ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಇಂದ್ರಲೋಕಾಭಿಗಮನ ಪರ್ವ
ಅಧ್ಯಾಯ 46
ಸಾರ
ಅರ್ಜುನನು ಇಂದ್ರಲೋಕಕ್ಕೆ ಹೋಗಿದ್ದಾನೆಂದು ಕೇಳಿ ಧೃತರಾಷ್ಟ್ರನು ತನ್ನ ದುಃಖವನ್ನು ಸಂಜಯನಲ್ಲಿ ಹೇಳಿಕೊಂಡಿದುದು (1-18). ವೀರ ಪಾಂಡವರು ಧಾರ್ತರಾಷ್ಟ್ರರನ್ನು ಕೊನೆಗೊಳಿಸುತ್ತಾರೆಂದು ಸಂಜಯನು ಹೇಳುವುದು (19-31). ತನ್ನ ಮಾತನ್ನು ಮಗನು ಕೇಳುತ್ತಿಲ್ಲವಲ್ಲ ಎಂದು ಧೃತರಾಷ್ಟ್ರನು ಸಂತಾಪಪಡುವುದು (32-41).
03046001 ಜನಮೇಜಯ ಉವಾಚ।
03046001a ಅತ್ಯದ್ಭುತಮಿದಂ ಕರ್ಮ ಪಾರ್ಥಸ್ಯಾಮಿತತೇಜಸಃ।
03046001c ಧೃತರಾಷ್ಟ್ರೋ ಮಹಾತೇಜಾಃ ಶ್ರುತ್ವಾ ವಿಪ್ರ ಕಿಮಬ್ರವೀತ್।।
ಜನಮೇಜಯನು ಹೇಳಿದನು: “ವಿಪ್ರ! ಅಮಿತತೇಜಸ್ವಿ ಪಾರ್ಥನ ಈ ಅತಿ ಅದ್ಭುತಕರ್ಮದ ಕುರಿತು ಕೇಳಿ ಮಹಾತೇಜಸ್ವಿ ಧೃತರಾಷ್ಟ್ರನು ಏನು ಹೇಳಿದನು?”
03046002 ವೈಶಂಪಾಯನ ಉವಾಚ।
03046002a ಶಕ್ರಲೋಕಗತಂ ಪಾರ್ಥಂ ಶ್ರುತ್ವಾ ರಾಜಾಂಬಿಕಾಸುತಃ।
03046002c ದ್ವೈಪಾಯನಾದೃಷಿಶ್ರೇಷ್ಠಾತ್ಸಂಜಯಂ ವಾಕ್ಯಮಬ್ರವೀತ್।।
ವೈಶಂಪಾಯನನು ಹೇಳಿದನು: “ರಾಜನ್! ಪಾರ್ಥನು ಶಕ್ರಲೋಕಕ್ಕೆ ಹೋದುದನ್ನು ಋಷಿಶ್ರೇಷ್ಠ ದ್ವೈಪಾಯನನಿಂದ ಕೇಳಿದ ಅಂಬಿಕಾಸುತನು ಸಂಜಯನಿಗೆ ಹೇಳಿದನು:
03046003a ಶ್ರುತಂ ಮೇ ಸೂತ ಕಾರ್ತ್ಸ್ನ್ಯೆನ ಕರ್ಮ ಪಾರ್ಥಸ್ಯ ಧೀಮತಃ।
03046003c ಕಚ್ಚಿತ್ತವಾಪಿ ವಿದಿತಂ ಯಥಾತಥ್ಯೇನ ಸಾರಥೇ।।
“ಸೂತ! ಸಾರಥಿ! ಧೀಮಂತ ಪಾರ್ಥನ ಸಾಧನೆಗಳ ಕುರಿತು ಸಂಪೂರ್ಣವಾಗಿ ಕೇಳಿದ್ದೇನೆ. ನೀನೂ ಕೂಡ ಇದರ ಕುರಿತು ಹೇಗಾಯಿತೋ ಹಾಗೆ ತಿಳಿದುಕೊಂಡಿದ್ದೀಯಾ?
03046004a ಪ್ರಮತ್ತೋ ಗ್ರಾಮ್ಯಧರ್ಮೇಷು ಮಂದಾತ್ಮಾ ಪಾಪನಿಶ್ಚಯಃ।
03046004c ಮಮ ಪುತ್ರಃ ಸುದುರ್ಬುದ್ಧಿಃ ಪೃಥಿವೀಂ ಘಾತಯಿಷ್ಯತಿ।।
ಗ್ರಾಮ್ಯಧರ್ಮದಲ್ಲಿ ಪ್ರಮತ್ತನಾದ ನನ್ನ ಮಗ ದುರ್ಬುದ್ಧಿ ಮಂದಾತ್ಮ ಪಾಪನಿಶ್ಚಯನು ಭೂಮಿಯಲ್ಲಿರುವವರೆಲ್ಲರನ್ನೂ ಸಾಯಿಸುತ್ತಾನೆ.
