ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 55
ಸಾರ
ಲೋಕಪಾಲಕರು ಹಿಂದಿರುಗುತ್ತಿರುವಾಗ ಮಾರ್ಗದಲ್ಲಿ ದ್ವಾಪರನೊಡನೆ ದಮಯಂತಿಯನ್ನು ಬಯಸಿ ಸ್ವಯಂವರಕ್ಕೆ ಬರುತ್ತಿರುವ ಕಲಿಯನ್ನು ನೋಡಿದುದು (1); ಸ್ವಯಂವರದಲ್ಲಿ ದಮಯಂತಿಯು ದೇವತೆಗಳ ಮಧ್ಯದಲ್ಲಿ ಮನುಷ್ಯನನ್ನು ವರಿಸಿದಳೆಂದು ಕೇಳಿ ಕಲಿಯು ಕೋಪಗೊಂಡಿದುದು (2-6); ಅದಕ್ಕೆ ಅವರೇ ಸಮ್ಮತಿ ನೀಡಿದರೆಂದೂ, ಶಪಿಸುವ ಅವಶ್ಯಕತೆಯಿಲ್ಲವೆಂದೂ ಹೇಳಿ ಇಂದ್ರಾದಿಗಳು ತೆರಳಿದುದು (7-11). ತಾನು ನಲನನ್ನು ಹಿಡಿಯುತ್ತೇನೆ, ಅದಕ್ಕೆ ದ್ವಾಪರನು ದಾಳಗಳಾಗಿ ಸಹಾಯ ಮಾಡಬೇಕೆಂದು ಕಲಿಯು ನಿಶ್ಚಯಿಸಿದುದು (12-13).
03055001 ಬೃಹದಶ್ವ ಉವಾಚ।
03055001a ವೃತೇ ತು ನೈಷಧೇ ಭೈಮ್ಯಾ ಲೋಕಪಾಲಾ ಮಹೌಜಸಃ।
03055001c ಯಾಂತೋ ದದೃಶುರಾಯಾಂತಂ ದ್ವಾಪರಂ ಕಲಿನಾ ಸಹ।।
ಬೃಹದಶ್ವನು ಹೇಳಿದನು: “ನೈಷಧನು ಭೈಮಿಯಿಂದ ವರಿಸಲ್ಪಟ್ಟ ನಂತರ ಮಹೌಜಸ ಲೋಕಪಾಲಕರು ತೆರಳುತ್ತಿರುವಾಗ ದ್ವಾಪರನ ಜೊತೆಗೂಡಿ ಬರುತ್ತಿದ್ದ ಕಲಿಯನ್ನು ಕಂಡರು.
03055002a ಅಥಾಬ್ರವೀತ್ಕಲಿಂ ಶಕ್ರಃ ಸಂಪ್ರೇಕ್ಷ್ಯ ಬಲವೃತ್ರಹಾ।
03055002c ದ್ವಾಪರೇಣ ಸಹಾಯೇನ ಕಲೇ ಬ್ರೂಹಿ ಕ್ವ ಯಾಸ್ಯಸಿ।।
ಬಲವೃತ್ರಹ ಶಕ್ರನು ಕಲಿಯನ್ನು ನೋಡಿ ಕೇಳಿದನು: “ಕಲಿ! ದ್ವಾಪರನನ್ನೊಡಗೂಡಿ ಎಲ್ಲಿಗೆ ಹೋಗುತ್ತಿರುವೆ ಹೇಳು.”
03055003a ತತೋಽಬ್ರವೀತ್ಕಲಿಃ ಶಕ್ರಂ ದಮಯಂತ್ಯಾಃ ಸ್ವಯಂವರಂ।
03055003c ಗತ್ವಾಹಂ ವರಯಿಷ್ಯೇ ತಾಂ ಮನೋ ಹಿ ಮಮ ತದ್ಗತಂ।।
ಕಲಿಯು ಶಕ್ರನಿಗೆ ಉತ್ತರಿಸಿದನು: “ದಮಯಂತಿಯ ಸ್ವಯಂವರಕ್ಕೆ ಹೋಗುತ್ತಿದ್ದೇನೆ. ಅಲ್ಲಿ ನಾನು ಅವಳನ್ನು ವರಿಸುತ್ತೇನೆ, ಯಾಕೆಂದರೆ ನನ್ನ ಮನಸ್ಸು ಅವಳಿಗಾಗಿಯೇ ಮಾರಿಹೋಗಿದೆ.”
