ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 89
ಸಾರ
ಮಹರ್ಷಿ ಲೋಮಶನ ಆಗಮನ; ಶಕ್ರಸಭೆಯಲ್ಲಿ ಅರ್ಜುನನನ್ನು ನೋಡಿದುದನ್ನೂ, ಅವನ ಅಸ್ತ್ರ, ಗೀತ, ನೃತ್ಯ ಅಭ್ಯಾಸದ ಕುರಿತು, ಇಂದ್ರನು ಯುಧಿಷ್ಠಿರನಿಗೆ ಕಳುಹಿಸಿದ್ದ ಸಂದೇಶವನ್ನು ವರದಿಮಾಡಿದುದು (1-22).
03089001 ವೈಶಂಪಾಯನ ಉವಾಚ।
03089001a ಏವಂ ಸಂಭಾಷಮಾಣೇ ತು ಧೌಮ್ಯೇ ಕೌರವನಂದನ।
03089001c ಲೋಮಶಃ ಸುಮಹಾತೇಜಾ ಋಷಿಸ್ತತ್ರಾಜಗಾಮ ಹ।।
ವೈಶಂಪಾಯನನು ಹೇಳಿದನು: “ಕೌರವನಂದನ! ಈ ರೀತಿ ಧೌಮ್ಯನು ಮಾತನಾಡುತ್ತಿರಲು ಅಲ್ಲಿಗೆ ಸುಮಹಾತೇಜಸ್ವಿ ಋಷಿ ಲೋಮಶನು ಆಗಮಿಸಿದನು.
03089002a ತಂ ಪಾಂಡವಾಗ್ರಜೋ ರಾಜಾ ಸಗಣೋ ಬ್ರಾಹ್ಮಣಾಶ್ಚ ತೇ।
03089002c ಉದತಿಷ್ಠನ್ಮಹಾಭಾಗಂ ದಿವಿ ಶಕ್ರಮಿವಾಮರಾಃ।।
ಆಗ ಪಾಂಡವಾಗ್ರಜ ರಾಜನು ಬ್ರಾಹ್ಮಣರು ಮತ್ತು ಗುಂಪಿನೊಡನೆ ದಿವದಲ್ಲಿ ಶಕ್ರನು ಬಂದಾಗ ಅಮರರು ಹೇಗೋ ಹಾಗೆ ಆ ಮಹಾಭಾಗನು ಬಂದೊಡನೇ ಎದ್ದು ನಿಂತನು.
03089003a ತಮಭ್ಯರ್ಚ್ಯ ಯಥಾನ್ಯಾಯಂ ಧರ್ಮರಾಜೋ ಯುಧಿಷ್ಠಿರಃ।
03089003c ಪಪ್ರಚ್ಚಾಗಮನೇ ಹೇತುಮಟನೇ ಚ ಪ್ರಯೋಜನಂ।।
ಧರ್ಮರಾಜ ಯುಧಿಷ್ಠಿರನು ಅವನನ್ನು ಯಥಾನ್ಯಾಯವಾಗಿ ಅರ್ಚಿಸಿ ಅವನ ಆಗಮನದ ಕಾರಣ ಮತ್ತು ಸಂಚಾರದ ಉದ್ದೇಶದ ಕುರಿತು ಕೇಳಿದನು.
03089004a ಸ ಪೃಷ್ಟಃ ಪಾಂಡುಪುತ್ರೇಣ ಪ್ರೀಯಮಾಣೋ ಮಹಾಮನಾಃ।
03089004c ಉವಾಚ ಶ್ಲಕ್ಷ್ಣಯಾ ವಾಚಾ ಹರ್ಷಯನ್ನಿವ ಪಾಂಡವಾನ್।।
ಪಾಂಡುಪುತ್ರನ ಪ್ರಶ್ನೆಯಿಂದ ಸಂತೋಷಗೊಂಡ ಮಹಾಮನಸ್ವಿಯು ಮೃದುವಾಗಿ ಹರ್ಷದಿಂದ ಪಾಂಡವನಿಗೆ ಹೇಳಿದನು.
