ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 82
ಸಾರ
ಧರ್ಮತೀರ್ಥಾದಿ ತೀರ್ಥಗಳ ಮಹಿಮೆ (1-10). ಶಾಕಂಬರೀ ದೇವಿ ಸ್ಥಳದ ಮಹಿಮೆ (11-15). ಸುವರ್ಣಾಕ್ಷವೇ ಮೊದಲಾದ ತೀರ್ಥಗಳ ಫಲ (16-143).
03082001 ಪುಲಸ್ತ್ಯ ಉವಾಚ।
03082001a ತತೋ ಗಚ್ಚೇತ ಧರ್ಮಜ್ಞ ಧರ್ಮತೀರ್ಥಂ ಪುರಾತನಂ।
03082001c ತತ್ರ ಸ್ನಾತ್ವಾ ನರೋ ರಾಜನ್ಧರ್ಮಶೀಲಃ ಸಮಾಹಿತಃ।।
03082001e ಆಸಪ್ತಮಂ ಕುಲಂ ರಾಜನ್ಪುನೀತೇ ನಾತ್ರ ಸಂಶಯಃ।।
ಪುಲಸ್ತ್ಯನು ಹೇಳಿದನು: “ಧರ್ಮಜ್ಞ! ಅನಂತರ ಪುರಾತನ ಧರ್ಮತೀರ್ಥಕ್ಕೆ ಹೋಗಬೇಕು. ರಾಜನ್! ಅಲ್ಲಿ ಸ್ನಾನಮಾಡಿದ ಧರ್ಮಶೀಲ ಸಮಾಹಿತ ನರನು ಕುಲದ ಏಳು ತಲೆಮಾರುಗಳನ್ನು ಪುನೀತಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
03082002a ತತೋ ಗಚ್ಚೇತ ಧರ್ಮಜ್ಞ ಕಾರಾಪತನಮುತ್ತಮಂ।
03082002c ಅಗ್ನಿಷ್ಟೋಮಮವಾಪ್ನೋತಿ ಮುನಿಲೋಕಂ ಚ ಗಚ್ಚತಿ।।
ಧರ್ಮಜ್ಞ! ಅನಂತರ ಅನುತ್ತಮ ಕಾರಾಪತನಕ್ಕೆ ಹೋಗಬೇಕು. ಅದರಿಂದ ಅಗ್ನಿಷ್ಟೋಮಯಾಗದ ಫಲವನ್ನು ಪಡೆದು ಮುನಿಲೋಕವನ್ನು ಸೇರುತ್ತಾರೆ.
03082003a ಸೌಗಂಧಿಕಂ ವನಂ ರಾಜಂಸ್ತತೋ ಗಚ್ಚೇತ ಮಾನವಃ।
03082003c ಯತ್ರ ಬ್ರಹ್ಮಾದಯೋ ದೇವಾ ಋಷಯಶ್ಚ ತಪೋಧನಾಃ।।
03082004a ಸಿದ್ಧಚಾರಣಗಂಧರ್ವಾಃ ಕಿನ್ನರಾಃ ಸಮಹೋರಗಾಃ।
03082004c ತದ್ವನಂ ಪ್ರವಿಶನ್ನೇವ ಸರ್ವಪಾಪೈಃ ಪ್ರಮುಚ್ಯತೇ।।
ರಾಜನ್! ಅನಂತರ ಸೌಗಂಧಿಕಾ ವನಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು ಮತ್ತು ತಪೋಧನ ಋಷಿಗಳು, ಸಿದ್ಧ-ಚಾರಣ-ಗಂಧರ್ವರು, ಕಿನ್ನರರು ಮತ್ತು ನಾಗಗಳು ಸೇರಿರುತ್ತಾರೆ. ಆ ವನದ ಪ್ರವೇಶ ಮಾತ್ರದಿಂದ ಮಾನವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
03082005a ತತೋ ಹಿ ಸಾ ಸರಿಚ್ಚ್ರೇಷ್ಠಾ ನದೀನಾಮುತ್ತಮಾ ನದೀ।
03082005c ಪ್ಲಕ್ಷಾದ್ದೇವೀ ಸ್ರುತಾ ರಾಜನ್ಮಹಾಪುಣ್ಯಾ ಸರಸ್ವತೀ।।
ರಾಜನ್! ಅನಂತರ ನದಿಗಳಲ್ಲೇ ಉತ್ತಮ ನದಿ ಶ್ರೇಷ್ಠ ನದಿ ಮಹಾಪುಣ್ಯಕಾರಿಣಿ ಪ್ಲಕ್ಷದಿಂದ ಹರಿಯುವ ಸರಸ್ವತೀ ನದಿಯಿದೆ.
03082006a ತತ್ರಾಭಿಷೇಕಂ ಕುರ್ವೀತ ವಲ್ಮೀಕಾನ್ನಿಃಸೃತೇ ಜಲೇ।
03082006c ಅರ್ಚಯಿತ್ವಾ ಪಿತೄನ್ದೇವಾನಶ್ವಮೇಧಫಲಂ ಲಭೇತ್।।
ಅಲ್ಲಿ ಹುತ್ತದಿಂದ ಹರಿಯುವ ನೀರಿನಲ್ಲಿ ಸ್ನಾನಮಾಡಿ ಪಿತೃ ದೇವತೆಗಳನ್ನು ಪೂಜಿಸಿದರೆ ಅಶ್ವಮೇಧಯಾಗದ ಫಲವು ದೊರೆಯುತ್ತದೆ.
03082007a ಈಶಾನಾಧ್ಯುಷಿತಂ ನಾಮ ತತ್ರ ತೀರ್ಥಂ ಸುದುರ್ಲಭಂ।
03082007c ಷಟ್ಸು ಶಮ್ಯಾನಿಪಾತೇಷು ವಲ್ಮೀಕಾದಿತಿ ನಿಶ್ಚಯಃ।।
ಅಲ್ಲಿ ಹುತ್ತದಿಂದ ಶಮೆಯ ಆರು ಎಸೆತಗಳ ದೂರದಲ್ಲಿ ನೋಡಲು ದುರ್ಲಭವಾದ ಈಶಾನಾಧ್ಯುಷಿತ ಎಂಬ ಹೆಸರಿನ ತೀರ್ಥವಿದೆ ಎಂದು ಹೇಳುತ್ತಾರೆ.
03082008a ಕಪಿಲಾನಾಂ ಸಹಸ್ರಂ ಚ ವಾಜಿಮೇಧಂ ಚ ವಿಂದತಿ।
03082008c ತತ್ರ ಸ್ನಾತ್ವಾ ನರವ್ಯಾಘ್ರ ದೃಷ್ಟಮೇತತ್ಪುರಾತನೇ।।
ನರವ್ಯಾಘ್ರ! ಪುರಾಣಗಳ ಪ್ರಕಾರ ಅಲ್ಲಿ ಸ್ನಾನಮಾಡಿದವನು ಸಹಸ್ರ ಗೋವುಗಳನ್ನು ದಾನಮಾಡಿದ ಮತ್ತು ಅಶ್ವಮೇಧಯಾಗದ ಫಲವನ್ನು ಪಡೆಯುತ್ತಾನೆ ಎಂದಿದೆ.
03082009a ಸುಗಂಧಾಂ ಶತಕುಂಭಾಂ ಚ ಪಂಚಯಜ್ಞಾಂ ಚ ಭಾರತ।
03082009c ಅಭಿಗಮ್ಯ ನರಶ್ರೇಷ್ಠ ಸ್ವರ್ಗಲೋಕೇ ಮಹೀಯತೇ।।
ಭಾರತ! ನರಶ್ರೇಷ್ಠ! ಸುಗಂಧಾ, ಶತಕುಂಭಾ ಮತ್ತು ಪಂಚಯಜ್ಞಗಳಿಗೆ ಹೋದವರು ಸ್ವರ್ಗಲೋಕದಲ್ಲಿ ಮೆರೆಯುತ್ತಾರೆ.
03082010a ತ್ರಿಶೂಲಖಾತಂ ತತ್ರೈವ ತೀರ್ಥಮಾಸಾದ್ಯ ಭಾರತ।
03082010c ತತ್ರಾಭಿಷೇಕಂ ಕುರ್ವೀತ ಪಿತೃದೇವಾರ್ಚನೇ ರತಃ।।
03082010e ಗಾಣಪತ್ಯಂ ಸ ಲಭತೇ ದೇಹಂ ತ್ಯಕ್ತ್ವಾ ನ ಸಂಶಯಃ।।
ಭಾರತ! ಅಲ್ಲಿಯೇ ತ್ರಿಶೂಲಖಾತ ತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನಮಾಡಿ ಪಿತೃದೇವತೆಗಳ ಅರ್ಚನೆಯಲ್ಲಿ ನಿರತನಾದವನು ದೇಹವನ್ನು ತೊರೆದು ಗಾಣಪತ್ಯ ಪದವಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
03082011a ತತೋ ಗಚ್ಚೇತ ರಾಜೇಂದ್ರ ದೇವ್ಯಾಃ ಸ್ಥಾನಂ ಸುದುರ್ಲಭಂ।
03082011c ಶಾಕಂಭರೀತಿ ವಿಖ್ಯಾತಾ ತ್ರಿಷು ಲೋಕೇಷು ವಿಶ್ರುತಾ।।
ರಾಜೇಂದ್ರ! ಅನಂತರ ಬಹಳ ದುರ್ಲಭವಾದ ಮೂರು ಲೋಕಗಳಲ್ಲಿ ವಿಶ್ರುತ ಶಾಕಂಭರೀ ಎಂದು ವಿಖ್ಯಾತ ದೇವೀ ಸ್ಥಾನಕ್ಕೆ ಹೋಗಬೇಕು.
03082012a ದಿವ್ಯಂ ವರ್ಷಸಹಸ್ರಂ ಹಿ ಶಾಕೇನ ಕಿಲ ಸುವ್ರತ।
03082012c ಆಹಾರಂ ಸಾ ಕೃತವತೀ ಮಾಸಿ ಮಾಸಿ ನರಾಧಿಪ।।
ನರಾಧಿಪ! ಅವಳು ಪ್ರತಿ ತಿಂಗಳೂ ತರಕಾರಿಗಳನ್ನೇ ತಿಂದುಕೊಂಡು ಒಂದು ಸಹಸ್ರ ದಿವ್ಯವರ್ಷಗಳ ಪರ್ಯಂತ ಅಲ್ಲಿ ವ್ರತವನ್ನಾಚರಿಸಿದಳು.
03082013a ಋಷಯೋಽಭ್ಯಾಗತಾಸ್ತತ್ರ ದೇವ್ಯಾ ಭಕ್ತ್ಯಾ ತಪೋಧನಾಃ।
03082013c ಆತಿಥ್ಯಂ ಚ ಕೃತಂ ತೇಷಾಂ ಶಾಕೇನ ಕಿಲ ಭಾರತ।।
03082013e ತತಃ ಶಾಕಂಭರೀತ್ಯೇವ ನಾಮ ತಸ್ಯಾಃ ಪ್ರತಿಷ್ಠಿತಂ।।
ಭಾರತ! ದೇವಿಯ ಮೇಲಿನ ಭಕ್ತಿಯಿಂದ ತಪೋಧನ ಋಷಿಗಳು ಅಭ್ಯಾಗತರಾಗಿ ಅಲ್ಲಿಗೆ ಬಂದಾಗ ಅವಳು ಅವರ ಆತಿಥ್ಯವನ್ನು ತರಕಾರಿಗಳಿಂದಲೇ ಮಾಡಿದಳು. ಆದುದರಿಂದಲೇ ಅವಳ ಹೆಸರು ಶಾಕಂಭರೀ ಎಂದು ನಿಂತುಬಿಟ್ಟಿತು.
03082014a ಶಾಕಂಭರೀಂ ಸಮಾಸಾದ್ಯ ಬ್ರಹ್ಮಚಾರೀ ಸಮಾಹಿತಃ।
03082014c ತ್ರಿರಾತ್ರಮುಷಿತಃ ಶಾಕಂ ಭಕ್ಷಯೇನ್ನಿಯತಃ ಶುಚಿಃ।।
ಶಾಕಂಭರಿಗೆ ಬಂದು ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ನಿಯತನೂ ಶುಚಿಯೂ ಆಗಿದ್ದು ಮೂರುರಾತ್ರಿಗಳು ಉಳಿದು ತರಕಾರಿಗಳನ್ನು ಸೇವಿಸಬೇಕು.
03082015a ಶಾಕಾಹಾರಸ್ಯ ಯತ್ಸಮ್ಯಗ್ವರ್ಷೈರ್ದ್ವಾದಶಭಿಃ ಫಲಂ।
03082015c ತತ್ಫಲಂ ತಸ್ಯ ಭವತಿ ದೇವ್ಯಾಶ್ಚಂದೇನ ಭಾರತ।।
ಭಾರತ! ಹನ್ನೆರಡು ವರ್ಷಗಳ ಪರ್ಯಂತ ತರಕಾರಿಗಳನ್ನೇ ಆಹಾರವನ್ನಾಗಿಸಿಕೊಳ್ಳುವುದರಿಂದ ದೊರೆಯುವ ಫಲವು ದೇವಿಯ ಈ ಪ್ರಿಯಸ್ಥಳಕ್ಕೆ ಹೋಗುವುದರಿಂದ ದೊರೆಯುತ್ತದೆ.
03082016a ತತೋ ಗಚ್ಚೇತ್ಸುವರ್ಣಾಕ್ಷಂ ತ್ರಿಷು ಲೋಕೇಷು ವಿಶ್ರುತಂ।
03082016c ಯತ್ರ ವಿಷ್ಣುಃ ಪ್ರಸಾದಾರ್ಥಂ ರುದ್ರಮಾರಾಧಯತ್ಪುರಾ।।
ಅಲ್ಲಿಂದ ಮೂರು ಲೋಕಗಳಲ್ಲಿ ವಿಶ್ರುತ ಸುವರ್ಣಾಕ್ಷಕ್ಕೆ ಹೋಗಬೇಕು. ಅಲ್ಲಿ ವಿಷ್ಣುವು ಹಿಂದೆ ಪ್ರಸಾದಕ್ಕಾಗಿ ರುದ್ರನನ್ನು ಆರಾಧಿಸಿದ್ದನು.
