ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 57
ಸಾರ
ನಲನು ದ್ಯೂತವಾಡುವುದನ್ನು ನಿಲ್ಲಿಸಬೇಕೆಂದು ದಮಯಂತಿಯು ಪ್ರಯತ್ನಿಸಿ ಸೋತು, ಸೂತ ವಾರ್ಷ್ಣೇಯನೊಂದಿಗೆ ತನ್ನ ಅವಳಿ ಮಕ್ಕಳನ್ನು ತಂದೆ ಭೀಮನ ಮನೆಗೆ ಕಳುಹಿಸಿದುದು (1-18). ವಾರ್ಷ್ಣೇಯನು ಮಕ್ಕಳನ್ನು ಕುಂಡಿನಪುರದಲ್ಲಿ ಇರಿಸಿ, ಅಯೋಧ್ಯೆಯ ಅರಸ ಋತುಪರ್ಣನಲ್ಲಿ ಸಾರಥಿಯಾಗಿ ಸೇರಿಕೊಂಡಿದುದು (19-23).
03057001 ಬೃಹದಶ್ವ ಉವಾಚ।
03057001a ದಮಯಂತೀ ತತೋ ದೃಷ್ಟ್ವಾ ಪುಣ್ಯಶ್ಲೋಕಂ ನರಾಧಿಪಂ।
03057001c ಉನ್ಮತ್ತವದನುನ್ಮತ್ತಾ ದೇವನೇ ಗತಚೇತಸಂ।।
03057002a ಭಯಶೋಕಸಮಾವಿಷ್ಟಾ ರಾಜನ್ಭೀಮಸುತಾ ತತಃ।
03057002c ಚಿಂತಯಾಮಾಸ ತತ್ಕಾರ್ಯಂ ಸುಮಹತ್ಪಾರ್ಥಿವಂ ಪ್ರತಿ।।
ಬೃಹದಶ್ವನು ಹೇಳಿದನು: “ನರಾಧಿಪ ಪುಣ್ಯಶ್ಲೋಕನು ಆಟದಲ್ಲಿ ಉನ್ಮತ್ತನಾಗಿ ಚೇತನವನ್ನೇ ಕಳೆದುಕೊಂಡಿರುವುದನ್ನು ಉನ್ಮತ್ತಳಲ್ಲದ ದಮಯಂತಿಯು ನೋಡಿದಳು. ರಾಜ! ನಂತರ ಭಯಶೋಕಸಮಾವಿಷ್ಟಳಾದ ಭೀಮಸುತೆಯು ಪಾರ್ಥಿವನ ಸಲುವಾಗಿ ಸುಮಹತ್ ಕಾರ್ಯದ ಬಗ್ಗೆ ಯೋಚಿಸಿದಳು.
03057003a ಸಾ ಶಂಕಮಾನಾ ತತ್ಪಾಪಂ ಚಿಕೀರ್ಷಂತೀ ಚ ತತ್ಪ್ರಿಯಂ।
03057003c ನಲಂ ಚ ಹೃತಸರ್ವಸ್ವಮುಪಲಭ್ಯೇದಮಬ್ರವೀತ್।।
ಅವನ ಪಾಪವನ್ನು ಶಂಕಿಸುತ್ತಾ, ಅವನಿಗೆ ಪ್ರಿಯವಾದುದನ್ನು ಮಾಡುವ ಇಚ್ಛೆಯಿಂದ, ನಲನು ಸರ್ವವನ್ನೂ ಕಳೆದುಕೊಳ್ಳುತ್ತಿದ್ದಾನೆ ಎಂದು ಕೇಳಿ ಅವಳ ಸೇವಕಿಗೆ ಹೇಳಿದಳು:
03057004a ಬೃಹತ್ಸೇನೇ ವ್ರಜಾಮಾತ್ಯಾನಾನಾಯ್ಯ ನಲಶಾಸನಾತ್।
03057004c ಆಚಕ್ಷ್ವ ಯದ್ಧೃತಂ ದ್ರವ್ಯಮವಶಿಷ್ಟಂ ಚ ಯದ್ವಸು।।
“ಬೃಹತ್ಸೇನೆ! ನಲನ ಶಾಸನದಂತೆ ಹೋಗಿ ಅಮಾತ್ಯರನ್ನೆಲ್ಲರನ್ನೂ ಕರೆದುಕೊಂಡು ಬಾ. ಯಾವ ವಸ್ತುಗಳನ್ನು ಈಗಾಗಲೇ ಕಳೆದುಕೊಂಡಿದ್ದೇವೆ ಮತ್ತು ಯಾವವು ಇನ್ನೂ ನಮ್ಮ ಹತ್ತಿರ ಇವೆ ಎನ್ನುವುದನ್ನೂ ಅವರಿಗೆ ಹೇಳು.”
