ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 54
ಸಾರ
ಸ್ವಯಂವರದಲ್ಲಿ ದಮಯಂತಿಯು ಒಂದೇ ರೀತಿ ಕಾಣುವ ಐವರನ್ನು ನೋಡಿ ನಲನು ಯಾರೆಂದು ಗುರುತಿಸಲಿಕ್ಕಾಗದೇ ಸಂದೇಹಕ್ಕೊಳಗಾದುದು (1-10). ದಮಯಂತಿಯ ಪರಿವೇದನೆಯನ್ನು ಕೇಳಿ ಅವಳು ಕೇಳಿಕೊಂಡಂತೆ ದೇವತೆಗಳು ತಮ್ಮ ಚಿಹ್ನಧಾರಣೆ ಮಾಡಿಕೊಂಡಿದ್ದುದು (11-22). ದಮಯಂತಿಯು ನಲನನ್ನು ವರಿಸಲು, ದೇವತೆಗಳು ನಲನಿಗೆ ವರಗಳನ್ನಿತ್ತುದು (23-32). ನಲನು ದಮಯಂತಿಯನ್ನು ಕೂಡಿ ಸಂತಸದಿಂದ ರಾಜ್ಯವಾಳುತ್ತಿದ್ದುದು (33-38).
03054001 ಬೃಹದಶ್ವ ಉವಾಚ।
03054001a ಅಥ ಕಾಲೇ ಶುಭೇ ಪ್ರಾಪ್ತೇ ತಿಥೌ ಪುಣ್ಯೇ ಕ್ಷಣೇ ತಥಾ।
03054001c ಆಜುಹಾವ ಮಹೀಪಾಲಾನ್ಭೀಮೋ ರಾಜಾ ಸ್ವಯಂವರೇ।।
ಬೃಹದಶ್ವನು ಹೇಳಿದನು: “ನಂತರ ಪುಣ್ಯ ತಿಥಿ, ಕ್ಷಣ ಮತ್ತು ಶುಭ ಕಾಲವು ಪ್ರಾಪ್ತಿಯಾದಾಗ, ಭೀಮರಾಜನು ಮಹೀಪಾಲರಿಗೆ ಸ್ವಯಂವರದ ಕರೆಕೊಟ್ಟನು.
03054002a ತಚ್ಛೃತ್ವಾ ಪೃಥಿವೀಪಾಲಾಃ ಸರ್ವೇ ಹೃಚ್ಚಯಪೀಡಿತಾಃ।
03054002c ತ್ವರಿತಾಃ ಸಮುಪಾಜಗ್ಮುರ್ದಮಯಂತೀಮಭೀಪ್ಸವಃ।।
ಅದನ್ನು ಕೇಳಿ ಕಾಮ ಪೀಡಿತ ಎಲ್ಲ ಪೃಥಿವೀಪಾಲರೂ ದಮಯಂತಿಯನ್ನು ಗೆಲ್ಲುವ ಭರವಸೆಯಿಂದ ತ್ವರಿತವಾಗಿ ಬಂದು ಸೇರಿದರು.
03054003a ಕನಕಸ್ತಂಭರುಚಿರಂ ತೋರಣೇನ ವಿರಾಜಿತಂ।
03054003c ವಿವಿಶುಸ್ತೇ ಮಹಾರಂಗಂ ನೃಪಾಃ ಸಿಂಹಾ ಇವಾಚಲಂ।।
ಕನಕಸ್ತಂಭಗಳಿಂದ ಮತ್ತು ತೋರಣಗಳಿಂದ ವಿರಾಜಿಸುತ್ತಿರುವ ಮಹಾರಂಗವನ್ನು ನೃಪರು ಸಿಂಹಗಳು ಪರ್ವತವನ್ನು ಪ್ರವೇಶಿಸುವಂತೆ ಪ್ರವೇಶಿಸಿದರು.
03054004a ತತ್ರಾಸನೇಷು ವಿವಿಧೇಷ್ವಾಸೀನಾಃ ಪೃಥಿವೀಕ್ಷಿತಃ।
03054004c ಸುರಭಿಸ್ರಗ್ಧರಾಃ ಸರ್ವೇ ಸುಮೃಷ್ಟಮಣಿಕುಂಡಲಾಃ।।
ಅಲ್ಲಿ ಪೃಥಿವೀಕ್ಷಿತರು ಪುಷ್ಪಮಾಲೆಗಳನ್ನು ಮತ್ತು ಜಗಜಗಿಸುವ ಮಣಿಕುಂಡಲಗಳನ್ನು ಧರಿಸಿ, ವಿವಿಧ ಆಸನಗಳಲ್ಲಿ ಆಸೀನರಾದರು.
