040 ಮಹಾದೇವಸ್ತವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 40

ಸಾರ

ಹರನು ಕಿರಾತವೇಷ ಧರಿಸಿ ಪಾರ್ಥನ ಬಳಿ ಬರುವುದು (1-6). ಅಷ್ಟರಲ್ಲಿಯೇ ಹಂದಿಯ ರೂಪದಲ್ಲಿ ಬಂದ ರಾಕ್ಷಸ ಮೂಕನನ್ನು ಅರ್ಜುನ ಕಿರಾತರೀರ್ವರೂ ಏಕಕಾಲದಲ್ಲಿ ಹೊಡೆಯುವುದು (7-16). ಕೆಳಗುರುಳಿ ಅಸುನೀಗಿದ ಹಂದಿಯ ಕುರಿತು ಅರ್ಜುನ-ಹರರ ನಡುವೆ ನಡೆದ ಯುದ್ಧ (17-51). ಹರನ ನಿಜರೂಪವನ್ನು ತಿಳಿದ ಅರ್ಜುನನು ಅವನನ್ನು ಸ್ತುತಿಸಿದುದು (52-61).

03040001 ವೈಶಂಪಾಯನ ಉವಾಚ।
03040001a ಗತೇಷು ತೇಷು ಸರ್ವೇಷು ತಪಸ್ವಿಷು ಮಹಾತ್ಮಸು।
03040001c ಪಿನಾಕಪಾಣಿರ್ಭಗವಾನ್ಸರ್ವಪಾಪಹರೋ ಹರಃ।।
03040002a ಕೈರಾತಂ ವೇಷಮಾಸ್ಥಾಯ ಕಾಂಚನದ್ರುಮಸನ್ನಿಭಂ।
03040002c ವಿಭ್ರಾಜಮಾನೋ ವಪುಷಾ ಗಿರಿರ್ಮೇರುರಿವಾಪರಃ।।

ವೈಶಂಪಾಯನನು ಹೇಳಿದನು: “ಆ ಮಹಾತ್ಮ ತಪಸ್ವಿಗಳೆಲ್ಲರೂ ಹೊರಟು ಹೋಗಲು, ಸರ್ವಪಾಪಹರ ಪಿನಾಕಪಾಣಿ ಭಗವಾನ್ ಹರನು ಕಾಂಚನ ವೃಕ್ಷದಂತೆ ಕಾಂತಿಯುಕ್ತನಾಗಿ, ಗಿರಿಗಳಲ್ಲಿ ಇನ್ನೊಂದು ಮೇರು ಪರ್ವತದಂತೆ ಹೊಳೆಯುತ್ತಾ ಕಿರಾತನ ವೇಷವನ್ನು ಪಡೆದನು.

03040003a ಶ್ರೀಮದ್ಧನುರುಪಾದಾಯ ಶರಾಂಶ್ಚಾಶೀವಿಷೋಪಮಾನ್।
03040003c ನಿಷ್ಪಪಾತ ಮಹಾರ್ಚಿಷ್ಮಾನ್ದಹನ್ ಕಕ್ಷಮಿವಾನಲಃ।।

ವಿಷಭರಿತ ಸರ್ಪಗಳಂತಿದ್ದ ಶ್ರೀಮಂತ ಧನುಸ್ಸು ಮತ್ತು ಶರಗಳನ್ನು ಹಿಡಿದು, ಸಾಗರದ ಒಡಲನ್ನು ಸುಡುವ ಅಗ್ನಿಯಂತೆ ಬೆಳಗುತ್ತಾ ಕೆಳಗಿಳಿದನು.

03040004a ದೇವ್ಯಾ ಸಹೋಮಯಾ ಶ್ರೀಮಾನ್ಸಮಾನವ್ರತವೇಷಯಾ।
03040004c ನಾನಾವೇಷಧರೈರ್ಹೃಷ್ಟೈರ್ಭೂತೈರನುಗತಸ್ತದಾ।।

ಆ ಶ್ರೀಮಾನ್ ದೇವನು ಅದೇ ವೇಷವನ್ನು ಧರಿಸಿ, ಹಾಗೆಯೇ ನಡೆದುಕೊಳ್ಳುತ್ತಿದ್ದ ದೇವಿ ಉಮೆಯೊಡನೆ ಮತ್ತು ವೇಷಗಳನ್ನು ಧರಿಸಿ ಸಂತೋಷದಿಂದ ಕುಣಿದಾಡುತ್ತಿದ್ದ ನಾನಾ ಭೂತಗಳೊಡನಿದ್ದನು.

03040005a ಕಿರಾತವೇಷಪ್ರಚ್ಚನ್ನಃ ಸ್ತ್ರೀಭಿಶ್ಚಾನು ಸಹಸ್ರಶಃ।
03040005c ಅಶೋಭತ ತದಾ ರಾಜನ್ಸ ದೇವೋಽತೀವ ಭಾರತ।।

ರಾಜನ್! ಭಾರತ! ಕಿರಾತವೇಷವನ್ನು ಧರಿಸಿದ್ದ ಸಹಸ್ರಾರು ಸ್ತ್ರೀಯರೊಂದಿಗಿದ್ದ ದೇವನು ಅತೀವ ಸುಂದರನಾಗಿ ಕಾಣುತ್ತಿದ್ದನು.

03040006a ಕ್ಷಣೇನ ತದ್ವನಂ ಸರ್ವಂ ನಿಃಶಬ್ದಮಭವತ್ತದಾ।
03040006c ನಾದಃ ಪ್ರಸ್ರವಣಾನಾಂ ಚ ಪಕ್ಷಿಣಾಂ ಚಾಪ್ಯುಪಾರಮತ್।।

ಕ್ಷಣದಲ್ಲಿಯೇ ಆ ವನ ಸರ್ವವೂ ನಿಃಶಬ್ಧವಾಯಿತು ಮತ್ತು ಝರಿ ಪಕ್ಷಿಗಳ ನಿನಾದವು ನಿಂತಿತು.

