ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 60
ಸಾರ
ಎಚ್ಚರಗೊಂಡ ದಮಯಂತಿಯು ಪತಿಯನ್ನು ಕಾಣದೇ ವಿಲಪಿಸುತ್ತಾ ಅವನನ್ನು ಹುಡುಕುತ್ತಾ ಅರಣ್ಯದಲ್ಲಿ ಸುತ್ತಾಡಿದುದು (1-18). ಮಾರ್ಗದಲ್ಲಿ ಹೆಬ್ಬಾವೊಂದು ಅವಳನ್ನು ಹಿಡಿದು ನುಂಗಲು ಪ್ರಾರಂಭಿಸುವಾಗ, ಅವಳ ಕೂಗನ್ನು ಕೇಳಿದ ವ್ಯಾಧನೋರ್ವನು ಬಂದು ಹಾವನ್ನು ಕೊಂದು ದಮಯಂತಿಯನ್ನು ಮುಕ್ತಗೊಳಿಸಿದುದು (19-30). ತನ್ನ ರೂಪವನ್ನು ಕಂಡು ಮೋಹಿತನಾದ ವ್ಯಾಧನನ್ನು ದಮಯಂತಿಯು ಶಪಿಸಿ ಸುಟ್ಟುಹಾಕಿದುದು (31-38).
03060001 ಬೃಹದಶ್ವ ಉವಾಚ।
03060001a ಅಪಕ್ರಾಂತೇ ನಲೇ ರಾಜನ್ದಮಯಂತೀ ಗತಕ್ಲಮಾ।
03060001c ಅಬುಧ್ಯತ ವರಾರೋಹಾ ಸಂತ್ರಸ್ತಾ ವಿಜನೇ ವನೇ।।
ಬೃಹದಶ್ವನು ಹೇಳಿದನು: “ರಾಜನ್! ಅಯಾಸವನ್ನು ನಿವಾರಿಸಿಕೊಂಡ ವರಾರೋಹೆ ದಮಯಂತಿಯು ನಲನು ಹೊರಟುಹೋದ ಬಳಿಕ ನಿರ್ಜನ ವನದಲ್ಲಿ ನಡುಗುತ್ತಾ ಎಚ್ಚರಗೊಂಡಳು.
03060002a ಸಾಪಶ್ಯಮಾನಾ ಭರ್ತಾರಂ ದುಃಖಶೋಕಸಮನ್ವಿತಾ।
03060002c ಪ್ರಾಕ್ರೋಶದುಚ್ಚೈಃ ಸಂತ್ರಸ್ತಾ ಮಹಾರಾಜೇತಿ ನೈಷಧಂ।।
ಪತಿಯನ್ನು ಕಾಣದೇ, ದುಃಖಶೋಕಸಮನ್ವಿತಳಾಗಿ “ಮಹಾರಾಜ!” ಎಂದು ನೈಷಧನನ್ನು ಜೋರಾಗಿ ಕೂಗಿ ಕರೆದಳು.
03060003a ಹಾ ನಾಥ ಹಾ ಮಹಾರಾಜ ಹಾ ಸ್ವಾಮಿನ್ಕಿಂ ಜಹಾಸಿ ಮಾಂ।
03060003c ಹಾ ಹತಾಸ್ಮಿ ವಿನಷ್ಟಾಸ್ಮಿ ಭೀತಾಸ್ಮಿ ವಿಜನೇ ವನೇ।।
“ಹಾ ನಾಥ! ಹಾ ಮಹಾರಾಜ! ಹಾ ಸ್ವಾಮೀ! ನನ್ನನ್ನು ಏಕೆ ಬಿಟ್ಟುಹೋದೆ? ನಾನು ಈ ನಿರ್ಜನ ವನದಲ್ಲಿ ಹತಳಾಗಿದ್ದೇನೆ! ವಿನಷ್ಟಳಾಗಿದ್ದೇನೆ! ಭೀತಳಾಗಿದ್ದೇನೆ!
