086 ಧೌಮ್ಯತೀರ್ಥಯಾತ್ರಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 86

ಸಾರ

ಧೌಮ್ಯನು ಯುಧಿಷ್ಠಿರನಿಗೆ ದಕ್ಷಿಣದಿಕ್ಕಿನಲ್ಲಿರುವ ತೀರ್ಥಕ್ಷೇತ್ರಗಳ ಕುರಿತು ಹೇಳಿದುದು (1-24).

03086001 ಧೌಮ್ಯ ಉವಾಚ।
03086001a ದಕ್ಷಿಣಸ್ಯಾಂ ತು ಪುಣ್ಯಾನಿ ಶೃಣು ತೀರ್ಥಾನಿ ಭಾರತ।
03086001c ವಿಸ್ತರೇಣ ಯಥಾಬುದ್ಧಿ ಕೀರ್ತ್ಯಮಾನಾನಿ ಭಾರತ।।

ಧೌಮ್ಯನು ಹೇಳಿದನು: “ಭಾರತ! ಈಗ ಕೇಳು. ದಕ್ಷಿಣದಲ್ಲಿರುವ ಪುಣ್ಯ ತೀರ್ಥಗಳ ಕುರಿತು ನನಗೆ ತಿಳಿದಷ್ಟನ್ನು ವಿಸ್ತಾರವಾಗಿ ಹೇಳುತ್ತೇನೆ.

03086002a ಯಸ್ಯಾಮಾಖ್ಯಾಯತೇ ಪುಣ್ಯಾ ದಿಶಿ ಗೋದಾವರೀ ನದೀ।
03086002c ಬಹ್ವಾರಾಮಾ ಬಹುಜಲಾ ತಾಪಸಾಚರಿತಾ ಶುಭಾ।।
03086003a ವೇಣ್ಣಾ ಭೀಮರಥೀ ಚೋಭೇ ನದ್ಯೌ ಪಾಪಭಯಾಪಹೇ।
03086003c ಮೃಗದ್ವಿಜಸಮಾಕೀರ್ಣೇ ತಾಪಸಾಲಯಭೂಷಿತೇ।।

ಆ ದಿಕ್ಕಿನಲ್ಲಿ ಪುಣ್ಯ ನದಿ ಗೋದಾವರಿಯ ಕುರಿತು ಹೇಳುತ್ತಾರೆ. ಬಹಳಷ್ಟು ಕಡೆಗಳಲ್ಲಿ ನಿಂತು, ಬಹಳಷ್ಟು ಕವಲುಗಳಾಗಿ ಹರಿಯುವ ಆ ನದಿಯನ್ನು ತಾಪಸಿಗಳು ಅನುಸರಿಸುತ್ತಾರೆ. ಮೃಗಪಕ್ಷಿಗಳ ಸಂಕೀರ್ಣಗಳಿಂದ ಮತ್ತು ತಾಪಸಿಗಳ ಆಶ್ರಮಗಳಿಂದ ಅಲಂಕರಿಸಲ್ಪಟ್ಟ ವೇಣ್ಣಾ ಮತ್ತು ಭೀಮರಥಿ ಈ ಎರಡು ನದಿಗಳು ಪಾಪಭಯವನ್ನು ಹೋಗಲಾಡಿಸುತ್ತವೆ.

03086004a ರಾಜರ್ಷೇಸ್ತತ್ರ ಚ ಸರಿನ್ನೃಗಸ್ಯ ಭರತರ್ಷಭ।
03086004c ರಮ್ಯತೀರ್ಥಾ ಬಹುಜಲಾ ಪಯೋಷ್ಣೀ ದ್ವಿಜಸೇವಿತಾ।।

ಭರತರ್ಷಭ! ಅಲ್ಲಿ ರಾಜರ್ಷಿ ನೃಗನ ನದಿ, ರಮ್ಯತೀರ್ಥ, ತುಂಬಾ ನೀರಿರುವ, ದ್ವಿಜರು ಸೇವಿಸುವ ಪಯೋಷ್ಣಿಯಿದೆ.

