049

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 491

ಸಾರ

ಅರ್ಜುನನನ್ನು ಅಗಲಿ ದುಃಖಿತರಾಗಿ ಪಾಂಡವರು ಕುಳಿತುಕೊಂಡಿರುವಾಗ ಭೀಮನು ದುರ್ಯೋಧನನನ್ನು ಆಕ್ರಮಣ ಮಾಡಿ ರಾಜ್ಯವನ್ನು ಹಿಂದೆ ತೆಗೆದು ಕೊಳ್ಳಲು ಇದೇ ಸಮಯವೆಂದು ಪುನಃ ಯುಧಿಷ್ಠಿರನಿಗೆ ಹೇಳುವುದು (1-24). ಯುಧಿಷ್ಠಿರನು ಹದಿಮೂರು ವರ್ಷಗಳು ಕಳೆದನಂತರ ಅದನ್ನು ಮಾಡಬಹುದು ಎಂದು ಹೇಳುವುದು (25-28). ಅಷ್ಟರಲ್ಲಿ ಅಲ್ಲಿಗೆ ಮಹರ್ಷಿ ಬೃಹದಶ್ವನ ಆಗಮನ, ಸ್ವಾಗತ ಸತ್ಕಾರ (29-31). ತನಗಿಂತಲೂ ಹೆಚ್ಚು ದುಃಖವನ್ನು ಅನುಭವಿಸಿದ ಬೇರೆ ಯಾರಾದರೂ ಇದ್ದಾರೆಯೇ ಎಂದು ಯುಧಿಷ್ಠಿರನು ಕೇಳಲು (32-34), ಬೃಹದಶ್ವನು ನಲನ ಚರಿತ್ರವನ್ನು ಪ್ರಾರಂಭಿಸಿದುದು (35-43).

03049001 ಜನಮೇಜಯ ಉವಾಚ।
03049001a ಅಸ್ತ್ರಹೇತೋರ್ಗತೇ ಪಾರ್ಥೇ ಶಕ್ರಲೋಕಂ ಮಹಾತ್ಮನಿ।
03049001c ಯುಧಿಷ್ಠಿರಪ್ರಭೃತಯಃ ಕಿಮಕುರ್ವಂತ ಪಾಂಡವಾಃ।।

ಜನಮೇಜಯನು ಹೇಳಿದನು: “ಮಹಾತ್ಮ ಪಾರ್ಥನು ಆಸ್ತ್ರಗಳಿಗೋಸ್ಕರ ಶಕ್ರಲೋಕಕ್ಕೆ ಹೋದ ಬಳಿಕ ಯುಧಿಷ್ಠಿರನೇ ಮೊದಲಾದ ಪಾಂಡವರು ಏನು ಮಾಡಿದರು?”

03049002 ವೈಶಂಪಾಯನ ಉವಾಚ।
03049002a ಅಸ್ತ್ರಹೇತೋರ್ಗತೇ ಪಾರ್ಥೇ ಶಕ್ರಲೋಕಂ ಮಹಾತ್ಮನಿ।
03049002c ನ್ಯವಸನ್ಕೃಷ್ಣಯಾ ಸಾರ್ಧಂ ಕಾಮ್ಯಕೇ ಪುರುಷರ್ಷಭಾಃ।।

ವೈಶಂಪಾಯನನು ಹೇಳಿದನು: “ಮಹಾತ್ಮ ಪಾರ್ಥನು ಅಸ್ತ್ರಗಳಿಗೋಸ್ಕರ ಶಕ್ರಲೋಕಕ್ಕೆ ಹೋದ ಬಳಿಕ ಆ ಪುರುಷರ್ಷಭರು ಕೃಷ್ಣೆಯಿಂದೊಡಗೂಡಿ ಕಾಮ್ಯಕ ವನದಲ್ಲಿ ವಾಸಿಸಿದರು.

03049003a ತತಃ ಕದಾ ಚಿದೇಕಾಂತೇ ವಿವಿಕ್ತ ಇವ ಶಾದ್ವಲೇ।
03049003c ದುಃಖಾರ್ತಾ ಭರತಶ್ರೇಷ್ಠಾ ನಿಷೇದುಃ ಸಹ ಕೃಷ್ಣಯಾ।।
03049003e ಧನಂಜಯಂ ಶೋಚಮಾನಾಃ ಸಾಶ್ರುಕಂಠಾಃ ಸುದುಃಖಿತಾಃ।
03049004a ತದ್ವಿಯೋಗಾದ್ಧಿ ತಾನ್ಸರ್ವಾಂ ಶೋಕಃ ಸಮಭಿಪುಪ್ಲುವೇ।।
03049004c ಧನಂಜಯವಿಯೋಗಾಚ್ಚ ರಾಜ್ಯನಾಶಾಚ್ಚ ದುಃಖಿತಾಃ।

ಒಂದು ದಿನ ಆ ಭರತಶ್ರೇಷ್ಠರು ಕೃಷ್ಣೆಯೊಂದಿಗೆ ನಿರ್ಜನ ಹುಲ್ಲುಗಾವಲಿನಲ್ಲಿ ದುಖಾರ್ತರಾಗಿ ಕುಳಿತಿದ್ದರು. ಅವರೆಲ್ಲರೂ ಧನಂಜಯನ ಕುರಿತು ಶೋಕಿಸುತ್ತಾ, ಧನಂಜಯನ ಅಗಲಿಕೆ ಮತ್ತು ತಮ್ಮ ರಾಜ್ಯನಾಶದ ಕುರಿತು ಯೋಜಿಸುತ್ತಾ ಅಶ್ರುಕಂಠರಾಗಿ ಶೋಕಸಾಗರದಲ್ಲಿ ಮುಳುಗಿದ್ದರು.

