088 ಧೌಮ್ಯತೀರ್ಥಯಾತ್ರಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 88

ಸಾರ

ಧೌಮ್ಯನು ಯುಧಿಷ್ಠಿರನಿಗೆ ಉತ್ತರದಿಕ್ಕಿನಲ್ಲಿರುವ ತೀರ್ಥಕ್ಷೇತ್ರಗಳ ಕುರಿತು ಹೇಳಿದುದು (1-30).

03088001 ಧೌಮ್ಯ ಉವಾಚ।
03088001a ಉದೀಚ್ಯಾಂ ರಾಜಶಾರ್ದೂಲ ದಿಶಿ ಪುಣ್ಯಾನಿ ಯಾನಿ ವೈ।
03088001c ತಾನಿ ತೇ ಕೀರ್ತಯಿಷ್ಯಾಮಿ ಪುಣ್ಯಾನ್ಯಾಯತನಾನಿ ಚ।।

ಧೌಮ್ಯನು ಹೇಳಿದನು: “ರಾಜಶಾರ್ದೂಲ! ಈಗ ನಾನು ಉತ್ತರದಿಕ್ಕಿನಲ್ಲಿರುವ ಪುಣ್ಯ ತೀರ್ಥಗಳ ಮತ್ತು ಪ್ರದೇಶಗಳ ಕುರಿತು ಹೇಳುತ್ತೇನೆ.

03088002a ಸರಸ್ವತೀ ಪುಣ್ಯವಹಾ ಹ್ರದಿನೀ ವನಮಾಲಿನೀ।
03088002c ಸಮುದ್ರಗಾ ಮಹಾವೇಗಾ ಯಮುನಾ ಯತ್ರ ಪಾಂಡವ।।

ಪಾಂಡವ! ದಂಡೆಗಳಲ್ಲಿ ಸರೋವರ ಮತ್ತು ವನಗಳನ್ನು ಹೊಂದಿದ ಪುಣ್ಯವಾಹಿನಿ ಸರಸ್ವತಿಯಿದೆ. ಅಲ್ಲಿಯೇ ಮಹಾವೇಗದಿಂದ ಸಮುದ್ರದ ಕಡೆ ಹರಿಯುತ್ತಿರುವ ಯಮುನಾನದಿಯೂ ಇದೆ.

03088003a ತತ್ರ ಪುಣ್ಯತಮಂ ತೀರ್ಥಂ ಪ್ಲಕ್ಷಾವತರಣಂ ಶಿವಂ।
03088003c ಯತ್ರ ಸಾರಸ್ವತೈರಿಷ್ಟ್ವಾ ಗಚ್ಚಂತ್ಯವಭೃಥಂ ದ್ವಿಜಾಃ।।
03088004a ಪುಣ್ಯಂ ಚಾಖ್ಯಾಯತೇ ದಿವ್ಯಂ ಶಿವಮಗ್ನಿಶಿರೋಽನಘ।
03088004c ಸಹದೇವೋಽಯಜದ್ಯತ್ರ ಶಮ್ಯಾಕ್ಷೇಪೇಣ ಭಾರತ।।

ಅನಘ! ಭಾರತ! ಅಲ್ಲಿಯ ಪುಣ್ಯತಮ ಮಂಗಳಕರ ಸಾರಸ್ವತೀ ತೀರ್ಥದಲ್ಲಿ ದ್ವಿಜರು ಹೋಗಿ ಸ್ನಾನಮಾಡುತ್ತಾರೆ. ಅಲ್ಲಿಯೇ ಪುಣ್ಯವೂ ಮಂಗಳಕರವೂ ಆದ ಅಗ್ನಿಶಿರ ಎನ್ನುವ ತೀರ್ಥವಿದೆ - ಅಲ್ಲಿ ಸಹದೇವನು ಯಾಗದ ಬಟ್ಟಲನ್ನು ಎಸೆದು ಅಳೆದ ಜಾಗದಲ್ಲಿ ಯಜ್ಞವನ್ನು ಮಾಡಿದ್ದನು.

