ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 84
ಸಾರ
ಅರ್ಜುನನಿಲ್ಲದೇ ದುಃಖಿತನಾಗಿ ಕಾಮ್ಯಕವನದಲ್ಲಿ ಇರಲು ಕಷ್ಟವಾಗುತ್ತಿದೆ; ಬೇರೆ ಯಾವುದಾದರೂ ವನವಿದ್ದರೆ ಹೇಳೆಂದು ಯುಧಿಷ್ಠಿರನು ಧೌಮ್ಯನನ್ನು ಕೇಳುವುದು (1-20).
03084001 ವೈಶಂಪಾಯನ ಉವಾಚ।
03084001a ಭ್ರಾತೄಣಾಂ ಮತಮಾಜ್ಞಾಯ ನಾರದಸ್ಯ ಚ ಧೀಮತಃ।
03084001c ಪಿತಾಮಹಸಮಂ ಧೌಮ್ಯಂ ಪ್ರಾಹ ರಾಜಾ ಯುಧಿಷ್ಠಿರಃ।।
ವೈಶಂಪಾಯನನು ಹೇಳಿದನು: “ಧೀಮಂತ ನಾರದನ ಮತ್ತು ಸಹೋದರರ ಮನಸ್ಸನ್ನು ತಿಳಿದ ರಾಜಾ ಯುಧಿಷ್ಠಿರನು ಪಿತಾಮಹಸಮನಾದ ಧೌಮ್ಯನಿಗೆ ಹೇಳಿದನು:
03084002a ಮಯಾ ಸ ಪುರುಷವ್ಯಾಘ್ರೋ ಜಿಷ್ಣುಃ ಸತ್ಯಪರಾಕ್ರಮಃ।
03084002c ಅಸ್ತ್ರಹೇತೋರ್ಮಹಾಬಾಹುರಮಿತಾತ್ಮಾ ವಿವಾಸಿತಃ।।
“ಅಸ್ತ್ರಗಳಿಗೋಸ್ಕರ ನಾನು ಅಮಿತಾತ್ಮ, ಪುರುಷವ್ಯಾಘ್ರ, ಸತ್ಯಪರಾಕ್ರಮಿ ಜಿಷ್ಣುವನ್ನು ಕಳುಹಿಸಿದ್ದೇನೆ.
03084003a ಸ ಹಿ ವೀರೋಽನುರಕ್ತಶ್ಚ ಸಮರ್ಥಶ್ಚ ತಪೋಧನ।
03084003c ಕೃತೀ ಚ ಭೃಶಮಪ್ಯಸ್ತ್ರೇ ವಾಸುದೇವ ಇವ ಪ್ರಭುಃ।।
ತಪೋಧನ! ಆ ವೀರನು ಅನುರಕ್ತನೂ ಸಮರ್ಥನೂ ಹೌದು ಮತ್ತು ಅಸ್ತ್ರಗಳಲ್ಲಿ ಪರಿಣತಿಯನ್ನು ಹೊಂದಿದವನು. ಪ್ರಭು ವಾಸುದೇವನ ಸಮ.
03084004a ಅಹಂ ಹ್ಯೇತಾವುಭೌ ಬ್ರಹ್ಮನ್ಕೃಷ್ಣಾವರಿನಿಘಾತಿನೌ।
03084004c ಅಭಿಜಾನಾಮಿ ವಿಕ್ರಾಂತೌ ತಥಾ ವ್ಯಾಸಃ ಪ್ರತಾಪವಾನ್।।
03084004e ತ್ರಿಯುಗೌ ಪುಂಡರೀಕಾಕ್ಷೌ ವಾಸುದೇವಧನಂಜಯೌ।।
ಬ್ರಹ್ಮನ್! ಪ್ರತಾಪಿ ವ್ಯಾಸನು ವಿಕ್ರಾಂತರಾದ ಅರಿನಿಘಾತಿಗಳಾದ ಈ ಪುಂಡರೀಕಾಕ್ಷ ಕೃಷ್ಣರೀರ್ವರು ಮೂರು ಯುಗಗಳಲ್ಲಿದ್ದ ವಾಸುದೇವ-ಧನಂಜಯರು ಎನ್ನುವುದನ್ನು ಅರಿತುಕೊಂಡಿದ್ದಂತೆ ನಾನೂ ಕೂಡ ತಿಳಿದುಕೊಂಡಿದ್ದೇನೆ.