03057005a ತತಸ್ತೇ ಮಂತ್ರಿಣಃ ಸರ್ವೇ ವಿಜ್ಞಾಯ ನಲಶಾಸನಂ।
03057005c ಅಪಿ ನೋ ಭಾಗಧೇಯಂ ಸ್ಯಾದಿತ್ಯುಕ್ತ್ವಾ ಪುನರಾವ್ರಜನ್।।
ಸರ್ವ ಮಂತ್ರಿಗಳೂ ನಲಶಾಸನವನ್ನು ತಿಳಿದು ಭಾಗ್ಯವು ನಮಗೆ ಈಗ ಮರಳಿಬಂದಿದೆಯೋ ಎನ್ನುತ್ತಾ ಬಂದರು.
03057006a ತಾಸ್ತು ಸರ್ವಾಃ ಪ್ರಕೃತಯೋ ದ್ವಿತೀಯಂ ಸಮುಪಸ್ಥಿತಾಃ।
03057006c ನ್ಯವೇದಯದ್ಭೀಮಸುತಾ ನ ಚ ತತ್ಪ್ರತ್ಯನಂದತ।।
ಭೀಮಸುತೆಯು ಅವನಿಗೆ ಪ್ರಜೆಗಳು ಎರಡನೇ ಬಾರಿ ಮತ್ತೆ ಬಂದು ಉಪಸ್ಥಿತರಾಗಿದ್ದಾರೆ ಎಂದು ನಿವೇದಿಸಿದಳು, ಆದರೆ ಇದು ಅವನಿಗೆ ಇಷ್ಟವಾಗಲಿಲ್ಲ.
03057007a ವಾಕ್ಯಮಪ್ರತಿನಂದಂತಂ ಭರ್ತಾರಮಭಿವೀಕ್ಷ್ಯ ಸಾ।
03057007c ದಮಯಂತೀ ಪುನರ್ವೇಶ್ಮ ವ್ರೀಡಿತಾ ಪ್ರವಿವೇಶ ಹ।।
ತನ್ನ ಈ ವಾಕ್ಯಗಳು ಪತಿಗೆ ಸಂತಸವನ್ನು ತರಲಿಲ್ಲ ಎಂದು ನೋಡಿದ ದಮಯಂತಿಯು ಬಹು ದುಃಖದಿಂದ ಪುನಃ ತನ್ನ ಮನೆಗೆ ಮರಳಿದಳು.
03057008a ನಿಶಮ್ಯ ಸತತಂ ಚಾಕ್ಷಾನ್ಪುಣ್ಯಶ್ಲೋಕಪರಾಙ್ಮುಖಾನ್।
03057008c ನಲಂ ಚ ಹೃತಸರ್ವಸ್ವಂ ಧಾತ್ರೀಂ ಪುನರುವಾಚ ಹ।।
ದಾಳಗಳು ಸತತವಾಗಿ ಪುಣ್ಯಶ್ಲೋಕನಿಗೆ ಪರಾಙ್ಮುಖವಾಗಿದ್ದವು ಮತ್ತು ನಲನು ಸರ್ವಸ್ವವನ್ನೂ ಕಳೆದುಕೊಂಡ ಎನ್ನುವುದನ್ನು ಕೇಳಿ ತನ್ನ ಸೇವಕಿಗೆ ಪುನಃ ಹೇಳಿದಳು.
03057009a ಬೃಹತ್ಸೇನೇ ಪುನರ್ಗಚ್ಚ ವಾರ್ಷ್ಣೇಯಂ ನಲಶಾಸನಾತ್।
03057009c ಸೂತಮಾನಯ ಕಲ್ಯಾಣಿ ಮಹತ್ಕಾರ್ಯಮುಪಸ್ಥಿತಂ।।
“ಬೃಹತ್ಸೇನೆ! ನಲಶಾಸನದಂತೆ ಸೂತ ವಾರ್ಷ್ಣೇಯನನ್ನು ಕರೆದುಕೊಂಡು ಬಾ. ಕಲ್ಯಾಣಿ! ಮಹತ್ತರ ಕಾರ್ಯವೊಂದನ್ನು ಮಾಡುವುದಿದೆ.”
