048 ಧೃತರಾಷ್ಟ್ರವಿಲಾಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 48

ಸಾರ

ಪಾಂಡವರನ್ನು ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗುವುದಿಲ್ಲವೆಂದು ಧೃತರಾಷ್ಟ್ರನು ಸಂಜಯನಲ್ಲಿ ಸಂತಾಪ ಪಡುವುದು (1-10). ಸಂಜಯನು ವೃಷ್ಣಿ, ಅಂಧಕ, ಪಾಂಚಾಲರು ಕಾಮ್ಯಕದಲ್ಲಿ ಪಾಂಡವರನ್ನು ನೋಡಲು ಬಂದಾಗ ಮಾಡಿದ ಪ್ರತಿಜ್ಞೆಗಳನ್ನು ವರದಿ ಮಾಡಿದುದು (11-39). ಮುಂದೆ ಯುದ್ಧವಾಗುವುದರಲ್ಲಿ ಸಂಶಯವಿಲ್ಲವೆಂದು ಧೃತರಾಷ್ಟ್ರನು ಹೇಳುವುದು (40-41).

03048001 ವೈಶಂಪಾಯನ ಉವಾಚ।
03048001a ಸುದೀರ್ಘಮುಷ್ಣಂ ನಿಃಶ್ವಸ್ಯ ಧೃತರಾಷ್ಟ್ರೋಽಂಬಿಕಾಸುತಃ।
03048001c ಅಬ್ರವೀತ್ಸಂಜಯಂ ಸೂತಮಾಮಂತ್ರ್ಯ ಭರತರ್ಷಭ।।

ವೈಶಂಪಾಯನನು ಹೇಳಿದನು: “ಭರತರ್ಷಭ! ಸುದೀರ್ಘವಾಗಿ ಬಿಸಿಶ್ವಾಸವನ್ನು ಬಿಟ್ಟು ಅಂಬಿಕಾಸುತ ಧೃತರಾಷ್ಟ್ರನು ಸೂತನನ್ನು ಕರೆಯಿಸಿ ಸಂಜಯನಿಗೆ ಹೇಳಿದನು:

03048002a ದೇವಪುತ್ರೌ ಮಹಾಭಾಗೌ ದೇವರಾಜಸಮದ್ಯುತೀ।
03048002c ನಕುಲಃ ಸಹದೇವಶ್ಚ ಪಾಂಡವೌ ಯುದ್ಧದುರ್ಮದೌ।।
03048003a ದೃಢಾಯುಧೌ ದೂರಪಾತೌ ಯುದ್ಧೇ ಚ ಕೃತನಿಶ್ಚಯೌ।
03048003c ಶೀಘ್ರಹಸ್ತೌ ದೃಢಕ್ರೋಧೌ ನಿತ್ಯಯುಕ್ತೌ ತರಸ್ವಿನೌ।।

“ಪಾಂಡುವಿನ ಮಕ್ಕಳು, ದೇವರಾಜಸಮ ದ್ಯುತಿಯುಳ್ಳ ಮಹಾಭಾಗ ದೇವಪುತ್ರ ನಕುಲ ಸಹದೇವರು ಯುದ್ಧದಲ್ಲಿ ದುರ್ಮದರೂ, ದೃಢಾಯುಧರೂ, ಬಹುದೂರದವರೆಗೆ ಬಾಣಬಿಡಬಲ್ಲವರೂ, ಯುದ್ಧವನ್ನು ಗೆಲ್ಲುವ ನಿರ್ಧಾರಮಾಡಿದವರೂ, ಬಹುಬೇಗ ಕೈ ಬಳಸುವವರೂ, ಕ್ರೋಧವು ದೃಢವಾಗಿರುವವರೂ, ಯಾವಾಗಲೂ ಅಚಲಿತರಾಗಿಯೂ, ಉಲ್ಲಾಸವುಳ್ಳವರೂ ಆಗಿದ್ದಾರೆ.

03048004a ಭೀಮಾರ್ಜುನೌ ಪುರೋಧಾಯ ಯದಾ ತೌ ರಣಮೂರ್ಧನಿ।
03048004c ಸ್ಥಾಸ್ಯೇತೇ ಸಿಂಹವಿಕ್ರಾಂತಾವಶ್ವಿನಾವಿವ ದುಃಸ್ಸಹೌ।
03048004e ನ ಶೇಷಮಿಹ ಪಶ್ಯಾಮಿ ತದಾ ಸೈನ್ಯಸ್ಯ ಸಂಜಯ।।

ಸಂಜಯ! ಅಶ್ವಿನಿಯರಂತೆ ದುಃಸಹರೂ ಸಿಂಹವಿಕ್ರಾಂತರೂ ಆದ ಅವರಿಬ್ಬರು ಭೀಮಾರ್ಜುನರನ್ನು ಮುಂದಿಟ್ಟುಕೊಂಡು ರಣದಲ್ಲಿ ನಿಂತರೆ ಈ ಸೈನ್ಯವು ಉಳಿಯುತ್ತದೆ ಎಂದು ನನಗೆ ತೋರುವುದಿಲ್ಲ.