03084005a ನಾರದೋಽಪಿ ತಥಾ ವೇದ ಸೋಽಪ್ಯಶಂಸತ್ಸದಾ ಮಮ।
03084005c ತಥಾಹಮಪಿ ಜಾನಾಮಿ ನರನಾರಾಯಣಾವೃಷೀ।।
ನಾರದನಿಗೂ ಕೂಡ ಇದೇ ವಿಷಯವು ತಿಳಿದಿದೆ ಮತ್ತು ಅವನು ಸದಾ ನನ್ನಲ್ಲಿ ಇದನ್ನು ಹೇಳುತ್ತಿರುತ್ತಾನೆ. ಇವರೀರ್ವರು ಋಷಿಗಳಾದ ನರ ಮತ್ತು ನಾರಾಯಣರು ಎಂದು ನಾನೂ ಕೂಡ ತಿಳಿದಿದ್ದೇನೆ.
03084006a ಕ್ತೋಽಯಮಿತ್ಯತೋ ಮತ್ವಾ ಮಯಾ ಸಂಪ್ರೇಷಿತೋಽರ್ಜುನಃ।
03084006c ಇಂದ್ರಾದನವರಃ ಶಕ್ತಃ ಸುರಸೂನುಃ ಸುರಾಧಿಪಂ।।
03084006e ದ್ರಷ್ಟುಮಸ್ತ್ರಾಣಿ ಚಾದಾತುಮಿಂದ್ರಾದಿತಿ ವಿವಾಸಿತಃ।।
ಅವನು ಈ ವಿಷಯದಲ್ಲಿ ಶಕ್ತ ಎಂದು ತಿಳಿದೇ ನಾನು ಇಂದ್ರನ ಸರಿಸಮಾನ ನರನಾದ, ಸುರರ ಮಗ ಅರ್ಜುನನನ್ನು, ಸುರಾಧಿಪ ಇಂದ್ರನನ್ನು ಕಂಡು ಅವನಿಂದ ಅಸ್ತ್ರಗಳನ್ನು ತರಲು ಕಳುಹಿಸಿದ್ದೇನೆ.
03084007a ಭೀಷ್ಮದ್ರೋಣಾವತಿರಥೌ ಕೃಪೋ ದ್ರೌಣಿಶ್ಚ ದುರ್ಜಯಃ।
03084007c ಧೃತರಾಷ್ಟ್ರಸ್ಯ ಪುತ್ರೇಣ ವೃತಾ ಯುಧಿ ಮಹಾಬಲಾಃ।।
03084007e ಸರ್ವೇ ವೇದವಿದಃ ಶೂರಾಃ ಸರ್ವೇಽಸ್ತ್ರಕುಶಲಾಸ್ತಥಾ।।
ಭೀಷ್ಮ-ದ್ರೋಣರು ಅತಿರಥರು. ಮಹಾಬಲಶಾಲಿಗಳಾದ ಕೃಪ, ದ್ರೌಣಿ, ದುರ್ಜಯರು ಯುದ್ಧದಲ್ಲಿ ಧೃತರಾಷ್ಟ್ರನ ಮಗನೊಂದಿಗೆ ಭಾಗವಹಿಸುವರು. ಅವರೆಲ್ಲರೂ ವೇದವಿದರೂ ಶೂರರೂ ಆಗಿದ್ದು ಎಲ್ಲರೂ ಅಸ್ತ್ರಗಳಲ್ಲಿ ಕುಶಲರಾಗಿದ್ದಾರೆ.
