078 ನಲೋಪಾಖ್ಯಾನೇ ಬೃಹದಶ್ವಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 78

ಸಾರ

ನಲ-ದಮಯಂತಿಯರ ಸುಖದಿನಗಳು (1-7). ನಲಚರಿತೆಯ ಫಲಶ್ರುತಿ (8-13). ಅಕ್ಷಹೃದಯ ವಿದ್ಯೆಯನ್ನು ಯುಧಿಷ್ಠಿರನಿಗಿತ್ತು ಬೃಹದಶ್ವನು ನಿರ್ಗಮಿಸಿದುದು (14-23).

03078001 ಬೃಹದಶ್ವ ಉವಾಚ।
03078001a ಪ್ರಶಾಂತೇ ತು ಪುರೇ ಹೃಷ್ಟೇ ಸಂಪ್ರವೃತ್ತೇ ಮಹೋತ್ಸವೇ।
03078001c ಮಹತ್ಯಾ ಸೇನಯಾ ರಾಜಾ ದಮಯಂತೀಮುಪಾನಯತ್।।

ಬೃಹದಶ್ವನು ಹೇಳಿದನು: “ಹೃಷ್ಟ ಪುರಜನರು ಪ್ರಶಾಂತರಾದಂತೆ ಮಹಾ ಉತ್ಸವವು ಪ್ರಾರಂಭವಾಗಿತ್ತು. ರಾಜನು ಮಹತ್ತರ ಸೇನೆಯೊಂದಿಗೆ ದಮಯಂತಿಯನ್ನು ಕರೆತಂದನು.

03078002a ದಮಯಂತೀಮಪಿ ಪಿತಾ ಸತ್ಕೃತ್ಯ ಪರವೀರಹಾ।
03078002c ಪ್ರಸ್ಥಾಪಯದಮೇಯಾತ್ಮಾ ಭೀಮೋ ಭೀಮಪರಾಕ್ರಮಃ।।

ದಮಯಂತಿಯನ್ನು ತಂದೆ ಪರಮ ವೀರ ಅದಮೇಯಾತ್ಮ ಭೀಮಪರಾಕ್ರಮಿ ಭೀಮನು ಸತ್ಕರಿಸಿ ಕಳುಹಿಸಿಕೊಟ್ಟನು.

03078003a ಆಗತಾಯಾಂ ತು ವೈದರ್ಭ್ಯಾಂ ಸಪುತ್ರಾಯಾಂ ನಲೋ ನೃಪಃ।
03078003c ವರ್ತಯಾಮಾಸ ಮುದಿತೋ ದೇವರಾಡಿವ ನಂದನೇ।।

ಪುತ್ರರೊಡನೆ ಆಗಮಿಸಿದ ವೈದರ್ಭಿಯೊಡನೆ ನೃಪ ನಲನು ನಂದನವನದಲ್ಲಿ ದೇವತೆಗಳಂತೆ ಸಂತೋಷದಿಂದ ಇದ್ದನು.

03078004a ತಥಾ ಪ್ರಕಾಶತಾಂ ಯಾತೋ ಜಂಬೂದ್ವೀಪೇಽಥ ರಾಜಸು।
03078004c ಪುನಃ ಸ್ವೇ ಚಾವಸದ್ರಾಜ್ಯೇ ಪ್ರತ್ಯಾಹೃತ್ಯ ಮಹಾಯಶಾಃ।।

ಜಂಬೂದ್ವೀಪದಲ್ಲಿರುವ ರಾಜರುಗಳಲ್ಲೇ ಪ್ರಕಾಶಿಸುತ್ತಾ ಆ ಮಹಾಯಶನು ಮರಳಿ ಗಳಿಸಿದ ರಾಜ್ಯದಲ್ಲಿ ಪುನಃ ವಾಸಿಸಿದನು.

