079 ಅರ್ಜುನಾನುಶೋಚನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 79

ಸಾರ

ಅರ್ಜುನನು ಹೊರಟು ಹೋದ ನಂತರ ಪಾಂಡವರು ಖುಷಿಯಿಲ್ಲದೇ ವಾಸಿಸಿದ್ದುದು (1-10). ಅರ್ಜುನನನ್ನು ನೆನಪಿಸಿಕೊಂಡು ದ್ರೌಪದಿ, ಭೀಮಸೇನ, ನಕುಲ ಮತ್ತು ಸಹದೇವರು ಅವನ ವರ್ಣನೆ ಮಾಡಿದ್ದುದು (11-29).

03079001 ಜನಮೇಜಯ ಉವಾಚ।
03079001a ಭಗವನ್ಕಾಮ್ಯಕಾತ್ಪಾರ್ಥೇ ಗತೇ ಮೇ ಪ್ರಪಿತಾಮಹೇ।
03079001c ಪಾಂಡವಾಃ ಕಿಮಕುರ್ವಂತ ತಮೃತೇ ಸವ್ಯಸಾಚಿನಂ।।

ಜನಮೇಜಯನು ಹೇಳಿದನು: “ಭಗವನ್! ನನ್ನ ಪ್ರಪಿತಾಮಹ ಪಾರ್ಥನು ಹೊರಟು ಹೋದ ನಂತರ ಕಾಮ್ಯಕದಲ್ಲಿ ಪಾಂಡವರು, ಸವ್ಯಸಾಚಿಯಿಲ್ಲದೇ ಏನು ಮಾಡಿದರು?

03079002a ಸ ಹಿ ತೇಷಾಂ ಮಹೇಷ್ವಾಸೋ ಗತಿರಾಸೀದನೀಕಜಿತ್।
03079002c ಆದಿತ್ಯಾನಾಂ ಯಥಾ ವಿಷ್ಣುಸ್ತಥೈವ ಪ್ರತಿಭಾತಿ ಮೇ।।

ಯಾಕೆಂದರೆ ನನ್ನ ಅಭಿಪ್ರಾಯದಲ್ಲಿ ಆ ಮಹೇಷ್ವಾಸ ಅನೀಕಜಿತುವು ಆದಿತ್ಯರಿಗೆ ವಿಷ್ಣುವು ಹೇಗಿದ್ದನೋ ಹಾಗೆಯೇ ಅವರಿಗೆ ಗತಿಯಾಗಿದ್ದನು.

03079003a ತೇನೇಂದ್ರಸಮವೀರ್ಯೇಣ ಸಂಗ್ರಾಮೇಷ್ವನಿವರ್ತಿನಾ।
03079003c ವಿನಾಭೂತಾ ವನೇ ವೀರಾಃ ಕಥಮಾಸನ್ಪಿತಾಮಹಾಃ।।

ವೀರ್ಯದಲ್ಲಿ ಇಂದ್ರನಿಗೆ ಸಮನಾದ ಮತ್ತು ಸಂಗ್ರಾಮದಿಂದ ಎಂದೂ ಓಡಿಹೋಗದೇ ಇದ್ದ ಅವನು ಇಲ್ಲದೇ ನನ್ನ ವೀರ ಪಿತಾಮಹರು ಆ ವನದಲ್ಲಿ ಹೇಗೆ ಇದ್ದರು?”

03079004 ವೈಶಂಪಾಯನ ಉವಾಚ।
03079004a ಗತೇ ತು ಕಾಮ್ಯಕಾತ್ತಾತ ಪಾಂಡವೇ ಸವ್ಯಸಾಚಿನಿ।
03079004c ಬಭೂವುಃ ಕೌರವೇಯಾಸ್ತೇ ದುಃಖಶೋಕಪರಾಯಣಾಃ।।

ವೈಶಂಪಾಯನನು ಹೇಳಿದನು: “ಮಗು! ಆ ಸವ್ಯಸಾಚಿ ಪಾಂಡವನು ಕಾಮ್ಯಕದಿಂದ ಹೊರಟುಹೋದ ನಂತರ ಆ ಕೌರವರು ದುಃಖ ಮತ್ತು ಶೋಕದಲ್ಲಿ ಮುಳುಗಿಹೋದರು.