03049005a ಅಥ ಭೀಮೋ ಮಹಾಬಾಹುರ್ಯುಧಿಷ್ಠಿರಮಭಾಷತ।।
03049005c ನಿದೇಶಾತ್ತೇ ಮಹಾರಾಜ ಗತೋಽಸೌ ಪುರುಷರ್ಷಭಃ।
03049005e ಅರ್ಜುನಃ ಪಾಂಡುಪುತ್ರಾಣಾಂ ಯಸ್ಮಿನ್ಪ್ರಾಣಾಃ ಪ್ರತಿಷ್ಠಿತಾಃ।।

ಆಗ ಮಹಾಬಾಹು ಭೀಮನು ಯುಧಿಷ್ಠಿರನಿಗೆ ಹೇಳಿದನು: “ಮಹಾರಾಜ! ಪಾಂಡುಪುತ್ರರ ಪ್ರಾಣವು ಯಾರ ಮೇಲೆ ಅವಲಂಬಿಸಿದೆಯೋ ಆ ಪುರುಷರ್ಷಭ ಅರ್ಜುನನು ನಿನ್ನ ಆದೇಶದ ಮೇಲೆಯೇ ಹೋಗಿದ್ದಾನೆ.

03049006a ಯಸ್ಮಿನ್ವಿನಷ್ಟೇ ಪಾಂಚಾಲಾಃ ಸಹ ಪುತ್ರೈಸ್ತಥಾ ವಯಂ।
03049006c ಸಾತ್ಯಕಿರ್ವಾಸುದೇವಶ್ಚ ವಿನಶ್ಯೇಯುರಸಂಶಯಂ।।

ಒಂದುವೇಳೆ ಅವನಿಗೇನಾದರೂ ವಿನಷ್ಟವಾದರೆ, ಪುತ್ರಸಮೇತರಾಗಿ ನಾವು, ಪಾಂಚಾಲರು, ಸಾತ್ಯಕಿ-ವಾಸುದೇವ ಎಲ್ಲರೂ ವಿನಾಶಹೊಂದುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03049007a ಯೋಽಸೌ ಗಚ್ಚತಿ ತೇಜಸ್ವೀ ಬಹೂನ್ಕ್ಲೇಶಾನಚಿಂತಯನ್।
03049007c ಭವನ್ನಿಯೋಗಾದ್ಬೀಭತ್ಸುಸ್ತತೋ ದುಃಖತರಂ ನು ಕಿಂ।।

ನಿನ್ನ ಆದೇಶದ ಮೇರೆಗೆ ತೇಜಸ್ವಿ ಬೀಭತ್ಸುವು ಮುಂದಿನ ಹಲವಾರು ಕ್ಲೇಶಗಳ ಕುರಿತು ಚಿಂತಿಸದೆಯೇ ಹೊರಟುಹೋದ ಎನ್ನುವುದಕ್ಕಿಂತ ದುಃಖತರವಾದದ್ದು ಇನ್ನೇನಿದೆ?

03049008a ಯಸ್ಯ ಬಾಹೂ ಸಮಾಶ್ರಿತ್ಯ ವಯಂ ಸರ್ವೇ ಮಹಾತ್ಮನಃ।
03049008c ಮನ್ಯಾಮಹೇ ಜಿತಾನಾಜೌ ಪರಾನ್ಪ್ರಾಪ್ತಾಂ ಚ ಮೇದಿನೀಂ।।

ನಮ್ಮ ಶತ್ರುಗಳನ್ನು ಯುದ್ಧದಲ್ಲಿ ಸೋಲಿಸಿ ಈ ಮೇದಿನಿಯನ್ನು ಪಡೆಯಬಹುದೆನ್ನುವ ಯೋಚನೆಯಿಂದ ನಾವೆಲ್ಲರೂ ಆ ಮಹಾತ್ಮನ ಬಾಹುಗಳ ಆಶ್ರಯ ಹೊಂದಿದ್ದೆವು.

03049009a ಯಸ್ಯ ಪ್ರಭಾವಾನ್ನ ಮಯಾ ಸಭಾಮಧ್ಯೇ ಧನುಷ್ಮತಃ।
03049009c ನೀತಾ ಲೋಕಮಮುಂ ಸರ್ವೇ ಧಾರ್ತರಾಷ್ಟ್ರಾಃ ಸಸೌಬಲಾಃ।।

ಧಾರ್ತರಾಷ್ಟ್ರರು ಮತ್ತು ಸೌಬಲನನ್ನು ಸಭಾಮದ್ಯದಲ್ಲಿ ನಾನು ಕೊಲ್ಲುವುದನ್ನು ತಡೆಹಿಡಿದಿದ್ದುದೇ ಆ ಧನುಷ್ಮತನ ಪ್ರಭಾವದಿಂದ.

