ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 50
ಸಾರ
ನಲ ಮತ್ತು ದಮಯಂತಿಯರ ನಡುವೆ, ಪರಸ್ಪರರನ್ನು ನೋಡಿರದೇ ಇದ್ದರೂ, ಇತರರಿಂದ ಪರಸ್ಪರರ ಗುಣಗಳನ್ನು ಕೇಳಿ ಕಾಮವು ಬೆಳೆದಿದ್ದುದು (1-16). ಹಂಸವೊಂದು ನಲನ ಸಂದೇಶವನ್ನು ದಮಯಂತಿಗೆ ತಲುಪಿಸಿ, ಪ್ರೀತಿಯನ್ನು ವೃದ್ಧಿಸಿದುದು (17-31).
03050001 ಬೃಹದಶ್ವ ಉವಾಚ।
03050001a ಆಸೀದ್ರಾಜಾ ನಲೋ ನಾಮ ವೀರಸೇನಸುತೋ ಬಲೀ।
03050001c ಉಪಪನ್ನೋ ಗುಣೈರಿಷ್ಟೈ ರೂಪವಾನಶ್ವಕೋವಿದಃ।।
03050002a ಅತಿಷ್ಠನ್ಮನುಜೇಂದ್ರಾಣಾಂ ಮೂರ್ಧ್ನಿ ದೇವಪತಿರ್ಯಥಾ।
03050002c ಉಪರ್ಯುಪರಿ ಸರ್ವೇಷಾಮಾದಿತ್ಯ ಇವ ತೇಜಸಾ।।
ಬೃಹದಶ್ವನು ಹೇಳಿದನು: “ವೀರಸೇನನ ಬಲಶಾಲಿ ಮಗ, ಎಲ್ಲಾ ಸದ್ಗುಣ ಸಂಪನ್ನ, ರೂಪವಂತ, ಅಶ್ವಕೋವಿದ, ದೇವಪತಿಯಂತೆ ಮನುಜೇಂದ್ರರೆಲ್ಲರ ಮೇಲ್ಪಟ್ಟ, ಅವರೆಲ್ಲರಿಗಿಂತ ತೇಜಸ್ಸಿನಲ್ಲಿ ಸೂರ್ಯನಂತೆ ಶೋಭಿಸುತ್ತಿದ್ದ ನಲ ಎಂಬ ಹೆಸರಿನ ಒಬ್ಬ ರಾಜನಿದ್ದನು.
03050003a ಬ್ರಹ್ಮಣ್ಯೋ ವೇದವಿಚ್ಛೂರೋ ನಿಷಧೇಷು ಮಹೀಪತಿಃ।
03050003c ಅಕ್ಷಪ್ರಿಯಃ ಸತ್ಯವಾದೀ ಮಹಾನಕ್ಷೌಹಿಣೀಪತಿಃ।।
ಶೂರನೂ, ಬ್ರಹ್ಮಜ್ಞನೂ, ವೇದಪಾರಂಗತನೂ, ಸತ್ಯವಾದಿಯೂ, ಮಹಾ ಅಕ್ಷೌಹಿಣಿಪತಿಯೂ ಆದ ಈ ನಿಷಧ ಮಹೀಪತಿಯು ಜೂಜಿನಲ್ಲಿ ಪ್ರೀತಿ ಹೊಂದಿದ್ದನು.
03050004a ಈಪ್ಸಿತೋ ವರನಾರೀಣಾಮುದಾರಃ ಸಮ್ಯತೇಂದ್ರಿಯಃ।
03050004c ರಕ್ಷಿತಾ ಧನ್ವಿನಾಂ ಶ್ರೇಷ್ಠಃ ಸಾಕ್ಷಾದಿವ ಮನುಃ ಸ್ವಯಂ।।
ಸುಂದರ ನಾರಿಯರೆಲ್ಲರೂ ಆಸೆ ಪಡುವಂತಿದ್ದ ಅವನು ಉದಾರನೂ, ಇಂದ್ರಿಯಸಂಯಮನೂ ಆಗಿದ್ದು, ಧನುರ್ಧಾರಿಗಳಲ್ಲಿ ಶ್ರೇಷ್ಠನೂ, ಎಲ್ಲರ ರಕ್ಷಕನೂ ಆಗಿ ಸ್ವತಃ ಸಾಕ್ಷಾತ್ ಮನುವಿನಂತಿದ್ದನು.
