ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 74
ಸಾರ
ತಾಯಿಯ ಅನುಮತಿಯನ್ನು ಪಡೆದು ದಮಯಂತಿಯು ಬಾಹುಕನನ್ನು ಕರೆಯಿಸಿ ಪ್ರಶ್ನಿಸಿದುದು (1-13). ಕಾಶಾಯ ವಸ್ತ್ರವನ್ನು ಧರಿಸಿದ್ದ, ಜಟಿಲಳಾದ, ಕೊಳೆ-ಧೂಳಿನಿಂದ ಕಲುಷಿತಳಾದ ದಮಯಂತಿಯ ನೋಡಿ ಶೋಕಾರ್ತನಾದ ಬಾಹುಕನು ತಾನು ಯಾರೆಂದು ತನ್ನ ಕಷ್ಟಗಳಿಗೆ ಕಾರಣವೇನೆಂದೂ ಹೇಳಿಕೊಂಡು, ದಮಯಂತೀ ಪುನಃಸ್ವಯಂವರದ ಕುರಿತು ಕೇಳಿದುದು (14-24).
03074001 ಬೃಹದಶ್ವ ಉವಾಚ।
03074001a ಸರ್ವಂ ವಿಕಾರಂ ದೃಷ್ಟ್ವಾ ತು ಪುಣ್ಯಶ್ಲೋಕಸ್ಯ ಧೀಮತಃ।
03074001c ಆಗತ್ಯ ಕೇಶಿನೀ ಕ್ಷಿಪ್ರಂ ದಮಯಂತ್ಯೈ ನ್ಯವೇದಯತ್।।
ಬೃಹದಶ್ವನು ಹೇಳಿದನು: “ಧೀಮತ ಪುಣ್ಯಶ್ಲೋಕನ ಈ ಎಲ್ಲ ಭಾವುಕತೆಯನ್ನೂ ನೋಡಿದ ಕೇಶಿನಿಯು ಕ್ಷಿಪ್ರವಾಗಿ ಬಂದು ದಮಯಂತಿಯಲ್ಲಿ ನಿವೇದಿಸಿದಳು.
03074002a ದಮಯಂತೀ ತತೋ ಭೂಯಃ ಪ್ರೇಷಯಾಮಾಸ ಕೇಶಿನೀಂ।
03074002c ಮಾತುಃ ಸಕಾಶಂ ದುಃಖಾರ್ತಾ ನಲಶಂಕಾಸಮುತ್ಸುಕಾ।।
03074003a ಪರೀಕ್ಷಿತೋ ಮೇ ಬಹುಶೋ ಬಾಹುಕೋ ನಲಶಂಕಯಾ।
03074003c ರೂಪೇ ಮೇ ಸಂಶಯಸ್ತ್ವೇಕಃ ಸ್ವಯಮಿಚ್ಚಾಮಿ ವೇದಿತುಂ।।
ಅನಂತರ ಅವನು ನಲನೇ ಇರಬಹುದೆಂಬ ಶಂಕೆಯಿಂದ ಉತ್ಸುಕಳೂ, ದುಃಖಾರ್ತಳೂ ಆದ ದಮಯಂತಿಯು ಕೇಶಿನಿಯನ್ನು ತನ್ನ ತಾಯಿಯ ಬಳಿ ಹೀಗೆ ಹೇಳಿ ಕಳುಹಿಸಿದಳು: “ಅವನು ನಲನಿರಬಹುದೆಂಬ ಶಂಕೆಯಿಂದ ನಾನು ಬಾಹುಕನನ್ನು ಬಹು ರೀತಿಗಳಿಂದ ಪರೀಕ್ಷಿಸಿದ್ದೇನೆ. ಅವನ ರೂಪವೊಂದರಲ್ಲಿ ಮಾತ್ರ ಶಂಕೆಯಿದೆ. ಅದನ್ನು ನಾನೇ ಸ್ವತಃ ತಿಳಿಯಬೇಕಾಗಿದೆ.
