041 ಶಿವಪ್ರಸ್ತಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 41

ಸಾರ

ಅರ್ಜುನನಿಗೆ ಪಾಶುಪತವನ್ನು ಕೊಡಲು ಹರನು ಒಪ್ಪಿಕೊಂಡಿದುದು (1-17). ಪಾಶುಪತವನ್ನಿತ್ತು ಹರನು ಅಂತರ್ಧಾನನಾದುದು (18-26).

03041001 ಭಗವಾನುವಾಚ।
03041001a ನರಸ್ತ್ವಂ ಪೂರ್ವದೇಹೇ ವೈ ನಾರಾಯಣಸಹಾಯವಾನ್।
03041001c ಬದರ್ಯಾಂ ತಪ್ತವಾನುಗ್ರಂ ತಪೋ ವರ್ಷಾಯುತಾನ್ಬಹೂನ್।।

ಭಗವಂತನು ಹೇಳಿದನು: “ನೀನು ಹಿಂದಿನ ದೇಹದಲ್ಲಿ ನಾರಾಯಣನ ಸಹಾಯಕ ನರನಾಗಿದ್ದೆ ಮತ್ತು ಬದರಿಯಲ್ಲಿ ಬಹಳಷ್ಟು ಸಾವಿರ ವರ್ಷಗಳ ಉಗ್ರ ತಪಸ್ಸನ್ನು ತಪಿಸಿದ್ದೆ.

03041002a ತ್ವಯಿ ವಾ ಪರಮಂ ತೇಜೋ ವಿಷ್ಣೌ ವಾ ಪುರುಷೋತ್ತಮೇ।
03041002c ಯುವಾಭ್ಯಾಂ ಪುರುಷಾಗ್ರ್ಯಾಭ್ಯಾಂ ತೇಜಸಾ ಧಾರ್ಯತೇ ಜಗತ್।।

ಪುರುಷೋತ್ತಮ ವಿಷ್ಣುವಿನಲ್ಲಿರುವ ಪರಮ ತೇಜಸ್ಸು ನಿನ್ನಲ್ಲಿಯೂ ಇದೆ. ನೀವಿಬ್ಬರು ಪುರುಷವ್ಯಾಘ್ರರ ತೇಜಸ್ಸೇ ಈ ಜಗತ್ತನ್ನು ಪಾಲಿಸುತ್ತಿದೆ.

03041003a ಶಕ್ರಾಭಿಷೇಕೇ ಸುಮಹದ್ಧನುರ್ಜಲದನಿಸ್ವನಂ।
03041003c ಪ್ರಗೃಹ್ಯ ದಾನವಾಃ ಶಸ್ತಾಸ್ತ್ವಯಾ ಕೃಷ್ಣೇನ ಚ ಪ್ರಭೋ।।

ಪ್ರಭೋ! ಶಕ್ರನ ಅಭಿಷೇಕದಲ್ಲಿ ನೀನು ಮತ್ತು ಕೃಷ್ಣನು ಮೋಡಗಳಂತೆ ಧ್ವನಿಸುವ ಮಹಾ ಧನುಸ್ಸನ್ನು ಹಿಡಿದು ದಾನವರನ್ನು ನಿಯಂತ್ರಿಸಿದ್ದಿರಿ.

03041004a ಏತತ್ತದೇವ ಗಾಂಡೀವಂ ತವ ಪಾರ್ಥ ಕರೋಚಿತಂ।
03041004c ಮಾಯಾಮಾಸ್ಥಾಯ ಯದ್ಗ್ರಸ್ತಂ ಮಯಾ ಪುರುಷಸತ್ತಮ।
03041004e ತೂಣೌ ಚಾಪ್ಯಕ್ಷಯೌ ಭೂಯಸ್ತವ ಪಾರ್ಥ ಯಥೋಚಿತೌ।।

ಪುರುಷಸತ್ತಮ! ಪಾರ್ಥ! ಅದೇ ಗಾಂಡೀವವನ್ನು ನಿನ್ನ ಕೈಯಿಂದ ನನ್ನ ಮಾಯೆಯನ್ನು ಬಳಸಿ ನಾನು ಕಸಿದುಕೊಂಡೆ. ಪಾರ್ಥ! ನಿನಗೆ ಉಚಿತವಾದ ಆ ಎರಡು ಅಕ್ಷಯ ಭತ್ತಳಿಕೆಗಳನ್ನು ಹಿಂದೆ ಪಡೆದುಕೋ.

