045 ಲೋಮಶಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 45

ಸಾರ

ಪಾಂಡವನು ಅಸ್ತ್ರಗಳನ್ನೂ, ಗಂಧರ್ವ ಚಿತ್ರಸೇನನಿಂದ ಸಂಗೀತ ವಾದ್ಯಗಳನ್ನೂ ಕಲಿತುಕೊಂಡಿದುದು (1-8). ಮಹರ್ಷಿ ಲೋಮಶನು ಇಂದ್ರನೊಂದಿಗೆ ಸಿಂಹಾಸನದಲ್ಲಿ ಕುಳಿತಿದ್ದ ಅರ್ಜುನನನ್ನು ನೋಡಿ ವಿಸ್ಮಿತನಾದುದು (9-14). ಅರ್ಜುನನು ಯಾರೆಂದು ಇಂದ್ರನು ಲೋಮಶನಿಗೆ ಪರಿಚಯಿಸಿದುದು (15-32). ಲೋಮಶನು ಭೂಮಿಗೆ ಹೋಗಿ ಯುಧಿಷ್ಠಿರನನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗಬೇಕೆಂದು ಇಂದ್ರನು ಹೇಳಿದುದು (33-38).

03045001 ವೈಶಂಪಾಯನ ಉವಾಚ।
03045001a ತತೋ ದೇವಾಃ ಸಗಂಧರ್ವಾಃ ಸಮಾದಾಯಾರ್ಘ್ಯಮುತ್ತಮಂ।
03045001c ಶಕ್ರಸ್ಯ ಮತಮಾಜ್ಞಾಯ ಪಾರ್ಥಮಾನರ್ಚುರಂಜಸಾ।।

ವೈಶಂಪಾಯನನು ಹೇಳಿದನು: “ಶಕ್ರನ ಇಂಗಿತವನ್ನು ತಿಳಿದ ಗಂಧರ್ವರೂ ಕೂಡಿ ದೇವತೆಗಳು ಉತ್ತಮ ಅರ್ಘ್ಯವನ್ನು ಸಿದ್ಧಪಡಿಸಿ ಪಾರ್ಥನನ್ನು ಯಥಾವತ್ತಾಗಿ ಅರ್ಚಿಸಿದರು.

03045002a ಪಾದ್ಯಮಾಚಮನೀಯಂ ಚ ಪ್ರತಿಗ್ರಾಹ್ಯ ನೃಪಾತ್ಮಜಂ।
03045002c ಪ್ರವೇಶಯಾಮಾಸುರಥೋ ಪುರಂದರನಿವೇಶನಂ।।

ನೃಪತಾತ್ಮಜನಿಗೆ ಪಾದ್ಯ ಆಚಮನೀಯಗಳನ್ನು ನೀಡಿ ಪುರಂದರನ ಅರಮನೆಯನ್ನು ಪ್ರವೇಶಿಸಲು ಸಹಾಯಮಾಡಿದರು.

03045003a ಏವಂ ಸಂಪೂಜಿತೋ ಜಿಷ್ಣುರುವಾಸ ಭವನೇ ಪಿತುಃ।
03045003c ಉಪಶಿಕ್ಷನ್ಮಹಾಸ್ತ್ರಾಣಿ ಸಸಂಹಾರಾಣಿ ಪಾಂಡವಃ।।

ಈ ರೀತಿ ಸಂಪೂಜಿತನಾಗಿ ತನ್ನ ತಂದೆಯ ಅರಮನೆಯಲ್ಲಿ ಎಲ್ಲ ಮಹಾಸ್ತ್ರಗಳನ್ನೂ ಅವುಗಳನ್ನು ಹಿಂತೆಗೆದುಕೊಳ್ಳುವ ವಿಧಾನಗಳ ಜೊತೆಗೆ ಕಲಿಯುತ್ತಾ ಜಿಷ್ಣುವು ವಾಸಿಸಿದನು.