03074004a ಸ ವಾ ಪ್ರವೇಶ್ಯತಾಂ ಮಾತರ್ಮಾಂ ವಾನುಜ್ಞಾತುಮರ್ಹಸಿ।
03074004c ವಿದಿತಂ ವಾಥ ವಾಜ್ಞಾತಂ ಪಿತುರ್ಮೇ ಸಂವಿಧೀಯತಾಂ।।
ಅಮ್ಮ! ಅವನನ್ನು ಹೇಗಾದರೂ ಇಲ್ಲಿಗೆ ಕರೆಯಿಸು ಅಥವಾ ನನಗಾದರೂ ಅಲ್ಲಿಗೆ ಹೋಗಲು ಅನುಮತಿಯನ್ನು ಕೊಡು. ಇದನ್ನು ತಂದೆಯವರಿಗೆ ತಿಳಿಸಿಯೂ ಅಥವಾ ತಿಳಿಸದೆಯೂ ಮಾಡಬಹುದು.”
03074005a ಏವಮುಕ್ತಾ ತು ವೈದರ್ಭ್ಯಾ ಸಾ ದೇವೀ ಭೀಮಮಬ್ರವೀತ್।
03074005c ದುಹಿತುಸ್ತಮಭಿಪ್ರಾಯಮನ್ವಜಾನಾಚ್ಚ ಪಾರ್ಥಿವಃ।।
ವೈದರ್ಭಿಯ ಈ ಮಾತುಗಳನ್ನು ಕೇಳಿದ ದೇವಿಯು ಭೀಮನಲ್ಲಿ ಹೇಳಲು ಆ ಪಾರ್ಥಿವನು ಮಗಳ ಅಭಿಪ್ರಾಯಕ್ಕೆ ಅನುಮತಿಯನ್ನು ಕೊಟ್ಟನು.
03074006a ಸಾ ವೈ ಪಿತ್ರಾಭ್ಯನುಜ್ಞಾತಾ ಮಾತ್ರಾ ಚ ಭರತರ್ಷಭ।
03074006c ನಲಂ ಪ್ರವೇಶಯಾಮಾಸ ಯತ್ರ ತಸ್ಯಾಃ ಪ್ರತಿಶ್ರಯಃ।।
ಭರತರ್ಷಭ! ತನ್ನ ಮಾತಾ ಪಿತೃಗಳ ಅನುಮತಿಯನ್ನು ಪಡೆದ ಅವಳು ತಾನು ವಾಸಿಸುತ್ತಿದ್ದಲ್ಲಿಗೆ ನಲನನ್ನು ಕರೆತರಿಸಿದಳು.
03074007a ತಂ ತು ದೃಷ್ಟ್ವಾ ತಥಾಯುಕ್ತಂ ದಮಯಂತೀ ನಲಂ ತದಾ।
03074007c ತೀವ್ರಶೋಕಸಮಾವಿಷ್ಟಾ ಬಭೂವ ವರವರ್ಣಿನೀ।।
ನಲನನ್ನು ನೋಡಿದ ಕೂಡಲೇ ಆ ವರವರ್ಣಿನಿ ದಮಯಂತಿಯು ತೀವ್ರ ಶೋಕಾವಿಷ್ಟಳಾದಳು.
03074008a ತತಃ ಕಾಷಾಯವಸನಾ ಜಟಿಲಾ ಮಲಪಂಕಿನೀ।
03074008c ದಮಯಂತೀ ಮಹಾರಾಜ ಬಾಹುಕಂ ವಾಕ್ಯಮಬ್ರವೀತ್।।
ಮಹಾರಾಜ! ಆಗ ಕಾಶಾಯ ವಸ್ತ್ರವನ್ನು ಧರಿಸಿದ್ದ, ಜಟಿಲಳಾದ, ಕೊಳೆ-ಧೂಳಿನಿಂದ ಕಲುಷಿತಳಾದ ದಮಯಂತಿಯು ಬಾಹುಕನನ್ನುದ್ದೇಶಿಸಿ ಮಾತನಾಡಿದಳು:
03074009a ದೃಷ್ಟಪೂರ್ವಸ್ತ್ವಯಾ ಕಶ್ಚಿದ್ಧರ್ಮಜ್ಞೋ ನಾಮ ಬಾಹುಕ।
03074009c ಸುಪ್ತಾಮುತ್ಸೃಜ್ಯ ವಿಪಿನೇ ಗತೋ ಯಃ ಪುರುಷಃ ಸ್ತ್ರಿಯಂ।।
“ಬಾಹುಕ! ನೀನು ಈ ಹಿಂದೆ ಮಲಗಿದ್ದ ಸ್ತ್ರೀಯನ್ನು ವಿಪಿನದಲ್ಲಿ ಬಿಟ್ಟುಹೋದ ಧರ್ಮಜ್ಞ ಎಂಬ ಹೆಸರಿನ ಪುರುಷನನ್ನು ಯಾವಾಗಲಾದರೂ ನೋಡಿದ್ದೀಯಾ?
