ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 69
ಸಾರ
ದಮಯಂತಿಯ ಸ್ವಯಂವರಕ್ಕೆ ಹೋಗ ಬಯಸಿದ ಋತುಪರ್ಣನು ಬಾಹುಕನನ್ನು ಮರುದಿನ ಸೂರ್ಯೋದಯದೊಳಗೆ ಕುಂಡಿನಪುರಕ್ಕೆ ಕರೆದುಕೊಂಡು ಹೋಗಲು ಹೇಳಿ, ವಾರ್ಷ್ಣೇಯನೊಂದಿಗೆ ಹೊರಟಿದ್ದುದು (1-16). ಬಾಹುಕನ ಅಶ್ವಕುಶಲತೆಯನ್ನು ನೋಡಿ ಅವನು ನಲನಿರಬಹುದೇ ಎಂದು ವಾರ್ಷ್ಣೇಯನು ಶಂಕಿಸುವುದು (17-34).
03069001 ಬೃಹದಶ್ವ ಉವಾಚ।
03069001a ಶ್ರುತ್ವಾ ವಚಃ ಸುದೇವಸ್ಯ ಋತುಪರ್ಣೋ ನರಾಧಿಪಃ।
03069001c ಸಾಂತ್ವಯಂ ಶ್ಲಕ್ಷ್ಣಯಾ ವಾಚಾ ಬಾಹುಕಂ ಪ್ರತ್ಯಭಾಷತ।।
ಬೃಹದಶ್ವನು ಹೇಳಿದನು: “ಸುದೇವನ ಮಾತುಗಳನ್ನು ಕೇಳಿದ ನರಾಧಿಪ ಋತುಪರ್ಣನು ಸಾಂತ್ವನ ಮತ್ತು ಶ್ಲಾಘನೀಯ ಮಾತುಗಳಿಂದ ಬಾಹುಕನಿಗೆ ಹೇಳಿದನು:
03069002a ವಿದರ್ಭಾನ್ಯಾತುಮಿಚ್ಚಾಮಿ ದಮದಂತ್ಯಾಃ ಸ್ವಯಂವರಂ।
03069002c ಏಕಾಹ್ನಾ ಹಯತತ್ತ್ವಜ್ಞ ಮನ್ಯಸೇ ಯದಿ ಬಾಹುಕ।।
“ಬಾಹುಕ! ದಮಯಂತಿಯ ಸ್ವಯಂವರಕ್ಕೆ ವಿದರ್ಭಕ್ಕೆ ಹೋಗಲು ಇಚ್ಚಿಸುತ್ತೇನೆ. ನೀನು ಅಶ್ವ ತತ್ವಜ್ಞ. ಒಂದೇ ದಿನದಲ್ಲಿ ಅಲ್ಲಿಗೆ ಹೋಗಲಿಕ್ಕಾಗುವುದಾದರೆ ಹೇಳು.”
03069003a ಏವಮುಕ್ತಸ್ಯ ಕೌಂತೇಯ ತೇನ ರಾಜ್ಞಾ ನಲಸ್ಯ ಹ।
03069003c ವ್ಯದೀರ್ಯತ ಮನೋ ದುಃಖಾತ್ಪ್ರದಧ್ಯೌ ಚ ಮಹಾಮನಾಃ।।
ಕೌಂತೇಯ! ರಾಜನ ಈ ಮಾತುಗಳನ್ನು ಕೇಳಿದ ನಲನ ಮನಸ್ಸು ದುಃಖದಿಂದ ಮುದುಡಿಕೊಂಡಿತು ಮತ್ತು ಆ ಮಹಾಮನಸ್ಕನು ಚಿಂತಿಸತೊಡಗಿದನು:
03069004a ದಮಯಂತೀ ಭವೇದೇತತ್ಕುರ್ಯಾದ್ದುಃಖೇನ ಮೋಹಿತಾ।
03069004c ಅಸ್ಮದರ್ಥೇ ಭವೇದ್ವಾಯಮುಪಾಯಶ್ಚಿಂತಿತೋ ಮಹಾನ್।।
“ದಮಯಂತಿಯು ಈ ರೀತಿ ಮಾಡುತ್ತಿದ್ದಾಳೆ ಎಂದರೆ ಅವಳು ದುಃಖದಿಂದ ಮೋಹಿತಳಾಗಿರಬಹುದು ಅಥವಾ ಇದು ನನಗಾಗಿಯೇ ಅವಳು ಯೋಚಿಸಿರುವ ಒಂದು ಮಹಾ ಉಪಾಯವಿರಬಹುದು.