03048005a ತೌ ಹ್ಯಪ್ರತಿರಥೌ ಯುದ್ಧೇ ದೇವಪುತ್ರೌ ಮಹಾರಥೌ।
03048005c ದ್ರೌಪದ್ಯಾಸ್ತಂ ಪರಿಕ್ಲೇಶಂ ನ ಕ್ಷಂಸ್ಯೇತೇ ತ್ವಮರ್ಷಿಣೌ।।

ಆ ಇಬ್ಬರೂ ಯುದ್ಧದಲ್ಲಿ ಅಪ್ರತಿರಥರು, ದೇವಪುತ್ರರು, ಮಹಾರಥರು ದ್ರೌಪದಿಗೆ ನೀಡಿದ ಕಷ್ಟವನ್ನು ನೋಡಿ ಸಿಟ್ಟಾಗಿ ಎಂದೂ ಕ್ಷಮಿಸುವುದಿಲ್ಲ.

03048006a ವೃಷ್ಣಯೋ ವಾ ಮಹೇಷ್ವಾಸಾ ಪಾಂಚಾಲಾ ವಾ ಮಹೌಜಸಃ।
03048006c ಯುಧಿ ಸತ್ಯಾಭಿಸಂಧೇನ ವಾಸುದೇವೇನ ರಕ್ಷಿತಾಃ।
03048006e ಪ್ರಧಕ್ಷ್ಯಂತಿ ರಣೇ ಪಾರ್ಥಾಃ ಪುತ್ರಾಣಾಂ ಮಮ ವಾಹಿನೀಂ।।

ಸತ್ಯಸಂಧ ವಾಸುದೇವನಿಂದ ಯುದ್ಧದಲ್ಲಿ ರಕ್ಷಿತ ಮಹೇಷ್ವಾಸ ವೃಷ್ಣಿಗಳು, ಮಹೌಜಸ ಪಾಂಚಾಲರು ಮತ್ತು ಪಾರ್ಥರು ರಣದಲ್ಲಿ ನನ್ನ ಮಕ್ಕಳ ಸೇನೆಯನ್ನು ಭಸ್ಮಮಾಡಿಬಿಡುತ್ತಾರೆ.

03048007a ರಾಮಕೃಷ್ಣಪ್ರಣೀತಾನಾಂ ವೃಷ್ಣೀನಾಂ ಸೂತನಂದನ।
03048007c ನ ಶಕ್ಯಃ ಸಹಿತುಂ ವೇಗಃ ಪರ್ವತೈರಪಿ ಸಂಯುಗೇ।।

ಸೂತನಂದನ! ಒಂದುವೇಳೆ ಯುದ್ಧವಾಗುತ್ತದೆ ಎಂದಾದರೆ ಬಲರಾಮ-ಕೃಷ್ಣರ ನಾಯಕತ್ವದಲ್ಲಿದ್ದ ವೃಷ್ಣಿಗಳ ವೇಗವನ್ನು ಪರ್ವತಗಳೂ ಕೂಡ ಸಹಿಸಲು ಶಕ್ಯವಾಗುವುದಿಲ್ಲ.

03048008a ತೇಷಾಂ ಮಧ್ಯೇ ಮಹೇಷ್ವಾಸೋ ಭೀಮೋ ಭೀಮಪರಾಕ್ರಮಃ।
03048008c ಶೈಕ್ಯಯಾ ವೀರಘಾತಿನ್ಯಾ ಗದಯಾ ವಿಚರಿಷ್ಯತಿ।।

ಅವರ ಮಧ್ಯದಲ್ಲಿ ಮಹೇಷ್ವಾಸ ಭೀಮಪರಾಕ್ರಮಿ ಭೀಮನು ವೀರರನ್ನು ಘಾಯಗೊಳಿಸುವ ಲೋಹದ ಮೊಳೆಗಳನ್ನುಳ್ಳ ಗದೆಯೊಂದಿಗೆ ಓಡಾಡುತ್ತಿರುತ್ತಾನೆ.

03048009a ತಥಾ ಗಾಂಡೀವನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ।
03048009c ಗದಾವೇಗಂ ಚ ಭೀಮಸ್ಯ ನಾಲಂ ಸೋಢುಂ ನರಾಧಿಪಾಃ।।

ಹಾಗೆಯೇ ಸಿಡಿಲಿನಂತೆ ಗರ್ಜಿಸುವ ಗಾಂಡೀವದ ಠೇಂಕಾರವನ್ನೂ ಭೀಮನ ಗದೆಯ ವೇಗವನ್ನೂ ನರಾಧಿಪರಿಗೆ ಸಹಿಸಲು ಸಾಧ್ಯವಾಗುವುದಿಲ್ಲ.

