052 ನಲೋಪಾಖ್ಯಾನೇ ನಲಸ್ಯ ದೇವದೌತ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 52

ಸಾರ

ಇಂದ್ರಾದಿಗಳು ತಮ್ಮ ಪರಿಚಯವನ್ನೂ ಉದ್ದೇಶವನ್ನೂ ಹೇಳಿಕೊಂಡು ತಮ್ಮ ಸಂದೇಶವೊಂದನ್ನು ದಮಯಂತಿಗೆ ತಲುಪಿಸಬೇಕೆಂದು ನಲನನ್ನು ದಮಯಂತಿಯಲ್ಲಿಗೆ ಕಳುಹಿಸುವುದು (1-10). ನಲನು ದಮಯಂತಿಗೆ ದೇವತೆಗಳ ಸಂದೇಶವನ್ನು ನೀಡುವುದು (11-24).

03052001 ಬೃಹದಶ್ವ ಉವಾಚ।
03052001a ತೇಭ್ಯಃ ಪ್ರತಿಜ್ಞಾಯ ನಲಃ ಕರಿಷ್ಯ ಇತಿ ಭಾರತ।
03052001c ಅಥೈನಾನ್ಪರಿಪಪ್ರಚ್ಚ ಕೃತಾಂಜಲಿರವಸ್ಥಿತಃ।।

ಬೃಹದಶ್ವನು ಹೇಳಿದನು: “ಭಾರತ! “ಮಾಡುತ್ತೇನೆ!” ಎಂದು ಅವರಿಗೆ ಪ್ರತಿಜ್ಞೆಯನ್ನಿತ್ತ ನಲನು ಅಂಜಲೀಬದ್ಧನಾಗಿ ನಿಂತು ಅವರನ್ನು ಪ್ರಶ್ನಿಸಿದನು:

03052002a ಕೇ ವೈ ಭವಂತಃ ಕಶ್ಚಾಸೌ ಯಸ್ಯಾಹಂ ದೂತ ಈಪ್ಸಿತಃ।
03052002c ಕಿಂ ಚ ತತ್ರ ಮಯಾ ಕಾರ್ಯಂ ಕಥಯಧ್ವಂ ಯಥಾತಥಂ।।

“ನೀವು ಯಾರು? ನನ್ನನ್ನು ದೂತನನ್ನಾಗಿ ಬಳಸಲು ಇಚ್ಛಿಸುವ ಇವನು ಯಾರು? ಇದರಲ್ಲಿ ನನ್ನ ಕಾರ್ಯವೇನು? ಯಥಾವತ್ತಾಗಿ ತಿಳಿಸಿರಿ.”

03052003a ಏವಮುಕ್ತೇ ನೈಷಧೇನ ಮಘವಾನ್ಪ್ರತ್ಯಭಾಷತ।
03052003c ಅಮರಾನ್ವೈ ನಿಬೋಧಾಸ್ಮಾನ್ದಮಯಂತ್ಯರ್ಥಮಾಗತಾನ್।।

ನೈಷಧನ ಈ ಮಾತುಗಳಿಗೆ ಮಘವಾನನು ಉತ್ತರಿಸಿದನು: “ದಮಯಂತಿಯನ್ನು ಬಯಸಿ ಬಂದ ಅಮರರು ನಾವು ಎಂದು ತಿಳಿ.

03052004a ಅಹಮಿಂದ್ರೋಽಯಮಗ್ನಿಶ್ಚ ತಥೈವಾಯಮಪಾಂಪತಿಃ।
03052004c ಶರೀರಾಂತಕರೋ ನೄಣಾಂ ಯಮೋಽಯಮಪಿ ಪಾರ್ಥಿವ।।

ನಾನು ಇಂದ್ರ. ಇವನು ಅಗ್ನಿ. ಮತ್ತು ಈತನು ಅಪಾಂಪತಿ. ಮತ್ತು ಪಾರ್ಥಿವ! ಇವನು ನೃಣರ ಶರೀರಾಂತಕರ ಯಮ.

