081 ಪುಲಸ್ತ್ಯತೀರ್ಥಯಾತ್ರಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 81

ಸಾರ

ಕುರುಕ್ಷೇತ್ರದ ಮಹಿಮೆ (1-7). ವಿಷ್ಣುಸ್ಥಾನವೇ ಮೊದಲಾದ ತೀರ್ಥಗಳ ಮಹಿಮೆ (8-21). ಭಾರ್ಗವ ರಾಮನ ಸರೋವರಗಳ ಮಹಿಮೆ (22-33). ವಂಶಮೂಲಾದಿ ತೀರ್ಥಗಳ ಮಹಿಮೆ (34-96). ಋಷಿ ಮಂಕಣನಿದ್ದ ಸಪ್ತಸಾರಸ್ವತ ತೀರ್ಥದ ಮಹಿಮೆ (97-115). ಔಷಸನಾದಿ ತೀರ್ಥಗಳ ಮಹಿಮೆ (116-178).

03081001 ಪುಲಸ್ತ್ಯ ಉವಾಚ।
03081001a ತತೋ ಗಚ್ಚೇತ ರಾಜೇಂದ್ರ ಕುರುಕ್ಷೇತ್ರಮಭಿಷ್ಟುತಂ।
03081001c ಪಾಪೇಭ್ಯೋ ವಿಪ್ರಮುಚ್ಯಂತೇ ತದ್ಗತಾಃ ಸರ್ವಜಂತವಃ।।

ಪುಲಸ್ತ್ಯನು ಹೇಳಿದನು: “ರಾಜೇಂದ್ರ! ಅಲ್ಲಿಂದ ತುಂಬಾ ಪ್ರಶಂಸನೆಗೊಳಗಾದ ಕುರುಕ್ಷೇತ್ರಕ್ಕೆ ಹೋಗಬೇಕು. ಅಲ್ಲಿ ಹೋದ ಸರ್ವ ಜೀವಿಗಳ ಪಾಪವಿಮೋಚನೆಯಾಗುತ್ತದೆ.

03081002a ಕುರುಕ್ಷೇತ್ರಂ ಗಮಿಷ್ಯಾಮಿ ಕುರುಕ್ಷೇತ್ರೇ ವಸಾಮ್ಯಹಂ।
03081002c ಯ ಏವಂ ಸತತಂ ಬ್ರೂಯಾತ್ಸೋಽಪಿ ಪಾಪೈಃ ಪ್ರಮುಚ್ಯತೇ।।

“ಕುರುಕ್ಷೇತ್ರಕ್ಕೆ ಹೋಗುತ್ತೇನೆ! ಕುರುಕ್ಷೇತ್ರದಲ್ಲಿ ವಾಸಿಸುತ್ತೇನೆ!” ಎಂದು ಯಾರು ಸದಾ ಹೇಳುತ್ತಿರುತ್ತಾರೋ ಅಂಥವರೂ ಪಾಪಗಳಿಂದ ಮುಕ್ತರಾಗುತ್ತಾರೆ.

03081003a ತತ್ರ ಮಾಸಂ ವಸೇದ್ವೀರ ಸರಸ್ವತ್ಯಾಂ ಯುಧಿಷ್ಠಿರ।
03081003c ಯತ್ರ ಬ್ರಹ್ಮಾದಯೋ ದೇವಾ ಋಷಯಃ ಸಿದ್ಧಚಾರಣಾಃ।।
03081004a ಗಂಧರ್ವಾಪ್ಸರಸೋ ಯಕ್ಷಾಃ ಪನ್ನಗಾಶ್ಚ ಮಹೀಪತೇ।
03081004c ಬ್ರಹ್ಮಕ್ಷೇತ್ರಂ ಮಹಾಪುಣ್ಯಮಭಿಗಚ್ಚಂತಿ ಭಾರತ।।

ಯುಧಿಷ್ಠಿರ! ವೀರ! ಮಹೀಪತೇ! ಭಾರತ! ಎಲ್ಲಿ ಬ್ರಹ್ಮಾದಿ ದೇವತೆಗಳೂ, ಋಷಿ-ಸಿದ್ಧ-ಚಾರಣರೂ, ಗಂಧರ್ವ-ಅಪ್ಸರೆಯರೂ, ಯಕ್ಷ-ಪನ್ನಗರೂ ಮಹಾಪುಣ್ಯವನ್ನು ಪಡೆದರೋ ಆ ಸರಸ್ವತೀ ತೀರದ ಬ್ರಹ್ಮಕ್ಷೇತ್ರದಲ್ಲಿ ಒಂದು ತಿಂಗಳು ವಾಸಿಸಬೇಕು.

03081005a ಮನಸಾಪ್ಯಭಿಕಾಮಸ್ಯ ಕುರುಕ್ಷೇತ್ರಂ ಯುಧಿಷ್ಠಿರ।
03081005c ಪಾಪಾನಿ ವಿಪ್ರಣಶ್ಯಂತಿ ಬ್ರಹ್ಮಲೋಕಂ ಚ ಗಚ್ಚತಿ।।

ಯುಧಿಷ್ಠಿರ! ಕುರುಕ್ಷೇತ್ರಕ್ಕೆ ಮನಸಾ ಹೋಗಲು ಬಯಸಿದರೂ ಪಾಪಗಳನ್ನು ಕಳೆದುಕೊಂಡು ಬ್ರಹ್ಮಲೋಕಕ್ಕೆ ಹೋಗುತ್ತಾರೆ.

03081006a ಗತ್ವಾ ಹಿ ಶ್ರದ್ಧಯಾ ಯುಕ್ತಃ ಕುರುಕ್ಷೇತ್ರಂ ಕುರೂದ್ವಹ।
03081006c ರಾಜಸೂಯಾಶ್ವಮೇಧಾಭ್ಯಾಂ ಫಲಂ ಪ್ರಾಪ್ನೋತಿ ಮಾನವಃ।।

ಕುರೂದ್ವಹ! ಶ್ರದ್ಧಾಯುಕ್ತನಾಗಿ ಕುರುಕ್ಷೇತ್ರಕ್ಕೆ ಹೋಗುವುದರಿಂದ ಮಾನವನು ರಾಜಸೂಯ ಮತ್ತು ಅಶ್ವಮೇಧ ಯಾಗಗಳೆರಡರ ಫಲವನ್ನು ಪಡೆಯುತ್ತಾನೆ.

03081007a ತತೋ ಮಚಕ್ರುಕಂ ರಾಜನ್ದ್ವಾರಪಾಲಂ ಮಹಾಬಲಂ।
03081007c ಯಕ್ಷಂ ಸಮಭಿವಾದ್ಯೈವ ಗೋಸಹಸ್ರಫಲಂ ಲಭೇತ್।।

ರಾಜನ್! ಅಲ್ಲಿಯ ದ್ವಾರಪಾಲ ಮಹಾಬಲಿ ಯಕ್ಷ ಮಚಕ್ರುಕನನ್ನು ನಮಸ್ಕರಿಸುವುದರಿಂದ ಸಹಸ್ರ ಗೋವುಗಳನ್ನು ದಾನಮಾಡಿದ ಫಲವು ದೊರೆಯುತ್ತದೆ.

03081008a ತತೋ ಗಚ್ಚೇತ ಧರ್ಮಜ್ಞ ವಿಷ್ಣೋಃ ಸ್ಥಾನಮನುತ್ತಮಂ।
03081008c ಸತತಂ ನಾಮ ರಾಜೇಂದ್ರ ಯತ್ರ ಸನ್ನಿಹಿತೋ ಹರಿಃ।।

ಧರ್ಮಜ್ಞ! ರಾಜೇಂದ್ರ! ಅನಂತರ ಎಲ್ಲಿ ಸತತವೂ ಹರಿನಾಮ ಮತ್ತು ಸಾನ್ನಿಧ್ಯವು ಇದೆಯೋ ಆ ಅನುತ್ತಮ ವಿಷ್ಣುಸ್ಥಾನಕ್ಕೆ ಹೋಗಬೇಕು.

03081009a ತತ್ರ ಸ್ನಾತ್ವಾರ್ಚಯಿತ್ವಾ ಚ ತ್ರಿಲೋಕಪ್ರಭವಂ ಹರಿಂ।
03081009c ಅಶ್ವಮೇಧಮವಾಪ್ನೋತಿ ವಿಷ್ಣುಲೋಕಂ ಚ ಗಚ್ಚತಿ।।

ಅಲ್ಲಿ ಸ್ನಾನಮಾಡಿ ತ್ರಿಲೋಕ ಪ್ರಭವ ಹರಿಯನ್ನು ಅರ್ಚಿಸುವುದರಿಂದ ಅಶ್ವಮೇಧಯಾಗ ಫಲವನ್ನು ಪಡೆದು ವಿಷ್ಣುಲೋಕಕ್ಕೆ ಹೋಗುತ್ತಾರೆ.

03081010a ತತಃ ಪಾರಿಪ್ಲವಂ ಗಚ್ಚೇತ್ತೀರ್ಥಂ ತ್ರೈಲೋಕ್ಯವಿಶ್ರುತಂ।
03081010c ಅಗ್ನಿಷ್ಟೋಮಾತಿರಾತ್ರಾಭ್ಯಾಂ ಫಲಂ ಪ್ರಾಪ್ನೋತಿ ಮಾನವಃ।।

ಅಲ್ಲಿಂದ ಮೂರು ಲೋಕಗಳಲ್ಲಿಯೂ ವಿಶ್ರುತವಾದ ಪಾರಿಪ್ಲವ ತೀರ್ಥಕ್ಕೆ ಹೋಗಬೇಕು. ಅಲ್ಲಿ ಮಾನವನು ಅಗ್ನಿಷ್ಟೋಮ ಮತ್ತು ಅತಿರಾತ್ರಿ ಯಾಗಗಳ ಫಲವನ್ನು ಪಡೆಯುತ್ತಾನೆ.

03081011a ಪೃಥಿವ್ಯಾಸ್ತೀರ್ಥಮಾಸಾದ್ಯ ಗೋಸಹಸ್ರಫಲಂ ಲಭೇತ್।
03081011c ತತಃ ಶಾಲೂಕಿನೀಂ ಗತ್ವಾ ತೀರ್ಥಸೇವೀ ನರಾಧಿಪ।।
03081011e ದಶಾಶ್ವಮೇಧಿಕೇ ಸ್ನಾತ್ವಾ ತದೇವ ಲಭತೇ ಫಲಂ।।

ಪೃಥ್ವಿ ತೀರ್ಥಕ್ಕೆ ಹೋದರೆ ಸಹಸ್ರಗೋವುಗಳ ದಾನದ ಫಲವು ದೊರೆಯುತ್ತದೆ. ನರಾಧಿಪ! ನಂತರ ಶಾಲೂಕಿನಿಗೆ ಹೋಗಿ ಅಲ್ಲಿ ಸ್ನಾನಮಾಡಿದ ತೀರ್ಥಯಾತ್ರಿಯು ದಶಾಶ್ವಮೇಧದ ಫಲವನ್ನು ಪಡೆಯುತ್ತಾನೆ.

03081012a ಸರ್ಪದರ್ವೀಂ ಸಮಾಸಾದ್ಯ ನಾಗಾನಾಂ ತೀರ್ಥಮುತ್ತಮಂ।
03081012c ಅಗ್ನಿಷ್ಟೋಮಮವಾಪ್ನೋತಿ ನಾಗಲೋಕಂ ಚ ವಿಂದತಿ।।

ನಾಗಗಳ ಉತ್ತಮ ತೀರ್ಥ ಸರ್ಪದರ್ವಿಗೆ ಹೋದವನು ಅಗ್ನಿಷ್ಟೋಮಯಾಗ ಫಲ ಮತ್ತು ನಾಗಲೋಕವನ್ನು ಹೊಂದುತ್ತಾನೆ.

03081013a ತತೋ ಗಚ್ಚೇತ ಧರ್ಮಜ್ಞ ದ್ವಾರಪಾಲಂ ತರಂತುಕಂ।
03081013c ತತ್ರೋಷ್ಯ ರಜನೀಮೇಕಾಂ ಗೋಸಹಸ್ರಫಲಂ ಲಭೇತ್।।

ಧರ್ಮಜ್ಞ! ಅಲ್ಲಿಂದ ದ್ವಾರಪಾಲ ತರಂತುಕಕ್ಕೆ ಹೋಗಬೇಕು. ಅಲ್ಲಿ ಒಂದು ರಾತ್ರಿಯನ್ನು ಕಳೆದರೂ ಸಹಸ್ರಗೋವುಗಳನ್ನು ದಾನವಿತ್ತ ಫಲವು ದೊರೆಯುತ್ತದೆ.

03081014a ತತಃ ಪಂಚನದಂ ಗತ್ವಾ ನಿಯತೋ ನಿಯತಾಶನಃ।
03081014c ಕೋಟಿತೀರ್ಥಮುಪಸ್ಪೃಶ್ಯ ಹಯಮೇಧಫಲಂ ಲಭೇತ್।।
03081014e ಅಶ್ವಿನೋಸ್ತೀರ್ಥಮಾಸಾದ್ಯ ರೂಪವಾನಭಿಜಾಯತೇ।।

ಅಲ್ಲಿಂದ ಪಂಚನಂದಕ್ಕೆ ಹೋಗಿ ನಿಯಮದಿಂದಿದ್ದು ಅಲ್ಪಾಹಾರಿಯಾಗಿದ್ದು ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಹಯಮೇಧಫಲವು ದೊರೆಯುತ್ತದೆ. ಅಶ್ವಿನೀ ತೀರ್ಥಕ್ಕೆ ಹೋದರೆ ರೂಪವಂತನಾಗುತ್ತಾನೆ.

03081015a ತತೋ ಗಚ್ಚೇತ ಧರ್ಮಜ್ಞ ವಾರಾಹಂ ತೀರ್ಥಮುತ್ತಮಂ।
03081015c ವಿಷ್ಣುರ್ವಾರಾಹರೂಪೇಣ ಪೂರ್ವಂ ಯತ್ರ ಸ್ಥಿತೋಽಭವತ್।।
03081015e ತತ್ರ ಸ್ನಾತ್ವಾ ನರವ್ಯಾಘ್ರ ಅಗ್ನಿಷ್ಟೋಮಫಲಂ ಲಭೇತ್।।

ಧರ್ಮಜ್ಞ! ಅಲ್ಲಿಂದ ಉತ್ತಮ ವರಾಹತೀರ್ಥಕ್ಕೆ ಹೋಗಬೇಕು. ಅಲ್ಲಿ ಹಿಂದೆ ವಿಷ್ಣುವು ವರಾಹ ರೂಪದಲ್ಲಿದ್ದನು. ನರವ್ಯಾಘ್ರ! ಅಲ್ಲಿ ಸ್ನಾನಮಾಡಿದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ.

03081016a ತತೋ ಜಯಂತ್ಯಾ ರಾಜೇಂದ್ರ ಸೋಮತೀರ್ಥಂ ಸಮಾವಿಶೇತ್।
03081016c ಸ್ನಾತ್ವಾ ಫಲಮವಾಪ್ನೋತಿ ರಾಜಸೂಯಸ್ಯ ಮಾನವಃ।।
03081017a ಏಕಹಂಸೇ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।

ರಾಜೇಂದ್ರ! ಅನಂತರ ಜಯಂತದಲ್ಲಿರುವ ಸೋಮತೀರ್ಥವನ್ನು ತಲುಪಬೇಕು. ಅಲ್ಲಿ ಸ್ನಾನಮಾಡಿದ ಮಾನವನು ರಾಜಸೂಯ ಯಾಗದ ಫಲವನ್ನು ಪಡೆಯುತ್ತಾನೆ. ಏಕಹಂಸದಲ್ಲಿ ಸ್ನಾನಮಾಡಿದರೆ ಸಹಸ್ರ ಗೋವುಗಳನ್ನು ದಾನವಾಗಿತ್ತ ಫಲವು ದೊರೆಯುತ್ತದೆ.

03081017c ಕೃತಶೌಚಂ ಸಮಾಸಾದ್ಯ ತೀರ್ಥಸೇವೀ ಕುರೂದ್ವಹ।।
03081017e ಪುಂಡರೀಕಮವಾಪ್ನೋತಿ ಕೃತಶೌಚೋ ಭವೇನ್ನರಃ।।

ಕುರೂದ್ವಹ! ಕೃತಶೌಚವನ್ನು ತಲುಪಿ ಅಲ್ಲಿ ಸ್ನಾನಮಾಡಿದ ತೀರ್ಥಸೇವಿ ನರನು ಪುಂಡರೀಕವನ್ನು ಹೊಂದುತ್ತಾನೆ.

03081018a ತತೋ ಮುಂಜವಟಂ ನಾಮ ಮಹಾದೇವಸ್ಯ ಧೀಮತಃ।
03081018c ತತ್ರೋಷ್ಯ ರಜನೀಮೇಕಾಂ ಗಾಣಪತ್ಯಮವಾಪ್ನುಯಾತ್।।

ಅನಂತರ ಧೀಮಂತ ಮಹಾದೇವನ ಮುಂಜವಟ ಎನ್ನುವಲ್ಲಿ ಒಂದು ರಾತ್ರಿಯನ್ನು ಕಳೆದವನು ಗಣಪತಿಯ ಸ್ಥಾನವನ್ನು ಪಡೆಯುತ್ತಾನೆ.

03081019a ತತ್ರೈವ ಚ ಮಹಾರಾಜ ಯಕ್ಷೀ ಲೋಕಪರಿಶ್ರುತಾ।
03081019c ತಾಂ ಚಾಭಿಗಮ್ಯ ರಾಜೇಂದ್ರ ಪುಣ್ಯಾಽಲ್ಲೋಕಾನವಾಪ್ನುಯಾತ್।।

ಮಹಾರಾಜ! ಅಲ್ಲಿಯೇ ಲೋಕವಿಖ್ಯಾತ ಯಕ್ಷಿಯಿದ್ದಾಳೆ. ರಾಜೇಂದ್ರ! ಅವಳನ್ನು ಪೂಜಿಸುವುದರಿಂದ ಪುಣ್ಯಲೋಕಗಳು ದೊರೆಯುತ್ತವೆ.

03081020a ಕುರುಕ್ಷೇತ್ರಸ್ಯ ತದ್ದ್ವಾರಂ ವಿಶ್ರುತಂ ಭರತರ್ಷಭ।
03081020c ಪ್ರದಕ್ಷಿಣಮುಪಾವೃತ್ಯ ತೀರ್ಥಸೇವೀ ಸಮಾಹಿತಃ।।
03081021a ಸಮ್ಮಿತೇ ಪುಷ್ಕರಾಣಾಂ ಚ ಸ್ನಾತ್ವಾರ್ಚ್ಯ ಪಿತೃದೇವತಾಃ।

ಭರತರ್ಷಭ! ಇದು ಕುರುಕ್ಷೇತ್ರ ದ್ವಾರವೆಂದು ವಿಶ್ರುತವಾಗಿದೆ. ಪುಷ್ಕರದಂತಿರುವ ಈ ಸ್ಥಳವನ್ನು ಪ್ರದಕ್ಷಿಣೆಮಾಡಿ ಸ್ನಾನಮಾಡಿದ ತೀರ್ಥಯಾತ್ರಿಯು ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಬೇಕು.

03081021c ಜಾಮದಗ್ನ್ಯೇನ ರಾಮೇಣ ಆಹೃತೇ ವೈ ಮಹಾತ್ಮನಾ।।
03081021e ಕೃತಕೃತ್ಯೋ ಭವೇದ್ರಾಜನ್ನಶ್ವಮೇಧಂ ಚ ವಿಂದತಿ।।

ರಾಜನ್! ಜಾಮದಗ್ನಿ ಮಹಾತ್ಮ ರಾಮನಿಂದ ನಿರ್ಮಿತವಾದ ಇದರಲ್ಲಿ ಕೃತಕೃತ್ಯನಾದವನು ಅಶ್ವಮೇಧಯಾಗದ ಫಲವನ್ನು ಹೊಂದುತ್ತಾನೆ.