03086005a ಅಪಿ ಚಾತ್ರ ಮಹಾಯೋಗೀ ಮಾರ್ಕಂಡೇಯೋ ಮಹಾತಪಾಃ।
03086005c ಅನುವಂಷ್ಯಾಂ ಜಗೌ ಗಾಥಾಂ ನೃಗಸ್ಯ ಧರಣೀಪತೇಃ।।

ಅಲ್ಲಿಯೇ ಮಹಾಯೋಗಿ ಮಹಾತಪಸ್ವಿ ಮಾರ್ಕಂಡೇಯನು ಧರಣೀಪತಿ ನೃಗನ ಕುರಿತಾಗಿ ಜಗತ್ತೇ ಪಠಿಸುವ ಈ ಗಾಥವನ್ನು ಹೇಳಿದ್ದನು:

03086006a ನೃಗಸ್ಯ ಯಜಮಾನಸ್ಯ ಪ್ರತ್ಯಕ್ಷಮಿತಿ ನಃ ಶ್ರುತಂ।
03086006c ಅಮಾದ್ಯದಿಂದ್ರಃ ಸೋಮೇನ ದಕ್ಷಿಣಾಭಿರ್ದ್ವಿಜಾತಯಃ।।

“ನೃಗನ ಯಾಗದಲ್ಲಿ ಇಂದ್ರನು ಸೋಮವನ್ನು ಕುಡಿದು ಮತ್ತು ದ್ವಿಜರು ಅವನ ದಕ್ಷಿಣೆಯನ್ನು ಪಡೆದು ಅಮಲೇರಿದರು ಎಂದು ಬರೀ ಕೇಳಿದ್ದಲ್ಲ, ಪ್ರತ್ಯಕ್ಷವಾಗಿ ನೋಡಿದ್ದೇನೆ!”

03086007a ಮಾಠರಸ್ಯ ವನಂ ಪುಣ್ಯಂ ಬಹುಮೂಲಫಲಂ ಶಿವಂ।
03086007c ಯೂಪಶ್ಚ ಭರತಶ್ರೇಷ್ಠ ವರುಣಸ್ರೋತಸೇ ಗಿರೌ।।

ಭರತಶ್ರೇಷ್ಠ! ವರುಣಸ್ರೋತ ಗಿರಿಯ ಮೇಲೆ ಪುಣ್ಯಕರ, ಮಂಗಳಕರ, ಮತ್ತು ತುಂಬಾ ಮೂಲಿಕೆ ಫಲಗಳಿಂದೊಡಗೂಡಿದ ಮಾಠರ ಎನ್ನುವ ವನವೂ ಯೂಪವೂ ಇದೆ.

03086008a ಪ್ರವೇಣ್ಯುತ್ತರಪಾರ್ಶ್ವೇ ತು ಪುಣ್ಯೇ ಕಣ್ವಾಶ್ರಮೇ ತಥಾ।
03086008c ತಾಪಸಾನಾಮರಣ್ಯಾನಿ ಕೀರ್ತಿತಾನಿ ಯಥಾಶ್ರುತಿ।।

ಪ್ರವೇಣಿಯ ಉತ್ತರ ಭಾಗದಲ್ಲಿ ಮತ್ತು ಕಣ್ವನ ಪುಣ್ಯಾಶ್ರಮದಲ್ಲಿ ತಾಪಸರು ವಾಸಿಸುವ ಅರಣ್ಯಗಳಿವೆ ಎಂದು ಹೇಳುವುದನ್ನು ಕೇಳಿದ್ದೇವೆ.

03086009a ವೇದೀ ಶೂರ್ಪಾರಕೇ ತಾತ ಜಮದಗ್ನೇರ್ಮಹಾತ್ಮನಃ।
03086009c ರಮ್ಯಾ ಪಾಷಾಣತೀರ್ಥಾ ಚ ಪುರಶ್ಚಂದ್ರಾ ಚ ಭಾರತ।।

ಮಗು! ಭಾರತ! ಶೂರ್ಪಾರಕದಲ್ಲಿ ಮಹಾತ್ಮ ಜಮದಗ್ನಿಯ ರಮ್ಯವಾದ ಪಾಷಾಣ ತೀರ್ಥ ಮತ್ತು ಪುರಶ್ಚಂದ್ರಗಳಿವೆ.

