ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕೈರಾತ ಪರ್ವ
ಅಧ್ಯಾಯ 38
ಸಾರ
ಯುಧಿಷ್ಠಿರನು ಅರ್ಜುನನಿಗೆ ಮಂತ್ರವಿಧಿಯನ್ನು ಉಪದೇಶಿಸಿ, ದಿವ್ಯಾಸ್ತ್ರಗಳನ್ನು ಪಡೆದು ಬಾ ಎಂದು ಕಳುಹಿಸುವುದು (1-14). ಅರ್ಜುನನ ಪ್ರಯಾಣ (15-30). ಬ್ರಾಹ್ಮಣವೇಷದಲ್ಲಿ ಬಂದ ಇಂದ್ರನು ಅರ್ಜುನನಿಗೆ ಹರನ ಕುರಿತು ತಪಸ್ಸನ್ನಾಚರಿಸಲು ಹೇಳಿದುದು (31-45).
03038001 ವೈಶಂಪಾಯನ ಉವಾಚ।
03038001a ಕಸ್ಯ ಚಿತ್ತ್ವಥ ಕಾಲಸ್ಯ ಧರ್ಮರಾಜೋ ಯುಧಿಷ್ಠಿರಃ।
03038001c ಸಂಸ್ಮೃತ್ಯ ಮುನಿಸಂದೇಶಮಿದಂ ವಚನಮಬ್ರವೀತ್।।
03038002a ವಿವಿಕ್ತೇ ವಿದಿತಪ್ರಜ್ಞಮರ್ಜುನಂ ಭರತರ್ಷಭಂ।
03038002c ಸಾಂತ್ವಪೂರ್ವಂ ಸ್ಮಿತಂ ಕೃತ್ವಾ ಪಾಣಿನಾ ಪರಿಸಂಸ್ಪೃಶನ್।।
ವೈಶಂಪಾಯನನು ಹೇಳಿದನು: “ಸ್ವಲ್ಪ ಸಮಯದ ನಂತರ ಧರ್ಮರಾಜ ಯುಧಿಷ್ಠಿರನು ಮುನಿಯ ಸಂದೇಶವನ್ನು ಸ್ಮರಿಸಿಕೊಂಡು ಏಕಾಂತದಲ್ಲಿ ವಿದಿತಪ್ರಜ್ಞ ಭರತರ್ಷಭ ಅರ್ಜುನನಿಗೆ ಮುಗುಳ್ನಗುತ್ತಾ, ಕೈಯಿಂದ ಅವನ ಮೈ ಸವರುತ್ತಾ ಸಾಂತ್ವಪೂರ್ವಕ ಈ ಮಾತುಗಳನ್ನಾಡಿದನು.
03038003a ಸ ಮುಹೂರ್ತಮಿವ ಧ್ಯಾತ್ವಾ ವನವಾಸಮರಿಂದಮಃ।
03038003c ಧನಂಜಯಂ ಧರ್ಮರಾಜೋ ರಹಸೀದಮುವಾಚ ಹ।।
ವನವಾಸದ ಕುರಿತು ಸ್ವಲ್ಪ ಯೋಚಿಸಿ ಆ ಅರಿಂದಮ ಧರ್ಮರಾಜನು ಧನಂಜಯನಿಗೆ ರಹಸ್ಯದಲ್ಲಿ ಹೇಳಿದನು:
03038004a ಭೀಷ್ಮೇ ದ್ರೋಣೇ ಕೃಪೇ ಕರ್ಣೇ ದ್ರೋಣಪುತ್ರೇ ಚ ಭಾರತ।
03038004c ಧನುರ್ವೇದಶ್ಚತುಷ್ಪಾದ ಏತೇಷ್ವದ್ಯ ಪ್ರತಿಷ್ಠಿತಃ।।
“ಭಾರತ! ನಾಲ್ಕೂ ಧನುರ್ವೇದ ಮತ್ತು ಅದರ ನಾಲ್ಕು ಪಾದಗಳು ಈಗ ಭೀಷ್ಮ, ದ್ರೋಣ, ಕೃಪ, ಕರ್ಣ ಮತ್ತು ದ್ರೋಣಪುತ್ರ ಇವರಲ್ಲಿ ಮಾತ್ರ ಇವೆ.
03038005a ಬ್ರಾಹ್ಮಂ ದೈವಮಾಸುರಂ ಚ ಸಪ್ರಯೋಗಚಿಕಿತ್ಸಿತಂ।
03038005c ಸರ್ವಾಸ್ತ್ರಾಣಾಂ ಪ್ರಯೋಗಂ ಚ ತೇಽಭಿಜಾನಂತಿ ಕೃತ್ಸ್ನಶಃ।।
ಬ್ರಾಹ್ಮ, ದೇವ ಮತ್ತು ಅಸುರ ಎಲ್ಲ ಅಸ್ತ್ರಗಳ ಸರಿಯಾದ ಪ್ರಯೋಗ ಮತ್ತು ಉಪಶಮನಗಳನ್ನು ಸಂಪೂರ್ಣವಾಗಿ ಇವರು ತಿಳಿದಿದ್ದಾರೆ.
