066 ನಲೋಪಾಖ್ಯಾನೇ ದಮಯಂತೀಸುದೇವಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 66

ಸಾರ

ದಮಯಂತಿಯ ಮಚ್ಚೆಯನ್ನು ನೋಡಿ ಅವಳು ತನ್ನ ತಂಗಿಯ ಮಗಳೆಂದು ಗುರುತಿಸಿದ (1-10) ರಾಜಮಾತೆಯು, ತಂದೆಯ ಮನೆಗೆ ಮಕ್ಕಳನ್ನು ನೋಡಲು ಹೋಗ ಬಯಸಿದ ಅವಳನ್ನು ಕಳುಹಿಸಿಕೊಟ್ಟಿದುದು (11-26).

03066001 ಸುದೇವ ಉವಾಚ।
03066001a ವಿದರ್ಭರಾಜೋ ಧರ್ಮಾತ್ಮಾ ಭೀಮೋ ಭೀಮಪರಾಕ್ರಮಃ।
03066001c ಸುತೇಯಂ ತಸ್ಯ ಕಲ್ಯಾಣೀ ದಮಯಂತೀತಿ ವಿಶ್ರುತಾ।।

ಸುದೇವನು ಹೇಳಿದನು: “ಭೀಮಪರಾಕ್ರಮಿ ಧರ್ಮಾತ್ಮಾ ಭೀಮನು ವಿದರ್ಭದ ರಾಜ. ದಮಯಂತಿ ಎಂದು ವಿಶ್ರುತ ಕಲ್ಯಾಣಿ ಅವನ ಮಗಳು.

03066002a ರಾಜಾ ತು ನೈಷಧೋ ನಾಮ ವೀರಸೇನಸುತೋ ನಲಃ।
03066002c ಭಾರ್ಯೇಯಂ ತಸ್ಯ ಕಲ್ಯಾಣೀ ಪುಣ್ಯಶ್ಲೋಕಸ್ಯ ಧೀಮತಃ।।

ರಾಜ ನೈಷಧನು ನಲ ಎಂಬ ಹೆಸರಿನ ವೀರಸೇನನ ಮಗ. ಆ ಧೀಮತ ಪುಣ್ಯಶ್ಲೋಕನ ಭಾರ್ಯೆಯೇ ಆ ಕಲ್ಯಾಣಿ.

03066003a ಸ ವೈ ದ್ಯೂತೇ ಜಿತೋ ಭ್ರಾತ್ರಾ ಹೃತರಾಜ್ಯೋ ಮಹೀಪತಿಃ।
03066003c ದಮಯಂತ್ಯಾ ಗತಃ ಸಾರ್ಧಂ ನ ಪ್ರಜ್ಞಾಯತ ಕರ್ಹಿ ಚಿತ್।।

ಆ ಮಹೀಪತಿಯು ದ್ಯೂತದಲ್ಲಿ ಸಹೋದರನಿಂದ ಗೆಲ್ಲಲ್ಪಟ್ಟು, ರಾಜ್ಯವನ್ನು ಕಳಿದುಕೊಂಡು ದಮಯಂತಿಯೊಡಗೂಡಿ ಹೊರಟುಹೋದನು. ಅವನು ಎಲ್ಲಿಗೆ ಹೋದನೆಂದು ಯಾರಿಗೂ ತಿಳಿಯದು.

03066004a ತೇ ವಯಂ ದಮಯಂತ್ಯರ್ಥೇ ಚರಾಮಃ ಪೃಥಿವೀಮಿಮಾಂ।
03066004c ಸೇಯಮಾಸಾದಿತಾ ಬಾಲಾ ತವ ಪುತ್ರನಿವೇಶನೇ।।

ದಮಯಂತಿಗೋಸ್ಕರವಾಗಿ ನಾವು ಈ ಪೃಥ್ವಿಯನ್ನೇ ತಿರುಗುತ್ತಿದ್ದೇವೆ. ಈಗ ನಿನ್ನ ಪುತ್ರನ ನಿವೇಶನದಲ್ಲಿ ಆ ಬಾಲಕಿಯನ್ನು ನೋಡಿದ್ದೇನೆ.