03048010a ತತೋಽಹಂ ಸುಹೃದಾಂ ವಾಚೋ ದುರ್ಯೋಧನವಶಾನುಗಃ।
03048010c ಸ್ಮರಣೀಯಾಃ ಸ್ಮರಿಷ್ಯಾಮಿ ಮಯಾ ಯಾ ನ ಕೃತಾಃ ಪುರಾ।।

ಇವುಗಳನ್ನು ಆಗ ನಾನು ನೆನಪಿನಲ್ಲಿಟ್ಟುಕೊಂಡಿರಬೇಕಾಗಿತ್ತು. ಆದರೆ ದುರ್ಯೋಧನನ ವಶಕ್ಕೆ ಸಿಲುಕಿ ಅದರಂತೆ ನಡೆದುಕೊಳ್ಳದೇ ಹೋದೆ. ಈಗ ಅವುಗಳನ್ನು ನೆನಪಿಸಿಕೊಳ್ಳುತ್ತೇನೆ.”

03048011 ಸಂಜಯ ಉವಾಚ।
03048011a ವ್ಯತಿಕ್ರಮೋಽಯಂ ಸುಮಹಾಂಸ್ತ್ವಯಾ ರಾಜನ್ನುಪೇಕ್ಷಿತಃ।
03048011c ಸಮರ್ಥೇನಾಪಿ ಯನ್ಮೋಹಾತ್ಪುತ್ರಸ್ತೇ ನ ನಿವಾರಿತಃ।।

ಸಂಜಯನು ಹೇಳಿದನು: “ರಾಜನ್! ಅದೊಂದು ಮಹಾ ತಪ್ಪನ್ನು ನೀನು ಉಪೇಕ್ಷಿಸಿ ಮಾಡಿದೆ. ಪುತ್ರನ ಮೇಲಿನ ವ್ಯಾಮೋಹದಿಂದ ನೀನು ಅದನ್ನು ನಿಲ್ಲಿಸಲು ಸಮರ್ಥನಾಗಿದ್ದರೂ ತಡೆಯಲಿಲ್ಲ.

03048012a ಶ್ರುತ್ವಾ ಹಿ ನಿರ್ಜಿತಾನ್ದ್ಯೂತೇ ಪಾಂಡವಾನ್ಮಧುಸೂದನಃ।
03048012c ತ್ವರಿತಃ ಕಾಮ್ಯಕೇ ಪಾರ್ಥಾನ್ಸಮಭಾವಯದಚ್ಯುತಃ।।

ಪಾಂಡವರು ದ್ಯೂತದಲ್ಲಿ ಸೋತರು ಎಂದು ತಿಳಿದಕೂಡಲೇ ಅಚ್ಯುತ ಮಧುಸೂದನನು ಕಾಮ್ಯಕವನದಲ್ಲಿ ಪಾರ್ಥರನ್ನು ಭೆಟ್ಟಿಯಾದನು.

03048013a ದ್ರುಪದಸ್ಯ ತಥಾ ಪುತ್ರಾ ಧೃಷ್ಟದ್ಯುಮ್ನಪುರೋಗಮಾಃ।
03048013c ವಿರಾಟೋ ಧೃಷ್ಟಕೇತುಶ್ಚ ಕೇಕಯಾಶ್ಚ ಮಹಾರಥಾಃ।।

ಹಾಗೆಯೇ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ದ್ರುಪದನ ಮಕ್ಕಳು, ವಿರಾಟ ಧೃಷ್ಟಕೇತು ಮತ್ತು ಮಹಾರಥಿ ಕೇಕಯನೂ ಪಾಂಡವರನ್ನು ಭೆಟ್ಟಿಯಾದರು.

03048014a ತೈಶ್ಚ ಯತ್ಕಥಿತಂ ತತ್ರ ದೃಷ್ಟ್ವಾ ಪಾರ್ಥಾನ್ಪರಾಜಿತಾನ್।
03048014c ಚಾರೇಣ ವಿದಿತಂ ಸರ್ವಂ ತನ್ಮಯಾ ವೇದಿತಂ ಚ ತೇ।।

ಪರಾಜಿತರಾದ ಪಾರ್ಥರನ್ನು ಕಂಡು ಅವರು ಅಲ್ಲಿ ಏನೇನು ಮಾತನಾಡಿದರು ಎನ್ನುವುದನ್ನು ಚಾರರಿಂದ ತಿಳಿದು ಎಲ್ಲವನ್ನೂ ನಾನು ನಿನಗೆ ತಿಳಿಸಿದ್ದೇನೆ.

03048015a ಸಮಾಗಮ್ಯ ವೃತಸ್ತತ್ರ ಪಾಂಡವೈರ್ಮಧುಸೂದನಃ।
03048015c ಸಾರಥ್ಯೇ ಫಲ್ಗುನಸ್ಯಾಜೌ ತಥೇತ್ಯಾಹ ಚ ತಾನ್ ಹರಿಃ।।

ಯುದ್ಧದ ಪ್ರಸಂಗವು ಬಂದರೆ ಅದರಲ್ಲಿ ಮಧುಸೂದನನು ಫಲ್ಗುನನ ಸಾರಥಿಯಾಗಲಿ ಎಂದು ಪಾಂಡವರು ಅಲ್ಲಿ ಸೇರಿದ್ದವರೊಂದಿಗೆ ನಿರ್ಧರಿಸಿದಾಗ ಹರಿಯು ಅದಕ್ಕೆ ಒಪ್ಪಿಕೊಂಡನು.