03054005a ತಾಂ ರಾಜಸಮಿತಿಂ ಪೂರ್ಣಾಂ ನಾಗೈರ್ಭೋಗವತೀಮಿವ।
03054005c ಸಂಪೂರ್ಣಾಂ ಪುರುಷವ್ಯಾಘ್ರೈರ್ವ್ಯಾಘ್ರೈರ್ಗಿರಿಗುಹಾಮಿವ।।
ಆ ರಾಜ ಸಮಿತಿಯು ಭೋಗವತಿಯು ನಾಗಗಳಿಂದ ಮತ್ತು ಗಿರಿಗುಹೆಯು ವ್ಯಾಘ್ರಗಳಿಂದ ತುಂಬಿರುವ ಹಾಗೆ ನರವ್ಯಾಘ್ರರಿಂದ ತುಂಬಿಕೊಂಡಿತು.
03054006a ತತ್ರ ಸ್ಮ ಪೀನಾ ದೃಶ್ಯಂತೇ ಬಾಹವಃ ಪರಿಘೋಪಮಾಃ।
03054006c ಆಕಾರವಂತಃ ಸುಶ್ಲಕ್ಷ್ಣಾಃ ಪಂಚಶೀರ್ಷಾ ಇವೋರಗಾಃ।।
ಅಲ್ಲಿ ಅವರ ಬಾಹುಗಳು ಪರಿಘಗಳಂತೆ ಕಾಣುತ್ತಿದ್ದವು. ಐದುತಲೆಯ ಉರಗಗಳಂತೆ ಆಕಾರಗಳನ್ನು ಹೊಂದಿದ್ದು ನುಣುಪಾಗಿದ್ದವು.
03054007a ಸುಕೇಶಾಂತಾನಿ ಚಾರೂಣಿ ಸುನಾಸಾನಿ ಶುಭಾನಿ ಚ।
03054007c ಮುಖಾನಿ ರಾಜ್ಞಾಂ ಶೋಭಂತೇ ನಕ್ಷತ್ರಾಣಿ ಯಥಾ ದಿವಿ।।
ಆಕಾಶದಲ್ಲಿ ನಕ್ಷತ್ರಗಳು ಶೋಭಿಸುವಂತೆ ರಾಜರ ಮುಖಗಳು ಸುಂದರ ಕೇಶಗಳಿಂದ, ಸುಂದರ ಹೊಳೆಯುತ್ತಿರುವ ನಾಸಿಕಗಳಿಂದ ಶೋಭಿಸುತ್ತಿದ್ದವು.
03054008a ದಮಯಂತೀ ತತೋ ರಂಗಂ ಪ್ರವಿವೇಶ ಶುಭಾನನಾ।
03054008c ಮುಷ್ಣಂತೀ ಪ್ರಭಯಾ ರಾಜ್ಞಾಂ ಚಕ್ಷೂಂಷಿ ಚ ಮನಾಂಸಿ ಚ।।
ಆಗ ಶುಭಾನನೆ ದಮಯಂತಿಯು ತನ್ನ ಪ್ರಭೆಯಿಂದ ರಾಜರುಗಳ ಕಣ್ಣುಗಳನ್ನೂ, ಮನಸ್ಸುಗಳನ್ನೂ ಕದಿಯುತ್ತಾ ರಂಗವನ್ನು ಪ್ರವೇಶಿಸಿದಳು.
03054009a ತಸ್ಯಾ ಗಾತ್ರೇಷು ಪತಿತಾ ತೇಷಾಂ ದೃಷ್ಟಿರ್ಮಹಾತ್ಮನಾಂ।
03054009c ತತ್ರ ತತ್ರೈವ ಸಕ್ತಾಭೂನ್ನ ಚಚಾಲ ಚ ಪಶ್ಯತಾಂ।।
ಅವಳ ಯಾವ ಯಾವ ಅಂಗದ ಮೇಲೆ ಆ ಮಹಾತ್ಮರ ದೃಷ್ಟಿಯು ಬಿದ್ದಿತೋ, ಬೇರೆಲ್ಲಿಯೂ ಹಾಯದಂತೆ ಅಲ್ಲಿಯೇ ಅವರ ದೃಷ್ಟಿಯು ಸಿಲುಕಿಕೊಂಡಿತು.