03082017a ವರಾಂಶ್ಚ ಸುಬಹೂಽಲ್ಲೇಭೇ ದೈವತೇಷು ಸುದುರ್ಲಭಾನ್।
03082017c ಉಕ್ತಶ್ಚ ತ್ರಿಪುರಘ್ನೇನ ಪರಿತುಷ್ಟೇನ ಭಾರತ।।
ಅವನು ದೇವತೆಗಳಿಗೂ ಬಹಳ ದುರ್ಲಭವಾದ ಬಹಳಷ್ಟು ವರಗಳನ್ನು ಪಡೆದನು. ಭಾರತ! ಪರಿತುಷ್ಟನಾದ ತ್ರಿಪುರಘ್ನನು ಹೀಗೆ ಹೇಳಿದನು:
03082018a ಅಪಿ ಚಾಸ್ಮತ್ಪ್ರಿಯತರೋ ಲೋಕೇ ಕೃಷ್ಣ ಭವಿಷ್ಯಸಿ।
03082018c ತ್ವನ್ಮುಖಂ ಚ ಜಗತ್ಕೃತ್ಸ್ನಂ ಭವಿಷ್ಯತಿ ನ ಸಂಶಯಃ।।
“ಕೃಷ್ಣ! ನೀನು ಲೋಕದಲ್ಲಿ ಇನ್ನೂ ಹೆಚ್ಚು ಪ್ರಿಯತರನಾಗುವೆ. ನಿನ್ನ ಮುಖವೇ ಇಡೀ ಜಗತ್ತಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”
03082019a ತತ್ರಾಭಿಗಮ್ಯ ರಾಜೇಂದ್ರ ಪೂಜಯಿತ್ವಾ ವೃಷಧ್ವಜಂ।
03082019c ಅಶ್ವಮೇಧಮವಾಪ್ನೋತಿ ಗಾಣಪತ್ಯಂ ಚ ವಿಂದತಿ।।
ರಾಜೇಂದ್ರ! ಅಲ್ಲಿ ಹೋಗಿ ವೃಷಧ್ವಜನನ್ನು ಪೂಜಿಸಿದರೆ ಅಶ್ವಮೇಧದ ಫಲವನ್ನು ಪಡೆದು ಗಾಣಪತ್ಯವನ್ನು ಪಡೆಯುತ್ತಾರೆ.
03082020a ಧೂಮಾವತೀಂ ತತೋ ಗಚ್ಚೇತ್ತ್ರಿರತ್ರೋಪೋಷಿತೋ ನರಃ।
03082020c ಮನಸಾ ಪ್ರಾರ್ಥಿತಾನ್ಕಾಮಾಽಲ್ಲಭತೇ ನಾತ್ರ ಸಂಶಯಃ।।
ಅಲ್ಲಿಂದ ಧೂಮಾವತಿಗೆ ಹೋಗಬೇಕು. ಅಲ್ಲಿ ಮೂರು ರಾತ್ರಿಗಳು ತಂಗಿ ಮನಸಾರಿ ಪ್ರಾರ್ಥಿಸಿಕೊಂಡರೆ ನರನ ಆಸೆಗಳು ಪೂರ್ಣಗೊಳ್ಳುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
03082021a ದೇವ್ಯಾಸ್ತು ದಕ್ಷಿಣಾರ್ಧೇನ ರಥಾವರ್ತೋ ನರಾಧಿಪ।
03082021c ತತ್ರಾರೋಹೇತ ಧರ್ಮಜ್ಞ ಶ್ರದ್ದಧಾನೋ ಜಿತೇಂದ್ರಿಯಃ।।
03082021e ಮಹಾದೇವಪ್ರಸಾದಾದ್ಧಿ ಗಚ್ಚೇತ ಪರಮಾಂ ಗತಿಂ।।
ನರಾಧಿಪ! ಧರ್ಮಜ್ಞ! ದೇವಿಯ ದಕ್ಷಿಣಭಾಗದಲ್ಲಿರುವ ರಥಾವರ್ತವನ್ನು ಶ್ರದ್ಧಾವಂತನಾಗಿ ಜಿತೇಂದ್ರಿಯನಾಗಿ ಏರಿದರೆ ಮಹಾದೇವನ ಪ್ರಸಾದದಿಂದ ಪರಮ ಗತಿಯನ್ನು ಹೊಂದುತ್ತಾರೆ.
03082022a ಪ್ರದಕ್ಷಿಣಮುಪಾವೃತ್ಯ ಗಚ್ಚೇತ ಭರತರ್ಷಭ।
03082022c ಧಾರಾಂ ನಾಮ ಮಹಾಪ್ರಾಜ್ಞ ಸರ್ವಪಾಪಪ್ರಣಾಶಿನೀಂ।।
03082022e ತತ್ರ ಸ್ನಾತ್ವಾ ನರವ್ಯಾಘ್ರ ನ ಶೋಚತಿ ನರಾಧಿಪ।।
ಭರತರ್ಷಭ! ಮಹಾಪ್ರಾಜ್ಞ! ಅದನ್ನು ಪ್ರದಕ್ಷಿಣೆ ಮಾಡಿ ಮುಂದುವರೆದು ಧಾರಾ ಎನ್ನುವ ಸರ್ವಪಾಪಗಳನ್ನೂ ನಾಶಗೊಳಿಸುವಲ್ಲಿಗೆ ಹೋಗಬೇಕು. ನರವ್ಯಾಘ್ರ! ನರಾಧಿಪ! ಅಲ್ಲಿ ಸ್ನಾನಮಾಡಿದರೆ ದುಃಖವಿರುವುದಿಲ್ಲ.
03082023a ತತೋ ಗಚ್ಚೇತ ಧರ್ಮಜ್ಞ ನಮಸ್ಕೃತ್ಯ ಮಹಾಗಿರಿಂ।
03082023c ಸ್ವರ್ಗದ್ವಾರೇಣ ಯತ್ತುಲ್ಯಂ ಗಂಗಾದ್ವಾರಂ ನ ಸಂಶಯಃ।।
ಧರ್ಮಜ್ಞ! ಅಲ್ಲಿಂದ ಮಹಾಗಿರಿಯನ್ನು ನಮಸ್ಕರಿಸಿ ನಿಃಸಂಶಯವಾಗಿಯೂ ಸ್ವರ್ಗದ ದ್ವಾರಕ್ಕೆ ಸಮನಾದ ಗಂಗಾದ್ವಾರಕ್ಕೆ ಹೋಗಬೇಕು.
03082024a ತತ್ರಾಭಿಷೇಕಂ ಕುರ್ವೀತ ಕೋಟಿತೀರ್ಥೇ ಸಮಾಹಿತಃ।
03082024c ಪುಂಡರೀಕಮವಾಪ್ನೋತಿ ಕುಲಂ ಚೈವ ಸಮುದ್ಧರೇತ್।।
ಅಲ್ಲಿ ಸಮಾಹಿತನಾಗಿ ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಪುಂಡರೀಕ ಪದವನ್ನು ಪಡೆದು ಕುಲದ ಉದ್ದಾರವಾಗುತ್ತದೆ.
03082025a ಸಪ್ತಗಂಗೇ ತ್ರಿಗಂಗೇ ಚ ಶಕ್ರಾವರ್ತೇ ಚ ತರ್ಪಯನ್।
03082025c ದೇವಾನ್ಪಿತೄಂಶ್ಚ ವಿಧಿವತ್ಪುಣ್ಯಲೋಕೇ ಮಹೀಯತೇ।।
ಸಪ್ತಗಂಗೆ, ತ್ರಿಗಂಗೆ ಮತ್ತು ಶಕಾವರ್ತದಲ್ಲಿ ದೇವತೆ ಪಿತೃಗಳಿಗೆ ವಿಧಿವತ್ತಾಗಿ ತರ್ಪವನ್ನಿತ್ತರೆ ಪುಣ್ಯಲೋಕದಲ್ಲಿ ಮೆರೆಯಬಹುದು.
03082026a ತತಃ ಕನಖಲೇ ಸ್ನಾತ್ವಾ ತ್ರಿರಾತ್ರೋಪೋಷಿತೋ ನರಃ।
03082026c ಅಶ್ವಮೇಧಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ಅನಂತರ ಕನಖಲದಲ್ಲಿ ಸ್ನಾನಮಾಡಿ ಮೂರುರಾತ್ರಿಗಳನ್ನು ಕಳೆದ ನರನು ಅಶ್ವಮೇಧಯಾಗದ ಫಲವನ್ನು ಪಡೆದು ಸ್ವರ್ಗಲೋಕಕ್ಕೆ ಹೋಗುತ್ತಾನೆ.
03082027a ಕಪಿಲಾವಟಂ ಚ ಗಚ್ಚೇತ ತೀರ್ಥಸೇವೀ ನರಾಧಿಪ।
03082027c ಉಷ್ಯೈಕಾಂ ರಜನೀಂ ತತ್ರ ಗೋಸಹಸ್ರಫಲಂ ಲಭೇತ್।।
ನರಾಧಿಪ! ಅಲ್ಲಿಂದ ತೀರ್ಥಯಾತ್ರಿಯು ಕಪಿಲಾವಟಕ್ಕೆ ಹೋಗಿ ಅಲ್ಲಿ ಒಂದು ರಾತ್ರಿಯನ್ನು ಕಳೆದರೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ.
03082028a ನಾಗರಾಜಸ್ಯ ರಾಜೇಂದ್ರ ಕಪಿಲಸ್ಯ ಮಹಾತ್ಮನಾಃ।
03082028c ತೀರ್ಥಂ ಕುರುವರಶ್ರೇಷ್ಠ ಸರ್ವಲೋಕೇಷು ವಿಶ್ರುತಂ।।
ರಾಜೇಂದ್ರ! ಕುರುವರಶ್ರೇಷ್ಠ! ನಂತರ ಸರ್ವಲೋಕ ವಿಶ್ರುತ ಮಹಾತ್ಮ ನಾಗರಾಜ ಕಪಿಲನ ತೀರ್ಥವಿದೆ.
03082029a ತತ್ರಾಭಿಷೇಕಂ ಕುರ್ವೀತ ನಾಗತೀರ್ಥೇ ನರಾಧಿಪ।
03082029c ಕಪಿಲಾನಾಂ ಸಹಸ್ರಸ್ಯ ಫಲಂ ಪ್ರಾಪ್ನೋತಿ ಮಾನವಃ।।
ನರಾಧಿಪ! ಆ ನಾಗತೀರ್ಥದಲ್ಲಿ ಸ್ನಾನಮಾಡಿದ ಮಾನವನಿಗೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ.
03082030a ತತೋ ಲಲಿತಿಕಾಂ ಗಚ್ಚೇಚ್ಶಂತನೋಸ್ತೀರ್ಥಮುತ್ತಮಂ।
03082030c ತತ್ರ ಸ್ನಾತ್ವಾ ನರೋ ರಾಜನ್ನ ದುರ್ಗತಿಮವಾಪ್ನುಯಾತ್।।
ರಾಜನ್! ಅಲ್ಲಿಂದ ಉತ್ತಮ ತೀರ್ಥಗಳಾದ ಲಲಿತಿಕ ಮತ್ತು ಶಂತನುಗಳಿಗೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ನರನಿಗೆ ದುರ್ಗತಿಯು ಪ್ರಾಪ್ತವಾಗುವುದಿಲ್ಲ.
03082031a ಗಂಗಾಸಂಗಮಯೋಶ್ಚೈವ ಸ್ನಾತಿ ಯಃ ಸಂಗಮೇ ನರಃ।
03082031c ದಶಾಶ್ವಮೇಧಾನಾಪ್ನೋತಿ ಕುಲಂ ಚೈವ ಸಮುದ್ಧರೇತ್।।
ಗಂಗೆಯು ಕೂಡುವ ಸಂಗಮದಲ್ಲಿ ಯಾವ ನರನು ಸ್ನಾನಮಾಡುತ್ತಾನೋ ಅವನಿಗೆ ದಶಾಶ್ವಮೇಧದ ಪುಣ್ಯವು ದೊರೆಯುತ್ತದೆ ಮತ್ತು ಅವನ ಕುಲವು ಉದ್ಧಾರವಾಗುತ್ತದೆ.
03082032a ತತೋ ಗಚ್ಚೇತ ರಾಜೇಂದ್ರ ಸುಗಂಧಾಂ ಲೋಕವಿಶ್ರುತಾಂ।
03082032c ಸರ್ವಪಾಪವಿಶುದ್ಧಾತ್ಮಾ ಬ್ರಹ್ಮಲೋಕೇ ಮಹೀಯತೇ।।
ರಾಜೇಂದ್ರ! ಅನಂತರ ಲೋಕವಿಶ್ರುತ ಸುಗಂಧಕ್ಕೆ ಹೋದವನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.
03082033a ರುದ್ರಾವರ್ತಂ ತತೋ ಗಚ್ಚೇತ್ತೀರ್ಥಸೇವೀ ನರಾಧಿಪ।
03082033c ತತ್ರ ಸ್ನಾತ್ವಾ ನರೋ ರಾಜನ್ಸ್ವರ್ಗಲೋಕೇ ಮಹೀಯತೇ।।
ನರಾಧಿಪ! ಅನಂತರ ತಿರ್ಥಯಾತ್ರಿಯು ರುದ್ರಾವರ್ತಕ್ಕೆ ಹೋಗಬೇಕು. ರಾಜನ್! ಅಲ್ಲಿ ಸ್ನಾನಮಾಡಿದ ನರನು ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.
03082034a ಗಂಗಾಯಾಶ್ಚ ನರಶ್ರೇಷ್ಠ ಸರಸ್ವತ್ಯಾಶ್ಚ ಸಂಗಮೇ।
03082034c ಸ್ನಾತೋಽಶ್ವಮೇಧಮಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ನರಶ್ರೇಷ್ಠ! ಗಂಗಾ ಮತ್ತು ಸರಸ್ವತಿಗಳ ಸಂಗಮದಲ್ಲಿ ಸ್ನಾನಮಾಡಿದವನಿಗೆ ಅಶ್ವಮೇಧದ ಪುಣ್ಯವು ದೊರೆಯುತ್ತದೆ ಮತ್ತು ಅವನು ಸ್ವರ್ಗಲೋಕಕ್ಕೆ ಹೋಗುತ್ತಾನೆ.
03082035a ಭದ್ರಕರ್ಣೇಶ್ವರಂ ಗತ್ವಾ ದೇವಮರ್ಚ್ಯ ಯಥಾವಿಧಿ।
03082035c ನ ದುರ್ಗತಿಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ಭದಕರ್ಣೇಶ್ವರಕ್ಕೆ ಹೋಗಿ ಯಥಾವಿಧಿಯಾಗಿ ದೇವನನ್ನು ಪೂಜಿಸಿದರೆ ದುರ್ಗತಿಯನ್ನು ಹೊಂದುವುದಿಲ್ಲ ಮತ್ತು ಸ್ವರ್ಗಲೋಕಕ್ಕೆ ಹೋಗುತ್ತಾನೆ.
03082036a ತತಃ ಕುಬ್ಜಾಮ್ರಕಂ ಗಚ್ಚೇತ್ತೀರ್ಥಸೇವೀ ಯಥಾಕ್ರಮಂ।
03082036c ಗೋಸಹಸ್ರಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ಅನಂತರ ಯಥಾಕ್ರಮವಾಗಿ ತೀರ್ಥಸೇವಿಯು ಕುಬ್ಜಾಮ್ರಕಕ್ಕೆ ಹೋದರೆ, ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಪುಣ್ಯವನ್ನು ಪಡೆದು ಸ್ವರ್ಗಲೋಕವನ್ನು ಸೇರುತ್ತಾನೆ.
