ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 39
ಸಾರ
ಜನಮೇಜಯನು ಪ್ರಶ್ನಿಸಲು ವೈಶಂಪಾಯನನು ತ್ರ್ಯಂಬಕನೊಡನೆ ಅರ್ಜುನನು ಮೈಮುಟ್ಟಿ ಹೊಡೆದಾಡಿದುದರ ಅದ್ಭುತ ಕಥೆಯನ್ನು ಪ್ರಾರಂಭಿಸುವುದು (1-9). ಅರ್ಜುನನ ಉಗ್ರ ತಪಸ್ಸು (10-23). ಅರ್ಜುನನ ತಪಸ್ಸಿನಿಂದ ಪೀಡಿತರಾದ ಮಹರ್ಷಿಗಳು ಬೇಡಿಕೊಳ್ಳಲು ಹರನು ಅರ್ಜುನನ ಇಚ್ಛೆಯನ್ನು ಈಡೇರಿಸುತ್ತೇನೆಂದು ಕಳುಹಿಸಿದುದು (24-30).
03039001 ಜನಮೇಜಯ ಉವಾಚ।
03039001a ಭಗವನ್ ಶ್ರೋತುಮಿಚ್ಚಾಮಿ ಪಾರ್ಥಸ್ಯಾಕ್ಲಿಷ್ಟಕರ್ಮಣಃ।
03039001c ವಿಸ್ತರೇಣ ಕಥಾಮೇತಾಂ ಯಥಾಸ್ತ್ರಾಣ್ಯುಪಲಬ್ಧವಾನ್।।
ಜನಮೇಜಯನು ಹೇಳಿದನು: “ಭಗವನ್! ಅಕ್ಲಿಷ್ಟಕರ್ಮಿ ಪಾರ್ಥನು ಹೇಗೆ ಅಸ್ತ್ರಗಳನ್ನು ಪಡೆದನು ಎನ್ನುವುದನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ.
03039002a ಕಥಂ ಸ ಪುರುಷವ್ಯಾಘ್ರೋ ದೀರ್ಘಬಾಹುರ್ಧನಂಜಯಃ।
03039002c ವನಂ ಪ್ರವಿಷ್ಟಸ್ತೇಜಸ್ವೀ ನಿರ್ಮನುಷ್ಯಮಭೀತವತ್।।
ಆ ಪುರುಷವ್ಯಾಘ್ರ ದೀರ್ಘಬಾಹು ತೇಜಸ್ವಿ ಧನಂಜಯನು ಹೇಗೆ ನಿರ್ಜನ ಭಯಾನಕ ವನವನ್ನು ಪ್ರವೇಶಿಸಿದನು?
03039003a ಕಿಂ ಚ ತೇನ ಕೃತಂ ತತ್ರ ವಸತಾ ಬ್ರಹ್ಮವಿತ್ತಮ।
03039003c ಕಥಂ ಚ ಭಗವಾನ್ ಸ್ಥಾಣುರ್ದೇವರಾಜಶ್ಚ ತೋಷಿತಃ।।
ಬ್ರಹ್ಮವಿತ್ತಮ! ಅಲ್ಲಿ ವಾಸಿಸುವಾಗ ಅವನು ಏನು ಮಾಡಿದನು? ಅವನು ಭಗವಾನ್ ಸ್ಥಾಣು ಮತ್ತು ದೇವರಾಜನನ್ನು ಹೇಗೆ ತೃಪ್ತಿಪಡಿಸಿದನು?
03039004a ಏತದಿಚ್ಚಾಮ್ಯಹಂ ಶ್ರೋತುಂ ತ್ವತ್ಪ್ರಸಾದಾದ್ದ್ವಿಜೋತ್ತಮ।
03039004c ತ್ವಂ ಹಿ ಸರ್ವಜ್ಞ ದಿವ್ಯಂ ಚ ಮಾನುಷಂ ಚೈವ ವೇತ್ಥ ಹ।।
ದ್ವಿಜೋತ್ತಮ! ನಿನ್ನ ಅನುಗ್ರಹದಿಂದ ಇದನ್ನು ಕೇಳಲು ಬಯಸುತ್ತೇನೆ. ಏಕೆಂದರೆ ದಿವ್ಯ ಮತ್ತು ಮಾನುಷವಿಷಗಳನ್ನು ತಿಳಿದ ಸರ್ವಜ್ಞನು ನೀನು.