03040007a ಸ ಸಂನ್ನಿಕರ್ಷಮಾಗಮ್ಯ ಪಾರ್ಥಸ್ಯಾಕ್ಲಿಷ್ಟಕರ್ಮಣಃ।
03040007c ಮೂಕಂ ನಾಮ ದಿತೇಃ ಪುತ್ರಂ ದದರ್ಶಾದ್ಭುತದರ್ಶನಂ।।
03040008a ವಾರಾಹಂ ರೂಪಮಾಸ್ಥಾಯ ತರ್ಕಯಂತಮಿವಾರ್ಜುನಂ।
03040008c ಹಂತುಂ ಪರಮದುಷ್ಟಾತ್ಮಾ ತಮುವಾಚಾಥ ಫಲ್ಗುನಃ।।

ಅವನು ಅಕ್ಲಿಷ್ಟಕರ್ಮಿ ಪಾರ್ಥನ ಬಳಿ ಬರುತ್ತಿದ್ದಂತೆ ಅದ್ಭುತವಾಗಿ ತೋರುತ್ತಿದ್ದ ಮೂಕ ಎಂಬ ಹೆಸರಿನ ದಿತಿಯ ಪರಮ ದುಷ್ಟಾತ್ಮ ಮಗನು ಹಂದಿಯ ರೂಪವನ್ನು ತಾಳಿ ಅರ್ಜುನನನ್ನು ಕೊಲ್ಲುವ ಯೋಚನೆಯಲ್ಲಿದ್ದುದನ್ನು ಕಂಡನು.

03040009a ಗಾಂಡೀವಂ ಧನುರಾದಾಯ ಶರಾಂಶ್ಚಾಶೀವಿಷೋಪಮಾನ್।
03040009c ಸಜ್ಯಂ ಧನುರ್ವರಂ ಕೃತ್ವಾ ಜ್ಯಾಘೋಷೇಣ ನಿನಾದಯನ್।।

ಆಗ ಫಲ್ಗುನನು ಗಾಂಡೀವ ಧನುಸ್ಸು ಮತ್ತು ವಿಷಕ್ಕೆ ಸಮಾನ ಬಾಣಗಳನ್ನು ಎತ್ತಿ, ಆ ಶ್ರೇಷ್ಠ ದನುಸ್ಸನ್ನು ಬಿಗಿದು, ಠೇಂಕಾರವನ್ನು ಮೊಳಗಿಸಿ ಹೇಳಿದನು.

03040010a ಯನ್ಮಾಂ ಪ್ರಾರ್ಥಯಸೇ ಹಂತುಮನಾಗಸಮಿಹಾಗತಂ।
03040010c ತಸ್ಮಾತ್ತ್ವಾಂ ಪೂರ್ವಮೇವಾಹಂ ನೇಷ್ಯಾಮಿ ಯಮಸಾದನಂ।।

“ಏನೂ ಪಾಪಗಳನ್ನೆಸಗದೇ ಇಲ್ಲಿಗೆ ಬಂದಿರುವ ನನ್ನನ್ನು ಕೊಲ್ಲಲು ಬಯಸುತ್ತಿರುವೆಯಾದುದರಿಂದ ಅದಕ್ಕೆ ಮೊದಲೇ ನಾನು ನಿನ್ನನ್ನು ಯಮಸಾದನಕ್ಕೆ ಕಳುಹಿಸುತ್ತೇನೆ!”

03040011a ತಂ ದೃಷ್ಟ್ವಾ ಪ್ರಹರಿಷ್ಯಂತಂ ಫಲ್ಗುನಂ ದೃಢಧನ್ವಿನಂ।
03040011c ಕಿರಾತರೂಪೀ ಸಹಸಾ ವಾರಯಾಮಾಸ ಶಂಕರಃ।।

ದೃಢಧನ್ವಿ ಫಲ್ಗುನನು ಅವನನ್ನು ಹೊಡೆಯುತ್ತಿರುವುದನ್ನು ನೋಡಿದ ಕಿರಾತರೂಪಿ ಶಂಕರನು ತಕ್ಷಣವೇ ಅವನನ್ನು ತಡೆದನು.

03040012a ಮಯೈಷ ಪ್ರಾರ್ಥಿತಃ ಪೂರ್ವಂ ನೀಲಮೇಘಸಮಪ್ರಭಃ।
03040012c ಅನಾದೃತ್ಯೈವ ತದ್ವಾಕ್ಯಂ ಪ್ರಜಹಾರಾಥ ಫಲ್ಗುನಃ।।

“ಕಪ್ಪು ಮೋಡದಂತಿರುವ ಇವನಿಗೆ ಮೊದಲು ಗುರಿಯಿಟ್ಟವನು ನಾನು!” ಆದರೆ ಅವನ ಮಾತನ್ನು ಅನಾದರಿಸಿ ಫಲ್ಗುನನು ಆ ಪ್ರಾಣಿಯನ್ನು ಹೊಡೆದನು.

03040013a ಕಿರಾತಶ್ಚ ಸಮಂ ತಸ್ಮಿನ್ನೇಕಲಕ್ಷ್ಯೇ ಮಹಾದ್ಯುತಿಃ।
03040013c ಪ್ರಮುಮೋಚಾಶನಿಪ್ರಖ್ಯಂ ಶರಮಗ್ನಿಶಿಖೋಪಮಂ।।

ಮಹಾದ್ಯುತಿ ಕಿರಾತನೂ ಕೂಡ ಏಕಕಾಲದಲ್ಲಿ ಅಗ್ನಿಶಿಖೆಗೆ ಸಮಾನ ಅಥವಾ ಮಿಂಚಿನಂತಿರುವ ಶರವನ್ನು ಅದಕ್ಕೇ ಗುರಿಯನ್ನಿಟ್ಟು ಹೊಡೆದನು.

03040014a ತೌ ಮುಕ್ತೌ ಸಾಯಕೌ ತಾಭ್ಯಾಂ ಸಮಂ ತತ್ರ ನಿಪೇತತುಃ।
03040014c ಮೂಕಸ್ಯ ಗಾತ್ರೇ ವಿಸ್ತೀರ್ಣೇ ಶೈಲಸಂಹನನೇ ತದಾ।।

ಅವರಿಬ್ಬರೂ ಬಿಟ್ಟ ಬಾಣಗಳು ಒಂದೇ ಕಾಲದಲ್ಲಿ ಪರ್ವತದಷ್ಟು ದೊಡ್ಡದಾಗಿದ್ದ ಮೂಕನ ದೇಹದ ಮೇಲೆ ಬಿದ್ದವು.

03040015a ಯಥಾಶನಿವಿನಿಷ್ಪೇಷೋ ವಜ್ರಸ್ಯೇವ ಚ ಪರ್ವತೇ।
03040015c ತಥಾ ತಯೋಃ ಸಮ್ನಿಪಾತಃ ಶರಯೋರಭವತ್ತದಾ।।

ಪರ್ವತದ ಮೇಲೆ ಮಿಂಚು ಮತ್ತು ಸಿಡಿಲು ಬೀಳುವಂತೆ ಆ ಎರಡು ಬಾಣಗಳೂ ಅವನ ಮೇಲೆ ಬಿದ್ದವು.