03052005a ಸ ವೈ ತ್ವಮಾಗತಾನಸ್ಮಾನ್ದಮಯಂತ್ಯೈ ನಿವೇದಯ।
03052005c ಲೋಕಪಾಲಾಃ ಸಹೇಂದ್ರಾಸ್ತ್ವಾಂ ಸಮಾಯಾಂತಿ ದಿದೃಕ್ಷವಃ।।

ನೀನು “ನಾವು ಬಂದಿದ್ದೇವೆ!” ಎಂದು ದಮಯಂತಿಗೆ ಹೇಳು: “ಇಂದ್ರನೂ ಸೇರಿ ಲೋಕಪಾಲಕರು ನಿನ್ನನ್ನು ನೋಡುವ ಇಚ್ಛೆಯಿಂದ ಬರುತ್ತಿದ್ದಾರೆ.

03052006a ಪ್ರಾಪ್ತುಮಿಚ್ಚಂತಿ ದೇವಾಸ್ತ್ವಾಂ ಶಕ್ರೋಽಗ್ನಿರ್ವರುಣೋ ಯಮಃ।
03052006c ತೇಷಾಮನ್ಯತಮಂ ದೇವಂ ಪತಿತ್ವೇ ವರಯಸ್ವ ಹ।।

ದೇವತೆಗಳಾದ ಶಕ್ರ, ಅಗ್ನಿ, ವರುಣ ಮತ್ತು ಯಮ ನಿನ್ನನ್ನು ಹೊಂದಲು ಇಚ್ಛಿಸುತ್ತಾರೆ. ಈ ದೇವತೆಗಳಲ್ಲಿ ಒಬ್ಬರನ್ನು ನಿನ್ನ ಪತಿಯನ್ನಾಗಿ ವರಿಸು!”

03052007a ಏವಮುಕ್ತಃ ಸ ಶಕ್ರೇಣ ನಲಃ ಪ್ರಾಂಜಲಿರಬ್ರವೀತ್।
03052007c ಏಕಾರ್ಥಸಮವೇತಂ ಮಾಂ ನ ಪ್ರೇಷಯಿತುಮರ್ಹಥ।।

ಶಕ್ರನ ಈ ಮಾತುಗಳನ್ನು ಕೇಳಿದ ನಲನು ಅಂಜಲೀಬದ್ಧನಾಗಿ ಹೇಳಿದನು: “ಅದೇ ಉದ್ದೇಶವನ್ನಿಟ್ಟುಕೊಂಡು ಹೊರಟ ನನ್ನನ್ನು ಕಳುಹಿಸುವುದು ಸರಿಯೆನಿಸುವುದಿಲ್ಲ!”

03052008 ದೇವಾ ಊಚುಃ।
03052008a ಕರಿಷ್ಯ ಇತಿ ಸಂಶ್ರುತ್ಯ ಪೂರ್ವಮಸ್ಮಾಸು ನೈಷಧ।
03052008c ನ ಕರಿಷ್ಯಸಿ ಕಸ್ಮಾತ್ತ್ವಂ ವ್ರಜ ನೈಷಧ ಮಾಚಿರಂ।।

ದೇವತೆಗಳು ಹೇಳಿದರು: “ನೈಷಧ! ಮಾಡುತ್ತೇನೆ ಎಂದು ಮೊದಲೇ ನಮಗೆ ಮಾತು ಕೊಟ್ಟಿದ್ದೀಯೆ. ಈಗ ಏಕೆ ನೀನು ಹಾಗೆ ಮಾಡುವುದಿಲ್ಲ? ನೈಷಧ! ಹೋಗು, ತಡಮಾಡಬೇಡ.””

03052009 ಬೃಹದಶ್ವ ಉವಾಚ।
03052009a ಏವಮುಕ್ತಃ ಸ ದೇವೈಸ್ತೈರ್ನೈಷಧಃ ಪುನರಬ್ರವೀತ್।
03052009c ಸುರಕ್ಷಿತಾನಿ ವೇಶ್ಮಾನಿ ಪ್ರವೇಷ್ಟುಂ ಕಥಮುತ್ಸಹೇ।।

ಬೃಹದಶ್ವನು ಹೇಳಿದನು: “ಹೀಗೆ ಹೇಳಿದ ದೇವತೆಗಳಿಗೆ ನೈಷಧನು ಉತ್ತರಿಸಿದನು: “ಸುರಕ್ಷಿತ ಅರಮನೆಯನ್ನು ಹೇಗೆ ಪ್ರವೇಶಿಸಲು ಸಾದ್ಯ?”

