077 ನಲೋಪಾಖ್ಯಾನೇ ಪುಷ್ಕರಪರಾಭವಪೂರ್ವಕಂ ರಾಜ್ಯಪ್ರತ್ಯಾನಯನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 77

ಸಾರ

ನಲನು ತನ್ನ ರಾಜ್ಯಕ್ಕೆ ತೆರಳಿ ಪುಷ್ಕರನನ್ನು ಪುನಃ ದೂತಕ್ಕೆ ಆಹ್ವಾನಿಸುವುದು (1-7); ಪುಷ್ಕರನು ಒಪ್ಪಿಕೊಳ್ಳುವುದು (8-17). ದ್ಯೂತದಲ್ಲಿ ರಾಜ್ಯವನ್ನು ಗೆದ್ದು, ಗೆಲುವು-ಸೋಲುಗಳಿಗೆ ಕಾರಣಗಳನ್ನು ಹೇಳಿ ಪುಷ್ಕರನನ್ನು ಪ್ರೀತಿಯಿಂದ ಬೀಳ್ಕೊಂಡಿದುದು (18-29).

03077001 ಬೃಹದಶ್ವ ಉವಾಚ।
03077001a ಸ ಮಾಸಮುಷ್ಯ ಕೌಂತೇಯ ಭೀಮಮಾಮಂತ್ರ್ಯ ನೈಷಧಃ।
03077001c ಪುರಾದಲ್ಪಪರೀವಾರೋ ಜಗಾಮ ನಿಷಧಾನ್ಪ್ರತಿ।।
03077002a ರಥೇನೈಕೇನ ಶುಭ್ರೇಣ ದಂತಿಭಿಃ ಪರಿಷೋಡಶೈಃ।
03077002c ಪಂಚಾಶದ್ಭಿರ್ಹಯೈಶ್ಚೈವ ಷಟ್ಶತೈಶ್ಚ ಪದಾತಿಭಿಃ।।

ಬೃಹದಶ್ವನು ಹೇಳಿದನು: “ಒಂದು ತಿಂಗಳ ನಂತರ ನೈಷಧನು ಭೀಮನ ಅನುಜ್ಞೆಯನ್ನು ಪಡೆದು, ಕೆಲವೇ ಜನರಿಂದೊಡಗೂಡಿ, ಒಂದೇ ಶುಭ್ರ ರಥದಲ್ಲಿ, ಹದಿನಾರು ಆನೆಗಳು, ಐವತ್ತು ಕುದುರೆಗಳು, ಮತ್ತು ಆರುನೂರು ಪದಸೈನಿಕರಿಂದೊಡಗೂಡಿ ನಗರದಿಂದ ನಿಷಧದ ಕಡೆ ಹೊರಟನು.

03077003a ಸ ಕಂಪಯನ್ನಿವ ಮಹೀಂ ತ್ವರಮಾಣೋ ಮಹೀಪತಿಃ।
03077003c ಪ್ರವಿವೇಶಾತಿಸಂರಬ್ಧಸ್ತರಸೈವ ಮಹಾಮನಾಃ।।

ಮಹಿಯನ್ನೇ ನಡುಗಿಸುತ್ತಾ ಮಹಾಮನ ಮಹೀಪತಿಯು ಶೀಘ್ರದಲ್ಲಿಯೇ ಪುರವನ್ನು ಪ್ರವೇಶಿಸಿದನು.

03077004a ತತಃ ಪುಷ್ಕರಮಾಸಾದ್ಯ ವೀರಸೇನಸುತೋ ನಲಃ।
03077004c ಉವಾಚ ದೀವ್ಯಾವ ಪುನರ್ಬಹು ವಿತ್ತಂ ಮಯಾರ್ಜಿತಂ।।

ವೀರಸೇನಸುತ ನಲನು ಪುಷ್ಕರನ ಬಳಿ ಹೋಗಿ ಹೇಳಿದನು: “ಪುನಃ ಜೂಜಾಡೋಣ! ಈಗ ನಾನು ಬಹು ಸಂಪತ್ತನ್ನು ಗಳಿಸಿದ್ದೇನೆ.