03055004a ತಮಬ್ರವೀತ್ಪ್ರಹಸ್ಯೇಂದ್ರೋ ನಿರ್ವೃತ್ತಃ ಸ ಸ್ವಯಂವರಃ।
03055004c ವೃತಸ್ತಯಾ ನಲೋ ರಾಜಾ ಪತಿರಸ್ಮತ್ಸಮೀಪತಃ।।
ಇಂದ್ರನು ನಗುತ್ತಾ ಹೇಳಿದನು: “ಸ್ವಯಂವರವು ಮುಗಿದು ಹೋಯಿತು! ನನ್ನ ಎದುರಿನಲ್ಲಿಯೇ ಅವಳು ರಾಜ ನಲನನ್ನು ಪತಿಯನ್ನಾಗಿ ವರಿಸಿದಳು.”
03055005a ಏವಮುಕ್ತಸ್ತು ಶಕ್ರೇಣ ಕಲಿಃ ಕೋಪಸಮನ್ವಿತಃ।
03055005c ದೇವಾನಾಮಂತ್ರ್ಯ ತಾನ್ಸರ್ವಾನುವಾಚೇದಂ ವಚಸ್ತದಾ।।
ಶಕ್ರನ ಈ ಮಾತುಗಳನ್ನು ಕೇಳಿ ಕಲಿಯು ಕೋಪಸಮನ್ವಿತನಾದನು. ಆ ಎಲ್ಲ ದೇವತೆಗಳನ್ನು ಉದ್ದೇಶಿಸಿ ಹೇಳಿದನು:
03055006a ದೇವಾನಾಂ ಮಾನುಷಂ ಮಧ್ಯೇ ಯತ್ಸಾ ಪತಿಮವಿಂದತ।
03055006c ನನು ತಸ್ಯಾ ಭವೇನ್ನ್ಯಾಯ್ಯಂ ವಿಪುಲಂ ದಂಡಧಾರಣಂ।।
“ದೇವತೆಗಳ ಮಧ್ಯದಲ್ಲಿ ಒಬ್ಬ ಮನುಷ್ಯನನ್ನು ಪತಿಯನ್ನಾಗಿ ಆರಿಸಿಕೊಂಡರೆ ಅವಳಿಗೆ ನಿಜವಾಗಿಯೂ ವಿಪುಲ ದಂಡವೇ ದೊರೆಯಬೇಕು!”
03055007a ಏವಮುಕ್ತೇ ತು ಕಲಿನಾ ಪ್ರತ್ಯೂಚುಸ್ತೇ ದಿವೌಕಸಃ।
03055007c ಅಸ್ಮಾಭಿಃ ಸಮನುಜ್ಞಾತೋ ದಮಯಂತ್ಯಾ ನಲೋ ವೃತಃ।।
ಕಲಿಯ ಈ ಮಾತುಗಳಿಗೆ ದಿವೌಕಸರು ಉತ್ತರಿಸಿದರು: “ದಮಯಂತಿಯು ನಲನನ್ನು ವರಿಸಲು ನಾವೇ ಸಮ್ಮತಿಯನ್ನು ನೀಡಿದ್ದೇವೆ.
03055008a ಕಶ್ಚ ಸರ್ವಗುಣೋಪೇತಂ ನಾಶ್ರಯೇತ ನಲಂ ನೃಪಂ।
03055008c ಯೋ ವೇದ ಧರ್ಮಾನಖಿಲಾನ್ಯಥಾವಚ್ಚರಿತವ್ರತಃ।।
ಯಥಾವತ್ತಾಗಿ ವ್ರತಚರಿತ, ಅಖಿಲ ಧರ್ವವನ್ನೂ ತಿಳಿದಿರುವ, ಸರ್ವಗುಣೋಪೇತ ನೃಪ ನಲನನ್ನು ಯಾರುತಾನೆ ವರಿಸುವುದಿಲ್ಲ?