03074010a ಅನಾಗಸಂ ಪ್ರಿಯಾಂ ಭಾರ್ಯಾಂ ವಿಜನೇ ಶ್ರಮಮೋಹಿತಾಂ।
03074010c ಅಪಹಾಯ ತು ಕೋ ಗಚ್ಚೇತ್ಪುಣ್ಯಶ್ಲೋಕಂ ಋತೇ ನಲಂ।।
ಪುಣ್ಯಶ್ಲೋಕ ನಲನನ್ನು ಬಿಟ್ಟು ಇನ್ನ್ಯಾರು ಮುಗ್ದಳಾದ, ಶ್ರಮದಿಂದ ಆಯಾಸಗೊಂಡಿದ್ದ ತನ್ನ ಪ್ರಿಯೆ ಹೆಂಡತಿಯನ್ನು ವಿಜನ ಪ್ರದೇಶದಲ್ಲಿ ಬಿಟ್ಟು ಹೋಗುತ್ತಾರೆ?
03074011a ಕಿಂ ನು ತಸ್ಯ ಮಯಾ ಕಾರ್ಯಮಪರಾದ್ಧಂ ಮಹೀಪತೇಃ।
03074011c ಯೋ ಮಾಮುತ್ಸೃಜ್ಯ ವಿಪಿನೇ ಗತವಾನ್ನಿದ್ರಯಾ ಹೃತಾಂ।।
ನನ್ನಿಂದ ಯಾವ ಮಹಾ ಅಪರಾಧವು ಆಯಿತೆಂದು ಆ ಮಹೀಪತಿಯು ನಿದ್ರೆಯಲ್ಲಿ ಪರವಶಳಾಗಿದ್ದ ನನ್ನನ್ನು ವಿಪಿನದಲ್ಲಿ ಬಿಟ್ಟು ಹೋದ?
03074012a ಸಾಕ್ಷಾದ್ದೇವಾನಪಾಹಾಯ ವೃತೋ ಯಃ ಸ ಮಯಾ ಪುರಾ।
03074012c ಅನುವ್ರತಾಂ ಸಾಭಿಕಾಮಾಂ ಪುತ್ರಿಣೀಂ ತ್ಯಕ್ತವಾನ್ಕಥಂ।।
ಹಿಂದೆ ನಾನು ಸಾಕ್ಷಾತ್ ದೇವತೆಗಳನ್ನೇ ತಿರಸ್ಕರಿಸಿ ವರಿಸಿದ, ಅವನಲ್ಲೇ ಅನುವ್ರತಳಾದ, ಪುತ್ರಿಣಿ, ಅಭಿಕಾಮಿ ನನ್ನನ್ನು ಅವನು ಹೇಗೆ ಬಿಟ್ಟುಹೋದ?
03074013a ಅಗ್ನೌ ಪಾಣಿಗೃಹೀತಾಂ ಚ ಹಂಸಾನಾಂ ವಚನೇ ಸ್ಥಿತಾಂ।
03074013c ಭರಿಷ್ಯಾಮೀತಿ ಸತ್ಯಂ ಚ ಪ್ರತಿಶ್ರುತ್ಯ ಕ್ವ ತದ್ಗತಂ।।
ಅಗ್ನಿಯ ಮುಂದೆ ಕೈ ಹಿಡಿಯುವಾಗ ಮತ್ತು ಹಂಸಗಳಿಗೆ ಅವಳಿಗೆ ಬೆಂಬಾಲಕನಾಗಿರುತ್ತೇನೆ ಎಂದು ಕೊಟ್ಟ ವಚನವಾದರೂ ಎಲ್ಲಿಗೆ ಹೋಯಿತು?”
03074014a ದಮಯಂತ್ಯಾ ಬ್ರುವಂತ್ಯಾಸ್ತು ಸರ್ವಮೇತದರಿಂದಮ।
03074014c ಶೋಕಜಂ ವಾರಿ ನೇತ್ರಾಭ್ಯಾಮಸುಖಂ ಪ್ರಾಸ್ರವದ್ಬಹು।।
ಅರಿಂದಮ! ಈ ರೀತಿ ದಮಯಂತಿಯು ಹೇಳುತ್ತಿದ್ದಂತೆಯೇ ಅವಳ ಕಣ್ಣುಗಳಿಂದ ಶೋಕಜ ಕಣ್ಣೀರು ಧಾರಾಕಾರವಾಗಿ ಹರಿಯಿತು.
