062 ನಲೋಪಾಖ್ಯಾನೇ ದಮಯಂತೀಚೇದಿರಾಜಗೃಹವಾಸಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 62

ಸಾರ

ಸರೋವರವೊಂದರ ಬಳಿ ರಾತ್ರಿ ಮಲಗಿರುವಾಗ ಆನೆಗಳ ಹಿಂಡೊಂದು ಬಂದು ದಂಡನ್ನು ನಾಶಗೊಳಿದುದು (1-11). ದಮಯಂತಿಯು ವಿಲಪಿಸುತ್ತಾ ಬ್ರಾಹ್ಮಣರೊಡಗೂಡಿ ಪ್ರಯಾಣಿಸಿ ಚೇದಿಪುರವನ್ನು ಪ್ರವೇಶಿಸಿದುದು (12-18). ಕರೆಯಿಸಿ ಕೇಳಿದ ರಾಜಮಾತೆಗೆ ದಮಯಂತಿಯು ತನ್ನ ಕಷ್ಟಗಳನ್ನು ಹೇಳಿಕೊಂಡಿದುದು (19-34). ದಮಯಂತಿಯ ವ್ರತ-ನಿಬಂಧನೆಗಳಿಗೆ ಒಪ್ಪಿಕೊಂಡು ರಾಜಮಾತೆಯು ಅವಳನ್ನು ತನ್ನ ಮಗಳು ಸುನಂದೆಯಲ್ಲಿ ಇರಿಸುವುದು (35-43).

03062001 ಬೃಹದಶ್ವ ಉವಾಚ।
03062001a ಸಾ ತಚ್ಶ್ರುತ್ವಾನವದ್ಯಾಂಗೀ ಸಾರ್ಥವಾಹವಚಸ್ತದಾ।
03062001c ಅಗಚ್ಚತ್ತೇನ ವೈ ಸಾರ್ಧಂ ಭರ್ತೃದರ್ಶನಲಾಲಸಾ।।

ಬೃಹದಶ್ವನು ಹೇಳಿದನು: “ಆ ಅನವದ್ಯಾಂಗಿಯು ದಂಡಿನ ನಾಯಕನ ಮಾತುಗಳನ್ನು ಕೇಳಿ ತನ್ನ ಪತಿಯನ್ನು ಕಾಣುವ ಆಸೆಯಿಂದ ಅವನ ಜೊತೆ ನಡೆದಳು.

03062002a ಅಥ ಕಾಲೇ ಬಹುತಿಥೇ ವನೇ ಮಹತಿ ದಾರುಣೇ।
03062002c ತಡಾಗಂ ಸರ್ವತೋಭದ್ರಂ ಪದ್ಮಸೌಗಂಧಿಕಂ ಮಹತ್।।
03062003a ದದೃಶುರ್ವಣಿಜೋ ರಮ್ಯಂ ಪ್ರಭೂತಯವಸೇಂಧನಂ।
03062003c ಬಹುಮೂಲಫಲೋಪೇತಂ ನಾನಾಪಕ್ಷಿಗಣೈರ್ವೃತಂ।।

ಕಾಲಾನಂತರದಲ್ಲಿ ಆ ವರ್ತಕರು ದಾರುಣ ಮಹಾ ವನದಲ್ಲಿ ಸರ್ವತೋಭದ್ರವಾದ, ದಡದಲ್ಲಿ ಸಾಕಷ್ಟು ಹುಲ್ಲು, ಕಟ್ಟಿಗೆ, ಫಲ-ಗಡ್ಡೆಗಳನ್ನು ಹೊಂದಿದ್ದ, ನಾನಾ ಪಕ್ಷಿಗಳು ಮತ್ತು ಪದ್ಮಸೌಗಂಧಿಕಗಳಿಂದೊಡಗೂಡಿದ ಒಂದು ವಿಶಾಲ, ರಮ್ಯ ಸರೋವರವನ್ನು ಕಂಡರು.

03062004a ತಂ ದೃಷ್ಟ್ವಾ ಮೃಷ್ಟಸಲಿಲಂ ಮನೋಹರಸುಖಾವಹಂ।
03062004c ಸುಪರಿಶ್ರಾಂತವಾಹಾಸ್ತೇ ನಿವೇಶಾಯ ಮನೋ ದಧುಃ।।

ಸಂತೋಷವನ್ನು ನೀಡುವ ಆ ಮನೋಹರ ಶುದ್ಧ ನೀರನ್ನು ನೋಡಿ, ಪ್ರಾಣಿಗಳು ದಣಿದಿದ್ದರಿಂದ, ಅಲ್ಲೇ ತಂಗಲು ನಿರ್ಧರಿಸಿದರು.

03062005a ಸಮ್ಮತೇ ಸಾರ್ಥವಾಹಸ್ಯ ವಿವಿಶುರ್ವನಮುತ್ತಮಂ।
03062005c ಉವಾಸ ಸಾರ್ಥಃ ಸುಮಹಾನ್ವೇಲಾಮಾಸಾದ್ಯ ಪಶ್ಚಿಮಾಂ।।

ದಂಡಿನ ನಾಯಕನ ಅನುಮತಿಯಂತೆ ಆ ಉತ್ತಮ ವನವನ್ನು ಪ್ರವೇಶಿಸಿದ ದಂಡು ಆ ರಾತ್ರಿಯನ್ನು ಅಲ್ಲೇ ಕಳೆಯಲು ತಯಾರಿಮಾಡಿತು.

