065 ನಲೋಪಾಖ್ಯಾನೇ ದಮಯಂತೀಸುದೇವಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 65

ಸಾರ

ಮಗಳು ಅಳಿಯರನ್ನು ಹುಡುಕಿ ಎಂದು ಭೀಮನಿಂದ ಕಳುಹಿಸಲ್ಪಟ್ಟ ಸುದೇವನೆನ್ನುವ ಬ್ರಾಹ್ಮಣನು ಚೇದಿನಗರಕ್ಕೆ ಬಂದಾಗ ದಮಯಂತಿಯನ್ನು ನೋಡಿದುದು (1-7). ಸುದೇವ-ದಮಯಂತಿಯರ ಸಂವಾದ (8-30). ಸುದೇವನು ದಮಯಂತಿಯ ನಿಜಕಥೆಯನ್ನು ರಾಜಮಾತೆಗೆ ತಿಳಿಸಿದುದು (31-37).

03065001 ಬೃಹದಶ್ವ ಉವಾಚ।
03065001a ಹೃತರಾಜ್ಯೇ ನಲೇ ಭೀಮಃ ಸಭಾರ್ಯೇ ಪ್ರೇಷ್ಯತಾಂ ಗತೇ।
03065001c ದ್ವಿಜಾನ್ಪ್ರಸ್ಥಾಪಯಾಮಾಸ ನಲದರ್ಶನಕಾಂಕ್ಷಯಾ।।

ಬೃಹದಶ್ವನು ಹೇಳಿದನು: “ರಾಜ್ಯವನ್ನು ಕಳೆದುಕೊಂಡ ನಲನು ಭಾರ್ಯೆ ಸಹಿತ ಹೊರಟುಹೋದ ನಂತರ ಭೀಮನು ನಲನನ್ನು ಹುಡುಕಲೋಸುಗ ದ್ವಿಜರನ್ನು ಕಳುಹಿಸಿದನು.

03065002a ಸಂದಿದೇಶ ಚ ತಾನ್ಭೀಮೋ ವಸು ದತ್ತ್ವಾ ಚ ಪುಷ್ಕಲಂ।
03065002c ಮೃಗಯಧ್ವಂ ನಲಂ ಚೈವ ದಮಯಂತೀಂ ಚ ಮೇ ಸುತಾಂ।।

ಪುಷ್ಕಳ ಧನವನ್ನಿತ್ತು ಭೀಮನು ಅವರಿಗೆ ಆದೇಶವನ್ನಿತ್ತನು: “ನಲ ಮತ್ತು ನನ್ನ ಮಗಳು ದಮಯಂತಿಯನ್ನು ಹುಡುಕಿ.

03065003a ಅಸ್ಮಿನ್ಕರ್ಮಣಿ ನಿಷ್ಪನ್ನೇ ವಿಜ್ಞಾತೇ ನಿಷಧಾಧಿಪೇ।
03065003c ಗವಾಂ ಸಹಸ್ರಂ ದಾಸ್ಯಾಮಿ ಯೋ ವಸ್ತಾವಾನಯಿಷ್ಯತಿ।
03065003e ಅಗ್ರಹಾರಂ ಚ ದಾಸ್ಯಾಮಿ ಗ್ರಾಮಂ ನಗರಸಮ್ಮಿತಂ।।

ಈ ಕಾರ್ಯವು ಸಂಪನ್ನವಾದ ನಂತರ, ನಿಷಾಧಾಧಿಪತಿಯನ್ನು ಕಂಡುಹಿಡಿದಲ್ಲಿ ಯಾರು ಅವರನ್ನು ಇಲ್ಲಿಗೆ ಕರೆತರುತ್ತೀರೋ ಅವರಿಗೆ ಸಹಸ್ರ ಗೋವುಗಳನ್ನು ಕೊಡುತ್ತೇನೆ. ಮತ್ತು ಅವನಿಗೆ ನಗರಕ್ಕೆ ಸಮನಾದ ದೊಡ್ಡ ಗ್ರಾಮವನ್ನು ಅಗ್ರಹಾರವನ್ನಾಗಿ ಕೊಡುತ್ತೇನೆ.