03086010a ಅಶೋಕತೀರ್ಥಂ ಮರ್ತ್ಯೇಷು ಕೌಂತೇಯ ಬಹುಲಾಶ್ರಮಂ।
03086010c ಅಗಸ್ತ್ಯತೀರ್ಥಂ ಪಾಂಡ್ಯೇಷು ವಾರುಣಂ ಚ ಯುಧಿಷ್ಠಿರ।।
03086011a ಕುಮಾರ್ಯಃ ಕಥಿತಾಃ ಪುಣ್ಯಾಃ ಪಾಂಡ್ಯೇಷ್ವೇವ ನರರ್ಷಭ।

ಕೌಂತೇಯ! ಯುಧಿಷ್ಠಿರ! ನರರ್ಷಭ! ಮರ್ತ್ಯದೇಶದಲ್ಲಿ ಬಹು ಆಶ್ರಮಗಳಿಂದೊಡಗೂಡಿದ ಅಶೋಕತೀರ್ಥ, ಪಾಂಡ್ಯದೇಶದಲ್ಲಿ ಅಗಸ್ತ್ಯ ಮತ್ತು ವಾರುಣ ತೀರ್ಥಗಳು, ಮತ್ತು ಅದೇ ಪಾಂಡ್ಯದೇಶದಲ್ಲಿ ಪುಣ್ಯ ಕುಮಾರಿಯರು ಇದ್ದಾರೆ ಎಂದು ಹೇಳುತ್ತಾರೆ.

03086011c ತಾಮ್ರಪರ್ಣೀಂ ತು ಕೌಂತೇಯ ಕೀರ್ತಯಿಷ್ಯಾಮಿ ತಾಂ ಶೃಣು।।
03086012a ಯತ್ರ ದೇವೈಸ್ತಪಸ್ತಪ್ತಂ ಮಹದಿಚ್ಚದ್ಭಿರಾಶ್ರಮೇ।
03086012c ಗೋಕರ್ಣಮಿತಿ ವಿಖ್ಯಾತಂ ತ್ರಿಷು ಲೋಕೇಷು ಭಾರತ।।
03086013a ಶೀತತೋಯೋ ಬಹುಜಲಃ ಪುಣ್ಯಸ್ತಾತ ಶಿವಶ್ಚ ಸಃ।

ಕೌಂತೇಯ! ಈಗ ತಾಮ್ರಪರ್ಣಿಯ ಕುರಿತು ಹೇಳುತ್ತೇನೆ. ಕೇಳು. ಅಲ್ಲಿ ದೇವತೆಗಳು ಮಹದಿಚ್ಛೆಯನ್ನು ಸಾಧಿಸಲು ತಪಸ್ಸನ್ನು ತಪಿಸಿದರು. ಭಾರತ! ಮಗೂ! ಅದೇ ತಣ್ಣೀರಿನ, ತುಂಬಾ ನೀರಿರುವ, ಪುಣ್ಯವೂ ಮಂಗಳಕರವೂ ಆದ ಗೋಕರ್ಣವೆಂದು ಮೂರು ಲೋಕಗಳಲ್ಲಿ ವಿಖ್ಯಾತವಾಗಿದೆ.

03086013c ಹ್ರದಃ ಪರಮದುಷ್ಪ್ರಾಪೋ ಮಾನುಷೈರಕೃತಾತ್ಮಭಿಃ।।

ಅಲ್ಲಿಯೇ ತಮ್ಮ ಆತ್ಮವನ್ನು ಪಳಗಿಸದೇ ಇದ್ದವರಿಗೆ ಹೋಗಲು ಕಷ್ಟವಾಗುವ ಸರೋವರವಿದೆ.

03086014a ತತ್ರೈವ ತೃಣಸೋಮಾಗ್ನೇಃ ಸಂಪನ್ನಫಲಮೂಲವಾನ್।
03086014c ಆಶ್ರಮೋಽಗಸ್ತ್ಯಶಿಷ್ಯಸ್ಯ ಪುಣ್ಯೋ ದೇವಸಭೇ ಗಿರೌ।।

ಅಲ್ಲಿಯೇ ದೇವಸಭ ಗಿರಿಯಲ್ಲಿ ಅಗಸ್ತ್ಯನ ಶಿಷ್ಯ ತೃಣಸೋಮಾಗ್ನಿಯ ಫಲಮೂಲ ಸಮೃದ್ಧ ಪುಣ್ಯಾಶ್ರಮವಿದೆ.