03050005a ತಥೈವಾಸೀದ್ವಿದರ್ಭೇಷು ಭೀಮೋ ಭೀಮಪರಾಕ್ರಮಃ।
03050005c ಶೂರಃ ಸರ್ವಗುಣೈರ್ಯುಕ್ತಃ ಪ್ರಜಾಕಾಮಃ ಸ ಚಾಪ್ರಜಃ।।
ಹಾಗೆಯೇ ವಿದರ್ಭದಲ್ಲಿ ಶೂರನೂ, ಸರ್ವಗುಣಯುಕ್ತನೂ, ಭೀಮಪರಾಕ್ರಮಿಯೂ, ಸಂತಾನವಿಲ್ಲದೆ, ಸಂತಾನವನ್ನು ಬಯಸುತ್ತಿದ್ದ ಭೀಮ ಎನ್ನುವ ರಾಜನಿದ್ದನು.
03050006a ಸ ಪ್ರಜಾರ್ಥೇ ಪರಂ ಯತ್ನಮಕರೋತ್ಸುಸಮಾಹಿತಃ।
03050006c ತಮಭ್ಯಗಚ್ಚದ್ಬ್ರಹ್ಮರ್ಷಿರ್ದಮನೋ ನಾಮ ಭಾರತ।।
03050007a ತಂ ಸ ಭೀಮಃ ಪ್ರಜಾಕಾಮಸ್ತೋಷಯಾಮಾಸ ಧರ್ಮವಿತ್।
03050007c ಮಹಿಷ್ಯಾ ಸಹ ರಾಜೇಂದ್ರ ಸತ್ಕಾರೇಣ ಸುವರ್ಚಸಂ।।
ಅವನು ಸಂತಾನಕ್ಕೋಸ್ಕರ ನಿರಂತರ ಪರಮ ಯತ್ನವನ್ನು ಮಾಡಿದನು. ಭಾರತ! ಆಗ ದಮನ ಎಂಬ ಹೆಸರಿನ ಬ್ರಹ್ಮರ್ಷಿಯೊಬ್ಬನು ಅವನಲ್ಲಿಗೆ ಆಗಮಿಸಿದನು. ಆ ದರ್ಮವಿತ್ತ, ಪ್ರಜಾಕಾಮಿ ರಾಜೇಂದ್ರ ಭೀಮನು ತನ್ನ ಮಹಿಷಿಯೊಡಗೊಂಡು ಆ ಸುವರ್ಚಸನನ್ನು ಸತ್ಕರಿಸಿದನು.
03050008a ತಸ್ಮೈ ಪ್ರಸನ್ನೋ ದಮನಃ ಸಭಾರ್ಯಾಯ ವರಂ ದದೌ।
03050008c ಕನ್ಯಾರತ್ನಂ ಕುಮಾರಾಂಶ್ಚ ತ್ರೀನುದಾರಾನ್ಮಹಾಯಶಾಃ।।
03050009a ದಮಯಂತೀಂ ದಮಂ ದಾಂತಂ ದಮನಂ ಚ ಸುವರ್ಚಸಂ।
03050009c ಉಪಪನ್ನಾನ್ಗುಣೈಃ ಸರ್ವೈರ್ಭೀಮಾನ್ಭೀಮಪರಾಕ್ರಮಾನ್।।
ಅದರಿಂದ ಪ್ರಸನ್ನನಾದ ದಮನನು ರಾಜ-ರಾಣಿಯರಿಗೆ ವರವನ್ನಿತ್ತನು: ಒಂದು ಕನ್ಯಾರತ್ನ - ದಮಯಂತಿ, ಮತ್ತು ಮಹಾಯಶರೂ, ಉದಾರರೂ ಆದ ಮೂವರು ಕುಮಾರರು - ದಮ, ದಾಂತ, ಮತ್ತು ಸುವರ್ಚಸಿಯಾದ ದಮನ. ಇವರೆಲ್ಲರೂ ಗುಣಸಂಪನ್ನರೂ, ಘೋರರೂ, ಘೋರಪರಾಕ್ರಮಿಗಳೂ ಆಗಿದ್ದರು.