03082037a ಅರುಂಧತೀವಟಂ ಗಚ್ಚೇತ್ತೀರ್ಥಸೇವೀ ನರಾಧಿಪ।
03082037c ಸಾಮುದ್ರಕಮುಪಸ್ಪೃಶ್ಯ ತ್ರಿರಾತ್ರೋಪೋಷಿತೋ ನರಃ।।
03082037e ಗೋಸಹಸ್ರಫಲಂ ವಿಂದೇತ್ಕುಲಂ ಚೈವ ಸಮುದ್ಧರೇತ್।।
ನರಾಧಿಪ! ಅನಂತರ ತೀರ್ಥಸೇವಿಯು ಅರುಂಧತೀವಟಕ್ಕೆ ಹೋಗಬೇಕು. ಅಲ್ಲಿ ಸಮುದ್ರದಲ್ಲಿ ಸ್ನಾನಮಾಡಿ ಮೂರು ರಾತ್ರಿಗಳನ್ನು ತಂಗಿದ ನರನು ಸಹಸ್ರ ಗೋದಾನದ ಫಲವನ್ನು ಪಡೆದು ತನ್ನ ಕುಲವನ್ನು ಉದ್ಧರಿಸುತ್ತಾನೆ.
03082038a ಬ್ರಹ್ಮಾವರ್ತಂ ತತೋ ಗಚ್ಚೇದ್ಬ್ರಹ್ಮಚಾರೀ ಸಮಾಹಿತಃ।
03082038c ಅಶ್ವಮೇಧಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ರಾಜೇಂದ್ರ! ಅನಂತರ ಬ್ರಹ್ಮಚಾರಿಯಾಗಿದ್ದು ಸಮಾಹಿತನಾಗಿದ್ದು ಬ್ರಹ್ಮಾವರ್ತಕ್ಕೆ ಹೋದರೆ ಅಶ್ವಮೇಧಫಲವನ್ನು ಪಡೆದು ಸ್ವರ್ಗಲೋಕವನ್ನು ಸೇರುತ್ತಾರೆ.
03082039a ಯಮುನಾಪ್ರಭವಂ ಗತ್ವಾ ಉಪಸ್ಪೃಶ್ಯ ಚ ಯಾಮುನೇ।
03082039c ಅಶ್ವಮೇಧಫಲಂ ಲಬ್ಧ್ವಾ ಸ್ವರ್ಗಲೋಕೇ ಮಹೀಯತೇ।।
ಯಮುನಾಪ್ರಭವಕ್ಕೆ ಹೋಗಿ ಯಮುನೆಯಲ್ಲಿ ಮಿಂದರೆ ಅಶ್ವಮೇಧಫಲವನ್ನು ಪಡೆದು ಸ್ವರ್ಗಲೋಕದಲ್ಲಿ ಮೆರೆಯುತ್ತಾರೆ.
03082040a ದರ್ವೀಸಂಕ್ರಮಣಂ ಪ್ರಾಪ್ಯ ತೀರ್ಥಂ ತ್ರೈಲೋಕ್ಯವಿಶ್ರುತಂ।
03082040c ಅಶ್ವಮೇಧಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ಮೂರು ಲೋಕಗಳಲ್ಲಿ ವಿಶ್ರುತ ದರ್ವೀಸಂಕ್ರಮಣ ತೀರ್ಥವನ್ನು ತಲುಪಿದವರು ಅಶ್ವಮೇಧದ ಫಲವನ್ನು ಪಡೆದು ಸ್ವರ್ಗಲೋಕಕ್ಕೆ ಹೋಗುವರು.
03082041a ಸಿಂಧೋಶ್ಚ ಪ್ರಭವಂ ಗತ್ವಾ ಸಿದ್ಧಗಂಧರ್ವಸೇವಿತಂ।
03082041c ತತ್ರೋಷ್ಯ ರಜನೀಃ ಪಂಚ ವಿಂದ್ಯಾದ್ಬಹು ಸುವರ್ಣಕಂ।।
ಸಿಧಗಂಧರ್ವ ಸೇವಿತ ಸಿಂಧೂನದಿಯ ಮೂಲಕ್ಕೆ ಹೋಗಿ ಐದು ರಾತ್ರಿಗಳನ್ನು ಕಳೆದರೆ ಬಹಳ ಚಿನ್ನವು ದೊರೆಯುತ್ತದೆ.
03082042a ಅಥ ವೇದೀಂ ಸಮಾಸಾದ್ಯ ನರಃ ಪರಮದುರ್ಗಮಾಂ।
03082042c ಅಶ್ವಮೇಧಮವಾಪ್ನೋತಿ ಗಚ್ಚೇಚ್ಚೌಶನಸೀಂ ಗತಿಂ।।
ಅನಂತರ ಹೋಗಲು ಬಹಳ ಕಷ್ಟಕರವಾದ ವೇದಿಗೆ ನರನು ಹೋದರೆ, ಅಶ್ವಮೇಧದ ಫಲವನ್ನು ಪಡೆಯುತ್ತಾನೆ ಮತ್ತು ಉಶಾನಸನ ಗತಿಯಲ್ಲಿ ಹೋಗುತ್ತಾನೆ.
03082043a ಋಷಿಕುಲ್ಯಾಂ ಸಮಾಸಾದ್ಯ ವಾಸಿಷ್ಠಂ ಚೈವ ಭಾರತ।
03082043c ವಾಸಿಷ್ಠಂ ಸಮತಿಕ್ರಮ್ಯ ಸರ್ವೇ ವರ್ಣಾ ದ್ವಿಜಾತಯಃ।।
ಭಾರತ! ಅನಂತರ ಋಷಿಕುಲ್ಯ ಮತ್ತು ವಾಸಿಷ್ಠಕ್ಕೆ ಹೋಗಬೇಕು. ವಾಸಿಷ್ಠವನ್ನು ದಾಟಿದ ಎಲ್ಲ ವರ್ಣದವರೂ ದ್ವಿಜರೆನಿಸಿಕೊಳ್ಳುತ್ತಾರೆ.
03082044a ಋಷಿಕುಲ್ಯಾಂ ನರಃ ಸ್ನಾತ್ವಾ ಋಷಿಲೋಕಂ ಪ್ರಪದ್ಯತೇ।
03082044c ಯದಿ ತತ್ರ ವಸೇನ್ಮಾಸಂ ಶಾಕಾಹಾರೋ ನರಾಧಿಪ।।
ನರಾಧಿಪ! ಋಷಿಕುಲ್ಯದಲ್ಲಿ ಸ್ನಾನಮಾಡಿದ ನರನು, ಅಲ್ಲಿಯೇ ಶಾಕಾಹಾರಿಯಾಗಿದ್ದು ಒಂದು ತಿಂಗಳು ವಾಸಿಸಿದರೆ ಋಷಿಲೋಕವನ್ನು ಪಡೆಯುತ್ತಾನೆ.
03082045a ಭೃಗುತುಂಗಂ ಸಮಾಸಾದ್ಯ ವಾಜಿಮೇಧಫಲಂ ಲಭೇತ್।
03082045c ಗತ್ವಾ ವೀರಪ್ರಮೋಕ್ಷಂ ಚ ಸರ್ವಪಾಪೈಃ ಪ್ರಮುಚ್ಯತೇ।।
ಭೃಗುತುಂಗಕ್ಕೆ ಹೋದರೆ ಅಶ್ವಮೇಧದ ಫಲವು ದೊರೆಯುತ್ತದೆ. ವೀರಪ್ರಮೋಕ್ಷಕ್ಕೆ ಹೋದರೆ ಸರ್ವಪಾಪಗಳಿಂದ ಮುಕ್ತಿ ದೊರೆಯುತ್ತದೆ.
03082046a ಕೃತ್ತಿಕಾಮಘಯೋಶ್ಚೈವ ತೀರ್ಥಮಾಸಾದ್ಯ ಭಾರತ।
03082046c ಅಗ್ನಿಷ್ಟೋಮಾತಿರಾತ್ರಾಭ್ಯಾಂ ಫಲಂ ಪ್ರಾಪ್ನೋತಿ ಪುಣ್ಯಕೃತ್।।
ಭಾರತ! ಕೃತ್ತಿಕಾ ಮತ್ತು ಮಘ ತೀರ್ಥಗಳನ್ನು ಭೇಟಿಮಾಡಿದವರು ಅಗ್ನಿಷ್ಟೋಮ ಮತ್ತು ಅತಿರಾತ್ರಿ ಯಾಗಗಳ ಫಲವನ್ನು ಪಡೆಯುತ್ತಾರೆ.
03082047a ತತಃ ಸಂಧ್ಯಾಂ ಸಮಾಸಾದ್ಯ ವಿದ್ಯಾತೀರ್ಥಮನುತ್ತಮಂ।
03082047c ಉಪಸ್ಪೃಶ್ಯ ಚ ವಿದ್ಯಾನಾಂ ಸರ್ವಾಸಾಂ ಪಾರಗೋ ಭವೇತ್।।
ಅಲ್ಲಿಂದ ಅನುತ್ತಮ ವಿಧ್ಯಾತೀರ್ಥಕ್ಕೆ ಹೋಗಿ ಸಂಧ್ಯಾಸಮಯದಲ್ಲಿ ಸ್ನಾನಮಾಡಿದವನು ಸರ್ವ ವಿಧ್ಯೆಗಳಲ್ಲಿ ಪಾರಂಗತನಾಗುತ್ತಾನೆ.
03082048a ಮಹಾಶ್ರಮೇ ವಸೇದ್ರಾತ್ರಿಂ ಸರ್ವಪಾಪಪ್ರಮೋಚನೇ।
03082048c ಏಕಕಾಲಂ ನಿರಾಹಾರೋ ಲೋಕಾನಾವಸತೇ ಶುಭಾನ್।।
ಸರ್ವಪಾಪಗಳ ವಿಮೋಚನೆಗೆ ಮಹಾಶ್ರಮದಲ್ಲಿ ಒಂದು ರಾತ್ರಿ ನಿರಾಹಾರಿಯಾಗಿ ತಂಗಬೇಕು. ಇದರಿಂದ ಶುಭ ಲೋಕಗಳನ್ನು ತನ್ನ ನಿವಾಸವಾಗಿಸಕೊಳ್ಳಬಹುದು.
03082049a ಷಷ್ಠಕಾಲೋಪವಾಸೇನ ಮಾಸಮುಷ್ಯ ಮಹಾಲಯೇ।
03082049c ಸರ್ವಪಾಪವಿಶುದ್ಧಾತ್ಮಾ ವಿಂದ್ಯಾದ್ಬಹು ಸುವರ್ಣಕಂ।।
ಮಹಾಲಯ ಮಾಸದಲ್ಲಿ ಮೂರು ದಿನಗಳಿಗೊಮ್ಮೆ ಆಹಾರವನ್ನು ಸೇವಿಸಿಕೊಂಡು ಅಲ್ಲಿ ವಾಸಿಸಿದರೆ ಬಹಳ ಚಿನ್ನವನ್ನು ಪಡೆಯುತ್ತಾರೆ.
03082050a ಅಥ ವೇತಸಿಕಾಂ ಗತ್ವಾ ಪಿತಾಮಹನಿಷೇವಿತಾಂ।
03082050c ಅಶ್ವಮೇಧಮವಾಪ್ನೋತಿ ಗಚ್ಚೇಚ್ಚೌಶನಸೀಂ ಗತಿಂ।।
ಅನಂತರ ಪಿತಾಮಹ ಬ್ರಹ್ಮನು ಸೇವಿಸುವ ವೇತಸಿಕಕ್ಕೆ ಹೋಗಿ, ಅಶ್ವಮೇಧಫಲವನ್ನು ಪಡೆಯಬಹುದು ಮತ್ತು ಉಶನಸನ ಗತಿಯಲ್ಲಿ ಹೋಗಬಹುದು.
03082051a ಅಥ ಸುಂದರಿಕಾತೀರ್ಥಂ ಪ್ರಾಪ್ಯ ಸಿದ್ಧನಿಷೇವಿತಂ।
03082051c ರೂಪಸ್ಯ ಭಾಗೀ ಭವತಿ ದೃಷ್ಟಮೇತತ್ಪುರಾತನೇ।।
ಅನಂತರ ಸಿದ್ಧಸೇವಿತ ಸುಂದರಿಕಾ ತೀರ್ಥಕ್ಕೆ ಹೋದರೆ ರೂಪವಂತನಾಗುತ್ತಾನೆ ಎಂದು ಪುರಾಣಗಳಲ್ಲಿ ಕಂಡಿದ್ದಾರೆ.
03082052a ತತೋ ವೈ ಬ್ರಾಹ್ಮಣೀಂ ಗತ್ವಾ ಬ್ರಹ್ಮಚಾರೀ ಜಿತೇಂದ್ರಿಯಃ।
03082052c ಪದ್ಮವರ್ಣೇನ ಯಾನೇನ ಬ್ರಹ್ಮಲೋಕಂ ಪ್ರಪದ್ಯತೇ।।
ಅನಂತರ ಬ್ರಹ್ಮಾಣಿಗೆ ಹೋಗಿ ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದರೆ ಪದ್ಮವರ್ಣದ ಯಾನದಲ್ಲಿ ಬ್ರಹ್ಮಲೋಕಕ್ಕೆ ಹೋಗಬಹುದು.
03082053a ತತಶ್ಚ ನೈಮಿಷಂ ಗಚ್ಚೇತ್ಪುಣ್ಯಂ ಸಿದ್ಧನಿಷೇವಿತಂ।
03082053c ತತ್ರ ನಿತ್ಯಂ ನಿವಸತಿ ಬ್ರಹ್ಮಾ ದೇವಗಣೈರ್ವೃತಃ।।
ಅಲ್ಲಿಂದ ಸಿದ್ಧರು ಸೇವಿಸುವ ಪುಣ್ಯ ನೈಮಿಷಕ್ಕೆ ಹೋಗಬೇಕು. ಅಲ್ಲಿ ದೇವಗಣಗಳಿಂದ ಆವೃತ ಬ್ರಹ್ಮನು ನಿತ್ಯವೂ ವಾಸಿಸುತ್ತಾನೆ.
03082054a ನೈಮಿಷಂ ಪ್ರಾರ್ಥಯಾನಸ್ಯ ಪಾಪಸ್ಯಾರ್ಧಂ ಪ್ರಣಶ್ಯತಿ।
03082054c ಪ್ರವಿಷ್ಟಮಾತ್ರಸ್ತು ನರಃ ಸರ್ವಪಾಪೈಃ ಪ್ರಮುಚ್ಯತೇ।।
ನೈಮಿಷಕ್ಕೆ ಹೋಗಲು ಬಯಸುವುದರಿಂದಲೇ ಪಾಪದ ಅರ್ಧಭಾಗವು ನಾಶವಾಗುತ್ತದೆ. ಅದನ್ನು ಪ್ರವೇಶಿಸುವುದರ ಮಾತ್ರದಿಂದಲೇ ನರನು ಸರ್ವಪಾಪಗಳಿಂದ ಬಿಡುಗಡೆಹೊಂದುತ್ತಾನೆ.
