ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 67
ಸಾರ
ನಲನನ್ನು ಹುಡುಕಲು ಬ್ರಾಹ್ಮಣರನ್ನು ಕಳುಹಿಸಿದ್ದುದು (1-7). ಹೊರಡುವಾಗ ದಮಯಂತಿಯು ಬ್ರಾಹ್ಮಣರಿಗೆ ಕೆಲವು ಪ್ರಶ್ನೆಗಳನ್ನಿತ್ತು ಈ ಪ್ರಶ್ನೆಗಳಿಗೆ ಉತ್ತರಿಸುವವನ ವಿವರಗಳನ್ನು ತಿಳಿದು ಬನ್ನಿ ಎಂದು ಹೇಳಿ ಕಳುಹಿಸುವುದು (8-22).
03067001 ದಮಯಂತ್ಯುವಾಚ।
03067001a ಮಾಂ ಚೇದಿಚ್ಚಸಿ ಜೀವಂತೀಂ ಮಾತಃ ಸತ್ಯಂ ಬ್ರವೀಮಿ ತೇ।
03067001c ನರವೀರಸ್ಯ ವೈ ತಸ್ಯ ನಲಸ್ಯಾನಯನೇ ಯತ।।
ದಮಯಂತಿಯು ಹೇಳಿದಳು: “ಮಾತಾ! ನಾನು ಸತ್ಯವನ್ನು ಹೇಳುತ್ತಿದ್ದೇನೆ. ನನ್ನನ್ನು ಜೀವಂತ ನೋಡಬೇಕೆಂದು ನಿನ್ನ ಇಚ್ಚೆ ಇದ್ದರೆ ಆ ನರವೀರ ನಲನನ್ನು ಇಲ್ಲಿಗೆ ಕರೆತರೆಸು.””
03067002 ಬೃಹದಶ್ವ ಉವಾಚ।
03067002a ದಮಯಂತ್ಯಾ ತಥೋಕ್ತಾ ತು ಸಾ ದೇವೀ ಭೃಶದುಃಖಿತಾ।
03067002c ಬಾಷ್ಪೇಣ ಪಿಹಿತಾ ರಾಜನ್ನೋತ್ತರಂ ಕಿಂ ಚಿದಬ್ರವೀತ್।।
ಬೃಹದಶ್ವನು ಹೇಳಿದನು: “ದಮಯಂತಿಯ ಈ ಮಾತುಗಳನ್ನು ಕೇಳಿ ಬಹುದುಃಖಿತಳಾಗಿ ಕಣ್ಣೀರಿಡುತ್ತಿದ್ದ ಆ ದೇವಿಗೆ ಯಾವುದೇ ರೀತಿಯ ಉತ್ತರವನ್ನು ಕೊಡಲೂ ಆಗಲಿಲ್ಲ.
03067003a ತದವಸ್ಥಾಂ ತು ತಾಂ ದೃಷ್ಟ್ವಾ ಸರ್ವಮಂತಃಪುರಂ ತದಾ।
03067003c ಹಾಹಾಭೂತಮತೀವಾಸೀದ್ಭೃಶಂ ಚ ಪ್ರರುರೋದ ಹ।।
ಈ ಅವಸ್ಥೆಯನ್ನು ನೋಡಿ ಅಂತಃಪುರದಲ್ಲಿದ್ದವರೆಲ್ಲರೂ “ಹಾ! ಹಾ!” ಎಂದು ಅತೀವ ದುಃಖದಿಂದ ರೋದಿಸಿದರು.