03045004a ಶಕ್ರಸ್ಯ ಹಸ್ತಾದ್ದಯಿತಂ ವಜ್ರಮಸ್ತ್ರಂ ದುರುತ್ಸಹಂ।
03045004c ಅಶನೀಶ್ಚ ಮಹಾನಾದಾ ಮೇಘಬರ್ಹಿಣಲಕ್ಷಣಾಃ।।

ಶಕ್ರನ ಕೈಯಿಂದ ಅವನಿಗೆ ಪ್ರಿಯವಾದ ದುರುತ್ಸಹ ವಜ್ರಾಸ್ತ್ರವನ್ನೂ, ಅಕಾಲದಲ್ಲಿಯೂ ಮಹಾನಾದವನ್ನುಂಟುಮಾಡುವ ಸಿಡಿಲುಗಳನ್ನೂ, ನವಿಲು ನೃತ್ಯವಾಡಲು ಪ್ರಚೋದಿಸುವ ಮೇಘಗಳ ನಿರ್ಮಾಣ ಮತ್ತು ನಿವಾರಣ ವಿದ್ಯೆಗಳನ್ನೂ ಕಲಿತುಕೊಂಡನು.

03045005a ಗೃಹೀತಾಸ್ತ್ರಸ್ತು ಕೌಂತೇಯೋ ಭ್ರಾತೄನ್ಸಸ್ಮಾರ ಪಾಂಡವಃ।
03045005c ಪುರಂದರನಿಯೋಗಾಚ್ಚ ಪಂಚಾಬ್ದಮವಸತ್ಸುಖೀ।।

ಆ ಅಸ್ತ್ರಗಳನ್ನು ಕಲಿತುಕೊಂಡ ನಂತರ ಕೌಂತೇಯ ಪಾಂಡವನು ತನ್ನ ಸಹೋದರರನ್ನು ನೆನಪಿಸಿಕೊಂದನು. ಆದರೂ ಪುರಂದರನ ನಿಯೋಗದಂತೆ ಅಲ್ಲಿ ಅವನು ಸುಖಿಯಾಗಿ ಐದು ವರ್ಷಗಳು ವಾಸಿಸಿದನು.

03045006a ತತಃ ಶಕ್ರೋಽಬ್ರವೀತ್ಪಾರ್ಥಂ ಕೃತಾಸ್ತ್ರಂ ಕಾಲ ಆಗತೇ।
03045006c ನೃತ್ತಂ ಗೀತಂ ಚ ಕೌಂತೇಯ ಚಿತ್ರಸೇನಾದವಾಪ್ನುಹಿ।।
03045007a ವಾದಿತ್ರಂ ದೇವವಿಹಿತಂ ನೃಲೋಕೇ ಯನ್ನ ವಿದ್ಯತೇ।
03045007c ತದರ್ಜಯಸ್ವ ಕೌಂತೇಯ ಶ್ರೇಯೋ ವೈ ತೇ ಭವಿಷ್ಯತಿ।।

ಪಾರ್ಥನು ಅಸ್ತ್ರಗಳನ್ನು ಕಲಿತುಕೊಂಡ ನಂತರ, ಸಮಯ ಬಂದಾಗ, ಶಕ್ರನು ಹೇಳಿದನು: “ಕೌಂತೇಯ! ಚಿತ್ರಸೇನನಿಂದ ನೃತ್ಯ ಗೀತಗಳನ್ನು ಮತ್ತು ಮರ್ತ್ಯಲೋಕದಲ್ಲಿ ತಿಳಿಯದೇ ಇದ್ದ ದೇವತೆಗಳ ವಾದ್ಯಸಂಗೀತಗಳನ್ನು ಕಲಿತುಕೋ. ಕೌಂತೇಯ! ಇದನ್ನು ಪಡೆದರೆ ನಿನಗೆ ಮುಂದೆ ಶ್ರೇಯಸ್ಸುಂಟಾಗುತ್ತದೆ.”

03045008a ಸಖಾಯಂ ಪ್ರದದೌ ಚಾಸ್ಯ ಚಿತ್ರಸೇನಂ ಪುರಂದರಃ।
03045008c ಸ ತೇನ ಸಹ ಸಂಗಮ್ಯ ರೇಮೇ ಪಾರ್ಥೋ ನಿರಾಮಯಃ1।।

ಪುರಂದರನು ಚಿತ್ರಸೇನನನ್ನು ಅವನಿಗೆ ಸಖನಾಗಿ ಕೊಟ್ಟನು ಮತ್ತು ಪಾರ್ಥನು ಅವನನ್ನು ಭೇಟಿಯಾಗಿ ನಿರಾಮಯನಾಗಿ ರಮಿಸಿದನು.