03039005a ಅತ್ಯದ್ಭುತಂ ಮಹಾಪ್ರಾಜ್ಞ ರೋಮಹರ್ಷಣಮರ್ಜುನಃ।
03039005c ಭವೇನ ಸಹ ಸಂಗ್ರಾಮಂ ಚಕಾರಾಪ್ರತಿಮಂ ಕಿಲ।।
03039005e ಪುರಾ ಪ್ರಹರತಾಂ ಶ್ರೇಷ್ಠಃ ಸಂಗ್ರಾಮೇಷ್ವಪರಾಜಿತಃ।
ಹಿಂದೆ ಪ್ರಹಾರಿಗಳಲ್ಲಿ ಶ್ರೇಷ್ಠ, ಸಂಗ್ರಾಮಗಳಲ್ಲಿ ಅಪರಾಜಿತ ಮಹಾಪ್ರಾಜ್ಞ ಅರ್ಜುನನು ಭವನೊಂದಿಗೆ ಅತ್ಯದ್ಭುತ ಮೈನವಿರೇಳಿಸುವ ಸಂಗ್ರಾಮ ಮಾಡಿದನಲ್ಲವೇ?
03039006a ಯಚ್ಛೃತ್ವಾ ನರಸಿಂಹಾನಾಂ ದೈನ್ಯಹರ್ಷಾತಿವಿಸ್ಮಯಾತ್।।
03039006c ಶೂರಾಣಾಮಪಿ ಪಾರ್ಥಾನಾಂ ಹೃದಯಾನಿ ಚಕಂಪಿರೇ।
ಅದನ್ನು ಕೇಳಿದ ನರಸಿಂಹ ಪಾರ್ಥರ ಹೃದಯವು ಶೂರರಾಗಿದ್ದರೂ ದೀನತೆ, ಹರ್ಷ ಮತ್ತು ವಿಸ್ಮಯದಿಂದ ನಡುಗಿತಂತೆ!
03039007a ಯದ್ಯಚ್ಚ ಕೃತವಾನನ್ಯತ್ಪಾರ್ಥಸ್ತದಖಿಲಂ ವದ।।
03039007c ನ ಹ್ಯಸ್ಯ ನಿಂದಿತಂ ಜಿಷ್ಣೋಃ ಸುಸೂಕ್ಷ್ಮಮಪಿ ಲಕ್ಷಯೇ।
03039007e ಚರಿತಂ ತಸ್ಯ ಶೂರಸ್ಯ ತನ್ಮೇ ಸರ್ವಂ ಪ್ರಕೀರ್ತಯ।।
ಪಾರ್ಥನ ಇದು ಮತ್ತು ಇತರ ಕಾರ್ಯಗಳೆಲ್ಲವನ್ನೂ ಹೇಳು. ಯಾಕೆಂದರೆ ತುಂಬಾ ಸೂಕ್ಷ್ಮವಾದ ತಪ್ಪನ್ನೂ ನಾನು ಜಿಷ್ಣುವಿನಲ್ಲಿ ಕಾಣುತ್ತಿಲ್ಲ. ಆ ಶೂರನ ಸರ್ವ ಕಾರ್ಯಗಳನ್ನೂ ನನಗೆ ವರ್ಣಿಸು.”
03039008 ವೈಶಂಪಾಯನ ಉವಾಚ।
03039008a ಕಥಯಿಷ್ಯಾಮಿ ತೇ ತಾತ ಕಥಾಮೇತಾಂ ಮಹಾತ್ಮನಃ।
03039008c ದಿವ್ಯಾಂ ಕೌರವಶಾರ್ದೂಲ ಮಹತೀಮದ್ಭುತೋಪಮಾಂ।।
ವೈಶಂಪಾಯನನು ಹೇಳಿದನು: “ಮಗೂ! ಕೌರವಶಾರ್ದೂಲ! ಆ ಮಹಾತ್ಮನ ಅತಿ ಅದ್ಭುತವಾದ ದಿವ್ಯ ಕಥೆಯನ್ನು ಹೇಳುತ್ತೇನೆ.