03041005a ಪ್ರೀತಿಮಾನಸ್ಮಿ ವೈ ಪಾರ್ಥ ತವ ಸತ್ಯಪರಾಕ್ರಮ।
03041005c ಗೃಹಾಣ ವರಮಸ್ಮತ್ತಃ ಕಾಂಕ್ಷಿತಂ ಯನ್ನರರ್ಷಭ।।

ಪಾರ್ಥ! ನಿನ್ನ ಸತ್ಯಪರಾಕ್ರಮವನ್ನು ಮೆಚ್ಚಿದ್ದೇನೆ. ನರರ್ಷಭ! ನಿನಗೆ ಏನು ಬೇಕೋ ಆ ವರವನ್ನು ಪಡೆದುಕೋ.

03041006a ನ ತ್ವಯಾ ಸದೃಶಃ ಕಶ್ಚಿತ್ಪುಮಾನ್ಮರ್ತ್ಯೇಷು ಮಾನದ।
03041006c ದಿವಿ ವಾ ವಿದ್ಯತೇ ಕ್ಷತ್ರಂ ತ್ವತ್ಪ್ರಧಾನಮರಿಂದಮ।।

ಮಾನದ! ನಿನ್ನ ಸರಿಸಮನಾದ ಪುರುಷನು ಮಾನವರಲ್ಲಿ ಅಥವಾ ದೇವಲೋಕದಲ್ಲಿ ಯಾರೂ ಇಲ್ಲ. ಅರಿಂದಮ! ಕ್ಷತ್ರಿಯರಲ್ಲಿ ನೀನೇ ಪ್ರಧಾನನಾದವನು.”

03041007 ಅರ್ಜುನ ಉವಾಚ।
03041007a ಭಗವನ್ದದಾಸಿ ಚೇನ್ಮಹ್ಯಂ ಕಾಮಂ ಪ್ರೀತ್ಯಾ ವೃಷಧ್ವಜ।
03041007c ಕಾಮಯೇ ದಿವ್ಯಮಸ್ತ್ರಂ ತದ್ಘೋರಂ ಪಾಶುಪತಂ ಪ್ರಭೋ।।
03041008a ಯತ್ತದ್ಬ್ರಹ್ಮಶಿರೋ ನಾಮ ರೌದ್ರಂ ಭೀಮಪರಾಕ್ರಮಂ।
03041008c ಯುಗಾಂತೇ ದಾರುಣೇ ಪ್ರಾಪ್ತೇ ಕೃತ್ಸ್ನಂ ಸಂಹರತೇ ಜಗತ್।।

ಅರ್ಜುನನು ಹೇಳಿದನು: “ಭಗವನ್! ವೃಷಧ್ವಜ! ಪ್ರಭೋ! ನನಗೆ ಬೇಕಾದುದನ್ನು ಕೊಡಲು ಇಚ್ಛಿಸುವೆಯಾದರೆ ದಿವ್ಯಾಸ್ತ್ರವಾದ ಬ್ರಹ್ಮಶಿರ ಎನ್ನುವ ಹೆಸರಿನಿಂದ ಯಾವುದು ಕರೆಯಲ್ಪಡುತ್ತದೆಯೋ ಆ ಘೋರ, ರೌದ್ರ, ಭೀಮಪರಾಕ್ರಮ, ದಾರುಣ ಯುಗಾಂತವು ಪ್ರಾಪ್ತವಾದಾಗ ಜಗತ್ತನ್ನು ಪೂರ್ತಿ ಸಂಹರಿಸುವ, ಪಾಶುಪತವನ್ನು ಬಯಸುತ್ತೇನೆ.

