075 ನಲೋಪಾಖ್ಯಾನೇ ನಲದಮಯಂತೀಸಮಾಗಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 75

ಸಾರ

ದಮಯಂತಿಯು ನಲನನ್ನು ಹುಡುಕಲು ತಾನು ಮಾಡಿದ ಪ್ರಯತ್ನಗಳನ್ನು ಹೇಳಿಕೊಂಡು ನಿರ್ದೋಷಿಯೆಂದೂ ಹೇಳಿದುದು (1-10). ವಾಯುವು ದಮಯಂತಿಯ ಮಾತನ್ನು ಧೃಢೀಕರಿಸಿದ್ದುದು (11-16). ನಲನು ನಾಗರಾಜನಿತ್ತಿದ್ದ ವಸ್ತ್ರಗಳನ್ನು ಧರಿಸಿ ಸ್ವರೂಪವನ್ನು ಪಡೆದುದು; ಪರಸ್ಪರರನ್ನು ಬಿಗಿದಪ್ಪಿ ಸಂತಸ ಪಟ್ಟಿದುದು (17-27).

03075001 ದಮಯಂತ್ಯುವಾಚ।
03075001a ನ ಮಾಮರ್ಹಸಿ ಕಲ್ಯಾಣ ಪಾಪೇನ ಪರಿಶಂಕಿತುಂ।
03075001c ಮಯಾ ಹಿ ದೇವಾನುತ್ಸೃಜ್ಯ ವೃತಸ್ತ್ವಂ ನಿಷಧಾಧಿಪ।।

ದಮಯಂತಿಯು ಹೇಳಿದಳು: “ನಿಷಧಾಧಿಪ! ಕಲ್ಯಾಣ! ನನ್ನನ್ನು ಪಾಪಿಯೆಂದು ಪರಿಶಂಕಿಸಬೇಡ. ಯಾಕೆಂದರೆ ನಾನು ದೇವತೆಗಳನ್ನೂ ತಿರಸ್ಕರಿಸಿ ನಿನ್ನನ್ನು ವರಿಸಿದ್ದೇನೆ.

03075002a ತವಾಭಿಗಮನಾರ್ಥಂ ತು ಸರ್ವತೋ ಬ್ರಾಹ್ಮಣಾ ಗತಾಃ।
03075002c ವಾಕ್ಯಾನಿ ಮಮ ಗಾಥಾಭಿರ್ಗಾಯಮಾನಾ ದಿಶೋ ದಶ।।

ನಿನ್ನನ್ನು ಬರುವಂತೆ ಮಾಡಲೋಸುಗವೇ ಎಲ್ಲಕಡೆಗೂ ಬ್ರಾಹ್ಮಣರು ಹೋಗಿ ದಶ ದಿಶೆಗಳಲ್ಲಿಯೂ ನನ್ನ ವಾಖ್ಯಗಳನ್ನು ಹಾಡಿ ಹೇಳಿದರು.

03075003a ತತಸ್ತ್ವಾಂ ಬ್ರಾಹ್ಮಣೋ ವಿದ್ವಾನ್ಪರ್ಣಾದೋ ನಾಮ ಪಾರ್ಥಿವ।
03075003c ಅಭ್ಯಗಚ್ಚತ್ಕೋಸಲಾಯಾಂ ಋತುಪರ್ಣನಿವೇಶನೇ।।

ಪಾರ್ಥಿವ! ಈ ರೀತಿ ಪರ್ಣಾದ ಎಂಬ ಹೆಸರಿನ ವಿದ್ವಾನ್ ಬ್ರಾಹ್ಮಣನು ಕೋಸಲಕ್ಕೆ ಹೋದಾಗ ಅಲ್ಲಿ ಋತುಪರ್ಣನ ನಿವೇಶನದಲ್ಲಿ ನಿನ್ನನ್ನು ಕಂಡನು.