03078005a ಈಜೇ ಚ ವಿವಿಧೈರ್ಯಜ್ಞೈರ್ವಿಧಿವತ್ಸ್ವಾಪ್ತದಕ್ಷಿಣೈಃ।
03078005c ತಥಾ ತ್ವಮಪಿ ರಾಜೇಂದ್ರ ಸಸುಹೃದ್ವಕ್ಷ್ಯಸೇಽಚಿರಾತ್।।

ಅವನು ಸಾಕಷ್ಟು ದಕ್ಷಿಣೆಗಳಿಂದ ವಿವಿಧ ಯಜ್ಞಗಳನ್ನು ವಿಧಿವತ್ತಾಗಿ ನೆರವೇರಿಸಿದನು. ರಾಜೇಂದ್ರ! ನೀನೂ ಕೂಡ ಸುಹೃದಯರೊಡಗೂಡಿ ಶೀಘ್ರದಲ್ಲಿಯೇ ಇದರಿಂದ ಹೊರಬರುತ್ತೀಯೆ.

03078006a ದುಃಖಮೇತಾದೃಶಂ ಪ್ರಾಪ್ತೋ ನಲಃ ಪರಪುರಂಜಯಃ।
03078006c ದೇವನೇನ ನರಶ್ರೇಷ್ಠ ಸಭಾರ್ಯೋ ಭರತರ್ಷಭ।।

ನರಶ್ರೇಷ್ಠ! ಭರತರ್ಷಭ! ಪರಪುರಂಜಯ ನಲನು ಈ ರೀತಿ ದ್ಯೂತದಿಂದ ಪತ್ನಿಯೊಡನೆ ದುಃಖಗಳನ್ನು ಅನುಭವಿಸಿದನು.

03078007a ಏಕಾಕಿನೈವ ಸುಮಹನ್ನಲೇನ ಪೃಥಿವೀಪತೇ।
03078007c ದುಃಖಮಾಸಾದಿತಂ ಘೋರಂ ಪ್ರಾಪ್ತಶ್ಚಾಭ್ಯುದಯಃ ಪುನಃ।।

ಪೃಥವೀಪತೇ! ಏಕಾಕಿಯಾಗಿದ್ದರೂ ನಲನು ಘೋರ ದುಃಖವನ್ನು ಅನುಭವಿಸಿ ಪುನಃ ಅಭ್ಯುದಯವನ್ನು ಹೊಂದಿದನು.

03078008a ತ್ವಂ ಪುನರ್ಭ್ರಾತೃಸಹಿತಃ ಕೃಷ್ಣಯಾ ಚೈವ ಪಾಂಡವ।
03078008c ರಮಸೇಽಸ್ಮಿನ್ಮಹಾರಣ್ಯೇ ಧರ್ಮಮೇವಾನುಚಿಂತಯನ್।।

ಪಾಂಡವ! ನೀನಾದರೂ ಬ್ರಾತೃ ಮತ್ತು ಕೃಷ್ಣೆಯ ಸಹಿತ ಇದ್ದೀಯೆ. ಈ ಮಹಾರಣ್ಯದಲ್ಲಿ ಧರ್ಮದ ಕುರಿತು ಮಾತ್ರ ಚಿಂತಿಸುತ್ತಾ ಆನಂದವಾಗಿರು.

03078009a ಬ್ರಾಹ್ಮಣೈಶ್ಚ ಮಹಾಭಾಗೈರ್ವೇದವೇದಾಂಗಪಾರಗೈಃ।
03078009c ನಿತ್ಯಮನ್ವಾಸ್ಯಸೇ ರಾಜಂಸ್ತತ್ರ ಕಾ ಪರಿದೇವನಾ।।

ವೇದ-ವೇದಾಂಗ ಪಾರಗರಾದ ಈ ಮಹಾಭಾಗ ಬ್ರಾಹ್ಮಣರೊಡನೆ ನಿತ್ಯವೂ ವಾಸಿಸುತ್ತಿರುವ ರಾಜನಿಗೆ ಪರಿವೇದನೆ ಏನು?