03041009a ದಹೇಯಂ ಯೇನ ಸಂಗ್ರಾಮೇ ದಾನವಾನ್ರಾಕ್ಷಸಾಂಸ್ತಥಾ।
03041009c ಭೂತಾನಿ ಚ ಪಿಶಾಚಾಂಶ್ಚ ಗಂಧರ್ವಾನಥ ಪನ್ನಗಾನ್।।

ಅದರಿಂದ ಸಂಗ್ರಾಮದಲ್ಲಿ ದಾನವರನ್ನೂ ರಾಕ್ಷಸರನ್ನೂ ಭೂತ, ಪಿಶಾಚಿ, ಗಂಧರ್ವ ಮತ್ತು ಪನ್ನಗರನ್ನೂ ದಹಿಸಬಹುದು.

03041010a ಯತಃ ಶೂಲಸಹಸ್ರಾಣಿ ಗದಾಶ್ಚೋಗ್ರಪ್ರದರ್ಶನಾಃ।
03041010c ಶರಾಶ್ಚಾಶೀವಿಷಾಕಾರಾಃ ಸಂಭವಂತ್ಯನುಮಂತ್ರಿತಾಃ।।

ಅದನ್ನು ಅನುಮಂತ್ರಿಸಿದಾಗ ಅದರಿಂದ ಸಹಸ್ರಾರು ಶೂಲಗಳು ಮತ್ತು ಉಗ್ರವಾಗಿ ಕಾಣುವ ಗದೆಗಳು, ವಿಷಕಾರುವ ಬಾಣಗಳು ಹುಟ್ಟುತ್ತವೆ. 03041011a ಯುಧ್ಯೇಯಂ ಯೇನ ಭೀಷ್ಮೇಣ ದ್ರೋಣೇನ ಚ ಕೃಪೇಣ ಚ।

03041011c ಸೂತಪುತ್ರೇಣ ಚ ರಣೇ ನಿತ್ಯಂ ಕಟುಕಭಾಷಿಣಾ।।
03041012a ಏಷ ಮೇ ಪ್ರಥಮಃ ಕಾಮೋ ಭಗವನ್ಭಗನೇತ್ರಹನ್।
03041012c ತ್ವತ್ಪ್ರಸಾದಾದ್ವಿನಿರ್ವೃತ್ತಃ ಸಮರ್ಥಃ ಸ್ಯಾಮಹಂ ಯಥಾ।।

ಇದರಿಂದ ರಣದಲ್ಲಿ ಭೀಷ್ಮ, ದ್ರೋಣ, ಕೃಪ, ಯಾವಾಗಲೂ ಕಟುಕಾಗಿ ಮಾತನಾಡುವ ಸೂತಪುತ್ರನೊಡನೆ ಯುದ್ಧಮಾಡಬಲ್ಲೆ. ಭಗವನ್! ಭಗನೇತ್ರಹ! ಇದು ನನ್ನ ಮೊಟ್ಟಮೊದಲಿನ ಬಯಕೆ. ನಿನ್ನ ಪ್ರಸಾದದಿಂದ ನಾನು ಸಮರ್ಥನಾಗಿ ಹಿಂದಿರುಗಬಹುದು.”

03041013 ಭಗವಾನುವಾಚ।
03041013a ದದಾನಿ ತೇಽಸ್ತ್ರಂ ದಯಿತಮಹಂ ಪಾಶುಪತಂ ಮಹತ್।
03041013c ಸಮರ್ಥೋ ಧಾರಣೇ ಮೋಕ್ಷೇ ಸಂಹಾರೇ ಚಾಪಿ ಪಾಂಡವ।।

ಭಗವಂತನು ಹೇಳಿದನು: “ಆ ಮಹಾ ಪಾಶುಪತ ಅಸ್ತ್ರವನ್ನು ನಿನಗೆ ಕೊಡುತ್ತೇನೆ. ಪಾಂಡವ ಅದನ್ನು ಧಾರಣಮಾಡಬಲ್ಲೆ, ಪ್ರಯೋಗಮಾಡಬಲ್ಲೆ ಮತ್ತು ಅದರಿಂದ ಸಂಹಾರಮಾಡಬಲ್ಲೆ.