03069005a ನೃಶಂಸಂ ಬತ ವೈದರ್ಭೀ ಕರ್ತುಕಾಮಾ ತಪಸ್ವಿನೀ।
03069005c ಮಯಾ ಕ್ಷುದ್ರೇಣ ನಿಕೃತಾ ಪಾಪೇನಾಕೃತಬುದ್ಧಿನಾ।।
ಕ್ಷುದ್ರ ಪಾಪಿ ಬುದ್ಧಿಯಿಲ್ಲದ ನಾನು ಅವಳಿಗೆ ಮೋಸ ಮಾಡಿದ್ದೇನೆ. ಆದುದರಿಂದಲೇ ಆ ತಪಸ್ವಿನಿ ವೈದರ್ಭಿಯು ಈ ಕ್ರೂರ ಕೃತ್ಯವನ್ನು ಮಾಡಲು ಬಯಸಿರಬಹುದು.
03069006a ಸ್ತ್ರೀಸ್ವಭಾವಶ್ಚಲೋ ಲೋಕೇ ಮಮ ದೋಷಶ್ಚ ದಾರುಣಃ।
03069006c ಸ್ಯಾದೇವಮಪಿ ಕುರ್ಯಾತ್ಸಾ ವಿವಶಾ ಗತಸೌಹೃದಾ।
03069006 ಮಮ ಶೋಕೇನ ಸಂವಿಗ್ನಾ ನೈರಾಶ್ಯಾತ್ತನುಮಧ್ಯಮಾ।।
ಈ ಲೋಕದಲ್ಲಿ ಸ್ತ್ರೀ ಸ್ವಭಾವವು ಅಚಲ; ಆದರೆ ನನ್ನ ದೋಷವೂ ದಾರುಣವಾಗಿದೆ. ಇದೆಲ್ಲವೂ ಇರಲಿ. ಆದರೂ ಈ ತನುಮದ್ಯಮಳು, ಸೌಹಾರ್ದತೆಯನ್ನು ಮರೆತು, ನನ್ನ ಮೇಲಿನ ಶೋಕದಿಂದ ನಿರಾಶಳಾಗಿ, ಇಂತಹ ಕೆಲಸವನ್ನು ಮಾಡಬಹುದೇ?
03069007a ನ ಚೈವಂ ಕರ್ಹಿ ಚಿತ್ಕುರ್ಯಾತ್ಸಾಪತ್ಯಾ ಚ ವಿಶೇಷತಃ।
03069007c ಯದತ್ರ ತಥ್ಯಂ ಪಥ್ಯಂ ಚ ಗತ್ವಾ ವೇತ್ಸ್ಯಾಮಿ ನಿಶ್ಚಯಂ।
03069007 ಋತುಪರ್ಣಸ್ಯ ವೈ ಕಾಮಮಾತ್ಮಾರ್ಥಂ ಚ ಕರೋಮ್ಯಹಂ।।
ಇಲ್ಲ ಅವಳು ಈ ರೀತಿ ಮಾಡುವವಳಲ್ಲ. ಅದರಲ್ಲೂ ವಿಶೇಷವಾಗಿ ಅವಳ ಮಕ್ಕಳಿದ್ದಾರೆ. ಆದ್ದರಿಂದ ನಾನೇ ಅಲ್ಲಿಗೆ ಹೋಗಿ ನಿಶ್ಚಯವಾಗಿ ತಿಳಿದುಕೊಳ್ಳುತ್ತೇನೆ. ನನಗೋಸ್ಕರ ಋತುಪರ್ಣನ ಇಚ್ಛೆಯಂತೆ ಮಾಡುತ್ತೇನೆ.”