03062006a ಅಥಾರ್ಧರಾತ್ರಸಮಯೇ ನಿಃಶಬ್ದಸ್ತಿಮಿತೇ ತದಾ।
03062006c ಸುಪ್ತೇ ಸಾರ್ಥೇ ಪರಿಶ್ರಾಂತೇ ಹಸ್ತಿಯೂಥಮುಪಾಗಮತ್।
03062006e ಪಾನೀಯಾರ್ಥಂ ಗಿರಿನದೀಂ ಮದಪ್ರಸ್ರವಣಾವಿಲಾಂ।।

ಅರ್ಧರಾತ್ರಿಯ ಸಮಯದಲ್ಲಿ, ನಿಃಶಬ್ಧರಾಗಿ ದಂಡಿನ ಎಲ್ಲರೂ ಮಲಗಿರುವ ಸಮಯದಲ್ಲಿ, ಆನೆಗಳ ಗುಂಪೊಂದು ಆ ಗಿರಿನದಿಯಲ್ಲಿ ನೀರು ಕುಡಿಯಲೆಂದು ಬಂದಿತು.

03062007a ಮಾರ್ಗಂ ಸಂರುಧ್ಯ ಸಂಸುಪ್ತಂ ಪದ್ಮಿನ್ಯಾಃ ಸಾರ್ಥಮುತ್ತಮಂ।
03062007c ಸುಪ್ತಂ ಮಮರ್ದ ಸಹಸಾ ಚೇಷ್ಟಮಾನಂ ಮಹೀತಲೇ।।

ಪದ್ಮಗಳಿದ್ದ ಸರೋವರದ ಮಾರ್ಗವನ್ನು ತಡೆಹಿಡಿದು ಮಲಗಿದ್ದ ಆ ಉತ್ತಮ ದಂಡನ್ನು ಅವುಗಳ ಗುಂಪು ತುಳಿದಾಡಿತು. ಮತ್ತು ಮಲಗಿದ್ದವರೆಲ್ಲ ನೆಲದಮೇಲೆ ಒದ್ದಾಡತೊಡಗಿದರು.

03062008a ಹಾಹಾರವಂ ಪ್ರಮುಂಚಂತಃ ಸಾರ್ಥಿಕಾಃ ಶರಣಾರ್ಥಿನಃ।
03062008c ವನಗುಲ್ಮಾಂಶ್ಚ ಧಾವಂತೋ ನಿದ್ರಾಂಧಾ ಮಹತೋ ಭಯಾತ್।
03062008e ಕೇ ಚಿದ್ದಂತೈಃ ಕರೈಃ ಕೇ ಚಿತ್ಕೇ ಚಿತ್ಪದ್ಭ್ಯಾಂ ಹತಾ ನರಾಃ।।

ಹಾಹಾಕಾರ ಮಾಡುತ್ತಾ ಶರಣಾರ್ಥಿಗಳಾದ ವರ್ತಕರು, ಇನ್ನೂ ನಿದ್ದೆಯಿಂದ ಕುರುಡರಾಗಿ, ಮಹತ್ತರ ಭಯದಿಂದ ತಪ್ಪಿಸಿಕೊಳ್ಳಲು ವನದಲ್ಲಿನ ಗಿಡಗಂಟಿಗಳ ಹಿಂದೆ ಓಡಿದರು. ಕೆಲವರು ದಂತಗಳಿಂದ ಸೀಳಿಹೋದರು, ಇನ್ನು ಕೆಲವರು ತುಳಿಯಲ್ಪಟ್ಟು ಹತರಾದರು.

03062009a ಗೋಖರೋಷ್ಟ್ರಾಶ್ವಬಹುಲಂ ಪದಾತಿಜನಸಂಕುಲಂ।
03062009c ಭಯಾರ್ತಂ ಧಾವಮಾನಂ ತತ್ಪರಸ್ಪರಹತಂ ತದಾ।।

ಎತ್ತು, ಕತ್ತೆ, ಒಂಟೆ, ಕುದುರೆ ಮತ್ತು ಕಾಲ್ದಾಳುಗಳ ಸಂಕುಲವು ಭಯದಿಂದ ಓಡುತ್ತಿದ್ದಾಗ ಪರಸ್ಪರರನ್ನು ಕೊಂದು ಹಾಕಿದವು.

03062010a ಘೋರಾನ್ನಾದಾನ್ವಿಮುಂಚಂತೋ ನಿಪೇತುರ್ಧರಣೀತಲೇ।
03062010c ವೃಕ್ಷೇಷ್ವಾಸಜ್ಯ ಸಂಭಗ್ನಾಃ ಪತಿತಾ ವಿಷಮೇಷು ಚ।
03062010e ತಥಾ ತನ್ನಿಹತಂ ಸರ್ವಂ ಸಮೃದ್ಧಂ ಸಾರ್ಥಮಂಡಲಂ।।

ಘೋರವಾಗಿ ಕೂಗುತ್ತಾ ಧರಣೀತಲದಲ್ಲಿ ಬಿದ್ದರು. ಭಗ್ನವಾದ ಅಂಗಗಳಿಂದ ವೃಕ್ಷಗಳನ್ನು ಹಿಡಿದು ಕಣಿವೆಗಳಲ್ಲಿ ಬಿದ್ದರು. ಹೀಗೆ ವರ್ತಕರ ಆ ಸಮೃದ್ಧ ಮಂಡಲವೆಲ್ಲವೂ ನಿಹತವಾಯಿತು.