03054010a ತತಃ ಸಂಕೀರ್ತ್ಯಮಾನೇಷು ರಾಜ್ಞಾಂ ನಾಮಸು ಭಾರತ।
03054010c ದದರ್ಶ ಭೈಮೀ ಪುರುಷಾನ್ಪಂಚ ತುಲ್ಯಾಕೃತೀನಿವ।।
ಭಾರತ! ರಾಜರ ಹೆಸರುಗಳ ಸಂಕೀರ್ತನೆ ಮಾಡುತ್ತಿರುವಾಗ ಭೈಮಿಯು ಒಂದೇತರಹ ಕಾಣುತ್ತಿರುವ ಐವರು ಪುರುಷರನ್ನು ನೋಡಿದಳು.
03054011a ತಾನ್ಸಮೀಕ್ಷ್ಯ ತತಃ ಸರ್ವಾನ್ನಿರ್ವಿಶೇಷಾಕೃತೀನ್ ಸ್ಥಿತಾನ್।
03054011c ಸಂದೇಹಾದಥ ವೈದರ್ಭೀ ನಾಭ್ಯಜಾನಾನ್ನಲಂ ನೃಪಂ।
03054011e ಯಂ ಯಂ ಹಿ ದದೃಶೇ ತೇಷಾಂ ತಂ ತಂ ಮೇನೇ ನಲಂ ನೃಪಂ।।
ರೂಪದಲ್ಲಿ ಯಾವ ವ್ಯತ್ಯಾಸಗಳೂ ಇಲ್ಲದೇ ಅಲ್ಲಿ ಕುಳಿತಿರುವ ಅವರನ್ನೆಲ್ಲ ನೋಡಿ ವೈದರ್ಭಿಯು ನೃಪ ನಲನು ಯಾರೆಂದು ಗುರುತಿಸಲಾಗದೇ ಸಂದೇಹಕ್ಕೊಳಗಾದಳು. ಯಾಕೆಂದರೆ ಅವರಲ್ಲಿ ಯಾರನ್ನು ನೋಡಿದರೂ ನೃಪ ನಲನನ್ನೇ ನೋಡುತ್ತಿದ್ದೇನೆ ಎಂದು ಅವಳಿಗನ್ನಿಸುತ್ತಿತ್ತು.
03054012a ಸಾ ಚಿಂತಯಂತೀ ಬುದ್ಧ್ಯಾಥ ತರ್ಕಯಾಮಾಸ ಭಾಮಿನೀ।
03054012c ಕಥಂ ನು ದೇವಾಂ ಜಾನೀಯಾಂ ಕಥಂ ವಿದ್ಯಾಂ ನಲಂ ನೃಪಂ।।
ಚಿಂತೆಯಿಂದ ಭಾಮಿನಿಯು ಮನಸ್ಸಿನಲ್ಲಿಯೇ ತರ್ಕಿಸತೊಡಗಿದಳು: “ದೇವತೆಗಳು ಯಾರೆಂದು ನಾನು ಹೇಗೆ ತಿಳಿಯಲಿ ಮತ್ತು ಹೇಗೆ ನೃಪ ನಲನನ್ನು ಗುರುತಿಸಲಿ?
03054013a ಏವಂ ಸಂಚಿಂತಯಂತೀ ಸಾ ವೈದರ್ಭೀ ಭೃಶದುಃಖಿತಾ।
03054013c ಶ್ರುತಾನಿ ದೇವಲಿಂಗಾನಿ ಚಿಂತಯಾಮಾಸ ಭಾರತ।।
ಭಾರತ! ಹೀಗೆ ದುಃಖಿತಳಾಗಿ ಚಿಂತಿಸುತ್ತಿದ್ದ ಆ ವೈದರ್ಭಿಯು ಕೇಳಿದ್ದ ದೇವಚಿಹ್ನೆಗಳ ಕುರಿತು ಯೋಚಿಸತೊಡಗಿದಳು.
