068 ನಲೋಪಾಖ್ಯಾನೇ ದಮಯಂತೀ ಪುನಃಸ್ವಯಂವರಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 68

ಸಾರ

ದೀರ್ಘಕಾಲದ ನಂತರ ಬ್ರಾಹ್ಮಣನೋರ್ವನು ಬಂದು ರಾಜಾ ಋತುಪರ್ಣನಲ್ಲಿರುವ, ಶೀಘ್ರಯಾನದಲ್ಲಿ ಸುಕುಶಲನೂ ಅಡುಗೆಯಲ್ಲಿ ಪರಿಣಿತನೂ ಆದ ಬಾಹುಕನೆಂಬುವವನು ತನ್ನ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದನೆಂದು ದಮಯಂತಿಯಲ್ಲಿ ಹೇಳುವುದು (1-16). ದಮಯಂತಿಯು ತನ್ನ ಸ್ವಯಂವರವು ಮರುದಿನ ಸೂರ್ಯೋದಯದಲ್ಲಿ ನಡೆಯಲಿದೆ ಎನ್ನುವ ಸಂದೇಶವನ್ನು ಬ್ರಾಹ್ಮಣ ಸುದೇವನ ಮೂಲಕ ಋತುಪರ್ಣನಿಗೆ ತಲುಪಿಸುವುದು (17-24).

03068001 ಬೃಹದಶ್ವ ಉವಾಚ।
03068001a ಅಥ ದೀರ್ಘಸ್ಯ ಕಾಲಸ್ಯ ಪರ್ಣಾದೋ ನಾಮ ವೈ ದ್ವಿಜಃ।
03068001c ಪ್ರತ್ಯೇತ್ಯ ನಗರಂ ಭೈಮೀಮಿದಂ ವಚನಮಬ್ರವೀತ್।।

ಬೃಹದಶ್ವನು ಹೇಳಿದನು: “ದೀರ್ಘ ಕಾಲದ ನಂತರ ಪರ್ಣಾದ ಎಂಬ ಹೆಸರಿನ ದ್ವಿಜನು ನಗರಕ್ಕೆ ಹಿಂದಿರುಗಿ ಭೈಮಿಯಲ್ಲಿ ಈ ವಚನಗಳನ್ನು ಹೇಳಿದನು:

03068002a ನೈಷಧಂ ಮೃಗಯಾನೇನ ದಮಯಂತಿ ದಿವಾನಿಶಂ।
03068002c ಅಯೋಧ್ಯಾಂ ನಗರೀಂ ಗತ್ವಾ ಭಾಂಗಸ್ವರಿರುಪಸ್ಥಿತಃ।।

“ದಮಯಂತಿ! ದಿನ-ರಾತ್ರಿ ನೈಷಧನನ್ನು ಅರಸುತ್ತಾ ಅಯೋಧ್ಯಾ ನಗರಿಗೆ ಹೋಗಿ ಭಾಂಗಸ್ವರಿಯ ಉಪಸ್ಥಿತಿಯಲ್ಲಿದ್ದೆ.

03068003a ಶ್ರಾವಿತಶ್ಚ ಮಯಾ ವಾಕ್ಯಂ ತ್ವದೀಯಂ ಸ ಮಹಾಜನೇ।
03068003c ಋತುಪರ್ಣೋ ಮಹಾಭಾಗೋ ಯಥೋಕ್ತಂ ವರವರ್ಣಿನಿ।।

ವರವರ್ಣಿನೀ! ಅಲ್ಲಿ ನೀನು ಇತ್ತ ವಾಕ್ಯವನ್ನು ಯಥೋಕ್ತವಾಗಿ ಮಹಾಭಾಗ ಋತುಪರ್ಣ ಮತ್ತು ಮಹಾಜನರಲ್ಲಿ ಹೇಳಿದೆನು.