03040016a ಸ ವಿದ್ಧೋ ಬಹುಭಿರ್ಬಾಣೈರ್ದೀಪ್ತಾಸ್ಯೈಃ ಪನ್ನಗೈರಿವ।
03040016c ಮಮಾರ ರಾಕ್ಷಸಂ ರೂಪಂ ಭೂಯಃ ಕೃತ್ವಾ ವಿಭೀಷಣಂ।।

ಉರಿಯುತ್ತಿರುವ ಬಾಯಿಯ ಸರ್ಪಗಳಂತಿರುವ ಆ ಎರಡು ಬಾಣಗಳ ಹೊಡೆತದಿಂದ ಆ ರಾಕ್ಷಸನು ಸತ್ತು, ತನ್ನ ವಿಭೀಷಣ ರೂಪವನ್ನು ಹೊಂದಿ ಬಿದ್ದನು.

03040017a ದದರ್ಶಾಥ ತತೋ ಜಿಷ್ಣುಃ ಪುರುಷಂ ಕಾಂಚನಪ್ರಭಂ।
03040017c ಕಿರಾತವೇಷಪ್ರಚ್ಚನ್ನಂ ಸ್ತ್ರೀಸಹಾಯಮಮಿತ್ರಹಾ।
03040017e ತಮಬ್ರವೀತ್ಪ್ರೀತಮನಾಃ ಕೌಂತೇಯಃ ಪ್ರಹಸನ್ನಿವ।।

ಅಮಿತ್ರಹ ಕೌಂತೇಯ ಜಿಷ್ಣುವು ಕಾಂಚನಪ್ರಭೆಯ, ಕಿರಾತವೇಷದಲ್ಲಿದ್ದ, ಸ್ತ್ರೀಯರ ಜೊತೆಗೂಡಿದ್ದ ಪುರುಷನನ್ನು ನೋಡಿ ಸಂತೋಷದಿಂದ ನಗುತ್ತಾ ಹೇಳಿದನು:

03040018a ಕೋ ಭವಾನಟತೇ ಶೂನ್ಯೇ ವನೇ ಸ್ತ್ರೀಗಣಸಂವೃತಃ।
03040018c ನ ತ್ವಮಸ್ಮಿನ್ವನೇ ಘೋರೇ ಬಿಭೇಷಿ ಕನಕಪ್ರಭ।।

“ಈ ಶೂನ್ಯ ವನದಲ್ಲಿ ಸ್ತ್ರೀಗಣಗಳಿಂದ ಸುತ್ತುವರೆದು ತಿರುಗಾಡುತ್ತಿರುವ ನೀನು ಯಾರು? ಕನಕಪ್ರಭ! ಈ ಘೋರ ವನದಲ್ಲಿ ನಿನಗೆ ಭಯವಾಗುವುದಿಲ್ಲವೇ?

03040019a ಕಿಮರ್ಥಂ ಚ ತ್ವಯಾ ವಿದ್ಧೋ ಮೃಗೋಽಯಂ ಮತ್ಪರಿಗ್ರಹಃ।
03040019c ಮಯಾಭಿಪನ್ನಃ ಪೂರ್ವಂ ಹಿ ರಾಕ್ಷಸೋಽಯಮಿಹಾಗತಃ।।

ನನ್ನದಾಗಿದ್ದ ಈ ಮೃಗವನ್ನು ನೀನು ಏಕೆ ಹೊಡೆದೆ? ಇಲ್ಲಿಗೆ ಬಂದಿದ್ದ ಈ ರಾಕ್ಷಸನನ್ನು ಮೊದಲು ನೋಡಿದ್ದುದು ನಾನು.

03040020a ಕಾಮಾತ್ಪರಿಭವಾದ್ವಾಪಿ ನ ಮೇ ಜೀವನ್ವಿಮೋಕ್ಷ್ಯಸೇ।
03040020c ನ ಹ್ಯೇಷ ಮೃಗಯಾಧರ್ಮೋ ಯಸ್ತ್ವಯಾದ್ಯ ಕೃತೋ ಮಯಿ।
03040020e ತೇನ ತ್ವಾಂ ಭ್ರಂಶಯಿಷ್ಯಾಮಿ ಜೀವಿತಾತ್ಪರ್ವತಾಶ್ರಯ।।

ಬೇಕೆಂದೇ ನೀನು ಇದನ್ನು ಮಾಡಿರಬಹುದು ಅಥವಾ ತಪ್ಪೆಂದು ತಿಳಿಯದೇ ಮಾಡಿರಬಹುದು. ಆದರೆ ನೀನು ಮಾತ್ರ ಜೀವಂತನಾಗಿ ನನ್ನಿಂದ ತಪ್ಪಿಸಕೊಳ್ಳಲಾರೆ! ಇಂದು ನೀನು ನನ್ನೊಡನೆ ನಡೆದುಕೊಂಡಿದ್ದುದು ಬೇಟೆಯಾಡುವವನ ಧರ್ಮವಲ್ಲ. ಪರ್ವತವಾಸಿಯೇ! ನಾನು ನಿನ್ನಿಂದ ನಿನ್ನ ಜೀವವನ್ನು ತೆಗೆಯುತ್ತೇನೆ.”

03040021a ಇತ್ಯುಕ್ತಃ ಪಾಂಡವೇಯೇನ ಕಿರಾತಃ ಪ್ರಹಸನ್ನಿವ।
03040021c ಉವಾಚ ಶ್ಲಕ್ಷ್ಣಯಾ ವಾಚಾ ಪಾಂಡವಂ ಸವ್ಯಸಾಚಿನಂ।।

ಪಾಂಡವನು ಹೀಗೆ ಹೇಳಲು ಕಿರಾತನು ನಗುತ್ತಾ ಆ ಸವ್ಯಸಾಚಿ ಪಾಂಡವನಿಗೆ ಮೃದುಧ್ವನಿಯಲ್ಲಿ ಹೇಳಿದನು:

03040022a ಮಮೈವಾಯಂ ಲಕ್ಷ್ಯಭೂತಃ ಪೂರ್ವಮೇವ ಪರಿಗ್ರಹಃ।
03040022c ಮಮೈವ ಚ ಪ್ರಹಾರೇಣ ಜೀವಿತಾದ್ವ್ಯವರೋಪಿತಃ।।

“ಅದಕ್ಕೆ ನಾನೇ ಮೊದಲು ಗುರಿಯಿಟ್ಟಿದ್ದೆಯಾದುದರಿಂದ ಅದು ನನಗೇ ಸೇರಿದ್ದು. ಮತ್ತು ನನ್ನ ಬಾಣದ ಹೊಡೆತದಿಂದಲೇ ಅವನು ಸತ್ತಿದ್ದು.