03045009a ಕದಾ ಚಿದಟಮಾನಸ್ತು ಮಹರ್ಷಿರುತ ಲೋಮಶಃ।
03045009c ಜಗಾಮ ಶಕ್ರಭವನಂ ಪುರಂದರದಿದೃಕ್ಷಯಾ।।

ಒಮ್ಮೆ ಮಹರ್ಷಿ ಲೋಮಶನು ತಿರುಗಾಡುತ್ತಾ ಪುರಂದರನನ್ನು ನೋಡಲೋಸುಗ ಶಕ್ರಭವನಕ್ಕೆ ಬಂದನು.

03045010a ಸ ಸಮೇತ್ಯ ನಮಸ್ಕೃತ್ಯ ದೇವರಾಜಂ ಮಹಾಮುನಿಃ।
03045010c ದದರ್ಶಾರ್ಧಾಸನಗತಂ ಪಾಂಡವಂ ವಾಸವಸ್ಯ ಹ।।

ಆ ಮಹಾಮುನಿಯು ದೇವರಾಜನನ್ನು ಭೇಟಿಯಾಗಿ ನಮಸ್ಕರಿಸಲು ಅಲ್ಲಿ ವಾಸವನೊಂದಿಗೆ ಆಸನದ ಅರ್ಧಭಾಗದಲ್ಲಿ ಕುಳಿತಿದ್ದ ಪಾಂಡವನನ್ನು ಕಂಡನು.

03045011a ತತಃ ಶಕ್ರಾಭ್ಯನುಜ್ಞಾತ ಆಸನೇ ವಿಷ್ಟರೋತ್ತರೇ।
03045011c ನಿಷಸಾದ ದ್ವಿಜಶ್ರೇಷ್ಠಃ ಪೂಜ್ಯಮಾನೋ ಮಹರ್ಷಿಭಿಃ।।

ಆಗ ಶಕ್ರನ ಅನುಜ್ಞೆಯಂತೆ ಪೂಜಿಸಲ್ಪಟ್ಟ ಆ ದ್ವಿಜಶ್ರೇಷ್ಠ ಮಹಾ‌ಋಷಿಯು ದರ್ಬಾಸನಯುಕ್ತ ಆಸನದ ಮೇಲೆ ಕುಳಿತುಕೊಂಡನು.

03045012a ತಸ್ಯ ದೃಷ್ಟ್ವಾಭವದ್ಬುದ್ಧಿಃ ಪಾರ್ಥಮಿಂದ್ರಾಸನೇ ಸ್ಥಿತಂ।
03045012c ಕಥಂ ನು ಕ್ಷತ್ರಿಯಃ ಪಾರ್ಥಃ ಶಕ್ರಾಸನಮವಾಪ್ತವಾನ್।।

ಇಂದ್ರಾಸನದಲ್ಲಿ ಕುಳಿತಿದ್ದ ಪಾರ್ಥನನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ವಿಚಾರವು ಬಂದಿತು: “ಕ್ಷತ್ರಿಯ ಪಾರ್ಥನು ಹೇಗೆ ಇಂದ್ರನ ಆಸನವನ್ನು ಪಡೆದನು?

03045013a ಕಿಂ ತ್ವಸ್ಯ ಸುಕೃತಂ ಕರ್ಮ ಲೋಕಾ ವಾ ಕೇ ವಿನಿರ್ಜಿತಾಃ।
03045013c ಯ ಏವಮುಪಸಂಪ್ರಾಪ್ತಃ ಸ್ಥಾನಂ ದೇವನಮಸ್ಕೃತಂ।।

ಅವನ ಯಾವ ಸುಕೃತ ಕರ್ಮದಿಂದಾಗಿ ಈ ಲೋಕಗಳನ್ನು ಗೆದ್ದಿರುವನು ಮತ್ತು ಈ ದೇವನಮಸ್ಕೃತ ಸ್ಥಾನವನ್ನು ಪಡೆದಿದ್ದಾನೆ?”