03038006a ತೇ ಸರ್ವೇ ಧೃತರಾಷ್ಟ್ರಸ್ಯ ಪುತ್ರೇಣ ಪರಿಸಾಂತ್ವಿತಾಃ।
03038006c ಸಂವಿಭಕ್ತಾಶ್ಚ ತುಷ್ಟಾಶ್ಚ ಗುರುವತ್ತೇಷು ವರ್ತತೇ।।
ಧೃತರಾಷ್ಟ್ರನ ಮಗನು ಇವರೆಲ್ಲರ ಹತ್ತಿರವಿದ್ದು ಉಡುಗೊರೆಗಳನ್ನಿತ್ತು ತೃಪ್ತಿಪಡಿಸುತ್ತಾ ಗುರುಗಳಂತೆ ನಡೆದುಕೊಳ್ಳುತ್ತಿದ್ದಾನೆ.
03038007a ಸರ್ವಯೋಧೇಷು ಚೈವಾಸ್ಯ ಸದಾ ವೃತ್ತಿರನುತ್ತಮಾ।
03038007c ಶಕ್ತಿಂ ನ ಹಾಪಯಿಷ್ಯಂತಿ ತೇ ಕಾಲೇ ಪ್ರತಿಪೂಜಿತಾಃ।।
ಅವನು ಈ ಎಲ್ಲ ಯೋದ್ಧರೊಂದಿಗೆ ಒಳ್ಳೆಯದಾಗಿಯೇ ನಡೆದುಕೊಳ್ಳುತ್ತಿದ್ದಾನೆ. ಪ್ರತಿಪೂಜಿತರಾದ ಅವರು ಸಮಯಬಂದಾಗ ತಮ್ಮ ಶಕ್ತಿಯನ್ನು ಅವನಿಗೆ ಕೊಡದೇ ಇರುವುದಿಲ್ಲ.
03038008a ಅದ್ಯ ಚೇಯಂ ಮಹೀ ಕೃತ್ಸ್ನಾ ದುರ್ಯೋಧನವಶಾನುಗಾ।
03038008c ತ್ವಯಿ ವ್ಯಪಾಶ್ರಯೋಽಸ್ಮಾಕಂ ತ್ವಯಿ ಭಾರಃ ಸಮಾಹಿತಃ।।
03038008e ತತ್ರ ಕೃತ್ಯಂ ಪ್ರಪಶ್ಯಾಮಿ ಪ್ರಾಪ್ತಕಾಲಮರಿಂದಮ।
ಈಗ ಇಡೀ ಭೂಮಿಯೇ ದುರ್ಯೋಧನನ ವಶದಲ್ಲಿದೆ. ನಮಗೆ ನೀನೇ ಆಶ್ರಯ ಮತ್ತು ಭಾರವೆಲ್ಲವೂ ನಿನ್ನ ಮೇಲೆಯೇ ಇದೆ. ಅರಿಂದಮ! ಇಂಥಹ ಸನ್ನಿವೇಶದಲ್ಲಿ ನೀನು ಮಾಡಬೇಕಾದ ಕಾರ್ಯದ ಸಮಯವು ಬಂದೊದಗಿದೆಯೆಂದು ನನಗನ್ನಿಸುತ್ತದೆ.
03038009a ಕೃಷ್ಣದ್ವೈಪಾಯನಾತ್ತಾತ ಗೃಹೀತೋಪನಿಷನ್ಮಯಾ।।
03038009c ತಯಾ ಪ್ರಯುಕ್ತಯಾ ಸಮ್ಯಗ್ಜಗತ್ಸರ್ವಂ ಪ್ರಕಾಶತೇ।
ಮಗೂ! ಕೃಷ್ಣದ್ವೈಪಾಯನನಿಂದ ನಾನು ಈ ವಿದ್ಯೆಯನ್ನು ಪಡೆದುಕೊಂಡೆನು. ಇದನ್ನು ನೀನು ಬಳಸಿದರೆ ಸರ್ವ ಜಗತ್ತೂ ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ1.
03038009e ತೇನ ತ್ವಂ ಬ್ರಹ್ಮಣಾ ತಾತ ಸಂಯುಕ್ತಃ ಸುಸಮಾಹಿತಃ।।
03038010a ದೇವತಾನಾಂ ಯಥಾಕಾಲಂ ಪ್ರಸಾದಂ ಪ್ರತಿಪಾಲಯ।
ಮಗೂ! ಈ ಬ್ರಹ್ಮಜ್ಞಾನವನ್ನು ಪಡೆದು ನೀನು ಯಥಾಕಾಲದಲ್ಲಿ ದೇವತೆಗಳ ಅನುಗ್ರಹಕ್ಕೆ ಪಾತ್ರನಾಗುವೆ.
03038010c ತಪಸಾ ಯೋಜಯಾತ್ಮಾನಮುಗ್ರೇಣ ಭರತರ್ಷಭ।।
03038011a ಧನುಷ್ಮಾನ್ಕವಚೀ ಖಡ್ಗೀ ಮುನಿಃ ಸಾರಸಮನ್ವಿತಃ।
03038011c ನ ಕಸ್ಯ ಚಿದ್ದದನ್ಮಾರ್ಗಂ ಗಚ್ಚ ತಾತೋತ್ತರಾಂ ದಿಶಂ।
ಭರತರ್ಷಭ! ಸಾರಸಮನ್ವಿತ ಮುನಿಯಂತೆ ಧನುಸ್ಸು, ಕವಚ ಮತ್ತು ಖಡ್ಗಗಳನ್ನು ಧರಿಸಿ ನಿನ್ನನ್ನು ಉಗ್ರ ತಪಸ್ಸಿನಲ್ಲಿ ತೊಡಗಿಸಿಕೋ. ನಂತರ ಯಾರೂ ನಿನ್ನನ್ನು ದಾಟದ ರೀತಿಯಲ್ಲಿ ಉತ್ತರ ದಿಕ್ಕಿನ ಮಾರ್ಗದಲ್ಲಿ ಹೋಗು.