03086015a ವೈಡೂರ್ಯಪರ್ವತಸ್ತತ್ರ ಶ್ರೀಮಾನ್ಮಣಿಮಯಃ ಶಿವಃ।
03086015c ಅಗಸ್ತ್ಯಸ್ಯಾಶ್ರಮಶ್ಚೈವ ಬಹುಮೂಲಫಲೋದಕಃ।।

ಅಲ್ಲಿ ಶ್ರೀಮಂತ, ಮಣಿಮಯ, ಮಂಗಳಕರ ವೈಡೂರ್ಯಪರ್ವತ ಮತ್ತು ಬಹಳಷ್ಟು ಫಲಮೂಲ ಮತ್ತು ನೀರಿನಿಂದೊಡಗೂಡಿದ ಅಗಸ್ತ್ಯಾಶ್ರಮಗಳಿವೆ.

03086016a ಸುರಾಷ್ಟ್ರೇಷ್ವಪಿ ವಕ್ಷ್ಯಾಮಿ ಪುಣ್ಯಾನ್ಯಾಯತನಾನಿ ಚ।
03086016c ಆಶ್ರಮಾನ್ಸರಿತಃ ಶೈಲಾನ್ಸರಾಂಸಿ ಚ ನರಾಧಿಪ।।

ನರಾಧಿಪ! ಈಗ ನಾನು ಸುರಾಷ್ಟ್ರದಲ್ಲಿರುವ ಪುಣ್ಯಸ್ಥಳಗಳು, ಆಶ್ರಮಗಳು, ನದಿಗಳು, ಗಿರಿಗಳು, ಮತ್ತು ಸರೋವರಗಳ ಕುರಿತು ಹೇಳುತ್ತೇನೆ.

03086017a ಚಮಸೋನ್ಮಜ್ಜನಂ ವಿಪ್ರಾಸ್ತತ್ರಾಪಿ ಕಥಯಂತ್ಯುತ।
03086017c ಪ್ರಭಾಸಂ ಚೋದಧೌ ತೀರ್ಥಂ ತ್ರಿದಶಾನಾಂ ಯುಧಿಷ್ಠಿರ।।

ಯುಧಿಷ್ಠಿರ! ವಿಪ್ರರು ಅಲ್ಲಿರುವ ಚಮಸೋನ್ಮಜ್ಜನ ಮತ್ತು ಸಮುದ್ರ ತೀರದಲ್ಲಿರುವ ಮೂವತ್ತು ದೇವತೆಗಳ ತೀರ್ಥ ಪ್ರಭಾಸದ ಕುರಿತು ಹೇಳುತ್ತಾರೆ.

03086018a ತತ್ರ ಪಿಂಡಾರಕಂ ನಾಮ ತಾಪಸಾಚರಿತಂ ಶುಭಂ।
03086018c ಉಜ್ಜಯಂತಶ್ಚ ಶಿಖರೀ ಕ್ಷಿಪ್ರಂ ಸಿದ್ಧಿಕರೋ ಮಹಾನ್।।

ಅಲ್ಲಿ ತಾಪಸಿಗಳು ನಡೆದುಕೊಳ್ಳುವ ಪಿಂಡಾರಕ ಎಂಬ ಹೆಸರಿನ ಶುಭ ಪ್ರದೇಶವೂ ಕ್ಷಿಪ್ರವಾಗಿ ಸಿದ್ಧಿಯನ್ನು ಕೊಡುವ ಉಜ್ಜಯಂತ ಗಿರಿಯೂ ಇವೆ.

03086019a ತತ್ರ ದೇವರ್ಷಿವರ್ಯೇಣ ನಾರದೇನಾನುಕೀರ್ತಿತಃ।
03086019c ಪುರಾಣಃ ಶ್ರೂಯತೇ ಶ್ಲೋಕಸ್ತಂ ನಿಬೋಧ ಯುಧಿಷ್ಠಿರ।।

ಯುಧಿಷ್ಠಿರ! ಅಲ್ಲಿ ಹಿಂದೆ ದೇವರ್ಷಿಗಳಲ್ಲಿ ಹಿರಿಯ ನಾರದನು ಹೇಳಿದ ಶ್ಲೋಕವೊಂದಿದೆ, ಕೇಳು.