03046005a ಯಸ್ಯ ನಿತ್ಯಮೃತಾ ವಾಚಃ ಸ್ವೈರೇಷ್ವಪಿ ಮಹಾತ್ಮನಃ।
03046005c ತ್ರೈಲೋಕ್ಯಮಪಿ ತಸ್ಯ ಸ್ಯಾದ್ಯೋದ್ಧಾ ಯಸ್ಯ ಧನಂಜಯಃ।।
ಧನಂಜಯನನ್ನು ಯೋದ್ಧನಾಗಿ ಪಡೆದ, ನಿತ್ಯವೂ, ಹಾಸ್ಯದಲ್ಲಿಯೂ, ಸತ್ಯವನ್ನೇ ಮಾತನಾಡುವ, ಮಹಾತ್ಮನು ತ್ರೈಲೋಕ್ಯವನ್ನೂ ತನ್ನದಾಗಿಸಿಕೊಳ್ಳಬಲ್ಲ!
03046006a ಅಸ್ಯತಃ ಕರ್ಣಿನಾರಾಚಾಂಸ್ತೀಕ್ಷ್ಣಾಗ್ರಾಂಶ್ಚ ಶಿಲಾಶಿತಾನ್।
03046006c ಕೋಽರ್ಜುನಸ್ಯಾಗ್ರತಸ್ತಿಷ್ಠೇದಪಿ ಮೃತ್ಯುರ್ಜರಾತಿಗಃ।।
ಮೃತ್ಯು ಮತ್ತು ವೃದ್ಧಾಪಗಳನ್ನು ಗೆದ್ದಿದ್ದವನಾಗಿದ್ದರೂ, ಯಾರು ತಾನೇ ಅರ್ಜುನನ ಕಲ್ಲಿನ ಮೇಲೆ ಮಸೆದು ಹರಿತಾದ ಕಿವಿಗಳನ್ನುಳ್ಳ ಕಬ್ಬಿಣದ ಬಾಣಗಳ ಎದಿರು ನಿಲ್ಲಬಹುದು?
03046007a ಮಮ ಪುತ್ರಾ ದುರಾತ್ಮಾನಃ ಸರ್ವೇ ಮೃತ್ಯುವಶಂ ಗತಾಃ।
03046007c ಯೇಷಾಂ ಯುದ್ಧಂ ದುರಾಧರ್ಷೈಃ ಪಾಂಡವೈಃ ಪ್ರತ್ಯುಪಸ್ಥಿತಂ।।
ದುರಾತ್ಮರಾದ ನನ್ನ ಮಕ್ಕಳೆಲ್ಲರೂ ಮೃತ್ಯುವಶವಾಗಿದ್ದಾರೆ. ಪಾಂಡವರೊಂದಿಗೆ ಇವರ ದುರಾಧರ್ಷ ಯುದ್ಧವು ನಡೆಯಲಿಕ್ಕಿದೆ!
03046008a ತಸ್ಯೈವ ಚ ನ ಪಶ್ಯಾಮಿ ಯುಧಿ ಗಾಂಡೀವಧನ್ವನಃ।
03046008c ಅನಿಶಂ ಚಿಂತಯಾನೋಽಪಿ ಯ ಏನಮುದಿಯಾದ್ರಥೀ।।
ಯುದ್ಧದಲ್ಲಿ ಈ ಗಾಂಡೀವಧನುಸ್ಸನ್ನು ಹಿಡಿದಿರುವನನ್ನು ಎದುರಿಸುವ ರಥಿಕನನ್ನು ನಾನು ಕಾಣುತ್ತಿಲ್ಲವಲ್ಲ! ಎಂದು ದಿನರಾತ್ರಿಯೂ ಚಿಂತಿಸುತ್ತಿದ್ದೇನೆ.
03046009a ದ್ರೋಣಕರ್ಣೌ ಪ್ರತೀಯಾತಾಂ ಯದಿ ಭೀಷ್ಮೋಽಪಿ ವಾ ರಣೇ।
03046009c ಮಹಾನ್ಸ್ಯಾತ್ಸಂಶಯೋ ಲೋಕೇ ನ ತು ಪಶ್ಯಾಮಿ ನೋ ಜಯಂ।।
ದ್ರೋಣ ಮತ್ತು ಕರ್ಣರಿಬ್ಬರೂ ಮತ್ತು ಭೀಷ್ಮನೇ ಅವನ ಎದುರಾದರೂ ಇಡೀ ಲೋಕಕ್ಕೇ ಮಹಾ ಅಪಾಯವನ್ನು ಕಾಣುತ್ತೇನೆಯೇ ಹೊರತು ಜಯವನ್ನು ಕಾಣುತ್ತಿಲ್ಲ1!
