058 ನಲೋಪಾಖ್ಯಾನೇ ನಲವನಯಾತ್ರಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 58

ಸಾರ

ಎಲ್ಲವನ್ನೂ ಕಳೆದುಕೊಂಡ ನಲನಿಗೆ ದಮಯಂತಿಯನ್ನು ಪಣವಾಗಿಡು ಎಂದು ಪುಷ್ಕರನು ಹೇಳಲು ನಲನು ಕೋಪದಿಂದ ಆಭರಣಗಳನ್ನು ತೆಗೆದು ಬಿಸಾಡಿ, ಎಲ್ಲವನ್ನೂ ತ್ಯಜಿಸಿ, ಪತ್ನಿಯೊಡನೆ ರಾಜ್ಯದ ಹೊರಹೊರಟಿದ್ದುದು (1-7). ಮೂರುದಿನಗಳು ಹಸಿದಿದ್ದ ನಲನು ಪಕ್ಷಿಗಳನ್ನು ಹಿಡಿಯಲು ಹೋಗಿ ತನ್ನ ವಸ್ತ್ರಗಳನ್ನೂ ಕಳೆದುಕೊಂಡಿದುದು (8-15). ನಲ-ದಮಯಂತಿಯರ ಸಂವಾದ (16-34).

03058001 ಬೃಹದಶ್ವ ಉವಾಚ।
03058001a ತತಸ್ತು ಯಾತೇ ವಾರ್ಷ್ಣೇಯೇ ಪುಣ್ಯಶ್ಲೋಕಸ್ಯ ದೀವ್ಯತಃ।
03058001c ಪುಷ್ಕರೇಣ ಹೃತಂ ರಾಜ್ಯಂ ಯಚ್ಚಾನ್ಯದ್ವಸು ಕಿಂ ಚನ।।

ಬೃಹದಶ್ವನು ಹೇಳಿದನು: “ವಾರ್ಷ್ಣೇಯನು ಹೋದ ನಂತರ ಪುಣ್ಯಶ್ಲೋಕನು ಜೂಜಾಡುತ್ತಾ ಪುಷ್ಕರನಿಂದ ರಾಜ್ಯ ಮತ್ತು ತನ್ನಲಿದ್ದ ಎಲ್ಲ ಸಂಪತ್ತನ್ನೂ ಕಳೆದುಕೊಂಡನು.

03058002a ಹೃತರಾಜ್ಯಂ ನಲಂ ರಾಜನ್ಪ್ರಹಸನ್ಪುಷ್ಕರೋಽಬ್ರವೀತ್।
03058002c ದ್ಯೂತಂ ಪ್ರವರ್ತತಾಂ ಭೂಯಃ ಪ್ರತಿಪಾಣೋಽಸ್ತಿ ಕಸ್ತವ।।

ರಾಜ! ರಾಜ್ಯವನ್ನು ಕಳಿದುಕೊಂಡ ನಲನಿಗೆ ಪುಷ್ಕರನು ನಗುತ್ತಾ ಹೇಳಿದನು: “ದ್ಯೂತವು ಮುಂದುವರಿಯಲಿ. ಈಗ ನಿನ್ನಲ್ಲಿ ಪಣವಾಗಿಡಲು ಏನಿದೆ?

03058003a ಶಿಷ್ಟಾ ತೇ ದಮಯಂತ್ಯೇಕಾ ಸರ್ವಮನ್ಯದ್ಧೃತಂ ಮಯಾ।
03058003c ದಮಯಂತ್ಯಾಃ ಪಣಃ ಸಾಧು ವರ್ತತಾಂ ಯದಿ ಮನ್ಯಸೇ।।

ದಮಯಂತಿ ಮಾತ್ರ ನಿನ್ನಲ್ಲಿ ಉಳಿದಿದ್ದಾಳೆ. ಬೇರೆ ಎಲ್ಲವನ್ನು ನಾನು ಗೆದ್ದಿದ್ದೇನೆ. ನಿನಗೆ ಮನಸ್ಸಿದ್ದರೆ ದಮಯಂತಿಯನ್ನು ಪಣವಾಗಿಡು.”