03066005a ಅಸ್ಯಾ ರೂಪೇಣ ಸದೃಶೀ ಮಾನುಷೀ ನೇಹ ವಿದ್ಯತೇ।
03066005c ಅಸ್ಯಾಶ್ಚೈವ ಭ್ರುವೋರ್ಮಧ್ಯೇ ಸಹಜಃ ಪಿಪ್ಲುರುತ್ತಮಃ।
03066005 ಶ್ಯಾಮಾಯಾಃ ಪದ್ಮಸಂಕಾಶೋ ಲಕ್ಷಿತೋಽಂತರ್ಹಿತೋ ಮಯಾ।।

ರೂಪದಲ್ಲಿ ಇವಳ ಸದೃಶಳಾದ ಇನ್ನೊಬ್ಬ ಮಾನುಷಿಯಿಲ್ಲ. ಈ ಶ್ಯಾಮೆಯ ಹುಬ್ಬುಗಳ ಮಧ್ಯೆ ಸಹಜವಾದ ಉತ್ತಮವಾದ, ಪದ್ಮದ ಆಕಾರದ ಮಚ್ಚೆಯಿದ್ದುದನ್ನು ನಾನು ನೋಡಿದ್ದೆ; ಈಗ ಅದು ಕಾಣುತ್ತಿಲ್ಲ.

03066006a ಮಲೇನ ಸಂವೃತೋ ಹ್ಯಸ್ಯಾಸ್ತನ್ವಭ್ರೇಣೇವ ಚಂದ್ರಮಾಃ।
03066006c ಚಿಹ್ನಭೂತೋ ವಿಭೂತ್ಯರ್ಥಮಯಂ ಧಾತ್ರಾ ವಿನಿರ್ಮಿತಃ।।

ಚಂದ್ರಮನು ಹಗುರಾದ ಮೋಡಗಳಿಂದ ಮುಚ್ಚಿಕೊಂಡಿರುವಂತೆ, ವಿಧಾತನು ವಿಭೂತಿ ಮತ್ತು ಐಶ್ವರ್ಯಗಳ ಚಿಹ್ನೆಯೆಂದು ಅವಳ ಮುಖದ ಮೇಲೆ ಇಟ್ಟ ಮಚ್ಚೆಯು ಕೊಳೆಯಿಂದ ಆವೃತವಾಗಿದೆ.

03066007a ಪ್ರತಿಪತ್ಕಲುಷೇವೇಂದೋರ್ಲೇಖಾ ನಾತಿ ವಿರಾಜತೇ।
03066007c ನ ಚಾಸ್ಯಾ ನಶ್ಯತೇ ರೂಪಂ ವಪುರ್ಮಲಸಮಾಚಿತಂ।
03066007 ಅಸಂಸ್ಕೃತಮಪಿ ವ್ಯಕ್ತಂ ಭಾತಿ ಕಾಂಚನಸನ್ನಿಭಂ।।

ಮೋಡ ಆವರಿಸಿದ ಅಮವಾಸ್ಯೆಯ ರಾತ್ರಿ ಚಂದ್ರನ ಹೊರ ನಕ್ಷೆ ಹೇಗೋ ಹಾಗೆ ಈಗ ಅದು ಸರಿಯಾಗಿ ಕಾಣುತ್ತಿಲ್ಲ. ಆದರೆ ಅವಳ ರೂಪವು ಸ್ಪಲ್ಪವೂ ನಶಿಸಿಲ್ಲ; ಅವಳು ಮಲಿನಳಾಗಿರಬಹುದು ಮತ್ತು ಏನೂ ಅಲಂಕಾರಗಳನ್ನು ಮಾಡಿಕೊಳ್ಳದೇ ಇರಬಹುದು. ಆದರೂ ನೋಡುವವರಿಗೆ ಅವಳು ಕಾಂಚನದಂತೆ ಬೆಳಗುತ್ತಿದ್ದಾಳೆ.

