೆ, ರಾಜರ್ಷಿ ಲೋಮಪಾದನಂತೆ, ವೀರ ಸಾರ್ವಭೌಮ ಪಾರ್ಥಿವ ಭರತನಂತೆ ದುರ್ಲಭ ಲೋಕಗಳನ್ನು ಹೊಂದುತ್ತೀಯೆ.

03091010a ಪ್ರಭಾಸಾದೀನಿ ತೀರ್ಥಾನಿ ಮಹೇಂದ್ರಾದೀಂಶ್ಚ ಪರ್ವತಾನ್।
03091010c ಗಂಗಾದ್ಯಾಃ ಸರಿತಶ್ಚೈವ ಪ್ಲಕ್ಷಾದೀಂಶ್ಚ ವನಸ್ಪತೀನ್।।
03091010e ತ್ವಯಾ ಸಹ ಮಹೀಪಾಲ ದ್ರಷ್ಟುಮಿಚ್ಚಾಮಹೇ ವಯಂ।।

ನಿನ್ನೊಂದಿಗೆ ನಾವೂ ಕೂಡ ಪ್ರಭಾಸವೇ ಮೊದಲಾದ ತೀರ್ಥಗಳನ್ನೂ, ಮಹೇಂದ್ರಾದಿ ಪರ್ವತಗಳನ್ನೂ, ಗಂಗೆಯೇ ಮೊದಲಾದ ನದಿಗಳನ್ನೂ, ಪ್ಲಕ್ಷವೇ ಮೊದಲಾದ ವನಗಳನ್ನೂ ನೋಡಲು ಬಯಸುತ್ತೇವೆ.

03091011a ಯದಿ ತೇ ಬ್ರಾಹ್ಮಣೇಷ್ವಸ್ತಿ ಕಾ ಚಿತ್ಪ್ರೀತಿರ್ಜನಾಧಿಪ।
03091011c ಕುರು ಕ್ಷಿಪ್ರಂ ವಚೋಽಸ್ಮಾಕಂ ತತಃ ಶ್ರೇಯೋಽಭಿಪತ್ಸ್ಯಸೇ।।

ಜನಾಧಿಪ! ನಿನಗೆ ಬ್ರಾಹ್ಮಣರ ಮೇಲೆ ಸ್ಪಲ್ಪವಾದರೂ ಪ್ರೀತಿಯಿದೆಯೆಂದಾದರೆ ನಮ್ಮ ಮಾತಿನಂತೆ ಮಾಡು. ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ.

03091012a ತೀರ್ಥಾನಿ ಹಿ ಮಹಾಬಾಹೋ ತಪೋವಿಘ್ನಕರೈಃ ಸದಾ।
03091012c ಅನುಕೀರ್ಣಾನಿ ರಕ್ಷೋಭಿಸ್ತೇಭ್ಯೋ ನಸ್ತ್ರಾತುಮರ್ಹಸಿ।।

ಮಹಾಬಾಹೋ! ಈ ತೀರ್ಥಗಳು ಯಾವಾಗಲೂ ತಪಸ್ಸನ್ನು ಭಂಗಗೊಳಿಸುವ ರಾಕ್ಷಸರಿಂದ ತುಂಬಿವೆ. ಅವರಿಂದ ನಮ್ಮನ್ನು ನೀನು ರಕ್ಷಿಸಬೇಕು.

03091013a ತೀರ್ಥಾನ್ಯುಕ್ತಾನಿ ಧೌಮ್ಯೇನ ನಾರದೇನ ಚ ಧೀಮತಾ।
03091013c ಯಾನ್ಯುವಾಚ ಚ ದೇವರ್ಷಿರ್ಲೋಮಶಃ ಸುಮಹಾತಪಾಃ।।
03091014a ವಿಧಿವತ್ತಾನಿ ಸರ್ವಾಣಿ ಪರ್ಯಟಸ್ವ ನರಾಧಿಪ।
03091014c ಧೂತಪಾಪ್ಮಾ ಸಹಾಸ್ಮಾಭಿರ್ಲೋಮಶೇನ ಚ ಪಾಲಿತಃ।।

ನರಾಧಿಪ! ಧೌಮ್ಯ, ಧೀಮಂತ ನಾರದರು ಹೇಳಿದ ಮತ್ತು ಸುಮಹಾತಪ ದೇವರ್ಷಿ ಲೋಮಶನು ಹೇಳಿದ ಎಲ್ಲ ವಿವಿಧ ತೀರ್ಥಗಳಿಗೆ, ನಮ್ಮನ್ನೂ ಕರೆದುಕೊಂಡು, ಲೋಮಶನಿಂದ ಪಾಲಿತನಾಗಿ ಸಂಚಾರಮಾಡಿ ಪಾಪಗಳನ್ನು ತ್ಯಜಿಸು.”