03081022a ತತೋ ರಾಮಹ್ರದಾನ್ಗಚ್ಚೇತ್ತೀರ್ಥಸೇವೀ ನರಾಧಿಪ।
03081022c ಯತ್ರ ರಾಮೇಣ ರಾಜೇಂದ್ರ ತರಸಾ ದೀಪ್ತತೇಜಸಾ।।
03081022e ಕ್ಷತ್ರಮುತ್ಸಾದ್ಯ ವೀರ್ಯೇಣ ಹ್ರದಾಃ ಪಂಚ ನಿವೇಶಿತಾಃ।।
03081023a ಪೂರಯಿತ್ವಾ ನರವ್ಯಾಘ್ರ ರುಧಿರೇಣೇತಿ ನಃ ಶ್ರುತಂ।

ನರಾಧಿಪ! ಅಲ್ಲಿಂದ ತೀರ್ಥಸೇವಿಯು ರಾಮಸರೋವರಗಳಿಗೆ ಹೋಗಬೇಕು. ರಾಜೇಂದ್ರ! ನರವ್ಯಾಘ್ರ! ಅಲ್ಲಿ ದೀಪ್ತತೇಜಸ್ವಿ ರಾಮನು ತನ್ನ ವೀರ್ಯದಿಂದ ಕ್ಷತ್ರಿಯರನ್ನು ಸಂಹರಿಸಿ, ಅವರ ರಕ್ತವನ್ನು ತುಂಬಿಸಿ ಐದು ಸರೋವರಗಳನ್ನು ನಿರ್ಮಿಸಿದನೆಂದು ಕೇಳಿದ್ದೇವೆ.

03081023c ಪಿತರಸ್ತರ್ಪಿತಾಃ ಸರ್ವೇ ತಥೈವ ಚ ಪಿತಾಮಹಾಃ।।
03081023e ತತಸ್ತೇ ಪಿತರಃ ಪ್ರೀತಾ ರಾಮಮೂಚುರ್ಮಹೀಪತೇ।।

ಮಹೀಪತೇ! ಹೀಗೆ ಸರ್ವ ಪಿತ-ಪಿತಾಮಹರೆಲ್ಲರನ್ನು ತೃಪ್ತಿಗೊಳಿಸಿದನು. ಆಗ ಆ ಪಿತೃಗಳು ಪ್ರೀತಿಯಿಂದ ರಾಮನಿಗೆ ಹೇಳಿದರು:

03081024a ರಾಮ ರಾಮ ಮಹಾಭಾಗ ಪ್ರೀತಾಃ ಸ್ಮ ತವ ಭಾರ್ಗವ।
03081024c ಅನಯಾ ಪಿತೃಭಕ್ತ್ಯಾ ಚ ವಿಕ್ರಮೇಣ ಚ ತೇ ವಿಭೋ।।
03081024e ವರಂ ವೃಣೀಷ್ವ ಭದ್ರಂ ತೇ ಕಿಮಿಚ್ಚಸಿ ಮಹಾದ್ಯುತೇ।।

“ರಾಮ! ರಾಮ! ಮಹಾಭಾಗ! ಭಾರ್ಗವ! ವಿಭೋ! ನಾವು ನಿನ್ನ ಈ ಪಿತೃಭಕ್ತಿ ಮತ್ತು ವಿಕ್ರಮದಿಂದ ಸಂತೋಷಗೊಂಡಿದ್ದೇವೆ. ವಿಭೋ! ಮಹಾದ್ಯುತಿ! ನಿನಗೆ ಮಂಗಳವಾಗಲಿ! ನೀನು ಏನನ್ನು ಬಯಸುತ್ತೀಯೋ ಆ ವರವನ್ನು ಕೇಳಿಕೋ!”

03081025a ಏವಮುಕ್ತಃ ಸ ರಾಜೇಂದ್ರ ರಾಮಃ ಪ್ರಹರತಾಂ ವರಃ।
03081025c ಅಬ್ರವೀತ್ಪ್ರಾಂಜಲಿರ್ವಾಕ್ಯಂ ಪಿತೄನ್ಸ ಗಗನೇ ಸ್ಥಿತಾನ್।।

ರಾಜೇಂದ್ರ! ಇದನ್ನು ಕೇಳಿದ ಆ ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಅಂಜಲೀಬದ್ಧನಾಗಿ ಗಗನದಲ್ಲಿ ನಿಂತಿದ್ದ ತನ್ನ ಪಿತೃಗಳಿಗೆ ಹೇಳಿದನು:

03081026a ಭವಂತೋ ಯದಿ ಮೇ ಪ್ರೀತಾ ಯದ್ಯನುಗ್ರಾಹ್ಯತಾ ಮಯಿ।
03081026c ಪಿತೃಪ್ರಸಾದಾದಿಚ್ಚೇಯಂ ತಪಸಾಪ್ಯಾಯನಂ ಪುನಃ।।

“ನನ್ನಿಂದ ಸಂತೋಷಗೊಂಡಿದ್ದರೆ ಮತ್ತು ನನ್ನ ಮೇಲೆ ನಿಮ್ಮ ಅನುಗ್ರಹವಿದೆ ಎಂದಾದರೆ ಪಿತೃಗಳ ಪ್ರಸಾದದಿಂದ ನನ್ನ ತಪಸ್ಸಿನ ಫಲವನ್ನು ಪುನಃ ಪಡೆಯಲು ಬಯಸುತ್ತೇನೆ.

03081027a ಯಚ್ಚ ರೋಷಾಭಿಭೂತೇನ ಕ್ಷತ್ರಮುತ್ಸಾದಿತಂ ಮಯಾ।
03081027c ತತಶ್ಚ ಪಾಪಾನ್ಮುಚ್ಛೇಯಂ ಯುಷ್ಮಾಕಂ ತೇಜಸಾ ಹ್ಯಹಂ।।
03081027e ಹ್ರದಾಶ್ಚ ತೀರ್ಥಭೂತಾ ಮೇ ಭವೇಯುರ್ಭುವಿ ವಿಶ್ರುತಾಃ।।

ನಿಮ್ಮ ತೇಜಸ್ಸಿನಿಂದ ನಾನು ರೋಷಕ್ಕೊಳಗಾಗಿ ಕ್ಷತ್ರಿಯರನ್ನು ನಾಶಪಡಿಸಿದ ಪಾಪದಿಂದ ನನಗೆ ಮುಕ್ತಿ ದೊರಕಲಿ ಮತ್ತು ನಾನು ನಿರ್ಮಿಸಿದ ಈ ಸರೋವರಗಳು ಭೂಮಿಯಲ್ಲಿ ತೀರ್ಥಗಳಾಗಿ ಪ್ರಸಿದ್ಧಿಹೊಂದಲಿ!”

03081028a ಏತಚ್ಛೃತ್ವಾ ಶುಭಂ ವಾಕ್ಯಂ ರಾಮಸ್ಯ ಪಿತರಸ್ತದಾ।
03081028c ಪ್ರತ್ಯೂಚುಃ ಪರಮಪ್ರೀತಾ ರಾಮಂ ಹರ್ಷಸಮನ್ವಿತಾಃ।।

ರಾಮನ ಈ ಶುಭ ಮಾತುಗಳನ್ನು ಕೇಳಿದ ಅವನ ಪಿತೃಗಳು ಪರಮಪ್ರೀತರಾಗಿ, ಹರ್ಷಸಮನ್ವಿತರಾಗಿ ರಾಮನಿಗೆ ಉತ್ತರಿಸಿದರು.

03081029a ತಪಸ್ತೇ ವರ್ಧತಾಂ ಭೂಯಃ ಪಿತೃಭಕ್ತ್ಯಾ ವಿಶೇಷತಃ।
03081029c ಯಚ್ಚ ರೋಷಾಭಿಭೂತೇನ ಕ್ಷತ್ರಮುತ್ಸಾದಿತಂ ತ್ವಯಾ।।
03081030a ತತಶ್ಚ ಪಾಪಾನ್ಮುಕ್ತಸ್ತ್ವಂ ಕರ್ಮಭಿಸ್ತೇ ಚ ಪಾತಿತಾಃ।

“ವಿಶೇಷವಾದ ಪಿತೃಭಕ್ತಿಯನ್ನುಳ್ಳ ನಿನ್ನ ತಪಸ್ಸು ವೃದ್ಧಿಯಾಗುತ್ತದೆ. ರೋಷಾಭಿಭೂತನಾಗಿ ನಿನ್ನಿಂದಾದ ಕ್ಷತ್ರಿಯರ ನಾಶದ ಪಾಪದಿಂದಲೂ ನೀನು ಮುಕ್ತನಾಗಿರುವೆ. ಅವರದೇ ಕರ್ಮದಿಂದ ಅವರು ನಾಶಗೊಂಡರು.

03081030c ಹ್ರದಾಶ್ಚ ತವ ತೀರ್ಥತ್ವಂ ಗಮಿಷ್ಯಂತಿ ನ ಸಂಶಯಃ।।
03081031a ಹ್ರದೇಷ್ವೇತೇಷು ಯಃ ಸ್ನಾತ್ವಾ ಪಿತೄನ್ಸಂತರ್ಪಯಿಷ್ಯತಿ।
03081031c ಪಿತರಸ್ತಸ್ಯ ವೈ ಪ್ರೀತಾ ದಾಸ್ಯಂತಿ ಭುವಿ ದುರ್ಲಭಂ।।
03081031e ಈಪ್ಸಿತಂ ಮನಸಃ ಕಾಮಂ ಸ್ವರ್ಗಲೋಕಂ ಚ ಶಾಶ್ವತಂ।।

ನಿನ್ನ ಸರೋವರಗಳೂ ತೀರ್ಥಗಳಾಗುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾರು ಈ ಸರೋವರಗಳಲ್ಲಿ ಸ್ನಾನಮಾಡಿ ಪಿತೃಗಳಿಗೆ ತರ್ಪಣ ನೀಡುತ್ತಾನೋ ಅವನ ಪಿತೃಗಳು ಸಂತೋಷಗೊಂಡು ಭೂಮಿಯಲ್ಲಿ ಅದು ಎಷ್ಟೇ ದುರ್ಲಭವಾಗಿದ್ದರೂ, ಅವನ ಮನಸ್ಸಿನ ಬಯಕೆಯನ್ನು, ಮತ್ತು ಶಾಶ್ವತ ಸ್ವರ್ಗಲೋಕವನ್ನು ನೀಡುತ್ತಾರೆ.”

03081032a ಏವಂ ದತ್ತ್ವಾ ವರಾನ್ರಾಜನ್ರಾಮಸ್ಯ ಪಿತರಸ್ತದಾ।
03081032c ಆಮಂತ್ರ್ಯ ಭಾರ್ಗವಂ ಪ್ರೀತಾಸ್ತತ್ರೈವಾಂತರ್ದಧುಸ್ತದಾ।।

ರಾಜನ್! ಹೀಗೆ ವರಗಳನ್ನಿತ್ತು ರಾಮನ ಪಿತೃಗಳು ಸಂತೋಷದಿಂದ ಭಾರ್ಗವನನ್ನು ಬೀಳ್ಕೊಂಡು ಅಲ್ಲಿಯೇ ಅಂತರ್ಧಾನರಾದರು.

03081033a ಏವಂ ರಾಮಹ್ರದಾಃ ಪುಣ್ಯಾ ಭಾರ್ಗವಸ್ಯ ಮಹಾತ್ಮನಃ।
03081033c ಸ್ನಾತ್ವಾ ಹ್ರದೇಷು ರಾಮಸ್ಯ ಬ್ರಹ್ಮಚಾರೀ ಶುಭವ್ರತಃ।।
03081033e ರಾಮಮಭ್ಯರ್ಚ್ಯ ರಾಜೇಂದ್ರ ಲಭೇದ್ಬಹು ಸುವರ್ಣಕಂ।।

ಈ ರೀತಿ ಮಹಾತ್ಮ ಭಾರ್ಗವ ರಾಮನ ಸರೋವರಗಳು ಪುಣ್ಯಕರವಾದವು. ರಾಜನ್! ಮಂಗಳವ್ರತ ಬ್ರಹ್ಮಚಾರಿಯು ರಾಮನ ಸರೋವರಗಳಲ್ಲಿ ಸ್ನಾನಮಾಡಿ ರಾಮನನ್ನು ಅರ್ಚಿಸುವುದರಿಂದ ಬಹಳಷ್ಟು ಸಂಪತ್ತನ್ನು ಪಡೆಯುತ್ತಾನೆ.

03081034a ವಂಶಮೂಲಕಮಾಸಾದ್ಯ ತೀರ್ಥಸೇವೀ ಕುರೂದ್ವಹ।
03081034c ಸ್ವವಂಶಮುದ್ಧರೇದ್ರಾಜನ್ಸ್ನಾತ್ವಾ ವೈ ವಂಶಮೂಲಕೇ।।

ಕುರೂದ್ಧಹ! ರಾಜನ್! ವಂಶಮೂಲವನ್ನು ತಲುಪಿ ತೀರ್ಥಯಾತ್ರಿಯು ವಂಶಮೂಲದಲ್ಲಿ ಸ್ನಾನಮಾಡಿ ತನ್ನ ವಂಶವನ್ನೇ ಉದ್ಧರಿಸುತ್ತಾನೆ.

03081035a ಕಾಯಶೋಧನಮಾಸಾದ್ಯ ತೀರ್ಥಂ ಭರತಸತ್ತಮ।
03081035c ಶರೀರಶುದ್ಧಿಃ ಸ್ನಾತಸ್ಯ ತಸ್ಮಿಂಸ್ತೀರ್ಥೇ ನ ಸಂಶಯಃ।।
03081035e ಶುದ್ಧದೇಹಶ್ಚ ಸಮ್ಯಾತಿ ಶುಭಾಽಲ್ಲೋಕಾನನುತ್ತಮಾನ್।।

ಭರತಸತ್ತಮ! ಕಾಯಶೋಧನ ತೀರ್ಥಕ್ಕೆ ಹೋಗಿ ಆ ತೀರ್ಥದಲ್ಲಿ ಸ್ನಾನಮಾಡುವುದರಿಂದ ಶರೀರಶುದ್ಧಿಯನ್ನು ಹೊಂದಿ, ಆ ಶುದ್ಧದೇಹದಿಂದ ನಿಸ್ಸಂಶಯವಾಗಿಯೂ ಅನುತ್ತಮ ಶುಭಲೋಕಗಳನ್ನು ಸೇರುತ್ತಾನೆ.

03081036a ತತೋ ಗಚ್ಚೇತ ರಾಜೇಂದ್ರ ತೀರ್ಥಂ ತ್ರೈಲೋಕ್ಯವಿಶ್ರುತಂ।
03081036c ಲೋಕಾ ಯತ್ರೋದ್ಧೃತಾಃ ಪೂರ್ವಂ ವಿಷ್ಣುನಾ ಪ್ರಭವಿಷ್ಣುನಾ।।

ರಾಜೇಂದ್ರ! ಅಲ್ಲಿಂದ ಮೂರುಲೋಕಗಳಲ್ಲಿ ವಿಶ್ರುತವಾದ, ಹಿಂದೆ ಎಲ್ಲಿ ಪ್ರಭುವಿಷ್ಣುವು ಲೋಕಗಳನ್ನು ಉದ್ಧರಿಸಿದ್ದನೋ ಆ ವಿಷ್ಣು ತೀರ್ಥಕ್ಕೆ ಹೋಗಬೇಕು.

03081037a ಲೋಕೋದ್ಧಾರಂ ಸಮಾಸಾದ್ಯ ತೀರ್ಥಂ ತ್ರೈಲೋಕ್ಯವಿಶ್ರುತಂ।
03081037c ಸ್ನಾತ್ವಾ ತೀರ್ಥವರೇ ರಾಜಽಲ್ಲೋಕಾನುದ್ಧರತೇ ಸ್ವಕಾನ್।।
03081037e ಶ್ರೀತೀರ್ಥಂ ಚ ಸಮಾಸಾದ್ಯ ವಿಂದತೇ ಶ್ರಿಯಮುತ್ತಮಾಂ।।

ರಾಜನ್! ಮೂರುಲೋಕಗಳಲ್ಲಿ ವಿಶ್ರುತವಾದ ಲೋಕೋದ್ಧಾರ ತೀರ್ಥವನ್ನು ತಲುಪಿ ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ತನ್ನ ಲೋಕಗಳನ್ನು ಉದ್ಧರಿಸಿಕೊಳ್ಳಬಹುದು. ಮತ್ತು ಶ್ರೀ ತೀರ್ಥಕ್ಕೆ ಹೋದರೆ ಉತ್ತಮ ಸಂಪತ್ತನ್ನು ಪಡೆಯಬಹುದು.

03081038a ಕಪಿಲಾತೀರ್ಥಮಾಸಾದ್ಯ ಬ್ರಹ್ಮಚಾರೀ ಸಮಾಹಿತಃ।
03081038c ತತ್ರ ಸ್ನಾತ್ವಾರ್ಚಯಿತ್ವಾ ಚ ದೈವತಾನಿ ಪಿತೄಂಸ್ತಥಾ।।
03081038e ಕಪಿಲಾನಾಂ ಸಹಸ್ರಸ್ಯ ಫಲಂ ವಿಂದತಿ ಮಾನವಃ।।

ಕಪಿಲಾ ತೀರ್ಥಕ್ಕೆ ಹೋಗಿ ಅಲ್ಲಿ ಬ್ರಹ್ಮಚಾರಿಯಾಗಿದ್ದು ಸ್ನಾನಮಾಡಿ ದೇವತೆಗಳನ್ನೂ ಪಿತೃಗಳನ್ನು ಅರ್ಚಿಸಿದ ಮಾನವನು ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಹೊಂದುತ್ತಾನೆ.

03081039a ಸೂರ್ಯತೀರ್ಥಂ ಸಮಾಸಾದ್ಯ ಸ್ನಾತ್ವಾ ನಿಯತಮಾನಸಃ।
03081039c ಅರ್ಚಯಿತ್ವಾ ಪಿತೄನ್ದೇವಾನುಪವಾಸಪರಾಯಣಃ।।
03081039e ಅಗ್ನಿಷ್ಟೋಮಮವಾಪ್ನೋತಿ ಸೂರ್ಯಲೋಕಂ ಚ ಗಚ್ಚತಿ।।

ಸೂರ್ಯತೀರ್ಥಕ್ಕೆ ಹೋಗಿ ಅಲ್ಲಿ ನಿಯತಮಾನಸನಾಗಿ, ಉಪವಾಸಪರಾಯಣನಾಗಿದ್ದು ಪಿತೃ-ದೇವತೆಗಳನ್ನು ಅರ್ಚಿಸಿದರೆ ಅಗ್ನಿಷ್ಟೋಮಯಾಗದ ಫಲವನ್ನು ಪಡೆದು ಸೂರ್ಯಲೋಕಕ್ಕೆ ಹೋಗುತ್ತಾನೆ.

03081040a ಗವಾಂಭವನಮಾಸಾದ್ಯ ತೀರ್ಥಸೇವೀ ಯಥಾಕ್ರಮಂ।
03081040c ತತ್ರಾಭಿಷೇಕಂ ಕುರ್ವಾಣೋ ಗೋಸಹಸ್ರಫಲಂ ಲಭೇತ್।।

ಗೋಭವನಕ್ಕೆ ಹೋಗಿ ಯಥಾಕ್ರಮವಾಗಿ ಅಲ್ಲಿ ಸ್ನಾನಮಾಡುವ ತೀರ್ಥಸೇವಿಗೆ ಸಹಸ್ರ ಗೋವುಗಳ ದಾನದ ಫಲವು ದೊರೆಯುತ್ತದೆ.

03081041a ಶಂಖಿನೀಂ ತತ್ರ ಆಸಾದ್ಯ ತೀರ್ಥಸೇವೀ ಕುರೂದ್ವಹ।
03081041c ದೇವ್ಯಾಸ್ತೀರ್ಥೇ ನರಃ ಸ್ನಾತ್ವಾ ಲಭತೇ ರೂಪಮುತ್ತಮಂ।।

ಕುರೂದ್ವಹ! ತೀರ್ಥಸೇವಿ ನರನು ಶಂಖಿನಿಯನ್ನು ತಲುಪಿ ಅಲ್ಲಿ ದೇವಿಯ ತೀರ್ಥದಲ್ಲಿ ಸ್ನಾನಮಾಡಿದರೆ ಉತ್ತಮ ರೂಪವನ್ನು ಪಡೆಯುತ್ತಾನೆ.