03075004a ತೇನ ವಾಕ್ಯೇ ಹೃತೇ ಸಮ್ಯಕ್ಪ್ರತಿವಾಕ್ಯೇ ತಥಾಹೃತೇ।
03075004c ಉಪಾಯೋಽಯಂ ಮಯಾ ದೃಷ್ಟೋ ನೈಷಧಾನಯನೇ ತವ।।

ನೈಷಧ! ನನ್ನ ವಾಖ್ಯಗಳಿಗೆ ಸರಿಯಾದ ಪ್ರತಿವಾಖ್ಯವನ್ನು ನೀನು ಹೇಳಿದಹಾಗೆಯೇ ಅವನು ತಂದ ನಂತರ ನಿನ್ನನ್ನು ಇಲ್ಲಿಗೆ ಬರುವಂತೆ ಮಾಡುವ ಉಪಾಯವನ್ನು ನಾನು ಕಂಡೆ.

03075005a ತ್ವಾಂ ಋತೇ ನ ಹಿ ಲೋಕೇಽನ್ಯ ಏಕಾಹ್ನಾ ಪೃಥಿವೀಪತೇ।
03075005c ಸಮರ್ಥೋ ಯೋಜನಶತಂ ಗಂತುಮಶ್ವೈರ್ನರಾಧಿಪ।।

ಪೃಥಿವೀಪತೇ! ನರಾಧಿಪ! ನಿನ್ನನ್ನು ಬಿಟ್ಟು ಈ ಲೋಕಗಳಲ್ಲಿ ಒಂದು ದಿನದಲ್ಲಿ ನೂರು ಯೋಜನೆಗಳನ್ನು ಅಶ್ವಗಳಮೇಲೆ ಪ್ರಯಾಣ ಮಾಡಲು ಸಮರ್ಥರಾದವರು ಬೇರೆ ಯಾರೊಬ್ಬರೂ ಇಲ್ಲ.

03075006a ತಥಾ ಚೇಮೌ ಮಹೀಪಾಲ ಭಜೇಽಹಂ ಚರಣೌ ತವ।
03075006c ಯಥಾ ನಾಸತ್ಕೃತಂ ಕಿಂ ಚಿನ್ಮನಸಾಪಿ ಚರಾಮ್ಯಹಂ।।

ಮಹೀಪಾಲ! ನಿನ್ನ ಈ ಚರಣಗಳನ್ನು ನಾನು ಹೇಗೆ ಅಪ್ಪಿ ಹಿಡಿದಿದ್ದೇನೋ ಹಾಗೆ ಎಂದೂ ನನ್ನ ಮನಸ್ಸಿನಲ್ಲಿಯೂ ನಿನಗೆ ಅಪಕೃತಿಯನ್ನು ಎಸೆಗಲಿಲ್ಲ.

03075007a ಅಯಂ ಚರತಿ ಲೋಕೇಽಸ್ಮಿನ್ಭೂತಸಾಕ್ಷೀ ಸದಾಗತಿಃ।
03075007c ಏಷ ಮುಂಚತು ಮೇ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ।।

ಒಮ್ಮೆಯಾದರೂ ನಾನು ಪಾಪದಿಂದ ನಡೆದುಕೊಂಡಿದ್ದರೆ ಸದಾ ಚಲಿಸುತ್ತಿರುವ, ಈ ಲೋಕದಲ್ಲಿ ಇರುವವೆಲ್ಲವಕ್ಕೂ ಸಾಕ್ಷಿಯಾಗಿರುವ, ಯಾವಾಗಲೂ ಚಲಿಸುತ್ತಿರುವ ವಾಯುವು ನನ್ನ ಪ್ರಾಣವನ್ನು ಹಾರಿಸಲಿ.

03075008a ತಥಾ ಚರತಿ ತಿಗ್ಮಾಂಶುಃ ಪರೇಣ ಭುವನಂ ಸದಾ।
03075008c ಸ ವಿಮುಂಚತು ಮೇ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ।।

ಅದೇರೀತಿ ನಾನು ಎಂದಾದರೂ ಪಾಪದಿಂದ ನಡೆದುಕೊಂಡಿದ್ದರೆ ಬೇರೆಯವರ ಮನೆಗಳಿಗೆ ಸದಾ ಹೋಗುತ್ತಿರುವ ಸೂರ್ಯನು ನನ್ನ ಪ್ರಾಣವನ್ನು ಬಿಡುಗಡೆಮಾಡಲಿ.