03038011e ಇಂದ್ರೇ ಹ್ಯಸ್ತ್ರಾಣಿ ದಿವ್ಯಾನಿ ಸಮಸ್ತಾನಿ ಧನಂಜಯ।।
03038012a ವೃತ್ರಾದ್ಭೀತೈಸ್ತದಾ ದೇವೈರ್ಬಲಂ ಇಂದ್ರೇ ಸಮರ್ಪಿತಂ।
03038012c ತಾನ್ಯೇಕಸ್ಥಾನಿ ಸರ್ವಾಣಿ ತತಸ್ತ್ವಂ ಪ್ರತಿಪತ್ಸ್ಯಸೇ।।
ಧನಂಜಯ! ಇಂದ್ರನಲ್ಲಿ ಸಮಸ್ತ ದಿವ್ಯಾಸ್ತ್ರಗಳೂ ಇವೆ. ವೃತ್ರನ ಭಯದಿಂದಾಗಿ ಹಿಂದೆ ದೇವತೆಗಳು ತಮ್ಮ ಶಕ್ತಿಗಳನ್ನು ಇಂದ್ರನಿಗೆ ಸಮರ್ಪಿಸಿದ್ದರು. ಒಂದೆಡೆಯಲ್ಲಿ ಅವೆಲ್ಲರೂ ಇರುವುದನ್ನು ನೀನು ನೋಡುವೆ.
03038013a ಶಕ್ರಮೇವ ಪ್ರಪದ್ಯಸ್ವ ಸ ತೇಽಸ್ತ್ರಾಣಿ ಪ್ರದಾಸ್ಯತಿ।
03038013c ದೀಕ್ಷಿತೋಽದ್ಯೈವ ಗಚ್ಚ ತ್ವಂ ದ್ರಷ್ಟುಂ ದೇವಂ ಪುರಂದರಂ।।
ಶಕ್ರನನ್ನೇ ಮೊರೆಹೋಗು. ಅವನೇ ನಿನಗೆ ಅಸ್ತ್ರಗಳನ್ನು ಕೊಡುತ್ತಾನೆ. ಇಂದೇ ದೀಕ್ಷೆಯನ್ನು ಪಡೆದು ದೇವ ಪುರಂದರನನ್ನು ಕಾಣಲು ಹೋಗು.”
03038014a ಏವಮುಕ್ತ್ವಾ ಧರ್ಮರಾಜಸ್ತಮಧ್ಯಾಪಯತ ಪ್ರಭುಃ।
03038014c ದೀಕ್ಷಿತಂ ವಿಧಿನಾ ತೇನ ಯತವಾಕ್ಕಾಯಮಾನಸಂ।
03038014e ಅನುಜಜ್ಞೇ ತತೋ ವೀರಂ ಭ್ರಾತಾ ಭ್ರಾತರಮಗ್ರಜಃ।।
ಹೀಗೆ ಹೇಳಿ ಪ್ರಭುವು ಅವನು ಮಾತು, ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿ ನಿಗ್ರಹಿಸಲು ವಿಧಿವತ್ತಾಗಿ ಮಂತ್ರಗಳನ್ನು ಉಪದೇಶಿಸಿ ದೀಕ್ಷೆಯನ್ನಿತ್ತನು. ಅನಂತರ ಆ ಹಿರಿಯಣ್ಣನು ವೀರ ತಮ್ಮನಿಗೆ ಅನುಜ್ಞೆಯನ್ನಿತ್ತನು2.
03038015a ನಿದೇಶಾದ್ಧರ್ಮರಾಜಸ್ಯ ದ್ರಷ್ಟುಂ ದೇವಂ ಪುರಂದರಂ।
03038015c ಧನುರ್ಗಾಂಡೀವಮಾದಾಯ ತಥಾಕ್ಷಯ್ಯೌ ಮಹೇಷುಧೀ।।
03038016a ಕವಚೀ ಸತಲತ್ರಾಣೋ ಬದ್ಧಗೋಧಾಂಗುಲಿತ್ರವಾನ್।
03038016c ಹುತ್ವಾಗ್ನಿಂ ಬ್ರಾಹ್ಮಣಾನ್ನಿಷ್ಕೈಃ ಸ್ವಸ್ತಿ ವಾಚ್ಯ ಮಹಾಭುಜಃ।।
03038017a ಪ್ರಾತಿಷ್ಠತ ಮಹಾಬಾಹುಃ ಪ್ರಗೃಹೀತಶರಾಸನಃ।
03038017c ವಧಾಯ ಧಾರ್ತರಾಷ್ಟ್ರಾಣಾಂ ನಿಃಶ್ವಸ್ಯೋರ್ಧ್ವಮುದೀಕ್ಷ್ಯ ಚ।।
ಧರ್ಮರಾಜನ ನಿರ್ದೇಶನದಂತೆ ದೇವ ಪುರಂದರನನ್ನು ಕಾಣಲು ಗಾಂಡೀವ ಧನುಸ್ಸು ಮತ್ತು ಅಕ್ಷಯ ಭತ್ತಳಿಕೆಗಳೆರಡನ್ನೂ ತೆಗೆದುಕೊಂಡು, ಕವಚ. ಕೈ ಮತ್ತು ಅಂಗುಲರಕ್ಷೆಗಳನ್ನು ಧರಿಸಿ, ಬ್ರಾಹ್ಮಣರು ಚಿನ್ನದ ನಾಣ್ಯಗಳೊಂದಿಗೆ ಸ್ವಸ್ತಿವಾಚನ ಮಾಡುತ್ತಿರಲು ಅಗ್ನಿಯಲ್ಲಿ ಆಹುತಿಗಳನ್ನಿತ್ತು, ಧನುಸ್ಸನ್ನು ಹಿಡಿದು ಮೇಲೆ ನೋಡಿ ನಿಟ್ಟುಸಿರು ಬಿಡುತ್ತಾ, ಧಾರ್ತರಾಷ್ಟ್ರರ ವಧೆಗಾಗಿ ಆ ಮಹಾಭುಜ ಮಹಾಬಾಹುವು ಹೊರಟನು.
