ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 59
ಸಾರ
ಆಯಾಸಗೊಂಡು ದಮಯಂತಿಯು ನಿದ್ರಿಸುತ್ತಿರುವಾಗ ನಲನು ಚಿಂತಿಸಿ ಅವಳನ್ನು ಬಿಟ್ಟುಹೋಗಲು ನಿರ್ಧರಿಸಿದುದು (1-13). ಅವಳ ವಸ್ತ್ರವನ್ನು ಅರ್ಧ ತುಂಡುಮಾಡಿ, ಸುತ್ತಿಕೊಂಡು, ಪತ್ನಿಯನ್ನು ಬಿಟ್ಟು ದುಃಖಿತನಾಗಿ ಹೊರಟುಹೋದುದು (14-25).
03059001 ನಲ ಉವಾಚ।
03059001a ಯಥಾ ರಾಜ್ಯಂ ಪಿತುಸ್ತೇ ತತ್ತಥಾ ಮಮ ನ ಸಂಶಯಃ।
03059001c ನ ತು ತತ್ರ ಗಮಿಷ್ಯಾಮಿ ವಿಷಮಸ್ಥಃ ಕಥಂ ಚನ।।
ನಲನು ಹೇಳಿದನು: “ಆ ರಾಜ್ಯವು ಹೇಗೆ ನಿನ್ನ ತಂದೆಯದೋ ಹಾಗೆಯೇ ಅದು ನನ್ನದೂ ಹೌದು. ಸಂಶಯವೇ ಇಲ್ಲ. ಆದರೆ ನಾನು ಈ ವಿಷಮ ಪರಿಸ್ಥಿತಿಯಲ್ಲಿ ಹೋಗುವುದಿಲ್ಲ.
03059002a ಕಥಂ ಸಮೃದ್ಧೋ ಗತ್ವಾಹಂ ತವ ಹರ್ಷವಿವರ್ಧನಃ।
03059002c ಪರಿದ್ಯೂನೋ ಗಮಿಷ್ಯಾಮಿ ತವ ಶೋಕವಿವರ್ಧನಃ।।
ಹಿಂದೆ ಸಮೃದ್ಧನಾದ ನಾನು ನಿನ್ನ ಸಂತಸವನ್ನು ಹೆಚ್ಚಿಸಲು ಹೋಗಿದ್ದೆ. ಈಗ ಹೇಗೆ ಎಲ್ಲವನ್ನೂ ಕಳೆದುಕೊಂಡು, ನಿನ್ನ ದುಃಖವನ್ನು ಹೆಚ್ಚಿಸುತ್ತಾ ಅಲ್ಲಿಗೆ ಹೋಗಲಿ?””
03059003 ಬೃಹದಶ್ವ ಉವಾಚ।
03059003a ಇತಿ ಬ್ರುವನ್ನಲೋ ರಾಜಾ ದಮಯಂತೀಂ ಪುನಃ ಪುನಃ।
03059003c ಸಾಂತ್ವಯಾಮಾಸ ಕಲ್ಯಾಣೀಂ ವಾಸಸೋಽರ್ಧೇನ ಸಂವೃತಾಂ।।
ಬೃಹದಶ್ವನು ಹೇಳಿದನು: “ಅವಳ ಅರ್ಧ ವಸ್ತ್ರವನ್ನು ಸುತ್ತಿಕೊಂಡ ರಾಜ ನಲನು ಈ ರೀತಿ ಕಲ್ಯಾಣಿ ದಮಯಂತಿಗೆ ಪುನಃ ಪುನಃ ಸಂತವಿಸಿದನು.
03059004a ತಾವೇಕವಸ್ತ್ರಸಂವೀತಾವಟಮಾನಾವಿತಸ್ತತಃ।
03059004c ಕ್ಷುತ್ಪಿಪಾಸಾಪರಿಶ್ರಾಂತೌ ಸಭಾಂ ಕಾಂ ಚಿದುಪೇಯತುಃ।।
ಇಬ್ಬರೂ ಒಂದೇವಸ್ತ್ರವನ್ನು ಸುತ್ತಿಕೊಂಡು, ಅಲ್ಲಿಲ್ಲಿ ಸುತ್ತಾಡುತ್ತಾ, ಹಸಿವು-ಬಾಯಾರಿಕೆಗಳಿಂದ ಬಳಲಿ, ಯಾವುದೋ ಒಂದು ಭವನವನ್ನು ಸೇರಿದರು.