03039009a ಗಾತ್ರಸಂಸ್ಪರ್ಶಸಂಬಂಧಂ ತ್ರ್ಯಂಬಕೇಣ ಸಹಾನಘ।
03039009c ಪಾರ್ಥಸ್ಯ ದೇವದೇವೇನ ಶೃಣು ಸಮ್ಯಕ್ಸಮಾಗಮಂ।।
ಅನಘ! ದೇವದೇವ ತ್ರ್ಯಂಬಕನೊಂದಿಗೆ ದೇಹವನ್ನು ಮುಟ್ಟಿ ಹೊಡೆದಾಡಿದ ಆ ಸಮಾಗಮದ ಕುರಿತು ಕೇಳು.
03039010a ಯುಧಿಷ್ಠಿರನಿಯೋಗಾತ್ಸ ಜಗಾಮಾಮಿತವಿಕ್ರಮಃ।
03039010c ಶಕ್ರಂ ಸುರೇಶ್ವರಂ ದ್ರಷ್ಟುಂ ದೇವದೇವಂ ಚ ಶಂಕರಂ।।
ಯುಧಿಷ್ಠಿರನ ನಿಯೋಗದಂತೆ ಆ ಅಮಿತವಿಕ್ರಮನು ಸುರೇಶ್ವರ ಶಕ್ರ ಮತ್ತು ದೇವದೇವ ಶಂಕರನನ್ನು ಕಾಣಲು ಹೋದನು.
03039011a ದಿವ್ಯಂ ತದ್ಧನುರಾದಾಯ ಖಡ್ಗಂ ಚ ಪುರುಷರ್ಷಭಃ।
03039011c ಮಹಾಬಲೋ ಮಹಾಬಾಹುರರ್ಜುನಃ ಕಾರ್ಯಸಿದ್ಧಯೇ।।
03039011e ದಿಶಂ ಹ್ಯುದೀಚೀಂ ಕೌರವ್ಯೋ ಹಿಮವಚ್ಚಿಖರಂ ಪ್ರತಿ।
03039012a ಐಂದ್ರಿಃ ಸ್ಥಿರಮನಾ ರಾಜನ್ಸರ್ವಲೋಕಮಹಾರಥಃ।।
ರಾಜನ್! ಆ ಪುರುಷರ್ಷಭ, ಮಹಾಬಾಹು, ಮಹಾಬಲ, ಇಂದ್ರನ ಮಗ, ಸರ್ವಲೋಕದಲ್ಲಿಯೇ ಮಹಾರಥಿ ಅರ್ಜುನನು ಕಾರ್ಯಸಿದ್ಧಿಯಾಗಲೆಂದು ದಿವ್ಯ ಧನುಸ್ಸು ಮತ್ತು ಖಡ್ಗವನ್ನು ಹಿಡಿದು ಉತ್ತರದಿಕ್ಕಿನಲ್ಲಿ ಹಿಮಾಲಯ ಪರ್ವತದ ಕಡೆ ಹೊರಟನು.
03039012c ತ್ವರಯಾ ಪರಯಾ ಯುಕ್ತಸ್ತಪಸೇ ಧೃತನಿಶ್ಚಯಃ।
03039012e ವನಂ ಕಂಟಕಿತಂ ಘೋರಮೇಕ ಏವಾನ್ವಪದ್ಯತ।।
03039013a ನಾನಾಪುಷ್ಪಫಲೋಪೇತಂ ನಾನಾಪಕ್ಷಿನಿಷೇವಿತಂ।
03039013c ನಾನಾಮೃಗಗಣಾಕೀರ್ಣಂ ಸಿದ್ಧಚಾರಣಸೇವಿತಂ।।
ಅತ್ಯಂತ ವೇಗವಾಗಿ, ತಪ್ಪಸ್ಸಿನಲ್ಲಿಯೇ ಮನಸ್ಸನ್ನಿಟ್ಟು, ಧೃತನಿಶ್ಚಯನಾಗಿ ಅವನು ಒಂದು ಘೋರ, ಮುಳ್ಳುಗಳಿಂದ ಕೂಡಿದ, ನಾನಾ ಪುಷ್ಪಫಲಗಳಿಂದ ಕೂಡಿದ, ನಾನಾ ಪಕ್ಷಿಗಳಿಂದ ಕೂಡಿದ, ನಾನಾ ಮೃಗಗಣಗಳಿಂದ ಕೂಡಿದ, ಸಿದ್ಧಚಾರಣರಿಂದ ಸೇವಿಸಲ್ಪಟ್ಟ ವನವನ್ನು ಪ್ರವೇಶಿಸಿದನು.