03065004a ನ ಚೇಚ್ಸ್ಚಕ್ಯಾವಿಹಾನೇತುಂ ದಮಯಂತೀ ನಲೋಽಪಿ ವಾ।
03065004c ಜ್ಞಾತಮಾತ್ರೇಽಪಿ ದಾಸ್ಯಾಮಿ ಗವಾಂ ದಶಶತಂ ಧನಂ।।

ಒಂದುವೇಳೆ ದಮಯಂತಿ ಮತ್ತು ನಲರನ್ನು ಇಲ್ಲಿಗೆ ಕರೆತರಲು ಸಾಧ್ಯವಾಗದಿದ್ದರೆ ಅವರನ್ನು ಪತ್ತೆಮಾಡಿದರೂ ಸಾಕು ಅಂಥವನಿಗೆ ಸಾವಿರ ಗೋಧನವನ್ನು ಕೊಡುತ್ತೇನೆ.”

03065005a ಇತ್ಯುಕ್ತಾಸ್ತೇ ಯಯುರ್ಹೃಷ್ಟಾ ಬ್ರಾಹ್ಮಣಾಃ ಸರ್ವತೋದಿಶಂ।
03065005c ಪುರರಾಷ್ಟ್ರಾಣಿ ಚಿನ್ವಂತೋ ನೈಷಧಂ ಸಹ ಭಾರ್ಯಯಾ।।

ಈ ರೀತಿ ಆದೇಶಗೊಂಡ ಬ್ರಾಹ್ಮಣರು ಸಂತೋಷದಿಂದ ನೈಷಧ ಮತ್ತು ಅವನ ಪತ್ನಿಯನ್ನು ಅರಸುತ್ತಾ ಎಲ್ಲ ದಿಕ್ಕುಗಳಿಗೂ ಹೊರಟರು.

03065006a ತತಶ್ಚೇದಿಪುರೀಂ ರಮ್ಯಾಂ ಸುದೇವೋ ನಾಮ ವೈ ದ್ವಿಜಃ।
03065006c ವಿಚಿನ್ವಾನೋಽಥ ವೈದರ್ಭೀಮಪಶ್ಯದ್ರಾಜವೇಶ್ಮನಿ।
03065006e ಪುಣ್ಯಾಹವಾಚನೇ ರಾಜ್ಞಃ ಸುನಂದಾಸಹಿತಾಂ ಸ್ಥಿತಾಂ।।
03065007a ಮಂದಪ್ರಖ್ಯಾಯಮಾನೇನ ರೂಪೇಣಾಪ್ರತಿಮೇನ ತಾಂ।
03065007c ಪಿನದ್ಧಾಂ ಧೂಮಜಾಲೇನ ಪ್ರಭಾಮಿವ ವಿಭಾವಸೋಃ।।

ಸುದೇವ ಎಂಬ ಹೆಸರಿನ ದ್ವಿಜನೊಬ್ಬನು ಅವರನ್ನು ಹುಡುಕುತ್ತಾ ರಮ್ಯ ಚೇದಿಪುರಿಗೆ ಬಂದು ಅಲ್ಲಿ ಅರಮನೆಯಲ್ಲಿ ರಾಜನ ಪುಣ್ಯಾಹವಾಚನದಲ್ಲಿ ಸುನಂದಳ ಪಕ್ಕದಲ್ಲಿ ನಿಂತಿರುವ, ತನ್ನ ಅಪ್ರತಿಮ ರೂಪದಿಂದ ಧೂಮ ಆವರಿಸಿದ ಸೂರ್ಯನ ಕಿರಣಗಳಂತೆ ಮಂದವಾಗಿ ಪ್ರಖರಿಸುತ್ತಿರುವ ವೈದರ್ಭಿಯನ್ನು ನೋಡಿದನು.

03065008a ತಾಂ ಸಮೀಕ್ಷ್ಯ ವಿಶಾಲಾಕ್ಷೀಮಧಿಕಂ ಮಲಿನಾಂ ಕೃಶಾಂ।
03065008c ತರ್ಕಯಾಮಾಸ ಭೈಮೀತಿ ಕಾರಣೈರುಪಪಾದಯನ್।।

ಬಹಳಷ್ಟು ಮಲಿನಳೂ ಕೃಶಳೂ ಆಗಿದ್ದ ಆ ವಿಶಾಲಾಕ್ಷಿಯನ್ನು ನೋಡಿ, ಹಲವಾರು ಕಾರಣಗಳನ್ನು ಕೊಡುತ್ತಾ ಅವಳು ಭೈಮಿಯೇ ಇರಬಹುದೆಂದು ತರ್ಕಿಸಿದನು.

