053 ನಲೋಪಾಖ್ಯಾನೇ ನಲಕರ್ತುಕದೇವದೌತ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 53

ಸಾರ

ದೇವತೆಗಳ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆಂದು ದಮಯಂತಿಯು ಹೇಳಲು (1-12) ನಲನು ದೇವತೆಗಳಲ್ಲಿದ್ದಲ್ಲಿಗೆ ಬಂದು ತಿಳಿಸಿದುದು (13-21).

03053001 ಬೃಹದಶ್ವ ಉವಾಚ।
03053001a ಸಾ ನಮಸ್ಕೃತ್ಯ ದೇವೇಭ್ಯಃ ಪ್ರಹಸ್ಯ ನಲಮಬ್ರವೀತ್।
03053001c ಪ್ರಣಯಸ್ವ ಯಥಾಶ್ರದ್ಧಂ ರಾಜನ್ಕಿಂ ಕರವಾಣಿ ತೇ।।

ಬೃಹದಶ್ವನು ಹೇಳಿದನು:“ಆ ದೇವತೆಗಳಿಗೆ ನಮಸ್ಕರಿಸಿ, ಅವಳು ಮುಗುಳ್ನಗುತ್ತಾ ನಲನಿಗೆ ಹೇಳಿದಳು: “ರಾಜ! ನಿನ್ನ ಉದ್ದೇಶಗಳನ್ನು ಯಥಾವತ್ತಾಗಿ ಹೇಳು. ನಿನಗೆ ನನ್ನಿಂದ ಏನಾಗಬೇಕು?

03053002a ಅಹಂ ಚೈವ ಹಿ ಯಚ್ಚಾನ್ಯನ್ಮಮಾಸ್ತಿ ವಸು ಕಿಂ ಚನ।
03053002c ಸರ್ವಂ ತತ್ತವ ವಿಶ್ರಬ್ಧಂ ಕುರು ಪ್ರಣಯಮೀಶ್ವರ।।

ನಾನು ಮತ್ತು ನನ್ನಲ್ಲಿರುವ ಎಲ್ಲವೂ ನಿನ್ನದೇ ಅಲ್ಲವೇ? ಈಶ್ವರ! ನಿನ್ನ ಇಚ್ಛೆಯನ್ನು ವಿಶ್ವಾಸದಿಂದ ಬಹಿರಂಗಪಡಿಸು.

03053003a ಹಂಸಾನಾಂ ವಚನಂ ಯತ್ತತ್ತನ್ಮಾಂ ದಹತಿ ಪಾರ್ಥಿವ।
03053003c ತ್ವತ್ಕೃತೇ ಹಿ ಮಯಾ ವೀರ ರಾಜಾನಃ ಸಂನಿಪಾತಿತಾಃ।।

ಹಂಸಗಳ ವಚನಗಳು ನನ್ನ ದೇಹವನ್ನು ದಹಿಸುತ್ತಿವೆ ಪಾರ್ಥಿವ! ವೀರ! ನಿನಗೋಸ್ಕರವೇ ನಾನು ಈ ರಾಜರುಗಳನ್ನೆಲ್ಲಾ ಒಟ್ಟು ಸೇರಿಸಿದ್ದೇನೆ.

03053004a ಯದಿ ಚೇದ್ಭಜಮಾನಾಂ ಮಾಂ ಪ್ರತ್ಯಾಖ್ಯಾಸ್ಯಸಿ ಮಾನದ।
03053004c ವಿಷಮಗ್ನಿಂ ಜಲಂ ರಜ್ಜುಮಾಸ್ಥಾಸ್ಯೇ ತವ ಕಾರಣಾತ್।।

ಮಾನದ! ನಿನ್ನನ್ನು ಪ್ರೀತಿಸುತ್ತಿದ್ದ ನನ್ನನ್ನು ನೀನು ತಿರಸ್ಕರಿಸಿದರೆ ನಾನು ನಿನ್ನ ಕಾರಣದಿಂದಾಗಿ ವಿಷವನ್ನೋ, ಅಗ್ನಿಯನೋ, ಜಲವನ್ನೋ ಅಥವಾ ನೇಣನ್ನೋ ಮೊರೆಹೊಗುತ್ತೇನೆ1.”

03053005a ಏವಮುಕ್ತಸ್ತು ವೈದರ್ಭ್ಯಾ ನಲಸ್ತಾಂ ಪ್ರತ್ಯುವಾಚ ಹ।
03053005c ತಿಷ್ಠತ್ಸು ಲೋಕಪಾಲೇಷು ಕಥಂ ಮಾನುಷಮಿಚ್ಚಸಿ।।

ವೈದರ್ಭಿಯ ಈ ಮಾತುಗಳಿಗೆ ನಲನು ಉತ್ತರಿಸಿದನು: “ಲೋಕಪಾಲಕರೇ ಇರುವಾಗ ನೀನು ಮನುಷ್ಯನನ್ನು ಹೇಗೆ ಇಚ್ಛಿಸುತ್ತೀಯೆ?