03054014a ದೇವಾನಾಂ ಯಾನಿ ಲಿಂಗಾನಿ ಸ್ಥವಿರೇಭ್ಯಃ ಶ್ರುತಾನಿ ಮೇ।
03054014c ತಾನೀಹ ತಿಷ್ಠತಾಂ ಭೂಮಾವೇಕಸ್ಯಾಪಿ ನ ಲಕ್ಷಯೇ।।
“ಇವರೇ ದೇವತೆಗಳು ಎಂದು ಗುರುತಿಸುವಂತಹ ಚಿಹ್ನೆಗಳ ಕುರಿತು ವೃದ್ಧರಿಂದ ಕೇಳಿದ್ದೇನೆ. ಆದರೆ ಅವುಗಳಲ್ಲಿ ಯಾವುದೂ ಭೂಮಿಯಮೇಲಿರುವ ಇವರಲ್ಲಿ ಕಂಡುಬರುತ್ತಿಲ್ಲವಲ್ಲಾ!”
03054015a ಸಾ ವಿನಿಶ್ಚಿತ್ಯ ಬಹುಧಾ ವಿಚಾರ್ಯ ಚ ಪುನಃ ಪುನಃ।
03054015c ಶರಣಂ ಪ್ರತಿ ದೇವಾನಾಂ ಪ್ರಾಪ್ತಕಾಲಮಮನ್ಯತ।।
ಪುನಃ ಪುನಃ ಬೇರೆ ಬೇರೆ ರೀತಿಗಳಲ್ಲಿ ವಿಚಾರಿಸುತ್ತಾ ಅವಳು ದೇವತೆಗಳಿಗೆ ಶರಣುಹೋಗುವ ಕಾಲ ಪ್ರಾಪ್ತವಾಗಿದೆ ಎಂದು ಅರಿತಳು.
03054016a ವಾಚಾ ಚ ಮನಸಾ ಚೈವ ನಮಸ್ಕಾರಂ ಪ್ರಯುಜ್ಯ ಸಾ।
03054016c ದೇವೇಭ್ಯಃ ಪ್ರಾಂಜಲಿರ್ಭೂತ್ವಾ ವೇಪಮಾನೇದಮಬ್ರವೀತ್।।
ವಾಚಾ-ಮನಸಾ ನಮಸ್ಕರಿಸಿ, ಪ್ರಾಂಜಲಿಬದ್ಧಳಾಗಿ, ನಡುಗುತ್ತಾ ದೇವತೆಗಳನ್ನುದ್ದೇಶಿಸಿ ಪ್ರಾರ್ಥಿಸಿದಳು:
03054017a ಹಂಸಾನಾಂ ವಚನಂ ಶ್ರುತ್ವಾ ಯಥಾ ಮೇ ನೈಷಧೋ ವೃತಃ।
03054017c ಪತಿತ್ವೇ ತೇನ ಸತ್ಯೇನ ದೇವಾಸ್ತಂ ಪ್ರದಿಶಂತು ಮೇ।।
“ಹಂಸಗಳ ವಚನವನ್ನು ಕೇಳಿ ನೈಷಧನೇ ನನ್ನ ಪತಿಯಾಗಲಿ ಎಂಬ ನನ್ನ ಈ ಸತ್ಯವು ದೇವತೆಗಳನ್ನು ನನಗೆ ತೋರಿಸಿ ಕೊಡಲಿ!
03054018a ವಾಚಾ ಚ ಮನಸಾ ಚೈವ ಯಥಾ ನಾಭಿಚರಾಮ್ಯಹಂ।
03054018c ತೇನ ಸತ್ಯೇನ ವಿಬುಧಾಸ್ತಮೇವ ಪ್ರದಿಶಂತು ಮೇ।।
ವಾಚಾ-ಮನಸಾ ನಾನು ಅಭಿಚರಳಾಗಿಲ್ಲ ಎಂಬ ಈ ಸತ್ಯವು ದೇವತೆಗಳನ್ನು ನನಗೆ ತೋರಿಸಲಿ!
03054019a ಯಥಾ ದೇವೈಃ ಸ ಮೇ ಭರ್ತಾ ವಿಹಿತೋ ನಿಷಧಾಧಿಪಃ।
03054019c ತೇನ ಸತ್ಯೇನ ಮೇ ದೇವಾಸ್ತಮೇವ ಪ್ರದಿಶಂತು ಮೇ।।
ದೇವತೆಗಳೇ ನನಗೆ ನಿಷಧಾಧಿಪನು ಪತಿಯಾಗಲಿ ಎಂದು ನಿರ್ಧರಿಸಿದ್ದರೆ, ಈ ಸತ್ಯದ ಮೂಲಕ ದೇವತೆಗಳು ನನಗೆ ಕಾಣಿಸಿಕೊಳ್ಳಲಿ!