03065009 ಸುದೇವ ಉವಾಚ।
03065009a ಯಥೇಯಂ ಮೇ ಪುರಾ ದೃಷ್ಟಾ ತಥಾರೂಪೇಯಮಂಗನಾ।
03065009c ಕೃತಾರ್ಥೋಽಸ್ಮ್ಯದ್ಯ ದೃಷ್ಟ್ವೇಮಾಂ ಲೋಕಕಾಂತಾಮಿವ ಶ್ರಿಯಂ।।

ಸುದೇವನು ಹೇಳಿದನು: “ಈ ಅಂಗನೆಯು ರೂಪದಲ್ಲಿ ನಾನು ಹಿಂದೆ ನೋಡಿದವಳ ಹಾಗೆಯೇ ಇದ್ದಾಳೆ. ಈಗ ನಾನು ಈ ಲೋಕಕಾಂತೆ ಶ್ರೀಯನ್ನು ನೋಡಿ ಕೃತಾರ್ಥನಾದೆ.

03065010a ಪೂರ್ಣಚಂದ್ರಾನನಾಂ ಶ್ಯಾಮಾಂ ಚಾರುವೃತ್ತಪಯೋಧರಾಂ।
03065010c ಕುರ್ವಂತೀಂ ಪ್ರಭಯಾ ದೇವೀಂ ಸರ್ವಾ ವಿತಿಮಿರಾ ದಿಶಃ।।
03065011a ಚಾರುಪದ್ಮಪಲಾಶಾಕ್ಷೀಂ ಮನ್ಮಥಸ್ಯ ರತೀಮಿವ।
03065011c ಇಷ್ಟಾಂ ಸರ್ವಸ್ಯ ಜಗತಃ ಪೂರ್ಣಚಂದ್ರಪ್ರಭಾಮಿವ।।
03065012a ವಿದರ್ಭಸರಸಸ್ತಸ್ಮಾದ್ದೈವದೋಷಾದಿವೋದ್ಧೃತಾಂ।

ಅವಳ ಮುಖವು ಪೂರ್ಣಚಂದ್ರನಂತಿದೆ. ಮೈ ಶ್ಯಾಮ ವರ್ಣ. ಅವಳ ಸ್ತನಗಳು ಸುಂದರವಾಗಿ ದುಂಡಾಗಿವೆ. ದೇವಿಯಂತೆ ತನ್ನ ಪ್ರಭೆಯಿಂದ ಸರ್ವ ದಿಶೆಗಳನ್ನೂ ಕತ್ತಲೆಯಿಲ್ಲದಂತೆ ಮಾಡುತ್ತಿದ್ದಾಳೆ. ಕಣ್ಣುಗಳು ಪದ್ಮ ಅಥವಾ ಪಲಾಶ ಪತ್ರಗಳಂತಿವೆ. ಮನ್ಮಥನ ರತಿಯಂತಿದ್ದಾಳೆ. ಜಗತ್ತಿನಲ್ಲಿ ಸರ್ವರಿಗೂ ಇಷ್ಟವಾಗುವ ಪೂರ್ಣಚಂದ್ರನ ಬೆಳಕಿನಂತೆ ಇದ್ದಾಳೆ. ದೈವ ದೋಷದಿಂದ ವಿದರ್ಭವೆಂಬ ಸರೋವರದಿಂದ ಎಳೆದು ಕಿತ್ತಂತೆ ಇದ್ದಾಳೆ.

03065012c ಮಲಪಂಕಾನುಲಿಪ್ತಾಂಗೀಂ ಮೃಣಾಲೀಮಿವ ತಾಂ ಭೃಶಂ।।
03065013a ಪೌರ್ಣಮಾಸೀಮಿವ ನಿಶಾಂ ರಾಹುಗ್ರಸ್ತನಿಶಾಕರಾಂ।
03065013c ಪತಿಶೋಕಾಕುಲಾಂ ದೀನಾಂ ಶುಷ್ಕಸ್ರೋತಾಂ ನದೀಮಿವ।।

ಧೂಳು ತುಂಬಿದ ಎಸಳಿನಂತ ದೇಹವುಳ್ಳವಳಾಗಿದ್ದಾಳೆ. ಕೆಸರಿನಿಂದ ತುಂಬಿದ ಕಮಲದ ದಂಟಿನಂತಿದ್ದಾಳೆ. ಪೂರ್ಣಿಮೆಯ ರಾತ್ರಿ ರಾಹುಗ್ರಸ್ತನಾದ ನಿಶಾಕರನಂತೆ ತೋರುತ್ತಿದ್ದಾಳೆ. ಪತಿಶೋಕಸಂತಪ್ತಳಾಗಿ, ದೀನಳಾಗಿ ಬತ್ತಿಹೋದ ನದಿಯಂತಿದ್ದಾಳೆ.