03045014a ತಸ್ಯ ವಿಜ್ಞಾಯ ಸಂಕಲ್ಪಂ ಶಕ್ರೋ ವೃತ್ರನಿಷೂದನಃ।
03045014c ಲೋಮಶಂ ಪ್ರಹಸನ್ವಾಕ್ಯಮಿದಮಾಹ ಶಚೀಪತಿಃ।।
03045015a ಬ್ರಹ್ಮರ್ಷೇ ಶ್ರೂಯತಾಂ ಯತ್ತೇ ಮನಸೈತದ್ವಿವಕ್ಷಿತಂ।
03045015c ನಾಯಂ ಕೇವಲಮರ್ತ್ಯೋ ವೈ ಕ್ಷತ್ರಿಯತ್ವಮುಪಾಗತಃ।।

ವೃತ್ರನಿಷೂದನ ಶಚೀಪತಿ ಶಕ್ರನು ಅವನ ವಿಚಾರವನ್ನು ತಿಳಿದು ಮುಗುಳ್ನಗುತ್ತಾ ಲೋಮಶನಿಗೆ ಈ ಮಾತನ್ನಾಡಿದನು: “ಬ್ರಹ್ಮರ್ಷೇ! ನಿನ್ನ ಮನಸ್ಸಿನಲ್ಲಿರುವುದಕ್ಕೆ ಉತ್ತರವನ್ನು ಕೇಳು. ಇವನು ಕ್ಷತ್ರಿಯನಿಗೆ ಹುಟ್ಟಿದ ಕೇವಲ ಮನುಷ್ಯನಲ್ಲ.

03045016a ಮಹರ್ಷೇ ಮಮ ಪುತ್ರೋಽಯಂ ಕುಂತ್ಯಾಂ ಜಾತೋ ಮಹಾಭುಜಃ।
03045016c ಅಸ್ತ್ರಹೇತೋರಿಹ ಪ್ರಾಪ್ತಃ ಕಸ್ಮಾಚ್ಚಿತ್ಕಾರಣಾಂತರಾತ್।।

ಮಹರ್ಷೇ! ಈ ಮಹಾಭುಜನು ನನ್ನ ಪುತ್ರನಾಗಿ ಕುಂತಿಯಲ್ಲಿ ಜನಿಸಿದನು ಮತ್ತು ಕಾರಣಾಂತರದಿಂದ ಅಸ್ತ್ರಗಳನ್ನು ಪಡೆಯಲು ಇಲ್ಲಿಗೆ ಬಂದಿದ್ದಾನೆ.

03045017a ಅಹೋ ನೈನಂ ಭವಾನ್ವೇತ್ತಿ ಪುರಾಣಮೃಷಿಸತ್ತಮಂ।
03045017c ಶೃಣು ಮೇ ವದತೋ ಬ್ರಹ್ಮನ್ಯೋಽಯಂ ಯಚ್ಚಾಸ್ಯ ಕಾರಣಂ।।

ಈ ಪುರಾಣ ಋಷಿಸತ್ತಮನನನ್ನು ನೀನು ತಿಳಿದಿಲ್ಲವೇ? ಹಾಗಾದರೆ ಬ್ರಹ್ಮನ್! ಇವನು ಯಾರು ಮತ್ತು ಇವನ ಉದ್ದೇಶವೇನು ಎನ್ನುವುದನ್ನು ನಾನು ಹೇಳುತ್ತೇನೆ. ಕೇಳು.

03045018a ನರನಾರಾಯಣೌ ಯೌ ತೌ ಪುರಾಣಾವೃಷಿಸತ್ತಮೌ।
03045018c ತಾವಿಮಾವಭಿಜಾನೀಹಿ ಹೃಷೀಕೇಶಧನಂಜಯೌ।।

ಪುರಾಣ ಋಷಿಸತ್ತಮರಾದ ನರ ಮತ್ತು ನಾರಾಯಣರೀರ್ವರು ಈಗ ಧನಂಜಯ ಮತ್ತು ಹೃಷೀಕೇಶರಾಗಿದ್ದಾರೆ ಎಂದು ತಿಳಿ.

