080 ಪಾರ್ಥನಾರದಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 80

ಸಾರ

ನಾರದನ ಆಗಮನ, ಸತ್ಕಾರ (1-6). ಯುಧಿಷ್ಠಿರನು ನಾರದನಲ್ಲಿ ತೀರ್ಥಯಾತ್ರೆಯ ಮಹಿಮೆಗಳನ್ನು ಕೇಳುವುದು, ನಾರದನು ಅವನಿಗೆ ಪುಲಸ್ತ್ಯನು ಭೀಷ್ಮನಿಗೆ ಹೇಳಿದುದನ್ನು ಹೇಳಲು ಪ್ರಾರಂಭಿಸುವುದು (7-12). ಭೀಷ್ಮನು ಪುಲಸ್ತ್ಯನಲ್ಲಿ ತೀರ್ಥಗಳ ಕುರಿತಾದ ಧರ್ಮಸಂಶಯವನ್ನು ಕೇಳುವುದು (13-28). ಪುಲಸ್ತ್ಯನು ಎಂಥವರಿಗೆ ತೀರ್ಥಫಲವು ದೊರೆಯುವುದೆಂದು ಹೇಳುವುದು (29-40). ಪುಷ್ಕರ ತೀರ್ಥದ ಮಹಿಮೆ (41-58). ಅಜಂಬೂಮಾರ್ಗಾದಿ ತೀರ್ಥಗಳ ಮಹಿಮೆ (59-124). ರುದ್ರಕೋಟಿ ಮತ್ತು ಇತರ ತೀರ್ಥಗಳ ಮಹಿಮೆ (125-133).

03080001 ವೈಶಂಪಾಯನ ಉವಾಚ।
03080001a ಧನಂಜಯೋತ್ಸುಕಾಸ್ತೇ ತು ವನೇ ತಸ್ಮಿನ್ಮಹಾರಥಾಃ।
03080001c ನ್ಯವಸಂತ ಮಹಾಭಾಗಾ ದ್ರೌಪದ್ಯಾ ಸಹ ಪಾಂಡವಾಃ।।

ವೈಶಂಪಾನನು ಹೇಳಿದನು: “ಈ ರೀತಿ ಧನಂಜಯನನ್ನು ಅಗಲಿದ ಆ ಮಹಾರಥಿ ಪಾಂಡವರು ಮಹಾಭಾಗೆ ದ್ರೌಪದಿಯೊಂದಿಗೆ ಆ ವನದಲ್ಲಿ ವಾಸಿಸುತ್ತಿದ್ದರು.

03080002a ಅಥಾಪಶ್ಯನ್ಮಹಾತ್ಮಾನಂ ದೇವರ್ಷಿಂ ತತ್ರ ನಾರದಂ।
03080002c ದೀಪ್ಯಮಾನಂ ಶ್ರಿಯಾ ಬ್ರಾಹ್ಮ್ಯಾ ದೀಪ್ತಾಗ್ನಿಸಮತೇಜಸಂ।।

ಅನಂತರ ಅವರು ಉರಿಯುತ್ತಿರುವ ಅಗ್ನಿಯ ತೇಜಸ್ಸಿಗೆ ಸಮಾನ, ಬ್ರಹ್ಮಜ್ಞಾನದ ಶೋಭೆಯಿಂದ ಬೆಳಗುತ್ತಿರುವ ಮಹಾತ್ಮ ದೇವರ್ಷಿ ನಾರದನನ್ನು ಕಂಡರು.

03080003a ಸ ತೈಃ ಪರಿವೃತಃ ಶ್ರೀಮಾನ್ಭ್ರಾತೃಭಿಃ ಕುರುಸತ್ತಮಃ।
03080003c ವಿಬಭಾವತಿದೀಪ್ತೌಜಾ ದೇವೈರಿವ ಶತಕ್ರತುಃ।।

ಭ್ರಾತೃಗಳಿಂದ ಪರಿವೃತನಾದ ಶ್ರೀಮಾನ್ ಕುರುಸತ್ತಮನು ದೇವತೆಗಳಿಂದ ಆವೃತನಾದ ಶತಕ್ರತುವಿನಂತೆ ವಿಶೇಷ ಕಾಂತಿಯಿಂದ ಬೆಳಗುತ್ತಿದ್ದನು.

03080004a ಯಥಾ ಚ ವೇದಾನ್ಸಾವಿತ್ರೀ ಯಾಜ್ಞಸೇನೀ ತಥಾ ಸತೀ।
03080004c ನ ಜಹೌ ಧರ್ಮತಃ ಪಾರ್ಥಾನ್ಮೇರುಮರ್ಕಪ್ರಭಾ ಯಥಾ।।

ಸಾವಿತ್ರಿಯು ವೇದಗಳನ್ನು ಮತ್ತು ಅರ್ಕ ಪ್ರಭೆಯು ಮೇರು ಪರ್ವತದ ಶಿಖರವನ್ನು ಹೇಗೆ ತೊರೆಯುವುದಿಲ್ಲವೋ ಹಾಗೆ ಸತಿ ಯಾಜ್ಞಸೇನಿಯೂ ಕೂಡ ಧರ್ಮದಂತೆ ಪಾರ್ಥರನ್ನು ಬಿಟ್ಟಿರಲಿಲ್ಲ.

03080005a ಪ್ರತಿಗೃಹ್ಯ ತು ತಾಂ ಪೂಜಾಂ ನಾರದೋ ಭಗವಾನೃಷಿಃ।
03080005c ಆಶ್ವಾಸಯದ್ಧರ್ಮಸುತಂ ಯುಕ್ತರೂಪಮಿವಾನಘ।।

ಅನಘ! ಭಗವಾನ್ ನಾರದ ಮಹರ್ಷಿಯು ತನಗಿತ್ತ ಪೂಜೆಗಳನ್ನು ಪ್ರತಿಗ್ರಹಿಸಿ ಧರ್ಮಸುತನಿಗೆ ಯುಕ್ತರೂಪದಲ್ಲಿ ಆಶ್ವಾಸನೆಗಳನ್ನಿತ್ತನು.

03080006a ಉವಾಚ ಚ ಮಹಾತ್ಮಾನಂ ಧರ್ಮರಾಜಂ ಯುಧಿಷ್ಠಿರಂ।
03080006c ಬ್ರೂಹಿ ಧರ್ಮಭೃತಾಂ ಶ್ರೇಷ್ಠ ಕೇನಾರ್ಥಃ ಕಿಂ ದದಾಮಿ ತೇ।।

ಮತ್ತು ಮಹಾತ್ಮ ಧರ್ಮರಾಜ ಯುಧಿಷ್ಠಿರನನ್ನುದ್ದೇಶಿಸಿ ಹೇಳಿದನು: “ಧರ್ಮಪರಾಯಣರಲ್ಲಿ ಶ್ರೇಷ್ಠ! ನಿನಗೆ ಏನು ಬೇಕಾಗಿದೆ? ನಾನು ನಿನಗೆ ಏನನ್ನು ಕೊಡಲಿ? ಹೇಳು.”

03080007a ಅಥ ಧರ್ಮಸುತೋ ರಾಜಾ ಪ್ರಣಮ್ಯ ಭ್ರಾತೃಭಿಃ ಸಹ।
03080007c ಉವಾಚ ಪ್ರಾಂಜಲಿರ್ವಾಕ್ಯಂ ನಾರದಂ ದೇವಸಮ್ಮಿತಂ।।

ಆಗ ರಾಜ ಧರ್ಮಸುತನು ಭ್ರಾತೃಗಳಿಂದೊಡಗೂಡಿ ದೇವಸಮ ನಾರದನಿಗೆ ಪ್ರಣಾಮ ಮಾಡಿ ಅಂಜಲೀಬದ್ಧನಾಗಿ ಈ ಮಾತುಗಳನ್ನು ಆಡಿದನು:

03080008a ತ್ವಯಿ ತುಷ್ಟೇ ಮಹಾಭಾಗ ಸರ್ವಲೋಕಾಭಿಪೂಜಿತೇ।
03080008c ಕೃತಮಿತ್ಯೇವ ಮನ್ಯೇಽಹಂ ಪ್ರಸಾದಾತ್ತವ ಸುವ್ರತ।।

“ಸರ್ವಲೋಕಾಭಿಪೂಜಿತ! ಮಹಾಭಾಗ! ನೀನು ಸಂತೃಪ್ತನಾದೆಯೆಂದರೆ, ಸುವ್ರತ! ನಿನ್ನ ಪ್ರಸಾದದಿಂದ ನಾನು ಕೃತಾರ್ಥನಾದೆ ಎಂದು ಭಾವಿಸುತ್ತೇನೆ.

03080009a ಯದಿ ತ್ವಹಮನುಗ್ರಾಹ್ಯೋ ಭ್ರಾತೃಭಿಃ ಸಹಿತೋಽನಘ।
03080009c ಸಂದೇಹಂ ಮೇ ಮುನಿಶ್ರೇಷ್ಠ ಹೃದಿಸ್ಥಂ ಚೇತ್ತುಮರ್ಹಸಿ।।

ಆದರೂ ಅನಘ! ಭ್ರಾತೃಗಳ ಸಹಿತ ನನ್ನ ಮೇಲೆ ನಿನಗೆ ಅನುಗ್ರಹವಿದೆಯೆಂದಾದರೆ, ನನ್ನ ಹೃದಯದಲ್ಲಿರುವ ಸಂದೇಹವೊಂದನ್ನು, ಮುನಿಶ್ರೇಷ್ಠ! ಛೇದಿಸಬೇಕಾಗಿದೆ.

03080010a ಪ್ರದಕ್ಷಿಣಂ ಯಃ ಕುರುತೇ ಪೃಥಿವೀಂ ತೀರ್ಥತತ್ಪರಃ।
03080010c ಕಿಂ ಫಲಂ ತಸ್ಯ ಕಾರ್ತ್ಸ್ನ್ಯೆನ ತದ್ಬ್ರಹ್ಮನ್ವಕ್ತುಮರ್ಹಸಿ।।

ಬ್ರಹ್ಮನ್! ತೀರ್ಥತತ್ಪರನಾಗಿ ಈ ಪೃಥ್ವಿಯನ್ನು ಪ್ರದಕ್ಷಿಣೆ ಮಾಡಿದವನಿಗೆ ಯಾವರೀತಿಯ ಫಲವು ಲಭ್ಯವಾಗುತ್ತದೆ ಎನ್ನುವುದನ್ನು ಹೇಳಬೇಕು.”

03080011 ನಾರದ ಉವಾಚ।
03080011a ಶೃಣು ರಾಜನ್ನವಹಿತೋ ಯಥಾ ಭೀಷ್ಮೇಣ ಭಾರತ।
03080011c ಪುಲಸ್ತ್ಯಸ್ಯ ಸಕಾಶಾದ್ವೈ ಸರ್ವಮೇತದುಪಶ್ರುತಂ।।

ನಾರದನು ಹೇಳಿದನು: “ಭಾರತ! ರಾಜನ್! ಹಿಂದೆ ಭೀಷ್ಮನು ಪುಲಸ್ತ್ಯನಿಂದ ಕೇಳಿಕೊಂಡ ಸರ್ವವನ್ನೂ ಗಮನವಿಟ್ಟು ಕೇಳು.

03080012a ಪುರಾ ಭಾಗೀರಥೀತೀರೇ ಭೀಷ್ಮೋ ಧರ್ಮಭೃತಾಂ ವರಃ।
03080012c ಪಿತ್ರ್ಯಂ ವ್ರತಂ ಸಮಾಸ್ಥಾಯ ನ್ಯವಸನ್ಮುನಿವತ್ತದಾ।।
03080013a ಶುಭೇ ದೇಶೇ ಮಹಾರಾಜ ಪುಣ್ಯೇ ದೇವರ್ಷಿಸೇವಿತೇ।
03080013c ಗಂಗಾದ್ವಾರೇ ಮಹಾತೇಜಾ ದೇವಗಂಧರ್ವಸೇವಿತೇ।।

ಮಹಾರಾಜ! ಹಿಂದೆ ಧಾರ್ಮಿಕರಲ್ಲಿ ಶ್ರೇಷ್ಠ, ಮಹಾತೇಜಸ್ವಿ ಭೀಷ್ಮನು ಪಿತೃ ವ್ರತವನ್ನು ಪಾಲಿಸುತ್ತಾ ದೇವಗಂಧರ್ವರಿಂದ, ದೇವರ್ಷಿಗಳಿಂದ ಸೇವಿಸಲ್ಪಟ್ಟ ಸುಂದರ ಪ್ರದೇಶ, ಪುಣ್ಯಪ್ರದೇಶ ಗಂಗಾತಟದಲ್ಲಿ ಮುನಿಯಂತೆ ವಾಸಿಸುತ್ತಿದ್ದನು.

03080014a ಸ ಪಿತೄಂಸ್ತರ್ಪಯಾಮಾಸ ದೇವಾಂಶ್ಚ ಪರಮದ್ಯುತಿಃ।
03080014c ಋಷೀಂಶ್ಚ ತೋಷಯಾಮಾಸ ವಿಧಿದೃಷ್ಟೇನ ಕರ್ಮಣಾ।।

ಆ ಪರಮದ್ಯುತಿಯು ಪಿತೃ- ದೇವ- ಮತ್ತು ಋಷಿ-ತರ್ಪಣಗಳನ್ನಿತ್ತು ಅವರನ್ನು ವಿಧಿವತ್ತಾದ ಕರ್ಮಗಳಿಂದ ತೃಪ್ತಿಗೊಳಿಸುತ್ತಿದ್ದನು.

03080015a ಕಸ್ಯ ಚಿತ್ತ್ವಥ ಕಾಲಸ್ಯ ಜಪನ್ನೇವ ಮಹಾತಪಾಃ।
03080015c ದದರ್ಶಾದ್ಭುತಸಂಕಾಶಂ ಪುಲಸ್ತ್ಯಮೃಷಿಸತ್ತಮಂ।।

ಕೆಲವು ಸಮಯದ ನಂತರ ಜಪದಲ್ಲಿ ನಿರತನಾಗಿದ್ದ ಆ ಮಹಾತಪಸ್ವಿಯು ಅದ್ಭುತಸಂಕಾಶ ಋಷಿಸತ್ತಮ ಪುಲಸ್ತ್ಯನನ್ನು ಕಂಡನು.

03080016a ಸ ತಂ ದೃಷ್ಟ್ವೋಗ್ರತಪಸಂ ದೀಪ್ಯಮಾನಮಿವ ಶ್ರಿಯಾ।
03080016c ಪ್ರಹರ್ಷಮತುಲಂ ಲೇಭೇ ವಿಸ್ಮಯಂ ಚ ಪರಂ ಯಯೌ।।

ತೇಜಸ್ಸಿನಿಂದ ಬೆಳಗುತ್ತಿರುವ ಆ ಉಗ್ರತಪಸ್ವಿಯನ್ನು ನೋಡಿ ಅವನು ಅತುಲ ಹರ್ಷ ಮತ್ತು ವಿಸ್ಮಯ ಎರಡರಿಂದಲೂ ಪೀಡಿತನಾದನು.