03082055a ತತ್ರ ಮಾಸಂ ವಸೇದ್ಧೀರೋ ನೈಮಿಷೇ ತೀರ್ಥತತ್ಪರಃ।
03082055c ಪೃಥಿವ್ಯಾಂ ಯಾನಿ ತೀರ್ಥಾನಿ ನೈಮಿಷೇ ತಾನಿ ಭಾರತ।।
03082056a ಅಭಿಷೇಕಕೃತಸ್ತತ್ರ ನಿಯತೋ ನಿಯತಾಶನಃ।
03082056c ಗವಾಮಯಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಭಾರತ।।
03082056e ಪುನಾತ್ಯಾಸಪ್ತಮಂ ಚೈವ ಕುಲಂ ಭರತಸತ್ತಮ।।
ವೀರ! ತೀರ್ಥಯಾತ್ರಿಯು ನೈಮಿಷದಲ್ಲಿ ಒಂದು ತಿಂಗಳು ವಾಸಿಸಬೇಕು. ಭಾರತ! ಪೃಥ್ವಿಯಲ್ಲಿ ಯಾವ ಯಾವ ತೀರ್ಥಗಳಿವೆಯೋ ಅವೆಲ್ಲವೂ ನೈಮಿಷದಲ್ಲಿವೆ. ಭಾರತ! ನಿಯತನೂ ನಿಯತಾಶನನೂ ಆಗಿ ನೈಮಿಷದಲ್ಲಿ ಸ್ನಾನಮಾಡಿದರೆ ಗವಾಮಯ ಯಜ್ಞದ ಫಲವನ್ನು ಪಡೆಯುತ್ತಾನೆ. ಭರತಸತ್ತಮ! ತನ್ನ ಕುಲದ ಏಳು ತಲೆಮಾರುಗಳವರನ್ನೂ ಪುಣ್ಯರನ್ನಾಗಿ ಮಾಡುತ್ತಾನೆ.
03082057a ಯಸ್ತ್ಯಜೇನ್ನೈಮಿಷೇ ಪ್ರಾಣಾನುಪವಾಸಪರಾಯಣಃ।
03082057c ಸ ಮೋದೇತ್ಸ್ವರ್ಗಲೋಕಸ್ಥ ಏವಮಾಹುರ್ಮನೀಷಿಣಃ।।
03082057e ನಿತ್ಯಂ ಪುಣ್ಯಂ ಚ ಮೇಧ್ಯಂ ಚ ನೈಮಿಷಂ ನೃಪಸತ್ತಮ।।
ಉಪವಾಸಪರಾಯಣನಾಗಿದ್ದು ನೈಮಿಷದಲ್ಲಿ ಪ್ರಾಣವನ್ನು ತೊರೆದವನೂ ಸ್ವರ್ಗಲೋಕವನ್ನು ಸೇರಿ ಅಲ್ಲಿ ಸಂತೋಷಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. ನೃಪಸತ್ತಮ! ನೈಮಿಷವು ನಿತ್ಯವೂ ಪುಣ್ಯಕರವಾದುದು ಮತ್ತು ಮೇಧ್ಯವಾದುದು.
03082058a ಗಂಗೋದ್ಭೇದಂ ಸಮಾಸಾದ್ಯ ತ್ರಿರಾತ್ರೋಪೋಷಿತೋ ನರಃ।
03082058c ವಾಜಪೇಯಮವಾಪ್ನೋತಿ ಬ್ರಹ್ಮಭೂತಶ್ಚ ಜಾಯತೇ।।
ಗಂಗೋದ್ಭೇದವನ್ನು ಸೇರಿ ಅಲ್ಲಿ ಮೂರುರಾತ್ರಿಗಳು ಉಪವಾಸದಲ್ಲಿ ಕಳೆದ ನರನು ಅಶ್ವಮೇಧಫಲವನ್ನು ಪಡೆದು ಬ್ರಹ್ಮಭೂತನಾಗುತ್ತಾನೆ.
03082059a ಸರಸ್ವತೀಂ ಸಮಾಸಾದ್ಯ ತರ್ಪಯೇತ್ಪಿತೃದೇವತಾಃ।
03082059c ಸಾರಸ್ವತೇಷು ಲೋಕೇಷು ಮೋದತೇ ನಾತ್ರ ಸಂಶಯಃ।।
ಸರಸ್ವತಿಗೆ ಹೋಗಿ ಪಿತೃದೇವತೆಗಳಿಗೆ ತರ್ಪಣವನ್ನಿತ್ತರೆ ಸಾರಸ್ವತ ಲೋಕಗಳಲ್ಲಿ ಸಂತೋಷದಿಂದಿರುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03082060a ತತಶ್ಚ ಬಾಹುದಾಂ ಗಚ್ಚೇದ್ಬ್ರಹ್ಮಚಾರೀ ಸಮಾಹಿತಃ।
03082060c ದೇವಸತ್ರಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।।
ಅನಂತರ ಬ್ರಹ್ಮಚಾರಿಯಾಗಿದ್ದು ಸಮಾಹಿತನಾಗಿದ್ದು ಬಾಹುದಕ್ಕೆ ಹೋಗಬೇಕು. ಅದರಿಂದ ಮಾನವನು ದೇವಸತ್ರ ಯಜ್ಞದ ಫಲವನ್ನು ಪಡೆಯುತ್ತಾನೆ.
03082061a ತತಶ್ಚೀರವತೀಂ ಗಚ್ಚೇತ್ಪುಣ್ಯಾಂ ಪುಣ್ಯತಮೈರ್ವೃತಾಂ।
03082061c ಪಿತೃದೇವಾರ್ಚನರತೋ ವಾಜಪೇಯಮವಾಪ್ನುಯಾತ್।।
ಅನಂತರ ಪುಣ್ಯತಮರಿಂದ ಕೂಡಿದ, ಪುಣ್ಯ ಚೀರವತಿಗೆ ಹೋಗಿ ಪಿತೃ-ದೇವತೆಗಳ ಅರ್ಚನದಲ್ಲಿ ನಿರತನಾದವನಿಗೆ ಅಶ್ವಮೇಧದ ಫಲವು ದೊರೆಯುತ್ತದೆ.
03082062a ವಿಮಲಾಶೋಕಮಾಸಾದ್ಯ ವಿರಾಜತಿ ಯಥಾ ಶಶೀ।
03082062c ತತ್ರೋಷ್ಯ ರಜನೀಮೇಕಾಂ ಸ್ವರ್ಗಲೋಕೇ ಮಹೀಯತೇ।।
ವಿಮಲಶೋಕವನ್ನು ಸೇರಿ ಚಂದ್ರನಂತೆ ವಿರಾಜಮಾನನಾಗುತ್ತಾನೆ. ಅಲ್ಲಿ ಒಂದು ರಾತ್ರಿಯನ್ನು ಕಳೆದರೂ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.
03082063a ಗೋಪ್ರತಾರಂ ತತೋ ಗಚ್ಚೇತ್ಸರಯ್ವಾಸ್ತೀರ್ಥಮುತ್ತಮಂ।
03082063c ಯತ್ರ ರಾಮೋ ಗತಃ ಸ್ವರ್ಗಂ ಸಭೃತ್ಯಬಲವಾಹನಃ।।
ಅನಂತರ ಸರಸ್ವತಿಯ ಉತ್ತಮ ತೀರ್ಥ ಗೋಪ್ರತಾರಕ್ಕೆ ಹೋಗಬೇಕು. ಅಲ್ಲಿ ರಾಮನು ತನ್ನ ಸೇವಕರು, ಸೇನೆ ಮತ್ತು ವಾಹನಗಳೊಂದಿಗೆ ಸ್ವರ್ಗಕ್ಕೆ ಹೋದನು.
03082064a ದೇಹಂ ತ್ಯಕ್ತ್ವಾ ದಿವಂ ಯಾತಸ್ತಸ್ಯ ತೀರ್ಥಸ್ಯ ತೇಜಸಾ।
03082064c ರಾಮಸ್ಯ ಚ ಪ್ರಸಾದೇನ ವ್ಯವಸಾಯಾಚ್ಚ ಭಾರತ।।
ಭಾರತ! ಅಲ್ಲಿ ದೇಹವನ್ನು ತ್ಯಜಿಸಿದವನು ಆ ತೀರ್ಥದ ತೇಜಸ್ಸಿನಿಂದ ಮತ್ತು ರಾಮನ ಅನುಗ್ರಹ-ಪ್ರಯತ್ನಗಳಿಂದ ದೇವಲೋಕಕ್ಕೆ ಹೋಗುತ್ತಾರೆ.
03082065a ತಸ್ಮಿಂಸ್ತೀರ್ಥೇ ನರಃ ಸ್ನಾತ್ವಾ ಗೋಪ್ರತಾರೇ ನರಾಧಿಪ।
03082065c ಸರ್ವಪಾಪವಿಶುದ್ಧಾತ್ಮಾ ಸ್ವರ್ಗಲೋಕೇ ಮಹೀಯತೇ।।
ನರಾಧಿಪ! ಗೋಪ್ರತಾರ ತೀರ್ಥದಲ್ಲಿ ಸ್ನಾನಮಾಡಿದ ನರನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.
03082066a ರಾಮತೀರ್ಥೇ ನರಃ ಸ್ನಾತ್ವಾ ಗೋಮತ್ಯಾಂ ಕುರುನಂದನ।
03082066c ಅಶ್ವಮೇಧಮವಾಪ್ನೋತಿ ಪುನಾತಿ ಚ ಕುಲಂ ನರಃ।।
ಕುರುನಂದನ! ಗೋಮತಿಯ ರಾಮತೀರ್ಥದಲ್ಲಿ ಸ್ನಾನಮಾಡಿದ ನರನು ಅಶ್ವಮೇಧ ಫಲವನ್ನು ಪಡೆದು ಅವನ ಕುಲವನ್ನು ಪುನೀತಗೊಳಿಸುತ್ತಾನೆ.
03082067a ಶತಸಾಹಸ್ರಿಕಂ ತತ್ರ ತೀರ್ಥಂ ಭರತಸತ್ತಮ।
03082067c ತತ್ರೋಪಸ್ಪರ್ಶನಂ ಕೃತ್ವಾ ನಿಯತೋ ನಿಯತಾಶನಃ।।
03082067e ಗೋಸಹಸ್ರಫಲಂ ಪುಣ್ಯಂ ಪ್ರಾಪ್ನೋತಿ ಭರತರ್ಷಭ।।
ಭರತಸತ್ತಮ! ಭರತರ್ಷಭ! ಅಲ್ಲಿ ಶತಸಾಹಸ್ರಿಕ ಎನ್ನುವ ತೀರ್ಥವಿದೆ. ಅಲ್ಲಿ ನಿಯತನೂ ನಿಯತಾಶನನೂ ಆಗಿದ್ದು ಸ್ನಾನಮಾಡಿದವನು ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆಯುತ್ತಾನೆ.
03082068a ತತೋ ಗಚ್ಚೇತ ರಾಜೇಂದ್ರ ಭರ್ತೃಸ್ಥಾನಮನುತ್ತಮಂ।
03082068c ಕೋಟಿತೀರ್ಥೇ ನರಃ ಸ್ನಾತ್ವಾ ಅರ್ಚಯಿತ್ವಾ ಗುಹಂ ನೃಪ।।
03082068e ಗೋಸಹಸ್ರಫಲಂ ವಿಂದೇತ್ತೇಜಸ್ವೀ ಚ ಭವೇನ್ನರಃ।।
ರಾಜೇಂದ್ರ! ಅನಂತರ ಅನುತ್ತಮ ಸ್ಥಾನ ಭರ್ತೃವಿಗೆ ಹೋಗಬೇಕು. ನೃಪ! ಕೋಟಿತೀರ್ಥದಲ್ಲಿ ಸ್ನಾನಮಾಡಿ ಗುಹನನ್ನು ಪೂಜಿಸಿದ ನರನು ಸಹಸ್ರ ಗೋವುಗಳ ದಾನದ ಫಲವನ್ನು ಪಡೆದು ತೇಜಸ್ವಿ ನರನಾಗುತ್ತಾನೆ.
03082069a ತತೋ ವಾರಾಣಸೀಂ ಗತ್ವಾ ಅರ್ಚಯಿತ್ವಾ ವೃಷಧ್ವಜಂ।
03082069c ಕಪಿಲಾಹ್ರದೇ ನರಃ ಸ್ನಾತ್ವಾ ರಾಜಸೂಯಫಲಂ ಲಭೇತ್।।
ಅನಂತರ ವಾರಣಸೀಗೆ ಹೋಗಿ ವೃಷಧ್ವಜನನ್ನು ಪೂಜಿಸಿ, ಕಪಿಲ ಸರೋವರದಲ್ಲಿ ಸ್ನಾನಮಾಡಿದ ನರನಿಗೆ ರಾಜಸೂಯದ ಫಲವು ದೊರೆಯುತ್ತದೆ.
03082070a ಮಾರ್ಕಂಡೇಯಸ್ಯ ರಾಜೇಂದ್ರ ತೀರ್ಥಮಾಸಾದ್ಯ ದುರ್ಲಭಂ।
03082070c ಗೋಮತೀಗಂಗಯೋಶ್ಚೈವ ಸಂಗಮೇ ಲೋಕವಿಶ್ರುತೇ।।
03082070e ಅಗ್ನಿಷ್ಟೋಮಮವಾಪ್ನೋತಿ ಕುಲಂ ಚೈವ ಸಮುದ್ಧರೇತ್।।
ರಾಜೇಂದ್ರ! ದುರ್ಲಭವಾದ ಮಾರ್ಕಂಡೇಯ ತೀರ್ಥಕ್ಕೆ ಹೋಗಿ ಲೋಕವಿಶ್ರುತ ಗೋಮತೀ ಮತ್ತು ಗಂಗೆಯರ ಸಂಗಮಕ್ಕೆ ಹೋದರೆ ಅಗ್ನಿಷ್ಟೋಮ ಯಾಗದ ಫಲವನ್ನು ಪಡೆದು ಕುಲವನ್ನೇ ಉದ್ಧರಿಸಿದಂತಾಗುತ್ತದೆ.
03082071a ತತೋ ಗಯಾಂ ಸಮಾಸಾದ್ಯ ಬ್ರಹ್ಮಚಾರೀ ಜಿತೇಂದ್ರಿಯಃ।
03082071c ಅಶ್ವಮೇಧಮವಾಪ್ನೋತಿ ಗಮನಾದೇವ ಭಾರತ।।
ಭಾರತ! ಅನಂತರ ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದು ಗಯಕ್ಕೆ ಹೋಗಬೇಕು. ಅಲ್ಲಿ ಹೋದಮಾತ್ರಕ್ಕೆ ಅಶ್ವಮೇಧಯಾಗದ ಫಲವು ದೊರೆಯುತ್ತದೆ.
03082072a ತತ್ರಾಕ್ಷಯವಟೋ ನಾಮ ತ್ರಿಷು ಲೋಕೇಷು ವಿಶ್ರುತಃ।
03082072c ಪಿತೄಣಾಂ ತತ್ರ ವೈ ದತ್ತಮಕ್ಷಯಂ ಭವತಿ ಪ್ರಭೋ।।
ಅಲ್ಲಿಯೇ ಮೂರು ಲೋಕಗಳಲ್ಲಿ ವಿಶ್ರುತ ಅಕ್ಷವಟ ಎಂಬ ಹೆಸರಿನ ಪ್ರದೇಶವಿದೆ. ಪ್ರಭೋ! ಅಲ್ಲಿ ಪಿತೃಗಳಿಗೆ ನೀಡಿದುದೆಲ್ಲವೂ ಅಕ್ಷಯವಾಗುತ್ತವೆ.