03045019a ಯನ್ನ ಶಕ್ಯಂ ಸುರೈರ್ದ್ರಷ್ಟುಮೃಷಿಭಿರ್ವಾ ಮಹಾತ್ಮಭಿಃ।
03045019c ತದಾಶ್ರಮಪದಂ ಪುಣ್ಯಂ ಬದರೀ ನಾಮ ವಿಶ್ರುತಂ।।
03045020a ಸ ನಿವಾಸೋಽಭವದ್ವಿಪ್ರ ವಿಷ್ಣೋರ್ಜಿಷ್ಣೋಸ್ತಥೈವ ಚ।
03045020c ಯತಃ ಪ್ರವವೃತೇ ಗಂಗಾ ಸಿದ್ಧಚಾರಣಸೇವಿತಾ।।

ಮಹಾತ್ಮರು ಮತ್ತು ಸುರರಿಗೂ ನೋಡಲು ದುರ್ಲಭವಾದ ಪುಣ್ಯ ಬದರೀ ಎಂಬ ಹೆಸರಿನಿಂದ ವಿಶ್ರುತ ಆ ಆಶ್ರಮಪದದಲ್ಲಿ ವಿಪ್ರ ವಿಷ್ಣು ಮತ್ತು ಜಿಷ್ಣು ಇಬ್ಬರೂ ವಾಸಿಸುತ್ತಿದ್ದರು. ಅಲ್ಲಿಂದಲೇ ಸಿದ್ಧಚಾರಣಸೇವಿತ ಗಂಗೆಯು ಹರಿಯುತ್ತದೆ.

03045021a ತೌ ಮನ್ನಿಯೋಗಾದ್ಬ್ರಹ್ಮರ್ಷೇ ಕ್ಷಿತೌ ಜಾತೌ ಮಹಾದ್ಯುತೀ।
03045021c ಭೂಮೇರ್ಭಾರಾವತರಣಂ ಮಹಾವೀರ್ಯೌ ಕರಿಷ್ಯತಃ।।

ಬ್ರಹ್ಮರ್ಷೇ! ನನ್ನ ನಿಯೋಗದಿಂದ ಈ ಮಹಾದ್ಯುತಿ ಮಹಾವೀರರಿಬ್ಬರೂ ಭೂಮಿಗೆ ಹೋಗಿ ಭೂಮಿಯ ಭಾರವನ್ನು ಕಡಿಮೆಮಾಡಲಿದ್ದಾರೆ.

03045022a ಉದ್ವೃತ್ತಾ ಹ್ಯಸುರಾಃ ಕೇ ಚಿನ್ನಿವಾತಕವಚಾ ಇತಿ।
03045022c ವಿಪ್ರಿಯೇಷು ಸ್ಥಿತಾಸ್ಮಾಕಂ ವರದಾನೇನ ಮೋಹಿತಾಃ।।

ನಿವಾತಕವಚರೆನ್ನುವ ಕೆಲವು ಅಸುರರು ವರದಾನದಿಂದ ಮೋಹಿತರಾಗಿ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

03045023a ತರ್ಕಯಂತೇ ಸುರಾನ್ ಹಂತುಂ ಬಲದರ್ಪಸಮನ್ವಿತಾಃ।
03045023c ದೇವಾನ್ನ ಗಣಯಂತೇ ಚ ತಥಾ ದತ್ತವರಾ ಹಿ ತೇ।।
03045024a ಪಾತಾಲವಾಸಿನೋ ರೌದ್ರಾ ದನೋಃ ಪುತ್ರಾ ಮಹಾಬಲಾಃ।
03045024c ಸರ್ವೇ ದೇವನಿಕಾಯಾ ಹಿ ನಾಲಂ ಯೋಧಯಿತುಂ ಸ್ಮ ತಾನ್।।

ಬಲದರ್ಪದಿಂದ ಕೂಡಿದ ಅವರು ಸುರರನ್ನು ಸಂಹರಿಸಲು ಯೋಚಿಸುತ್ತಿದ್ದಾರೆ. ಮತ್ತು ಕೊಟ್ಟ ವರದಿಂದಾಗಿ ಅವರು ದೇವತೆಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ದನುವಿನ ಪುತ್ರರಾದ ಆ ಮಹಾಬಲಶಾಲಿ ರೌದ್ರರು ಪಾತಾಲದಲ್ಲಿ ವಾಸಿಸುತ್ತಿದ್ದು ದೇವತೆಗಳ ಎಲ್ಲ ಸೇನೆಯೂ ಅವರೊಂದಿಗೆ ಹೋರಾಡಲು ಅಸಮರ್ಥವಾಗಿವೆ.