03080017a ಉಪಸ್ಥಿತಂ ಮಹಾರಾಜ ಪೂಜಯಾಮಾಸ ಭಾರತ।
03080017c ಭೀಷ್ಮೋ ಧರ್ಮಭೃತಾಂ ಶ್ರೇಷ್ಠೋ ವಿಧಿದೃಷ್ಟೇನ ಕರ್ಮಣಾ।।

ಮಹಾರಾಜ! ಭಾರತ! ಧಾರ್ಮಿಕರಲ್ಲಿ ಶ್ರೇಷ್ಠ ಭೀಷ್ಮನು ಅವನನ್ನು ಕುಳ್ಳಿರಿಸಿ ವಿಧಿವತ್ತಾದ ಕರ್ಮಗಳಿಂದ ಪೂಜಿಸಿದನು.

03080018a ಶಿರಸಾ ಚಾರ್ಘ್ಯಮಾದಾಯ ಶುಚಿಃ ಪ್ರಯತಮಾನಸಃ।
03080018c ನಾಮ ಸಂಕೀರ್ತಯಾಮಾಸ ತಸ್ಮಿನ್ಬ್ರಹ್ಮರ್ಷಿಸತ್ತಮೇ।।

ಅರ್ಘ್ಯವನ್ನು ಶಿರದಲ್ಲಿ ಧರಿಸಿ ಶುಚಿಯಾಗಿ ತೀಕ್ಷ್ಣಮನಸ್ಸಿನಿಂದ ಆ ಬ್ರಹ್ಮರ್ಷಿಸತ್ತಮನಿಗೆ ತನ್ನ ಹೆಸರನ್ನು ಹೇಳಿಕೊಂಡನು:

03080019a ಭೀಷ್ಮೋಽಹಮಸ್ಮಿ ಭದ್ರಂ ತೇ ದಾಸೋಽಸ್ಮಿ ತವ ಸುವ್ರತ।
03080019c ತವ ಸಂದರ್ಶನಾದೇವ ಮುಕ್ತೋಽಹಂ ಸರ್ವಕಿಲ್ಬಿಷೈಃ।।

“ನಿನಗೆ ಮಂಗಳವಾಗಲಿ. ಸುವ್ರತ! ನಾನು ಭೀಷ್ಮ ನಿನ್ನ ದಾಸನಾಗಿದ್ದೇನೆ. ನಿನ್ನ ಸಂದರ್ಶನ ಮಾತ್ರದಿಂದ ಸರ್ವ ಕಿಲ್ಬಿಶಗಳಿಂದ ಮುಕ್ತನಾಗಿದ್ದೇನೆ.”

03080020a ಏವಮುಕ್ತ್ವಾ ಮಹಾರಾಜ ಭೀಷ್ಮೋ ಧರ್ಮಭೃತಾಂ ವರಃ।
03080020c ವಾಗ್ಯತಃ ಪ್ರಾಂಜಲಿರ್ಭೂತ್ವಾ ತೂಷ್ಣೀಮಾಸೀದ್ಯುಧಿಷ್ಠಿರ।।

ಮಹಾರಾಜ! ಯುಧಿಷ್ಠಿರ! ಧಾರ್ಮಿಕರಲ್ಲಿ ಶ್ರೇಷ್ಠ ಭೀಷ್ಮನು ಹೀಗೆ ಹೇಳಿ ಮಾತುಗಳು ಹೊರಬರದೇ ಅಂಜಲೀಬದ್ಧನಾಗಿ ಸುಮ್ಮನೇ ನಿಂತುಕೊಂಡನು.

03080021a ತಂ ದೃಷ್ಟ್ವಾ ನಿಯಮೇನಾಥ ಸ್ವಾಧ್ಯಾಯಾಮ್ನಾಯಕರ್ಶಿತಂ।
03080021c ಭೀಷ್ಮಂ ಕುರುಕುಲಶ್ರೇಷ್ಠಂ ಮುನಿಃ ಪ್ರೀತಮನಾಭವತ್।।

ನಿಯಮ ಮತ್ತು ಸ್ವಾಧ್ಯಾಯಗಳಿಂದ ಕೃಶನಾಗಿದ್ದ ಕುರುಕುಲಶ್ರೇಷ್ಠ ಭೀಷ್ಮನನ್ನು ನೋಡಿ ಮುನಿಯು ಪ್ರೀತ ಮನಸ್ಕನಾದನು.

03080022 ಪುಲಸ್ತ್ಯ ಉವಾಚ।
03080022a ಅನೇನ ತವ ಧರ್ಮಜ್ಞ ಪ್ರಶ್ರಯೇಣ ದಮೇನ ಚ।
03080022c ಸತ್ಯೇನ ಚ ಮಹಾಭಾಗ ತುಷ್ಟೋಽಸ್ಮಿ ತವ ಸರ್ವಶಃ।।

ಪುಲಸ್ತ್ಯನು ಹೇಳಿದನು: “ಧರ್ಮಜ್ಞ! ಮಹಾಭಾಗ! ನಿನ್ನ ಈ ಪ್ರಶ್ರಯ, ದಮ ಮತ್ತು ಸತ್ಯ ಎಲ್ಲದರಿಂದ ನಾನು ತುಷ್ಟನಾಗಿದ್ದೇನೆ.

03080023a ಯಸ್ಯೇದೃಶಸ್ತೇ ಧರ್ಮೋಽಯಂ ಪಿತೃಭಕ್ತ್ಯಾಶ್ರಿತೋಽನಘ।
03080023c ತೇನ ಪಶ್ಯಸಿ ಮಾಂ ಪುತ್ರ ಪ್ರೀತಿಶ್ಚಾಪಿ ಮಮ ತ್ವಯಿ।।

ಪುತ್ರ! ಅನಘ! ನೀನು ಈ ಧರ್ಮ ಮತ್ತು ಪಿತೃಭಕ್ತಿಯಲ್ಲಿ ನಿರತನಾಗಿರುವುದರಿಂದಲೇ ನನ್ನನ್ನು ನೀನು ಕಾಣುತ್ತಿದ್ದೀಯೆ. ನಾನೂ ಕೂಡ ನಿನ್ನ ಮೇಲಿನ ಪ್ರೀತಿಯಿಂದ ಕಾಣಿಸಿಕೊಂಡಿದ್ದೇನೆ.

03080024a ಅಮೋಘದರ್ಶೀ ಭೀಷ್ಮಾಹಂ ಬ್ರೂಹಿ ಕಿಂ ಕರವಾಣಿ ತೇ।
03080024c ಯದ್ವಕ್ಷ್ಯಸಿ ಕುರುಶ್ರೇಷ್ಠ ತಸ್ಯ ದಾತಾಸ್ಮಿ ತೇಽನಘ।।

ಭೀಷ್ಮ ನಾನು ಅಮೋಘದರ್ಶಿ. ನಿನಗೆ ನನ್ನಿಂದ ಏನಾಗಬೇಕು ಹೇಳು. ಕುರುಶ್ರೇಷ್ಠ! ಅನಘ! ನಿನಗೆ ಬೇಕಾದ್ದನ್ನು ಕೊಡುತ್ತೇನೆ.”

03080025 ಭೀಷ್ಮ ಉವಾಚ।
03080025a ಪ್ರೀತೇ ತ್ವಯಿ ಮಹಾಭಾಗ ಸರ್ವಲೋಕಾಭಿಪೂಜಿತೇ।
03080025c ಕೃತಮಿತ್ಯೇವ ಮನ್ಯೇಽಹಂ ಯದಹಂ ದೃಷ್ಟವಾನ್ಪ್ರಭುಂ।।

ಭೀಷ್ಮನು ಹೇಳಿದನು: “ಮಹಾಭಾಗ! ಸರ್ವಲೋಕಪೂಜಿತನಾದ ನೀನು ಪ್ರೀತನಾದೆಯೆಂದರೆ ನನ್ನ ಕೆಲಸವು ಆದ ಹಾಗೆಯೇ. ಯಾಕೆಂದರೆ ಪ್ರಭು ನಿನ್ನಲ್ಲಿಯೇ ನನ್ನ ದೃಷ್ಟಿಯಿತ್ತು.

03080026a ಯದಿ ತ್ವಹಮನುಗ್ರಾಃಯಸ್ತವ ಧರ್ಮಭೃತಾಂ ವರ।
03080026c ವಕ್ಷ್ಯಾಮಿ ಹೃತ್ಸ್ಥಂ ಸಂದೇಹಂ ತನ್ಮೇ ತ್ವಂ ವಕ್ತುಮರ್ಹಸಿ।।

ಧಾರ್ಮಿಕರಲ್ಲಿ ಶ್ರೇಷ್ಠ! ನನ್ನ ಮೇಲೆ ನಿನ್ನ ಅನುಗ್ರಹವಿದ್ದರೆ ನನ್ನ ಹೃದಯದಲ್ಲಿರುವ ಸಂದೇಹವೊಂದನ್ನು ಹೇಳಿಕೊಳ್ಳುತ್ತೇನೆ. ಅದನ್ನು ಬಗೆಹರಿಸು.

03080027a ಅಸ್ತಿ ಮೇ ಭಗವನ್ಕಶ್ಚಿತ್ತೀರ್ಥೇಭ್ಯೋ ಧರ್ಮಸಂಶಯಃ।
03080027c ತಮಹಂ ಶ್ರೋತುಮಿಚ್ಚಾಮಿ ಪೃಥಕ್ಸಂಕೀರ್ತಿತಂ ತ್ವಯಾ।।

ಭಗವನ್! ನನಗೆ ತೀರ್ಥಗಳ ಕುರಿತು ಒಂದು ಧರ್ಮಸಂಶಯವಿದೆ. ನಿನ್ನಿಂದ ಇವುಗಳ ಸಂಕೀರ್ತನೆಯನ್ನು ಕೇಳಲು ಇಚ್ಛಿಸುತ್ತೇನೆ.

03080028a ಪ್ರದಕ್ಷಿಣಂ ಯಃ ಪೃಥಿವೀಂ ಕರೋತ್ಯಮಿತವಿಕ್ರಮ।
03080028c ಕಿಂ ಫಲಂ ತಸ್ಯ ವಿಪ್ರರ್ಷೇ ತನ್ಮೇ ಬ್ರೂಹಿ ತಪೋಧನ।।

ಅಮಿತವಿಕ್ರಮ! ತಪೋಧನ! ವಿಪ್ರರ್ಷೇ! ಪೃಥಿವಿಯನ್ನು ಪ್ರದಕ್ಷಿಣೆ ಮಾಡಿದವನಿಗೆ ಯಾವ ಫಲವು ದೊರೆಯುತ್ತದೆ ಎನ್ನುವುದನ್ನು ಹೇಳು.”

03080029 ಪುಲಸ್ತ್ಯ ಉವಾಚ।
03080029a ಹಂತ ತೇಽಹಂ ಪ್ರವಕ್ಷ್ಯಾಮಿ ಯದೃಷೀಣಾಂ ಪರಾಯಣಂ।
03080029c ತದೇಕಾಗ್ರಮನಾಸ್ತಾತ ಶೃಣು ತೀರ್ಥೇಷು ಯತ್ಫಲಂ।।

ಪುಲಸ್ತ್ಯನು ಹೇಳಿದನು: “ಋಷಿಗಳ ಅಂತಿಮ ಗುರಿ ತೀರ್ಥಗಳ ಫಲವನ್ನು ಹೇಳುತ್ತೇನೆ. ಮಗು! ಏಕಾಗ್ರಮನಸ್ಕನಾಗಿ ಕೇಳು.

03080030a ಯಸ್ಯ ಹಸ್ತೌ ಚ ಪಾದೌ ಚ ಮನಶ್ಚೈವ ಸುಸಮ್ಯತಂ।
03080030c ವಿದ್ಯಾ ತಪಶ್ಚ ಕೀರ್ತಿಶ್ಚ ಸ ತೀರ್ಥಫಲಮಶ್ನುತೇ।।

ಯಾರು ಹಸ್ತ, ಪಾದ, ಮನಸ್ಸು, ವಿದ್ಯೆ, ತಪಸ್ಸು ಮತ್ತು ಕೀರ್ತಿಗಳನ್ನು ಗೆದ್ದಿದ್ದಾನೆಯೋ ಅವನು ತೀರ್ಥಫಲವನ್ನು ಹೊಂದುತ್ತಾನೆ.

03080031a ಪ್ರತಿಗ್ರಹಾದುಪಾವೃತ್ತಃ ಸಂತುಷ್ಟೋ ನಿಯತಃ ಶುಚಿಃ।
03080031c ಅಹಂಕಾರನಿವೃತ್ತಶ್ಚ ಸ ತೀರ್ಥಫಲಮಶ್ನುತೇ।।

ಯಾರು ವಸ್ತುಗಳಿಂದ ನಿವೃತ್ತಿಹೊಂದಿ, ಸಂತುಷ್ಟನಾಗಿ, ಹಿಡಿತದಲ್ಲಿದ್ದು ಅಹಂಕಾರನಿವೃತ್ತನಾಗಿದ್ದಾನೋ ಅವನಿಗೆ ತೀರ್ಥಫಲವು ದೊರೆಯುತ್ತದೆ.

03080032a ಅಕಲ್ಕಕೋ ನಿರಾರಂಭೋ ಲಘ್ವಾಹಾರೋ ಜಿತೇಂದ್ರಿಯಃ।
03080032c ವಿಮುಕ್ತಃ ಸರ್ವದೋಷೈರ್ಯಃ ಸ ತೀರ್ಥಫಲಮಶ್ನುತೇ।।

ವಂಚನೆಯಿಲ್ಲದ, ಯೋಜನೆಗಳನ್ನು ಇಟ್ಟುಕೊಂಡಿರದ, ಅಲ್ಪಾಹಾರಿ, ಜಿತೇಂದ್ರಿಯ, ಸರ್ವ ದೋಷಗಳಿಂದ ವಿಮುಕ್ತನಾದವನಿಗೆ ತೀರ್ಥಫಲವು ದೊರೆಯುತ್ತದೆ.

03080033a ಅಕ್ರೋಧನಶ್ಚ ರಾಜೇಂದ್ರ ಸತ್ಯಶೀಲೋ ದೃಢವ್ರತಃ।
03080033c ಆತ್ಮೋಪಮಶ್ಚ ಭೂತೇಷು ಸ ತೀರ್ಥಫಲಮಶ್ನುತೇ।।

ಸಿಟ್ಟೇ ಇಲ್ಲದ, ಸತ್ಯಶೀಲ, ಧೃಢವ್ರತ, ಸರ್ವ ಭೂತಗಳಲ್ಲಿ ತನ್ನನ್ನೇ ಕಾಣುವವನಿಗೆ ತೀರ್ಥಫಲವು ದೊರೆಯುತ್ತದೆ.

