072 ನಲೋಪಾಖ್ಯಾನೇ ನಲಕೇಶಿನೀಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 72

ಸಾರ

ದೂತಿ ಕೇಶಿನಿಯು ಬಾಹುಕನಲ್ಲಿಗೆ ಹೋಗಿ ವಿಚಾರಿಸಿದ್ದುದು (1-22). ದುಃಖಿತನಾದ ಬಾಹುಕನು ದಮಯಂತಿಗೆ ಸಂದೇಶವನ್ನು ಕಳುಹಿಸುವುದು (23-30).

03072001 ದಮಯಂತ್ಯುವಾಚ।
03072001a ಗಚ್ಚ ಕೇಶಿನಿ ಜಾನೀಹಿ ಕ ಏಷ ರಥವಾಹಕಃ।
03072001c ಉಪವಿಷ್ಟೋ ರಥೋಪಸ್ಥೇ ವಿಕೃತೋ ಹ್ರಸ್ವಬಾಹುಕಃ।।

ದಮಯಂತಿಯು ಹೇಳಿದಳು: “ಕೇಶಿನಿ! ಹೋಗಿ ರಥದಲ್ಲಿ ಕುಳಿತಿದ್ದ ವಿಕೃತ, ಹೃಸ್ವಬಾಹಿಕ ಆ ರಥವಾಹಕನು ಯಾರೆಂದು ತಿಳಿದುಕೋ.

03072002a ಅಭ್ಯೇತ್ಯ ಕುಶಲಂ ಭದ್ರೇ ಮೃದುಪೂರ್ವಂ ಸಮಾಹಿತಾ।
03072002c ಪೃಚ್ಚೇಥಾಃ ಪುರುಷಂ ಹ್ಯೇನಂ ಯಥಾತತ್ತ್ವಮನಿಂದಿತೇ।।

ಭದ್ರೇ! ಅನಿಂದಿತೇ! ಅವನಲ್ಲಿಗೆ ಹೋಗಿ ಮೃದುವಾಗಿ ಅವನು ಕುಶಲದಿಂದ್ದಾನೆಯೇ ಕೇಳು. ಈ ಪುರುಷನು ಯಾರೆಂದು ಯಥಾವತ್ತಾಗಿ ಕೇಳಿ ತಿಳಿದುಕೋ.

03072003a ಅತ್ರ ಮೇ ಮಹತೀ ಶಂಕಾ ಭವೇದೇಷ ನಲೋ ನೃಪಃ।
03072003c ತಥಾ ಚ ಮೇ ಮನಸ್ತುಷ್ಟಿರ್ಹೃದಯಸ್ಯ ಚ ನಿರ್ವೃತಿಃ।।

ಅವನೇ ನೃಪ ನಲನಿರಬಹುದೆಂದು ಮಹತ್ತರ ಶಂಕೆ ನನ್ನಲ್ಲಿದೆ. ಯಾಕೆಂದರೆ ನನ್ನ ಮನಸ್ಸು ಸಂತೃಪ್ತಿಯಿಂದಿದೆ ಮತ್ತು ಹೃದಯವು ಶಾಂತವಾಗಿದೆ.

03072004a ಬ್ರೂಯಾಶ್ಚೈನಂ ಕಥಾಂತೇ ತ್ವಂ ಪರ್ಣಾದವಚನಂ ಯಥಾ।
03072004c ಪ್ರತಿವಾಕ್ಯಂ ಚ ಸುಶ್ರೋಣಿ ಬುಧ್ಯೇಥಾಸ್ತ್ವಮನಿಂದಿತೇ।।

ಅನಿಂದಿತೇ! ನೀನು ಮಾತನಾಡುವಾಗ ಪರ್ಣದನ ವಚನಗಳನ್ನೂ ಸೇರಿಸಿಕೋ ಮತ್ತು ಅವನಾಡಿದ ಪ್ರತಿಯೊಂದು ವಾಕ್ಯವನ್ನೂ ಸರಿಯಾಗಿ ಕೇಳಿ ತಿಳಿದುಕೋ.””