03089005a ಸಂಚರನ್ನಸ್ಮಿ ಕೌಂತೇಯ ಸರ್ವಲೋಕಾನ್ಯದೃಚ್ಚಯಾ।
03089005c ಗತಃ ಶಕ್ರಸ್ಯ ಸದನಂ ತತ್ರಾಪಶ್ಯಂ ಸುರೇಶ್ವರಂ।।
“ಕೌಂತೇಯ! ಇಷ್ಟಬಂದಂತೆ ಸರ್ವ ಲೋಕಗಳನ್ನೂ ಸಂಚರಿಸುತ್ತಿರುವಾಗ ಶಕ್ರನ ಅರಮನೆಗೆ ಹೋಗಿ ಅಲ್ಲಿ ಸುರೇಶ್ವರನನ್ನು ಕಂಡೆನು.
03089006a ತವ ಚ ಭ್ರಾತರಂ ವೀರಮಪಶ್ಯಂ ಸವ್ಯಸಾಚಿನಂ।
03089006c ಶಕ್ರಸ್ಯಾರ್ಧಾಸನಗತಂ ತತ್ರ ಮೇ ವಿಸ್ಮಯೋ ಮಹಾನ್।।
03089006e ಆಸೀತ್ಪುರುಷಶಾರ್ದೂಲ ದೃಷ್ಟ್ವಾ ಪಾರ್ಥಂ ತಥಾಗತಂ।।
ಪುರುಷಶಾರ್ದೂಲ! ಅಲ್ಲಿ ನಿನ್ನ ತಮ್ಮ ವೀರ ಸವ್ಯಸಾಚಿಯು ಶಕ್ರನ ಆಸನದ ಅರ್ಧಭಾಗದಲ್ಲಿ ಕುಳಿತಿರುವುದನ್ನು ನೋಡಿದೆ. ಪಾರ್ಥನು ಅಲ್ಲಿಗೆ ಹೋಗಿ ಹಾಗೆ ಕುಳಿತಿರುವುದನ್ನು ಕಂಡು ನನಗೆ ಮಹದಾಶ್ಚರ್ಯವಾಯಿತು.
03089007a ಆಹ ಮಾಂ ತತ್ರ ದೇವೇಶೋ ಗಚ್ಚ ಪಾಂಡುಸುತಾನಿತಿ।
03089007c ಸೋಽಹಮಭ್ಯಾಗತಃ ಕ್ಷಿಪ್ರಂ ದಿದೃಕ್ಷುಸ್ತ್ವಾಂ ಸಹಾನುಜಂ।।
ಅಲ್ಲಿ ನನಗೆ ದೇವೇಶನು ಪಾಂಡುಸುತರ ಬಳಿ ಹೋಗು ಎಂದು ಹೇಳಿದನು. ಈಗ ನಾನು ಕ್ಷಿಪ್ರವಾಗಿ ಅನುಜರೊಂದಿಗಿರುವ ನಿನ್ನನ್ನು ನೋಡಲು ಬಂದಿದ್ದೇನೆ.
03089008a ವಚನಾತ್ಪುರುಹೂತಸ್ಯ ಪಾರ್ಥಸ್ಯ ಚ ಮಹಾತ್ಮನಃ।
03089008c ಆಖ್ಯಾಸ್ಯೇ ತೇ ಪ್ರಿಯಂ ತಾತ ಮಹತ್ಪಾಂಡವನಂದನ।।
ಪುರುಹೂತನ ಮತ್ತು ಮಹಾತ್ಮ ಪಾರ್ಥನ ಮಾತುಗಳಂತೆ ಮಗೂ! ಪಾಂಡುನಂದನ! ನಿನಗೆ ನಾನು ಅತ್ಯಂತ ಪ್ರಿಯಕರ ವಿಷಯಗಳನ್ನು ಹೇಳುತ್ತೇನೆ.
