043

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಇಂದ್ರಲೋಕಾಭಿಗಮನ ಪರ್ವ

ಅಧ್ಯಾಯ 43

ಸಾರ

ಮಾತಲಿಯು ದೇವರಥವನ್ನು ಅರ್ಜುನನಿಗಾಗಿ ತಂದುದು (1-15). ಅರ್ಜುನನು ಶೈಲವನ್ನು ಬೀಳ್ಕೊಂಡು ರಥವನ್ನೇರಿದುದು (16-26). ದೇವಲೋಕಮಾರ್ಗದ ವರ್ಣನೆ (27-38).

03043001 ವೈಶಂಪಾಯನ ಉವಾಚ।
03043001a ಗತೇಷು ಲೋಕಪಾಲೇಷು ಪಾರ್ಥಃ ಶತ್ರುನಿಬರ್ಹಣಃ।
03043001c ಚಿಂತಯಾಮಾಸ ರಾಜೇಂದ್ರ ದೇವರಾಜರಥಾಗಮಂ।।

ವೈಶಂಪಾಯನನು ಹೇಳಿದನು: “ರಾಜೇಂದ್ರ! ಲೋಕಪಾಲಕರು ಹೊರಟುಹೋದ ನಂತರ ಶತ್ರುನಿಬರ್ಹಣ ಪಾರ್ಥನು ದೇವರಾಜನ ರಥವು ಬರುವುದರ ಕುರಿತು ಚಿಂತಿಸಿದನು.

03043002a ತತಶ್ಚಿಂತಯಮಾನಸ್ಯ ಗುಡಾಕೇಶಸ್ಯ ಧೀಮತಃ।
03043002c ರಥೋ ಮಾತಲಿಸಂಯುಕ್ತ ಆಜಗಾಮ ಮಹಾಪ್ರಭಃ।।

ಹೀಗೆ ಧೀಮತ ಗುಡಾಕೇಶನು ಯೋಚಿಸುತ್ತಿರುವಾಗಲೇ ಮಾತಲಿಯೊಂದಿಗೆ ಮಹಾಪ್ರಭೆಯುಳ್ಳ ರಥವು ಆಗಮಿಸಿತು.

03043003a ನಭೋ ವಿತಿಮಿರಂ ಕುರ್ವಂ ಜಲದಾನ್ಪಾಟಯನ್ನಿವ।
03043003c ದಿಶಃ ಸಂಪೂರಯನ್ನಾದೈರ್ಮಹಾಮೇಘರವೋಪಮೈಃ।।
03043004a ಅಸಯಃ ಶಕ್ತಯೋ ಭೀಮಾ ಗದಾಶ್ಚೋಗ್ರಪ್ರದರ್ಶನಾಃ।
03043004c ದಿವ್ಯಪ್ರಭಾವಾಃ ಪ್ರಾಸಾಶ್ಚ ವಿದ್ಯುತಶ್ಚ ಮಹಾಪ್ರಭಾಃ।।
03043005a ತಥೈವಾಶನಯಸ್ತತ್ರ ಚಕ್ರಯುಕ್ತಾ ಹುಡಾಗುಡಾಃ।
03043005c ವಾಯುಸ್ಫೋಟಾಃ ಸನಿರ್ಘಾತಾ ಬರ್ಹಿಮೇಘನಿಭಸ್ವನಾಃ।।
03043006a ತತ್ರ ನಾಗಾ ಮಹಾಕಾಯಾ ಜ್ವಲಿತಾಸ್ಯಾಃ ಸುದಾರುಣಾಃ।
03043006c ಸಿತಾಭ್ರಕೂಟಪ್ರತಿಮಾಃ ಸಂಹತಾಶ್ಚ ಯಥೋಪಲಾಃ।।
03043007a ದಶ ವಾಜಿಸಹಸ್ರಾಣಿ ಹರೀಣಾಂ ವಾತರಂಹಸಾಂ।
03043007c ವಹಂತಿ ಯಂ ನೇತ್ರಮುಷಂ ದಿವ್ಯಂ ಮಾಯಾಮಯಂ ರಥಂ।।
03043008a ತತ್ರಾಪಶ್ಯನ್ಮಹಾನೀಲಂ ವೈಜಯಂತಂ ಮಹಾಪ್ರಭಂ।
03043008c ಧ್ವಜಮಿಂದೀವರಶ್ಯಾಮಂ ವಂಶಂ ಕನಕಭೂಷಣಂ।।