03075009a ಚಂದ್ರಮಾಃ ಸರ್ವಭೂತಾನಾಮಂತಶ್ಚರತಿ ಸಾಕ್ಷಿವತ್।
03075009c ಸ ವಿಮುಂಚತು ಮೇ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ।।

ಸರ್ವ ಭೂತಗಳೊಳಗೆ ಸಾಕ್ಷಿಯಾಗಿ ಸಂಚರಿಸುತ್ತಿರುವ ಚಂದ್ರಮನು ನಾನು ಎಂದಾದರೂ ಪಾಪದಿಂದ ನಡೆದುಕೊಂಡಿದ್ದರೆ ನನ್ನ ಪ್ರಾಣವನ್ನು ಕೊಂಡೊಯ್ಯಲಿ.

03075010a ಏತೇ ದೇವಾಸ್ತ್ರಯಃ ಕೃತ್ಸ್ನಂ ತ್ರೈಲೋಕ್ಯಂ ಧಾರಯಂತಿ ವೈ।
03075010c ವಿಬ್ರುವಂತು ಯಥಾಸತ್ಯಮೇತೇ ವಾದ್ಯ ತ್ಯಜಂತು ಮಾಂ।।

ಮೂರೂ ಲೋಕಗಳಿಗೆ ಧಾರಕ ಈ ಮೂರೂ ದೇವತೆಗಳು ಸತ್ಯವೇನೆಂದು ಹೇಳುವರು ಅಥವಾ ನನ್ನನ್ನು ಇಲ್ಲಿಯೇ ತ್ಯಜಿಸುವರು.”

03075011a ಏವಮುಕ್ತೇ ತತೋ ವಾಯುರಂತರಿಕ್ಷಾದಭಾಷತ।
03075011c ನೈಷಾ ಕೃತವತೀ ಪಾಪಂ ನಲ ಸತ್ಯಂ ಬ್ರವೀಮಿ ತೇ।।

ಹೀಗೆ ಹೇಳುತ್ತಿದ್ದಂತೆಯೇ ಅಂತರಿಕ್ಷದಲ್ಲಿ ವಾಯುವು ಹೇಳಿದನು: “ನಲ! ಇವಳಿಂದ ಯಾವ ಪಾಪವೂ ನಡೆದಿಲ್ಲ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

03075012a ರಾಜಂ ಶೀಲನಿಧಿಃ ಸ್ಫೀತೋ ದಮಯಂತ್ಯಾ ಸುರಕ್ಷಿತಃ।
03075012c ಸಾಕ್ಷಿಣೋ ರಕ್ಷಿಣಶ್ಚಾಸ್ಯಾ ವಯಂ ತ್ರೀನ್ಪರಿವತ್ಸರಾನ್।।

ರಾಜನ್! ದಮಯಂತಿಯು ತನ್ನ ಶೀಲನಿಧಿಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾಳೆ. ಈ ಮೂರು ವರ್ಷಗಳು ಅವಳನ್ನು ರಕ್ಷಿಸುತ್ತಾ ಬಂದಿರುವ ನಾವೇ ಅದಕ್ಕೆ ಸಾಕ್ಷಿ.

03075013a ಉಪಾಯೋ ವಿಹಿತಶ್ಚಾಯಂ ತ್ವದರ್ಥಮತುಲೋಽನಯಾ।
03075013c ನ ಹ್ಯೇಕಾಹ್ನಾ ಶತಂ ಗಂತಾ ತ್ವದೃತೇಽನ್ಯಃ ಪುಮಾನಿಹ।।

ನಿನಗಾಗಿ ಬಳಸಿದ ಈ ಉಪಾಯಕ್ಕೆ ಸರಿಸಾಟಿ ಇನ್ನೊಂದಿಲ್ಲ. ಯಾಕೆಂದರೆ ನಿನ್ನನ್ನು ಹೊರತು ಈ ಭೂಮಿಯಲ್ಲಿ ಒಂದೇ ದಿನದಲ್ಲಿ ನೂರು ಯೋಜನೆ ಹೋಗುವಂತವರು ಇನ್ನೊಬ್ಬರಿಲ್ಲ.