03079005a ಆಕ್ಷಿಪ್ತಸೂತ್ರಾ ಮಣಯಶ್ಚಿನ್ನಪಕ್ಷಾ ಇವ ದ್ವಿಜಾಃ।
03079005c ಅಪ್ರೀತಮನಸಃ ಸರ್ವೇ ಬಭೂವುರಥ ಪಾಂಡವಾಃ।।

ಆ ಎಲ್ಲ ಪಾಂಡವರೂ ದಾರ ಕಡಿದ ಮಣಿಗಳಂತೆ ಅಥವಾ ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಗಳಂತೆ ಅಪ್ರೀತಮನಸ್ಕರಾಗಿದ್ದರು.

03079006a ವನಂ ಚ ತದಭೂತ್ತೇನ ಹೀನಮಕ್ಲಿಷ್ಟಕರ್ಮಣಾ।
03079006c ಕುಬೇರೇಣ ಯಥಾ ಹೀನಂ ವನಂ ಚೈತ್ರರಥಂ ತಥಾ।।

ಅಕ್ಲಿಷ್ಟಕರ್ಮಣಿಯನ್ನು ಕಳೆದುಕೊಂಡ ಆ ವನವು ಕುಬೇರನನ್ನು ಕಳೆದುಕೊಂಡ ಚೈತ್ರರಥದಂತೆ ಆಗಿತ್ತು.

03079007a ತಮೃತೇ ಪುರುಷವ್ಯಾಘ್ರಂ ಪಾಂಡವಾ ಜನಮೇಜಯ।
03079007c ಮುದಮಪ್ರಾಪ್ನುವಂತೋ ವೈ ಕಾಮ್ಯಕೇ ನ್ಯವಸಂಸ್ತದಾ।।

ಜನಮೇಜಯ! ಆ ಪುರುಷವ್ಯಾಘ್ರನಿಲ್ಲದೇ ಪಾಂಡವರು ಕಾಮ್ಯಕದಲ್ಲಿ ಸಂತೋಷವೇ ಇಲ್ಲದೇ ವಾಸಿಸುತ್ತಿದ್ದರು.

03079008a ಬ್ರಾಹ್ಮಣಾರ್ಥೇ ಪರಾಕ್ರಾಂತಾಃ ಶುದ್ಧೈರ್ಬಾಣೈರ್ಮಹಾರಥಾಃ।
03079008c ನಿಘ್ನಂತೋ ಭರತಶ್ರೇಷ್ಠ ಮೇಧ್ಯಾನ್ಬಹುವಿಧಾನ್ಮೃಗಾನ್।।

ಭರತಶ್ರೇಷ್ಠ! ಆ ಪರಾಕ್ರಾಂತ ಮಹಾರಥರು ಬಾಹ್ಮಣರಿಗೋಸ್ಕರ ಬಹುವಿಧದ ಮೇದ್ಯ ಮೃಗಗಳನ್ನು ಶುದ್ಧ ಬಾಣಗಳಿಂದ ಸಂಹರಿಸಿಸುತ್ತಿದ್ದರು1.