03049010a ತೇ ವಯಂ ಬಾಹುಬಲಿನಃ ಕ್ರೋಧಮುತ್ಥಿತಮಾತ್ಮನಃ।
03049010c ಸಹಾಮಹೇ ಭವನ್ಮೂಲಂ ವಾಸುದೇವೇನ ಪಾಲಿತಾಃ।।

ವಾಸುದೇವನಿಂದ ಪಾಲಿತರಾದ ಮತ್ತು ಬಾಹುಬಲಿಗಳಾದ ನಾವು, ನಮ್ಮ ಕ್ರೋಧವನ್ನು ನಿನ್ನಿಂದ ಹುಟ್ಟಿದ ಸಹನಾಶಕ್ತಿಯಿಂದ ಸಹಿಸಿಕೊಳ್ಳುತ್ತಿದ್ದೇವೆ.

03049011a ವಯಂ ಹಿ ಸಹ ಕೃಷ್ಣೇನ ಹತ್ವಾ ಕರ್ಣಮುಖಾನ್ಪರಾನ್।
03049011c ಸ್ವಬಾಹುವಿಜಿತಾಂ ಕೃತ್ಸ್ನಾಂ ಪ್ರಶಾಸೇಮ ವಸುಂಧರಾಂ।।

ಯಾಕೆಂದರೆ, ಒಂದು ವೇಳೆ ಕೃಷ್ಣನ ಸಹಿತ ನಾವು ಕರ್ಣನ ಮುಖಂಡತ್ವದಲ್ಲಿರುವ ಶತ್ರುಗಳನ್ನು ಕೊಂದಿದ್ದರೆ, ಸ್ವ-ಬಾಹುಗಳಿಂದ ಗೆದ್ದ ಈ ಎಲ್ಲ ಭೂಮಿಯನ್ನು ಆಳಬಹುದಾಗಿತ್ತು!

03049012a ಭವತೋ ದ್ಯೂತದೋಷೇಣ ಸರ್ವೇ ವಯಮುಪಪ್ಲುತಾಃ।
03049012c ಅಹೀನಪೌರುಷಾ ರಾಜನ್ಬಲಿಭಿರ್ಬಲವತ್ತಮಾಃ।।

ಪೌರುಷತ್ವದ ಯಾವುದೂ ಕೊರತೆಯಿಲ್ಲದ, ಬಲಿಗಳಿಗಿಂಥ ಬಲವತ್ತರಾದ ನಾವೆಲ್ಲಾ ಈ ದುಃಸ್ತಿಥಿಗೆ ಬರಲು ನಿನ್ನ ದ್ಯೂತ ದೋಷವೇ ಕಾರಣ!

03049013a ಕ್ಷಾತ್ರಂ ಧರ್ಮಂ ಮಹಾರಾಜ ಸಮವೇಕ್ಷಿತುಮರ್ಹಸಿ।
03049013c ನ ಹಿ ಧರ್ಮೋ ಮಹಾರಾಜ ಕ್ಷತ್ರಿಯಸ್ಯ ವನಾಶ್ರಯಃ।।
03049013e ರಾಜ್ಯಮೇವ ಪರಂ ಧರ್ಮಂ ಕ್ಷತ್ರಿಯಸ್ಯ ವಿದುರ್ಬುಧಾಃ।

ಮಹಾರಾಜ! ಕ್ಷಾತ್ರಧರ್ಮವನ್ನು ಸಮವೇಕ್ಷಿಸು. ಮಹಾರಾಜ! ವನಾಶ್ರಯವು ಕ್ಷತ್ರಿಯನ ಧರ್ಮವಲ್ಲ. ರಾಜ್ಯವೇ ಕ್ಷತ್ರಿಯನ ಪರಮ ಧರ್ಮ ಎಂದು ತಿಳಿದವರು ತಿಳಿದಿರುತ್ತಾರೆ.

03049014a ಸ ಕ್ಷತ್ರಧರ್ಮವಿದ್ರಾಜನ್ಮಾ ಧರ್ಮ್ಯಾನ್ನೀನಶಃ ಪಥಃ।।
03049014c ಪ್ರಾಂಗ್ದ್ವಾದಶ ಸಮಾ ರಾಜನ್ಧಾರ್ತರಾಷ್ಟ್ರಾನ್ನಿಹನ್ಮಹಿ।

ಕ್ಷತ್ರಧರ್ಮವನ್ನು ತಿಳಿದಂತಹ ರಾಜ! ಧರ್ಮಪಥವನ್ನು ನಾಶಮಾಡಬೇಡ. ರಾಜ! ಹನ್ನೆರಡು ವರುಷಗಳು ಮುಗಿಯುವುದರೊಳಗೇ ಧಾರ್ತರಾಷ್ಟ್ರರನ್ನು ಕೊಂದು ಬಿಡೋಣ.