03075014a ಉಪಪನ್ನಾ ತ್ವಯಾ ಭೈಮೀ ತ್ವಂ ಚ ಭೈಮ್ಯಾ ಮಹೀಪತೇ।
03075014c ನಾತ್ರ ಶಂಕಾ ತ್ವಯಾ ಕಾರ್ಯಾ ಸಂಗಚ್ಚ ಸಹ ಭಾರ್ಯಯಾ।।

ಮಹೀಪತೇ! ಭೈಮಿಯು ನಿನ್ನನ್ನು ಪಡೆದಿದ್ದಾಳೆ. ನೀನು ಅವಳನ್ನು ಪಡೆದಿದ್ದೀಯೆ. ಈ ವಿಷಯದಲ್ಲಿ ಯಾವುದೇ ಸಂಶಯವನ್ನು ತಾಳದಿರು. ನಿನ್ನ ಭಾರ್ಯೆಯನ್ನು ಕೂಡು!”

03075015a ತಥಾ ಬ್ರುವತಿ ವಾಯೌ ತು ಪುಷ್ಪವೃಷ್ಟಿಃ ಪಪಾತ ಹ।
03075015c ದೇವದುಂದುಭಯೋ ನೇದುರ್ವವೌ ಚ ಪವನಃ ಶಿವಃ।।

ವಾಯುವು ಹೇಳುತ್ತಿದ್ದ ಹಾಗೆಯೇ ಪುಷ್ಪವೃಷ್ಟಿಯಾಯಿತು, ದೇವ ದುಂದುಭಿಗಳು ಮೊಳಗಿದವು ಮತ್ತು ಮಂಗಲಕರ ಗಾಳಿ ಬೀಸಿತು.

03075016a ತದದ್ಭುತತಮಂ ದೃಷ್ಟ್ವಾ ನಲೋ ರಾಜಾಥ ಭಾರತ।
03075016c ದಮಯಂತ್ಯಾಂ ವಿಶಂಕಾಂ ತಾಂ ವ್ಯಪಾಕರ್ಷದರಿಂದಮಃ।।

ಭಾರತ! ಆ ಅದ್ಭುತವನ್ನು ನೋಡಿ ಅರಿಂದಮ ರಾಜ ನಲನು ದಮಯಂತಿಯ ಮೇಲಿದ್ದ ಎಲ್ಲ ಶಂಕೆಗಳನ್ನು ಕಳೆದುಕೊಂಡನು.

03075017a ತತಸ್ತದ್ವಸ್ತ್ರಮರಜಃ ಪ್ರಾವೃಣೋದ್ವಸುಧಾಧಿಪಃ।
03075017c ಸಂಸ್ಮೃತ್ಯ ನಾಗರಾಜಾನಂ ತತೋ ಲೇಭೇ ವಪುಃ ಸ್ವಕಂ।।

ವಸುಧಾಧಿಪನು ನಾಗರಾಜನನ್ನು ಸಂಸ್ಮರಿಸುತ್ತಾ ಶುದ್ಧ ವಸ್ತ್ರವನ್ನು ಧರಿಸಿದನು ಮತ್ತು ತನ್ನ ಸ್ವ-ರೂಪವನ್ನು ಹೊಂದಿದನು.

03075018a ಸ್ವರೂಪಿಣಂ ತು ಭರ್ತಾರಂ ದೃಷ್ಟ್ವಾ ಭೀಮಸುತಾ ತದಾ।
03075018c ಪ್ರಾಕ್ರೋಶದುಚ್ಚೈರಾಲಿಂಗ್ಯ ಪುಣ್ಯಶ್ಲೋಕಮನಿಂದಿತಾ।।

ಸ್ವರೂಪಿ ತನ್ನ ಪತಿಯನ್ನು ನೋಡಿ ಅನಿಂದಿತೆ ಭೀಮಸುತೆಯು ಗಟ್ಟಿಯಾಗಿ ಕೂಗುತ್ತಾ ಪುಣ್ಯಶ್ಲೋಕನನ್ನು ಆಲಿಂಗಿಸಿದಳು.