03059005a ತಾಂ ಸಭಾಮುಪಸಂಪ್ರಾಪ್ಯ ತದಾ ಸ ನಿಷಧಾಧಿಪಃ।
03059005c ವೈದರ್ಭ್ಯಾ ಸಹಿತೋ ರಾಜಾ ನಿಷಸಾದ ಮಹೀತಲೇ।।
ರಾಜ! ಆ ಭವನವನ್ನು ತಲುಪಿದೊಡನೆಯೇ ನಿಷಧಾಧಿಪನು ವೈದರ್ಭಿಯ ಸಹಿತ ನೆಲದ ಮೇಲೆಯೇ ಮಲಗಿಕೊಂಡನು.
03059006a ಸ ವೈ ವಿವಸ್ತ್ರೋ ಮಲಿನೋ ವಿಕಚಃ ಪಾಂಸುಗುಂಠಿತಃ।
03059006c ದಮಯಂತ್ಯಾ ಸಹ ಶ್ರಾಂತಃ ಸುಷ್ವಾಪ ಧರಣೀತಲೇ।।
ಮಲಿನನಾದ, ತಲೆಕೂದಲು ಕಳೆದುಕೊಂಡ, ಸುಸ್ತಾದ ಅವನು ವಿವಸ್ತ್ರನಾಗಿ ದಮಯಂತಿಯ ಸಹಿತ ಆ ಧರಣಿತಲದಲ್ಲಿಯೇ ಮಲಗಿದನು.
03059007a ದಮಯಂತ್ಯಪಿ ಕಲ್ಯಾಣೀ ನಿದ್ರಯಾಪಹೃತಾ ತತಃ।
03059007c ಸಹಸಾ ದುಃಖಮಾಸಾದ್ಯ ಸುಕುಮಾರೀ ತಪಸ್ವಿನೀ।।
ಸುಕುಮಾರಿ, ತಪಸ್ವಿನಿ, ಒಮ್ಮೆಲೇ ಅಸಾದ್ಯ ದುಃಖವನ್ನು ಕಂಡ ಆ ಕಲ್ಯಾಣಿ ದಮಯಂತಿಯೂ ನಿದ್ರೆಯ ವಶಳಾಗಿಬಿಟ್ಟಳು.
03059008a ಸುಪ್ತಾಯಾಂ ದಮಯಂತ್ಯಾಂ ತು ನಲೋ ರಾಜಾ ವಿಶಾಂ ಪತೇ।
03059008c ಶೋಕೋನ್ಮಥಿತಚಿತ್ತಾತ್ಮಾ ನ ಸ್ಮ ಶೇತೇ ಯಥಾ ಪುರಾ।।
ವಿಶಾಂಪತೇ! ದಮಯಂತಿಯು ನಿದ್ರೆಮಾಡಿದರೂ ಚಿತ್ತ ಮತ್ತು ಆತ್ಮಗಳು ಶೋಕದಿಂದ ಮಥನವಾಗುತ್ತಿದ್ದ ನಲನು ಮೊದಲಿನ ಹಾಗೆ ನಿದ್ದೆ ಮಾಡಲಿಲ್ಲ.
03059009a ಸ ತದ್ರಾಜ್ಯಾಪಹರಣಂ ಸುಹೃತ್ತ್ಯಾಗಂ ಚ ಸರ್ವಶಃ।
03059009c ವನೇ ಚ ತಂ ಪರಿಧ್ವಂಸಂ ಪ್ರೇಕ್ಷ್ಯ ಚಿಂತಾಮುಪೇಯಿವಾನ್।।
ಅವನು ತನ್ನ ರಾಜ್ಯಾಪಹರಣ, ಸ್ನೇಹಿತರು ತನ್ನನ್ನು ತ್ಯಜಿಸಿದುದು ಮತ್ತು ವನದಲ್ಲಿ ತಾನು ಕಾಲಕಳೆಯುತ್ತಿರುವುದು ಈ ಎಲ್ಲದರ ಕುರಿತು ಚಿಂತಿಸತೊಡಗಿದನು.
03059010a ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ।
03059010c ಕಿಂ ನು ಮೇ ಮರಣಂ ಶ್ರೇಯಃ ಪರಿತ್ಯಾಗೋ ಜನಸ್ಯ ವಾ।।
“ನಾನು ಇದನ್ನು ಮಾಡಿದರೆ ಹೇಗೆ? ಇದನ್ನು ಮಾಡದಿದ್ದರೆ ಹೇಗೆ? ನಾನು ಸಾಯುವುದು ಒಳ್ಳೆಯದೋ ಅಥವಾ ಈ ಸ್ತ್ರೀಯನ್ನು ಪರಿತ್ಯಜಿಸುವುದು ಒಳ್ಳೆಯದೋ?
