042 ದೇವಪ್ರಸ್ತಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 42

ಸಾರ

ಅರ್ಜುನನಲ್ಲಿಗೆ ಲೋಕಪಾಲರ ಆಗಮನ (1-15). ಯಮನು ದಂಡಾಸ್ತ್ರವನ್ನು ಅರ್ಜುನನಿಗಿತ್ತುದು (16-24). ವರುಣನು ಪಾಶಗಳನ್ನು ಅರ್ಜುನನಿಗೆ ನೀಡಿದುದು (25-30). ಕುಬೇರನು ಅಂತರ್ಧಾನ ಅಸ್ತ್ರವನ್ನು ನೀಡಿದುದು (31-34). ಇಂದ್ರನು ಅರ್ಜುನನನ್ನು ದೇವಲೋಕಕ್ಕೆ ಬಾ ಎಂದೂ, ಅಲ್ಲಿ ಎಲ್ಲಾ ದಿವ್ಯಾಸ್ತ್ರಗಳನ್ನೂ ನೀಡುವೆನೆಂದು ಹೇಳಿದುದು (35-38). ಲೋಕಪಾಲಕರ ನಿರ್ಗಮನ (39-42).

03042001 ವೈಶಂಪಾಯನ ಉವಾಚ।
03042001a ತಸ್ಯ ಸಂಪಶ್ಯತಸ್ತ್ವೇವ ಪಿನಾಕೀ ವೃಷಭಧ್ವಜಃ।
03042001c ಜಗಾಮಾದರ್ಶನಂ ಭಾನುರ್ಲೋಕಸ್ಯೇವಾಸ್ತಮೇಯಿವಾನ್।।

ವೈಶಂಪಾಯನನು ಹೇಳಿದನು: “ಅವನು ನೋಡುತ್ತಿದ್ದಂತೆಯೇ ಸೂರ್ಯನು ಲೋಕದಿಂದ ಅಸ್ತನಾಗುವಂತೆ ಪಿನಾಕೀ ವೃಷಭಧ್ವಜನು ಅಲ್ಲಿಯೇ ಅದೃಶ್ಯನಾದನು.

03042002a ತತೋಽರ್ಜುನಃ ಪರಂ ಚಕ್ರೇ ವಿಸ್ಮಯಂ ಪರವೀರಹಾ।
03042002c ಮಯಾ ಸಾಕ್ಷಾನ್ಮಹಾದೇವೋ ದೃಷ್ಟ ಇತ್ಯೇವ ಭಾರತ।।

ಭಾರತ! ಪರವೀರಹ ಅರ್ಜುನನು “ನಾನು ಸಾಕ್ಷಾತ್ ಮಹಾದೇವನನ್ನು ನೋಡಿದೆ!” ಎಂದು ಪರಮ ವಿಸ್ಮಿತನಾದನು.

03042003a ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯನ್ಮಯಾ ತ್ರ್ಯಂಬಕೋ ಹರಃ।
03042003c ಪಿನಾಕೀ ವರದೋ ರೂಪೀ ದೃಷ್ಟಃ ಸ್ಪೃಷ್ಟಶ್ಚ ಪಾಣಿನಾ।।

“ತ್ರ್ಯಂಬಕ ಹರ ಪಿನಾಕೀ ವರದ ಸುಂದರನನ್ನು ನಾನು ನೋಡಿ ಮತ್ತು ಅವನು ತನ್ನ ಕೈಗಳಿಂದ ನನ್ನನ್ನು ಮುಟ್ಟಿ ನಾನು ಧನ್ಯನಾದೆ! ಅನುಗೃಹೀತನಾದೆ!

03042004a ಕೃತಾರ್ಥಂ ಚಾವಗಚ್ಚಾಮಿ ಪರಮಾತ್ಮಾನಮಾತ್ಮನಾ।
03042004c ಶತ್ರೂಂಶ್ಚ ವಿಜಿತಾನ್ಸರ್ವಾನ್ನಿರ್ವೃತ್ತಂ ಚ ಪ್ರಯೋಜನಂ।।

ನನ್ನನ್ನು ನಾನೇ ಮೀರಿ ಕೃತಾರ್ಥನಾಗಿ ಹಿಂದಿರುಗುತ್ತಿದ್ದೇನೆ. ಹಿಂದಿರುಗಿ ಶತ್ರುಗಳೆಲ್ಲರನ್ನೂ ಗೆಲ್ಲುವುದಕ್ಕೆ ಇದನ್ನು ಬಳಸುತ್ತೇನೆ.”