03060004a ನನು ನಾಮ ಮಹಾರಾಜ ಧರ್ಮಜ್ಞಃ ಸತ್ಯವಾಗಸಿ।
03060004c ಕಥಮುಕ್ತ್ವಾ ತಥಾಸತ್ಯಂ ಸುಪ್ತಾಮುತ್ಸೃಜ್ಯ ಮಾಂ ಗತಃ।।
ಮಹಾರಾಜ! ನೀನು ಸದಾ ಧರ್ಮಜ್ಞ ಮತ್ತು ಸತ್ಯವಾದಿ. ಆದರೆ ಈಗ ಅಸತ್ಯವನ್ನು ನುಡಿದು ಮಲಗಿದ್ದ ನನ್ನನ್ನು ಹೇಗೆ ಬಿಟ್ಟು ಹೋದೆ?
03060005a ಕಥಮುತ್ಸೃಜ್ಯ ಗಂತಾಸಿ ವಶ್ಯಾಂ ಭಾರ್ಯಾಮನುವ್ರತಾಂ।
03060005c ವಿಶೇಷತೋಽನಪಕೃತೇ ಪರೇಣಾಪಕೃತೇ ಸತಿ।।
ವಿಶೇಷವಾಗಿ ಯಾರಿಗೂ ಕೆಟ್ಟದ್ದನ್ನು ಮಾಡದ, ಬೇರೆಯವರಿಂದ ಕೆಟ್ಟದ್ದನ್ನು ಮಾಡಿಸಿಕೊಂಡ ನೀನು - ನಿನ್ನ ವಶದಲ್ಲಿಯೇ ಇರುವ, ನಿನ್ನನ್ನೇ ಅನುಸರಿಸುವ - ಭಾರ್ಯೆಯನ್ನು ಹೇಗೆ ಬಿಟ್ಟು ಹೋದೆ?
03060006a ಶಕ್ಷ್ಯಸೇ ತಾ ಗಿರಃ ಸತ್ಯಾಃ ಕರ್ತುಂ ಮಯಿ ನರೇಶ್ವರ।
03060006c ಯಾಸ್ತ್ವಯಾ ಲೋಕಪಾಲಾನಾಂ ಸಂನಿಧೌ ಕಥಿತಾಃ ಪುರಾ।।
ನರೇಶ್ವರ! ಹಿಂದೆ ಲೋಕಪಾಲಕರ ಸನ್ನಿಧಿಯಲ್ಲಿ ನನಗೆ ಕೊಟ್ಟ ವಚನವನ್ನು ಸತ್ಯವನ್ನಾಗಿ ಮಾಡಲು ನಿನಗೆ ಸಾಧ್ಯವಿಲ್ಲವೇ?
03060007a ಪರ್ಯಾಪ್ತಃ ಪರಿಹಾಸೋಽಯಮೇತಾವಾನ್ಪುರುಷರ್ಷಭ।
03060007c ಭೀತಾಹಮಸ್ಮಿ ದುರ್ಧರ್ಷ ದರ್ಶಯಾತ್ಮಾನಮೀಶ್ವರ।।
ಪುರುಷರ್ಷಭ! ಸಾಕು ಈ ಪರಿಹಾಸ! ದುರ್ಧರ್ಷ! ಈಶ್ವರ! ನಾನು ಭೀತಳಾಗಿದ್ದೇನೆ! ನಿನ್ನನ್ನು ಕಾಣಿಸಿಕೋ.
03060008a ದೃಶ್ಯಸೇ ದೃಶ್ಯಸೇ ರಾಜನ್ನೇಷ ತಿಷ್ಠಸಿ ನೈಷಧ।
03060008c ಆವಾರ್ಯ ಗುಲ್ಮೈರಾತ್ಮಾನಂ ಕಿಂ ಮಾಂ ನ ಪ್ರತಿಭಾಷಸೇ।।
ನಿನ್ನನ್ನು ನೋಡಿದೆ! ರಾಜ! ನಿನ್ನನ್ನು ನೋಡಿದೆ! ನೈಷಧ! ನೀನು ಅಲ್ಲಿ ನಿಂತಿದ್ದೀಯೆ. ಗಿಡಗಳ ಹಿಂದೆ ಅಡಗಿಕೊಂಡಿದ್ದೀಯೆ. ನೀನು ಯಾಕೆ ನನಗೆ ಉತ್ತರಿಸುತ್ತಿಲ್ಲ?