03052010a ಪ್ರವೇಕ್ಷ್ಯಸೀತಿ ತಂ ಶಕ್ರಃ ಪುನರೇವಾಭ್ಯಭಾಷತ।
03052010c ಜಗಾಮ ಸ ತಥೇತ್ಯುಕ್ತ್ವಾ ದಮಯಂತ್ಯಾ ನಿವೇಶನಂ।।
03052011a ದದರ್ಶ ತತ್ರ ವೈದರ್ಭೀಂ ಸಖೀಗಣಸಮಾವೃತಾಂ।
03052011c ದೇದೀಪ್ಯಮಾನಾಂ ವಪುಷಾ ಶ್ರಿಯಾ ಚ ವರವರ್ಣಿನೀಂ।।

“ನೀನು ಪ್ರವೇಶಿಸುತ್ತೀಯೆ!” ಎಂದು ಶಕ್ರನು ಉತ್ತರಿಸಿದನು. “ಹಾಗೆಯೇ ಆಗಲಿ” ಎಂದು ಅವನು ದಮಯಂತಿಯ ನಿವೇಶನಕ್ಕೆ ಹೋದನು. ಅಲ್ಲಿ ಸಖೀಗಣದಿಂದ ಸಮಾವೃತಗೊಂಡ, ರೂಪದಿಂದ ದೇದೀಪ್ಯಮಾನಳಾದ, ವರವರ್ಣಿನೀ ವೈದರ್ಭಿಯನ್ನು ಕಂಡನು.

03052012a ಅತೀವ ಸುಕುಮಾರಾಂಗೀಂ ತನುಮಧ್ಯಾಂ ಸುಲೋಚನಾಂ।
03052012c ಆಕ್ಷಿಪಂತೀಮಿವ ಚ ಭಾಃ ಶಶಿನಃ ಸ್ವೇನ ತೇಜಸಾ।।

ಅತೀವ ಸುಕುಮಾರಾಂಗಿ ತನುಮಧ್ಯೆ ಸುಲೋಚನೆಯು ತನ್ನ ತೇಜಸ್ಸಿನಿಂದ ಶಶಿಯ ಕಿರಣಗಳನ್ನು ಹಿಡಿದಿಟ್ಟಹಾಗಿದ್ದಳು.

03052013a ತಸ್ಯ ದೃಷ್ಟ್ವೈವ ವವೃಧೇ ಕಾಮಸ್ತಾಂ ಚಾರುಹಾಸಿನೀಂ।
03052013c ಸತ್ಯಂ ಚಿಕೀರ್ಷಮಾಣಸ್ತು ಧಾರಯಾಮಾಸ ಹೃಚ್ಚಯಂ।।

ಆ ಚಾರುಹಾಸಿನಿಯನ್ನು ನೋಡಿದೊಡನೆಯೇ ಅವನಲ್ಲಿ ಕಾಮವು ವೃದ್ದಿಸಿತು; ಆದರೆ ಕೊಟ್ಟ ಮಾತನ್ನು ಸತ್ಯಮಾಡಲೋಸುಗ ಆಕರ್ಷಣೆಯನ್ನು ಹೃದಯದಲ್ಲಿಯೇ ಹಿಡಿದಿಟ್ಟುಕೊಂಡನು.

03052014a ತತಸ್ತಾ ನೈಷಧಂ ದೃಷ್ಟ್ವಾ ಸಂಭ್ರಾಂತಾಃ ಪರಮಾಂಗನಾಃ।
03052014c ಆಸನೇಭ್ಯಃ ಸಮುತ್ಪೇತುಸ್ತೇಜಸಾ ತಸ್ಯ ಧರ್ಷಿತಾಃ।।

ನೈಷಧನನ್ನು ನೋಡಿದ ಆ ಪರಮಾಂಗನೆಯರು ಸಂಭ್ರಾಂತರಾಗಿ, ಅವನ ತೇಜಸ್ಸಿನಿಂದ ಘರ್ಶಿತರಾಗಿ ತಮ್ಮ ತಮ್ಮ ಆಸನಗಳಿಂದ ಎದ್ದು ನಿಂತರು.