03089009a ಭ್ರಾತೃಭಿಃ ಸಹಿತೋ ರಾಜನ್ಕೃಷ್ಣಯಾ ಚೈವ ತಚ್ಶೃಣು।
03089009c ಯತ್ತ್ವಯೋಕ್ತೋ ಮಹಾಬಾಹುರಸ್ತ್ರಾರ್ಥಂ ಪಾಂಡವರ್ಷಭ।।
ರಾಜನ್! ನಿನ್ನ ಸಹೋದರರು ಮತ್ತು ಕೃಷ್ಣೆಯೊಂದಿಗೆ ಅದನ್ನು ಕೇಳು. ಪಾಂಡವರ್ಷಭ! ಆ ಮಹಾಬಾಹುವಿಗೆ ಅಸ್ತ್ರಗಳನ್ನು ತರಲು ನೀನು ಹೇಳಿದ್ದೆ.
03089010a ತದಸ್ತ್ರಮಾಪ್ತಂ ಪಾರ್ಥೇನ ರುದ್ರಾದಪ್ರತಿಮಂ ಮಹತ್।
03089010c ಯತ್ತದ್ಬ್ರಹ್ಮಶಿರೋ ನಾಮ ತಪಸಾ ರುದ್ರಮಾಗತಂ।।
ರುದ್ರನಿಂದ ಪಾರ್ಥನು ಬ್ರಹ್ಮಶಿರ ಎಂಬ ಹೆಸರಿನ ಆ ಮಹಾಸ್ತ್ರವನ್ನು ಪಡೆದನು. ರುದ್ರನು ಅದನ್ನು ತಪಸ್ಸುಮಾಡಿ ಪಡೆದುಕೊಂಡಿದ್ದನು.
03089011a ಅಮೃತಾದುತ್ಥಿತಂ ರೌದ್ರಂ ತಲ್ಲಬ್ಧಂ ಸವ್ಯಸಾಚಿನಾ।
03089011c ತತ್ಸಮಂತ್ರಂ ಸಸಂಹಾರಂ ಸಪ್ರಾಯಶ್ಚಿತ್ತಮಂಗಲಂ।।
ಅಮೃತದಿಂದ ಉತ್ಪತ್ತಿಯಾದ ಆ ರೌದ್ರ ಅಸ್ತ್ರವನ್ನು ಸವ್ಯಸಾಚಿಯು ಅದರ ಮಂತ್ರ, ಸಂಹಾರ, ಸಪ್ರಾಯ ಮತ್ತು ಮಂಗಲದೊಂದಿಗೆ ಪಡೆದಿದ್ದಾನೆ.
03089012a ವಜ್ರಂ ಚಾನ್ಯಾನಿ ಚಾಸ್ತ್ರಾಣಿ ದಂಡಾದೀನಿ ಯುಧಿಷ್ಠಿರ।
03089012c ಯಮಾತ್ಕುಬೇರಾದ್ವರುಣಾದಿಂದ್ರಾಚ್ಚ ಕುರುನಂದನ।।
03089012e ಅಸ್ತ್ರಾಣ್ಯಧೀತವಾನ್ಪಾರ್ಥೋ ದಿವ್ಯಾನ್ಯಮಿತವಿಕ್ರಮಃ।।
ಯುಧಿಷ್ಠಿರ! ಕುರುನಂದನ! ಅಮಿತವಿಕ್ರಮಿ ಪಾರ್ಥನು ವಜ್ರ ಮತ್ತು ದಂಡವೇ ಮೊದಲಾದ ಇತರ ದಿವ್ಯಾಸ್ತ್ರಗಳನ್ನು ಯಮ, ಕುಬೇರ, ವರುಣ ಮತ್ತು ಇಂದ್ರರಿಂದ ಪಡೆದುಕೊಂಡಿದ್ದಾನೆ.
03089013a ವಿಶ್ವಾವಸೋಶ್ಚ ತನಯಾದ್ಗೀತಂ ನೃತ್ತಂ ಚ ಸಾಮ ಚ।
03089013c ವಾದಿತ್ರಂ ಚ ಯಥಾನ್ಯಾಯಂ ಪ್ರತ್ಯವಿಂದದ್ಯಥಾವಿಧಿ।।
ವಿಶ್ವಾವಸುವಿನ ಮಗನಿಂದ ಅವನು ಯಥಾನ್ಯಾಯವಾಗಿ ಯಥಾವಿಧಿಯಾಗಿ ಗೀತ, ನೃತ್ಯ, ಸಾಮ ಮತ್ತು ವಾದ್ಯಗಳನ್ನು ಕಲಿತುಕೊಂಡಿದ್ದಾನೆ.