03072005 ಬೃಹದಶ್ವ ಉವಾಚ।
03072005a ಏವಂ ಸಮಾಹಿತಾ ಗತ್ವಾ ದೂತೀ ಬಾಹುಕಮಬ್ರವೀತ್।
03072005c ದಮಯಂತ್ಯಪಿ ಕಲ್ಯಾಣೀ ಪ್ರಾಸಾದಸ್ಥಾನ್ವವೈಕ್ಷತ।।

ಬೃಹದಶ್ವನು ಹೇಳಿದನು: “ಈ ರೀತಿ ದೂತಿಯು ಬಾಹುಕನನ್ನು ಸಮೀಪಿಸಿ ಅವನಲ್ಲಿ ಮಾತನಾಡಿದಳು. ಕಲ್ಯಾಣಿ ದಮಯಂತಿಯು ಗಚ್ಚಿನಮೇಲೆ ನಿಂತು ನೋಡುತ್ತಿದ್ದಳು.

03072006 ಕೇಶಿನ್ಯುವಾಚ।
03072006a ಸ್ವಾಗತಂ ತೇ ಮನುಷ್ಯೇಂದ್ರ ಕುಶಲಂ ತೇ ಬ್ರವೀಮ್ಯಹಂ।
03072006c ದಮಯಂತ್ಯಾ ವಚಃ ಸಾಧು ನಿಬೋಧ ಪುರುಷರ್ಷಭ।।
03072007a ಕದಾ ವೈ ಪ್ರಸ್ಥಿತಾ ಯೂಯಂ ಕಿಮರ್ಥಮಿಹ ಚಾಗತಾಃ।
03072007c ತತ್ತ್ವಂ ಬ್ರೂಹಿ ಯಥಾನ್ಯಾಯಂ ವೈದರ್ಭೀ ಶ್ರೋತುಮಿಚ್ಚತಿ।।

ಕೇಶಿನಿಯು ಹೇಳಿದಳು: “ಮನುಷ್ಯೇಂದ್ರ! ಪುರುಷರ್ಷಭ! ನಿನಗೆ ಸ್ವಾಗತ. ನಿನ್ನ ಕುಶಲವನ್ನು ಕೇಳುತ್ತಿದ್ದೇನೆ. ದಮಯಂತಿಯು ಒಂದು ಮಾತನ್ನು ಹೇಳಿ ಕಳುಹಿಸಿದ್ದಾಳೆ. ಗಮನವಿಟ್ಟು ಕೇಳು. ನೀವೆಲ್ಲರೂ ಎಂದು ಹೊರಟಿದ್ದಿರಿ ಮತ್ತು ಇಲ್ಲಿಗೆ ಏಕೆ ಆಗಮಿಸಿದ್ದೀರಿ? ನ್ಯಾಯವೆನಿಸಿದರೆ ಸತ್ಯವನ್ನು ಹೇಳು. ವೈದರ್ಭಿಯು ಕೇಳಲು ಇಚ್ಚಿಸುತ್ತಾಳೆ.”

03072008 ಬಾಹುಕ ಉವಾಚ।
03072008a ಶ್ರುತಃ ಸ್ವಯಂವರೋ ರಾಜ್ಞಾ ಕೌಸಲ್ಯೇನ ಯಶಸ್ವಿನಾ।
03072008c ದ್ವಿತೀಯೋ ದಮಯಂತ್ಯಾ ವೈ ಶ್ವೋಭೂತ ಇತಿ ಭಾಮಿನಿ।।

ಬಾಹುಕನು ಹೇಳಿದನು: “ಭಾಮಿನೀ! ಕೌಸಲದ ಯಶಸ್ವಿ ರಾಜನು ದಮಯಂತಿಯ ಎರಡನೆಯ ಸ್ವಯಂವರವು ನಡೆಯುತ್ತಿದೆ ಎಂದು ಕೇಳಿದನು.