03082073a ಮಹಾನದ್ಯಾಮುಪಸ್ಪೃಶ್ಯ ತರ್ಪಯೇತ್ಪಿತೃದೇವತಾಃ।
03082073c ಅಕ್ಷಯಾನ್ಪ್ರಾಪ್ನುಯಾಲ್ಲೋಕಾನ್ಕುಲಂ ಚೈವ ಸಮುದ್ಧರೇತ್।।
ಮಹಾನದಿಯಲ್ಲಿ ಮಿಂದು ಪಿತೃಗಳಿಗೂ ದೇವತೆಗಳಿಗೂ ತರ್ಪಣವನ್ನಿತ್ತರೆ ಅಕ್ಷಯ ಲೋಕಗಳನ್ನು ಪಡೆಯುತ್ತಾನೆ ಮತ್ತು ಕುಲದ ಉದ್ಧಾರವೂ ಆಗುತ್ತದೆ.
03082074a ತತೋ ಬ್ರಹ್ಮಸರೋ ಗಚ್ಚೇದ್ಧರ್ಮಾರಣ್ಯೋಪಶೋಭಿತಂ।
03082074c ಪೌಂಡರೀಕಮವಾಪ್ನೋತಿ ಪ್ರಭಾತಾಮೇವ ಶರ್ವರೀಂ।।
ಅನಂತರ ಧರ್ಮಾರಣ್ಯದಿಂದ ಶೋಭಿತ ಬ್ರಹ್ಮಸರೋವರಕ್ಕೆ ಹೋಗಬೇಕು. ರಾತ್ರಿಕಳೆದು ಅಲ್ಲಿ ಪ್ರಭಾತವನ್ನು ನೋಡಿದರೆ ಪೌಂಡರೀಕಪದವಿಯನ್ನು ಪಡೆಯುತ್ತಾನೆ.
03082075a ತಸ್ಮಿನ್ಸರಸಿ ರಾಜೇಂದ್ರ ಬ್ರಹ್ಮಣೋ ಯೂಪ ಉಚ್ಚ್ರಿತಃ।
03082075c ಯೂಪಂ ಪ್ರದಕ್ಷಿಣಂ ಕೃತ್ವಾ ವಾಜಪೇಯಫಲಂ ಲಭೇತ್।।
ರಾಜೇಂದ್ರ! ಆ ಸರೋವರದಲ್ಲಿ ಬ್ರಹ್ಮನ ಯಜ್ಞಸ್ತಂಭವು ಮೇಲೆದ್ದು ಕಾಣುತ್ತದೆ. ಆ ಯೂಪವನ್ನು ಪ್ರದಕ್ಷಿಣೆ ಮಾಡಿದರೆ ವಾಜಪೇಯದ ಫಲವು ದೊರೆಯುತ್ತದೆ.
03082076a ತತೋ ಗಚ್ಚೇತ ರಾಜೇಂದ್ರ ಧೇನುಕಾಂ ಲೋಕವಿಶ್ರುತಾಂ।
03082076c ಏಕರಾತ್ರೋಷಿತೋ ರಾಜನ್ಪ್ರಯಚ್ಚೇತ್ತಿಲಧೇನುಕಾಂ।।
03082076e ಸರ್ವಪಾಪವಿಶುದ್ಧಾತ್ಮಾ ಸೋಮಲೋಕಂ ವ್ರಜೇದ್ಧ್ರುವಂ।।
ರಾಜೇಂದ್ರ! ಅಲ್ಲಿಂದ ಲೋಕವಿಶ್ರುತ ಧೇನುಕಕ್ಕೆ ಹೋಗಬೇಕು. ರಾಜನ್! ಅಲ್ಲಿ ತಿಲ ಮತ್ತು ಹಸುಗಳನ್ನು ದಾನವನ್ನಾಗಿತ್ತು ಒಂದು ರಾತ್ರಿ ತಂಗಿದರೆ ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಅವನು ನಿಶ್ಚಯವಾಗಿಯೂ ಸೋಮಲೋಕದಲ್ಲಿ ಮೆರೆಯುತ್ತಾನೆ.
03082077a ತತ್ರ ಚಿಹ್ನಂ ಮಹಾರಾಜ ಅದ್ಯಾಪಿ ಹಿ ನ ಸಂಶಯಃ।
03082077c ಕಪಿಲಾ ಸಹ ವತ್ಸೇನ ಪರ್ವತೇ ವಿಚರತ್ಯುತ।।
03082077e ಸವತ್ಸಾಯಾಃ ಪದಾನಿ ಸ್ಮ ದೃಶ್ಯಂತೇಽದ್ಯಾಪಿ ಭಾರತ।।
ಭಾರತ! ಮಹಾರಾಜ! ಅಲ್ಲಿ ಈಗಲೂ ಒಂದು ಕುರುಹಿದೆ ಎನ್ನುವುದರಲ್ಲಿ ಸಂಶಯವಿಲ್ಲ. ತನ್ನ ಕರುವಿನೊಂದಿಗೆ ಪರ್ವತದಲ್ಲಿ ತಿರುಗಾಡುತ್ತಿರುವ ಹಸುವಿನ ಹೆಜ್ಜೆ ಗುರುತುಗಳು ಈಗಲೂ ಅಲ್ಲಿ ಕಾಣುತ್ತವೆ.
03082078a ತೇಷೂಪಸ್ಪೃಶ್ಯ ರಾಜೇಂದ್ರ ಪದೇಷು ನೃಪಸತ್ತಮ।
03082078c ಯತ್ಕಿಂ ಚಿದಶುಭಂ ಕರ್ಮ ತತ್ಪ್ರಣಶ್ಯತಿ ಭಾರತ।।
ರಾಜೇಂದ್ರ! ನೃಪಸತ್ತಮ! ಭಾರತ! ಆ ಹೆಜ್ಜೆ ಗುರುತುಗಳಿರುವಲ್ಲಿ ಸ್ನಾನಮಾಡಿದರೆ ಅಲ್ಲಿಯ ವರೆಗೆ ಏನೇನು ಅಶುಭಕರ್ಮಗಳನ್ನು ಮಾಡಿದ್ದನೋ ಅವೆಲ್ಲವೂ ನಾಶವಾಗುತ್ತವೆ.
03082079a ತತೋ ಗೃಧ್ರವಟಂ ಗಚ್ಚೇತ್ಸ್ಥಾನಂ ದೇವಸ್ಯ ಧೀಮತಃ।
03082079c ಸ್ನಾಯೀತ ಭಸ್ಮನಾ ತತ್ರ ಅಭಿಗಮ್ಯ ವೃಷಧ್ವಜಂ।।
03082080a ಬ್ರಾಹ್ಮಣೇನ ಭವೇಚ್ಚೀರ್ಣಂ ವ್ರತಂ ದ್ವಾದಶವಾರ್ಷಿಕಂ।
03082080c ಇತರೇಷಾಂ ತು ವರ್ಣಾನಾಂ ಸರ್ವಪಾಪಂ ಪ್ರಣಶ್ಯತಿ।।
ಅಲ್ಲಿಂದ ಧೀಮತ ದೇವನ ಸ್ಥಾನ ಗೃಧ್ರವಟಕ್ಕೆ ಹೋಗಬೇಕು. ಅಲ್ಲಿ ಭಸ್ಮದಲ್ಲಿ ಸ್ನಾನಮಾಡಿ ವೃಷಧ್ವಜನನ್ನು ಪೂಜಿಸಬೇಕು. ಅಂಥವನು ಬ್ರಾಹ್ಮಣನಾಗಿದ್ದರೆ ಅದು ಹನ್ನೆರಡು ವರ್ಷಗಳು ಆಚರಿಸಿದ ವ್ರತಕ್ಕೆ ಸಮನಾಗುತ್ತದೆ. ಇತರ ವರ್ಣದವರು ಇದನ್ನು ಮಾಡಿದರೆ ಅವರು ಸರ್ವಪಾಪಗಳನ್ನು ಕಳೆದುಕೊಳ್ಳುತ್ತಾರೆ.
03082081a ಗಚ್ಚೇತ ತತ ಉದ್ಯಂತಂ ಪರ್ವತಂ ಗೀತನಾದಿತಂ।
03082081c ಸಾವಿತ್ರಂ ತು ಪದಂ ತತ್ರ ದೃಶ್ಯತೇ ಭರತರ್ಷಭ।।
ಅಲ್ಲಿಂದ ಗೀತನಾದದಿಂದ ತುಂಬಿದ ಉಧ್ಯಂತ ಪರ್ವತಕ್ಕೆ ಹೋಗಬೇಕು. ಭರತರ್ಷಭ! ಅಲ್ಲಿ ಸಾವಿತ್ರಿಯ ಪಾದದ ಗುರುತನ್ನು ನೋಡಬಹುದು.
03082082a ತತ್ರ ಸಂಧ್ಯಾಮುಪಾಸೀತ ಬ್ರಾಹ್ಮಣಃ ಸಂಶಿತವ್ರತಃ।
03082082c ಉಪಾಸ್ತಾ ಚ ಭವೇತ್ಸಂಧ್ಯಾ ತೇನ ದ್ವಾದಶವಾರ್ಷಿಕೀ।।
ಅಲ್ಲಿ ಸಂಶಿತವ್ರತ ಬ್ರಾಹ್ಮಣನು ಸಂಧ್ಯಾವಂದನೆಯನ್ನು ಮಾಡಿದರೆ, ಅದು ಹನ್ನೆರಡು ವರ್ಷಗಳು ಸಂಧ್ಯಾವಂದನೆಯನ್ನು ಮಾಡಿದುದಕ್ಕೆ ಸಮನಾಗುತ್ತದೆ.
03082083a ಯೋನಿದ್ವಾರಂ ಚ ತತ್ರೈವ ವಿಶ್ರುತಂ ಭರತರ್ಷಭ।
03082083c ತತ್ರಾಭಿಗಮ್ಯ ಮುಚ್ಯೇತ ಪುರುಷೋ ಯೋನಿಸಂಕರಾತ್।।
ಭರತರ್ಷಭ! ಅಲ್ಲಿಯೇ ವಿಶ್ರುತ ಯೋನಿದ್ವಾರವಿದೆ. ಅಲ್ಲಿಗೆ ಹೋದರೆ ಪುರುಷನು ಯೋನಿಸಂಕರದಿಂದುಂಟಾದ ಪಾಪಗಳಿಂದ ಮುಕ್ತಿ ಹೊಂದುತ್ತಾನೆ.
03082084a ಕೃಷ್ಣಶುಕ್ಲಾವುಭೌ ಪಕ್ಷೌ ಗಯಾಯಾಂ ಯೋ ವಸೇನ್ನರಃ।
03082084c ಪುನಾತ್ಯಾಸಪ್ತಮಂ ರಾಜನ್ಕುಲಂ ನಾಸ್ತ್ಯತ್ರ ಸಂಶಯಃ।।
ರಾಜನ್! ಕೃಷ್ಣ ಮತ್ತು ಶುಕ್ಲ ಈ ಎರಡೂ ಪಕ್ಷಗಳಲ್ಲಿ ಗಯೆಯಲ್ಲಿ ವಾಸಿಸುವ ನರನು ತನ್ನ ಕುಲವನ್ನು ಏಳುತಲೆಮಾರುಗಳವರೆಗೂ ಪುನೀತರನ್ನಾಗಿ ಮಾಡುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03082085a ಏಷ್ಟವ್ಯಾ ಬಹವಃ ಪುತ್ರಾ ಯದ್ಯೇಕೋಽಪಿ ಗಯಾಂ ವ್ರಜೇತ್।
03082085c ಯಜೇತ ವಾಶ್ವಮೇಧೇನ ನೀಲಂ ವಾ ವೃಷಮುತ್ಸೃಜೇತ್।।
ಗಯೆಗೆ ಒಂಟಿಯಾಗಿ ಹೋದರೆ ಅಥವಾ ಅಶ್ವಮೇಧಯಾಗವನ್ನು ಮಾಡಿದರೆ ಅಥವಾ ಕಪ್ಪು ಹೋರಿಯನ್ನು ಬಿಟ್ಟರೆ ಬಹಳ ಪುತ್ರರನ್ನು ಆಶಿಸಬಹುದು.
03082086a ತತಃ ಫಲ್ಗುಂ ವ್ರಜೇದ್ರಾಜಂಸ್ತೀರ್ಥಸೇವೀ ನರಾಧಿಪ।
03082086c ಅಶ್ವಮೇಧಮವಾಪ್ನೋತಿ ಸಿದ್ಧಿಂ ಚ ಮಹತೀಂ ವ್ರಜೇತ್।।
ನರಾಧಿಪ! ರಾಜನ್! ತೀರ್ಥಯಾತ್ರಿಯು ಅಲ್ಲಿಂದ ಫಲ್ಗುವಿಗೆ ಹೋಗಬೇಕು. ಅಂಥವನು ಅಶ್ವಮೇಧಯಾಗದ ಫಲವನ್ನು ಪಡೆಯುತ್ತಾನೆ ಮತ್ತು ಮಹಾ ಸಿದ್ಧಿಯನ್ನು ಪಡೆಯುತ್ತಾನೆ.
03082087a ತತೋ ಗಚ್ಚೇತ ರಾಜೇಂದ್ರ ಧರ್ಮಪೃಷ್ಠಂ ಸಮಾಹಿತಃ।
03082087c ಯತ್ರ ಧರ್ಮೋ ಮಹಾರಾಜ ನಿತ್ಯಮಾಸ್ತೇ ಯುಧಿಷ್ಠಿರ।।
03082087e ಅಭಿಗಮ್ಯ ತತಸ್ತತ್ರ ವಾಜಿಮೇಧಫಲಂ ಲಭೇತ್।।
ರಾಜೇಂದ್ರ! ಅನಂತರ ಸಮಾಹಿತನಾಗಿ ಧರ್ಮಪೃಷ್ಠಕ್ಕೆ ಹೋಗಬೇಕು. ಮಹಾರಾಜ! ಯುಧಿಷ್ಠಿರ! ಅಲ್ಲಿ ಧರ್ಮನು ನಿತ್ಯವೂ ಇರುತ್ತಾನೆ. ಅಲ್ಲಿಗೆ ಹೋದರೆ ಅಶ್ವಮೇಧದ ಫಲವು ದೊರೆಯುತ್ತದೆ.
03082088a ತತೋ ಗಚ್ಚೇತ ರಾಜೇಂದ್ರ ಬ್ರಹ್ಮಣಸ್ತೀರ್ಥಮುತ್ತಮಂ।
03082088c ತತ್ರಾರ್ಚಯಿತ್ವಾ ರಾಜೇಂದ್ರ ಬ್ರಹ್ಮಾಣಮಮಿತೌಜಸಂ।।
03082088e ರಾಜಸೂಯಾಶ್ವಮೇಧಾಭ್ಯಾಂ ಫಲಂ ಪ್ರಾಪ್ನೋತಿ ಮಾನವಃ।।
ರಾಜೇಂದ್ರ! ಅಲ್ಲಿಂದ ಅನುತ್ತಮ ಬ್ರಹ್ಮಣ ತೀರ್ಥಕ್ಕೆ ಹೋಗಬೇಕು. ರಾಜೇಂದ್ರ! ಅಲ್ಲಿ ಅಮಿತೌಜಸ ಬ್ರಹ್ಮನನ್ನು ಪೂಜಿಸಿದರೆ ಮಾನವನು ರಾಜಸೂಯ ಮತ್ತು ಅಶ್ವಮೇಧಯಾಗಗಳ ಫಲವನ್ನು ಪಡೆಯುತ್ತಾನೆ.