03081042a ತತೋ ಗಚ್ಚೇತ ರಾಜೇಂದ್ರ ದ್ವಾರಪಾಲಮರಂತುಕಂ।
03081042c ತಸ್ಯ ತೀರ್ಥಂ ಸರಸ್ವತ್ಯಾಂ ಯಕ್ಷೇಂದ್ರಸ್ಯ ಮಹಾತ್ಮನಃ।।
03081042e ತತ್ರ ಸ್ನಾತ್ವಾ ನರೋ ರಾಜನ್ನಗ್ನಿಷ್ಟೋಮಫಲಂ ಲಭೇತ್।।

ರಾಜೇಂದ್ರ! ಅಲ್ಲಿಂದ ದ್ವಾರಪಾಲ ಅರಂತುಕಕ್ಕೆ ಹೋಗಬೇಕು. ರಾಜನ್! ಅಲ್ಲಿ ಸರಸ್ವತಿಯಲ್ಲಿ ಮಹಾತ್ಮ ಯಕ್ಷೇಂದ್ರನ ತೀರ್ಥದಲ್ಲಿ ಸ್ನಾನಮಾಡಿದ ನರನು ಅಗ್ನಿಷ್ಟೋಮ ಯಾಗದ ಫಲವನ್ನು ಪಡೆಯುತ್ತಾನೆ.

03081043a ತತೋ ಗಚ್ಚೇತ ಧರ್ಮಜ್ಞ ಬ್ರಹ್ಮಾವರ್ತಂ ನರಾಧಿಪ।
03081043c ಬ್ರಹ್ಮಾವರ್ತೇ ನರಃ ಸ್ನಾತ್ವಾ ಬ್ರಹ್ಮಲೋಕಮವಾಪ್ನುಯಾತ್।।

ಧರ್ಮಜ್ಞ! ನರಾಧಿಪ! ಅಲ್ಲಿಂದ ಬ್ರಹ್ಮಾವರ್ತಕ್ಕೆ ಹೋಗಬೇಕು. ಬ್ರಹ್ಮಾವರ್ತದಲ್ಲಿ ಸ್ನಾನಮಾಡಿ ನರನು ಬ್ರಹ್ಮಲೋಕವನ್ನು ಪಡೆಯುತ್ತಾನೆ.

03081044a ತತೋ ಗಚ್ಚೇತ ಧರ್ಮಜ್ಞ ಸುತೀರ್ಥಕಮನುತ್ತಮಂ।
03081044c ಯತ್ರ ಸನ್ನಿಹಿತಾ ನಿತ್ಯಂ ಪಿತರೋ ದೈವತೈಃ ಸಹ।।

ಧರ್ಮಜ್ಞ! ಅಲ್ಲಿಂದ ದೇವತೆಗಳೊಂದಿಗೆ ಪಿತೃಗಳು ನಿತ್ಯವೂ ಸನ್ನಿಹಿತರಾಗಿರುವ ಅನುತ್ತಮ ಸುತೀರ್ಥಕ್ಕೆ ಹೋಗಬೇಕು.

03081045a ತತ್ರಾಭಿಷೇಕಂ ಕುರ್ವೀತ ಪಿತೃದೇವಾರ್ಚನೇ ರತಃ।
03081045c ಅಶ್ವಮೇಧಮವಾಪ್ನೋತಿ ಪಿತೃಲೋಕಂ ಚ ಗಚ್ಚತಿ।।

ಅಲ್ಲಿ ಸ್ನಾನಮಾಡಿ ಪಿತೃ-ದೇವತೆಗಳ ಅರ್ಚನೆಯಲ್ಲಿ ನಿರತನಾದವನು ಅಶ್ವಮೇಧಯಾಗದ ಫಲವನ್ನು ಪಡೆದು ಪಿತೃಲೋಕವನ್ನು ಸೇರುತ್ತಾನೆ.

03081046a ತತೋಽಂಬುವಶ್ಯಂ ಧರ್ಮಜ್ಞ ಸಮಾಸಾದ್ಯ ಯಥಾಕ್ರಮಂ।
03081046c ಕೋಶೇಶ್ವರಸ್ಯ ತೀರ್ಥೇಷು ಸ್ನಾತ್ವಾ ಭರತಸತ್ತಮ।।
03081046e ಸರ್ವವ್ಯಾಧಿವಿನಿರ್ಮುಕ್ತೋ ಬ್ರಹ್ಮಲೋಕೇ ಮಹೀಯತೇ।।

ಧರ್ಮಜ್ಞ! ಭರತಸತ್ತಮ! ಅಲ್ಲಿಂದ ಅಂಬುವಶ್ಯವನ್ನು ತಲುಪಿ ಯಥಾಕ್ರಮವಾಗಿ ಕೋಶೇಶ್ವರ (ಕುಬೇರ) ನ ತೀರ್ಥದಲ್ಲಿ ಸ್ನಾನಮಾಡಿದವನು ಸರ್ವವ್ಯಾಧಿಗಳಿಂದ ವಿಮುಕ್ತನಾಗಿ ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.

03081047a ಮಾತೃತೀರ್ಥಂ ಚ ತತ್ರೈವ ಯತ್ರ ಸ್ನಾತಸ್ಯ ಭಾರತ।
03081047c ಪ್ರಜಾ ವಿವರ್ಧತೇ ರಾಜನ್ನನಂತಾಂ ಚಾಶ್ನುತೇ ಶ್ರಿಯಂ।।

ಭಾರತ! ರಾಜನ್! ಅಲ್ಲಿಯೇ ಮಾತೃತೀರ್ಥದಲ್ಲಿ ಸ್ನಾನಮಾಡಿದವನ ವಂಶವು ವೃದ್ಧಿಯಾಗುವುದು ಮತ್ತು ಕೊನೆಯಿಲ್ಲದ ಅಭಿವೃದ್ಧಿಯನ್ನು ಹೊಂದುತ್ತಾನೆ.

03081048a ತತಃ ಶೀತವನಂ ಗಚ್ಚೇನ್ನಿಯತೋ ನಿಯತಾಶನಃ।
03081048c ತೀರ್ಥಂ ತತ್ರ ಮಹಾರಾಜ ಮಹದನ್ಯತ್ರ ದುರ್ಲಭಂ।।
03081049a ಪುನಾತಿ ದರ್ಶನಾದೇವ ದಂಡೇನೈಕಂ ನರಾಧಿಪ।
03081049c ಕೇಶಾನಭ್ಯುಕ್ಷ್ಯ ವೈ ತಸ್ಮಿನ್ಪೂತೋ ಭವತಿ ಭಾರತ।।

ಅನಂತರ ನಿಯತನಾಗಿ, ನಿಯತಾಹಾರಿಯಾಗಿ ಶೀತವನಕ್ಕೆ ಹೋಗಬೇಕು. ಮಹಾರಾಜ! ನರಾಧಿಪ! ಬೇರೆಲ್ಲಿಯೂ ದೊರೆಯದ ಮಹಾ ಪುಣ್ಯವು ಅಲ್ಲಿಯ ತೀರ್ಥದ ದರ್ಶನದಿಂದಲೇ ದೊರೆಯುತ್ತದೆ. ಭಾರತ! ಕೂದಲಿಗೆ ಪ್ರೋಕ್ಷಣೆ ಮಾಡಿಕೊಂಡರೂ ಕೂಡ ಆ ತೀರ್ಥದಿಂದ ಪುಣ್ಯ ದೊರೆಯುತ್ತದೆ.

03081050a ತೀರ್ಥಂ ತತ್ರ ಮಹಾರಾಜ ಶ್ವಾನಲೋಮಾಪಹಂ ಸ್ಮೃತಂ।
03081050c ಯತ್ರ ವಿಪ್ರಾ ನರವ್ಯಾಘ್ರ ವಿದ್ವಾಂಸಸ್ತೀರ್ಥತತ್ಪರಾಃ।।

ಮಹಾರಾಜ! ಆ ತೀರ್ಥದಲ್ಲಿ ಶ್ವಾನಲೋಮಾಪಹ ಎನ್ನುವ ಸ್ಥಳವಿದೆ. ನರವ್ಯಾಘ್ರ! ಅಲ್ಲಿ ವಿದ್ವಾಂಸ ವಿಪ್ರನು ತೀರ್ಥತತ್ಪರನಾಗಿದ್ದಾನೆ.

03081051a ಶ್ವಾನಲೋಮಾಪನಯನೇ ತೀರ್ಥೇ ಭರತಸತ್ತಮ।
03081051c ಪ್ರಾಣಾಯಾಮೈರ್ನಿರ್ಹರಂತಿ ಶ್ವಲೋಮಾನಿ ದ್ವಿಜೋತ್ತಮಾಃ।।

ಭರತಸತ್ತಮ! ಶ್ವಾನಲೋಮಾಪನ ತೀರ್ಥದಲ್ಲಿ ದ್ವಿಜೋತ್ತಮರು ಪ್ರಾಣಾಯಾಮದ ಮೂಲಕ ನಾಯಿಯ ರೋಮವನ್ನು ಕೀಳುತ್ತಾರೆ.

03081052a ಪೂತಾತ್ಮಾನಶ್ಚ ರಾಜೇಂದ್ರ ಪ್ರಯಾಂತಿ ಪರಮಾಂ ಗತಿಂ।
03081052c ದಶಾಶ್ವಮೇಧಿಕಂ ಚೈವ ತಸ್ಮಿಂಸ್ತೀರ್ಥೇ ಮಹೀಪತೇ।।
03081052e ತತ್ರ ಸ್ನಾತ್ವಾ ನರವ್ಯಾಘ್ರ ಗಚ್ಚೇತ ಪರಮಾಂ ಗತಿಂ।।

ರಾಜೇಂದ್ರ! ಪುಣ್ಯವಂತರು ಪರಮ ಗತಿಯನ್ನು ಪಡೆಯುತ್ತಾರೆ. ಮಹೀಪತೇ! ನರವ್ಯಾಘ್ರ! ಆ ತೀರ್ಥದಲ್ಲಿ ಸ್ನಾನಮಾಡಿದವರು ಹತ್ತು ಅಶ್ವಮೇಧಯಾಗಗಳ ಫಲವನ್ನು ಪಡೆದು ಪರಮಗತಿಯನು ಪಡೆಯುತ್ತಾರೆ.

03081053a ತತೋ ಗಚ್ಚೇತ ರಾಜೇಂದ್ರ ಮಾನುಷಂ ಲೋಕವಿಶ್ರುತಂ।
03081053c ಯತ್ರ ಕೃಷ್ಣಮೃಗಾ ರಾಜನ್ವ್ಯಾಧೇನ ಪರಿಪೀಡಿತಾಃ।।
03081053e ಅವಗಾಹ್ಯ ತಸ್ಮಿನ್ಸರಸಿ ಮಾನುಷತ್ವಮುಪಾಗತಾಃ।।

ರಾಜೇಂದ್ರ! ಅಲ್ಲಿಂದ ಲೋಕವಿಶ್ರುತವಾದ ಮಾನುಷಕ್ಕೆ ಹೋಗಬೇಕು. ರಾಜನ್! ಆ ಸರೋವರದಲ್ಲಿ ಓರ್ವ ಬೇಟೆಗಾರನಿಂದ ಪರಿಪೀಡಿತವಾದ ಕೃಷ್ಣಮೃಗವೊಂದು ಹಾರಿ ಬೀಳಲು ಅದು ಮನುಷ್ಯರೂಪವನ್ನು ತಾಳಿತು.

03081054a ತಸ್ಮಿಂಸ್ತೀರ್ಥೇ ನರಃ ಸ್ನಾತ್ವಾ ಬ್ರಹ್ಮಚಾರೀ ಜಿತೇಂದ್ರಿಯಃ।
03081054c ಸರ್ವಪಾಪವಿಶುದ್ಧಾತ್ಮಾ ಸ್ವರ್ಗಲೋಕೇ ಮಹೀಯತೇ।।

ಆ ತೀರ್ಥದಲ್ಲಿ ಸ್ನಾನಮಾಡಿದ ಬ್ರಹ್ಮಚಾರಿ ಜಿತೇಂದ್ರಿಯ ನರನು ಸರ್ವಪಾಪಗಳನ್ನೂ ತೊಳೆದು ವಿಶುದ್ಧಾತ್ಮನಾಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.

03081055a ಮಾನುಷಸ್ಯ ತು ಪೂರ್ವೇಣ ಕ್ರೋಶಮಾತ್ರೇ ಮಹೀಪತೇ।
03081055c ಆಪಗಾ ನಾಮ ವಿಖ್ಯಾತಾ ನದೀ ಸಿದ್ಧನಿಷೇವಿತಾ।।
03081056a ಶ್ಯಾಮಾಕಭೋಜನಂ ತತ್ರ ಯಃ ಪ್ರಯಚ್ಚತಿ ಮಾನವಃ।
03081056c ದೇವಾನ್ಪಿತೄಂಶ್ಚ ಉದ್ದಿಶ್ಯ ತಸ್ಯ ಧರ್ಮಫಲಂ ಮಹತ್।।

ಮಹೀಪತೇ! ಮಾನುಷದ ಪೂರ್ವಕ್ಕೆ ಕ್ರೋಶಮಾತ್ರದಲ್ಲಿ ಆಪಗಾ ಎಂಬ ಹೆಸರಿನ ವಿಖ್ಯಾತ ನದಿಯು ಸಿದ್ಧರಿಂದ ಸೇವಿತಗೊಂಡಿದೆ. ಅಲ್ಲಿ ಧಾನ್ಯದ ಭೋಜನವನ್ನು ದೇವತೆಗಳಿಗೆ ಮತ್ತು ಪಿತೃಗಳಿಗೆ ನೀಡುವ ಮಾನವನಿಗೆ ಮಹಾ ಧರ್ಮಫಲವು ದೊರೆಯುತ್ತದೆ.

03081056e ಏಕಸ್ಮಿನ್ಭೋಜಿತೇ ವಿಪ್ರೇ ಕೋಟಿರ್ಭವತಿ ಭೋಜಿತಾ।।
03081057a ತತ್ರ ಸ್ನಾತ್ವಾರ್ಚಯಿತ್ವಾ ಚ ದೈವತಾನಿ ಪಿತೄಂಸ್ತಥಾ।
03081057c ಉಷಿತ್ವಾ ರಜನೀಮೇಕಾಮಗ್ನಿಷ್ಟೋಮಫಲಂ ಲಭೇತ್।।

ಓರ್ವನೇ ವಿಪ್ರನಿಗೆ ಭೋಜನವನ್ನಿತ್ತರೂ ಅದು ಕೋಟಿ ವಿಪ್ರರಿಗೆ ಭೋಜನ ನೀಡಿದಂತಾಗುತ್ತದೆ. ಅಲ್ಲಿ ಸ್ನಾನಮಾಡಿ ದೇವತೆಗಳನ್ನೂ ಪಿತೃಗಳನ್ನೂ ಅರ್ಚಿಸಿ, ಒಂದು ರಾತ್ರಿಯನ್ನು ಅಲ್ಲಿಯೇ ಕಳೆದವನಿಗೆ ಅಗ್ನಿಷ್ಟೋಮಯಾಗದ ಫಲವು ದೊರೆಯುತ್ತದೆ.

03081058a ತತೋ ಗಚ್ಚೇತ ರಾಜೇಂದ್ರ ಬ್ರಹ್ಮಣಃ ಸ್ಥಾನಮುತ್ತಮಂ।
03081058c ಬ್ರಹ್ಮೋದುಂಬರಮಿತ್ಯೇವ ಪ್ರಕಾಶಂ ಭುವಿ ಭಾರತ।।

ರಾಜೇಂದ್ರ! ಭಾರತ! ಅಲ್ಲಿಂದ ಬ್ರಹ್ಮೋದುಂಬರ ಎಂದು ಭೂಮಿಯ ಮೇಲೆ ಪ್ರಸಿದ್ಧವಾದ ಬ್ರಹ್ಮನ ಉತ್ತಮ ಸ್ಥಾನಕ್ಕೆ ಹೋಗಬೇಕು.

03081059a ತತ್ರ ಸಪ್ತರ್ಷಿಕುಂಡೇಷು ಸ್ನಾತಸ್ಯ ಕುರುಪುಂಗವ।
03081059c ಕೇದಾರೇ ಚೈವ ರಾಜೇಂದ್ರ ಕಪಿಷ್ಠಲಮಹಾತ್ಮನಃ।।
03081060a ಬ್ರಹ್ಮಾಣಮಭಿಗಮ್ಯಾಥ ಶುಚಿಃ ಪ್ರಯತಮಾನಸಃ।
03081060c ಸರ್ವಪಾಪವಿಶುದ್ಧಾತ್ಮಾ ಬ್ರಹ್ಮಲೋಕಂ ಪ್ರಪದ್ಯತೇ।।

ಕುರುಪುಂಗವ! ರಾಜೇಂದ್ರ! ಅಲ್ಲಿ ಸಪ್ತರ್ಷಿಕುಂಡದಲ್ಲಿ ಮತ್ತು ಮಹಾತ್ಮ ಕಪಿಷ್ಠಲದ ಕೇದಾರದಲ್ಲಿ ಸ್ನಾನಮಾಡಿದರೆ, ಶುಚಿಯಾಗಿ ಪ್ರಯತಮಾನಸನಾಗಿ ಬ್ರಹ್ಮನಿಂದ ಆಕರ್ಶಿತನಾಗಿ ಸರ್ವಪಾಪಗಳನ್ನೂ ಕಳೆದುಕೊಂಡು ವಿಶುದ್ಧಾತ್ಮನಾಗಿ ಬ್ರಹ್ಮಲೋಕವನ್ನು ಸೇರುತ್ತಾರೆ.

03081061a ಕಪಿಷ್ಠಲಸ್ಯ ಕೇದಾರಂ ಸಮಾಸಾದ್ಯ ಸುದುರ್ಲಭಂ।
03081061c ಅಂತರ್ಧಾನಮವಾಪ್ನೋತಿ ತಪಸಾ ದಗ್ಧಕಿಲ್ಬಿಷಃ।।

ನೋಡಲು ಕಷ್ಟವಾದ ಕಪಿಸ್ಥಲದ ಕೇದಾರಕ್ಕೆ ಹೋದರೆ ತಪಸ್ಸಿನಿಂದ ಪಾಪಗಳು ಸುಟ್ಟು ಭಸ್ಮವಾಗಿ ಅಂತರ್ಧಾನಫಲವನ್ನು ಪಡೆಯುತ್ತಾನೆ.

03081062a ತತೋ ಗಚ್ಚೇತ ರಾಜೇಂದ್ರ ಸರಕಂ ಲೋಕವಿಶ್ರುತಂ।
03081062c ಕೃಷ್ಣಪಕ್ಷೇ ಚತುರ್ದಶ್ಯಾಮಭಿಗಮ್ಯ ವೃಷಧ್ವಜಂ।
03081062e ಲಭತೇ ಸರ್ವಕಾಮಾನ್ ಹಿ ಸ್ವರ್ಗಲೋಕಂ ಚ ಗಚ್ಚತಿ।।

ರಾಜೇಂದ್ರ! ಅಲ್ಲಿಂದ ಲೋಕವಿಶ್ರುತವಾದ ಸರಕಕ್ಕೆ ಹೋಗಬೇಕು. ಅಲ್ಲಿ ಕೃಷ್ಣಪಕ್ಷದ ಚತುರ್ದಶಿಯಂದು ವೃಷಧ್ವಜನನ್ನು ಪೂಜಿಸಿದರೆ ಸರ್ವಕಾಮಗಳು ಪೂರೈಸುತ್ತವೆ ಮತ್ತು ಸ್ವರ್ಗಲೋಕವು ದೊರೆಯುತ್ತದೆ.

03081063a ತಿಸ್ರಃ ಕೋಟ್ಯಸ್ತು ತೀರ್ಥಾನಾಂ ಸರಕೇ ಕುರುನಂದನ।
03081063c ರುದ್ರಕೋಟಿಸ್ತಥಾ ಕೂಪೇ ಹ್ರದೇಷು ಚ ಮಹೀಪತೇ।।

ಕುರುನಂದನ! ಸರಕದಲ್ಲಿ ಮೂರು ಕೋಟಿ ತೀರ್ಥಗಳಿವೆ ಮತ್ತು ಮಹೀಪತೇ! ಅಲ್ಲಿಯ ಬಾವಿ-ಸರೋವರಗಳಲ್ಲಿ ಕೋಟಿರುದ್ರರಿದ್ದಾರೆ.