03050010a ದಮಯಂತೀ ತು ರೂಪೇಣ ತೇಜಸಾ ಯಶಸಾ ಶ್ರಿಯಾ।
03050010c ಸೌಭಾಗ್ಯೇನ ಚ ಲೋಕೇಷು ಯಶಃ ಪ್ರಾಪ ಸುಮಧ್ಯಮಾ।।
ಸುಮಧ್ಯಮೆ ದಮಯಂತಿಯು ರೂಪ, ತೇಜಸ್ಸು, ಯಶಸ್ಸು, ಸೌಂದರ್ಯ ಮತ್ತು ಸೌಭಾಗ್ಯಗಳಲ್ಲಿ ಲೋಕಗಳಲ್ಲೆಲ್ಲಾ ಪ್ರಸಿದ್ಧಳಾಗಿದ್ದಳು.
03050011a ಅಥ ತಾಂ ವಯಸಿ ಪ್ರಾಪ್ತೇ ದಾಸೀನಾಂ ಸಮಲಂಕೃತಂ।
03050011c ಶತಂ ಸಖೀನಾಂ ಚ ತಥಾ ಪರ್ಯುಪಾಸ್ತೇ ಶಚೀಮಿವ।।
ವಯಸ್ಸಿಗೆ ಬಂದ ಅವಳನ್ನು ಒಂದು ನೂರು ಸಮಲಂಕೃತ ಸಖಿಯರು, ಶಚಿಯಂತೆ ಸುತ್ತುವರೆಯುತ್ತಿದ್ದರು.
03050012a ತತ್ರ ಸ್ಮ ಭ್ರಾಜತೇ ಭೈಮೀ ಸರ್ವಾಭರಣಭೂಷಿತಾ।
03050012c ಸಖೀಮಧ್ಯೇಽನವದ್ಯಾಂಗೀ ವಿದ್ಯುತ್ಸೌದಾಮಿನೀ ಯಥಾ।।
03050012e ಅತೀವ ರೂಪಸಂಪನ್ನಾ ಶ್ರೀರಿವಾಯತಲೋಚನಾ।
03050013a ನ ದೇವೇಷು ನ ಯಕ್ಷೇಷು ತಾದೃಗ್ರೂಪವತೀ ಕ್ವ ಚಿತ್।।
03050013c ಮಾನುಷೇಷ್ವಪಿ ಚಾನ್ಯೇಷು ದೃಷ್ಟಪೂರ್ವಾ ನ ಚ ಶ್ರುತಾ।
03050013e ಚಿತ್ತಪ್ರಮಾಥಿನೀ ಬಾಲಾ ದೇವಾನಾಮಪಿ ಸುಂದರೀ।।
ತನ್ನ ಸಖಿಯರ ಮಧ್ಯದಲ್ಲಿ, ಅನವದ್ಯಾಂಗಿ, ಸರ್ವಾಭರಣಭೂಷಿತೆ ಪುಷ್ಪಗಳಿಂದಲಂಕೃತ ಭೈಮಿಯು ಮಿಂಚಿನಂತೆ ಶೋಭಿಸುತ್ತಿದ್ದಳು. ಆ ಆಯತ ಲೋಚನೆಯು ಲಕ್ಷ್ಮಿಯಂತೆ ಅತೀವ ರೂಪಸಂಪನ್ನಳಾಗಿದ್ದಳು. ಇದಕ್ಕೂ ಪೂರ್ವದಲ್ಲಿ ದೇವ, ಯಕ್ಷ ಅಥವಾ ಮನುಷ್ಯರಲ್ಲಿ ಇಷ್ಟೊಂದು ರೂಪವತಿಯನ್ನು ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ. ಆ ಸುಂದರ ಬಾಲಕಿಯು ದೇವತೆಗಳ ಚಿತ್ತವನ್ನೂ ಕಡೆಯುತ್ತಿದ್ದಳು.