03058004a ಪುಷ್ಕರೇಣೈವಮುಕ್ತಸ್ಯ ಪುಣ್ಯಶ್ಲೋಕಸ್ಯ ಮನ್ಯುನಾ।
03058004c ವ್ಯದೀರ್ಯತೇವ ಹೃದಯಂ ನ ಚೈನಂ ಕಿಂ ಚಿದಬ್ರವೀತ್।।

ಪುಷ್ಕರನ ಈ ಮಾತುಗಳನ್ನು ಕೇಳಿ ಪುಣ್ಯಶ್ಲೋಕನ ಹೃದಯವು ಸಿಟ್ಟಿನಿಂದ ಈರಿಕೊಂಡಿತು ಮತ್ತು ಅವನೇನೂ ಮಾತನಾಡಲಿಲ್ಲ.

03058005a ತತಃ ಪುಷ್ಕರಮಾಲೋಕ್ಯ ನಲಃ ಪರಮಮನ್ಯುಮಾನ್।
03058005c ಉತ್ಸೃಜ್ಯ ಸರ್ವಗಾತ್ರೇಭ್ಯೋ ಭೂಷಣಾನಿ ಮಹಾಯಶಾಃ।।

ಪರಮ ಕೋಪದಿಂದ ನಲನು ಪುಷ್ಕರನ ಕಡೆ ನೋಡಿ ಆ ಮಹಾಯಶನು ತನ್ನ ದೇಹದ ಮೇಲಿದ್ದ ಎಲ್ಲ ಭೂಷಣಗಳನ್ನು ತೆಗೆದು ಎಸೆದನು.

03058006a ಏಕವಾಸಾ ಅಸಂವೀತಃ ಸುಹೃಚ್ಚೋಕವಿವರ್ಧನಃ।
03058006c ನಿಶ್ಚಕ್ರಾಮ ತದಾ ರಾಜಾ ತ್ಯಕ್ತ್ವಾ ಸುವಿಪುಲಾಂ ಶ್ರಿಯಂ।।
03058007a ದಮಯಂತ್ಯೇಕವಸ್ತ್ರಾ ತಂ ಗಚ್ಚಂತಂ ಪೃಷ್ಠತೋಽನ್ವಿಯಾತ್।
03058007c ಸ ತಯಾ ಬಾಹ್ಯತಃ ಸಾರ್ಧಂ ತ್ರಿರಾತ್ರಂ ನೈಷಧೋಽವಸತ್।।

ನಂತರ ವಿಪುಲ ಸಂಪತ್ತನ್ನು ತ್ಯಜಿಸಿ, ಏಕವಸ್ತ್ರದಲ್ಲಿ ಅತೀವ ದುಃಖದಿಂದ, ಸುಹೃದಯರ ಶೋಕವನ್ನು ವೃದ್ಧಿಸುತ್ತಾ ರಾಜನು ಹೊರ ಹೊರಟನು. ದಮಯಂತಿಯೂ ತನ್ನ ಉಟ್ಟ ವಸ್ತ್ರದಲ್ಲಿ ಅವನನ್ನು ಹಿಂಬಾಲಿಸಿದಳು. ನೈಷಧನು ಅವಳೊಡನೆ ನಿಷಧದ ಹೊರಗೆ ಮೂರು ರಾತ್ರಿಗಳನ್ನು ಕಳೆದನು.

03058008a ಪುಷ್ಕರಸ್ತು ಮಹಾರಾಜ ಘೋಷಯಾಮಾಸ ವೈ ಪುರೇ।
03058008c ನಲೇ ಯಃ ಸಮ್ಯಗಾತಿಷ್ಠೇತ್ಸ ಗಚ್ಚೇದ್ವಧ್ಯತಾಂ ಮಮ।।

ಮಹಾರಾಜ! ಪುಷ್ಕರನು “ಯಾರಾದರೂ ನಲನನ್ನು ಸೇರಿದರೆ ಅವನು ನನ್ನಿಂದ ವಧಿಸಲ್ಪಡುತ್ತಾನೆ!” ಎಂದು ಪುರದಲ್ಲೆಲ್ಲ ಘೋಷಣೆ ಮಾಡಿಸಿದನು.

03058009a ಪುಷ್ಕರಸ್ಯ ತು ವಾಕ್ಯೇನ ತಸ್ಯ ವಿದ್ವೇಷಣೇನ ಚ।
03058009c ಪೌರಾ ನ ತಸ್ಮಿನ್ಸತ್ಕಾರಂ ಕೃತವಂತೋ ಯುಧಿಷ್ಠಿರ।।

ಯುಧಿಷ್ಠಿರ! ಪುಷ್ಕರನ ಈ ವಾಕ್ಯಗಳಿಂದ ಮತ್ತು ಅವನ ವಿದ್ವೇಷಣದ ಕಾರಣ ಪುರಜನರು ಅವನಿಗೆ ಸತ್ಕಾರವನ್ನು ಮಾಡಲಿಲ್ಲ.