03065014a ವಿಧ್ವಸ್ತಪರ್ಣಕಮಲಾಂ ವಿತ್ರಾಸಿತವಿಹಂಗಮಾಂ।
03065014c ಹಸ್ತಿಹಸ್ತಪರಿಕ್ಲಿಷ್ಟಾಂ ವ್ಯಾಕುಲಾಮಿವ ಪದ್ಮಿನೀಂ।।

ಎಸಳುಗಳು ವಿಧ್ವಸ್ತವಾದ ಕಮಲಗಳಿಂದೊಡಗೂಡಿದ, ಪಕ್ಷಿಗಳನ್ನು ಓಡಿಸಿದ, ಆನೆಗಳ ಸೊಂಡಿಲುಗಳಿಂದ ಕೆಸರೆಲ್ಲ ಮೇಲೆಬಂದಿದ್ದ, ವ್ಯಾಕುಲಗೊಂಡ ಪದ್ಮಿನಿಯಂತೆ ತೋರುತ್ತಿದ್ದಾಳೆ.

03065015a ಸುಕುಮಾರೀಂ ಸುಜಾತಾಂಗೀಂ ರತ್ನಗರ್ಭಗೃಹೋಚಿತಾಂ।
03065015c ದಹ್ಯಮಾನಾಮಿವೋಷ್ಣೇನ ಮೃಣಾಲೀಮಚಿರೋದ್ಧೃತಾಂ।।

ಸುಕುಮಾರಿಯೂ, ಸುಜಾತಾಂಗಿಯೂ, ರತ್ನಗಳಿಂದ ತುಂಬಿದ ಮನೆಯಲ್ಲಿರಲು ಯೋಗ್ಯಳೂ ಆದ ಇವಳು ಬಹಳ ಬೇಗನೆಯೇ ಕಿತ್ತು ತೆಗೆದ ಕಮಲವು ಉಷ್ಣದಿಂದ ಬಾಡುವಂತೆ ಬಾಡುತ್ತಿದ್ದಾಳೆ.

03065016a ರೂಪೌದಾರ್ಯಗುಣೋಪೇತಾಂ ಮಂಡನಾರ್ಹಾಮಮಂಡಿತಾಂ।
03065016c ಚಂದ್ರಲೇಖಾಮಿವ ನವಾಂ ವ್ಯೊಮ್ನಿ ನೀಲಾಭ್ರಸಂವೃತಾಂ।।

ರೂಪ ಔದಾರ್ಯ ಗುಣಗಳಿಂದೊಡಗೂಡಿದ ಅವಳು ಆಭರಣಗಳಿಗೆ ಅರ್ಹಳಾದರೂ ಆಭರಣಗಳಿಲ್ಲ; ಆಕಾಶದಲ್ಲಿ ಮೋಡಕವಿದ ಚಂದ್ರಲೇಖೆಯಂತಿದ್ದಾಳೆ.

03065017a ಕಾಮಭೋಗೈಃ ಪ್ರಿಯೈರ್ಹೀನಾಂ ಹೀನಾಂ ಬಂಧುಜನೇನ ಚ।
03065017c ದೇಹಂ ಧಾರಯತೀಂ ದೀನಾಂ ಭರ್ತೃದರ್ಶನಕಾಂಕ್ಷಯಾ।।

ಪ್ರಿಯ ಕಾಮಭೋಗಗಳಿಂದ, ಬಂಧುಜನರಿಂದ ವಂಚಿತಳಾದ ಇವಳು ಪತಿಯ ದರ್ಶನಾಕಾಂಕ್ಷಿಯಾಗಿ ದೀನ ದೇಹವನ್ನು ಧರಿಸಿದ್ದಾಳೆ.