03049015a ನಿವರ್ತ್ಯ ಚ ವನಾತ್ಪಾರ್ಥಮಾನಾಯ್ಯ ಚ ಜನಾರ್ದನಂ।।
03049015c ವ್ಯೂಢಾನೀಕಾನ್ಮಹಾರಾಜ ಜವೇನೈವ ಮಹಾಹವೇ।
03049015e ಧಾರ್ತರಾಷ್ಟ್ರಾನಮುಂ ಲೋಕಂ ಗಮಯಾಮಿ ವಿಶಾಂ ಪತೇ।।

ವನದಿಂದ ಹಿಂದಿರುಗಿ, ಪಾರ್ಥ-ಜನಾರ್ದನರನ್ನು ಕರೆದುಕೊಂಡು, ಮಹಾ ಯುದ್ಧದಲ್ಲಿ ಅವರೆಲ್ಲ ಪಡೆಗಳನ್ನೂ ಬಹುಬೇಗ ನಾಶಮಾಡಿಬಿಡೋಣ. ವಿಶಾಂಪತೇ! ನಾನು ಧಾರ್ತರಾಷ್ಟ್ರರೆಲ್ಲರನ್ನೂ ಬೇರೆ ಲೋಕಕ್ಕೆ ಕಳುಹಿಸಿಬಿಡುತ್ತೇನೆ.

03049016a ಸರ್ವಾನಹಂ ಹನಿಷ್ಯಾಮಿ ಧಾರ್ತರಾಷ್ಟ್ರಾನ್ಸಸೌಬಲಾನ್।
03049016c ದುರ್ಯೋಧನಂ ಚ ಕರ್ಣಂ ಚ ಯೋ ವಾನ್ಯಃ ಪ್ರತಿಯೋತ್ಸ್ಯತೇ।।

ನಾನು ಸೌಬಲ ಸಹಿತರಾದ ಆ ಎಲ್ಲ ಧಾರ್ತರಾಷ್ಟ್ರರನ್ನು ದುರ್ಯೋಧನ, ಕರ್ಣ, ಮತ್ತು ಪ್ರತಿಸ್ಪರ್ಧಿಸುವ ಎಲ್ಲರನ್ನೂ ಸಂಹಾರ ಮಾಡುತ್ತೇನೆ.

03049017a ಮಯಾ ಪ್ರಶಮಿತೇ ಪಶ್ಚಾತ್ತ್ವಮೇಷ್ಯಸಿ ವನಾತ್ಪುನಃ।
03049017c ಏವಂ ಕೃತೇ ನ ತೇ ದೋಷೋ ಭವಿಷ್ಯತಿ ವಿಶಾಂ ಪತೇ।।

ನಾನು ಅವರೆಲ್ಲರನ್ನೂ ಮುಗಿಸಿದ ಬಳಿಕ ನೀನು ವನದಿಂದ ಮರಳಬಹುದು. ವಿಶಾಂಪತೇ! ಹೀಗೆ ಮಾಡುವುದರಿಂದ ನಿನಗೆ ಯಾವುದೇ ದೋಷವೂ ಬರುವುದಿಲ್ಲ.

03049018a ಯಜ್ಞೈಶ್ಚ ವಿವಿಧೈಸ್ತಾತ ಕೃತಂ ಪಾಪಮರಿಂದಮ।
03049018c ಅವಧೂಯ ಮಹಾರಾಜ ಗಚ್ಚೇಮ ಸ್ವರ್ಗಮುತ್ತಮಂ।।

ಭ್ರಾತಾ ಅರಿಂದಮ! ಮಹಾರಾಜ! ಇದರಿಂದ ಯಾವುದೇ ಪಾಪವನ್ನು ಮಾಡಿದ್ದೇವೆಂದಾದರೆ, ಅವೆಲ್ಲವನ್ನೂ ಒಂದಲ್ಲ ಒಂದು ಯಜ್ಞದಿಂದ ತೊಳೆದು ಉತ್ತಮ ಸ್ವರ್ಗಕ್ಕೆ ಹೋಗೋಣ.

03049019a ಏವಮೇತದ್ಭವೇದ್ರಾಜನ್ಯದಿ ರಾಜಾ ನ ಬಾಲಿಶಃ।
03049019c ಅಸ್ಮಾಕಂ ದೀರ್ಘಸೂತ್ರಃ ಸ್ಯಾದ್ಭವಾನ್ಧರ್ಮಪರಾಯಣಃ।।

ನಮ್ಮ ರಾಜನು ಬಾಲಿಶನಾಗಿರದಿದ್ದರೆ ಅಥವಾ ದೀರ್ಘಸೂತ್ರನಾಗಿರದಿದ್ದರೆ, ಇದು ಹೀಗೆಯೇ ಆಗಬೇಕಾಗಿತ್ತು. ಆದರೆ ನೀನು ಧರ್ಮಪರಾಯಣನಾಗಿದ್ದೀಯೆ.

03049020a ನಿಕೃತ್ಯಾ ನಿಕೃತಿಪ್ರಜ್ಞಾ ಹಂತವ್ಯಾ ಇತಿ ನಿಶ್ಚಯಃ।
03049020c ನ ಹಿ ನೈಕೃತಿಕಂ ಹತ್ವಾ ನಿಕೃತ್ಯಾ ಪಾಪಮುಚ್ಯತೇ।।

ಮೋಸಗೊಳಿಸುವವರನ್ನು ಮೋಸದಿಂದಲೇ ಕೊಲ್ಲಬೇಕೆಂದು ನಿಶ್ಚಯವಾಗಿದೆ. ಕೃತ್ರಿಮರನ್ನು ಕೃತ್ರಿಮದಿಂದ ಕೊಂದರೆ ಪಾಪವಿಲ್ಲ ಎಂದು ಹೇಳುತ್ತಾರೆ.