03082089a ತತೋ ರಾಜಗೃಹಂ ಗಚ್ಚೇತ್ತೀರ್ಥಸೇವೀ ನರಾಧಿಪ।
03082089c ಉಪಸ್ಪೃಶ್ಯ ತಪೋದೇಷು ಕಾಕ್ಷೀವಾನಿವ ಮೋದತೇ।।
ನರಾಧಿಪ! ಅನಂತರ ತೀರ್ಥಯಾತ್ರಿಯು ರಾಜಗೃಹಕ್ಕೆ ಹೋಗಬೇಕು. ಅಲ್ಲಿ ಬಿಸಿನೀರಿನ ಚಿಲುಮೆಗಳಲ್ಲಿ ಸ್ನಾನಮಾಡಿ ಕಕ್ಷೀವಾನನಂತೆ ಮೋದಿಸುತ್ತಾರೆ.
03082090a ಯಕ್ಷಿಣ್ಯಾ ನೈತ್ಯಕಂ ತತ್ರ ಪ್ರಾಶ್ನೀತ ಪುರುಷಃ ಶುಚಿಃ।
03082090c ಯಕ್ಷಿಣ್ಯಾಸ್ತು ಪ್ರಸಾದೇನ ಮುಚ್ಯತೇ ಭ್ರೂಣಹತ್ಯಯಾ।।
ಅಲ್ಲಿ ಶುಚಿಯಾಗಿದ್ದು ಪುರುಷನು ಯಕ್ಷಿಗೆ ಹಾಕುವ ದಿನನಿತ್ಯದ ಬಲಿಯ ರುಚಿನೋಡಿದರೆ, ಯಕ್ಷಿಣಿಯ ಪ್ರಸಾದದಿಂದ ಭ್ರೂಣಹತ್ಯಾದೋಶದಿಂದ ಮುಕ್ತಿದೊರೆಯುತ್ತದೆ.
03082091a ಮಣಿನಾಗಂ ತತೋ ಗತ್ವಾ ಗೋಸಹಸ್ರಫಲಂ ಲಭೇತ್।
03082091c ನೈತ್ಯಕಂ ಭುಂಜತೇ ಯಸ್ತು ಮಣಿನಾಗಸ್ಯ ಮಾನವಃ।।
ಅಲ್ಲಿಂದ ಮಣಿನಾಗಕ್ಕೆ ಹೋಗಿ ಮಾನವನು ಮಣಿನಾಗನಿಗೆ ನೀಡುವ ನೈತ್ಯಕ ನೈವೇದ್ಯವನ್ನು ಪ್ರಸಾದರೂಪದಲ್ಲಿ ಭುಂಜಿಸಿದರೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ.
03082092a ದಷ್ಟಸ್ಯಾಶೀವಿಷೇಣಾಪಿ ನ ತಸ್ಯ ಕ್ರಮತೇ ವಿಷಂ।
03082092c ತತ್ರೋಷ್ಯ ರಜನೀಮೇಕಾಂ ಸರ್ವಪಾಪೈಃ ಪ್ರಮುಚ್ಯತೇ।।
ಅಲ್ಲಿ ಒಂದು ರಾತ್ರಿ ತಂಗಿದರೂ ಸರ್ವಪಾಪಗಳಿಂದ ಬಿಡುಗಡೆಹೊಂದುತ್ತಾನೆ ಮತ್ತು ಸರ್ಪದಿಂದ ಕಚ್ಚಲ್ಪಟ್ಟರೂ ವಿಷವು ಅವನಿಗೆ ತಟ್ಟುವುದಿಲ್ಲ.
03082093a ತತೋ ಗಚ್ಚೇತ ಬ್ರಹ್ಮರ್ಷೇರ್ಗೌತಮಸ್ಯ ವನಂ ನೃಪ।
03082093c ಅಹಲ್ಯಾಯಾ ಹ್ರದೇ ಸ್ನಾತ್ವಾ ವ್ರಜೇತ ಪರಮಾಂ ಗತಿಂ।।
03082093e ಅಭಿಗಮ್ಯ ಶ್ರಿಯಂ ರಾಜನ್ವಿಂದತೇ ಶ್ರಿಯಮುತ್ತಮಾಂ।।
ನೃಪ! ಅಲ್ಲಿಂದ ಬ್ರಹ್ಮರ್ಷಿ ಗೌತಮನ ವನಕ್ಕೆ ಹೋಗಬೇಕು. ಅಲ್ಲಿ ಅಹಲ್ಯೆಯ ಸರೋವರದಲ್ಲಿ ಸ್ನಾನಮಾಡಿ ಪರಮ ಗತಿಯನ್ನು ಪಡೆಯಬಹುದು. ರಾಜನ್! ಶ್ರೀಗೆ ಹೋಗಿ ಉತ್ತಮ ಸಂಪತ್ತನ್ನು ಪಡೆಯಬಹುದು.
03082094a ತತ್ರೋದಪಾನೋ ಧರ್ಮಜ್ಞ ತ್ರಿಷು ಲೋಕೇಷು ವಿಶ್ರುತಃ।
03082094c ತತ್ರಾಭಿಷೇಕಂ ಕೃತ್ವಾ ತು ವಾಜಿಮೇಧಮವಾಪ್ನುಯಾತ್।।
ಧರ್ಮಜ್ಞ! ಅಲ್ಲಿಯೇ ಮೂರುಲೋಕಗಳಲ್ಲಿ ವಿಶ್ರುತ ಚಿಲುಮೆಯೊಂದಿದೆ. ಅಲ್ಲಿ ಸ್ನಾನಮಾಡಿದವನು ಅಶ್ವಮೇಧಫಲವನ್ನು ಪಡೆಯುತ್ತಾನೆ.
03082095a ಜನಕಸ್ಯ ತು ರಾಜರ್ಷೇಃ ಕೂಪಸ್ತ್ರಿದಶಪೂಜಿತಃ।
03082095c ತತ್ರಾಭಿಷೇಕಂ ಕೃತ್ವಾ ತು ವಿಷ್ಣುಲೋಕಮವಾಪ್ನುಯಾತ್।।
ಅನಂತರ ಮೂವತ್ತು ದೇವತೆಗಳು ಪೂಜಿಸುವ ರಾಜರ್ಷಿ ಜನಕನ ಬಾವಿಯಿದೆ. ಅಲ್ಲಿ ಸ್ನಾನಮಾಡಿದರೆ ವಿಷ್ಣುಲೋಕವನ್ನು ಪಡೆಯಬಹುದು.
03082096a ತತೋ ವಿನಶನಂ ಗಚ್ಚೇತ್ಸರ್ವಪಾಪಪ್ರಮೋಚನಂ।
03082096c ವಾಜಪೇಯಮವಾಪ್ನೋತಿ ಸೋಮಲೋಕಂ ಚ ಗಚ್ಚತಿ।।
ಅನಂತರ ಸರ್ವಪಾಪಪ್ರಮೋಚಕ ವಿನಶನಕ್ಕೆ ಹೋಗಬೇಕು. ಅಂಥವನು ಅಶ್ವಮೇಧದ ಫಲವನ್ನು ಪಡೆಯುತ್ತಾನೆ ಮತ್ತು ಸೋಮಲೋಕಕ್ಕೆ ಹೋಗುತ್ತಾನೆ.
03082097a ಗಂಡಕೀಂ ತು ಸಮಾಸಾದ್ಯ ಸರ್ವತೀರ್ಥಜಲೋದ್ಭವಾಂ।
03082097c ವಾಜಪೇಯಮವಾಪ್ನೋತಿ ಸೂರ್ಯಲೋಕಂ ಚ ಗಚ್ಚತಿ।।
ಸರ್ವತೀರ್ಥಗಳ ನೀರು ಉದ್ಭವಿಸುವ ಗಂಡಕಿಗೆ ಹೋದರೆ ಅಶ್ವಮೇಧದ ಫಲವು ದೊರೆಯುತ್ತದೆ ಮತ್ತು ಸೂರ್ಯಲೋಕಕ್ಕೆ ಹೋಗಬಹುದು.
03082098a ತತೋಽಧಿವಂಶ್ಯಂ ಧರ್ಮಜ್ಞ ಸಮಾವಿಶ್ಯ ತಪೋವನಂ।
03082098c ಗುಹ್ಯಕೇಷು ಮಹಾರಾಜ ಮೋದತೇ ನಾತ್ರ ಸಂಶಯಃ।।
ಧರ್ಮಜ್ಞ ! ಮಹಾರಾಜ! ಅನಂತರ ಅಧಿವಂಶ್ಯ ತಪೋವನವನ್ನು ಪ್ರವೇಶಿಸಿದವನು ಗುಹ್ಯಕರೊಡನೇ ಸಂತೋಷದಿಂದಿರುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
03082099a ಕಂಪನಾಂ ತು ಸಮಾಸಾದ್ಯ ನದೀಂ ಸಿದ್ಧನಿಷೇವಿತಾಂ।
03082099c ಪುಂಡರೀಕಮವಾಪ್ನೋತಿ ಸೂರ್ಯಲೋಕಂ ಚ ಗಚ್ಚತಿ।।
ಸಿದ್ಧರು ಸೇವಿಸುವ ಕಂಪನಾ ನದಿಗೆ ಹೋದರೆ ಪುಂಡರೀಕ ಪದವಿಯನ್ನು ಪಡೆಯುತ್ತಾರೆ ಮತ್ತು ಸೂರ್ಯಲೋಕಕ್ಕೆ ಹೋಗುತ್ತಾರೆ.
03082100a ತತೋ ವಿಶಾಲಾಮಾಸಾದ್ಯ ನದೀಂ ತ್ರೈಲೋಕ್ಯವಿಶ್ರುತಾಂ।
03082100c ಅಗ್ನಿಷ್ಟೋಮಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ।।
ಅನಂತರ ತ್ರೈಲೋಕ್ಯ ವಿಶ್ರುತ ವಿಶಾಲಾ ನದಿಗೆ ಹೋದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ ಮತ್ತು ಸ್ವರ್ಗಲೋಕಕ್ಕೆ ಹೋಗಬಹುದು.
03082101a ಅಥ ಮಾಹೇಶ್ವರೀಂ ಧಾರಾಂ ಸಮಾಸಾದ್ಯ ನರಾಧಿಪ।
03082101c ಅಶ್ವಮೇಧಮವಾಪ್ನೋತಿ ಕುಲಂ ಚೈವ ಸಮುದ್ಧರೇತ್।।
ನರಾಧಿಪ! ಅನಂತರ ಮಾಹೇಶ್ವರೀ ಜಲಪಾತಕ್ಕೆ ಹೋದರೆ ಅಶ್ವಮಧ ಫಲವು ದೊರೆಯುತ್ತದೆ ಮತ್ತು ಕುಲವು ಉದ್ಧಾರವಾಗುತ್ತದೆ.
03082102a ದಿವೌಕಸಾಂ ಪುಷ್ಕರಿಣೀಂ ಸಮಾಸಾದ್ಯ ನರಃ ಶುಚಿಃ।
03082102c ನ ದುರ್ಗತಿಮವಾಪ್ನೋತಿ ವಾಜಪೇಯಂ ಚ ವಿಂದತಿ।।
ಶುಚಿಯಾಗಿದ್ದು ದಿವೌಕಸರ ಸರೋವರಕ್ಕೆ ಹೋದರೆ ದುರ್ಗತಿಯನ್ನು ಹೊಂದುವುದಿಲ್ಲ ಮತ್ತು ವಾಜಪೇಯದ ಫಲವು ದೊರೆಯುತ್ತದೆ.
03082103a ಮಹೇಶ್ವರಪದಂ ಗಚ್ಚೇದ್ಬ್ರಹ್ಮಚಾರೀ ಸಮಾಹಿತಃ।
03082103c ಮಹೇಶ್ವರಪದೇ ಸ್ನಾತ್ವಾ ವಾಜಿಮೇಧಫಲಂ ಲಭೇತ್।।
ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ಮಹೇಶ್ವರ ಪದಕ್ಕೆ ಹೋಗಬೇಕು. ಮಹೇಶ್ವರ ಪದದಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ.
03082104a ತತ್ರ ಕೋಟಿಸ್ತು ತೀರ್ಥಾನಾಂ ವಿಶ್ರುತಾ ಭರತರ್ಷಭ।
03082104c ಕೂರ್ಮರೂಪೇಣ ರಾಜೇಂದ್ರ ಅಸುರೇಣ ದುರಾತ್ಮನಾ।।
03082104e ಹ್ರಿಯಮಾಣಾಹೃತಾ ರಾಜನ್ವಿಷ್ಣುನಾ ಪ್ರಭವಿಷ್ಣುನಾ।।
ಭರತರ್ಷಭ! ಅಲ್ಲಿ ಕೋಟಿಗಟ್ಟಲೆ ತೀರ್ಥಗಳಿವೆಯೆಂದು ಕೇಳಿದ್ದೇವೆ. ರಾಜೇಂದ್ರ! ರಾಜನ್! ಅವುಗಳನ್ನು ಹಿಂದೆ ದುರಾತ್ಮ ಅಸುರನು ಅಪಹರಿಸಿಕೊಂಡು ಹೋಗಿದ್ದ. ಅದನ್ನು ಕೂರ್ಮರೂಪದ ಕಾಂತಿಯುಕ್ತ ವಿಷ್ಣುವು ಪುನಃ ತಂದಿಟ್ಟನು.
03082105a ತತ್ರಾಭಿಷೇಕಂ ಕುರ್ವಾಣಸ್ತೀರ್ಥಕೋಟ್ಯಾಂ ಯುಧಿಷ್ಠಿರ।
03082105c ಪುಂಡರೀಕಮವಾಪ್ನೋತಿ ವಿಷ್ಣುಲೋಕಂ ಚ ಗಚ್ಚತಿ।।
ಯುಧಿಷ್ಠಿರ! ಆ ತಿರ್ಥಕೋಟಿಯಲ್ಲಿ ಸ್ನಾನಮಾಡಿದವನಿಗೆ ಪುಂಡರೀಕಪದವಿಯು ದೊರೆಯುತ್ತದೆ ಮತ್ತು ವಿಷ್ಣುಲೋಕಕ್ಕೆ ಹೋಗುತ್ತಾರೆ.
03082106a ತತೋ ಗಚ್ಚೇತ ರಾಜೇಂದ್ರ ಸ್ಥಾನಂ ನಾರಾಯಣಸ್ಯ ತು।
03082106c ಸದಾ ಸನ್ನಿಹಿತೋ ಯತ್ರ ಹರಿರ್ವಸತಿ ಭಾರತ।।
03082106e ಶಾಲಗ್ರಾಮೈತಿ ಖ್ಯಾತೋ ವಿಷ್ಣೋರದ್ಭುತಕರ್ಮಣಃ।।
ರಾಜೇಂದ್ರ! ಅಲ್ಲಿಂದ ನಾರಾಯಣನ ಸ್ಥಾನಕ್ಕೆ ಹೋಗಬೇಕು. ಭಾರತ! ಅದ್ಭುತಕರ್ಮಿ ವಿಷ್ಣು ಹರಿಯು ಸದಾ ಸನ್ನಿಹಿತನಾಗಿ ವಾಸಿಸಿರುವ ಅದು ಶಾಲಗ್ರಾಮ ಎಂದು ಖ್ಯಾತಗೊಂಡಿದೆ.