03065018a ಭರ್ತಾ ನಾಮ ಪರಂ ನಾರ್ಯಾ ಭೂಷಣಂ ಭೂಷಣೈರ್ವಿನಾ।
03065018c ಏಷಾ ವಿರಹಿತಾ ತೇನ ಶೋಭನಾಪಿ ನ ಶೋಭತೇ।।

ಭೂಷಣಗಳಿಲ್ಲದ ನಾರಿಗೆ ಪತಿಯೇ ಅತಿ ಉತ್ತಮ ಭೂಷಣ. ಇದು ಇಲ್ಲದೇ ಅವಳು ಎಷ್ಟು ಶೋಭನೆಯಾಗಿದ್ದರೂ ಶೋಭಿಸುವುದಿಲ್ಲ.

03065019a ದುಷ್ಕರಂ ಕುರುತೇಽತ್ಯರ್ಥಂ ಹೀನೋ ಯದನಯಾ ನಲಃ।
03065019c ಧಾರಯತ್ಯಾತ್ಮನೋ ದೇಹಂ ನ ಶೋಕೇನಾವಸೀದತಿ।।

ನಲನಿಗಾದರೂ ಇವಳಿಲ್ಲದೇ ಇರುವುದು ದುಷ್ಕರವಾಗಿರಬಹುದು - ಅವನು ಇನ್ನೂ ದೇಹವನ್ನು ಧರಿಸಿದ್ದಾನೆಯೋ ಅಥವಾ ಶೋಕದಿಂದ ಅವಸೀನನಾಗಿದ್ದಾನೋ?

03065020a ಇಮಾಮಸಿತಕೇಶಾಂತಾಂ ಶತಪತ್ರಾಯತೇಕ್ಷಣಾಂ।
03065020c ಸುಖಾರ್ಹಾಂ ದುಃಖಿತಾಂ ದೃಷ್ಟ್ವಾ ಮಮಾಪಿ ವ್ಯಥತೇ ಮನಃ।।

ಶತಪತ್ರಾಯತಾಕ್ಷಿ ಅಸಿತಕೇಶಳಾದ ಇವಳು ಇಲ್ಲಿದ್ದಾಳೆ. ಸುಖಾರ್ಹಳಾದ ಇವಳು ದುಖಿಯಾಗಿರುವುದನ್ನು ನೋಡಿ ನನ್ನ ಮನಸ್ಸಿಗೂ ವ್ಯಥೆಯಾಗುತ್ತಿದೆ.

03065021a ಕದಾ ನು ಖಲು ದುಃಖಸ್ಯ ಪಾರಂ ಯಾಸ್ಯತಿ ವೈ ಶುಭಾ।
03065021c ಭರ್ತುಃ ಸಮಾಗಮಾತ್ಸಾಧ್ವೀ ರೋಹಿಣೀ ಶಶಿನೋ ಯಥಾ।।

ಆದರೆ ಈ ಶುಭೆ ಸಾದ್ವಿಯು ಯಾವಾಗ ರೋಹಿಣಿಯು ಶಶಿಯನ್ನು ಸೇರುವಂತೆ ಪತಿಯನ್ನು ಸಮಾಗಮಿಸಿ ದುಃಖದ ಆ ದಡವನ್ನು ಸೇರುತ್ತಾಳೋ!

03065022a ಅಸ್ಯಾ ನೂನಂ ಪುನರ್ಲಾಭಾನ್ನೈಷಧಃ ಪ್ರೀತಿಮೇಷ್ಯತಿ।
03065022c ರಾಜಾ ರಾಜ್ಯಪರಿಭ್ರಷ್ಟಃ ಪುನರ್ಲಬ್ಧ್ವೇವ ಮೇದಿನೀಂ।।

ಇವಳನ್ನು ಪುನಃ ಪಡೆದ ನೈಷಧನು ನಿಃಸಂದೇಹವಾಗಿ ಹರ್ಷಿತನಾಗುವನು ಮತ್ತು ರಾಜ್ಯಭ್ರಷ್ಟನಾದ ಆ ರಾಜನು ಮೇದಿನಿಯನ್ನು ಪುನಃ ಪಡೆಯುವನು.