03049021a ತಥಾ ಭಾರತ ಧರ್ಮೇಷು ಧರ್ಮಜ್ಞೈರಿಹ ದೃಶ್ಯತೇ।
03049021c ಅಹೋರಾತ್ರಂ ಮಹಾರಾಜ ತುಲ್ಯಂ ಸಂವತ್ಸರೇಣ ಹಿ।।

ಭಾರತ! ಮಹಾರಾಜ! ಇದೂ ಅಲ್ಲದೇ ಧರ್ಮಜ್ಞರು ಒಂದು ಅಹೋರಾತ್ರಿಯು ಒಂದು ವರ್ಷಕ್ಕೆ ಸಮ ಎಂದು ಧರ್ಮಗಳಲ್ಲಿ ಕಂಡುಕೊಂಡಿದ್ದಾರೆ.

03049022a ತಥೈವ ವೇದವಚನಂ ಶ್ರೂಯತೇ ನಿತ್ಯದಾ ವಿಭೋ।
03049022c ಸಂವತ್ಸರೋ ಮಹಾರಾಜ ಪೂರ್ಣೋ ಭವತಿ ಕೃಚ್ಚ್ರತಃ।।

ಸ್ವಾಮೀ! ಮಹಾರಾಜ! ಈ ತರಹ ಕಷ್ಟಕಾಲದಲ್ಲಿ ವರ್ಷಗಳು ಪೂರ್ಣವಾಗುತ್ತವೆ ಎಂದು ನಿತ್ಯವೂ ವೇದವಚನವನ್ನು ಕೇಳುತ್ತೇವೆ.

03049023a ಯದಿ ವೇದಾಃ ಪ್ರಮಾಣಂ ತೇ ದಿವಸಾದೂರ್ಧ್ವಮಚ್ಯುತ।
03049023c ತ್ರಯೋದಶ ಸಮಾಃ ಕಾಲೋ ಜ್ಞಾಯತಾಂ ಪರಿನಿಷ್ಠಿತಃ।।

ಅಚ್ಯುತ! ವೇದಗಳೇ ನಿನ್ನ ಪ್ರಮಾಣಗಳಾಗಿದ್ದರೆ, ಒಂದೇ ದಿನದ ನಂತರ ಹದಿಮೂರು ವರ್ಷಗಳ ಅವಧಿಯೂ ಮುಗಿಯಿತು ಎಂದು ತಿಳಿ.

03049024a ಕಾಲೋ ದುರ್ಯೋಧನಂ ಹಂತುಂ ಸಾನುಬಂಧಮರಿಂದಮ।
03049024c ಏಕಾಗ್ರಾಂ ಪೃಥಿವೀಂ ಸರ್ವಾಂ ಪುರಾ ರಾಜನ್ಕರೋತಿ ಸಃ।।

ಅರಿಂದಮ! ದುರ್ಯೋಧನನು ಇಡೀ ಪೃಥ್ವಿಯನ್ನು ತನ್ನಡಿಯಲ್ಲಿ ಮಾಡಿಕೊಳ್ಳುವ ಮೊದಲೇ ಅವನು ಮತ್ತು ಅವನ ಸಂಬಂಧಿಗಳೆಲ್ಲರನ್ನೂ ಸಂಹಾರ ಮಾಡಲು ಇದೇ ಸಮಯ.”

03049025a ಏವಂ ಬ್ರುವಾಣಂ ಭೀಮಂ ತು ಧರ್ಮರಾಜೋ ಯುಧಿಷ್ಠಿರಃ।
03049025c ಉವಾಚ ಸಾಂತ್ವಯನ್ರಾಜಾ ಮೂರ್ಧ್ನ್ಯುಪಾಘ್ರಾಯ ಪಾಂಡವಂ।।

ರಾಜನ್! ಈ ರೀತಿ ಮಾತನಾಡುತ್ತಿದ್ದ ಪಾಂಡವ ಭೀಮನ ಶಿರವನ್ನು ಆಘ್ರಾಣಿಸಿ, ಸಂತಯಿಸುತ್ತಾ ಧರ್ಮರಾಜ ಯುಧಿಷ್ಠಿರನು ಹೇಳಿದನು:

03049026a ಅಸಂಶಯಂ ಮಹಾಬಾಹೋ ಹನಿಷ್ಯಸಿ ಸುಯೋಧನಂ।
03049026c ವರ್ಷಾತ್ತ್ರಯೋದಶಾದೂರ್ಧ್ವಂ ಸಹ ಗಾಂಡೀವಧನ್ವನಾ।।

“ಮಹಾಬಾಹು! ನಿಸ್ಸಂಶಯವಾಗಿ ಗಾಂಡೀವ ಧನುರ್ಧಾರಿಯ ಜೊತೆಗೂಡಿ ನೀನು ಸುಯೋಧನನನ್ನು ಕೊಲ್ಲುತ್ತೀಯೆ. ಆದರೆ ಹದಿಮೂರು ವರ್ಷಗಳ ನಂತರ.