03072009a ಶ್ರುತ್ವಾ ತಂ ಪ್ರಸ್ಥಿತೋ ರಾಜಾ ಶತಯೋಜನಯಾಯಿಭಿಃ।
03072009c ಹಯೈರ್ವಾತಜವೈರ್ಮುಖ್ಯೈರಹಮಸ್ಯ ಚ ಸಾರಥಿಃ।।

ಅದನ್ನು ಕೇಳಿದ ರಾಜನು ಶತಯೋಜನದೂರವನ್ನು ದಾಟುವ ವಾಯುವೇಗಗಳನ್ನುಳ್ಳ ಹಯಗಳೊಂದಿಗೆ ಹೊರಟನು. ನಾನು ಅವನ ಸಾರಥಿ.”

03072010 ಕೇಶಿನ್ಯುವಾಚ।
03072010a ಅಥ ಯೋಽಸೌ ತೃತೀಯೋ ವಃ ಸ ಕುತಃ ಕಸ್ಯ ವಾ ಪುನಃ।
03072010c ತ್ವಂ ಚ ಕಸ್ಯ ಕಥಂ ಚೇದಂ ತ್ವಯಿ ಕರ್ಮ ಸಮಾಹಿತಂ।।

ಕೇಶಿನಿಯು ಹೇಳಿದನು: “ನಿಮ್ಮಲ್ಲಿರುವ ಈ ಮೂರನೆಯವನು ಎಲ್ಲಿಯವನು ಮತ್ತು ಯಾರವನು? ಮತ್ತು ನೀನು ಯಾರು ಮತ್ತು ನಿನಗೆ ಈ ಕೆಲಸವು ಹೇಗೆ ಪ್ರಾಪ್ತವಾಯಿತು?”

03072011 ಬಾಹುಕ ಉವಾಚ।
03072011a ಪುಣ್ಯಶ್ಲೋಕಸ್ಯ ವೈ ಸೂತೋ ವಾರ್ಷ್ಣೇಯ ಇತಿ ವಿಶ್ರುತಃ।
03072011c ಸ ನಲೇ ವಿದ್ರುತೇ ಭದ್ರೇ ಭಾಂಗಸ್ವರಿಮುಪಸ್ಥಿತಃ।।

ಬಾಹುಕನು ಹೇಳಿದನು: “ಭದ್ರೇ! ಅವನು ಪುಣ್ಯಶ್ಲೋಕನ ಸೂತ; ವಾರ್ಷ್ಣೇಯನೆಂದು ಹೆಸರು. ನಲನು ಹೊರಟು ಹೋದ ನಂತರ ಅವನು ಭಾಂಗಸ್ವರಿಯಲ್ಲಿ ವಾಸಿಸುತ್ತಿದ್ದಾನೆ.

03072012a ಅಹಮಪ್ಯಶ್ವಕುಶಲಃ ಸೂದತ್ವೇ ಚ ಸುನಿಷ್ಠಿತಃ।
03072012c ಋತುಪರ್ಣೇನ ಸಾರಥ್ಯೇ ಭೋಜನೇ ಚ ವೃತಃ ಸ್ವಯಂ।।

ನಾನಾದರೂ ಓರ್ವ ಅಶ್ವಕುಶಲ ಮತ್ತು ಉತ್ತಮ ಅಡುಗೆಗಳನ್ನು ಮಾಡಬಲ್ಲವ. ಸ್ವಯಂ ಋತುಪರ್ಣನೇ ನನ್ನನ್ನು ಅವನ ಸಾರಥಿ ಮತ್ತು ಅಡುಗೆ ಭಟನನ್ನಾಗಿ ಇರಿಸಿಕೊಂಡಿದ್ದಾನೆ.”