03068004a ತಚ್ಛೃತ್ವಾ ನಾಬ್ರವೀತ್ಕಿಂ ಚಿದೃತುಪರ್ಣೋ ನರಾಧಿಪಃ।
03068004c ನ ಚ ಪಾರಿಷದಃ ಕಶ್ಚಿದ್ಭಾಷ್ಯಮಾಣೋ ಮಯಾಸಕೃತ್।।

ಅದನ್ನು ಕೇಳಿದ ನರಾಧಿಪ ಋತುಪರ್ಣನು ಏನನ್ನೂ ಹೇಳಲಿಲ್ಲ. ಪರಿಷತ್ತಿನಲ್ಲಿದ್ದ ಇನ್ನು ಯಾರೂ ನಾನು ಹೇಳಿದುದಕ್ಕೆ ಉತ್ತರಿಸಲಿಲ್ಲ.

03068005a ಅನುಜ್ಞಾತಂ ತು ಮಾಂ ರಾಜ್ಞಾ ವಿಜನೇ ಕಶ್ಚಿದಬ್ರವೀತ್।
03068005c ಋತುಪರ್ಣಸ್ಯ ಪುರುಷೋ ಬಾಹುಕೋ ನಾಮ ನಾಮತಃ।।
03068006a ಸೂತಸ್ತಸ್ಯ ನರೇಂದ್ರಸ್ಯ ವಿರೂಪೋ ಹ್ರಸ್ವಬಾಹುಕಃ।
03068006c ಶೀಘ್ರಯಾನೇ ಸುಕುಶಲೋ ಮೃಷ್ಟಕರ್ತಾ ಚ ಭೋಜನೇ।।

ರಾಜನಿಂದ ಅನುಮತಿಯನ್ನು ಪಡೆದ ನಾನು ಒಬ್ಬನೇ ಇರುವಾಗ ಋತುಪರ್ಣನ ಪುರುಷನೋರ್ವನು-ಬಾಹುಕ ಎಂಬ ಹೆಸರು ಅವನದಾಗಿತ್ತು-ನನ್ನಲ್ಲಿ ಮಾತನಾಡಿದನು. ನರೇಂದ್ರನ ಸೂತನಾಗಿದ್ದ ಅವನು ಗಿಡ್ಡ ಕೈಕಾಲುಗಳುಳ್ಳವನಾಗಿ ವಿರೂಪಿಯಾಗಿದ್ದನು. ಅವನು ಶೀಘ್ರಯಾನದಲ್ಲಿ ಸುಕುಶಲನೂ, ಅಡುಗೆಯಲ್ಲಿ ಪರಿಣಿತನೂ ಆಗಿದ್ದನು.

03068007a ಸ ವಿನಿಃಶ್ವಸ್ಯ ಬಹುಶೋ ರುದಿತ್ವಾ ಚ ಮುಹುರ್ಮುಹುಃ।
03068007c ಕುಶಲಂ ಚೈವ ಮಾಂ ಪೃಷ್ಟ್ವಾ ಪಶ್ಚಾದಿದಮಭಾಷತ।।

ಅವನು ಬಹಳಷ್ಟು ನಿಟ್ಟುಸಿರು ಬಿಡುತ್ತಿದ್ದ ಮತ್ತು ಪುನಃ ಪುನಃ ರೋದಿಸುತ್ತಿದ್ದ. ನನ್ನ ಕುಶಲವನ್ನು ಕೇಳಿದ ನಂತರದಲ್ಲಿ ಅವನು ನನಗೆ ಹೇಳಿದನು:

03068008a ವೈಷಮ್ಯಮಪಿ ಸಂಪ್ರಾಪ್ತಾ ಗೋಪಾಯಂತಿ ಕುಲಸ್ತ್ರಿಯಃ।
03068008c ಆತ್ಮಾನಮಾತ್ಮನಾ ಸತ್ಯೋ ಜಿತಸ್ವರ್ಗಾ ನ ಸಂಶಯಃ।
03068008 ರಹಿತಾ ಭರ್ತೃಭಿಶ್ಚೈವ ನ ಕ್ರುಧ್ಯಂತಿ ಕದಾ ಚನ।।