03060009a ನೃಶಂಸಂ ಬತ ರಾಜೇಂದ್ರ ಯನ್ಮಾಮೇವಂಗತಾಮಿಹ।
03060009c ವಿಲಪಂತೀಂ ಸಮಾಲಿಂಗ್ಯ ನಾಶ್ವಾಸಯಸಿ ಪಾರ್ಥಿವ।।
ಪಾರ್ಥಿವ! ರಾಜೇಂದ್ರ! ನನ್ನನ್ನು ಇನ್ನು ಹಿಂಸಿಸಬೇಡ! ನಾನು ಇಲ್ಲಿ ವಿಲಪಿಸುತ್ತಿದ್ದೇನೆ ಎಂದು ತಿಳಿದರೂ ನೀನು ನನ್ನನ್ನು ನಿನ್ನ ಬಾಹುಗಳಲ್ಲಿರಿಸಿ ಸಂತವಿಸುತ್ತಿಲ್ಲವಲ್ಲ!
03060010a ನ ಶೋಚಾಮ್ಯಹಮಾತ್ಮಾನಂ ನ ಚಾನ್ಯದಪಿ ಕಿಂ ಚನ।
03060010c ಕಥಂ ನು ಭವಿತಾಸ್ಯೇಕ ಇತಿ ತ್ವಾಂ ನೃಪ ಶೋಚಿಮಿ।।
ನೃಪ! ನಾನು ನಿನ್ನನ್ನು ಬಿಟ್ಟು ನನ್ನ ಬಗ್ಗೆ ಅಥವಾ ಬೇರೆ ಯಾವುದರ ಕುರಿತೂ ಯೋಚಿಸುತ್ತಿಲ್ಲ. ನೀನು ಒಬ್ಬನೇ ಹೇಗೆ ಇರುತ್ತೀಯೆ ಎಂದು ಶೋಕಿಸುತ್ತಿದ್ದೇನೆ.
03060011a ಕಥಂ ನು ರಾಜಂಸ್ತೃಷಿತಃ ಕ್ಷುಧಿತಃ ಶ್ರಮಕರ್ಶಿತಃ।
03060011c ಸಾಯಾಃನೇ ವೃಕ್ಷಮೂಲೇಷು ಮಾಮಪಶ್ಯನ್ಭವಿಷ್ಯಸಿ।।
ರಾತ್ರಿ ಬಿದ್ದಮೇಲೆ ಹಸಿವು ಬಾಯಾರಿಕೆಗಳಿಂದ ಬಳಲಿದ ನೀನು ವೃಕ್ಷದ ಅಡಿಯಲ್ಲಿ ಕುಳಿತು ನನ್ನನ್ನೂ ನೋಡದೇ ಹೇಗೆ ಇರಬಲ್ಲೆ ರಾಜನ್?”
03060012a ತತಃ ಸಾ ತೀವ್ರಶೋಕಾರ್ತಾ ಪ್ರದೀಪ್ತೇವ ಚ ಮನ್ಯುನಾ।
03060012c ಇತಶ್ಚೇತಶ್ಚ ರುದತೀ ಪರ್ಯಧಾವತ ದುಃಖಿತಾ।।
ತೀವ್ರ ಶೋಕ-ಕೋಪಗಳಿಂದ ಉರಿಯುತ್ತಿದ್ದ ಅವಳು ದುಃಖದಿಂದ ಅಳುತ್ತಾ ಅತ್ತಿತ್ತ ಓಡತೊಡಗಿದಳು.