03072013 ಕೇಶಿನ್ಯುವಾಚ।
03072013a ಅಥ ಜಾನಾತಿ ವಾರ್ಷ್ಣೇಯಃ ಕ್ವ ನು ರಾಜಾ ನಲೋ ಗತಃ।
03072013c ಕಥಂ ಚಿತ್ತ್ವಯಿ ವೈತೇನ ಕಥಿತಂ ಸ್ಯಾತ್ತು ಬಾಹುಕ।।

ಕೇಶಿನಿಯು ಹೇಳಿದಳು: “ಬಾಹುಕ! ರಾಜ ನಲನು ಎಲ್ಲಿಗೆ ಹೋದನೆಂದು ವಾರ್ಷ್ಣೇಯನಿಗೆ ತಿಳಿದಿದೆಯೇ? ನಿನ್ನ ಸಮ್ಮುಖದಲ್ಲಿ ಅವನು ಎಂದಾದರೂ ಅವನ ಕುರಿತು ಹೇಳಿದ್ದುಂಟೇ?”

03072014 ಬಾಹುಕ ಉವಾಚ।
03072014a ಇಹೈವ ಪುತ್ರೌ ನಿಕ್ಷಿಪ್ಯ ನಲಸ್ಯಾಶುಭಕರ್ಮಣಃ।
03072014c ಗತಸ್ತತೋ ಯಥಾಕಾಮಂ ನೈಷ ಜಾನಾತಿ ನೈಷಧಂ।।

ಬಾಹುಕನು ಹೇಳಿದನು: “ಆ ಅಶುಭಕರ್ಮಿ ನಲನ ಪುತ್ರರನ್ನು ಇಲ್ಲಿಯೇ ಇರಿಸಿ ಅವನು ಹೊರಟುಹೋದ. ನೈಷಧನು ಎಲ್ಲಿದ್ದಾನೆಂದು ಅವನಿಗೂ ಗೊತ್ತಿಲ್ಲ.

03072015a ನ ಚಾನ್ಯಃ ಪುರುಷಃ ಕಶ್ಚಿನ್ನಲಂ ವೇತ್ತಿ ಯಶಸ್ವಿನಿ।
03072015c ಗೂಢಶ್ಚರತಿ ಲೋಕೇಽಸ್ಮಿನ್ನಷ್ಟರೂಪೋ ಮಹೀಪತಿಃ।।

ಯಶಸ್ವಿನಿ! ನಲನು ಎಲ್ಲಿದ್ದಾನೆ ಎಂದು ಬೇರೆ ಯಾರಿಗೂ ಗೊತ್ತಿಲ್ಲ. ಅವನು ಎಲ್ಲಿಯೋ ಗೂಢವಾಗಿ ವಾಸಿಸುತ್ತಿರಬಹುದು. ಆ ಮಹೀಪತಿಯು ಅದೃಶ್ಯನಾಗಿದ್ದಾನೆ.

03072016a ಆತ್ಮೈವ ಹಿ ನಲಂ ವೇತ್ತಿ ಯಾ ಚಾಸ್ಯ ತದನಂತರಾ।
03072016c ನ ಹಿ ವೈ ತಾನಿ ಲಿಂಗಾನಿ ನಲಂ ಶಂಸಂತಿ ಕರ್ಹಿ ಚಿತ್।।

ತದನಂತರದಲ್ಲಿ ಇವನೇ ನಲನೆಂದು ಹೇಳುವ ಯಾವರೀತಿಯ ಲಕ್ಷಣಗಳೂ ಉಳಿಯಲಿಲ್ಲ. ಅವನಿಗೆ ಮತ್ತು ಅವನವಳಿಗೆ ಮಾತ್ರ ಅವನ ಲಕ್ಷಣಗಳು ಗೊತ್ತು.”