03046010a ಘೃಣೀ ಕರ್ಣಃ ಪ್ರಮಾದೀ ಚ ಆಚಾರ್ಯಃ ಸ್ಥವಿರೋ ಗುರುಃ।
03046010c ಅಮರ್ಷೀ ಬಲವಾನ್ಪಾರ್ಥಃ ಸಂರಂಭೀ ದೃಢವಿಕ್ರಮಃ।।
ಕರ್ಣನು ಕರುಣಾಮಯಿ ಮತ್ತು ಮರೆತುಹೋಗುವ ಸ್ವಭಾವವುಳ್ಳವ. ಅವನ ಗುರುವು ಬಹಳ ವೃದ್ಧ. ಪಾರ್ಥನು ಸಿಟ್ಟೆದ್ದಿದ್ದಾನೆ, ಬಲಶಾಲಿಯಾಗಿದ್ದಾನೆ, ಮತ್ತು ದುಡುಕದೇ ಧೃಢನಾಗಿ ಯುದ್ಧಮಾಡುವವನು.
03046011a ಭವೇತ್ಸುತುಮುಲಂ ಯುದ್ಧಂ ಸರ್ವಶೋಽಪ್ಯಪರಾಜಿತಂ।
03046011c ಸರ್ವೇ ಹ್ಯಸ್ತ್ರವಿದಃ ಶೂರಾಃ ಸರ್ವೇ ಪ್ರಾಪ್ತಾ ಮಹದ್ಯಶಃ।।
ಎಲ್ಲರೊಡನೆಯೂ, ಯಾರನ್ನೂ ಗೆಲ್ಲಲಾಗದ ಭಯಂಕರ ಹೋರಾಟದ ಮಹಾಯುದ್ಧವು ನಡೆಯಲಿದೆ! ಎಲ್ಲರೂ ಅಸ್ತ್ರವಿದರೇ, ಮತ್ತು ಎಲ್ಲರೂ ಮಹಾಯಶಸ್ಸು ಗಳಿಸಿದ ಶೂರರೇ!
03046012a ಅಪಿ ಸರ್ವೇಶ್ವರತ್ವಂ ಹಿ ನ ವಾಂಚೇರನ್ಪರಾಜಿತಾಃ।
03046012c ವಧೇ ನೂನಂ ಭವೇಚ್ಛಾಂತಿಸ್ತೇಷಾಂ ವಾ ಫಲ್ಗುನಸ್ಯ ವಾ।।
ಇನ್ನೊಬ್ಬರನ್ನು ಗೆದ್ದರೂ ಎಲ್ಲದರ ಒಡೆತನವನ್ನು ಬಯಸುವುದಿಲ್ಲ! ಅಂತ್ಯದಲ್ಲಿ ಇವರ ಅಥವಾ ಫಲ್ಗುನನ ವಧೆಯಾಗುತ್ತದೆ!
03046013a ನ ತು ಹಂತಾರ್ಜುನಸ್ಯಾಸ್ತಿ ಜೇತಾ ವಾಸ್ಯ ನ ವಿದ್ಯತೇ।
03046013c ಮನ್ಯುಸ್ತಸ್ಯ ಕಥಂ ಶಾಮ್ಯೇನ್ಮಂದಾನ್ಪ್ರತಿ ಸಮುತ್ಥಿತಃ।।
ಆದರೆ ಅರ್ಜುನನನ್ನು ಕೊಲ್ಲುವವರು ಅಥವಾ ಗೆಲ್ಲುವವರು ಯಾರು ಎಂದು ತಿಳಿಯುತ್ತಿಲ್ಲ. ಮೂಢರ ಮೇಲೆ ಉಂಟಾಗಿರುವ ಈ ಕೋಪಾಗ್ನಿಯನ್ನು ಹೇಗೆ ತಣಿಸಬಹುದು?
03046014a ತ್ರಿದಶೇಶಸಮೋ ವೀರಃ ಖಾಂಡವೇಽಗ್ನಿಮತರ್ಪಯತ್।
03046014c ಜಿಗಾಯ ಪಾರ್ಥಿವಾನ್ಸರ್ವಾನ್ರಾಜಸೂಯೇ ಮಹಾಕ್ರತೌ।।
ತ್ರಿದಶಗಳ ಒಡೆಯನ ಸಮನಾಗಿರುವ ಈ ವೀರನು ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಿದ ಮತ್ತು ರಾಜಸೂಯ ಮಹಾಯಜ್ಞದಲ್ಲಿ ಸರ್ವ ರಾಜರನ್ನೂ ಗೆದ್ದ.
03046015a ಶೇಷಂ ಕುರ್ಯಾದ್ಗಿರೇರ್ವಜ್ರಂ ನಿಪತನ್ಮೂರ್ಧ್ನಿ ಸಂಜಯ।
03046015c ನ ತು ಕುರ್ಯುಃ ಶರಾಃ ಶೇಷಮಸ್ತಾಸ್ತಾತ ಕಿರೀಟಿನಾ।।
ಪರ್ವತದ ಮೇಲೆ ಬಿದ್ದ ವಜ್ರಾಯುಧವಾದರೂ ಸ್ವಲ್ಪವನ್ನು ಉಳಿಸಬಹುದು ಆದರೆ ಸಂಜಯ! ನನ್ನ ಮಗ ಕಿರೀಟಿಯು2 ಬಿಟ್ಟ ಶರಗಳು ಏನನ್ನೂ ಉಳಿಸುವುದಿಲ್ಲ.