03066008a ಅನೇನ ವಪುಷಾ ಬಾಲಾ ಪಿಪ್ಲುನಾನೇನ ಚೈವ ಹ।
03066008c ಲಕ್ಷಿತೇಯಂ ಮಯಾ ದೇವೀ ಪಿಹಿತೋಽಗ್ನಿರಿವೋಷ್ಮಣಾ।।

ಈ ದೇಹ ಮತ್ತು ಮಚ್ಚೆಯನ್ನು ನೋಡಿಯೇ ನಾನು ನನ್ನ ಬಾಲಕಿ ದೇವಿಯನ್ನು ಹೊಗೆಯಿಂದ ಮುಚ್ಚಿಕೊಂಡ ಬೆಂಕಿಯನ್ನು ಹೇಗೋ ಹಾಗೆ ಗುರುತಿಸಿದೆ.””

03066009 ಬೃಹದಶ್ವ ಉವಾಚ।
03066009a ತಚ್ಛೃತ್ವಾ ವಚನಂ ತಸ್ಯ ಸುದೇವಸ್ಯ ವಿಶಾಂ ಪತೇ।
03066009c ಸುನಂದಾ ಶೋಧಯಾಮಾಸ ಪಿಪ್ಲುಪ್ರಚ್ಚಾದನಂ ಮಲಂ।।

ಬೃಹದಶ್ವನು ಹೇಳಿದನು: “ವಿಶಾಂಪತೆ! ಸುದೇವನ ಈ ಮಾತುಗಳನ್ನು ಕೇಳಿದ ಸುನಂದಳು ಆ ಮಚ್ಚೆಯನ್ನು ಮುಚ್ಚಿದ್ದ ಕೊಳೆಯನ್ನು ತೊಳೆಸಿದಳು.

03066010a ಸ ಮಲೇನಾಪಕೃಷ್ಟೇನ ಪಿಪ್ಲುಸ್ತಸ್ಯಾ ವ್ಯರೋಚತ।
03066010c ದಮಯಂತ್ಯಾಸ್ತದಾ ವ್ಯಭ್ರೇ ನಭಸೀವ ನಿಶಾಕರಃ।।
03066011a ಪಿಪ್ಲುಂ ದೃಷ್ಟ್ವಾ ಸುನಂದಾ ಚ ರಾಜಮಾತಾ ಚ ಭಾರತ।
03066011c ರುದಂತ್ಯೌ ತಾಂ ಪರಿಷ್ವಜ್ಯ ಮುಹೂರ್ತಮಿವ ತಸ್ಥತುಃ।
03066011 ಉತ್ಸೃಜ್ಯ ಬಾಷ್ಪಂ ಶನಕೈ ರಾಜಮಾತೇದಮಬ್ರವೀತ್।।

ಕೊಳೆಯನ್ನು ತೊಳೆದನಂತರ, ಮೋಡವಿಲ್ಲದ ಆಕಾಶದಲ್ಲಿ ನಿಶಾಕರನು ಹೊಳೆಯುವಂತೆ ದಮಯಂತಿಯ ಮಚ್ಚೆಯು ಕಾಣಿಸಿಕೊಂಡಿತು. ಭಾರತ! ಮಚ್ಚೆಯನ್ನು ನೋಡಿದ ಸುನಂದ ಮತ್ತು ರಾಜಮಾತೆಯು ಅವಳನ್ನು ಸ್ವಲ್ಪ ಹೊತ್ತು ಅಪ್ಪಿ ಹಿಡಿದು ರೋದಿಸಿದರು. ಕಣ್ಣೀರನ್ನು ಒರೆಸಿಕೊಂಡು ರಾಜಮಾತೆಯು ಮೃದುವಾಗಿ ಹೇಳಿದಳು:

03066012a ಭಗಿನ್ಯಾ ದುಹಿತಾ ಮೇಽಸಿ ಪಿಪ್ಲುನಾನೇನ ಸೂಚಿತಾ।
03066012c ಅಹಂ ಚ ತವ ಮಾತಾ ಚ ರಾಜನ್ಯಸ್ಯ ಮಹಾತ್ಮನಃ।
03066012 ಸುತೇ ದಶಾರ್ಣಾಧಿಪತೇಃ ಸುದಾಮ್ನಶ್ಚಾರುದರ್ಶನೇ।।

“ನೀನು ನನ್ನ ತಂಗಿಯ ಮಗಳು. ನಿನ್ನ ಮಚ್ಚೆಯು ಸೂಚಿಸುತ್ತಿದೆ. ಚಾರುದರ್ಶಿನೀ! ನಾನು ಮತ್ತು ನಿನ್ನ ತಾಯಿ ದಶಾರ್ಣಾಧಿಪತಿ ಮಹಾತ್ಮ ರಾಜ ಸುದಾಮನ ಪುತ್ರಿಯರು.

