ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 64
ಸಾರ
ನಲನು ಋತುಪರ್ಣನಲ್ಲಿಗೆ ಹೋಗಿ, ವಾರ್ಷ್ಣೇಯನ ಜೊತೆ ಬಾಹುಕನಾಗಿ ಸೇರಿಕೊಳ್ಳುವುದು (1-7); ದಮಯಂತಿಯನ್ನು ನೆನೆದು ಶೋಕಿಸುವುದು (8-19).
03064001 ಬೃಹದಶ್ವ ಉವಾಚ।
03064001a ತಸ್ಮಿನ್ನಂತರ್ಹಿತೇ ನಾಗೇ ಪ್ರಯಯೌ ನೈಷಧೋ ನಲಃ।
03064001c ಋತುಪರ್ಣಸ್ಯ ನಗರಂ ಪ್ರಾವಿಶದ್ದಶಮೇಽಹನಿ।।
ಬೃಹದಶ್ವನು ಹೇಳಿದನು: “ಈ ರೀತಿ ನಾಗವು ಅಂತರ್ಧಾನನಾದ ನಂತರ ನೈಷಧ ನಲನು ಹೊರಟು ಹತ್ತು ದಿನಗಳ ನಂತರ ಋತುಪರ್ಣನ ನಗರವನ್ನು ಪ್ರವೇಶಿಸಿದನು.
03064002a ಸ ರಾಜಾನಮುಪಾತಿಷ್ಠದ್ಬಾಹುಕೋಽಹಮಿತಿ ಬ್ರುವನ್।
03064002c ಅಶ್ವಾನಾಂ ವಾಹನೇ ಯುಕ್ತಃ ಪೃಥಿವ್ಯಾಂ ನಾಸ್ತಿ ಮತ್ಸಮಃ।।
ಅವನು ರಾಜನ ಬಳಿ ಹೋಗಿ ಹೇಳಿದನು: “ನಾನು ಬಾಹುಕ! ಅಶ್ವಗಳನ್ನು ಓಡಿಸುವುದರಲ್ಲಿ ನನ್ನ ಸರಿಸಾಟಿಯಾದ ಇನ್ನೊಬ್ಬನು ಈ ಪೃಥ್ವಿಯಲ್ಲಿಯೇ ಇಲ್ಲ.
03064003a ಅರ್ಥಕೃಚ್ಚ್ರೇಷು ಚೈವಾಹಂ ಪ್ರಷ್ಟವ್ಯೋ ನೈಪುಣೇಷು ಚ।
03064003c ಅನ್ನಸಂಸ್ಕಾರಮಪಿ ಚ ಜಾನಾಮ್ಯನ್ಯೈರ್ವಿಶೇಷತಃ।।
ಎಲ್ಲ ಕಷ್ಟಗಳಲ್ಲಿ, ನೈಪುಣ್ಯತೆ ಬೇಕಾಗುವ ವಿಷಯಗಳಲ್ಲಿ ನನ್ನ ಸಲಹೆಯನ್ನು ಪಡೆಯಬಹುದು. ಎಲ್ಲದಕ್ಕೂ ವಿಶೇಷವಾಗಿ ನಾನು ಅಡುಗೆ ಮಾಡುವುದನ್ನೂ ತಿಳಿದಿದ್ದೇನೆ.
03064004a ಯಾನಿ ಶಿಲ್ಪಾನಿ ಲೋಕೇಽಸ್ಮಿನ್ಯಚ್ಚಾಪ್ಯನ್ಯತ್ಸುದುಷ್ಕರಂ।
03064004c ಸರ್ವಂ ಯತಿಷ್ಯೇ ತತ್ಕರ್ತುಂ ಋತುಪರ್ಣ ಭರಸ್ವ ಮಾಂ।।
ಇನ್ನೂ ಇತರ ಕುಶಲ ಮತ್ತು ದುಷ್ಕರ ಕರ್ಮಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತೇನೆ. ಋತುಪರ್ಣ! ನನ್ನನ್ನು ನಿನ್ನಲ್ಲಿ ಇರುಸಿಕೋ.”