03067004a ತತೋ ಭೀಮಂ ಮಹಾರಾಜ ಭಾರ್ಯಾ ವಚನಮಬ್ರವೀತ್।
03067004c ದಮಯಂತೀ ತವ ಸುತಾ ಭರ್ತಾರಮನುಶೋಚತಿ।।
03067005a ಅಪಕೃಷ್ಯ ಚ ಲಜ್ಜಾಂ ಮಾಂ ಸ್ವಯಮುಕ್ತವತೀ ನೃಪ।
03067005c ಪ್ರಯತಂತು ತವ ಪ್ರೇಷ್ಯಾಃ ಪುಣ್ಯಶ್ಲೋಕಸ್ಯ ದರ್ಶನೇ।।
ಆಗ ಮಹಾರಾಣಿಯು ಭೀಮನಿಗೆ ಹೇಳಿದಳು: “ನಿನ್ನ ಸುತೆ ದಮಯಂತಿಯು ತನ್ನ ಪತಿಯನ್ನು ಕುರಿತು ಶೋಕಿಸುತ್ತಿದ್ದಾಳೆ. ರಾಜ! ಸ್ವಲ್ಪವೂ ಲಜ್ಜಿಸದೇ ಅವಳು ಸ್ವತಃ ನನ್ನಲ್ಲಿ ಈ ಮಾತನ್ನು ಹೇಳಿಕೊಂಡಿದ್ದಾಳೆ. ಪುಣ್ಯಶ್ಲೋಕನನ್ನು ಹುಡುಕಲು ನಿನ್ನ ಜನರನ್ನು ಕಳುಹಿಸಿಕೊಡು.”
03067006a ತಯಾ ಪ್ರಚೋದಿತೋ ರಾಜಾ ಬ್ರಾಹ್ಮಣಾನ್ವಶವರ್ತಿನಃ।
03067006c ಪ್ರಾಸ್ಥಾಪಯದ್ದಿಶಃ ಸರ್ವಾ ಯತಧ್ವಂ ನಲದರ್ಶನೇ।।
ಅವಳಿಂದ ಪ್ರಚೋದಿತನಾದ ರಾಜನು ನಲನನ್ನು ಹುಡುಕಲು ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಬ್ರಾಹ್ಮಣರನ್ನು ಎಲ್ಲ ದಿಕ್ಕುಗಳಿಗೂ ಕಳುಹಿಸಿದನು.
03067007a ತತೋ ವಿದರ್ಭಾಧಿಪತೇರ್ನಿಯೋಗಾದ್ಬ್ರಾಹ್ಮಣರ್ಷಭಾಃ।
03067007c ದಮಯಂತೀಮಥೋ ದೃಷ್ಟ್ವಾ ಪ್ರಸ್ಥಿತಾಃ ಸ್ಮೇತ್ಯಥಾಬ್ರುವನ್।।
ವಿದರ್ಭಾಧಿಪತಿಯ ಆದೇಶದಂತೆ ಆ ಬ್ರಾಹ್ಮಣರ್ಷಭರು ದಮಯಂತಿಯನ್ನು ಕಂಡು “ನಾವು ಹೊರಡುತ್ತಿದ್ದೇವೆ!” ಎಂದರು.
03067008a ಅಥ ತಾನಬ್ರವೀದ್ಭೈಮೀ ಸರ್ವರಾಷ್ಟ್ರೇಷ್ವಿದಂ ವಚಃ।
03067008c ಬ್ರುವಧ್ವಂ ಜನಸಂಸತ್ಸು ತತ್ರ ತತ್ರ ಪುನಃ ಪುನಃ।।
ಭೈಮಿಯು ಅವರನ್ನುದ್ದೇಶಿಸಿ ಹೇಳಿದಳು: “ಎಲ್ಲಾ ರಾಷ್ಟ್ರಗಳಲ್ಲಿ ಮತ್ತು ಎಲ್ಲೆಲ್ಲಿ ಜನಸಮೂಹಗಳಿರುತ್ತವೆಯೋ ಅಲ್ಲಲ್ಲಿ ಈ ಪ್ರಶ್ನೆಯನ್ನು ಪುನಃ ಪುನಃ ವಾಚಿಸಿ:
03067009a ಕ್ವ ನು ತ್ವಂ ಕಿತವ ಚಿತ್ತ್ವಾ ವಸ್ತ್ರಾರ್ಧಂ ಪ್ರಸ್ಥಿತೋ ಮಮ।
03067009c ಉತ್ಸೃಜ್ಯ ವಿಪಿನೇ ಸುಪ್ತಾಮನುರಕ್ತಾಂ ಪ್ರಿಯಾಂ ಪ್ರಿಯ।।
“ಪ್ರಿಯ! ವಿಪಿನದಲ್ಲಿ ಅನುರಕ್ತಳಾಗಿ ಮಲಗಿದ್ದ ನಿನ್ನ ಈ ಪ್ರಿಯೆಯ ಅರ್ಧ ವಸ್ತ್ರವನ್ನು ಕತ್ತರಿಸಿ ಬಿಟ್ಟು ಹೊರಟು ಹೋದ ನೀನು ಎಲ್ಲಿದ್ದೀಯೆ?