03088005a ಏತಸ್ಮಿನ್ನೇವ ಚಾರ್ಥೇಯಮಿಂದ್ರಗೀತಾ ಯುಧಿಷ್ಠಿರ।
03088005c ಗಾಥಾ ಚರತಿ ಲೋಕೇಽಸ್ಮಿನ್ಗೀಯಮಾನಾ ದ್ವಿಜಾತಿಭಿಃ।।

ಯುಧಿಷ್ಠಿರ! ಅದೇ ಸಂದರ್ಭದಲ್ಲಿ ಮೊದಲು ಇಂದ್ರನಿಂದ ಹಾಡಲ್ಪಟ್ಟ ಮತ್ತು ಈ ಲೋಕದಲ್ಲಿ ದ್ವಿಜರು ಹಾಡುವ ಈ ಇಂದ್ರಗೀತೆ ರಚಿಸಲ್ಪಟ್ಟಿತು.

03088006a ಅಗ್ನಯಃ ಸಹದೇವೇನ ಯೇ ಚಿತಾ ಯಮುನಾಮನು।
03088006c ಶತಂ ಶತಸಹಸ್ರಾಣಿ ಸಹಸ್ರಶತದಕ್ಷಿಣಾಃ।।

ಯಮುನಾನದಿಯ ತೀರದಲ್ಲಿ ಸಹದೇವನು ಒಂದು ಕೋಟಿ ಅಗ್ನಿಗಳನ್ನು, ಒಂದು ಲಕ್ಷ ದಕ್ಷಿಣೆಗಳನ್ನಿತ್ತು ರಚಿಸಿದನು.

03088007a ತತ್ರೈವ ಭರತೋ ರಾಜಾ ಚಕ್ರವರ್ತೀ ಮಹಾಯಶಾಃ।
03088007c ವಿಂಶತಿಂ ಸಪ್ತ ಚಾಷ್ಟೌ ಚ ಹಯಮೇಧಾನುಪಾಹರತ್।।

ರಾಜಾ ಭಾರತ! ಅಲ್ಲಿಯೇ ಮಹಾಯಶಸ್ವಿ ಚಕ್ರವರ್ತಿಯು ಮೂವತ್ತೈದು ಅಶ್ವಮೇಧಯಾಗಗಳನ್ನು ನೆರವೇರಿಸಿದನು.

03088008a ಕಾಮಕೃದ್ಯೋ ದ್ವಿಜಾತೀನಾಂ ಶ್ರುತಸ್ತಾತ ಮಯಾ ಪುರಾ।
03088008c ಅತ್ಯಂತಮಾಶ್ರಮಃ ಪುಣ್ಯಃ ಸರಕಸ್ತಸ್ಯ ವಿಶ್ರುತಃ।।

ತಾತ! ದ್ವಿಜರ ಬಯಕೆಗಳನ್ನು ಪೂರೈಸಿದ ಅತ್ಯಂತ ಪುಣ್ಯಕರವೆಂದು ನಾನು ಹಿಂದೆಯೇ ಕೇಳಿದ್ದ ಸರಕಸ್ತನ ಆಶ್ರಮವಿದೆ.

03088009a ಸರಸ್ವತೀ ನದೀ ಸದ್ಭಿಃ ಸತತಂ ಪಾರ್ಥ ಪೂಜಿತಾ।
03088009c ವಾಲಖಿಲ್ಯೈರ್ಮಹಾರಾಜ ಯತ್ರೇಷ್ಟಮೃಷಿಭಿಃ ಪುರಾ।।

ಪಾರ್ಥ! ಸರಸ್ವತೀ ನದಿಯು ಸಜ್ಜನರಿಂದ ಯಾವಾಗಲೂ ಪೂಜಿಸಲ್ಪಟ್ಟಿದೆ. ಮಹಾರಾಜ! ಋಷಿ ವಾಲಖಿಲ್ಯರು ಹಿಂದೆ ಇಲ್ಲಿಯೇ ಯಾಗಮಾಡಿದ್ದರು.