03052015a ಪ್ರಶಶಂಸುಶ್ಚ ಸುಪ್ರೀತಾ ನಲಂ ತಾ ವಿಸ್ಮಯಾನ್ವಿತಾಃ।
03052015c ನ ಚೈನಮಭ್ಯಭಾಷಂತ ಮನೋಭಿಸ್ತ್ವಭ್ಯಚಿಂತಯನ್।।

ಸುಪ್ರೀತರೂ ವಿಸ್ಮಯರೂ ಆದ ಅವರು ಅವನೊಡನೆ ಮಾತನಾಡದೇ, ತಮ್ಮ ಮನಸ್ಸಿನೊಳಗೆ ಅವನನ್ನು ಬಹಳಷ್ಟು ಪ್ರಶಂಸಿಸಿದರು.

03052016a ಅಹೋ ರೂಪಮಹೋ ಕಾಂತಿರಹೋ ಧೈರ್ಯಂ ಮಹಾತ್ಮನಃ।
03052016c ಕೋಽಯಂ ದೇವೋ ನು ಯಕ್ಷೋ ನು ಗಂಧರ್ವೋ ನು ಭವಿಷ್ಯತಿ।।

“ಆಹಾ ರೂಪವೇ! ಆಹಾ ಕಾಂತಿಯೇ! ಆಹಾ ಈ ಮಹಾತ್ಮನ ಧೈರ್ಯವೇ! ಇವನ್ನ್ಯಾರು? ದೇವನಿರಬಹುದೇ? ಯಕ್ಷನಿರಬಹುದೇ? ಅಥವಾ ಗಂಧರ್ವನಿರಬಹುದೇ?”

03052017a ನ ತ್ವೇನಂ ಶಕ್ನುವಂತಿ ಸ್ಮ ವ್ಯಾಹರ್ತುಮಪಿ ಕಿಂ ಚನ।
03052017c ತೇಜಸಾ ಧರ್ಷಿತಾಃ ಸರ್ವಾ ಲಜ್ಜಾವತ್ಯೋ ವರಾಂಗನಾಃ।।

ಅವರಲ್ಲಿ ಯಾರೂ ಒಂದು ಶಬ್ಧವನ್ನೂ ಮಾತನಾಡಲು ಶಕ್ಯರಿರಲಿಲ್ಲ. ಎಲ್ಲ ವರಾಂಗನೆಯರೂ ಅವನ ತೇಜಸ್ಸಿನಿಂದ ಘರ್ಶಿತರಾಗಿ ನಾಚಿಕೊಂಡಿದ್ದರು.

03052018a ಅಥೈನಂ ಸ್ಮಯಮಾನೇವ ಸ್ಮಿತಪೂರ್ವಾಭಿಭಾಷಿಣೀ।
03052018c ದಮಯಂತೀ ನಲಂ ವೀರಮಭ್ಯಭಾಷತ ವಿಸ್ಮಿತಾ।।

ಆದರೆ ವಿಸ್ಮಿತ ದಮಯಂತಿಯು ವೀರ ನಲನನ್ನುದ್ದೇಶಿಸಿ ಮಾತನಾಡಿದಳು:

03052019a ಕಸ್ತ್ವಂ ಸರ್ವಾನವದ್ಯಾಂಗ ಮಮ ಹೃಚ್ಚಯವರ್ಧನ।
03052019c ಪ್ರಾಪ್ತೋಽಸ್ಯಮರವದ್ವೀರ ಜ್ಞಾತುಮಿಚ್ಚಾಮಿ ತೇಽನಘ।।
03052020a ಕಥಮಾಗಮನಂ ಚೇಹ ಕಥಂ ಚಾಸಿ ನ ಲಕ್ಷಿತಃ।
03052020c ಸುರಕ್ಷಿತಂ ಹಿ ಮೇ ವೇಶ್ಮ ರಾಜಾ ಚೈವೋಗ್ರಶಾಸನಃ।।

“ನನ್ನ ಹೃದಯದ ಆಸೆಯನ್ನು ವೃದ್ಧಿಸುವ, ಸರ್ವಾನವದ್ಯಾಂಗ ನೀನು ಯಾರು? ವೀರ! ಒಬ್ಬ ಅಮರನಂತೆ ನೀನು ಇಲ್ಲಿಗೆ ಬಂದಿದ್ದೀಯೆ. ಅನಘ! ನೀನು ಯಾರಿಗೂ ಕಾಣದಂತೆ ಇಲ್ಲಿಗೆ ಹೇಗೆ ಆಗಮಿಸಿದೆ ಎಂದು ತಿಳಿಯಲು ಬಯಸುತ್ತೇನೆ. ಯಾಕೆಂದರೆ ನನ್ನ ಈ ಅರಮನೆಯು ಸುರಕ್ಷಿತವಾಗಿದೆ ಮತ್ತು ರಾಜನ ಉಗ್ರಶಾಸನವಿದೆ.”