03059011a ಮಾಮಿಯಂ ಹ್ಯನುರಕ್ತೇದಂ ದುಃಖಮಾಪ್ನೋತಿ ಮತ್ಕೃತೇ।
03059011c ಮದ್ವಿಹೀನಾ ತ್ವಿಯಂ ಗಚ್ಚೇತ್ಕದಾ ಚಿತ್ಸ್ವಜನಂ ಪ್ರತಿ।।
ನನ್ನಲ್ಲೇ ಅನುರಕ್ತಳಾದ ಇವಳು ನನ್ನಿಂದಾಗಿ ದುಃಖವನ್ನು ಹೊಂದಿದ್ದಾಳೆ. ಆದರೆ ನಾನು ಇಲ್ಲದಿದ್ದರೆ ಇವಳು ಮುಂದೆ ಯಾವಾಗಲಾದರೂ ತನ್ನ ಜನರ ಕಡೆ ಹೋಗಿಯಾಳು.
03059012a ಮಯಾ ನಿಃಸಂಶಯಂ ದುಃಖಮಿಯಂ ಪ್ರಾಪ್ಸ್ಯತ್ಯನುತ್ತಮಾ।
03059012c ಉತ್ಸರ್ಗೇ ಸಂಶಯಃ ಸ್ಯಾತ್ತು ವಿಂದೇತಾಪಿ ಸುಖಂ ಕ್ವ ಚಿತ್।।
ನಾನು ಜೊತೆಯಲ್ಲಿದ್ದರೆ ಇವಳು ನಿರಂತರವಾಗಿ ದುಃಖವನ್ನು ಅನುಭವಿಸುವುದು ನಿಃಸಂಶಯ. ಬಿಟ್ಟುಹೋದರೆ ಆಪತ್ತು ಬರಬಹುದು. ಆದರೂ ಮುಂದೆ ಯಾವಾಗಲಾದರೂ ಸುಖವನ್ನು ಹೊಂದಬಹುದು.”
03059013a ಸ ವಿನಿಶ್ಚಿತ್ಯ ಬಹುಧಾ ವಿಚಾರ್ಯ ಚ ಪುನಃ ಪುನಃ।
03059013c ಉತ್ಸರ್ಗೇಽಮನ್ಯತ ಶ್ರೇಯೋ ದಮಯಂತ್ಯಾ ನರಾಧಿಪಃ।।
ಹೀಗೆ ಪುನಃ ಪುನಃ ಇದೇ ವಿಷಯವನ್ನು ಮನಸ್ಸಿನಲ್ಲಿ ತಿರುವಿ ಹಾಕಿ ಬಹಳಷ್ಟು ಸಾರಿ ನಿಶ್ಚಯ ಮಾಡಿ, ನಂತರ ಆ ನರಾಧಿಪನು ದಮಯಂತಿಯನ್ನು ಬಿಡುವುದೇ ಸರಿಯೆಂದು ನಿರ್ಧರಿಸಿದನು.
03059014a ಸೋಽವಸ್ತ್ರತಾಮಾತ್ಮನಶ್ಚ ತಸ್ಯಾಶ್ಚಾಪ್ಯೇಕವಸ್ತ್ರತಾಂ।
03059014c ಚಿಂತಯಿತ್ವಾಧ್ಯಗಾದ್ರಾಜಾ ವಸ್ತ್ರಾರ್ಧಸ್ಯಾವಕರ್ತನಂ।।
ತಾನು ವಿವಸ್ತ್ರನಾಗಿದ್ದುದನ್ನು ಮತ್ತು ಅವಳು ಏಕವಸ್ತ್ರಳಾಗಿದ್ದುದನ್ನು ಚಿಂತಿಸಿ, ಅವಳ ವಸ್ತ್ರವನ್ನು ಅರ್ಧ ತುಂಡುಮಾಡುವುದಾಗಿ ನಿರ್ಧರಿಸಿದನು.
03059015a ಕಥಂ ವಾಸೋ ವಿಕರ್ತೇಯಂ ನ ಚ ಬುಧ್ಯೇತ ಮೇ ಪ್ರಿಯಾ।
03059015c ಚಿಂತ್ಯೈವಂ ನೈಷಧೋ ರಾಜಾ ಸಭಾಂ ಪರ್ಯಚರತ್ತದಾ।।
ಆದರೆ “ನನ್ನ ಪ್ರಿಯೆಯನ್ನು ಎಚ್ಚರಿಸದ ಹಾಗೆ ಹೇಗೆ ವಸ್ತ್ರವನ್ನು ಕತ್ತರಿಸುವುದು?” ಎಂದು ಚಿಂತಿಸುತ್ತಾ ರಾಜಾ ನೈಷಧನು ಆ ಭವನದಲ್ಲಿಯೇ ಒಂದೆಡೆಯಿಂದ ಇನ್ನೊಂದೆಡೆ ಓಡಾಡುತ್ತಿದ್ದನು.