ಆಕಾಶದಲ್ಲಿ ಕತ್ತಲೆಯನ್ನು ದೂರಮಾಡಿ, ಮೋಡಗಳನ್ನು ಕತ್ತರಿಸಿಬರುತ್ತಿದೆಯೋ ಎನ್ನುವಂತೆ ಅದು ಮಳೆಗಾಲದ ಮೋಡಗಳ ಗುಡುಗಿನಂತೆ ಘರ್ಜಿಸುತ್ತಾ ದಿಶವನ್ನೆಲ್ಲಾ ಆವರಿಸಿ ಬಂದಿತು. ಅದರಲ್ಲಿ ಖಡ್ಗಗಳು, ಭಯಂಕರ ಈಟಿಗಳು, ಉಗ್ರರೂಪಿ ಗದೆಗಳು, ದಿವ್ಯಪ್ರಭಾವದ ಪ್ರಾಸಗಳು, ಮಹಾಪ್ರಭೆಯುಳ್ಳ ಮಿಂಚುಗಳು ಮತ್ತು ಸಿಡಿಲುಗಳೂ, ವಾಯುವಿನಲ್ಲಿ ಸ್ಫೋಟವಾಗುವ ಗುಡುಗಿನ ಶಬ್ದವುಳ್ಳ ಚಕ್ರಯುಕ್ತ ಫಿರಂಗಿಗಳಿದ್ದವು. ಅದರಲ್ಲಿ ಉರಿಯುತ್ತಿರುವ ಮಹಾಕಾಯ ದಾರುಣ ನಾಗಗಳೂ, ಬಿಳಿಯ ಮೋಡದಂತೆ ಸ್ಚಚ್ಛವಾದ ಮತ್ತು ಹೆಚ್ಚು ಬಿಳುಪಾದ ಕಲ್ಲಿನ ರಾಶಿಗಳೂ ಇದ್ದವು. ಆ ರಥಕ್ಕೆ ಚಿನ್ನದ ಬಣ್ಣದ ಕಾಂತಿಯ ಹತ್ತು ಸಾವಿರ ಕುದುರೆಗಳನ್ನು ಕಟ್ಟಿದ್ದರು ಮತ್ತು ಅದು ಗಾಳಿಯ ವೇಗವನ್ನೂ ಮೀರಿ ಸಂಚರಿಸುವ ಸಾಮರ್ಥ್ಯವುಳ್ಳದ್ದಾಗಿತ್ತು. ಆ ಮಾಯಾಮಯ ಮಹಾರಥದ ವೇಗವನ್ನು ಕಣ್ಣಿನಿಂದ ನೋಡಿ ಅಳೆಯಲು ಸಾಧ್ಯವಿರಲಿಲ್ಲ. ಆ ರಥದ ಮೇಲಿದ್ದ ಬಿದುರಿನಂತೆ ನೀಳವಾದ, ಕಾಂತಿಯುಕ್ತ, ವೈಡೂರ್ಯ ಅಥವಾ ಕನ್ನೈದಿಲೆಯಂತೆ ನೀಲಿಬಣ್ಣದ, ಸ್ವರ್ಣಾಭರಣಗಳಿಂದ ಅಲಂಕೃತ ವೈಜಯಂತ ಧ್ವಜವನ್ನು ಆ ರಥದ ತುದಿಯಲ್ಲಿ ಅರ್ಜುನನು ಕಂಡನು.

03043009a ತಸ್ಮಿನ್ರಥೇ ಸ್ಥಿತಂ ಸೂತಂ ತಪ್ತಹೇಮವಿಭೂಷಿತಂ।
03043009c ದೃಷ್ಟ್ವಾ ಪಾರ್ಥೋ ಮಹಾಬಾಹುರ್ದೇವಮೇವಾನ್ವತರ್ಕಯತ್।।

ಆ ರಥದಲ್ಲಿದ್ದ, ಕುದಿಸಿದ ಬಂಗಾರದಿಂದ ವಿಭೂಷಿತನಾದ ಸೂತನನ್ನು ನೋಡಿ ಮಹಾಬಾಹು ಪಾರ್ಥನು ಅವನೂ ದೇವನಿರಬಹುದು ಎಂದು ಯೋಚಿಸಿದನು.