03038018a ತಂ ದೃಷ್ಟ್ವಾ ತತ್ರ ಕೌಂತೇಯಂ ಪ್ರಗೃಹೀತಶರಾಸನಂ।
03038018c ಅಬ್ರುವನ್ಬ್ರಾಹ್ಮಣಾಃ ಸಿದ್ಧಾ ಭೂತಾನ್ಯಂತರ್ಹಿತಾನಿ ಚ।
03038018e ಕ್ಷಿಪ್ರಂ ಪ್ರಾಪ್ನುಹಿ ಕೌಂತೇಯ ಮನಸಾ ಯದ್ಯದಿಚ್ಚಸಿ।।
ಧನುಸ್ಸನ್ನು ಹಿಡಿದಿದ್ದ ಕೌಂತೇಯನನ್ನು ನೋಡಿ ಅಲ್ಲಿದ್ದ ಬ್ರಾಹ್ಮಣರು, ಸಿದ್ಧರು ಮತ್ತು ಅದೃಶ್ಯ ಭೂತಗಣಗಳು “ಕೌಂತೇಯ! ನಿನ್ನ ಮನಸ್ಸಿನಲ್ಲಿ ಏನನ್ನು ಬಯಸಿದ್ದೀಯೋ ಅದನ್ನು ಶೀಘ್ರದಲ್ಲಿಯೇ ಪಡೆಯುತ್ತೀಯೆ!” ಎಂದರು.
03038019a ತಂ ಸಿಂಹಮಿವ ಗಚ್ಚಂತಂ ಶಾಲಸ್ಕಂಧೋರುಮರ್ಜುನಂ।
03038019c ಮನಾಂಸ್ಯಾದಾಯ ಸರ್ವೇಷಾಂ ಕೃಷ್ಣಾ ವಚನಮಬ್ರವೀತ್।।
ಸಿಂಹದಂತೆ ಹೋಗುತ್ತಿರುವ ಆ ಶಾಲವೃಕ್ಷದಂಥ ತೊಡೆಗಳ ಅರ್ಜುನನನ್ನು ಸಂಪೂರ್ಣವಾಗಿ ಮನಸಾರೆ ನೋಡಿ ಕೃಷ್ಣೆಯು ಹೇಳಿದಳು:
03038020a ಯತ್ತೇ ಕುಂತೀ ಮಹಾಬಾಹೋ ಜಾತಸ್ಯೈಚ್ಚದ್ಧನಂಜಯ।
03038020c ತತ್ತೇಽಸ್ತು ಸರ್ವಂ ಕೌಂತೇಯ ಯಥಾ ಚ ಸ್ವಯಮಿಚ್ಚಸಿ।।
“ಮಹಾಬಾಹು ಧನಂಜಯ! ಕೌಂತೇಯ! ನೀನು ಹುಟ್ಟುವಾಗ ಕುಂತಿಯು ನಿನಗೆ ಏನೆಲ್ಲ ಬಯಸಿದ್ದಳೋ ಮತ್ತು ನೀನು ನಿನಗಾಗಿ ಏನನ್ನು ಬಯಸಿದ್ದೀಯೋ ಅದು ನೆರವೇರಲಿ!3
03038021a ಮಾಸ್ಮಾಕಂ ಕ್ಷತ್ರಿಯಕುಲೇ ಜನ್ಮ ಕಶ್ಚಿದವಾಪ್ನುಯಾತ್।
03038021c ಬ್ರಾಹ್ಮಣೇಭ್ಯೋ ನಮೋ ನಿತ್ಯಂ ಯೇಷಾಂ ಯುದ್ಧೇ ನ ಜೀವಿಕಾ।।
ನಾವು ಮುಂದೆ ಎಂದೂ ಕ್ಷತ್ರಿಯ ಕುಲದಲ್ಲಿ ಜನ್ಮತಾಳದೇ ಇರಲಿ. ಯುದ್ಧವನ್ನವಲಂಬಿಸಿ ಜೀವಿಸಬೇಕಾಗದೇ ಇರುವ ಬ್ರಾಹ್ಮಣರಿಗೆ ನನ್ನ ನಮಸ್ಕಾರಗಳು!4
03038022a ನೂನಂ ತೇ ಭ್ರಾತರಃ ಸರ್ವೇ ತ್ವತ್ಕಥಾಭಿಃ ಪ್ರಜಾಗರೇ।
03038022c ರಂಸ್ಯಂತೇ ವೀರಕರ್ಮಾಣಿ ಕೀರ್ತಯಂತಃ ಪುನಃ ಪುನಃ।।
ನಿನ್ನ ಸಹೋದರರೆಲ್ಲರೂ ಅವರ ಎಚ್ಚರದ ಸಮಯದಲ್ಲಿ ನಿನ್ನ ಕುರಿತೇ ಮಾತನಾಡುತ್ತಾ, ಪುನಃ ಪುನಃ ನಿನ್ನ ವೀರಕೃತ್ಯಗಳ ಕುರಿತು ಮಾತನಾಡಿಕೊಳ್ಳುತ್ತಾ ಆನಂದವನ್ನು ಪಡೆಯುವರು.