03081063e ಇಲಾಸ್ಪದಂ ಚ ತತ್ರೈವ ತೀರ್ಥಂ ಭರತಸತ್ತಮ।।
03081064a ತತ್ರ ಸ್ನಾತ್ವಾರ್ಚಯಿತ್ವಾ ಚ ಪಿತೄನ್ದೇವಾಂಶ್ಚ ಭಾರತ।
03081064c ನ ದುರ್ಗತಿಮವಾಪ್ನೋತಿ ವಾಜಪೇಯಂ ಚ ವಿಂದತಿ।।

ಭರತಸತ್ತಮ! ಅಲ್ಲಿಯೇ ಇಲಾಸ್ಪದ ತೀರ್ಥವಿದೆ. ಭಾರತ! ಅಲ್ಲಿ ಸ್ನಾನಮಾಡಿ ಪಿತೃ-ದೇವತೆಗಳನ್ನು ಪೂಜಿಸಿದರೆ ದುರ್ಗತಿಯನ್ನು ಹೊಂದದೇ ವಾಜಪೇಯದ ಫಲವನ್ನು ಹೊಂದುತ್ತಾನೆ.

03081065a ಕಿಂದಾನೇ ಚ ನರಃ ಸ್ನಾತ್ವಾ ಕಿಂಜಪ್ಯೇ ಚ ಮಹೀಪತೇ।
03081065c ಅಪ್ರಮೇಯಮವಾಪ್ನೋತಿ ದಾನಂ ಜಪ್ಯಂ ಚ ಭಾರತ।।
03081066a ಕಲಶ್ಯಾಂ ಚಾಪ್ಯುಪಸ್ಪೃಶ್ಯ ಶ್ರದ್ದಧಾನೋ ಜಿತೇಂದ್ರಿಯಃ।
03081066c ಅಗ್ನಿಷ್ಟೋಮಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।।

ಮಹೀಪತೇ! ಭಾರತ ! ಕಿಂದಾನ ಮತ್ತು ಕಿಂಜಪ್ಯಗಳಲ್ಲಿ ಸ್ನಾನಮಾಡಿದ ನರನು ಅಮಿತ ದಾನ ಮತ್ತು ಜಪಗಳ ಫಲವನ್ನು ಹೊಂದುತ್ತಾನೆ. ಶ್ರದ್ಧದಾನನಾಗಿ ಜಿತೇಂದ್ರಿಯನಾಗಿ ಕಲಶದಲ್ಲಿ ಸ್ನಾನಮಾಡಿದ ಮಾನವನಿಗೆ ಅಗ್ನಿಷ್ಟೋಮಯಾಗದ ಫಲವು ದೊರೆಯುತ್ತದೆ.

03081067a ಸರಕಸ್ಯ ತು ಪೂರ್ವೇಣ ನಾರದಸ್ಯ ಮಹಾತ್ಮನಃ।
03081067c ತೀರ್ಥಂ ಕುರುವರಶ್ರೇಷ್ಠ ಅನಾಜನ್ಮೇತಿ ವಿಶ್ರುತಂ।।

ಕುರುವರಶ್ರೇಷ್ಠ! ಸರಕದ ಪೂರ್ವದಲ್ಲಿ ಅನಾಜನ್ಮ ಎಂದು ವಿಶ್ರುತವಾದ ಮಹಾತ್ಮ ನಾರದನ ತೀರ್ಥವಿದೆ.

03081068a ತತ್ರ ತೀರ್ಥೇ ನರಃ ಸ್ನಾತ್ವಾ ಪ್ರಾಣಾಂಶ್ಚೋತ್ಸೃಜ್ಯ ಭಾರತ।
03081068c ನಾರದೇನಾಭ್ಯನುಜ್ಞಾತೋ ಲೋಕಾನ್ಪ್ರಾಪ್ನೋತಿ ದುರ್ಲಭಾನ್।।

ಭಾರತ! ಆ ತೀರ್ಥದಲ್ಲಿ ಸ್ನಾನಮಾಡಿ ಪ್ರಾಣತ್ಯಾಗಮಾಡಿದವನು ನಾರದನ ಅನುಜ್ಞೆಯಂತೆ ದುರ್ಲಭ ಲೋಕಗಳನ್ನು ಪಡೆಯುತ್ತಾನೆ.

03081069a ಶುಕ್ಲಪಕ್ಷೇ ದಶಮ್ಯಾಂ ತು ಪುಂಡರೀಕಂ ಸಮಾವಿಶೇತ್।
03081069c ತತ್ರ ಸ್ನಾತ್ವಾ ನರೋ ರಾಜನ್ಪುಂಡರೀಕಫಲಂ ಲಭೇತ್।।

ಶುಕ್ಲಪಕ್ಷದ ದಶಮಿಯಂದು ಪುಂಡರೀಕವನ್ನು ತಲುಪಬೇಕು. ರಾಜನ್! ಅಲ್ಲಿ ಸ್ನಾನಮಾಡಿದ ನರನಿಗೆ ಪುಂಡರೀಕದ ಫಲವು ದೊರೆಯುತ್ತದೆ.

03081070a ತತಸ್ತ್ರಿವಿಷ್ಟಪಂ ಗಚ್ಚೇತ್ತ್ರಿಷು ಲೋಕೇಷು ವಿಶ್ರುತಂ।
03081070c ತತ್ರ ವೈತರಣೀ ಪುಣ್ಯಾ ನದೀ ಪಾಪಪ್ರಮೋಚನೀ।।

ಅಲ್ಲಿಂದ ಮೂರು ಲೋಕಗಳಲ್ಲಿ ವಿಶ್ರುತವಾದ ತ್ರಿವಿಷ್ಟಪಕ್ಕೆ ಹೋಗಬೇಕು. ಅಲ್ಲಿ ಪಾಪಪ್ರಮೋಚನೀ ಪುಣ್ಯ ನದಿ ವೈತರಣಿಯಿದೆ.

03081071a ತತ್ರ ಸ್ನಾತ್ವಾರ್ಚಯಿತ್ವಾ ಚ ಶೂಲಪಾಣಿಂ ವೃಷಧ್ವಜಂ।
03081071c ಸರ್ವಪಾಪವಿಶುದ್ಧಾತ್ಮಾ ಗಚ್ಚೇತ ಪರಮಾಂ ಗತಿಂ।।

ಅಲ್ಲಿ ಸ್ನಾನಮಾಡಿ ಶೂಲಪಾಣಿ ವೃಷಧ್ವಜನನ್ನು ಅರ್ಚಿಸಿದರೆ ಸರ್ವಪಾಪಗಳನ್ನೂ ಕಳೆದುಕೊಂಡು ವಿಶುದ್ಧಾತ್ಮನಾಗಿ ಪರಮ ಗತಿಯನ್ನು ಹೊಂದುತ್ತಾನೆ.

03081072a ತತೋ ಗಚ್ಚೇತ ರಾಜೇಂದ್ರ ಫಲಕೀವನಮುತ್ತಮಂ।
03081072c ಯತ್ರ ದೇವಾಃ ಸದಾ ರಾಜನ್ಫಲಕೀವನಮಾಶ್ರಿತಾಃ।।
03081072e ತಪಶ್ಚರಂತಿ ವಿಪುಲಂ ಬಹುವರ್ಷಸಹಸ್ರಕಂ।।

ರಾಜೇಂದ್ರ! ಅಲ್ಲಿಂದ ಉತ್ತಮ ಫಲಕೀವನಕ್ಕೆ ಹೋಗಬೇಕು. ರಾಜನ್! ಆ ಫಲಕೀವನದಲ್ಲಿ ಸದಾಕಾಲವೂ ದೇವತೆಗಳು ಸಮಾಶ್ರಿತರಾಗಿ, ಬಹಳ ಸಹಸ್ರಾರು ವರ್ಷಗಳ ವಿಪುಲ ತಪಸ್ಸನ್ನು ಮಾಡಿದ್ದಾರೆ.

03081073a ದೃಷದ್ವತ್ಯಾಂ ನರಃ ಸ್ನಾತ್ವಾ ತರ್ಪಯಿತ್ವಾ ಚ ದೇವತಾಃ।
03081073c ಅಗ್ನಿಷ್ಟೋಮಾತಿರಾತ್ರಾಭ್ಯಾಂ ಫಲಂ ವಿಂದತಿ ಭಾರತ।।

ಭಾರತ! ದೃಷದ್ವತಿಯಲ್ಲಿ ಸ್ನಾನಮಾಡಿ ದೇವತೆಗಳಿಗೆ ತರ್ಪಣೆಯನ್ನಿತ್ತ ನರನಿಗೆ ಅಗ್ನಿಷ್ಟೋಮ ಮತ್ತು ಅತಿರಾತ್ರಿ ಈ ಎರಡರ ಫಲವೂ ದೊರೆಯುತ್ತದೆ.

03081074a ತೀರ್ಥೇ ಚ ಸರ್ವದೇವಾನಾಂ ಸ್ನಾತ್ವಾ ಭರತಸತ್ತಮ।
03081074c ಗೋಸಹಸ್ರಸ್ಯ ರಾಜೇಂದ್ರ ಫಲಂ ಪ್ರಾಪ್ನೋತಿ ಮಾನವಃ।।

ಭರತಸತ್ತಮ! ರಾಜೇಂದ್ರ! ಸರ್ವದೇವತೆಗಳ ತೀರ್ಥದಲ್ಲಿ ಸ್ನಾನಮಾಡಿದ ಮಾನವನಿಗೆ ಸಹಸ್ರ ಗೋವುಗಳನ್ನು ದಾನವಾಗಿತ್ತ ಫಲವು ದೊರೆಯುತ್ತದೆ.

03081075a ಪಾಣಿಖಾತೇ ನರಃ ಸ್ನಾತ್ವಾ ತರ್ಪಯಿತ್ವಾ ಚ ದೇವತಾಃ।
03081075c ರಾಜಸೂಯಮವಾಪ್ನೋತಿ ಋಷಿಲೋಕಂ ಚ ಗಚ್ಚತಿ।।

ಪಾಣಿಖಾತದಲ್ಲಿ ಸ್ನಾನಮಾಡಿ ದೇವತೆಗಳಿಗೆ ತರ್ಪಣೆಯನ್ನಿತ್ತ ನರನಿಗೆ ರಾಜಸೂಯಯಾಗದ ಫಲವು ದೊರಕಿ ಅವನು ಋಷಿಲೋಕಕ್ಕೆ ಹೋಗುತ್ತಾನೆ.

03081076a ತತೋ ಗಚ್ಚೇತ ರಾಜೇಂದ್ರ ಮಿಶ್ರಕಂ ತೀರ್ಥಮುತ್ತಮಂ।
03081076c ತತ್ರ ತೀರ್ಥಾನಿ ರಾಜೇಂದ್ರ ಮಿಶ್ರಿತಾನಿ ಮಹಾತ್ಮನಾ।।
03081077a ವ್ಯಾಸೇನ ನೃಪಶಾರ್ದೂಲ ದ್ವಿಜಾರ್ಥಮಿತಿ ನಃ ಶ್ರುತಂ।
03081077c ಸರ್ವತೀರ್ಥೇಷು ಸ ಸ್ನಾತಿ ಮಿಶ್ರಕೇ ಸ್ನಾತಿ ಯೋ ನರಃ।।

ರಾಜೇಂದ್ರ! ಅಲ್ಲಿಂದ ಉತ್ತಮ ತೀರ್ಥವಾದ ಮಿಶ್ರಕಕ್ಕೆ ಹೋಗಬೇಕು. ರಾಜೇಂದ್ರ! ಅಲ್ಲಿ ಬ್ರಾಹ್ಮಣರಿಗೋಸ್ಕರ ಮಹಾತ್ಮ ವ್ಯಾಸನು ತೀರ್ಥಗಳ ಮಿಶ್ರಣವನ್ನು ಮಾಡಿದ್ದಾನೆ ಎಂದು ನಾವು ಕೇಳಿದ್ದೇವೆ. ಮಿಶ್ರಕದಲ್ಲಿ ಸ್ನಾನಮಾಡಿದ ನರನು ಸರ್ವತೀರ್ಥಗಳಲ್ಲಿ ಸ್ನಾನಮಾಡಿದ ಹಾಗೆ.

03081078a ತತೋ ವ್ಯಾಸವನಂ ಗಚ್ಚೇನ್ನಿಯತೋ ನಿಯತಾಶನಃ।
03081078c ಮನೋಜವೇ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।।

ಅಲ್ಲಿಂದ ನಿಯತನೂ ನಿಯತಾಶನನೂ ಆಗಿ ವ್ಯಾಸವನಕ್ಕೆ ಹೋಗಬೇಕು. ಮನೋಜವದಲ್ಲಿ ಸ್ನಾನಮಾಡಿದ ನರನಿಗೆ ಸಹಸ್ರ ಗೋವುಗಳನ್ನು ದಾನವಾಗಿತ್ತ ಫಲವು ದೊರೆಯುತ್ತದೆ.

03081079a ಗತ್ವಾ ಮಧುವಟೀಂ ಚಾಪಿ ದೇವ್ಯಾಸ್ತೀರ್ಥಂ ನರಃ ಶುಚಿಃ।
03081079c ತತ್ರ ಸ್ನಾತ್ವಾರ್ಚಯೇದ್ದೇವಾನ್ಪಿತೄಂಶ್ಚ ಪ್ರಯತಃ ಶುಚಿಃ।।
03081079e ಸ ದೇವ್ಯಾ ಸಮನುಜ್ಞಾತೋ ಗೋಸಹಸ್ರಫಲಂ ಲಭೇತ್।।

ಮಧುವಟಿಗೆ ಹೋಗಿ ಅಲ್ಲಿ ದೇವೀ ತೀರ್ಥದಲ್ಲಿ ಶುಚಿಯಾಗಿ ಸ್ನಾನಮಾಡಿ, ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಿದ ನರನಿಗೆ ದೇವಿಯ ಅನುಜ್ಞೆಯಂತೆ ಸಹಸ್ರ ಗೋವುಗಳನ್ನು ದಾನವಿತ್ತ ಫಲವು ದೊರೆಯುತ್ತದೆ.

03081080a ಕೌಶಿಕ್ಯಾಃ ಸಂಗಮೇ ಯಸ್ತು ದೃಷದ್ವತ್ಯಾಶ್ಚ ಭಾರತ।
03081080c ಸ್ನಾತಿ ವೈ ನಿಯತಾಹಾರಃ ಸರ್ವಪಾಪೈಃ ಪ್ರಮುಚ್ಯತೇ।।

ಭಾರತ! ನಿಯತಾಹಾರನಾಗಿ ಕೌಶಿಕೀ ಮತ್ತು ದೃಷದ್ವತೀ ಸಂಗಮದಲ್ಲಿ ಯಾರು ಸ್ನಾನಮಾಡುತ್ತಾನೋ ಅವನು ಸರ್ವಪಾಪಗಳನ್ನು ಕಳೆದುಕೊಳ್ಳುತ್ತಾನೆ.

03081081a ತತೋ ವ್ಯಾಸಸ್ಥಲೀ ನಾಮ ಯತ್ರ ವ್ಯಾಸೇನ ಧೀಮತಾ।
03081081c ಪುತ್ರಶೋಕಾಭಿತಪ್ತೇನ ದೇಹತ್ಯಾಗಾರ್ಥನಿಶ್ಚಯಃ।।
03081082a ಕೃತೋ ದೇವೈಶ್ಚ ರಾಜೇಂದ್ರ ಪುನರುತ್ಥಾಪಿತಸ್ತದಾ।
03081082c ಅಭಿಗಮ್ಯ ಸ್ಥಲೀಂ ತಸ್ಯ ಗೋಸಹಸ್ರಫಲಂ ಲಭೇತ್।।

ಅನಂತರ ವ್ಯಾಸಸ್ಥಲೀ ಎಂಬ ಹೆಸರಿನ ಕೇತ್ರವಿದೆ. ರಾಜೇಂದ್ರ! ಅಲ್ಲಿ ದೀಮಂತ ವ್ಯಾಸನು ಪುತ್ರಶೋಕದಿಂದ ಪರಿತಪ್ತನಾಗಿ ದೇಹತ್ಯಾಗಮಾಡಲು ನಿಶ್ಚಯಿಸಿದಾಗ ದೇವತೆಗಳು ಅವನನ್ನು ಪುನಃ ಮೇಲಿತ್ತಿದರು. ಅವನ ಈ ಸ್ಥಳಕ್ಕೆ ಬಂದರೆ ಸಹಸ್ರಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ.

03081083a ಕಿಂದತ್ತಂ ಕೂಪಮಾಸಾದ್ಯ ತಿಲಪ್ರಸ್ಥಂ ಪ್ರದಾಯ ಚ।
03081083c ಗಚ್ಚೇತ ಪರಮಾಂ ಸಿದ್ಧಿಮೃಣೈರ್ಮುಕ್ತಃ ಕುರೂದ್ವಹ।।

ಕುರೂದ್ವಹ! ಕಿಂದತ್ತ ಬಾವಿಗೆ ಹೋಗಿ ಅಲ್ಲಿ ಒಂದು ಮುಷ್ಟಿ ತಿಲವನ್ನು ನೀಡಿದವನು ಪರಮ ಸಿದ್ಧಿಯನ್ನು ಹೊಂದಿ ಋಣಗಳಿಂದ ಮುಕ್ತನಾಗುತ್ತಾನೆ.

03081084a ಅಹಶ್ಚ ಸುದಿನಂ ಚೈವ ದ್ವೇ ತೀರ್ಥೇ ಚ ಸುದುರ್ಲಭೇ।
03081084c ತಯೋಃ ಸ್ನಾತ್ವಾ ನರವ್ಯಾಘ್ರ ಸೂರ್ಯಲೋಕಮವಾಪ್ನುಯಾತ್।।

ಅಹ ಮತ್ತು ಸುದಿನ ಈ ಎರಡು ತೀರ್ಥಗಳು ಬಹು ದುರ್ಲಭವಾದವುಗಳು. ನರವ್ಯಾಘ್ರ! ಅವುಗಳಲ್ಲಿ ಸ್ನಾನಮಾಡಿದವನು ಸೂರ್ಯಲೋಕವನ್ನು ತಲುಪುತ್ತಾನೆ.

03081085a ಮೃಗಧೂಮಂ ತತೋ ಗಚ್ಚೇತ್ತ್ರಿಷು ಲೋಕೇಷು ವಿಶ್ರುತಂ।
03081085c ತತ್ರ ಗಂಗಾಹ್ರದೇ ಸ್ನಾತ್ವಾ ಸಮಭ್ಯರ್ಚ್ಯ ಚ ಮಾನವಃ।।
03081085e ಶೂಲಪಾಣಿಂ ಮಹಾದೇವಮಶ್ವಮೇಧಫಲಂ ಲಭೇತ್।।

ಅನಂತರ ಮೂರು ಲೋಕಗಳಲ್ಲಿ ವಿಶ್ರುತವಾದ ಮೃಗಧೂಮಕ್ಕೆ ಹೋಗಬೇಕು. ಅಲ್ಲಿ ಗಂಗಾ ಸರೋವರದಲ್ಲಿ ಸ್ನಾನಮಾಡಿ ಶೂಲಪಾಣಿ ಮಹಾದೇವನನ್ನು ಅರ್ಚಿಸಿದ ಮಾನವನಿಗೆ ಅಶ್ವಮೇಧದ ಫಲವು ದೊರೆಯುತ್ತದೆ.

03081086a ದೇವತೀರ್ಥೇ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।
03081086c ಅಥ ವಾಮನಕಂ ಗಚ್ಚೇತ್ತ್ರಿಷು ಲೋಕೇಷು ವಿಶ್ರುತಂ।।
03081087a ತತ್ರ ವಿಷ್ಣುಪದೇ ಸ್ನಾತ್ವಾ ಅರ್ಚಯಿತ್ವಾ ಚ ವಾಮನಂ।
03081087c ಸರ್ವಪಾಪವಿಶುದ್ಧಾತ್ಮಾ ವಿಷ್ಣುಲೋಕಮವಾಪ್ನುಯಾತ್।।

ದೇವತೀರ್ಥದಲ್ಲಿ ಸ್ನಾನಮಾಡಿದ ನರನು ಸಹಸ್ರಗೋವುಗಳ ದಾನದ ಫಲವನ್ನು ಪಡೆಯುತ್ತಾನೆ. ಅನಂತರ ಮೂರುಲೋಕಗಳಲ್ಲಿ ವಿಶ್ರುತವಾದ ವಾಮನಕಕ್ಕೆ ಹೋಗಬೇಕು. ಅಲ್ಲಿ ವಿಷ್ಣುಪಾದದಲ್ಲಿ ಸ್ನಾನಮಾಡಿ ವಾಮನನನ್ನು ಅರ್ಚಿಸಿದರೆ ಸರ್ವಪಾಪಗಳನ್ನೂ ಕಳೆದುಕೊಂಡು ವಿಶುದ್ಧಾತ್ಮನಾಗಿ ವಿಷ್ಣುಲೋಕವನ್ನು ಪಡೆಯುತ್ತಾನೆ.