03058010a ಸ ತಥಾ ನಗರಾಭ್ಯಾಶೇ ಸತ್ಕಾರಾರ್ಹೋ ನ ಸತ್ಕೃತಃ।
03058010c ತ್ರಿರಾತ್ರಮುಷಿತೋ ರಾಜಾ ಜಲಮಾತ್ರೇಣ ವರ್ತಯನ್।।

ಹೀಗೆ ಸತ್ಕಾರಾರ್ಹನಾಗಿದ್ದರೂ ಸತ್ಕೃತನಾಗದೇ ನಗರದ ಬಳಿಯಲ್ಲಿಯೇ ರಾಜನು ಕೇವಲ ಜಲ ಸೇವನೆ ಮಾಡಿಕೊಂಡು ಮೂರು ರಾತ್ರಿಗಳನ್ನು ಕಳೆದನು.

03058011a ಕ್ಷುಧಾ ಸಂಪೀಡ್ಯಮಾನಸ್ತು ನಲೋ ಬಹುತಿಥೇಽಹನಿ।
03058011c ಅಪಶ್ಯಚ್ಶಕುನಾನ್ಕಾಂಶ್ಚಿದ್ಧಿರಣ್ಯಸದೃಶಚ್ಚದಾನ್।।

ಬಹಳ ದಿನಗಳು ಹಸಿವೆಯಿಂದ ಪೀಡಿತನಾದ ನಲನು ಒಮ್ಮೆ ಹಿರಣ್ಯಸದೃಷ ರೆಕ್ಕೆಗಳನ್ನು ಹೊಂದಿದ ಪಕ್ಷಿಗಳನ್ನು ಕಂಡನು.

03058012a ಸ ಚಿಂತಯಾಮಾಸ ತದಾ ನಿಷಧಾಧಿಪತಿರ್ಬಲೀ।
03058012c ಅಸ್ತಿ ಭಕ್ಷೋ ಮಮಾದ್ಯಾಯಂ ವಸು ಚೇದಂ ಭವಿಷ್ಯತಿ।।

ಆಗ ಬಲಿ ನಿಷಧಾಧಿಪತಿಯು ಯೋಚಿಸಿದನು: “ಇವುಗಳು ನನ್ನ ಇಂದಿನ ಭೋಜನವಾಗುವವು ಮತ್ತು ಇವು ನನ್ನ ನಿಧಿ.”

03058013a ತತಸ್ತಾನಂತರೀಯೇಣ ವಾಸಸಾ ಸಮವಾಸ್ತೃಣೋತ್।
03058013c ತಸ್ಯಾಂತರೀಯಮಾದಾಯ ಜಗ್ಮುಃ ಸರ್ವೇ ವಿಹಾಯಸಾ।।

ನಂತರ ಅವನು ತನ್ನ ಉಟ್ಟ ಬಟ್ಟೆಯನ್ನು ಆ ಪಕ್ಷಿಗಳ ಮೇಲೆ ಹಾಕಿದನು. ಆದರೆ ಅವೆಲ್ಲವೂ ಆ ಬಟ್ಟೆಯನ್ನೇ ಎತ್ತಿಕೊಂಡು ಆಕಾಶಕ್ಕೆ ಹಾರಿದವು.

03058014a ಉತ್ಪತಂತಃ ಖಗಾಸ್ತೇ ತು ವಾಕ್ಯಮಾಹುಸ್ತದಾ ನಲಂ।
03058014c ದೃಷ್ಟ್ವಾ ದಿಗ್ವಾಸಸಂ ಭೂಮೌ ಸ್ಥಿತಂ ದೀನಮಧೋಮುಖಂ।।

ವಿವಸ್ತ್ರನಾಗಿ, ದೀನನಾಗಿ, ಅಧೋಮುಖನಾಗಿ ಭೌಮಿಯ ಪಕ್ಕದಲ್ಲಿ ನಿಂತಿದ್ದ ನಲನನ್ನು ನೋಡಿ ಹಾರುತ್ತಿರುವ ಆ ಪಕ್ಷಿಗಳು ಕೂಗಿ ಹೇಳಿದವು:

03058015a ವಯಮಕ್ಷಾಃ ಸುದುರ್ಬುದ್ಧೇ ತವ ವಾಸೋ ಜಿಹೀರ್ಷವಃ।
03058015c ಆಗತಾ ನ ಹಿ ನಃ ಪ್ರೀತಿಃ ಸವಾಸಸಿ ಗತೇ ತ್ವಯಿ।।

“ದುರ್ಬುದ್ಧಿಯೇ! ನಾವು ದಾಳಗಳು. ನಿನ್ನ ವಸ್ತ್ರಗಳನ್ನು ಕಸಿಯಲು ಬಂದಿದ್ದೇವೆ. ಯಾಕೆಂದರೆ ನೀನು ವಸ್ತ್ರಗಳನ್ನು ಧರಿಸಿ ಹೋಗುತ್ತಿರುವುದು ನಮಗೆ ಒಳ್ಳೆಯದೆನಿಸಲಿಲ್ಲ.”

03058016a ತಾನ್ಸಮೀಕ್ಷ್ಯ ಗತಾನಕ್ಷಾನಾತ್ಮಾನಂ ಚ ವಿವಾಸಸಂ।
03058016c ಪುಣ್ಯಶ್ಲೋಕಸ್ತತೋ ರಾಜಾ ದಮಯಂತೀಮಥಾಬ್ರವೀತ್।।

ಹೋಗುತ್ತಿರುವ ದಾಳಗಳನ್ನು ಮತ್ತು ವಿವಸ್ತ್ರನಾದ ತನ್ನನ್ನು ನೋಡಿದ ರಾಜ ಪುಣ್ಯಶ್ಲೋಕನು ದಮಯಂತಿಗೆ ಹೇಳಿದನು:

03058017a ಯೇಷಾಂ ಪ್ರಕೋಪಾದೈಶ್ವರ್ಯಾತ್ಪ್ರಚ್ಯುತೋಽಹಮನಿಂದಿತೇ।
03058017c ಪ್ರಾಣಯಾತ್ರಾಂ ನ ವಿಂದೇ ಚ ದುಃಖಿತಃ ಕ್ಷುಧಯಾರ್ದಿತಃ।।
03058018a ಯೇಷಾಂ ಕೃತೇ ನ ಸತ್ಕಾರಮಕುರ್ವನ್ಮಯಿ ನೈಷಧಾಃ।
03058018c ತ ಇಮೇ ಶಕುನಾ ಭೂತ್ವಾ ವಾಸೋಽಪ್ಯಪಹರಂತಿ ಮೇ।।

“ಅನಿಂದಿತೇ! ಯಾರ ಪ್ರಕೋಪದಿಂದ ನಾವು ಈ ಐಶ್ವರ್ಯ ಚ್ಯುತಿ ಹೊಂದಿದ್ದೇವೋ, ಮತ್ತು ಈಗ ಜೀವನಕ್ಕೆ ಯಾವುದೂ ಉಪಾಯಗಳಿಲ್ಲದೇ ದುಃಖ ಮತ್ತು ಹಸಿವೆಗಳಿಂದ ಬಳಲುತ್ತಿದ್ದೇವೋ, ಯಾರ ಕಾರಣದಿಂದ ನಿಷಧ ಪುರಜನರು ನನಗೆ ಸತ್ಕಾರವನ್ನು ಮಾಡಲಿಲ್ಲವೋ ಅವರೇ ಈಗ ಪಕ್ಷಿಗಳಾಗಿ ಬಂದು ನನ್ನ ವಸ್ತ್ರಗಳನ್ನು ಅಪಹರಿಸಿದರು.

03058019a ವೈಷಮ್ಯಂ ಪರಮಂ ಪ್ರಾಪ್ತೋ ದುಃಖಿತೋ ಗತಚೇತನಃ।
03058019c ಭರ್ತಾ ತೇಽಹಂ ನಿಬೋಧೇದಂ ವಚನಂ ಹಿತಮಾತ್ಮನಃ।।

ಮಹತ್ತರ ಕಷ್ಟಗಳನ್ನು ಹೊಂದಿ, ದುಃಖಿತನಾದ ನಾನು ನನ್ನ ಬುದ್ಧಿಯನ್ನೇ ಕಳೆದುಕೊಳ್ಳುತ್ತಿದ್ದೇನೆ. ನಾನು ನಿನ್ನ ಪತಿ. ನಿನ್ನ ಹಿತಕ್ಕಾಗಿಯೇ ಹೇಳುವ ಈ ಮಾತುಗಳನ್ನು ಕೇಳು.