03077005a ದಮಯಂತೀ ಚ ಯಚ್ಚಾನ್ಯನ್ಮಯಾ ವಸು ಸಮರ್ಜಿತಂ।
03077005c ಏಷ ವೈ ಮಮ ಸಂನ್ಯಾಸಸ್ತವ ರಾಜ್ಯಂ ತು ಪುಷ್ಕರ।।

ದಮಯಂತಿ ಮತ್ತು ನಾನು ಏನೆಲ್ಲ ಸಂಪತ್ತನ್ನು ಅರ್ಜಿಸಿದ್ದೀನೋ ಆ ಎಲ್ಲವನ್ನೂ ಪಣವಿಡುತ್ತೇನೆ. ಪುಷ್ಕರ! ನೀನು ರಾಜ್ಯವನ್ನು ಪಣವಾಗಿಡು.

03077006a ಪುನಃ ಪ್ರವರ್ತತಾಂ ದ್ಯೂತಮಿತಿ ಮೇ ನಿಶ್ಚಿತಾ ಮತಿಃ।
03077006c ಏಕಪಾಣೇನ ಭದ್ರಂ ತೇ ಪ್ರಾಣಯೋಶ್ಚ ಪಣಾವಹೇ।।

ಒಂದೇ ಒಂದು ಪಣವನ್ನಿಟ್ಟು ಪುನಃ ದ್ಯೂತವನ್ನು ಮುಂದುವರಿಸಬೇಕೆಂದು ನಾನು ಸಿಶ್ಚಯಿಸಿದ್ದೇನೆ. ನಮ್ಮ ಪ್ರಾಣಗಳನ್ನೇ ಪಣವನ್ನಾಗಿಡೋಣ. ನಿನಗೆ ಒಳ್ಳೆಯದಾಗಲಿ.

03077007a ಜಿತ್ವಾ ಪರಸ್ವಮಾಹೃತ್ಯ ರಾಜ್ಯಂ ವಾ ಯದಿ ವಾ ವಸು।
03077007c ಪ್ರತಿಪಾಣಃ ಪ್ರದಾತವ್ಯಃ ಪರಂ ಹಿ ಧನಮುಚ್ಯತೇ।।

ಯಾರಾದರೂ ಇನ್ನೊಬ್ಬನ ರಾಜ್ಯವನ್ನಾಗಲೀ ಅಥವಾ ಸಂಪತ್ತನ್ನಾಗಲೀ ಗೆದ್ದು ತೆಗೆದುಕೊಂಡರೆ, ಅದಕ್ಕೊಂದು ಪ್ರತಿ ಪಣವನ್ನು ಇಡಬೇಕಾಗುತ್ತದೆ; ಇದನ್ನೇ ಕೊನೆಯ ಪಣವೆಂದು ಹೇಳಲಾಗುತ್ತದೆ.

03077008a ನ ಚೇದ್ವಾಂಚಸಿ ತದ್ದ್ಯೂತಂ ಯುದ್ಧದ್ಯೂತಂ ಪ್ರವರ್ತತಾಂ।
03077008c ದ್ವೈರಥೇನಾಸ್ತು ವೈ ಶಾಂತಿಸ್ತವ ವಾ ಮಮ ವಾ ನೃಪ।।

ರಾಜ! ನೀನು ದ್ಯೂತವನ್ನಾಡಲು ಇಚ್ಛಿಸದಿದ್ದರೆ, ನಿನಗೆ ಅಥವಾ ನನಗೆ ಚಿರಶಾಂತಿ ದೊರೆಯುವವರೆಗೆ ಎರಡು ರಥಗಳ ಮೇಲೆ ಯುದ್ಧದ ದ್ಯೂತವಾದರೂ ಪ್ರಾರಂಭವಾಗಬೇಕು.