03062011a ಅಥಾಪರೇದ್ಯುಃ ಸಂಪ್ರಾಪ್ತೇ ಹತಶಿಷ್ಟಾ ಜನಾಸ್ತದಾ।
03062011c ವನಗುಲ್ಮಾದ್ವಿನಿಷ್ಕ್ರಮ್ಯ ಶೋಚಂತೋ ವೈಶಸಂ ಕೃತಂ।
03062011e ಭ್ರಾತರಂ ಪಿತರಂ ಪುತ್ರಂ ಸಖಾಯಂ ಚ ಜನಾಧಿಪ।।

ಜನಾಧಿಪ! ಬೆಳಕು ಹರಿಯುತ್ತಿದ್ದಂತೆ ಸಾವಿನಿಂದ ಬದುಕಿದ ಜನರು ಗಿಡ ಮಟ್ಟಿಗಳಿಂದ ಹೊರಬಂದು ಎಲ್ಲರ ಹತ್ಯೆಯನ್ನು ಕಂಡು “ಸಹೋದರ! ತಂದೇ! ಪುತ್ರ! ಸಖಾ!” ಎಂದು ಶೋಕಿಸಿದರು.

03062012a ಅಶೋಚತ್ತತ್ರ ವೈದರ್ಭೀ ಕಿಂ ನು ಮೇ ದುಷ್ಕೃತಂ ಕೃತಂ।
03062012c ಯೋಽಪಿ ಮೇ ನಿರ್ಜನೇಽರಣ್ಯೇ ಸಂಪ್ರಾಪ್ತೋಽಯಂ ಜನಾರ್ಣವಃ।
03062012e ಹತೋಽಯಂ ಹಸ್ತಿಯೂಥೇನ ಮಂದಭಾಗ್ಯಾನ್ಮಮೈವ ತು।।

“ನಾನೇನು ದುಷ್ಕೃತವನ್ನು ಮಾಡಿದ್ದೇನೆಂದು ಈ ನಿರ್ಜನ ಅರಣ್ಯದಲ್ಲಿ ಈ ಜನಸಾಗರವು ಆನೆಗಳಿಂದ ತುಳಿಯಲ್ಪಟ್ಟು ನಾಶವಾಯಿತು? ಇದು ನನ್ನ ಮಂದಭಾಗ್ಯವೇ ಸರಿ!” ಎಂದು ಆ ವೈದರ್ಭಿಯು ಶೋಕಿಸಿದಳು.

03062013a ಪ್ರಾಪ್ತವ್ಯಂ ಸುಚಿರಂ ದುಃಖಂ ಮಯಾ ನೂನಮಸಂಶಯಂ।
03062013c ನಾಪ್ರಾಪ್ತಕಾಲೋ ಮ್ರಿಯತೇ ಶ್ರುತಂ ವೃದ್ಧಾನುಶಾಸನಂ।।
03062014a ಯನ್ನಾಹಮದ್ಯ ಮೃದಿತಾ ಹಸ್ತಿಯೂಥೇನ ದುಃಖಿತಾ।
03062014c ನ ಹ್ಯದೈವಕೃತಂ ಕಿಂ ಚಿನ್ನರಾಣಾಮಿಹ ವಿದ್ಯತೇ।।

“ನಿಸ್ಸಂಶಯವಾಗಿಯೂ ನನಗೆ ಮುಂದೆ ದುಃಖಪ್ರಾಪ್ತಿಯಾಗುವುದಿದೆ. ಅಕಾಲದಲ್ಲಿ ಮೃತ್ಯು ಪ್ರಾಪ್ತಿಯಾಗುವುದಿಲ್ಲ ಎಂದು ವೃದ್ಧರು ಹೇಳಿದುದನ್ನು ಕೇಳಿದ್ದೇನೆ. ನಾನು ಆನೆಗಳಿಂದ ತುಳಿಯಲ್ಪಟ್ಟು ಸಾಯಲಿಲ್ಲ. ಇದರಿಂದ ತಿಳಿಯುವುದೇನೆಂದರೆ, ವಿಧಿಯು ನಿಶ್ಚಯಿಸದೇ ಯಾವುದೂ ಆಗುವುದಿಲ್ಲ.