03054020a ಸ್ವಂ ಚೈವ ರೂಪಂ ಪುಷ್ಯಂತು ಲೋಕಪಾಲಾಃ ಸಹೇಶ್ವರಾಃ।
03054020c ಯಥಾಹಮಭಿಜಾನೀಯಾಂ ಪುಣ್ಯಶ್ಲೋಕಂ ನರಾಧಿಪಂ।।
ನರಾಧಿಪ ಪುಣ್ಯಶ್ಲೋಕನನ್ನು ಗುರುತಿಸಲು ಸಹಾಯವಾಗುವಂತೆ ಈಶ್ವರಸಮೇತ ಈ ಲೋಕಪಾಲಕರು ತಮ್ಮ ಸ್ವರೂಪಗಳನ್ನು ಕಾಣಿಸಲಿ!”
03054021a ನಿಶಮ್ಯ ದಮಯಂತ್ಯಾಸ್ತತ್ಕರುಣಂ ಪರಿದೇವಿತಂ।
03054021c ನಿಶ್ಚಯಂ ಪರಮಂ ತಥ್ಯಮನುರಾಗಂ ಚ ನೈಷಧೇ।।
03054022a ಮನೋವಿಶುದ್ಧಿಂ ಬುದ್ಧಿಂ ಚ ಭಕ್ತಿಂ ರಾಗಂ ಚ ಭಾರತ।
03054022c ಯಥೋಕ್ತಂ ಚಕ್ರಿರೇ ದೇವಾಃ ಸಾಮರ್ಥ್ಯಂ ಲಿಂಗಧಾರಣೇ।।
ಭಾರತ! ದಮಯಂತಿಯ ಆ ಕರುಣ ಪರಿವೇದನೆಯನ್ನು ಕೇಳಿ ಮತ್ತು ನೈಷಧನ ಕುರಿತು ಅವಳಿಗಿದ್ದ ಪರಮ ನಿಶ್ಚಯ ಮತ್ತು ಅನುರಾಗ, ಅವಳ ಮನೋವಿಶುದ್ಧಿ, ಬುದ್ಧಿ, ಮತ್ತು ಭಕ್ತಿ, ರಾಗವನ್ನು ನೋಡಿ, ಅವಳು ಕೇಳಿಕೊಂಡ ಹಾಗೆ ದೇವತೆಗಳು ತಮ್ಮ ಚಿಹ್ನೆಧಾರಣೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ತೋರಿಸಿದರು.
03054023a ಸಾಪಶ್ಯದ್ವಿಬುಧಾನ್ಸರ್ವಾನಸ್ವೇದಾನ್ಸ್ತಬ್ಧಲೋಚನಾನ್।
03054023c ಹೃಷಿತಸ್ರಗ್ರಜೋಹೀನಾನ್ ಸ್ಥಿತಾನಸ್ಪೃಶತಃ ಕ್ಷಿತಿಂ।।
ಬೆವರೇ ಇಲ್ಲದ, ಸ್ತಬ್ಧಲೋಚನರಾದ, ಶುಭ್ರಕುಸುಮಮಾಲೆಗಳನ್ನು ಧರಿಸಿದ, ಮಲಿನತೆಯೇ ಇಲ್ಲದೇ, ಕ್ಷಿತಿಯನ್ನು ಸ್ಪರ್ಶಿಸದೇ ನಿಂತಿರುವ ದೇವತೆಗಳನ್ನು ಅವಳು ನೋಡಿದಳು.
03054024a ಚಾಯಾದ್ವಿತೀಯೋ ಮ್ಲಾನಸ್ರಗ್ರಜಃಸ್ವೇದಸಮನ್ವಿತಃ।
03054024c ಭೂಮಿಷ್ಠೋ ನೈಷಧಶ್ಚೈವ ನಿಮೇಷೇಣ ಚ ಸೂಚಿತಃ।।
ಮತ್ತು ನಲನು ತನ್ನ ನೆರಳಿನ ಮೂಲಕ, ಮಲಿನಮಾಲೆಯಿಂದ, ಬೆವರು ಮತ್ತು ಕೊಳೆಯಿಂದ, ಕಣ್ಣುರೆಪ್ಪೆಗಳ ಮಿಡಿತದಿಂದ ಮತ್ತು ಭೂಮಿಯನ್ನು ಮೆಟ್ಟಿ ನಿಂತಿರುವುದರಿಂದ ಗುರುತಿಸಲ್ಪಟ್ಟನು.