03084008a ಯೋದ್ಧುಕಾಮಶ್ಚ ಪಾರ್ಥೇನ ಸತತಂ ಯೋ ಮಹಾಬಲಃ।
03084008c ಸ ಚ ದಿವ್ಯಾಸ್ತ್ರವಿತ್ಕರ್ಣಃ ಸೂತಪುತ್ರೋ ಮಹಾರಥಃ।।
ಸತತವೂ ಪಾರ್ಥನೊಂದಿಗೆ ಯುದ್ಧಮಾಡಲು ಇಚ್ಛಿಸುವ ಮಹಾಬಲಿ ಮಹಾರಥಿ ಸೂತಪುತ್ರ ಕರ್ಣನು ದಿವ್ಯಾಸ್ತ್ರಗಳಲ್ಲಿ ಪರಿಣಿತಿ ಹೊಂದಿದ್ದಾನೆ.
03084009a ಸೋಽಶ್ವವೇಗಾನಿಲಬಲಃ ಶರಾರ್ಚಿಸ್ತಲನಿಸ್ವನಃ।
03084009c ರಜೋಧೂಮೋಽಸ್ತ್ರಸಂತಾಪೋ ಧಾರ್ತರಾಷ್ಟ್ರಾನಿಲೋದ್ಧತಃ।।
ಅವನಲ್ಲಿ ಅಶ್ವಗಳಿಗಿಂತ ವೇಗವಿದೆ. ಭಿರುಗಾಳಿಯ ಬಲವಿದೆ. ಅವನು ಭುಗಿಲೆದ್ದ ಬೆಂಕಿಯಂತೆ ಭೋರ್ಗರೆಯುತ್ತಾನೆ ಮತ್ತು ಬೆಂಕಿಯ ಕಿಡಿಗಳಂತೆ ಬಾಣಗಳನ್ನು ಹಾರಿಸುತ್ತಾನೆ. ಆ ಅಸ್ತ್ರಸಂತಾಪನು ಧಾರ್ತರಾಷ್ಟ್ರರು ಎಬ್ಬಿಸಿದ ಭಿರುಗಾಳಿಯ ಧೂಳಿನ ಮೋಡದಂತೆ.
03084010a ನಿಸೃಷ್ಟ ಇವ ಕಾಲೇನ ಯುಗಾಂತಜ್ವಲನೋ ಯಥಾ।
03084010c ಮಮ ಸೈನ್ಯಮಯಂ ಕಕ್ಷಂ ಪ್ರಧಕ್ಷ್ಯತಿ ನ ಸಂಶಯಃ।।
ಯುಗಾಂತದ ಬೆಂಕಿಯಂತೆ ಕಾಲನೇ ಅವನನ್ನು ನನ್ನ ಸೈನ್ಯ ಕಕ್ಷಗಳನ್ನು ಭಸ್ಮಗೊಳಿಸಲಿಕ್ಕೆಂದು ಹುಟ್ಟಿಸಿ ಬಿಟ್ಟಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.
03084011a ತಂ ಸ ಕೃಷ್ಣಾನಿಲೋದ್ಧೂತೋ ದಿವ್ಯಾಸ್ತ್ರಜಲದೋ ಮಹಾನ್।
03084011c ಶ್ವೇತವಾಜಿಬಲಾಕಾಭೃದ್ಗಾಂಡೀವೇಂದ್ರಾಯುಧೋಜ್ಜ್ವಲಃ।।
03084012a ಸತತಂ ಶರಧಾರಾಭಿಃ ಪ್ರದೀಪ್ತಂ ಕರ್ಣಪಾವಕಂ।
03084012c ಉದೀರ್ಣೋಽರ್ಜುನಮೇಘೋಽಯಂ ಶಮಯಿಷ್ಯತಿ ಸಂಯುಗೇ।।
ಕೃಷ್ಣನೆಂಬ ಗಾಳಿಯಿಂದ ಮೇಲೆಬ್ಬಿಸಿದ, ದಿವ್ಯಾಸ್ತ್ರಗಳೆಂಬ ಮಹಾ ಮೋಡಗಳನ್ನು ಇಂದ್ರಾಯುಧದಂತಿರುವ ಅರ್ಜುನನ ಗಾಂಡೀವದ ಮಿಂಚಿನಿಂದ ಹೊಡೆಯಲ್ಪಟ್ಟ ಸತತವಾಗಿ ಶರಗಳ ಮಳೆಯಿಂದ ಕರ್ಣನೆಂಬುವ ಈ ಬೆಂಕಿಯನ್ನು ಯುದ್ಧದಲ್ಲಿ ಆರಿಸಬಲ್ಲದು.