03046016a ಯಥಾ ಹಿ ಕಿರಣಾ ಭಾನೋಸ್ತಪಂತೀಹ ಚರಾಚರಂ।
03046016c ತಥಾ ಪಾರ್ಥಭುಜೋತ್ಸೃಷ್ಟಾಃ ಶರಾಸ್ತಪ್ಸ್ಯಂತಿ ಮೇ ಸುತಾನ್।।
ಸೂರ್ಯನ ಕಿರಣಗಳು ಹೇಗೆ ಚರಾಚರಗಳನ್ನೂ ಸುಡುತ್ತವೆಯೋ ಹಾಗೆ ಪಾರ್ಥನ ಭುಜದಿಂದ ಬಿಟ್ಟ ಬಾಣಗಳು ನನ್ನ ಮಕ್ಕಳನ್ನು ಸುಡುತ್ತವೆ.
03046017a ಅಪಿ ವಾ ರಥಘೋಷೇಣ ಭಯಾರ್ತಾ ಸವ್ಯಸಾಚಿನಃ।
03046017c ಪ್ರತಿಭಾತಿ ವಿದೀರ್ಣೇವ ಸರ್ವತೋ ಭಾರತೀ ಚಮೂಃ।।
ಸವ್ಯಸಾಚಿಯ ರಥಘೋಷದಿಂದ ಭಯಾರ್ತರಾಗಿ ಭಾರತೀಯ ಸೇನೆಯು ಎಲ್ಲೆಡೆಯಲ್ಲಿಯೂ ಚದುರಿಹೋಗುತ್ತಿರುವಂತೆ ಕಾಣುತ್ತಿದೆ.
03046018a ಯದುದ್ವಪನ್ಪ್ರವಪಂಶ್ಚೈವ ಬಾಣಾನ್। ಸ್ಥಾತಾತತಾಯೀ ಸಮರೇ ಕಿರೀಟೀ।।
03046018c ಸೃಷ್ಟೋಽಂತಕಃ ಸರ್ವಹರೋ ವಿಧಾತ್ರಾ। ಭವೇದ್ಯಥಾ ತದ್ವದಪಾರಣೀಯಃ।।
ಯುದ್ಧದಲ್ಲಿ ಒಂದೇ ಸಮನೆ ತನ್ನ ಬತ್ತಳಿಕೆಗಳಿಂದ ಬಾಣಗಳನ್ನು ಮುಂದೆ ಸುರಿಸುತ್ತಿರುವ ಧನುಸ್ಸನ್ನು ಎಳೆದು ನಿಂತಿರುವ, ಸೃಷ್ಟಿಮಾಡುವ ಮತ್ತು ಸೃಷ್ಟಿಯಾದುದೆಲ್ಲವನ್ನೂ ಅಂತ್ಯಗೊಳಿಸುವ ವಿಧಾತ್ರನಂತಿರುವ ಕಿರೀಟಿಯುನ್ನು ಕಾಣುತ್ತಿದ್ದೇನೆ. ಆದರೆ ಆಗಲೇ ಬೇಕಾದ್ದುದನ್ನು ಆಗಬಾರದು ಎಂದು ತಡೆಯಲಿಕ್ಕಾಗುವುದಿಲ್ಲವಲ್ಲ!”
03046019 ಸಂಜಯ ಉವಾಚ।
03046019a ಯದೇತತ್ಕಥಿತಂ ರಾಜಂಸ್ತ್ವಯಾ ದುರ್ಯೋಧನಂ ಪ್ರತಿ।
03046019c ಸರ್ವಮೇತದ್ಯಥಾತ್ಥ ತ್ವಂ ನೈತನ್ಮಿಥ್ಯಾ ಮಹೀಪತೇ।।
ಸಂಜಯನು ಹೇಳಿದನು: “ರಾಜನ್! ಮಹೀಪತೇ! ದುರ್ಯೋಧನನ ಕುರಿತು ನೀನು ಹೇಳಿದುದೆಲ್ಲವೂ ಇರುವ ಹಾಗೆಯೇ ಇದೆ. ಅದರಲ್ಲಿ ಏನೂ ಸುಳ್ಳಿಲ್ಲ.