03078010a ಇತಿಹಾಸಮಿಮಂ ಚಾಪಿ ಕಲಿನಾಶನಮುಚ್ಯತೇ।
03078010c ಶಕ್ಯಮಾಶ್ವಾಸಿತುಂ ಶ್ರುತ್ವಾ ತ್ವದ್ವಿಧೇನ ವಿಶಾಂ ಪತೇ।।

ಈ ಇತಿಹಾಸವು ಕಲಿಯನ್ನು ನಾಶಮಾಡುತ್ತದೆ ಎನ್ನುತ್ತಾರೆ. ವಿಶಾಂಪತೇ! ಇದನ್ನು ಕೇಳಿದ ನಿನ್ನಂಥವರಿಗೆ ಅಶ್ವಾಸನೆಯನ್ನು ನೀಡಲೂ ಶಕ್ಯವಿದೆ.

03078011a ಅಸ್ಥಿರತ್ವಂ ಚ ಸಂಚಿಂತ್ಯ ಪುರುಷಾರ್ಥಸ್ಯ ನಿತ್ಯದಾ।
03078011c ತಸ್ಯಾಯೇ ಚ ವ್ಯಯೇ ಚೈವ ಸಮಾಶ್ವಸಿಹಿ ಮಾ ಶುಚಃ।।

ಮನುಷ್ಯನ ಭಾಗ್ಯದ ಅಸ್ಥಿರತೆಯನ್ನು ನಿತ್ಯವೂ ಸ್ಮರಿಸುತ್ತಾ ಅದರ ಆಗು-ಹೋಗುಗಳನ್ನು ಸಮನಾಗಿ ಕಾಣು. ದುಃಖಿಸಬೇಡ.

03078012a ಯೇ ಚೇದಂ ಕಥಯಿಷ್ಯಂತಿ ನಲಸ್ಯ ಚರಿತಂ ಮಹತ್।
03078012c ಶ್ರೋಷ್ಯಂತಿ ಚಾಪ್ಯಭೀಕ್ಷ್ಣಂ ವೈ ನಾಲಕ್ಷ್ಮೀಸ್ತಾನ್ಭಜಿಷ್ಯತಿ।

ನಲನ ಈ ಮಹತ್ ಚರಿತೆಯನ್ನು ಯಾರು ಕಥನ ಮತ್ತು ಸದಾ ಶ್ರವಣ ಮಾಡುತ್ತಾನೋ ಅವನಿಗೆ ಅಲಕ್ಷ್ಮಿಯಾಗುವುದಿಲ್ಲ.

03078012e ಅರ್ಥಾಸ್ತಸ್ಯೋಪಪತ್ಸ್ಯಂತೇ ಧನ್ಯತಾಂ ಚ ಗಮಿಷ್ಯತಿ।।
03078013a ಇತಿಹಾಸಮಿಮಂ ಶ್ರುತ್ವಾ ಪುರಾಣಂ ಶಶ್ವದುತ್ತಮಂ।
03078013c ಪುತ್ರಾನ್ಪೌತ್ರಾನ್ಪಶೂಂಶ್ಚೈವ ವೇತ್ಸ್ಯತೇ ನೃಷು ಚಾಗ್ರ್ಯತಾಂ।
03078013e ಅರೋಗಃ ಪ್ರೀತಿಮಾಂಶ್ಚೈವ ಭವಿಷ್ಯತಿ ನ ಸಂಶಯಃ।।

ಸಂಪತ್ತು ಅವನ ಬಳಿಗೆ ಹರಿದು ಬರುತ್ತದೆ ಮತ್ತು ಅವನು ಧನವಂತನಾಗುತ್ತಾನೆ. ಪುರಾತನ ಈ ಉತ್ತಮ ಇತಿಹಾಸವನ್ನು ಕೇಳಿದರೆ, ಪುತ್ರರು, ಪೌತ್ರರು, ಪಶುಗಳು ಮತ್ತು ನರರಲ್ಲಿ ಅಗ್ರಸ್ಥಾನವನ್ನು ಹೊಂದುತ್ತಾರೆ ಮತ್ತು ಆರೋಗ್ಯ-ಪ್ರೀತಿಗಳನ್ನು ಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

03078014a ಭಯಂ ಪಶ್ಯಸಿ ಯಚ್ಚ ತ್ವಮಾಹ್ವಯಿಷ್ಯತಿ ಮಾಂ ಪುನಃ।
03078014c ಅಕ್ಷಜ್ಞ ಇತಿ ತತ್ತೇಽಹಂ ನಾಶಯಿಷ್ಯಾಮಿ ಪಾರ್ಥಿವ।।

ಪಾರ್ಥಿವ! ಅಕ್ಷಜ್ಞನಿಂದ ಪುನಃ ನೀನು ಪರಾಜಯಗೊಳ್ಳುವೆ ಎನ್ನುವ ನಿನ್ನ ಈ ಭಯವನ್ನು ನಾನು ನಿವಾರಿಸುತ್ತೇನೆ.

