ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 76
ಸಾರ
ನಲನು ಆಗಮಿಸಿದ ಸಂತಸವನ್ನು ನಗರವೇ ಆಚರಿಸುವುದು (1-7). ನಲ-ಋತುಪರ್ಣರು ಪರಸ್ಪರರಲ್ಲಿ ಕ್ಷಮೆ ಕೇಳಿ ಬೀಳ್ಕೊಂಡಿದುದು (8-17). ನಲನಿಂದ ಅಶ್ವವಿದ್ಯೆಯನ್ನು ಪಡೆದು, ಬೇರೊಬ್ಬ ಸಾರಥಿಯೊಂದಿಗೆ ಋತುಪರ್ಣನು ಮರಳಿದುದು (18-19).
03076001 ಬೃಹದಶ್ವ ಉವಾಚ।
03076001a ಅಥ ತಾಂ ವ್ಯುಷಿತೋ ರಾತ್ರಿಂ ನಲೋ ರಾಜಾ ಸ್ವಲಂಕೃತಃ।
03076001c ವೈದರ್ಭ್ಯಾ ಸಹಿತಃ ಕಾಲ್ಯಂ ದದರ್ಶ ವಸುಧಾಧಿಪಂ।।
ಬೃಹದಶ್ವನು ಹೇಳಿದನು: “ಆ ರಾತ್ರಿಯನ್ನು ಕಳೆದ ನಂತರ ರಾಜ ನಲನು ಸ್ವಲಂಕೃತನಾಗಿ ವೈದರ್ಭಿಯ ಸಹಿತ ವಸುಧಾಧಿಪನನ್ನು ಕಂಡನು.
03076002a ತತೋಽಭಿವಾದಯಾಮಾಸ ಪ್ರಯತಃ ಶ್ವಶುರಂ ನಲಃ।
03076002c ತಸ್ಯಾನು ದಮಯಂತೀ ಚ ವವಂದೇ ಪಿತರಂ ಶುಭಾ।।
ನಲನು ತನ್ನ ಮಾವನಿಗೆ ವಿನಯದಿಂದ ನಮಸ್ಕರಿಸಿದನು ಮತ್ತು ಅವನ ನಂತರದಲ್ಲಿ ಶುಭೆ ದಮಯಂತಿಯು ತಂದೆಗೆ ವಂದಿಸಿದಳು.
03076003a ತಂ ಭೀಮಃ ಪ್ರತಿಜಗ್ರಾಹ ಪುತ್ರವತ್ಪರಯಾ ಮುದಾ।
03076003c ಯಥಾರ್ಹಂ ಪೂಜಯಿತ್ವಾ ತು ಸಮಾಶ್ವಾಸಯತ ಪ್ರಭುಃ।
03076003e ನಲೇನ ಸಹಿತಾಂ ತತ್ರ ದಮಯಂತೀಂ ಪತಿವ್ರತಾಂ।।
ಭೀಮನು ತನ್ನ ಮಗನೋ ಎನ್ನುವ ರೀತಿಯಲ್ಲಿ ಅವನನ್ನು ಸಂತೋಷದಿಂದ ಸ್ವಾಗತಿಸಿದನು ಮತ್ತು ತಕ್ಕುದಾದ ಗೌರವವನ್ನಿತ್ತನು. ನಲನ ಜೊತೆಗಿದ್ದ ಪತಿವ್ರತೆ ದಮಯಂತಿಯನ್ನು ಪ್ರಭುವು ಸಂತವಿಸಿದನು.
03076004a ತಾಮರ್ಹಣಾಂ ನಲೋ ರಾಜಾ ಪ್ರತಿಗೃಹ್ಯ ಯಥಾವಿಧಿ।
03076004c ಪರಿಚರ್ಯಾಂ ಸ್ವಕಾಂ ತಸ್ಮೈ ಯಥಾವತ್ಪ್ರತ್ಯವೇದಯತ್।।
ಯಥಾವಿಧಿಯಲ್ಲಿ ಗೌರವವನ್ನು ಸ್ಪೀಕರಿಸಿ ರಾಜ ನಲನು ಅವನಿಗೆ ತನ್ನ ಗೌರವವನ್ನು ಅರ್ಪಿಸಿದನು.