03049027a ಯಚ್ಚ ಮಾ ಭಾಷಸೇ ಪಾರ್ಥ ಪ್ರಾಪ್ತಃ ಕಾಲ ಇತಿ ಪ್ರಭೋ।
03049027c ಅನೃತಂ ನೋತ್ಸಹೇ ವಕ್ತುಂ ನ ಹ್ಯೇತನ್ಮಯಿ ವಿದ್ಯತೇ।।
03049028a ಅಂತರೇಣಾಪಿ ಕೌಂತೇಯ ನಿಕೃತಿಂ ಪಾಪನಿಶ್ಚಯಂ।
03049028c ಹಂತಾ ತ್ವಮಸಿ ದುರ್ಧರ್ಷ ಸಾನುಬಂಧಂ ಸುಯೋಧನಂ।।

ಪಾರ್ಥ! ನೀನೇನು ಹೇಳುತ್ತಿದ್ದೀಯೆ - ಪ್ರಭು! ಕಾಲ ಪ್ರಾಪ್ತಿಯಾಗಿದೆ - ಎಂದು? ಅನೃತವನ್ನು ಹೇಳಲು ನನಗೆ ಇಷ್ಟವಿಲ್ಲ. ಯಾಕೆಂದರೆ ನನಗೆ ಅದು ಗೊತ್ತಿಲ್ಲ. ಕೌಂತೇಯ! ಮೋಸವನ್ನು ಪಾಪಿಗಳೇ ನಿಶ್ಚಯಿಸುತ್ತಾರೆ. ಆದರೂ ನೀನು ಬಂಧುಸಮೇತ ಸುಯೋಧನನನ್ನು ಕೊಲ್ಲುತ್ತೀಯೆ.”

03049029a ಏವಂ ಬ್ರುವತಿ ಭೀಮಂ ತು ಧರ್ಮರಾಜೇ ಯುಧಿಷ್ಠಿರೇ।
03049029c ಆಜಗಾಮ ಮಹಾಭಾಗೋ ಬೃಹದಶ್ವೋ ಮಹಾನೃಷಿಃ।।

ಧರ್ಮರಾಜ ಯುಧಿಷ್ಠಿರನು ಈ ರೀತಿ ಭೀಮನಿಗೆ ಹೇಳುತ್ತಿರಲು, ಮಹಾಭಾಗ, ಮಹಾನೃಷಿ ಬೃಹದಶ್ವನು ಅಲ್ಲಿಗೆ ಆಗಮಿಸಿದನು.

03049030a ತಮಭಿಪ್ರೇಕ್ಷ್ಯ ಧರ್ಮಾತ್ಮಾ ಸಂಪ್ರಾಪ್ತಂ ಧರ್ಮಚಾರಿಣಂ।
03049030c ಶಾಸ್ತ್ರವನ್ಮಧುಪರ್ಕೇಣ ಪೂಜಯಾಮಾಸ ಧರ್ಮರಾಟ್।।

ಆ ಧರ್ಮಚಾರಿಯು ಆಗಮಿಸಿದ್ದುದನ್ನು ನೋಡಿ ಧರ್ಮಾತ್ಮ ಧರ್ಮರಾಜನು ಶಾಸ್ತ್ರೋಕ್ತವಾಗಿ ಮಧುಪರ್ಕದಿಂದ ಪೂಜಿಸಿದನು.

03049031a ಆಶ್ವಸ್ತಂ ಚೈನಮಾಸೀನಮುಪಾಸೀನೋ ಯುಧಿಷ್ಠಿರಃ।
03049031c ಅಭಿಪ್ರೇಕ್ಷ್ಯ ಮಹಾಬಾಹುಃ ಕೃಪಣಂ ಬಃವಭಾಷತ।।

ಅತಿಥಿಯು ಕುಳಿತುಕೊಂಡು ವಿಶ್ರಾಂತಿಸಿದ ನಂತರ ಮಹಾಬಾಹು ಯುಧಿಷ್ಠಿರನು ಅವನ ಎದುರಿನಲ್ಲಿ ಶೋಕತಪ್ತನಾಗಿ ಹೇಳಿದನು:

03049032a ಅಕ್ಷದ್ಯೂತೇನ ಭಗವನ್ಧನಂ ರಾಜ್ಯಂ ಚ ಮೇ ಹೃತಂ।
03049032c ಆಹೂಯ ನಿಕೃತಿಪ್ರಜ್ಞೈಃ ಕಿತವೈರಕ್ಷಕೋವಿದೈಃ।।

“ಭಗವನ್! ಧನ ಮತ್ತು ರಾಜ್ಯವನ್ನು ದ್ಯೂತದಲ್ಲಿ ಪಣವಿಡಿಸಿಕೊಂಡು ಮೋಸ ಮತ್ತು ದ್ಯೂತ ಎರಡರಲ್ಲೂ ಪ್ರವೀಣರಾದ ಮೋಸಕೋರರು ಅಪಹರಿಸಿದರು.