03060013a ಮುಹುರುತ್ಪತತೇ ಬಾಲಾ ಮುಹುಃ ಪತತಿ ವಿಹ್ವಲಾ।
03060013c ಮುಹುರಾಲೀಯತೇ ಭೀತಾ ಮುಹುಃ ಕ್ರೋಶತಿ ರೋದಿತಿ।।
ಆ ಬಾಲೆಯು ಒಂದು ಕ್ಷಣ ಮೇಲೇಳುತ್ತಿದ್ದಳು, ಇನ್ನೊಂದು ಕ್ಷಣ ವಿಹ್ವಲಳಾಗಿ ಬೀಳುತ್ತಿದ್ದಳು. ಒಂದು ಕ್ಷಣ ಬೀತಳಾಗಿ ಮುದುಡಿಕೊಂಡಿರುತ್ತಿದ್ದಳು, ಮತ್ತೊಂದು ಕ್ಷಣ ಜೋರಾಗಿ ಅಳುತ್ತಿದ್ದಳು.
03060014a ಸಾ ತೀವ್ರಶೋಕಸಂತಪ್ತಾ ಮುಹುರ್ನಿಃಶ್ವಸ್ಯ ವಿಹ್ವಲಾ।
03060014c ಉವಾಚ ಭೈಮೀ ನಿಷ್ಕ್ರಮ್ಯ ರೋದಮಾನಾ ಪತಿವ್ರತಾ।।
ತೀವ್ರ ಶೋಕ ಸಂತಪ್ತಳಾಗಿ ವಿಹ್ವಲಳಾದ ಆ ಪತಿವ್ರತೆ ಭೈಮಿಯು ನಿಟ್ಟುಸಿರು ಬಿಡುತ್ತಾ ಹೊರ ಬಂದು ಅಳುತ್ತಾ ಹೇಳಿದಳು.
03060015a ಯಸ್ಯಾಭಿಶಾಪಾದ್ದುಃಖಾರ್ತೋ ದುಃಖಂ ವಿಂದತಿ ನೈಷಧಃ।
03060015c ತಸ್ಯ ಭೂತಸ್ಯ ತದ್ದುಃಖಾದ್ದುಃಖಮಭ್ಯಧಿಕಂ ಭವೇತ್।।
“ಯಾರ ಅಭಿಶಾಪದಿಂದ ದುಃಖಾರ್ತನಾದ ನೈಷಧನು ದುಃಖವನ್ನು ಪಡೆದಿದ್ದಾನೋ ಅವನ ದುಃಖವೂ ಈ ದುಃಖಕ್ಕಿಂತ ಅಧಿಕವಾಗಲಿ!
03060016a ಅಪಾಪಚೇತಸಂ ಪಾಪೋ ಯ ಏವಂ ಕೃತವಾನ್ನಲಂ।
03060016c ತಸ್ಮಾದ್ದುಃಖತರಂ ಪ್ರಾಪ್ಯ ಜೀವತ್ವಸುಖಜೀವಿಕಾಂ।।
ಅಪಾಪಚೇತಸನಾದ ನಲನಿಗೆ ಈ ರೀತಿ ಮಾಡಿದ ಪಾಪಿಯು ಇದಕ್ಕಿಂತಲೂ ಹೆಚ್ಚು ದುಃಖವನ್ನು ಹೊಂದಿ, ಅಸುಖೀ ಜೀವನವನ್ನು ಬದುಕಲಿ!”
03060017a ಏವಂ ತು ವಿಲಪಂತೀ ಸಾ ರಾಜ್ಞೋ ಭಾರ್ಯಾ ಮಹಾತ್ಮನಃ।
03060017c ಅನ್ವೇಷತಿ ಸ್ಮ ಭರ್ತಾರಂ ವನೇ ಶ್ವಾಪದಸೇವಿತೇ।।
ಈ ರೀತಿ ಮಹಾತ್ಮ ರಾಜನ ಭಾರ್ಯೆಯು ವಿಲಪಿಸುತ್ತಾ ಮೃಗಗಳಿಂದ ತುಂಬಿದ ವನದಲ್ಲಿ ತನ್ನ ಪತಿಯನ್ನು ಅನ್ವೇಷಿಸಿದಳು.