03076005a ತತೋ ಬಭೂವ ನಗರೇ ಸುಮಹಾನ್ ಹರ್ಷನಿಸ್ವನಃ।
03076005c ಜನಸ್ಯ ಸಂಪ್ರಹೃಷ್ಟಸ್ಯ ನಲಂ ದೃಷ್ಟ್ವಾ ತಥಾಗತಂ।।
ಈ ರೀತಿ ನಲನ ಆಗಮನವನ್ನು ನೋಡಿ ನಗರದಲ್ಲೆಲ್ಲಾ ಸಂಪ್ರಹೃಷ್ಟ ಜನರ ಮಹತ್ತರ ಹರ್ಷೋದ್ಗಾರವಾಯಿತು.
03076006a ಅಶೋಭಯಚ್ಚ ನಗರಂ ಪತಾಕಾಧ್ವಜಮಾಲಿನಂ।
03076006c ಸಿಕ್ತಸಮ್ಮೃಷ್ಟಪುಷ್ಪಾಢ್ಯಾ ರಾಜಮಾರ್ಗಾಃ ಕೃತಾಸ್ತದಾ।।
ಪತಾಕ ಧ್ವಜ ಮಾಲೆಗಳಿಂದ ನಗರವು ಶೋಭೆಗೊಂಡಿತು. ರಾಜ ಮಾರ್ಗವು ಸಿಂಚಿಸಲ್ಪಟ್ಟಿತು ಮತ್ತು ಪುಷ್ಪಗಳಿಂದ ಹಾಸಿಸಲ್ಪಟ್ಟಿತು.
03076007a ದ್ವಾರಿ ದ್ವಾರಿ ಚ ಪೌರಾಣಾಂ ಪುಷ್ಪಭಂಗಃ ಪ್ರಕಲ್ಪಿತಃ।
03076007c ಅರ್ಚಿತಾನಿ ಚ ಸರ್ವಾಣಿ ದೇವತಾಯತನಾನಿ ಚ।।
ಪೌರರ ದ್ವಾರ ದ್ವಾರಗಳಲ್ಲಿ ಪುಷ್ಪಗುಚ್ಚಗಳನ್ನು ಇಡಲಾಗಿತ್ತು ಮತ್ತು ಎಲ್ಲಾ ದೇವಾಲಯಗಳಲ್ಲಿ ಅರ್ಚನೆಗಳನ್ನು ಏರ್ಪಡಿಸಲಾಯಿತು.
03076008a ಋತುಪರ್ಣೋಽಪಿ ಶುಶ್ರಾವ ಬಾಹುಕಚ್ಚದ್ಮಿನಂ ನಲಂ।
03076008c ದಮಯಂತ್ಯಾ ಸಮಾಯುಕ್ತಂ ಜಹೃಷೇ ಚ ನರಾಧಿಪಃ।।
ನರಾಧಿಪ ಋತುಪರ್ಣನೂ ಕೂಡ ಬಾಹುಕನು ವೇಷಬದಲಿಸಿ ನಲನಾಗಿದ್ದುದನ್ನು ಮತ್ತು ದಮಯಂತಿಯನ್ನು ಪುನಃ ಸೇರಿದುದನ್ನು ಕೇಳಿ ಬಹಳ ಹರ್ಷಿತನಾದನು.
03076009a ತಮಾನಾಯ್ಯ ನಲೋ ರಾಜಾ ಕ್ಷಮಯಾಮಾಸ ಪಾರ್ಥಿವಂ।
03076009c ಸ ಚ ತಂ ಕ್ಷಮಯಾಮಾಸ ಹೇತುಭಿರ್ಬುದ್ಧಿಸಮ್ಮತಃ।।
ರಾಜ ನಲನು ಅವನನ್ನು ಕರೆಯಿಸಿ ಪಾರ್ಥಿವನ ಕ್ಷಮೆಯನ್ನು ಕೇಳಿದನು. ಅವನು ಕೂಡ ಬುದ್ಧಿಸಮ್ಮತ ಕಾರಣಗಳಿಗಾಗಿ ಕ್ಷಮಿಸಿದನು.