03043010a ತಥಾ ತರ್ಕಯತಸ್ತಸ್ಯ ಫಲ್ಗುನಸ್ಯಾಥ ಮಾತಲಿಃ।
03043010c ಸನ್ನತಃ ಪ್ರಶ್ರಿತೋ ಭೂತ್ವಾ ವಾಕ್ಯಮರ್ಜುನಮಬ್ರವೀತ್।।

ಈ ರೀತಿ ಯೋಚಿಸುತ್ತಿರುವಾಗ, ಮಾತಲಿಯು ಫಲ್ಗುನನ ಬಳಿಬಂದು ವಿನಯಾವನತನಾಗಿ ತಲೆಬಾಗಿ ಅರ್ಜುನನಿಗೆ ಈ ಮಾತುಗಳನ್ನಾಡಿದನು:

03043011a ಭೋ ಭೋ ಶಕ್ರಾತ್ಮಜ ಶ್ರೀಮಾನ್ ಶಕ್ರಸ್ತ್ವಾಂ ದ್ರಷ್ಟುಮಿಚ್ಚತಿ।
03043011c ಆರೋಹತು ಭವಾಂ ಶೀಘ್ರಂ ರಥಮಿಂದ್ರಸ್ಯ ಸಮ್ಮತಂ।।

“ಭೋ ಭೋ ಶಕ್ರಾತ್ಮಜ! ಶ್ರೀಮಾನ್ ಶಕ್ರನು ನಿನ್ನನ್ನು ನೋಡಲು ಬಯಸಿದ್ದಾನೆ. ನೀನು ಶೀಘ್ರದಲ್ಲಿಯೇ ಇಂದ್ರನ ಈ ರಥವನ್ನು ಏರುವ ಕೃಪೆಮಾಡು.

03043012a ಆಹ ಮಾಮಮರಶ್ರೇಷ್ಠಃ ಪಿತಾ ತವ ಶತಕ್ರತುಃ।
03043012c ಕುಂತೀಸುತಮಿಹ ಪ್ರಾಪ್ತಂ ಪಶ್ಯಂತು ತ್ರಿದಶಾಲಯಾಃ।।

ಆ ಅಮರಶ್ರೇಷ್ಠ, ನಿನ್ನ ತಂದೆ ಶತಕ್ರತುವು “ಕುಂತೀಪುತ್ರನನ್ನು ಇಲ್ಲಿಗೆ ಕರೆದುಕೊಂಡು ಬಾ! ತ್ರಿದಶಾಲಯರು ಅವನನ್ನು ನೋಡಲಿ!” ಎಂದು ನನಗೆ ಹೇಳಿದ್ದಾನೆ.

03043013a ಏಷ ಶಕ್ರಃ ಪರಿವೃತೋ ದೇವೈರೃಷಿಗಣೈಸ್ತಥಾ।
03043013c ಗಂಧರ್ವೈರಪ್ಸರೋಭಿಶ್ಚ ತ್ವಾಂ ದಿದೃಕ್ಷುಃ ಪ್ರತೀಕ್ಷತೇ।।

ದೇವತೆಗಳಿಂದಲೂ, ಋಷಿಗಣಗಳಿಂದಲೂ, ಗಂಧರ್ವ ಅಪ್ಸರೆಯರಿಂದಲೂ ಸುತ್ತುವರೆದಿರುವ ಶಕ್ರನು ನಿನ್ನನ್ನು ನೋಡಲು ಪ್ರತೀಕ್ಷಿಸುತ್ತಿದ್ದಾನೆ.