03069008a ಇತಿ ನಿಶ್ಚಿತ್ಯ ಮನಸಾ ಬಾಹುಕೋ ದೀನಮಾನಸಃ।
03069008c ಕೃತಾಂಜಲಿರುವಾಚೇದಂ ಋತುಪರ್ಣಂ ನರಾಧಿಪಂ।।
ಈ ರೀತಿ ಮನಸ್ಸಿನಲ್ಲಿ ನಿಶ್ಚಯಿಸಿ, ದೀನಮನಸ್ಕ ಬಾಹುಕನು ಅಂಜಲೀಬದ್ಧನಾಗಿ ನರಾಧಿಪ ಋತುಪರ್ಣನನ್ನುದ್ದೇಶಿಸಿ ಹೇಳಿದನು:
03069009a ಪ್ರತಿಜಾನಾಮಿ ತೇ ಸತ್ಯಂ ಗಮಿಷ್ಯಸಿ ನರಾಧಿಪ।
03069009c ಏಕಾಹ್ನಾ ಪುರುಷವ್ಯಾಘ್ರ ವಿದರ್ಭನಗರೀಂ ನೃಪ।।
“ನರಾಧಿಪ! ಪುರುಷವ್ಯಾಘ್ರ! ನೃಪ! ನಿನಗೆ ನನ್ನ ನಿಜವಾದ ಮಾತುಗಳನ್ನು ಹೇಳುವುದಾದರೆ ಒಂದೇ ದಿನದಲ್ಲಿ ವಿದರ್ಭನಗರಿಯನ್ನು ತಲುಪಬಹುದು.”
03069010a ತತಃ ಪರೀಕ್ಷಾಂ ಅಶ್ವಾನಾಂ ಚಕ್ರೇ ರಾಜನ್ಸ ಬಾಹುಕಃ।
03069010c ಅಶ್ವಶಾಲಾಮುಪಾಗಮ್ಯ ಭಾಂಗಸ್ವರಿನೃಪಾಜ್ಞಯಾ।।
ರಾಜನ್! ನೃಪ ಭಾಂಗಸ್ವರಿಯ ಆಜ್ಞೆಯಂತೆ ಬಾಹುಕನು ಅಶ್ವಶಾಲೆಗೆ ಹೋಗಿ ಅಶ್ವಗಳನ್ನು ಪರೀಕ್ಷಿಸಿದನು.
03069011a ಸ ತ್ವರ್ಯಮಾಣೋ ಬಹುಶ ಋತುಪರ್ಣೇನ ಬಾಹುಕಃ।
03069011c ಅಧ್ಯಗಚ್ಚತ್ಕೃಶಾನಶ್ವಾನ್ಸಮರ್ಥಾನಧ್ವನಿ ಕ್ಷಮಾನ್।।
03069012a ತೇಜೋಬಲಸಮಾಯುಕ್ತಾನ್ಕುಲಶೀಲಸಮನ್ವಿತಾನ್।
03069012c ವರ್ಜಿತಾಽಲ್ಲಕ್ಷಣೈರ್ಹೀನೈಃ ಪೃಥುಪ್ರೋಥಾನ್ಮಹಾಹನೂನ್।
03069012 ಶುದ್ಧಾನ್ದಶಭಿರಾವರ್ತೈಃ ಸಿಂಧುಜಾನ್ವಾತರಂಹಸಃ।।
ಋತುಪರ್ಣನು ಬಹಳಷ್ಟು ಅವಸರಮಾಡಲು, ಬಾಹುಕನು ನಾಲ್ಕು ತೆಳ್ಳಗಿನ, ಮಾರ್ಗದಲ್ಲಿ ಸಮರ್ಥ, ತೇಜೋಬಲಸಮಾಯುಕ್ತ, ಕುಲಶೀಲಸಮನ್ವಿತ ವಾಯುವೇಗಿ ಸಿಂಧುಜ ಅಶ್ವಗಳನ್ನು ಆರಿಸಿದನು. ವಿಶಾಲ ಹೊರಳೆ ಮತ್ತು ಬಾಯಿಗಳನ್ನು ಹೊಂದಿದ್ದ ಆ ಅಶ್ವಗಳು ಹೀನ ಲಕ್ಷಣಗಳಿಂದ ವರ್ಜಿತವಾಗಿದ್ದವು. ಹತ್ತು ಕುರುಳುಗಳಿಂದ ಶುದ್ಧವಾಗಿದ್ದವು.