03076010a ಸ ಸತ್ಕೃತೋ ಮಹೀಪಾಲೋ ನೈಷಧಂ ವಿಸ್ಮಯಾನ್ವಿತಃ।
03076010c ದಿಷ್ಟ್ಯಾ ಸಮೇತೋ ದಾರೈಃ ಸ್ವೈರ್ಭವಾನಿತ್ಯಭ್ಯನಂದತ।।
ಸತ್ಕೃತ ಮಹೀಪಾಲನು ವಿಸ್ಮಯಾನ್ವಿತನಾಗಿ ನೈಷಧನು ತನ್ನ ಪತ್ನಿಯನ್ನು ಪುನಃ ಸೇರಿದ್ದುದಕ್ಕಾಗಿ ಅಭಿನಂದಿಸಿದನು.
03076011a ಕಚ್ಚಿತ್ತು ನಾಪರಾಧಂ ತೇ ಕೃತವಾನಸ್ಮಿ ನೈಷಧ।
03076011c ಅಜ್ಞಾತವಾಸಂ ವಸತೋ ಮದ್ಗೃಹೇ ನಿಷಧಾಧಿಪ।।
“ನೈಷಧ! ನಿಷಧಾಧಿಪ! ಅಜ್ಞಾತವಾಸಿಯಾಗಿ ನನ್ನ ಮನೆಯಲ್ಲಿ ವಾಸಿಸುತ್ತಿರುವಾಗ ನಿನಗೆ ಎನಾದರೂ ಅಪರಾಧವನ್ನು ಮಾಡಿರಬಹುದು.
03076012a ಯದಿ ವಾ ಬುದ್ಧಿಪೂರ್ವಾಣಿ ಯದ್ಯಬುದ್ಧಾನಿ ಕಾನಿ ಚಿತ್।
03076012c ಮಯಾ ಕೃತಾನ್ಯಕಾರ್ಯಾಣಿ ತಾನಿ ಮೇ ಕ್ಷಂತುಮರ್ಹಸಿ।।
ಒಮ್ಮೆ ನಾನು ತಿಳಿದೋ ಅಥವಾ ತಿಳಿಯದೆಯೋ ನಿನಗೆ ನನ್ನಿಂದ ಎನಾದರೂ ತಪ್ಪಾಗಿದ್ದರೆ ನನ್ನನ್ನು ನೀನು ಕ್ಷಮಿಸ ತಕ್ಕದ್ದು.”
03076013 ನಲ ಉವಾಚ।
03076013a ನ ಮೇಽಪರಾಧಂ ಕೃತವಾಂಸ್ತ್ವಂ ಸ್ವಲ್ಪಮಪಿ ಪಾರ್ಥಿವ।
03076013c ಕೃತೇಽಪಿ ಚ ನ ಮೇ ಕೋಪಃ ಕ್ಷಂತವ್ಯಂ ಹಿ ಮಯಾ ತವ।।
ನಲನು ಹೇಳಿದನು: “ಪಾರ್ಥಿವ! ನಿನ್ನಿಂದ ನನ್ನ ಮೇಲೆ ಸ್ವಲ್ಪವೂ ಅಪರಾಧವಾಗಲಿಲ್ಲ. ಒಮ್ಮೆ ಆಗಿದ್ದರೂ ನನಗೆ ಅದರ ಕುರಿತು ಕೋಪವಿಲ್ಲ. ನಾನು ಅದನ್ನು ಕ್ಷಮಿಸಲೇ ಬೇಕು.
03076014a ಪೂರ್ವಂ ಹ್ಯಸಿ ಸಖಾ ಮೇಽಸಿ ಸಂಬಂಧೀ ಚ ನರಾಧಿಪ।
03076014c ಅತ ಊರ್ಧ್ವಂ ತು ಭೂಯಸ್ತ್ವಂ ಪ್ರೀತಿಮಾಹರ್ತುಮರ್ಹಸಿ।।
ನರಾಧಿಪ! ಈ ಪೂರ್ವದಲ್ಲಿ ನೀನು ನನ್ನ ಸಖನೂ ಮತ್ತು ಸಂಬಂಧಿಯೂ ಆಗಿರುವೆ. ಇನ್ನು ಮುಂದೆಯೂ ಕೂಡ ನನ್ನ ಮೇಲೆ ನಿನ್ನ ಪ್ರೀತಿಯಿರತಕ್ಕದ್ದು.