03065023a ತುಲ್ಯಶೀಲವಯೋಯುಕ್ತಾಂ ತುಲ್ಯಾಭಿಜನಸಂಯುತಾಂ।
03065023c ನೈಷಧೋಽರ್ಹತಿ ವೈದರ್ಭೀಂ ತಂ ಚೇಯಮಸಿತೇಕ್ಷಣಾ।।

ಶೀಲ ಮತ್ತು ವಯಸ್ಸಿನಲ್ಲಿ ಇಬ್ಬರೂ ಸರಿಸಮಾನರಾಗಿದ್ದಾರೆ; ಅಭಿಜನಸಂಯುತದಲ್ಲಿಯೂ ಸರಿಸಮಾನರಾಗಿದ್ದಾರೆ. ನೈಷಧನು ವೈದರ್ಭಿಗೆ ಅರ್ಹನಾದವನು ಮತ್ತು ಈ ಅಸಿತೇಕ್ಷಣೆಯು ಅವನಿಗೆ ಅರ್ಹಳು.

03065024a ಯುಕ್ತಂ ತಸ್ಯಾಪ್ರಮೇಯಸ್ಯ ವೀರ್ಯಸತ್ತ್ವವತೋ ಮಯಾ।
03065024c ಸಮಾಶ್ವಾಸಯಿತುಂ ಭಾರ್ಯಾಂ ಪತಿದರ್ಶನಲಾಲಸಾಂ।।

ಪತಿದರ್ಶನಕ್ಕೆಂದು ಕಾತರಳಾದ ಆ ಅಪ್ರಮೇಯ ವೀರ ಸತ್ವವತನ ಪತ್ನಿಯನ್ನು ಸಂತಯಿಸುವುದು ನನಗೆ ಯುಕ್ತವಾದದ್ದು.

03065025a ಅಯಮಾಶ್ವಾಸಯಾಮ್ಯೇನಾಂ ಪೂರ್ಣಚಂದ್ರನಿಭಾನನಾಂ।
03065025c ಅದೃಷ್ಟಪೂರ್ವಾಂ ದುಃಖಸ್ಯ ದುಃಖಾರ್ತಾಂ ಧ್ಯಾನತತ್ಪರಾಂ।।

ಫುರ್ಣಚಂದ್ರನಂತೆ ಮುಖವುಳ್ಳ, ಪೂರ್ವದಲ್ಲಿ ದುಃಖವನ್ನೇ ಕಂಡಿರದ, ಈಗ ದುಃಖಾರ್ತಳಾದ, ಧ್ಯಾನತತ್ಪರಳಾದ ಅವಳಿಗೆ ಆಶ್ವಾಸನೆಯನ್ನು ಕೊಡುತ್ತೇನೆ.””

03065026 ಬೃಹದಶ್ವ ಉವಾಚ।
03065026a ಏವಂ ವಿಮೃಶ್ಯ ವಿವಿಧೈಃ ಕಾರಣೈರ್ಲಕ್ಷಣೈಶ್ಚ ತಾಂ।
03065026c ಉಪಗಮ್ಯ ತತೋ ಭೈಮೀಂ ಸುದೇವೋ ಬ್ರಾಹ್ಮಣೋಽಬ್ರವೀತ್।।

ಬೃಹದಶ್ವನು ಹೇಳಿದನು: “ವಿವಿಧ ಕಾರಣ ಲಕ್ಷಣಗಳಿಂದ ಈ ರೀತಿ ವಿಮರ್ಶೆಮಾಡಿದ ಆ ಬ್ರಾಹ್ಮಣ ಸುದೇವನು ಭೈಮಿಯ ಬಳಿ ಹೋಗಿ ಹೇಳಿದನು:

03065027a ಅಹಂ ಸುದೇವೋ ವೈದರ್ಭಿ ಭ್ರಾತುಸ್ತೇ ದಯಿತಃ ಸಖಾ।
03065027c ಭೀಮಸ್ಯ ವಚನಾದ್ರಾಜ್ಞಸ್ತ್ವಾಮನ್ವೇಷ್ಟುಮಿಹಾಗತಃ।।

“ವೈದರ್ಭೀ! ನಾನು ಸುದೇವ. ನಿನ್ನ ಸಹೋದರನ ಸಖ. ಭೀಮನ ವಚನದಂತೆ ನಿನ್ನನ್ನು ಅನ್ವೇಷಿಸುತ್ತಾ ಇಲ್ಲಿಗೆ ಬಂದಿದ್ದೇನೆ.