03081088a ಕುಲಂಪುನೇ ನರಃ ಸ್ನಾತ್ವಾ ಪುನಾತಿ ಸ್ವಕುಲಂ ನರಃ।
03081088c ಪವನಸ್ಯ ಹ್ರದಂ ಗತ್ವಾ ಮರುತಾಂ ತೀರ್ಥಮುತ್ತಮಂ।।
03081088e ತತ್ರ ಸ್ನಾತ್ವಾ ನರವ್ಯಾಘ್ರ ವಾಯುಲೋಕೇ ಮಹೀಯತೇ।।

ಕುಲಂಪುನದಲ್ಲಿ ಸ್ನಾನಮಾಡಿದ ನರನು ತನ್ನ ಕುಲವನ್ನು ಪುಣ್ಯಗೊಳಿಸುತ್ತಾನೆ. ನರವ್ಯಾಘ್ರ! ಮರುತ್ತರ ಉತ್ತಮ ತೀರ್ಥವೆನಿಸಿದ ಪವನ ಸರೋವರಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದ ನರನು ವಾಯುಲೋಕದಲ್ಲಿ ಮೆರೆಯುತ್ತಾನೆ.

03081089a ಅಮರಾಣಾಂ ಹ್ರದೇ ಸ್ನಾತ್ವಾ ಅಮರೇಷು ನರಾಧಿಪ।
03081089c ಅಮರಾಣಾಂ ಪ್ರಭಾವೇನ ಸ್ವರ್ಗಲೋಕೇ ಮಹೀಯತೇ।।

ನರಾಧಿಪ! ಅಮರರ ಸರೋವರದಲ್ಲಿ ಸ್ನಾನಮಾಡಿ ಅಮರರ ಪ್ರಭಾವದಿಂದ ಅಮರರ ಮಧ್ಯದಲ್ಲಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.

03081090a ಶಾಲಿಹೋತ್ರಸ್ಯ ರಾಜೇಂದ್ರ ಶಾಲಿಶೂರ್ಪೇ ಯಥಾವಿಧಿ।
03081090c ಸ್ನಾತ್ವಾ ನರವರಶ್ರೇಷ್ಠ ಗೋಸಹಸ್ರಫಲಂ ಲಭೇತ್।।

ರಾಜೇಂದ್ರ! ನರವರಶ್ರೇಷ್ಠ! ಶಾಲಿಶೂರ್ಪದಲ್ಲಿ ಶಾಲಿಹೋತ್ರದಲ್ಲಿ ಯಥಾವಿಧಿಯಲ್ಲಿ ಸ್ನಾನಮಾಡಿದರೆ ಸಹಸ್ರ ಗೋವುಗಳ ದಾನದ ಫಲವು ದೊರೆಯುತ್ತದೆ.

03081091a ಶ್ರೀಕುಂಜಂ ಚ ಸರಸ್ವತ್ಯಾಂ ತೀರ್ಥಂ ಭರತಸತ್ತಮ।
03081091c ತತ್ರ ಸ್ನಾತ್ವಾ ನರೋ ರಾಜನ್ನಗ್ನಿಷ್ಟೋಮಫಲಂ ಲಭೇತ್।।

ಭರತಸತ್ತಮ! ರಾಜನ್! ಸರಸ್ವತಿಯಲ್ಲಿ ಶ್ರೀಕುಂಜ ತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ಅಗ್ನಿಷ್ಟೋಮಯಾಗದ ಫಲವು ದೊರೆಯುತ್ತದೆ.

03081092a ತತೋ ನೈಮಿಷಕುಂಜಂ ಚ ಸಮಾಸಾದ್ಯ ಕುರೂದ್ವಹ।
03081092c ಋಷಯಃ ಕಿಲ ರಾಜೇಂದ್ರ ನೈಮಿಷೇಯಾಸ್ತಪೋಧನಾಃ।।
03081092e ತೀರ್ಥಯಾತ್ರಾಂ ಪುರಸ್ಕೃತ್ಯ ಕುರುಕ್ಷೇತ್ರಂ ಗತಾಃ ಪುರಾ।।

ಕುರೂದ್ವಹ! ಅನಂತರ ನೈಮಿಷಕುಂಜಕ್ಕೆ ಹೋಗಬೇಕು. ರಾಜೇಂದ್ರ! ಹಿಂದೆ ನೈಮಿಷಾರಣ್ಯದ ತಪೋಧನ ಋಷಿಗಳು ತೀರ್ಥಯಾತ್ರೆಗೆ ಹೋದಾಗ ಮೊದಲು ಕುರುಕ್ಷೇತ್ರಕ್ಕೆ ಹೋಗಿದ್ದರು.

03081093a ತತಃ ಕುಂಜಃ ಸರಸ್ವತ್ಯಾಂ ಕೃತೋ ಭರತಸತ್ತಮ।
03081093c ಋಷೀಣಾಮವಕಾಶಃ ಸ್ಯಾದ್ಯಥಾ ತುಷ್ಟಿಕರೋ ಮಹಾನ್।।

ಭರತಸತ್ತಮ! ಆಗ ಅವರು ಸರಸ್ವತಿಯಲ್ಲಿ ಋಷಿಗಳಿಗೆ ತೃಪ್ತಿಗೊಳಿಸುವ ವಿಶಾಲ ಜಾಗವೆಂದು ಕುಂಜವನ್ನು ಮಾಡಿದ್ದರು.

03081094a ತಸ್ಮಿನ್ಕುಂಜೇ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।
03081094c ಕನ್ಯಾತೀರ್ಥೇ ನರಃ ಸ್ನಾತ್ವಾ ಅಗ್ನಿಷ್ಟೋಮಫಲಂ ಲಭೇತ್।।

ಆ ಕುಂಜದಲ್ಲಿ ಸ್ನಾನಮಾಡಿದ ನರನು ಸಹಸ್ರ ಗೋವುಗಳ ದಾನದ ಫಲವನ್ನು ಪಡೆಯುತ್ತಾನೆ. ಕನ್ಯಾತೀರ್ಥದಲ್ಲಿ ಸ್ನಾನಮಾಡಿ ನರನು ಅಗ್ನಿಷ್ಟೋಮ ಯಾಗದ ಫಲವನ್ನು ಪಡೆಯುತ್ತಾನೆ.

03081095a ತತೋ ಗಚ್ಚೇನ್ನರವ್ಯಾಘ್ರ ಬ್ರಹ್ಮಣಃ ಸ್ಥಾನಮುತ್ತಮಂ।
03081095c ತತ್ರ ವರ್ಣಾವರಃ ಸ್ನಾತ್ವಾ ಬ್ರಾಹ್ಮಣ್ಯಂ ಲಭತೇ ನರಃ।।
03081095e ಬ್ರಾಹ್ಮಣಶ್ಚ ವಿಶುದ್ಧಾತ್ಮಾ ಗಚ್ಚೇತ ಪರಮಾಂ ಗತಿಂ।।

ನರವ್ಯಾಘ್ರ! ಅಲ್ಲಿಂದ ಉತ್ತಮವಾದ ಬ್ರಹ್ಮಸ್ಥಾನಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿದ ಕೆಳವರ್ಣದ ನರನು ಬ್ರಾಹ್ಮಣ್ಯತ್ವವನ್ನು ಪಡೆಯುತ್ತಾನೆ. ಮತ್ತು ಬ್ರಾಹ್ಮಣನು ವಿಶುದ್ಧಾತ್ಮನಾಗಿ ಪರಮ ಗತಿಯನ್ನು ಸೇರುತ್ತಾನೆ.

03081096a ತತೋ ಗಚ್ಚೇನ್ನರಶ್ರೇಷ್ಠ ಸೋಮತೀರ್ಥಮನುತ್ತಮಂ।
03081096c ತತ್ರ ಸ್ನಾತ್ವಾ ನರೋ ರಾಜನ್ಸೋಮಲೋಕಮವಾಪ್ನುಯಾತ್।।

ನರಶ್ರೇಷ್ಠ! ರಾಜನ್! ಅಲ್ಲಿಂದ ಅನುತ್ತಮ ಸೋಮತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದ ನರನು ಸೋಮಲೋಕವನ್ನು ಸೇರುತ್ತಾನೆ.

03081097a ಸಪ್ತಸಾರಸ್ವತಂ ತೀರ್ಥಂ ತತೋ ಗಚ್ಚೇನ್ನರಾಧಿಪ।
03081097c ಯತ್ರ ಮಂಕಣಕಃ ಸಿದ್ಧೋ ಮಹರ್ಷಿರ್ಲೋಕವಿಶ್ರುತಃ।।

ನರಾಧಿಪ! ಅಲ್ಲಿಂದ ಸಪ್ತಸಾರಸ್ವತ ತೀರ್ಥಕ್ಕೆ ಹೋಗಬೇಕು. ಅಲ್ಲಿ ಲೋಕವಿಶ್ರುತ ಸಿದ್ಧ ಮಂಕಣಕನಿದ್ದನು.

03081098a ಪುರಾ ಮಂಕಣಕೋ ರಾಜನ್ಕುಶಾಗ್ರೇಣೇತಿ ನಃ ಶ್ರುತಂ।
03081098c ಕ್ಷತಃ ಕಿಲ ಕರೇ ರಾಜಂಸ್ತಸ್ಯ ಶಾಕರಸೋಽಸ್ರವತ್।।

ರಾಜನ್! ಹಿಂದೆ ಮಂಕಣಕನು ದರ್ಬೆಯ ತುದಿಯಿಂದ ತನ್ನ ಕೈಯನ್ನು ಕೌಯ್ದುಕೊಂಡಾಗ ಆ ಗಾಯದಿಂದ ತರಕಾರಿಯ ರಸವು ಹರಿಯಿತು ಎಂದು ಕೇಳಿಲ್ಲವೇ?

03081099a ಸ ವೈ ಶಾಕರಸಂ ದೃಷ್ಟ್ವಾ ಹರ್ಷಾವಿಷ್ಟೋ ಮಹಾತಪಾಃ।
03081099c ಪ್ರನೃತ್ತಃ ಕಿಲ ವಿಪ್ರರ್ಷಿರ್ವಿಸ್ಮಯೋತ್ಫುಲ್ಲಲೋಚನಃ।।

ಆ ಶಾಕರಸವನ್ನು ನೋಡಿ ಹರ್ಷಾವಿಷ್ಟನಾಗಿ ಮಹಾತಪಸ್ವಿ ವಿಪ್ರರ್ಷಿಯು ವಿಸ್ಮಯದಿಂದ ಕಣ್ಣು ಬಿಟ್ಟು ಕುಣಿದಾಡಿದನು.

03081100a ತತಸ್ತಸ್ಮಿನ್ಪ್ರನೃತ್ತೇ ವೈ ಸ್ಥಾವರಂ ಜಂಗಮಂ ಚ ಯತ್।
03081100c ಪ್ರನೃತ್ತಮುಭಯಂ ವೀರ ತೇಜಸಾ ತಸ್ಯ ಮೋಹಿತಂ।।

ವೀರ! ಅವನು ಹಾಗೆ ಕುಣಿಯುತ್ತಿದ್ದಾಗ ಸ್ಥಾವರ ಜಂಗಮಗಳೆಲ್ಲವೂ ಅವನ ತೇಜಸ್ಸಿನಿಂದ ಮೋಹಿತರಾಗಿ ಅವನೊಂದಿಗೆ ಕುಣಿಯತೊಡಗಿದವು.

03081101a ಬ್ರಹ್ಮಾದಿಭಿಃ ಸುರೈ ರಾಜನ್ನೃಷಿಭಿಶ್ಚ ತಪೋಧನೈಃ।
03081101c ವಿಜ್ಞಪ್ತೋ ವೈ ಮಹಾದೇವ ಋಷೇರರ್ಥೇ ನರಾಧಿಪ।।
03081101e ನಾಯಂ ನೃತ್ಯೇದ್ಯಥಾ ದೇವ ತಥಾ ತ್ವಂ ಕರ್ತುಮರ್ಹಸಿ।।

ರಾಜನ್! ನರಾಧಿಪ! ಬ್ರಹ್ಮಾದಿ ಸುರರೂ, ಋಷಿಗಳೂ, ತಪೋಧನರೂ ಮಹಾದೇವನಲ್ಲಿ ಆ ಋಷಿಯ ಕುರಿತಾಗಿ ಪ್ರಸ್ತಾವಿಸಿದರು: “ದೇವ! ಇವನು ಕುಣಿಯದಹಾಗೆ ನೀನು ಮಾಡಬೇಕು.”

03081102a ತತಃ ಪ್ರನೃತ್ತಮಾಸಾದ್ಯ ಹರ್ಷಾವಿಷ್ಟೇನ ಚೇತಸಾ।
03081102c ಸುರಾಣಾಂ ಹಿತಕಾಮಾರ್ಥಮೃಷಿಂ ದೇವೋಽಭ್ಯಭಾಷತ।।

ಸುರರ ಹಿತಕಾಮಿ ದೇವನು ಹರ್ಷಾವಿಷ್ಟ ಚೇತಸನಾಗಿ ಕುಣಿಯುತ್ತಿದ್ದ ಋಷಿಯ ಬಳಿ ಬಂದು ಹೇಳಿದನು:

03081103a ಅಹೋ ಮಹರ್ಷೇ ಧರ್ಮಜ್ಞ ಕಿಮರ್ಥಂ ನೃತ್ಯತೇ ಭವಾನ್।
03081103c ಹರ್ಷಸ್ಥಾನಂ ಕಿಮರ್ಥಂ ವಾ ತವಾದ್ಯ ಮುನಿಪುಂಗವ।।

“ಅಹೋ ಮಹರ್ಷೇ! ಧರ್ಮಜ್ಞ! ಏಕೆ ಕುಣಿಯುತ್ತಿದ್ದೀಯೆ? ಮುನಿಪುಂಗವ! ನೀನು ಇಂದು ಇಷ್ಟು ಹರ್ಷದಿಂದಿರಲು ಏನು ಕಾರಣ?”

03081104 ಋಷಿರುವಾಚ।
03081104a ಕಿಂ ನ ಪಶ್ಯಸಿ ಮೇ ದೇವ ಕರಾಚ್ಶಾಕರಸಂ ಸ್ರುತಂ।
03081104c ಯಂ ದೃಷ್ಟ್ವಾಹಂ ಪ್ರನೃತ್ತೋ ವೈ ಹರ್ಷೇಣ ಮಹತಾನ್ವಿತಃ।।

ಋಷಿಯು ಹೇಳಿದನು: “ದೇವ! ನನ್ನ ಕೈಯಿಂದ ಶಾಕರಸವು ಸ್ರವಿಸುತ್ತಿರುವುದು ನಿನಗೆ ಕಾಣುವುದಿಲ್ಲವೇ? ಅದನ್ನು ನೋಡಿದಾಗ ಮಹಾ ಹರ್ಷದಿಂದ ಕೂಡಿದವನಾಗಿ ಕುಣಿಯಲು ಪ್ರಾರಂಭಿಸಿದೆ.””

03081105 ಪುಲಸ್ತ್ಯ ಉವಾಚ।
03081105a ತಂ ಪ್ರಹಸ್ಯಾಬ್ರವೀದ್ದೇವೋ ಮುನಿಂ ರಾಗೇಣ ಮೋಹಿತಂ।
03081105c ಅಹಂ ವೈ ವಿಸ್ಮಯಂ ವಿಪ್ರ ನ ಗಚ್ಚಾಮೀತಿ ಪಶ್ಯ ಮಾಂ।।

ಪುಲಸ್ತ್ಯನು ಹೇಳಿದನು: “ಮುನಿಯ ರಾಗ ಮೋಹಕ್ಕೆ ಮುಗುಳ್ನಕ್ಕು ದೇವನು ಹೇಳಿದನು: “ವಿಪ್ರ! ಆದರೆ ನಾನು ಇದರಿಂದ ವಿಸ್ಮಿತನಾಗಲಿಲ್ಲ. ನನ್ನನ್ನು ನೋಡು!”

03081106a ಏವಮುಕ್ತ್ವಾ ನರಶ್ರೇಷ್ಠ ಮಹಾದೇವೇನ ಧೀಮತಾ।
03081106c ಅಂಗುಲ್ಯಗ್ರೇಣ ರಾಜೇಂದ್ರ ಸ್ವಾಂಗುಷ್ಠಸ್ತಾಡಿತೋಽನಘ।।
03081107a ತತೋ ಭಸ್ಮ ಕ್ಷತಾದ್ರಾಜನ್ನಿರ್ಗತಂ ಹಿಮಸನ್ನಿಭಂ।

ನರಶ್ರೇಷ್ಠ! ರಾಜೇಂದ್ರ! ಅನಘ! ಹೀಗೆ ಹೇಳಿದ ಧೀಮಂತ ಮಹಾದೇವನು ತನ್ನ ಉಗುರಿನಿಂದ ಹೆಬ್ಬೆರಳನ್ನು ಚುಚ್ಚಲು ಆ ಗಾಯದಿಂದ ಹಿಮಸನ್ನಿಭ ಭಸ್ಮವು ಹೊರಚಿಮ್ಮಿತು.

03081107c ತದ್ದೃಷ್ಟ್ವಾ ವ್ರೀಡಿತೋ ರಾಜನ್ಸ ಮುನಿಃ ಪಾದಯೋರ್ಗತಃ।।

ರಾಜನ್! ಅದನ್ನು ನೋಡಿ ನಾಚಿದ ಆ ಮುನಿಯು ಅವನ ಪಾದಗಳಿಗೆರಗಿದನು.

03081108a ನಾನ್ಯಂ ದೇವಮಹಂ ಮನ್ಯೇ ರುದ್ರಾತ್ಪರತರಂ ಮಹತ್।
03081108c ಸುರಾಸುರಸ್ಯ ಜಗತೋ ಗತಿಸ್ತ್ವಮಸಿ ಶೂಲಧೃಕ್।।

“ರುದ್ರ, ಮಹಾ ಪರತರ, ಸುರಾಸುರರ, ಜಗತ್ತಿನ ಗತಿಯಾದ ಶೂಲಧಾರಿ ನಿನ್ನನ್ನಲ್ಲದೇ ಬೇರೆ ಯಾವ ದೇವನನ್ನೂ ನಾನು ಮನ್ನಿಸುವುದಿಲ್ಲ!

03081109a ತ್ವಯಾ ಸೃಷ್ಟಮಿದಂ ವಿಶ್ವಂ ತ್ರೈಲೋಕ್ಯಂ ಸಚರಾಚರಂ।
03081109c ತ್ವಾಮೇವ ಭಗವನ್ಸರ್ವೇ ಪ್ರವಿಶಂತಿ ಯುಗಕ್ಷಯೇ।।

ಈ ವಿಶ್ವ, ತ್ರೈಲೋಕ್ಯ ಮತ್ತು ಸಚರಾಚರವೂ ನಿನ್ನಿಂದಲೇ ಸೃಷ್ಟಿಯಾದವುಗಳು. ಭಗವನ್! ಯುಗಕ್ಷಯದಲ್ಲಿ ಎಲ್ಲವೂ ನಿನ್ನಲ್ಲಿಯೇ ಲೀನವಾಗುತ್ತವೆ.

03081110a ದೇವೈರಪಿ ನ ಶಕ್ಯಸ್ತ್ವಂ ಪರಿಜ್ಞಾತುಂ ಕುತೋ ಮಯಾ।
03081110c ತ್ವಯಿ ಸರ್ವೇ ಚ ದೃಶ್ಯಂತೇ ಸುರಾ ಬ್ರಹ್ಮಾದಯೋಽನಘ।।

ದೇವತೆಗಳೂ ಕೂಡ ನಿನ್ನನ್ನು ಸಂಪೂರ್ಣ ತಿಳಿದುಕೊಳ್ಳಲು ಆಗದಿರುವಾಗ ನನಗೆ ಅದು ಹೇಗೆ ಸಾಧ್ಯ? ಅನಘ! ಬ್ರಹ್ಮಾದಿ ಸುರರೆಲ್ಲರೂ ನಿನ್ನಲ್ಲಿಯೇ ಕಾಣುತ್ತಾರೆ.