03045025a ಯೋಽಸೌ ಭೂಮಿಗತಃ ಶ್ರೀಮಾನ್ವಿಷ್ಣುರ್ಮಧುನಿಷೂದನಃ।
03045025c ಕಪಿಲೋ ನಾಮ ದೇವೋಽಸೌ ಭಗವಾನಜಿತೋ ಹರಿಃ।।
03045026a ಯೇನ ಪೂರ್ವಂ ಮಹಾತ್ಮಾನಃ ಖನಮಾನಾ ರಸಾತಲಂ।
03045026c ದರ್ಶನಾದೇವ ನಿಹತಾಃ ಸಗರಸ್ಯಾತ್ಮಜಾ ವಿಭೋ।।
03045027a ತೇನ ಕಾರ್ಯಂ ಮಹತ್ಕಾರ್ಯಮಸ್ಮಾಕಂ ದ್ವಿಜಸತ್ತಮ।
03045027c ಪಾರ್ಥೇನ ಚ ಮಹಾಯುದ್ಧೇ ಸಮೇತಾಭ್ಯಾಮಸಂಶಯಂ।।

ದ್ವಿಜಸತ್ತಮ! ಭೂಮಿಗೆ ಹೋಗಿರುವ, ಮಧುನಿಷೂದನ, ಶ್ರೀಮಾನ್, ವಿಷ್ಣು, ಹಿಂದೆ ರಸಾತಲವನ್ನು ಅಗೆಯುತ್ತಿದ್ದ ಸಗರನ ಮಕ್ಕಳನ್ನು ನೋಟಮಾತ್ರದಿಂದ ಭಸ್ಮಮಾಡಿದ ಕಪಿಲನಾಮದಿಂದ ಇದ್ದ ಭಗವಾನ್ ದೇವ ಅಜಿತ ಹರಿಯು ಪಾರ್ಥನೊಂದಿಗೆ ಮಹಾಯುದ್ಧದಲ್ಲಿ ನಮ್ಮ ಈ ಮಹಾಕಾರ್ಯವನ್ನು ಮಾಡಿಕೊಡುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03045028a ಅಯಂ ತೇಷಾಂ ಸಮಸ್ತಾನಾಂ ಶಕ್ತಃ ಪ್ರತಿಸಮಾಸನೇ।
03045028c ತಾನ್ನಿಹತ್ಯ ರಣೇ ಶೂರಃ ಪುನರ್ಯಾಸ್ಯತಿ ಮಾನುಷಾನ್।।

ಅವರಿಗೆ ಸರಿಸಮಾನನಾದ ಇವನು ಅವರೆಲ್ಲರನ್ನೂ ಸಂಹರಿಸಬಲ್ಲ, ಮತ್ತು ರಣದಲ್ಲಿ ಅವರನ್ನು ಸಂಹರಿಸಿ ಈ ಶೂರನು ಪುನಃ ಮನುಷ್ಯರಲ್ಲಿಗೆ ಹೋಗುತ್ತಾನೆ.

03045029a ಭವಾಂಶ್ಚಾಸ್ಮನ್ನಿಯೋಗೇನ ಯಾತು ತಾವನ್ಮಹೀತಲಂ।
03045029c ಕಾಮ್ಯಕೇ ದ್ರಕ್ಷ್ಯಸೇ ವೀರಂ ನಿವಸಂತಂ ಯುಧಿಷ್ಠಿರಂ।।

ನನ್ನ ನಿಯೋಗದಿಂದ ನೀನು ಮಹೀತಲಕ್ಕೆ ಹೋಗಿ ಕಾಮ್ಯಕವನದಲ್ಲಿ ವಾಸಿಸುತ್ತಿರುವ ವೀರ ಯುಧಿಷ್ಠಿರನನ್ನು ಕಾಣಬೇಕು.