03060018a ಉನ್ಮತ್ತವದ್ಭೀಮಸುತಾ ವಿಲಪಂತೀ ತತಸ್ತತಃ।
03060018c ಹಾ ಹಾ ರಾಜನ್ನಿತಿ ಮುಹುರಿತಶ್ಚೇತಶ್ಚ ಧಾವತಿ।।
ಭೀಮಸುತೆಯು “ಹಾ ಹಾ ರಾಜ!” ಎಂದು ವಿಲಪಿಸುತ್ತಾ ಉನ್ಮತ್ತಳಾದವಳಂತೆ ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಓಡತೊಡಗಿದಳು.
03060019a ತಾಂ ಶುಷ್ಯಮಾಣಾಮತ್ಯರ್ಥಂ ಕುರರೀಮಿವ ವಾಶತೀಂ।
03060019c ಕರುಣಂ ಬಹು ಶೋಚಂತೀಂ ವಿಲಪಂತೀಂ ಮುಹುರ್ಮುಹುಃ।।
03060020a ಸಹಸಾಭ್ಯಾಗತಾಂ ಭೈಮೀಮಭ್ಯಾಶಪರಿವರ್ತಿನೀಂ।
03060020c ಜಗ್ರಾಹಾಜಗರೋ ಗ್ರಾಹೋ ಮಹಾಕಾಯಃ ಕ್ಷುಧಾನ್ವಿತಃ।।
ಕಾರುಣ್ಯದಿಂದ ಬಹಳವಾಗಿ ರೋದಿಸಿ ಮತ್ತೆ ಮತ್ತೆ ವಿಲಪಿಸುತ್ತಾ ವೇಗದಲ್ಲಿ ಬರುತ್ತಿರುವಾಗ ಭೈಮಿಯು ಒಂದು ದೊಡ್ಡ ಹೆಬ್ಬಾವನ್ನು ಕಾಣದೇ ಎಡವಲು ಅದು ಅವಳನ್ನು ಹಿಡಿದುಕೊಂಡಿತು.
03060021a ಸಾ ಗ್ರಸ್ಯಮಾನಾ ಗ್ರಾಹೇಣ ಶೋಕೇನ ಚ ಪರಾಜಿತಾ।
03060021c ನಾತ್ಮಾನಂ ಶೋಚತಿ ತಥಾ ಯಥಾ ಶೋಚತಿ ನೈಷಧಂ।।
ಆ ಹೆಬ್ಬಾವು ನುಂಗುವಾಗ ಕೂಡ ಶೋಕದಿಂದ ಪರಾಜಿತಳಾದ ಅವಳು ನೈಷಧನ ಕುರಿತು ದುಃಖಪಟ್ಟಷ್ಟು ತನಗಾಗಿ ದುಃಖಪಡಲಿಲ್ಲ.
03060022a ಹಾ ನಾಥ ಮಾಮಿಹ ವನೇ ಗ್ರಸ್ಯಮಾನಾಮನಾಥವತ್।
03060022c ಗ್ರಾಹೇಣಾನೇನ ವಿಪಿನೇ ಕಿಮರ್ಥಂ ನಾಭಿಧಾವಸಿ।।
“ಹಾ ನಾಥ! ಈ ನಿರ್ಜನ ವನದಲ್ಲಿ ನಾನು ಈ ಹೆಬ್ಬಾವಿನ ಬಾಯಿಗೆ ಅನಾಥಳಾಗಿ ಬಲಿಯಾಗಿದ್ದೇನೆ. ನೀನು ಏಕೆ ಬೇಗ ಬರುವುದಿಲ್ಲ?
03060023a ಕಥಂ ಭವಿಷ್ಯಸಿ ಪುನರ್ಮಾಮನುಸ್ಮೃತ್ಯ ನೈಷಧ।
03060023c ಪಾಪಾನ್ಮುಕ್ತಃ ಪುನರ್ಲಬ್ಧ್ವಾ ಬುದ್ಧಿಂ ಚೇತೋ ಧನಾನಿ ಚ।।
ನೈಷಧ! ಪಾಪದಿಂದ ಮುಕ್ತನಾಗಿ, ಪುನಃ ಬುದ್ಧಿ ಮತ್ತು ಧನವನ್ನು ಪಡೆದ ನಂತರ ನನ್ನನ್ನು ನೆನಪಿಸಿಕೊಂಡಾಗ ಹೇಗಿರುವೆ?