03075019a ಭೈಮೀಮಪಿ ನಲೋ ರಾಜಾ ಭ್ರಾಜಮಾನೋ ಯಥಾ ಪುರಾ।
03075019c ಸಸ್ವಜೇ ಸ್ವಸುತೌ ಚಾಪಿ ಯಥಾವತ್ಪ್ರತ್ಯನಂದತ।।

ಮೊದಲಿನಂತೆ ಹೊಳೆಯುತ್ತಿದ್ದ ರಾಜ ನಲನೂ ಕೂಡ ಭೈಮಿಯನ್ನು ಆಲಂಗಿಸಿದನು ಮತ್ತು ತನ್ನ ಸುತರೀರ್ವರನ್ನೂ ಆನಂದದಿಂದ ಬರಮಾಡಿಕೊಂಡನು.

03075020a ತತಃ ಸ್ವೋರಸಿ ವಿನ್ಯಸ್ಯ ವಕ್ತ್ರಂ ತಸ್ಯ ಶುಭಾನನಾ।
03075020c ಪರೀತಾ ತೇನ ದುಃಖೇನ ನಿಶಶ್ವಾಸಾಯತೇಕ್ಷಣಾ।।

ಅನಂತರ ಆ ಆಯತಾಕ್ಷಿ ಶುಭಾನನೆಯು ತನ್ನ ಮುಖವನ್ನು ಅವನ ಎದೆಯ ಮೇಲಿರಿಸಿ ದುಃಖ ತುಂಬಿಬಂದು ನಿಟ್ಟುಸಿರು ಬಿಟ್ಟಳು.

03075021a ತಥೈವ ಮಲದಿಗ್ಧಾಂಗೀ ಪರಿಷ್ವಜ್ಯ ಶುಚಿಸ್ಮಿತಾ।
03075021c ಸುಚಿರಂ ಪುರುಷವ್ಯಾಘ್ರಂ ತಸ್ಥೌ ಸಾಶ್ರುಪರಿಪ್ಲುತಾ।।

ಕೊಳೆಯಿಂದ ಲೇಪಿತಗೊಂಡಿದ್ದ ಆ ಶುಚಿಸ್ಮಿತೆಯು ಕಣ್ಣೀರುತುಂಬಿದವಳಾಗಿ ಆ ಪುರುಷವ್ಯಾಘ್ರನನ್ನು ತುಂಬಾ ಹೊತ್ತು ಅಪ್ಪಿಕೊಂಡೇ ಇದ್ದಳು.

03075022a ತತಃ ಸರ್ವಂ ಯಥಾವೃತ್ತಂ ದಮಯಂತ್ಯಾ ನಲಸ್ಯ ಚ।
03075022c ಭೀಮಾಯಾಕಥಯತ್ಪ್ರೀತ್ಯಾ ವೈದರ್ಭ್ಯಾ ಜನನೀ ನೃಪ।।

ನೃಪ! ಆಗ ವೈದರ್ಭಿಯ ಜನನಿಯು ಭೀಮನಿಗೆ ದಮಯಂತಿ ಮತ್ತು ನಲರ ಮಧ್ಯೆ ನಡೆದುದೆಲ್ಲವನ್ನೂ ಹೇಳಿದಳು.

03075023a ತತೋಽಬ್ರವೀನ್ಮಹಾರಾಜಃ ಕೃತಶೌಚಮಹಂ ನಲಂ।
03075023c ದಮಯಂತ್ಯಾ ಸಹೋಪೇತಂ ಕಾಲ್ಯಂ ದ್ರಷ್ಟಾ ಸುಖೋಷಿತಂ।।

ಆಗ ಮಹಾರಾಜನು ಹೇಳಿದನು: “ಸುಖವಾಗಿ ವಿಶ್ರಮಿಸಿ ನಾಳೆ ಶೌಚಾದಿಗಳನ್ನು ಮುಗಿಸಿದನಂತರ ನಲ ಮತ್ತು ದಮಯಂತಿಯರನ್ನು ಒಟ್ಟಿಗೇ ನೋಡುತ್ತೇನೆ!”