03039014a ತತಃ ಪ್ರಯಾತೇ ಕೌಂತೇಯೇ ವನಂ ಮಾನುಷವರ್ಜಿತಂ।
03039014c ಶಂಖಾನಾಂ ಪಟಹಾನಾಂ ಚ ಶಬ್ಧಃ ಸಮಭವದ್ದಿವಿ।।
ಮಾನುಷರಿಗೆ ವರ್ಜಿತವಾದ ಆ ವನವನ್ನು ಕೌಂತೇಯನು ಪ್ರವೇಶಿಸುತ್ತಿದ್ದಂತೆಯೇ ಸ್ವರ್ಗದಲ್ಲಿ ಶಂಖ ಮತ್ತು ಪಟ್ಟಹಗಳ ಶಬ್ಧವು ಕೇಳಿಬಂದಿತು.
03039015a ಪುಷ್ಪವರ್ಷಂ ಚ ಸುಮಹನ್ನಿಪಪಾತ ಮಹೀತಲೇ।
03039015c ಮೇಘಜಾಲಂ ಚ ವಿತತಂ ಚಾದಯಾಮಾಸ ಸರ್ವತಃ।।
03039016a ಅತೀತ್ಯ ವನದುರ್ಗಾಣಿ ಸಂನ್ನಿಕರ್ಷೇ ಮಹಾಗಿರೇಃ।
03039016c ಶುಶುಭೇ ಹಿಮವತ್ಪೃಷ್ಠೇ ವಸಮಾನೋಽರ್ಜುನಸ್ತದಾ।।
ಭೂಮಿಯ ಮೇಲೆ ಜೋರಾಗಿ ಪುಷ್ಪವೃಷ್ಟಿಯಾಯಿತು ಮತ್ತು ಅವನನ್ನು ಎಲ್ಲ ಕಡೆಯಿಂದಲೂ ದಪ್ಪ ಮೋಡಗಳ ಜಾಲವು ಮುಚ್ಚಿಕೊಂಡಿತು. ಆ ಮಹಾಗಿರಿಯ ತಪ್ಪಲಿನಲ್ಲಿ ವನದುರ್ಗಗಳನ್ನು ದಾಟಿ ಶುಭ ಅರ್ಜುನನು ಹಿಮವತ್ಪರ್ವತದ ಶಿಖರದ ಮೇಲೆ ವಾಸಿಸತೊಡಗಿದನು.
03039017a ತತ್ರಾಪಶ್ಯದ್ದ್ರುಮಾನ್ಫುಲ್ಲಾನ್ವಿಹಗೈರ್ವಲ್ಗು ನಾದಿತಾನ್।
03039017c ನದೀಶ್ಚ ಬಹುಲಾವರ್ತಾ ನೀಲವೈಡೂರ್ಯಸನ್ನಿಭಾಃ।।
03039018a ಹಂಸಕಾರಂಡವೋದ್ಗೀತಾಃ ಸಾರಸಾಭಿರುತಾಸ್ತಥಾ।
03039018c ಪುಂಸ್ಕೋಕಿಲರುತಾಶ್ಚೈವ ಕ್ರೌಂಚಬರ್ಹಿಣನಾದಿತಾಃ।।
ಅವನು ಅಲ್ಲಿ ಹಕ್ಕಿಗಳ ಮಧುರ ಚಿಲಿಪಿಲಿಯಿಂದೊಡಗೂಡಿದ್ದ ಚಿಗುರೊಡೆಯುತ್ತಿರುವ ಮರಗಳನ್ನು ನೋಡಿದನು. ಮತ್ತು ಬಹು ಸುಳಿಗಳನ್ನು ಹೊಂದಿದ್ದ, ನೀಲ ವೈಢೂರ್ಯವರ್ಣದ, ಹಂಸಬಾತುಕೋಳಿಗಳ ನಾದದಿಂದ ಕೂಡಿದ, ಸಾರಸಪಕ್ಷಿಗಳ ಕೂಗಿನಿಂದ ಪ್ರತಿಧ್ವನಿಸುತ್ತಿದ್ದ, ಕೋಗಿಲೆಗಳ ಕೂಗು, ಮತ್ತು ನವಿಲುಗಳ ದೊಡ್ಡ ಕೂಗುಗಳಿಂದ ಕೂಡಿದ್ದ ನದಿಗಳನ್ನು ನೋಡಿದನು.