03079009a ನಿತ್ಯಂ ಹಿ ಪುರುಷವ್ಯಾಘ್ರಾ ವನ್ಯಾಹಾರಮರಿಂದಮಾಃ।
03079009c ವಿಪ್ರಸೃತ್ಯ ಸಮಾಹೃತ್ಯ ಬ್ರಾಹ್ಮಣೇಭ್ಯೋ ನ್ಯವೇದಯನ್।।

ನಿತ್ಯವೂ ಆ ಪುರುಷವ್ಯಾಘ್ರ ಅರಿಂದಮರು ವನದಲ್ಲಿ ದೂರ ದೂರ ಹೋಗಿ ಆಹಾರಗಳನ್ನು ತಂದು ಬ್ರಾಹ್ಮಣರಿಗೆ ನಿವೇದಿಸುತ್ತಿದ್ದರು.

03079010a ಏವಂ ತೇ ನ್ಯವಸಂಸ್ತತ್ರ ಸೋತ್ಕಂಠಾಃ ಪುರುಷರ್ಷಭಾಃ।
03079010c ಅಹೃಷ್ಟಮನಸಃ ಸರ್ವೇ ಗತೇ ರಾಜನ್ಧನಂಜಯೇ।।

ರಾಜನ್! ಹೀಗೆ ಧನಂಜಯನು ಹೊರಟು ಹೋದ ನಂತರ ಆ ಪುರುಷರ್ಷಭರು ಖುಷಿಯೇ ಇಲ್ಲದೇ ಅಹೃಷ್ಠಮನಸ್ಕರಾಗಿ ಅಲ್ಲಿ ವಾಸಿಸುತ್ತಿದ್ದರು.

03079011a ಅಥ ವಿಪ್ರೋಷಿತಂ ವೀರಂ ಪಾಂಚಾಲೀ ಮಧ್ಯಮಂ ಪತಿಂ।
03079011c ಸ್ಮರಂತೀ ಪಾಂಡವಶ್ರೇಷ್ಠಮಿದಂ ವಚನಮಬ್ರವೀತ್।।

ಆಗ ಪಾಂಚಾಲಿಯು ಜೊತೆಯಲ್ಲಿ ಇಲ್ಲದ ತನ್ನ ಮಧ್ಯಮ ಪತಿ ವೀರನನ್ನು ಸ್ಮರಿಸುತ್ತಾ ಪಾಂಡವಶ್ರೇಷ್ಠನಿಗೆ (ಹಿರಿಯ ಪಾಂಡವನಿಗೆ) ಈ ಮಾತುಗಳನ್ನು ಹೇಳಿದಳು:

03079012a ಯೋಽರ್ಜುನೇನಾರ್ಜುನಸ್ತುಲ್ಯೋ ದ್ವಿಬಾಹುರ್ಬಹುಬಾಹುನಾ।
03079012c ತಮೃತೇ ಪಾಂಡವಶ್ರೇಷ್ಠಂ ವನಂ ನ ಪ್ರತಿಭಾತಿ ಮೇ।

“ಪಾಂಡವಶ್ರೇಷ್ಠ! ಬಹುರ್ಬಾಹು ಅರ್ಜುನನ2 ಸರಿಸಮನಾದ ಆ ದ್ವಿಬಾಹು ಅರ್ಜುನನಿಲ್ಲದೇ ಈ ವನವು ನನಗೆ ಹಿಡಿಸುತ್ತಿಲ್ಲ.

03079012e ಶೂನ್ಯಾಮಿವ ಚ ಪಶ್ಯಾಮಿ ತತ್ರ ತತ್ರ ಮಹೀಮಿಮಾಂ।।
03079013a ಬಹ್ವಾವಾಶ್ಚರ್ಯಮಿದಂ ಚಾಪಿ ವನಂ ಕುಸುಮಿತದ್ರುಮಂ।
03079013c ನ ತಥಾ ರಮಣೀಯಂ ಮೇ ತಮೃತೇ ಸವ್ಯಸಾಚಿನಂ।।

ಈ ಮಹಿಯು ಎಲ್ಲೆಡೆಯಲ್ಲಿಯೂ ಶೂನವಾಗಿ ಕಾಣುತ್ತಿದೆ. ಕುಸುಮ ದ್ರುಮಗಳಿಂದ ಕೂಡಿದ ಬಹು ಆಶ್ಚರ್ಯದಾಯಕ ಈ ವನವೂ ಕೂಡ ಸವ್ಯಸಾಚಿಯು ಇಲ್ಲದಿದರಿಂದ ರಮಣೀಯವಾಗಿ ತೋರುತ್ತಿಲ್ಲ.