03060024a ಶ್ರಾಂತಸ್ಯ ತೇ ಕ್ಷುಧಾರ್ತಸ್ಯ ಪರಿಗ್ಲಾನಸ್ಯ ನೈಷಧ।
03060024c ಕಃ ಶ್ರಮಂ ರಾಜಶಾರ್ದೂಲ ನಾಶಯಿಷ್ಯತಿ ಮಾನದ।।
ನೈಷಧ! ಮಾನದ! ರಾಜಶಾರ್ದೂಲ! ಬಳಲಿ ಹಸಿದಿದ್ದಾಗ ನಿನಗೆ ಶ್ರಮವನ್ನು ಹೋಗಲಾಡಿಸಲು ಯಾರಿದ್ದಾರೆ?”
03060025a ತಾಮಕಸ್ಮಾನ್ಮೃಗವ್ಯಾಧೋ ವಿಚರನ್ಗಹನೇ ವನೇ।
03060025c ಆಕ್ರಂದತೀಮುಪಶ್ರುತ್ಯ ಜವೇನಾಭಿಸಸಾರ ಹ।।
ಅದೇ ವೇಳೆಯಲ್ಲಿ ಆ ಗಹನ ವನದಲ್ಲಿ ಸಂಚರಿಸುತ್ತಿದ್ದ ಮೃಗವ್ಯಾಧನೋರ್ವನು ಅವಳ ಆಕ್ರಂದನವನ್ನು ಕೇಳಿ ಓಡಿ ಬಳಿ ಬಂದನು.
03060026a ತಾಂ ಸ ದೃಷ್ಟ್ವಾ ತಥಾ ಗ್ರಸ್ತಾಮುರಗೇಣಾಯತೇಕ್ಷಣಾಂ।
03060026c ತ್ವರಮಾಣೋ ಮೃಗವ್ಯಾಧಃ ಸಮಭಿಕ್ರಮ್ಯ ವೇಗಿತಃ।।
03060027a ಮುಖತಃ ಪಾತಯಾಮಾಸ ಶಸ್ತ್ರೇಣ ನಿಶಿತೇನ ಹ।
03060027c ನಿರ್ವಿಚೇಷ್ಟಂ ಭುಜಂಗಂ ತಂ ವಿಶಸ್ಯ ಮೃಗಜೀವನಃ।।
ಆ ಆಯತಾಕ್ಷಿಯನ್ನು ಹೆಬ್ಬಾವು ನುಂಗುತ್ತಿರುವುದನ್ನು ನೋಡಿ ಮೃಗವ್ಯಾಧನು ಬೇಗ ಅಲ್ಲಿಗೆ ಬಂದು ತಕ್ಷಣವೇ ತನ್ನ ಶಸ್ತ್ರದಿಂದ ಅದರ ಮುಖವನ್ನು ಕತ್ತರಿಸಿ ಕೆಳಗಿ ಬೀಳಿಸಿ ಆ ಹಾವು ಜೀವವಿಲ್ಲದೇ ನಿರ್ವಿಚೇಷ್ಟವಾಗುವರೆಗೂ ಕತ್ತರಿಸಿದನು.