03046020a ಮನ್ಯುನಾ ಹಿ ಸಮಾವಿಷ್ಟಾಃ ಪಾಂಡವಾಸ್ತೇಽಮಿತೌಜಸಃ।
03046020c ದೃಷ್ಟ್ವಾ ಕೃಷ್ಣಾಂ ಸಭಾಂ ನೀತಾಂ ಧರ್ಮಪತ್ನೀಂ ಯಶಸ್ವಿನೀಂ।।
03046021a ದುಃಶಾಸನಸ್ಯ ತಾ ವಾಚಃ ಶ್ರುತ್ವಾ ತೇ ದಾರುಣೋದಯಾಃ।
03046021c ಕರ್ಣಸ್ಯ ಚ ಮಹಾರಾಜ ನ ಸ್ವಪ್ಸ್ಯಂತೀತಿ ಮೇ ಮತಿಃ।।
ಅಮಿತೌಜಸ ಪಾಂಡವರು ತಮ್ಮ ಧರ್ಮಪತ್ನಿ ಯಶಸ್ವಿನೀ ಕೃಷ್ಣೆಯನ್ನು ಸಭೆಗೆ ಎಳೆತಂದುದನ್ನು ನೋಡಿ, ದುಃಶಾಸನನ ಮತ್ತು ಕರ್ಣನ ಆ ದಾರುಣ ಪರಿಣಾಮವನ್ನು ತರುವ ಮಾತುಗಳನ್ನು ಕೇಳಿ ಚೆನ್ನಾಗಿ ನಿದ್ದೆಮಾಡುತ್ತಾರೆ ಎಂದು ನನಗನಿಸುವುದಿಲ್ಲ.
03046022a ಶ್ರುತಂ ಹಿ ತೇ ಮಹಾರಾಜ ಯಥಾ ಪಾರ್ಥೇನ ಸಂಯುಗೇ।
03046022c ಏಕಾದಶತನುಃ ಸ್ಥಾಣುರ್ಧನುಷಾ ಪರಿತೋಷಿತಃ।।
ಮಹಾರಾಜ! ಹೇಗೆ ಏಕಾದಶತನು ಸ್ಥಾಣುವು ಹೋರಾಟದಲ್ಲಿ ಪಾರ್ಥನ ಬಿಲ್ಲುಗಾರಿಕೆಯನ್ನು ಮೆಚ್ಚಿಕೊಂಡ ಎನ್ನುವುದನ್ನು ನಾನು ಕೇಳಿದ್ದೇನೆ.
03046023a ಕೈರಾತಂ ವೇಷಮಾಸ್ಥಾಯ ಯೋಧಯಾಮಾಸ ಫಲ್ಗುನಂ।
03046023c ಜಿಜ್ಞಾಸುಃ ಸರ್ವದೇವೇಶಃ ಕಪರ್ದೀ ಭಗವಾನ್ಸ್ವಯಂ।।
ಅವನನ್ನು ಪರೀಕ್ಷಿಸಲು ಸರ್ವದೇವೇಶ, ಕಪರ್ದಿ ಭಗವಾನನು ಕಿರಾತನ ವೇಷವನ್ನು ಧರಿಸಿ ಫಲ್ಗುನನೊಂದಿಗೆ ಸ್ವಯಂ ಯುದ್ಧ ಮಾಡಿದನು.
03046024a ತತ್ರೈನಂ ಲೋಕಪಾಲಾಸ್ತೇ ದರ್ಶಯಾಮಾಸುರರ್ಜುನಂ।
03046024c ಅಸ್ತ್ರಹೇತೋಃ ಪರಾಕ್ರಾಂತಂ ತಪಸಾ ಕೌರವರ್ಷಭಂ।।
ಅದೇ ಸಮಯದಲ್ಲಿ ಲೋಕಪಾಲಕರೂ ಕೂಡ ಅಸ್ತ್ರಕ್ಕಾಗಿ ಅತ್ಯಂತ ಕಷ್ಟಕರ ತಪಸ್ಸನ್ನು ಮಾಡುತ್ತಿದ್ದ ಕೌರವರ್ಷಭ ಅರ್ಜುನನಿಗೆ ಕಾಣಿಸಿಕೊಂಡರು.
03046025a ನೈತದುತ್ಸಹತೇಽನ್ಯೋ ಹಿ ಲಬ್ಧುಮನ್ಯತ್ರ ಫಲ್ಗುನಾತ್।
03046025c ಸಾಕ್ಷಾದ್ದರ್ಶನಮೇತೇಷಾಮೀಶ್ವರಾಣಾಂ ನರೋ ಭುವಿ।।
03046026a ಮಹೇಶ್ವರೇಣ ಯೋ ರಾಜನ್ನ ಜೀರ್ಣೋ ಗ್ರಸ್ತಮೂರ್ತಿಮಾನ್।
03046026c ಕಸ್ತಮುತ್ಸಹತೇ ವೀರಂ ಯುದ್ಧೇ ಜರಯಿತುಂ ಪುಮಾನ್।।
ಈ ಭೂಮಿಯಲ್ಲಿ ಅನ್ಯ ಯಾವ ನರನಿಗೂ ಪಡೆಯಲು ಸಾಧ್ಯವಾಗದ ಆ ಈಶ್ವರರ ಸಾಕ್ಷಾತ್ ದರ್ಶನವನ್ನು ಫಲ್ಗುನನು ಪಡೆದನು. ರಾಜನ್! ಮಹೇಶ್ವರನೇ ಸೋಲಿಸಲಿಕ್ಕಾಗದವನನ್ನು ಯುದ್ಧದಲ್ಲಿ ಸೋಲಿಸುವ ವೀರ ಪುರುಷರು ಯಾರಿದ್ದಾರೆ?