03038023a ನೈವ ನಃ ಪಾರ್ಥ ಭೋಗೇಷು ನ ಧನೇ ನೋತ ಜೀವಿತೇ।
03038023c ತುಷ್ಟಿರ್ಬುದ್ಧಿರ್ಭವಿತ್ರೀ ವಾ ತ್ವಯಿ ದೀರ್ಘಪ್ರವಾಸಿನಿ।।
ಪಾರ್ಥ! ಆದರೂ ನೀನು ತುಂಬಾ ಸಮಯ ಪ್ರಯಾಣ ಮಾಡಿದರೆ ನಮ್ಮ ಭೋಗ, ಧನ ಮತ್ತು ಜೀವನದಲ್ಲಿಯೇ ತೃಪ್ತಿ ದೊರೆಯುವುದಿಲ್ಲ.
03038024a ತ್ವಯಿ ನಃ ಪಾರ್ಥ ಸರ್ವೇಷಾಂ ಸುಖದುಃಖೇ ಸಮಾಹಿತೇ।
03038024c ಜೀವಿತಂ ಮರಣಂ ಚೈವ ರಾಜ್ಯಮೈಶ್ವರ್ಯಮೇವ ಚ।।
03038024e ಆಪೃಷ್ಟೋ ಮೇಽಸಿ ಕೌಂತೇಯ ಸ್ವಸ್ತಿ ಪ್ರಾಪ್ನುಹಿ ಪಾಂಡವ।
ಪಾರ್ಥ! ನಮ್ಮೆಲ್ಲರ ಸುಖ, ದುಃಖ, ಜೀವ, ಮರಣ, ರಾಜ್ಯ, ಐಶ್ವರ್ಯ ಎಲ್ಲವೂ ನಿನ್ನ ಮೇಲೆ ಅವಲಂಬಿಸಿವೆ. ಕೌಂತೇಯ! ನಿನ್ನನ್ನು ನಾನು ಬೀಳ್ಕುಡುತ್ತಿದ್ದೇನೆ. ಪಾಂಡವ! ನಿನಗೆ ಮಂಗಳವಾಗಲಿ!
03038025a ನಮೋ ಧಾತ್ರೇ ವಿಧಾತ್ರೇ ಚ ಸ್ವಸ್ತಿ ಗಚ್ಚ ಹ್ಯನಾಮಯಂ।।
03038025c ಸ್ವಸ್ತಿ ತೇಽಸ್ತ್ವಾಂತರಿಕ್ಷೇಭ್ಯಃ ಪಾರ್ಥಿವೇಭ್ಯಶ್ಚ ಭಾರತ।
03038025e ದಿವ್ಯೇಭ್ಯಶ್ಚೈವ ಭೂತೇಭ್ಯೋ ಯೇ ಚಾನ್ಯೇ ಪರಿಪಂಥಿನಃ।।
ಧಾತ್ರ-ವಿಧಾತ್ರರಿಗೆ ನಮಸ್ಕಾರಗಳು! ನಿನ್ನ ಮಾರ್ಗವು ಮಂಗಳಕರ ಮತ್ತು ಸುರಕ್ಷವಾಗಿರಲಿ! ಭಾರತ! ಅಂತರಿಕ್ಷ, ಭೂಮಿ ಮತ್ತು ನಿನ್ನ ಮಾರ್ಗದಲ್ಲಿ ಬರುವ ಎಲ್ಲ ದಿವ್ಯ ಭೂತಗಳಿಂದಲೂ ನಿನಗೆ ರಕ್ಷಣೆಯಿರಲಿ!”
03038026a ತತಃ ಪ್ರದಕ್ಷಿಣಂ ಕೃತ್ವಾ ಭ್ರಾತೄನ್ಧೌಮ್ಯಂ ಚ ಪಾಂಡವಃ।
03038026c ಪ್ರಾತಿಷ್ಠತ ಮಹಾಬಾಹುಃ ಪ್ರಗೃಹ್ಯ ರುಚಿರಂ ಧನುಃ।।
ಅನಂತರ ಆ ಮಹಾಬಾಹು ಪಾಂಡವನು ಧೌಮ್ಯ ಮತ್ತು ಅಣ್ಣಂದಿರನ್ನು ಪ್ರದಕ್ಷಿಣೆ ಮಾಡಿ ಸುಂದರ ಧನುಸ್ಸನ್ನು ಹಿಡಿದು ಹೊರಟನು.