03057010a ಬೃಹತ್ಸೇನಾ ತು ತಚ್ಶ್ರುತ್ವಾ ದಮಯಂತ್ಯಾಃ ಪ್ರಭಾಷಿತಂ।
03057010c ವಾರ್ಷ್ಣೇಯಮಾನಯಾಮಾಸ ಪುರುಷೈರಾಪ್ತಕಾರಿಭಿಃ।।
ದಮಯಂತಿಯ ಈ ಮಾತುಗಳನ್ನು ಕೇಳಿದ ಬೃಹತ್ಸೇನೆಯು ಆಪ್ತಕಾರಿ ಪುರುಷರ ಮೂಲಕ ವಾರ್ಷ್ಣೇಯನನ್ನು ಕರೆಸಿದಳು.
03057011a ವಾರ್ಷ್ಣೇಯಂ ತು ತತೋ ಭೈಮೀ ಸಾಂತ್ವಯಂ ಶ್ಲಕ್ಷ್ಣಯಾ ಗಿರಾ।
03057011c ಉವಾಚ ದೇಶಕಾಲಜ್ಞಾ ಪ್ರಾಪ್ತಕಾಲಮನಿಂದಿತಾ।।
ದೇಶಕಾಲಜ್ಞೆ ಭೈಮಿಯು ಕಾಲವು ಪ್ರಾಪ್ತವಾಗಿದೆ ಎಂದು ತಿಳಿದು ಮೃದುವಾದ ಮಾತುಗಳಲ್ಲಿ, ಸಾಂತ್ವನಿಸುತ್ತಾ ವಾರ್ಷ್ಣೇಯನಿಗೆ ಹೇಳಿದಳು:
03057012a ಜಾನೀಷೇ ತ್ವಂ ಯಥಾ ರಾಜಾ ಸಮ್ಯಗ್ವೃತ್ತಃ ಸದಾ ತ್ವಯಿ।
03057012c ತಸ್ಯ ತ್ವಂ ವಿಷಮಸ್ಥಸ್ಯ ಸಾಹಾಯ್ಯಂ ಕರ್ತುಮರ್ಹಸಿ।।
03057013a ಯಥಾ ಯಥಾ ಹಿ ನೃಪತಿಃ ಪುಷ್ಕರೇಣೇಹ ಜೀಯತೇ।
03057013c ತಥಾ ತಥಾಸ್ಯ ದ್ಯೂತೇ ವೈ ರಾಗೋ ಭೂಯೋಽಭಿವರ್ಧತೇ।।
“ರಾಜನು ನಿನ್ನ ಕುರಿತು ಹೇಗೆ ಸದಾ ಒಳ್ಳೆಯದಾಗಿ ನಡೆದುಕೊಳ್ಳುತ್ತಿದ್ದನು ಎಂದು ನೀನು ತಿಳಿದಿದ್ದೀಯೆ. ಈ ವಿಷಮ ಸಮಯದಲ್ಲಿ ಅವನಿಗೆ ನೀನು ಸಹಾಯಮಾಡಬೇಕಾಗಿದೆ. ಪುಷ್ಕರನಿಂದ ನೃಪತಿಯು ಜಯಸಲ್ಪಡುತ್ತಾ ಬಂದ ಹಾಗೆ ದ್ಯೂತದಲ್ಲಿ ಅವನ ಆಸಕ್ತಿ ಹೆಚ್ಚಾಗುತ್ತಾ ಬರುತ್ತಿದೆ.
03057014a ಯಥಾ ಚ ಪುಷ್ಕರಸ್ಯಾಕ್ಷಾ ವರ್ತಂತೇ ವಶವರ್ತಿನಃ।
03057014c ತಥಾ ವಿಪರ್ಯಯಶ್ಚಾಪಿ ನಲಸ್ಯಾಕ್ಷೇಷು ದೃಶ್ಯತೇ।।
ದಾಳಗಳು ಪುಷ್ಕರನ ವಶದಲ್ಲಿರುವಂತೆ ವರ್ತಿಸುತ್ತಿವೆ. ಹಾಗೆಯೇ ದಾಳಗಳು ನಲನಿಗೆ ವಿನಾಶವನ್ನೇ ತರುತ್ತಿರುವುದು ಕಾಣುತ್ತಿದೆ.