03059016a ಪರಿಧಾವನ್ನಥ ನಲ ಇತಶ್ಚೇತಶ್ಚ ಭಾರತ।
03059016c ಆಸಸಾದ ಸಭೋದ್ದೇಶೇ ವಿಕೋಶಂ ಖಡ್ಗಮುತ್ತಮಂ।।
ಭಾರತ! ಹೀಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದ ನಲನು ಭವನದ ಮೂಲೆಯಲ್ಲಿದ್ದ, ತೆರೆದಿಟ್ಟ ಉತ್ತಮವಾದ ಖಡ್ಗವೊಂದನ್ನು ಕಂಡನು.
03059017a ತೇನಾರ್ಧಂ ವಾಸಸಶ್ಚಿತ್ತ್ವಾ ನಿವಸ್ಯ ಚ ಪರಂತಪಃ।
03059017c ಸುಪ್ತಾಮುತ್ಸೃಜ್ಯ ವೈದರ್ಭೀಂ ಪ್ರಾದ್ರವದ್ಗತಚೇತನಃ।।
ಅದರಿಂದ ಪರಂತಪನು ಅವಳ ವಸ್ತ್ರವನ್ನು ಅರ್ಧ ಕತ್ತರಿಸಿ ಸುತ್ತಿಕೊಂಡನು. ನಂತರ ನಿದ್ರಿಸುತ್ತಿದ್ದ ವೈದರ್ಭಿಯನ್ನು ಬಿಟ್ಟು, ಬುದ್ಧಿ ಕಳೆದುಕೊಂಡವನಂತೆ ಓಡಿಹೋದನು.
03059018a ತತೋ ನಿಬದ್ಧಹೃದಯಃ ಪುನರಾಗಮ್ಯ ತಾಂ ಸಭಾಂ।
03059018c ದಮಯಂತೀಂ ತಥಾ ದೃಷ್ಟ್ವಾ ರುರೋದ ನಿಷಧಾಧಿಪಃ।।
ಆದರೆ ನಿಬದ್ಧಹೃದಯ ನಿಷಧಾಧಿಪನು ಪುನಃ ಆ ಭವನಕ್ಕೆ ಬಂದು ದಮಯಂತಿಯನ್ನು ನೋಡಿ ಕಣ್ಣೀರಿಟ್ಟನು.
03059019a ಯಾಂ ನ ವಾಯುರ್ನ ಚಾದಿತ್ಯಃ ಪುರಾ ಪಶ್ಯತಿ ಮೇ ಪ್ರಿಯಾಂ।
03059019c ಸೇಯಮದ್ಯ ಸಭಾಮಧ್ಯೇ ಶೇತೇ ಭೂಮಾವನಾಥವತ್।।
“ಈ ಮೊದಲು ವಾಯುವಾಗಲೀ ಆದಿತ್ಯನಾಗಲೀ ನನ್ನ ಪ್ರಿಯೆಯನ್ನು ಕಂಡಿರಲಿಲ್ಲ. ಆದರೆ ಈಗ ಅವಳು ಈ ಭವನಮಧ್ಯದಲ್ಲಿ ಬರೀ ನೆಲದ ಮೇಲೆ, ಅನಾಥಳಾಗಿ ಮಲಗಿದ್ದಾಳೆ.
03059020a ಇಯಂ ವಸ್ತ್ರಾವಕರ್ತೇನ ಸಂವೀತಾ ಚಾರುಹಾಸಿನೀ।
03059020c ಉನ್ಮತ್ತೇವ ವರಾರೋಹಾ ಕಥಂ ಬುದ್ಧ್ವಾ ಭವಿಷ್ಯತಿ।।
ತುಂಡು ವಸ್ತ್ರವನ್ನು ಸುತ್ತಿಕೊಂಡು ಈ ಚಾರುಹಾಸಿನಿ ವರಾರೋಹೆಯು ಉನ್ಮತ್ತಳಾದಂತೆ ಮಲಗಿದ್ದಾಳೆ. ಎಚ್ಚರವಾದ ನಂತರ ಇವಳು ಹೇಗಿರುವಳು?