03089014a ಏವಂ ಕೃತಾಸ್ತ್ರಃ ಕೌಂತೇಯೋ ಗಾಂಧರ್ವಂ ವೇದಮಾಪ್ತವಾನ್।
03089014c ಸುಖಂ ವಸತಿ ಬೀಭತ್ಸುರನುಜಸ್ಯಾನುಜಸ್ತವ।।
ಹೀಗೆ ಅಸ್ತ್ರಗಳನ್ನು ಪಡೆದು, ಗಾಂಧರ್ವವಿದ್ಯೆಯನ್ನು ಪಡೆದು ನಿನ್ನ ತಮ್ಮನ ತಮ್ಮ ಕೌಂತೇಯ ಬೀಭತ್ಸುವು ಅಲ್ಲಿ ಸುಖದಿಂದ ವಾಸಿಸುತ್ತಿದ್ದಾನೆ.
03089015a ಯದರ್ಥಂ ಮಾಂ ಸುರಶ್ರೇಷ್ಠ ಇದಂ ವಚನಮಬ್ರವೀತ್।
03089015c ತಚ್ಚ ತೇ ಕಥಯಿಷ್ಯಾಮಿ ಯುಧಿಷ್ಠಿರ ನಿಬೋಧ ಮೇ।।
ಸುರಶ್ರೇಷ್ಠನು ನನಗೆ ಹೇಳಿಕಳುಹಿಸಿದ ಸಂದೇಶದ ಅರ್ಥವನ್ನು ಹೇಳುತ್ತೇನೆ. ಯುಧಿಷ್ಠಿರ! ನನ್ನನ್ನು ಕೇಳು.
03089016a ಭವಾನ್ಮನುಷ್ಯಲೋಕಾಯ ಗಮಿಷ್ಯತಿ ನ ಸಂಶಯಃ।
03089016c ಬ್ರೂಯಾದ್ಯುಧಿಷ್ಠಿರಂ ತತ್ರ ವಚನಾನ್ಮೇ ದ್ವಿಜೋತ್ತಮ।।
“ದ್ವಿಜೋತ್ತಮ! ನೀನು ನಿಸ್ಸಂಶಯವಾಗಿಯೂ ಮನುಷ್ಯಲೋಕಕ್ಕೆ ಹೋಗಿ ಅಲ್ಲಿ ಯುಧಿಷ್ಠಿರನಿಗೆ ನನ್ನ ಈ ಮಾತುಗಳನ್ನು ಹೇಳು.
03089017a ಆಗಮಿಷ್ಯತಿ ತೇ ಭ್ರಾತಾ ಕೃತಾಸ್ತ್ರಃ ಕ್ಷಿಪ್ರಮರ್ಜುನಃ।
03089017c ಸುರಕಾರ್ಯಂ ಮಹತ್ಕೃತ್ವಾ ಯದಾಶಕ್ಯಂ ದಿವೌಕಸೈಃ।।
ನಿನ್ನ ತಮ್ಮ ಅರ್ಜುನನು ಅಸ್ತ್ರಗಳನ್ನು ಪಡೆದು, ದೇವತೆಗಳಿಗೂ ಅಸಾಧ್ಯವಾದ ಮಹಾ ಸುರಕಾರ್ಯವೊಂದನ್ನು ಪೂರೈಸಿ ಕ್ಷಿಪ್ರವಾಗಿ ಬರುತ್ತಾನೆ.
03089018a ತಪಸಾ ತು ತ್ವಮಾತ್ಮಾನಂ ಭ್ರಾತೃಭಿಃ ಸಹ ಯೋಜಯ।
03089018c ತಪಸೋ ಹಿ ಪರಂ ನಾಸ್ತಿ ತಪಸಾ ವಿಂದತೇ ಮಹತ್।।
ನಿನ್ನ ಸಹೋದರರೊಂದಿಗೆ ನೀನು ತಪಸ್ಸಿನಲ್ಲಿಯೇ ನಿನ್ನನ್ನು ತೊಡಗಿಸಿಕೋ. ತಪಸ್ಸಿಗಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ. ತಪಸ್ಸೇ ಅತಿದೊಡ್ಡದೆಂದು ತಿಳಿ.
