ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 73
ಸಾರ
ಅವನು ಮಾಡುವುದನ್ನು ನೋಡಿಕೊಂಡು ಬಾ ಎಂದು ದಮಯಂತಿಯು ಕೇಶಿನಿಯನ್ನು ಪುನಃ ಬಾಹುಕನಲ್ಲಿಗೆ ಕಳುಹಿಸುವುದು (1-5). ಬಾಹುಕನಲ್ಲಿ ತಾನು ಕಂಡ ವಿಶೇಷ ಗುಣಶಕ್ತಿಗಳನ್ನು ಕೇಶಿನಿಯು ದಮಯಂತಿಗೆ ವರದಿ ಮಾಡಿದುದು (6-17). ಅವನು ಅಡುಗೆ ಮಾಡಿದ ಮಾಂಸವನ್ನು ಅವನಿಗೆ ತಿಳಿಯದಂತೆ ತೆಗೆದುಕೊಂಡು ಬಾ ಎಂದು ಪುನಃ ಕೇಶಿನಿಯನ್ನು ಕಳುಹಿಸಿ, ಮಾಂಸದ ತುಂಡನ್ನು ತಿಂದು ಬಾಹುಕನು ನಲನೇ ಎಂದು ದಮಯಂತಿಯು ನಿರ್ಧರಿಸಿದುದು (18-22). ತನ್ನ ಮಕ್ಕಳನ್ನು ಕೇಶಿನಿಯೊಡನೆ ಕಳುಹಿಸಲು ಬಾಹುಕನು ಮಕ್ಕಳನ್ನು ಬಿಗಿದಪ್ಪಿ ರೋದಿಸುವುದು (23-28).
03073001 ಬೃಹದಶ್ವ ಉವಾಚ।
03073001a ದಮಯಂತೀ ತು ತಚ್ಛೃತ್ವಾ ಭೃಶಂ ಶೋಕಪರಾಯಣಾ।
03073001c ಶಂಕಮಾನಾ ನಲಂ ತಂ ವೈ ಕೇಶಿನೀಮಿದಮಬ್ರವೀತ್।।
ಬೃಹದಶ್ವನು ಹೇಳಿದನು: “ಶೋಕಪರಾಯಣೆ ದಮಯಂತಿಯು ಅದನ್ನು ಕೇಳಿ ಅವನು ನಲನೇ ಇರಬಹುದೆಂದು ಶಂಕಿಸಿ ಕೇಶಿನಿಯಲ್ಲಿ ಹೇಳಿದಳು:
03073002a ಗಚ್ಚ ಕೇಶಿನಿ ಭೂಯಸ್ತ್ವಂ ಪರೀಕ್ಷಾಂ ಕುರು ಬಾಹುಕೇ।
03073002c ಆಬ್ರುವಾಣಾ ಸಮೀಪಸ್ಥಾ ಚರಿತಾನ್ಯಸ್ಯ ಲಕ್ಷಯ।।
“ಕೇಶಿನಿ! ಹೋಗು. ಬಾಹುಕನ ಕುರಿತು ಇನ್ನೂ ಪರೀಕ್ಷೆ ಮಾಡು. ಏನನ್ನೂ ಹೇಳಬೇಡ; ಆದರೆ ಅವನ ಹತ್ತಿರವೇ ಇದ್ದು ಅವನು ಮಾಡುವುದನ್ನು ಗಮನಿಸು.
03073003a ಯದಾ ಚ ಕಿಂ ಚಿತ್ಕುರ್ಯಾತ್ಸ ಕಾರಣಂ ತತ್ರ ಭಾಮಿನಿ।
03073003c ತತ್ರ ಸಂಚೇಷ್ಟಮಾನಸ್ಯ ಸಂಲಕ್ಷ್ಯಂ ತೇ ವಿಚೇಷ್ಟಿತಂ।।
ಭಾಮಿನಿ! ಅವನು ಏನಾದರೂ ವಿಶಿಷ್ಟವಾದದ್ದನ್ನು ಮಾಡಿದರೆ ಅವನು ಯಾಕೆ ಮತ್ತು ಎಂದು ಹಾಗೆ ಮಾಡಿದ ಎಂದು ಸರಿಯಾಗಿ ಗಮನಿಸು.