03046027a ಆಸಾದಿತಮಿದಂ ಘೋರಂ ತುಮುಲಂ ಲೋಮಹರ್ಷಣಂ।
03046027c ದ್ರೌಪದೀಂ ಪರಿಕರ್ಷದ್ಭಿಃ ಕೋಪಯದ್ಭಿಶ್ಚ ಪಾಂಡವಾನ್।।
03046028a ಯತ್ರ ವಿಸ್ಫುರಮಾಣೋಷ್ಠೋ ಭೀಮಃ ಪ್ರಾಹ ವಚೋ ಮಹತ್।
03046028c ದೃಷ್ಟ್ವಾ ದುರ್ಯೋಧನೇನೋರೂ ದ್ರೌಪದ್ಯಾ ದರ್ಶಿತಾವುಭೌ।।
ಅವರು ದ್ರೌಪದಿಯ ಮಾನಭಂಗಮಾಡಿ ಪಾಂಡವರ ಕೋಪಕ್ಕೊಳಗಾಗಿ ಮೈನವಿರೇಳಿಸುವ ಘೋರ ಯುದ್ಧವನ್ನು ತಂದುಕೊಂಡಿದ್ದಾರೆ. ಅಲ್ಲಿ ದ್ರೌಪದಿಗೆ ತನ್ನ ತೊಡೆಯನ್ನು ತೋರಿಸಿದ ದುರ್ಯೋಧನನಿಗೆ ಭೀಮನು ಕಂಪಿಸುತ್ತಿವ ತುಟಿಗಳಿಂದ ಮಹಾ ಮಾತನ್ನು ಹೇಳಿದ್ದನು.
03046029a ಊರೂ ಭೇತ್ಸ್ಯಾಮಿ ತೇ ಪಾಪ ಗದಯಾ ವಜ್ರಕಲ್ಪಯಾ।
03046029c ತ್ರಯೋದಶಾನಾಂ ವರ್ಷಾಣಾಮಂತೇ ದುರ್ದ್ಯೂತದೇವಿನಃ।।
“ಪಾಪಿ! ಮೋಸದಿಂದ ಜೂಜಾಡುವವನೇ! ಹದಿಮೂರು ವರ್ಷಗಳ ನಂತರ ವಜ್ರದಂತಿರುವ ನನ್ನ ಗದೆಯಿಂದ ನಿನ್ನ ತೊಡೆಯನ್ನು ಮುರಿಯುತ್ತೇನೆ!”
03046030a ಸರ್ವೇ ಪ್ರಹರತಾಂ ಶ್ರೇಷ್ಠಾಃ ಸರ್ವೇ ಚಾಮಿತತೇಜಸಃ।
03046030c ಸರ್ವೇ ಸರ್ವಾಸ್ತ್ರವಿದ್ವಾಂಸೋ ದೇವೈರಪಿ ಸುದುರ್ಜಯಾಃ।।
ಅವರೆಲ್ಲರೂ ಶ್ರೇಷ್ಠ ಹೋರಾಟಗಾರರು. ಎಲ್ಲರೂ ಅಮಿತ ತೇಜಸ್ಸುಳ್ಳವರು. ಎಲ್ಲರೂ ದೇವತೆಗಳಿಂದಲೂ ಗೆಲ್ಲಲಿಕ್ಕಾಗದ ಸರ್ವ ಅಸ್ತ್ರ ವಿದ್ವಾಂಸರು.
03046031a ಮನ್ಯೇ ಮನ್ಯುಸಮುದ್ಧೂತಾಃ ಪುತ್ರಾಣಾಂ ತವ ಸಂಯುಗೇ।
03046031c ಅಂತಂ ಪಾರ್ಥಾಃ ಕರಿಷ್ಯಂತಿ ವೀರ್ಯಾಮರ್ಷಸಮನ್ವಿತಾಃ।।
ವೀರರೂ ರೋಷ ಸಮನ್ವಿತರೂ ಆದ ಸಿಟ್ಟಿಗೆದ್ದ ಪಾರ್ಥರು ನಿನ್ನ ಪುತ್ರರನ್ನು ಯುದ್ಧದಲ್ಲಿ ಕೊನೆಗಾಣಿಸುತ್ತಾರೆ ಎಂದು ನನಗನ್ನಿಸುತ್ತದೆ.”
03046032 ಧೃತರಾಷ್ಟ್ರ ಉವಾಚ।
03046032a ಕಿಂ ಕೃತಂ ಸೂತ ಕರ್ಣೇನ ವದತಾ ಪರುಷಂ ವಚಃ।
03046032c ಪರ್ಯಾಪ್ತಂ ವೈರಮೇತಾವದ್ಯತ್ಕೃಷ್ಣಾ ಸಾ ಸಭಾಂ ಗತಾ।।
ಧೃತರಾಷ್ಟ್ರನು ಹೇಳಿದನು: “ಸೂತ! ಕರ್ಣನು ಎಂಥಹ ಪೌರುಷದ ಮಾತುಗಳನ್ನಾಡಿದ್ದ! ಕೃಷ್ಣೆಯನ್ನು ಸಭೆಗೆ ಎಳೆದು ತಂದುದೇ ಈ ವೈರಕ್ಕೆ ಕಾರಣವಾಯಿತು.