03062015a ನ ಚ ಮೇ ಬಾಲಭಾವೇಽಪಿ ಕಿಂ ಚಿದ್ವ್ಯಪಕೃತಂ ಕೃತಂ।
03062015c ಕರ್ಮಣಾ ಮನಸಾ ವಾಚಾ ಯದಿದಂ ದುಃಖಮಾಗತಂ।।

ಆದರೆ ನಾನು ಬಾಲ್ಯದಲ್ಲಿಯೂ ಕರ್ಮದಲ್ಲಿಯಾಗಲೀ, ಮನಸ್ಸಿನಲ್ಲಿಯಾಗಲೀ ಅಥವಾ ಮಾತಿನಲ್ಲಿಯಾಗಲೀ ಅಪಕೃತವನ್ನು ಮಾಡಿಲ್ಲ. ಹಾಗಿದ್ದರೆ ಈ ದುಃಖವು ಬರಲು ಕಾರಣವೇನು?

03062016a ಮನ್ಯೇ ಸ್ವಯಂವರಕೃತೇ ಲೋಕಪಾಲಾಃ ಸಮಾಗತಾಃ।
03062016c ಪ್ರತ್ಯಾಖ್ಯಾತಾ ಮಯಾ ತತ್ರ ನಲಸ್ಯಾರ್ಥಾಯ ದೇವತಾಃ।
03062016e ನೂನಂ ತೇಷಾಂ ಪ್ರಭಾವೇನ ವಿಯೋಗಂ ಪ್ರಾಪ್ತವತ್ಯಹಂ।।

ನನ್ನ ಯೋಚನೆಯಂತೆ ಸ್ವಯಂವರದಲ್ಲಿ ಸೇರಿದ್ದ ದೇವತೆ ಲೋಕಪಾಲಕರನ್ನು ನಲನಿಗೋಸ್ಕರವಾಗಿ ತಿರಸ್ಕರಿಸಿದ್ದುದಕ್ಕಾಗಿ, ಅವರ ಪ್ರಭಾವದಿಂದ ಈ ರೀತಿಯ ವಿಯೋಗ ಪ್ರಾಪ್ತಿಯಾಯಿತೇನೋ!”

03062017a ಏವಮಾದೀನಿ ದುಃಖಾನಿ ಸಾ ವಿಲಪ್ಯ ವರಾಂಗನಾ।
03062017c ಹತಶಿಷ್ಟೈಃ ಸಹ ತದಾ ಬ್ರಾಹ್ಮಣೈರ್ವೇದಪಾರಗೈಃ।
03062017e ಅಗಚ್ಚದ್ರಾಜಶಾರ್ದೂಲ ದುಃಖಶೋಕಪರಾಯಣಾ।।

ನರಶಾರ್ದೂಲ! ಈ ರೀತಿ ದುಃಖಿತಳಾದ ಆ ದೀನ ವರಾಂಗನೆಯು ದುಃಖಶೋಕಪರಾಯಣಳಾಗಿ ವಿಲಪಿಸುತ್ತಾ ವೇದಪಾರಂಗತ ಬ್ರಾಹ್ಮಣರೊಡಗೂಡಿ ಹೊರಟಳು.

03062018a ಗಚ್ಚಂತೀ ಸಾ ಚಿರಾತ್ಕಾಲಾತ್ಪುರಮಾಸಾದಯನ್ಮಹತ್।
03062018c ಸಾಯಾಹ್ನೇ ಚೇದಿರಾಜಸ್ಯ ಸುಬಾಹೋಃ ಸತ್ಯವಾದಿನಃ।
03062018e ವಸ್ತ್ರಾರ್ಧಕರ್ತಸಂವೀತಾ ಪ್ರವಿವೇಶ ಪುರೋತ್ತಮಂ।।

ಬಹಳ ದೂರ ಪ್ರಯಾಣಮಾಡಿದ ನಂತರ ಅವಳು ಒಂದು ದೊಡ್ಡ ಪಟ್ಟಣಕ್ಕೆ ಆಗಮಿಸಿದಳು. ಸುಬಾಹುವೂ ಸತ್ಯವಾದಿಯೂ ಆದ ಚೇದಿ ರಾಜನ ಆ ಉತ್ತಮ ಪುರವನ್ನು ಅರ್ಧವಸ್ತ್ರವನ್ನೇ ಧರಿಸಿದ್ದ ಅವಳು ಪ್ರವೇಶಿಸಿದಳು.

03062019a ತಾಂ ವಿವರ್ಣಾಂ ಕೃಶಾಂ ದೀನಾಂ ಮುಕ್ತಕೇಶೀಮಮಾರ್ಜನಾಂ।
03062019c ಉನ್ಮತ್ತಾಮಿವ ಗಚ್ಚಂತೀಂ ದದೃಶುಃ ಪುರವಾಸಿನಃ।।
03062020a ಪ್ರವಿಶಂತೀಂ ತು ತಾಂ ದೃಷ್ಟ್ವಾ ಚೇದಿರಾಜಪುರೀಂ ತದಾ।
03062020c ಅನುಜಗ್ಮುಸ್ತತೋ ಬಾಲಾ ಗ್ರಾಮಿಪುತ್ರಾಃ ಕುತೂಹಲಾತ್।।

ವಿವರ್ಣಳೂ, ಕೃಶಳೂ, ದೀನಳೂ, ಬಿಚ್ಚಿದ ತಲೆಗೂದಲಿನವಳೂ, ಹೊಲಸು ತುಂಬಿದವಳೂ, ಮತ್ತು ಹುಚ್ಚಿಯಂತೆ ಹೋಗುತ್ತಿರುವ ಅವಳನ್ನು ಪುರವಾಸಿಗಳು ನೋಡಿದರು. ಚೇದಿರಾಜಪುರವನ್ನು ಪ್ರವೇಶಿಸುತ್ತಿರುವ ಅವಳನ್ನು ನೋಡಿದ ಬಾಲಕರೂ ಗ್ರಾಮಪುತ್ರರೂ ಕುತೂಹಲದಿಂದ ಅವಳನ್ನು ಹಿಂಬಾಲಿಸಿದರು.