03043014a ಅಸ್ಮಾಲ್ಲೋಕಾದ್ದೇವಲೋಕಂ ಪಾಕಶಾಸನಶಾಸನಾತ್।
03043014c ಆರೋಹ ತ್ವಂ ಮಯಾ ಸಾರ್ಧಂ ಲಬ್ಧಾಸ್ತ್ರಃ ಪುನರೇಷ್ಯಸಿ।।

ಪಾಕಶಾಸನಿಯ ಶಾಸನದಂತೆ ಈ ಲೋಕದಿಂದ ದೇವಲೋಕಕ್ಕೆ ಹೋಗಲು ನನ್ನೊಂದಿಗೆ ಈ ರಥವನ್ನೇರು. ಅಸ್ತ್ರಗಳನ್ನು ಪಡೆದು ಪುನಃ ಬರುತ್ತೀಯೆ.”

03043015 ಅರ್ಜುನ ಉವಾಚ।
03043015a ಮಾತಲೇ ಗಚ್ಚ ಶೀಘ್ರಂ ತ್ವಮಾರೋಹಸ್ವ ರಥೋತ್ತಮಂ।
03043015c ರಾಜಸೂಯಾಶ್ವಮೇಧಾನಾಂ ಶತೈರಪಿ ಸುದುರ್ಲಭಂ।।

ಅರ್ಜುನನು ಹೇಳಿದನು: “ಮಾತಲಿ! ಶೀಘ್ರದಲ್ಲಿ ನೀನು ನೂರಾರು ರಾಜಸೂಯ ಅಶ್ವಮೇಧಗಳನ್ನು ಮಾಡಿದರೂ ದುರ್ಲಭವಾದ ಆ ಉತ್ತಮ ರಥವನ್ನು ಏರಿ ಹೋಗು.

03043016a ಪಾರ್ಥಿವೈಃ ಸುಮಹಾಭಾಗೈರ್ಯಜ್ವಭಿರ್ಭೂರಿದಕ್ಷಿಣೈಃ।
03043016c ದೈವತೈರ್ವಾ ಸಮಾರೋಢುಂ ದಾನವೈರ್ವಾ ರಥೋತ್ತಮಂ।।

ಭೂರಿದಕ್ಷಿಣೆಗಳಿಂದ ಯಾಗಗಳನ್ನು ಮಾಡಿದ ಸುಮಹಾಭಾಗ ಪಾರ್ಥಿವರೂ, ದೇವತೆಗಳೂ, ದಾನವರೂ ಈ ಉತ್ತಮ ರಥವನ್ನು ಏರಲಾರರು.

03043017a ನಾತಪ್ತತಪಸಾ ಶಕ್ಯ ಏಷ ದಿವ್ಯೋ ಮಹಾರಥಃ।
03043017c ದ್ರಷ್ಟುಂ ವಾಪ್ಯಥ ವಾ ಸ್ಪ್ರಷ್ಟುಮಾರೋಢುಂ ಕುತ ಏವ ತು।।

ತಪಸ್ಸನ್ನು ತಪಿಸದ ಯಾರೂ ಈ ದಿವ್ಯ ಮಹಾರಥವನ್ನು ನೋಡಲು ಅಥವಾ ಮುಟ್ಟಲು ಶಕ್ಯರಿಲ್ಲ. ಇನ್ನು ಅದನ್ನು ಹೇಗೆ ಏರಿಯಾರು?

03043018a ತ್ವಯಿ ಪ್ರತಿಷ್ಠಿತೇ ಸಾಧೋ ರಥಸ್ಥೇ ಸ್ಥಿರವಾಜಿನಿ।
03043018c ಪಶ್ಚಾದಹಮಥಾರೋಕ್ಷ್ಯೇ ಸುಕೃತೀ ಸತ್ಪಥಂ ಯಥಾ।।

ಸಾಧೋ! ನೀನು ಹತ್ತಿ ನಿಂತು ಕುದುರೆಗಳನ್ನು ಸ್ಥಿರಪಡಿಸಿ ನಿಲ್ಲಿಸಿದ ನಂತರ ನಾನು ಸುಕೃತನು ಸತ್ಪಥದಲ್ಲಿ ಹೇಗೋ ಹಾಗೆ ಈ ಮಹಾರಥವನ್ನು ಏರುತ್ತೇನೆ.””