03084013a ಸ ಸಾಕ್ಷಾದೇವ ಸರ್ವಾಣಿ ಶಕ್ರಾತ್ಪರಪುರಂಜಯಃ।
03084013c ದಿವ್ಯಾನ್ಯಸ್ತ್ರಾಣಿ ಬೀಭತ್ಸುಸ್ತತ್ತ್ವತಃ ಪ್ರತಿಪತ್ಸ್ಯತೇ।।
ಆ ಬೀಭತ್ಸುವು ಪರಪುರಂಜಯ ಶಕ್ರನಿಂದ ಎಲ್ಲ ದಿವ್ಯಸ್ತ್ರಗಳನ್ನೂ ತಾನಾಗಿಯೇ ಪಡೆದುಕೊಂಡು ಬರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03084014a ಅಲಂ ಸ ತೇಷಾಂ ಸರ್ವೇಷಾಮಿತಿ ಮೇ ಧೀಯತೇ ಮತಿಃ।
03084014c ನಾಸ್ತಿ ತ್ವತಿಕ್ರಿಯಾ ತಸ್ಯ ರಣೇಽರೀಣಾಂ ಪ್ರತಿಕ್ರಿಯಾ।।
ಅವರೆಲ್ಲರಿಗೆ ಸರಿಸಾಟಿಯಾದವನು ಅವನೇ ಎಂದು ನಾನು ಯಾವಾಗಲೂ ಯೋಚಿಸುತ್ತೇನೆ. ಅವನನ್ನು ಮೀರಿಸುವವರು ಯಾರೂ ಇಲ್ಲ ಮತ್ತು ರಣರಂಗದಲ್ಲಿ ಅವನ ಹಾಗೆ ಹೋರಾಡುವವರು ಯಾರೂ ಇರುವುದಿಲ್ಲ.
03084015a ತಂ ವಯಂ ಪಾಂಡವಂ ಸರ್ವೇ ಗೃಹೀತಾಸ್ತ್ರಂ ಧನಂಜಯಂ।
03084015c ದ್ರಷ್ಟಾರೋ ನ ಹಿ ಬೀಭತ್ಸುರ್ಭಾರಮುದ್ಯಮ್ಯ ಸೀದತಿ।।
ಧನಂಜಯ ಪಾಂಡವನು ತಂದಿರುವ ಎಲ್ಲ ಅಸ್ತ್ರಗಳನ್ನೂ ನಾವು ನೋಡುತ್ತೇವೆ. ಬೀಭತ್ಸುವು ತಾನು ಎತ್ತಿಕೊಂಡ ಭಾರದ ಕೆಳಗೆ ಎಂದೂ ಕುಸಿದು ಬಿದ್ದಿಲ್ಲ.
03084016a ವಯಂ ತು ತಮೃತೇ ವೀರಂ ವನೇಽಸ್ಮಿನ್ದ್ವಿಪದಾಂ ವರ।
03084016c ಅವಧಾನಂ ನ ಗಚ್ಚಾಮಃ ಕಾಮ್ಯಕೇ ಸಹ ಕೃಷ್ಣಯಾ।।
ದ್ವಿಜರಲ್ಲಿ ಶ್ರೇಷ್ಠನೇ! ಆದರೂ ಆ ವೀರನಿಲ್ಲದೇ ಇದೇ ಕಾಮ್ಯಕ ವನದಲ್ಲಿ ವಾಸಿಸಲು ಕೃಷ್ಣೆಯೂ ಸೇರಿ ನಮಗ್ಯಾರಿಗೂ ಮನಸ್ಸಾಗುತ್ತಿಲ್ಲ.