03062021a ಸಾ ತೈಃ ಪರಿವೃತಾಗಚ್ಚತ್ಸಮೀಪಂ ರಾಜವೇಶ್ಮನಃ।
03062021c ತಾಂ ಪ್ರಾಸಾದಗತಾಪಶ್ಯದ್ರಾಜಮಾತಾ ಜನೈರ್ವೃತಾಂ।।

ಅವಳು ರಾಜಭವನದ ಸಮೀಪ ಹೋಗುತ್ತಿದ್ದಂತೆಯೇ ಅವರೆಲ್ಲರೂ ಅವಳನ್ನು ಸುತ್ತುವರಿದರು. ಜನರಿಂದ ಸುತ್ತುವರಿಯಲ್ಪಟ್ಟಿದ್ದ ಅವಳನ್ನು ರಾಜಮಾತೆಯು ಅರಮನೆಯ ಮೇಲ್ಗಚ್ಚಿನಿಂದ ನೋಡಿದಳು.

03062022a ಸಾ ಜನಂ ವಾರಯಿತ್ವಾ ತಂ ಪ್ರಾಸಾದತಲಮುತ್ತಮಂ।
03062022c ಆರೋಪ್ಯ ವಿಸ್ಮಿತಾ ರಾಜನ್ದಮಯಂತೀಮಪೃಚ್ಚತ।।

ರಾಜನ್! ಉತ್ತಮ ಪೀಠದಲ್ಲಿ ಕುಳಿತಿದ್ದ ಅವಳು ವಿಸ್ಮಿತಳಾಗಿ ಜನರೆಲ್ಲರನ್ನೂ ಹಿಂದೆಸರಿಸಿ ದಮಯಂತಿಯನ್ನು ಪ್ರಶ್ನಿಸಿದಳು.

03062023a ಏವಮಪ್ಯಸುಖಾವಿಷ್ಟಾ ಬಿಭರ್ಷಿ ಪರಮಂ ವಪುಃ।
03062023c ಭಾಸಿ ವಿದ್ಯುದಿವಾಭ್ರೇಷು ಶಂಸ ಮೇ ಕಾಸಿ ಕಸ್ಯ ವಾ।।

“ದುಃಖಾವಿಷ್ಟಳಾಗಿದ್ದರೂ ಸುಂದರವಾದ ದೇಹವನ್ನು ಧರಿಸಿದ್ದೀಯೆ ಮತ್ತು ಮಿಂಚಿನಿಂದೊಡಗೂಡಿದ ಮೋಡದಂತೆ ಹೊಳೆಯುತ್ತಿರುವೆ. ನೀನು ಯಾರು ಮತ್ತು ಯಾರವಳು ಎನ್ನುವುದನ್ನು ಹೇಳು!

03062024a ನ ಹಿ ತೇ ಮಾನುಷಂ ರೂಪಂ ಭೂಷಣೈರಪಿ ವರ್ಜಿತಂ।
03062024c ಅಸಹಾಯಾ ನರೇಭ್ಯಶ್ಚ ನೋದ್ವಿಜಸ್ಯಮರಪ್ರಭೇ।।

ಅಮರಪ್ರಭೆ! ಭೂಷಣಗಳಿಲ್ಲದಿದ್ದರೂ ರೂಪದಲ್ಲಿ ನೀನು ಮನುಷ್ಯಳೆಂದು ಅನ್ನಿಸುವುದಿಲ್ಲ. ಅಸಹಾಯಕಳಾಗಿದ್ದರೂ ನಿನಗೆ ಈ ಜನರ ಭಯವಾಗುತ್ತಿಲ್ಲವಲ್ಲ!”

03062025a ತಚ್ಛೃತ್ವಾ ವಚನಂ ತಸ್ಯಾ ಭೈಮೀ ವಚನಮಬ್ರವೀತ್।
03062025c ಮಾನುಷೀಂ ಮಾಂ ವಿಜಾನೀಹಿ ಭರ್ತಾರಂ ಸಮನುವ್ರತಾಂ।।

ಅವಳ ಈ ಮಾತುಗಳನ್ನು ಕೇಳಿ ಭೈಮಿಯು ಹೇಳಿದಳು: “ಪತಿಯ ಅನುವ್ರತಳಾದ ಓರ್ವ ಮಾನುಷಿಯೆಂದು ನನ್ನನ್ನು ತಿಳಿ.