03089019a ಅಹಂ ಚ ಕರ್ಣಂ ಜಾನಾಮಿ ಯಥಾವದ್ಭರತರ್ಷಭ।
03089019c ನ ಸ ಪಾರ್ಥಸ್ಯ ಸಂಗ್ರಾಮೇ ಕಲಾಮರ್ಹತಿ ಷೋಡಶೀಂ।।
ಭರತರ್ಷಭ! ನಾನೂ ಕೂಡ ಕರ್ಣನನ್ನು ತಿಳಿದುಕೊಂಡಿದ್ದೇನೆ. ಸಂಗ್ರಾಮದಲ್ಲಿ ಅವನು ಪಾರ್ಥನ ಹದಿನಾರರ ಅಂಶವೂ ಇಲ್ಲ.
03089020a ಯಚ್ಚಾಪಿ ತೇ ಭಯಂ ತಸ್ಮಾನ್ಮನಸಿಸ್ಥಮರಿಂದಮ।
03089020c ತಚ್ಚಾಪ್ಯಪಹರಿಷ್ಯಾಮಿ ಸವ್ಯಸಾಚಾವಿಹಾಗತೇ।।
ಅರಿಂದಮ! ನಿನ್ನ ಮನಸ್ಸಿನಲ್ಲಿಟ್ಟುಕೊಂಡಿರುವ ಅವನ ಭಯವನ್ನು ಸವ್ಯಸಾಚಿಯು ಹಿಂದಿರುಗಿದ ಕೂಡಲೇ ನಾನು ತೆಗೆದುಹಾಕುತ್ತೇನೆ1.
03089021a ಯಚ್ಚ ತೇ ಮಾನಸಂ ವೀರ ತೀರ್ಥಯಾತ್ರಾಮಿಮಾಂ ಪ್ರತಿ।
03089021c ತಚ್ಚ ತೇ ಲೋಮಶಃ ಸರ್ವಂ ಕಥಯಿಷ್ಯತ್ಯಸಂಶಯಂ।।
ವೀರ! ತೀರ್ಥಯಾತ್ರೆಯ ಕುರಿತು ನೀನು ಮನಸ್ಸು ಮಾಡಿರುವುದರ ಕುರಿತು ನಿಸ್ಸಂಶಯವಾಗಿ ಲೋಮಶನು ಎಲ್ಲವನ್ನೂ ನಿನಗೆ ತಿಳಿಸಿಕೊಡುತ್ತಾನೆ.
03089022a ಯಚ್ಚ ಕಿಂ ಚಿತ್ತಪೋಯುಕ್ತಂ ಫಲಂ ತೀರ್ಥೇಷು ಭಾರತ।
03089022c ಮಹರ್ಷಿರೇಷ ಯದ್ಬ್ರೂಯಾತ್ತಚ್ಛ್ರದ್ಧೇಯಮನನ್ಯಥಾ।।
ಭಾರತ! ತೀರ್ಥಗಳಲ್ಲಿ ತಪೋಯುಕ್ತನಾಗಿರುವುದರ ಫಲದ ಕುರಿತು ಮಹರ್ಷಿಯು ಏನೆಲ್ಲಾ ಹೇಳುತ್ತಾನೋ ಅದರಲ್ಲಿ ಶ್ರದ್ಧೆಯಿಡು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶಸಂವಾದೇ ಏಕೋನನವತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶಸಂವಾದ ಎನ್ನುವ ಎಂಭತ್ತೊಂಭತ್ತನೆಯ ಅಧ್ಯಾಯವು.
-
ಯುಧಿಷ್ಠಿರನಿಗೆ ಕಳುಹಿಸಿದ ಈ ಸಂದೇಶದಂತೆಯೇ ಮುಂದೆ ಇಂದ್ರನು ಕರ್ಣನ ಸಹಜ ಕವಚ-ಕುಂಡಲಗಳನ್ನು ಪಡೆದುಕೊಳ್ಳುತ್ತಾನೆ (ಆರಣ್ಯಕ ಪರ್ವ, ಕುಂಡಲಾಹರಣ ಪರ್ವ). ↩︎