03067010a ಸಾ ವೈ ಯಥಾ ಸಮಾದಿಷ್ಟಾ ತತ್ರಾಸ್ತೇ ತ್ವತ್ಪ್ರತೀಕ್ಷಿಣೀ।
03067010c ದಹ್ಯಮಾನಾ ಭೃಶಂ ಬಾಲಾ ವಸ್ತ್ರಾರ್ಧೇನಾಭಿಸಂವೃತಾ।।
ನೀನು ಅವಳಿಗೆ ಎಲ್ಲಿಗೆ ಹೋಗಲು ತೋರಿಸಿದ್ದೆಯೋ ಅಲ್ಲಿಯೇ ಮುಗ್ಧಳಾದ ಅವಳು ಅರ್ಧವಸ್ತ್ರವನ್ನೇ ಧರಿಸಿ ಶೋಕಸಂತಪ್ತಳಾಗಿ ನಿನ್ನನ್ನು ಪ್ರತೀಕ್ಷಿಸುತ್ತಿದ್ದಾಳೆ.
03067011a ತಸ್ಯಾ ರುದಂತ್ಯಾಃ ಸತತಂ ತೇನ ಶೋಕೇನ ಪಾರ್ಥಿವ।
03067011c ಪ್ರಸಾದಂ ಕುರು ವೈ ವೀರ ಪ್ರತಿವಾಕ್ಯಂ ದದಸ್ವ ಚ।।
ಪಾರ್ಥಿವ! ವೀರ! ನಿನ್ನ ಶೋಕದಿಂದ ಸತತವಾಗಿ ರೋದಿಸುತ್ತಿರುವ ಅವಳಿಗೆ ಪ್ರೀತಿಯುತ ಮಾತುಗಳನ್ನಿತ್ತು ಅನುಗ್ರಹಿಸು.”
03067012a ಏತದನ್ಯಚ್ಚ ವಕ್ತವ್ಯಂ ಕೃಪಾಂ ಕುರ್ಯಾದ್ಯಥಾ ಮಯಿ।
03067012c ವಾಯುನಾ ಧೂಯಮಾನೋ ಹಿ ವನಂ ದಹತಿ ಪಾವಕಃ।।
ವಾಯುವಿನಿಂದ ಹಬ್ಬಿಸಿದ ಪಾವಕನು ಹೇಗೆ ವನವನ್ನಿಡೀ ದಹಿಸುವನೋ ಹಾಗೆ ಎಲ್ಲೆಡೆಯೂ ಈ ವಾಖ್ಯವನ್ನು ಇದೇರೀತಿ ವಾಚಿಸಿ ನನ್ನ ಮೇಲೆ ಕೃಪೆ ಮಾಡಿ.
03067013a ಭರ್ತವ್ಯಾ ರಕ್ಷಣೀಯಾ ಚ ಪತ್ನೀ ಹಿ ಪತಿನಾ ಸದಾ।
03067013c ತನ್ನಷ್ಟಮುಭಯಂ ಕಸ್ಮಾದ್ಧರ್ಮಜ್ಞಸ್ಯ ಸತಸ್ತವ।।
“ಪತಿಯು ಯಾವಾಗಲೂ ಪತ್ನಿಯ ಸಹಾಯ ಮತ್ತು ರಕ್ಷಣೆ ಮಾಡಬೇಕಲ್ಲವೇ? ಆದರೆ ಧರ್ಮಜ್ಞನಾದ ನೀನು ಏಕೆ ಈ ಎರಡನ್ನೂ ತಿರಸ್ಕರಿಸಿದೆ?