03081111a ಸರ್ವಸ್ತ್ವಮಸಿ ಲೋಕಾನಾಂ ಕರ್ತಾ ಕಾರಯಿತಾ ಚ ಹ।
03081111c ತ್ವತ್ಪ್ರಸಾದಾತ್ಸುರಾಃ ಸರ್ವೇ ಮೋದಂತೀಹಾಕುತೋಭಯಾಃ।।
03081111e ಏವಂ ಸ್ತುತ್ವಾ ಮಹಾದೇವಂ ಸ ಋಷಿಃ ಪ್ರಣತೋಽಭವತ್।।

ಸರ್ವ ಲೋಕಗಳ ಕರ್ತ ಮತ್ತು ಕಾರಣನು ನೀನೇ. ನಿನ್ನ ಪ್ರಸಾದದಿಂದ ಸರ್ವ ಸುರರೂ ಭಯವನ್ನು ಕಳೆದುಕೊಂಡು ಸಂತೋಷದಿಂದ ಇದ್ದಾರೆ.” ಹೀಗೆ ಮಹಾದೇವನನ್ನು ಸ್ತುತಿಸಿ ಆ ಋಷಿಯು ಪ್ರಣಾಮ ಮಾಡಿದನು.

03081112 ಋಷಿರುವಾಚ।
03081112a ತ್ವತ್ಪ್ರಸಾದಾನ್ಮಹಾದೇವ ತಪೋ ಮೇ ನ ಕ್ಷರೇತ ವೈ।

ಋಷಿಯು ಹೇಳಿದನು: “ಮಹಾದೇವ! ನಿನ್ನ ಪ್ರಸಾದದಿಂದ ನನ್ನ ತಪಸ್ಸು ಎಂದೂ ಕ್ಷಣಿಸದಿರಲಿ!””

03081113 ಪುಲಸ್ತ್ಯ ಉವಾಚ।
03081113a ತತೋ ದೇವಃ ಪ್ರಹೃಷ್ಟಾತ್ಮಾ ಬ್ರಹ್ಮರ್ಷಿಮಿದಮಬ್ರವೀತ್।
03081113c ತಪಸ್ತೇ ವರ್ಧತಾಂ ವಿಪ್ರ ಮತ್ಪ್ರಸಾದಾತ್ಸಹಸ್ರಧಾ।।

ಪುಲಸ್ತ್ಯನು ಹೇಳಿದನು: “ಆಗ ಸಂತೋಷಗೊಂಡ ದೇವನು ಬ್ರಹ್ಮರ್ಷಿಗೆ ಹೇಳಿದನು: “ವಿಪ್ರ! ನನ್ನ ಪ್ರಸಾದದಿಂದ ನಿನ್ನ ತಪಸ್ಸು ಸಹಸ್ರಪಟ್ಟು ವೃದ್ಧಿಯಾಗುತ್ತದೆ.

03081114a ಆಶ್ರಮೇ ಚೇಹ ವತ್ಸ್ಯಾಮಿ ತ್ವಯಾ ಸಾರ್ಧಂ ಮಹಾಮುನೇ।
03081114c ಸಪ್ತಸಾರಸ್ವತೇ ಸ್ನಾತ್ವಾ ಅರ್ಚಯಿಷ್ಯಂತಿ ಯೇ ತು ಮಾಂ।।
03081115a ನ ತೇಷಾಂ ದುರ್ಲಭಂ ಕಿಂ ಚಿದಿಹ ಲೋಕೇ ಪರತ್ರ ಚ।
03081115c ಸಾರಸ್ವತಂ ಚ ತೇ ಲೋಕಂ ಗಮಿಷ್ಯಂತಿ ನ ಸಂಶಯಃ।।

ಮಹಾಮುನೇ! ನಿನ್ನೊಂದಿಗೆ ನಾನು ಈ ಆಶ್ರಮದಲ್ಲಿ ವಾಸಿಸುತ್ತೇನೆ. ನರವ್ಯಾಘ್ರ! ಸಪ್ತಸರಸ್ವತಿಯಲ್ಲಿ ಸ್ನಾನಮಾಡಿ ನನ್ನನ್ನು ಅರ್ಚಿಸುವವರಿಗೆ ಈ ಲೋಕದಲ್ಲಿ ಯಾವುದೂ ದುರ್ಲಭವೆಸಿಸುವುದಿಲ್ಲ ಮತ್ತು ಅವರು ಸಾರಸ್ವತ ಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯುವೇ ಇಲ್ಲ.”

03081116a ತತಸ್ತ್ವೌಶನಸಂ ಗಚ್ಚೇತ್ತ್ರಿಷು ಲೋಕೇಷು ವಿಶ್ರುತಂ।
03081116c ಯತ್ರ ಬ್ರಹ್ಮಾದಯೋ ದೇವಾ ಋಷಯಶ್ಚ ತಪೋಧನಾಃ।।

ಅಲ್ಲಿಂದ ಮೂರು ಲೋಕಗಳಲ್ಲೂ ವಿಶ್ರುತ ಔಶನಸಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳೂ, ಋಷಿ-ತಪೋಧನರೂ ಇದ್ದಾರೆ.

03081117a ಕಾರ್ತ್ತಿಕೇಯಶ್ಚ ಭಗವಾಂಸ್ತ್ರಿಸಂಧ್ಯಂ ಕಿಲ ಭಾರತ।
03081117c ಸಾನ್ನಿಧ್ಯಮಕರೋತ್ತತ್ರ ಭಾರ್ಗವಪ್ರಿಯಕಾಮ್ಯಯಾ।।

ಭಾರತ! ಭಾರ್ಗವನನ್ನು ಸಂತೋಷಗೊಳಿಸಲು ಕಾರ್ತಿಕೇಯನು ಅಲ್ಲಿ ಮೂರೂ ಸಂಧ್ಯಾಸಮಯಗಳಲ್ಲಿ ಸಾನ್ನಿಧ್ಯವನ್ನು ಮಾಡುವುದಿಲ್ಲವೇ?

03081118a ಕಪಾಲಮೋಚನಂ ತೀರ್ಥಂ ಸರ್ವಪಾಪಪ್ರಮೋಚನಂ।
03081118c ತತ್ರ ಸ್ನಾತ್ವಾ ನರವ್ಯಾಘ್ರ ಸರ್ವಪಾಪೈಃ ಪ್ರಮುಚ್ಯತೇ।।

ನರವ್ಯಾಘ್ರ! ಅಲ್ಲಿ ಸರ್ವಪಾಪಪ್ರಮೋಚನ ಕಪಾಲಮೋಚನ ತೀರ್ಥದಲ್ಲಿ ಸ್ನಾನಮಾಡಿ ಸರ್ವಪಾಪಗಳಿಂದ ವಿಮೋಚಿತರಾಗುತ್ತಾರೆ.

03081119a ಅಗ್ನಿತೀರ್ಥಂ ತತೋ ಗಚ್ಚೇತ್ತತ್ರ ಸ್ನಾತ್ವಾ ನರರ್ಷಭ।
03081119c ಅಗ್ನಿಲೋಕಮವಾಪ್ನೋತಿ ಕುಲಂ ಚೈವ ಸಮುದ್ಧರೇತ್।।

ನರರ್ಷಭ! ಅಲ್ಲಿಂದ ಅಗ್ನಿತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನಮಾಡಿದರೆ ಅಗ್ನಿಲೋಕವು ದೊರೆಯುತ್ತದೆ ಮತ್ತು ಕುಲವು ಉದ್ಧಾರವಾಗುತ್ತದೆ.

03081120a ವಿಶ್ವಾಮಿತ್ರಸ್ಯ ತತ್ರೈವ ತೀರ್ಥಂ ಭರತಸತ್ತಮ।
03081120c ತತ್ರ ಸ್ನಾತ್ವಾ ಮಹಾರಾಜ ಬ್ರಾಹ್ಮಣ್ಯಮಭಿಜಾಯತೇ।।

ಭರತಸತ್ತಮ! ಅಲ್ಲಿಯೇ ವಿಶ್ವಾಮಿತ್ರನ ತೀರ್ಥವಿದೆ. ಮಹಾರಾಜ! ಅಲ್ಲಿ ಸ್ನಾನಮಾಡಿದರೆ ಬ್ರಾಹ್ಮಣನಾಗಿ ಹುಟ್ಟುತ್ತಾನೆ.

03081121a ಬ್ರಹ್ಮಯೋನಿಂ ಸಮಾಸಾದ್ಯ ಶುಚಿಃ ಪ್ರಯತಮಾನಸಃ।
03081121c ತತ್ರ ಸ್ನಾತ್ವಾ ನರವ್ಯಾಘ್ರ ಬ್ರಹ್ಮಲೋಕಂ ಪ್ರಪದ್ಯತೇ।।
03081121e ಪುನಾತ್ಯಾಸಪ್ತಮಂ ಚೈವ ಕುಲಂ ನಾಸ್ತ್ಯತ್ರ ಸಂಶಯಃ।।

ನರವ್ಯಾಘ್ರ! ಶುಚಿಯಾಗಿ, ಪ್ರಯತಮಾನಸನಾಗಿ ಬ್ರಹ್ಮಯೋನಿಗೆ ಹೋಗಿ ಅಲ್ಲಿ ಸ್ನಾನಮಾಡಿ ಬ್ರಹ್ಮಲೋಕವನ್ನು ಪಡೆಯುತ್ತಾರೆ ಮತ್ತು ಏಳು ತಲೆಮಾರುಗಳವರೆಗೆ ಕುಲವನ್ನು ಪುನೀತಗೊಳಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03081122a ತತೋ ಗಚ್ಚೇತ ರಾಜೇಂದ್ರ ತೀರ್ಥಂ ತ್ರೈಲೋಕ್ಯವಿಶ್ರುತಂ।
03081122c ಪೃಥೂದಕಮಿತಿ ಖ್ಯಾತಂ ಕಾರ್ತ್ತಿಕೇಯಸ್ಯ ವೈ ನೃಪ।।
03081122e ತತ್ರಾಭಿಷೇಕಂ ಕುರ್ವೀತ ಪಿತೃದೇವಾರ್ಚನೇ ರತಃ।।
03081123a ಅಜ್ಞಾನಾಜ್ಜ್ಞಾನತೋ ವಾಪಿ ಸ್ತ್ರಿಯಾ ವಾ ಪುರುಷೇಣ ವಾ।
03081123c ಯತ್ಕಿಂ ಚಿದಶುಭಂ ಕರ್ಮ ಕೃತಂ ಮಾನುಷಬುದ್ಧಿನಾ।।
03081124a ತತ್ಸರ್ವಂ ನಶ್ಯತೇ ತಸ್ಯ ಸ್ನಾತಮಾತ್ರಸ್ಯ ಭಾರತ।
03081124c ಅಶ್ವಮೇಧಫಲಂ ಚಾಪಿ ಸ್ವರ್ಗಲೋಕಂ ಚ ಗಚ್ಚತಿ।।

ರಾಜೇಂದ್ರ! ಅಲ್ಲಿಂದ ಮೂರುಲೋಕಗಳಲ್ಲಿ ವಿಶ್ರುತ ಪೃಥೂದಕ ಎಂದು ಖ್ಯಾತಗೊಂಡ ಕಾರ್ತಿಕೇಯನ ತೀರ್ಥಕ್ಕೆ ಹೋಗಬೇಕು. ನೃಪ! ಅಲ್ಲಿ ಸ್ನಾನಮಾಡಿ ಪಿತೃಗಳ ಮತ್ತು ದೇವತೆಗಳ ಅರ್ಚನೆಯಲ್ಲಿ ನಿರತನಾಗಬೇಕು. ಭಾರತ! ಅಲ್ಲಿ ಸ್ನಾನಮಾಡುವುದರಿಂದ ಸ್ತ್ರೀಯಾಗಿರಲಿ ಅಥವಾ ಪುರುಷನಾಗಿರಲಿ, ಮಾನುಷ ಬುದ್ಧಿಯಿಂದ, ಅರಿತೂ ಅಥವಾ ಅರಿಯದೇ ಮಾಡಿದ ಏನಾದರೂ ಪಾಪಕರ್ಮಗಳೆಲ್ಲವನ್ನೂ ನಾಶಗೊಳಿಸಿ ಅಶ್ವಮೇಧಯಾಗದ ಫಲವನ್ನು ಪಡೆದು ಸ್ವರ್ಗಲೋಕವನ್ನು ಸೇರುತ್ತಾರೆ.

03081125a ಪುಣ್ಯಮಾಹುಃ ಕುರುಕ್ಷೇತ್ರಂ ಕುರುಕ್ಷೇತ್ರಾತ್ಸರಸ್ವತೀಂ।
03081125c ಸರಸ್ವತ್ಯಾಶ್ಚ ತೀರ್ಥಾನಿ ತೀರ್ಥೇಭ್ಯಶ್ಚ ಪೃಥೂದಕಂ।।

ಕುರುಕ್ಷೇತ್ರವು ಪುಣ್ಯ. ಕುರುಕ್ಷೇತ್ರಕ್ಕಿಂತ ಸರಸ್ವತಿಯು ಪುಣ್ಯ. ಸರಸ್ವತಿಗಿಂತ ತಿರ್ಥಗಳು ಮತ್ತು ತೀರ್ಥಗಳಿಗಿಂತ ಪೃಥೂದಕವು ಪುಣ್ಯವೆಂದು ಹೇಳುತ್ತಾರೆ.

03081126a ಉತ್ತಮೇ ಸರ್ವತೀರ್ಥಾನಾಂ ಯಸ್ತ್ಯಜೇದಾತ್ಮನಸ್ತನುಂ।
03081126c ಪೃಥೂದಕೇ ಜಪ್ಯಪರೋ ನೈನಂ ಶ್ವೋಮರಣಂ ತಪೇತ್।।

ಸರ್ವತೀರ್ಥಗಳಲ್ಲಿ ಉತ್ತಮ ಪೃಥೂದಕದಲ್ಲಿ ಜಪನಿರತನಾಗಿ ತನ್ನ ದೇಹವನ್ನು ತೊರೆದವನಿಗೆ ಮರಣದ ಭಯವು ಎಂದೂ ಕಾಡುವುದಿಲ್ಲ.

03081127a ಗೀತಂ ಸನತ್ಕುಮಾರೇಣ ವ್ಯಾಸೇನ ಚ ಮಹಾತ್ಮನಾ।
03081127c ವೇದೇ ಚ ನಿಯತಂ ರಾಜನಭಿಗಚ್ಚೇತ್ಪೃಥೂದಕಂ।।

ರಾಜನ್! ಪೃಥೂದಕಕ್ಕೆ ಹೋಗಬೇಕೆಂದು ಸನತ್ಕುಮಾರ ಮತ್ತು ಮಹಾತ್ಮ ವ್ಯಾಸರು ಹಾಡಿದ್ದಾರೆ ಮತ್ತು ವೇದಗಳಲ್ಲಿ ಹೇಳಲಾಗಿದೆ.

03081128a ಪೃಥೂದಕಾತ್ಪುಣ್ಯತಮಂ ನಾನ್ಯತ್ತೀರ್ಥಂ ನರೋತ್ತಮ।
03081128c ಏತನ್ಮೇಧ್ಯಂ ಪವಿತ್ರಂ ಚ ಪಾವನಂ ಚ ನ ಸಂಶಯಃ।।

ನರೋತ್ತಮ! ಪೃಥೂದಕಕ್ಕಿಂತ ಪುಣ್ಯತರ ತೀರ್ಥವಿನ್ನೊಂದಿಲ್ಲ. ಇದು ಪವಿತ್ರ ಮತ್ತು ಪಾವನ ಎನ್ನುವುದರಲ್ಲಿ ಸಂಶಯವಿಲ್ಲ.

03081129a ತತ್ರ ಸ್ನಾತ್ವಾ ದಿವಂ ಯಾಂತಿ ಅಪಿ ಪಾಪಕೃತೋ ಜನಾಃ।
03081129c ಪೃಥೂದಕೇ ನರಶ್ರೇಷ್ಠ ಪ್ರಾಹುರೇವಂ ಮನೀಷಿಣಃ।।

ನರಶ್ರೇಷ್ಠ! ಪೃಥೂದಕದಲ್ಲಿ ಸ್ನಾನಮಾಡಿ ಪಾಪಕೃತ ಜನರೂ ಸ್ವರ್ಗಕ್ಕೆ ಹೋಗುತ್ತಾರೆ ಎಂದು ತಿಳಿದವರು ಹೇಳುತ್ತಾರೆ.

03081130a ಮಧುಸ್ರವಂ ಚ ತತ್ರೈವ ತೀರ್ಥಂ ಭರತಸತ್ತಮ।
03081130c ತತ್ರ ಸ್ನಾತ್ವಾ ನರೋ ರಾಜನ್ಗೋಸಹಸ್ರಫಲಂ ಲಭೇತ್।।

ಭರತಸತ್ತಮ! ಅಲ್ಲಿ ಮಧುಸ್ರವ ತೀರ್ಥವಿದೆ. ರಾಜನ್! ಅಲ್ಲಿ ಸ್ನಾನಮಾಡಿದ ನರನು ಸಹಸ್ರ ಗೋವುಗಳನ್ನು ದಾನಮಾಡಿದ ಫಲವನ್ನು ಪಡೆಯುತ್ತಾನೆ.

03081131a ತತೋ ಗಚ್ಚೇನ್ನರಶ್ರೇಷ್ಠ ತೀರ್ಥಂ ದೇವ್ಯಾ ಯಥಾಕ್ರಮಂ।
03081131c ಸರಸ್ವತ್ಯಾರುಣಾಯಾಶ್ಚ ಸಂಗಮಂ ಲೋಕವಿಶ್ರುತಂ।।

ನರಶ್ರೇಷ್ಠ! ಅನಂತರ ಯಥಾಕ್ರಮವಾಗಿ ಸರಸ್ವತೀ ಮತ್ತು ಅರುಣಗಳ ಸಂಗಮ ಲೋಕವಿಶ್ರುತ ದೇವೀ ತೀರ್ಥಕ್ಕೆ ಮುಂದುವರೆಯಬೇಕು.

03081132a ತ್ರಿರಾತ್ರೋಪೋಷಿತಃ ಸ್ನಾತ್ವಾ ಮುಚ್ಯತೇ ಬ್ರಹ್ಮಹತ್ಯಯಾ।
03081132c ಅಗ್ನಿಷ್ಟೋಮಾತಿರಾತ್ರಾಭ್ಯಾಂ ಫಲಂ ವಿಂದತಿ ಮಾನವಃ।।
03081133a ಆಸಪ್ತಮಂ ಕುಲಂ ಚೈವ ಪುನಾತಿ ಭರತರ್ಷಭ।

ಭರತರ್ಷಭ! ಮೂರುರಾತ್ರಿಗಳು ಉಪವಾಸವಿದ್ದು ಅಲ್ಲಿ ಸ್ನಾನಮಾಡಿದವನು ಬ್ರಹ್ಮಹತ್ಯಾ ದೋಷದಿಂದ ವಿಮುಕ್ತನಾಗುತ್ತಾನೆ. ಅಗ್ನಿಷ್ಟೋಮ ಮತ್ತು ಅತಿರಾತ್ರಿ ಈ ಎರಡು ಯಜ್ಞಗಳ ಫಲವನ್ನು ಹೊಂದುತ್ತಾನೆ ಮತ್ತು ಅವನ ಕುಲದ ಏಳು ತಲೆಮಾರುಗಳನ್ನು ಪುನೀತಗೊಳಿಸುತ್ತಾನೆ.

03081133c ಅವತೀರ್ಣಂ ಚ ತತ್ರೈವ ತೀರ್ಥಂ ಕುರುಕುಲೋದ್ವಹ।।
03081133e ವಿಪ್ರಾಣಾಮನುಕಂಪಾರ್ಥಂ ದರ್ಭಿಣಾ ನಿರ್ಮಿತಂ ಪುರಾ।।

ಕುರುಕುಲೋದ್ವಹ! ಅಲ್ಲಿಯೇ ವಿಪ್ರರಮೇಲಿನ ಅನುಕಂಪದಿಂದ ದರ್ಭಿಯು ಹಿಂದೆ ನಿರ್ಮಿಸಿದ್ದ ಅವತೀರ್ಣ ತೀರ್ಥವಿದೆ.