03054025a ಸಾ ಸಮೀಕ್ಷ್ಯ ತತೋ ದೇವಾನ್ಪುಣ್ಯಶ್ಲೋಕಂ ಚ ಭಾರತ।
03054025c ನೈಷಧಂ ವರಯಾಮಾಸ ಭೈಮೀ ಧರ್ಮೇಣ ಭಾರತ।।
ಭಾರತ! ಈಗ ಭೈಮಿಯು ದೇವತೆಗಳನ್ನು ಮತ್ತು ಪುಣ್ಯಶ್ಲೋಕನನ್ನು ನೋಡಬಹುದಾದುರಿಂದ ಧರ್ಮಪ್ರಕಾರವಾಗಿ ನೈಷಧನನ್ನು ವರಿಸಿದಳು.
03054026a ವಿಲಜ್ಜಮಾನಾ ವಸ್ತ್ರಾಂತೇ ಜಗ್ರಾಹಾಯತಲೋಚನಾ।
03054026c ಸ್ಕಂಧದೇಶೇಽಸೃಜಚ್ಚಾಸ್ಯ ಸ್ರಜಂ ಪರಮಶೋಭನಾಂ।
03054026e ವರಯಾಮಾಸ ಚೈವೈನಂ ಪತಿತ್ವೇ ವರವರ್ಣಿನೀ।।
ಆ ವಿಲಜ್ಜಮಾನಿ ಆಯತಲೋಚನೆಯು ಅವನ ವಸ್ತ್ರದ ಅಂಚನ್ನು ಹಿಡಿದಳು ಮತ್ತು ಪರಮ ಶೋಭನೀಯ ಮಾಲೆಯನ್ನು ಅವನ ಸ್ಕಂಧದ ಮೇಲೆ ಹಾಕಿದಳು. ಹೀಗೆ ಆ ವರವರ್ಣಿನಿಯು ಅವನನ್ನೇ ತನ್ನ ಪತಿಯನ್ನಾಗಿ ವರಿಸಿದಳು.
03054027a ತತೋ ಹಾ ಹೇತಿ ಸಹಸಾ ಶಬ್ಧೋ ಮುಕ್ತೋ ನರಾಧಿಪೈಃ।
03054027c ದೇವೈರ್ಮಹರ್ಷಿಭಿಶ್ಚೈವ ಸಾಧು ಸಾಧ್ವಿತಿ ಭಾರತ।
03054027e ವಿಸ್ಮಿತೈರೀರಿತಃ ಶಬ್ಧಃ ಪ್ರಶಂಸದ್ಭಿರ್ನಲಂ ನೃಪಂ।।
ಭಾರತ! ನೆರೆದಿದ್ದ ನರಾಧಿಪರೆಲ್ಲರೂ ಹಾಹಾಕಾರ ಮಾಡಿದರು, ಮತ್ತು ದೇವ-ಮಹರ್ಷಿಗಳು ವಿಸ್ಮಿತರಾಗಿ, ನೃಪ ನಲನನ್ನು ಪ್ರಶಂಸಿಸುತ್ತಾ, “ಸಾಧು! ಸಾಧು!” ಎಂದು ಉದ್ಗರಿಸಿದರು.
03054028a ವೃತೇ ತು ನೈಷಧೇ ಭೈಮ್ಯಾ ಲೋಕಪಾಲಾ ಮಹೌಜಸಃ।
03054028c ಪ್ರಹೃಷ್ಟಮನಸಃ ಸರ್ವೇ ನಲಾಯಾಷ್ಟೌ ವರಾನ್ದದುಃ।।
ಮಹೌಜಸ ಲೋಕಪಾಲಕರು ಭೈಮ್ಯಳಿಂದ ವರಿಸಿಕೊಂಡ ನೈಷಧನ ಕುರಿತು ಪ್ರಹೃಷ್ಟಮನಸರಾಗಿ, ನಲನಿಗೆ ಒಟ್ಟು ಎಂಟು ವರಗಳನ್ನಿತ್ತರು.