03040023a ದೋಷಾನ್ಸ್ವಾನ್ನಾರ್ಹಸೇಽನ್ಯಸ್ಮೈ ವಕ್ತುಂ ಸ್ವಬಲದರ್ಪಿತಃ।
03040023c ಅಭಿಷಕ್ತೋಽಸ್ಮಿ ಮಂದಾತ್ಮನ್ನ ಮೇ ಜೀವನ್ವಿಮೋಕ್ಷ್ಯಸೇ।।

ನಿನ್ನಲ್ಲಿದ್ದ ದೋಷವನ್ನು ಇನ್ನೊಬ್ಬರ ಮೇಲೆ ಹಾಕುವಷ್ಟು ನಿನ್ನ ಬಲದ ಕುರಿತು ಗರ್ವ ಪಡಬೇಡ. ಮೂಢ! ನೀನು ನನ್ನನ್ನು ಅವಹೇಳಿಸಿದುದಕ್ಕೆ ನನ್ನಿಂದ ನೀನು ಜೀವಂತ ತಪ್ಪಿಸಿಕೊಳ್ಳಲಾರೆ!

03040024a ಸ್ಥಿರೋ ಭವಸ್ವ ಮೋಕ್ಷ್ಯಾಮಿ ಸಾಯಕಾನಶನೀನಿವ।
03040024c ಘಟಸ್ವ ಪರಯಾ ಶಕ್ತ್ಯಾ ಮುಂಚ ತ್ವಮಪಿ ಸಾಯಕಾನ್।।

ಸ್ಥಿರನಾಗು. ಸಿಡಿಲಿನಂತಿರುವ ಬಾಣಗಳನ್ನು ಬಿಡುತ್ತೇನೆ. ನೀನೂ ಕೂಡ ನಿನಗೆ ಎಷ್ಟು ಸಾದ್ಯವೋ ಅಷ್ಟು ಬಾಣಗಳನ್ನು ಬಿಡು!”

03040025a ತತಸ್ತೌ ತತ್ರ ಸಂರಬ್ಧೌ ಗರ್ಜಮಾನೌ ಮುಹುರ್ಮುಹುಃ।
03040025c ಶರೈರಾಶೀವಿಷಾಕಾರೈಸ್ತತಕ್ಷಾತೇ ಪರಸ್ಪರಂ।।

ಪುನಃ ಪುನಃ ಘರ್ಜಿಸುತ್ತಾ ಅವರಿಬ್ಬರೂ ಸರ್ಪಗಳಂತಿರುವ ವಿಷಕಾರೀ ಬಾಣಗಳಿಂದ ಪರಸ್ಪರರನ್ನು ಚುಚ್ಚಿದರು.

03040026a ತತೋಽರ್ಜುನಃ ಶರವರ್ಷಂ ಕಿರಾತೇ ಸಮವಾಸೃಜತ್।
03040026c ತತ್ಪ್ರಸನ್ನೇನ ಮನಸಾ ಪ್ರತಿಜಗ್ರಾಹ ಶಂಕರಃ।।

ಆಗ ಅರ್ಜುನನು ಬಾಣಗಳ ಮಳೆಯನ್ನೇ ಕಿರಾತನ ಮೇಲೆ ಸುರಿಸಿದನು. ಅದನ್ನು ಶಂಕರನು ಪ್ರಸನ್ನ ಮನಸ್ಸಿನಿಂದ ಸ್ವೀಕರಿಸಿದನು.

03040027a ಮುಹೂರ್ತಂ ಶರವರ್ಷಂ ತತ್ಪ್ರತಿಗೃಹ್ಯ ಪಿನಾಕಧೃಕ್।
03040027c ಅಕ್ಷತೇನ ಶರೀರೇಣ ತಸ್ಥೌ ಗಿರಿರಿವಾಚಲಃ।।

ಪಿನಾಕಧಾರಿಯು ಒಂದು ಕ್ಷಣ ಆ ಶರವರ್ಷವನ್ನು ತಡೆದುಕೊಂಡು ಶರೀರದಲ್ಲಿ ಗಾಯಗೊಳ್ಳದೇ ಪರ್ವತದಂತೆ ಅಚಲವಾಗಿ ನಿಂತುಕೊಂಡನು.

03040028a ಸ ದೃಷ್ಟ್ವಾ ಬಾಣವರ್ಷಂ ತನ್ಮೋಘೀಭೂತಂ ಧನಂಜಯಃ।
03040028c ಪರಮಂ ವಿಸ್ಮಯಂ ಚಕ್ರೇ ಸಾಧು ಸಾಧ್ವಿತಿ ಚಾಬ್ರವೀತ್।।

ತನ್ನ ಬಾಣಗಳ ಮಳೆಯು ನಿರರ್ಥಕವಾದುದನ್ನು ನೋಡಿ ಧನಂಜಯನು ಪರಮ ವಿಸ್ಮಿತನಾಗಿ “ಸಾಧು! ಸಾಧು!” ಎಂದು ಹೇಳತೊಡಗಿದನು.

03040029a ಅಹೋಽಯಂ ಸುಕುಮಾರಾಂಗೋ ಹಿಮವಚ್ಚಿಖರಾಲಯಃ।
03040029c ಗಾಂಡೀವಮುಕ್ತಾನ್ನಾರಾಚಾನ್ಪ್ರತಿಗೃಹ್ಣಾತ್ಯವಿಹ್ವಲಃ।।

“ಆಹಾ! ಈ ಹಿಮಾಲಯ ಶಿಖರದ ಮೇಲೆ ವಾಸಿಸುವ, ಸುಕುಮಾರಾಂಗನು ವಿಹ್ವಲನಾಗದೇ ಗಾಂಡೀವದಿಂದ ಬಿಡಲ್ಪಟ್ಟ ಈ ಲೋಹದ ಬಾಣಗಳನ್ನು ತಡೆದುಕೊಳ್ಳುತ್ತಿದ್ದಾನಲ್ಲ!

03040030a ಕೋಽಯಂ ದೇವೋ ಭವೇತ್ಸಾಕ್ಷಾದ್ರುದ್ರೋ ಯಕ್ಷಃ ಸುರೇಶ್ವರಃ।
03040030c ವಿದ್ಯತೇ ಹಿ ಗಿರಿಶ್ರೇಷ್ಠೇ ತ್ರಿದಶಾನಾಂ ಸಮಾಗಮಃ।।

ಇವನು ಯಾರಿರಬಹುದು? ದೇವನೋ, ಸಾಕ್ಷಾತ್ ರುದ್ರನೋ, ಯಕ್ಷನೋ, ಇಂದ್ರನೋ ಇರಬಹುದೇ? ಈ ಶ್ರೇಷ್ಠ ಪರ್ವತದ ಮೇಲೆ ಮೂವತ್ತು ದೇವರುಗಳು ಒಟ್ಟುಗೂಡುತ್ತಾರೆ ಎಂದು ತಿಳಿದುಕೊಂಡಿದ್ದೇನೆ.