03043019 ವೈಶಂಪಾಯನ ಉವಾಚ।
03043019a ತಸ್ಯ ತದ್ವಚನಂ ಶ್ರುತ್ವಾ ಮಾತಲಿಃ ಶಕ್ರಸಾರಥಿಃ।
03043019c ಆರುರೋಹ ರಥಂ ಶೀಘ್ರಂ ಹಯಾನ್ಯೇಮೇ ಚ ರಶ್ಮಿಭಿಃ।।
03043020a ತತೋಽರ್ಜುನೋ ಹೃಷ್ಟಮನಾ ಗಂಗಾಯಾಮಾಪ್ಲುತಃ ಶುಚಿಃ।
03043020c ಜಜಾಪ ಜಪ್ಯಂ ಕೌಂತೇಯೋ ವಿಧಿವತ್ಕುರುನಂದನಃ।।

ವೈಶಂಪಾಯನನು ಹೇಳಿದನು: “ಅವನ ಈ ಮಾತುಗಳನ್ನು ಕೇಳಿದ ಶಕ್ರಸಾರಥಿ ಮಾತಲಿಯು ಶೀಘ್ರದಲ್ಲಿಯೇ ರಥವನ್ನು ಏರಿ ಕುದುರೆಗಳ ಗಾಳಗಳನ್ನು ಹಿಡಿದನು. ಆಗ ಕುರುನಂದನ ಕೌಂತೇಯ ಅರ್ಜುನನು ಹೃಷ್ಟಮನಸ್ಕನಾಗಿ ಗಂಗೆಯಲ್ಲಿ ಮಿಂದು ಶುಚನಾಗಿ ವಿಧಿವತ್ತಾಗಿ ಜಪವನ್ನು ಜಪಿಸಿದನು.

03043021a ತತಃ ಪಿತೄನ್ಯಥಾನ್ಯಾಯಂ ತರ್ಪಯಿತ್ವಾ ಯಥಾವಿಧಿ।
03043021c ಮಂದರಂ ಶೈಲರಾಜಂ ತಮಾಪ್ರಷ್ಟುಮುಪಚಕ್ರಮೇ।।

ನಂತರ ಯಥಾನ್ಯಾಯವಾಗಿ ಪಿತೃಗಳಿಗೆ ತರ್ಪಣವನ್ನಿತ್ತು, ಯಧಾವಿಧಿಯಾಗಿ ಶೈಲರಾಜ ಮಂದರನನ್ನು ಬೀಳ್ಕೊಡಲು ಮುಂದಾದನು.

03043022a ಸಾಧೂನಾಂ ಧರ್ಮಶೀಲಾನಾಂ ಮುನೀನಾಂ ಪುಣ್ಯಕರ್ಮಣಾಂ।
03043022c ತ್ವಂ ಸದಾ ಸಂಶ್ರಯಃ ಶೈಲ ಸ್ವರ್ಗಮಾರ್ಗಾಭಿಕಾಂಕ್ಷಿಣಾಂ।।

“ಶೈಲ! ನೀನು ಸದಾ ಸಾಧುಗಳ, ಧರ್ಮಶೀಲರ, ಪುಣ್ಯಕರ್ಮಿ ಮುನಿಗಳಿಗೆ, ಮತ್ತು ಸ್ವರ್ಗಮಾರ್ಗದಲ್ಲಿ ಹೋಗಲು ಬಯಸುವವರಿಗೆ ಆಶ್ರಯನಾಗಿರುವೆ.

03043023a ತ್ವತ್ಪ್ರಸಾದಾತ್ಸದಾ ಶೈಲ ಬ್ರಾಹ್ಮಣಾಃ ಕ್ಷತ್ರಿಯಾ ವಿಶಃ।
03043023c ಸ್ವರ್ಗಂ ಪ್ರಾಪ್ತಾಶ್ಚರಂತಿ ಸ್ಮ ದೇವೈಃ ಸಹ ಗತವ್ಯಥಾಃ।।

ಶೈಲ! ನಿನ್ನ ಪ್ರಸಾದದಿಂದ ಸದಾ ಬ್ರಾಹ್ಮಣರು, ಕ್ಷತ್ರಿಯರು, ಮತ್ತು ವೈಶ್ಯರು ಸ್ವರ್ಗವನ್ನು ಸೇರಿ ಅಲ್ಲಿ ದೇವತೆಗಳ ಸಂಗಡ ಗತವ್ಯಥರಾಗಿರುತ್ತಾರೆ.