03073004a ನ ಚಾಸ್ಯ ಪ್ರತಿಬಂಧೇನ ದೇಯೋಽಗ್ನಿರಪಿ ಭಾಮಿನಿ।
03073004c ಯಾಚತೇ ನ ಜಲಂ ದೇಯಂ ಸಮ್ಯಗತ್ವರಮಾಣಯಾ।।
ಭಾಮಿನಿ! ಅವನನ್ನು ಪ್ರತಿಬಂಧಿಸುವುದಕ್ಕಾಗಿ ಅವನಿಗೆ ಅಗ್ನಿಯನ್ನು ಕೂಡ ಕೊಡಬೇಡ; ನೀರನ್ನು ಕೇಳಿದರೆ ಅದನ್ನೂ ಕೊಡಬೇಡ. ನಿಧಾನವಾಗಿ ಇವನ್ನೆಲ್ಲ ಮಾಡು.
03073005a ಏತತ್ಸರ್ವಂ ಸಮೀಕ್ಷ್ಯ ತ್ವಂ ಚರಿತಂ ಮೇ ನಿವೇದಯ।
03073005c ಯಚ್ಚಾನ್ಯದಪಿ ಪಶ್ಯೇಥಾಸ್ತಚ್ಚಾಖ್ಯೇಯಂ ತ್ವಯಾ ಮಮ।।
ಅವನು ಮಾಡುವುದೆಲ್ಲವನ್ನೂ ನೋಡಿ ನನ್ನಲ್ಲಿಗೆ ಬಂದು ಹೇಳು. ಮತ್ತಿನ್ನೇನಾದರೂ ನಡೆದರೂ ನನ್ನಲ್ಲಿಗೆ ಬಂದು ಹೇಳು.”
03073006a ದಮಯಂತ್ಯೈವಮುಕ್ತಾ ಸಾ ಜಗಾಮಾಥಾಶು ಕೇಶಿನೀ।
03073006c ನಿಶಾಮ್ಯ ಚ ಹಯಜ್ಞಸ್ಯ ಲಿಂಗಾನಿ ಪುನರಾಗಮತ್।।
03073007a ಸಾ ತತ್ಸರ್ವಂ ಯಥಾವೃತ್ತಂ ದಮಯಂತ್ಯೈ ನ್ಯವೇದಯತ್।
03073007c ನಿಮಿತ್ತಂ ಯತ್ತದಾ ದೃಷ್ಟಂ ಬಾಹುಕೇ ದಿವ್ಯಮಾನುಷಂ।।
ದಮಯಂತಿಯು ಹೀಗೆ ಹೇಳಿದ ನಂತರ ಕೇಶಿನಿಯು ಬೇಗನೆ ಹೋದಳು ಮತ್ತು ಆ ಹಯಜ್ಞನ ಲಕ್ಷಣಗಳನ್ನೆಲ್ಲಾ ಗಮನಿಸಿ ಮರಳಿ ಬಂದು ಆ ಬಾಹುಕನಲ್ಲಿ ಕಂಡ ದೇವ ಮತ್ತು ಮಾನುಷ ನಿಮಿತ್ತಗಳೆಲ್ಲವನ್ನೂ ಯಥಾವತ್ತಾಗಿ ದಮಯಂತಿಯಲ್ಲಿ ನಿವೇದಿಸಿದಳು.
03073008 ಕೇಶಿನ್ಯುವಾಚ।
03073008a ದೃಢಂ ಶುಚ್ಯುಪಚಾರೋಽಸೌ ನ ಮಯಾ ಮಾನುಷಃ ಕ್ವ ಚಿತ್।
03073008c ದೃಷ್ಟಪೂರ್ವಃ ಶ್ರುತೋ ವಾಪಿ ದಮಯಂತಿ ತಥಾವಿಧಃ।।
ಕೇಶಿನಿಯು ಹೇಳಿದಳು: “ದಮಯಂತಿ! ಇಷ್ಟೊಂದು ಧೃಢನಾಗಿರುವ ಮತ್ತು ಉಚ್ಛನಾಗಿರುವ ಬೇರೆ ಯಾವ ಮನುಷ್ಯನನ್ನು ಈ ಹಿಂದೆ ನಾನು ಕೇಳಿರಲಿಲ್ಲ ಮತ್ತು ನೋಡಿಯೂ ಇರಲಿಲ್ಲ.