03080034a ಋಷಿಭಿಃ ಕ್ರತವಃ ಪ್ರೋಕ್ತಾ ವೇದೇಷ್ವಿಹ ಯಥಾಕ್ರಮಂ।
03080034c ಫಲಂ ಚೈವ ಯಥಾತತ್ತ್ವಂ ಪ್ರೇತ್ಯ ಚೇಹ ಚ ಸರ್ವಶಃ।।

ವೇದಗಳಲ್ಲಿ ಋಷಿಗಳು ಕ್ರತುಗಳ ಯಥಾಕ್ರಮಗಳನ್ನು ಹಾಗೂ ಇಹ-ಪರಗಳಲ್ಲಿ ಅವುಗಳಿಂದ ದೊರೆಯುವ ಫಲಗಳನ್ನೆಲ್ಲವನ್ನೂ ಯಥಾವತ್ತಾಗಿ ಹೇಳಿದ್ದಾರೆ.

03080035a ನ ತೇ ಶಕ್ಯಾ ದರಿದ್ರೇಣ ಯಜ್ಞಾಃ ಪ್ರಾಪ್ತುಂ ಮಹೀಪತೇ।
03080035c ಬಹೂಪಕರಣಾ ಯಜ್ಞಾ ನಾನಾಸಂಭಾರವಿಸ್ತರಾಃ।।

ಮಹೀಪತೇ! ದರಿದ್ರರು ಯಜ್ಞಗಳನ್ನು ನಡೆಸಲು ಶಕ್ಯರಿರುವುದಿಲ್ಲ. ಯಾಕೆಂದರೆ ಯಜ್ಞಕ್ಕೆ ಬಹಳ ಉಪಕರಣಗಳು ಮತ್ತು ವಿಸ್ತರವಾದ ನಾನಾ ಸಂಗ್ರಹಗಳು ಬೇಕಾಗುತ್ತವೆ.

03080036a ಪ್ರಾಪ್ಯಂತೇ ಪಾರ್ಥಿವೈರೇತೇ ಸಮೃದ್ಧೈರ್ವಾ ನರೈಃ ಕ್ವ ಚಿತ್।
03080036c ನಾರ್ಥನ್ಯೂನೋಪಕರಣೈರೇಕಾತ್ಮಭಿರಸಂಹತೈಃ।।

ಪಾರ್ಥಿವರು ಅಥವಾ ಸಮೃದ್ಧಿಯನ್ನು ಹೊಂದಿದ ನರರು ಮಾತ್ರ ಇವುಗಳನ್ನು ನೆರವೇರಿಸಬಹುದೇ ಹೊರತು ಸಾಧನ ಉಪಕರಣಗಳನ್ನು ಹೊಂದದೇ ಇರುವವರು, ಒಬ್ಬಂಟಿಗರು ಅಥವಾ ನೆಲೆಯಿಲ್ಲದವರಿಂದ ಇವು ಆಗುವಂತಹುದ್ದಲ್ಲ.

03080037a ಯೋ ದರಿದ್ರೈರಪಿ ವಿಧಿಃ ಶಕ್ಯಃ ಪ್ರಾಪ್ತುಂ ನರೇಶ್ವರ।
03080037c ತುಲ್ಯೋ ಯಜ್ಞಫಲೈಃ ಪುಣ್ಯೈಸ್ತಂ ನಿಬೋಧ ಯುಧಾಂ ವರ।।

ನರೇಶ್ವರ! ಯೋದ್ಧರಲ್ಲಿ ಶ್ರೇಷ್ಠ! ಈ ದರಿದ್ರರೂ ಕೂಡ ಯಜ್ಞಫಲ ಸಮಾನ ಪುಣ್ಯವನ್ನು ಪಡೆಯಲು ಶಕ್ಯವಾಗಿರುವ ವಿಧಿಯ ಕುರಿತು ಕೇಳು.

03080038a ಋಷೀಣಾಂ ಪರಮಂ ಗುಹ್ಯಮಿದಂ ಭರತಸತ್ತಮ।
03080038c ತೀರ್ಥಾಭಿಗಮನಂ ಪುಣ್ಯಂ ಯಜ್ಞೈರಪಿ ವಿಶಿಷ್ಯತೇ।।

ಭರತಸತ್ತಮ! ತೀರ್ಥಯಾತ್ರೆಯ ಪುಣ್ಯವು ಯಜ್ಞಗಳಿಗಿಂತ ವಿಶೇಷವಾದದ್ದು ಎನ್ನುವುದು ಋಷಿಗಳ ಒಂದು ಪರಮ ಗುಟ್ಟು.

03080039a ಅನುಪೋಷ್ಯ ತ್ರಿರಾತ್ರಾಣಿ ತೀರ್ಥಾನ್ಯನಭಿಗಮ್ಯ ಚ।
03080039c ಅದತ್ತ್ವಾ ಕಾಂಚನಂ ಗಾಶ್ಚ ದರಿದ್ರೋ ನಾಮ ಜಾಯತೇ।।

ಯಾರು ಮೂರು ರಾತ್ರಿಯೂ ಉಪವಾಸ ಮಾಡಲಿಲ್ಲವೋ, ತಿರ್ಥಯಾತ್ರೆಯನ್ನು ಮಾಡಲಿಲ್ಲವೋ ಮತ್ತು ಕಾಂಚನ-ಗೋವುಗಳನ್ನು ಕೊಡಲಿಲ್ಲವೋ ಅವನನ್ನು ದರಿದ್ರನೆಂದು ಕರೆಯಲಾಗುತ್ತದೆ.

03080040a ಅಗ್ನಿಷ್ಟೋಮಾದಿಭಿರ್ಯಜ್ಞೈರಿಷ್ಟ್ವಾ ವಿಪುಲದಕ್ಷಿಣೈಃ।
03080040c ನ ತತ್ಫಲಮವಾಪ್ನೋತಿ ತೀರ್ಥಾಭಿಗಮನೇನ ಯತ್।।

ತೀರ್ಥಯಾತ್ರೆಯಿಂದ ಪಡೆದುಕೊಳ್ಳುವಷ್ಟು ಫಲವನ್ನು ವಿಪುಲ ದಕ್ಷಿಣೆಗಳನ್ನಿತ್ತು ಅಗ್ನಿಷ್ಟೋಮ ಯಾಗವನ್ನು ಮಾಡುವುದರಿಂದಲೂ ದೊರೆಯುವುದಿಲ್ಲ.

03080041a ನೃಲೋಕೇ ದೇವದೇವಸ್ಯ ತೀರ್ಥಂ ತ್ರೈಲೋಕ್ಯವಿಶ್ರುತಂ।
03080041c ಪುಷ್ಕರಂ ನಾಮ ವಿಖ್ಯಾತಂ ಮಹಾಭಾಗಃ ಸಮಾವಿಶೇತ್।।

ನರಲೋಕದಲ್ಲಿ ಮಹಾಭಾಗ್ಯವಂತನು ತ್ರೈಲೋಕ್ಯವಿಶ್ರುತ ಪುಷ್ಕರ ಎಂಬ ಹೆಸರಿನಿಂದ ವಿಖ್ಯಾತ ದೇವದೇವನ ತೀರ್ಥವನ್ನು ನೋಡುವನು.

03080042a ದಶ ಕೋಟಿಸಹಸ್ರಾಣಿ ತೀರ್ಥಾನಾಂ ವೈ ಮಹೀಪತೇ।
03080042c ಸಾನ್ನಿಧ್ಯಂ ಪುಷ್ಕರೇ ಯೇಷಾಂ ತ್ರಿಸಂಧ್ಯಂ ಕುರುನಂದನ।।

ಮಹೀಪತೇ! ಕುರುನಂದನ! ತ್ರಿಸಂಧ್ಯಾ ಸಮಯಗಳಲ್ಲಿ ಪುಷ್ಕರದಲ್ಲಿ ಹತ್ತು ಕೋಟಿ ಸಹಸ್ರ ತೀರ್ಥಗಳು ಸಾನ್ನಿಧ್ಯವಾಗಿರುತ್ತವೆ.

03080043a ಆದಿತ್ಯಾ ವಸವೋ ರುದ್ರಾಃ ಸಾಧ್ಯಾಶ್ಚ ಸಮರುದ್ಗಣಾಃ।
03080043c ಗಂಧರ್ವಾಪ್ಸರಸಶ್ಚೈವ ನಿತ್ಯಂ ಸನ್ನಿಹಿತಾ ವಿಭೋ।।

ವಿಭೋ! ಅಲ್ಲಿ ಆದಿತ್ಯರು, ವಸುಗಳು, ರುದ್ರರು, ಸಾಧ್ಯರು, ಮರುತ್, ಗಂಧರ್ವ ಮತ್ತು ಅಪ್ಸರ ಗಣಗಳು ನಿತ್ಯವೂ ಸನ್ನಿಹಿತವಾಗಿರುತ್ತಾರೆ.

03080044a ಯತ್ರ ದೇವಾಸ್ತಪಸ್ತಪ್ತ್ವಾ ದೈತ್ಯಾ ಬ್ರಹ್ಮರ್ಷಯಸ್ತಥಾ।
03080044c ದಿವ್ಯಯೋಗಾ ಮಹಾರಾಜ ಪುಣ್ಯೇನ ಮಹತಾನ್ವಿತಾಃ।।

ಮಹಾರಾಜ! ಅಲ್ಲಿಯೇ ದೇವತೆಗಳು, ದೈತ್ಯರು ಮತ್ತು ಬ್ರಹ್ಮರ್ಷಿಗಳು ತಪಸ್ಸನ್ನು ತಪಿಸಿ ಮಹತ್ತರ ಪುಣ್ಯ ಮತ್ತು ದಿವ್ಯಯೋಗಗಳನ್ನು ಪಡೆದರು.

03080045a ಮನಸಾಪ್ಯಭಿಕಾಮಸ್ಯ ಪುಷ್ಕರಾಣಿ ಮನಸ್ವಿನಃ।
03080045c ಪೂಯಂತೇ ಸರ್ವಪಾಪಾನಿ ನಾಕಪೃಷ್ಠೇ ಚ ಪೂಜ್ಯತೇ।।

ಯಾವ ಮನಸ್ವಿಯು ಪುಷ್ಕರವನ್ನು ನೋಡುವ ಅಭಿಲಾಷೆಯನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತಾನೋ ಅವನು ಸರ್ವಪಾಪಗಳಿಂದಲೂ ಮುಕ್ತಿ ಹೊಂದಿ ಸ್ವರ್ಗದ ಬಾಗಿಲಿನಲ್ಲಿ ಪೂಜಿಸಲ್ಪಡುತ್ತಾನೆ.

03080046a ತಸ್ಮಿಂಸ್ತೀರ್ಥೇ ಮಹಾಭಾಗ ನಿತ್ಯಮೇವ ಪಿತಾಮಹಃ।
03080046c ಉವಾಸ ಪರಮಪ್ರೀತೋ ದೇವದಾನವಸಮ್ಮತಃ।।

ಮಹಾಭಾಗ! ಅದೇ ತೀರ್ಥದಲ್ಲಿ ದೇವದಾನವಸಮ್ಮತ ಪಿತಾಮಹನು ಪರಮ ಪ್ರೀತನಾಗಿ ವಾಸಿಸುತ್ತಾನೆ.

03080047a ಪುಷ್ಕರೇಷು ಮಹಾಭಾಗ ದೇವಾಃ ಸರ್ಷಿಪುರೋಗಮಾಃ।
03080047c ಸಿದ್ಧಿಂ ಸಮಭಿಸಂಪ್ರಾಪ್ತಾಃ ಪುಣ್ಯೇನ ಮಹತಾನ್ವಿತಾಃ।।

ಮಹಾಭಾಗ! ಋಷಿಗಳ ನಾಯಕತ್ವದಲ್ಲಿ ದೇವತೆಗಳು ಪುಷ್ಕರದಲ್ಲಿ ಮಹತ್ತರ ಪುಣ್ಯ-ಸಿದ್ಧಿಗಳನ್ನು ಹೊಂದಿದರು.

03080048a ತತ್ರಾಭಿಷೇಕಂ ಯಃ ಕುರ್ಯಾತ್ಪಿತೃದೇವಾರ್ಚನೇ ರತಃ।
03080048c ಅಶ್ವಮೇಧಂ ದಶಗುಣಂ ಪ್ರವದಂತಿ ಮನೀಷಿಣಃ।।

ಪಿತೃದೇವಾರ್ಚನರತರು ಅಲ್ಲಿ ಸ್ನಾನ ಮಾಡಿದರೆ ಅವರಿಗೆ ಅಶ್ವಮೇಧದ ಹತ್ತು ಪಟ್ಟು ಪುಣ್ಯವು ದೊರೆಯುತ್ತದೆ ಎಂದು ತಿಳಿದವರು ಹೇಳುತ್ತಾರೆ.

03080049a ಅಪ್ಯೇಕಂ ಭೋಜಯೇದ್ವಿಪ್ರಂ ಪುಷ್ಕರಾರಣ್ಯಮಾಶ್ರಿತಃ।
03080049c ತೇನಾಸೌ ಕರ್ಮಣಾ ಭೀಷ್ಮ ಪ್ರೇತ್ಯ ಚೇಹ ಚ ಮೋದತೇ।।

ಭೀಷ್ಮ! ಪುಷ್ಕರದ ಅರಣ್ಯದಲ್ಲಿ ವಾಸಿಸುವ ಒಬ್ಬ ವಿಪ್ರನಿಗಾದರೂ ಭೋಜನವಿತ್ತರೆ ಅವನು ಇಹದಲ್ಲಿಯೂ ಮತ್ತು ಪರದಲ್ಲಿಯೂ ಸುಖವನ್ನು ಹೊಂದುವನು.

03080050a ಶಾಕಮೂಲಫಲೈರ್ವಾಪಿ ಯೇನ ವರ್ತಯತೇ ಸ್ವಯಂ।
03080050c ತದ್ವೈ ದದ್ಯಾದ್ಬ್ರಾಹ್ಮಣಾಯ ಶ್ರದ್ಧಾವಾನನಸೂಯಕಃ।
03080050e ತೇನೈವ ಪ್ರಾಪ್ನುಯಾತ್ಪ್ರಾಜ್ಞೋ ಹಯಮೇಧಫಲಂ ನರಃ।।

ಯಾರು ಸ್ವಯಂ ಶಾಕಮೂಲಫಲಗಳ ಮೇಲೆ ಜೀವಿಸಿ, ಅವುಗಳನ್ನು ಬ್ರಾಹ್ಮಣರಿಗೆ ಶ್ರದ್ಧಾಪೂರ್ವಕವಾಗಿ ಅಸೂಯೆಯಿಲ್ಲದೇ ಕೊಡುತ್ತಾರೋ ಅಂತಹ ಪ್ರಾಜ್ಞ ನರರು ಹಯಮೇಧಫಲವನ್ನು ಹೊಂದುತ್ತಾರೆ.