03076015a ಸರ್ವಕಾಮೈಃ ಸುವಿಹಿತಃ ಸುಖಮಸ್ಮ್ಯುಷಿತಸ್ತ್ವಯಿ।
03076015c ನ ತಥಾ ಸ್ವಗೃಹೇ ರಾಜನ್ಯಥಾ ತವ ಗೃಹೇ ಸದಾ।।
ರಾಜನ್! ನನ್ನ ಮನೆಯಲ್ಲಿಗಿಂತಲೂ ನಿನ್ನ ಮನೆಯಲ್ಲಿ ನನ್ನ ಎಲ್ಲ ಆಸೆಗಳೂ ವಿಹಿತವಾಗಿ ಸುಖವಾಗಿದ್ದೆ.
03076016a ಇದಂ ಚೈವ ಹಯಜ್ಞಾನಂ ತ್ವದೀಯಂ ಮಯಿ ತಿಷ್ಠತಿ।
03076016c ತದುಪಾಕರ್ತುಮಿಚ್ಚಾಮಿ ಮನ್ಯಸೇ ಯದಿ ಪಾರ್ಥಿವ।।
ಪಾರ್ಥಿವ! ನಿನ್ನ ಅನುಮತಿಯಿದ್ದರೆ ನನ್ನಲ್ಲಿರುವ ಈ ಅಶ್ವಜ್ಞಾನವನ್ನು ನಿನಗೆ ಕೊಡಲು ಇಚ್ಚಿಸುತ್ತೇನೆ.””
03076017 ಬೃಹದಶ್ವ ಉವಾಚ।
03076017a ಏವಮುಕ್ತ್ವಾ ದದೌ ವಿದ್ಯಾಂ ಋತುಪರ್ಣಾಯ ನೈಷಧಃ।
03076017c ಸ ಚ ತಾಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ।।
ಬೃಹದಶ್ವನು ಹೇಳಿದನು: “ಹೀಗೆ ಹೇಳಿ ನೈಷಧನು ಋತುಪರ್ಣನಿಗೆ ವಿದ್ಯೆಯನ್ನಿತ್ತನು; ಮತ್ತು ಅವನು ಅದನ್ನು ವಿಧಿಕರ್ಮಪೂರಕವಾಗಿ ಸ್ವೀಕರಿಸಿದನು.
03076018a ತತೋ ಗೃಹ್ಯಾಶ್ವಹೃದಯಂ ತದಾ ಭಾಂಗಸ್ವರಿರ್ನೃಪಃ।
03076018c ಸೂತಮನ್ಯಮುಪಾದಾಯ ಯಯೌ ಸ್ವಪುರಮೇವ ಹಿ।।
ಅಶ್ವಹೃದಯವನ್ನು ಪಡೆದ ನಂತರ ನೃಪ ಭಾಂಗಸ್ವರಿಯು ಬೇರೆ ಸೂತನೊಬ್ಬನನ್ನು ನಿಯೋಜಿಸಿ ತನ್ನ ನಗರಿಗೆ ತೆರಳಿದನು.
03076019a ಋತುಪರ್ಣೇ ಪ್ರತಿಗತೇ ನಲೋ ರಾಜಾ ವಿಶಾಂ ಪತೇ।
03076019c ನಗರೇ ಕುಂಡಿನೇ ಕಾಲಂ ನಾತಿದೀರ್ಘಮಿವಾವಸತ್।।
ವಿಶಾಂಪತೇ! ಋತುಪರ್ಣನು ತೆರಳಿದ ನಂತರ ರಾಜ ನಲನು ಕುಂಡಿನೀ ನಗರದಲ್ಲಿ ದೀರ್ಘಕಾಲದವರೆಗೆ ವಾಸಿಸಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಋತುಪರ್ಣಸ್ವದೇಶಗಮನೇ ಷಟ್ಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಋತುಪರ್ಣಸ್ವದೇಶಗಮನ ಎನ್ನುವ ಎಪ್ಪತ್ತಾರನೆಯ ಅಧ್ಯಾಯವು.