“ಕುಲಸ್ತ್ರೀಯರು ಕಷ್ಟಗಳು ಬಂದರೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ. ನಿಜವಾಗಿಯೂ ಅವರು ಜಿತಸ್ವರ್ಗಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಪತಿಯು ಇಲ್ಲದಿದ್ದರೂ ಅವರು ಎಂದೂ ಕೃದ್ಧರಾಗುವುದಿಲ್ಲ.

03068009a ವಿಷಮಸ್ಥೇನ ಮೂಢೇನ ಪರಿಭ್ರಷ್ಟಸುಖೇನ ಚ।
03068009c ಯತ್ಸಾ ತೇನ ಪರಿತ್ಯಕ್ತಾ ತತ್ರ ನ ಕ್ರೋದ್ಧುಮರ್ಹತಿ।।

ಸುಖದಿಂದ ಪ್ರರಿಭ್ರಷ್ಠನಾಗಿ ವಿಷಮ ಸ್ಥಿತಿಯಲ್ಲಿದ್ದ ಮೂಢನು ಅವಳನ್ನು ಪರಿತ್ಯಜಿಸಿರಬಹುದು. ಆದರೆ ಅದಕ್ಕಾಗಿ ಸಿಟ್ಟಿಗೇಳುವುದು ಸರಿಯಲ್ಲ.

03068010a ಪ್ರಾಣಯಾತ್ರಾಂ ಪರಿಪ್ರೇಪ್ಸೋಃ ಶಕುನೈರ್ಹೃತವಾಸಸಃ।
03068010c ಆಧಿಭಿರ್ದಹ್ಯಮಾನಸ್ಯ ಶ್ಯಾಮಾ ನ ಕ್ರೋದ್ಧುಮರ್ಹತಿ।।

ಪಕ್ಷಿಗಳಿಂದ ವಸ್ತ್ರಗಳನ್ನು ಅಪಹರಿಸಲ್ಪಟ್ಟು ಅವನ ಮನಸ್ಸು ಸುಡುತ್ತಿರುವಾಗ ಅವನು ಬಿಟ್ಟು ಹೋಗಿದ್ದುದಕ್ಕೆ ಆ ಸುಂದರಿಯು ಸಿಟ್ಟಾಗುವುದು ಸರಿಯಲ್ಲ.

03068011a ಸತ್ಕೃತಾಸತ್ಕೃತಾ ವಾಪಿ ಪತಿಂ ದೃಷ್ಟ್ವಾ ತಥಾಗತಂ।
03068011c ಭ್ರಷ್ಟರಾಜ್ಯಂ ಶ್ರಿಯಾ ಹೀನಂ ಶ್ಯಾಮಾ ನ ಕ್ರೋದ್ಧುಮರ್ಹತಿ।।

ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ತನ್ನ ಪತಿಯು ರಾಜ್ಯಭ್ರಷ್ಟನಾಗಿ, ಸಂಪತ್ತನ್ನು ಕಳೆದುಕೊಂಡುದ್ದುದಕ್ಕೆ ಆ ಸುಂದರಿಯು ಕೋಪಿಸುವುದು ಸರಿಯಲ್ಲ.”

03068012a ತಸ್ಯ ತದ್ವಚನಂ ಶ್ರುತ್ವಾ ತ್ವರಿತೋಽಹಮಿಹಾಗತಃ।
03068012c ಶ್ರುತ್ವಾ ಪ್ರಮಾಣಂ ಭವತೀ ರಾಜ್ಞಶ್ಚೈವ ನಿವೇದಯ।।

ಅವನ ಆ ಮಾತುಗಳನ್ನು ಕೇಳಿ ತಡಮಾಡದೇ ಇಲ್ಲಿಗೆ ಬಂದಿದ್ದೇನೆ. ಇವುಗಳನ್ನು ಕೇಳಿದ ನೀನೇ ರಾಜನಿಗೆ ನಿವೇದಿಸು.”