03057015a ಸುಹೃತ್ಸ್ವಜನವಾಕ್ಯಾನಿ ಯಥಾವನ್ನ ಶೃಣೋತಿ ಚ।
03057015c ನೂನಂ ಮನ್ಯೇ ನ ಶೇಷೋಽಸ್ತಿ ನೈಷಧಸ್ಯ ಮಹಾತ್ಮನಃ।।
ಸುಹೃದಯರ ಮತ್ತು ಸ್ವಜನರ ವಾಕ್ಯಗಳನ್ನು ಕೇಳಬೇಕಿದ್ದರೂ ಕೇಳುತ್ತಿಲ್ಲ. ಮಹಾತ್ಮ ನೈಷಧನ ಹತ್ತಿರ ಏನೂ ಉಳಿದಿಲ್ಲ ಎಂದು ನನಗನ್ನಿಸುತ್ತಿದೆ.
03057016a ಯತ್ರ ಮೇ ವಚನಂ ರಾಜಾ ನಾಭಿನಂದತಿ ಮೋಹಿತಃ।
03057016c ಶರಣಂ ತ್ವಾಂ ಪ್ರಪನ್ನಾಸ್ಮಿ ಸಾರಥೇ ಕುರು ಮದ್ವಚಃ।
03057016e ನ ಹಿ ಮೇ ಶುಧ್ಯತೇ ಭಾವಃ ಕದಾ ಚಿದ್ವಿನಶೇದಿತಿ।।
ಸಾರಥಿ! ಮೋಹಿತ ರಾಜನು ನನ್ನ ಮಾತನ್ನು ಅಭಿನಂದಿಸದೇ ಇದ್ದುದರಿಂದ ನಾನು ನಿನ್ನ ಶರಣು ಬಂದಿದ್ದೇನೆ. ನನ್ನ ಮಾತಿನಂತೆ ಮಾಡು. ಯಾವಾಗಲಾದರೂ ವಿನಾಶವೊದಗುತ್ತದೆ ಎಂದು ನನ್ನ ಮನಸ್ಸಿಗೆ ಶಾಂತಿಯೇ ಇಲ್ಲದಾಗಿದೆ.
03057017a ನಲಸ್ಯ ದಯಿತಾನಶ್ವಾನ್ಯೋಜಯಿತ್ವಾ ಮಹಾಜವಾನ್।
03057017c ಇದಮಾರೋಪ್ಯ ಮಿಥುನಂ ಕುಂಡಿನಂ ಯಾತುಮರ್ಹಸಿ।।
ನಲನ ಪ್ರೀತಿಯ ಮಹಾವೇಗವುಳ್ಳ ಅಶ್ವಗಳನ್ನು ರಥಕ್ಕೆ ಕಟ್ಟಿ, ಅದರಲ್ಲಿ ನನ್ನ ಅವಳಿ ಮಕ್ಕಳನ್ನು ಕುಂಡಿನಪುರಕ್ಕೆ ಕರೆದುಕೊಂಡು ಹೋಗು.
03057018a ಮಮ ಜ್ಞಾತಿಷು ನಿಕ್ಷಿಪ್ಯ ದಾರಕೌ ಸ್ಯಂದನಂ ತಥಾ।
03057018c ಅಶ್ವಾಂಶ್ಚೈತಾನ್ಯಥಾಕಾಮಂ ವಸ ವಾನ್ಯತ್ರ ಗಚ್ಚ ವಾ।।
ನನ್ನ ಬಂಧುಗಳಲ್ಲಿ ಮಕ್ಕಳನ್ನು, ಕುದುರೆಗಳನ್ನು ಮತ್ತು ರಥವನ್ನು ಇರಿಸಿ, ನೀನು ಅಲ್ಲಿ ಉಳಿಯಬಹುದು ಅಥವಾ ಬೇಕಾದ ಬೇರೆ ಕಡೆ ಹೋಗಬಹುದು.”