03065028a ಕುಶಲೀ ತೇ ಪಿತಾ ರಾಜ್ಞಿ ಜನಿತ್ರೀ ಭ್ರಾತರಶ್ಚ ತೇ।
03065028c ಆಯುಷ್ಮಂತೌ ಕುಶಲಿನೌ ತತ್ರಸ್ಥೌ ದಾರಕೌ ಚ ತೇ।
03065028 ತ್ವತ್ಕೃತೇ ಬಂಧುವರ್ಗಾಶ್ಚ ಗತಸತ್ತ್ವಾ ಇವಾಸತೇ।।

ರಾಣಿ! ನಿನ್ನ ಪಿತ, ಜನನಿ ಮತ್ತು ಸಹೋದರರು ಕುಶಲದಿಂದಿರುವರು. ಆಯುಶ್ಮಂತರಾದ ನಿನ್ನ ಮಕ್ಕಳೂ ಅವರೊಂದಿಗೆ ಕುಶಲದಿಂದಿದ್ದಾರೆ. ಆದರೆ ನಿನಗಾಗಿ ನಿನ್ನ ಬಂಧುವರ್ಗವೆಲ್ಲವೂ ಸತ್ವವನ್ನು ಕಳೆದುಕೊಂಡವರಂತೆ ಇರುವರು.”

03065029a ಅಭಿಜ್ಞಾಯ ಸುದೇವಂ ತು ದಮಯಂತೀ ಯುಧಿಷ್ಠಿರ।
03065029c ಪರ್ಯಪೃಚ್ಚತ್ತತಃ ಸರ್ವಾನ್ಕ್ರಮೇಣ ಸುಹೃದಃ ಸ್ವಕಾನ್।।

ಯುಧಿಷ್ಠಿರ! ದಮಯಂತಿಯು ಸುದೇವನನ್ನು ಗುರುತಿಸಿದಳು ಮತ್ತು ಕ್ರಮೇಣವಾಗಿ ತನ್ನ ಸುಹೃದಯರ ಮತ್ತು ತನ್ನವರ ಎಲ್ಲವರ ಕುರಿತು ಕೇಳಿದಳು.

03065030a ರುರೋದ ಚ ಭೃಶಂ ರಾಜನ್ವೈದರ್ಭೀ ಶೋಕಕರ್ಶಿತಾ।
03065030c ದೃಷ್ಟ್ವಾ ಸುದೇವಂ ಸಹಸಾ ಭ್ರಾತುರಿಷ್ಟಂ ದ್ವಿಜೋತ್ತಮಂ।।

ರಾಜನ್! ಸಹೋದರನ ಇಷ್ಟನಾದ, ದ್ವಿಜೋತ್ತಮ ಸುದೇವನನ್ನು ಒಮ್ಮಿಂದೊಮ್ಮೆಲೇ ನೋಡಿ ಶೋಕಕರ್ಶಿತಳಾದ ವೈದರ್ಭಿಯು ಗಟ್ಟಿಯಾಗಿ ಅತ್ತಳು.

03065031a ತತೋ ರುದಂತೀಂ ತಾಂ ದೃಷ್ಟ್ವಾ ಸುನಂದಾ ಶೋಕಕರ್ಶಿತಾಂ।
03065031c ಸುದೇವೇನ ಸಹೈಕಾಂತೇ ಕಥಯಂತೀಂ ಚ ಭಾರತ।।
03065032a ಜನಿತ್ರ್ಯೈ ಪ್ರೇಷಯಾಮಾಸ ಸೈರಂಧ್ರೀ ರುದತೇ ಭೃಶಂ।
03065032c ಬ್ರಾಹ್ಮಣೇನ ಸಮಾಗಮ್ಯ ತಾಂ ವೇದ ಯದಿ ಮನ್ಯಸೇ।।

ಭಾರತ! ಸುದೇವನೊಡನೆ ಏಕಾಂತದಲ್ಲಿ ಮಾತನಾಡುತ್ತಿದ್ದ ಮತ್ತು ಶೋಕಕರ್ಶಿತಳಾಗಿ ಅಳುತ್ತಿದ್ದ ಅವಳನ್ನು ನೋಡಿದ ಸುನಂದೆಯು “ಸೈರಂಧ್ರಿಯು ಬ್ರಾಹ್ಮಣನನ್ನು ಭೆಟ್ಟಿಯಾಗಿ ಜೋರಾಗಿ ಅಳುತ್ತಿದ್ದಾಳೆ; ಒಪ್ಪಿಗೆಯಿದ್ದರೆ ಯಾಕೆಂದು ತಿಳಿ” ಎಂದು ತನ್ನ ಜನನಿಗೆ ಹೇಳಿ ಕಳುಹಿಸಿದಳು.