03086020a ಪುಣ್ಯೇ ಗಿರೌ ಸುರಾಷ್ಟ್ರೇಷು ಮೃಗಪಕ್ಷಿನಿಷೇವಿತೇ।
03086020c ಉಜ್ಜಯಂತೇ ಸ್ಮ ತಪ್ತಾಂಗೋ ನಾಕಪೃಷ್ಠೇ ಮಹೀಯತೇ।।

“ಸುರಾಷ್ಟ್ರದಲ್ಲಿರುವ ಮೃಗಪಕ್ಷಿಗಳು ವಾಸಿಸುವ ಉಜ್ಜಯಂತದ ಮೇಲೆ ತನ್ನ ದೇಹವನ್ನು ದಂಡಿಸಿ ತಪಸ್ಸನ್ನಾಚರಿಸುವವನು ಸ್ವರ್ಗದಲ್ಲಿ ಮೆರೆಯುತ್ತಾನೆ.”

03086021a ಪುಣ್ಯಾ ದ್ವಾರವತೀ ತತ್ರ ಯತ್ರಾಸ್ತೇ ಮಧುಸೂದನಃ।
03086021c ಸಾಕ್ಷಾದ್ದೇವಃ ಪುರಾಣೋಽಸೌ ಸ ಹಿ ಧರ್ಮಃ ಸನಾತನಃ।।

ಅಲ್ಲಿಯೇ ಪುರಾಣಗಳಲ್ಲಿ ಹೇಳಿರುವ ಸಾಕ್ಷಾದ್ದೇವ ಸನಾತನ ಧರ್ಮ ಮಧುಸೂದನನು ವಾಸಿಸುವ ಪುಣ್ಯ ದ್ವಾರವತಿಯಿದೆ.

03086022a ಯೇ ಚ ವೇದವಿದೋ ವಿಪ್ರಾ ಯೇ ಚಾಧ್ಯಾತ್ಮವಿದೋ ಜನಾಃ।
03086022c ತೇ ವದಂತಿ ಮಹಾತ್ಮಾನಂ ಕೃಷ್ಣಂ ಧರ್ಮಂ ಸನಾತನಂ।।

ವೇದವಿದ ವಿಪ್ರರು ಮತ್ತು ಆಧ್ಯಾತ್ಮವನ್ನು ತಿಳಿದ ಜನರು ಮಹಾತ್ಮ ಕೃಷ್ಣನೇ ಸನಾತನ ಧರ್ಮವೆಂದು ಹೇಳುತ್ತಾರೆ.

03086023a ಪವಿತ್ರಾಣಾಂ ಹಿ ಗೋವಿಂದಃ ಪವಿತ್ರಂ ಪರಮುಚ್ಯತೇ।
03086023c ಪುಣ್ಯಾನಾಮಪಿ ಪುಣ್ಯೋಽಸೌ ಮಂಗಲಾನಾಂ ಚ ಮಂಗಲಂ।।

ಗೋವಿಂದನೇ ಪವಿತ್ರರಲ್ಲಿ ಪರಮ ಪವಿತ್ರನೆಂದೂ, ಪುಣ್ಯಗಳಲ್ಲಿ ಪುಣ್ಯನೆಂದೂ, ಮಂಗಳಗಳಲ್ಲಿ ಮಂಗಳನೆಂದು ಹೇಳುತ್ತಾರೆ.

03086024a ತ್ರೈಲೋಕ್ಯಂ ಪುಂಡರೀಕಾಕ್ಷೋ ದೇವದೇವಃ ಸನಾತನಃ।
03086024c ಆಸ್ತೇ ಹರಿರಚಿಂತ್ಯಾತ್ಮಾ ತತ್ರೈವ ಮಧುಸೂದನಃ।।

ಮೂರು ಲೋಕಗಳಿಗೂ ದೇವದೇವ, ಸನಾತನ, ಪುಂಡರೀಕಾಕ್ಷ, ಹರಿ, ಅಚಿಂತ್ಯಾತ್ಮ ಮಧುಸೂದನನು ಅಲ್ಲಿಯೇ ವಾಸಿಸುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಷಡಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ತಾರನೆಯ ಅಧ್ಯಾಯವು.