03058020a ಏತೇ ಗಚ್ಚಂತಿ ಬಹವಃ ಪಂಥಾನೋ ದಕ್ಷಿಣಾಪಥಂ।
03058020c ಅವಂತೀಮೃಕ್ಷವಂತಂ ಚ ಸಮತಿಕ್ರಮ್ಯ ಪರ್ವತಂ।।

ಈ ದಕ್ಷಿಣಾಭಿಮುಖವಾಗಿ ಹೋಗುವ ದಾರಿ ಅವಂತಿ ಮತ್ತು ಋಕ್ಷವತ್ ಪರ್ವತವನ್ನು ದಾಟಿ ಹೋಗುತ್ತವೆ.

03058021a ಏಷ ವಿಂಧ್ಯೋ ಮಹಾಶೈಲಃ ಪಯೋಷ್ಣೀ ಚ ಸಮುದ್ರಗಾ।
03058021c ಆಶ್ರಮಾಶ್ಚ ಮಹರ್ಷೀಣಾಮಮೀ ಪುಷ್ಪಫಲಾನ್ವಿತಾಃ।।

ಅಲ್ಲಿ ಮಹಾಶೈಲ ವಿಂಧ್ಯವಿದೆ, ಸಮುದ್ರಕ್ಕೆ ಸೇರುತ್ತಿರುವ ನದಿ ಪಯೋಷ್ಣೀ, ಮತ್ತು ಪುಷ್ಪ-ಫಲಗಳಿಂದ ಕೂಡಿದ ಮಹಾ ಋಷಿಗಳ ಆಶ್ರಮಗಳಿವೆ.

03058022a ಏಷ ಪಂಥಾ ವಿದರ್ಭಾಣಾಮಯಂ ಗಚ್ಚತಿ ಕೋಸಲಾನ್।
03058022c ಅತಃ ಪರಂ ಚ ದೇಶೋಽಯಂ ದಕ್ಷಿಣೇ ದಕ್ಷಿಣಾಪಥಃ।।

ಈ ದಾರಿಯು ವಿದರ್ಭಕ್ಕೆ ಮತ್ತು ಇದು ಕೋಸಲಕ್ಕೆ ಹೋಗುತ್ತದೆ. ಮತ್ತು ಮುಂದೆ ದಕ್ಷಿಣದಲ್ಲಿ ದಕ್ಷಿಣಾಪಥ ದೇಶವಿದೆ.”

03058023a ತತಃ ಸಾ ಬಾಷ್ಪಕಲಯಾ ವಾಚಾ ದುಃಖೇನ ಕರ್ಶಿತಾ।
03058023c ಉವಾಚ ದಮಯಂತೀ ತಂ ನೈಷಧಂ ಕರುಣಂ ವಚಃ।।

ಆಗ ದಮಯಂತಿಯು ಕಣ್ಣೀರಿಡುತ್ತಾ, ದುಃಖದಲ್ಲಿ ಮಾತೇ ಬಾರದೇ ನೈಷಧನಿಗೆ ಈ ಕರುಣ ವಚನವನ್ನು ಹೇಳಿದಳು.

03058024a ಉದ್ವೇಪತೇ ಮೇ ಹೃದಯಂ ಸೀದಂತ್ಯಂಗಾನಿ ಸರ್ವಶಃ।
03058024c ತವ ಪಾರ್ಥಿವ ಸಂಕಲ್ಪಂ ಚಿಂತಯಂತ್ಯಾಃ ಪುನಃ ಪುನಃ।।

“ಪಾರ್ಥಿವ! ನಿನ್ನ ಸಂಕಲ್ಪವನ್ನು ಪುನಃ ಪುನಃ ಯೊಚಿಸುತ್ತಾ ನನ್ನ ಹೃದಯವು ಬಡಿಯುತ್ತಿದೆ ಮತ್ತು ಸರ್ವಾಂಗಗಳೂ ದುರ್ಬಲವಾಗುತ್ತಿವೆ.