03046033a ಅಪೀದಾನೀಂ ಮಮ ಸುತಾಸ್ತಿಷ್ಠೇರನ್ಮಂದಚೇತಸಃ।
03046033c ಯೇಷಾಂ ಭ್ರಾತಾ ಗುರುರ್ಜ್ಯೇಷ್ಠೋ ವಿನಯೇ ನಾವತಿಷ್ಠತೇ।।
ಅವರ ಭ್ರಾತ ಗುರು ಜ್ಯೇಷ್ಠನು ವಿನಯದಿಂದ ನಡೆದುಕೊಳ್ಳುವುದಿಲ್ಲವಾದರೆ ನನ್ನ ಮೂಢ ಮಕ್ಕಳು ಹಾಗೆಯೇ ಇರುತ್ತಾರೆ.
03046034a ಮಮಾಪಿ ವಚನಂ ಸೂತ ನ ಶುಶ್ರೂಷತಿ ಮಂದಭಾಕ್।
03046034c ದೃಷ್ಟ್ವಾ ಮಾಂ ಚಕ್ಷುಷಾ ಹೀನಂ ನಿರ್ವಿಚೇಷ್ಟಮಚೇತನಂ।।
ಸೂತ! ನನಗೆ ಕಾಣಿಸುವುದಿಲ್ಲ ಎಂದು ನೋಡಿ ಈ ನಿರ್ವಿಚೇಷ್ಟ ಅಚೇತನನ ಮಾತುಗಳನ್ನು ಆ ದುರಾದೃಷ್ಟನು ಕೇಳುವುದಿಲ್ಲ.
03046035a ಯೇ ಚಾಸ್ಯ ಸಚಿವಾ ಮಂದಾಃ ಕರ್ಣಸೌಬಲಕಾದಯಃ।
03046035c ತೇಽಪ್ಯಸ್ಯ ಭೂಯಸೋ ದೋಷಾನ್ವರ್ಧಯಂತಿ ವಿಚೇತಸಃ।।
ಅವನ ಸಚಿವರಾದ ಕರ್ಣ, ಸೌಬಲ ಮೊದಲಾದವರು ಆ ಬುದ್ಧಿಯಿಲ್ಲದವನ ದೋಷಗಳನ್ನು ಹೆಚ್ಚಿಸಿ ತಾವೂ ಮೂಢರಂತಿದ್ದಾರೆ.
03046036a ಸ್ವೈರಮುಕ್ತಾ ಅಪಿ ಶರಾಃ ಪಾರ್ಥೇನಾಮಿತತೇಜಸಾ।
03046036c ನಿರ್ದಹೇಯುರ್ಮಮ ಸುತಾನ್ಕಿಂ ಪುನರ್ಮನ್ಯುನೇರಿತಾಃ।।
ಅಮಿತ ತೇಜಸ್ವಿ ಪಾರ್ಥನು ಮೋಜಿಗೆಂದು ಬಾಣವನ್ನು ಬಿಟ್ಟರೂ ನನ್ನ ಮಕ್ಕಳನ್ನು ಅದು ಸುಟ್ಟುಭಸ್ಮಮಾಡುತ್ತದೆ. ಇನ್ನು ಸಿಟ್ಟಿನಿಂದ ಹೋರಾಡಿದರೆ ಹೇಗೆ?
03046037a ಪಾರ್ಥಬಾಹುಬಲೋತ್ಸೃಷ್ಟಾ ಮಹಾಚಾಪವಿನಿಃಸೃತಾಃ।
03046037c ದಿವ್ಯಾಸ್ತ್ರಮಂತ್ರಮುದಿತಾಃ ಸಾದಯೇಯುಃ ಸುರಾನಪಿ।।
ಪಾರ್ಥನ ಬಾಹುಬಲದಿಂದ ಬಿಡಲ್ಪಟ್ಟ, ಮಹಾಚಾಪದಿಂದ ಬಿಡಲ್ಪಟ್ಟ, ದಿವ್ಯ ಅಸ್ತ್ರ ಮಂತ್ರಗಳಿಂದ ಹುಟ್ಟಿದ ಬಾಣಗಳು ಸುರರನ್ನು ಕೂಡ ಸದೆಬಡಿಯುತ್ತವೆ.