03053006a ಯೇಷಾಮಹಂ ಲೋಕಕೃತಾಮೀಶ್ವರಾಣಾಂ ಮಹಾತ್ಮನಾಂ।
03053006c ನ ಪಾದರಜಸಾ ತುಲ್ಯೋ ಮನಸ್ತೇ ತೇಷು ವರ್ತತಾಂ।।

ನಾನು ಆ ಮಹಾತ್ಮ ಲೋಕಕೃತ ಈಶ್ವರರ ಪಾದಧೂಳಿಗೂ ಸಮನಲ್ಲ. ನಿನ್ನ ಮನಸ್ಸನ್ನು ಅವರೆಡೆಗೇ ಒಲಿಯಿಸು.

03053007a ವಿಪ್ರಿಯಂ ಹ್ಯಾಚರನ್ಮರ್ತ್ಯೋ ದೇವಾನಾಂ ಮೃತ್ಯುಮೃಚ್ಚತಿ।
03053007c ತ್ರಾಹಿ ಮಾಮನವದ್ಯಾಂಗಿ ವರಯಸ್ವ ಸುರೋತ್ತಮಾನ್।।

ದೇವತೆಗಳಿಗೆ ಅಪ್ರಿಯವಾಗಿ ನಡೆದುಕೊಂಡ ಮರ್ತ್ಯನಿಗೆ ಮೃತ್ಯುವೇ ಗತಿ. ಅನವದ್ಯಾಂಗೀ! ಸುರೋತ್ತಮರನ್ನು ವರಿಸಿ ನನ್ನನ್ನು ರಕ್ಷಿಸು.”

03053008a ತತೋ ಬಾಷ್ಪಕಲಾಂ ವಾಚಂ ದಮಯಂತೀ ಶುಚಿಸ್ಮಿತಾ।
03053008c ಪ್ರವ್ಯಾಹರಂತೀ ಶನಕೈರ್ನಲಂ ರಾಜಾನಮಬ್ರವೀತ್।।

ಆಗ ಶುಚಿಸ್ಮಿತೆ ದಮಯಂತಿಯು ಬಾಷ್ಪಗಳಿಂದೊಡಗೂಡಿದ ಮಾತಿನಿಂದ ನಿಧಾನವಾಗಿ ರಾಜನಿಗೆ ಉತ್ತರಿಸಿದಳು.

03053009a ಅಸ್ತ್ಯುಪಾಯೋ ಮಯಾ ದೃಷ್ಟೋ ನಿರಪಾಯೋ ನರೇಶ್ವರ।
03053009c ಯೇನ ದೋಷೋ ನ ಭವಿತಾ ತವ ರಾಜನ್ಕಥಂ ಚನ।।

“ನರೇಶ್ವರ! ನನ್ನ ದೃಷ್ಟಿಯಲ್ಲಿ ಅಪಾಯವಿಲ್ಲದಂತಹ ಒಂದು ಉಪಾಯವಿದೆ. ರಾಜ! ಇದರಿಂದ ನಿನಗೆ ಯಾವುದೇರೀತಿಯ ದೋಷವೂ ಬರುವುದಿಲ್ಲ.

03053010a ತ್ವಂ ಚೈವ ಹಿ ನರಶ್ರೇಷ್ಠ ದೇವಾಶ್ಚಾಗ್ನಿಪುರೋಗಮಾಃ।
03053010c ಆಯಾಂತು ಸಹಿತಾಃ ಸರ್ವೇ ಮಮ ಯತ್ರ ಸ್ವಯಂವರಃ।।

ನರೇಶ್ವರ! ಅಗ್ನಿಪುರೋಗಮ ದೇವತೆಗಳನ್ನೂ ಸೇರಿಕೊಂಡು ನೀವೆಲ್ಲರೂ ನನ್ನ ಸ್ವಯಂವರಕ್ಕೆ ಬರಬೇಕು.

03053011a ತತೋಽಹಂ ಲೋಕಪಾಲಾನಾಂ ಸನ್ನಿಧೌ ತ್ವಾಂ ನರೇಶ್ವರ।
03053011c ವರಯಿಷ್ಯೇ ನರವ್ಯಾಘ್ರ ನೈವಂ ದೋಷೋ ಭವಿಷ್ಯತಿ।।

ನರೇಶ್ವರ! ಆಗ ನಾನು ಲೋಕಪಾಲಕರ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆ. ನರವ್ಯಾಘ್ರ! ಈ ರೀತಿ ನಿನಗೆ ಯಾವ ದೋಷವೂ ಬರುವುದಿಲ್ಲ.”