03038027a ತಸ್ಯ ಮಾರ್ಗಾದಪಾಕ್ರಾಮನ್ಸರ್ವಭೂತಾನಿ ಗಚ್ಚತಃ।
03038027c ಯುಕ್ತಸ್ಯೈಂದ್ರೇಣ ಯೋಗೇನ ಪರಾಕ್ರಾಂತಸ್ಯ ಶುಷ್ಮಿಣಃ।।
03038028a ಸೋಽಗಚ್ಚತ್ಪರ್ವತಂ ಪುಣ್ಯಮೇಕಾಹ್ನೈವ ಮಹಾಮನಾಃ।
03038028c ಮನೋಜವಗತಿರ್ಭೂತ್ವಾ ಯೋಗಯುಕ್ತೋ ಯಥಾನಿಲಃ।।
ಇಂದ್ರನ ಯೋಗದಿಂದ ಅವನು ನಡೆದ ಮಾರ್ಗದಲ್ಲಿದ್ದ ಎಲ್ಲ ಜೀವಿಗಳೂ - ದೊಡ್ಡ ಮತ್ತು ಸಣ್ಣ ಜೀವಿಗಳೂ - ಅವನಿಗೆ ದಾರಿಬಿಟ್ಟವು5. ಯೋಗಯುಕ್ತನಾಗಿ ವಾಯುವಿನಂತೆ ಮನೋವೇಗವನ್ನು ಪಡೆದಿದ್ದ ಆ ಮಹಾಮನಸ್ಕನು ಒಂದೇ ಹಗಲಿನಲ್ಲಿ ಪುಣ್ಯ ಪರ್ವತ (ಹಿಮವತ್ಪರ್ವತ) ವನ್ನು ತಲುಪಿದನು.
03038029a ಹಿಮವಂತಮತಿಕ್ರಮ್ಯ ಗಂಧಮಾದನಮೇವ ಚ।
03038029c ಅತ್ಯಕ್ರಾಮತ್ಸ ದುರ್ಗಾಣಿ ದಿವಾರಾತ್ರಮತಂದ್ರಿತಃ।।
03038030a ಇಂದ್ರಕೀಲಂ ಸಮಾಸಾದ್ಯ ತತೋಽತಿಷ್ಠದ್ಧನಂಜಯಃ।
03038030c ಅಂತರಿಕ್ಷೇ ಹಿ ಶುಶ್ರಾವ ತಿಷ್ಠೇತಿ ಸ ವಚಸ್ತದಾ।।
ಅವನು ದಿನರಾತ್ರಿ ಆಯಾಸಗೊಳ್ಳದೇ ಹಿಮವಂತ ಮತ್ತು ಗಂಧಮಾದನ ಪರ್ವತಗಳ ಕಣಿವೆಗಳನ್ನು ದಾಟಿದನು. ಇಂದ್ರಕೀಲವನ್ನು ತಲುಪಿದೊಡನೆಯೇ ಅಂತರಿಕ್ಷದಿಂದ ‘ನಿಲ್ಲು!’ ಎನ್ನುವ ಮಾತನ್ನು ಕೇಳಿ ಧನಂಜಯನು ನಿಂತನು.
03038031a ತತೋಽಪಶ್ಯತ್ಸವ್ಯಸಾಚೀ ವೃಕ್ಷಮೂಲೇ ತಪಸ್ವಿನಂ।
03038031c ಬ್ರಾಹ್ಮ್ಯಾ ಶ್ರಿಯಾ ದೀಪ್ಯಮಾನಂ ಪಿಂಗಲಂ ಜಟಿಲಂ ಕೃಶಂ।।
ಆಗ ಆ ಸವ್ಯಸಾಚಿಯು ಮರದ ಬುಡದಲ್ಲಿ ಬ್ರಹ್ಮಜ್ಞಾನ, ಮತ್ತು ಕಳೆಯಿಂದ ಬೆಳಗುತ್ತಿದ್ದ ಹಳದಿ ಬಣ್ಣದ, ಜಟಾಧಾರಿ, ಕೃಶನಾಗಿದ್ದ ತಪಸ್ವಿಯನ್ನು ಕಂಡನು.
03038032a ಸೋಽಬ್ರವೀದರ್ಜುನಂ ತತ್ರ ಸ್ಥಿತಂ ದೃಷ್ಟ್ವಾ ಮಹಾತಪಾಃ।
03038032c ಕಸ್ತ್ವಂ ತಾತೇಹ ಸಂಪ್ರಾಪ್ತೋ ಧನುಷ್ಮಾನ್ಕವಚೀ ಶರೀ।
03038032e ನಿಬದ್ಧಾಸಿತಲತ್ರಾಣಃ ಕ್ಷತ್ರಧರ್ಮಮನುವ್ರತಃ।।
ಆ ಮಹಾತಪಸ್ವಿಯು ಅರ್ಜುನನು ನಿಂತಿದ್ದುದನ್ನು ನೋಡಿ “ಧನುಸ್ಸು, ಕವಚ, ಖಡ್ಗ-ಬಾಣಗಳನ್ನು ಮತ್ತು ಕೈರಕ್ಷೆಗಳನ್ನು ಧರಿಸಿ ಇಲ್ಲಿಗೆ ಬಂದಿರುವ ಕ್ಷತ್ರಿಯಧರ್ಮವನ್ನು ಅನುಸರಿಸುವ ಮಗೂ ನೀನು ಯಾರು?” ಎಂದು ಕೇಳಿದನು.