03080051a ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರೋ ವಾ ರಾಜಸತ್ತಮ।
03080051c ನ ವಿಯೋನಿಂ ವ್ರಜಂತ್ಯೇತೇ ಸ್ನಾತಾಸ್ತೀರ್ಥೇ ಮಹಾತ್ಮನಃ।।

ರಾಜಸತ್ತಮ! ಮಹಾತ್ಮ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರರು ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಅವರು ಹೀನ ಯೋನಿಗಳಲ್ಲಿ ಹುಟ್ಟುವುದಿಲ್ಲ.

03080052a ಕಾರ್ತ್ತಿಕ್ಯಾಂ ತು ವಿಶೇಷೇಣ ಯೋಽಭಿಗಚ್ಚೇತ ಪುಷ್ಕರಂ।
03080052c ಫಲಂ ತತ್ರಾಕ್ಷಯಂ ತಸ್ಯ ವರ್ಧತೇ ಭರತರ್ಷಭ।।

ಭರತರ್ಷಭ! ಯಾರು ವಿಶೇಷವಾಗಿ ಕಾರ್ತೀಕ ಹುಣ್ಣಿಮೆಯ ದಿನ ಪುಷ್ಕರಕ್ಕೆ ಹೋಗುತ್ತಾರೋ ಅವರ ಫಲವು ವೃದ್ಧಿಯಾಗಿ ಅಕ್ಷಯವಾಗುತ್ತದೆ.

03080053a ಸಾಯಂ ಪ್ರಾತಃ ಸ್ಮರೇದ್ಯಸ್ತು ಪುಷ್ಕರಾಣಿ ಕೃತಾಂಜಲಿಃ।
03080053c ಉಪಸ್ಪೃಷ್ಟಂ ಭವೇತ್ತೇನ ಸರ್ವತೀರ್ಥೇಷು ಭಾರತ।
03080053e ಪ್ರಾಪ್ನುಯಾಚ್ಚ ನರೋ ಲೋಕಾನ್ಬ್ರಹ್ಮಣಃ ಸದನೇಽಕ್ಷಯಾನ್।।

ಭಾರತ! ಅಂಜಲೀ ಬದ್ಧನಾಗಿ ಸಾಯಂ-ಪ್ರಾತಗಳಲ್ಲಿ ಪುಷ್ಕರವನ್ನು ಸ್ಮರಿಸುವುದು ಸರ್ವ ತೀರ್ಥಗಳಲ್ಲಿ ಸ್ನಾನಮಾಡಿದ ಹಾಗೆ. ಮತ್ತು ಆ ನರನು ಬ್ರಹ್ಮಲೋಕದಲ್ಲಿ ಅಕ್ಷಯ ಸ್ಥಾನವನ್ನು ಪಡೆಯುತ್ತಾನೆ.

03080054a ಜನ್ಮಪ್ರಭೃತಿ ಯತ್ಪಾಪಂ ಸ್ತ್ರಿಯೋ ವಾ ಪುರುಷಸ್ಯ ವಾ।
03080054c ಪುಷ್ಕರೇ ಸ್ನಾತಮಾತ್ರಸ್ಯ ಸರ್ವಮೇವ ಪ್ರಣಶ್ಯತಿ।।

ಪುಷ್ಕರದಲ್ಲಿ ಸ್ನಾನ ಮಾತ್ರದಿಂದ ಸ್ತ್ರೀ ಅಥವಾ ಪುರುಷರ ಜನ್ಮಪ್ರಭೃತಿ ಪಾಪಗಳೆಲ್ಲವೂ ನಾಶವಾಗುತ್ತವೆ.

03080055a ಯಥಾ ಸುರಾಣಾಂ ಸರ್ವೇಷಾಮಾದಿಸ್ತು ಮಧುಸೂದನಃ।
03080055c ತಥೈವ ಪುಷ್ಕರಂ ರಾಜಂಸ್ತೀರ್ಥಾನಾಮಾದಿರುಚ್ಯತೇ।।

ರಾಜನ್! ಹೇಗೆ ಸರ್ವ ಸುರರ ಆದಿಯು ಮಧುಸೂದನನೋ ಹಾಗೆ ತೀರ್ಥಗಳ ಆದಿ ಪುಷ್ಕರವೆಂದು ಹೇಳಲಾಗಿದೆ.

03080056a ಉಷ್ಯ ದ್ವಾದಶ ವರ್ಷಾಣಿ ಪುಷ್ಕರೇ ನಿಯತಃ ಶುಚಿಃ।
03080056c ಕ್ರತೂನ್ಸರ್ವಾನವಾಪ್ನೋತಿ ಬ್ರಹ್ಮಲೋಕಂ ಚ ಗಚ್ಚತಿ।।

ಪುಷ್ಕರದಲ್ಲಿ ಹನ್ನೆರಡು ವರ್ಷಗಳು ಶುಚಿಯಾಗಿ ನಿಯತನಾಗಿ ವಾಸಿಸುವವನು ಸರ್ವ ಕ್ರತುಗಳ ಫಲವನ್ನು ಹೊಂದುತ್ತಾನೆ ಮತ್ತು ಬ್ರಹ್ಮಲೋಕವನ್ನು ಸೇರುತ್ತಾನೆ.

03080057a ಯಸ್ತು ವರ್ಷಶತಂ ಪೂರ್ಣಮಗ್ನಿಹೋತ್ರಮುಪಾಸತೇ।
03080057c ಕಾರ್ತ್ತಿಕೀಂ ವಾ ವಸೇದೇಕಾಂ ಪುಷ್ಕರೇ ಸಮಮೇವ ತತ್।।

ಸಂಪೂರ್ಣವಾಗಿ ಒಂದು ನೂರು ವರ್ಷಗಳು ಪುಷ್ಕರದಲ್ಲಿ ಅಗ್ನಿಹೋತ್ರವನ್ನು ಮಾಡುವುದೂ ಮತ್ತು ಅಲ್ಲಿ ಕಾರ್ತೀಕದ ಒಂದು ಹುಣ್ಣಿಮೆಯನ್ನು ಕಳೆಯುವುದು ಎರಡೂ ಒಂದೇ.

03080058a ದುಷ್ಕರಂ ಪುಷ್ಕರಂ ಗಂತುಂ ದುಷ್ಕರಂ ಪುಷ್ಕರೇ ತಪಃ।
03080058c ದುಷ್ಕರಂ ಪುಷ್ಕರೇ ದಾನಂ ವಸ್ತುಂ ಚೈವ ಸುದುಷ್ಕರಂ।।

ಪುಷ್ಕರಕ್ಕೆ ಹೋಗುವುದೇ ದುಷ್ಕರ, ಪುಷ್ಕರದಲ್ಲಿ ತಪಸ್ಸನ್ನು ಮಾಡುವುದು ದುಷ್ಕರ, ಪುಷ್ಕರದಲ್ಲಿ ದಾನಮಾಡುವುದು ದುಷ್ಕರ, ಮತ್ತು ಅಲ್ಲಿ ವಾಸಿಸುವುದು ಇನ್ನೂ ದುಷ್ಕರ.

03080059a ಉಷ್ಯ ದ್ವಾದಶರಾತ್ರಂ ತು ನಿಯತೋ ನಿಯತಾಶನಃ।
03080059c ಪ್ರದಕ್ಷಿಣಮುಪಾವೃತ್ತೋ ಜಂಬೂಮಾರ್ಗಂ ಸಮಾವಿಶೇತ್।।

ಅಲ್ಲಿ ಹನ್ನೆರಡು ರಾತ್ರಿಗಳನ್ನು ನಿಯತನಾಗಿ ಮತ್ತು ಲಘು ಆಹಾರದಿಂದ ಕಳೆದ ನಂತರ ಅದಕ್ಕೆ ಒಂದು ಪ್ರದಕ್ಷಿಣೆಯನ್ನು ಮಾಡಿ ಜಂಬೂಮಾರ್ಗವನ್ನು ಪ್ರವೇಶಿಸಬೇಕು.

03080060a ಜಂಬೂಮಾರ್ಗಂ ಸಮಾವಿಶ್ಯ ದೇವರ್ಷಿಪಿತೃಸೇವಿತಂ।
03080060c ಅಶ್ವಮೇಧಮವಾಪ್ನೋತಿ ವಿಷ್ಣುಲೋಕಂ ಚ ಗಚ್ಚತಿ।।

ದೇವ, ಋಷಿ ಮತ್ತು ಪಿತೃ ಸೇವಿತ ಜಂಬೂಮಾರ್ಗವನ್ನು ಪ್ರವೇಶಿಸಿದವನು ಅಶ್ವಮೇಧಫಲವನ್ನು ಹೊಂದಿ ವಿಷ್ಣುಲೋಕವನ್ನು ಸೇರುತ್ತಾನೆ.

03080061a ತತ್ರೋಷ್ಯ ರಜನೀಃ ಪಂಚ ಷಷ್ಠಕಾಲಕ್ಷಮೀ ನರಃ।
03080061c ನ ದುರ್ಗತಿಮವಾಪ್ನೋತಿ ಸಿದ್ಧಿಂ ಪ್ರಾಪ್ನೋತಿ ಚೋತ್ತಮಾಂ।।

ಆರರಲ್ಲಿ ಒಂದು ಬಾರಿ ಮಾತ್ರ ಆಹಾರ ಸೇವಿಸುತ್ತಾ ಅಲ್ಲಿ ಐದು ರಾತ್ರಿಗಳನ್ನು ಕಳೆದ ನರನು ದುರ್ಗತಿಯನ್ನು ಹೊಂದದೇ ಉತ್ತಮ ಸಿದ್ಧಿಯನ್ನು ಪಡೆಯುತ್ತಾನೆ.

03080062a ಜಂಬೂಮಾರ್ಗಾದುಪಾವೃತ್ತೋ ಗಚ್ಚೇತ್ತಂಡುಲಿಕಾಶ್ರಮಂ।
03080062c ನ ದುರ್ಗತಿಮವಾಪ್ನೋತಿ ಸ್ವರ್ಗಲೋಕೇ ಚ ಪೂಜ್ಯತೇ।।

ಜಂಬೂಮಾರ್ಗದಿಂದ ಹೊರಟು ಅವನು ತಂಡುಲಿಕಾಶ್ರಮಕ್ಕೆ ಹೋಗುವುದರಿಂದ ದುರ್ಗತಿಯನ್ನು ಹೊಂದದೇ ಸ್ವರ್ಗಲೋಕದಲ್ಲಿ ಪೂಜಿಸಿಕೊಳ್ಳುತ್ತಾನೆ.

03080063a ಅಗಸ್ತ್ಯಸರ ಆಸಾದ್ಯ ಪಿತೃದೇವಾರ್ಚನೇ ರತಃ।
03080063c ತ್ರಿರಾತ್ರೋಪೋಷಿತೋ ರಾಜನ್ನಗ್ನಿಷ್ಟೋಮಫಲಂ ಲಭೇತ್।।

ರಾಜನ್! ಅಲ್ಲಿಂದ ಅಗಸ್ತ್ಯಸರೋವರವನ್ನು ತಲುಪಿ ಅಲ್ಲಿ ಮೂರು ರಾತ್ರಿ ಪಿತೃದೇವಾರ್ಚನೆಗಳಲ್ಲಿ ನಿರತನಾದವನಿಗೆ ಅಗ್ನಿಷ್ಟೋಮ ಫಲವು ದೊರೆಯುತ್ತದೆ.

03080064a ಶಾಕವೃತ್ತಿಃ ಫಲೈರ್ವಾಪಿ ಕೌಮಾರಂ ವಿಂದತೇ ಪದಂ।
03080064c ಕಣ್ವಾಶ್ರಮಂ ಸಮಾಸಾದ್ಯ ಶ್ರೀಜುಷ್ಟಂ ಲೋಕಪೂಜಿತಂ।।

ಶ್ರೀಜುಷ್ಟ ಲೋಕಪೂಜಿತ ಕಣ್ವಾಶ್ರಮವನ್ನು ಸೇರಿ ಅಲ್ಲಿ ಫಲ ಮತ್ತು ಶಾಕಾಹಾರಿಯಾಗಿ ಇರುವವನು ಕೌಮಾರಪದವನ್ನು ಪಡೆಯುತ್ತಾನೆ.

03080065a ಧರ್ಮಾರಣ್ಯಂ ಹಿ ತತ್ಪುಣ್ಯಮಾದ್ಯಂ ಚ ಭರತರ್ಷಭ।
03080065c ಯತ್ರ ಪ್ರವಿಷ್ಟಮಾತ್ರೋ ವೈ ಪಾಪೇಭ್ಯೋ ವಿಪ್ರಮುಚ್ಯತೇ।।

ಭರತರ್ಷಭ! ಆ ಧರ್ಮಾರಣ್ಯದಲ್ಲಿ ಕಾಲಿಡುತ್ತಲೇ ಪುಣ್ಯವನ್ನು ಪಡೆದು ಪಾಪಗಳಿಂದ ವಿಮೋಚನಗೊಳ್ಳುತ್ತಾರೆ.

03080066a ಅರ್ಚಯಿತ್ವಾ ಪಿತೄನ್ದೇವಾನ್ನಿಯತೋ ನಿಯತಾಶನಃ।
03080066c ಸರ್ವಕಾಮಸಮೃದ್ಧಸ್ಯ ಯಜ್ಞಸ್ಯ ಫಲಮಶ್ನುತೇ।।

ಅಲ್ಲಿ ನಿಯಮಿತ ಆಹಾರವನ್ನು ತಿಂದು, ನಿಯತನಾಗಿ ಪಿತೃ-ದೇವತೆಗಳನ್ನು ಅರ್ಚಿಸುವವನು ಸರ್ವಕಾಮಗಳನ್ನೂ ಸಮೃದ್ಧಗೊಳಿಸಬಲ್ಲ ಯಜ್ಞದ ಫಲವನ್ನು ಹೊಂದುತ್ತಾನೆ.

03080067a ಪ್ರದಕ್ಷಿಣಂ ತತಃ ಕೃತ್ವಾ ಯಯಾತಿಪತನಂ ವ್ರಜೇತ್।
03080067c ಹಯಮೇಧಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ತತ್ರ ವೈ।।

ಅದನ್ನು ಪ್ರದಕ್ಷಿಣೆಮಾಡಿ ಯಯಾತಿಯು ಬಿದ್ದ ಸ್ಥಳಕ್ಕೆ ಹೋಗಬೇಕು. ಅಲ್ಲಿ ಅವನು ಅಶ್ವಮೇಧ ಯಜ್ಞದ ಫಲವನ್ನು ಪಡೆಯುತ್ತಾನೆ.