03060028a ಮೋಕ್ಷಯಿತ್ವಾ ಚ ತಾಂ ವ್ಯಾಧಃ ಪ್ರಕ್ಷಾಲ್ಯ ಸಲಿಲೇನ ಚ।
03060028c ಸಮಾಶ್ವಾಸ್ಯ ಕೃತಾಹಾರಾಮಥ ಪಪ್ರಚ್ಚ ಭಾರತ।।
ನಂತರ ಅವಳನ್ನು ಅದರಿಂದ ಬಿಡಿಸಿ ವ್ಯಾಧನು ನೀರಿನಿಂದ ತೊಳೆದನು. ಭಾರತ! ಅವಳಿಗೆ ಆಹಾರವನ್ನು ಕೊಟ್ಟು ಸಂತೈಸಿ ಕೇಳಿದನು:
03060029a ಕಸ್ಯ ತ್ವಂ ಮೃಗಶಾವಾಕ್ಷಿ ಕಥಂ ಚಾಭ್ಯಾಗತಾ ವನಂ।
03060029c ಕಥಂ ಚೇದಂ ಮಹತ್ಕೃಚ್ಚ್ರಂ ಪ್ರಾಪ್ತವತ್ಯಸಿ ಭಾಮಿನಿ।।
“ಮೃಗಶಾವಾಕ್ಷಿ! ನೀನು ಯಾರವಳು? ಈ ವನಕ್ಕೆ ಏಕೆ ಬಂದೆ? ಭಾಮಿನಿ! ಇಂಥ ದೊಡ್ಡ ಅಪಾಯದಲ್ಲಿ ಹೇಗೆ ಸಿಲುಕಿಕೊಂಡೆ?”
03060030a ದಮಯಂತೀ ತಥಾ ತೇನ ಪೃಚ್ಚ್ಯಮಾನಾ ವಿಶಾಂ ಪತೇ।
03060030c ಸರ್ವಮೇತದ್ಯಥಾವೃತ್ತಮಾಚಚಕ್ಷೇಽಸ್ಯ ಭಾರತ।।
ಭಾರತ! ವಿಶಾಂಪತೇ! ಈ ರೀತಿ ಕೇಳಿದುದಕ್ಕೆ ದಮಯಂತಿಯು ಎಲ್ಲವನ್ನೂ ಯಥಾವತ್ತಾಗಿ ಅವನಿಗೆ ಹೇಳಿದಳು.
03060031a ತಾಮರ್ಧವಸ್ತ್ರಸಂವೀತಾಂ ಪೀನಶ್ರೋಣಿಪಯೋಧರಾಂ।
03060031c ಸುಕುಮಾರಾನವದ್ಯಾಂಗೀಂ ಪೂರ್ಣಚಂದ್ರನಿಭಾನನಾಂ।।
03060032a ಅರಾಲಪಕ್ಷ್ಮನಯನಾಂ ತಥಾ ಮಧುರಭಾಷಿಣೀಂ।
03060032c ಲಕ್ಷಯಿತ್ವಾ ಮೃಗವ್ಯಾಧಃ ಕಾಮಸ್ಯ ವಶಮೇಯಿವಾನ್।।
ಅರ್ಧವಸ್ತ್ರದಲ್ಲಿದ್ದ, ಪೂರ್ಣಚಂದ್ರನಂತೆ ಮುಖವುಳ್ಳ ಆ ಪೀನಶ್ರೋಣಿಪಯೋಧರೆ, ಸುಕುಮಾರಿ, ಅನವದ್ಯಾಂಗಿ, ಅರಾಲಪಕ್ಷನಯನೆ ಮತ್ತು ಮಧುರಭಾಷಿಣಿಯನ್ನು ನೋಡಿ ಮೃಗವ್ಯಾಧನು ಕಾಮವಶನಾದನು.
03060033a ತಾಮಥ ಶ್ಲಕ್ಷ್ಣಯಾ ವಾಚಾ ಲುಬ್ಧಕೋ ಮೃದುಪುರ್ವಯಾ।
03060033c ಸಾಂತ್ವಯಾಮಾಸ ಕಾಮಾರ್ತಸ್ತದಬುಧ್ಯತ ಭಾಮಿನೀ।।
ಶ್ಲಾಘನೀಯ ಮೃದು ಮಾತುಗಳಿಂದ ಸಂತವಿಸುತ್ತಿದ್ದ ಅವನು ತನ್ನನ್ನು ಬಯಸುತ್ತಿದ್ದಾನೆ ಎಂದು ಭಾಮಿನಿಯು ತಿಳಿದಳು.
