ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 63
ಸಾರ
ದಮಯಂತಿಯನ್ನು ತೊರೆದ ರಾಜ ನಲನು ಗಹನ ವನದಲ್ಲಿ ಉರಿಯುತ್ತಿರುವ ಒಂದು ದೊಡ್ಡ ಕಾಡ್ಗಿಚ್ಚನ್ನು ಕಂಡು ಅದರಲ್ಲಿ ಸಿಲುಕಿರುವ ನಾಗ ಕಾರ್ಕೋಟಕನನ್ನು ಎತ್ತಿ ಹೊರತಂದು ಉಳಿಸಿದುದು (1-9). ಇನ್ನೂ ಮುಂದೆ ತೆಗೆದುಕೊಂಡು ಹೋಗೆಂದು ನಾಗವು ಹೇಳುವುದು, ನಲನು ಹಾಗೆಯೇ ಮಾಡಲು ಅವನನ್ನು ಕಾರ್ಕೋಟಕನು ಕಚ್ಚಿ ಕುರೂಪಿಯನ್ನಾಗಿಸಿದುದು (10-12). ಅವನ ದೇಹವನ್ನಾವರಿಸಿ ಕಾಡುತ್ತಿರುವನನ್ನು ಪೀಡಿಸಲು ಕಚ್ಚಿದೆನೆಂದೂ, ಕುರೂಪಿಯಾದ ಅವನನ್ನು ಯಾರೂ ಗುರುತಿಸಲಾರರೆಂದೂ, ಅಯೋಧ್ಯೆಯ ರಾಜ ಋತುಪರ್ಣನಿಂದ ಅಕ್ಷ ವಿದ್ಯೆಯನ್ನು ಕಲಿತನಂತರ ಅವನ ಕಷ್ಟಗಳು ಕೊನೆಗೊಳ್ಳುವವೆಂದೂ ಹೇಳಿ, ಪುನಃ ಸ್ವರೂಪವನ್ನು ಕೊಡಬಲ್ಲ ವಸ್ತ್ರಗಳನ್ನಿತ್ತು ಕಾರ್ಕೋಟಕನು ಅಂತರ್ಧಾನನಾದುದು (13-24).
03063001 ಬೃಹದಶ್ವ ಉವಾಚ।
03063001a ಉತ್ಸೃಜ್ಯ ದಮಯಂತೀಂ ತು ನಲೋ ರಾಜಾ ವಿಶಾಂ ಪತೇ।
03063001c ದದರ್ಶ ದಾವಂ ದಹ್ಯಂತಂ ಮಹಾಂತಂ ಗಹನೇ ವನೇ।।
ಬೃಹದಶ್ವನು ಹೇಳಿದನು: “ವಿಶಾಂಪತೇ! ದಮಯಂತಿಯನ್ನು ತೊರೆದ ರಾಜ ನಲನು ಗಹನ ವನದಲ್ಲಿ ಉರಿಯುತ್ತಿರುವ ಒಂದು ದೊಡ್ಡ ಕಾಡ್ಗಿಚ್ಚನ್ನು ಕಂಡನು.
03063002a ತತ್ರ ಶುಶ್ರಾವ ಮಧ್ಯೇಽಗ್ನೌ ಶಬ್ಧಂ ಭೂತಸ್ಯ ಕಸ್ಯ ಚಿತ್।
03063002c ಅಭಿಧಾವ ನಲೇತ್ಯುಚ್ಚೈಃ ಪುಣ್ಯಶ್ಲೋಕೇತಿ ಚಾಸಕೃತ್।।
ಕಿಚ್ಚಿನ ಮಧ್ಯದಿಂದ “ನಲ! ಇಲ್ಲಿಗೆ ಬಾ! ಪುಣ್ಯಶ್ಲೋಕ! ಬಾ!” ಎಂದು ಯಾವುದೋ ಜೀವಿಯು ಪುನಃ ಪುನಃ ಕರೆಯುವ ಶಬ್ಧವನ್ನು ಕೇಳಿದನು.