03039019a ಮನೋಹರವನೋಪೇತಾಸ್ತಸ್ಮಿನ್ನತಿರಥೋಽರ್ಜುನಃ।
03039019c ಪುಣ್ಯಶೀತಾಮಲಜಲಾಃ ಪಶ್ಯನ್ಪ್ರೀತಮನಾಭವತ್।।
ಆ ಮನೋಹರ ವನವನ್ನು ಮತ್ತು ಅದರಲ್ಲಿರುವ ಪುಣ್ಯ ಶೀತ ಶುದ್ಧ ನದಿಗಳನ್ನು ನೋಡಿ ಅತಿರಥ ಅರ್ಜುನನು ಸಂತೋಷಗೊಂಡನು.
03039020a ರಮಣೀಯೇ ವನೋದ್ದೇಶೇ ರಮಮಾಣೋಽರ್ಜುನಸ್ತದಾ।
03039020c ತಪಸ್ಯುಗ್ರೇ ವರ್ತಮಾನ ಉಗ್ರತೇಜಾ ಮಹಾಮನಾಃ।।
ರಮಣೀಯ ವನಪ್ರದೇಶದಲ್ಲಿ ಸಂತೋಷಪಡುತ್ತಾ ಆ ಉಗ್ರತೇಜಸ್ವಿ ಮಹಾತ್ಮ ಅರ್ಜುನನು ಉಗ್ರ ತಪಸ್ಸಿನಲ್ಲಿ ತೊಡಗಿದನು.
03039021a ದರ್ಭಚೀರಂ ನಿವಸ್ಯಾಥ ದಂಡಾಜಿನವಿಭೂಷಿತಃ।
03039021c ಪೂರ್ಣೇ ಪೂರ್ಣೇ ತ್ರಿರಾತ್ರೇ ತು ಮಾಸಮೇಕಂ ಫಲಾಶನಃ।
03039021e ದ್ವಿಗುಣೇನೈವ ಕಾಲೇನ ದ್ವಿತೀಯಂ ಮಾಸಮತ್ಯಗಾತ್।।
03039022a ತೃತೀಯಮಪಿ ಮಾಸಂ ಸ ಪಕ್ಷೇಣಾಹಾರಮಾಚರನ್।
03039022c ಶೀರ್ಣಂ ಚ ಪತಿತಂ ಭೂಮೌ ಪರ್ಣಂ ಸಮುಪಯುಕ್ತವಾನ್।।
ದರ್ಭೆಯ ಚಾಪೆಯಮೇಲೆ ದಂಡ ಮತ್ತು ಜಿನಧಾರಿಯಾಗಿ ನಾಲ್ಕು ರಾತ್ರಿಗಳಿಗೊಮ್ಮೆ ಹಣ್ಣುಗಳನ್ನು ತಿನ್ನುತ್ತಾ ಒಂದು ತಿಂಗಳನ್ನು ಕಳೆದನು. ಎರಡನೇ ತಿಂಗಳಿನಲ್ಲಿ ಅವನು ಎಂಟು ರಾತ್ರಿಗಳಿಗೊಮ್ಮೆ ಆಹಾರ ಸೇವಿಸುತ್ತಿದ್ದನು. ಮೂರನೆಯ ತಿಂಗಳನ್ನು ಹದಿನೈದು ದಿನಗಳಿಗೊಮ್ಮೆ ಭೂಮಿಯ ಮೇಲೆ ಒಣಗಿ ಸತ್ತು ಬಿದ್ದಿರುವ ತರಗೆಲೆಗಳನ್ನು ತಿನ್ನುತ್ತಾ ಕಳೆದನು.