03066013a ಭೀಮಸ್ಯ ರಾಜ್ಞಃ ಸಾ ದತ್ತಾ ವೀರಬಾಹೋರಹಂ ಪುನಃ।
03066013c ತ್ವಂ ತು ಜಾತಾ ಮಯಾ ದೃಷ್ಟಾ ದಶಾರ್ಣೇಷು ಪಿತುರ್ಗೃಹೇ।।

ಅವಳನ್ನು ಭೀಮರಾಜನಿಗೆ ಮತ್ತು ನನ್ನನ್ನು ವೀರಬಾಹುವಿಗೆ ಕೊಡಲಾಯಿತು. ನೀನು ಹುಟ್ಟಿದಾಗ ನಿನ್ನನ್ನು ನಾನು ನನ್ನ ತಂದೆಯ ಮನೆಯಲ್ಲಿ ನೋಡಿದ್ದೆ.

03066014a ಯಥೈವ ತೇ ಪಿತುರ್ಗೇಹಂ ತಥೇದಮಪಿ ಭಾಮಿನಿ।
03066014c ಯಥೈವ ಹಿ ಮಮೈಶ್ವರ್ಯಂ ದಮಯಂತಿ ತಥಾ ತವ।।

ಭಾಮಿನಿ! ದಮಯಂತಿ! ಈ ಮನೆಯೂ ಕೂಡ ನಿನ್ನ ತಂದೆಯ ಮನೆ. ಮತ್ತು ನನ್ನ ಈ ಐಶ್ವರ್ಯವು ನಿನ್ನದಿದ್ದಂತೆಯೇ.”

03066015a ತಾಂ ಪ್ರಹೃಷ್ಟೇನ ಮನಸಾ ದಮಯಂತೀ ವಿಶಾಂ ಪತೇ।
03066015c ಅಭಿವಾದ್ಯ ಮಾತುರ್ಭಗಿನೀಮಿದಂ ವಚನಮಬ್ರವೀತ್।।

ವಿಶಾಂಪತೇ! ಪ್ರಹೃಷ್ಟ ಮನಸ್ಕಳಾದ ದಮಯಂತಿಯು ತಾಯಿಯ ತಂಗಿಯನ್ನು ಅಭಿವಂದಿಸಿ ಈ ಮಾತುಗಳನ್ನು ಹೇಳಿದಳು:

03066016a ಅಜ್ಞಾಯಮಾನಾಪಿ ಸತೀ ಸುಖಮಸ್ಮ್ಯುಷಿತೇಹ ವೈ।
03066016c ಸರ್ವಕಾಮೈಃ ಸುವಿಹಿತಾ ರಕ್ಷ್ಯಮಾಣಾ ಸದಾ ತ್ವಯಾ।।

“ನಾನು ಯಾರೆಂದು ಗುರುತಿಸಲ್ಪಡದಿದ್ದರೂ ಇಲ್ಲಿ ನಿನ್ನ ರಕ್ಷಣೆಯಲ್ಲಿ ನನ್ನ ಎಲ್ಲ ಬಯಕೆಗಳೂ ಪೂರೈಸಲ್ಪಟ್ಟು ನಾನು ಸದಾ ಸುಖವಾಗಿಯೇ ಇದ್ದೆ.