03042005a ತತೋ ವೈಡೂರ್ಯವರ್ಣಾಭೋ ಭಾಸಯನ್ಸರ್ವತೋ ದಿಶಃ।
03042005c ಯಾದೋಗಣವೃತಃ ಶ್ರೀಮಾನಾಜಗಾಮ ಜಲೇಶ್ವರಃ।।
03042006a ನಾಗೈರ್ನದೈರ್ನದೀಭಿಶ್ಚ ದೈತ್ಯೈಃ ಸಾಧ್ಯೈಶ್ಚ ದೈವತೈಃ।
03042006c ವರುಣೋ ಯಾದಸಾಂ ಭರ್ತಾ ವಶೀ ತಂ ದೇಶಮಾಗಮತ್।।

ಆಗ ವೈಡೂರ್ಯವರ್ಣದಿಂದ ಹೊಳೆಯುತ್ತಿದ್ದ ಎಲ್ಲ ದಿಕ್ಕುಗಳನ್ನೂ ಬೆಳಗುತ್ತಾ ಜಲಚರಗಣಗಳಿಂದ, ನಾಗಗಳು, ನದನದಿಗಳು, ದೈತ್ಯರು, ಸಾಧ್ಯರು, ಮತ್ತು ದೇವತೆಗಳಿಂದ ಸುತ್ತುವರೆದು, ಜಲವಾಸಿಗಳ ಒಡೆಯ ಶ್ರೀಮಾನ್ ಜಲೇಶ್ವರ ವರುಣನು ಆ ಪ್ರದೇಶಕ್ಕೆ ಆಗಮಿಸಿದನು. 03042007a ಅಥ ಜಾಂಬೂನದವಪುರ್ವಿಮಾನೇನ ಮಹಾರ್ಚಿಷಾ।

03042007c ಕುಬೇರಃ ಸಮನುಪ್ರಾಪ್ತೋ ಯಕ್ಷೈರನುಗತಃ ಪ್ರಭುಃ।।

ಅದೇ ಸಮಯದಲ್ಲಿ ಬಂಗಾರದ ಬಣ್ಣದ, ಸುಂದರ ವಿಮಾನವನ್ನೇರಿ, ಯಕ್ಷರಿಂದ ಅನುಸರಿಸಲ್ಪಟ್ಟ ಪ್ರಭು ಕುಬೇರನು ಅಲ್ಲಿಗೆ ಬಂದನು.

03042008a ವಿದ್ಯೋತಯನ್ನಿವಾಕಾಶಮದ್ಭುತೋಪಮದರ್ಶನಃ।
03042008c ಧನಾನಾಮೀಶ್ವರಃ ಶ್ರೀಮಾನರ್ಜುನಂ ದ್ರಷ್ಟುಮಾಗತಃ।।

ಇಡೀ ಆಕಾಶವನ್ನೇ ಬೆಳಗಿಸುತ್ತಾ ನೋಡಲು ಅದ್ಭುತನಾಗಿ ಕಾಣುತ್ತಿದ್ದ ಶ್ರೀಮಾನ್ ಕುಬೇರನು ಅರ್ಜುನನನ್ನು ಕಾಣಲು ಬಂದನು.

03042009a ತಥಾ ಲೋಕಾಂತಕೃಚ್ಶ್ರೀಮಾನ್ಯಮಃ ಸಾಕ್ಷಾತ್ಪ್ರತಾಪವಾನ್।
03042009c ಮೂರ್ತ್ಯಮೂರ್ತಿಧರೈಃ ಸಾರ್ಧಂ ಪಿತೃಭಿರ್ಲೋಕಭಾವನೈಃ।।
03042010a ದಂಡಪಾಣಿರಚಿಂತ್ಯಾತ್ಮಾ ಸರ್ವಭೂತವಿನಾಶಕೃತ್।
03042010c ವೈವಸ್ವತೋ ಧರ್ಮರಾಜೋ ವಿಮಾನೇನಾವಭಾಸಯನ್।।
03042011a ತ್ರೀಽಲ್ಲೋಕಾನ್ಗುಹ್ಯಕಾಂಶ್ಚೈವ ಗಂಧರ್ವಾಂಶ್ಚ ಸಪನ್ನಗಾನ್।
03042011c ದ್ವಿತೀಯ ಇವ ಮಾರ್ತಂಡೋ ಯುಗಾಂತೇ ಸಮುಪಸ್ಥಿತೇ।।