03074015a ಅತೀವ ಕೃಷ್ಣತಾರಾಭ್ಯಾಂ ರಕ್ತಾಂತಾಭ್ಯಾಂ ಜಲಂ ತು ತತ್।
03074015c ಪರಿಸ್ರವನ್ನಲೋ ದೃಷ್ಟ್ವಾ ಶೋಕಾರ್ತ ಇದಮಬ್ರವೀತ್।।
ಕೃಷ್ಣತಾರೆಗಳಂತೆ ಕೆಂಪಾಗಿದ್ದ ಆ ಕಣ್ಣುಗಳಲ್ಲಿ ನೀರು ಹರಿಯುತ್ತಿದ್ದುದನ್ನು ಕಂಡ ನಲನು ಶೋಕಾರ್ತನಾಗಿ ಹೇಳಿದನು:
03074016a ಮಮ ರಾಜ್ಯಂ ಪ್ರನಷ್ಟಂ ಯನ್ನಾಹಂ ತತ್ಕೃತವಾನ್ಸ್ವಯಂ।
03074016c ಕಲಿನಾ ತತ್ಕೃತಂ ಭೀರು ಯಚ್ಚ ತ್ವಾಮಹಮತ್ಯಜಂ।।
“ಭೀರು! ನಾನು ರಾಜ್ಯವನ್ನು ಕಳೆದುಕೊಂಡಿದ್ದುದು ನನ್ನ ಸ್ವಂತ ಕರ್ಮದಿಂದಲ್ಲ; ಅದೆಲ್ಲಾ ಆದದ್ದು ಕಲಿಯಿಂದ. ನಿನ್ನನ್ನು ನಾನು ತ್ಯಜಿಸಿದ್ದೂ ಅವನಿಂದಲೇ!
03074017a ತ್ವಯಾ ತು ಧರ್ಮಭೃಚ್ಛ್ರೇಷ್ಠೇ ಶಾಪೇನಾಭಿಹತಃ ಪುರಾ।
03074017c ವನಸ್ಥಯಾ ದುಃಖಿತಯಾ ಶೋಚಂತ್ಯಾ ಮಾಂ ವಿವಾಸಸಂ।।
ಧರ್ಮಭೃತೆ! ಶ್ರೇಷ್ಠಳಾದ ನೀನು ವನದಲ್ಲಿರುವಾಗ ನಿನ್ನಿಂದಲೇ ಹಿಂದೆ ಶಪಿತನಾದ ಅವನು ವಸ್ತ್ರಗಳನ್ನು ಕಳೆದುಕೊಂಡ ನನ್ನೊಡನೆ ದುಃಖಿತನಾಗಿ ಶೋಕಿತನಾಗಿದ್ದನು.
03074018a ಸ ಮಚ್ಚರೀರೇ ತ್ವಚ್ಚಾಪಾದ್ದಹ್ಯಮಾನೋಽವಸತ್ಕಲಿಃ।
03074018c ತ್ವಚ್ಚಾಪದಗ್ಧಃ ಸತತಂ ಸೋಽಗ್ನಾವಿವ ಸಮಾಹಿತಃ।।
ಅಂದಿನಿಂದಲೂ ಕಲಿಯು ನನ್ನ ದೇಹದಲ್ಲಿದ್ದುಕೊಂಡು ನಿನ್ನ ಶಾಪದಿಂದಾಗಿ ಸತತವಾಗಿ ದಹಿಸುತ್ತಿದ್ದನು.
03074019a ಮಮ ಚ ವ್ಯವಸಾಯೇನ ತಪಸಾ ಚೈವ ನಿರ್ಜಿತಃ।
03074019c ದುಃಖಸ್ಯಾಂತೇನ ಚಾನೇನ ಭವಿತವ್ಯಂ ಹಿ ನೌ ಶುಭೇ।।
ಈಗ ನಾನು ನನ್ನ ಪ್ರಯತ್ನ ಮತ್ತು ತಪಸ್ಸಿನಿಂದ ಅವನನ್ನು ಜಯಿಸಿದ್ದೇನೆ. ಶುಭೇ! ನಮ್ಮ ಈ ದುಃಖಕ್ಕೆ ಅಂತ್ಯವು ಇದ್ದೇ ಇದೆ.