03062026a ಸೈರಂಧ್ರೀಂ ಜಾತಿಸಂಪನ್ನಾಂ ಭುಜಿಷ್ಯಾಂ ಕಾಮವಾಸಿನೀಂ।
03062026c ಫಲಮೂಲಾಶನಾಮೇಕಾಂ ಯತ್ರಸಾಯಂಪ್ರತಿಶ್ರಯಾಂ।।

ನಾನು ಇಷ್ಟವಿದ್ದಲ್ಲಿ ವಾಸಿಸುವ, ಫಲಮೂಲಗಳನ್ನು ಸೇವಿಸುವ, ಎಕಾಂಗಿ. ಸಾಯಂಕಾಲ ಎಲ್ಲಿ ಆಗುತ್ತದೆಯೋ ಅಲ್ಲಿಯೇ ಉಳಿಯುವ, ಜಾತಿಸಂಪನ್ನಳಾದ ಓರ್ವ ಸೈರಂಧ್ರೀ.

03062027a ಅಸಂಖ್ಯೇಯಗುಣೋ ಭರ್ತಾ ಮಾಂ ಚ ನಿತ್ಯಮನುವ್ರತಃ।
03062027c ಭರ್ತಾರಮಪಿ ತಂ ವೀರಂ ಚಾಯೇವಾನಪಗಾ ಸದಾ।।

ಅಸಂಖ್ಯಗುಣಿಯಾದ ನನ್ನ ಪತಿಯು ನಿತ್ಯವೂ ನನ್ನಲ್ಲಿಯೇ ಅನುವ್ರತನಾದವನು. ನಾನೂ ಕೂಡ ನನ್ನ ವೀರ ಪತಿಯನ್ನು ನೆರಳಿನಂತೆ ಹಿಂಬಾಲಿಸಿಕೊಂಡು ಬಂದಿದ್ದೇನೆ.

03062028a ತಸ್ಯ ದೈವಾತ್ಪ್ರಸಂಗೋಽಭೂದತಿಮಾತ್ರಂ ಸ್ಮ ದೇವನೇ।
03062028c ದ್ಯೂತೇ ಸ ನಿರ್ಜಿತಶ್ಚೈವ ವನಮೇಕೋಽಭ್ಯುಪೇಯಿವಾನ್।।

ದುರ್ದೈವವಷಾತ್ ಅವನಿಗೆ ಜೂಜಿನಲ್ಲಿ ಅತಿಯಾದ ಚಟವಿತ್ತು. ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವನು ಒಬ್ಬನೇ ಅರಣ್ಯಕ್ಕೆ ಹೊರಟುಹೋದನು.

03062029a ತಮೇಕವಸನಂ ವೀರಮುನ್ಮತ್ತಮಿವ ವಿಃವಲಂ।
03062029c ಆಶ್ವಾಸಯಂತೀ ಭರ್ತಾರಮಹಮನ್ವಗಮಂ ವನಂ।।

ಏಕವಸ್ತ್ರನಾಗಿ, ಹುಚ್ಚನಂತೆ ವಿಹ್ವಲನಾಗಿದ್ದ ಆ ವೀರ ಪತಿಯನ್ನು ಅನುಸರಿಸಿ ನಾನೂ ಕಾಡಿಗೆ ಬಂದೆ.

03062030a ಸ ಕದಾ ಚಿದ್ವನೇ ವೀರಃ ಕಸ್ಮಿಂಶ್ಚಿತ್ಕಾರಣಾಂತರೇ।
03062030c ಕ್ಷುತ್ಪರೀತಃ ಸುವಿಮನಾಸ್ತದಪ್ಯೇಕಂ ವ್ಯಸರ್ಜಯತ್।।

ಒಂದುದಿನ ವನದಲ್ಲಿ ಹಸಿವೆಯಿಂದ ಬಳಲಿದ್ದ ಆ ವೀರನು ಯಾವುದೋ ಕಾರಣದಿಂದಾಗಿ ಅವನಲ್ಲಿದ್ದ ಒಂದು ವಸ್ತ್ರವನ್ನೂ ಕಳೆದುಕೊಂಡನು.

03062031a ತಮೇಕವಸನಂ ನಗ್ನಮುನ್ಮತ್ತಂ ಗತಚೇತಸಂ।
03062031c ಅನುವ್ರಜಂತೀ ಬಹುಲಾ ನ ಸ್ವಪಾಮಿ ನಿಶಾಃ ಸದಾ।।

ಆ ನಗ್ನ, ಉನ್ಮತ್ತ, ಅರಿವನ್ನೇ ಕಳೆದುಕೊಂಡಿದ್ದ ಏಕವಸ್ತ್ರಧಾರಿಯನ್ನು ಅನುಸರಿಸುತ್ತಾ ಬಹಳಷ್ಟು ರಾತ್ರಿಗಳು ನಾನು ನಿದ್ದೆಯನ್ನೇ ಮಾಡಲಿಲ್ಲ.

03062032a ತತೋ ಬಹುತಿಥೇ ಕಾಲೇ ಸುಪ್ತಾಮುತ್ಸೃಜ್ಯ ಮಾಂ ಕ್ವ ಚಿತ್।
03062032c ವಾಸಸೋಽರ್ಧಂ ಪರಿಚ್ಚಿದ್ಯ ತ್ಯಕ್ತವಾನ್ಮಾಮನಾಗಸಂ।।

ಬಹುದಿನಗಳ ನಂತರ ಯಾವಾಗಲೋ ಒಮ್ಮೆ ನಾನು ನಿದ್ದೆಮಾಡುತ್ತಿರುವಾಗ ನನ್ನ ವಸ್ತ್ರವನ್ನು ಅರ್ಧ ಕತ್ತರಿಸಿ ಅದನ್ನೇ ಸುತ್ತಿಕೊಂಡು ತಪ್ಪನ್ನೇನೂ ಮಾಡಿರದ ನನ್ನನ್ನು ಬಿಟ್ಟು ಹೊರಟು ಹೋದನು.