03068013a ಏತಚ್ಛೃತ್ವಾಶ್ರುಪೂರ್ಣಾಕ್ಷೀ ಪರ್ಣಾದಸ್ಯ ವಿಶಾಂ ಪತೇ।
03068013c ದಮಯಂತೀ ರಹೋಽಭ್ಯೇತ್ಯ ಮಾತರಂ ಪ್ರತ್ಯಭಾಷತ।।

ವಿಶಾಂಪತೇ! ಪರ್ಣಾದನ ಮಾತುಗಳನ್ನು ಕೇಳಿ ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಕೊಂಡ ದಮಯಂತಿಯು ತಾಯಿಯ ಬಳಿಹೋಗಿ ಏಕಾಂತದಲ್ಲಿ ಹೇಳಿದಳು:

03068014a ಅಯಮರ್ಥೋ ನ ಸಂವೇದ್ಯೋ ಭೀಮೇ ಮಾತಃ ಕಥಂ ಚನ।
03068014c ತ್ವತ್ಸನ್ನಿಧೌ ಸಮಾದೇಕ್ಷ್ಯೇ ಸುದೇವಂ ದ್ವಿಜಸತ್ತಮಂ।।

“ಅಮ್ಮ! ಈ ಮಾತು ರಾಜ ಭೀಮನಿಗೆ ಯಾವರೀತಿಯಲ್ಲೂ ತಿಳಿಯಬಾರದು! ನಿನ್ನ ಸನ್ನಿಧಿಯಲ್ಲಿ ದ್ವಿಜಸತ್ತಮ ಸುದೇವನಿಗೆ ಸೂಚನೆಗಳನ್ನು ಕೊಡುತ್ತೇನೆ.

03068015a ಯಥಾ ನ ನೃಪತಿರ್ಭೀಮಃ ಪ್ರತಿಪದ್ಯೇತ ಮೇ ಮತಂ।
03068015c ತಥಾ ತ್ವಯಾ ಪ್ರಯತ್ತವ್ಯಂ ಮಮ ಚೇತ್ಪ್ರಿಯಮಿಚ್ಚಸಿ।।

ನೀನು ನನಗೆ ಪ್ರಿಯವಾದುದನ್ನು ಮಾಡಲು ಇಚ್ಛಿಸಿದರೆ, ನನ್ನ ಈ ಉದ್ದೇಶವು ನೃಪತಿ ಭೀಮನಿಗೆ ತಿಳಿಯದಂತೆ ನೋಡಿಕೊಳ್ಳಬೇಕು.

03068016a ಯಥಾ ಚಾಹಂ ಸಮಾನೀತಾ ಸುದೇವೇನಾಶು ಬಾಂಧವಾನ್।
03068016c ತೇನೈವ ಮಂಗಲೇನಾಶು ಸುದೇವೋ ಯಾತು ಮಾಚಿರಂ।
03068016 ಸಮಾನೇತುಂ ನಲಂ ಮಾತರಯೋಧ್ಯಾಂ ನಗರೀಮಿತಃ।।

ಅಮ್ಮ! ಹೇಗೆ ಸುದೇವನು ನನ್ನನ್ನು ಬಂಧುಗಳೊಡನೆ ಕೂಡಿಸಿದನೋ ಅದೇ ಮಂಗಲಕಾರಕ ಸುದೇವನು ಈಗಲೇ ಅಯೋಧ್ಯಾ ನಗರಿಗೆ ಹೋಗಿ ನಲನೊಂದಿಗೆ ನನ್ನ ಸಮಾಗಮವಾಗುವಂತೆ ಮಾಡಲಿ.”