03072017 ಕೇಶಿನ್ಯುವಾಚ।
03072017a ಯೋಽಸಾವಯೋಧ್ಯಾಂ ಪ್ರಥಮಂ ಗತವಾನ್ಬ್ರಾಹ್ಮಣಸ್ತದಾ।
03072017c ಇಮಾನಿ ನಾರೀವಾಕ್ಯಾನಿ ಕಥಯಾನಃ ಪುನಃ ಪುನಃ।।

ಕೇಶಿನಿಯು ಹೇಳಿದಳು: “ಮೊದಲು ಅಯೋಧ್ಯೆಗೆ ಬಂದಿದ್ದ ಬ್ರಾಹ್ಮಣನೊಬ್ಬನು ಓರ್ವ ನಾರಿಯ ಈ ಮಾತುಗಳನ್ನು ಪುನಃ ಪುನಃ ಹೇಳುತ್ತಿದ್ದನು:

03072018a ಕ್ವ ನು ತ್ವಂ ಕಿತವ ಚಿತ್ತ್ವಾ ವಸ್ತ್ರಾರ್ಧಂ ಪ್ರಸ್ಥಿತೋ ಮಮ।
03072018c ಉತ್ಸೃಜ್ಯ ವಿಪಿನೇ ಸುಪ್ತಾಮನುರಕ್ತಾಂ ಪ್ರಿಯಾಂ ಪ್ರಿಯ।।

“ಜೂಜುಗಾರ! ನನ್ನ ವಸ್ತ್ರವನ್ನು ಕತ್ತರಿಸಿ ಹೊರಟುಹೋದ ನೀನು ಎಲ್ಲಿದ್ದೀಯೆ? ಪ್ರಿಯ! ಮಲಗಿ ನಿದ್ರಿಸುತ್ತಿದ್ದ ಪ್ರಿಯೆಯನ್ನು ವಿಪಿನದಲ್ಲಿಯೇ ಬಿಟ್ಟು ಹೋದೆಯಲ್ಲ?

03072019a ಸಾ ವೈ ಯಥಾ ಸಮಾದಿಷ್ಟಾ ತತ್ರಾಸ್ತೇ ತ್ವತ್ಪ್ರತೀಕ್ಷಿಣೀ।
03072019c ದಹ್ಯಮಾನಾ ದಿವಾರಾತ್ರಂ ವಸ್ತ್ರಾರ್ಧೇನಾಭಿಸಂವೃತಾ।।

ನೀನು ತೋರಿಸಿದಲ್ಲಿಯೇ ಅವಳು ಹಗಲು ರಾತ್ರಿಯೂ ದಹಿಸುತ್ತಾ ಅರ್ಧವಸ್ತ್ರವನ್ನೇ ಧರಿಸಿ ನಿನ್ನನ್ನು ಪ್ರತೀಕ್ಷಿಸುತ್ತಾ ಇದ್ದಾಳೆ.

03072020a ತಸ್ಯಾ ರುದಂತ್ಯಾಃ ಸತತಂ ತೇನ ದುಃಖೇನ ಪಾರ್ಥಿವ।
03072020c ಪ್ರಸಾದಂ ಕುರು ವೈ ವೀರ ಪ್ರತಿವಾಕ್ಯಂ ಪ್ರಯಚ್ಚ ಚ।।

ಪಾರ್ಥಿವ! ನಿನ್ನ ದುಃಖದಿಂದಲೇ ಅವಳು ಸತತವಾಗಿ ರೋದಿಸುತ್ತಿದ್ದಾಳೆ. ವೀರ! ಅವಳಲ್ಲಿ ದಯೆತೋರಿಸಿ ಪ್ರತಿವಾಕ್ಯವನ್ನು ನೀಡು.”

03072021a ತಸ್ಯಾಸ್ತತ್ಪ್ರಿಯಮಾಖ್ಯಾನಂ ಪ್ರಬ್ರವೀಹಿ ಮಹಾಮತೇ।
03072021c ತದೇವ ವಾಕ್ಯಂ ವೈದರ್ಭೀ ಶ್ರೋತುಮಿಚ್ಚತ್ಯನಿಂದಿತಾ।।

ಮಹಾಮತೇ! ಅವಳಿಗೆ ಪ್ರಿಯವಾದ ಕಥೆಯನ್ನು ಪುನಃ ಹೇಳು. ಅದೇ ಮಾತುಗಳನ್ನು ಅನಿಂದಿತೆ ವೈದರ್ಭಿಯು ಕೇಳಲಿಚ್ಛಿಸುತ್ತಾಳೆ.