03040031a ನ ಹಿ ಮದ್ಬಾಣಜಾಲಾನಾಮುತ್ಸೃಷ್ಟಾನಾಂ ಸಹಸ್ರಶಃ।
03040031c ಶಕ್ತೋಽನ್ಯಃ ಸಹಿತುಂ ವೇಗಮೃತೇ ದೇವಂ ಪಿನಾಕಿನಂ।।

ದೇವ ಪಿನಾಕಿಯನ್ನು ಬಿಟ್ಟು ಬೇರೆ ಯಾರಿಗೂ ನನ್ನಿಂದ ಬಿಡಲ್ಪಟ್ಟ ಸಹಸ್ರಾರು ಬಾಣಗಳ ಮಳೆಯ ಹೊಡೆತವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ!

03040032a ದೇವೋ ವಾ ಯದಿ ವಾ ಯಕ್ಷೋ ರುದ್ರಾದನ್ಯೋ ವ್ಯವಸ್ಥಿತಃ।
03040032c ಅಹಮೇನಂ ಶರೈಸ್ತೀಕ್ಷ್ಣೈರ್ನಯಾಮಿ ಯಮಸಾದನಂ।।

ದೇವತೆಯಾಗಿರಬಹುದು ಅಥವಾ ಯಕ್ಷನಾಗಿರಬಹುದು. ರುದ್ರನಲ್ಲದೇ ಬೇರೆ ಯಾರೇ ಇಲ್ಲಿಗೆ ಬಂದಿರಲಿ, ಅವನನ್ನು ನನ್ನ ಈ ತೀಕ್ಷ್ಣ ಬಾಣಗಳಿಂದ ಯಮಸಾದನಕ್ಕೆ ಕಳುಹಿಸುತ್ತೇನೆ.”

03040033a ತತೋ ಹೃಷ್ಟಮನಾ ಜಿಷ್ಣುರ್ನಾರಾಚಾನ್ಮರ್ಮಭೇದಿನಃ।
03040033c ವ್ಯಸೃಜಚ್ಶತಧಾ ರಾಜನ್ಮಯೂಖಾನಿವ ಭಾಸ್ಕರಃ।।

ರಾಜನ್! ಆಗ ಸಂತೋಷದಿಂದ ಜಿಷ್ಣುವು ಭಾಸ್ಕರನು ತನ್ನ ಕಿರಣಗಳನ್ನು ಪಸರಿಸುವಂತೆ ನೂರಾರು ಮರ್ಮಭೇದಿ ಬಾಣಗಳನ್ನು ಬಿಟ್ಟನು.

03040034a ತಾನ್ಪ್ರಸನ್ನೇನ ಮನಸಾ ಭಗವಾಽಲ್ಲೋಕಭಾವನಃ।
03040034c ಶೂಲಪಾಣಿಃ ಪ್ರತ್ಯಗೃಹ್ಣಾಚ್ಶಿಲಾವರ್ಷಮಿವಾಚಲಃ।।

ಲೋಕಭಾವನ ಭಗವಾನ್ ಶೂಲಪಾಣಿಯು ಮಳೆಯಡಿಯಲ್ಲಿ ಅಚಲವಾಗಿ ನಿಲ್ಲುವ ಪರ್ವತದಂತೆ ಪ್ರಸನ್ನ ಮನಸ್ಸಿನಿಂದಲೇ ಆ ಬಾಣಗಳನ್ನು ಸ್ವೀಕರಿಸಿದನು.

03040035a ಕ್ಷಣೇನ ಕ್ಷೀಣಬಾಣೋಽಥ ಸಂವೃತ್ತಃ ಫಲ್ಗುನಸ್ತದಾ।
03040035c ವಿತ್ರಾಸಂ ಚ ಜಗಾಮಾಥ ತಂ ದೃಷ್ಟ್ವಾ ಶರಸಂಕ್ಷಯಂ।।

ಸ್ವಲ್ಪ ಸಮಯದಲ್ಲಿಯೇ ಫಲ್ಗುನನ ಬಾಣಗಳು ಮುಗಿದುಹೋದವು. ತನ್ನ ಬಾಣಗಳು ಇಲ್ಲವಾದುದನ್ನು ನೋಡಿ ಅವನು ಅಲ್ಲಿಯೇ ತತ್ತರಿಸಿ ನಿಂತನು.

03040036a ಚಿಂತಯಾಮಾಸ ಜಿಷ್ಣುಸ್ತು ಭಗವಂತಂ ಹುತಾಶನಂ।
03040036c ಪುರಸ್ತಾದಕ್ಷಯೌ ದತ್ತೌ ತೂಣೌ ಯೇನಾಸ್ಯ ಖಾಂಡವೇ।।

ಆಗ ಜಿಷ್ಣುವು ಹಿಂದೆ ಖಾಂಡವವನದಲ್ಲಿ ಭಗವಂತ ಅಗ್ನಿಯು ಕೊಟ್ಟಿದ್ದ ಎರಡು ಅಕ್ಷಯ ಬತ್ತಳಿಕೆಗಳ ಕುರಿತು ಯೋಚಿಸಿದನು.

03040037a ಕಿಂ ನು ಮೋಕ್ಷ್ಯಾಮಿ ಧನುಷಾ ಯನ್ಮೇ ಬಾಣಾಃ ಕ್ಷಯಂ ಗತಾಃ।
03040037c ಅಯಂ ಚ ಪುರುಷಃ ಕೋಽಪಿ ಬಾಣಾನ್ಗ್ರಸತಿ ಸರ್ವಶಃ।।

“ಬಾಣಗಳು ಮುಗಿದು ಹೋದವಲ್ಲ! ಈಗ ನಾನು ನನ್ನ ಧನುಸ್ಸಿನಿಂದ ಏನನ್ನು ಪ್ರಯೋಗಿಸಲಿ? ಎಲ್ಲ ಬಾಣಗಳನ್ನೂ ಕಬಳಿಸುವ ಈ ಪುರುಷನಾದರೂ ಯಾರು?

03040038a ಅಹಮೇನಂ ಧನುಷ್ಕೋಟ್ಯಾ ಶೂಲಾಗ್ರೇಣೇವ ಕುಂಜರಂ।
03040038c ನಯಾಮಿ ದಂಡಧಾರಸ್ಯ ಯಮಸ್ಯ ಸದನಂ ಪ್ರತಿ।।

ಆನೆಯನ್ನು ಈಟಿಯ ಕೊನೆಯಿಂದ ಹೊಡೆಯುವಂತೆ ನಾನು ಇವನನ್ನು ಧನುಸ್ಸಿನ ತುದಿಯಿಂದ ಹೊಡೆದು ದಂಡಧಾರಿ ಯಮನ ಸದನಕ್ಕೆ ಕಳುಹಿಸುತ್ತೇನೆ!”