03046038a ಯಸ್ಯ ಮಂತ್ರೀ ಚ ಗೋಪ್ತಾ ಚ ಸುಹೃಚ್ಚೈವ ಜನಾರ್ದನಃ।
03046038c ಹರಿಸ್ತ್ರೈಲೋಕ್ಯನಾಥಃ ಸ ಕಿಂ ನು ತಸ್ಯ ನ ನಿರ್ಜಿತಂ।।
ಜನಾರ್ದನ, ಹರಿ ತ್ರೈಲೋಕ್ಯನಾಥನನ್ನೇ ನಂಬಿಕೆಯ ಸ್ನೇಹಿತನನ್ನಾಗಿ ಪಡೆದ ಅವನು ಏನನ್ನು ತಾನೇ ಗೆಲ್ಲಲಿಲ್ಲ?
03046039a ಇದಂ ಚ ಸುಮಹಚ್ಚಿತ್ರಮರ್ಜುನಸ್ಯೇಹ ಸಂಜಯ।
03046039c ಮಹಾದೇವೇನ ಬಾಹುಭ್ಯಾಂ ಯತ್ಸಮೇತ ಇತಿ ಶ್ರುತಿಃ।।
ಸಂಜಯ! ಅರ್ಜುನನು ಮಹಾದೇವನೊಂದಿಗೆ ಬಾಹುಗಳೊಂದಿಗೆ ಎದುರಾದ ಎಂದು ಕೇಳಿದ್ದುದು ಮಹಾ ವಿಚಿತ್ರವಾದುದು.
03046040a ಪ್ರತ್ಯಕ್ಷಂ ಸರ್ವಲೋಕಸ್ಯ ಖಾಂಡವೇ ಯತ್ಕೃತಂ ಪುರಾ।
03046040c ಫಲ್ಗುನೇನ ಸಹಾಯಾರ್ಥೇ ವಹ್ನೇರ್ದಾಮೋದರೇಣ ಚ।।
ಹಿಂದೆ ಖಾಂಡವದಲ್ಲಿ ಅಗ್ನಿಯ ಸಹಾಯಕ್ಕೆಂದು ಫಲ್ಗುನ ದಾಮೋದರರು ಏನು ಸಾಧಿಸಿದರು ಅದು ಎಲ್ಲ ಲೋಕಕ್ಕೂ ತಿಳಿದಿದೆ.
03046041a ಸರ್ವಥಾ ನಾಸ್ತಿ ಮೇ ಪುತ್ರಃ ಸಾಮಾತ್ಯಃ ಸಹಬಾಂಧವಃ।
03046041c ಕ್ರುದ್ಧೇ ಪಾರ್ಥೇ ಚ ಭೀಮೇ ಚ ವಾಸುದೇವೇ ಚ ಸಾತ್ವತೇ।।
ಪಾರ್ಥ, ಭೀಮ ಮತ್ತು ಸಾತ್ವತ ವಾಸುದೇವರು ಕೃದ್ಧರಾದರೆ ಅಮಾತ್ಯರೊಂದಿಗೆ, ಬಾಂಧವರೊಂದಿಗೆ ನನ್ನ ಮಕ್ಕಳು ಸರ್ವಥಾ ಇರುವುದಿಲ್ಲ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಧೃತರಾಷ್ಟ್ರಖೇದೇ ಷಟ್ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಧೃತರಾಷ್ಟ್ರಖೇದವೆಂಬ ನಲ್ವತ್ತಾರನೆಯ ಅಧ್ಯಾಯವು.
-
ಒಂದು ವೇಳೆ ದ್ರೋಣ, ಕರ್ಣ, ಭೀಷ್ಮರು ಈ ಮೂವರೂ ಒಟ್ಟಾಗಿ ಅರ್ಜುನನನ್ನು ಎದುರಿಸಿದರೂ, ಅರ್ಜುನನಿಗೂ ಲೋಕವನ್ನೇ ನಾಶಪಡಿಸಬಲ್ಲ, ಶಿವನ ಬ್ರಹ್ಮಶಿರ ಪಾಶುಪತ, ಇಂದ್ರನ ವಜ್ರಾಯುಧ, ಯಮನ ದಂಡ, ವರುಣನ ಪಾಶ, ಮತ್ತು ಕುಬೇರನ ಅಂತರ್ಧಾನಾಸ್ತ್ರಗಳು ದೊರೆತಿರುವುದರಿಂದ, ಬ್ರಹ್ಮಶಿರಾಸ್ತ್ರವನ್ನು ಈಗಾಗಲೇ ಪಡೆದಿರುವ ದ್ರೋಣ, ಕರ್ಣ, ಮತ್ತು ಭೀಷ್ಮರೂ ಬ್ರಹ್ಮಶಿರಾಸ್ತ್ರವನ್ನು ಉಪಯೋಗಿಸಿದರೆ ಇಡೀ ಲೋಕವೇ ನಾಶವಾಗಬಹುದು. ↩︎
-
ಇಲ್ಲಿ ಧೃತರಾಷ್ಟ್ರನಿಗೆ ಅರ್ಜುನನೂ ತನ್ನ ಮಗ ಎನ್ನುವ ಭಾವನೆಯಿದ್ದುದು ವ್ಯಕ್ತವಾಗುತ್ತದೆ. ↩︎