03043024a ಅದ್ರಿರಾಜ ಮಹಾಶೈಲ ಮುನಿಸಂಶ್ರಯ ತೀರ್ಥವನ್।
03043024c ಗಚ್ಚಾಮ್ಯಾಮಂತ್ರಯಾಮಿ ತ್ವಾಂ ಸುಖಮಸ್ಮ್ಯುಷಿತಸ್ತ್ವಯಿ।।

ಅದ್ರಿರಾಜ! ಮಹಾಶೈಲ! ಮುನಿಗಳಿಗೆ ಆಶ್ರಯದಾತ! ತೀರ್ಥಗಳನ್ನು ಹೊಂದಿರುವವನೇ! ನನಗೆ ಹೋಗಬೇಕು. ನಿನ್ನಿಂದ ಬೀಳ್ಕೊಳ್ಳುತ್ತಿದ್ದೇನೆ. ನಿನ್ನಮೇಲೆ ಸುಖವಾಗಿ ಸಮಯವನ್ನು ಕಳೆದೆ.

03043025a ತವ ಸಾನೂನಿ ಕುಂಜಾಶ್ಚ ನದ್ಯಃ ಪ್ರಸ್ರವಣಾನಿ ಚ।
03043025c ತೀರ್ಥಾನಿ ಚ ಸುಪುಣ್ಯಾನಿ ಮಯಾ ದೃಷ್ಟಾನ್ಯನೇಕಶಃ।।

ನಾನು ನೋಡಿದ ನಿನ್ನ ಅನೇಕ ಶಿಖರಗಳು, ಕಣಿವೆಗಳು, ನದಿಗಳು, ಮತ್ತು ಚಿಲುಮೆಗಳು ಪುಣ್ಯಕರ ತೀರ್ಥಗಳು.”

03043026a ಏವಮುಕ್ತ್ವಾರ್ಜುನಃ ಶೈಲಮಾಮಂತ್ರ್ಯ ಪರವೀರಹಾ।
03043026c ಆರುರೋಹ ರಥಂ ದಿವ್ಯಂ ದ್ಯೋತಯನ್ನಿವ ಭಾಸ್ಕರಃ।।

ಪರವೀರಹ ಅರ್ಜುನನು ಹೀಗೆ ಹೇಳಿ ಶೈಲವನ್ನು ಬೀಳ್ಕೊಂಡು ಭಾಸ್ಕರನಂತೆ ಬೆಳಗುತ್ತಿರುವ ಆ ದಿವ್ಯ ರಥವನ್ನು ಏರಿದನು.

03043027a ಸ ತೇನಾದಿತ್ಯರೂಪೇಣ ದಿವ್ಯೇನಾದ್ಭುತಕರ್ಮಣಾ।
03043027c ಊರ್ಧ್ವಮಾಚಕ್ರಮೇ ಧೀಮಾನ್ಪ್ರಹೃಷ್ಟಃ ಕುರುನಂದನಃ।।

ಧೀಮಾನ್ ಕುರುನಂದನನು ಸಂತೋಷಗೊಂಡು ಆ ಆದಿತ್ಯರೂಪಿ ಅದ್ಭುತಕರ್ಮಿ, ದಿವ್ಯ ರಥದ ಮೇಲೇರಿದನು.

03043028a ಸೋಽದರ್ಶನಪಥಂ ಯಾತ್ವಾ ಮರ್ತ್ಯಾನಾಂ ಭೂಮಿಚಾರಿಣಾಂ।
03043028c ದದರ್ಶಾದ್ಭುತರೂಪಾಣಿ ವಿಮಾನಾನಿ ಸಹಸ್ರಶಃ।।

ಭೂಮಿಯ ಮೇಲೆ ನಡೆದಾಡುವ ಮರ್ತ್ಯರಿಗೆ ಕಾಣದೇ ಇರುವ ದಾರಿಯನ್ನು ಸಾಗಿ ಅವನು ಅಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಅದ್ಭುತವಾಗಿ ತೋರುತ್ತಿದ್ದ ವಿಮಾನಗಳನ್ನು ಕಂಡನು.