03040039a ಸಂಪ್ರಾಯುಧ್ಯದ್ಧನುಷ್ಕೋಟ್ಯಾ ಕೌಂತೇಯಃ ಪರವೀರಹಾ।
03040039c ತದಪ್ಯಸ್ಯ ಧನುರ್ದಿವ್ಯಂ ಜಗ್ರಾಸ ಗಿರಿಗೋಚರಃ।।

ಪರವೀರಹ ಕೌಂತೇಯನು ಧನುಸ್ಸಿನ ತುದಿಯಿಂದ ಹೊಡೆಯಲು ಆ ಗಿರಿಗೋಚರನು ಅವನ ಆ ದಿವ್ಯ ಧನುಸ್ಸನ್ನೂ ಕಸಿದುಕೊಂಡನು.

03040040a ತತೋಽರ್ಜುನೋ ಗ್ರಸ್ತಧನುಃ ಖಡ್ಗಪಾಣಿರತಿಷ್ಠತ।
03040040c ಯುದ್ಧಸ್ಯಾಂತಮಭೀಪ್ಸನ್ವೈ ವೇಗೇನಾಭಿಜಗಾಮ ತಂ।।

ತನ್ನ ಧನುಸ್ಸನ್ನು ಕಳೆದುಕೊಂಡ ಅರ್ಜುನನು ಖಡ್ಗವನ್ನು ಹಿಡಿದು ನಿಂತು ಯುದ್ಧವನ್ನು ಕೊನೆಗೊಳಿಸಲು ಇಚ್ಛಿಸಿ, ಅವನನ್ನು ಅದರಿಂದ ವೇಗವಾಗಿ ಆಕ್ರಮಣಿಸಿದನು.

03040041a ತಸ್ಯ ಮೂರ್ಧ್ನಿ ಶಿತಂ ಖಡ್ಗಮಸಕ್ತಂ ಪರ್ವತೇಷ್ವಪಿ।
03040041c ಮುಮೋಚ ಭುಜವೀರ್ಯೇಣ ವಿಕ್ರಮ್ಯ ಕುರುನಂದನಃ।
03040041e ತಸ್ಯ ಮೂರ್ಧಾನಮಾಸಾದ್ಯ ಪಫಾಲಾಸಿವರೋ ಹಿ ಸಃ।।

ಪರ್ವತದ ಮೇಲೆ ಹೊಡೆದರೂ ಮೊಡ್ಡಾಗದಂತಿದ್ದ ಆ ಹರಿತ ಖಡ್ಗವನ್ನು ಕುರುನಂದನನು ಧೈರ್ಯದಿಂದ ತನ್ನ ಭುಜ ಬಲದಿಂದ ಬೀಸಿ ಎಸೆಯಲು, ಅವನ ತಲೆಯನ್ನು ಹೊಡೆದ ಖಡ್ಗವು ಚೂರುಚೂರಾಗಿ ಬಿದ್ದಿತು.

03040042a ತತೋ ವೃಕ್ಷೈಃ ಶಿಲಾಭಿಶ್ಚ ಯೋಧಯಾಮಾಸ ಫಲ್ಗುನಃ।
03040042c ಯಥಾ ವೃಕ್ಷಾನ್ಮಹಾಕಾಯಃ ಪ್ರತ್ಯಗೃಹ್ಣಾದಥೋ ಶಿಲಾಃ।।

ಆಗ ಫಲ್ಗುನನು ಮರಗಳು ಮತ್ತು ಕಲ್ಲುಬಂಡೆಗಳಿಂದ ಯುದ್ಧಮಾಡತೊಡಗಿದನು ಮತ್ತು ಆ ಮಹಾಕಾಯನು ಮರಗಳನ್ನೂ ಕಲ್ಲು ಬಂಡೆಗಳನ್ನೂ ಸಹಿಸಿಕೊಂಡನು.

03040043a ಕಿರಾತರೂಪೀ ಭಗವಾಂಸ್ತತಃ ಪಾರ್ಥೋ ಮಹಾಬಲಃ।
03040043c ಮುಷ್ಟಿಭಿರ್ವಜ್ರಸಂಸ್ಪರ್ಶೈರ್ಧೂಮಮುತ್ಪಾದಯನ್ಮುಖೇ।

ಆಗ ಮಹಾಬಲಿ ಪಾರ್ಥನು ಬಾಯಿಯಿಂದ ಹೊಗೆಯನ್ನು ಕಾರುತ್ತಾ ಆ ಕಿರಾತರೂಪಿ ಭಗವಂತನ ಮೇಲೆ ಮಿಂಚಿನಂತಿದ್ದ ತನ್ನ ಮುಷ್ಟಿಯಿಂದ ಗುದ್ದಿದನು.

03040043e ಪ್ರಜಹಾರ ದುರಾಧರ್ಷೇ ಕಿರಾತಸಮರೂಪಿಣಿ।।
03040044a ತತಃ ಶಕ್ರಾಶನಿಸಮೈರ್ಮುಷ್ಟಿಭಿರ್ಭೃಶದಾರುಣೈಃ।
03040044c ಕಿರಾತರೂಪೀ ಭಗವಾನರ್ದಯಾಮಾಸ ಫಲ್ಗುನಂ।।

ಕಿರಾತನಂತೆ ತೋರುತ್ತಿದ್ದ ಆ ಕಿರಾತರೂಪಿಯು ಇಂದ್ರನ ವಜ್ರಾಯುಧದಂತಿದ್ದ ತನ್ನ ಮುಷ್ಟಿಯಿಂದ ಫಲ್ಗುನನನ್ನು ಗುದ್ದಿ ಅವನಿಗೆ ನೋವುಂಟುಮಾಡಿದನು.

03040045a ತತಶ್ಚಟಚಟಾಶಬ್ದಃ ಸುಘೋರಃ ಸಮಜಾಯತ।
03040045c ಪಾಂಡವಸ್ಯ ಚ ಮುಷ್ಟೀನಾಂ ಕಿರಾತಸ್ಯ ಚ ಯುಧ್ಯತಃ।।

ಆಗ ಅಲ್ಲಿ ಘೋರ ಯುದ್ಧವು ನಡೆಯಿತು. ಪಾಂಡವ ಮತ್ತು ಕಿರಾತನ ಮುಷ್ಟಿಯುದ್ಧದಿಂದ ಚಟಚಟ ಶಬ್ಧವು ಕೇಳಿ ಬರುತ್ತಿತ್ತು.