ಹಾಗೆಯೇ ಲೋಕಾಂತಕ ಪ್ರತಾಪಿ, ದಂಡಪಾಣಿ, ಅಚಿಂತ್ಯಾತ್ಮ, ಸರ್ವಭೂತಗಳನ್ನು ವಿನಾಶಮಾಡುವ, ವೈವಸ್ವತ, ಧರ್ಮರಾಜ ಶ್ರೀಮಾನ್ ಸಾಕ್ಷಾತ್ ಯಮನು ಮೂರ್ತಿವಂತ ಮತ್ತು ಅಮೂರ್ತಿವಂತ ಲೋಕಭಾವನ ಪಿತೃಗಳೊಡನೆ ತನ್ನ ವಿಮಾನದ ಪ್ರಭೆಯನ್ನು ಗುಹ್ಯಕ-ಗಂಧರ್ವ-ಪನ್ನಗ ಈ ಮೂರೂ ಲೋಕಗಳನ್ನೂ ಬೆಳಗಿಸುತ್ತಾ, ಯುಗಾಂತದಲ್ಲಿ ಕಂಡುಬರುವ ಎರಡನೆಯ ಸೂರ್ಯನೋ ಎನ್ನುವಂತೆ ತೋರುತ್ತಾ ಆಗಮಿಸಿದನು.

03042012a ಭಾನುಮಂತಿ ವಿಚಿತ್ರಾಣಿ ಶಿಖರಾಣಿ ಮಹಾಗಿರೇಃ।
03042012c ಸಮಾಸ್ಥಾಯಾರ್ಜುನಂ ತತ್ರ ದದೃಶುಸ್ತಪಸಾನ್ವಿತಂ।।

ಮಹಾಗಿರಿಯ ಶಿಖರಗಳನ್ನು ವಿಚಿತ್ರ ಕಾಂತಿಯಿಂದ ಬೆಳಗಿಸುತ್ತಾ ಅಲ್ಲಿಗೆ ಬಂದು ತಪಸ್ಸಿನಲ್ಲಿ ತೊಡಗಿದ್ದ ಅರ್ಜುನನನ್ನು ನೋಡಿದರು.

03042013a ತತೋ ಮುಹೂರ್ತಾದ್ಭಗವಾನೈರಾವತಶಿರೋಗತಃ।
03042013c ಆಜಗಾಮ ಸಹೇಂದ್ರಾಣ್ಯಾ ಶಕ್ರಃ ಸುರಗಣೈರ್ವೃತಃ।।

ಸ್ವಲ್ಪವೇ ಸಮಯದಲ್ಲಿ ಭಗವಾನ್ ಶಕ್ರನು ಐರಾವತವನ್ನೇರಿ, ಸುರಗಣಗಳಿಂದ ಸುತ್ತುವರೆದು, ಇಂದ್ರಾಣಿಯೊಡನೆ ಅಲ್ಲಿಗೆ ಆಗಮಿಸಿದನು.

03042014a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ।
03042014c ಶುಶುಭೇ ತಾರಕಾರಾಜಃ ಸಿತಮಭ್ರಮಿವಾಸ್ಥಿತಃ।।

ಅವನ ತಲೆಯ ಮೇಲೆ ಹಿಡಿದಿದ್ದ ಬಿಳೀಬಣ್ಣದ ಛತ್ರದಿಂದ ಅವನು ಬಿಳಿಯ ಮೋಡಗಳ ಮರೆಯಲ್ಲಿದ್ದ ಚಂದ್ರನಂತೆ ಶೋಭಿಸಿದನು.

03042015a ಸಂಸ್ತೂಯಮಾನೋ ಗಂಧರ್ವೈರೃಷಿಭಿಶ್ಚ ತಪೋಧನೈಃ।
03042015c ಶೃಂಗಂ ಗಿರೇಃ ಸಮಾಸಾದ್ಯ ತಸ್ಥೌ ಸೂರ್ಯ ಇವೋದಿತಃ।।

ಗಂಧರ್ವರು ಮತ್ತು ತಪೋಧನ ಋಷಿಗಳು ಅವನನ್ನು ಸಂಸ್ತುತಿಸುತ್ತಿರಲು ಅವನು ಗಿರಿಶೃಂಗವನ್ನು ಸೇರಿ ಉದಯಿಸುತ್ತಿರುವ ಸೂರ್ಯನಂತೆ ನಿಂತುಕೊಂಡನು.

03042016a ಅಥ ಮೇಘಸ್ವನೋ ಧೀಮಾನ್ವ್ಯಾಜಹಾರ ಶುಭಾಂ ಗಿರಂ।
03042016c ಯಮಃ ಪರಮಧರ್ಮಜ್ಞೋ ದಕ್ಷಿಣಾಂ ದಿಶಮಾಸ್ಥಿತಃ।।

ಆಗ ಮೋಡಗಳ ಧ್ವನಿಯನ್ನು ಹೊಂದಿದ್ದ ಧೀಮಂತ, ಪರಮಧರ್ಮಜ್ಞ, ದಕ್ಷಿಣದಿಕ್ಕಿನಲ್ಲಿರುವ ಯಮನು ಶುಭಧ್ವನಿಯಲ್ಲಿ ಹೇಳಿದನು:

03042017a ಅರ್ಜುನಾರ್ಜುನ ಪಶ್ಯಾಸ್ಮಾಽಲ್ಲೋಕಪಾಲಾನ್ಸಮಾಗತಾನ್।
03042017c ದೃಷ್ಟಿಂ ತೇ ವಿತರಾಮೋಽದ್ಯ ಭವಾನರ್ಹೋ ಹಿ ದರ್ಶನಂ।।

“ಅರ್ಜುನ! ಅರ್ಜುನ! ಇಲ್ಲಿ ಸೇರಿರುವ ಲೋಕಪಾಲಕರಾದ ನಮ್ಮನ್ನು ನೋಡು. ನಮ್ಮನ್ನು ನೋಡಲು ಅರ್ಹನಾದ ನಿನಗೆ ದೃಷ್ಟಿಯನ್ನು ನೀಡುತ್ತಿದ್ದೇವೆ.

03042018a ಪೂರ್ವರ್ಷಿರಮಿತಾತ್ಮಾ ತ್ವಂ ನರೋ ನಾಮ ಮಹಾಬಲಃ।
03042018c ನಿಯೋಗಾದ್ಬ್ರಹ್ಮಣಸ್ತಾತ ಮರ್ತ್ಯತಾಂ ಸಮುಪಾಗತಃ।
03042018e ತ್ವಂ ವಾಸವಸಮುದ್ಭೂತೋ ಮಹಾವೀರ್ಯಪರಾಕ್ರಮಃ।।

ನೀನು ಪೂರ್ವದಲ್ಲಿ ಅಮಿತಾತ್ಮ ಮಹಾಬಲಿ ನರ ಎಂಬ ಹೆಸರಿನ ಋಷಿಯಾಗಿದ್ದೆ. ಮಗೂ! ಬ್ರಹ್ಮನ ಆದೇಶದಂತೆ ನೀನು ಮಹಾವೀರ್ಯ ಪರಾಕ್ರಮಿ ಇಂದ್ರನಿಗೆ ಹುಟ್ಟಿ ಮನುಷ್ಯರಲ್ಲಿ ಬಂದಿರುವೆ.

03042019a ಕ್ಷತ್ರಂ ಚಾಗ್ನಿಸಮಸ್ಪರ್ಶಂ ಭಾರದ್ವಾಜೇನ ರಕ್ಷಿತಂ।
03042019c ದಾನವಾಶ್ಚ ಮಹಾವೀರ್ಯಾ ಯೇ ಮನುಷ್ಯತ್ವಮಾಗತಾಃ।
03042019e ನಿವಾತಕವಚಾಶ್ಚೈವ ಸಂಸಾಧ್ಯಾಃ ಕುರುನಂದನ।।

ಕುರುನಂದನ! ಮುಟ್ಟಲು ಅಗ್ನಿಯಂತಿರುವ, ಭಾರದ್ವಾಜನಿಂದ ರಕ್ಷಿತ ಕ್ಷತ್ರಿಯರನ್ನು, ಮನುಷ್ಯರಾಗಿ ಜನ್ಮತಳೆದ ಮಹಾವೀರ ದಾನವರು, ಮತ್ತು ನಿವಾತಕವಚರನ್ನೂ ನೀನು ನಿಯಂತ್ರಿಸಬೇಕಾಗಿದೆ.

03042020a ಪಿತುರ್ಮಮಾಂಶೋ ದೇವಸ್ಯ ಸರ್ವಲೋಕಪ್ರತಾಪಿನಃ।
03042020c ಕರ್ಣಃ ಸ ಸುಮಹಾವೀರ್ಯಸ್ತ್ವಯಾ ವಧ್ಯೋ ಧನಂಜಯ।।

ಧನಂಜಯ! ಸರ್ವಲೋಕತಾಪಿನಿ ನನ್ನ ತಂದೆ ದೇವನ ಅಂಶವಾಗಿರುವ ಮಹಾವೀರ ಕರ್ಣನನ್ನು ನೀನು ವಧಿಸುತ್ತೀಯೆ.