03045030a ಸ ವಾಚ್ಯೋ ಮಮ ಸಂದೇಶಾದ್ಧರ್ಮಾತ್ಮಾ ಸತ್ಯಸಂಗರಃ।
03045030c ನೋತ್ಕಂಠಾ ಫಲ್ಗುನೇ ಕಾರ್ಯಾ ಕೃತಾಸ್ತ್ರಃ ಶೀಘ್ರಮೇಷ್ಯತಿ।।

ಆ ಸತ್ಯಸಂಗರ ಧರ್ಮಾತ್ಮನಿಗೆ ನನ್ನ ಈ ಮಾತುಗಳನ್ನು ತಿಳಿಸಬೇಕು: “ಫಾಲ್ಗುನನಿಲ್ಲವೆಂದು ಬೇಸರಿಸಬೇಡ! ಅವನು ಅಸ್ತ್ರಗಳನ್ನು ಪಡೆದು ತನ್ನ ಕೆಲಸವನ್ನು ಪೂರೈಸಿ ಶೀಘ್ರದಲ್ಲಿಯೇ ಹಿಂದಿರುಗುತ್ತಾನೆ.

03045031a ನಾಶುದ್ಧಬಾಹುವೀರ್ಯೇಣ ನಾಕೃತಾಸ್ತ್ರೇಣ ವಾ ರಣೇ।
03045031c ಭೀಷ್ಮದ್ರೋಣಾದಯೋ ಯುದ್ಧೇ ಶಕ್ಯಾಃ ಪ್ರತಿಸಮಾಸಿತುಂ।।

ತನ್ನ ಬಾಹುವೀರ್ಯವನ್ನು ಶುದ್ಧಪಡಿಸಿಕೊಳ್ಳದೇ ಮತ್ತು ಅಸ್ತ್ರಗಳ ಪ್ರವೀಣತೆಯನ್ನು ಪಡೆಯದೇ ಅವನು ರಣದಲ್ಲಿ ಭೀಷ್ಮ ದ್ರೋಣಾದಿಗಳನ್ನು ಎದುರಿಸಿ ಯುದ್ಧಮಾಡಲು ಶಕ್ಯನಿಲ್ಲ.

03045032a ಗೃಹೀತಾಸ್ತ್ರೋ ಗುಡಾಕೇಶೋ ಮಹಾಬಾಹುರ್ಮಹಾಮನಾಃ।
03045032c ನೃತ್ತವಾದಿತ್ರಗೀತಾನಾಂ ದಿವ್ಯಾನಾಂ ಪಾರಮೇಯಿವಾನ್।।

ಮಹಾಬಾಹು ಮಹಾತ್ಮ ಗುಡಾಕೇಶನು ಅಸ್ತ್ರಗಳನ್ನು ಕಲಿತುಕೊಂಡಿದ್ದಾನೆ ಮತ್ತು ದಿವ್ಯ ನೃತ್ಯ ವಾದ್ಯ ಗೀತಗಳಲ್ಲಿಯೂ ಪರಿಣತಿಯನ್ನು ಪಡೆದುಕೊಳ್ಳುತ್ತಿದ್ದಾನೆ.

03045033a ಭವಾನಪಿ ವಿವಿಕ್ತಾನಿ ತೀರ್ಥಾನಿ ಮನುಜೇಶ್ವರ।
03045033c ಭ್ರಾತೃಭಿಃ ಸಹಿತಃ ಸರ್ವೈರ್ದ್ರಷ್ಟುಮರ್ಹತ್ಯರಿಂದಮ।।

ಅರಿಂದಮ! ಮನುಜೇಶ್ಚರ! ನೀನಾದರೂ ನಿನ್ನ ಭ್ರಾತೃಗಳೊಂದಿಗೆ ಎಲ್ಲ ವಿವಿಧ ತೀರ್ಥಗಳನ್ನೂ ಭೇಟಿಮಾಡಬೇಕು.

03045034a ತೀರ್ಥೇಷ್ವಾಪ್ಲುತ್ಯ ಪುಣ್ಯೇಷು ವಿಪಾಪ್ಮಾ ವಿಗತಜ್ವರಃ।
03045034c ರಾಜ್ಯಂ ಭೋಕ್ಷ್ಯಸಿ ರಾಜೇಂದ್ರ ಸುಖೀ ವಿಗತಕಲ್ಮಷಃ।।

ತೀರ್ಥಗಳಲ್ಲಿ ಸ್ನಾನಮಾಡಿ ನೀನು ಪುಣ್ಯಗಳನ್ನು ಪಡೆದು ನಿನ್ನ ಚಿಂತೆಯನ್ನೂ ಕಳೆದುಕೊಳ್ಳುವೆ. ರಾಜೇಂದ್ರ! ನಿನ್ನ ಪಾಪಗಳನ್ನು ತೊಳೆದುಕೊಂಡು ರಾಜ್ಯವನ್ನು ಸುಖವಾಗಿ ಭೋಗಿಸುತ್ತೀಯೆ.”