03091015a ಸ ತಥಾ ಪೂಜ್ಯಮಾನಸ್ತೈರ್ಹರ್ಷಾದಶ್ರುಪರಿಪ್ಲುತಃ।
03091015c ಭೀಮಸೇನಾದಿಭಿರ್ವೀರೈರ್ಭ್ರಾತೃಭಿಃ ಪರಿವಾರಿತಃ।।
03091015e ಬಾಢಮಿತ್ಯಬ್ರವೀತ್ಸರ್ವಾಂಸ್ತಾನೃಷೀನ್ಪಾಂಡವರ್ಷಭಃ।।

ಹೀಗೆ ಅವರು ಹರ್ಷದ ಕಣ್ಣೀರಿಟ್ಟು ಪ್ರಾರ್ಥಿಸಿದ ನಂತರ ಭೀಮಸೇನನೇ ಮೊದಲಾದ ವೀರ ಸಹೋದರರಿಂದ ಸುತ್ತುವರೆಯಲ್ಪಟ್ಟ ಪಾಂಡವರ್ಷಭನು ಆ ಎಲ್ಲ ಋಷಿಗಳಿಗೂ “ಹಾಗೆಯೇ ಆಗಲಿ! ” ಎಂದು ಹೇಳಿದನು.

03091016a ಲೋಮಶಂ ಸಮನುಜ್ಞಾಪ್ಯ ಧೌಮ್ಯಂ ಚೈವ ಪುರೋಹಿತಂ।
03091016c ತತಃ ಸ ಪಾಂಡವಶ್ರೇಷ್ಠೋ ಭ್ರಾತೃಭಿಃ ಸಹಿತೋ ವಶೀ।।
03091016e ದ್ರೌಪದ್ಯಾ ಚಾನವದ್ಯಾಂಗ್ಯಾ ಗಮನಾಯ ಮನೋ ದಧೇ।।

ಲೋಮಶ ಮತ್ತು ಪುರೋಹಿತ ಧೌಮ್ಯನಿಂದ ಅಪ್ಪಣೆಯನ್ನು ಪಡೆದುಕೊಂಡ ನಂತರ ಆ ಪಾಂಡವಶ್ರೇಷ್ಠನು ತನ್ನ ಭ್ರಾತೃಗಳ ಮತ್ತು ಅನವಧ್ಯಾಂಗೀ ದ್ರೌಪದಿಯ ಸಹಿತ ಹೊರಡುವ ತಯಾರಿ ಮಾಡಿದನು.

03091017a ಅಥ ವ್ಯಾಸೋ ಮಹಾಭಾಗಸ್ತಥಾ ನಾರದಪರ್ವತೌ।
03091017c ಕಾಮ್ಯಕೇ ಪಾಂಡವಂ ದ್ರಷ್ಟುಂ ಸಮಾಜಗ್ಮುರ್ಮನೀಷಿಣಃ।।

ಅದೇ ಸಮಯದಲ್ಲಿ ಮಹಾಭಾಗ ವ್ಯಾಸ, ಮತ್ತು ನಾರದ-ಪರ್ವತರು ಪಾಂಡವನನ್ನು ಕಾಣಲು ಕಾಮ್ಯಕವನಕ್ಕೆ ಆಗಮಿಸಿದರು.