03067014a ಖ್ಯಾತಃ ಪ್ರಾಜ್ಞಃ ಕುಲೀನಶ್ಚ ಸಾನುಕ್ರೋಶಶ್ಚ ತ್ವಂ ಸದಾ।
03067014c ಸಂವೃತ್ತೋ ನಿರನುಕ್ರೋಶಃ ಶಂಕೇ ಮದ್ಭಾಗ್ಯಸಂಕ್ಷಯಾತ್।।
ನನ್ನ ಭಾಗ್ಯ ಕಳೆದು ಹೋದುದರಿಂದಲೇ ಸದಾ ಖ್ಯಾತನೂ. ಪ್ರಾಜ್ಞನೂ, ಕುಲೀನನೂ, ಅನುಕಂಪಿತನೂ ಆಗಿದ್ದ ನೀನು ಈಗ ನಿರನುಕ್ರೋಷನಾಗಿದ್ದೀಯೆ ಎಂದು ಶಂಕಿಸುತ್ತೇನೆ.
03067015a ಸ ಕುರುಷ್ವ ಮಹೇಷ್ವಾಸ ದಯಾಂ ಮಯಿ ನರರ್ಷಭ।
03067015c ಆನೃಶಂಸ್ಯಂ ಪರೋ ಧರ್ಮಸ್ತ್ವತ್ತ ಏವ ಹಿ ಮೇ ಶ್ರುತಂ।।
ನರರ್ಷಭ! ಮಹೇಷ್ವಾಸ! ನನ್ನ ಮೇಲೆ ದಯೆತೋರು! ದಯೆಯೇ ಪರಮ ಧರ್ಮವೆಂದು ನಾನು ನಿನ್ನಿಂದಲೇ ಕೇಳಿದ್ದೇನೆ.”
03067016a ಏವಂ ಬ್ರುವಾಣಾನ್ಯದಿ ವಃ ಪ್ರತಿಬ್ರೂಯಾದ್ಧಿ ಕಶ್ಚನ।
03067016c ಸ ನರಃ ಸರ್ವಥಾ ಜ್ಞೇಯಃ ಕಶ್ಚಾಸೌ ಕ್ವ ಚ ವರ್ತತೇ।।
ನಿಮ್ಮ ಈ ಮಾತುಗಳಿಗೆ ಯಾರಾದರೂ ಪ್ರತಿಯಾಗಿ ಮಾತನಾಡಿದರೆ, ಆ ಮನುಷ್ಯನ ಕುರಿತು ಎಲ್ಲವನ್ನೂ - ಯಾರು, ಎಲ್ಲಿ ಏನು ಮಾಡುತ್ತಾನೆ - ತಿಳಿಯಿರಿ.
03067017a ಯಚ್ಚ ವೋ ವಚನಂ ಶ್ರುತ್ವಾ ಬ್ರೂಯಾತ್ಪ್ರತಿವಚೋ ನರಃ।
03067017c ತದಾದಾಯ ವಚಃ ಕ್ಷಿಪ್ರಂ ಮಮಾವೇದ್ಯಂ ದ್ವಿಜೋತ್ತಮಾಃ।।
ದ್ವಿಜೋತ್ತಮರೇ! ಈ ಮಾತುಗಳನ್ನು ಕೇಳಿ ಪ್ರತಿಯಾಗಿ ಯಾರಾದರೂ ಹೇಳಿದರೆ ತಕ್ಷಣವೇ ಅವರು ಹೇಳಿದ್ದುದನ್ನು ನನಗೆ ಬಂದು ತಿಳಿಸಿ.