03063003a ಮಾ ಭೈರಿತಿ ನಲಶ್ಚೋಕ್ತ್ವಾ ಮಧ್ಯಮಗ್ನೇಃ ಪ್ರವಿಶ್ಯ ತಂ।
03063003c ದದರ್ಶ ನಾಗರಾಜಾನಂ ಶಯಾನಂ ಕುಂಡಲೀಕೃತಂ।।
“ಭಯಪಡಬೇಡ!” ಎಂದು ಕೂಗಿ ಹೇಳುತ್ತಾ ನಲನು ಆ ಅಗ್ನಿಯನ್ನು ಪ್ರವೇಶಿಸಿ1, ಮಧ್ಯದಲ್ಲಿ ಸುರುಳಿಸುತ್ತಿ ಮಲಗಿದ್ದ ನಾಗರಾಜನನ್ನು ಕಂಡನು.
03063004a ಸ ನಾಗಃ ಪ್ರಾಂಜಲಿರ್ಭೂತ್ವಾ ವೇಪಮಾನೋ ನಲಂ ತದಾ।
03063004c ಉವಾಚ ವಿದ್ಧಿ ಮಾಂ ರಾಜನ್ನಾಗಂ ಕರ್ಕೋಟಕಂ ನೃಪ।।
ಆಗ ಆ ನಾಗವು ತರತರಿಸುತ್ತಾ ಅಂಜಲೀಬದ್ಧನಾಗಿ ನಲನನ್ನುದ್ದೇಶಿಸಿ ಮಾತನಾಡಿತು: “ನೃಪ! ನನ್ನನ್ನು ನಾಗರಾಜ ಕಾರ್ಕೋಟಕನೆಂದು ತಿಳಿ.
03063005a ಮಯಾ ಪ್ರಲಬ್ಧೋ ಬ್ರಹ್ಮರ್ಷಿರನಾಗಾಃ ಸುಮಹಾತಪಾಃ।
03063005c ತೇನ ಮನ್ಯುಪರೀತೇನ ಶಪ್ತೋಽಸ್ಮಿ ಮನುಜಾಧಿಪ।।
ಮನುಜಾಧಿಪ! ಮಹಾತಪ ಮುಗ್ಧ ಬ್ರಾಹ್ಮಣನೊಬ್ಬನನ್ನು ನಾನು ಹಿಡಿದಿದ್ದೆ. ಕೋಪವಶನಾದ ಅವನಿಂದ ಶಪಿತನಾಗಿದ್ದೇನೆ.
03063006a ತಸ್ಯ ಶಾಪಾನ್ನ ಶಕ್ನೋಮಿ ಪದಾದ್ವಿಚಲಿತುಂ ಪದಂ।
03063006c ಉಪದೇಕ್ಷ್ಯಾಮಿ ತೇ ಶ್ರೇಯಸ್ತ್ರಾತುಮರ್ಹತಿ ಮಾಂ ಭವಾನ್।।
ಅವನ ಶಾಪದಿಂದಾಗಿ ಈ ಜಾಗದಿಂದ ಸ್ವಲ್ಪ ದೂರ ಚಲಿಸಲೂ ಅಶಕ್ಯನಾಗಿದ್ದೇನೆ. ನೀನು ನನ್ನನ್ನು ಉಳಿಸಿದರೆ, ನಿನಗೆ ಶ್ರೇಯಸ್ಸಾಗುವ ಉಪದೇಶವನ್ನು ನೀಡುತ್ತೇನೆ.
03063007a ಸಖಾ ಚ ತೇ ಭವಿಷ್ಯಾಮಿ ಮತ್ಸಮೋ ನಾಸ್ತಿ ಪನ್ನಗಃ।
03063007c ಲಘುಶ್ಚ ತೇ ಭವಿಷ್ಯಾಮಿ ಶೀಘ್ರಮಾದಾಯ ಗಚ್ಚ ಮಾಂ।।
ನಿನ್ನ ಸಖನಾಗಿರುವೆ. ನನ್ನಂತಹ ಪನ್ನಗವು ಇನ್ನೊಂದಿಲ್ಲ. ನಿನಗಾಗಿ ನಾನು ಹಗುರವಾಗುತ್ತೇನೆ. ಶೀಘ್ರವಾಗಿ ನನ್ನನ್ನು ಎತ್ತಿಕೊಂಡು ಹೋಗು!”