03038033a ನೇಹ ಶಸ್ತ್ರೇಣ ಕರ್ತವ್ಯಂ ಶಾಂತಾನಾಮಯಮಾಲಯಃ।
03038033c ವಿನೀತಕ್ರೋಧಹರ್ಷಾಣಾಂ ಬ್ರಾಹ್ಮಣಾನಾಂ ತಪಸ್ವಿನಾಂ।।
“ಸಿಟ್ಟು-ಸಂತೋಷಗಳನ್ನು ನಿಯಂತ್ರಿಸಿದ ಬ್ರಾಹ್ಮಣ ತಪಸ್ವಿಯರ ಶಾಂತತೆಯಿಂದ ತುಂಬಿರುವ ಇಲ್ಲಿ ಶಸ್ತ್ರಗಳ ಕೆಲಸವೇನೂ ಇಲ್ಲ!
03038034a ನೇಹಾಸ್ತಿ ಧನುಷಾ ಕಾರ್ಯಂ ನ ಸಂಗ್ರಾಮೇಣ ಕರ್ಹಿ ಚಿತ್।
03038034c ನಿಕ್ಷಿಪೈತದ್ಧನುಸ್ತಾತ ಪ್ರಾಪ್ತೋಽಸಿ ಪರಮಾಂ ಗತಿಂ।।
ಇಲ್ಲಿ ಧನುಸ್ಸಿಗೆ ಯಾವ ಕೆಲಸವೂ ಇಲ್ಲ ಮತ್ತು ಸಂಗ್ರಾಮದ ಅವಶ್ಯಕತೆಯೂ ಇಲ್ಲ. ಮಗೂ! ಧನುಸ್ಸನ್ನು ಇಲ್ಲಿಯೇ ಕೆಳಗೆ ಹಾಕು. ಉತ್ತಮ ಗತಿಯನ್ನು ಹೊಂದುತ್ತೀಯೆ!”
03038035a ಇತ್ಯನಂತೌಜಸಂ ವೀರಂ ಯಥಾ ಚಾನ್ಯಂ ಪೃಥಗ್ಜನಂ।
03038035c ತಥಾ ವಾಚಮಥಾಭೀಕ್ಷ್ಣಂ ಬ್ರಾಹ್ಮಣೋಽರ್ಜುನಮಬ್ರವೀತ್।
03038035e ನ ಚೈನಂ ಚಾಲಯಾಮಾಸ ಧೈರ್ಯಾತ್ಸುದೃಢನಿಶ್ಚಯಂ।।
ಹೀಗೆ ಆ ಬ್ರಾಹ್ಮಣನು ಅನಂತತೇಜಸ್ವಿ ವೀರ ಅರ್ಜುನನು ಬೇರೆ ಯಾರೋ ಇರಬಹುದೆಂಬಂತೆ ಪುನಃ ಪುನಃ ಹೇಳಿದನು. ಆದರೂ ಆ ಸುದೃಢನಿಶ್ಚಯಿಯ ನಿಲುವನ್ನು ಬದಲು ಮಾಡಲಿಕ್ಕಾಗಲಿಲ್ಲ.
03038036a ತಮುವಾಚ ತತಃ ಪ್ರೀತಃ ಸ ದ್ವಿಜಃ ಪ್ರಹಸನ್ನಿವ।
03038036c ವರಂ ವೃಣೀಷ್ವ ಭದ್ರಂ ತೇ ಶಕ್ರೋಽಹಮರಿಸೂದನ।।
ನಂತರ ಸಂತೋಷಗೊಂಡು ಆ ದ್ವಿಜನು ಅವನಿಗೆ ನಗುತ್ತಾ ಹೇಳಿದನು: “ಅರಿಸೂದನ! ನಾನು ಶಕ್ರ! ನಿನಗೆ ಮಂಗಳವಾಗಲಿ! ವರವನ್ನು ಕೇಳಿಕೋ!”
03038037a ಏವಮುಕ್ತಃ ಪ್ರತ್ಯುವಾಚ ಸಹಸ್ರಾಕ್ಷಂ ಧನಂಜಯಃ।
03038037c ಪ್ರಾಂಜಲಿಃ ಪ್ರಣತೋ ಭೂತ್ವಾ ಶೂರಃ ಕುರುಕುಲೋದ್ವಹಃ।।
ಹೀಗೆ ಹೇಳಿದ ಸಹಸ್ರಾಕ್ಷನಿಗೆ ಕುರುಕುಲೋದ್ವಹ ಶೂರ ಧನಂಜಯನು ಕೈಮುಗಿದು ನಮಸ್ಕರಿಸಿ ಉತ್ತರಸಿದನು:
03038038a ಈಪ್ಸಿತೋ ಹ್ಯೇಷ ಮೇ ಕಾಮೋ ವರಂ ಚೈನಂ ಪ್ರಯಚ್ಚ ಮೇ।
03038038c ತ್ವತ್ತೋಽದ್ಯ ಭಗವನ್ನಸ್ತ್ರಂ ಕೃತ್ಸ್ನಮಿಚ್ಚಾಮಿ ವೇದಿತುಂ।।
“ಭಗವನ್! ಇಂದು ನಿನ್ನಲ್ಲಿರುವ ಅಸ್ತ್ರಗಳನ್ನೆಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತೇನೆ. ಇದನ್ನೇ ನಾನು ಬಯಸುವ ಆಸೆ. ಇದೇ ವರವನ್ನು ನನಗೆ ಕರುಣಿಸು.”