03074020a ವಿಮುಚ್ಯ ಮಾಂ ಗತಃ ಪಾಪಃ ಸ ತತೋಽಹಮಿಹಾಗತಃ।
03074020c ತ್ವದರ್ಥಂ ವಿಪುಲಶ್ರೋಣಿ ನ ಹಿ ಮೇಽನ್ಯತ್ಪ್ರಯೋಜನಂ।।
ಆ ಪಾಪಿಯು ನನ್ನನ್ನು ಬಿಟ್ಟು ಹೊರಟು ಹೋದನು. ವಿಪುಲಶ್ರೇಣಿ! ಆನಂತರವೇ ನಾನು ನಿನಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಇನ್ನ್ಯಾವುದೂ ಉದ್ದೇಶವಿಲ್ಲ.
03074021a ಕಥಂ ನು ನಾರೀ ಭರ್ತಾರಮನುರಕ್ತಮನುವ್ರತಂ।
03074021c ಉತ್ಸೃಜ್ಯ ವರಯೇದನ್ಯಂ ಯಥಾ ತ್ವಂ ಭೀರು ಕರ್ಹಿ ಚಿತ್।।
ಭೀರು! ಆದರೆ, ಅನುರಕ್ತ ಮತ್ತು ಅನುವ್ರತ ಪತಿಯನ್ನು ತಿರಸ್ಕರಿಸಿ ನಿನ್ನ ಹಾಗಿನ ಒಬ್ಬ ನಾರಿಯು ಹೇಗೆ ಇನ್ನೊಬ್ಬನನ್ನು ವರಿಸಬಹುದು?
03074022a ದೂತಾಶ್ಚರಂತಿ ಪೃಥಿವೀಂ ಕೃತ್ಸ್ನಾಂ ನೃಪತಿಶಾಸನಾತ್।
03074022c ಭೈಮೀ ಕಿಲ ಸ್ಮ ಭರ್ತಾರಂ ದ್ವಿತೀಯಂ ವರಯಿಷ್ಯತಿ।।
03074023a ಸ್ವೈರವೃತ್ತಾ ಯಥಾಕಾಮಮನುರೂಪಮಿವಾತ್ಮನಃ।
03074023c ಶ್ರುತ್ವೈವ ಚೈವಂ ತ್ವರಿತೋ ಭಾಂಗಸ್ವರಿರುಪಸ್ಥಿತಃ।।
ಪೃಥಿವಿಯನ್ನೆಲ್ಲಾ ತಿರುಗುತ್ತಿದ್ದ ದೂತರು ನೃಪಶಾಸನದಂತೆ ಭೈಮಿಯು ತನ್ನ ಬಯಕೆಯಂತೆಯೇ ತನಗೆ ಅನುರೂಪ ಎರಡನೆಯ ಪತಿಯನ್ನು ವರಿಸುವವಳಿದ್ದಾಳೆ ಎಂದು ಹೇಳಿದರು. ಅದನ್ನು ಕೇಳಿದ ತಕ್ಷಣವೇ ಭಾಂಗಸ್ವರಿಯು ತ್ವರಿತದಿಂದ ಇಲ್ಲಿಗೆ ಬಂದಿದ್ದಾನೆ.”
03074024a ದಮಯಂತೀ ತು ತಚ್ಛೃತ್ವಾ ನಲಸ್ಯ ಪರಿದೇವಿತಂ।
03074024c ಪ್ರಾಂಜಲಿರ್ವೇಪಮಾನಾ ಚ ಭೀತಾ ವಚನಮಬ್ರವೀತ್।।
ನಲನ ಆ ಪರಿವೇದನೆಯನ್ನು ಕೇಳಿದ ದಮಯಂತಿಯು ಭೀತಳಾಗಿ, ನಡುಗುತ್ತಾ, ಕೈ ಮುಗಿದು ಈ ಮಾತುಗಳನ್ನು ಹೇಳಿದಳು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲದಮಯಂತೀಸಮಾಗಮೇ ಚತುಃಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲದಮಯಂತೀ ಸಮಾಗಮ ಎನ್ನುವ ಎಪ್ಪತ್ತ್ನಾಲ್ಕನೆಯ ಅಧ್ಯಾಯವು.