03042021a ಅಂಶಾಶ್ಚ ಕ್ಷಿತಿಸಂಪ್ರಾಪ್ತಾ ದೇವಗಂಧರ್ವರಕ್ಷಸಾಂ।
03042021c ತಯಾ ನಿಪಾತಿತಾ ಯುದ್ಧೇ ಸ್ವಕರ್ಮಫಲನಿರ್ಜಿತಾಂ।
03042021e ಗತಿಂ ಪ್ರಾಪ್ಸ್ಯಂತಿ ಕೌಂತೇಯ ಯಥಾಸ್ವಮರಿಕರ್ಶನ।।

ಕೌಂತೇಯ! ಅರಿಕರ್ಶನ! ಭೂಮಿಯ ಮೇಲೆ ಬಂದಿರುವ ದೇವ-ಗಂಧರ್ವ-ರಾಕ್ಷಸರ ಅಂಶಗಳನ್ನು ನೀನು ಯುದ್ಧದಲ್ಲಿ ಉರುಳಿಸಿದ ನಂತರ ತಮ್ಮ ತಮ್ಮ ಕರ್ಮಫಲಗಳಿಗನುಗುಣವಾಗಿ ಗತಿಯನ್ನು ಹೊಂದುತ್ತಾರೆ.

03042022a ಅಕ್ಷಯಾ ತವ ಕೀರ್ತಿಶ್ಚ ಲೋಕೇ ಸ್ಥಾಸ್ಯತಿ ಫಲ್ಗುನ।
03042022c ತ್ವಯಾ ಸಾಕ್ಷಾನ್ಮಹಾದೇವಸ್ತೋಷಿತೋ ಹಿ ಮಹಾಮೃಧೇ।
03042022e ಲಘ್ವೀ ವಸುಮತೀ ಚಾಪಿ ಕರ್ತವ್ಯಾ ವಿಷ್ಣುನಾ ಸಹ।।

ಫಲ್ಗುನ! ಲೋಕದಲ್ಲಿ ನಿನ್ನ ಕೀರ್ತಿಯು ಅಕ್ಷಯವಾಗಿರುತ್ತದೆ. ನೀನು ಸಾಕ್ಷಾತ್ ಮಹಾದೇವನನ್ನು ಮಹಾಯುದ್ಧದಲ್ಲಿ ಮೆಚ್ಚಿಸಿದ್ದೀಯೆ. ವಿಷ್ಣುವಿನ ಜೊತೆಗೂಡಿ ನೀನು ಭೂಮಿಯ ಭಾರವನ್ನು ಕಡಿಮೆಮಾಡುತ್ತೀಯೆ.

03042023a ಗೃಹಾಣಾಸ್ತ್ರಂ ಮಹಾಬಾಹೋ ದಂಡಮಪ್ರತಿವಾರಣಂ।
03042023c ಅನೇನಾಸ್ತ್ರೇಣ ಸುಮಹತ್ತ್ವಂ ಹಿ ಕರ್ಮ ಕರಿಷ್ಯಸಿ।।

ಮಹಾಬಾಹೋ! ತಡೆಯಲು ಅಸಾದ್ಯವಾದ ಈ ದಂಡಾಸ್ತ್ರವನ್ನು ಸ್ವೀಕರಿಸು. ಈ ಅಸ್ತ್ರದಿಂದ ನೀನು ಮಹಾಕರ್ಮಗಳನ್ನು ಎಸಗಬಲ್ಲೆ.

03042024a ಪ್ರತಿಜಗ್ರಾಹ ತತ್ಪಾರ್ಥೋ ವಿಧಿವತ್ಕುರುನಂದನಃ।
03042024c ಸಮಂತ್ರಂ ಸೋಪಚಾರಂ ಚ ಸಮೋಕ್ಷಂ ಸನಿವರ್ತನಂ।।

ಪಾರ್ಥ! ಕುರುನಂದನ! ಇದನ್ನು ವಿಧಿವತ್ತಾಗಿ ಮಂತ್ರ, ಉಪಚಾರ, ಮೋಕ್ಷ ಮತ್ತು ಹಿಂತೆಗೆದುಕೊಳ್ಳುವದರ ಜೊತೆ ಸ್ವೀಕರಿಸು.”

03042025a ತತೋ ಜಲಧರಶ್ಯಾಮೋ ವರುಣೋ ಯಾದಸಾಂ ಪತಿಃ।
03042025c ಪಶ್ಚಿಮಾಂ ದಿಶಮಾಸ್ಥಾಯ ಗಿರಮುಚ್ಚಾರಯನ್ಪ್ರಭುಃ।।

ಆಗ ಜಲಧರ, ಶ್ಯಾಮವರ್ಣಿ, ಜಲವಾಸಿಗಳ ಒಡೆಯ, ಪಶ್ಚಿಮ ದಿಕ್ಕಿನಲ್ಲಿ ಸ್ಥಿತ, ಪ್ರಭು ವರುಣನು ಈ ಮಾತುಗಳನ್ನಾಡಿದನು:

03042026a ಪಾರ್ಥ ಕ್ಷತ್ರಿಯಮುಖ್ಯಸ್ತ್ವಂ ಕ್ಷತ್ರಧರ್ಮೇ ವ್ಯವಸ್ಥಿತಃ।
03042026c ಪಶ್ಯ ಮಾಂ ಪೃಥುತಾಂರಾಕ್ಷ ವರುಣೋಽಸ್ಮಿ ಜಲೇಶ್ವರಃ।।