03077009a ವಂಶಭೋಜ್ಯಮಿದಂ ರಾಜ್ಯಂ ಮಾರ್ಗಿತವ್ಯಂ ಯಥಾ ತಥಾ।
03077009c ಯೇನ ತೇನಾಪ್ಯುಪಾಯೇನ ವೃದ್ಧಾನಾಮಿತಿ ಶಾಸನಂ।।

ವಂಶೀಯವಾಗಿ ಪಡೆದುಕೊಂಡ ಈ ರಾಜ್ಯವನ್ನು ಯಾವ ಮಾರ್ಗವನ್ನಾದರೂ ಅನುಸರಿಸಿ ಪುನಃ ಪಡೆದುಕೊಳ್ಳಬಹುದು ಎಂದು ವೃದ್ಧರು ಹೇಳುತ್ತಾರೆ.

03077010a ದ್ವಯೋರೇಕತರೇ ಬುದ್ಧಿಃ ಕ್ರಿಯತಾಮದ್ಯ ಪುಷ್ಕರ।
03077010c ಕೈತವೇನಾಕ್ಷವತ್ಯಾಂ ವಾ ಯುದ್ಧೇ ವಾ ನಮ್ಯತಾಂ ಧನುಃ।।

ಪುಷ್ಕರ! ಈ ಎರಡರಲ್ಲಿ ಒಂದನ್ನು ಈಗ ನಿಶ್ಚಯಮಾಡು. ದ್ಯೂತದಲ್ಲಿ ದಾಳಗಳನ್ನಾದರೂ ಎಸೆ ಅಥವಾ ಯುದ್ಧದಲ್ಲಿ ಧನುಸ್ಸನ್ನಾದರೂ ಎಳೆದು ಬಿಡು.”

03077011a ನೈಷಧೇನೈವಮುಕ್ತಸ್ತು ಪುಷ್ಕರಃ ಪ್ರಹಸನ್ನಿವ।
03077011c ಧ್ರುವಮಾತ್ಮಜಯಂ ಮತ್ವಾ ಪ್ರತ್ಯಾಹ ಪೃಥಿವೀಪತಿಂ।।

ನೈಷಧನ ಈ ಮಾತುಗಳಿಗೆ ಪುಷ್ಕರನು ನಕ್ಕನು. ತನಗೇ ಜಯ ನಿಶ್ಚಯ ಎಂದು ತಿಳಿದು ಪೃಥಿವೀಪತಿಗೆ ಉತ್ತರಿಸಿದನು:

03077012a ದಿಷ್ಟ್ಯಾ ತ್ವಯಾರ್ಜಿತಂ ವಿತ್ತಂ ಪ್ರತಿಪಾಣಾಯ ನೈಷಧ।
03077012c ದಿಷ್ಟ್ಯಾ ಚ ದುಷ್ಕೃತಂ ಕರ್ಮ ದಮಯಂತ್ಯಾಃ ಕ್ಷಯಂ ಗತಂ।
03077012e ದಿಷ್ಟ್ಯಾ ಚ ಧ್ರಿಯಸೇ ರಾಜನ್ಸದಾರೋಽರಿನಿಬರ್ಹಣ।।

“ನೈಷಧ! ಪ್ರತಿಯಾಗಿ ಪಣವನ್ನಿಡಲು ನೀನು ಸಂಪತ್ತನ್ನು ಗಳಿಸಿದ್ದೀಯೆ ಎಂದರೆ ಎಷ್ಟು ಸಂತೋಷದ ವಿಷಯ! ದಮಯಂತಿಯ ದುಷ್ಕೃತ ಕರ್ಮಗಳೆಲ್ಲ ನಾಶವಾದವು ಎಂದರೆ ಎಷ್ಟು ಸಂತೋಷದ ವಿಷಯ! ಅರಿನಾಶಕ! ಹೆಂಡತಿಯೊಂದಿಗೆ ನೀನೂ ಜೀವಂತವಾಗಿದ್ದೀಯಲ್ಲ ಇದು ಇನ್ನೂ ಸಂತೋಷದ ವಿಷಯ!