03049033a ಅನಕ್ಷಜ್ಞಸ್ಯ ಹಿ ಸತೋ ನಿಕೃತ್ಯಾ ಪಾಪನಿಶ್ಚಯೈಃ।
03049033c ಭಾರ್ಯಾ ಚ ಮೇ ಸಭಾಂ ನೀತಾ ಪ್ರಾಣೇಭ್ಯೋಽಪಿ ಗರೀಯಸೀ।।

ನನಗೆ ಜೂಜಾಡುವುದು ಗೊತ್ತಿರಲಿಲ್ಲ. ಆದರೂ ಆ ಪಾಪನಿಶ್ಚಯಿಗಳು ನನ್ನನ್ನು ಮೋಸಗೊಳಿಸಿ, ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿದ್ದ ನನ್ನ ಭಾರ್ಯೆಯನ್ನು ಸಭೆಗೆ ಎಳೆದು ತಂದರು.

03049034a ಅಸ್ತಿ ರಾಜಾ ಮಯಾ ಕಶ್ಚಿದಲ್ಪಭಾಗ್ಯತರೋ ಭುವಿ।
03049034c ಭವತಾ ದೃಷ್ಟಪೂರ್ವೋ ವಾ ಶ್ರುತಪೂರ್ವೋಽಪಿ ವಾ ಭವೇತ್।
03049034e ನ ಮತ್ತೋ ದುಃಖಿತತರಃ ಪುಮಾನಸ್ತೀತಿ ಮೇ ಮತಿಃ।।

ನನಗಿಂಥಲೂ ಹೆಚ್ಚು ಭಾಗ್ಯಹೀನನಾದ ರಾಜನು ಬೇರೆ ಯಾರಾದರೂ - ನೀನು ನೋಡಿದ ಹಾಗೆ ಅಥವಾ ಕೇಳಿದ ಹಾಗೆ - ಇದ್ದನೇ ಈ ಭುವಿಯಲ್ಲಿ? ನನ್ನ ಅಭಿಪ್ರಾಯದಂತೆ ನನಗಿಂಥ ಹೆಚ್ಚಿನ ದುಃಖವನ್ನು ಅನುಭವಿಸಿದ ಮನುಷ್ಯನು ಇಲ್ಲವೇ ಇಲ್ಲ.”

03049035 ಬೃಹದಶ್ವ ಉವಾಚ।
03049035a ಯದ್ಬ್ರವೀಷಿ ಮಹಾರಾಜ ನ ಮತ್ತೋ ವಿದ್ಯತೇ ಕ್ವ ಚಿತ್।
03049035c ಅಲ್ಪಭಾಗ್ಯತರಃ ಕಶ್ಚಿತ್ಪುಮಾನಸ್ತೀತಿ ಪಾಂಡವ।।

ಬೃಹದಶ್ವನು ಹೇಳಿದನು: “ಮಹಾರಾಜ! ಪಾಂಡವ! ನಿನಗಿಂಥಲೂ ಅಲ್ಪಭಾಗ್ಯಶಾಲಿ ಬಹುಷಃ ಇಲ್ಲ ಎಂದು ಹೇಳುತ್ತಿದ್ದೀಯಾ?

03049036a ಅತ್ರ ತೇ ಕಥಯಿಷ್ಯಾಮಿ ಯದಿ ಶುಶ್ರೂಷಸೇಽನಘ।
03049036c ಯಸ್ತ್ವತ್ತೋ ದುಃಖಿತತರೋ ರಾಜಾಸೀತ್ಪೃಥಿವೀಪತೇ।।

ಅನಘ! ಪೃಥಿವೀಪತೇ! ನಿನಗೆ ಇಷ್ಟವಾದರೆ, ಇದಕ್ಕೆ ಒಂದು ಕಥೆಯನ್ನು ಹೇಳುತ್ತೇನೆ. ನಿನಗಿಂಥಲೂ ಹೆಚ್ಚು ದುಃಖಿತನಾದ ರಾಜನೊಬ್ಬನಿದ್ದ.”

03049037 ಯುಧಿಷ್ಠಿರ ಉವಾಚ।
03049037a ಅಥೈನಮಬ್ರವೀದ್ರಾಜಾ ಬ್ರವೀತು ಭಗವಾನಿತಿ।
03049037c ಇಮಾಮವಸ್ಥಾಂ ಸಂಪ್ರಾಪ್ತಂ ಶ್ರೋತುಮಿಚ್ಚಾಮಿ ಪಾರ್ಥಿವಂ।।

ಯುಧಿಷ್ಠಿರನು ಹೇಳಿದನು: “ಭಗವಾನ್! ಹೇಳು. ನನ್ನ ಈ ಅವಸ್ಥೆಯನ್ನೇ ಹೊಂದಿದ್ದ ಪಾರ್ಥಿವನ ಕುರಿತು ಕೇಳಲು ಬಯಸುತ್ತೇನೆ.”

03049038 ಬೃಹದಶ್ವ ಉವಾಚ।
03049038a ಶೃಣು ರಾಜನ್ನವಹಿತಃ ಸಹ ಭ್ರಾತೃಭಿರಚ್ಯುತ।
03049038c ಯಸ್ತ್ವತ್ತೋ ದುಃಖಿತತರೋ ರಾಜಾಸೀತ್ಪೃಥಿವೀಪತೇ।।

ಬೃಹದಶ್ವನು ಹೇಳಿದನು: “ರಾಜನ್! ಅಚ್ಯುತ! ಭ್ರಾತೃಗಳ ಸಹಿತ ನಿನಗಿಂಥ ಹೆಚ್ಚು ದುಃಖವನ್ನನುಭವಿಸಿದ ರಾಜ ಪೃಥಿವೀಪತಿಯ ಕುರಿತು ಗಮನವಿಟ್ಟು ಕೇಳು.