03057019a ದಮಯಂತ್ಯಾಸ್ತು ತದ್ವಾಕ್ಯಂ ವಾರ್ಷ್ಣೇಯೋ ನಲಸಾರಥಿಃ।
03057019c ನ್ಯವೇದಯದಶೇಷೇಣ ನಲಾಮಾತ್ಯೇಷು ಮುಖ್ಯಶಃ।।
ದಮಯಂತಿಯ ಈ ವಾಖ್ಯಗಳೆಲ್ಲವನ್ನೂ ನಲಸಾರಥಿ ವಾರ್ಷ್ಣೇಯನು ನಲನ ಮುಖ್ಯ ಅಮಾತ್ಯರುಗಳಲ್ಲಿ ನಿವೇದಿಸಿದನು.
03057020a ತೈಃ ಸಮೇತ್ಯ ವಿನಿಶ್ಚಿತ್ಯ ಸೋಽನುಜ್ಞಾತೋ ಮಹೀಪತೇ।
03057020c ಯಯೌ ಮಿಥುನಮಾರೋಪ್ಯ ವಿದರ್ಭಾಂಸ್ತೇನ ವಾಹಿನಾ।।
ಮಹೀಪತೇ! ಅವರೆಲ್ಲರೂ ಸೇರಿ ನಿಶ್ಚಯಿಸಿ ಅವನಿಗೆ ಅನುಮತಿಯನ್ನು ಕೊಟ್ಟನಂತರ ಅವನು ಮಿಥುನರನ್ನು ವಾಹನದಲ್ಲಿ ಕುಳ್ಳಿರಿಸಿ ವಿದರ್ಭಕ್ಕೆ ಕರೆದೊಯ್ದನು.
03057021a ಹಯಾಂಸ್ತತ್ರ ವಿನಿಕ್ಷಿಪ್ಯ ಸೂತೋ ರಥವರಂ ಚ ತಂ।
03057021c ಇಂದ್ರಸೇನಾಂ ಚ ತಾಂ ಕನ್ಯಾಮಿಂದ್ರಸೇನಂ ಚ ಬಾಲಕಂ।।
ಸೂತನು ಅಲ್ಲಿ ಕನ್ಯೆ ಇಂದ್ರಸೇನೆಯನ್ನು ಮತ್ತು ಬಾಲಕ ಇಂದ್ರಸೇನನನ್ನು ಹಾಗೂ ಕುದುರೆ-ರಥಗಳನ್ನಿರಿಸಿದನು.
03057022a ಆಮಂತ್ರ್ಯ ಭೀಮಂ ರಾಜಾನಮಾರ್ತಃ ಶೋಚನ್ನಲಂ ನೃಪಂ।
03057022c ಅಟಮಾನಸ್ತತೋಽಯೋಧ್ಯಾಂ ಜಗಾಮ ನಗರೀಂ ತದಾ।।
ಆರ್ತನಾಗಿ ಶೋಕದಿಂದ ನೃಪ ನಲನ ಕುರಿತು ಭೀಮನಿಗೆ ತಿಳಿಸಿದನು ಮತ್ತು ಹಾಗೆಯೇ ತಿರುಗಾಡುತ್ತಾ ಅಯೋಧ್ಯಾ ನಗರಿಗೆ ಬಂದನು.
03057023a ಋತುಪರ್ಣಂ ಸ ರಾಜಾನಮುಪತಸ್ಥೇ ಸುದುಃಖಿತಃ।
03057023c ಭೃತಿಂ ಚೋಪಯಯೌ ತಸ್ಯ ಸಾರಥ್ಯೇನ ಮಹೀಪತೇ।।
ಮಹೀಪತೇ! ದುಃಖಿತನಾಗಿ ಅಲ್ಲಿ ರಾಜ ಋತುಪರ್ಣನನ್ನು ಭೆಟ್ಟಿಮಾಡಿ ಅವನ ಸಾರಥಿಯಾಗಿ ಸೇರಿಕೊಂಡನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕುಂಡಿನಂಪ್ರತಿ ಕುಮಾರಯೋಃ ಪ್ರಸ್ಥಾಪನೇ ಸಪ್ತಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕುಂಡಿನದ ಕಡೆ ಕುಮಾರರ ಪ್ರಯಾಣ ಎನ್ನುವ ಐವತ್ತೇಳನೆಯ ಅಧ್ಯಾಯವು.