03054029a ಪ್ರತ್ಯಕ್ಷದರ್ಶನಂ ಯಜ್ಞೇ ಗತಿಂ ಚಾನುತ್ತಮಾಂ ಶುಭಾಂ।
03054029c ನೈಷಧಾಯ ದದೌ ಶಕ್ರಃ ಪ್ರೀಯಮಾಣಃ ಶಚೀಪತಿಃ।।
ಶಚೀಪತಿ ಶಕ್ರನು ಪ್ರೀತನಾಗಿ ನೈಷಧನಿಗೆ ಯಜ್ಞಗಳಲ್ಲಿ ತನ್ನ ಪ್ರತ್ಯಕ್ಷ್ಯದರ್ಶನದ ಮತ್ತು ನಡೆಯುವಲ್ಲೆಲ್ಲಾ ದಾರಿಯಲ್ಲಿ ವಿಘ್ನಬರದಂತೆ ವರವನ್ನಿತ್ತನು.
03054030a ಅಗ್ನಿರಾತ್ಮಭವಂ ಪ್ರಾದಾದ್ಯತ್ರ ವಾಂಚತಿ ನೈಷಧಃ।
03054030c ಲೋಕಾನಾತ್ಮಪ್ರಭಾಂಶ್ಚೈವ ದದೌ ತಸ್ಮೈ ಹುತಾಶನಃ।।
ಹುತಾಶನನು ನೈಷಧನಿಗೆ ಬೇಕಾದಲ್ಲಿ ಅಗ್ನಿಯು ಸ್ವಯಂಭೂತನಾಗುವಹಾಗೆ, ಮತ್ತು ಅಗ್ನಿಯಿಂದ ಪ್ರಭಾವಿತ ಪ್ರದೇಶಗಳಿಗೆ ಪ್ರವೇಶಿಸಬಹುದೆಂಬ ವರವನ್ನಿತ್ತನು.
03054031a ಯಮಸ್ತ್ವನ್ನರಸಂ ಪ್ರಾದಾದ್ಧರ್ಮೇ ಚ ಪರಮಾಂ ಸ್ಥಿತಿಂ।
03054031c ಅಪಾಂಪತಿರಪಾಂ ಭಾವಂ ಯತ್ರ ವಾಂಚತಿ ನೈಷಧಃ।।
03054032a ಸ್ರಜಂ ಚೋತ್ತಮಗಂಧಾಢ್ಯಾಂ ಸರ್ವೇ ಚ ಮಿಥುನಂ ದದುಃ।
03054032c ವರಾನೇವಂ ಪ್ರದಾಯಾಸ್ಯ ದೇವಾಸ್ತೇ ತ್ರಿದಿವಂ ಗತಾಃ।।
ಯಮನು ಅನ್ನರಸವನ್ನೂ ಮತ್ತು ಧರ್ಮದಲ್ಲಿ ಪರಮಸ್ಥಿತಿಯನ್ನೂ ನೀಡಿದನು. ಅಪಾಂಪತಿಯು ನೈಷಧನು ಬಯಸಿದಲ್ಲಿ ಜಲವು ಇರುವಂತೆ, ಮತ್ತು ಸುಗಂಧದ ಉತ್ತಮ ಮಾಲೆಯನ್ನಿತ್ತನು. ಸರ್ವರೂ ಸೇರಿ ಅವನಿಗೆ ಅವಳಿ ಮಕ್ಕಳನ್ನು ಕೊಟ್ಟರು. ಈ ರೀತಿ ವರಗಳನ್ನಿತ್ತು ದೇವತೆಗಳು ತ್ರಿದಿವಕ್ಕೆ ತೆರಳಿದರು.
03054033a ಪಾರ್ಥಿವಾಶ್ಚಾನುಭೂಯಾಸ್ಯಾ ವಿವಾಹಂ ವಿಸ್ಮಯಾನ್ವಿತಾಃ।
03054033c ದಮಯಂತ್ಯಾಃ ಪ್ರಮುದಿತಾಃ ಪ್ರತಿಜಗ್ಮುರ್ಯಥಾಗತಂ।।
ವಿವಾಹವನ್ನು ನೋಡಿದ ಪಾರ್ಥಿವರೆಲ್ಲರೂ ವಿಸ್ಮಯಾನ್ವಿತರಾಗಿ, ದಮಯಂತಿಯ ಸಲುವಾಗಿ ಸಂತೋಷಗೊಂಡು, ಬಂದ ದಾರಿಯಲ್ಲಿಯೇ ಹಿಂತೆರಳಿದರು.