03053012a ಏವಮುಕ್ತಸ್ತು ವೈದರ್ಭ್ಯಾ ನಲೋ ರಾಜಾ ವಿಶಾಂ ಪತೇ।
03053012c ಆಜಗಾಮ ಪುನಸ್ತತ್ರ ಯತ್ರ ದೇವಾಃ ಸಮಾಗತಾಃ।।

ವಿಶಾಂಪತೇ! ವೈದರ್ಭಿಯು ಈ ರೀತಿ ಹೇಳಲು, ರಾಜ ನಲನು ಪುನಃ ದೇವತೆಗಳು ಎಲ್ಲಿ ಸಮಾಗತರಾಗಿದ್ದರೋ ಅಲ್ಲಿಗೆ ಮರಳಿದನು.

03053013a ತಮಪಶ್ಯಂಸ್ತಥಾಯಾಂತಂ ಲೋಕಪಾಲಾಃ ಸಹೇಶ್ವರಾಃ।
03053013c ದೃಷ್ಟ್ವಾ ಚೈನಂ ತತೋಽಪೃಚ್ಚನ್ವೃತ್ತಾಂತಂ ಸರ್ವಮೇವ ತತ್।।

ಅಲ್ಲಿಗೆ ಅವನು ಬರುತ್ತಿರುವುದನ್ನು ಈಶ್ವರನೂ ಸಹಿತ ಲೋಕಪಾಲಕರು ನೋಡಿ ಸರ್ವ ವೃತ್ತಾಂತವನ್ನೂ ಕೇಳಿದರು.

03053014 ದೇವಾ ಊಚುಃ।
03053014a ಕಚ್ಚಿದ್ದೃಷ್ಟಾ ತ್ವಯಾ ರಾಜನ್ದಮಯಂತೀ ಶುಚಿಸ್ಮಿತಾ।
03053014c ಕಿಮಬ್ರವೀಚ್ಚ ನಃ ಸರ್ವಾನ್ವದ ಭೂಮಿಪತೇಽನಘ।।

ದೇವತೆಗಳು ಹೇಳಿದರು: “ರಾಜ! ನೀನು ಶುಚಿಸ್ಮಿತೆ ದಮಯಂತಿಯನ್ನು ನೋಡಿದೆಯಾ? ಅನಘ! ಭೂಮಿಪತೇ! ನಮಗೆಲ್ಲರಿಗೆ ಅವಳು ಏನು ಹೇಳಿದಳು ಹೇಳು.”

03053015 ನಲ ಉವಾಚ।
03053015a ಭವದ್ಭಿರಹಮಾದಿಷ್ಟೋ ದಮಯಂತ್ಯಾ ನಿವೇಶನಂ।
03053015c ಪ್ರವಿಷ್ಟಃ ಸುಮಹಾಕಕ್ಷ್ಯಂ ದಂಡಿಭಿಃ ಸ್ಥವಿರೈರ್ವೃತಂ।।

ನಲನು ಹೇಳಿದನು: “ನಿಮ್ಮೆಲ್ಲರ ಆದೇಶದಂತೆ ಎತ್ತರ ಗೋಡೆಗಳಿಂದ ಮತ್ತು ದಂಡಪಾಣಿ ಕಾವಲುಗಾರರಿಂದ ಆವೃತ ದಮಯಂತಿಯ ನಿವೇಶನವನ್ನು ಪ್ರವೇಶಿಸಿದೆನು.

03053016a ಪ್ರವಿಶಂತಂ ಚ ಮಾಂ ತತ್ರ ನ ಕಶ್ಚಿದ್ದೃಷ್ಟವಾನ್ನರಃ।
03053016c ಋತೇ ತಾಂ ಪಾರ್ಥಿವಸುತಾಂ ಭವತಾಮೇವ ತೇಜಸಾ।।

ಆದರೆ ನಿಮ್ಮ ತೇಜಸ್ಸಿನ ಪ್ರಭಾವದಿಂದ ಆ ಪಾರ್ಥಿವಸುತೆಯನ್ನು ಬಿಟ್ಟು ಬೇರೆ ಯಾರೂ ನಾನು ಪ್ರವೇಶಿಸುವುದನ್ನು ನೋಡಲಿಲ್ಲ.