03080068a ಮಹಾಕಾಲಂ ತತೋ ಗಚ್ಚೇನ್ನಿಯತೋ ನಿಯತಾಶನಃ।
03080068c ಕೋಟಿತೀರ್ಥಮುಪಸ್ಪೃಶ್ಯ ಹಯಮೇಧಫಲಂ ಲಭೇತ್।।

ಅಲ್ಲಿಂದ ನಿಯತನಾಗಿ, ನಿಯಮಿತ ಆಹಾರವನ್ನು ತೆಗೆದುಕೊಂಡು, ಮಹಾಕಾಲನಲ್ಲಿಗೆ ಹೋಗಬೇಕು. ಅಲ್ಲಿ ಕೋಟಿತೀರ್ಥದಲ್ಲಿ ಸ್ನಾನಮಾಡಿದರೆ ಅಶ್ವಮೇಧದ ಫಲವು ದೊರೆಯುತ್ತದೆ.

03080069a ತತೋ ಗಚ್ಚೇತ ಧರ್ಮಜ್ಞ ಪುಣ್ಯಸ್ಥಾನಮುಮಾಪತೇಃ।
03080069c ನಾಮ್ನಾ ಭದ್ರವಟಂ ನಾಮ ತ್ರಿಷು ಲೋಕೇಷು ವಿಶ್ರುತಂ।।

ಧರ್ಮಜ್ಞ! ನಂತರ ಭದ್ರವಟ ಎಂಬ ಹೆಸರಿನಿಂದ ಮೂರೂ ಲೋಕಗಳಲ್ಲಿ ಪ್ರಸಿದ್ಧವಾದ ಉಮಾಪತಿಯ ಪುಣ್ಯಸ್ಥಾನಕ್ಕೆ ಹೋಗಬೇಕು.

03080070a ತತ್ರಾಭಿಗಮ್ಯ ಚೇಶಾನಂ ಗೋಸಹಸ್ರಫಲಂ ಲಭೇತ್।
03080070c ಮಹಾದೇವಪ್ರಸಾದಾಚ್ಚ ಗಾಣಪತ್ಯಮವಾಪ್ನುಯಾತ್।।

ಅಲ್ಲಿರುವ ಈಶ್ವರನ ಬಳಿ ಹೋದರೆ ಸಾವಿರ ಗೋವುಗಳನ್ನು ದಾನವನ್ನಿತ್ತ ಫಲವು ದೊರೆಯುತ್ತದೆ ಮತ್ತು ಮಹಾದೇವನ ಪ್ರಸಾದದಿಂದ ಗಣಸ್ಥಾನವನ್ನು ಪಡೆಯುತ್ತಾನೆ.

03080071a ನರ್ಮದಾಮಥ ಚಾಸಾದ್ಯ ನದೀಂ ತ್ರೈಲೋಕ್ಯವಿಶ್ರುತಾಂ।
03080071c ತರ್ಪಯಿತ್ವಾ ಪಿತೄನ್ದೇವಾನಗ್ನಿಷ್ಟೋಮಫಲಂ ಲಭೇತ್।।

ಮೂರು ಲೋಕಗಳಿಲ್ಲಿಯೂ ಪ್ರಸಿದ್ಧ ನರ್ಮದಾ ನದಿಯನ್ನು ಸೇರಿ ಪಿತೃ ಮತ್ತು ದೇವತೆಗಳಿಗೆ ತರ್ಪಣಗಳನ್ನಿತ್ತರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ.

03080072a ದಕ್ಷಿಣಂ ಸಿಂಧುಮಾಸಾದ್ಯ ಬ್ರಹ್ಮಚಾರೀ ಜಿತೇಂದ್ರಿಯಃ।
03080072c ಅಗ್ನಿಷ್ಟೋಮಮವಾಪ್ನೋತಿ ವಿಮಾನಂ ಚಾಧಿರೋಹತಿ।।

ದಕ್ಷಿಣ ನದಿಯನ್ನು ಸೇರಿ ಬ್ರಹ್ಮಚಾರಿಯಾಗಿ, ಇಂದ್ರಿಯಗಳನ್ನು ಗೆದ್ದವನು ಅಗ್ನಿಷ್ಟೋಮ ಯಾಗದ ಫಲವನ್ನು ಹೊಂದುತ್ತಾನೆ ಮತ್ತು ವಿಮಾನವನ್ನು ಏರುತ್ತಾನೆ.

03080073a ಚರ್ಮಣ್ವತೀಂ ಸಮಾಸಾದ್ಯ ನಿಯತೋ ನಿಯತಾಶನಃ।
03080073c ರಂತಿದೇವಾಭ್ಯನುಜ್ಞಾತೋ ಅಗ್ನಿಷ್ಟೋಮಫಲಂ ಲಭೇತ್।।

ನಿಯತನಾಗಿ, ನಿಯಮಿತ ಆಹಾರವನ್ನು ಸೇವಿಸುತ್ತಾ ಚರ್ಮಣ್ವತಿಯನ್ನು ಸೇರಿದರೆ ಅಲ್ಲಿ ರಂತಿದೇವನ ಕೃಪೆಗೆ ಪಾತ್ರನಾಗಿ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ.

03080074a ತತೋ ಗಚ್ಚೇತ ಧರ್ಮಜ್ಞ ಹಿಮವತ್ಸುತಮರ್ಬುದಂ।
03080074c ಪೃಥಿವ್ಯಾಂ ಯತ್ರ ವೈ ಚಿದ್ರಂ ಪೂರ್ವಮಾಸೀದ್ಯುಧಿಷ್ಠಿರ।।

ಧರ್ಮಜ್ಞ! ಯುಧಿಷ್ಠಿರ1! ನಂತರ ಹಿಮಾಲಯದ ಮಗ ಅರ್ಬುದಕ್ಕೆ ಹೋಗಬೇಕು. ಅಲ್ಲಿ ಹಿಂದೆ ಭೂಮಿಯ ಕಿಂಡಿಯಿತ್ತು.

03080075a ತತ್ರಾಶ್ರಮೋ ವಸಿಷ್ಠಸ್ಯ ತ್ರಿಷು ಲೋಕೇಷು ವಿಶ್ರುತಃ।
03080075c ತತ್ರೋಷ್ಯ ರಜನೀಮೇಕಾಂ ಗೋಸಹಸ್ರಫಲಂ ಲಭೇತ್।।

ಅಲ್ಲಿ ಮೂರು ಲೋಕಗಳಲ್ಲಿಯೂ ವಿಶ್ರುತ ವಸಿಷ್ಠನ ಆಶ್ರಮವಿದೆ. ಅಲ್ಲಿ ಒಂದು ರಾತ್ರಿಯನ್ನು ಕಳೆದವನಿಗೆ ಸಾವಿರ ಗೋವುಗಳನ್ನು ದಾನವಿತ್ತ ಫಲವು ದೊರೆಯುತ್ತದೆ.

03080076a ಪಿಂಗಾತೀರ್ಥಮುಪಸ್ಪೃಶ್ಯ ಬ್ರಹ್ಮಚಾರೀ ಜಿತೇಂದ್ರಿಯಃ।
03080076c ಕಪಿಲಾನಾಂ ನರವ್ಯಾಘ್ರ ಶತಸ್ಯ ಫಲಮಶ್ನುತೇ।।

ನರವ್ಯಾಘ್ರ! ಬ್ರಹ್ಮಚಾರಿಯಾಗಿದ್ದುಕೊಂಡು, ಜಿತೇಂದ್ರಿಯನಾಗಿದ್ದುಕೊಂಡು ಪಿಂಗತೀರ್ಥದಲ್ಲಿ ಸ್ನಾನಮಾಡಿದರೆ ಒಂದು ನೂರು ಕೆಂಪು ಗೋವುಗಳನ್ನು ದಾನಮಾಡಿಕೊಟ್ಟ ಪುಣ್ಯವು ದೊರೆಯುತ್ತದೆ.

03080077a ತತೋ ಗಚ್ಚೇತ ಧರ್ಮಜ್ಞ ಪ್ರಭಾಸಂ ಲೋಕವಿಶ್ರುತಂ।
03080077c ಯತ್ರ ಸನ್ನಿಹಿತೋ ನಿತ್ಯಂ ಸ್ವಯಮೇವ ಹುತಾಶನಃ।
03080077e ದೇವತಾನಾಂ ಮುಖಂ ವೀರ ಅನಲೋಽನಿಲಸಾರಥಿಃ।।

ಧರ್ಮಜ್ಞ! ನಂತರ ಲೋಕವಿಶ್ರುತ ಪ್ರಭಾಸಕ್ಕೆ ಹೋಗಬೇಕು. ಅಲ್ಲಿ ಸ್ವಯಂ ದೇವತೆಗಳ ಮುಖ, ವೀರ, ಅನಿಲ ಸಾರಥಿ, ಅನಲ ಹುತಾಶನನು ಸದಾ ಇರುತ್ತಾನೆ.

03080078a ತಸ್ಮಿಂಸ್ತೀರ್ಥವರೇ ಸ್ನಾತ್ವಾ ಶುಚಿಃ ಪ್ರಯತಮಾನಸಃ।
03080078c ಅಗ್ನಿಷ್ಟೋಮಾತಿರಾತ್ರಾಭ್ಯಾಂ ಫಲಂ ಪ್ರಾಪ್ನೋತಿ ಮಾನವಃ।।

ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ಶುಚಿಯಾಗಿ ವಿನಯಮನಸ್ಕನಾಗಿರುವ ಮನುಷ್ಯನಿಗೆ ಅಗ್ನಿಷ್ಟೋಮ ಮತ್ತು ಅತಿರಾತ್ರಿ ಯಾಗಗಳ ಫಲವು ದೊರೆಯುತ್ತದೆ.

03080079a ತತೋ ಗತ್ವಾ ಸರಸ್ವತ್ಯಾಃ ಸಾಗರಸ್ಯ ಚ ಸಂಗಮೇ।
03080079c ಗೋಸಹಸ್ರಫಲಂ ಪ್ರಾಪ್ಯ ಸ್ವರ್ಗಲೋಕೇ ಮಹೀಯತೇ।
03080079e ದೀಪ್ಯಮಾನೋಽಗ್ನಿವನ್ನಿತ್ಯಂ ಪ್ರಭಯಾ ಭರತರ್ಷಭ।।

ಭರತರ್ಷಭ! ನಂತರ ಸರಸ್ವತಿ ಸಾಗರಗಳ ಸಂಗಮಕ್ಕೆ ಹೋದರೆ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆದು ಸ್ವರ್ಗಲೋಕದಲ್ಲಿ ನಿತ್ಯವೂ ಅಗ್ನಿಯಂತೆ ಬೆಳಗುತ್ತಿರುವ ಉನ್ನತ ಸ್ಥಾನವು ದೊರೆಯುತ್ತದೆ.

03080080a ತ್ರಿರಾತ್ರಮುಷಿತಸ್ತತ್ರ ತರ್ಪಯೇತ್ಪಿತೃದೇವತಾಃ।
03080080c ಪ್ರಭಾಸತೇ ಯಥಾ ಸೋಮೋ ಅಶ್ವಮೇಧಂ ಚ ವಿಂದತಿ।।

ಅಲ್ಲಿ ಮೂರು ರಾತ್ರಿಗಳು ಉಳಿದು ಪಿತೃಗಳಿಗೆ ಮತ್ತು ದೇವತೆಗಳಿಗೆ ತರ್ಪಣವನ್ನು ನೀಡಿದರೆ ಸೋಮನಂತೆ ಪ್ರಭೆಯನ್ನು ಹೊಂದುತ್ತಾನೆ ಮತ್ತು ಅಶ್ವಮೇಧದ ಫಲವನ್ನು ಪಡೆಯುತ್ತಾನೆ.

03080081a ವರದಾನಂ ತತೋ ಗಚ್ಚೇತ್ತೀರ್ಥಂ ಭರತಸತ್ತಮ।
03080081c ವಿಷ್ಣೋರ್ದುರ್ವಾಸಸಾ ಯತ್ರ ವರೋ ದತ್ತೋ ಯುಧಿಷ್ಠಿರ।।

ಭರತಸತ್ತಮ! ಯುಧಿಷ್ಠಿರ! ನಂತರ ಎಲ್ಲಿ ವಿಷ್ಣುವು ದುರ್ವಾಸನಿಗೆ ವರವನ್ನಿತ್ತನೋ ಆ ವರದಾನ ಎನ್ನುವ ತೀರ್ಥಕ್ಕೆ ಹೋಗಬೇಕು.

03080082a ವರದಾನೇ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।
03080082c ತತೋ ದ್ವಾರವತೀಂ ಗಚ್ಚೇನ್ನಿಯತೋ ನಿಯತಾಶನಃ।
03080082e ಪಿಂಡಾರಕೇ ನರಃ ಸ್ನಾತ್ವಾ ಲಭೇದ್ಬಹು ಸುವರ್ಣಕಂ।।

ವರದಾನದಲ್ಲಿ ಮಿಂದ ನರನು ಸಹಸ್ರಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆಯುತ್ತಾನೆ. ನಂತರ ನಿಯತನಾಗಿ, ನಿಯಮಿತ ಆಹಾರವನ್ನು ಸೇವಿಸುತ್ತಾ ದ್ವಾರವತಿಗೆ ಹೋಗಬೇಕು. ಪಿಂಡಾರಕದಲ್ಲಿ ಸ್ನಾನಮಾಡಿದ ನರನಿಗೆ ಬಹಳಷ್ಟು ಚಿನ್ನವನ್ನು ದಾನಮಾಡಿದ ಪುಣ್ಯವು ದೊರೆಯುತ್ತದೆ.

03080083a ತಸ್ಮಿಂಸ್ತೀರ್ಥೇ ಮಹಾಭಾಗ ಪದ್ಮಲಕ್ಷಣಲಕ್ಷಿತಾಃ।
03080083c ಅದ್ಯಾಪಿ ಮುದ್ರಾ ದೃಶ್ಯಂತೇ ತದದ್ಭುತಮರಿಂದಮ।।
03080084a ತ್ರಿಶೂಲಾಂಕಾನಿ ಪದ್ಮಾನಿ ದೃಶ್ಯಂತೇ ಕುರುನಂದನ।
03080084c ಮಹಾದೇವಸ್ಯ ಸಾನ್ನಿಧ್ಯಂ ತತ್ರೈವ ಭರತರ್ಷಭ।।

ಮಹಾಭಾಗ! ಅರಿಂದಮ! ಕುರುನಂದನ! ಭರತರ್ಷಭ! ಆ ತೀರ್ಥದಲ್ಲಿ ಉತ್ತಮ ಲಕ್ಷಣಗಳನ್ನು ಹೊಂದಿದ ಅದ್ಭುತ ಮುದ್ರೆಗಳನ್ನು ಹೊಂದಿದ ಕಮಲಗಳು ಈಗಲೂ ಕಾಣುತ್ತವೆ. ಆ ಕಮಲಗಳಲ್ಲಿ ತ್ರಿಶೂಲದ ಆಕಾರವು ಕಾಣುತ್ತದೆ. ಮತ್ತು ಅಲ್ಲಿಯೇ ಮಹಾದೇವನ ಸಾನ್ನಿಧ್ಯವೂ ಇದೆ.