03064005 ಋತುಪರ್ಣ ಉವಾಚ।
03064005a ವಸ ಬಾಹುಕ ಭದ್ರಂ ತೇ ಸರ್ವಮೇತತ್ಕರಿಷ್ಯಸಿ।
03064005c ಶೀಘ್ರಯಾನೇ ಸದಾ ಬುದ್ಧಿರ್ಧೀಯತೇ ಮೇ ವಿಶೇಷತಃ।।
ಋತುಪರ್ಣನು ಹೇಳಿದನು: “ಬಾಹುಕ! ನೀನು ಇಲ್ಲಿಯೇ ಇರು. ನಿನಗೆ ಮಂಗಳವಾಗಲಿ. ಈ ಎಲ್ಲ ಕೆಲಸಗಳನ್ನೂ ನೀನು ಮಾಡಬಹುದು. ನನಗೆ ಯಾವಾಗಲೂ ವೇಗವಾಗಿ ಪ್ರಯಾಣಮಾಡಲು ವಿಶೇಷ ಅಭಿರುಚಿಯಿದೆ.
03064006a ಸ ತ್ವಮಾತಿಷ್ಠ ಯೋಗಂ ತಂ ಯೇನ ಶೀಘ್ರಾ ಹಯಾ ಮಮ।
03064006c ಭವೇಯುರಶ್ವಾಧ್ಯಕ್ಷೋಽಸಿ ವೇತನಂ ತೇ ಶತಂ ಶತಾಃ।।
03064007a ತ್ವಾಮುಪಸ್ಥಾಸ್ಯತಶ್ಚೇಮೌ ನಿತ್ಯಂ ವಾರ್ಷ್ಣೇಯಜೀವಲೌ।
03064007c ಏತಾಭ್ಯಾಂ ರಮ್ಯಸೇ ಸಾರ್ಧಂ ವಸ ವೈ ಮಯಿ ಬಾಹುಕ।।
ನನ್ನ ಕುದುರೆಗಳು ಶೀಘ್ರವಾಗಿ ಓಡುವಹಾಗೆ ತಯಾರಿ ಮಾಡು. ನೀನು ನನ್ನ ಅಶ್ವಾಧ್ಯಕ್ಷನಾಗಿರು ಮತ್ತು ನಿನ್ನ ವೇತನವು ನೂರು ನೂರು. ವಾರ್ಷ್ಣೇಯ ಮತ್ತು ಜೀವಲರು ಇಂದಿನಿಂದ ನಿತ್ಯವೂ ನಿನ್ನ ಜೊತೆಯಲ್ಲಿಯೇ ಕೆಲಸಮಾಡುವರು. ಬಾಹುಕ! ನೀನು ಅವರೊಂದಿಗೆ ರಮಿಸುತ್ತಾ ನನ್ನಲ್ಲಿಯೇ ವಾಸವಾಗಿರು.””
03064008 ಬೃಹದಶ್ವ ಉವಾಚ।
03064008a ಏವಮುಕ್ತೋ ನಲಸ್ತೇನ ನ್ಯವಸತ್ತತ್ರ ಪೂಜಿತಃ।
03064008c ಋತುಪರ್ಣಸ್ಯ ನಗರೇ ಸಹವಾರ್ಷ್ಣೇಯಜೀವಲಃ।।
ಬೃಹದಶ್ವನು ಹೇಳಿದನು: “ಹೀಗೆ ಹೇಳಲ್ಪಟ್ಟ ನಲನು ಅಲ್ಲಿಯೇ ಋತುಪರ್ಣನ ನಗರಿಯಲ್ಲಿ ವಾರ್ಷ್ಣೇಯ ಜೀವಲರೊಂದಿಗೆ ಸತ್ಕಾರಗೊಂಡು ವಾಸಿಸುತ್ತಿದ್ದನು.