03073009a ಹ್ರಸ್ವಮಾಸಾದ್ಯ ಸಂಚಾರಂ ನಾಸೌ ವಿನಮತೇ ಕ್ವ ಚಿತ್।
03073009c ತಂ ತು ದೃಷ್ಟ್ವಾ ಯಥಾಸಂಗಮುತ್ಸರ್ಪತಿ ಯಥಾಸುಖಂ।
03073009e ಸಂಕಟೇಽಪ್ಯಸ್ಯ ಸುಮಹದ್ವಿವರಂ ಜಾಯತೇಽಧಿಕಂ।।
ಗಿಡ್ಡವಾದ ಬಾಗಿಲಿನಿಂದ ಬಂದರೆ ತನ್ನ ತಲೆಯನ್ನು ಅವನು ತಗ್ಗಿಸುವುದಿಲ್ಲ. ಆದರೆ ಮೇಲ್ಮುಚ್ಚುಗೆಯೇ ಅವನು ಸುಖವಾಗಿ ಹೋಗಲಿ ಎಂದು ಮೇಲೇರುತ್ತದೆ. ಕಿರಿದಾದ ಪ್ರವೇಶದ್ವಾರವು ಅವನಿಗಾಗಿ ತಾನಗಿಯೇ ಅಗಲವಾಗುತ್ತದೆ.
03073010a ಋತುಪರ್ಣಸ್ಯ ಚಾರ್ಥಾಯ ಭೋಜನೀಯಮನೇಕಶಃ।
03073010c ಪ್ರೇಷಿತಂ ತತ್ರ ರಾಜ್ಞಾ ಚ ಮಾಂಸಂ ಸುಬಹು ಪಾಶವಂ।।
ರಾಜನು ಋತುಪರ್ಣನಿಗಾಗಿ ಅನೇಕ ಆಹಾರ ಪದಾರ್ಥಗಳನ್ನು ಮತ್ತು ಮಾಂಸಗಳನ್ನು ಕಳುಹಿಸಿದ್ದಾನೆ. ಅವುಗಳನ್ನು ತೊಳೆಯಲು ಅಲ್ಲಿ ಒಂದು ತೊಟ್ಟಿಯೂ ಇದೆ.
03073011a ತಸ್ಯ ಪ್ರಕ್ಷಾಲನಾರ್ಥಾಯ ಕುಂಭಸ್ತತ್ರೋಪಕಲ್ಪಿತಃ।
03073011c ಸ ತೇನಾವೇಕ್ಷಿತಃ ಕುಂಭಃ ಪೂರ್ಣ ಏವಾಭವತ್ತದಾ।।
03073012a ತತಃ ಪ್ರಕ್ಷಾಲನಂ ಕೃತ್ವಾ ಸಮಧಿಶ್ರಿತ್ಯ ಬಾಹುಕಃ।
03073012c ತೃಣಮುಷ್ಟಿಂ ಸಮಾದಾಯ ಆವಿಧ್ಯೈನಂ ಸಮಾದಧತ್।।
03073013a ಅಥ ಪ್ರಜ್ವಲಿತಸ್ತತ್ರ ಸಹಸಾ ಹವ್ಯವಾಹನಃ।
03073013c ತದದ್ಭುತತಮಂ ದೃಷ್ಟ್ವಾ ವಿಸ್ಮಿತಾಹಮಿಹಾಗತಾ।।
ಅವನ ದೃಷ್ಟಿಮಾತ್ರದಿಂದಲೇ ಆ ಕುಂಭವು ನೀರಿನಿಂದ ತುಂಬಿಕೊಂಡಿತು. ಬಾಹುಕನು ಮಾಂಸವನ್ನು ತೊಳೆದಿಟ್ಟು, ಒಂದು ಮುಷ್ಠಿ ಕಟ್ಟಿಗೆಯನ್ನು ಹಿಡಿದು, ತುಂಡುಮಾಡಿ ಗುಂಪಿನಲ್ಲಿ ಇಟ್ಟೊಡನೆಯೇ ಒಮ್ಮಿಂದೊಮ್ಮೆಲೇ ಹವ್ಯವಾಹನನು ಅದರಲ್ಲಿ ಪ್ರಜ್ವಲಿಸಲು ಪ್ರಾರಂಭಿಸಿದನು. ಆ ಅದ್ಭುತವನ್ನು ಕಂಡು ವಿಸ್ಮಿತನಾದ ನಾನು ಇಲ್ಲಿಗೆ ಬಂದಿದ್ದೇನೆ.