03043029a ನ ತತ್ರ ಸೂರ್ಯಃ ಸೋಮೋ ವಾ ದ್ಯೋತತೇ ನ ಚ ಪಾವಕಃ।
03043029c ಸ್ವಯೈವ ಪ್ರಭಯಾ ತತ್ರ ದ್ಯೋತಂತೇ ಪುಣ್ಯಲಬ್ಧಯಾ।।

ಅಲ್ಲಿ ಯಾವುದೂ ಸೂರ್ಯನ ಅಥವಾ ಚಂದ್ರನ ಅಥವಾ ಬೆಂಕಿಯ ಬೆಳಕಿನಿಂದ ಬೆಳಗುತ್ತಿರಲಿಲ್ಲ. ಆದರೆ ಪುಣ್ಯಗಳಿಂದ ಸಂಪಾದಿಸಿದ ತಮ್ಮದೇ ಪ್ರಭೆಯಿಂದ ಬೆಳಗುತ್ತಿದ್ದವು.

03043030a ತಾರಾರೂಪಾಣಿ ಯಾನೀಹ ದೃಶ್ಯಂತೇ ದ್ಯುತಿಮಂತಿ ವೈ।
03043030c ದೀಪವದ್ವಿಪ್ರಕೃಷ್ಟತ್ವಾದಣೂನಿ ಸುಮಹಾಂತ್ಯಪಿ।।

ತುಂಬಾ ದೂರಗಳಲ್ಲಿರುವುದರಿಂದ ನಕ್ಷತ್ರಗಳು ಬೆಳಗುತ್ತಿರುವ ಚಿಕ್ಕ ದೀಪಗಳಂತೆ ತೋರುತ್ತವೆ. ಆದರೆ ಅವು ತುಂಬಾ ದೊಡ್ಡವು.

03043031a ತಾನಿ ತತ್ರ ಪ್ರಭಾಸ್ವಂತಿ ರೂಪವಂತಿ ಚ ಪಾಂಡವಃ।
03043031c ದದರ್ಶ ಸ್ವೇಷು ಧಿಷ್ಣ್ಯೇಷು ದೀಪ್ತಿಮಂತಿ ಸ್ವಯಾರ್ಚಿಷಾ।।

ಪಾಂಡವನು ತಮ್ಮದೇ ಅಗ್ನಿಯಿಂದ, ತಮ್ಮದೇ ಒಲೆಯಲ್ಲಿ ಬೆಳಗುತ್ತಿರುವ ಆ ಸುಂದರ ಪ್ರಕಾಶವುಳ್ಳ ನಕ್ಷತ್ರಗಳನ್ನು ನೋಡಿದನು.

03043032a ತತ್ರ ರಾಜರ್ಷಯಃ ಸಿದ್ಧಾ ವೀರಾಶ್ಚ ನಿಹತಾ ಯುಧಿ।
03043032c ತಪಸಾ ಚ ಜಿತಸ್ವರ್ಗಾಃ ಸಂಪೇತುಃ ಶತಸಂಘಶಃ।।

ಅಲ್ಲಿ ಯುದ್ಧದಲ್ಲಿ ನಿಹತರಾದ ವೀರ ಸಿದ್ಧ ರಾಜರ್ಷಿಗಳು, ಮತ್ತು ತಪಸ್ಸಿನಿಂದ ಸ್ವರ್ಗವನ್ನು ಜಯಿಸಿದವರು ನೂರಾರು ಗುಂಪುಗಳಲ್ಲಿ ಸೇರಿದ್ದರು.

03043033a ಗಂಧರ್ವಾಣಾಂ ಸಹಸ್ರಾಣಿ ಸೂರ್ಯಜ್ವಲನತೇಜಸಾಂ।
03043033c ಗುಹ್ಯಕಾನಾಮೃಷೀಣಾಂ ಚ ತಥೈವಾಪ್ಸರಸಾಂ ಗಣಾಃ।।

ಹಾಗೆಯೇ ಸೂರ್ಯನ ಜ್ವಲನದಂತೆ ತೇಜಸ್ಸುಳ್ಳ ಸಹಸ್ರಾರು ಗಂಧರ್ವರು, ಗುಹ್ಯಕರು, ಋಷಿಗಳು ಮತ್ತು ಅಪ್ಸರೆಯರ ಗುಂಪುಗಳಿದ್ದವು.