03055009a ಯಸ್ಮಿನ್ಸತ್ಯಂ ಧೃತಿರ್ದಾನಂ ತಪಃ ಶೌಚಂ ದಮಃ ಶಮಃ।
03055009c ಧ್ರುವಾಣಿ ಪುರುಷವ್ಯಾಘ್ರೇ ಲೋಕಪಾಲಸಮೇ ನೃಪೇ।।
ಸತ್ಯ, ಧೃತಿ, ದಾನ, ತಪ, ಶೌಚ, ದಮ, ಮತ್ತು ಶಮ ಆ ಪುರುಷವ್ಯಾಘ್ರನಲ್ಲಿ ನೆಲೆಗೊಂಡಿವೆ; ಆ ನೃಪನು ಲೋಕಪಾಲಕರಿಗೆ ಸಮನಾಗಿದ್ದಾನೆ.
03055010a ಆತ್ಮಾನಂ ಸ ಶಪೇನ್ಮೂಢೋ ಹನ್ಯಾಚ್ಚಾತ್ಮಾನಮಾತ್ಮನಾ।
03055010c ಏವಂಗುಣಂ ನಲಂ ಯೋ ವೈ ಕಾಮಯೇಚ್ಛಪಿತುಂ ಕಲೇ।।
ಕಲಿ! ಇಂತಹ ಸದ್ಗುಣಿ ನಲನನ್ನು ಶಪಿಸಲು ಇಚ್ಛಿಸುವವನು ತನ್ನನ್ನು ತಾನೇ ಶಪಿಸಿ ತನ್ನನ್ನು ತಾನೇ ಹತ್ಯೆಮಾಡಿಕೊಳ್ಳುವ ಮೂಢನಂತೆ.
03055011a ಕೃಚ್ಚ್ರೇ ಸ ನರಕೇ ಮಜ್ಜೇದಗಾಧೇ ವಿಪುಲೇಽಪ್ಲವೇ।
03055011c ಏವಮುಕ್ತ್ವಾ ಕಲಿಂ ದೇವಾ ದ್ವಾಪರಂ ಚ ದಿವಂ ಯಯುಃ।।
ಕಲಿ! ಅಂಥವನು ಕೃಚ್ಛ್ರ ನರಕದಲ್ಲಿ ತುಂಬಾ ಸಮಯ ಅಗಾಧ ನೋವನ್ನು ಅನುಭವಿಸುತ್ತಾನೆ.” ಕಲಿ ಮತ್ತು ದ್ವಾಪರರಿಗೆ ಈ ರೀತಿ ಹೇಳಿದ ದೇವತೆಗಳು ದಿವಕ್ಕೆ ತೆರಳಿದರು.
03055012a ತತೋ ಗತೇಷು ದೇವೇಷು ಕಲಿರ್ದ್ವಾಪರಮಬ್ರವೀತ್।
03055012c ಸಂಹರ್ತುಂ ನೋತ್ಸಹೇ ಕೋಪಂ ನಲೇ ವತ್ಸ್ಯಾಮಿ ದ್ವಾಪರ।।
ದೇವತೆಗಳು ಹೋದನಂತರ ಕಲಿಯು ದ್ವಾಪರನಿಗೆ ಹೇಳಿದನು: “ನನ್ನ ಕೋಪವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ದ್ವಾಪರ! ನಲನನ್ನು ಹಿಡಿಯುತ್ತೇನೆ.
03055013a ಭ್ರಂಶಯಿಷ್ಯಾಮಿ ತಂ ರಾಜ್ಯಾನ್ನ ಭೈಮ್ಯಾ ಸಹ ರಂಸ್ಯತೇ।
03055013c ತ್ವಮಪ್ಯಕ್ಷಾನ್ಸಮಾವಿಶ್ಯ ಕರ್ತುಂ ಸಾಹಾಯ್ಯಮರ್ಹಸಿ।।
ಅವನನ್ನು ರಾಜ್ಯಭ್ರಂಶನನ್ನಾಗಿ ಮಾಡುತ್ತೇನೆ; ಮತ್ತು ಅವನು ಭೈಮಿಯ ಜೊತೆ ರಮಿಸದಂತೆ ಮಾಡುತ್ತೇನೆ. ನೀನು ದಾಳಗಳನ್ನು ಪ್ರವೇಶಿಸಿ ನನಗೆ ಸಹಾಯವನ್ನು ಮಾಡಬೇಕು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕಲಿದೇವಸಂವಾದೇ ಪಂಚಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕಲಿದೇವಸಂವಾದ ಎನ್ನುವ ಐವತ್ತೈದನೆಯ ಅಧ್ಯಾಯವು.