03073014a ಅನ್ಯಚ್ಚ ತಸ್ಮಿನ್ಸುಮಹದಾಶ್ಚರ್ಯಂ ಲಕ್ಷಿತಂ ಮಯಾ।
03073014c ಯದಗ್ನಿಮಪಿ ಸಂಸ್ಪೃಶ್ಯ ನೈವ ದಃಯತ್ಯಸೌ ಶುಭೇ।।
ಅಲ್ಲಿ ಇನ್ನೊಂದು ಸುಮಹದಾಶ್ಚರ್ಯವನ್ನು ನೋಡಿದೆ: ಶುಭೇ! ಅಗ್ನಿಯನ್ನು ಸ್ಪರ್ಷಮಾಡಿದರೂ ಅವನನ್ನು ಸುಡಲಿಲ್ಲ.
03073015a ಚಂದೇನ ಚೋದಕಂ ತಸ್ಯ ವಹತ್ಯಾವರ್ಜಿತಂ ದ್ರುತಂ।
03073015c ಅತೀವ ಚಾನ್ಯತ್ಸುಮಹದಾಶ್ಚರ್ಯಂ ದೃಷ್ಟವತ್ಯಹಂ।।
03073016a ಯತ್ಸ ಪುಷ್ಪಾಣ್ಯುಪಾದಾಯ ಹಸ್ತಾಭ್ಯಾಂ ಮಮೃದೇ ಶನೈಃ।
03073016c ಮೃದ್ಯಮಾನಾನಿ ಪಾಣಿಭ್ಯಾಂ ತೇನ ಪುಷ್ಪಾಣಿ ತಾನ್ಯಥ।।
03073017a ಭೂಯ ಏವ ಸುಗಂಧೀನಿ ಹೃಷಿತಾನಿ ಭವಂತಿ ಚ।
03073017c ಏತಾನ್ಯದ್ಭುತಕಲ್ಪಾನಿ ದೃಷ್ಟ್ವಾಹಂ ದ್ರುತಮಾಗತಾ।।
ಅವನಿಗೆ ಬೇಕಾದಲಾಗಲೆಲ್ಲಾ ನೀರು ಒಮ್ಮಿಂದೊಮ್ಮೆಲೇ ಹರಿಯುತ್ತದೆ. ಇನ್ನೂ ಒಂದು ಸುಮದಾಶ್ವರ್ಯವನ್ನು ನೋಡಿದೆ: ಪುಷ್ಪಗಳನ್ನು ಕೈಯಲ್ಲಿ ಹಿಡಿದು ತಿಕ್ಕಿದರೂ ಆ ಹೂಗಳು ತಾಜಾ ಮತ್ತು ಸುಗಂಧಿತವಾಗುತ್ತವೆ. ಈ ಅದ್ಭುತಗಳನ್ನು ನೋಡಿದ ನಾನು ಬೇಗನೆ ಇಲ್ಲಿಗೆ ಬಂದೆ.””
03073018 ಬೃಹದಶ್ವ ಉವಾಚ।
03073018a ದಮಯಂತೀ ತು ತಚ್ಛೃತ್ವಾ ಪುಣ್ಯಶ್ಲೋಕಸ್ಯ ಚೇಷ್ಟಿತಂ।
03073018c ಅಮನ್ಯತ ನಲಂ ಪ್ರಾಪ್ತಂ ಕರ್ಮಚೇಷ್ಟಾಭಿಸೂಚಿತಂ।।
ಬೃಹದಶ್ವನು ಹೇಳಿದನು: “ಪುಣ್ಯಶ್ಲೋಕನ ಈ ಕೃತ್ಯಗಳನ್ನು ಕೇಳಿದ ದಮಯಂತಿಯು ನಲನು ಪ್ರಾಪ್ತನಾದನೆಂದು ಆ ಕರ್ಮಚೇಷ್ಟೆಗಳು ಸೂಚಿಸುತ್ತವೆ ಎಂದು ತೀರ್ಮಾನಿಸಿದಳು.