03053017a ಸಖ್ಯಶ್ಚಾಸ್ಯಾ ಮಯಾ ದೃಷ್ಟಾಸ್ತಾಭಿಶ್ಚಾಪ್ಯುಪಲಕ್ಷಿತಃ।
03053017c ವಿಸ್ಮಿತಾಶ್ಚಾಭವನ್ದೃಷ್ಟ್ವಾ ಸರ್ವಾ ಮಾಂ ವಿಬುಧೇಶ್ವರಾಃ।।

ನಾನು ಅವಳ ಸಖಿಯರನ್ನು ನೋಡಿದೆ, ಅವರೂ ನನ್ನನ್ನು ನೋಡಿದರು. ವಿಬುಧೇಶ್ವರರೇ! ನನ್ನನ್ನು ನೋಡಿ ಅವರೆಲ್ಲರೂ ವಿಸ್ಮಿತರಾದರು.

03053018a ವರ್ಣ್ಯಮಾನೇಷು ಚ ಮಯಾ ಭವತ್ಸು ರುಚಿರಾನನಾ।
03053018c ಮಾಮೇವ ಗತಸಂಕಲ್ಪಾ ವೃಣೀತೇ ಸುರಸತ್ತಮಾಃ।।

ನಿಮ್ಮ ಕುರಿತು ನಾನು ಆ ರುಚಿರಾನನೆಗೆ ಹೇಳಿದೆ. ಆದರೆ, ಸುರಸತ್ತಮರೇ! ಅವಳಿಗೆ ನನ್ನ ಮೇಲೆಯೇ ಸಂಕಲ್ಪವಿದೆ ಎಂದು ಹೇಳಿದಳು.

03053019a ಅಬ್ರವೀಚ್ಚೈವ ಮಾಂ ಬಾಲಾ ಆಯಾಂತು ಸಹಿತಾಃ ಸುರಾಃ।
03053019c ತ್ವಯಾ ಸಹ ನರಶ್ರೇಷ್ಠ ಮಮ ಯತ್ರ ಸ್ವಯಂವರಃ।।

“ನರಶ್ರೇಷ್ಠ! ನಿನ್ನ ಜೊತೆಗೆ ಸುರರೂ ಕೂಡ ನನ್ನ ಸ್ವಯಂವರಕ್ಕೆ ಬರಲಿ!” ಎಂದು ಆ ಬಾಲೆಯು ನನಗೆ ಹೇಳಿದಳು.

03053020a ತೇಷಾಮಹಂ ಸನ್ನಿಧೌ ತ್ವಾಂ ವರಯಿಷ್ಯೇ ನರೋತ್ತಮ।
03053020c ಏವಂ ತವ ಮಹಾಬಾಹೋ ದೋಷೋ ನ ಭವಿತೇತಿ ಹ।।

“ನರೋತ್ತಮ! ಅವರ ಸನ್ನಿಧಿಯಲ್ಲಿಯೇ ನಿನ್ನನ್ನು ವರಿಸುತ್ತೇನೆ. ಮಹಾಬಾಹು! ಈ ರೀತಿ ನಿನಗೆ ಯಾವುದೇ ದೋಷವೂ ಬರುವುದಿಲ್ಲ.”

03053021a ಏತಾವದೇವ ವಿಬುಧಾ ಯಥಾವೃತ್ತಮುದಾಹೃತಂ।
03053021c ಮಯಾಶೇಷಂ ಪ್ರಮಾಣಂ ತು ಭವಂತಸ್ತ್ರಿದಶೇಶ್ವರಾಃ।।

ತ್ರಿದಶೇಶ್ವರರೇ! ಅಲ್ಲಿ ನಡೆದಿದ್ದನ್ನು ಯಥಾವತ್ತಾಗಿ ನಾನು ನಿಮಗೆ ತಿಳಿಸಿದ್ದೇನೆ. ಇನ್ನು ನಿಮಗೆ ತಿಳಿದಹಾಗೆ ಮಾಡಿ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಕರ್ತುಕದೇವದೌತ್ಯೇ ತ್ರಿಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಕರ್ತುಕದೇವದೌತ್ಯ ಎನ್ನುವ ಐವತ್ತ್ಮೂರನೆಯ ಅಧ್ಯಾಯವು.


  1. ಇಲ್ಲಿ ವಿಷ, ಅಗ್ನಿ, ಜಲ ಮತ್ತು ನೇಣು ಇವು ಆತ್ಮಹತ್ಯೆಯ ನಾಲ್ಕು ವಿಧಗಳಾದರೂ, ನಾಲ್ವರು ಲೋಕಪಾಲಕರನ್ನು, ಕ್ರಮವಾಗಿ, ಶಕ್ರ, ಅಗ್ನಿ, ವರುಣ ಮತ್ತು ಯಮರನ್ನು ಸಾಂಕೀತಿಸುತ್ತವೆ. ↩︎