03079014a ನೀಲಾಂಬುದಸಮಪ್ರಖ್ಯಂ ಮತ್ತಮಾತಂಗವಿಕ್ರಮಂ।
03079014c ತಮೃತೇ ಪುಂಡರೀಕಾಕ್ಷಂ ಕಾಮ್ಯಕಂ ನಾತಿಭಾತಿ ಮೇ।।

ಮಳೆಯ ಮೋಡಗಳಂತೆ ಕತ್ತಲೆಯಿಂದೊಡಗೂಡಿದ, ಮತ್ತಮಾತಂಗಗಳಿಂದೊಡಗೂಡಿದ ಈ ಕಾಮ್ಯಕವು ಆ ಪುಂಡರೀಕಾಕ್ಷನಿಲ್ಲದೇ ಸಂತಸವನ್ನು ಕೊಡುತ್ತಿಲ್ಲ.

03079015a ಯಸ್ಯ ಸ್ಮ ಧನುಷೋ ಘೋಷಃ ಶ್ರೂಯತೇಽಶನಿನಿಸ್ವನಃ।
03079015c ನ ಲಭೇ ಶರ್ಮ ತಂ ರಾಜನ್ಸ್ಮರಂತೀ ಸವ್ಯಸಾಚಿನಂ।।

ರಾಜನ್! ಯಾರ ಧನುರ್ಘೋಷವು ಸಿಡಿಲಿನಂತೆ ಕೇಳಿಬರುತ್ತಿತ್ತೋ ಆ ಸವ್ಯಸಾಚಿಯನ್ನು ಸ್ಮರಿಸುತ್ತಿರುವ ನನಗೆ ಆಸರೆಯೇ ಇಲ್ಲದಂತಾಗಿದೆ.”

03079016a ತಥಾ ಲಾಲಪ್ಯಮಾನಾಂ ತಾಂ ನಿಶಮ್ಯ ಪರವೀರಹಾ।
03079016c ಭೀಮಸೇನೋ ಮಹಾರಾಜ ದ್ರೌಪದೀಮಿದಮಬ್ರವೀತ್।।

ಮಹಾರಾಜ! ಈ ರೀತಿ ಲಲಾಪಿಸುತ್ತಿರುವ ದ್ರೌಪದಿಯನ್ನು ಕುರಿತು ಶತ್ರುವೀರರ ಸಂಹಾರಿ ಭೀಮಸೇನನು ಹೇಳಿದನು:

03079017a ಮನಃಪ್ರೀತಿಕರಂ ಭದ್ರೇ ಯದ್ಬ್ರವೀಷಿ ಸುಮಧ್ಯಮೇ।
03079017c ತನ್ಮೇ ಪ್ರೀಣಾತಿ ಹೃದಯಮಮೃತಪ್ರಾಶನೋಪಮಂ।।

“ಸುಮದ್ಯಮೇ! ಭದ್ರೇ! ನೀನು ಏನನ್ನು ಹೇಳುತ್ತಿದ್ದೇಯೋ ಅದು ನನ್ನ ಮನಸ್ಸನ್ನು ಸಂತಸಗೊಳಿಸುತ್ತಿದೆ ಮತ್ತು ನನ್ನ ಹೃದಯಕ್ಕೆ ಅಮೃತದ ರುಚಿಯನ್ನು ಇತ್ತಹಾಗೆ ಆಗಿದೆ.