03068017a ವಿಶ್ರಾಂತಂ ಚ ತತಃ ಪಶ್ಚಾತ್ಪರ್ಣಾದಂ ದ್ವಿಜಸತ್ತಮಂ।
03068017c ಅರ್ಚಯಾಮಾಸ ವೈದರ್ಭೀ ಧನೇನಾತೀವ ಭಾಮಿನೀ।।

ದ್ವಿಜಸತ್ತಮ ಪರ್ಣಾದನು ವಿಶ್ರಾಂತಿಯನ್ನು ಪಡೆದ ನಂತರ ಭಾಮಿನಿ ವೈದರ್ಭಿಯು ಅವನನ್ನು ಅತೀವ ಧನದಿಂದ ಅರ್ಚಿಸಿದಳು.

03068018a ನಲೇ ಚೇಹಾಗತೇ ವಿಪ್ರ ಭೂಯೋ ದಾಸ್ಯಾಮಿ ತೇ ವಸು।
03068018c ತ್ವಯಾ ಹಿ ಮೇ ಬಹು ಕೃತಂ ಯಥಾ ನಾನ್ಯಃ ಕರಿಷ್ಯತಿ।
03068018 ಯದ್ಭರ್ತ್ರಾಹಂ ಸಮೇಷ್ಯಾಮಿ ಶೀಘ್ರಮೇವ ದ್ವಿಜೋತ್ತಮ।।

“ವಿಪ್ರ! ನಲನು ಇಲ್ಲಿಗೆ ಬಂದಮೇಲೆ ಇನ್ನೂ ಹೆಚ್ಚಿನ ಸಂಪತ್ತನ್ನು ನಿನಗೆ ಕೊಡುತ್ತೇನೆ. ಯಾಕೆಂದರೆ ಬೇರೆ ಯಾರೂ ಮಾಡಲಿಕ್ಕಾಗದೇ ಇರುವುದನ್ನು ನೀನು ನನಗೆ ಮಾಡಿದ್ದೀಯೆ. ದ್ವಿಜೋತ್ತಮ! ಶೀಘ್ರದಲ್ಲಿಯೇ ನಾನು ನನ್ನ ಪತಿಯನ್ನು ಸೇರುತ್ತೇನೆ.”

03068019a ಏವಮುಕ್ತೋಽರ್ಚಯಿತ್ವಾ ತಾಮಾಶೀರ್ವಾದೈಃ ಸುಮಂಗಲೈಃ।
03068019c ಗೃಹಾನುಪಯಯೌ ಚಾಪಿ ಕೃತಾರ್ಥಃ ಸ ಮಹಾಮನಾಃ।।

ಈ ರೀತಿ ಕೇಳಿ ಕೃತಾರ್ಥನಾದ ಆ ಮಹಾಮನಸ್ಕನು ಸುಮಂಗಲ ಆಶೀರ್ವಾದಗಳಿಂದ ಅವಳನ್ನು ಅರ್ಚಿಸಿ ತನ್ನ ಮನೆಗೆ ತೆರಳಿದನು.

03068020a ತತಶ್ಚಾನಾಯ್ಯ ತಂ ವಿಪ್ರಂ ದಮಯಂತೀ ಯುಧಿಷ್ಠಿರ।
03068020c ಅಬ್ರವೀತ್ಸನ್ನಿಧೌ ಮಾತುರ್ದುಃಖಶೋಕಸಮನ್ವಿತಾ।।

ಯುಧಿಷ್ಠಿರ! ನಂತರ ದಮಯಂತಿಯು ಆ ವಿಪ್ರನನ್ನು (ಸುದೇವನನ್ನು) ಪುನಃ ಕರೆಯಿಸಿ ತಾಯಿಯ ಸನ್ನಿಧಿಯಲ್ಲಿ ಶೋಕಸಮನ್ವಿತಳಾಗಿ ಹೇಳಿದಳು:

03068021a ಗತ್ವಾ ಸುದೇವ ನಗರೀಮಯೋಧ್ಯಾವಾಸಿನಂ ನೃಪಂ।
03068021c ಋತುಪರ್ಣಂ ವಚೋ ಬ್ರೂಹಿ ಪತಿಮನ್ಯಂ ಚಿಕೀರ್ಷತೀ।
03068021 ಆಸ್ಥಾಸ್ಯತಿ ಪುನರ್ಭೈಮೀ ದಮಯಂತೀ ಸ್ವಯಂವರಂ।।

“ಸುದೇವ! ಅಯೋಧ್ಯಾವಾಸಿ ನೃಪ ಋತುಪರ್ಣನಲ್ಲಿ ಹೋಗಿ ಹೇಳು: “ಭೈಮಿ ದಮಯಂತಿಯು ಅನ್ಯ ಪತಿಯನ್ನು ಬಯಸಿ ಪುನಃ ಇಂದು ಸ್ವಯಂವರವನ್ನು ಇಟ್ಟುಕೊಂಡಿದ್ದಾಳೆ.

03068022a ತತ್ರ ಗಚ್ಚಂತಿ ರಾಜಾನೋ ರಾಜಪುತ್ರಾಶ್ಚ ಸರ್ವಶಃ।
03068022c ಯಥಾ ಚ ಗಣಿತಃ ಕಾಲಃ ಶ್ವೋಭೂತೇ ಸ ಭವಿಷ್ಯತಿ।।

ಎಲ್ಲ ರಾಜರೂ ರಾಜಪುತ್ರರೂ ಅಲ್ಲಿಗೆ ಹೋಗುತ್ತಿದ್ದಾರೆ. ಕಾಲ ಗಣಿತದ ಪ್ರಕಾರ ಅದು ನಾಳೆಯೇ ನಡೆಯುತ್ತಿದೆ.

03068023a ಯದಿ ಸಂಭಾವನೀಯಂ ತೇ ಗಚ್ಚ ಶೀಘ್ರಮರಿಂದಮ।
03068023c ಸೂರ್ಯೋದಯೇ ದ್ವಿತೀಯಂ ಸಾ ಭರ್ತಾರಂ ವರಯಿಷ್ಯತಿ।
03068023 ನ ಹಿ ಸ ಜ್ಞಾಯತೇ ವೀರೋ ನಲೋ ಜೀವನ್ಮೃತೋಽಪಿ ವಾ।।

ಅರಿಂದಮ! ಸಾಧ್ಯವಿದ್ದರೆ ಶೀಘ್ರದಲ್ಲಿಯೇ ಹೊರಡು. ಸೂರ್ಯೋದಯದಲ್ಲಿಯೇ ಅವಳು ಎರಡನೆಯ ಪತಿಯನ್ನು ವರಿಸುತ್ತಾಳೆ. ಆ ವೀರ ನಲನು ಜೀವಂತನಿದ್ದಾನೋ ಮೃತನಾಗಿದ್ದಾನೋ ತಿಳಿಯದು.””

03068024a ಏವಂ ತಯಾ ಯಥೋಕ್ತಂ ವೈ ಗತ್ವಾ ರಾಜಾನಮಬ್ರವೀತ್।
03068024c ಋತುಪರ್ಣಂ ಮಹಾರಾಜ ಸುದೇವೋ ಬ್ರಾಹ್ಮಣಸ್ತದಾ।।

ರಾಜ! ನಂತರ ಬ್ರಾಹ್ಮಣ ಸುದೇವನು ಮಹಾರಾಜ ಋತುಪರ್ಣನಲ್ಲಿಗೆ ಹೋಗಿ ಅವಳು ಹೇಳಿಕೊಟ್ಟ ಹಾಗೆಯೇ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀ ಪುನಃಸ್ವಯಂವರಕಥನೇ ಅಷ್ಟಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀ ಪುನಃಸ್ವಯಂವರ ಕಥನ ಎನ್ನುವ ಅರವತ್ತೆಂಟನೆಯ ಅಧ್ಯಾಯವು.