03084017a ಭವಾನನ್ಯದ್ವನಂ ಸಾಧು ಬಹ್ವನ್ನಂ ಫಲವಚ್ಶುಚಿ।
03084017c ಆಖ್ಯಾತು ರಮಣೀಯಂ ಚ ಸೇವಿತಂ ಪುಣ್ಯಕರ್ಮಭಿಃ।।
03084018a ಯತ್ರ ಕಂ ಚಿದ್ವಯಂ ಕಾಲಂ ವಸಂತಃ ಸತ್ಯವಿಕ್ರಮಂ।
03084018c ಪ್ರತೀಕ್ಷಾಮೋಽರ್ಜುನಂ ವೀರಂ ವರ್ಷಕಾಮಾ ಇವಾಂಬುದಂ।।
ಭಗವನ್! ಆದುದರಿಂದ ಬೇರೆ ಯಾವುದಾದರೂ ಒಳ್ಳೆಯ, ಸಾಕಷ್ಟು ಆಹಾರ ಮತ್ತು ಫಲವು ದೊರಕಬಲ್ಲ, ಶುಚಿಯಾದ, ರಮಣೀಯವಾದ, ಪುಣ್ಯಕರ್ಮಿಗಳು ಸೇವಿಸುವ ವನದ ಕುರಿತು ತಿಳಿಸು. ಅಲ್ಲಿ ನಾವು ಮಳೆಬೇಕಾದವರು ಮೋಡಗಳ ನಿರೀಕ್ಷೆಯನ್ನು ಹೇಗೆ ಮಾಡುತ್ತಾರೋ ಹಾಗೆ ಆ ಸತ್ಯವಿಕ್ರಮ ವೀರ ಅರ್ಜುನನ ಬರವನ್ನು ಕಾಯುತ್ತಾ ಸ್ವಲ್ಪ ಕಾಲ ಅಲ್ಲಿ ವಾಸಿಸಬಹುದು.
03084019a ವಿವಿಧಾನಾಶ್ರಮಾನ್ಕಾಂಶ್ಚಿದ್ದ್ವಿಜಾತಿಭ್ಯಃ ಪರಿಶ್ರುತಾನ್।
03084019c ಸರಾಂಸಿ ಸರಿತಶ್ಚೈವ ರಮಣೀಯಾಂಶ್ಚ ಪರ್ವತಾನ್।।
03084020a ಆಚಕ್ಷ್ವ ನ ಹಿ ನೋ ಬ್ರಹ್ಮನ್ರೋಚತೇ ತಮೃತೇಽರ್ಜುನಂ।
03084020c ವನೇಽಸ್ಮಿನ್ಕಾಮ್ಯಕೇ ವಾಸೋ ಗಚ್ಚಾಮೋಽನ್ಯಾಂ ದಿಶಂ ಪ್ರತಿ।।
ದ್ವಿಜರು ಹೇಳಿರುವ ವಿವಿಧ ಆಶ್ರಮಗಳ, ಸರೋವರಗಳ, ನದಿಗಳ, ರಮಣೀಯ ಪರ್ವತಗಳ ಕುರಿತು ಹೇಳು. ಬ್ರಹ್ಮನ್! ಅರ್ಜುನನಿಲ್ಲದೇ ಇಲ್ಲಿ ಕಾಮ್ಯಕವನದಲ್ಲಿ ವಾಸಿಸಲು ಮನಸ್ಸಾಗುತ್ತಿಲ್ಲ. ಬೇರೆ ಕಡೆ ಹೋಗೋಣ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಧೌಮ್ಯತೀರ್ಥಯಾತ್ರಾಯಾಂ ಚತುರಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಧೌಮ್ಯತೀರ್ಥಯಾತ್ರಾ ಎನ್ನುವ ಎಂಭತ್ನಾಲ್ಕನೆಯ ಅಧ್ಯಾಯವು.