03063008a ಏವಮುಕ್ತ್ವಾ ಸ ನಾಗೇಂದ್ರೋ ಬಭೂವಾಂಗುಷ್ಠಮಾತ್ರಕಃ।
03063008c ತಂ ಗೃಹೀತ್ವಾ ನಲಃ ಪ್ರಾಯಾದುದ್ದೇಶಂ ದಾವವರ್ಜಿತಂ।।
ಹೀಗೆ ಹೇಳಿದ ಆ ನಾಗೇಂದ್ರನು ಅಂಗುಷ್ಠಮಾತ್ರದಂತಾದನು. ನಲನು ಅವನನ್ನು ಎತ್ತಿ ಬೆಂಕಿಯು ಇಲ್ಲದೇ ಇರುವ ಸ್ಥಳಕ್ಕೆ ಕೊಂಡೊಯ್ದನು.
03063009a ಆಕಾಶದೇಶಮಾಸಾದ್ಯ ವಿಮುಕ್ತಂ ಕೃಷ್ಣವರ್ತ್ಮನಾ।
03063009c ಉತ್ಸ್ರಷ್ಟುಕಾಮಂ ತಂ ನಾಗಃ ಪುನಃ ಕರ್ಕೋಟಕೋಽಬ್ರವೀತ್।।
ಸುಟ್ಟ ಕರಿಯಿಲ್ಲದೇ ಇರುವ ಜಾಗಕ್ಕೆ ಬಂದು ಆ ನಾಗನನ್ನು ಕೆಳಗಿಡುವಷ್ಟರಲ್ಲಿಯೇ ಕಾರ್ಕೋಟಕನು ಪುನಃ ಹೇಳಿದನು:
03063010a ಪದಾನಿ ಗಣಯನ್ಗಚ್ಚ ಸ್ವಾನಿ ನೈಷಧ ಕಾನಿ ಚಿತ್।
03063010c ತತ್ರ ತೇಽಹಂ ಮಹಾರಾಜ ಶ್ರೇಯೋ ಧಾಸ್ಯಾಮಿ ಯತ್ಪರಂ।।
“ನಿಷಾಧ! ಹೆಜ್ಜೆಗಳನ್ನು ಎಣಿಸುತ್ತಾ ಇನ್ನೂ ಸ್ವಲ್ಪ ಮುಂದೆ ಹೋಗು. ಮಹಾರಾಜ! ಅಲ್ಲಿ ನಿನಗೆ ಪರಮ ಶ್ರೇಯವಾದದ್ದನ್ನು ಕೊಡುತ್ತೇನೆ.”
03063011a ತತಃ ಸಂಖ್ಯಾತುಮಾರಬ್ಧಮದಶದ್ದಶಮೇ ಪದೇ।
03063011c ತಸ್ಯ ದಷ್ಟಸ್ಯ ತದ್ರೂಪಂ ಕ್ಷಿಪ್ರಮಂತರಧೀಯತ।।
ಎಣಿಸುತ್ತಿದ್ದಂತೆಯೇ, ಹತ್ತನೇ ಹೆಜ್ಜೆಯಲ್ಲಿ ನಾಗನು ನಲನನ್ನು ಕಚ್ಚಿಬಿಟ್ಟನು. ಕಚ್ಚಿದಾಕ್ಷಣ ರೂಪವು ಕ್ಷಣದಲ್ಲಿ ಬದಲಾಗಿ ಹೋಯಿತು.
03063012a ಸ ದೃಷ್ಟ್ವಾ ವಿಸ್ಮಿತಸ್ತಸ್ಥಾವಾತ್ಮಾನಂ ವಿಕೃತಂ ನಲಃ।
03063012c ಸ್ವರೂಪಧಾರಿಣಂ ನಾಗಂ ದದರ್ಶ ಚ ಮಹೀಪತಿಃ।।
ಮಹೀಪತಿ ನಲನು ತಾನು ವಿಕೃತನಾಗಿರುವುದನ್ನು ನೋಡಿ ವಿಸ್ಮಿತನಾಗಿ ನಿಂತನು ಮತ್ತು ಸ್ವರೂಪಧಾರಣ ಮಾಡಿದ ನಾಗನನ್ನು ನೋಡಿದನು.