03072022a ಏತಚ್ಛೃತ್ವಾ ಪ್ರತಿವಚಸ್ತಸ್ಯ ದತ್ತಂ ತ್ವಯಾ ಕಿಲ।
03072022c ಯತ್ಪುರಾ ತತ್ಪುನಸ್ತ್ವತ್ತೋ ವೈದರ್ಭೀ ಶ್ರೋತುಮಿಚ್ಚತಿ।।

ನೀನು ಕೊಟ್ಟ ಪ್ರತಿವಾಕ್ಯವನ್ನು ಕೇಳಿದಾಗಿನಿಂದ ಅದೇ ಹಿಂದಿನ ಮಾತುಗಳನ್ನು ಪುನಃ ಕೇಳಲು ವೈದರ್ಭಿಯು ಇಚ್ಚಿಸುತ್ತಾಳೆ.’’”

03072023 ಬೃಹದಶ್ವ ಉವಾಚ।
03072023a ಏವಮುಕ್ತಸ್ಯ ಕೇಶಿನ್ಯಾ ನಲಸ್ಯ ಕುರುನಂದನ।
03072023c ಹೃದಯಂ ವ್ಯಥಿತಂ ಚಾಸೀದಶ್ರುಪೂರ್ಣೇ ಚ ಲೋಚನೇ।।

ಬೃಹದಶ್ವನು ಹೇಳಿದನು: “ಕುರುನಂದನ! ಈ ರೀತಿ ಕೇಶಿನಿಯು ಹೇಳಿದಾಗ ನಲನ ಹೃದಯವು ವ್ಯಥಿತಗೊಂದು ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿತು.

03072024a ಸ ನಿಗೃಹ್ಯಾತ್ಮನೋ ದುಃಖಂ ದಹ್ಯಮಾನೋ ಮಹೀಪತಿಃ।
03072024c ಬಾಷ್ಪಸಂದಿಗ್ಧಯಾ ವಾಚಾ ಪುನರೇವೇದಮಬ್ರವೀತ್।।

ದಹಿಸುತ್ತಿರುವ ದುಃಖವನ್ನು ಅದುಮಿಟ್ಟು ಮಹೀಪತಿಯು ಕಣ್ಣೀರಿನಿಂದ ಕಟ್ಟಿದ ಕಂಠದಲ್ಲಿ ಆ ಮಾತುಗಳನ್ನು ಪುನಃ ಹೇಳಿದನು:

03072025a ವೈಷಮ್ಯಮಪಿ ಸಂಪ್ರಾಪ್ತಾ ಗೋಪಾಯಂತಿ ಕುಲಸ್ತ್ರಿಯಃ।
03072025c ಆತ್ಮಾನಮಾತ್ಮನಾ ಸತ್ಯೋ ಜಿತಸ್ವರ್ಗಾ ನ ಸಂಶಯಃ।।

“ಕುಲಸ್ತ್ರೀಯರು ಕಷ್ಟಗಳು ಬಂದರೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ. ನಿಜವಾಗಿಯೂ ಅವರು ಜಿತಸ್ವರ್ಗಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಪತಿಯು ಇಲ್ಲದಿದ್ದರೂ ಇವರು ಎಂದೂ ಕೃದ್ಧರಾಗುವುದಿಲ್ಲ.

03072026a ರಹಿತಾ ಭರ್ತೃಭಿಶ್ಚೈವ ನ ಕ್ರುಧ್ಯಂತಿ ಕದಾ ಚನ।
03072026c ಪ್ರಾಣಾಂಶ್ಚಾರಿತ್ರಕವಚಾ ಧಾರಯಂತೀಹ ಸತ್ಸ್ತ್ರಿಯಃ।।

ವಿಷಮ ಸ್ಥಿತಿಯಲ್ಲಿದ್ದ, ಸುಖದಿಂದ ಪರಿಭ್ರಷ್ಟನಾದ ಮೂಢನೊಬ್ಬನು ಅವಳನ್ನು ಪರಿತ್ಯಜಿಸಿರಬಹುದು. ಆದರೆ ಅಲ್ಲಿ ಕ್ರೋಧಿಸುವುದು ಸರಿಯಲ್ಲ.