03069013a ದೃಷ್ಟ್ವಾ ತಾನಬ್ರವೀದ್ರಾಜಾ ಕಿಂ ಚಿತ್ಕೋಪಸಮನ್ವಿತಃ।
03069013c ಕಿಮಿದಂ ಪ್ರಾರ್ಥಿತಂ ಕರ್ತುಂ ಪ್ರಲಬ್ಧವ್ಯಾ ಹಿ ತೇ ವಯಂ।।
ಅವುಗಳನ್ನು ನೋಡಿದ ರಾಜನು ಸ್ವಲ್ಪ ಸಿಟ್ಟಿಗೆದ್ದು ಹೇಳಿದನು: “ಇದೇನು ನೀನು ಮಾಡುತ್ತಿರುವೆ? ನನ್ನನ್ನು ಮೋಸಗೊಳಿಸಲಿಕ್ಕೆಂದೇ ನೀನು ಈ ರೀತಿ ಮಾಡುತ್ತಿರಬಹುದು.
03069014a ಕಥಮಲ್ಪಬಲಪ್ರಾಣಾ ವಕ್ಷ್ಯಂತೀಮೇ ಹಯಾ ಮಮ।
03069014c ಮಹಾನಧ್ವಾ ಚ ತುರಗೈರ್ಗಂತವ್ಯಃ ಕಥಮೀದೃಶೈಃ।।
ಈ ಅಲ್ಪಬಲಪ್ರಾಣ ಹಯಗಳು ನನ್ನ ರಥವನ್ನು ಎಳೆಯಬಲ್ಲವೇ? ಹೀಗೆ ಕಾಣುತ್ತಿರುವ ಈ ತುರಂಗಗಳು ಹೇಗೆ ಅ ಮಹಾ ದೂರವನ್ನು ಗಮಿಸಬಲ್ಲವು?”
03069015 ಬಾಹುಕ ಉವಾಚ।
03069015a ಏತೇ ಹಯಾ ಗಮಿಷ್ಯಂತಿ ವಿದರ್ಭಾನ್ನಾತ್ರ ಸಂಶಯಃ।
03069015c ಅಥಾನ್ಯಾನ್ಮನ್ಯಸೇ ರಾಜನ್ಬ್ರೂಹಿ ಕಾನ್ಯೋಜಯಾಮಿ ತೇ।।
ಬಾಹುಕನು ಹೇಳಿದನು: “ಈ ಹಯಗಳು ವಿದರ್ಭಕ್ಕೆ ಹೋಗುವವು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ರಾಜನ್! ಬೇಕೆಂದರೆ ನಿನಗಿಷ್ಟವಾದ ಯಾವ ಕುದುರೆಗಳನ್ನು ಕಟ್ಟಬೇಕೆಂದು ಹೇಳು. ಅವುಗಳನ್ನೇ ಕಟ್ಟುತ್ತೇನೆ.”