03080085a ಸಾಗರಸ್ಯ ಚ ಸಿಂಧೋಶ್ಚ ಸಂಗಮಂ ಪ್ರಾಪ್ಯ ಭಾರತ।
03080085c ತೀರ್ಥೇ ಸಲಿಲರಾಜಸ್ಯ ಸ್ನಾತ್ವಾ ಪ್ರಯತಮಾನಸಃ।।
03080086a ತರ್ಪಯಿತ್ವಾ ಪಿತೄನ್ದೇವಾನೃಷೀಂಶ್ಚ ಭರತರ್ಷಭ।
03080086c ಪ್ರಾಪ್ನೋತಿ ವಾರುಣಂ ಲೋಕಂ ದೀಪ್ಯಮಾನಃ ಸ್ವತೇಜಸಾ।।

ಭಾರತ! ಭರತರ್ಷಭ! ಸಾಗರ ಮತ್ತು ಸಿಂಧುನದಿಯ ಸಂಗಮವನ್ನು ಸೇರಿ ಸಲಿಲರಾಜನ ತೀರ್ಥದಲ್ಲಿ ಸ್ನಾನಮಾಡಿ, ವಿನಯಮನಸ್ಕನಾಗಿ, ಪಿತೃಗಳಿಗೂ, ದೇವತೆಗಳಿಗೂ, ಋಷಿಗಳಿಗೂ ತರ್ಪಣವನ್ನಿತ್ತರೆ, ತನ್ನದೇ ತೇಜಸ್ಸಿನಿಂದ ಬೆಳಗುತ್ತಾ ವರುಣಲೋಕವನ್ನು ಹೊಂದುತ್ತಾನೆ.

03080087a ಶಂಕುಕರ್ಣೇಶ್ವರಂ ದೇವಮರ್ಚಯಿತ್ವಾ ಯುಧಿಷ್ಠಿರ।
03080087c ಅಶ್ವಮೇಧಂ ದಶಗುಣಂ ಪ್ರವದಂತಿ ಮನೀಷಿಣಃ।।

ಯುಧಿಷ್ಠಿರ! ದೇವ ಶಂಕುಕರ್ಣೇಶ್ವರನನ್ನು ಅರ್ಚಿಸಿದ ಮನುಷ್ಯನು ಅಶ್ವಮೇಧಯಾಗದ ಹತ್ತರಷ್ಟು ಪುಣ್ಯವನ್ನು ಪಡೆಯುತ್ತಾನೆ.

03080088a ಪ್ರದಕ್ಷಿಣಮುಪಾವೃತ್ಯ ಗಚ್ಚೇತ ಭರತರ್ಷಭ।
03080088c ತೀರ್ಥಂ ಕುರುವರಶ್ರೇಷ್ಠ ತ್ರಿಷು ಲೋಕೇಷು ವಿಶ್ರುತಂ।
03080088e ದೃಮೀತಿ ನಾಮ್ನಾ ವಿಖ್ಯಾತಂ ಸರ್ವಪಾಪಪ್ರಮೋಚನಂ।।
03080089a ಯತ್ರ ಬ್ರಹ್ಮಾದಯೋ ದೇವಾ ಉಪಾಸಂತೇ ಮಹೇಶ್ವರಂ।

ಕುರುವರಶ್ರೇಷ್ಠ! ಭರತರ್ಷಭ! ಅದನ್ನು ಪ್ರದಕ್ಷಿಣೆಮಾಡಿ ದೃಮ ಎಂಬ ಹೆಸರಿನಿಂದ ಮೂರೂ ಲೋಕಗಳಲ್ಲಿಯೂ ವಿಶ್ರುತವಾದ, ಸರ್ವಪಾಪವಿಮೋಚಕವೆಂದು ವಿಖ್ಯಾತವಾದ ತೀರ್ಥಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು ಮಹೇಶ್ವರನನ್ನು ಉಪಾಸಿಸುತ್ತಾರೆ.

03080089c ತತ್ರ ಸ್ನಾತ್ವಾರ್ಚಯಿತ್ವಾ ಚ ರುದ್ರಂ ದೇವಗಣೈರ್ವೃತಂ।
03080089e ಜನ್ಮಪ್ರಭೃತಿ ಪಾಪಾನಿ ಕೃತಾನಿ ನುದತೇ ನರಃ।।

ಅಲ್ಲಿ ಸ್ನಾನಮಾಡಿ, ದೇವಗಣಗಳಿಂದ ಸುತ್ತುವರೆಯಲ್ಪಟ್ಟ ರುದ್ರನನ್ನು ಪೂಜಿಸಿದ ನರನು ಹುಟ್ಟಿದಾಗಿನಿಂದ ಮಾಡಿದ ಪಾಪಗಳಿಂದ ದೂರವಾಗುತ್ತಾನೆ.

03080090a ದೃಮೀ ಚಾತ್ರ ನರಶ್ರೇಷ್ಠ ಸರ್ವದೇವೈರಭಿಷ್ಟುತಾ।
03080090c ತತ್ರ ಸ್ನಾತ್ವಾ ನರವ್ಯಾಘ್ರ ಹಯಮೇಧಮವಾಪ್ನುಯಾತ್।।

ನರಶ್ರೇಷ್ಠ! ಸರ್ವದೇವತೆಗಳು ಅಲ್ಲಿರುವ ದೃಮಿಯನ್ನು ಪ್ರಶಂಸಿಸುತ್ತಾರೆ. ನರವ್ಯಾಘ್ರ! ಅಲ್ಲಿ ಸ್ನಾನ ಮಾಡಿ ಅಶ್ವಮೇಧದ ಫಲವನ್ನು ಹೊಂದಬಹುದು.

03080091a ಜಿತ್ವಾ ಯತ್ರ ಮಹಾಪ್ರಾಜ್ಞ ವಿಷ್ಣುನಾ ಪ್ರಭವಿಷ್ಣುನಾ।
03080091c ಪುರಾ ಶೌಚಂ ಕೃತಂ ರಾಜನ್ ಹತ್ವಾ ದೈವತಕಂಟಕಾನ್।।

ರಾಜನ್! ಇಲ್ಲಿಯೇ ಮಹಾಪ್ರಾಜ್ಞ ವಿಷ್ಣು ಪ್ರಭವಿಷ್ಣುವು ದೇವತೆಗಳ ಕಂಟಕರನ್ನು ಸಂಹರಿಸಿ ತನ್ನನ್ನು ಶುಚಿಪಡಿಸಿಕೊಂಡನು.

03080092a ತತೋ ಗಚ್ಚೇತ ಧರ್ಮಜ್ಞ ವಸೋರ್ಧಾರಾಮಭಿಷ್ಟುತಾಂ।
03080092c ಗಮನಾದೇವ ತಸ್ಯಾಂ ಹಿ ಹಯಮೇಧಮವಾಪ್ನುಯಾತ್।।

ಧರ್ಮಜ್ಞ! ಅಲ್ಲಿಂದ ಪ್ರಶಂಸೆಗೆ ಪಾತ್ರ ವಸೋರ್ಧಾರಕ್ಕೆ ಹೋಗಬೇಕು. ಅಲ್ಲಿಗೆ ಕೇವಲ ಹೋಗುವುದರಿಂದಲೇ ಅಶ್ವಮೇಧದ ಫಲವು ದೊರೆಯುತ್ತದೆ.

03080093a ಸ್ನಾತ್ವಾ ಕುರುವರಶ್ರೇಷ್ಠ ಪ್ರಯತಾತ್ಮಾ ತು ಮಾನವಃ।
03080093c ತರ್ಪ್ಯ ದೇವಾನ್ಪಿತೄಂಶ್ಚೈವ ವಿಷ್ಣುಲೋಕೇ ಮಹೀಯತೇ।।

ಕುರುವರಶ್ರೇಷ್ಠ! ಅಲ್ಲಿ ಸ್ನಾನಮಾಡಿ ದೇವತೆಗಳಿಗೆ ಮತ್ತು ಪಿತೃಗಳಿಗೆ ತರ್ಪಣವನ್ನಿತ್ತ ಮಾನವನು ವಿಷ್ಣುಲೋಕವನ್ನು ಹೊಂದುತ್ತಾನೆ.

03080094a ತೀರ್ಥಂ ಚಾತ್ರ ಪರಂ ಪುಣ್ಯಂ ವಸೂನಾಂ ಭರತರ್ಷಭ।
03080094c ತತ್ರ ಸ್ನಾತ್ವಾ ಚ ಪೀತ್ವಾ ಚ ವಸೂನಾಂ ಸಮ್ಮತೋ ಭವೇತ್।।

ಭರತರ್ಷಭ! ಅಲ್ಲಿ ಶ್ರೇಷ್ಠವಾದ ಪುಣ್ಯಕರ ವಸುಗಳ ತೀರ್ಥವಿದೆ. ಅಲ್ಲಿ ಸ್ನಾನ ಮಾಡಿ ನೀರು ಕುಡಿದವರು ವಸುಗಳ ಪ್ರೀತಿಪಾತ್ರರಾಗುತ್ತಾರೆ.

03080095a ಸಿಂಧೂತ್ತಮಮಿತಿ ಖ್ಯಾತಂ ಸರ್ವಪಾಪಪ್ರಣಾಶನಂ।
03080095c ತತ್ರ ಸ್ನಾತ್ವಾ ನರಶ್ರೇಷ್ಠ ಲಭೇದ್ಬಹು ಸುವರ್ಣಕಂ।।

ಅಲ್ಲಿ ಸಿಂಧೂತ್ತಮ ಎಂದು ವಿಖ್ಯಾತ ಸರ್ವಪಾಪಗಳನ್ನೂ ನಾಶಪಡಿಸಬಲ್ಲ ತೀರ್ಥವಿದೆ. ನರಶ್ರೇಷ್ಠ! ಅಲ್ಲಿ ಸ್ನಾನಮಾಡಿದವನು ಬಹಳಷ್ಟು ಬಂಗಾರವನ್ನು ಪಡೆಯುತ್ತಾನೆ.

03080096a ಬ್ರಹ್ಮತುಂಗಂ ಸಮಾಸಾದ್ಯ ಶುಚಿಃ ಪ್ರಯತಮಾನಸಃ।
03080096c ಬ್ರಹ್ಮಲೋಕಮವಾಪ್ನೋತಿ ಸುಕೃತೀ ವಿರಜಾ ನರಃ।।

ಬ್ರಹ್ಮತುಂಗವನ್ನು ಸೇರಿ ಅಲ್ಲಿ ಶುಚಿಯಾಗಿ, ಪ್ರಯತಮನಸ್ಕನಾಗಿ, ಉತ್ತಮ ಕೃತ್ಯಗಳನ್ನು ಮಾಡಿ, ಉತ್ಸುಕನಾಗಿರುವವನು ಬ್ರಹ್ಮಲೋಕವನ್ನು ಪಡೆಯುತ್ತಾನೆ.

03080097a ಕುಮಾರಿಕಾಣಾಂ ಶಕ್ರಸ್ಯ ತೀರ್ಥಂ ಸಿದ್ಧನಿಷೇವಿತಂ।
03080097c ತತ್ರ ಸ್ನಾತ್ವಾ ನರಃ ಕ್ಷಿಪ್ರಂ ಶಕ್ರಲೋಕಮವಾಪ್ನುಯಾತ್।।

ಸಿದ್ಧರಿಂದ ಸೇವಿತ ಶಕ್ರನ ಕುಮಾರಿಗಳ ತೀರ್ಥದಲ್ಲಿ ಸ್ನಾನಮಾಡಿದ ನರನು ಕ್ಷಿಪ್ರವಾಗಿ ಶಕ್ರಲೋಕವನ್ನು ಹೊಂದುತ್ತಾನೆ.

03080098a ರೇಣುಕಾಯಾಶ್ಚ ತತ್ರೈವ ತೀರ್ಥಂ ದೇವನಿಷೇವಿತಂ।
03080098c ತತ್ರ ಸ್ನಾತ್ವಾ ಭವೇದ್ವಿಪ್ರೋ ವಿಮಲಶ್ಚಂದ್ರಮಾ ಯಥಾ।।

ಅಲ್ಲಿಯೇ ದೇವತೆಗಳು ಬರುವ ರೇಣುಕೆಯ ತೀರ್ಥವಿದೆ. ಅಲ್ಲಿ ಸ್ನಾನಮಾಡಿದ ವಿಪ್ರನು ಚಂದ್ರಮನಂತೆ ವಿಮಲನಾಗುತ್ತಾನೆ.

03080099a ಅಥ ಪಂಚನದಂ ಗತ್ವಾ ನಿಯತೋ ನಿಯತಾಶನಃ।
03080099c ಪಂಚ ಯಜ್ಞಾನವಾಪ್ನೋತಿ ಕ್ರಮಶೋ ಯೇಽನುಕೀರ್ತಿತಾಃ।।

ಅಲ್ಲಿಂದ ಪಂಚನದಕ್ಕೆ ಹೋಗಿ ನಿಯತನಾಗಿ, ನಿಯಮಿತ ಆಹಾರವನ್ನು ಸೇವಿಸಿಕೊಂಡಿದ್ದರೆ ಕ್ರಮೇಣವಾಗಿ ಪ್ರಶಂಸೆಗೊಳಗಾದ ಐದು ಯಜ್ಞಗಳ ಫಲವನ್ನು ಪಡೆಯುತ್ತಾನೆ.

03080100a ತತೋ ಗಚ್ಚೇತ ಧರ್ಮಜ್ಞ ಭೀಮಾಯಾಃ ಸ್ಥಾನಮುತ್ತಮಂ।
03080100c ತತ್ರ ಸ್ನಾತ್ವಾ ತು ಯೋನ್ಯಾಂ ವೈ ನರೋ ಭರತಸತ್ತಮ।।
03080101a ದೇವ್ಯಾಃ ಪುತ್ರೋ ಭವೇದ್ರಾಜಂಸ್ತಪ್ತಕುಂಡಲವಿಗ್ರಹಃ।
03080101c ಗವಾಂ ಶತಸಹಸ್ರಸ್ಯ ಫಲಂ ಚೈವಾಪ್ನುಯಾನ್ಮಹತ್।।

ಧರ್ಮಜ್ಞ! ನಂತರ ಭೀಮನ ಉತ್ತಮ ಸ್ಥಾನಗಳಿಗೆ ಹೋಗಬೇಕು. ಭರತಸತ್ತಮ! ಅಲ್ಲಿ ಸ್ನಾನಮಾಡಿದ ನರನು ದೇವಿಯ ಯೋನಿಯಲ್ಲಿ ಪುತ್ರನಾಗಿ ಜನಿಸುತ್ತಾನೆ. ರಾಜನ್! ಚಿನ್ನದ ಕರ್ಣಕುಂಡಲಗಳನ್ನು ಧರಿಸಿ ಅವನು ನೂರು ಸಾವಿರ ಗೋವುಗಳನ್ನು ಮಹಾ ಫಲವನ್ನಾಗಿ ಪಡೆಯುತ್ತಾನೆ.