03066017a ಸುಖಾತ್ಸುಖತರೋ ವಾಸೋ ಭವಿಷ್ಯತಿ ನ ಸಂಶಯಃ।
03066017c ಚಿರವಿಪ್ರೋಷಿತಾಂ ಮಾತರ್ಮಾಮನುಜ್ಞಾತುಮರ್ಹಸಿ।।

ಇನ್ನು ಮುಂದೆಯೂ ಇಲ್ಲಿ ನನ್ನ ವಾಸವು ಇನ್ನೂ ಸುಖಕರವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾತಾ! ಆದರೆ ನನಗೆ ಹೋಗಲು ಅನುಮತಿಯನ್ನು ಕೊಡಬೇಕು.

03066018a ದಾರಕೌ ಚ ಹಿ ಮೇ ನೀತೌ ವಸತಸ್ತತ್ರ ಬಾಲಕೌ।
03066018c ಪಿತ್ರಾ ವಿಹೀನೌ ಶೋಕಾರ್ತೌ ಮಯಾ ಚೈವ ಕಥಂ ನು ತೌ।।

ನನ್ನ ಇಬ್ಬರು ಬಾಲಕ ಮಕ್ಕಳು ಅಲ್ಲಿ ವಾಸಿಸುತ್ತಿದ್ದಾರೆ. ಪಿತೃ ವಿಹೀನರಾಗಿ ಶೋಕಾರ್ತರಾದ ಅವರು ನಾನೂ ಇಲ್ಲದೇ ಹೇಗಿದ್ದಾರೋ!

03066019a ಯದಿ ಚಾಪಿ ಪ್ರಿಯಂ ಕಿಂ ಚಿನ್ಮಯಿ ಕರ್ತುಮಿಹೇಚ್ಚಸಿ।
03066019c ವಿದರ್ಭಾನ್ಯಾತುಮಿಚ್ಚಾಮಿ ಶೀಘ್ರಂ ಮೇ ಯಾನಮಾದಿಶ।।

ನಾನು ವಿದರ್ಭಕ್ಕೆ ಹೋಗಲು ಬಯಸುತ್ತೇನೆ. ಇನ್ನೂ ನನಗೆ ಪ್ರಿಯವಾದುದ್ದನ್ನು ಮಾಡಬೇಕೆಂದೆನಿಸಿದರೆ, ಈಗಲೇ ಒಂದು ಯಾನವನ್ನು ತರಿಸಿಕೊಡು.”

03066020a ಬಾಢಮಿತ್ಯೇವ ತಾಮುಕ್ತ್ವಾ ಹೃಷ್ಟಾ ಮಾತೃಷ್ವಸಾ ನೃಪ।
03066020c ಗುಪ್ತಾಂ ಬಲೇನ ಮಹತಾ ಪುತ್ರಸ್ಯಾನುಮತೇ ತತಃ।।
03066021a ಪ್ರಸ್ಥಾಪಯದ್ರಾಜಮಾತಾ ಶ್ರೀಮತಾ ನರವಾಹಿನಾ।
03066021c ಯಾನೇನ ಭರತಶ್ರೇಷ್ಠ ಸ್ವನ್ನಪಾನಪರಿಚ್ಚದಾಂ।।

ನೃಪ! ಭರತಶ್ರೇಷ್ಠ! ಅವಳ ತಾಯಿಯ ಭಗಿನಿ ರಾಜಮಾತೆಯು ಹರ್ಷದಿಂದ ಖಂಡಿತ ಹಾಗೆಯೇ ಆಗಲಿ ಎಂದು ಪುತ್ರನ ಅನುಮತಿಯನ್ನು ಪಡೆದು ಪುರುಷರಿಂದ ಹೊರಲ್ಪಟ್ಟ, ಸಾಕಷ್ಟು ಅನ್ನ-ಪಾನ-ಸರಕುಗಳಿಂದ ತುಂಬಲ್ಪಟ್ಟ ಸುಂದರ ಪಲ್ಲಕ್ಕಿಯಲ್ಲಿ ದೊಡ್ಡ ದಂಡಿನೊಡನೆ ಅವಳನ್ನು ಕಳುಹಿಸಿಕೊಟ್ಟಳು.