03078015a ವೇದಾಕ್ಷಹೃದಯಂ ಕೃತ್ಸ್ನಮಹಂ ಸತ್ಯಪರಾಕ್ರಮ।
03078015c ಉಪಪದ್ಯಸ್ವ ಕೌಂತೇಯ ಪ್ರಸನ್ನೋಽಹಂ ಬ್ರವೀಮಿ ತೇ।।

ಸತ್ಯಪರಾಕ್ರಮಿ! ನಾನು ಅಕ್ಷಹೃದಯವನ್ನು ಪರಿಪೂರ್ಣವಾಗಿ ತಿಳಿದಿದ್ದೇನೆ. ನನ್ನಿಂದ ತಿಳಿದುಕೊ. ನಿನಗೆ ಹೇಳಲು ನನಗೆ ಸಂತೋಷವಾಗುತ್ತದೆ.””

03078016 ವೈಶಂಪಾಯನ ಉವಾಚ।
03078016a ತತೋ ಹೃಷ್ಟಮನಾ ರಾಜಾ ಬೃಹದಶ್ವಮುವಾಚ ಹ।
03078016c ಭಗವನ್ನಕ್ಷಹೃದಯಂ ಜ್ಞಾತುಮಿಚ್ಚಾಮಿ ತತ್ತ್ವತಃ।।

ವೈಶಂಪಾಯನನು ಹೇಳಿದನು: “ನಂತರ ಹೃಷ್ಟಮನಸ್ಕ ರಾಜನು ಬೃಹದಶ್ವನಿಗೆ ಹೇಳಿದನು: “ಭಗವನ್! ನಿನ್ನಿಂದ ಅಕ್ಷಹೃದಯವನ್ನು ತಿಳಿಯಲು ಇಚ್ಛಿಸುತ್ತೇನೆ.”

03078017a ತತೋಽಕ್ಷಹೃದಯಂ ಪ್ರಾದಾತ್ಪಾಂಡವಾಯ ಮಹಾತ್ಮನೇ।
03078017c ದತ್ತ್ವಾ ಚಾಶ್ವಶಿರೋಽಗಚ್ಚದುಪಸ್ಪ್ರಷ್ಟುಂ ಮಹಾತಪಾಃ।।

ನಂತರ ಬೃಹದಶ್ವನು ಮಹಾತ್ಮ ಪಾಂಡವನಿಗೆ ಅಕ್ಷಹೃದಯವನ್ನು ಕೊಟ್ಟನು. ಹೀಗೆ ಕೊಟ್ಟು ಆ ಮಹಾತಪನು ಸ್ನಾನಕ್ಕೆಂದು ಅಶ್ವಶಿರಕ್ಕೆ ತೆರಳಿದನು.

03078018a ಬೃಹದಶ್ವೇ ಗತೇ ಪಾರ್ಥಮಶ್ರೌಷೀತ್ಸವ್ಯಸಾಚಿನಂ।
03078018c ವರ್ತಮಾನಂ ತಪಸ್ಯುಗ್ರೇ ವಾಯುಭಕ್ಷಂ ಮನೀಷಿಣಂ।।
03078019a ಬ್ರಾಹ್ಮಣೇಭ್ಯಸ್ತಪಸ್ವಿಭ್ಯಃ ಸಂಪತದ್ಭ್ಯಸ್ತತಸ್ತತಃ।
03078019c ತೀರ್ಥಶೈಲವರೇಭ್ಯಶ್ಚ ಸಮೇತೇಭ್ಯೋ ದೃಢವ್ರತಃ।।
03078020a ಇತಿ ಪಾರ್ಥೋ ಮಹಾಬಾಹುರ್ದುರಾಪಂ ತಪ ಆಸ್ಥಿತಃ।
03078020c ನ ತಥಾ ದೃಷ್ಟಪೂರ್ವೋಽನ್ಯಃ ಕಶ್ಚಿದುಗ್ರತಪಾ ಇತಿ।।
03078021a ಯಥಾ ಧನಂಜಯಃ ಪಾರ್ಥಸ್ತಪಸ್ವೀ ನಿಯತವ್ರತಃ।
03078021c ಮುನಿರೇಕಚರಃ ಶ್ರೀಮಾನ್ಧರ್ಮೋ ವಿಗ್ರಹವಾನಿವ।।