03081134a ವ್ರತೋಪನಯನಾಭ್ಯಾಂ ವಾ ಉಪವಾಸೇನ ವಾ ದ್ವಿಜಃ।
03081134c ಕ್ರಿಯಾಮಂತ್ರೈಶ್ಚ ಸಂಯುಕ್ತೋ ಬ್ರಾಹ್ಮಣಃ ಸ್ಯಾನ್ನ ಸಂಶಯಃ।।
03081135a ಕ್ರಿಯಾಮಂತ್ರವಿಹೀನೋಽಪಿ ತತ್ರ ಸ್ನಾತ್ವಾ ನರರ್ಷಭ।
03081135c ಚೀರ್ಣವ್ರತೋ ಭವೇದ್ವಿಪ್ರೋ ದೃಷ್ಟಮೇತತ್ಪುರಾತನೇ।।

ವ್ರತ, ಉಪನಯನ, ಉಪವಾಸ ಮತ್ತು ಕ್ರಿಯಾಮಂತ್ರ ಸಂಯುಕ್ತ ದ್ವಿಜನು ನಿಜವಾಗಿಯೂ ಬ್ರಾಹ್ಮಣ. ಆದರೆ ನರರ್ಷಭ! ಕ್ರಿಯಮಂತ್ರವಿಹೀನನೂ ಕೂಡ ಅಲ್ಲಿ ಸ್ನಾನಮಾಡುವುದರಿಂದ ವ್ರತಸಿದ್ಧ ಬ್ರಾಹ್ಮಣನಾಗುತ್ತಾನೆ ಎಂದು ಬಹಳ ಹಿಂದಿನಿಂದಲೂ ಕಂಡಿದ್ದೇವೆ.

03081136a ಸಮುದ್ರಾಶ್ಚಾಪಿ ಚತ್ವಾರಃ ಸಮಾನೀತಾಶ್ಚ ದರ್ಭಿಣಾ।
03081136c ಯೇಷು ಸ್ನಾತೋ ನರವ್ಯಾಘ್ರ ನ ದುರ್ಗತಿಮವಾಪ್ನುಯಾತ್।।
03081136e ಫಲಾನಿ ಗೋಸಹಸ್ರಾಣಾಂ ಚತುರ್ಣಾಂ ವಿಂದತೇ ಚ ಸಃ।।

ದರ್ಭಿಯು ಇಲ್ಲಿ ನಾಲ್ಕೂ ಸಮುದ್ರಗಳನ್ನೂ ಉಟ್ಟುಗೂಡಿಸಿದ್ದಾನೆ. ನರವ್ಯಾಘ್ರ! ಇವುಗಳಲ್ಲಿ ಸ್ನಾನಮಾಡಿದವನು ದುರ್ಗತಿಯನ್ನು ಹೊಂದುವುದಿಲ್ಲ ಮತ್ತು ಅವನು ನಾಲ್ಕು ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಹೊಂದುತ್ತಾನೆ.

03081137a ತತೋ ಗಚ್ಚೇತ ರಾಜೇಂದ್ರ ತೀರ್ಥಂ ಶತಸಹಸ್ರಕಂ।
03081137c ಸಾಹಸ್ರಕಂ ಚ ತತ್ರೈವ ದ್ವೇ ತೀರ್ಥೇ ಲೋಕವಿಶ್ರುತೇ।।
03081138a ಉಭಯೋರ್ಹಿ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।
03081138c ದಾನಂ ವಾಪ್ಯುಪವಾಸೋ ವಾ ಸಹಸ್ರಗುಣಿತಂ ಭವೇತ್।।

ರಾಜೇಂದ್ರ! ಅನಂತರ ಶತಸಹಸ್ರಕ ಮತ್ತು ಅಲ್ಲಿಯೇ ಇರುವ ಸಹಸ್ರಕ ಈ ಎರಡು ಲೋಕವಿಶ್ರುತ ತೀರ್ಥಗಳಿಗೆ ಹೋಗಬೇಕು. ಇವೆರಡರಲ್ಲಿ ಸ್ನಾನಮಾಡಿದ ನರನು ಸಾವಿರ ಗೋವುಗಳನ್ನು ದಾನವಿತ್ತ ಫಲವನ್ನು ಪಡೆಯುತ್ತಾನೆ ಮತ್ತು ಅವನು ಮಾಡಿದ ದಾನ-ಉಪವಾಸಗಳು ಸಾವಿರಪಟ್ಟು ಆಗುತ್ತವೆ.

03081139a ತತೋ ಗಚ್ಚೇತ ರಾಜೇಂದ್ರ ರೇಣುಕಾತೀರ್ಥಮುತ್ತಮಂ।
03081139c ತತ್ರಾಭಿಷೇಕಂ ಕುರ್ವೀತ ಪಿತೃದೇವಾರ್ಚನೇ ರತಃ।।
03081139e ಸ್ರವಪಾಪವಿಶುದ್ಧಾತ್ಮಾ ಅಗ್ನಿಷ್ಟೋಮಫಲಂ ಲಭೇತ್।।

ರಾಜೇಂದ್ರ! ಅನಂತರ ಅನುತ್ತಮ ರೇಣುಕಾತೀರ್ಥಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಪಿತೃ-ದೇವತಾರ್ಚನೆಗಳಲ್ಲಿ ನಿರತನಾದವನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಅಗ್ನಿಷ್ಟೋಮಯಾಗದ ಫಲವನ್ನು ಪಡೆಯುತ್ತಾನೆ.

03081140a ವಿಮೋಚನಮುಪಸ್ಪೃಶ್ಯ ಜಿತಮನ್ಯುರ್ಜಿತೇಂದ್ರಿಯಃ।
03081140c ಪ್ರತಿಗ್ರಹಕೃತೈರ್ದೋಷೈಃ ಸರ್ವೈಃ ಸ ಪರಿಮುಚ್ಯತೇ।।

ವಿಮೋಚನದಲ್ಲಿ ಸ್ನಾನಮಾಡಿ ಸಿಟ್ಟನ್ನು ಗೆದ್ದ ಜಿತೇಂದ್ರಿಯನು ಗಳಿಸುವುದರಲ್ಲಿ ಮಾಡಿದ ಸರ್ವ ದೋಷಗಳಿಂದ ಮುಕ್ತನಾಗುತ್ತಾನೆ.

03081141a ತತಃ ಪಂಚವಟಂ ಗತ್ವಾ ಬ್ರಹ್ಮಚಾರೀ ಜಿತೇಂದ್ರಿಯಃ।
03081141c ಪುಣ್ಯೇನ ಮಹತಾ ಯುಕ್ತಃ ಸತಾಂ ಲೋಕೇ ಮಹೀಯತೇ।।

ಅನಂತರ ಪಂಚವಟಿಗೆ ಹೋಗಿ ಜಿತೇಂದ್ರಿಯನಾಗಿದ್ದ ಬ್ರಹ್ಮಚಾರಿಯು ಮಹಾ ಪುಣ್ಯದಿಂದೊಡಗೂಡಿ ಸತ್ಯವಂತರ ಲೋಕದಲ್ಲಿ ಗೌರವಿಸಲ್ಪಡುತ್ತಾನೆ.

03081142a ಯತ್ರ ಯೋಗೇಶ್ವರಃ ಸ್ಥಾಣುಃ ಸ್ವಯಮೇವ ವೃಷಧ್ವಜಃ।
03081142c ತಮರ್ಚಯಿತ್ವಾ ದೇವೇಶಂ ಗಮನಾದೇವ ಸಿಧ್ಯತಿ।।

ಅಲ್ಲಿ ಸ್ವಯಂ ಯೋಗೇಶ್ವರ ಸ್ಥಾಣು ವೃಷಧ್ವಜನಿದ್ದಾನೆ. ಅಲ್ಲಿಗೆ ಹೋಗಿ ಆ ದೇವೇಶನನ್ನು ಪೂಜಿಸಿದವನು ಸಿದ್ಧಿಯನ್ನು ಹೊಂದುತ್ತಾನೆ.

03081143a ಔಜಸಂ ವರುಣಂ ತೀರ್ಥಂ ದೀಪ್ಯತೇ ಸ್ವೇನ ತೇಜಸಾ।
03081143c ಯತ್ರ ಬ್ರಹ್ಮಾದಿಭಿರ್ದೇವೈರೃಷಿಭಿಶ್ಚ ತಪೋಧನೈಃ।।
03081143e ಸೇನಾಪತ್ಯೇನ ದೇವಾನಾಮಭಿಷಿಕ್ತೋ ಗುಹಸ್ತದಾ।।

ವರುಣ ತೀರ್ಥ ಔಜಸವು ತನ್ನದೇ ಕಾಂತಿಯಿಂದ ಬೆಳಗುತ್ತದೆ. ಅಲ್ಲಿ ಗುಹನು ಬ್ರಹ್ಮನೇ ಮೊದಲಾಗಿ ದೇವತೆಗಳು ಮತ್ತು ತಪೋಧನ ಋಷಿಗಳಿಂದ ದೇವತೆಗಳ ಸೇನಾಪತಿಯಾಗಿ ಅಭಿಷಿಕ್ತನಾದನು.

03081144a ಔಜಸಸ್ಯ ತು ಪೂರ್ವೇಣ ಕುರುತೀರ್ಥಂ ಕುರೂದ್ವಹ।
03081144c ಕುರುತೀರ್ಥೇ ನರಃ ಸ್ನಾತ್ವಾ ಬ್ರಹ್ಮಚಾರೀ ಜಿತೇಂದ್ರಿಯಃ।।
03081144e ಸರ್ವಪಾಪವಿಶುದ್ಧಾತ್ಮಾ ಕುರುಲೋಕಂ ಪ್ರಪದ್ಯತೇ।।

ಕುರೂದ್ವಹ! ಔಜಸದ ಪೂರ್ವದಲ್ಲಿ ಕುರುತೀರ್ಥವಿದೆ. ಬ್ರಹ್ಮಚಾರಿಯೂ ಜಿತೇಂದ್ರಿಯನೂ ಆಗಿದ್ದು ಕುರುತೀರ್ಥದಲ್ಲಿ ಸ್ನಾನಮಾಡಿದ ನರನು ಸರ್ವಪಾಪಗಳಿಂದ ವಿಶುದ್ಧಾತ್ಮನಾಗಿ ಕುರುಲೋಕವನ್ನು1 ಪಡೆಯುತ್ತಾನೆ.

03081145a ಸ್ವರ್ಗದ್ವಾರಂ ತತೋ ಗಚ್ಚೇನ್ನಿಯತೋ ನಿಯತಾಶನಃ।
03081145c ಸ್ವರ್ಗಲೋಕಮವಾಪ್ನೋತಿ ಬ್ರಹ್ಮಲೋಕಂ ಚ ಗಚ್ಚತಿ।।

ಅನಂತರ ನಿಯತನಾಗಿ ನಿಯತಾಶನನಾಗಿ ಸ್ವರ್ಗದ್ವಾರಕ್ಕೆ ಹೋದರೆ ಸ್ವರ್ಗಲೋಕವು ದೊರೆಯುತ್ತದೆ ಮತ್ತು ಬ್ರಹ್ಮಲೋಕಕ್ಕೆ ಹೋಗುತ್ತಾರೆ.

03081146a ತತೋ ಗಚ್ಚೇದನರಕಂ ತೀರ್ಥಸೇವೀ ನರಾಧಿಪ।
03081146c ತತ್ರ ಸ್ನಾತ್ವಾ ನರೋ ರಾಜನ್ನ ದುರ್ಗತಿಮವಾಪ್ನುಯಾತ್।।

ನರಾಧಿಪ! ಅನಂತರ ತೀರ್ಥಯಾತ್ರಿಯು ಅನರಕಕ್ಕೆ ಹೋಗಬೇಕು. ರಾಜನ್! ಅಲ್ಲಿ ಸ್ನಾನಮಾಡಿದ ನರನು ದುರ್ಗತಿಯನ್ನು ಹೊಂದುವುದಿಲ್ಲ.

03081147a ತತ್ರ ಬ್ರಹ್ಮಾ ಸ್ವಯಂ ನಿತ್ಯಂ ದೇವೈಃ ಸಹ ಮಹೀಪತೇ।
03081147c ಅನ್ವಾಸ್ಯತೇ ನರಶ್ರೇಷ್ಠ ನಾರಾಯಣಪುರೋಗಮೈಃ।।

ಮಹೀಪತೇ! ನರಶ್ರೇಷ್ಠ! ಅಲ್ಲಿ ಸ್ವಯಂ ಬ್ರಹ್ಮನು ದೇವತೆಗಳೊಡಗೂಡಿ ನಾರಾಯಣನನ್ನು ಮುಂದಿಟ್ಟುಕೊಂಡು ಅವನನ್ನು ಪೂಜಿಸುತ್ತಾನೆ.

03081148a ಸಾನ್ನಿಧ್ಯಂ ಚೈವ ರಾಜೇಂದ್ರ ರುದ್ರಪತ್ನ್ಯಾಃ ಕುರೂದ್ವಹ।
03081148c ಅಭಿಗಮ್ಯ ಚ ತಾಂ ದೇವೀಂ ನ ದುರ್ಗತಿಮವಾಪ್ನುಯಾತ್।।

ಕುರೂದ್ವಹ! ರಾಜೇಂದ್ರ! ಅಲ್ಲಿಯೇ ರುದ್ರಪತ್ನಿಯ ಸನ್ನಿಧಿಯೂ ಇದೆ. ಆ ದೇವಿಯ ಬಳಿಸಾರಿದರೆ ದುರ್ಗತಿಯನ್ನು ಹೊಂದುವುದಿಲ್ಲ,

03081149a ತತ್ರೈವ ಚ ಮಹಾರಾಜ ವಿಶ್ವೇಶ್ವರಮುಮಾಪತಿಂ।
03081149c ಅಭಿಗಮ್ಯ ಮಹಾದೇವಂ ಮುಚ್ಯತೇ ಸರ್ವಕಿಲ್ಬಿಷೈಃ।।

ಮಹಾರಾಜ! ಅಲ್ಲಿಯೇ ಉಮಾಪತಿ ವಿಶ್ವೇಶ್ವರ ಮಹಾದೇವನ ಬಳಿಸಾರಿದರೆ ಸರ್ವ ಪಾಪಗಳಿಂದ ಬಿಡುಗಡೆ ದೊರೆಯುತ್ತದೆ.

03081150a ನಾರಾಯಣಂ ಚಾಭಿಗಮ್ಯ ಪದ್ಮನಾಭಮರಿಂದಮಂ।
03081150c ಶೋಭಮಾನೋ ಮಹಾರಾಜ ವಿಷ್ಣುಲೋಕಂ ಪ್ರಪದ್ಯತೇ।।

ಮಹಾರಾಜ! ಅರಿಂದಮ ಪದ್ಮನಾಭ ನಾರಾಯಣನ ಬಳಿಸಾರಿದರೆ ಶೋಭಾಯಮಾನ ವಿಷ್ಣುಲೋಕವನ್ನು ಪಡೆಯುತ್ತಾರೆ.

03081151a ತೀರ್ಥೇ ತು ಸರ್ವದೇವಾನಾಂ ಸ್ನಾತಃ ಸ ಪುರುಷರ್ಷಭ।
03081151c ಸರ್ವದುಃಖೈಃ ಪರಿತ್ಯಕ್ತೋ ದ್ಯೋತತೇ ಶಶಿವತ್ಸದಾ।।

ಪುರುಷರ್ಷಭ! ಸರ್ವದೇವ ತೀರ್ಥದಲ್ಲಿ ಸ್ನಾನಮಾಡಿದವನು ಸರ್ವದುಃಖಗಳಿಂದ ದೂರನಾಗಿ ಸದಾ ಚಂದ್ರನಂತೆ ಬೆಳಗುತ್ತಾನೆ.

03081152a ತತಃ ಸ್ವಸ್ತಿಪುರಂ ಗಚ್ಚೇತ್ತೀರ್ಥಸೇವೀ ನರಾಧಿಪ।
03081152c ಪಾವನಂ ತೀರ್ಥಮಾಸಾದ್ಯ ತರ್ಪಯೇತ್ಪಿತೃದೇವತಾಃ।।
03081152e ಅಗ್ನಿಷ್ಟೋಮಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।।

ನರಾಧಿಪ! ಅಲ್ಲಿಂದ ತೀರ್ಥಯಾತ್ರಿಯು ಸ್ವಸ್ತಿಪುರಕ್ಕೆ ಹೋಗಬೇಕು. ಆ ಪಾವನ ತೀರ್ಥವನ್ನು ಸೇರಿ ಪಿತೃಗಳಿಗೆ ಮತ್ತು ದೇವತೆಗಳಿಗೆ ತರ್ಪಣವನ್ನಿತ್ತ ಮಾನವನು ಅಗ್ನಿಷ್ಟೋಮ ಯಾಗದ ಫಲವನ್ನು ಪಡೆಯುತ್ತಾನೆ.

03081153a ಗಂಗಾಹ್ರದಶ್ಚ ತತ್ರೈವ ಕೂಪಶ್ಚ ಭರತರ್ಷಭ।
03081153c ತಿಸ್ರಃ ಕೋಟ್ಯಸ್ತು ತೀರ್ಥಾನಾಂ ತಸ್ಮಿನ್ಕೂಪೇ ಮಹೀಪತೇ।।
03081153e ತತ್ರ ಸ್ನಾತ್ವಾ ನರೋ ರಾಜನ್ಸ್ವರ್ಗಲೋಕಂ ಪ್ರಪದ್ಯತೇ।।

ಭರತರ್ಷಭ! ಮಹೀಪತೇ! ರಾಜನ್! ಅಲ್ಲಿಯೇ ಗಂಗಾ ಸರೋವರ ಮತ್ತು ಬಾವಿಗಳಿವೆ. ಆ ಬಾವಿಯಲ್ಲಿ ಮೂರುಕೋಟಿ ತೀರ್ಥಗಳಿವೆ. ಅಲ್ಲಿ ಸ್ನಾನಮಾಡಿದ ನರನು ಸ್ವರ್ಗಲೋಕವನ್ನು ಹೊಂದುತ್ತಾನೆ.

03081154a ಆಪಗಾಯಾಂ ನರಃ ಸ್ನಾತ್ವಾ ಅರ್ಚಯಿತ್ವಾ ಮಹೇಶ್ವರಂ।
03081154c ಗಾಣಪತ್ಯಮವಾಪ್ನೋತಿ ಕುಲಂ ಚೋದ್ಧರತೇ ಸ್ವಕಂ।।

ಆಪಗ ಗಂಗೆಯಲ್ಲಿ ಮಿಂದು ಮಹೇಶ್ವರನನ್ನು ಅರ್ಚಿಸಿದ ನರನು ಗಾಣಪತ್ಯವನ್ನು ಪಡೆದು ತನ್ನ ಕುಲವನ್ನು ಉದ್ಧಾರಮಾಡುತ್ತಾನೆ.

03081155a ತತಃ ಸ್ಥಾಣುವಟಂ ಗಚ್ಚೇತ್ತ್ರಿಷು ಲೋಕೇಷು ವಿಶ್ರುತಂ।
03081155c ತತ್ರ ಸ್ನಾತ್ವಾ ಸ್ಥಿತೋ ರಾತ್ರಿಂ ರುದ್ರಲೋಕಮವಾಪ್ನುಯಾತ್।।

ಅನಂತರ ಲೋಕವಿಶ್ರುತ ಸ್ಥಾಣುವಟಕ್ಕೆ ಹೋಗಬೇಕು. ಅಲ್ಲಿ ಸ್ನಾನಮಾಡಿ ಒಂದು ರಾತ್ರಿ ಉಳಿದವನು ರುದ್ರಲೋಕವನ್ನು ಹೊಂದುತ್ತಾನೆ.

03081156a ಬದರೀಪಾಚನಂ ಗಚ್ಚೇದ್ವಸಿಷ್ಠಸ್ಯಾಶ್ರಮಂ ತತಃ।
03081156c ಬದರಂ ಭಕ್ಷಯೇತ್ತತ್ರ ತ್ರಿರಾತ್ರೋಪೋಷಿತೋ ನರಃ।।

ಅನಂತರ ನರನು ವಸಿಷ್ಠನ ಆಶ್ರಮ ಬದರೀಪಾಚನಕ್ಕೆ ಹೋಗಬೇಕು ಮತ್ತು ಅಲ್ಲಿ ಬದರಿ ಹಣ್ಣುಗಳನ್ನು ತಿಂದು ಮೂರುರಾತ್ರಿಗಳನ್ನು ಕಳೆಯಬೇಕು.