03039023a ಚತುರ್ಥೇ ತ್ವಥ ಸಂಪ್ರಾಪ್ತೇ ಮಾಸಿ ಪೂರ್ಣೇ ತತಃ ಪರಂ।
03039023c ವಾಯುಭಕ್ಷೋ ಮಹಾಬಾಹುರಭವತ್ಪಾಂಡುನಂದನಃ।
03039023e ಊರ್ಧ್ವಬಾಹುರ್ನಿರಾಲಂಬಃ ಪಾದಾಂಗುಷ್ಠಾಗ್ರವಿಷ್ಠಿತಃ।।
ನಾಲ್ಕನೆಯ ತಿಂಗಳಿನ ಹುಣ್ಣಿಮೆಯು ಬಂದಾಗ ಮಹಾಬಾಹು ಪಾಂಡುನಂದನನು ಎರಡೂ ಕೈಗಳನ್ನು ಮೇಲೆತ್ತಿ, ಯಾವ ಬೆಂಬಲವೂ ಇಲ್ಲದೆ ಕೇವಲ ಕಾಲಿನ ಅಂಗುಷ್ಟದ ಮೇಲೆ ನಿಂದು ಕೇವಲ ಗಾಳಿಯನ್ನು ಸೇವಿಸುತ್ತಾ ತಪಸ್ಸು ಮಾಡಿದನು.
03039024a ಸದೋಪಸ್ಪರ್ಶನಾಚ್ಚಾಸ್ಯ ಬಭೂವುರಮಿತೌಜಸಃ।
03039024c ವಿದ್ಯುದಂಭೋರುಹನಿಭಾ ಜಟಾಸ್ತಸ್ಯ ಮಹಾತ್ಮನಃ।।
03039025a ತತೋ ಮಹರ್ಷಯಃ ಸರ್ವೇ ಜಗ್ಮುರ್ದೇವಂ ಪಿನಾಕಿನಂ।
03039025c ಶಿತಿಕಂಠಂ ಮಹಾಭಾಗಂ ಪ್ರಣಿಪತ್ಯ ಪ್ರಸಾದ್ಯ ಚ।
03039025e ಸರ್ವೇ ನಿವೇದಯಾಮಾಸುಃ ಕರ್ಮ ತತ್ಫಲ್ಗುನಸ್ಯ ಹ।।
ಆಗ ಎಲ್ಲ ಮಹರ್ಷಿಗಳು ದೇವ ಪಿನಾಕಿಯಲ್ಲಿಗೆ ಹೋದರು ಮತ್ತು ಆ ಶಿತಿಕಂಠ ಮಹಾಭಾಗನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅವನ ದಯೆಯನ್ನು ಕೋರಿದರು. ಫಲ್ಗುನನ ಕೆಲಸದ ಕುರಿತು ಅವರೆಲ್ಲರೂ ನಿವೇದಿಸಿದರು.
03039026a ಏಷ ಪಾರ್ಥೋ ಮಹಾತೇಜಾ ಹಿಮವತ್ಪೃಷ್ಠಮಾಶ್ರಿತಃ।
03039026c ಉಗ್ರೇ ತಪಸಿ ದುಷ್ಪಾರೇ ಸ್ಥಿತೋ ಧೂಮಾಯಯನ್ದಿಶಃ।।
“ಈ ಮಹಾತೇಜಸ್ವಿ ಪಾರ್ಥನು ಹಿಮವತ್ಪರ್ವತದ ತುದಿಯಲ್ಲಿ ನಿಂತು ಉಗ್ರ ದುಷ್ಕರ ತಪಸ್ಸನ್ನು ಮಾಡುತ್ತಾ ಎಲ್ಲ ದಿಕ್ಕುಗಳನ್ನೂ ಹೊಗೆಯಿಂದ ತುಂಬಿಸಿದ್ದಾನೆ.