03088010a ದೃಷದ್ವತೀ ಪುಣ್ಯತಮಾ ತತ್ರ ಖ್ಯಾತಾ ಯುಧಿಷ್ಠಿರ।
03088010c ತತ್ರ ವೈವರ್ಣ್ಯವರ್ಣೌ ಚ ಸುಪುಣ್ಯೌ ಮನುಜಾಧಿಪ।।
03088011a ವೇದಜ್ಞೌ ವೇದವಿದಿತೌ ವಿದ್ಯಾವೇದವಿದಾವುಭೌ।
03088011c ಯಜಂತೌ ಕ್ರತುಭಿರ್ನಿತ್ಯಂ ಪುಣ್ಯೈರ್ಭರತಸತ್ತಮ।।

ಯುಧಿಷ್ಠಿರ! ಮನುಜಾಧಿಪ! ಭರತಸತ್ತಮ! ಅಲ್ಲಿಯೇ ಪುಣ್ಯತಮ ವಿಖ್ಯಾತ ಧೃಷದ್ವತೀ ನದಿಯಿದೆ. ಅಲ್ಲಿ ವೇದಜ್ಞ, ವೇದವಿದಿತ, ವೇದವಿದ್ಯೆಗಳನ್ನು ತಿಳಿದಿರುವ, ಸುಪುಣ್ಯ ವೈವರ್ಣ್ಯ ಮತ್ತು ವರ್ಣರು ನಿತ್ಯವೂ ಪುಣ್ಯಕರ ಯಾಗಗಳನ್ನು ಮಾಡುತ್ತಿರುತ್ತಾರೆ.

03088012a ಸಮೇತ್ಯ ಬಹುಶೋ ದೇವಾಃ ಸೇಂದ್ರಾಃ ಸವರುಣಾಃ ಪುರಾ।
03088012c ವಿಶಾಖಯೂಪೇಽತಪ್ಯಂತ ತಸ್ಮಾತ್ಪುಣ್ಯತಮಃ ಸ ವೈ।।

ಹಿಂದೆ ಇಂದ್ರ ಮತ್ತು ವರುಣರನ್ನೊಡಗೂಡಿ ಬಹುಸಂಖ್ಯೆಯಲ್ಲಿ ದೇವತೆಗಳು ವಿಶಾಖಯೂಪದಲ್ಲಿ ತಪಸ್ಸುಮಾಡಿದ್ದರು. ಆದುದರಿಂದ ಅದು ಪುಣ್ಯತಮ.

03088013a ಋಷಿರ್ಮಹಾನ್ಮಹಾಭಾಗೋ ಜಮದಗ್ನಿರ್ಮಹಾಯಶಾಃ।
03088013c ಪಲಾಶಕೇಷು ಪುಣ್ಯೇಷು ರಮ್ಯೇಷ್ವಯಜತಾಭಿಭೂಃ।।

ಮಹಾನೃಷಿ ಮಹಾಭಾಗ ಮಹಾಯಶಸ್ವಿ ಜಮದಗ್ನಿಯು ಪುಣ್ಯವೂ ರಮ್ಯವೂ ಆದ ಪಕಾಶಕೇಷದಲ್ಲಿ ಪ್ರಮುಖ ಯಜ್ಞಮಾಡಿದ್ದನು.

03088014a ಯತ್ರ ಸರ್ವಾಃ ಸರಿಚ್ಚ್ರೇಷ್ಠಾಃ ಸಾಕ್ಷಾತ್ತಮೃಷಿಸತ್ತಮಂ।
03088014c ಸ್ವಂ ಸ್ವಂ ತೋಯಮುಪಾದಾಯ ಪರಿವಾರ್ಯೋಪತಸ್ಥಿರೇ।।

ಅಲ್ಲಿ ಸರ್ವ ನದಿಗಳೂ ಸಾಕ್ಷಾತ್ತಾಗಿ, ಪ್ರತಿಯೊಬ್ಬರೂ ತಮ್ಮ ತಮ್ಮ ನೀರನ್ನು ಹೊತ್ತು. ಆ ಋಷಿಸತ್ತಮನನ್ನು ಸುತ್ತುವರೆದು ನಿಂತಿದ್ದರು.