03069016 ಋತುಪರ್ಣ ಉವಾಚ।
03069016a ತ್ವಮೇವ ಹಯತತ್ತ್ವಜ್ಞಃ ಕುಶಲಶ್ಚಾಸಿ ಬಾಹುಕ।
03069016c ಯಾನ್ಮನ್ಯಸೇ ಸಮರ್ಥಾಂಸ್ತ್ವಂ ಕ್ಷಿಪ್ರಂ ತಾನೇವ ಯೋಜಯ।।
ಋತುಪರ್ಣನು ಹೇಳಿದನು: “ಬಾಹುಕ! ನೀನೇ ಹಯ ತತ್ವಜ್ಞ ಮತ್ತು ಕುಶಲ. ಇವುಗಳು ಆಗುತ್ತವೆ ಎಂದು ನೀನೆಂದರೆ ಬೇಗ ಅವುಗಳನ್ನು ಕಟ್ಟು.””
03069017 ಬೃಹದಶ್ವ ಉವಾಚ।
03069017a ತತಃ ಸದಶ್ವಾಂಶ್ಚತುರಃ ಕುಲಶೀಲಸಮನ್ವಿತಾನ್।
03069017c ಯೋಜಯಾಮಾಸ ಕುಶಲೋ ಜವಯುಕ್ತಾನ್ರಥೇ ನರಃ।।
03069018a ತತೋ ಯುಕ್ತಂ ರಥಂ ರಾಜಾ ಸಮಾರೋಹತ್ತ್ವರಾನ್ವಿತಃ।
03069018c ಅಥ ಪರ್ಯಪತನ್ಭೂಮೌ ಜಾನುಭಿಸ್ತೇ ಹಯೋತ್ತಮಾಃ।।
ಬೃಹದಶ್ವನು ಹೇಳಿದನು: “ನಂತರ ನಲನು ಕುಶಲತೆಯಿಂದ ಆ ನಾಲ್ಕು ಕುಲಶೀಲಸಮನ್ವಿತ ಅಶ್ವಗಳನ್ನು ರಥಕ್ಕೆ ಕಟ್ಟಿದನು. ರಾಜನು ತಯಾರಿದ್ದ ರಥವನ್ನು ಬೇಗನೇ ಏರಿದನು ಮತ್ತು ಆ ಉತ್ತಮ ಹಯಗಳು ಭೂಮಿಯಮೇಲೆ ಕಾಲುಗಳನ್ನೂರಿದವು.
03069019a ತತೋ ನರವರಃ ಶ್ರೀಮಾನ್ನಲೋ ರಾಜಾ ವಿಶಾಂ ಪತೇ।
03069019c ಸಾಂತ್ವಯಾಮಾಸ ತಾನಶ್ವಾಂಸ್ತೇಜೋಬಲಸಮನ್ವಿತಾನ್।।
03069020a ರಶ್ಮಿಭಿಶ್ಚ ಸಮುದ್ಯಮ್ಯ ನಲೋ ಯಾತುಮಿಯೇಷ ಸಃ।
03069020c ಸೂತಮಾರೋಪ್ಯ ವಾರ್ಷ್ಣೇಯಂ ಜವಮಾಸ್ಥಾಯ ವೈ ಪರಂ।।
ವಿಶಾಂಪತೇ! ನರವರ ಶ್ರೀಮಾನ್ ನಲರಾಜನು ಸೂತ ವಾರ್ಷ್ಣೇಯನನ್ನು ರಥದಲ್ಲಿ ಕೂರಿಸಿಕೊಂಡು ತೇಜೋಬಲಸಮನ್ವಿತ ಆ ಅಶ್ವಗಳನ್ನು ಸಂತವಿಸಿ, ಹಗ್ಗಗಳಿಂದ ಅವುಗಳನ್ನು ನಿಯಂತ್ರಿಸುತ್ತಾ ಹೊರಟನು.