03049039a ನಿಷಧೇಷು ಮಹೀಪಾಲೋ ವೀರಸೇನ ಇತಿ ಸ್ಮ ಹ।
03049039c ತಸ್ಯ ಪುತ್ರೋಽಭವನ್ನಾಮ್ನಾ ನಲೋ ಧರ್ಮಾರ್ಥದರ್ಶಿವಾನ್।।

ವೀರಸೇನ ಎನ್ನುವ ನಿಷಧದ ಮಹೀಪಾಲನಿದ್ದನು. ಅವನಿಗೆ ಧರ್ಮಾರ್ಥದರ್ಶಿಯಾದ ನಲ ಎಂಬ ಹೆಸರಿನ ಪುತ್ರನಿದ್ದನು.

03049040a ಸ ನಿಕೃತ್ಯಾ ಜಿತೋ ರಾಜಾ ಪುಷ್ಕರೇಣೇತಿ ನಃ ಶ್ರುತಂ।
03049040c ವನವಾಸಮದುಃಖಾರ್ಹೋ ಭಾರ್ಯಯಾ ನ್ಯವಸತ್ಸಹ।।

ರಾಜನ್! ಪುಷ್ಕರನು ಮೋಸದಿಂದ ಅವನನ್ನು ಗೆದ್ದನು ಮತ್ತು ದುಃಖಕ್ಕೆ ಅನರ್ಹನಾದ ಅವನು ಭಾರ್ಯೆಯ ಸಹಿತ ವನವಾಸವನ್ನು ಅನುಭವಿಸಿದನು ಎಂದು ಕೇಳಿದ್ದೇವೆ.

03049041a ನ ತಸ್ಯಾಶ್ವೋ ನ ಚ ರಥೋ ನ ಭ್ರಾತಾ ನ ಚ ಬಾಂಧವಾಃ।
03049041c ವನೇ ನಿವಸತೋ ರಾಜಂ ಶಿಷ್ಯಂತೇ ಸ್ಮ ಕದಾ ಚನ।।

ವನದಲ್ಲಿ ವಾಸಿಸುತ್ತಿದ್ದ ಆ ರಾಜನಿಗೆ ಯಾವುದೇರೀತಿಯ ಸಹಾಯಗಳಿರಲಿಲ್ಲ: ಅಶ್ವಗಳಿರಲಿಲ್ಲ, ರಥವಿರಲಿಲ್ಲ, ಸಹೋದರರಿರಲಿಲ್ಲ, ಬಾಂಧವರಿರಲಿಲ್ಲ.

03049042a ಭವಾನ್ ಹಿ ಸಂವೃತೋ ವೀರೈರ್ಭ್ರಾತೃಭಿರ್ದೇವಸಮ್ಮಿತೈಃ।
03049042c ಬ್ರಹ್ಮಕಲ್ಪೈರ್ದ್ವಿಜಾಗ್ರ್ಯೈಶ್ಚ ತಸ್ಮಾನ್ನಾರ್ಹಸಿ ಶೋಚಿತುಂ।।

ನೀನಾದರೂ ದೇವಸಮ್ಮಿತ ವೀರ ಭ್ರಾತೃಗಳಿಂದ ಮತ್ತು ಬ್ರಹ್ಮಕಲ್ಪರಾದ ದ್ವಿಜಾಗ್ರರಿಂದ ಸುತ್ತುವರೆದಿದ್ದೀಯೆ. ನೀನು ಶೋಕಿಸುವುದು ಸರಿಯಲ್ಲ.”

03049043 ಯುಧಿಷ್ಠಿರ ಉವಾಚ।
03049043a ವಿಸ್ತರೇಣಾಹಮಿಚ್ಚಾಮಿ ನಲಸ್ಯ ಸುಮಹಾತ್ಮನಃ।
03049043c ಚರಿತಂ ವದತಾಂ ಶ್ರೇಷ್ಠ ತನ್ಮಮಾಖ್ಯಾತುಮರ್ಹಸಿ।।

ಯುಧಿಷ್ಠಿರನು ಹೇಳಿದನು: “ಸುಮಹಾತ್ಮ ನಲನ ಚರಿತವನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ಶ್ರೇಷ್ಠನಾದ ನೀನು ನನಗೆ ಆ ಕಥೆಯನ್ನು ಹೇಳುವಂಥವನಾಗು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಏಕೋನಪಂಚಾಶತ್ತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲವತ್ತೊಂಭತ್ತನೆಯ ಅಧ್ಯಾಯವು.


  1. ಪುಣೆಯ ಸಂಪುಟದ ಪ್ರಕಾರ ಈ ಅಧ್ಯಾಯವು ಇಂದ್ರಲೋಕಾಭಿಗಮನ ಪರ್ವದಲ್ಲಿ ಬರುತ್ತದೆ. ಆದರೆ ಗೋರಖಪುರದ ಸಂಪುಟದಲ್ಲಿ ಈ ಅಧ್ಯಾಯವನ್ನು ನಲೋಪಾಖ್ಯಾನಪರ್ವದಲ್ಲಿ ಸೇರಿಸಲಾಗಿದೆ. ↩︎