03077013a ಧನೇನಾನೇನ ವೈದರ್ಭೀ ಜಿತೇನ ಸಮಲಂಕೃತಾ।
03077013c ಮಾಮುಪಸ್ಥಾಸ್ಯತಿ ವ್ಯಕ್ತಂ ದಿವಿ ಶಕ್ರಮಿವಾಪ್ಸರಾಃ।।

ನಾನು ಗೆಲ್ಲುವ ಈ ಸಂಪತ್ತಿನಿಂದ ಸ್ವರ್ಗದಲ್ಲಿ ಸಮಲಂಕೃತ ಅಪ್ಸರೆಯರು ಶಕ್ರನನ್ನು ಸೇವಿಸುವಂತೆ ನನ್ನನ್ನು ವೈದರ್ಭಿಯು ಸೇವಿಸುವಳು ಎನ್ನುವುದು ನಿಜವಾಗುತ್ತಿದೆ.

03077014a ನಿತ್ಯಶೋ ಹಿ ಸ್ಮರಾಮಿ ತ್ವಾಂ ಪ್ರತೀಕ್ಷಾಮಿ ಚ ನೈಷಧ।
03077014c ದೇವನೇ ಚ ಮಮ ಪ್ರೀತಿರ್ನ ಭವತ್ಯಸುಹೃದ್ಗಣೈಃ।।

ನೈಷಧ! ನಿನ್ನನ್ನು ನಿತ್ಯವೂ ಸ್ಮರಿಸುತ್ತಿದ್ದೆ ಮತ್ತು ನಿನ್ನ ಪ್ರತೀಕ್ಷೆ ಮಾಡುತ್ತಿದ್ದೆ. ನನ್ನ ಸುಹೃದಯರಲ್ಲದವರ ಜೊತೆ ದ್ಯೂತವನ್ನಾಡಲು ನನಗೆ ಮನಸೇ ಇರಲಿಲ್ಲ.

03077015a ಜಿತ್ವಾ ತ್ವದ್ಯ ವರಾರೋಹಾಂ ದಮಯಂತೀಮನಿಂದಿತಾಂ।
03077015c ಕೃತಕೃತ್ಯೋ ಭವಿಷ್ಯಾಮಿ ಸಾ ಹಿ ಮೇ ನಿತ್ಯಶೋ ಹೃದಿ।।

ಇಂದು ಅನಿಂದಿತೆ ವರಾರೋಹೆ ದಮಯಂತಿಯನ್ನು ಗೆದ್ದು ನಾನು ಕೃತಕೃತ್ಯನಾಗುತ್ತೇನೆ; ಏಕೆಂದರೆ ಅವಳು ನಿತ್ಯವೂ ನನ್ನ ಹೃದಯದಲ್ಲಿ ಇದ್ದವಳು!”

03077016a ಶ್ರುತ್ವಾ ತು ತಸ್ಯ ತಾ ವಾಚೋ ಬಹ್ವಬದ್ಧಪ್ರಲಾಪಿನಃ।
03077016c ಇಯೇಷ ಸ ಶಿರಶ್ಚೇತ್ತುಂ ಖಡ್ಗೇನ ಕುಪಿತೋ ನಲಃ।।

ಅವನ ಈ ಬಾಲಿಶ ಮಾತುಗಳನ್ನು ಕೇಳಿದ ನಲನು ಖಡ್ಗದಿಂದ ಅವನ ಶಿರವನ್ನು ಛೇಧಿಸಬೇಕೆನ್ನುವಷ್ಟು ಕುಪಿತನಾದನು.

03077017a ಸ್ಮಯಂಸ್ತು ರೋಷತಾಂರಾಕ್ಷಸ್ತಂ ಉವಾಚ ತತೋ ನೃಪಃ।
03077017c ಪಣಾವಃ ಕಿಂ ವ್ಯಾಹರಸೇ ಜಿತ್ವಾ ವೈ ವ್ಯಾಹರಿಷ್ಯಸಿ।।

ಆಗ ನೃಪನು ಸಿಟ್ಟಿನಿಂದ ಕಣ್ಣುಗಳು ಕೆಂಪಾಗಿದ್ದರೂ ನಗುತ್ತಾ ಹೇಳಿದನು: “ಆಡೋಣ ಬಾ! ಮಾತನಾಡುವುದು ಯಾಕೆ? ಗೆದ್ದು ಮಾತನಾಡುವೆಯೆಂತೆ!”