03052021a ಏವಮುಕ್ತಸ್ತು ವೈದರ್ಭ್ಯಾ ನಲಸ್ತಾಂ ಪ್ರತ್ಯುವಾಚ ಹ।
03052021c ನಲಂ ಮಾಂ ವಿದ್ಧಿ ಕಲ್ಯಾಣಿ ದೇವದೂತಮಿಹಾಗತಂ।।

ವೈದರ್ಭಿಯ ಈ ಮಾತುಗಳಿಗೆ ನಲನು ಉತ್ತರಿಸಿದನು: “ಕಲ್ಯಾಣಿ! ನನ್ನನ್ನು ನಲನೆಂದು ತಿಳಿ. ದೇವದೂತನಾಗಿ ಇಲ್ಲಿಗೆ ಆಗಮಿಸಿದ್ದೇನೆ.

03052022a ದೇವಾಸ್ತ್ವಾಂ ಪ್ರಾಪ್ತುಮಿಚ್ಚಂತಿ ಶಕ್ರೋಽಗ್ನಿರ್ವರುಣೋ ಯಮಃ।
03052022c ತೇಷಾಮನ್ಯತಮಂ ದೇವಂ ಪತಿಂ ವರಯ ಶೋಭನೇ।।
03052023a ತೇಷಾಮೇವ ಪ್ರಭಾವೇನ ಪ್ರವಿಷ್ಟೋಽಹಮಲಕ್ಷಿತಃ।
03052023c ಪ್ರವಿಶಂತಂ ಹಿ ಮಾಂ ಕಶ್ಚಿನ್ನಾಪಶ್ಯನ್ನಾಪ್ಯವಾರಯತ್।।

ದೇವತೆಗಳು ನಿನ್ನನ್ನು ಹೊಂದಲು ಇಚ್ಛಿಸುವರು - ಶಕ್ರ, ಅಗ್ನಿ, ವರುಣ ಮತ್ತು ಯಮ. ಶೋಭನೆ! ಈ ದೇವರುಗಳಲ್ಲಿ ಯಾರಾದರೂ ಒಬ್ಬನನ್ನು ಪತಿಯಾಗಿ ವರಿಸು. ಅವರ ಪ್ರಭಾವದಿಂದಲೇ ನಾನು ಇಲ್ಲಿಗೆ ಯಾರಿಗೂ ಕಾಣಿಸಿಕೊಳ್ಳದೇ ಪ್ರವೇಶಿಸಿದ್ದೇನೆ. ನಾನು ಪ್ರವೇಶಿಸುವಾಗ ಯಾರೂ ನನ್ನನ್ನು ನೋಡಲಿಲ್ಲ ಮತ್ತು ತಡೆಯಲಿಲ್ಲ.

03052024a ಏತದರ್ಥಮಹಂ ಭದ್ರೇ ಪ್ರೇಷಿತಃ ಸುರಸತ್ತಮೈಃ।
03052024c ಏತಚ್ಛೃತ್ವಾ ಶುಭೇ ಬುದ್ಧಿಂ ಪ್ರಕುರುಷ್ವ ಯಥೇಚ್ಚಸಿ।।

ಭದ್ರೇ! ಈ ಉದ್ದೇಶಕ್ಕೋಸ್ಕರವೇ ಸುರಸತ್ತಮರಿಂದ ನಾನು ಕಳುಹಿಸಲ್ಪಟ್ಟಿದ್ದೇನೆ. ಶುಭೇ! ಇದನ್ನು ಕೇಳಿದನಂತರ ನಿನಗೆ ಇಷ್ಟಬಂದಹಾಗೆ ಮಾಡು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಸ್ಯ ದೇವದೌತ್ಯೇ ದ್ವಿಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲನ ದೇವದೌತ್ಯ ಎನ್ನುವ ಐವತ್ತೆರಡನೆಯ ಅಧ್ಯಾಯವು.