03072027a ಪ್ರಾಣಯಾತ್ರಾಂ ಪರಿಪ್ರೇಪ್ಸೋಃ ಶಕುನೈರ್ಹೃತವಾಸಸಃ।
03072027c ಆಧಿಭಿರ್ದಹ್ಯಮಾನಸ್ಯ ಶ್ಯಾಮಾ ನ ಕ್ರೋದ್ಧುಮರ್ಹತಿ।।

ಪಕ್ಷಿಗಳಿಂದ ವಸ್ತ್ರಗಳನ್ನು ಅಪಹರಿಸಲ್ಪಟ್ಟವನಾಗಿ, ಸುಡುತ್ತಿರುವ ಮನಸ್ಸುಳ್ಳವನಾಗಿದ್ದ ಅವನು ಬಿಟ್ಟು ಹೋಗಿದ್ದುದಕ್ಕೆ ಸುಂದರಿಯು ಕ್ರೋಧಿಸುವುದು ಸರಿಯಲ್ಲ.

03072028a ಸತ್ಕೃತಾಸತ್ಕೃತಾ ವಾಪಿ ಪತಿಂ ದೃಷ್ಟ್ವಾ ತಥಾಗತಂ।
03072028c ಭ್ರಷ್ಟರಾಜ್ಯಂ ಶ್ರಿಯಾ ಹೀನಂ ಕ್ಷುಧಿತಂ ವ್ಯಸನಾಪ್ಲುತಂ।।

ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ತನ್ನ ಪತಿಯು ರಾಜ್ಯಭ್ರಷ್ಟನಾಗಿ, ಸಂಪತ್ತನ್ನು ಕಳೆದುಕೊಂಡಿದ್ದುದಕ್ಕೆ ಸುಂದರಿಯು ಕೋಪಿಸುವುದು ಸರಿಯಲ್ಲ.”

03072029a ಏವಂ ಬ್ರುವಾಣಸ್ತದ್ವಾಕ್ಯಂ ನಲಃ ಪರಮದುಃಖಿತಃ।
03072029c ನ ಬಾಷ್ಪಮಶಕತ್ಸೋಢುಂ ಪ್ರರುರೋದ ಚ ಭಾರತ।।

ಭಾರತ! ಈ ರೀತಿ ನಲನು ಈ ವಾಕ್ಯಗಳನ್ನು ಹೇಳುತ್ತಿದ್ದಂತೆಯೇ ಪರಮ ದುಃಖಿತನಾಗಿ, ಕಣ್ಣೀರನ್ನು ತಡೆಹಿಡಿಯಲು ಅಶಕ್ತನಾಗಿ ಜೋರಾಗಿ ಅಳ ತೊಡಗಿದನು.

03072030a ತತಃ ಸಾ ಕೇಶಿನೀ ಗತ್ವಾ ದಮಯಂತ್ಯೈ ನ್ಯವೇದಯತ್।
03072030c ತತ್ಸರ್ವಂ ಕಥಿತಂ ಚೈವ ವಿಕಾರಂ ಚೈವ ತಸ್ಯ ತಂ।।

ಕೇಶಿನಿಯು ದಮಯಂತಿಯ ಬಳಿ ಹೋಗಿ ನಡೆದಿದ್ದೆಲ್ಲವನ್ನೂ ಮತ್ತು ಅವನ ವಿಕಾರ ರೂಪವನ್ನೂ ವರದಿಮಾಡಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಕೇಶಿನೀಸಂವಾದೇ ದ್ವಿಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಕೇಶಿನೀಸಂವಾದ ಎನ್ನುವ ಎಪ್ಪತ್ತೆರಡನೆಯ ಅಧ್ಯಾಯವು.