“ಪಾರ್ಥ! ಕ್ಷತ್ರಧರ್ಮವನ್ನು ಪರಿಪಾಲಿಸುತ್ತಿರುವ ಕ್ಷತ್ರಿಯರಲ್ಲಿ ನೀನು ಮುಖ್ಯ. ತಾಮ್ರವರ್ಣದ ವಿಶಾಲ ಕಣ್ಣುಗಳಿಂದ ನನ್ನನ್ನು ನೋಡು. ನಾನು ಜಲೇಶ್ವರ ವರುಣ.

03042027a ಮಯಾ ಸಮುದ್ಯತಾನ್ಪಾಶಾನ್ವಾರುಣಾನನಿವಾರಣಾನ್।
03042027c ಪ್ರತಿಗೃಹ್ಣೀಷ್ವ ಕೌಂತೇಯ ಸರಹಸ್ಯನಿವರ್ತನಾನ್।।

ಕೌಂತೇಯ! ಎದುರಿಸಲಸಾಧ್ಯ ವಾರುಣ ಪಾಶಗಳನ್ನು ನಿನಗೆ ನೀಡುತ್ತಿದ್ದೇನೆ. ಅದನ್ನು ಹಿಂದೆ ತೆಗೆದುಕೊಳ್ಳುವ ರಹಸ್ಯದೊಂದಿಗೆ ಸ್ವೀಕರಿಸು.

03042028a ಏಭಿಸ್ತದಾ ಮಯಾ ವೀರ ಸಂಗ್ರಾಮೇ ತಾರಕಾಮಯೇ।
03042028c ದೈತೇಯಾನಾಂ ಸಹಸ್ರಾಣಿ ಸಮ್ಯತಾನಿ ಮಹಾತ್ಮನಾಂ।।

ಇದರಿಂದ ನಾನು ತಾರಕಾಸುರನೊಡನೆ ಸಂಗ್ರಾಮದ ಸಮಯದಲ್ಲಿ ಸಹಸ್ರಾರು ವೀರ ಮಹಾತ್ಮ ದೈತ್ಯರನ್ನು ಬಂಧಿಸಿ ಸೋಲಿಸಿದ್ದೆ.

03042029a ತಸ್ಮಾದಿಮಾನ್ಮಹಾಸತ್ತ್ವ ಮತ್ಪ್ರಸಾದಾತ್ಸಮುತ್ಥಿತಾನ್।
03042029c ಗೃಹಾಣ ನ ಹಿ ತೇ ಮುಚ್ಯೇದಂತಕೋಽಪ್ಯಾತತಾಯಿನಃ।।

ಮಹಾಸತ್ವ! ಪ್ರಸಾದವಾಗಿ ನಿನಗೆ ಕೊಡುತ್ತಿರುವ ಇವುಗಳನ್ನು ನನ್ನಿಂದ ಸ್ವೀಕರಿಸು. ಇದನ್ನು ನೀನು ಪ್ರಯೋಗಿಸಿದಾಗ ಅಂತಕನೂ ಕೂಡ ನಿನ್ನಿಂದ ಉಳಿಯಲಾರ.

03042030a ಅನೇನ ತ್ವಂ ಯದಾಸ್ತ್ರೇಣ ಸಂಗ್ರಾಮೇ ವಿಚರಿಷ್ಯಸಿ।
03042030c ತದಾ ನಿಃಕ್ಷತ್ರಿಯಾ ಭೂಮಿರ್ಭವಿಷ್ಯತಿ ನ ಸಂಶಯಃ।।

ಈ ಅಸ್ತ್ರದೊಂದಿಗೆ ನೀನು ಸಂಗ್ರಾಮಕ್ಕೆ ಹೋದಾಗ ಭೂಮಿಯು ಕ್ಷತ್ರಿಯರಿಲ್ಲದಂತಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”

03042031a ತತಃ ಕೈಲಾಸನಿಲಯೋ ಧನಾಧ್ಯಕ್ಷೋಽಭ್ಯಭಾಷತ।
03042031c ದತ್ತೇಷ್ವಸ್ತ್ರೇಷು ದಿವ್ಯೇಷು ವರುಣೇನ ಯಮೇನ ಚ।।

ವರುಣ ಮತ್ತು ಯಮರು ದಿವ್ಯಾಸ್ತ್ರಗಳನ್ನು ನೀಡಿದ ನಂತರ ಕೈಲಾಸವಾಸಿ, ಧನಾಧ್ಯಕ್ಷನು ಮಾತನಾಡಿದನು.