03048016a ಅಮರ್ಷಿತೋ ಹಿ ಕೃಷ್ಣೋಽಪಿ ದೃಷ್ಟ್ವಾ ಪಾರ್ಥಾಂಸ್ತಥಾಗತಾನ್।
03048016c ಕೃಷ್ಣಾಜಿನೋತ್ತರಾಸಂಗಾನಬ್ರವೀಚ್ಚ ಯುಧಿಷ್ಠಿರಂ।।

ಕೃಷ್ಣನೂ ಕೂಡ ಕೃಷ್ಣಾಜಿನವನ್ನು ಉತ್ತರೀಯವಾಗಿ ಹೊದೆಯುವ ಪರಿಸ್ಥಿತಿಯಲ್ಲಿದ್ದ ಪಾರ್ಥರನ್ನು ನೋಡಿ ಕೋಪಗೊಂಡು ಯುಧಿಷ್ಠಿರನಿಗೆ ಹೇಳಿದನು:

03048017a ಯಾ ಸಾ ಸಮೃದ್ಧಿಃ ಪಾರ್ಥಾನಾಮಿಂದ್ರಪ್ರಸ್ಥೇ ಬಭೂವ ಹ।
03048017c ರಾಜಸೂಯೇ ಮಯಾ ದೃಷ್ಟಾ ನೃಪೈರನ್ಯೈಃ ಸುದುರ್ಲಭಾ।।
03048018a ಯತ್ರ ಸರ್ವಾನ್ಮಹೀಪಾಲಾಂ ಶಸ್ತ್ರತೇಜೋಭಯಾರ್ದಿತಾನ್।
03048018c ಸವಂಗಾಂಗಾನ್ಸಪೌಂಡ್ರೋಡ್ರಾನ್ಸಚೋಲದ್ರವಿಡಾಂಧಕಾನ್।।
03048019a ಸಾಗರಾನೂಪಗಾಂಶ್ಚೈವ ಯೇ ಚ ಪತ್ತನವಾಸಿನಃ।
03048019c ಸಿಂಹಲಾನ್ಬರ್ಬರಾನ್ಮ್ಲೇಚ್ಚಾನ್ಯೇ ಚ ಜಾಂಗಲವಾಸಿನಃ।।
03048020a ಪಶ್ಚಿಮಾನಿ ಚ ರಾಜ್ಯಾನಿ ಶತಶಃ ಸಾಗರಾಂತಿಕಾನ್।
03048020c ಪಹ್ಲವಾನ್ದರದಾನ್ಸರ್ವಾನ್ಕಿರಾತಾನ್ಯವನಾಂ ಶಕಾನ್।।
03048021a ಹಾರಹೂಣಾಂಶ್ಚ ಚೀನಾಂಶ್ಚ ತುಖಾರಾನ್ಸೈಂಧವಾಂಸ್ತಥಾ।
03048021c ಜಾಗುಡಾನ್ರಮಠಾನ್ಮುಂಡಾನ್ ಸ್ತ್ರೀರಾಜ್ಯಾನಥ ತಂಗಣಾನ್।।
03048022a ಏತೇ ಚಾನ್ಯೇ ಚ ಬಹವೋ ಯೇ ಚ ತೇ ಭರತರ್ಷಭ।
03048022c ಆಗತಾನಹಮದ್ರಾಕ್ಷಂ ಯಜ್ಞೇ ತೇ ಪರಿವೇಷಕಾನ್।।
03048023a ಸಾ ತೇ ಸಮೃದ್ಧಿರ್ಯೈರಾತ್ತಾ ಚಪಲಾ ಪ್ರತಿಸಾರಿಣೀ।
03048023c ಆದಾಯ ಜೀವಿತಂ ತೇಷಾಮಾಹರಿಷ್ಯಾಮಿ ತಾಮಹಂ।।