03063013a ತತಃ ಕರ್ಕೋಟಕೋ ನಾಗಃ ಸಾಂತ್ವಯನ್ನಲಮಬ್ರವೀತ್।
03063013c ಮಯಾ ತೇಽಂತರ್ಹಿತಂ ರೂಪಂ ನ ತ್ವಾ ವಿದ್ಯುರ್ಜನಾ ಇತಿ।।
ಆಗ ನಾಗ ಕಾರ್ಕೋಟಕನು ನಲನನ್ನು ಸಂತವಿಸುತ್ತಾ ಹೇಳಿದನು: “ಜನರು ನಿನ್ನನ್ನು ಗುರುತಿಸಬಾರದೆಂದು ನಾನು ನಿನ್ನ ರೂಪವನ್ನು ಅಪಹರಿಸಿದ್ದೇನೆ.
03063014a ಯತ್ಕೃತೇ ಚಾಸಿ ವಿಕೃತೋ ದುಃಖೇನ ಮಹತಾ ನಲ।
03063014c ವಿಷೇಣ ಸ ಮದೀಯೇನ ತ್ವಯಿ ದುಃಖಂ ನಿವತ್ಸ್ಯತಿ।।
ನಲ! ಯಾರಿಂದ ನೀನು ಈ ಮಹಾ ದುಃಖವನ್ನು ಅನುಭವಿಸುತ್ತಿದ್ದೀಯೋ, ಯಾರು ನಿನ್ನ ದೇಹದಲ್ಲಿ ವಾಸಿಸುತ್ತಿದ್ದನೋ ಅವನು ನನ್ನ ಈ ವಿಷದಿಂದ ದುಃಖವನ್ನು ಅನುಭವಿಸುತ್ತಾನೆ.
03063015a ವಿಷೇಣ ಸಂವೃತೈರ್ಗಾತ್ರೈರ್ಯಾವತ್ತ್ವಾಂ ನ ವಿಮೋಕ್ಷ್ಯತಿ।
03063015c ತಾವತ್ತ್ವಯಿ ಮಹಾರಾಜ ದುಃಖಂ ವೈ ಸ ನಿವತ್ಸ್ಯತಿ।।
ಎಲ್ಲಿಯವರೆಗೆ ನಿನ್ನನ್ನು ಬಿಡುವುದಿಲ್ಲವೋ ಅಲ್ಲಿಯ ವರೆಗೆ ಅವನು ನಿನ್ನಲ್ಲಿದ್ದು ದೇಹವನ್ನೆಲ್ಲಾ ಆವರಿಸಿರುವ ಈ ವಿಷದಿಂದ ದುಃಖಿತನಾಗಿರುವನು.
03063016a ಅನಾಗಾ ಯೇನ ನಿಕೃತಸ್ತ್ವಮನರ್ಹೋ ಜನಾಧಿಪ।
03063016c ಕ್ರೋಧಾದಸೂಯಯಿತ್ವಾ ತಂ ರಕ್ಷಾ ಮೇ ಭವತಃ ಕೃತಾ।।
ಜನಾಧಿಪ! ಕ್ರೋಧ ಅಸೂಯೆಗೊಳಗಾಗಿ ಯಾರು ಮುಗ್ಧನೂ ಕಷ್ಟಗಳಿಗೆ ಅನರ್ಹನೂ ಆದ ನಿನಗೆ ಮೋಸಮಾಡಿದನೋ ಅವನಿಂದ ನಿನ್ನನ್ನು ನಾನು ರಕ್ಷಿಸುತ್ತೇನೆ.