03042032a ಸವ್ಯಸಾಚಿನ್ಮಹಾಬಾಹೋ ಪೂರ್ವದೇವ ಸನಾತನ।
03042032c ಸಹಾಸ್ಮಾಭಿರ್ಭವಾಂ ಶ್ರಾಂತಃ ಪುರಾಕಲ್ಪೇಷು ನಿತ್ಯಶಃ।।

“ಮಹಾಬಾಹೋ! ಸವ್ಯಸಾಚಿ! ಸನಾತನ ಪೂರ್ವದೇವ! ಹಿಂದಿನ ಕಲ್ಪಗಳಲ್ಲಿ ನಿತ್ಯವೂ ನೀನು ನಮ್ಮ ಸಹಾಯಕ್ಕೆಂದು ಶ್ರಮಿಸಿದೆ.

03042033a ಮತ್ತೋಽಪಿ ತ್ವಂ ಗೃಹಾಣಾಸ್ತ್ರಮಂತರ್ಧಾನಂ ಪ್ರಿಯಂ ಮಮ।
03042033c ಓಜಸ್ತೇಜೋದ್ಯುತಿಹರಂ ಪ್ರಸ್ವಾಪನಮರಾತಿಹನ್।।

ನನ್ನಿಂದಲೂ ಕೂಡ ನನಗೆ ಪ್ರಿಯವಾದ, ಶತ್ರುಗಳ ಓಜಸ್ಸು, ತೇಜಸ್ಸು ಮತ್ತು ದ್ಯುತಿಗಳನ್ನು ಕಸಿದು, ಮೂರ್ಛೆಗೊಳಿಸುವ ಅಂತರ್ಧಾನ ಅಸ್ತ್ರವನ್ನು ಸ್ವೀಕರಿಸು.”

03042034a ತತೋಽರ್ಜುನೋ ಮಹಾಬಾಹುರ್ವಿಧಿವತ್ಕುರುನಂದನಃ।
03042034c ಕೌಬೇರಮಪಿ ಜಗ್ರಾಹ ದಿವ್ಯಮಸ್ತ್ರಂ ಮಹಾಬಲಃ।।

ಆಗ ಕುರುನಂದನ ಮಹಾಬಾಹು ಅರ್ಜುನನು ವಿಧಿವತ್ತಾಗಿ ಕುಬೇರನ ಮಹಾಬಲ ದಿವ್ಯ ಅಸ್ತ್ರವನ್ನೂ ಸ್ವೀಕರಿಸಿದನು.

03042035a ತತೋಽಬ್ರವೀದ್ದೇವರಾಜಃ ಪಾರ್ಥಮಕ್ಲಿಷ್ಟಕಾರಿಣಂ।
03042035c ಸಾಂತ್ವಯಂ ಶ್ಲಕ್ಷ್ಣಯಾ ವಾಚಾ ಮೇಘದುಂದುಭಿನಿಸ್ವನಃ।।

ಆಗ ದೇವರಾಜನು ಅಕ್ಲಿಷ್ಟಕರ್ಮಿ ಪಾರ್ಥನಿಗೆ ಸಂತವಿಸುತ್ತಾ ಮೃದುವಾದ ಮೋಡಗಳ ಗುಡುಗಿನ ಸ್ವರದಲ್ಲಿ ಹೇಳಿದನು:

03042036a ಕುಂತೀಮಾತರ್ಮಹಾಬಾಹೋ ತ್ವಮೀಶಾನಃ ಪುರಾತನಃ।
03042036c ಪರಾಂ ಸಿದ್ಧಿಮನುಪ್ರಾಪ್ತಃ ಸಾಕ್ಷಾದ್ದೇವಗತಿಂ ಗತಃ।।

“ಕುಂತಿಯ ಮಗ ಮಹಾಬಾಹೋ! ಹಿಂದೆ ನೀನು ಈಶನಾಗಿದ್ದೆ ಮತ್ತು ಉತ್ತಮ ಸಿದ್ಧಿಯನ್ನು ಹೊಂದಿ ಸಾಕ್ಷಾತ್ ದೇವಲೋಕಕ್ಕೆ ಹೋಗಿದ್ದೆ.

03042037a ದೇವಕಾರ್ಯಂ ಹಿ ಸುಮಹತ್ತ್ವಯಾ ಕಾರ್ಯಮರಿಂದಮ।
03042037c ಆರೋಢವ್ಯಸ್ತ್ವಯಾ ಸ್ವರ್ಗಃ ಸಜ್ಜೀಭವ ಮಹಾದ್ಯುತೇ।।

ಅರಿಂದಮ! ಮಹತ್ತರವಾದ ದೇವಕಾರ್ಯವೇ ನಿನ್ನ ಕಾರ್ಯ. ನೀನು ಸ್ವರ್ಗವನ್ನು ಏರಬೇಕಾಗಿದೆ. ಮಹಾದ್ಯುತಿ! ಸಿದ್ಧನಾಗಿರು!