03069021a ತೇ ಚೋದ್ಯಮಾನಾ ವಿಧಿನಾ ಬಾಹುಕೇನ ಹಯೋತ್ತಮಾಃ।
03069021c ಸಮುತ್ಪೇತುರಿವಾಕಾಶಂ ರಥಿನಂ ಮೋಹಯನ್ನಿವ।।
ಬಾಹುಕನಿಂದ ವಿಧಿವತ್ತಾಗಿ ಚೋದಿತಗೊಂಡ ಆ ಉತ್ತಮ ಹಯಗಳು ರಥದಲ್ಲಿ ಕುಳಿತವರನ್ನು ಮೂರ್ಛೆಗೊಳಿಸುವಂತೆ ಆಕಾಶದಲ್ಲಿ ಹಾರಿದವು.
03069022a ತಥಾ ತು ದೃಷ್ಟ್ವಾ ತಾನಶ್ವಾನ್ವಹತೋ ವಾತರಂಹಸಃ।
03069022c ಅಯೋಧ್ಯಾಧಿಪತಿರ್ಧೀಮಾನ್ವಿಸ್ಮಯಂ ಪರಮಂ ಯಯೌ।।
ವಾಯುವೇಗದಲ್ಲಿ ಓಡುತ್ತಿದ್ದ ಆ ಅಶ್ವಗಳನ್ನು ನೋಡಿದ ಅಯೋಧ್ಯಾಧಿಪತಿ ಧೀಮಂತನು ಪರಮ ವಿಸ್ಮಿತನಾದನು.
03069023a ರಥಘೋಷಂ ತು ತಂ ಶ್ರುತ್ವಾ ಹಯಸಂಗ್ರಹಣಂ ಚ ತತ್।
03069023c ವಾರ್ಷ್ಣೇಯಶ್ಚಿಂತಯಾಮಾಸ ಬಾಹುಕಸ್ಯ ಹಯಜ್ಞತಾಂ।।
ರಥಘೋಷವನ್ನು ಕೇಳಿ ಮತ್ತು ಹಯಗಳ ನಿಯಂತ್ರಣವನ್ನು ನೋಡಿ ವಾರ್ಷ್ಣೇಯನು ಬಾಹುಕನ ಹಯವಿದ್ಯೆಯ ಕುರಿತು ಯೋಚಿಸತೊಡಗಿದನು.
03069024a ಕಿಂ ನು ಸ್ಯಾನ್ಮಾತಲಿರಯಂ ದೇವರಾಜಸ್ಯ ಸಾರಥಿಃ।
03069024c ತಥಾ ಹಿ ಲಕ್ಷಣಂ ವೀರೇ ಬಾಹುಕೇ ದೃಶ್ಯತೇ ಮಹತ್।।
“ಇವನು ದೇವರಾಜನ ಸಾರಥಿ ಮಾತಲಿಯಿರಬಹುದೇ? ಯಾಕೆಂದರೆ ಈ ವೀರ ಬಾಹುಕನಲ್ಲಿ ಅದೇ ಮಾಹಾ ಲಕ್ಷಣಗಳು ಕಾಣುತ್ತಿವೆ.
03069025a ಶಾಲಿಹೋತ್ರೋಽಥ ಕಿಂ ನು ಸ್ಯಾದ್ಧಯಾನಾಂ ಕುಲತತ್ತ್ವವಿತ್।
03069025c ಮಾನುಷಂ ಸಮನುಪ್ರಾಪ್ತೋ ವಪುಃ ಪರಮಶೋಭನಂ।।
ಅಥವಾ ಇವನು ಅಶ್ವಗಳ ಕುಲತತ್ವವನ್ನು ಅರಿತ, ಈಗ ಇಷ್ಟು ಕುರೂಪಿಯಾದ ಮನುಷ್ಯನ ದೇಹವನ್ನು ಹೊಂದಿರುವ ಶಾಲಿಹೋತ್ರನೇ?