03088015a ಅಪಿ ಚಾತ್ರ ಮಹಾರಾಜ ಸ್ವಯಂ ವಿಶ್ವಾವಸುರ್ಜಗೌ।
03088015c ಇಮಂ ಶ್ಲೋಕಂ ತದಾ ವೀರ ಪ್ರೇಕ್ಷ್ಯ ವೀರ್ಯಂ ಮಹಾತ್ಮನಃ।।

ಮಹಾರಾಜ! ಅಲ್ಲಿಯೂ ಕೂಡ ಸ್ವಯಂ ವಿಶ್ವಾವಸುವು ಆ ಮಹಾತ್ಮ ವೀರನ ವೀರ್ಯವನ್ನು ನೋಡಿ ಈ ಶ್ಲೋಕವನ್ನು ಹಾಡಿದ್ದನು:

03088016a ಯಜಮಾನಸ್ಯ ವೈ ದೇವಾಂ ಜಮದಗ್ನೇರ್ಮಹಾತ್ಮನಃ।
03088016c ಆಗಮ್ಯ ಸರಿತಃ ಸರ್ವಾ ಮಧುನಾ ಸಮತರ್ಪಯನ್।।

“ಮಹಾತ್ಮ ಜಮದಗ್ನಿಯು ಯಾಗದಿಂದ ದೇವತೆಗಳನ್ನು ಪೂಜಿಸುತ್ತಿರುವಾಗ ಎಲ್ಲಾ ನದಿಗಳೂ ಆಗಮಿಸಿ ಅವನಿಗೆ ಮಧುವನ್ನು ಸಮರ್ಪಿಸಿದವು.”

03088017a ಗಂಧರ್ವಯಕ್ಷರಕ್ಷೋಭಿರಪ್ಸರೋಭಿಶ್ಚ ಶೋಭಿತಂ।
03088017c ಕಿರಾತಕಿನ್ನರಾವಾಸಂ ಶೈಲಂ ಶಿಖರಿಣಾಂ ವರಂ।।
03088018a ಬಿಭೇದ ತರಸಾ ಗಂಗಾ ಗಂಗಾದ್ವಾರೇ ಯುಧಿಷ್ಠಿರ।
03088018c ಪುಣ್ಯಂ ತತ್ಖ್ಯಾಯತೇ ರಾಜನ್ಬ್ರಹ್ಮರ್ಷಿಗಣಸೇವಿತಂ।।

ಯುಧಿಷ್ಠಿರ! ರಾಜನ್! ಗಂಧರ್ವ-ಯಕ್ಷ-ರಾಕ್ಷಸ-ಅಪ್ಸರೆಯರರಿಂದ ಶೋಭಿತ, ಕಿರಾತ ಕಿನ್ನರರು ವಾಸಿಸುವ, ಶೈಲಗಳ ಶಿಖರಗಳಲ್ಲಿಯೇ ಶ್ರೇಷ್ಠ, ಬ್ರಹ್ಮರ್ಷಿಗಣಸೇವಿತ, ಗಂಗೆಯು ಉದ್ಭವಿಸುವ ಗಂಗಾದ್ವಾರವು ಪುಣ್ಯಕರವೆಂದು ವಿಖ್ಯಾತವಾಗಿದೆ.

03088019a ಸನತ್ಕುಮಾರಃ ಕೌರವ್ಯ ಪುಣ್ಯಂ ಕನಖಲಂ ತಥಾ।
03088019c ಪರ್ವತಶ್ಚ ಪುರುರ್ನಾಮ ಯತ್ರ ಜಾತಃ ಪುರೂರವಾಃ।।

ಕೌರವ್ಯ! ಇಲ್ಲಿಯೇ ಸನತ್ಕುಮಾರ, ಪುಣ್ಯಕರ ಕನಖಲ ಮತ್ತು ಪುರೂರವನು ಹುಟ್ಟಿದ ಪುರು ಎನ್ನುವ ಹೆಸರಿನ ಪರ್ವತವೂ ಇವೆ.

03088020a ಭೃಗುರ್ಯತ್ರ ತಪಸ್ತೇಪೇ ಮಹರ್ಷಿಗಣಸೇವಿತಃ।
03088020c ಸ ರಾಜನ್ನಾಶ್ರಮಃ ಖ್ಯಾತೋ ಭೃಗುತುಂಗೋ ಮಹಾಗಿರಿಃ।।

ರಾಜನ್! ಇಲ್ಲಿಯೇ ಮಹರ್ಷಿಗಣಸೇವಿತ, ಭೃಗುವು ತಪಸ್ಸನ್ನು ಮಾಡಿದ, ಭೃಗುತುಂಗ ಆಶ್ರಮ ಎಂದು ಖ್ಯಾತವಾದ ಮಹಾಗಿರಿಯಿದೆ.