03041014a ನೈತದ್ವೇದ ಮಹೇಂದ್ರೋಽಪಿ ನ ಯಮೋ ನ ಚ ಯಕ್ಷರಾಟ್।
03041014c ವರುಣೋ ವಾಥ ವಾ ವಾಯುಃ ಕುತೋ ವೇತ್ಸ್ಯಂತಿ ಮಾನವಾಃ।।

ಇದನ್ನು ಮಹೇಂದ್ರನೂ, ಯಮನೂ, ಯಕ್ಷರಾಜನೂ, ವರುಣನೂ ಅಥವಾ ವಾಯುವೂ ತಿಳಿದಿಲ್ಲ. ಇನ್ನು ಮನುಷ್ಯರಲ್ಲಿ ಯಾರಿಗೆ ತಿಳಿದಿರಬೇಕು?

03041015a ನ ತ್ವೇತತ್ಸಹಸಾ ಪಾರ್ಥ ಮೋಕ್ತವ್ಯಂ ಪುರುಷೇ ಕ್ವ ಚಿತ್।
03041015c ಜಗದ್ವಿನಿರ್ದಹೇತ್ಸರ್ವಮಲ್ಪತೇಜಸಿ ಪಾತಿತಂ।।

ಆದರೆ, ಪಾರ್ಥ! ನೀನು ಇದನ್ನು ಯಾವಾಗಲೂ ಸಾಹಸದಿಂದ ಮನುಷ್ಯನ ಮೇಲೆ ಪ್ರಯೋಗಿಸಬಾರದು. ಏಕೆಂದರೆ ಅಲ್ಪತೇಜಸ್ಸಿನವನ ಮೇಲೆ ಇದು ಬಿದ್ದರೆ ಇಡೀ ಜಗತ್ತನ್ನೇ ಸುಟ್ಟುಹಾಕಿಬಿಡುತ್ತದೆ.

03041016a ಅವಧ್ಯೋ ನಾಮ ನಾಸ್ತ್ಯಸ್ಯ ತ್ರೈಲೋಕ್ಯೇ ಸಚರಾಚರೇ।
03041016c ಮನಸಾ ಚಕ್ಷುಷಾ ವಾಚಾ ಧನುಷಾ ಚ ನಿಪಾತ್ಯತೇ।।

ಮೂರೂ ಲೋಕಗಳಲ್ಲಿಯೂ ಇದಕ್ಕೆ ಅವಧ್ಯ ಎನ್ನುವವರು ಯಾವ ಚರಾಚರರೂ ಇಲ್ಲ. ಮತ್ತು ಇದನ್ನು ಮನಸ್ಸಿನಿಂದ, ನೋಟದಿಂದ, ಮಾತಿನಿಂದ ಅಥವಾ ಧನುಸ್ಸಿನಿಂದ ಪ್ರಯೋಗಿಸಬಹುದು.””

03041017 ವೈಶಂಪಾಯನ ಉವಾಚ।
03041017a ತಚ್ಶ್ರುತ್ವಾ ತ್ವರಿತಃ ಪಾರ್ಥಃ ಶುಚಿರ್ಭೂತ್ವಾ ಸಮಾಹಿತಃ।
03041017c ಉಪಸಂಗೃಹ್ಯ ವಿಶ್ವೇಶಮಧೀಷ್ವೇತಿ ಚ ಸೋಽಬ್ರವೀತ್।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಬೇಗನೇ ಪಾರ್ಥನು ಶುಚಿರ್ಭೂತನಾಗಿ ದಿಟ್ಟನಾಗಿ ವಿಶ್ವೇಶ್ವರನ ಪಾದಗಳನ್ನು ಹಿಡಿಯಲು ಅವನು “ಇದನ್ನು ಕಲಿತುಕೋ!” ಎಂದು ಹೇಳಿದನು.