“ಅನ್ಯ ರಾಜರಿಗೆ ದುರ್ಲಭವಾದ ಸಮೃದ್ಧಿಯನ್ನು ಇಂದ್ರಪ್ರಸ್ಥದಲ್ಲಿ ರಾಜಸೂಯಯಾಗದ ಸಮಯದಲ್ಲಿ ಪಾರ್ಥರಲ್ಲಿ ನಾನು ನೋಡಿದ್ದೆ. ಭರತರ್ಷಭ! ಅಲ್ಲಿ ಪಾಂಡವರ ಶಸ್ತ್ರತೇಜಸ್ಸಿನಿಂದ ಭಯಪಟ್ಟ ಎಲ್ಲ ಮಹೀಪಾಲರೂ - ವಂಗರು, ಅಂಗರು, ಪೌಂಡ್ರರು, ಓಡ್ರರು, ಚೋಳರು, ದ್ರವಿಡರು, ಅಂಧಕರು, ಸಾಗರತೀರದಲ್ಲಿ ಪಟ್ಟಣಗಳಲ್ಲಿ ವಾಸಿಸುವವರು, ಸಿಂಹಳೀಯರು, ಬರ್ಬರರು, ಕಾಡಿನಲ್ಲಿ ವಾಸಿಸುವ ಮ್ಲೇಚ್ಛರು, ಸಾಗರದ ಕೊನೆಯವರೆಗೆ ವಾಸಿಸುವ ನೂರಾರು ಪಶ್ಚಿಮದೇಶದವರು, ಪಲ್ಲವರು, ದರದರು, ಕಿರಾತರು, ಯವನರು, ಶಕರು, ಹಾರಹೂಣರು, ಚೀನರು, ತುಖಾರರು, ಸೈಂಧವರು, ಜಾಗುಡರು, ರಮಠರು, ಮುಂಡರು, ರಾಣಿಯರು ಆಳುವ ದೇಶದವರು, ತಂಗಣರು ಮತ್ತು ಇತರ ಬಹಳಷ್ಟು ರಾಜರು ನಿನ್ನ ಸೇವಕರಾಗಿ ಯಜ್ಞದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಆ ಮಹಾ ಸಮೃದ್ಧಿಯು ಚಪಲವಾಗಿ ಅಷ್ಟು ಬೇಗನೆ ಬೇರೆಯವರ ಕೈಸೇರಿತಲ್ಲ! ಅದನ್ನು ಕಸಿದುಕೊಂಡವರನ್ನು ಜೀವಂತವಾಗಿ ಬಿಡುವುದಿಲ್ಲ!

03048024a ರಾಮೇಣ ಸಹ ಕೌರವ್ಯ ಭೀಮಾರ್ಜುನಯಮೈಸ್ತಥಾ।
03048024c ಅಕ್ರೂರಗದಸಾಂಬೈಶ್ಚ ಪ್ರದ್ಯುಮ್ನೇನಾಹುಕೇನ ಚ।।
03048024e ಧೃಷ್ಟದ್ಯುಮ್ನೇನ ವೀರೇಣ ಶಿಶುಪಾಲಾತ್ಮಜೇನ ಚ।
03048025a ದುರ್ಯೋಧನಂ ರಣೇ ಹತ್ವಾ ಸದ್ಯಃ ಕರ್ಣಂ ಚ ಭಾರತ।।
03048025c ದುಃಶಾಸನಂ ಸೌಬಲೇಯಂ ಯಶ್ಚಾನ್ಯಃ ಪ್ರತಿಯೋತ್ಸ್ಯತೇ।

ಕೌರವ್ಯ! ಭಾರತ! ರಾಮ, ಭೀಮಾರ್ಜುನರು, ಯಮಳರು, ಅಕ್ರೂರ, ಗದ, ಸಾಂಬ, ಪ್ರದ್ಯುಮ್ನ, ಆಹುಕ, ವೀರ ಧೃಷ್ಟದ್ಯುಮ್ನ ಮತ್ತು ಶಿಶುಪಾಲನ ಮಗನ ಜೊತೆಗೂಡಿ ಇಂದೇ ರಣದಲ್ಲಿ ದುರ್ಯೋಧನ, ಕರ್ಣ, ದುಃಶಾಸನ, ಸೌಬಲ ಮತ್ತು ವಿರೋಧಿಸುವ ಇತರರನ್ನು ಕೊಲ್ಲುತ್ತೇನೆ.

03048026a ತತಸ್ತ್ವಂ ಹಾಸ್ತಿನಪುರೇ ಭ್ರಾತೃಭಿಃ ಸಹಿತೋ ವಸನ್।।
03048026c ಧಾರ್ತರಾಷ್ಟ್ರೀಂ ಶ್ರಿಯಂ ಪ್ರಾಪ್ಯ ಪ್ರಶಾಧಿ ಪೃಥಿವೀಮಿಮಾಂ।

ಅನಂತರ ಹಸ್ತಿನಾಪುರದಲ್ಲಿ ಸಹೋದರರೊಂದಿಗೆ ನೀನು ವಾಸಿಸಿ ಧೃತರಾಷ್ಟ್ರನ ಸಂಪತ್ತನ್ನು ಪಡೆದು ಇಡೀ ಭುವಿಯನ್ನೇ ಆಳಬಹುದು.”