03059021a ಕಥಮೇಕಾ ಸತೀ ಭೈಮೀ ಮಯಾ ವಿರಹಿತಾ ಶುಭಾ।
03059021c ಚರಿಷ್ಯತಿ ವನೇ ಘೋರೇ ಮೃಗವ್ಯಾಲನಿಷೇವಿತೇ।।
ನನ್ನಿಂದ ವಿರಹಿತಳಾದ ಈ ಶುಭೆ ಸತಿ ಭೈಮಿಯು ಮೃಗವ್ಯಾಲಗಳಿಂದ ತುಂಬಿದ ಈ ಘೋರ ವನದಲ್ಲಿ ಹೇಗೆ ಸಂಚರಿಸುವಳು?”
03059022a ಗತ್ವಾ ಗತ್ವಾ ನಲೋ ರಾಜಾ ಪುನರೇತಿ ಸಭಾಂ ಮುಹುಃ।
03059022c ಆಕೃಷ್ಯಮಾಣಃ ಕಲಿನಾ ಸೌಹೃದೇನಾಪಕೃಷ್ಯತೇ।।
ಕಲಿಯಿಂದ ಆಕರ್ಷಿತನಾಗಿ ಮತ್ತು ಸೌಹೃದಯಳಿಂದ ಅಪಕೃಷ್ಯನಾಗಿ ನಲನು ಹೋಗುವುದು, ಪುನಃ ಭವನಕ್ಕೆ ಬರುವುದು, ಮತ್ತೆ ಹೋಗುವುದು ಈ ರೀತಿ ಮಾಡುತ್ತಿದ್ದನು.
03059023a ದ್ವಿಧೇವ ಹೃದಯಂ ತಸ್ಯ ದುಃಖಿತಸ್ಯಾಭವತ್ತದಾ।
03059023c ದೋಲೇವ ಮುಹುರಾಯಾತಿ ಯಾತಿ ಚೈವ ಸಭಾಂ ಮುಹುಃ।।
ದುಃಖಿತನಾದ ಅವನ ಹೃದಯವು ಎರಡಾಗಿ ಹರಿದಿತ್ತು; ಉಯ್ಯಾಲೆಯಂತೆ ಅದು ಒಮ್ಮೆ ಭವನದಿಂದ ದೂರ ಮತ್ತು ಇನ್ನೊಮ್ಮೆ ಅದರ ಹತ್ತಿರ ಡೋಲಾಡುತ್ತಿತ್ತು.
03059024a ಸೋಽಪಕೃಷ್ಟಸ್ತು ಕಲಿನಾ ಮೋಹಿತಃ ಪ್ರಾದ್ರವನ್ನಲಃ।
03059024c ಸುಪ್ತಾಮುತ್ಸೃಜ್ಯ ತಾಂ ಭಾರ್ಯಾಂ ವಿಲಪ್ಯ ಕರುಣಂ ಬಹು।।
ಕೊನೆಯಲ್ಲಿ ಕಲಿಯಿಂದ ಅಪಕೃಷ್ಟನಾಗಿ ಮೋಹಿತನಾದ ನಲನು ಬಹಳ ಕರುಣದಾಯಕವಾಗಿ ವಿಲಪಿಸುತ್ತಾ ನಿದ್ರಿಸುತ್ತಿರುವ ಭಾರ್ಯೆಯನ್ನು ಬಿಟ್ಟು ಓಡಿ ಹೋದನು.
03059025a ನಷ್ಟಾತ್ಮಾ ಕಲಿನಾ ಸ್ಪೃಷ್ಟಸ್ತತ್ತದ್ವಿಗಣಯನ್ನೃಪಃ।
03059025c ಜಗಾಮೈವ ವನೇ ಶೂನ್ಯೇ ಭಾರ್ಯಾಮುತ್ಸೃಜ್ಯ ದುಃಖಿತಃ।।
ಕಲಿಯಿಂದ ಅತ್ಮವನ್ನೇ ಕಳೆದುಕೊಂಡು, ಅದು ಇದು ಎಂದು ಏನನ್ನೂ ಯೊಚಿಸದೇ, ನಿರ್ಜನ ವನದಲ್ಲಿ ಭಾರ್ಯೆಯನ್ನು ಬಿಟ್ಟು ದುಃಖಿತನಾಗಿ ಹೊರಟುಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಪರಿತ್ಯಾಗೇ ಏಕೋನಷಷ್ಟಿತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀಪರಿತ್ಯಾಗ ಎನ್ನುವ ಐವತ್ತೊಂಭತ್ತನೆಯ ಅಧ್ಯಾಯವು.