03075024a ತತಸ್ತೌ ಸಹಿತೌ ರಾತ್ರಿಂ ಕಥಯಂತೌ ಪುರಾತನಂ।
03075024c ವನೇ ವಿಚರಿತಂ ಸರ್ವಮೂಷತುಮುದಿತೌ ನೃಪ।।

ಆ ರಾತ್ರಿಯನ್ನು ಅವರಿಬ್ಬರೂ ಹಿಂದೆ ಅರಣ್ಯದಲ್ಲಿ ನಡೆದುದನ್ನು ಪರಸ್ಪರರಲ್ಲಿ ಹೇಳಿಕೊಳ್ಳುತ್ತಾ ಸಂತೋಷದಿಂದ ಕಳೆದರು.

03075025a ಸ ಚತುರ್ಥೇ ತತೋ ವರ್ಷೇ ಸಂಗಮ್ಯ ಸಹ ಭಾರ್ಯಯಾ।
03075025c ಸರ್ವಕಾಮೈಃ ಸುಸಿದ್ಧಾರ್ಥೋ ಲಬ್ಧವಾನ್ಪರಮಾಂ ಮುದಂ।।

ಮೂರು ವರ್ಷಗಳ ನಂತರ ಭಾರ್ಯೆಯನ್ನು ಸೇರಿ ಅವನು ಸರ್ವಕಾಮಗಳನ್ನೂ ಪೂರೈಸಿದಂಥವನಾಗಿ ಪರಮ ಸುಖವನ್ನು ಹೊಂದಿದನು.

03075026a ದಮಯಂತ್ಯಪಿ ಭರ್ತಾರಮವಾಪ್ಯಾಪ್ಯಾಯಿತಾ ಭೃಶಂ।
03075026c ಅರ್ಧಸಂಜಾತಸಸ್ಯೇವ ತೋಯಂ ಪ್ರಾಪ್ಯ ವಸುಂಧರಾ।।

ದಮಯಂತಿಯೂ ಕೂಡ ತನ್ನ ಪತಿಯನ್ನು ಕೂಡಿ ಅರ್ಧವೇ ಬೆಳೆದಿರುವ ಸಸಿಗಳ ಮೇಲೆ ಮಳೆ ಬಿದ್ದರೆ ಹೇಗೆ ಭೂಮಿಯು ಹರ್ಷಗೊಳ್ಳುವುದೋ ಹಾಗೆ ಹರ್ಷಿತಳಾದಳು.

03075027a ಸೈವಂ ಸಮೇತ್ಯ ವ್ಯಪನೀತತಂದ್ರೀ । ಶಾಂತಜ್ವರಾ ಹರ್ಷವಿವೃದ್ಧಸತ್ತ್ವಾ।।
03075027c ರರಾಜ ಭೈಮೀ ಸಮವಾಪ್ತಕಾಮಾ । ಶೀತಾಂಶುನಾ ರಾತ್ರಿರಿವೋದಿತೇನ।।

ಅವಳ ಪತಿಯನ್ನು ಪುನಃ ಸೇರಿ, ಆಯಾಸವನ್ನು ಕಳೆದುಕೊಂಡು, ಜ್ವರವು ಶಾಂತವಾಗಿ, ಹೃದಯವು ಹರ್ಷಭರಿತವಾಗಿ, ಎಲ್ಲ ಆಸೆಗಳನ್ನೂ ಪೂರೈಸಿಕೊಂಡವಳಾಗಿ ಭೌಮಿಯು ಉದಯಿಸುತ್ತಿರುವ ಚಂದ್ರನೊಡನಿರುವ ರಾತ್ರಿಯಂತೆ ಕಂಗೊಳಿಸಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲದಮಯಂತೀಸಮಾಗಮೇ ಪಂಚಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲದಮಯಂತೀಸಮಾಗಮ ಎನ್ನುವ ಎಪ್ಪತ್ತೈದನೆಯ ಅಧ್ಯಾಯವು.