03042038a ರಥೋ ಮಾತಲಿಸಮ್ಯುಕ್ತ ಆಗಂತಾ ತ್ವತ್ಕೃತೇ ಮಹೀಂ।
03042038c ತತ್ರ ತೇಽಹಂ ಪ್ರದಾಸ್ಯಾಮಿ ದಿವ್ಯಾನ್ಯಸ್ತ್ರಾಣಿ ಕೌರವ।।

ನಿನಗೋಸ್ಕರವಾಗಿ ಮಾತಲಿಯು ನಡೆಸುವ ನನ್ನ ರಥವು ಭೂಮಿಗೆ ಬರುತ್ತದೆ. ಕೌರವ! ಅಲ್ಲಿ ನಾನು ನಿನಗೆ ಇತರ ದಿವ್ಯಾಸ್ತ್ರಗಳನ್ನು ಕೊಡುತ್ತೇನೆ.”

03042039a ತಾನ್ದೃಷ್ಟ್ವಾ ಲೋಕಪಾಲಾಂಸ್ತು ಸಮೇತಾನ್ಗಿರಿಮೂರ್ಧನಿ।
03042039c ಜಗಾಮ ವಿಸ್ಮಯಂ ಧೀಮಾನ್ಕುಂತೀಪುತ್ರೋ ಧನಂಜಯಃ।।

ಗಿರಿಯ ಮೇಲೆ ಸೇರಿದ್ದ ಆ ಲೋಕಪಾಲಕರನ್ನು ನೋಡಿ ಧೀಮಂತ ಕುಂತಿಪುತ್ರ ಧನಂಜಯನು ವಿಸ್ಮಿತನಾದನು.

03042040a ತತೋಽರ್ಜುನೋ ಮಹಾತೇಜಾ ಲೋಕಪಾಲಾನ್ಸಮಾಗತಾನ್।
03042040c ಪೂಜಯಾಮಾಸ ವಿಧಿವದ್ವಾಗ್ಭಿರದ್ಭಿಃ ಫಲೈರಪಿ।।

ಆಗ ಮಹಾತೇಜಸ್ವಿ ಅರ್ಜುನನು ಸೇರಿದ್ದ ಲೋಕಪಾಲಕರನ್ನು ವಿಧಿವತ್ತಾಗಿ ಮಾತು-ಫಲಗಳಿಂದ ಪೂಜಿಸಿದನು.

03042041a ತತಃ ಪ್ರತಿಯಯುರ್ದೇವಾಃ ಪ್ರತಿಪೂಜ್ಯ ಧನಂಜಯಂ।
03042041c ಯಥಾಗತೇನ ವಿಬುಧಾಃ ಸರ್ವೇ ಕಾಮಮನೋಜವಾಃ।।

ಪ್ರತಿಯಾಗಿ ಧನಂಜಯನನ್ನು ಸತ್ಕರಿಸಿ ಮನಸ್ಸಿಗೆ ಬಂದಲ್ಲಿಗೆ ಮನೋವೇಗದಲ್ಲಿ ಹೋಗಬಲ್ಲ ವಿಬುಧ ಸರ್ವ ದೇವತೆಗಳೂ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.

03042042a ತತೋಽರ್ಜುನೋ ಮುದಂ ಲೇಭೇ ಲಬ್ಧಾಸ್ತ್ರಃ ಪುರುಷರ್ಷಭಃ।
03042042c ಕೃತಾರ್ಥಮಿವ ಚಾತ್ಮಾನಂ ಸ ಮೇನೇ ಪೂರ್ಣಮಾನಸಃ।।

ಪುರುಷರ್ಷಭ ಅರ್ಜುನನು ಅಸ್ತ್ರಗಳನ್ನು ಪಡೆದು, ಕೃತಾರ್ಥನಾದೆ ಮತ್ತು ಮನಸ್ಸಿನಲ್ಲಿರುವ ಎಲ್ಲವನ್ನೂ ಸಂಪೂರ್ಣವಾಗಿ ಪಡೆದಿದ್ದೇನೆ ಎಂದು ತಿಳಿದು ತುಂಬಾ ಸಂತೋಷಗೊಂಡನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದೇವಪ್ರಸ್ತಾನೇ ದ್ವಿಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದೇವಪ್ರಸ್ತಾನದಲ್ಲಿ ನಲ್ವತ್ತೆರಡನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-31/100, ಅಧ್ಯಾಯಗಳು-339/1995, ಶ್ಲೋಕಗಳು-11133/73784.