03040046a ಸುಮುಹೂರ್ತಂ ಮಹದ್ಯುದ್ಧಮಾಸೀತ್ತಲ್ಲೋಮಹರ್ಷಣಂ।
03040046c ಭುಜಪ್ರಹಾರಸಮ್ಯುಕ್ತಂ ವೃತ್ರವಾಸವಯೋರಿವ।।

ಭುಜಗಳಿಂದ ಹೊಡೆದಾಡುತ್ತಿದ್ದ ಆ ಮೈ ನವಿರೇಳಿಸುವ ಯುದ್ಧವು ಸ್ವಲ್ಪ ಸಮಯ ವೃತ್ರ ಮತ್ತು ಇಂದ್ರನ ನಡುವೆ ನಡೆದ ಯುದ್ಧದಂತೆ ತೋರುತ್ತಿತ್ತು.

03040047a ಜಹಾರಾಥ ತತೋ ಜಿಷ್ಣುಃ ಕಿರಾತಮುರಸಾ ಬಲೀ।
03040047c ಪಾಂಡವಂ ಚ ವಿಚೇಷ್ಟಂತಂ ಕಿರಾತೋಽಪ್ಯಹನದ್ಬಲಾತ್।।

ಆಗ ಬಲಶಾಲಿ ಜಿಷ್ಣುವು ಕಿರಾತನ ಎದೆಯನ್ನು ಬಿಗಿಯಾಗಿ ಹಿಡಿಯಲು ಕಿರಾತನು ಬಲದಿಂದ ಪಾಂಡವನನ್ನು ಮೂರ್ಛೆಗೊಳಿಸುವಂತೆ ಹೊಡೆದನು.

03040048a ತಯೋರ್ಭುಜವಿನಿಷ್ಪೇಷಾತ್ಸಂಘರ್ಷೇಣೋರಸೋಸ್ತಥಾ।
03040048c ಸಮಜಾಯತ ಗಾತ್ರೇಷು ಪಾವಕೋಽಂಗಾರಧೂಮವಾನ್।।

ಅವರ ತೋಳುಗಳ ಪೆಟ್ಟಿನಿಂದ ಮತ್ತು ಅವರ ಎದೆಗಳ ಸಂಘರ್ಷದಿಂದ ಅವರ ದೇಹಗಳಿಂದ ಕಿಡಿ ಮತ್ತು ಹೊಗೆಯುಕ್ತ ಬೆಂಕಿಯು ಹುಟ್ಟಿತು.

03040049a ತತ ಏನಂ ಮಹಾದೇವಃ ಪೀಡ್ಯ ಗಾತ್ರೈಃ ಸುಪೀಡಿತಂ।
03040049c ತೇಜಸಾ ವ್ಯಾಕ್ರಮದ್ರೋಷಾಚ್ಚೇತಸ್ತಸ್ಯ ವಿಮೋಹಯನ್।।

ಆಗ ಮಹಾದೇವನು ಅವನ ದೇಹವನ್ನು ಬಿಗಿಯಾಗಿ ಹಿಡಿದು ರೋಷದಿಂದ ಜೋರಾಗಿ ಹೊಡೆದು ಅವನನ್ನು ಮೂರ್ಛೆಗೊಳಿಸಿದನು.

03040050a ತತೋ ನಿಪೀಡಿತೈರ್ಗಾತ್ರೈಃ ಪಿಂಡೀಕೃತ ಇವಾಬಭೌ।
03040050c ಫಲ್ಗುನೋ ಗಾತ್ರಸಂರುದ್ಧೋ ದೇವದೇವೇನ ಭಾರತ।।
03040051a ನಿರುಚ್ಚ್ವಾಸೋಽಭವಚ್ಚೈವ ಸಂನ್ನಿರುದ್ಧೋ ಮಹಾತ್ಮನಾ।
03040051c ತತಃ ಪಪಾತ ಸಮ್ಮೂಢಸ್ತತಃ ಪ್ರೀತೋಽಭವದ್ಭವಃ।।

ಭಾರತ! ದೇವದೇವನ ಹಿಡಿತಕ್ಕೆ ಸಿಲುಕಿ ಮೈ ಮದ್ದೆಯಾಗಲು ಫಲ್ಗುನನು ತನ್ನ ದೇಹದ ನಿಯಂತ್ರಣವನ್ನು ಕಳೆದುಕೊಂಡನು. ಮಹಾತ್ಮನಿಂದ ಸೋಲಲ್ಪಟ್ಟು, ಉಸಿರಾಡುವುದನ್ನೂ ನಿಲ್ಲಿಸಿ ಮೂರ್ಛೆಗೊಂಡು ಬಿದ್ದನು. ಆಗ ಭವನು ಸಂತುಷ್ಟನಾದನು.

03040052 ಭಗವಾನುವಾಚ।
03040052a ಭೋ ಭೋ ಫಲ್ಗುನ ತುಷ್ಟೋಽಸ್ಮಿ ಕರ್ಮಣಾಪ್ರತಿಮೇನ ತೇ।
03040052c ಶೌರ್ಯೇಣಾನೇನ ಧೃತ್ಯಾ ಚ ಕ್ಷತ್ರಿಯೋ ನಾಸ್ತಿ ತೇ ಸಮಃ।।

ಭಗವಂತನು ಹೇಳಿದನು: “ಓ ಫಲ್ಗುನ! ನಿನ್ನ ಅಪ್ರತಿಮ ಕರ್ಮ, ಶೌರ್ಯ ಮತ್ತು ಸ್ಥಿರತೆಗಳಿಂದ ಸಂತುಷ್ಟನಾಗಿದ್ದೇನೆ. ನಿನ್ನ ಸರಿಸಮನಾದ ಕ್ಷತ್ರಿಯನಿಲ್ಲ!

03040053a ಸಮಂ ತೇಜಶ್ಚ ವೀರ್ಯಂ ಚ ಮಮಾದ್ಯ ತವ ಚಾನಘ।
03040053c ಪ್ರೀತಸ್ತೇಽಹಂ ಮಹಾಬಾಹೋ ಪಶ್ಯ ಮಾಂ ಪುರುಷರ್ಷಭ।।

ಅನಘ! ಇಂದು ನಿನ್ನ ತೇಜಸ್ಸು ಮತ್ತು ವೀರ್ಯವು ನನ್ನ ಸರಿಸಾಟಿಯಾಗಿತ್ತು. ಮಹಾಬಾಹೋ! ನಿನ್ನ ಮೇಲೆ ಪ್ರೀತನಾಗಿದ್ದೇನೆ. ಪುರುಷರ್ಷಭ! ನನ್ನನ್ನು ನೋಡು!