03079018a ಯಸ್ಯ ದೀರ್ಘೌ ಸಮೌ ಪೀನೌ ಭುಜೌ ಪರಿಘಸಮ್ನಿಭೌ।
03079018c ಮೌರ್ವೀಕೃತಕಿಣೌ ವೃತ್ತೌ ಖಡ್ಗಾಯುಧಗದಾಧರೌ।।
03079019a ನಿಷ್ಕಾಂಗದಕೃತಾಪೀಡೌ ಪಂಚಶೀರ್ಷಾವಿವೋರಗೌ।
03079019c ತಮೃತೇ ಪುರುಷವ್ಯಾಘ್ರಂ ನಷ್ಟಸೂರ್ಯಮಿದಂ ವನಂ।।

ಅವನ ಎರಡೂ ಭುಜಗಳು ಉದ್ದವಾಗಿದ್ದವು, ನುಣುಪಾಗಿದ್ದವು ಮತ್ತು ಪರಿಘದಂತೆ ದಷ್ಠಪುಷ್ಠವಾಗಿದ್ದವು, ಬಿಲ್ಲು, ಖಡ್ಗ, ಮತ್ತು ಗದಾಯುಧಗಳನ್ನು ಹಿಡಿದ ಗುರುತುಗಳಿದ್ದವು, ಹಾಗೂ ಮೇಲ್ತೋಳಿನ ಬಿಗಿಯಾದ ಬಳೆಗಳಿಂದ ಕೂಡಿದವುಗಳಾಗಿ ಐದು ತಲೆಯ ನಾಗನಂತೆ ತೋರುತ್ತಿದ್ದವು. ಅಂತಹ ಪುರುಷವ್ಯಾಘ್ರನಿಲ್ಲದೇ ಈ ವನವು ತನ್ನ ಸೂರ್ಯನನ್ನು ಕಳೆದುಕೊಂಡಂತಿದೆ.

03079020a ಯಮಾಶ್ರಿತ್ಯ ಮಹಾಬಾಹುಂ ಪಾಂಚಾಲಾಃ ಕುರವಸ್ತಥಾ।
03079020c ಸುರಾಣಾಮಪಿ ಯತ್ತಾನಾಂ ಪೃತನಾಸು ನ ಬಿಭ್ಯತಿ।।

ಪಾಂಚಾಲರು ಮತ್ತು ಕುರುಗಳು ಆ ಮಹಾಬಾಹುವಿನ ಆಶ್ರಯದಲ್ಲಿಯೇ ಇದ್ದಾರೆ ಮತ್ತು ಅವನ ಎದಿರು ಸುರರನ್ನು ತಂದು ಕೂಡಿಸಿದರೂ ಹಿಂಜರಿಯುವವನಲ್ಲ.

03079021a ಯಸ್ಯ ಬಾಹೂ ಸಮಾಶ್ರಿತ್ಯ ವಯಂ ಸರ್ವೇ ಮಹಾತ್ಮನಃ।
03079021c ಮನ್ಯಾಮಹೇ ಜಿತಾನಾಜೌ ಪರಾನ್ಪ್ರಾಪ್ತಾಂ ಚ ಮೇದಿನೀಂ।।

ನಾವೆಲ್ಲರೂ ಆ ಮಹಾತ್ಮನ ಬಾಹುಗಳಲ್ಲಿ ಆಶ್ರಯವನ್ನು ಪಡೆದಿದ್ದೆವು ಮತ್ತು ಶತ್ರುಗಳನ್ನು ಯದ್ಧದಲ್ಲಿ ಗೆದ್ದು ಮೇದಿನಿಯನ್ನು ಪಡೆಯುವ ಯೋಚನೆಯಲ್ಲಿದ್ದೆವು.