03067018a ಯಥಾ ಚ ವೋ ನ ಜಾನೀಯಾಚ್ಚರತೋ ಭೀಮಶಾಸನಾತ್।
03067018c ಪುನರಾಗಮನಂ ಚೈವ ತಥಾ ಕಾರ್ಯಮತಂದ್ರಿತೈಃ।।
ಹಿಂದಿರುಗುವಾಗ ತಡಮಾಡಬಾರದು. ಮತ್ತು ನೀವು ಭೀಮನ ಹೇಳಿಕೆಯಂತೆ ಹೊರಗೆ ತಿರುಗುತ್ತಿದ್ದೀರಿ ಎಂದು ಅವನಿಗೆ ತಿಳಿಯಬಾರದು.
03067019a ಯದಿ ವಾಸೌ ಸಮೃದ್ಧಃ ಸ್ಯಾದ್ಯದಿ ವಾಪ್ಯಧನೋ ಭವೇತ್।
03067019c ಯದಿ ವಾಪ್ಯರ್ಥಕಾಮಃ ಸ್ಯಾಜ್ಜ್ಞೇಯಮಸ್ಯ ಚಿಕೀರ್ಷಿತಂ।।
ಅವನು ಶ್ರೀಮಂತನಿರಲಿ ಅಥವಾ ಬಡವನಿರಲಿ ಅಥವಾ ಐಶ್ವರ್ಯದ ಹಸಿವೆಯಿಂದಿರಲಿ, ಅವನ ಉದ್ದೇಶಗಳನ್ನು ತಿಳಿಯಿರಿ.”
03067020a ಏವಮುಕ್ತಾಸ್ತ್ವಗಚ್ಚಂಸ್ತೇ ಬ್ರಾಹ್ಮಣಾಃ ಸರ್ವತೋದಿಶಂ।
03067020c ನಲಂ ಮೃಗಯಿತುಂ ರಾಜಂಸ್ತಥಾ ವ್ಯಸನಿನಂ ತದಾ।।
ಇದನ್ನು ಕೇಳಿ ಹೊರಟ ಬ್ರಾಹ್ಮಣರು ವ್ಯಸನಿ ರಾಜ ನಲನನ್ನು ಅರಸುತ್ತಾ ಸರ್ವದಿಕ್ಕುಗಳಲ್ಲಿ ಹೊರಟರು.
03067021a ತೇ ಪುರಾಣಿ ಸರಾಷ್ಟ್ರಾಣಿ ಗ್ರಾಮಾನ್ಘೋಷಾಂಸ್ತಥಾಶ್ರಮಾನ್।
03067021c ಅನ್ವೇಷಂತೋ ನಲಂ ರಾಜನ್ನಾಧಿಜಗ್ಮುರ್ದ್ವಿಜಾತಯಃ।।
ನಲನನ್ನು ಅನ್ವೇಶಿಸುತ್ತಾ ಆ ದ್ವಿಜರು ಪುರ, ರಾಷ್ಟ್ರ, ಗ್ರಾಮ, ಗೋಶಾಲೆ, ಆಶ್ರಮ, ಎಲ್ಲಾ ಕಡೆ ಹೋದರು.
03067022a ತಚ್ಚ ವಾಕ್ಯಂ ತಥಾ ಸರ್ವೇ ತತ್ರ ತತ್ರ ವಿಶಾಂ ಪತೇ।
03067022c ಶ್ರಾವಯಾಂ ಚಕ್ರಿರೇ ವಿಪ್ರಾ ದಮಯಂತ್ಯಾ ಯಥೇರಿತಂ।।
ವಿಶಾಂಪತೇ! ವಿಪ್ರರು ಹೋದಲ್ಲೆಲ್ಲಾ ದಮಯಂತಿಯು ಕೊಟ್ಟಿದ್ದ ವಾಖ್ಯವನ್ನು ಎಲ್ಲರಿಗೂ ಕೇಳುವಂತೆ ಹೇಳಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಾನ್ವೇಷಣೇ ಸಪ್ತಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಾನ್ವೇಷಣ ಎನ್ನುವ ಅರವತ್ತೇಳನೆಯ ಅಧ್ಯಾಯವು.