03058025a ಹೃತರಾಜ್ಯಂ ಹೃತಧನಂ ವಿವಸ್ತ್ರಂ ಕ್ಷುಚ್ಚ್ರಮಾನ್ವಿತಂ।
03058025c ಕಥಮುತ್ಸೃಜ್ಯ ಗಚ್ಚೇಯಮಹಂ ತ್ವಾಂ ವಿಜನೇ ವನೇ।।

ರಾಜ್ಯ-ಧನಗಳನ್ನು ಕಳೆದುಕೊಂಡ, ವಿವಸ್ತ್ರನಾದ, ಹಸಿವೆ-ಬಾಯಾರಿಕೆಗಳಿಂದ ಬಳಲುತ್ತಿರುವ ನಿನ್ನನ್ನು ಈ ನಿರ್ಜನ ವನದಲ್ಲಿ ಬಿಟ್ಟು ನಾನು ಹೇಗೆ ಹೋಗಲಿ?

03058026a ಶ್ರಾಂತಸ್ಯ ತೇ ಕ್ಷುಧಾರ್ತಸ್ಯ ಚಿಂತಯಾನಸ್ಯ ತತ್ಸುಖಂ।
03058026c ವನೇ ಘೋರೇ ಮಹಾರಾಜ ನಾಶಯಿಷ್ಯಾಮಿ ತೇ ಕ್ಲಮಂ।।

ಇಲ್ಲ ಮಹಾರಾಜ! ಈ ಘೋರ ವನದಲ್ಲಿ ನಿನ್ನ ಈ ಬಳಲಿಕೆಯನ್ನು, ಹಸಿವೆಯನ್ನು ನಾಶಮಾಡುತ್ತೇನೆ ಮತ್ತು ಚಿಂತೆ-ದುಗುಡಗಳಿಂದ ನಿನಗೆ ಸುಖವನ್ನು ತರಲು ಪ್ರಯತಿಸುತ್ತೇನೆ.

03058027a ನ ಚ ಭಾರ್ಯಾಸಮಂ ಕಿಂ ಚಿದ್ವಿದ್ಯತೇ ಭಿಷಜಾಂ ಮತಂ।
03058027c ಔಷಧಂ ಸರ್ವದುಃಖೇಷು ಸತ್ಯಮೇತದ್ಬ್ರವೀಮಿ ತೇ।।

ಸರ್ವ ದುಃಖದಲ್ಲಿಯೂ ಭಾರ್ಯೆಯ ಸಮನಾದ ಔಷಧಿಯಿಲ್ಲ ಎಂದು ವೈದ್ಯರ ಮತ. ಈ ಸತ್ಯವನ್ನು ನಾನು ನಿನಗೆ ಹೇಳುತ್ತಿದ್ದೇನೆ.”

03058028 ನಲ ಉವಾಚ।
03058028a ಏವಮೇತದ್ಯಥಾತ್ಥ ತ್ವಂ ದಮಯಂತಿ ಸುಮಧ್ಯಮೇ।
03058028c ನಾಸ್ತಿ ಭಾರ್ಯಾಸಮಂ ಮಿತ್ರಂ ನರಸ್ಯಾರ್ತಸ್ಯ ಭೇಷಜಂ।।

ನಲನು ಹೇಳಿದನು: “ಸುಮಧ್ಯಮೆ ದಮಯಂತಿ! ನೀನು ಹೇಳಿದುದೆಲ್ಲವೂ ಸರಿಯೇ. ಆರ್ತನಿಗೆ ಹೆಂಡತಿಯಂಥ ಮಿತ್ರ ಅಥವಾ ಔಷಧ ಇನ್ನೊಂದಿಲ್ಲ.

03058029a ನ ಚಾಹಂ ತ್ಯಕ್ತುಕಾಮಸ್ತ್ವಾಂ ಕಿಮರ್ಥಂ ಭೀರು ಶಂಕಸೇ।
03058029c ತ್ಯಜೇಯಮಹಮಾತ್ಮಾನಂ ನ ತ್ವೇವ ತ್ವಾಮನಿಂದಿತೇ।।

ಭೀರು! ನಿನ್ನನ್ನು ತ್ಯಜಿಸುವ ಇಚ್ಚೆ ನನ್ನಲ್ಲಿಲ್ಲ. ಸುಮ್ಮನೆ ಏಕೆ ಶಂಕಿಸುವೆ. ಅನಿಂದಿತೇ! ನಿನ್ನನ್ನು ತ್ಯಜಿಸುವ ಮೊದಲು ನನ್ನನ್ನು ನಾನೇ ತ್ಯಜಿಸಿಬಿಡುತ್ತೇನೆ.”