03062033a ತಂ ಮಾರ್ಗಮಾಣಾ ಭರ್ತಾರಂ ದಹ್ಯಮಾನಾ ದಿನಕ್ಷಪಾಃ।
03062033c ನ ವಿಂದಾಮ್ಯಮರಪ್ರಖ್ಯಂ ಪ್ರಿಯಂ ಪ್ರಾಣಧನೇಶ್ವರಂ।।

ನನ್ನ ಮನಸ್ಸು ದಹಿಸುತ್ತಿದ್ದಂತೆ ದಿನ ರಾತ್ರಿಯೂ ಪತಿಯನ್ನು ಹುಡುಕುತ್ತಿದ್ದೇನೆ. ಆದರೆ ನನ್ನ ಪ್ರಿಯನನ್ನು, ಪ್ರಾಣಧನೇಶ್ವರನನ್ನು ಕಾಣದಾಗಿದ್ದೇನೆ.”

03062034a ತಾಮಶ್ರುಪರಿಪೂರ್ಣಾಕ್ಷೀಂ ವಿಲಪಂತೀಂ ತಥಾ ಬಹು।
03062034c ರಾಜಮಾತಾಬ್ರವೀದಾರ್ತಾಂ ಭೈಮೀಮಾರ್ತತರಾ ಸ್ವಯಂ।।

ಅಶ್ರುಪರಿಪೂರ್ಣಾಕ್ಷಿಯಾಗಿ ಬಹುವಾಗಿ ವಿಲಪಿಸುತ್ತಿದ್ದ ಆರ್ತ ಭೈಮಿಗೆ ತಾನೇ ಸ್ವತಃ ದುಃಖದಲ್ಲಿದ್ದಾಳೋ ಎನ್ನುವಂತೆ ರಾಜಮಾತೆಯು ಹೇಳಿದಳು:

03062035a ವಸಸ್ವ ಮಯಿ ಕಲ್ಯಾಣಿ ಪ್ರೀತಿರ್ಮೇ ತ್ವಯಿ ವರ್ತತೇ।
03062035c ಮೃಗಯಿಷ್ಯಂತಿ ತೇ ಭದ್ರೇ ಭರ್ತಾರಂ ಪುರುಷಾ ಮಮ।।

“ಕಲ್ಯಾಣಿ! ನೀನು ನನ್ನಲ್ಲಿಯೇ ಇರು. ನಿನ್ನ ವರ್ತನೆಯಿಂದ ನಾನು ಸಂತೋಷಗೊಂಡಿದ್ದೇನೆ. ಭದ್ರೆ! ನನ್ನ ಪುರುಷರು ನಿನ್ನ ಪತಿಯನ್ನು ಹುಡುಕುವರು.

03062036a ಅಥ ವಾ ಸ್ವಯಮಾಗಚ್ಚೇತ್ಪರಿಧಾವನ್ನಿತಸ್ತತಃ।
03062036c ಇಹೈವ ವಸತೀ ಭದ್ರೇ ಭರ್ತಾರಮುಪಲಪ್ಸ್ಯಸೇ।।

ಅಥವಾ ತಾನಾಗಿಯೇ ಇಲ್ಲಿ ಅಲ್ಲಿ ಸುತ್ತಾಡುತ್ತಾ ಅವನೇ ಇಲ್ಲಿಗೆ ಬರಬಹುದು. ಭದ್ರೆ! ನೀನು ಇಲ್ಲಿ ವಾಸಿಸುತ್ತಿರುವಾಗಲೇ ನಿನ್ನ ಪತಿಯನ್ನು ಪುನಃ ಹೊಂದುವೆ.”

03062037a ರಾಜಮಾತುರ್ವಚಃ ಶ್ರುತ್ವಾ ದಮಯಂತೀ ವಚೋಽಬ್ರವೀತ್।
03062037c ಸಮಯೇನೋತ್ಸಹೇ ವಸ್ತುಂ ತ್ವಯಿ ವೀರಪ್ರಜಾಯಿನಿ।।
03062038a ಉಚ್ಚಿಷ್ಟಂ ನೈವ ಭುಂಜೀಯಾಂ ನ ಕುರ್ಯಾಂ ಪಾದಧಾವನಂ।
03062038c ನ ಚಾಹಂ ಪುರುಷಾನನ್ಯಾನ್ಸಂಭಾಷೇಯಂ ಕಥಂ ಚನ।।

ರಾಜಮಾತೆಯ ವಚನಗಳನ್ನು ಕೇಳಿ ದಮಯಂತಿಯು ಹೇಳಿದಳು: “ವೀರಮಾತೆ! ನಿನ್ನಲ್ಲಿ ನಾನು ಇರುತ್ತೇನೆ. ಆದರೆ ಕೆಲವು ನಿಯಮಗಳಡಿಯಲ್ಲಿ! ನಾನು ಎಂಜಲನ್ನು ತಿನ್ನುವುದಿಲ್ಲ, ಬೇರೆಯವರ ಪಾದಗಳನ್ನು ತೊಳೆಯುವುದಿಲ್ಲ, ಮತ್ತು ಅನ್ಯ ಪುರುಷರೊಂದಿಗೆ ಎಂದೂ ಮಾತನಾಡುವುದಿಲ್ಲ.