03073019a ಸಾ ಶಂಕಮಾನಾ ಭರ್ತಾರಂ ನಲಂ ಬಾಹುಕರೂಪಿಣಂ।
03073019c ಕೇಶಿನೀಂ ಶ್ಲಕ್ಷ್ಣಯಾ ವಾಚಾ ರುದತೀ ಪುನರಬ್ರವೀತ್।।
ತನ್ನ ಪತಿ ನಲನೇ ಬಾಹುಕನ ರೂಪಧರಿಸಿದ್ದಾನೆ ಎಂದು ಶಂಕಿಸಿ ರೋದಿಸಿದಳು ಮತ್ತು ಕೇಶಿನಿಗೆ ಮೃದು ವಾಕ್ಯಗಳಲ್ಲಿ ಹೇಳಿದಳು:
03073020a ಪುನರ್ಗಚ್ಚ ಪ್ರಮತ್ತಸ್ಯ ಬಾಹುಕಸ್ಯೋಪಸಂಸ್ಕೃತಂ।
03073020c ಮಹಾನಸಾಚ್ಶೃತಂ ಮಾಂಸಂ ಸಮಾದಾಯೈಹಿ ಭಾಮಿನಿ।।
“ಭಾಮಿನಿ! ಪುನಃ ಹೋಗು. ಬಾಹುಕನು ಗಮನಿಸದೇ ಇರುವಾಗ ಅಡುಗೆ ಮನೆಯಿಂದ ಅವನು ತಯಾರಿಸಿದ ಮಾಂಸವನ್ನು ಸ್ವಲ್ಪ ತೆಗೆದುಕೊಂಡು ಇಲ್ಲಿಗೆ ಬಾ!”
03073021a ಸಾ ಗತ್ವಾ ಬಾಹುಕೇ ವ್ಯಗ್ರೇ ತನ್ಮಾಂಸಮಪಕೃಷ್ಯ ಚ।
03073021c ಅತ್ಯುಷ್ಣಮೇವ ತ್ವರಿತಾ ತತ್ಕ್ಷಣಂ ಪ್ರಿಯಕಾರಿಣೀ।
03073021e ದಮಯಂತ್ಯೈ ತತಃ ಪ್ರಾದಾತ್ಕೇಶಿನೀ ಕುರುನಂದನ।।
ಕುರುನಂದನ! ಕೇಶಿನಿಯು ಹೋಗಿ, ಬಾಹುಕನು ಯಾವುದರಲ್ಲಿಯೋ ಮಗ್ನನಾಗಿರುವಾಗ ಬಿಸಿಬಿಸಿಯಾದ ಮಾಂಸದ ತುಂಡೊಂದನ್ನು ಪ್ರಿಯಕಾರಿಣಿ ದಮಯಂತಿಗೆಂದು ತೆಗೆದು ತಕ್ಷಣ ತಂದು ಕೊಟ್ಟಳು.
03073022a ಸೋಚಿತಾ ನಲಸಿದ್ಧಸ್ಯ ಮಾಂಸಸ್ಯ ಬಹುಶಃ ಪುರಾ।
03073022c ಪ್ರಾಶ್ಯ ಮತ್ವಾ ನಲಂ ಸೂದಂ ಪ್ರಾಕ್ರೋಶದ್ಭೃಶದುಃಖಿತಾ।।
ಹಿಂದೆ ನಲನು ತಯಾರಿಸಿದ ಮಾಂಸದ ರುಚಿಯನ್ನು ಬಹಳಷ್ಟು ಅರಿತಿದ್ದ ಅವಳು ಅದರ ರುಚಿನೋಡಿದ ಕೂಡಲೇ ಇದನ್ನು ತಯಾರಿಸಿದ್ದು ನಲನೇ ಹೌದು ಎಂದು ತಿಳಿದು ಬಹುದುಃಖಿತಳಾದಳು.
03073023a ವೈಕ್ಲವ್ಯಂ ಚ ಪರಂ ಗತ್ವಾ ಪ್ರಕ್ಷಾಲ್ಯ ಚ ಮುಖಂ ತತಃ।
03073023c ಮಿಥುನಂ ಪ್ರೇಷಯಾಮಾಸ ಕೇಶಿನ್ಯಾ ಸಹ ಭಾರತ।।
ಭಾರತ! ಬಹಳಷ್ಟು ರೋದಿಸಿದ ನಂತರ ಮುಖವನ್ನು ತೊಳೆದು, ತನ್ನ ಅವಳಿ ಮಕ್ಕಳನ್ನು ಕೇಶಿನಿಯ ಸಂಗಡ ಕಳುಹಿಸಿದಳು.