03063017a ನ ತೇ ಭಯಂ ನರವ್ಯಾಘ್ರ ದಂಷ್ಟ್ರಿಭ್ಯಃ ಶತ್ರುತೋಽಪಿ ವಾ।
03063017c ಬ್ರಹ್ಮವಿದ್ಭ್ಯಶ್ಚ ಭವಿತಾ ಮತ್ಪ್ರಸಾದಾನ್ನರಾಧಿಪ।।
ನರವ್ಯಾಘ್ರ! ನರಾಧಿಪ! ನನ್ನ ವರದಿಂದ ನೀನು ಯಾವ ಮೃಗಗಳಿಂದಲೂ, ಶತೃಗಳಿಂದಲೂ ಮತ್ತು ಬ್ರಹ್ಮವಿದರಿಂದಲೂ ಭಯಪಡಬೇಕಾಗಿಲ್ಲ.
03063018a ರಾಜನ್ವಿಷನಿಮಿತ್ತಾ ಚ ನ ತೇ ಪೀಡಾ ಭವಿಷ್ಯತಿ।
03063018c ಸಂಗ್ರಾಮೇಷು ಚ ರಾಜೇಂದ್ರ ಶಶ್ವಜ್ಜಯಮವಾಪ್ಸ್ಯಸಿ।।
ರಾಜನ್! ಈ ವಿಷದಿಂದಾಗಿ ನಿನಗೆ ಯಾವುದೇ ರೀತಿಯ ಪೀಡೆಯೂ ಆಗುವುದಿಲ್ಲ. ಸಂಗ್ರಾಮಗಳಲ್ಲಿ ನೀನು ಯಾವತ್ತೂ ಜಯವನ್ನು ಗಳಿಸುವೆ.
03063019a ಗಚ್ಚ ರಾಜನ್ನಿತಃ ಸೂತೋ ಬಾಹುಕೋಽಹಮಿತಿ ಬ್ರುವನ್।
03063019c ಸಮೀಪಮೃತುಪರ್ಣಸ್ಯ ಸ ಹಿ ವೇದಾಕ್ಷನೈಪುಣಂ।
03063019e ಅಯೋಧ್ಯಾಂ ನಗರೀಂ ರಮ್ಯಾಮದ್ಯೈವ ನಿಷಧೇಶ್ವರ।।
ರಾಜ! ನೀನೊಬ್ಬ ಬಾಹುಕ ಎಂಬ ಹೆಸರಿನ ಸೂತ ಎಂದು ಹೇಳಿಕೊಂಡು ಇಲ್ಲಿಂದ ಅಕ್ಷವಿದ್ಯ ನಿಪುಣನಾದ ಋತುಪರ್ಣನೆಡೆಗೆ ಹೋಗು. ನಿಷಧೇಶ್ವರ! ರಮ್ಯ ಅಯೋಧ್ಯಾ ನಗರಿಗೆ ಇಂದೇ ಹೊರಡು.
03063020a ಸ ತೇಽಕ್ಷಹೃದಯಂ ದಾತಾ ರಾಜಾಶ್ವಹೃದಯೇನ ವೈ।
03063020c ಇಕ್ಷ್ವಾಕುಕುಲಜಃ ಶ್ರೀಮಾನ್ಮಿತ್ರಂ ಚೈವ ಭವಿಷ್ಯತಿ।।
ಆ ರಾಜನು ನಿನ್ನ ಅಶ್ವನೈಪುಣ್ಯತೆಗೆ ಬದಲಾಗಿ ನಿನಗೆ ಅಕ್ಷ ನೈಪುಣ್ಯತೆಯನ್ನು ನೀಡುತ್ತಾನೆ. ಆ ಶ್ರೀಮಾನ್ ಇಕ್ಷ್ವಾಕುಕುಲಜನು ನಿನ್ನ ಮಿತ್ರನಾಗುತ್ತಾನೆ.