03043034a ಲೋಕಾನಾತ್ಮಪ್ರಭಾನ್ಪಶ್ಯನ್ಫಲ್ಗುನೋ ವಿಸ್ಮಯಾನ್ವಿತಃ।
03043034c ಪಪ್ರಚ್ಚ ಮಾತಲಿಂ ಪ್ರೀತ್ಯಾ ಸ ಚಾಪ್ಯೇನಮುವಾಚ ಹ।।

ತಮ್ಮದೇ ಪ್ರಭೆಯಿಂದ ಬೆಳಗುತ್ತಿರುವ ಆ ಲೋಕಗಳನ್ನು ನೋಡಿ ವಿಸ್ಮಿತನಾದ ಫಲ್ಗುನನು ಮಾತಲಿಯನ್ನು ಪ್ರೀತಿಯಿಂದ ಪ್ರಶ್ನಿಸಲು ಅವನು ಉತ್ತರಿಸಿದನು:

03043035a ಏತೇ ಸುಕೃತಿನಃ ಪಾರ್ಥ ಸ್ವೇಷು ಧಿಷ್ಣ್ಯೇಷ್ವವಸ್ಥಿತಾಃ।
03043035c ಯಾನ್ದೃಷ್ಟವಾನಸಿ ವಿಭೋ ತಾರಾರೂಪಾಣಿ ಭೂತಲೇ।।

“ಪಾರ್ಥ! ವಿಭೋ! ನೀನು ನೋಡುತ್ತಿರುವ, ಭೂತಲದಲ್ಲಿ ನಕ್ಷತ್ರಗಳಂತೆ ಕಾಣುವ, ತಮ್ಮದೇ ಕುಂಡಗಳಲ್ಲಿ ಉರಿಯುತ್ತಿರುವ ಇವರು ಉತ್ತಮ ಕರ್ಮಗಳನ್ನು ಮಾಡಿದವರು.”

03043036a ತತೋಽಪಶ್ಯತ್ ಸ್ಥಿತಂ ದ್ವಾರಿ ಸಿತಂ ವೈಜಯಿನಂ ಗಜಂ।
03043036c ಐರಾವತಂ ಚತುರ್ದಂತಂ ಕೈಲಾಸಮಿವ ಶೃಂಗಿಣಂ।।

ಆಗ ಅವನು ದ್ವಾರದಲ್ಲಿ ಕೈಲಾಸಶಿಖರದಂತೆ ನಿಂತಿರುವ ನಾಲ್ಕು ದಂತಗಳ ಬಿಳಿಯ ವಿಜಯ ಗಜ ಐರಾವತವನ್ನು ಕಂಡನು.

03043037a ಸ ಸಿದ್ಧಮಾರ್ಗಮಾಕ್ರಮ್ಯ ಕುರುಪಾಂಡವಸತ್ತಮಃ।
03043037c ವ್ಯರೋಚತ ಯಥಾ ಪೂರ್ವಂ ಮಾಂಧಾತಾ ಪಾರ್ಥಿವೋತ್ತಮಃ।।

ಆ ಕುರುಪಾಂಡವಸತ್ತಮನು ಸಿದ್ಧರ ಮಾರ್ಗವನ್ನು ದಾಟಿ ಹಿಂದೆ ಪಾರ್ಥಿವೋತ್ತಮ ಮಾಂಧಾತನಂತೆ ಕಾಂತಿಯಿಂದ ಬೆಳಗಿದನು.

03043038a ಅತಿಚಕ್ರಾಮ ಲೋಕಾನ್ಸ ರಾಜ್ಞಾಂ ರಾಜೀವಲೋಚನಃ।
03043038c ತತೋ ದದರ್ಶ ಶಕ್ರಸ್ಯ ಪುರೀಂ ತಾಮಮರಾವತೀಂ।।

ಆ ರಾಜೀವಲೋಚನನು ರಾಜರ ಲೋಕಗಳನ್ನು ದಾಟಿ ಶಕ್ರನ ಪುರ ಅಮರಾವತಿಯನ್ನು ಕಂಡನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ತ್ರಿಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲ್ವತ್ಮೂರನೆಯ ಅಧ್ಯಾಯವು.