03050014a ನಲಶ್ಚ ನರಶಾರ್ದೂಲೋ ರೂಪೇಣಾಪ್ರತಿಮೋ ಭುವಿ।
03050014c ಕಂದರ್ಪ ಇವ ರೂಪೇಣ ಮೂರ್ತಿಮಾನಭವತ್ಸ್ವಯಂ।।
ನರಶಾರ್ದೂಲ ನಲನು ರೂಪದಲ್ಲಿ ಭುವಿಯಲ್ಲೇ ಅಪ್ರತಿಮನಾಗಿದ್ದನು, ಮತ್ತು ರೂಪದಲ್ಲಿ ಕಂದರ್ಪನೇ ಸ್ವಯಂ ಅವತರಿಸಿದಂತಿದ್ದನು.
03050015a ತಸ್ಯಾಃ ಸಮೀಪೇ ತು ನಲಂ ಪ್ರಶಶಂಸುಃ ಕುತೂಹಲಾತ್।
03050015c ನೈಷಧಸ್ಯ ಸಮೀಪೇ ತು ದಮಯಂತೀಂ ಪುನಃ ಪುನಃ।।
ಜನರು ಕುತೂಹಲದಿಂದ ದಮಯಂತಿಯ ಸಮೀಪದಲ್ಲಿ ನಲನನ್ನು ಪ್ರಶಂಸಿಸುತ್ತಿದ್ದರು; ಮತ್ತು ನೈಷಧನ ಸಮೀಪದಲ್ಲಿ ಪುನಃ ಪುನಃ ಅವಳನ್ನು ಪ್ರಶಂಸಿಸುತ್ತಿದ್ದರು.
03050016a ತಯೋರದೃಷ್ಟಕಾಮೋಽಭೂಚ್ಛೃಣ್ವತೋಃ ಸತತಂ ಗುಣಾನ್।
03050016c ಅನ್ಯೋನ್ಯಂ ಪ್ರತಿ ಕೌಂತೇಯ ಸ ವ್ಯವರ್ಧತ ಹೃಚ್ಚಯಃ।।
ಕೌಂತೇಯ! ಹೀಗೆ ಸತತವಾಗಿ ಪರಸ್ಪರರ ಗುಣಗಳನ್ನು ಕೇಳುತ್ತಿದ್ದಂತೆ, ಇನ್ನೂ ನೋಡದಿರದ ಆ ವ್ಯಕ್ತಿಯ ಕುರಿತು ಕಾಮ ಬೆಳೆಯಿತು ಮತ್ತು ಅವರ ಹೃದಯಗಳಲ್ಲಿ ಪರಸ್ಪರರಿಗೆ ಪ್ರೀತಿ ವರ್ಧಿಸಿತು.
03050017a ಅಶಕ್ನುವನ್ನಲಃ ಕಾಮಂ ತದಾ ಧಾರಯಿತುಂ ಹೃದಾ।
03050017c ಅಂತಃಪುರಸಮೀಪಸ್ಥೇ ವನ ಆಸ್ತೇ ರಹೋಗತಃ।।
ಒಮ್ಮೆ ಈ ಕಾಮವನ್ನು ಹೃದಯದಲ್ಲೇ ಸಹಿಸಿಟ್ಟುಕೊಳ್ಳಲು ಅಸಮರ್ಥನಾದ ನಲನು ಯಾರಿಗೂ ತಿಳಿಯದಂತೆ ಅಂತಃಪುರದ ಸಮೀಪದ ವನದಲ್ಲಿ ಹೋಗಿ ಕುಳಿತುಕೊಂಡಿದ್ದನು.