03080102a ಗಿರಿಮುಂಜಂ ಸಮಾಸಾದ್ಯ ತ್ರಿಷು ಲೋಕೇಷು ವಿಶ್ರುತಂ।
03080102c ಪಿತಾಮಹಂ ನಮಸ್ಕೃತ್ಯ ಗೋಸಹಸ್ರಫಲಂ ಲಭೇತ್।।

ಮೂರು ಲೋಕಗಳಲ್ಲಿ ವಿಶ್ರುತ ಗಿರಿಮುಂಜವನ್ನು ಸೇರಿ ಅಲ್ಲಿ ಪಿತಾಮಹನನ್ನು ನಮಸ್ಕರಿಸಿ ಸಹಸ್ರ ಗೋವುಗಳನ್ನು ದಾನವನ್ನಾಗಿತ್ತ ಫಲವನ್ನು ಪಡೆಯಬಹುದು.

03080103a ತತೋ ಗಚ್ಚೇತ ಧರ್ಮಜ್ಞ ವಿಮಲಂ ತೀರ್ಥಮುತ್ತಮಂ।
03080103c ಅದ್ಯಾಪಿ ಯತ್ರ ದೃಶ್ಯಂತೇ ಮತ್ಸ್ಯಾಃ ಸೌವರ್ಣರಾಜತಾಃ।।
03080104a ತತ್ರ ಸ್ನಾತ್ವಾ ನರಶ್ರೇಷ್ಠ ವಾಜಪೇಯಮವಾಪ್ನುಯಾತ್।
03080104c ಸರ್ವಪಾಪವಿಶುದ್ಧಾತ್ಮಾ ಗಚ್ಚೇಚ್ಚ ಪರಮಾಂ ಗತಿಂ।।

ಧರ್ಮಜ್ಞ! ನಂತರ ಉತ್ತಮವಾದ ವಿಮಲ ತೀರ್ಥಕ್ಕೆ ಹೋಗಬೇಕು. ಈಗಲೂ ಕೂಡ ಅಲ್ಲಿ ಬಂಗಾರದ ಮತ್ತು ಬೆಳ್ಳಿಯ ಮೀನುಗಳನ್ನು ನೋಡಬಹುದು. ನರಶ್ರೇಷ್ಠ! ಅಲ್ಲಿ ಸ್ನಾನಮಾಡಿ ವಾಜಪೇಯ ಯಜ್ಞದ ಫಲವನ್ನು ಪಡೆಯಬಹುದು ಮತ್ತು ಸರ್ವಪಾಪಗಳನ್ನು ಕಳೆದುಕೊಂಡು ಶುದ್ಧಾತ್ಮನಾಗಿ ಪರಮ ಗತಿಯನ್ನು ಪಡೆಯಬಹುದು.

03080105a ತತೋ ಗಚ್ಚೇತ ಮಲದಾಂ ತ್ರಿಷು ಲೋಕೇಷು ವಿಶ್ರುತಾಂ।
03080105c ಪಶ್ಚಿಮಾಯಾಂ ತು ಸಂಧ್ಯಾಯಾಮುಪಸ್ಪೃಶ್ಯ ಯಥಾವಿಧಿ।।

ಅಲ್ಲಿಂದ ಮೂರು ಲೋಕಗಳಲ್ಲಿಯೂ ವಿಶ್ರುತ ಮಲದಕ್ಕೆ ಹೋಗಬೇಕು ಮತ್ತು ಸಾಯಂಕಾಲದ ಸಂಧ್ಯಾಸಮಯದಲ್ಲಿ ಯಥಾವಿಧಿಯಾಗಿ ಸಂಧ್ಯಾವಂದನೆಯನ್ನು ಮಾಡಬೇಕು.

03080106a ಚರುಂ ನರೇಂದ್ರ ಸಪ್ತಾರ್ಚೇರ್ಯಥಾಶಕ್ತಿ ನಿವೇದಯೇತ್।
03080106c ಪಿತೄಣಾಮಕ್ಷಯಂ ದಾನಂ ಪ್ರವದಂತಿ ಮನೀಷಿಣಃ।।

ನರೇಂದ್ರ! ಅಲ್ಲಿ ಯಥಾಶಕ್ತಿಯಾಗಿ ಚರುವನ್ನು ಅಗ್ನಿಗೆ ಆಹುತಿಯನ್ನಾಗಿ ನೀಡಬೇಕು. ಅಲ್ಲಿ ಪಿತೃಗಳಿಗೆ ನೀಡಿದುದು ಅಕ್ಷಯವಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ.

03080107a ಗವಾಂ ಶತಸಹಸ್ರೇಣ ರಾಜಸೂಯಶತೇನ ಚ।
03080107c ಅಶ್ವಮೇಧಸಹಸ್ರೇಣ ಶ್ರೇಯಾನ್ಸಪ್ತಾರ್ಚಿಷಶ್ಚರುಃ।।

ಚರುವಿನ ಹೋಮವು ನೂರು ಸಾವಿರ ಗೋದಾನಗಳ ಫಲ, ನೂರು ರಾಜಸೂಯ ಯಜ್ಞಗಳ ಫಲ, ಮತ್ತು ಸಾವಿರ ಅಶ್ವಮೇಧ ಯಾಗಗಳ ಫಲಕ್ಕಿಂತ ಶ್ರೇಯಸ್ಸಾದುದು.

03080108a ತತೋ ನಿವೃತ್ತೋ ರಾಜೇಂದ್ರ ವಸ್ತ್ರಾಪದಮಥಾವಿಶೇತ್।
03080108c ಅಭಿಗಮ್ಯ ಮಹಾದೇವಮಶ್ವಮೇಧಫಲಂ ಲಭೇತ್।।

ರಾಜೇಂದ್ರ! ಅಲ್ಲಿಂದ ಹಿಂದಿರುಗಿ ವಸ್ತ್ರಾಪದದ ಕಡೆ ಹೋಗಬೇಕು. ಅಲ್ಲಿಯ ಮಹಾದೇವನಲ್ಲಿಗೆ ಹೋಗಿ ಅಶ್ವಮೇಧದ ಫಲವನ್ನು ಪಡೆಯಬಹುದು.

03080109a ಮಣಿಮಂತಂ ಸಮಾಸಾದ್ಯ ಬ್ರಹ್ಮಚಾರೀ ಸಮಾಹಿತಃ।
03080109c ಏಕರಾತ್ರೋಷಿತೋ ರಾಜನ್ನಗ್ನಿಷ್ಟೋಮಫಲಂ ಲಭೇತ್।।

ರಾಜನ್! ಮಣಿಮಂತಕ್ಕೆ ಹೋಗಿ ಬ್ರಹ್ಮಚಾರಿಯಾಗಿ, ಎಚ್ಚರದಿಂದಿದ್ದು, ಒಂದು ರಾತ್ರಿಯನ್ನು ಕಳೆದರೆ ಅಗ್ನಿಷ್ಟೋಮ ಯಾಗದ ಫಲವು ದೊರೆಯುತ್ತದೆ.

03080110a ಅಥ ಗಚ್ಚೇತ ರಾಜೇಂದ್ರ ದೇವಿಕಾಂ ಲೋಕವಿಶ್ರುತಾಂ।
03080110c ಪ್ರಸೂತಿರ್ಯತ್ರ ವಿಪ್ರಾಣಾಂ ಶ್ರೂಯತೇ ಭರತರ್ಷಭ।।
03080111a ತ್ರಿಶೂಲಪಾಣೇಃ ಸ್ಥಾನಂ ಚ ತ್ರಿಷು ಲೋಕೇಷು ವಿಶ್ರುತಂ।
03080111c ದೇವಿಕಾಯಾಂ ನರಃ ಸ್ನಾತ್ವಾ ಸಮಭ್ಯರ್ಚ್ಯ ಮಹೇಶ್ವರಂ।।
03080112a ಯಥಾಶಕ್ತಿ ಚರುಂ ತತ್ರ ನಿವೇದ್ಯ ಭರತರ್ಷಭ।
03080112c ಸರ್ವಕಾಮಸಮೃದ್ಧಸ್ಯ ಯಜ್ಞಸ್ಯ ಲಭತೇ ಫಲಂ।।

ರಾಜೇಂದ್ರ! ಭರತರ್ಷಭ! ಅಲ್ಲಿಂದ ಲೋಕವಿಶ್ರುತ ದೇವಿಕಕ್ಕೆ ಹೋಗಬೇಕು. ಮೂರು ಲೋಕಗಳಲ್ಲಿ ವಿಶ್ರುತವಾದ ಆ ತ್ರಿಶೂಲಪಾಣಿ ಶಿವನ ಸ್ಥಾನದಲ್ಲಿಯೇ ಬ್ರಾಹ್ಮಣರು ಹುಟ್ಟಿದರು ಎಂದು ಕೇಳಿದ್ದೇವೆ. ಭರತರ್ಷಭ! ದೇವಿಕದಲ್ಲಿ ಸ್ನಾನಮಾಡಿ ಮಹೇಶ್ವರನನ್ನು ಪೂಜಿಸಿ ಯಥಾಶಕ್ತಿಯಾಗಿ ಚರುವನ್ನು ನಿವೇದಿಸಿದ ನರನು ಸರ್ವಕಾಮಸಮೃದ್ಧಿ ಯಜ್ಞದ ಫಲವನ್ನು ಪಡೆಯುತ್ತಾನೆ.

03080113a ಕಾಮಾಖ್ಯಂ ತತ್ರ ರುದ್ರಸ್ಯ ತೀರ್ಥಂ ದೇವರ್ಷಿಸೇವಿತಂ।
03080113c ತತ್ರ ಸ್ನಾತ್ವಾ ನರಃ ಕ್ಷಿಪ್ರಂ ಸಿದ್ಧಿಮಾಪ್ನೋತಿ ಭಾರತ।।

ಅಲ್ಲಿ ದೇವರ್ಷಿಸೇವಿತ ಕಾಮ ಎನ್ನುವ ಹೆಸರಿನ ರುದ್ರನ ತೀರ್ಥವಿದೆ. ಭಾರತ! ಅಲ್ಲಿ ಸ್ನಾನಮಾಡಿದ ನರನು ಕ್ಷಿಪ್ರದಲ್ಲಿಯೇ ಸಿದ್ಧಿಯನ್ನು ಹೊಂದುತ್ತಾನೆ.

03080114a ಯಜನಂ ಯಾಜನಂ ಗತ್ವಾ ತಥೈವ ಬ್ರಹ್ಮವಾಲುಕಾಂ।
03080114c ಪುಷ್ಪನ್ಯಾಸ ಉಪಸ್ಪೃಶ್ಯ ನ ಶೋಚೇನ್ಮರಣಂ ತತಃ।।

ಹಾಗೆಯೇ ಯಜನ, ಯಾಜನ ಮತ್ತು ಬ್ರಹ್ಮಾವಲುಕಗಳಿಗೆ ಹೋಗಿ ಅಲ್ಲಿ ಪುಷ್ಪನ್ಯಾಸದಲ್ಲಿ ಸ್ನಾನಮಾಡಿದನಂತರ ಮರಣದ ಕುರಿತು ಚಿಂತಿಸಬೇಕಾಗಿಲ್ಲ.

03080115a ಅರ್ಧಯೋಜನವಿಸ್ತಾರಾಂ ಪಂಚಯೋಜನಮಾಯತಾಂ।
03080115c ಏತಾವದ್ದೇವಿಕಾಮಾಹುಃ ಪುಣ್ಯಾಂ ದೇವರ್ಷಿಸೇವಿತಾಂ।।

ದೇವತೆಗಳು ಮತ್ತು ಋಷಿಗಳಿಂದ ಸೇವಿತಗೊಂಡ ಪುಣ್ಯ ದೇವಿಕವು ಅರ್ಧಯೋಜನ ವಿಸ್ತಾರವೂ ಐದು ಯೋಜನ ಅಗಲವೂ ಇದೆ ಎಂದು ಹೇಳುತ್ತಾರೆ.

03080116a ತತೋ ಗಚ್ಚೇತ ಧರ್ಮಜ್ಞ ದೀರ್ಘಸತ್ರಂ ಯಥಾಕ್ರಮಂ।
03080116c ಯತ್ರ ಬ್ರಹ್ಮಾದಯೋ ದೇವಾಃ ಸಿದ್ಧಾಶ್ಚ ಪರಮರ್ಷಯಃ।
03080116e ದೀರ್ಘಸತ್ರಮುಪಾಸಂತೇ ದಕ್ಷಿಣಾಭಿರ್ಯತವ್ರತಾಃ।।

ಧರ್ಮಜ್ಞ! ಅನಂತರ ಕ್ರಮೇಣವಾಗಿ ದೀರ್ಘಸತ್ರಕ್ಕೆ ಹೋಗಬೇಕು. ಅಲ್ಲಿ ಬ್ರಹ್ಮಾದಿ ದೇವತೆಗಳು, ಸಿದ್ಧರು, ಪರಮ ಋಷಿಗಳು ಯತವ್ರತರಾಗಿದ್ದು ದಕ್ಷಿಣೆಗಳಿಂದ ಕೂಡಿದ ದೀರ್ಘ ಸತ್ರವನ್ನು ನಡೆಸಿದ್ದರು.

03080117a ಗಮನಾದೇವ ರಾಜೇಂದ್ರ ದೀರ್ಘಸತ್ರಮರಿಂದಮ।
03080117c ರಾಜಸೂಯಾಶ್ವಮೇಧಾಭ್ಯಾಂ ಫಲಂ ಪ್ರಾಪ್ನೋತಿ ಮಾನವಃ।।

ರಾಜೇಂದ್ರ! ಅರಿಂದಮ! ದೀರ್ಘಸತ್ರಕ್ಕೆ ಹೋಗುವುದರಿಂದ ಮಾತ್ರ ಮಾನವರು ರಾಜಸೂಯ ಮತ್ತು ಅಶ್ವಮೇಧಗಳ ಫಲವನ್ನು ಹೊಂದುತ್ತಾರೆ.

03080118a ತತೋ ವಿನಶನಂ ಗಚ್ಚೇನ್ನಿಯತೋ ನಿಯತಾಶನಃ।
03080118c ಗಚ್ಚತ್ಯಂತರ್ಹಿತಾ ಯತ್ರ ಮರುಪೃಷ್ಠೇ ಸರಸ್ವತೀ।
03080118e ಚಮಸೇ ಚ ಶಿವೋದ್ಭೇದೇ ನಾಗೋದ್ಭೇದೇ ಚ ದೃಶ್ಯತೇ।।

ಅನಂತರ ಉಪವಾಸದಲ್ಲಿದ್ದು, ನಿಯಮಿತ ಆಹಾರವನ್ನು ಸೇವಿಸುತ್ತಾ, ನಿಯತಕ್ಕೆ ಹೋಗಬೇಕು. ಅಲ್ಲಿ ಸರಸ್ವತಿಯು ಮರುಭೂಮಿಯಲ್ಲಿ ಮರೆಯಾಗಿ ಚಮಸಭೇದ, ಶಿವಭೇದ ಮತ್ತು ನಾಗಭೇದಗಳಾಗಿ ಕಾಣಿಸಿಕೊಳ್ಳುತ್ತಾಳೆ.