03069026a ಉತಾಹೋ ಸ್ವಿದ್ಭವೇದ್ರಾಜಾ ನಲಃ ಪರಪುರಂಜಯಃ।
03069026c ಸೋಽಯಂ ನೃಪತಿರಾಯಾತ ಇತ್ಯೇವಂ ಸಮಚಿಂತಯತ್।।
ಅಥವಾ ಇವನು ಪರಪುರಂಜಯ ರಾಜ ನಲನಾಗಿರಬಹುದೇ? ಆ ನೃಪತಿಯು ಇಲ್ಲಿಗೆ ಬಂದಿರಬಹುದೇ?” ಎಂದು ಅವನು ಯೋಚಿಸಿದನು.
03069027a ಅಥ ವಾ ಯಾಂ ನಲೋ ವೇದ ವಿದ್ಯಾಂ ತಾಮೇವ ಬಾಹುಕಃ।
03069027c ತುಲ್ಯಂ ಹಿ ಲಕ್ಷಯೇ ಜ್ಞಾನಂ ಬಾಹುಕಸ್ಯ ನಲಸ್ಯ ಚ।।
03069028a ಅಪಿ ಚೇದಂ ವಯಸ್ತುಲ್ಯಮಸ್ಯ ಮನ್ಯೇ ನಲಸ್ಯ ಚ।
03069028c ನಾಯಂ ನಲೋ ಮಹಾವೀರ್ಯಸ್ತದ್ವಿದ್ಯಸ್ತು ಭವಿಷ್ಯತಿ।।
03069029a ಪ್ರಚ್ಚನ್ನಾ ಹಿ ಮಹಾತ್ಮಾನಶ್ಚರಂತಿ ಪೃಥಿವೀಮಿಮಾಂ।
03069029c ದೈವೇನ ವಿಧಿನಾ ಯುಕ್ತಾಃ ಶಾಸ್ತ್ರೋಕ್ತೈಶ್ಚ ವಿರೂಪಣೈಃ।।
03069030a ಭವೇತ್ತು ಮತಿಭೇದೋ ಮೇ ಗಾತ್ರವೈರೂಪ್ಯತಾಂ ಪ್ರತಿ।
03069030c ಪ್ರಮಾಣಾತ್ಪರಿಹೀನಸ್ತು ಭವೇದಿತಿ ಹಿ ಮೇ ಮತಿಃ।।
“ನಲನಿಗೆ ತಿಳಿದಿದ್ದ ವಿದ್ಯೆ ಬಾಹುಕನಿಗೂ ತಿಳಿದಂತಿದೆ. ಬಾಹುಕ ಮತ್ತು ನಲನ ಜ್ಞಾನವು ಸರಿಸಮನಾಗಿ ತೋರುತ್ತಿದೆ. ಇವನ ಮತ್ತು ನಲನ ವಯಸ್ಸು ಕೂಡ ಒಂದೇ ಇರಬಹುದು ಎಂದು ನನಗನ್ನಿಸುತ್ತದೆ. ಇವನು ಮಹಾವೀರ ನಲನಲ್ಲ; ಆದರೂ ಇವನಲ್ಲಿ ಆ ವಿದ್ವತ್ತು ಇದೆ. ಶಾಸ್ತ್ರಗಳಲ್ಲಿ ಹೇಳಿರುವಂತೆ ಮಹಾತ್ಮರು ದೈವ ವಿಧಿಗಳೆರಡರಿಂದಲೂ ಕೂಡಿ ಈ ಪೃಥಿವಿಯನ್ನು ತಿರುಗಿಸುತ್ತಿರುತ್ತಾರೆ ಎಂದು ಕೇಳಿದ್ದೇನೆ. ಆದರೂ ಈ ಅಕಾರ ವಿರೂಪಗಳ ಕುರಿತು ಸಂದಿಗ್ಧನಾಗಿದ್ದೇನೆ. ನನ್ನ ಮತಕ್ಕೆ ಪ್ರಮಾಣಗಳಿಲ್ಲ ಎಂದನ್ನಿಸುತ್ತದೆ.