03062039a ಪ್ರಾರ್ಥಯೇದ್ಯದಿ ಮಾಂ ಕಶ್ಚಿದ್ದಂಡ್ಯಸ್ತೇ ಸ ಪುಮಾನ್ಭವೇತ್।
03062039c ಭರ್ತುರನ್ವೇಷಣಾರ್ಥಂ ತು ಪಶ್ಯೇಯಂ ಬ್ರಾಹ್ಮಣಾನಹಂ।।

ಯಾರಾದರೂ ನನ್ನಜೊತೆ ಸರಿಯಾಗಿ ವರ್ತಿಸದೇ ಇದ್ದರೆ ಅವರಿಗೆ ಸರಿಯಾದ ದಂಡವು ದೊರೆಯಬೇಕು. ಆದರೆ, ಪತಿಯನ್ನು ಅನ್ವೇಷಿಸುವ ಸಲುವಾಗಿ ನಾನು ಬ್ರಾಹ್ಮಣರನ್ನು ಕಾಣುತ್ತೇನೆ.

03062040a ಯದ್ಯೇವಮಿಹ ಕರ್ತವ್ಯಂ ವಸಾಮ್ಯಹಮಸಂಶಯಂ।
03062040c ಅತೋಽನ್ಯಥಾ ನ ಮೇ ವಾಸೋ ವರ್ತತೇ ಹೃದಯೇ ಕ್ವ ಚಿತ್।।

ಈ ರೀತಿ ಮಾಡುವುದು ಸಾದ್ಯವಾದರೆ ನಾನು ಇಲ್ಲಿ ವಾಸಿಸುವುದಕ್ಕೆ ಸಂಶಯವೇ ಇಲ್ಲ. ಅನ್ಯಥಾ ನನಗೆ ಇಲ್ಲಿ ವಾಸಿಸಲು ಸ್ವಲ್ಪವೂ ಮನಸ್ಸಿಲ್ಲ.”

03062041a ತಾಂ ಪ್ರಹೃಷ್ಟೇನ ಮನಸಾ ರಾಜಮಾತೇದಮಬ್ರವೀತ್।
03062041c ಸರ್ವಮೇತತ್ ಕರಿಷ್ಯಾಮಿ ದಿಷ್ಟ್ಯಾ ತೇ ವ್ರತಮೀದೃಶಂ।।

ಪ್ರಹೃಷ್ಟಮನಸಳಾದ ರಾಜಮಾತೆಯು ಅವಳಿಗೆ ಹೇಳಿದಳು: “ನಿನ್ನ ವ್ರತದ ನಿಯಮಗಳ ತಕ್ಕಂತೆ ಎಲ್ಲವನ್ನೂ ಮಾಡುತ್ತೇನೆ.”

03062042a ಏವಮುಕ್ತ್ವಾ ತತೋ ಭೈಮೀಂ ರಾಜಮಾತಾ ವಿಶಾಂ ಪತೇ।
03062042c ಉವಾಚೇದಂ ದುಹಿತರಂ ಸುನಂದಾಂ ನಾಮ ಭಾರತ।।

ವಿಶಾಂಪತೇ! ಭಾರತ! ಭೈಮಿಗೆ ಈ ರೀತಿ ಹೇಳಿದ ನಂತರ ರಾಜಮಾತೆಯು ಸುನಂದ ಎಂಬ ಹೆಸರಿನ ತನ್ನ ಮಗಳಿಗೆ ಹೇಳಿದಳು:

03062043a ಸೈರಂಧ್ರೀಮಭಿಜಾನೀಷ್ವ ಸುನಂದೇ ದೇವರೂಪಿಣೀಂ।
03062043c ಏತಯಾ ಸಹ ಮೋದಸ್ವ ನಿರುದ್ವಿಗ್ನಮನಾಃ ಸ್ವಯಂ।।

“ಸುನಂದ! ಈ ದೇವರೂಪಿಣಿಯು ನಿನ್ನ ಸೈರಂಧ್ರಿಯಾಗಿ ಇರುವಳು, ಗುರುತಿಟ್ಟುಕೋ. ಇವಳೊಂದಿಗೆ ಯಾವ ಉದ್ವೇಗವೂ ಇಲ್ಲದೇ ಸ್ವತಃ ಆನಂದವಾಗಿರು!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಚೇದಿರಾಜಗೃಹವಾಸೇ ದ್ವಿಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತಿಯು ಚೇದಿರಾಜನ ಮನೆಯಲ್ಲಿ ವಾಸಿಸಿದುದು ಎನ್ನುವ ಅರವತ್ತೆರಡನೆಯ ಅಧ್ಯಾಯವು.