03082107a ಅಭಿಗಮ್ಯ ತ್ರಿಲೋಕೇಶಂ ವರದಂ ವಿಷ್ಣುಮವ್ಯಯಂ।
03082107c ಅಶ್ವಮೇಧಮವಾಪ್ನೋತಿ ವಿಷ್ಣುಲೋಕಂ ಚ ಗಚ್ಚತಿ।।
ಅಲ್ಲಿ ಅವ್ಯಯ ವರದ ತ್ರಿಲೋಕೇಶ ವಿಷ್ಣುವಿರುವಲ್ಲಿಗೆ ಹೋದರೆ ಅಶ್ವಮೇಧದ ಫಲವನ್ನು ಪಡೆಯುತ್ತಾರೆ ಮತ್ತು ವಿಷ್ಣುಲೋಕಕ್ಕೆ ಹೋಗುತ್ತಾರೆ.
03082108a ತತ್ರೋದಪಾನೋ ಧರ್ಮಜ್ಞ ಸರ್ವಪಾಪಪ್ರಮೋಚನಃ।
03082108c ಸಮುದ್ರಾಸ್ತತ್ರ ಚತ್ವಾರಃ ಕೂಪೇ ಸನ್ನಿಹಿತಾಃ ಸದಾ।।
03082108e ತತ್ರೋಪಸ್ಪೃಶ್ಯ ರಾಜೇಂದ್ರ ನ ದುರ್ಗತಿಮವಾಪ್ನುಯಾತ್।।
ಧರ್ಮಜ್ಞ! ಅಲ್ಲಿ ಸರ್ವಪಾಪಗಳಿಂದಲೂ ವಿಮೋಚನೆ ನೀಡುವ ನಾಲ್ಕು ಸಮುದ್ರಗಳು ಸದಾ ಸನ್ನಿಹಿತವಾಗಿರುವ ಬಾವಿಯಿದೆ. ರಾಜೇಂದ್ರ! ಆ ನೀರನ್ನು ಮುಟ್ಟಿದರೆ ದುರ್ಗತಿಗೊಳಗಾಗುವುದಿಲ್ಲ.
03082109a ಅಭಿಗಮ್ಯ ಮಹಾದೇವಂ ವರದಂ ವಿಷ್ಣುಮವ್ಯಯಂ।
03082109c ವಿರಾಜತಿ ಯಥಾ ಸೋಮ ಋಣೈರ್ಮುಕ್ತೋ ಯುಧಿಷ್ಠಿರ।।
ಯುಧಿಷ್ಠಿರ! ಅವ್ಯಯ ಮಹಾದೇವ ವರದ ವಿಷ್ಣುವಿನಲ್ಲಿಗೆ ಹೋದವರು ಸೋಮನಂತೆ ವಿರಾಜಿಸುತ್ತಾರೆ ಮತ್ತು ಋಣಮುಕ್ತರಾಗುತ್ತಾರೆ.
03082110a ಜಾತಿಸ್ಮರ ಉಪಸ್ಪೃಶ್ಯ ಶುಚಿಃ ಪ್ರಯತಮಾನಸಃ।
03082110c ಜಾತಿಸ್ಮರತ್ವಂ ಪ್ರಾಪ್ನೋತಿ ಸ್ನಾತ್ವಾ ತತ್ರ ನ ಸಂಶಯಃ।।
ಶುಚಿ ಮತ್ತು ಪ್ರಯತಮನಸ್ಕನಾಗಿದ್ದು ಜಾತಿಸ್ಮರದ ನೀರಿನಲ್ಲಿ ಸ್ನಾನಮಾಡಬೇಕು. ಅಲ್ಲಿ ಸ್ನಾನಮಾಡಿದರೆ ಹಿಂದಿನ ಜನ್ಮಗಳು ನೆನಪಿಗೆ ಬರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
03082111a ವಟೇಶ್ವರಪುರಂ ಗತ್ವಾ ಅರ್ಚಯಿತ್ವಾ ತು ಕೇಶವಂ।
03082111c ಈಪ್ಸಿತಾಽಲ್ಲಭತೇ ಕಾಮಾನುಪವಾಸಾನ್ನ ಸಂಶಯಃ।।
ವಟೇಶ್ವರಕ್ಕೆ ಹೋಗಿ ಅಲ್ಲಿ ಉಪವಾಸಮಾಡಿ ಕೇಶವನನ್ನು ಪೂಜಿಸುವುದರಿಂದ ಆಸೆಗಳು ಈಡೇರುತ್ತವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03082112a ತತಸ್ತು ವಾಮನಂ ಗತ್ವಾ ಸರ್ವಪಾಪಪ್ರಮೋಚನಂ।
03082112c ಅಭಿವಾದ್ಯ ಹರಿಂ ದೇವಂ ನ ದುರ್ಗತಿಮವಾಪ್ನುಯಾತ್।।
ಅನಂತರ ಸರ್ವಪಾಪಪ್ರಮೋಚಕ ವಾಮನಕ್ಕೆ ಹೋಗಿ ದೇವ ಹರಿಯನ್ನು ಪೂಜಿಸಿದರೆ ದುರ್ಗತಿಯುಂಟಾಗುವುದಿಲ್ಲ.
03082113a ಭರತಸ್ಯಾಶ್ರಮಂ ಗತ್ವಾ ಸರ್ವಪಾಪಪ್ರಮೋಚನಂ।
03082113c ಕೌಶಿಕೀಂ ತತ್ರ ಸೇವೇತ ಮಹಾಪಾತಕನಾಶಿನೀಂ।।
03082113e ರಾಜಸೂಯಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।।
ಸರ್ವಪಾಪಪ್ರಮೋಚಕ ಭರತನ ಆಶ್ರಮಕ್ಕೆ ಹೋಗಿ ಅಲ್ಲಿ ಮಹಾಪಾತಕನಾಶಿನಿ ಕೌಶಿಕಿಯನ್ನು ಪೂಜಿಸಬೇಕು. ಅದರಿಂದ ಮಾನವನಿಗೆ ರಾಜಸೂಯ ಯಾಗದ ಫಲವು ದೊರೆಯುತ್ತದೆ.
03082114a ತತೋ ಗಚ್ಚೇತ ಧರ್ಮಜ್ಞ ಚಂಪಕಾರಣ್ಯಮುತ್ತಮಂ।
03082114c ತತ್ರೋಷ್ಯ ರಜನೀಮೇಕಾಂ ಗೋಸಹಸ್ರಫಲಂ ಲಭೇತ್।।
ಧರ್ಮಜ್ಞ! ಅನಂತರ ಉತ್ತಮ ಚಂಪಕಾರಣ್ಯಕ್ಕೆ ಹೋಗಿ ಅಲ್ಲಿ ಒಂದು ರಾತ್ರಿಯಾದರೂ ಉಳಿದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ.
03082115a ಅಥ ಜ್ಯೇಷ್ಠಿಲಮಾಸಾದ್ಯ ತೀರ್ಥಂ ಪರಮಸಮ್ಮತಂ।
03082115c ಉಪೋಷ್ಯ ರಜನೀಮೇಕಾಮಗ್ನಿಷ್ಟೋಮಫಲಂ ಲಭೇತ್।।
ಅನಂತರ ಪರಮಸಮ್ಮತ ಜ್ಯೇಷ್ಠಿಲಕ್ಕೆ ಹೋಗಿ ಅಲ್ಲಿ ಉಪವಾಸವಿದ್ದು ಒಂದು ರಾತ್ರಿಯನ್ನಾದರೂ ಕಳೆದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ.
03082116a ತತ್ರ ವಿಶ್ವೇಶ್ವರಂ ದೃಷ್ಟ್ವಾ ದೇವ್ಯಾ ಸಹ ಮಹಾದ್ಯುತಿಂ।
03082116c ಮಿತ್ರಾವರುಣಯೋರ್ಲೋಕಾನಾಪ್ನೋತಿ ಪುರುಷರ್ಷಭ।।
ಪುರುಷರ್ಷಭ! ಅಲ್ಲಿ ದೇವಿಯ ಸಹಿತ ಮಹಾದ್ಯುತಿ ವಿಶ್ವೇಶ್ವರನನ್ನು ನೋಡಿದರೆ ಮಿತ್ರಾವರುಣರ ಲೋಕವನ್ನು ಪಡೆಯುತ್ತಾರೆ.
03082117a ಕನ್ಯಾಸಂವೇದ್ಯಮಾಸಾದ್ಯ ನಿಯತೋ ನಿಯತಾಶನಃ।
03082117c ಮನೋಃ ಪ್ರಜಾಪತೇರ್ಲೋಕಾನಾಪ್ನೋತಿ ಭರತರ್ಷಭ।।
ಭರತರ್ಷಭ! ಕನ್ಯಾಸಂವೇದ್ಯಕ್ಕೆ ಹೋಗಿ ನಿಯತನೂ ನಿಯತಾಶನನೂ ಆಗಿದ್ದರೆ ಮನು ಪ್ರಜಾಪತಿಯ ಲೋಕವನ್ನು ಪಡೆಯುತ್ತಾನೆ.
03082118a ಕನ್ಯಾಯಾಂ ಯೇ ಪ್ರಯಚ್ಚಂತಿ ಪಾನಮನ್ನಂ ಚ ಭಾರತ।
03082118c ತದಕ್ಷಯಮಿತಿ ಪ್ರಾಹುರೃಷಯಃ ಸಂಶಿತವ್ರತಾಃ।।
ಭಾರತ! ಕನ್ಯಾಸಂವೇದ್ಯದಲ್ಲಿ ದಾನಮಾಡಿದ ಅನ್ನ ಮತ್ತು ಪಾನೀಯಗಳು ಅಕ್ಷಯವಾಗುತ್ತವೆ ಎಂದು ಸಂಶಿತವ್ರತ ಋಷಿಗಳು ಹೇಳುತ್ತಾರೆ.
03082119a ನಿಶ್ಚೀರಾಂ ಚ ಸಮಾಸಾದ್ಯ ತ್ರಿಷು ಲೋಕೇಷು ವಿಶ್ರುತಾಂ।
03082119c ಅಶ್ವಮೇಧಮವಾಪ್ನೋತಿ ವಿಷ್ಣುಲೋಕಂ ಚ ಗಚ್ಚತಿ।।
03082120a ಯೇ ತು ದಾನಂ ಪ್ರಯಚ್ಚಂತಿ ನಿಶ್ಚೀರಾಸಂಗಮೇ ನರಾಃ।
03082120c ತೇ ಯಾಂತಿ ನರಶಾರ್ದೂಲ ಬ್ರಹ್ಮಲೋಕಂ ನ ಸಂಶಯಃ।।
ಮೂರು ಲೋಕಗಳಲ್ಲೂ ವಿಶ್ರುತ ನಿಶ್ಚೀರಾಕ್ಕೆ ಹೋದರೆ ಅಶ್ವಮೇಧಯಾಗದ ಫಲವು ದೊರೆಯುತ್ತದೆ ಮತ್ತು ವಿಷ್ಣುಲೋಕಕ್ಕೆ ಹೋಗುತ್ತಾರೆ. ನರಶಾರ್ದೂಲ! ನಿಶ್ಚೀರ ಸಂಗಮದಲ್ಲಿ ದಾನಮಾಡಿದವರು ಬ್ರಹ್ಮಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
03082121a ತತ್ರಾಶ್ರಮೋ ವಸಿಷ್ಠಸ್ಯ ತ್ರಿಷು ಲೋಕೇಷು ವಿಶ್ರುತಃ।
03082121c ತತ್ರಾಭಿಷೇಕಂ ಕುರ್ವಾಣೋ ವಾಜಪೇಯಮವಾಪ್ನುಯಾತ್।।
ಅಲ್ಲಿಯೇ ಮೂರುಲೋಕಗಳಲ್ಲಿಯೂ ವಿಶ್ರುತ ವಸಿಷ್ಠನ ಆಶ್ರಮವಿದೆ. ಅಲ್ಲಿ ಸ್ನಾನಮಾಡುವವರಿಗೆ ವಾಜಪೇಯ ಯಾಗದ ಫಲವು ದೊರೆಯುತ್ತದೆ.
03082122a ದೇವಕೂಟಂ ಸಮಾಸಾದ್ಯ ಬ್ರಹ್ಮರ್ಷಿಗಣಸೇವಿತಂ।
03082122c ಅಶ್ವಮೇಧಮವಾಪ್ನೋತಿ ಕುಲಂ ಚೈವ ಸಮುದ್ಧರೇತ್।।
ಬ್ರಹ್ಮರ್ಷಿಗಣಸೇವಿತ ದೇವಕೂಟಕ್ಕೆ ಹೋದರೆ ಅಶ್ವಮೇಧಫಲವು ದೊರೆಯುತ್ತದೆ ಮತ್ತು ಕುಲವು ಉದ್ಧಾರವಾಗುತ್ತದೆ.
03082123a ತತೋ ಗಚ್ಚೇತ ರಾಜೇಂದ್ರ ಕೌಶಿಕಸ್ಯ ಮುನೇರ್ಹ್ರದಂ।
03082123c ಯತ್ರ ಸಿದ್ಧಿಂ ಪರಾಂ ಪ್ರಾಪ್ತೋ ವಿಶ್ವಾಮಿತ್ರೋಽಥ ಕೌಶಿಕಃ।।
03082124a ತತ್ರ ಮಾಸಂ ವಸೇದ್ವೀರ ಕೌಶಿಕ್ಯಾಂ ಭರತರ್ಷಭ।
03082124c ಅಶ್ವಮೇಧಸ್ಯ ಯತ್ಪುಣ್ಯಂ ತನ್ಮಾಸೇನಾಧಿಗಚ್ಚತಿ।।
ರಾಜೇಂದ್ರ! ಅನಂತರ ಕೌಶಿಕ ಮುನಿಯ ಸರೋವರಕ್ಕೆ ಹೋಗಬೇಕು. ಅಲ್ಲಿ ಕೌಶಿಕ ವಿಶ್ವಾಮಿತ್ರನು ಪರಮ ಸಿದ್ಧಿಯನ್ನು ಪಡೆದನು. ವೀರ! ಭರತರ್ಷಭ! ಅಲ್ಲಿ ಕೌಶಿಕಿಯಲ್ಲಿ ಒಂದು ತಿಂಗಳು ತಂಗಿದರೆ ಒಂದೇ ಒಂದು ತಿಂಗಳಿನಲ್ಲಿ ಅಶ್ವಮೇಧದ ಪುಣ್ಯವು ಬರುತ್ತದೆ.