03080119a ಸ್ನಾತ್ವಾ ಚ ಚಮಸೋದ್ಭೇದೇ ಅಗ್ನಿಷ್ಟೋಮಫಲಂ ಲಭೇತ್।
03080119c ಶಿವೋದ್ಭೇದೇ ನರಃ ಸ್ನಾತ್ವಾ ಗೋಸಹಸ್ರಫಲಂ ಲಭೇತ್।।
03080120a ನಾಗೋದ್ಭೇದೇ ನರಃ ಸ್ನಾತ್ವಾ ನಾಗಲೋಕಮವಾಪ್ನುಯಾತ್।

ಚಮಸೋದ್ಭೇದದಲ್ಲಿ ಸ್ನಾನಮಾಡಿದರೆ ಅಗ್ನಿಷ್ಟೋಮದ ಫಲವು ದೊರೆಯುತ್ತದೆ. ಶಿವೋದ್ಭೇದದಲ್ಲಿ ಸ್ನಾನಮಾಡಿದ ಮನುಷ್ಯನಿಗೆ ಸಹಸ್ರಗೋವುಗಳನ್ನು ದಾನವನ್ನಾಗಿತ್ತ ಫಲವು ದೊರೆಯುತ್ತದೆ. ನಾಗೋದ್ಭೇದದಲ್ಲಿ ಸ್ನಾನಮಾಡಿ ಮನುಷ್ಯನು ನಾಗಲೋಕವನ್ನು ಸೇರುತ್ತಾನೆ.

03080120c ಶಶಯಾನಂ ಚ ರಾಜೇಂದ್ರ ತೀರ್ಥಮಾಸಾದ್ಯ ದುರ್ಲಭಂ।
03080120e ಶಶರೂಪಪ್ರತಿಚ್ಚನ್ನಾಃ ಪುಷ್ಕರಾ ಯತ್ರ ಭಾರತ।।
03080121a ಸರಸ್ವತ್ಯಾಂ ಮಹಾರಾಜ ಅನು ಸಂವತ್ಸರಂ ಹಿ ತೇ।
03080121c ಸ್ನಾಯಂತೇ ಭರತಶ್ರೇಷ್ಠ ವೃತ್ತಾಂ ವೈ ಕಾರ್ತ್ತಿಕೀಂ ಸದಾ।।
03080122a ತತ್ರ ಸ್ನಾತ್ವಾ ನರವ್ಯಾಘ್ರ ದ್ಯೋತತೇ ಶಶಿವತ್ಸದಾ।
03080122c ಗೋಸಹಸ್ರಫಲಂ ಚೈವ ಪ್ರಾಪ್ನುಯಾದ್ಭರತರ್ಷಭ।।

ರಾಜೇಂದ್ರ! ದುರ್ಲಭವಾದ ಶಶಾಯಾನ ತೀರ್ಥಕ್ಕೆ ಹೋಗಬೇಕು. ಭಾರತ! ಭರತಶ್ರೇಷ್ಠ! ಮಹಾರಾಜ! ಅಲ್ಲಿ ಕಮಲಗಳು ವರ್ಷಪರ್ಯಂತ ಮೊಲಗಳ ರೂಪದಲ್ಲಿ ಅಡಗಿದ್ದು ಕಾರ್ತೀಕ ಹುಣ್ಣಿಮೆಯಂದು ಸರಸ್ವತಿಯಲ್ಲಿ ಮೀಯುತ್ತವೆ. ನರವ್ಯಾಘ್ರ! ಭರತರ್ಷಭ! ಅಲ್ಲಿ ಮಿಂದವನು ಚಂದ್ರನಂತೆ ಹೊಳೆಯುತ್ತಾನೆ ಮತ್ತು ಸಹಸ್ರ ಗೋವುಗಳನ್ನು ದಾನವನ್ನಿತ್ತ ಫಲವನ್ನು ಪಡೆಯುತ್ತಾನೆ.

03080123a ಕುಮಾರಕೋಟಿಮಾಸಾದ್ಯ ನಿಯತಃ ಕುರುನಂದನ।
03080123c ತತ್ರಾಭಿಷೇಕಂ ಕುರ್ವೀತ ಪಿತೃದೇವಾರ್ಚನೇ ರತಃ।।
03080123e ಗವಾಮಯಮವಾಪ್ನೋತಿ ಕುಲಂ ಚೈವ ಸಮುದ್ಧರೇತ್।।

ಕುರುನಂದನ! ಕುಮಾರಕೋಟಿಯನ್ನು ತಲುಪಿ ನಿಯತನಾಗಿದ್ದು ಅಭೀಷೇಕಮಾಡಿ, ಪಿತೃ-ದೇವತೆಗಳ ಅರ್ಚನೆಯಲ್ಲಿ ತೊಡಗುವವನು ಗವಾಮಯನಾಗುತ್ತಾನೆ ಮತ್ತು ಅವನ ಕುಲವೂ ಉದ್ಧಾರಗೊಳ್ಳುತ್ತದೆ.

03080124a ತತೋ ಗಚ್ಚೇತ ಧರ್ಮಜ್ಞ ರುದ್ರಕೋಟಿಂ ಸಮಾಹಿತಃ।
03080124c ಪುರಾ ಯತ್ರ ಮಹಾರಾಜ ಋಷಿಕೋಟಿಃ ಸಮಾಹಿತಾ।।
03080124e ಪ್ರಹರ್ಷೇಣ ಚ ಸಂವಿಷ್ಟಾ ದೇವದರ್ಶನಕಾಂಕ್ಷಯಾ।।

ಧರ್ಮಜ್ಞ! ಅನಂತರ ಸಮಾಹಿತನಾಗಿ ರುದ್ರಕೋಟಿಗೆ ಹೋಗಬೇಕು. ಮಹಾರಾಜ! ಅಲ್ಲಿ ಹಿಂದೆ ಕೋಟಿ ಋಷಿಗಳು ಸಂತೋಷದಿಂದ ಸಂವಿಷ್ಟರಾಗಿ ದೇವನ ದರ್ಶನವನ್ನು ಬಯಸಿ ಸೇರಿದ್ದರು.

03080125a ಅಹಂ ಪೂರ್ವಮಹಂ ಪೂರ್ವಂ ದ್ರಕ್ಷ್ಯಾಮಿ ವೃಷಭಧ್ವಜಂ।
03080125c ಏವಂ ಸಂಪ್ರಸ್ಥಿತಾ ರಾಜನ್ನೃಷಯಃ ಕಿಲ ಭಾರತ।।

ಭಾರತ! ರಾಜನ್! “ವೃಷಭಧ್ವಜನನ್ನು ನಾನು ಮೊದಲು ನೋಡುತ್ತೇನೆ! ನಾನು ಮೊದಲು ನೋಡುತ್ತೇನೆ!” ಎಂದು ಋಷಿಗಳು ಅಲ್ಲಿ ನೆರೆದಿದ್ದರು ಎಂದು ಹೇಳುತ್ತಾರೆ.

03080126a ತತೋ ಯೋಗೇಷ್ವರೇಣಾಪಿ ಯೋಗಮಾಸ್ಥಾಯ ಭೂಪತೇ।
03080126c ತೇಷಾಂ ಮನ್ಯುಪ್ರಣಾಶಾರ್ಥಮೃಷೀಣಾಂ ಭಾವಿತಾತ್ಮನಾಂ।।
03080127a ಸೃಷ್ಟಾ ಕೋಟಿಸ್ತು ರುದ್ರಾಣಾಮೃಷೀಣಾಮಗ್ರತಃ ಸ್ಥಿತಾ।
03080127c ಮಯಾ ಪೂರ್ವತರಂ ದೃಷ್ಟ ಇತಿ ತೇ ಮೇನಿರೇ ಪೃಥಕ್।।

ಭೂಪತೇ! ಆಗ ಯೋಗೇಶ್ವರನೂ ಕೂಡ ಯೋಗಸ್ಥನಾಗಿ, ಆ ಭಾವಿತಾತ್ಮ ಋಷಿಗಳು ಕೋಪಗೊಳ್ಳಬಾರದೆಂದು ಕೋಟಿ ರುದ್ರರನ್ನು ಸೃಷ್ಟಿಸಿ ಪ್ರತಿಯೊಬ್ಬರೂ ಮುಂದೆ ನಿಂತುಕೊಂಡು ನಾನೇ ಅವನನ್ನು ಎಲ್ಲರಗಿಂತ ಮೊದಲು ನೋಡಿದೆ ಎಂದು ಪ್ರತಿಯೊಬ್ಬರೂ ಹೇಳಿಕೊಳ್ಳುವಂತೆ ಮಾಡಿದನು.

03080128a ತೇಷಾಂ ತುಷ್ಟೋ ಮಹಾದೇವ ಋಷೀಣಾಮುಗ್ರತೇಜಸಾಂ।
03080128c ಭಕ್ತ್ಯಾ ಪರಮಯಾ ರಾಜನ್ವರಂ ತೇಷಾಂ ಪ್ರದಿಷ್ಟವಾನ್।।
03080128e ಅದ್ಯ ಪ್ರಭೃತಿ ಯುಷ್ಮಾಕಂ ಧರ್ಮವೃದ್ಧಿರ್ಭವಿಷ್ಯತಿ।।

ರಾಜನ್! ಅವರ ಪರಮ ಭಕ್ತಿಯಿಂದ ಸಂತುಷ್ಟನಾದ ಮಹಾದೇವನು ಉಗ್ರತೇಜಸ್ವಿ ಋಷಿಗಳಿಗೆ “ಇಂದಿನಿಂದ ನಿಮ್ಮ ಧರ್ಮವು ವೃದ್ಧಿಯಾಗುತ್ತದೆ!” ಎಂದು ವರವನ್ನಿತ್ತನು.

03080129a ತತ್ರ ಸ್ನಾತ್ವಾ ನರವ್ಯಾಘ್ರ ರುದ್ರಕೋಟ್ಯಾಂ ನರಃ ಶುಚಿಃ।
03080129c ಅಶ್ವಮೇಧಮವಾಪ್ನೋತಿ ಕುಲಂ ಚೈವ ಸಮುದ್ಧರೇತ್।।

ನರವ್ಯಾಘ್ರ! ಅಲ್ಲಿ ಸ್ನಾನಮಾಡಿ ಶುಚಿಯಾದ ನರನು ಅಶ್ವಮೇಧದ ಫಲವನ್ನು ಹೊಂದಿ ತನ್ನ ಕುಲವನ್ನು ಉದ್ಧರಿಸುತ್ತಾನೆ.

03080130a ತತೋ ಗಚ್ಚೇತ ರಾಜೇಂದ್ರ ಸಂಗಮಂ ಲೋಕವಿಶ್ರುತಂ।
03080130c ಸರಸ್ವತ್ಯಾ ಮಹಾಪುಣ್ಯಮುಪಾಸಂತೇ ಜನಾರ್ದನಂ।।
03080131a ಯತ್ರ ಬ್ರಹ್ಮಾದಯೋ ದೇವಾ ಋಷಯಃ ಸಿದ್ಧಚಾರಣಾಃ।
03080131c ಅಭಿಗಚ್ಚಂತಿ ರಾಜೇಂದ್ರ ಚೈತ್ರಶುಕ್ಲಚತುರ್ದಶೀಂ।।

ರಾಜೇಂದ್ರ! ಅಲ್ಲಿಂದ, ಎಲ್ಲಿ ಬ್ರಹ್ಮಾದಿ ದೇವತೆಗಳು, ಋಷಿಗಳು ಮತ್ತು ಸಿದ್ಧ-ಚಾರಣರು ಚೈತ್ರ ಶುದ್ಧ ಚತುರ್ದಶಿಯಂದು ಜನಾರ್ದನನನ್ನು ಪೂಜಿಸಲು ಆಗಮಿಸುತ್ತಾರೋ ಆ ಲೋಕವಿಶ್ರುತ ಮಹಾಪುಣ್ಯ ಸರಸ್ವತಿಯ ಸಂಗಮಕ್ಕೆ ಹೋಗಿ ಜನಾರ್ದನನನ್ನು ಪೂಜಿಸಬೇಕು.

03080132a ತತ್ರ ಸ್ನಾತ್ವಾ ನರವ್ಯಾಘ್ರ ವಿಂದೇದ್ಬಹು ಸುವರ್ಣಕಂ।
03080132c ಸರ್ವಪಾಪವಿಶುದ್ಧಾತ್ಮಾ ಬ್ರಹ್ಮಲೋಕಂ ಚ ಗಚ್ಚತಿ।।

ನರವ್ಯಾಘ್ರ! ಅಲ್ಲಿ ಸ್ನಾನಮಾಡಿದವನು ಬಹಳಷ್ಟು ಚಿನ್ನವನ್ನು ಪಡೆಯುವನು ಮತ್ತು ಸರ್ವಪಾಪಗಳನ್ನು ಕಳೆದುಕೊಂಡು ಶುದ್ಧಾತ್ಮನಾಗಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ.

03080133a ಋಷೀಣಾಂ ಯತ್ರ ಸತ್ರಾಣಿ ಸಮಾಪ್ತಾನಿ ನರಾಧಿಪ।
03080133c ಸತ್ರಾವಸಾನಮಾಸಾದ್ಯ ಗೋಸಹಸ್ರಫಲಂ ಲಭೇತ್।।

ನರಾಧಿಪ! ಋಷಿಗಳು ಸತ್ರಗಳನ್ನು ಪೂರೈಸಿದ್ದ ಸತ್ರಾವಸಾನಕ್ಕೆ ಹೋದರೆ ಸಹಸ್ರ ಗೋವುಗಳ ದಾನದ ಫಲವು ದೊರೆಯುತ್ತದೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಪಾರ್ಥನಾರದಸಂವಾದೇ ಅಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಪಾರ್ಥನಾರದಸಂವಾದ ಎನ್ನುವ ಎಂಭತ್ತನೆಯ ಅಧ್ಯಾಯವು.


  1. ಇಲ್ಲಿ ಯುಧಿಷ್ಠಿರ ಎಂಬ ಸಂಭೋಧನೆ ಏಕೆ ಬಂದಿತು ಎಂದು ತಿಳಿಯುವುದಿಲ್ಲ! ಇದು ಪುಲಸ್ತ್ಯ-ಭೀಷ್ಮರ ನಡೆಯುವ ಸಂಭಾಷಣೆಯಲ್ಲವೇ? ↩︎