03079022a ತಮೃತೇ ಫಲ್ಗುನಂ ವೀರಂ ನ ಲಭೇ ಕಾಮ್ಯಕೇ ಧೃತಿಂ।
03079022c ಶೂನ್ಯಾಮಿವ ಚ ಪಶ್ಯಾಮಿ ತತ್ರ ತತ್ರ ಮಹೀಮಿಮಾಂ।।

ವೀರ ಫಾಲ್ಗುನನಿಲ್ಲದೇ ಕಾಮ್ಯಕದಲ್ಲಿ ಮನಸ್ಸಿಲ್ಲ ಮತ್ತು ಈ ಮಹಿಯ ಎಲ್ಲೆಡೆ ನೋಡಿದರೂ ಖಾಲಿ ಖಾಲಿ ಕಾಣಿಸುತ್ತಿದೆ.”

03079023 ನಕುಲ ಉವಾಚ।
03079023a ಯ ಉದೀಚೀಂ ದಿಶಂ ಗತ್ವಾ ಜಿತ್ವಾ ಯುಧಿ ಮಹಾಬಲಾನ್।
03079023c ಗಂಧರ್ವಮುಖ್ಯಾಂ ಶತಶೋ ಹಯಾಽಲ್ಲೇಭೇ ಸ ವಾಸವಿಃ।।
03079024a ರಾಜಂಸ್ತಿತ್ತಿರಿಕಲ್ಮಾಷಾಂ ಶ್ರೀಮಾನನಿಲರಂಹಸಃ।
03079024c ಪ್ರಾದಾದ್ಭ್ರಾತ್ರೇ ಪ್ರಿಯಃ ಪ್ರೇಮ್ಣಾ ರಾಜಸೂಯೇ ಮಹಾಕ್ರತೌ।।

ನಕುಲನು ಹೇಳಿದನು: “ರಾಜನ್! ಆ ಶ್ರೀಮಾನ್ ವಾಸವಿಯು ಉತ್ತರದಿಶೆಯಲ್ಲಿ ಹೋಗಿ ಮಹಾಬಲರನ್ನು ಯುದ್ಧದಲ್ಲಿ ಗೆದ್ದು ಅಕಲ್ಮಶ ತಿತ್ತಿರಿ ಬಣ್ಣದ, ವಾಯುವಿನಷ್ಟೇ ವೇಗಗಳುಳ್ಳ ನೂರಾರು ಗಂಧರ್ವ ಹಯಗಳನ್ನು ಪಡೆದು ರಾಜಸೂಯ ಮಹಾಕ್ರತುವಿನಲ್ಲಿ ತನ್ನ ಪ್ರಿಯ ಅಣ್ಣನಿಗೆ ಪ್ರೇಮದಿಂದ ಒಪ್ಪಿಸಿದನು.

03079025a ತಮೃತೇ ಭೀಮಧನ್ವಾನಂ ಭೀಮಾದವರಜಂ ವನೇ।
03079025c ಕಾಮಯೇ ಕಾಮ್ಯಕೇ ವಾಸಂ ನೇದಾನೀಮಮರೋಪಮಂ।।

ಭೀಮಧನುಸ್ಸನ್ನು ಹಿಡಿದ, ಅಮರರ ಸಮಾನ, ಭೀಮಸೇನನ ಅನುಜನಿಲ್ಲದೇ ಈ ಕಾಮ್ಯಕದಲ್ಲಿ ವಾಸಿಸಲು ಇಷ್ಟವಾಗುತ್ತಿಲ್ಲ.”

03079026 ಸಹದೇವ ಉವಾಚ।
03079026a ಯೋ ಧನಾನಿ ಚ ಕನ್ಯಾಶ್ಚ ಯುಧಿ ಜಿತ್ವಾ ಮಹಾರಥಾನ್।
03079026c ಆಜಹಾರ ಪುರಾ ರಾಜ್ಞೇ ರಾಜಸೂಯೇ ಮಹಾಕ್ರತೌ।।

ಸಹದೇವನು ಹೇಳಿದನು: “ಹಿಂದೆ ಅವನು ಯುದ್ಧದಲ್ಲಿ ಮಹಾರಥಿಗಳನ್ನು ಗೆದ್ದು ಧನ-ಕನ್ಯೆಯರನ್ನು ತಂದು ಮಹಾಕ್ರತು ರಾಜಸೂಯದಲ್ಲಿ ರಾಜನಿಗೆ ಸಮರ್ಪಿಸಿದನು.