03048027a ಅಥೈನಮಬ್ರವೀದ್ರಾಜಾ ತಸ್ಮಿನ್ವೀರಸಮಾಗಮೇ।।
03048027c ಶೃಣ್ವತ್ಸು ತೇಷು ಸರ್ವೇಷು ಧೃಷ್ಟದ್ಯುಮ್ನಮುಖೇಷು ಚ।

ಆಗ ರಾಜನು ವೀರರ ಆ ಸಮಾಗಮದಲ್ಲಿ ಧೃಷ್ಟದ್ಯುಮ್ನನೂ ಸೇರಿ ಎಲ್ಲರೂ ಕೇಳುತ್ತಿರಲು ಹೇಳಿದನು:

03048028a ಪ್ರತಿಗೃಹ್ಣಾಮಿ ತೇ ವಾಚಂ ಸತ್ಯಾಮೇತಾಂ ಜನಾರ್ದನ।।
03048028c ಅಮಿತ್ರಾನ್ಮೇ ಮಹಾಬಾಹೋ ಸಾನುಬಂಧಾನ್ ಹನಿಷ್ಯಸಿ।
03048029a ವರ್ಷಾತ್ತ್ರಯೋದಶಾದೂರ್ಧ್ವಂ ಸತ್ಯಂ ಮಾಂ ಕುರು ಕೇಶವ।।
03048029c ಪ್ರತಿಜ್ಞಾತೋ ವನೇ ವಾಸೋ ರಾಜಮಧ್ಯೇ ಮಯಾ ಹ್ಯಯಂ।

“ಜನಾರ್ದನ! ನಿನ್ನ ಮಾತನ್ನು ಸತ್ಯವೆಂದೇ ಸ್ವೀಕರಿಸುತ್ತೇನೆ. ಮಹಾಬಾಹೋ! ನನ್ನ ಶತ್ರುಗಳನ್ನು ಅವರ ಸಂಬಂಧಿಕರೊಂದಿಗೆ ಕೊಲ್ಲುತ್ತೀಯೆ. ಆದರೆ ಕೇಶವ! ಇದನ್ನು ಹದಿಮೂರು ವರ್ಷಗಳ ನಂತರ ಸತ್ಯವಾಗಿಸು. ಯಾಕೆಂದರೆ, ರಾಜರ ಮಧ್ಯದಲ್ಲಿ ನಾನು ವನವಾಸದ ಪ್ರತಿಜ್ಞೆಯನ್ನು ಮಾಡಿದ್ದೇನೆ.”

03048030a ತದ್ಧರ್ಮರಾಜವಚನಂ ಪ್ರತಿಶ್ರುತ್ಯ ಸಭಾಸದಃ।।
03048030c ಧೃಷ್ಟದ್ಯುಮ್ನಪುರೋಗಾಸ್ತೇ ಶಮಯಾಮಾಸುರಂಜಸಾ।
03048030e ಕೇಶವಂ ಮಧುರೈರ್ವಾಕ್ಯೈಃ ಕಾಲಯುಕ್ತೈರಮರ್ಷಿತಂ।।

ಧರ್ಮರಾಜನ ಆ ಮಾತುಗಳನ್ನು ಕೇಳಿದ ಧೃಷ್ಟದ್ಯುಮ್ನನೇ ಮೊದಲಾದ ಸಭಾಸದರು ಒಪ್ಪಿಗೆ ಮತ್ತು ಭರವಸೆಯನ್ನಿತ್ತು ಸಿಟ್ಟಾಗಿದ್ದ ಕೇಶವನನ್ನು ಆ ಸಮಯಕ್ಕೆ ಉಚಿತವಾದ ಮೃದುಮಾತುಗಳಿಂದ ಸಂತವಿಸಿದರು.

03048031a ಪಾಂಚಾಲೀಂ ಚಾಹುರಕ್ಲಿಷ್ಟಾಂ ವಾಸುದೇವಸ್ಯ ಶೃಣ್ವತಃ।
03048031c ದುರ್ಯೋಧನಸ್ತವ ಕ್ರೋಧಾದ್ದೇವಿ ತ್ಯಕ್ಷ್ಯತಿ ಜೀವಿತಂ।
03048031e ಪ್ರತಿಜಾನೀಮ ತೇ ಸತ್ಯಂ ಮಾ ಶುಚೋ ವರವರ್ಣಿನಿ।।

ಅವರು ವಾಸುದೇವನು ಕೇಳಿಸಿಕೊಳ್ಳುವಂತೆ ಬಹಳ ಕಷ್ಟದಲ್ಲಿದ್ದ ದ್ರೌಪದಿಗೆ ಹೇಳಿದರು: “ವರವರ್ಣಿನೀ! ದೇವೀ! ನಿನ್ನ ಕ್ರೋಧದಿಂದಾಗಿ ದುರ್ಯೋಧನನು ತನ್ನ ಜೀವವನ್ನು ಕಳೆದುಕೊಳ್ಳುತ್ತಾನೆ. ಇದು ಸತ್ಯವೆಂದು ತಿಳಿ. ದುಃಖಪಡಬೇಡ!