03073024a ಇಂದ್ರಸೇನಾಂ ಸಹ ಭ್ರಾತ್ರಾ ಸಮಭಿಜ್ಞಾಯ ಬಾಹುಕಃ।
03073024c ಅಭಿದ್ರುತ್ಯ ತತೋ ರಾಜಾ ಪರಿಷ್ವಜ್ಯಾಂಕಮಾನಯತ್।।
ಭ್ರಾತನೊಡನೆ ಇಂದ್ರಸೇನೆಯನ್ನು ಬಾಹುಕನು ಗುರುತಿಸಿದನು, ಮತ್ತು ರಾಜನು ಅವರಲ್ಲಿಗೆ ಓಡಿಹೋಗಿ ಬಿಗಿಯಾಗಿ ಅಪ್ಪಿಕೊಂಡನು.
03073025a ಬಾಹುಕಸ್ತು ಸಮಾಸಾದ್ಯ ಸುತೌ ಸುರಸುತೋಪಮೌ।
03073025c ಭೃಶಂ ದುಃಖಪರೀತಾತ್ಮಾ ಸಸ್ವರಂ ಪ್ರರುದೋದ ಹ।।
ಸುರಸುತರಂತಿದ್ದ ಮಕ್ಕಳನ್ನು ಸೇರಿದ ಬಾಹುಕನು ದುಃಖಪರಿತಾತ್ಮನಾಗಿ ಜೋರಾಗಿ ರೋದಿಸತೊಡಗಿದನು.
03073026a ನೈಷಧೋ ದರ್ಶಯಿತ್ವಾ ತು ವಿಕಾರಮಸಕೃತ್ತದಾ।
03073026c ಉತ್ಸೃಜ್ಯ ಸಹಸಾ ಪುತ್ರೌ ಕೇಶಿನೀಮಿದಮಬ್ರವೀತ್।।
ಈ ರೀತಿ ನೈಷಧನು ತನ್ನ ಭಾವನೆಗಳನ್ನು ಹಲವು ಬಾರಿ ತೋರಿಸುತ್ತಾ, ಒಮ್ಮೆಲೇ ಆ ಪುತ್ರರನ್ನು ಬಿಟ್ಟು ಕೇಶಿನಿಗೆ ಈ ರೀತಿ ಹೇಳಿದನು:
03073027a ಇದಂ ಸುಸದೃಶಂ ಭದ್ರೇ ಮಿಥುನಂ ಮಮ ಪುತ್ರಯೋಃ।
03073027c ತತೋ ದೃಷ್ಟ್ವೈವ ಸಹಸಾ ಬಾಷ್ಪಮುತ್ಸೃಷ್ಟವಾನಹಂ।।
“ಭದ್ರೆ! ಈ ಅವಳಿಗಳು ನನ್ನ ಮಕ್ಕಳ ಸುಸದೃಶರಾಗಿದ್ದಾರೆ. ಒಮ್ಮಿಂದೊಮ್ಮೆಲೇ ಅವರನ್ನು ನೋಡಿದಾಗ ಕಣ್ಣೀರುಹರಿಸಿಬಿಟ್ಟೆ!
03073028a ಬಹುಶಃ ಸಂಪತಂತೀಂ ತ್ವಾಂ ಜನಃ ಶಂಕೇತ ದೋಷತಃ।
03073028c ವಯಂ ಚ ದೇಶಾತಿಥಯೋ ಗಚ್ಚ ಭದ್ರೇ ನಮೋಽಸ್ತು ತೇ।।
ನೀನು ಇಲ್ಲಿಗೆ ಬಹಳಷ್ಟು ಸಾರಿ ಬರುತ್ತಿದ್ದೇಯೆ. ಜನರು ಕೆಟ್ಟದ್ದಾಗಿ ಯೋಚಿಸಬಹುದು. ನಾವು ಈ ದೇಶದಲ್ಲಿ ಅತಿಥಿಗಳು. ಹೋಗು ಭದ್ರೇ! ನಿನಗೆ ನನ್ನ ನಮನಗಳು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕನ್ಯಾಪುತ್ರದರ್ಶನೇ ತ್ರಿಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕನ್ಯಾಪುತ್ರದರ್ಶನ ಎನ್ನುವ ಎಪ್ಪತ್ತ್ಮೂರನೆಯ ಅಧ್ಯಾಯವು.