03063021a ಭವಿಷ್ಯಸಿ ಯದಾಕ್ಷಜ್ಞಃ ಶ್ರೇಯಸಾ ಯೋಕ್ಷ್ಯಸೇ ತದಾ।
03063021c ಸಮೇಷ್ಯಸಿ ಚ ದಾರೈಸ್ತ್ವಂ ಮಾ ಸ್ಮ ಶೋಕೇ ಮನಃ ಕೃಥಾಃ।
03063021e ರಾಜ್ಯೇನ ತನಯಾಭ್ಯಾಂ ಚ ಸತ್ಯಮೇತದ್ಬ್ರವೀಮಿ ತೇ।।
ಯಾವಾಗ ನೀನು ಅಕ್ಷ ವಿದ್ಯೆಯನ್ನು ಪಡೆಯುತ್ತೀಯೋ ಆ ನಂತರ ಶ್ರೇಯಸ್ಸು, ಪತ್ನಿ, ರಾಜ್ಯ ಮತ್ತು ಮಕ್ಕಳೀರ್ವರನ್ನೂ ಪುನಃ ಪಡೆಯುತ್ತೀಯೆ. ನಿನ್ನ ಮನಸ್ಸಿನಿಂದ ಶೋಕವನ್ನು ಹೊರಹಾಕು. ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
03063022a ಸ್ವರೂಪಂ ಚ ಯದಾ ದ್ರಷ್ಟುಮಿಚ್ಚೇಥಾಸ್ತ್ವಂ ನರಾಧಿಪ।
03063022c ಸಂಸ್ಮರ್ತವ್ಯಸ್ತದಾ ತೇಽಹಂ ವಾಸಶ್ಚೇದಂ ನಿವಾಸಯೇಃ।।
03063023a ಅನೇನ ವಾಸಸಾಚ್ಚನ್ನಃ ಸ್ವರೂಪಂ ಪ್ರತಿಪತ್ಸ್ಯಸೇ।
03063023c ಇತ್ಯುಕ್ತ್ವಾ ಪ್ರದದಾವಸ್ಮೈ ದಿವ್ಯಂ ವಾಸೋಯುಗಂ ತದಾ।।
ನರಾಧಿಪ! ಯಾವಾಗ ನಿನಗೆ ನಿನ್ನ ಸ್ವರೂಪವನ್ನು ಪಡೆಯಲು ಮನಸ್ಸಾಗುತ್ತದೆಯೋ ಅವಾಗ ನನ್ನನ್ನು ನೆನಪಿಸಿಕೋ ಮತ್ತು ಈ ವಸ್ತ್ರವನ್ನು ಧರಿಸು. ಈ ವಸ್ತ್ರವನ್ನು ಧರಿಸಿದ ಕೂಡಲೇ ನೀನು ನಿನ್ನ ಸ್ವರೂಪವನ್ನು ಪುನಃ ಹೊಂದುತ್ತೀಯೆ!” ಹೀಗೆ ಹೇಳಿ ಒಂದು ಜೊತೆ ದಿವ್ಯವಸ್ತ್ರಗಳನ್ನು ಅವನಿಗಿತ್ತನು.
03063024a ಏವಂ ನಲಂ ಸಮಾದಿಶ್ಯ ವಾಸೋ ದತ್ತ್ವಾ ಚ ಕೌರವ।
03063024c ನಾಗರಾಜಸ್ತತೋ ರಾಜಂಸ್ತತ್ರೈವಾಂತರಧೀಯತ।।
ಕೌರವ! ಈ ರೀತಿ ನಲನಿಗೆ ಆದೇಶ ಮತ್ತು ವಸ್ತ್ರಗಳನ್ನಿತ್ತು ಆ ನಾಗರಾಜನು ಅಲ್ಲಿಯೇ ಅಂತರ್ಧಾನನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಕರ್ಕೋಟಕಸಂವಾದೇ ತ್ರಿಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಕರ್ಕೋಟಕ ಸಂವಾದ ಎನ್ನುವ ಅರವತ್ತ್ಮೂರನೆಯ ಅಧ್ಯಾಯವು.
-
ಉರಿಯುತ್ತಿರುವ ಅಗ್ನಿಯಲ್ಲಿ ಪ್ರವೇಶಿಸಬಲ್ಲನೆಂಬ ಅಗ್ನಿಯ ವರವಿತ್ತು. ↩︎