03048032a ಯೇ ಸ್ಮ ತೇ ಕುಪಿತಾಂ ಕೃಷ್ಣೇ ದೃಷ್ಟ್ವಾ ತ್ವಾಂ ಪ್ರಾಹಸಂಸ್ತದಾ।
03048032c ಮಾಂಸಾನಿ ತೇಷಾಂ ಖಾದಂತೋ ಹಸಿಷ್ಯಂತಿ ಮೃಗದ್ವಿಜಾಃ।।

ನಿನ್ನ ಸಿಟ್ಟನ್ನು ನೋಡಿ ನಿನ್ನ ಮೇಲೆ ಹಾಸ್ಯಮಾಡಿ ನಕ್ಕ ಅವರೆಲ್ಲರ ಮಾಂಸವನ್ನೂ ಪ್ರಾಣಿ ಪಕ್ಷಿಗಳು ತಿಂದು ನಗುತ್ತವೆ!

03048033a ಪಾಸ್ಯಂತಿ ರುಧಿರಂ ತೇಷಾಂ ಗೃಧ್ರಾ ಗೋಮಾಯವಸ್ತಥಾ।
03048033c ಉತ್ತಮಾಂಗಾನಿ ಕರ್ಷಂತೋ ಯೈಸ್ತ್ವಂ ಕೃಷ್ಟಾ ಸಭಾತಲೇ।।

ನಿನ್ನ ಉತ್ತಮಾಂಗಗಳನ್ನು ಹಿಡಿದು ಸಭೆಗೆ ಎಳೆದು ತಂದವರ ರುಂಡವನ್ನು ಎಳೆದಾಡುತ್ತಾ ಹದ್ದು ನರಿಗಳು ರಕ್ತವನ್ನು ಕುಡಿಯುತ್ತವೆ!

03048034a ತೇಷಾಂ ದ್ರಕ್ಷ್ಯಸಿ ಪಾಂಚಾಲಿ ಗಾತ್ರಾಣಿ ಪೃಥಿವೀತಲೇ।
03048034c ಕ್ರವ್ಯಾದೈಃ ಕೃಷ್ಯಮಾಣಾನಿ ಭಕ್ಷ್ಯಮಾಣಾನಿ ಚಾಸಕೃತ್।।

ಪಾಂಚಾಲಿ! ಕ್ರೂರ ಮೃಗಗಳು ಅವರ ಹೆಣಗಳನ್ನು ನೆಲದಮೇಲೆ ಎಳೆದಾಡಿ, ಎಡೆಬಿಡದೆ ಕಬಳಿಸುತ್ತಿರುವುದನ್ನು ನೀನು ನೋಡುತ್ತೀಯೆ!

03048035a ಪರಿಕ್ಲಿಷ್ಟಾಸಿ ಯೈಸ್ತತ್ರ ಯೈಶ್ಚಾಪಿ ಸಮುಪೇಕ್ಷಿತಾ।
03048035c ತೇಷಾಮುತ್ಕೃತ್ತಶಿರಸಾಂ ಭೂಮಿಃ ಪಾಸ್ಯತಿ ಶೋಣಿತಂ।।

ನಿನ್ನನ್ನು ಕಾಡಿಸಿದ ಮತ್ತು ಅದನ್ನು ನಿರ್ಲಕ್ಷಿಸಿ ನೋಡುತ್ತಿದ್ದವರ ಶಿರಗಳು ಕತ್ತರಿಸಿ ಬಿದ್ದು ಭೂಮಿಯು ಅವರ ರಕ್ತವನ್ನು ಕುಡಿಯುತ್ತದೆ.”

03048036a ಏವಂ ಬಹುವಿಧಾ ವಾಚಸ್ತದೋಚುಃ ಪುರುಷರ್ಷಭಾಃ।
03048036c ಸರ್ವೇ ತೇಜಸ್ವಿನಃ ಶೂರಾಃ ಸರ್ವೇ ಚಾಹತಲಕ್ಷಣಾಃ।।

ಈ ರೀತಿ ಅಲ್ಲಿ ಸೇರಿದ್ದ ಎಲ್ಲ ಉತ್ತಮಗುಣಗಳ ತೇಜಸ್ವಿ ಶೂರ ಪುರುಷರ್ಷಭರು ಬಹುವಿಧದಲ್ಲಿ ಮಾತನಾಡಿಕೊಳ್ಳುತ್ತಿದ್ದರು.

03048037a ತೇ ಧರ್ಮರಾಜೇನ ವೃತಾ ವರ್ಷಾದೂರ್ಧ್ವಂ ತ್ರಯೋದಶಾತ್।
03048037c ಪುರಸ್ಕೃತ್ಯೋಪಯಾಸ್ಯಂತಿ ವಾಸುದೇವಂ ಮಹಾರಥಾಃ।।

ಹದಿಮೂರು ವರ್ಷಗಳು ತುಂಬಿದ ನಂತರ ಧರ್ಮರಾಜನು ಆರಿಸಿದ ಈ ಮಹಾರಥಿಗಳು ವಾಸುದೇವನ ನಾಯಕತ್ವದಲ್ಲಿ ನಮ್ಮಮೇಲೆ ಆಕ್ರಮಣ ಮಾಡುತ್ತಾರೆ.