03091018a ತೇಷಾಂ ಯುಧಿಷ್ಠಿರೋ ರಾಜಾ ಪೂಜಾಂ ಚಕ್ರೇ ಯಥಾವಿಧಿ।
03091018c ಸತ್ಕೃತಾಸ್ತೇ ಮಹಾಭಾಗಾ ಯುಧಿಷ್ಠಿರಮಥಾಬ್ರುವನ್।।

ರಾಜಾ ಯುಧಿಷ್ಠಿರನು ಅವರಿಗೆ ಯಥಾವಿಧಿಯಾಗಿ ಪೂಜೆಗೈದನು. ಸತ್ಕೃತರಾದ ಆ ಮಹಾಭಾಗರು ಯುಧಿಷ್ಠಿರನಿಗೆ ಈ ರೀತಿ ಹೇಳಿದರು:

03091019a ಯುಧಿಷ್ಠಿರ ಯಮೌ ಭೀಮ ಮನಸಾ ಕುರುತಾರ್ಜವಂ।
03091019c ಮನಸಾ ಕೃತಶೌಚಾ ವೈ ಶುದ್ಧಾಸ್ತೀರ್ಥಾನಿ ಗಚ್ಚತ।।

“ಯುಧಿಷ್ಠಿರ! ಯಮಳರೇ! ಭೀಮ! ನಿಮ್ಮ ಮನಸ್ಸಿನಲ್ಲಿ ಧರ್ಮವನ್ನು ಪಾಲಿಸಿ! ಮನಸ್ಸನ್ನು ಶುದ್ಧಿಮಾಡಿಕೊಂಡೇ ಶುದ್ಧಾತ್ಮರಾಗಿಯೇ ಈ ತೀರ್ಥಗಳಿಗೆ ಹೋಗಬೇಕು.

03091020a ಶರೀರನಿಯಮಂ ಹ್ಯಾಹುರ್ಬ್ರಾಹ್ಮಣಾ ಮಾನುಷಂ ವ್ರತಂ।
03091020c ಮನೋವಿಶುದ್ಧಾಂ ಬುದ್ಧಿಂ ಚ ದೈವಮಾಹುರ್ವ್ರತಂ ದ್ವಿಜಾಃ।।

ಶರೀರನಿಯಮವೇ ಮನುಷ್ಯನ ವ್ರತವೆಂದು ಬ್ರಾಹ್ಮಣರು ಹೇಳುತ್ತಾರೆ. ಬುದ್ಧಿಯಿಂದ ಮನಸ್ಸನ್ನು ಶುದ್ಧಿಗೊಳಿಸುವುದೇ ದೇವತಗಳ ವ್ರತವೆಂದು ದ್ವಿಜರು ಹೇಳುತ್ತಾರೆ.

03091021a ಮನೋ ಹ್ಯದುಷ್ಟಂ ಶೂರಾಣಾಂ ಪರ್ಯಾಪ್ತಂ ವೈ ನರಾಧಿಪ।
03091021c ಮೈತ್ರೀಂ ಬುದ್ಧಿಂ ಸಮಾಸ್ಥಾಯ ಶುದ್ಧಾಸ್ತೀರ್ಥಾನಿ ಗಚ್ಚತ।।

ನರಾಧಿಪ! ಕಲ್ಮಷವಿಲ್ಲದ ಮನಸ್ಸೇ ಶೂರರಿಗೆ ಪರ್ಯಾಪ್ತ. ಮೈತ್ರೀಭಾವವನ್ನಿಟ್ಟುಕೊಂಡು ಶುದ್ಧನಾಗಿ ತೀರ್ಥಗಳಿಗೆ ಹೋಗು.

03091022a ತೇ ಯೂಯಂ ಮಾನಸೈಃ ಶುದ್ಧಾಃ ಶರೀರನಿಯಮವ್ರತೈಃ।
03091022c ದೈವಂ ವ್ರತಂ ಸಮಾಸ್ಥಾಯ ಯಥೋಕ್ತಂ ಫಲಮಾಪ್ಸ್ಯಥ।।

ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಮತ್ತು ಶರೀರನಿಯಮ ವ್ರತನಾಗಿದ್ದು ದೈವವ್ರತವನ್ನು ಪಾಲಿಸಿದರೆ ಹೇಳಿದ ಫಲವನ್ನು ಹೊಂದುತ್ತೀಯೆ.”