03041018a ತತಸ್ತ್ವಧ್ಯಾಪಯಾಮಾಸ ಸರಹಸ್ಯ ನಿವರ್ತನಂ।
03041018c ತದಸ್ತ್ರಂ ಪಾಂಡವಶ್ರೇಷ್ಠಂ ಮೂರ್ತಿಮಂತಮಿವಾಂತಕಂ।।

ನಂತರ ಅವನು ಪಾಂಡವಶ್ರೇಷ್ಠನಿಗೆ ಅಂತಕನ ಮೂರ್ತಿವತ್ತಾಗಿದ್ದ ಆ ಅಸ್ತ್ರವನ್ನು ಹೇಗೆ ಪ್ರಯೋಗಿಸಬೇಕು ಮತ್ತು ಹೇಗೆ ಹಿಂತೆಗೆದುಕೊಳ್ಳಬೇಕು ಎನ್ನುವುದನ್ನು ಹೇಳಿಕೊಟ್ಟನು.

03041019a ಉಪತಸ್ಥೇ ಮಹಾತ್ಮಾನಂ ಯಥಾ ತ್ರ್ಯಕ್ಷಮುಮಾಪತಿಂ।
03041019c ಪ್ರತಿಜಗ್ರಾಹ ತಚ್ಚಾಪಿ ಪ್ರೀತಿಮಾನರ್ಜುನಸ್ತದಾ।।

ಮೂರುಕಣ್ಣಿನವನೊಡನೆ ಹೇಗೋ ಹಾಗೆ ಅದು ಆ ಮಹಾತ್ಮನ ಬಳಿಬಂದಿತು ಮತ್ತು ಅರ್ಜುನನು ಅದನ್ನು ಸ್ವೀಕರಿಸಿದನು.

03041020a ತತಶ್ಚಚಾಲ ಪೃಥಿವೀ ಸಪರ್ವತವನದ್ರುಮಾ।
03041020c ಸಸಾಗರವನೋದ್ದೇಶಾ ಸಗ್ರಾಮನಗರಾಕರಾ।।

ಆಗ ಪೃಥ್ವಿಯು - ಅದರ ಪರ್ವತ, ವನ, ಮರಗಳು, ಸಾಗರ. ವನಪ್ರದೇಶಗಳು, ಮತ್ತು ಗ್ರಾಮನಗರಗಳೊಡನೆ - ಕಂಪಿಸಿತು.

03041021a ಶಂಖದುಂದುಭಿಘೋಷಾಶ್ಚ ಭೇರೀಣಾಂ ಚ ಸಹಸ್ರಶಃ।
03041021c ತಸ್ಮಿನ್ಮುಹೂರ್ತೇ ಸಂಪ್ರಾಪ್ತೇ ನಿರ್ಘಾತಶ್ಚ ಮಹಾನಭೂತ್।।

ಆದೇ ಸಮಯದಲ್ಲಿ ಸಹಸ್ರಾರು ಶಂಖ, ದುಂದುಭಿ, ಮತ್ತು ಭೇರಿಗಳ ಘೋಷವು ಕೇಳಿಬಂದಿತು ಮತ್ತು ಮಹಾ ಭೂಕಂಪವಾಯಿತು.

03041022a ಅಥಾಸ್ತ್ರಂ ಜಾಜ್ವಲದ್ಘೋರಂ ಪಾಂಡವಸ್ಯಾಮಿತೌಜಸಃ।
03041022c ಮೂರ್ತಿಮದ್ವಿಷ್ಠಿತಂ ಪಾರ್ಶ್ವೇ ದದೃಶುರ್ದೇವದಾನವಾಃ।।

ಆ ಜಾಜ್ವಲ್ಯಮಾನ ಘೋರ ಅಸ್ತ್ರವು ಅಮಿತೌಜಸ ಪಾಂಡವನ ಪಕ್ಕದಲ್ಲಿ ಮೂರ್ತಿವತ್ತಾಗಿ ನಿಂತಿದ್ದುದನ್ನು ದೇವದಾನವರು ವೀಕ್ಷಿಸಿದರು.