03040054a ದದಾನಿ ತೇ ವಿಶಾಲಾಕ್ಷ ಚಕ್ಷುಃ ಪೂರ್ವ‌ಋಷಿರ್ಭವಾನ್।
03040054c ವಿಜೇಷ್ಯಸಿ ರಣೇ ಶತ್ರೂನಪಿ ಸರ್ವಾನ್ದಿವೌಕಸಃ।।

ವಿಶಾಲಾಕ್ಷ! ನಿನಗೆ ನಾನು ಕಣ್ಣುಗಳನ್ನು ಕೊಡುತ್ತೇನೆ. ಹಿಂದೆ ನೀನು ಋಷಿಯಾಗಿದ್ದೆ. ದೇವತೆಗಳಾಗಿದ್ದರೂ ನೀನು ರಣದಲ್ಲಿ ನಿನ್ನ ಶತ್ರುಗಳನ್ನು ಜಯಿಸುತ್ತೀಯೆ.””

03040055 ವೈಶಂಪಾಯನ ಉವಾಚ।
03040055a ತತೋ ದೇವಂ ಮಹಾದೇವಂ ಗಿರಿಶಂ ಶೂಲಪಾಣಿನಂ।
03040055c ದದರ್ಶ ಫಲ್ಗುನಸ್ತತ್ರ ಸಹ ದೇವ್ಯಾ ಮಹಾದ್ಯುತಿಂ।।

ವೈಶಂಪಾಯನನು ಹೇಳಿದನು: “ಅನಂತರ ಫಲ್ಗುನನು ಶೂಲಪಾಣಿ ಮಹಾದ್ಯುತಿ ಮಹಾದೇವ ದೇವ ಗಿರೀಶನನ್ನು ದೇವಿಯ ಸಹಿತ ನೋಡಿದನು.

03040056a ಸ ಜಾನುಭ್ಯಾಂ ಮಹೀಂ ಗತ್ವಾ ಶಿರಸಾ ಪ್ರಣಿಪತ್ಯ ಚ।
03040056c ಪ್ರಸಾದಯಾಮಾಸ ಹರಂ ಪಾರ್ಥಃ ಪರಪುರಂಜಯಃ।।

ತನ್ನ ಮೊಳಕಾಲುಗಳನ್ನೂರಿ ನೆಲಕ್ಕೆ ಮುಟ್ಟುವಂತೆ ತಲೆಬಾಗಿ ನಮಸ್ಕರಿಸಿ ಪರಪುರಂಜಯ ಪಾರ್ಥನು ಹರನನ್ನು ಮೆಚ್ಚಿಸಿದನು.

03040057 ಅರ್ಜುನ ಉವಾಚ।
03040057a ಕಪರ್ದಿನ್ಸರ್ವಭೂತೇಶ ಭಗನೇತ್ರನಿಪಾತನ।
03040057c ವ್ಯತಿಕ್ರಮಂ ಮೇ ಭಗವನ್ ಕ್ಷಂತುಮರ್ಹಸಿ ಶಂಕರ।।

ಅರ್ಜುನನು ಹೇಳಿದನು: “ಕಪರ್ದಿನೇ! ಸರ್ವಭೂತೇಶ! ಭಗನೇತ್ರನಿಪಾತಿನೇ! ಶಂಕರ! ಭಗವನ್! ನನ್ನ ತಪ್ಪನ್ನು ಕ್ಷಮಿಸು!

03040058a ಭವಗದ್ದರ್ಶನಾಕಾಂಕ್ಷೀ ಪ್ರಾಪ್ತೋಽಸ್ಮೀಮಂ ಮಹಾಗಿರಿಂ।
03040058c ದಯಿತಂ ತವ ದೇವೇಶ ತಾಪಸಾಲಯಮುತ್ತಮಂ।।

ದೇವೇಶ! ನಿನ್ನನ್ನು ಕಾಣಲೋಸುಗವೇ ನಾನು ನಿನ್ನ ಅಚ್ಚುಮೆಚ್ಚಿನ, ತಾಪಸರಿಗೆ ಉತ್ತಮವಾದ ಈ ಮಹಾಗಿರಿಗೆ ಬಂದು ತಲುಪಿದ್ದೇನೆ.

03040059a ಪ್ರಸಾದಯೇ ತ್ವಾಂ ಭಗವನ್ಸರ್ವಭೂತನಮಸ್ಕೃತ।
03040059c ನ ಮೇ ಸ್ಯಾದಪರಾಧೋಽಯಂ ಮಹಾದೇವಾತಿಸಾಹಸಾತ್।।

ಭಗವನ್! ಸರ್ವಭೂತನಮಸ್ಕೃತ! ಮಹಾದೇವ! ನನ್ನ ಈ ಅತಿಸಾಹಸವು ಅಪರಾಧವಾಗದಿರಲಿ!

03040060a ಕೃತೋ ಮಯಾ ಯದಜ್ಞಾನಾದ್ವಿಮರ್ದೋಽಯಂ ತ್ವಯಾ ಸಹ।
03040060c ಶರಣಂ ಸಂಪ್ರಪನ್ನಾಯ ತತ್ ಕ್ಷಮಸ್ವಾದ್ಯ ಶಂಕರ।।

ಶಂಕರ! ನಿನಗೆ ಶರಣು ಬಂದು ನನ್ನನ್ನು ನಿನಗೆ ಅರ್ಪಿಸುತ್ತಿದ್ದೇನೆ. ತಿಳಿಯದೇ ನಿನ್ನೊಂದಿಗೆ ಹೋರಾಡಿದ ನನ್ನ ಈ ತಪ್ಪನ್ನು ಕ್ಷಮಿಸು!””

03040061 ವೈಶಂಪಾಯನ ಉವಾಚ।
03040061a ತಮುವಾಚ ಮಹಾತೇಜಾಃ ಪ್ರಹಸ್ಯ ವೃಷಭಧ್ವಜಃ।
03040061c ಪ್ರಗೃಹ್ಯ ರುಚಿರಂ ಬಾಹುಂ ಕ್ಷಾಂತಮಿತ್ಯೇವ ಫಲ್ಗುನಂ।।

ವೈಶಂಪಾಯನನು ಹೇಳಿದನು: “ಮಹಾತೇಜಸ್ವಿ ವೃಷಭಧ್ವಜನು ಫಲ್ಗುನನ ಸುಂದರ ಬಾಹುಗಳನ್ನು ಹಿಡಿದು, ನಕ್ಕು ಅವನಿಗೆ “ಕ್ಷಮಿಸಿದ್ದೇನೆ!” ಎಂದು ಹೇಳಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಮಹಾದೇವಸ್ತವೇ ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಮಹಾದೇವಸ್ತುತಿಯಲ್ಲಿ ನಲ್ವತ್ತನೆಯ ಅಧ್ಯಾಯವು.