03069031a ವಯಃಪ್ರಮಾಣಂ ತತ್ತುಲ್ಯಂ ರೂಪೇಣ ತು ವಿಪರ್ಯಯಃ।
03069031c ನಲಂ ಸರ್ವಗುಣೈರ್ಯುಕ್ತಂ ಮನ್ಯೇ ಬಾಹುಕಮಂತತಃ।।
ವಯಸ್ಸಿನಲ್ಲಿ ಅವನ ಸರಿಸಮಾನನಾಗಿದ್ದಾನೆ ಆದರೆ ರೂಪದಲ್ಲಿ ವಿಪರ್ಯನಾಗಿದ್ದಾನೆ. ಆದರೂ ಕೊನೆಯಲ್ಲಿ ಬಾಹುಕನೇ ಸರ್ವಗುಣಯುಕ್ತ ನಲನೆಂದು ತೀರ್ಮಾನಿಸುತ್ತೇನೆ.”
03069032a ಏವಂ ವಿಚಾರ್ಯ ಬಹುಶೋ ವಾರ್ಷ್ಣೇಯಃ ಪರ್ಯಚಿಂತಯತ್।
03069032c ಹೃದಯೇನ ಮಹಾರಾಜ ಪುಣ್ಯಶ್ಲೋಕಸ್ಯ ಸಾರಥಿಃ।।
ಈ ರೀತಿ ಮಹಾರಾಜ ಪುಣ್ಯಶ್ಲೋಕನ ಸಾರಥಿ ವಾರ್ಷ್ಣೇಯನು ಬಹಳಷ್ಟು ವಿಚಾರಿಸಿ ತನ್ನ ಹೃದಯದಲ್ಲಿ ಚಿಂತಿಸತೊಡಗಿದನು.
03069033a ಋತುಪರ್ಣಸ್ತು ರಾಜೇಂದ್ರ ಬಾಹುಕಸ್ಯ ಹಯಜ್ಞತಾಂ।
03069033c ಚಿಂತಯನ್ಮುಮುದೇ ರಾಜಾ ಸಹವಾರ್ಷ್ಣೇಯಸಾರಥಿಃ।।
ಆದರೆ ರಾಜೇಂದ್ರ ಋತುಪರ್ಣನು ಬಾಹುಕನ ಹಯಜ್ಞಾನದ ಕುರಿತು ಯೋಚಿಸಿ ಸಾರಥಿ ವಾರ್ಷ್ಣೇಯನೊಂದಿಗೆ ಹರ್ಷಿತನಾದನು.
03069034a ಬಲಂ ವೀರ್ಯಂ ತಥೋತ್ಸಾಹಂ ಹಯಸಂಗ್ರಹಣಂ ಚ ತತ್।
03069034c ಪರಂ ಯತ್ನಂ ಚ ಸಂಪ್ರೇಕ್ಷ್ಯ ಪರಾಂ ಮುದಮವಾಪ ಹ।।
ಅವನ ಬಲ, ವೀರ್ಯ, ಉತ್ಸಾಹ, ಹಯಗಳ ಮೇಲಿದ್ದ ನಿಯಂತ್ರಣ ಮತ್ತು ಪರಮ ಯತ್ನವನ್ನು ನೋಡಿ ಅವನು ಅತೀವ ಸಂತಸಗೊಂಡನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಋತುಪರ್ಣವಿದರ್ಭಗಮನೇ ಏಕೋನಸಪ್ತತಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಋತುಪರ್ಣನ ವಿದರ್ಭಗಮನ ಎನ್ನುವ ಅರವತ್ತೊಂಭತ್ತನೆಯ ಅಧ್ಯಾಯವು.