03079027a ಯಃ ಸಮೇತಾನ್ಮೃಧೇ ಜಿತ್ವಾ ಯಾದವಾನಮಿತದ್ಯುತಿಃ।
03079027c ಸುಭದ್ರಾಮಾಜಹಾರೈಕೋ ವಾಸುದೇವಸ್ಯ ಸಮ್ಮತೇ।।

ಆ ಅಮಿತದ್ಯುತಿಯು ವಾಸುದೇವನ ಸಮ್ಮತಿಯಂತೆ ಸೇರಿರುವ ಯಾದವರನ್ನೆಲ್ಲಾ ಒಬ್ಬನೇ ಯುದ್ಧದಲ್ಲಿ ಗೆದ್ದು ಸುಭದ್ರೆಯನ್ನು ಅಪಹರಿಸಿಕೊಂಡು ಬಂದ.

03079028a ತಸ್ಯ ಜಿಷ್ಣೋರ್ಬೃಸೀಂ ದೃಷ್ಟ್ವಾ ಶೂನ್ಯಾಮುಪನಿವೇಶನೇ।
03079028c ಹೃದಯಂ ಮೇ ಮಹಾರಾಜ ನ ಶಾಮ್ಯತಿ ಕದಾ ಚನ।।

ಮಹಾರಾಜ! ನಮ್ಮ ಈ ನಿವೇಶನದಲ್ಲಿ ಆ ಜಿಷ್ಣುವಿನ ಬರಿದಾದ ಹಾಸಿಗೆಯನ್ನು ನೋಡಿ ನನ್ನ ಹೃದಯಕ್ಕೆ ಶಾಂತಿಯೇ ಇಲ್ಲವಾಗಿದೆ.

03079029a ವನಾದಸ್ಮಾದ್ವಿವಾಸಂ ತು ರೋಚಯೇಽಹಮರಿಂದಮ।
03079029c ನ ಹಿ ನಸ್ತಮೃತೇ ವೀರಂ ರಮಣೀಯಮಿದಂ ವನಂ।।

ಅರಿಂದಮ! ಈ ವನದಲ್ಲಿ ಇನ್ನು ವಾಸಿಸಬಾರದು ಎಂದು ನನ್ನ ಯೋಚನೆ. ಯಾಕೆಂದರೆ ಆ ವೀರನಿಲ್ಲದೆ ಈ ವನವು ನಮಗೆಲ್ಲರಿಗೂ ರಮಣೀಯವೆನಿಸುತ್ತಿಲ್ಲ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಗಮನಪರ್ವಣಿ ಅರ್ಜುನಾನುಶೋಚನೇ ಏಕೋನಶೀತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಗಮನಪರ್ವದಲ್ಲಿ ಅರ್ಜುನನ ಕುರಿತು ಶೋಕ ಎನ್ನುವ ಎಪ್ಪತ್ತೊಂಭತ್ತನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಗಮನಪರ್ವಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಗಮನಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-32/100, ಅಧ್ಯಾಯಗಳು-376/1995, ಶ್ಲೋಕಗಳು-12308/73784.


  1. ಬ್ರಾಹ್ಮಣರಿಗೆ ಮೃಗಗಳನ್ನು ಬೇಟೆಯಾಡಿ ತರುತ್ತಿದ್ದರೇ? ↩︎

  2. ಸಹಸ್ರಬಾಹುಗಳನ್ನು ಹೊಂದಿದ್ದ ಕಾರ್ತಿವೀರ್ಯಾರ್ಜುನ ↩︎