03077018a ತತಃ ಪ್ರಾವರ್ತತ ದ್ಯೂತಂ ಪುಷ್ಕರಸ್ಯ ನಲಸ್ಯ ಚ।
03077018c ಏಕಪಾಣೇನ ಭದ್ರಂ ತೇ ನಲೇನ ಸ ಪರಾಜಿತಃ।
03077018e ಸರತ್ನಕೋಶನಿಚಯಃ ಪ್ರಾಣೇನ ಪಣಿತೋಽಪಿ ಚ।।

ಹೀಗೆ ನಲ-ಪುಷ್ಕರರ ದ್ಯೂತವು ಪುನಃ ಪ್ರಾರಂಭವಾಯಿತು. ಒಂದೇ ಒಂದು ಪಣದಲ್ಲಿ ಅವನು ನಲನಿಂದ ಪರಾಜಿತನಾದನು. ತನ್ನ ರತ್ನಕೋಶಗಳ ರಾಶಿಯನ್ನು ಮತ್ತು ತನ್ನ ಪ್ರಾಣವನ್ನೂ ಪಣವಿಟ್ಟು ಸೋತನು.

03077019a ಜಿತ್ವಾ ಚ ಪುಷ್ಕರಂ ರಾಜಾ ಪ್ರಹಸನ್ನಿದಮಬ್ರವೀತ್।
03077019c ಮಮ ಸರ್ವಮಿದಂ ರಾಜ್ಯಮವ್ಯಗ್ರಂ ಹತಕಂಟಕಂ।।

ಪುಷ್ಕರನನ್ನು ಗೆದ್ದ ರಾಜನು ಮುಗುಳ್ನಗುತ್ತಾ ಹೇಳಿದನು: “ಹತಕಂಟಕ! ಈ ಎಲ್ಲ ರಾಜ್ಯವೂ ನನ್ನದು. ಇದಕ್ಕೆ ಸ್ಪರ್ಧಿಗಳು ಯಾರೂ ಇಲ್ಲ.

03077020a ವೈದರ್ಭೀ ನ ತ್ವಯಾ ಶಕ್ಯಾ ರಾಜಾಪಸದ ವೀಕ್ಷಿತುಂ।
03077020c ತಸ್ಯಾಸ್ತ್ವಂ ಸಪರೀವಾರೋ ಮೂಢ ದಾಸತ್ವಮಾಗತಃ।।

ರಾಜಭ್ರಷ್ಠ! ನೀನು ಇನ್ನು ವೈದರ್ಭಿಯಮೇಲೆ ಕಣ್ಣನ್ನು ಇಡಲು ಶಕ್ಯನಲ್ಲ. ಮೂಢನೇ ನೀನು ಮತ್ತು ನಿನ್ನ ಪರಿವಾರವೆಲ್ಲವೂ ದಾಸತ್ವವನ್ನು ಪಡೆದವರಾಗಿದ್ದೀರಿ.

03077021a ನ ತತ್ತ್ವಯಾ ಕೃತಂ ಕರ್ಮ ಯೇನಾಹಂ ನಿರ್ಜಿತಃ ಪುರಾ।
03077021c ಕಲಿನಾ ತತ್ಕೃತಂ ಕರ್ಮ ತ್ವಂ ತು ಮೂಢ ನ ಬುಧ್ಯಸೇ।
03077021e ನಾಹಂ ಪರಕೃತಂ ದೋಷಂ ತ್ವಯ್ಯಾಧಾಸ್ಯೇ ಕಥಂ ಚನ।।

ಹಿಂದೆ ನಾನು ಸೋತಿದ್ದುದು ನಿನ್ನಿಂದಾಗಿ ಅಲ್ಲ. ಅದು ಕಲಿಯು ಮಾಡಿದ ಕರ್ಮವಾಗಿತ್ತು. ಆದರೆ ಮೂಢ! ಅದು ನಿನಗೆ ತಿಳಿದಿರಲಿಲ್ಲ. ಪರರು ಮಾಡಿದ ದೋಷಕ್ಕೆ ನಾನಾದರೂ ನಿನ್ನನ್ನು ಹೇಗೆ ನಿಂದಿಸಲಿ?