03041023a ಸ್ಪೃಷ್ಟಸ್ಯ ಚ ತ್ರ್ಯಂಬಕೇನ ಫಲ್ಗುನಸ್ಯಾಮಿತೌಜಸಃ।
03041023c ಯತ್ಕಿಂ ಚಿದಶುಭಂ ದೇಹೇ ತತ್ಸರ್ವಂ ನಾಶಮೇಯಿವತ್।।

ತ್ರ್ಯಂಬಕನು ಅಮಿತೌಜಸ ಫಲ್ಗುನನನ್ನು ಮುಟ್ಟಲು ಅವನ ದೇಹದಲ್ಲಿ ಏನೇನು ಅಶುಭಗಳಿದ್ದವೋ ಅವೆಲ್ಲವೂ ನಾಶವಾದವು.

03041024a ಸ್ವರ್ಗಂ ಗಚ್ಚೇತ್ಯನುಜ್ಞಾತಸ್ತ್ರ್ಯಂಬಕೇನ ತದಾರ್ಜುನಃ।
03041024c ಪ್ರಣಮ್ಯ ಶಿರಸಾ ಪಾರ್ಥಃ ಪ್ರಾಂಜಲಿರ್ದೇವಮೈಕ್ಷತ।।

ಶಿರಬಾಗಿ ಅಂಜಲೀ ಬದ್ಧನಾಗಿ ಪಾರ್ಥನು ನಮಸ್ಕರಿಸಲು ಸ್ವರ್ಗಕ್ಕೆ ಹೋಗು ಎಂದು ತ್ರ್ಯಂಬಕನು ಅರ್ಜುನನಿಗೆ ಅನುಜ್ಞೆಯನ್ನಿತ್ತನು.

03041025a ತತಃ ಪ್ರಭುಸ್ತ್ರಿದಿವನಿವಾಸಿನಾಂ ವಶೀ । ಮಹಾಮತಿರ್ಗಿರಿಶ ಉಮಾಪತಿಃ ಶಿವಃ।।
03041025c ಧನುರ್ಮಹದ್ದಿತಿಜಪಿಶಾಚಸೂದನಂ। ದದೌ ಭವಃ ಪುರುಷವರಾಯ ಗಾಂಡಿವಂ।।

ಆಗ ದೇವತೆಗಳ ಪ್ರಭು, ಮಹಾಮತಿ, ಗಿರೀಶ, ಉಮಾಪತಿ ಶಿವ ಭವನು ದೈತ್ಯರು ಮತ್ತು ಪಿಶಾಚರನ್ನು ಕೊಲ್ಲಬಲ್ಲ ಮಹಾಧನುಸ್ಸು ಗಾಂಡೀವವನ್ನು ಪುರುಷಶ್ರೇಷ್ಠನಿಗೆ ಕೊಟ್ಟನು.

03041026a ತತಃ ಶುಭಂ ಗಿರಿವರಮೀಶ್ವರಸ್ತದಾ। ಸಹೋಮಯಾ ಸಿತತಟಸಾನುಕಂದರಂ।।
03041026c ವಿಹಾಯ ತಂ ಪತಗಮಹರ್ಷಿಸೇವಿತಂ। ಜಗಾಮ ಖಂ ಪುರುಷವರಸ್ಯ ಪಶ್ಯತಃ।।

ಅನಂತರ ಅರ್ಜುನನು ನೋಡುತ್ತಿದ್ಡಂತೆಯೇ ಆ ಶುಭ, ಈಶ್ವರನು ಉಮೆಯೊಂದಿಗೆ ಆ ಗಿರಿ, ತಟಾಕ, ಮತ್ತು ಕಣಿವೆಗಳಿಂದೊಡಗೂಡಿದ, ಪಕ್ಷಿಗಳು ಮತ್ತು ಮಹರ್ಷಿಗಳಿಂದ ಸೇವಿತ ಗಿರಿಶ್ರೇಷ್ಠವನ್ನು ಬಿಟ್ಟು ಆಕಾಶವನ್ನೇರಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಶಿವಪ್ರಸ್ತಾನೇ ಈಕಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಶಿವಪ್ರಸ್ತಾನದಲ್ಲಿ ನಲ್ವತ್ತೊಂದನೆಯ ಅಧ್ಯಾಯವು.