03050018a ಸ ದದರ್ಶ ತದಾ ಹಂಸಾಂ ಜಾತರೂಪಪರಿಚ್ಚದಾನ್।
03050018c ವನೇ ವಿಚರತಾಂ ತೇಷಾಮೇಕಂ ಜಗ್ರಾಹ ಪಕ್ಷಿಣಂ।।
ಅಲ್ಲಿ ಅವನು ಬಂಗಾರದ ಹೊದಿಕೆಹೊಂದಿದ್ದ ಹಂಸಗಳನ್ನು ನೋಡಿದನು ಮತ್ತು ವನದಲ್ಲಿ ಓಡಾಡುತ್ತಿದ್ದ ಆ ಪಕ್ಷಿಗಳಲ್ಲಿ ಒಂದನ್ನು ಹಿಡಿದನು.
03050019a ತತೋಽಂತರಿಕ್ಷಗೋ ವಾಚಂ ವ್ಯಾಜಹಾರ ತದಾ ನಲಂ।
03050019c ನ ಹಂತವ್ಯೋಽಸ್ಮಿ ತೇ ರಾಜನ್ಕರಿಷ್ಯಾಮಿ ಹಿ ತೇ ಪ್ರಿಯಂ।।
ಆಗ ಆ ಅಂತರಿಕ್ಷಗನು ನಲನಿಗೆ ಕೂಗಿ ಹೇಳಿದನು: “ರಾಜ! ನನ್ನನ್ನು ಕೊಲ್ಲಬೇಡ. ನಿನಗೆ ಪ್ರಿಯವಾದದ್ದನ್ನು ನಾನು ಮಾಡಿಕೊಡುತ್ತೇನೆ.
03050020a ದಮಯಂತೀಸಕಾಶೇ ತ್ವಾಂ ಕಥಯಿಷ್ಯಾಮಿ ನೈಷಧ।
03050020c ಯಥಾ ತ್ವದನ್ಯಂ ಪುರುಷಂ ನ ಸಾ ಮಂಸ್ಯತಿ ಕರ್ಹಿ ಚಿತ್।।
ನೈಷಧ! ದಮಯಂತಿಯ ಸಮಕ್ಷಮದಲ್ಲಿ, ಅವಳು ನಿನ್ನ ಹೊರತಾಗಿ ಬೇರೆ ಯಾವ ಪುರುಷನ ಕುರಿತೂ ಯೋಚಿಸದ ಹಾಗೆ, ನಿನ್ನ ಕುರಿತು ಅವಳಿಗೆ ಹೇಳುತ್ತೇನೆ.”
03050021a ಏವಮುಕ್ತಸ್ತತೋ ಹಂಸಮುತ್ಸಸರ್ಜ ಮಹೀಪತಿಃ।
03050021c ತೇ ತು ಹಂಸಾಃ ಸಮುತ್ಪತ್ಯ ವಿದರ್ಭಾನಗಮಂಸ್ತತಃ।।
ಈ ಮಾತುಗಳನ್ನು ಕೇಳಿ ಮಹೀಪತಿಯು ಆ ಹಂಸವನ್ನು ಬಿಡುಗಡೆಮಾಡಿದನು ಮತ್ತು ಹಂಸಗಳೆಲ್ಲವೂ ಮೇಲೆ ಹಾರಿ ವಿದರ್ಭದ ಕಡೆ ಹೋದವು.
03050022a ವಿದರ್ಭನಗರೀಂ ಗತ್ವಾ ದಮಯಂತ್ಯಾಸ್ತದಾಂತಿಕೇ।
03050022c ನಿಪೇತುಸ್ತೇ ಗರುತ್ಮಂತಃ ಸಾ ದದರ್ಶಾಥ ತಾನ್ಖಗಾನ್।।
ಆ ಗುರುತ್ಮಂತಗಳು ವಿದರ್ಭನಗರಕ್ಕೆ ಹೋಗಿ ಅಲ್ಲಿ ದಮಯಂತಿಯ ಬಳಿಗೆ ಬಂದಿಳಿದವು ಮತ್ತು ಅವಳು ಆ ಪಕ್ಷಿಗಳನ್ನು ನೋಡಿದಳು.