03045035a ಭವಾಂಶ್ಚೈನಂ ದ್ವಿಜಶ್ರೇಷ್ಠ ಪರ್ಯಟಂತಂ ಮಹೀತಲೇ।
03045035c ತ್ರಾತುಮರ್ಹತಿ ವಿಪ್ರಾಗ್ರ್ಯ ತಪೋಬಲಸಮನ್ವಿತಃ।।

ದ್ವಿಜಶ್ರೇಷ್ಠ! ವಿಪ್ರಾಗ್ರ್ಯ! ನೀನೂ ಕೂಡ ಮಹೀತಲದಲ್ಲಿ ತಿರುಗಾಡುತ್ತಿರುವಾಗ ಅವನನ್ನು ನಿನ್ನ ತಪೋಬಲದಿಂದ ಕಾಯಬೇಕಾಗುತ್ತದೆ.

03045036a ಗಿರಿದುರ್ಗೇಷು ಹಿ ಸದಾ ದೇಶೇಷು ವಿಷಮೇಷು ಚ।
03045036c ವಸಂತಿ ರಾಕ್ಷಸಾ ರೌದ್ರಾಸ್ತೇಭ್ಯೋ ರಕ್ಷೇತ್ಸದಾ ಭವಾನ್।।

ಗಿರಿದುರ್ಗಗಳಲ್ಲಿ ಮತ್ತು ವಿಷಮ ಪ್ರದೇಶಗಳಲ್ಲಿ ಸದಾ ರೌದ್ರ ರಾಕ್ಷಸರು ವಾಸಿಸುತ್ತಿರುತ್ತಾರೆ, ನೀನು ಸದಾ ಅವರನ್ನು ಅವರಿಂದ ರಕ್ಷಿಸಬೇಕು.”

03045037a ಸ ತಥೇತಿ ಪ್ರತಿಜ್ಞಾಯ ಲೋಮಶಃ ಸುಮಹಾತಪಾಃ।
03045037c ಕಾಮ್ಯಕಂ ವನಮುದ್ದಿಶ್ಯ ಸಮುಪಾಯಾನ್ಮಹೀತಲಂ।।
03045038a ದದರ್ಶ ತತ್ರ ಕೌಂತೇಯಂ ಧರ್ಮರಾಜಮರಿಂದಮಂ।
03045038c ತಾಪಸೈರ್ಭ್ರಾತೃಭಿಶ್ಚೈವ ಸರ್ವತಃ ಪರಿವಾರಿತಂ।।

ಹಾಗೆಯೇ ಆಗಲೆಂದು ವಚನವನ್ನಿತ್ತು ಸುಮಹಾತಪ ಲೋಮಶನು ಮಹೀತಲವನ್ನು ಸೇರಿ ಕಾಮ್ಯಕ ವನಕ್ಕೆ ಬಂದು ಅಲ್ಲಿ ತಾಪಸರಿಂದಲೂ ಭ್ರಾತೃಗಳಿಂದಲೂ ಎಲ್ಲಕಡೆಯಿಂದಲೂ ಸುತ್ತುವರೆಯಲ್ಪಟ್ಟ ಅರಿಂದಮ ಕೌಂತೇಯ ಧರ್ಮರಾಜನನ್ನು ಕಂಡನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಲೋಮಶಗಮನೇ ಪಂಚಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಲೋಮಶಗಮನವೆಂಬ ನಲ್ವತ್ತೈದನೆಯ ಅಧ್ಯಾಯವು.


  1. ಗೋರಖಪುರ ಸಂಪುಟದಲ್ಲಿ ಈ ಶ್ಲೋಕದ ನಂತರ ಒಟ್ಟು 82 ಶ್ಲೋಕಗಳಲ್ಲಿ ಅರ್ಜುನನಿಗೆ ಊರ್ವಶಿಯಿಂದಾದ ಶಾಪದ ವರ್ಣನೆಯಿದೆ. ಪುಣೆಯ ಸಂಪುಟದಲ್ಲಿರದ ಈ ಶ್ಲೋಕಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ↩︎