03082125a ಸರ್ವತೀರ್ಥವರೇ ಚೈವ ಯೋ ವಸೇತ ಮಹಾಹ್ರದೇ।
03082125c ನ ದುರ್ಗತಿಮವಾಪ್ನೋತಿ ವಿಂದೇದ್ಬಹು ಸುವರ್ಣಕಂ।।
ಸರ್ವತೀರ್ಥಗಳಲ್ಲಿ ಶ್ರೇಷ್ಠ ಮಹಾಹ್ರದದಲ್ಲಿ ಯಾರು ವಾಸಮಾಡುತ್ತಾರೋ ಅವರಿಗೆ ದುರ್ಗತಿಯುಂಟಾಗುವುದಿಲ್ಲ ಮತ್ತು ಬಹಳ ಸಂಪತ್ತು ದೊರೆಯುತ್ತದೆ.
03082126a ಕುಮಾರಮಭಿಗತ್ವಾ ಚ ವೀರಾಶ್ರಮನಿವಾಸಿನಂ।
03082126c ಅಶ್ವಮೇಧಮವಾಪ್ನೋತಿ ನರೋ ನಾಸ್ತ್ಯತ್ರ ಸಂಶಯಃ।।
ಕುಮಾರಕ್ಕೆ ಹೋಗಿ ಅಲ್ಲಿ ವೀರಾಶ್ರಮದಲ್ಲಿ ವಾಸಿಸುವ ನರನಿಗೆ ಅಶ್ವಮೇಧದ ಫಲವು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
03082127a ಅಗ್ನಿಧಾರಾಂ ಸಮಾಸಾದ್ಯ ತ್ರಿಷು ಲೋಕೇಷು ವಿಶ್ರುತಾಂ।
03082127c ಅಗ್ನಿಷ್ಟೋಮಮವಾಪ್ನೋತಿ ನ ಚ ಸ್ವರ್ಗಾನ್ನಿವರ್ತತೇ।।
ಮೂರು ಲೋಕಗಳಲ್ಲಿ ವಿಶ್ರುತ ಅಗ್ನಿಧಾರೆಗೆ ಹೋದರೆ ಅಗ್ನಿಷ್ಟೋಮದ ಫಲವು ದೊರೆಯುತ್ತದೆ ಮತ್ತು ಸ್ವರ್ಗದಿಂದ ಹಿಂದಿರುಗುವುದಿಲ್ಲ.
03082128a ಪಿತಾಮಹಸರೋ ಗತ್ವಾ ಶೈಲರಾಜಪ್ರತಿಷ್ಠಿತಂ।
03082128c ತತ್ರಾಭಿಷೇಕಂ ಕುರ್ವಾಣೋ ಅಗ್ನಿಷ್ಟೋಮಫಲಂ ಲಭೇತ್।।
ಶೈಲರಾಜನಿಂದ ಪ್ರತಿಷ್ಠಿತಗೊಂಡ ಪಿತಾಮಹಸರೋವರಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದವರಿಗೆ ಅಗ್ನಿಷ್ಟೋಮದ ಫಲವು ದೊರೆಯುತ್ತದೆ.
03082129a ಪಿತಾಮಹಸ್ಯ ಸರಸಃ ಪ್ರಸ್ರುತಾ ಲೋಕಪಾವನೀ।
03082129c ಕುಮಾರಧಾರಾ ತತ್ರೈವ ತ್ರಿಷು ಲೋಕೇಷು ವಿಶ್ರುತಾ।।
03082130a ಯತ್ರ ಸ್ನಾತ್ವಾ ಕೃತಾರ್ಥೋಽಸ್ಮೀತ್ಯಾತ್ಮಾನಮವಗಚ್ಚತಿ।
03082130c ಷಷ್ಠಕಾಲೋಪವಾಸೇನ ಮುಚ್ಯತೇ ಬ್ರಹ್ಮಹತ್ಯಯಾ।।
ಪಿತಾಮಹ ಸರೋವರದಿಂದ ಲೋಕಪಾವನೀ ಮೂರು ಲೋಕಗಳಲ್ಲಿ ವಿಶ್ರುತ ಕುಮಾಧಾರೆಯು ಹರಿಯುತ್ತದೆ. ಅಲ್ಲಿ ಸ್ನಾನಮಾಡಿದವನು ಕೃತಾರ್ಥನಾಗಿ ತನ್ನ ಅತ್ಮವನ್ನು ಅರಿಯುತ್ತಾನೆ ಮತ್ತು ಅಲ್ಲಿ ಮೂರು ದಿನಕ್ಕೊಮ್ಮೆ ಮಾತ್ರ ಆಹಾರಸೇವಿಸಿ ಉಳಿದರೆ ಬ್ರಹ್ಮಹತ್ಯಾದೋಷದಿಂದ ಬಿಡುಗಡೆ ದೊರೆಯುತ್ತದೆ.
03082131a ಶಿಖರಂ ವೈ ಮಹಾದೇವ್ಯಾ ಗೌರ್ಯಾಸ್ತ್ರೈಲೋಕ್ಯವಿಶ್ರುತಂ।
03082131c ಸಮಾರುಹ್ಯ ನರಃ ಶ್ರಾದ್ಧಃ ಸ್ತನಕುಂಡೇಷು ಸಂವಿಶೇತ್।।
03082132a ತತ್ರಾಭಿಷೇಕಂ ಕುರ್ವಾಣಃ ಪಿತೃದೇವಾರ್ಚನೇ ರತಃ।
03082132c ಹಯಮೇಧಮವಾಪ್ನೋತಿ ಶಕ್ರಲೋಕಂ ಚ ಗಚ್ಚತಿ।।
ತ್ರಿಲೋಕವಿಶ್ರುತ ಮಹಾದೇವಿ ಗೌರಿಯ ಶಿಖರವನ್ನೇರಿ, ಶ್ರದ್ಧೆಯಿಂದ ಸ್ತನಕುಂಡವನ್ನು ಪ್ರವೇಶಿಸಿ, ಅಲ್ಲಿ ಸ್ನಾನಮಾಡಿ, ಪಿತೃದೇವತೆಗಳನ್ನು ಪೂಜಿಸುವ ನರನು ಅಶ್ವಮೇಧಫಲವನ್ನು ಪಡೆಯುತ್ತಾನೆ ಮತ್ತು ಶಕ್ರಲೋಕಕ್ಕೆ ಹೋಗುತ್ತಾನೆ.
03082133a ತಾಮ್ರಾರುಣಂ ಸಮಾಸಾದ್ಯ ಬ್ರಹ್ಮಚಾರೀ ಸಮಾಹಿತಃ।
03082133c ಅಶ್ವಮೇಧಮವಾಪ್ನೋತಿ ಶಕ್ರಲೋಕಂ ಚ ಗಚ್ಚತಿ।।
ಬ್ರಹ್ಮಚಾರಿಯೂ ಸಮಾಹಿತನೂ ಆಗಿದ್ದು ತಾಮ್ರಾರುಣಕ್ಕೆ ಹೋದರೆ ಅಶ್ವಮೇಧಫಲವನ್ನು ಪಡೆಯುತ್ತಾನೆ ಮತ್ತು ಶಕ್ರಲೋಕಕ್ಕೆ ಹೋಗುತ್ತಾನೆ.
03082134a ನಂದಿನ್ಯಾಂ ಚ ಸಮಾಸಾದ್ಯ ಕೂಪಂ ತ್ರಿದಶಸೇವಿತಂ।
03082134c ನರಮೇಧಸ್ಯ ಯತ್ಪುಣ್ಯಂ ತತ್ಪ್ರಾಪ್ನೋತಿ ಕುರೂದ್ವಹ।।
ಕುರೂದ್ವಹ! ಮೂವತ್ತು ದೇವತೆಗಳು ಸೇವಿಸುವ ನಂದಿನೀ ಬಾವಿಗೆ ಹೋದರೆ ನರಮೇಧದ ಪುಣ್ಯವು ದೊರೆಯುತ್ತದೆ.
03082135a ಕಾಲಿಕಾಸಂಗಮೇ ಸ್ನಾತ್ವಾ ಕೌಶಿಕ್ಯಾರುಣಯೋರ್ಯತಃ।
03082135c ತ್ರಿರಾತ್ರೋಪೋಷಿತೋ ವಿದ್ವಾನ್ಸರ್ವಪಾಪೈಃ ಪ್ರಮುಚ್ಯತೇ।।
ಕೌಶಿಕಿ ಮತ್ತು ಆರುಣಿಗಳ ಸಂಗಮ ಕಾಲಿಕಾದಲ್ಲಿ ಸ್ನಾನಮಾಡಿ ಮೂರುರಾತ್ರಿಗಳು ಉಪವಾಸವಿದ್ದ ವಿದ್ವಾನನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
03082136a ಉರ್ವಶೀತೀರ್ಥಮಾಸಾದ್ಯ ತತಃ ಸೋಮಾಶ್ರಮಂ ಬುಧಃ।
03082136c ಕುಂಭಕರ್ಣಾಶ್ರಮೇ ಸ್ನಾತ್ವಾ ಪೂಜ್ಯತೇ ಭುವಿ ಮಾನವಃ।।
ಅನಂತರ ಊರ್ವಶೀ ತೀರ್ಥಕ್ಕೆ ಹೋಗಿ, ಅಲ್ಲಿಂದ ಸೋಮಾಶ್ರಮಕ್ಕೆ ಹೋಗಿ, ನಂತರ ಕುಂಭಕರ್ಣಾಶ್ರಮದಲ್ಲಿ ಸ್ನಾನಮಾಡಿದ ಮಾನವನನ್ನು ಬುದ್ಧಿವಂತರು ಭೂಮಿಯಲ್ಲಿ ಪೂಜಿಸುತ್ತಾರೆ.
03082137a ಸ್ನಾತ್ವಾ ಕೋಕಾಮುಖೇ ಪುಣ್ಯೇ ಬ್ರಹ್ಮಚಾರೀ ಯತವ್ರತಃ।
03082137c ಜಾತಿಸ್ಮರತ್ವಂ ಪ್ರಾಪ್ನೋತಿ ದೃಷ್ಟಮೇತತ್ಪುರಾತನೇ।।
ಬ್ರಹ್ಮಚಾರಿಯಾಗಿದ್ದು ಯತವ್ರತನಾಗಿದ್ದು ಪುಣ್ಯ ಕೋಕಾಮುಖದಲ್ಲಿ ಸ್ನಾನಮಾಡಿದರೆ ಕಳೆದ ಜನ್ಮಗಳ ನೆನಪಾಗುತ್ತದೆ ಎಂದು ಪುರಾಣಗಳಲ್ಲಿ ಕಂಡಿದ್ದಾರೆ.
03082138a ಸಕೃನ್ನಂದಾಂ ಸಮಾಸಾದ್ಯ ಕೃತಾತ್ಮಾ ಭವತಿ ದ್ವಿಜಃ।
03082138c ಸರ್ವಪಾಪವಿಶುದ್ಧಾತ್ಮಾ ಶಕ್ರಲೋಕಂ ಚ ಗಚ್ಚತಿ।।
ನಂದಕ್ಕೆ ಹೋದರೆ ದ್ವಿಜನು ಕೃತಾತ್ಮನಾಗುತ್ತಾನೆ, ಮತ್ತು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಶಕ್ರಲೋಕಕ್ಕೆ ಹೋಗುತ್ತಾನೆ.
03082139a ಋಷಭದ್ವೀಪಮಾಸಾದ್ಯ ಸೇವ್ಯಂ ಕ್ರೌಂಚನಿಷೂದನಂ।
03082139c ಸರಸ್ವತ್ಯಾಮುಪಸ್ಪೃಶ್ಯ ವಿಮಾನಸ್ಥೋ ವಿರಾಜತೇ।।
ಋಷಭದ್ವೀಪಕ್ಕೆ ಹೋಗಿ ಕ್ರೌಂಚನಿಷೂದನನನ್ನು ಪೂಜಿಸಿ, ಸರಸ್ವತಿಯಲ್ಲಿ ಮಿಂದರೆ ವಿಮಾನಸ್ಥನಾಗಿ ವಿರಾಜಿಸುತ್ತಾನೆ.
03082140a ಔದ್ದಾಲಕಂ ಮಹಾರಾಜ ತೀರ್ಥಂ ಮುನಿನಿಷೇವಿತಂ।
03082140c ತತ್ರಾಭಿಷೇಕಂ ಕುರ್ವೀತ ಸರ್ವಪಾಪೈಃ ಪ್ರಮುಚ್ಯತೇ।।
ಮಹಾರಾಜ! ಮುನಿನಿಷೇವಿತ ಔದ್ಧಾಲಕ ತೀರ್ಥದಲ್ಲಿ ಸ್ನಾನಮಾಡಿದವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
03082141a ಧರ್ಮತೀರ್ಥಂ ಸಮಾಸಾದ್ಯ ಪುಣ್ಯಂ ಬ್ರಹ್ಮರ್ಷಿಸೇವಿತಂ।
03082141c ವಾಜಪೇಯಮವಾಪ್ನೋತಿ ನರೋ ನಾಸ್ತ್ಯತ್ರ ಸಂಶಯಃ।।
ಬ್ರಹ್ಮರ್ಷಿಸೇವಿತ ಪುಣ್ಯ ಧರ್ಮತೀರ್ಥಕ್ಕೆ ಹೋದ ನರನು ವಾಜಪೇಯದ ಫಲವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
03082142a ತಥಾ ಚಂಪಾಂ ಸಮಾಸಾದ್ಯ ಭಾಗೀರಥ್ಯಾಂ ಕೃತೋದಕಃ।
03082142c ದಂಡಾರ್ಕಮಭಿಗಮ್ಯೈವ ಗೋಸಹಸ್ರಫಲಂ ಲಭೇತ್।।
ಹಾಗೆಯೇ ಚಂಪಾಕ್ಕೆ ಹೋಗಿ ಭಾಗೀರಥಿಯ ನೀರನ್ನು ಮುಟ್ಟಿ ದಂಡಾರ್ಕಕ್ಕೆ ಹೋದರೆ ಸಹಸ್ರ ಗೋದಾನದ ಫಲವು ದೊರೆಯುತ್ತದೆ.
03082143a ಲವೇಡಿಕಾಂ ತತೋ ಗಚ್ಚೇತ್ಪುಣ್ಯಾಂ ಪುಣ್ಯೋಪಸೇವಿತಾಂ।
03082143c ವಾಜಪೇಯಮವಾಪ್ನೋತಿ ವಿಮಾನಸ್ಥಶ್ಚ ಪೂಜ್ಯತೇ।।
ಅನಂತರ ಪುಣ್ಯೋಪಸೇವಿತ ಪುಣ್ಯ ಲವೇಡಿಕಕ್ಕೆ ಹೋದರೆ ವಾಜಪೇಯದ ಫಲವು ದೊರೆಯುತ್ತದೆ ಮತ್ತು ವಿಮಾನದಲ್ಲಿ ಪೂಜಿತನಾಗುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಪುಲಸ್ತ್ಯತೀರ್ಥಯಾತ್ರಾಯಾಂ ದ್ಯಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಪುಲಸ್ತ್ಯತೀರ್ಥಯಾತ್ರಾ ಎನ್ನುವ ಎಂಭತ್ತೆರಡನೆಯ ಅಧ್ಯಾಯವು.