03054034a ಅವಾಪ್ಯ ನಾರೀರತ್ನಂ ತತ್ಪುಣ್ಯಶ್ಲೋಕೋಽಪಿ ಪಾರ್ಥಿವಃ।
03054034c ರೇಮೇ ಸಹ ತಯಾ ರಾಜಾ ಶಚ್ಯೇವ ಬಲವೃತ್ರಹಾ।।
ಪಾರ್ಥಿವ ಪುಣ್ಯಶ್ಲೋಕನೂ ಕೂಡ ನಾರೀರತ್ನವನ್ನು ಹೊಂದಿ, ಬಲವೃತ್ರಹನು ಶಚಿಯೊಂದಿಗೆ ರಮಿಸುವಹಾಗೆ ಅವಳೊಂದಿಗೆ ರಮಿಸಿದನು.
03054035a ಅತೀವ ಮುದಿತೋ ರಾಜಾ ಭ್ರಾಜಮಾನೋಽಮ್ಶುಮಾನಿವ।
03054035c ಅರಂಜಯತ್ಪ್ರಜಾ ವೀರೋ ಧರ್ಮೇಣ ಪರಿಪಾಲಯನ್।।
ಅತೀವ ಮುದಿತನಾದ ವೀರ ರಾಜನು ಹೊಳೆಯುತ್ತಿರುವ ಅಂಶುಮಾನನಂತೆ ಧರ್ಮದಲ್ಲಿ ರಂಜಿಸುತ್ತಾ ಪ್ರಜೆಗಳನ್ನು ಪರಿಪಾಲಿಸಿದನು.
03054036a ಈಜೇ ಚಾಪ್ಯಶ್ವಮೇಧೇನ ಯಯಾತಿರಿವ ನಾಹುಷಃ।
03054036c ಅನ್ಯೈಶ್ಚ ಕ್ರತುಭಿರ್ಧೀಮಾನ್ಬಹುಭಿಶ್ಚಾಪ್ತದಕ್ಷಿಣೈಃ।।
ನಾಹುಷ ಯಯಾತಿಯಂತೆ ಅಶ್ವಮೇಧ ಮತ್ತು ಇನ್ನೂ ಇತರ, ಬಹಳಷ್ಟು ಆಪ್ತದಕ್ಷಿಣೆಗಳನ್ನೊಡಗೂಡಿದ ಕ್ರತುಗಳನ್ನು ಆ ಧೀಮಂತನು ನೆರವೇರಿಸಿದನು.
03054037a ಪುನಶ್ಚ ರಮಣೀಯೇಷು ವನೇಷೂಪವನೇಷು ಚ।
03054037c ದಮಯಂತ್ಯಾ ಸಹ ನಲೋ ವಿಜಹಾರಾಮರೋಪಮಃ।।
ಅಮರನಂತೆ ನಲನು ದಮಯಂತಿಯ ಸಹಿತ ಪುನಃ ಪುನಃ ರಮಣೀಯ ವನ-ಉಪವನಗಳಲ್ಲಿ ವಿಹರಿಸಿದನು.
03054038a ಏವಂ ಸ ಯಜಮಾನಶ್ಚ ವಿಹರಂಶ್ಚ ನರಾಧಿಪಃ।
03054038c ರರಕ್ಷ ವಸುಸಂಪೂರ್ಣಾಂ ವಸುಧಾಂ ವಸುಧಾಧಿಪಃ।।
ಹೀಗೆ ಯಜ್ಞಗಳನ್ನು ನಡೆಸುತ್ತಾ ಮತ್ತು ವಿಹರಿಸುತ್ತಾ ನರಾಧಿಪ ವಸುಧಾಧಿಪನು ವಸುಸಂಫುರ್ಣ ವಸುಧೆಯನ್ನು ರಕ್ಷಿಸುತ್ತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಸ್ವಯಂವರೇ ಚತುಷ್ಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀಸ್ವಯಂವರ ಎನ್ನುವ ಐವತ್ತ್ನಾಲ್ಕನೆಯ ಅಧ್ಯಾಯವು.