03088021a ಯಚ್ಚ ಭೂತಂ ಭವಿಷ್ಯಚ್ಚ ಭವಚ್ಚ ಪುರುಷರ್ಷಭ।
03088021c ನಾರಾಯಣಃ ಪ್ರಭುರ್ವಿಷ್ಣುಃ ಶಾಶ್ವತಃ ಪುರುಷೋತ್ತಮಃ।।

ಪುರುಷರ್ಷಭ! ಹಿಂದೆ ಆಗಿಹೋದ, ಮುಂದೆ ಆಗಲಿರುವ ಮತ್ತು ಈಗ ಆಗುತ್ತಿರುವ ಎಲ್ಲವೂ ಪ್ರಭು, ವಿಷ್ಣು, ಶಾಶ್ವತ, ಪುರುಷೋತ್ತಮ ನಾರಾಯಣನಲ್ಲಿವೆ.

03088022a ತಸ್ಯಾತಿಯಶಸಃ ಪುಣ್ಯಾಂ ವಿಶಾಲಾಂ ಬದರೀಮನು।
03088022c ಆಶ್ರಮಃ ಖ್ಯಾಯತೇ ಪುಣ್ಯಸ್ತ್ರಿಷು ಲೋಕೇಷು ವಿಶ್ರುತಃ।।

ಆ ಅತಿಯಶಸ್ವಿಯ ಪುಣ್ಯಕರ ವಿಶಾಲ, ಮೂರು ಲೋಕಗಳಲ್ಲಿಯೂ ವಿಶ್ರುತ ಬದರೀ ಆಶ್ರಮವು ಅಲ್ಲಿದೆ.

03088023a ಉಷ್ಣತೋಯವಹಾ ಗಂಗ ಶೀತತೋಯವಹಾಪರಾ।
03088023c ಸುವರ್ಣಸಿಕತಾ ರಾಜನ್ವಿಶಾಲಾಂ ಬದರೀಮನು।।

ರಾಜನ್! ವಿಶಾಲ ಬದರಿಕಾಶ್ರಮದಲ್ಲಿ ಬಿಸಿನೀರನ್ನು ಹರಿಸುವ ಗಂಗೆಯು ತಣ್ಣಿರನ್ನು ಹರಿಸುತ್ತಾ, ಬಂಗಾರದ ಬಣ್ಣದ ಮರಳನ್ನು ಚೆಲ್ಲಿ ಹರಿಯುತ್ತಾಳೆ.

03088024a ಋಷಯೋ ಯತ್ರ ದೇವಾಶ್ಚ ಮಹಾಭಾಗಾ ಮಹೌಜಸಃ।
03088024c ಪ್ರಾಪ್ಯ ನಿತ್ಯಂ ನಮಸ್ಯಂತಿ ದೇವಂ ನಾರಾಯಣಂ ವಿಭುಂ।।

ಮಹಾಭಾಗ! ಅಲ್ಲಿ ಋಷಿಗಳೂ, ದೇವತೆಗಳೂ, ಮಹೌಜಸರೂ ಬಂದು ನಿತ್ಯವೂ ದೇವ ವಿಭು ನಾರಾಯಣನನ್ನು ನಮಸ್ಕರಿಸುತ್ತಾರೆ.

03088025a ಯತ್ರ ನಾರಾಯಣೋ ದೇವಃ ಪರಮಾತ್ಮಾ ಸನಾತನಃ।
03088025c ತತ್ರ ಕೃತ್ಸ್ನಂ ಜಗತ್ಪಾರ್ಥ ತೀರ್ಥಾನ್ಯಾಯತನಾನಿ ಚ।।

ಪಾರ್ಥ! ಎಲ್ಲಿ ದೇವ ಪರಮಾತ್ಮ ಸನಾತನ ನಾರಾಯಣನಿದ್ದಾನೆಯೋ ಅಲ್ಲಿ ಜಗತ್ತಿನ ಎಲ್ಲ ತೀರ್ಥಗಳೂ ಪುಣ್ಯಕ್ಷೇತ್ರಗಳು ಇವೆ.