03066022a ತತಃ ಸಾ ನಚಿರಾದೇವ ವಿದರ್ಭಾನಗಮಚ್ಶುಭಾ।
03066022c ತಾಂ ತು ಬಂಧುಜನಃ ಸರ್ವಃ ಪ್ರಹೃಷ್ಟಃ ಪ್ರತ್ಯಪೂಜಯತ್।।

ಹೀಗೆ ಆ ಶುಭೆಯು ಅಲ್ಪ ಸಮಯದಲ್ಲಿಯೇ ವಿದರ್ಭಕ್ಕೆ ಆಗಮಿಸಿದಳು. ಅವಳ ಬಂಧು ಜನರೆಲ್ಲರೂ ಪ್ರಹೃಷ್ಟರಾಗಿ ಅವಳನ್ನು ಸ್ವಾಗತಿಸಿದರು.

03066023a ಸರ್ವಾನ್ಕುಶಲಿನೋ ದೃಷ್ಟ್ವಾ ಬಾಂಧವಾನ್ದಾರಕೌ ಚ ತೌ।
03066023c ಮಾತರಂ ಪಿತರಂ ಚೈವ ಸರ್ವಂ ಚೈವ ಸಖೀಜನಂ।।
03066024a ದೇವತಾಃ ಪೂಜಯಾಮಾಸ ಬ್ರಾಹ್ಮಣಾಂಶ್ಚ ಯಶಸ್ವಿನೀ।
03066024c ವಿಧಿನಾ ಪರೇಣ ಕಲ್ಯಾಣೀ ದಮಯಂತೀ ವಿಶಾಂ ಪತೇ।।

ವಿಶಾಂಪತೆ! ಮಕ್ಕಳು ಮತ್ತು ಮಾತಾ-ಪಿತರನ್ನೂ ಸೇರಿ ಎಲ್ಲ ಬಂಧುಗಳು ಮತ್ತು ಸಖಿಜನರು ಕುಶಲದಿಂದಿದ್ದಾರೆಂದು ನೋಡಿ ಯಶಸ್ವಿನಿ ಕಲ್ಯಾಣಿ ದಮಯಂತಿಯು ವಿಧಿವತ್ತಾಗಿ ಬ್ರಾಹ್ಮಣ-ದೇವತೆಗಳ ಪೂಜೆಗೈದಳು.

03066025a ಅತರ್ಪಯತ್ಸುದೇವಂ ಚ ಗೋಸಹಸ್ರೇಣ ಪಾರ್ಥಿವಃ।
03066025c ಪ್ರೀತೋ ದೃಷ್ಟ್ವೈವ ತನಯಾಂ ಗ್ರಾಮೇಣ ದ್ರವಿಣೇನ ಚ।।

ಮಗಳನ್ನು ನೋಡಿ ಹರ್ಷಿತನಾದ ಪಾರ್ಥಿವನು ಸುದೇವನಿಗೆ ಗ್ರಾಮ, ದಕ್ಷಿಣೆ ಮತ್ತು ಸಹಸ್ರ ಗೋವುಗಳನ್ನಿತ್ತು ತೃಪ್ತಿಪಡಿಸಿದನು.

03066026a ಸಾ ವ್ಯುಷ್ಟಾ ರಜನೀಂ ತತ್ರ ಪಿತುರ್ವೇಶ್ಮನಿ ಭಾಮಿನೀ।
03066026c ವಿಶ್ರಾಂತಾ ಮಾತರಂ ರಾಜನ್ನಿದಂ ವಚನಮಬ್ರವೀತ್।।

ರಾಜನ್! ಅಲ್ಲಿ ತಂದೆಯ ಮನೆಯಲ್ಲಿ ರಾತ್ರಿಯನ್ನು ಕಳೆದು ವಿಶ್ರಾಂತಿಹೊಂದಿದ ಭಾಮಿನಿಯು ತನ್ನ ಮಾತೆಯೊಡನೆ ಈ ಮಾತುಗಳನ್ನಾಡಿದಳು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಸುದೇವಸಂವಾದೇ ಷಟ್‌ಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀ-ಸುದೇವ ಸಂವಾದ ಎನ್ನುವ ಅರವತ್ತಾರನೆಯ ಅಧ್ಯಾಯವು.