03077022a ಯಥಾಸುಖಂ ತ್ವಂ ಜೀವಸ್ವ ಪ್ರಾಣಾನಭ್ಯುತ್ಸೃಜಾಮಿ ತೇ।
03077022c ತಥೈವ ಚ ಮಮ ಪ್ರೀತಿಸ್ತ್ವಯಿ ವೀರ ನ ಸಂಶಯಃ।।

ನೀನು ನಿನಗಿಷ್ಟವಿದ್ದಂತೆ ಜೀವಿಸು. ನಿನ್ನ ಪ್ರಾಣವನ್ನು ನಿನಗೇ ಹಿಂದಿರುಗಿಸುತ್ತಿದ್ದೇನೆ. ಹಾಗೆಯೇ ವೀರ! ನಿನ್ನ ಮೇಲೆ ನನ್ನ ಪ್ರೀತಿಯಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03077023a ಸೌಭ್ರಾತ್ರಂ ಚೈವ ಮೇ ತ್ವತ್ತೋ ನ ಕದಾ ಚಿತ್ಪ್ರಹಾಸ್ಯತಿ।
03077023c ಪುಷ್ಕರ ತ್ವಂ ಹಿ ಮೇ ಭ್ರಾತಾ ಸಂಜೀವಸ್ವ ಶತಂ ಸಮಾಃ।।

ನನ್ನ ಭ್ರಾತೃ ಪ್ರೇಮವು ನಿನ್ನನ್ನು ಇಂದೂ ವಂಚಿಸುವುದಿಲ್ಲ. ಪುಷ್ಕರ! ನೀನು ನನ್ನ ಭ್ರಾತೃ. ನೂರು ವರ್ಷ ಜೀವಿಸು!”

03077024a ಏವಂ ನಲಃ ಸಾಂತ್ವಯಿತ್ವಾ ಭ್ರಾತರಂ ಸತ್ಯವಿಕ್ರಮಃ।
03077024c ಸ್ವಪುರಂ ಪ್ರೇಷಯಾಮಾಸ ಪರಿಷ್ವಜ್ಯ ಪುನಃ ಪುನಃ।।

ಈ ರೀತಿ ಸತ್ಯವಿಕ್ರಮ ನಲನು ಭ್ರಾತನನ್ನು ಸಂತವಿಸಿ, ಪುನಃ ಪುನಃ ಅಪ್ಪಿಕೊಳ್ಳುತ್ತಾ ಅವನ ಪುರಕ್ಕೆ ಬೀಳ್ಕೊಟ್ಟನು.

03077025a ಸಾಂತ್ವಿತೋ ನೈಷಧೇನೈವಂ ಪುಷ್ಕರಃ ಪ್ರತ್ಯುವಾಚ ತಂ।
03077025c ಪುಣ್ಯಶ್ಲೋಕಂ ತದಾ ರಾಜನ್ನಭಿವಾದ್ಯ ಕೃತಾಂಜಲಿಃ।।

ರಾಜನ್! ನೈಷಧನಿಂದ ಸಾಂತ್ವನಗೊಂಡ ಪುಷ್ಕರನು ಆ ಪುಣ್ಯಶ್ಲೋಕನಿಗೆ ಕೃತಾಂಜಲಿಯಾಗಿ ಅಭಿವಂದಿಸಿ ಉತ್ತರಿಸಿದನು:

03077026a ಕೀರ್ತಿರಸ್ತು ತವಾಕ್ಷಯ್ಯಾ ಜೀವ ವರ್ಷಾಯುತಂ ಸುಖೀ।
03077026c ಯೋ ಮೇ ವಿತರಸಿ ಪ್ರಾಣಾನಧಿಷ್ಠಾನಂ ಚ ಪಾರ್ಥಿವ।।

“ನನ್ನ ಪ್ರಾಣ ಮತ್ತು ಅಧಿಷ್ಠಾನವನ್ನು ಹಿಂದಿರುಗಿಸಿದ ಪಾರ್ಥಿವ! ನೀನು ಅನೇಕ ವರ್ಷಗಳ ಪರ್ಯಂತ ಜೀವಿಸು ಮತ್ತು ನಿನ್ನ ಕೀರ್ತಿಯು ಅಕ್ಷಯವಾಗಿರಲಿ!”

03077027a ಸ ತಥಾ ಸತ್ಕೃತೋ ರಾಜ್ಞಾ ಮಾಸಮುಷ್ಯ ತದಾ ನೃಪಃ।
03077027c ಪ್ರಯಯೌ ಸ್ವಪುರಂ ಹೃಷ್ಟಃ ಪುಷ್ಕರಃ ಸ್ವಜನಾವೃತಃ।।
03077028a ಮಹತ್ಯಾ ಸೇನಯಾ ರಾಜನ್ವಿನೀತೈಃ ಪರಿಚಾರಕೈಃ।
03077028c ಭ್ರಾಜಮಾನ ಇವಾದಿತ್ಯೋ ವಪುಷಾ ಪುರುಷರ್ಷಭ।।

ಪುರುಷರ್ಷಭ! ರಾಜ ಪುಷ್ಕರನು ನೃಪನ ಅತಿಥಿಯಾಗಿ ಒಂದು ತಿಂಗಳು ಅಲ್ಲಿಯೇ ಇದ್ದು ನಂತರ ಸಂತಸದಿಂದ ಸ್ವಜನರೊನ್ನೊಡಗೂಡಿ, ಮಹತ್ತರ ಸೇನೆಯೊಂದಿಗೆ, ವಿನೀತ ಪರಿಚಾರಕರೊಂದಿಗೆ, ರೂಪದಲ್ಲಿ ಆದಿತ್ಯನಂತೆ ಬೆಳಗುತ್ತಾ ಸ್ವಪುರಕ್ಕೆ ಪ್ರಯಾಣಿಸಿದನು.

03077029a ಪ್ರಸ್ಥಾಪ್ಯ ಪುಷ್ಕರಂ ರಾಜಾ ವಿತ್ತವಂತಮನಾಮಯಂ।
03077029c ಪ್ರವಿವೇಶ ಪುರಂ ಶ್ರೀಮಾನತ್ಯರ್ಥಮುಪಶೋಭಿತಂ।
03077029e ಪ್ರವಿಶ್ಯ ಸಾಂತ್ವಯಾಮಾಸ ಪೌರಾಂಶ್ಚ ನಿಷಧಾಧಿಪಃ।।

ವಿತ್ತವಂತ ಅನಾಮಯ ಪುಷ್ಕರನನ್ನು ಕಳುಹಿಸಿ, ರಾಜನು ಅದ್ಭುತವಾಗಿ ಅಲಂಕೃತವಾಗಿದ್ದ ತನ್ನ ಪುರವನ್ನು ಪ್ರವೇಶಿಸಿದನು. ಪ್ರವೇಶಿಸಿ ನಿಷಧಾಧಿಪನು ಪುರಜನರನ್ನು ಸಾಂತ್ವಯಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಪುಷ್ಕರಪರಾಭವಪೂರ್ವಕಂ ರಾಜ್ಯಪ್ರತ್ಯಾನಯನೇ ಸಪ್ತಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಪುಷ್ಕರ ಪರಾಭವ ಮತ್ತು ರಾಜ್ಯಪ್ರಾಪ್ತಿ ಎನ್ನುವ ಎಪ್ಪತ್ತೇಳನೆಯ ಅಧ್ಯಾಯವು.