03064009a ಸ ತತ್ರ ನಿವಸನ್ರಾಜಾ ವೈದರ್ಭೀಮನುಚಿಂತಯನ್।
03064009c ಸಾಯಂ ಸಾಯಂ ಸದಾ ಚೇಮಂ ಶ್ಲೋಕಮೇಕಂ ಜಗಾದ ಹ।।
ಅಲ್ಲಿ ವಾಸಿಸುತ್ತಿರುವಾಗ ರಾಜನು ವೈದರ್ಭಿಯ ಕುರಿತು ಚಿಂತಿಸುತ್ತಲೇ ಇದ್ದನು ಮತ್ತು ಯಾವಾಗಲೂ ಪ್ರತಿ ಸಂಜೆ ಈ ಒಂದು ಶ್ಲೋಕವನ್ನು ಹೇಳುತ್ತಿದ್ದನು:
03064010a ಕ್ವ ನು ಸಾ ಕ್ಷುತ್ಪಿಪಾಸಾರ್ತಾ ಶ್ರಾಂತಾ ಶೇತೇ ತಪಸ್ವಿನೀ।
03064010c ಸ್ಮರಂತೀ ತಸ್ಯ ಮಂದಸ್ಯ ಕಂ ವಾ ಸಾದ್ಯೋಪತಿಷ್ಠತಿ।।
“ಹಸಿವೆ ಬಾಯಾರಿಕೆಗಳಿಂದ ಬಳಲಿರುವ ತಪಸ್ವಿನೀ! ನೀನು ಎಲ್ಲಿ ಮಲಗಿರಬಹುದು? ಆ ಮಂದಬುದ್ಧಿಯನ್ನು ಸ್ಮರಿಸುತ್ತಾ ನೀನು ಯಾರ ಸೇವೆಯನ್ನು ಮಾಡುತ್ತಿರುವೆ?”
03064011a ಏವಂ ಬ್ರುವಂತಂ ರಾಜಾನಂ ನಿಶಾಯಾಂ ಜೀವಲೋಽಬ್ರವೀತ್।
03064011c ಕಾಮೇನಾಂ ಶೋಚಸೇ ನಿತ್ಯಂ ಶ್ರೋತುಮಿಚ್ಚಾಮಿ ಬಾಹುಕ।।
ರಾತ್ರಿವೇಳೆಯಲ್ಲಿ ಹೀಗೆ ಹೇಳುತ್ತಿದ್ದ ರಾಜನಲ್ಲಿ ಜೀವಲನು ಕೇಳಿದನು: “ಬಾಹುಕ! ನಿತ್ಯವೂ ಯಾರ ಕುರಿತು ಶೋಕಿಸುತ್ತಿದ್ದೀಯೆ ಎಂದು ತಿಳಿಯಲು ಬಯಸುತ್ತೇನೆ.”
03064012a ತಮುವಾಚ ನಲೋ ರಾಜಾ ಮಂದಪ್ರಜ್ಞಸ್ಯ ಕಸ್ಯ ಚಿತ್।
03064012c ಆಸೀದ್ಬಹುಮತಾ ನಾರೀ ತಸ್ಯಾ ದೃಢತರಂ ಚ ಸಃ।।
ರಾಜ ನಲನು ಅವನಿಗೆ ಹೇಳಿದನು: “ಓರ್ವ ನಾರಿಯ ಮಂದಪ್ರಜ್ಞ ಪತಿಯಾರೋ ಒಬ್ಬನು ಅವಳ ಕುರಿತು ಬಹಳಷ್ಟು ಚಿಂತಿಸುತ್ತಿದ್ದ.
03064013a ಸ ವೈ ಕೇನ ಚಿದರ್ಥೇನ ತಯಾ ಮಂದೋ ವ್ಯಯುಜ್ಯತ।
03064013c ವಿಪ್ರಯುಕ್ತಶ್ಚ ಮಂದಾತ್ಮಾ ಭ್ರಮತ್ಯಸುಖಪೀಡಿತಃ।।
ಯಾವುದೋ ಕಾರಣದಿಂದ ಆ ಮಂದಬುದ್ಧಿಯು ಅವಳಿಂದ ಬೇರೆಯಾದನು ಮತ್ತು ಅಗಲಿದ ಆ ಮಂದಾತ್ಮನು ದುಃಖಪೀಡಿತನಾಗಿ ಹೀಗೆ ಭ್ರಮಿಸುತ್ತಿರುವನು.
03064014a ದಹ್ಯಮಾನಃ ಸ ಶೋಕೇನ ದಿವಾರಾತ್ರಮತಂದ್ರಿತಃ।
03064014c ನಿಶಾಕಾಲೇ ಸ್ಮರಂಸ್ತಸ್ಯಾಃ ಶ್ಲೋಕಮೇಕಂ ಸ್ಮ ಗಾಯತಿ।।
ಅವಳಿಲ್ಲದೇ ದಿನ ರಾತ್ರಿ ಶೋಕದಿಂದ ದಹಿಸುತ್ತಿದ್ದ ಅವನು ಸಾಯಂಕಾಲದಲ್ಲಿ ಅವಳನ್ನು ಸ್ಮರಿಸುತ್ತಾ ಒಂದು ಶ್ಲೋಕವನ್ನು ಹಾಡುವನು.