03081157a ಸಮ್ಯಗ್ದ್ವಾದಶ ವರ್ಷಾಣಿ ಬದರಾನ್ಭಕ್ಷಯೇತ್ತು ಯಃ।
03081157c ತ್ರಿರಾತ್ರೋಪೋಷಿತಶ್ಚೈವ ಭವೇತ್ತುಲ್ಯೋ ನರಾಧಿಪ।।

ನರಾಧಿಪ! ಹನ್ನೆರಡು ವರ್ಷಗಳು ಒಂದೇಸಮನೆ ಬದರಿ ಹಣ್ಣುಗಳನ್ನು2 ತಿನ್ನುವುದೂ ಮತ್ತು ಅಲ್ಲಿ ಮೂರು ರಾತ್ರಿಗಳನ್ನು ಕಳೆಯುವುದೂ ಒಂದೇ ಸಮ.

03081158a ಇಂದ್ರಮಾರ್ಗಂ ಸಮಾಸಾದ್ಯ ತೀರ್ಥಸೇವೀ ನರಾಧಿಪ।
03081158c ಅಹೋರಾತ್ರೋಪವಾಸೇನ ಶಕ್ರಲೋಕೇ ಮಹೀಯತೇ।।

ನರಾಧಿಪ! ತೀರ್ಥಯಾತ್ರಿಯು ಇಂದ್ರಮಾರ್ಗವನ್ನು ಸೇರಿ ಒಂದು ದಿನ ಮತ್ತು ರಾತ್ರಿ ಉಪವಾಸವಿರುವುದರಿಂದ ಶಕ್ರಲೋಕದಲ್ಲಿ ಮೆರೆಯುತ್ತಾನೆ.

03081159a ಏಕರಾತ್ರಂ ಸಮಾಸಾದ್ಯ ಏಕರಾತ್ರೋಷಿತೋ ನರಃ।
03081159c ನಿಯತಃ ಸತ್ಯವಾದೀ ಚ ಬ್ರಹ್ಮಲೋಕೇ ಮಹೀಯತೇ।।

ನಿಯತನೂ ಸತ್ಯವಾದಿಯೂ ಆಗಿದ್ದು ಏಕರಾತ್ರಿಯನ್ನು ತಲುಪಿ ಅಲ್ಲಿ ಒಂದು ರಾತ್ರಿ ಉಳಿದ ನರನು ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.

03081160a ತತೋ ಗಚ್ಚೇತ ಧರ್ಮಜ್ಞ ತೀರ್ಥಂ ತ್ರೈಲೋಕ್ಯವಿಶ್ರುತಂ।
03081160c ಆದಿತ್ಯಸ್ಯಾಶ್ರಮೋ ಯತ್ರ ತೇಜೋರಾಶೇರ್ಮಹಾತ್ಮನಃ।।

ಧರ್ಮಜ್ಞ! ಅಲ್ಲಿಂದ ಮೂರುಲೋಕಗಳಲ್ಲಿ ವಿಶ್ರುತ ತೇಜೋರಾಶಿ ಮಹಾತ್ಮ ಆದಿತ್ಯನ ಆಶ್ರಮಕ್ಕೆ ಹೋಗಬೇಕು.

03081161a ತಸ್ಮಿಂಸ್ತೀರ್ಥೇ ನರಃ ಸ್ನಾತ್ವಾ ಪೂಜಯಿತ್ವಾ ವಿಭಾವಸುಂ।
03081161c ಆದಿತ್ಯಲೋಕಂ ವ್ರಜತಿ ಕುಲಂ ಚೈವ ಸಮುದ್ಧರೇತ್।।

ಆ ತೀರ್ಥದಲ್ಲಿ ಸ್ನಾನಮಾಡಿ ವಿಭಾವಸುವನ್ನು ಪೂಜಿಸಿದ ನರನು ಆದಿತ್ಯಲೋಕವನ್ನು ಸೇರುತ್ತಾನೆ ಮತ್ತು ತನ್ನ ಕುಲವನ್ನೂ ಉದ್ಧರಿಸುತ್ತಾನೆ.

03081162a ಸೋಮತೀರ್ಥೇ ನರಃ ಸ್ನಾತ್ವಾ ತೀರ್ಥಸೇವೀ ಕುರೂದ್ವಹ।
03081162c ಸೋಮಲೋಕಮವಾಪ್ನೋತಿ ನರೋ ನಾಸ್ತ್ಯತ್ರ ಸಂಶಯಃ।।

ಕುರೂದ್ವಹ! ಸೋಮತೀರ್ಥದಲ್ಲಿ ಸ್ನಾನಮಾಡಿದ ನರನು ಸೋಮಲೋಕವನ್ನು ಸೇರುತ್ತಾನೆ ಎನ್ನುವುದಲ್ಲಿ ಸಂಶಯವೇ ಇಲ್ಲ.

03081163a ತತೋ ಗಚ್ಚೇತ ಧರ್ಮಜ್ಞ ದಧೀಚಸ್ಯ ಮಹಾತ್ಮನಃ।
03081163c ತೀರ್ಥಂ ಪುಣ್ಯತಮಂ ರಾಜನ್ಪಾವನಂ ಲೋಕವಿಶ್ರುತಂ।।
03081164a ಯತ್ರ ಸಾರಸ್ವತೋ ರಾಜನ್ಸೋಽಂಗಿರಾಸ್ತಪಸೋ ನಿಧಿಃ।

ಧರ್ಮಜ್ಞ! ರಾಜನ್! ಅನಂತರ ಮಹಾತ್ಮ ದಧೀಚಿಯ ಪುಣ್ಯತಮ ಲೋಕವಿಶ್ರುತ ತೀರ್ಥಕ್ಕೆ ಹೋಗಬೇಕು. ಇಲ್ಲಿ ಸಾರಸ್ವತ ಅಂಗಿರಸನ ತಪೋನಿಧಿಯಿದೆ.

03081164c ತಸ್ಮಿಂಸ್ತೀರ್ಥೇ ನರಃ ಸ್ನಾತ್ವಾ ವಾಜಪೇಯಫಲಂ ಲಭೇತ್।।
03081164e ಸಾರಸ್ವತೀಂ ಗತಿಂ ಚೈವ ಲಭತೇ ನಾತ್ರ ಸಂಶಯಃ।।

ಆ ತೀರ್ಥದಲ್ಲಿ ಸ್ನಾನಮಾಡಿದ ನರನಿಗೆ ವಾಜಪೇಯದ ಫಲವು ದೊರೆಯುತ್ತದೆ ಮತ್ತು ಅವನಿಗೆ ಸಾರಸ್ವತಿಯ ಗತಿಯೂ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03081165a ತತಃ ಕನ್ಯಾಶ್ರಮಂ ಗಚ್ಚೇನ್ನಿಯತೋ ಬ್ರಹ್ಮಚರ್ಯವಾನ್।
03081165c ತ್ರಿರಾತ್ರೋಪೋಷಿತೋ ರಾಜನ್ನುಪವಾಸಪರಾಯಣಃ।।
03081165e ಲಭೇತ್ಕನ್ಯಾಶತಂ ದಿವ್ಯಂ ಬ್ರಹ್ಮಲೋಕಂ ಚ ಗಚ್ಚತಿ।।

ಅಲ್ಲಿಂದ ನಿಯತನಾಗಿ ಬ್ರಹ್ಮಚಾರಿಯಾಗಿದ್ದುಕೊಂಡು ಕನ್ಯಾಶ್ರಮಕ್ಕೆ ಹೋಗಬೇಕು. ರಾಜನ್! ಅಲ್ಲಿ ಉಪವಾಸ ಪರಾಯಣನಾಗಿ ಮೂರು ರಾತ್ರಿಗಳನ್ನು ಕಳೆದವನಿಗೆ ನೂರು ದಿವ್ಯ ಕನ್ಯೆಯರು ದೊರೆಯುತ್ತಾರೆ ಮತ್ತು ಅವನು ಬ್ರಹ್ಮಲೋಕಕ್ಕೆ ಹೋಗುತ್ತಾನೆ.

03081166a ತತೋ ಗಚ್ಚೇತ ಧರ್ಮಜ್ಞ ತೀರ್ಥಂ ಸನ್ನಿಹಿತೀಮಪಿ।
03081166c ಯತ್ರ ಬ್ರಹ್ಮಾದಯೋ ದೇವಾ ಋಷಯಶ್ಚ ತಪೋಧನಾಃ।।
03081166e ಮಾಸಿ ಮಾಸಿ ಸಮಾಯಾಂತಿ ಪುಣ್ಯೇನ ಮಹತಾನ್ವಿತಾಃ।।

ಅನಂತರ ಧರ್ಮಜ್ಞ! ಸನ್ನಿಹಿತೀ ತೀರ್ಥಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮನೇ ಮೊದಲಾದ ದೇವತೆಗಳು, ತಪೋಧನ ಋಷಿಗಳು ಪ್ರತಿ ತಿಂಗಳೂ ಸೇರುತ್ತಾರೆ ಮತ್ತು ಅಲ್ಲಿ ಮಹಾ ಪುಣ್ಯವನ್ನು ನೀಡುತ್ತಾರೆ.

03081167a ಸನ್ನಿಹಿತ್ಯಾಮುಪಸ್ಪೃಶ್ಯ ರಾಹುಗ್ರಸ್ತೇ ದಿವಾಕರೇ।
03081167c ಅಶ್ವಮೇಧಶತಂ ತೇನ ಇಷ್ಟಂ ಭವತಿ ಶಾಶ್ವತಂ।।

ದಿವಾಕರನು ರಾಹುಗ್ರಸ್ತನಾಗಿದ್ದಾಗ ಸನ್ನಿಹಿತಿಯಲ್ಲಿ ಮಿಂದವನ ನೂರು ಅಶ್ವಮೇಧಯಾಗಗಳು ಶಾಶ್ವತವಾಗುತ್ತವೆ.

03081168a ಪೃಥಿವ್ಯಾಂ ಯಾನಿ ತೀರ್ಥಾನಿ ಅಂತರಿಕ್ಷಚರಾಣಿ ಚ।
03081168c ನದ್ಯೋ ನದಾಸ್ತಡಾಗಾಶ್ಚ ಸರ್ವಪ್ರಸ್ರವಣಾನಿ ಚ।।
03081169a ಉದಪಾನಾಶ್ಚ ವಪ್ರಾಶ್ಚ ಪುಣ್ಯಾನ್ಯಾಯತನಾನಿ ಚ।
03081169c ಮಾಸಿ ಮಾಸಿ ಸಮಾಯಾಂತಿ ಸನ್ನಿಹಿತ್ಯಾಂ ನ ಸಂಶಯಃ।।

ಭೂಮಿಯ ಮೇಲಿರುವ ಮತ್ತು ಆಕಾಶದಲ್ಲಿ ಹರಿಯುವ ಏನೆಲ್ಲ ತೀರ್ಥಗಳು, ನದ-ನದಿಗಳು, ಕೆರೆ-ಚಿಲುಮೆಗಳು, ಸರೋವರ-ಬಾವಿಗಳು ಮತ್ತು ಪುಣ್ಯಪ್ರದೇಶಗಳು ಪ್ರತಿ ತಿಂಗಳೂ ಸನ್ನಿಹಿತಿಯಲ್ಲಿ ಬಂದು ಸೇರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

03081170a ಯತ್ಕಿಂ ಚಿದ್ದುಷ್ಕೃತಂ ಕರ್ಮ ಸ್ತ್ರಿಯಾ ವಾ ಪುರುಷಸ್ಯ ವಾ।
03081170c ಸ್ನಾತಮಾತ್ರಸ್ಯ ತತ್ಸರ್ವಂ ನಶ್ಯತೇ ನಾತ್ರ ಸಂಶಯಃ।।
03081170e ಪದ್ಮವರ್ಣೇನ ಯಾನೇನ ಬ್ರಹ್ಮಲೋಕಂ ಸ ಗಚ್ಚತಿ।।

ಸ್ತ್ರೀಯಾಗಿರಲಿ ಅಥವಾ ಪುರುಷನಾಗಿರಲಿ ಏನೆಲ್ಲ ಕರ್ಮಗಳನ್ನು ಮಾಡಿರುತ್ತಾರೋ ಅವೆಲ್ಲವೂ ಅಲ್ಲಿ ಸ್ನಾನಮಾಡುವುದರಿಂದ ನಾಶಹೊಂದುತ್ತವೆ ಮತ್ತು ಅವರು ಪದ್ಮವರ್ಣದ ಯಾನದಲ್ಲಿ ಬ್ರಹ್ಮಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ

03081171a ಅಭಿವಾದ್ಯ ತತೋ ಯಕ್ಷಂ ದ್ವಾರಪಾಲಮರಂತುಕಂ।
03081171c ಕೋಟಿರೂಪಮುಪಸ್ಪೃಶ್ಯ ಲಭೇದ್ಬಹು ಸುವರ್ಣಕಂ।।

ಅನಂತರ ದ್ವಾರಪಾಲಕ ಅರಂತುಕನನ್ನು ಅಭಿವಂದಿಸಿ ಕೋಟಿರೂಪದಲ್ಲಿ ಸ್ನಾನಮಾಡಿದವನಿಗೆ ಬಹು ಸುವರ್ಣವು ದೊರೆಯುತ್ತದೆ.

03081172a ಗಂಗಾಹ್ರದಶ್ಚ ತತ್ರೈವ ತೀರ್ಥಂ ಭರತಸತ್ತಮ।
03081172c ತತ್ರ ಸ್ನಾತಸ್ತು ಧರ್ಮಜ್ಞ ಬ್ರಹ್ಮಚಾರೀ ಸಮಾಹಿತಃ।।
03081172e ರಾಜಸೂಯಾಶ್ವಮೇಧಾಭ್ಯಾಂ ಫಲಂ ವಿಂದತಿ ಶಾಶ್ವತಂ।।

ಭರತಸತ್ತಮ! ಅಲ್ಲಿಯೇ ಗಂಗಾಸರೋವರವೊಂದಿದೆ. ಧರ್ಮಜ್ಞ! ಅಲ್ಲಿ ಬ್ರಹ್ಮಚಾರಿಯಾಗಿದ್ದುಕೊಂಡು ಸ್ನಾನಮಾಡುವುದರಿಂದ ರಾಜಸೂಯ ಮತ್ತು ಅಶ್ವಮೇಧಯಾಗಗಳ ಶಾಶ್ವತ ಫಲವು ದೊರೆಯುತ್ತದೆ.

03081173a ಪೃಥಿವ್ಯಾಂ ನೈಮಿಷಂ ಪುಣ್ಯಮಂತರಿಕ್ಷೇ ಚ ಪುಷ್ಕರಂ।
03081173c ತ್ರಯಾಣಾಮಪಿ ಲೋಕಾನಾಂ ಕುರುಕ್ಷೇತ್ರಂ ವಿಶಿಷ್ಯತೇ।।

ಭೂಮಿಯ ಮೇಲೆ ನೈಮಿಷವು ಪುಣ್ಯ ಮತ್ತು ಅಂತರಿಕ್ಷದಲ್ಲಿ ಪುಷ್ಕರವು ಪುಣ್ಯ. ಆದರೆ ಮೂರೂ ಲೋಕಗಳಲ್ಲಿ ಕುರುಕ್ಷೇತ್ರವು ವಿಶೇಷವಾಗಿದ್ದುದು.

03081174a ಪಾಂಸವೋಽಪಿ ಕುರುಕ್ಷೇತ್ರೇ ವಾಯುನಾ ಸಮುದೀರಿತಾಃ।
03081174c ಅಪಿ ದುಷ್ಕೃತಕರ್ಮಾಣಂ ನಯಂತಿ ಪರಮಾಂ ಗತಿಂ।।

ಕುರುಕ್ಷೇತ್ರದಲ್ಲಿ ಗಾಳಿಯಿಂದ ತೂರಿಬಂದ ಧೂಳೂ ಕೂಡ ಕೆಟ್ಟ ಕರ್ಮಗಳನ್ನು ಮಾಡಿದವರಿಗೂ ಸಹ ಪರಮ ಗತಿಯನ್ನು ನೀಡುತ್ತದೆ.

03081175a ದಕ್ಷಿಣೇನ ಸರಸ್ವತ್ಯಾ ಉತ್ತರೇಣ ದೃಷದ್ವತೀಂ।
03081175c ಯೇ ವಸಂತಿ ಕುರುಕ್ಷೇತ್ರೇ ತೇ ವಸಂತಿ ತ್ರಿವಿಷ್ಟಪೇ।।

ಸರಸ್ವತೀ ನದಿಯ ದಕ್ಷಿಣದಲ್ಲಿ ಮತ್ತು ದೃಷ್ಟದ್ವತೀ ನದಿಯ ಉತ್ತರದಲ್ಲಿರುವ ಕುರುಕ್ಷೇತ್ರದಲ್ಲಿ ವಾಸಿಸುವರು ಸ್ವರ್ಗದಲ್ಲಿ ವಾಸಿಸುವವರಂತೆ.

03081176a ಕುರುಕ್ಷೇತ್ರಂ ಗಮಿಷ್ಯಾಮಿ ಕುರುಕ್ಷೇತ್ರೇ ವಸಾಮ್ಯಹಂ।
03081176c ಅಪ್ಯೇಕಾಂ ವಾಚಮುತ್ಸೃಜ್ಯ ಸರ್ವಪಾಪೈಃ ಪ್ರಮುಚ್ಯತೇ।।

ಕುರುಕ್ಷೇತ್ರಕ್ಕೆ ಹೋಗುತ್ತೇನೆ ಕುರುಕ್ಷೇತ್ರದಲ್ಲಿ ವಾಸಿಸುತ್ತೇನೆ ಎನ್ನುವ ವಾಕ್ಯವನ್ನು ಉಚ್ಚರಿಸುವವನೂ ಕೂಡ ಸರ್ವಪಾಪಗಳಿಂದ ಮುಕ್ತಿಹೊಂದುತ್ತಾನೆ.

03081177a ಬ್ರಹ್ಮವೇದೀ ಕುರುಕ್ಷೇತ್ರಂ ಪುಣ್ಯಂ ಬ್ರಹ್ಮರ್ಷಿಸೇವಿತಂ।
03081177c ತದಾವಸಂತಿ ಯೇ ರಾಜನ್ನ ತೇ ಶೋಚ್ಯಾಃ ಕಥಂ ಚನ।।

ಬ್ರಹ್ಮರ್ಷಿ ಸೇವಿತ ಬ್ರಹ್ಮನ ವೇದಿಕೆಯೆನಿಸಿದ ಪುಣ್ಯ ಕುರುಕ್ಷೇತ್ರದಲ್ಲಿ ವಾಸಿಸುವವನು ಯಾವ ರೀತಿಯಲ್ಲಿಯೂ ದುಃಖಿಸುವುದಿಲ್ಲ.

03081178a ತರಂತುಕಾರಂತುಕಯೋರ್ಯದಂತರಂ। ರಾಮಹೃದಾನಾಂ ಚ ಮಚಕ್ರುಕಸ್ಯ।
03081178c ಏತತ್ಕುರುಕ್ಷೇತ್ರಸಮಂತಪಂಚಕಂ। ಪಿತಾಮಹಸ್ಯೋತ್ತರವೇದಿರುಚ್ಯತೇ।।

ತರಂತುಕ ಮತ್ತು ಅರಂತುಕದ ಮಧ್ಯ ಮತ್ತು ಪರಶುರಾಮ ಮತ್ತು ಮಚಕ್ರುಕರ ಸರೋವರಗಳ ಮಧ್ಯ ಇರುವ ಪ್ರದೇಶವೇ ಸಮಂತಪಂಚಕ ಕುರುಕ್ಷೇತ್ರ. ಇದನ್ನೇ ಪಿತಾಮಹ ಬ್ರಹ್ಮನ ಉತ್ತರ ವೇದಿ ಎಂದು ಕರೆಯುತ್ತಾರೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಪುಲಸ್ತ್ಯತೀರ್ಥಯಾತ್ರಾಯಾಂ ಏಕಾಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಪುಲಸ್ತ್ಯತೀರ್ಥಯಾತ್ರಾ ಎನ್ನುವ ಎಂಭತ್ತೊಂದನೆಯ ಅಧ್ಯಾಯವು.


  1. ಕುರುಲೋಕ ಎಂದರೇನು? ↩︎

  2. ಬದರಿ ಹಣ್ಣುಗಳೆಂದರೇನು? ಅವುಗಳನ್ನು ತಿನ್ನುವುದರ ವಿಶೇಷತೆ ಏನು? ↩︎