03050023a ಸಾ ತಾನದ್ಭುತರೂಪಾನ್ವೈ ದೃಷ್ಟ್ವಾ ಸಖಿಗಣಾವೃತಾ।
03050023c ಹೃಷ್ಟಾ ಗ್ರಹೀತುಂ ಖಗಮಾಂಸ್ತ್ವರಮಾಣೋಪಚಕ್ರಮೇ।।
03050024a ಅಥ ಹಂಸಾ ವಿಸಸೃಪುಃ ಸರ್ವತಃ ಪ್ರಮದಾವನೇ।
03050024c ಏಕೈಕಶಸ್ತತಃ ಕನ್ಯಾಸ್ತಾನ್ ಹಂಸಾನ್ಸಮುಪಾದ್ರವನ್।।
ಆ ಅದ್ಭುತ ರೂಪಿಗಳನ್ನು ನೋಡಿ ಸಖೀಗಣಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವಳು ಹರ್ಷದಿಂದ ಪಕ್ಷಿಗಳನ್ನು ಹಿಡಿಯಲೋಸುಗ ಅವುಗಳನ್ನು ಬೆನ್ನಟ್ಟಿದಳು. ಎಲ್ಲ ಸಖಿಯರೂ ಒಬ್ಬೊಬ್ಬರು ಅವರವರ ಹಂಸಗಳನ್ನು ಹಿಡಿಯಲು ಬೆನ್ನಟ್ಟಿದರು.
03050025a ದಮಯಂತೀ ತು ಯಂ ಹಂಸಂ ಸಮುಪಾಧಾವದಂತಿಕೇ।
03050025c ಸ ಮಾನುಷೀಂ ಗಿರಂ ಕೃತ್ವಾ ದಮಯಂತೀಮಥಾಬ್ರವೀತ್।।
ಆದರೆ ದಮಯಂತಿಯು ಅನುಸರಿಸುತ್ತಿದ್ದ ಹಂಸವು ಅವಳು ಸಮೀಪ ಬರುತ್ತಿದ್ದಂತಯೇ ಮನುಷ್ಯಧ್ವನಿಯನ್ನು ಧರಿಸಿ ದಮಯಂತಿಯನ್ನುದ್ದೇಶಿಸಿ ಮಾತನಾಡಿತು:
03050026a ದಮಯಂತಿ ನಲೋ ನಾಮ ನಿಷಧೇಷು ಮಹೀಪತಿಃ।
03050026c ಅಶ್ವಿನೋಃ ಸದೃಶೋ ರೂಪೇ ನ ಸಮಾಸ್ತಸ್ಯ ಮಾನುಷಾಃ।।
“ದಮಯಂತಿ! ನಿಷಧದಲ್ಲಿ ನಲ ಎಂಬ ಹೆಸರಿನ ರಾಜನಿದ್ದಾನೆ. ಅವನು ಅಶ್ವಿನಿಯರ ಸದೃಶನಾಗಿದ್ದಾನೆ ಮತ್ತು ಮನುಷ್ಯರಲ್ಲೇ ರೂಪದಲ್ಲಿ ಅವನ ಸರಿಸಾಟಿಯಾದವರು ಯಾರೂ ಇಲ್ಲ.
03050027a ತಸ್ಯ ವೈ ಯದಿ ಭಾರ್ಯಾ ತ್ವಂ ಭವೇಥಾ ವರವರ್ಣಿನಿ।
03050027c ಸಫಲಂ ತೇ ಭವೇಜ್ಜನ್ಮ ರೂಪಂ ಚೇದಂ ಸುಮಧ್ಯಮೇ।।
ವರವರ್ಣಿನೀ! ಒಂದುವೇಳೆ ನೀನು ಅವನ ಭಾರ್ಯೆಯಾದೆ ಎಂದರೆ ನಿನ್ನ ಈ ರೂಪ ಮತ್ತು ಜನ್ಮ ಸಾರ್ಥಕವಾದಂತಾಗುತ್ತದೆ.