03064015a ಸ ವೈ ಭ್ರಮನ್ಮಹೀಂ ಸರ್ವಾಂ ಕ್ವ ಚಿದಾಸಾದ್ಯ ಕಿಂ ಚನ।
03064015c ವಸತ್ಯನರ್ಹಸ್ತದ್ದುಃಖಂ ಭೂಯ ಏವಾನುಸಂಸ್ಮರನ್।।
03064016a ಸಾ ತು ತಂ ಪುರುಷಂ ನಾರೀ ಕೃಚ್ಚ್ರೇಽಪ್ಯನುಗತಾ ವನೇ।
ಭೂಮಿಯನ್ನೆಲ್ಲಾ ತಿರುಗಿ ಅವನಿಗೆ ಎಲ್ಲಿಯೋ ಏನೋ ದೊರಕಿತು. ಅಲ್ಲಿ ಅನರ್ಹನಾದ ಅವನು ದುಃಖಿಸುತ್ತಾ ಅವಳನ್ನು ಯಾವಾಗಲೂ ಸ್ಮರಿಸುತ್ತಿರುವನು. ಆ ನಾರಿಯಾದರೂ ಅಪಾಯಕಾರಿಯಾದ ವನಕ್ಕೂ ಆ ಪುರುಷನನ್ನು ಹಿಂಬಾಲಿಸಿದಳು.
03064016c ತ್ಯಕ್ತಾ ತೇನಾಲ್ಪಪುಣ್ಯೇನ ದುಷ್ಕರಂ ಯದಿ ಜೀವತಿ।।
03064017a ಏಕಾ ಬಾಲಾನಭಿಜ್ಞಾ ಚ ಮಾರ್ಗಾಣಾಮತಥೋಚಿತಾ।
03064017c ಕ್ಷುತ್ಪಿಪಾಸಾಪರೀತಾ ಚ ದುಷ್ಕರಂ ಯದಿ ಜೀವತಿ।।
ಆ ಅಲ್ಪಪುಣ್ಯದವನಿಂದ ತ್ಯಜಿಸಲ್ಪಟ್ಟ ಅವಳು ಜೀವಂತವಿರುವುದೇ ದುಷ್ಕರ. ಅವಳು ಒಂಟಿ ಬಾಲಕಿ. ಮಾರ್ಗಗಳನ್ನು ತಿಳಿಯದವಳು. ವಿಷಯಗಳಲ್ಲಿ ಅನುಭವವಿಲ್ಲದವಳು. ಹಸಿದವಳು. ಬಾಯಾರಿದವಳು. ಅಂಥವಳು ಇನ್ನೂ ಜೀವಂತವಿರುವುದು ದುಷ್ಕರ.
03064018a ಶ್ವಾಪದಾಚರಿತೇ ನಿತ್ಯಂ ವನೇ ಮಹತಿ ದಾರುಣೇ।
03064018c ತ್ಯಕ್ತಾ ತೇನಾಲ್ಪಪುಣ್ಯೇನ ಮಂದಪ್ರಜ್ಞೇನ ಮಾರಿಷ।।
ನಿತ್ಯವೂ ಪ್ರಾಣಿಗಳು ಓಡಾಡುತ್ತಿರುವ ಅತಿ ದಾರುಣ ವನದಲ್ಲಿ ಅವಳ ಅಲ್ಪಪುಣ್ಯ, ಮಂದಪ್ರಜ್ಞ ಪತಿಯಿಂದ ತ್ಯಕ್ತಳಾದಳು.”
03064019a ಇತ್ಯೇವಂ ನೈಷಧೋ ರಾಜಾ ದಮಯಂತೀಮನುಸ್ಮರನ್।
03064019c ಅಜ್ಞಾತವಾಸಮವಸದ್ರಾಜ್ಞಸ್ತಸ್ಯ ನಿವೇಶನೇ।।
ಈ ರೀತಿ ರಾಜ ನೈಷಧನು ದಮಯಂತಿಯನ್ನು ಅನುಸ್ಮರಿಸುತ್ತಾ ರಾಜನ ನಿವೇಶನದಲ್ಲಿ ಅಜ್ಞಾತವಾಸವನ್ನು ವಾಸಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲವಿಲಾಪೇ ಚತುಃಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲವಿಲಾಪ ಎನ್ನುವ ಅರವತ್ತ್ನಾಲ್ಕನೆಯ ಅಧ್ಯಾಯವು.