03065033a ಅಥ ಚೇದಿಪತೇರ್ಮಾತಾ ರಾಜ್ಞಶ್ಚಾಂತಃಪುರಾತ್ತದಾ।
03065033c ಜಗಾಮ ಯತ್ರ ಸಾ ಬಾಲಾ ಬ್ರಾಹ್ಮಣೇನ ಸಹಾಭವತ್।।

ಆಗ ಚೇದಿಪತಿಯ ಮಾತೆಯು ರಾಜನ ಅಂತಃಪುರದಿಂದ ಆ ಬಾಲಕಿಯು ಬ್ರಾಹ್ಮಣನ ಸಂಗಡ ಮಾತನಾಡುತ್ತಿದ್ದಲ್ಲಿಗೆ ಬಂದಳು.

03065034a ತತಃ ಸುದೇವಮಾನಾಯ್ಯ ರಾಜಮಾತಾ ವಿಶಾಂ ಪತೇ।
03065034c ಪಪ್ರಚ್ಚ ಭಾರ್ಯಾ ಕಸ್ಯೇಯಂ ಸುತಾ ವಾ ಕಸ್ಯ ಭಾಮಿನೀ।।

ವಿಶಾಂಪತೆ! ರಾಜಮಾತೆಯು ಸುದೇವನನ್ನು ಕರೆಯಿಸಿ ಕೇಳಿದಳು: “ಈ ಭಾಮಿನಿಯು ಯಾರ ಭಾರ್ಯೆ ಮತ್ತು ಯಾರ ಸುತೆ?

03065035a ಕಥಂ ಚ ನಷ್ಟಾ ಜ್ಞಾತಿಭ್ಯೋ ಭರ್ತುರ್ವಾ ವಾಮಲೋಚನಾ।
03065035c ತ್ವಯಾ ಚ ವಿದಿತಾ ವಿಪ್ರ ಕಥಮೇವಂಗತಾ ಸತೀ।।

ಈ ವಾಮಲೋಚನೆಯು ಹೇಗೆ ಗೊತ್ತಿದ್ದವರೆಲ್ಲರನ್ನೂ ಮತ್ತು ಪತಿಯನ್ನೂ ಕಳೆದುಕೊಂಡಿದ್ದಾಳೆ? ವಿಪ್ರ! ಈ ಸತಿಯು ಹೀಗೆ ಹೇಗೆ ಆದಳು ಎಂದು ನಿನಗೇನಾದರೂ ತಿಳಿದಿದೆಯಾ?

03065036a ಏತದಿಚ್ಚಾಮ್ಯಹಂ ತ್ವತ್ತೋ ಜ್ಞಾತುಂ ಸರ್ವಮಶೇಷತಃ।
03065036c ತತ್ತ್ವೇನ ಹಿ ಮಮಾಚಕ್ಷ್ವ ಪೃಚ್ಚಂತ್ಯಾ ದೇವರೂಪಿಣೀಂ।।

ಈ ಎಲ್ಲವನ್ನೂ ಎನನ್ನೂ ಬಿಡದೆ ನಿನ್ನಿಂದ ನಾನು ಕೇಳಲು ಇಚ್ಛಿಸುತ್ತೇನೆ. ದೇವರೂಪಿಣಿಯಾದವಳ ಕುರಿತು ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಏನನ್ನೂ ಮುಚ್ಚಿಡದೇ ಹೇಳು.”

03065037a ಏವಮುಕ್ತಸ್ತಯಾ ರಾಜನ್ಸುದೇವೋ ದ್ವಿಜಸತ್ತಮಃ।
03065037c ಸುಖೋಪವಿಷ್ಟ ಆಚಷ್ಟ ದಮಯಂತ್ಯಾ ಯಥಾತಥಂ।।

ರಾಜನ್! ಅವಳ ಹೇಳಿಕೆಯಂತೆ ದ್ವಿಜಸತ್ತಮ ಸುದೇವನು ಸುಖವಾಗಿ ಕುಳಿತುಕೊಂಡು ದಮಯಂತಿಯ ನಿಜ ಕಥೆಯನ್ನು ಯಥಾವತ್ತಾಗಿ ವರದಿಮಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಸುದೇವಸಂವಾದೇ ಪಂಚಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀ-ಸುದೇವ ಸಂವಾದ ಎನ್ನುವ ಅರವತ್ತೈದನೆಯ ಅಧ್ಯಾಯವು.