03088026a ತತ್ಪುಣ್ಯಂ ತತ್ಪರಂ ಬ್ರಹ್ಮ ತತ್ತೀರ್ಥಂ ತತ್ತಪೋವನಂ।
03088026c ತತ್ರ ದೇವರ್ಷಯಃ ಸಿದ್ಧಾಃ ಸರ್ವೇ ಚೈವ ತಪೋಧನಾಃ।।

ಅವನು ಪುಣ್ಯ. ಅವನು ಪರಬ್ರಹ್ಮ. ಅವನೇ ತೀರ್ಥ. ಅವನೇ ತಪೋವನ. ಅಲ್ಲಿಯೇ ಎಲ್ಲ ದೇವರ್ಷಿ-ಸಿದ್ಧ-ತಪೋಧನರೂ ಇದ್ದಾರೆ.

03088027a ಆದಿದೇವೋ ಮಹಾಯೋಗೀ ಯತ್ರಾಸ್ತೇ ಮಧುಸೂದನಃ।
03088027c ಪುಣ್ಯಾನಾಮಪಿ ತತ್ಪುಣ್ಯಂ ತತ್ರ ತೇ ಸಂಶಯೋಽಸ್ತು ಮಾ।।

ಆದಿದೇವ ಮಹಾಯೋಗಿ ಮಧುಸೂದನನು ಎಲ್ಲಿದ್ದಾನೋ ಅದು ಪುಣ್ಯಗಳಿಗಿಂತಲೂ ಪುಣ್ಯಕರ ಎನ್ನುವುದರಲ್ಲಿ ಏನೂ ಸಂಶವನ್ನಿಟ್ಟುಕೊಳ್ಳಬೇಡ.

03088028a ಏತಾನಿ ರಾಜನ್ಪುಣ್ಯಾನಿ ಪೃಥಿವ್ಯಾಂ ಪೃಥಿವೀಪತೇ।
03088028c ಕೀರ್ತಿತಾನಿ ನರಶ್ರೇಷ್ಠ ತೀರ್ಥಾನ್ಯಾಯತನಾನಿ ಚ।।

ರಾಜನ್! ಪೃಥಿವೀಪತೇ! ನರಶ್ರೇಷ್ಠ! ಇವೆಲ್ಲವೂ ಪೃಥ್ವಿಯಲ್ಲಿರುವ ಪುಣ್ಯ ತೀರ್ಥಗಳು ಮತ್ತು ಕ್ಷೇತ್ರಗಳ ವರ್ಣನೆ.

03088029a ಏತಾನಿ ವಸುಭಿಃ ಸಾಧ್ಯೈರಾದಿತ್ಯೈರ್ಮರುದಶ್ವಿಭಿಃ।
03088029c ಋಷಿಭಿರ್ಬ್ರಹ್ಮಕಲ್ಪೈಶ್ಚ ಸೇವಿತಾನಿ ಮಹಾತ್ಮಭಿಃ।।

ಇವುಗಳನ್ನು ವಸು-ಸಾಧ್ಯ-ಆದಿತ್ಯ-ಮರುತ್ತು-ಅಶ್ವಿನಿಯರು, ಋಷಿಗಳು, ಬ್ರಹ್ಮಕಲ್ಪ ಮಹಾತ್ಮರು ಎಲ್ಲರೂ ಸೇವಿಸುತ್ತಾರೆ.

03088030a ಚರನೇತಾನಿ ಕೌಂತೇಯ ಸಹಿತೋ ಬ್ರಾಹ್ಮಣರ್ಷಭೈಃ।
03088030c ಭ್ರಾತೃಭಿಶ್ಚ ಮಹಾಭಾಗೈರುತ್ಕಂಠಾಂ ವಿಜಹಿಷ್ಯಸಿ।।

ಕೌಂತೇಯ! ಬ್ರಾಹ್ಮಣರು, ಋಷಿಗಳು, ಮತ್ತು ಮಹಾಭಾಗ ತಮ್ಮಂದಿರೊಂದಿಗೆ ಈ ಕ್ಷೇತ್ರಗಳಿಗೆ ಹೋದರೆ ನಿನ್ನ ದುಗುಡವನ್ನು ತೊರೆಯುತ್ತೀಯೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಅಷ್ಟಾಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ತೆಂಟನೆಯ ಅಧ್ಯಾಯವು.