03050028a ವಯಂ ಹಿ ದೇವಗಂಧರ್ವಮನುಷ್ಯೋರಗರಾಕ್ಷಸಾನ್।
03050028c ದೃಷ್ಟವಂತೋ ನ ಚಾಸ್ಮಾಭಿರ್ದೃಷ್ಟಪೂರ್ವಸ್ತಥಾವಿಧಃ।।
ನಾವು ದೇವತೆ, ಗಂಧರ್ವ, ಮನುಷ್ಯ, ಉರಗ ಮತ್ತು ರಾಕ್ಷಸರನ್ನು ನೋಡಿದ್ದೇವೆ. ಆದರೆ ಇವನಂತವನನ್ನು ಇದೂವರೆಗೂ ಯಾರಲ್ಲಿಯೂ ಕಂಡಿಲ್ಲ.
03050029a ತ್ವಂ ಚಾಪಿ ರತ್ನಂ ನಾರೀಣಾಂ ನರೇಷು ಚ ನಲೋ ವರಃ।
03050029c ವಿಶಿಷ್ಟಾಯಾ ವಿಶಿಷ್ಟೇನ ಸಂಗಮೋ ಗುಣವಾನ್ಭವೇತ್।।
ನೀನೂ ಕೂಡ ನಾರಿಯರಲ್ಲಿ ರತ್ನದಂತಿದ್ದೀಯೆ. ಮತ್ತು ನಲನು ನರರಲಿಯೇ ಶ್ರೇಷ್ಟನಾಗಿದ್ದಾನೆ. ವಿಶಿಷ್ಟವಾದ ವ್ಯಕ್ತಿಯ ಸಂಗಮವು ವಿಶಿಷ್ಟವಾದ ವ್ಯಕ್ತಿಯೊಡನೆ ಆಯಿತೆಂದರೆ ಒಳ್ಳೆಯದೇ ಆಗುತ್ತದೆ.”
03050030a ಏವಮುಕ್ತಾ ತು ಹಂಸೇನ ದಮಯಂತೀ ವಿಶಾಂ ಪತೇ।
03050030c ಅಬ್ರವೀತ್ತತ್ರ ತಂ ಹಂಸಂ ತಮಪ್ಯೇವಂ ನಲಂ ವದ।।
ವಿಶಾಂಪತೇ! ಹಂಸದ ಈ ಮಾತುಗಳನ್ನು ಕೇಳಿ ದಮಯಂತಿಯು ಆ ಹಂಸಕ್ಕೆ “ನಲನಿಗೂ ಇದೇ ರೀತಿ ಹೇಳು” ಎಂದಳು.
03050031a ತಥೇತ್ಯುಕ್ತ್ವಾಂಡಜಃ ಕನ್ಯಾಂ ವೈದರ್ಭಸ್ಯ ವಿಶಾಂ ಪತೇ।
03050031c ಪುನರಾಗಮ್ಯ ನಿಷಧಾನ್ನಲೇ ಸರ್ವಂ ನ್ಯವೇದಯತ್।।
ವಿಶಾಂಪತೇ! ಆ ಪಕ್ಷಿಯು ವೈದರ್ಭಿಗೆ “ಹಾಗೆಯೇ ಮಾಡುತ್ತೇನೆ!” ಎಂದು ವಚನವನ್ನಿತ್ತು, ನಿಷಧಕ್ಕೆ ಮರಳಿ, ನಲನಿಗೆ ಸರ್ವವನ್ನೂ ವರದಿಮಾಡಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಹಂಸದಮಯಂತೀಸಂವಾದೇ ಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಹಂಸದಮಯಂತೀಸಂವಾದ ಎನ್ನುವ ಐವತ್ತನೆಯ ಅಧ್ಯಾಯವು.