03058030 ದಮಯಂತ್ಯುವಾಚ।
03058030a ಯದಿ ಮಾಂ ತ್ವಂ ಮಹಾರಾಜ ನ ವಿಹಾತುಮಿಹೇಚ್ಚಸಿ।
03058030c ತತ್ಕಿಮರ್ಥಂ ವಿದರ್ಭಾಣಾಂ ಪಂಥಾಃ ಸಮುಪದಿಶ್ಯತೇ।।

ದಮಯಂತಿಯು ಹೇಳಿದಳು: “ಮಹಾರಾಜ! ನೀನು ನನ್ನನ್ನು ಬಿಡಲು ಬಯಸದಿದ್ದರೆ ನೀನು ನನಗೆ ವಿದರ್ಭದ ದಾರಿಯನ್ನು ಏಕೆ ತೋರಿಸಿದೆ?

03058031a ಅವೈಮಿ ಚಾಹಂ ನೃಪತೇ ನ ತ್ವಂ ಮಾಂ ತ್ಯಕ್ತುಮರ್ಹಸಿ।
03058031c ಚೇತಸಾ ತ್ವಪಕೃಷ್ಟೇನ ಮಾಂ ತ್ಯಜೇಥಾ ಮಹಾಪತೇ।।

ನೃಪತೇ! ಮಹಾಪತೇ! ನಾನೂ ಕೂಡ ನೀನು ನನ್ನನ್ನು ತ್ಯಜಿಸಬಾರದೆಂದೇ ಬಯಸುತ್ತೇನೆ. ಕಷ್ಟದಲ್ಲಿ ನೊಂದವನಾಗಿ ನನ್ನನ್ನು ತ್ಯಜಿಸಬೇಡ.

03058032a ಪಂಥಾನಂ ಹಿ ಮಮಾಭೀಕ್ಷ್ಣಮಾಖ್ಯಾಸಿ ನರಸತ್ತಮ।
03058032c ಅತೋನಿಮಿತ್ತಂ ಶೋಕಂ ಮೇ ವರ್ಧಯಸ್ಯಮರಪ್ರಭ।।

ನರಸತ್ತಮ! ಅಮರಪ್ರಭ! ದಾರಿಗಳನ್ನೇ ನನಗೆ ತೋರಿಸುತ್ತಿದ್ದೀಯೆ. ಇದರಿಂದಲೇ ನನ್ನ ಶೋಕವು ಹೆಚ್ಚಾಗುತ್ತಿದೆ.

03058033a ಯದಿ ಚಾಯಮಭಿಪ್ರಾಯಸ್ತವ ರಾಜನ್ವ್ರಜೇದಿತಿ।
03058033c ಸಹಿತಾವೇವ ಗಚ್ಚಾವೋ ವಿದರ್ಭಾನ್ಯದಿ ಮನ್ಯಸೇ।।

ರಾಜನ್! ನಾನು ವಿದರ್ಭಕ್ಕೆ ಹೋಗಬೇಕೆಂದು ನಿನ್ನ ಅಭಿಪ್ರಾಯವಿದ್ದರೆ, ನಿನ್ನ ಅನುಮತಿಯಿದ್ದರೆ, ನಾವಿಬ್ಬರೂ ಒಟ್ಟಿಗೇ ಹೋಗೋಣ.

03058034a ವಿದರ್ಭರಾಜಸ್ತತ್ರ ತ್ವಾಂ ಪೂಜಯಿಷ್ಯತಿ ಮಾನದ।
03058034c ತೇನ ತ್ವಂ ಪೂಜಿತೋ ರಾಜನ್ಸುಖಂ ವತ್ಸ್ಯಸಿ ನೋ ಗೃಹೇ।।

ಮಾನದ! ರಾಜ! ವಿದರ್ಭರಾಜನು ನಿನ್ನನ್ನು ಪೂಜಿಸುತ್ತಾನೆ. ಅವನಿಂದ ಸತ್ಕೃತನಾಗಿ ನಾವು ನಮ್ಮ ಗೃಹದಲ್ಲಿ ಸುಖವಾಗಿ ಇರೋಣ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲವನಯಾತ್ರಾಯಾಂ ಅಷ್ಟಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲವನಯಾತ್ರ ಎನ್ನುವ ಐವತ್ತೆಂಟನೆಯ ಅಧ್ಯಾಯವು.