03039027a ತಸ್ಯ ದೇವೇಶ ನ ವಯಂ ವಿದ್ಮಃ ಸರ್ವೇ ಚಿಕೀರ್ಷಿತಂ।
03039027c ಸಂತಾಪಯತಿ ನಃ ಸರ್ವಾನಸೌ ಸಾಧು ನಿವಾರ್ಯತಾಂ।।
ದೇವೇಶ! ನಮ್ಮಲ್ಲಿ ಯಾರಿಗೂ ಅವನು ಏನನ್ನು ಬಯಸುತ್ತಿದ್ದಾನೆನ್ನುವುದು ತಿಳಿಯುತ್ತಿಲ್ಲ. ಎಲ್ಲರನ್ನೂ ಸಂತಾಪಿಸುತ್ತಿದ್ದಾನೆ. ಅವನನ್ನು ತಡೆಗಟ್ಟುವುದು ಒಳ್ಳೆಯದು.”
03039028 ಮಹೇಶ್ವರ ಉವಾಚ।
03039028a ಶೀಘ್ರಂ ಗಚ್ಚತ ಸಂಹೃಷ್ಟಾ ಯಥಾಗತಮತಂದ್ರಿತಾಃ।
03039028c ಅಹಮಸ್ಯ ವಿಜಾನಾಮಿ ಸಂಕಲ್ಪಂ ಮನಸಿ ಸ್ಥಿತಂ।।
ಮಹೇಶ್ವರನು ಹೇಳಿದನು: “ಸಂಹೃಷ್ಟರಾಗಿ ಏನೂ ಚಿಂತೆಮಾಡದೇ ನೀವು ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ತೆರಳಿ. ಅವನ ಮನಸ್ಸಿನಲ್ಲಿರುವ ಸಂಕಲ್ಪವನ್ನು ನಾನು ತಿಳಿದಿದ್ದೇನೆ.
03039029a ನಾಸ್ಯ ಸ್ವರ್ಗಸ್ಪೃಹಾ ಕಾ ಚಿನ್ನೈಶ್ವರ್ಯಸ್ಯ ನ ಚಾಯುಷಃ।
03039029c ಯತ್ತ್ವಸ್ಯ ಕಾಂಕ್ಷಿತಂ ಸರ್ವಂ ತತ್ಕರಿಷ್ಯೇಽಹಮದ್ಯ ವೈ।।
ಅವನು ಸ್ವರ್ಗವನ್ನೂ ಬಯಸುತ್ತಿಲ್ಲ. ಈಶ್ವರತ್ವವನ್ನೂ ಬಯಸುತ್ತಿಲ್ಲ. ಅಮರತ್ವವನ್ನೂ ಬಯಸುತ್ತಿಲ್ಲ. ಇಂದೇ ನಾನು ಅವನ ಮನಸ್ಸಿನ ಬಯಕೆಯನ್ನು ಈಡೇರಿಸಿಕೊಡುತ್ತೇನೆ.””
03039030 ವೈಶಂಪಾಯನ ಉವಾಚ।
03039030a ತೇ ಶ್ರುತ್ವ ಶರ್ವವಚನಮೃಷಯಃ ಸತ್ಯವಾದಿನಃ।
03039030c ಪ್ರಹೃಷ್ಟಮನಸೋ ಜಗ್ಮುರ್ಯಥಾಸ್ವಂ ಪುನರಾಶ್ರಮಾನ್।।
ವೈಶಂಪಾಯನನು ಹೇಳಿದನು: “ಶರ್ವನ ಆ ವಚನವನ್ನು ಕೇಳಿದ ಸತ್ಯವಾದಿ ಋಷಿಗಳು ಸಂತೋಷಗೊಂಡು ಪುನಃ ತಮ್ಮ ತಮ್ಮ ಆಶ್ರಮಗಳಿಗೆ ಹಿಂದಿರುಗಿದರು.”
ಸಮಾಪ್ತಿ
ೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಮುನಿಶಂಕರಸಂವಾದೇ ಏಕೋನಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಮುನಿಶಂಕರಸಂವಾದದಲ್ಲಿ ಮೂವತ್ತೊಂಭತ್ತನೆಯ ಅಧ್ಯಾಯವು.