03060034a ದಮಯಂತೀ ತು ತಂ ದುಷ್ಟಮುಪಲಭ್ಯ ಪತಿವ್ರತಾ।
03060034c ತೀವ್ರರೋಷಸಮಾವಿಷ್ಟಾ ಪ್ರಜಜ್ವಾಲೇವ ಮನ್ಯುನಾ।।
ಪತಿವ್ರತೆ ದಮಯಂತಿಯು ಅವನ ದುಷ್ಟತನವನ್ನು ಅರಿತು ತೀವ್ರ ರೋಷ ಸಮಾವಿಷ್ಟಳಾಗಿ, ಸಿಟ್ಟಿನಿಂದ ಪ್ರಜ್ವಲಿಸುವಂತೆ ಕಂಡಳು.
03060035a ಸ ತು ಪಾಪಮತಿಃ ಕ್ಷುದ್ರಃ ಪ್ರಧರ್ಷಯಿತುಮಾತುರಃ।
03060035c ದುರ್ಧರ್ಷಾಂ ತರ್ಕಯಾಮಾಸ ದೀಪ್ತಾಮಗ್ನಿಶಿಖಾಮಿವ।।
ಕಾಮದಿಂದ ಅವಳನ್ನು ವಶಪಡಿಸಿಕೊಳ್ಳಲು ಆತುರನಾಗಿದ್ದ ಆ ಪಾಪಮತಿಯು ಭುಗಿಲೆದ್ದ ಬೆಂಕಿಯ ಶಿಖೆಯಂತಿರುವ ಅವಳನ್ನು ಹೊಂದಲಸಾಧ್ಯ ಎಂದು ಯೋಚಿಸಿದನು.
03060036a ದಮಯಂತೀ ತು ದುಃಖಾರ್ತಾ ಪತಿರಾಜ್ಯವಿನಾಕೃತಾ।
03060036c ಅತೀತವಾಕ್ಪಥೇ ಕಾಲೇ ಶಶಾಪೈನಂ ರುಷಾ ಕಿಲ।।
ಆದರೆ ದುಃಖಾರ್ತಳಾದ, ಪತಿ-ರಾಜ್ಯಗಳನ್ನು ಕಳೆದುಕೊಂಡ ದಮಯಂತಿಯು ಒಂದೆರಡು ಹೆಜ್ಜೆ ಹಿಂದೆ ಸರಿದು ರೋಷದಿಂದ ಶಪಿಸಿದಳು:
03060037a ಯಥಾಹಂ ನೈಷಧಾದನ್ಯಂ ಮನಸಾಪಿ ನ ಚಿಂತಯೇ।
03060037c ತಥಾಯಂ ಪತತಾಂ ಕ್ಷುದ್ರಃ ಪರಾಸುರ್ಮೃಗಜೀವನಃ।।
“ನಾನು ನೈಷಧನ ಹೊರತಾಗಿ ಅನ್ಯರನ್ನು ಮನಸ್ಸಿನಲ್ಲಿಯೂ ಯೋಚಿಸದೇ ಇದ್ದರೆ, ಮೃಗಗಳನ್ನು ಅವಲಂಬಿಸಿ ಜೀವನ ಮಾಡುವ ಈ ಪಾಪಿಯು ಸತ್ತು ಬೀಳಲಿ!”
03060038a ಉಕ್ತಮಾತ್ರೇ ತು ವಚನೇ ತಯಾ ಸ ಮೃಗಜೀವನಃ।
03060038c ವ್ಯಸುಃ ಪಪಾತ ಮೇದಿನ್ಯಾಮಗ್ನಿದಗ್ಧ ಇವ ದ್ರುಮಃ।।
ಈ ವಚನವನ್ನು ಹೇಳಿದ ಮಾತ್ರದಲ್ಲಿ ಬೆಂಕಿ ಹಿಡಿದು ಸುಟ್ಟ ಮರದಂತೆ ಆ ವ್ಯಾಧನು ಭೂಮಿಯ ಮೇಲೆ ಬಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಅಜಗರಗ್ರಸ್ತದಮಯಂತೀಮೋಚನೇ ಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಅಜಗರಗ್ರಸ್ತದಮಯಂತೀ ಮೋಚನ ಎನ್ನುವ ಅರವತ್ತನೆಯ ಅಧ್ಯಾಯವು.