03048038a ರಾಮಶ್ಚ ಕೃಷ್ಣಶ್ಚ ಧನಂಜಯಶ್ಚ । ಪ್ರದ್ಯುಮ್ನಸಾಂಬೌ ಯುಯುಧಾನಭೀಮೌ।।
03048038c ಮಾದ್ರೀಸುತೌ ಕೇಕಯರಾಜಪುತ್ರಾಃ । ಪಾಂಚಾಲಪುತ್ರಾಃ ಸಹ ಧರ್ಮರಾಜ್ಞಾ।।
03048039a ಏತಾನ್ಸರ್ವಾಽಲ್ಲೋಕವೀರಾನಜೇಯಾನ್ । ಮಹಾತ್ಮನಃ ಸಾನುಬಂಧಾನ್ಸಸೈನ್ಯಾನ್।।
03048039c ಕೋ ಜೀವಿತಾರ್ಥೀ ಸಮರೇ ಪ್ರತ್ಯುದೀಯಾತ್ । ಕ್ರುದ್ಧಾನ್ಸಿಂಹಾನ್ಕೇಸರಿಣೋ ಯಥೈವ।।

ಧರ್ಮರಾಜನೊಂದಿಗೆ ರಾಮ, ಕೃಷ್ಣ, ಧನಂಜಯ, ಪ್ರದ್ಯುಮ್ನ, ಸಾಂಬ, ಯುಯುಧಾನ, ಭೀಮ, ಮಾದ್ರೀ ಸುತರು, ಕೇಕಯರಾಜಪುತ್ರ, ಪಾಂಚಾಲಪುತ್ರರು - ಇವರೆಲ್ಲ ಲೋಕವೀರರೂ, ಅಜೇಯರೂ, ಮಹಾತ್ಮರೂ, ಸಮರದಲ್ಲಿ ಹೋರಾಡಿ ತಮ್ಮ ಜೀವವನ್ನು ಉಳಿಸಿಕೊಳ್ಳಲು ಮುಂದಾಗುವ ತಮ್ಮ ಬಾಂಧವರು ಮತ್ತು ಸೈನ್ಯಗಳೊಡನೆ ಕೇಸರಿ ಸಿಂಹದಂತೆ ಕುಪಿತರಾಗಿದ್ದಾರೆ.”

03048040 ಧೃತರಾಷ್ಟ್ರ ಉವಾಚ।
03048040a ಯನ್ಮಾಬ್ರವೀದ್ವಿದುರೋ ದ್ಯೂತಕಾಲೇ। ತ್ವಂ ಪಾಂಡವಾಂ ಜೇಷ್ಯಸಿ ಚೇನ್ನರೇಂದ್ರ।।
03048040c ಧ್ರುವಂ ಕುರೂಣಾಮಯಮಂತಕಾಲೋ। ಮಹಾಭಯೋ ಭವಿತಾ ಶೋಣಿತೌಘಃ।।

ಧೃತರಾಷ್ಟ್ರನು ಹೇಳಿದನು: “ದ್ಯೂತದ ಸಮಯದಲ್ಲಿ ವಿದುರನು ನನಗೆ ಹೇಳಿದ್ದ – “ನರೇಂದ್ರ! ಒಂದು ವೇಳೆ ನೀನು ಪಾಂಡವರನ್ನು ಸೋಲಿಸಿದರೆ ಅದು ಖಂಡಿತವಾಗಿಯೂ ಕುರುಗಳ ಅಂತ್ಯವಾಗುತ್ತದೆ. ಮಹಾಭಯಂಕರ ರಕ್ತದ ಪ್ರವಾಹವು ಹರಿಯುವುದು!”

03048041a ಮನ್ಯೇ ತಥಾ ತದ್ಭವಿತೇತಿ ಸೂತ । ಯಥಾ ಕ್ಷತ್ತಾ ಪ್ರಾಹ ವಚಃ ಪುರಾ ಮಾಂ।।
03048041c ಅಸಂಶಯಂ ಭವಿತಾ ಯುದ್ಧಮೇತದ್ । ಗತೇ ಕಾಲೇ ಪಾಂಡವಾನಾಂ ಯಥೋಕ್ತಂ।।

ಸೂತ! ಹಿಂದೆ ಕ್ಷತ್ತನು ನನಗೆ ಹೇಳಿದ ಹಾಗೆಯೇ ಆಗುತ್ತದೆ ಎಂದು ನನಗನ್ನಿಸುತ್ತದೆ. ಪಾಂಡವರು ಒಪ್ಪಿಕೊಂಡ ಸಮಯದ ನಂತರ ಮುಂದೆ ಯುದ್ಧವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಧೃತರಾಷ್ಟ್ರವಿಲಾಪೇ ಅಷ್ಟಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಧೃತರಾಷ್ಟ್ರವಿಲಾಪವೆಂಬ ನಲ್ವತ್ತೇಳನೆಯ ಅಧ್ಯಾಯವು.