03091023a ತೇ ತಥೇತಿ ಪ್ರತಿಜ್ಞಾಯ ಕೃಷ್ಣಯಾ ಸಹ ಪಾಂಡವಾಃ।
03091023c ಕೃತಸ್ವಸ್ತ್ಯಯನಾಃ ಸರ್ವೇ ಮುನಿಭಿರ್ದಿವ್ಯಮಾನುಷೈಃ।।
03091024a ಲೋಮಶಸ್ಯೋಪಸಂಗೃಹ್ಯ ಪಾದೌ ದ್ವೈಪಾಯನಸ್ಯ ಚ।
03091024c ನಾರದಸ್ಯ ಚ ರಾಜೇಂದ್ರ ದೇವರ್ಷೇಃ ಪರ್ವತಸ್ಯ ಚ।।

ಕೃಷ್ಣೆಯೊಂದಿಗೆ ಪಾಂಡವರು “ಹಾಗೆಯೇ ಮಾಡುತ್ತೇವೆ!” ಎಂದು ಪ್ರತಿಜ್ಞೆ ಮಾಡಿದರು. ರಾಜೇಂದ್ರ! ಲೋಮಶ, ದ್ವೈಪಾಯನ, ನಾರದ ಮತ್ತು ದೇವರ್ಷಿ ಪರ್ವತನ ಪಾದಗಳನ್ನು ಹಿಡಿದು ನಮಸ್ಕರಿಸಲು ಅವರ ಪ್ರಯಾಣವನ್ನು ಸರ್ವ ಮುನಿಗಳೂ ದಿವ್ಯಮಾನುಷರೂ ಹರಸಿದರು.

03091025a ಧೌಮ್ಯೇನ ಸಹಿತಾ ವೀರಾಸ್ತಥಾನ್ಯೈರ್ವನವಾಸಿಭಿಃ।
03091025c ಮಾರ್ಗಶೀರ್ಷ್ಯಾಮತೀತಾಯಾಂ ಪುಷ್ಯೇಣ ಪ್ರಯಯುಸ್ತತಃ।।

ಅನಂತರ ಧೌಮ್ಯ ಮತ್ತು ಇತರ ವನವಾಸಿಗಳನ್ನೊಡಗೂಡಿ ಆ ವೀರರು ಅಲ್ಲಿಂದ ಮಾರ್ಗಶೀರ್ಷವು ಕಳೆದ ಪುಷ್ಯದಲ್ಲಿ ಹೊರಟರು.

03091026a ಕಠಿನಾನಿ ಸಮಾದಾಯ ಚೀರಾಜಿನಜಟಾಧರಾಃ।
03091026c ಅಭೇದ್ಯೈಃ ಕವಚೈರ್ಯುಕ್ತಾಸ್ತೀರ್ಥಾನ್ಯನ್ವಚರಂಸ್ತದಾ।।

ಕಠಿನ ಚೀರಾಜಿನಗಳನ್ನು ಧರಿಸಿ, ಜಟಾಧಾರಿಗಳಾಗಿ, ಅಭೇಧ್ಯ ಕವಚಗಳನ್ನು ಧರಿಸಿ ತೀರ್ಥಯಾತ್ರೆಗೆ ಹೊರಟರು.

03091027a ಇಂದ್ರಸೇನಾದಿಭಿರ್ಭೃತ್ಯೈ ರಥೈಃ ಪರಿಚತುರ್ದಶೈಃ।
03091027c ಮಹಾನಸವ್ಯಾಪೃತೈಶ್ಚ ತಥಾನ್ಯೈಃ ಪರಿಚಾರಕೈಃ।।
03091028a ಸಾಯುಧಾ ಬದ್ಧನಿಷ್ಟ್ರಿಂಶಾಸ್ತೂಣವಂತಃ ಸಮಾರ್ಗಣಾಃ।
03091028c ಪ್ರಾಙ್ಮುಖಾಃ ಪ್ರಯಯುರ್ವೀರಾಃ ಪಾಂಡವಾ ಜನಮೇಜಯ।।

ಜನಮೇಜಯ! ಇಂದ್ರಸೇನನೇ ಮೊದಲಾದ ಸೇವಕರೊಂದಿಗೆ, ಹದಿನಾಲ್ಕು ರಥಗಳಲ್ಲಿ, ಅಡುಗೆಮಾಡುವ ಮತ್ತು ಇತರ ಪರಿಚಾರಕರೊಂದಿಗೆ, ಬಾಣ-ಭತ್ತಳಿಕೆ, ಖಡ್ಗ ಮೊದಲಾದ ಆಯುಧಗಳನ್ನು ತೆಗೆದುಕೊಂಡು, ವೀರ ಪಾಂಡವರು ಪೂರ್ವಾಭಿಮುಖವಾಗಿ ಹೊರಟರು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಏಕನವತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆ ಎನ್ನುವ ತೊಂಭತ್ತೊಂದನೆಯ ಅಧ್ಯಾಯವು.