ಬೃದದಶ್ವನು ಹೋದ ನಂತರ ದೃಢವೃತ ಪಾರ್ಥನು ಅಲ್ಲಲ್ಲಿ ತೀರ್ಥ-ಶೈಲಗಳಿಂದ ಬಂದು ಸೇರಿದ್ದ ತಪಸ್ವಿ ಬ್ರಾಹ್ಮಣರಿಂದ ಸವ್ಯಸಾಚಿಯು ವರ್ತಮಾನದಲ್ಲಿ ಕೇವಲ ವಾಯುವನ್ನು ಸೇವಿಸುತ್ತಾ ಉಗ್ರ ತಪಸ್ಸಿನಲ್ಲಿ ನಿರತನಾಗಿದ್ದಾನೆ; ಮಹಾಬಾಹು ಪಾರ್ಥನು ಪೂರ್ವದಲ್ಲಿ ಯಾರೂ ನೋಡಿದರದಂಥ ಉಗ್ರತಪಸ್ಸನ್ನು ತಪಿಸುತ್ತಿದ್ದಾನೆ; ಶ್ರಿಮಾನ್ ಧರ್ಮ ವಿಗ್ರಹನಂತೆ ಪಾರ್ಥ ಧನಂಜಯನು ನಿಯತವ್ರತ ತಪಸ್ವಿ ಮತ್ತು ಒಂಟಿ ಮುನಿಯಾಗಿದ್ದಾನೆ ಎಂದು ಕೇಳಿದನು.

03078022a ತಂ ಶ್ರುತ್ವಾ ಪಾಂಡವೋ ರಾಜಂಸ್ತಪ್ಯಮಾನಂ ಮಹಾವನೇ।
03078022c ಅನ್ವಶೋಚತ ಕೌಂತೇಯಃ ಪ್ರಿಯಂ ವೈ ಭ್ರಾತರಂ ಜಯಂ।।

ರಾಜ! ಮಹಾರಣ್ಯದಲ್ಲಿ ಪಾಂಡವನು ತಪಸ್ಸುಮಾಡುತ್ತಿರುವುದನ್ನು ಕೇಳಿ ಕೌಂತೇಯನು ತನ್ನ ಪ್ರಿಯ ಭ್ರಾತಾ ಜಯನನ್ನು ಕುರಿತು ಶೋಕಿಸಿದನು.

03078023a ದಹ್ಯಮಾನೇನ ತು ಹೃದಾ ಶರಣಾರ್ಥೀ ಮಹಾವನೇ।
03078023c ಬ್ರಾಹ್ಮಣಾನ್ವಿವಿಧಜ್ಞಾನಾನ್ಪರ್ಯಪೃಚ್ಚದ್ಯುಧಿಷ್ಠಿರಃ।।

ಆ ಮಹಾವನದಲ್ಲಿ ದಹಿಸುತ್ತಿದ್ದ ಹೃದಯವಂತ ಶರಣಾರ್ಥಿ ಯುಧಿಷ್ಠಿರನು ವಿವಿಧಜ್ಞಾನಿ ಬ್ರಾಹ್ಮಣರನ್ನು ಈ ರೀತಿ ಪ್ರಶ್ನಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಬೃಹದಶ್ವಗಮನೇ ಅಷ್ಟಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಬೃಹದಶ್ವಗಮನ ಎನ್ನುವ ಎಪ್ಪತ್ತೆಂಟನೆಯ ಅಧ್ಯಾಯವು.