03038039a ಪ್ರತ್ಯುವಾಚ ಮಹೇಂದ್ರಸ್ತಂ ಪ್ರೀತಾತ್ಮಾ ಪ್ರಹಸನ್ನಿವ।
03038039c ಇಹ ಪ್ರಾಪ್ತಸ್ಯ ಕಿಂ ಕಾರ್ಯಮಸ್ತ್ರೈಸ್ತವ ಧನಂಜಯ।
03038039e ಕಾಮಾನ್ವೃಣೀಷ್ವ ಲೋಕಾಂಶ್ಚ ಪ್ರಾಪ್ತೋಽಸಿ ಪರಮಾಂ ಗತಿಂ।।
ಅವನಿಗೆ ಮಹೇಂದ್ರನು ಸಂತೋಷದಿಂದ ನಗುತ್ತಾ ಉತ್ತರಿಸಿದನು: “ಧನಂಜಯ! ಅಸ್ತ್ರಗಳನ್ನು ಪಡೆಯುವುದರಿಂದ ನಿನಗೇನು ಸಾಧನೆಯಾದಂತಾಗುತ್ತದೆ? ಕಾಮ ಲೋಕಗಳನ್ನು ಬೇಡು! ಪರಮ ಗತಿಯನ್ನು ಪಡೆಯುತ್ತೀಯೆ!”
03038040a ಏವಮುಕ್ತಃ ಪ್ರತ್ಯುವಾಚ ಸಹಸ್ರಾಕ್ಷಂ ಧನಂಜಯಃ।
03038040c ನ ಲೋಕಾನ್ನ ಪುನಃ ಕಾಮಾನ್ನ ದೇವತ್ವಂ ಕುತಃ ಸುಖಂ।।
ಸಹಸ್ರಾಕ್ಷನು ಹೀಗೆ ಹೇಳಲು ಧನಂಜಯನು ಉತ್ತರಿಸಿದನು: “ಲೋಕಗಳೂ ಬೇಡ. ಕಾಮಗಳೂ ಬೇಡ. ದೇವತ್ವದಿಂದಲೂ ಸುಖವೆಲ್ಲಿದೆ?
03038041a ನ ಚ ಸರ್ವಾಮರೈಶ್ವರ್ಯಂ ಕಾಮಯೇ ತ್ರಿದಶಾಧಿಪ।
03038041c ಭ್ರಾತೄಂಸ್ತಾನ್ವಿಪಿನೇ ತ್ಯಕ್ತ್ವಾ ವೈರಮಪ್ರತಿಯಾತ್ಯ ಚ।
03038041e ಅಕೀರ್ತಿಂ ಸರ್ವಲೋಕೇಷು ಗಚ್ಚೇಯಂ ಶಾಶ್ವತೀಃ ಸಮಾಃ।।
ತ್ರಿದಶಾಧಿಪ! ಸರ್ವೈಶ್ವರ್ಯಗಳನ್ನೂ ಬಯಸುವುದಿಲ್ಲ. ವೈರಿಗಳೊಂದಿಗೆ ಸೇಡನ್ನು ತೀರಿಸಿಕೊಳ್ಳದೇ ಸಹೋದರರನ್ನು ಕಾಡಿನಲ್ಲಿಯೇ ತ್ಯಜಿಸಿಬಂದರೆ ನನಗೆ ಸರ್ವಲೋಕಗಳಲ್ಲಿಯೂ ಶಾಶ್ವತವಾಗಿ ಅಕೀರ್ತಿಯು ಬರುತ್ತದೆ.”
03038042a ಏವಮುಕ್ತಃ ಪ್ರತ್ಯುವಾಚ ವೃತ್ರಹಾ ಪಾಂಡುನಂದನಂ।
03038042c ಸಾಂತ್ವಯಂ ಶ್ಲಕ್ಷ್ಣಯಾ ವಾಚಾ ಸರ್ವಲೋಕನಮಸ್ಕೃತಃ।।
ಈ ಮಾತನಾಡಿದ ಪಾಂಡುನಂದನನಿಗೆ ಸರ್ವಲೋಕ ನಮಸ್ಕೃತ ವೃತ್ರಹನು ಮೃದು ಮಾತುಗಳಿಂದ ಸಂತವಿಸುತ್ತಾ ಉತ್ತರಿಸಿದನು:
03038043a ಯದಾ ದ್ರಕ್ಷ್ಯಸಿ ಭೂತೇಶಂ ತ್ರ್ಯಕ್ಷಂ ಶೂಲಧರಂ ಶಿವಂ।
03038043c ತದಾ ದಾತಾಸ್ಮಿ ತೇ ತಾತ ದಿವ್ಯಾನ್ಯಸ್ತ್ರಾಣಿ ಸರ್ವಶಃ।।
“ಮಗೂ! ಭೂತೇಶ, ಮುಕ್ಕಣ್ಣ, ಶೂಲಧರ, ಶಿವನನ್ನು ನೀನು ಯಾವಾಗ ಕಾಣುತ್ತೀಯೋ ಆಗ ನಿನಗೆ ಸರ್ವ ದಿವ್ಯಾಸ್ತ್ರಗಳನ್ನೂ ಇತರ ಅಸ್ತ್ರಗಳನ್ನೂ ಕೊಡುತ್ತೇನೆ.
03038044a ಕ್ರಿಯತಾಂ ದರ್ಶನೇ ಯತ್ನೋ ದೇವಸ್ಯ ಪರಮೇಷ್ಠಿನಃ।
03038044c ದರ್ಶನಾತ್ತಸ್ಯ ಕೌಂತೇಯ ಸಂಸಿದ್ಧಃ ಸ್ವರ್ಗಮೇಷ್ಯಸಿ।।
ಪರಮೇಷ್ಠಿ ದೇವನನ್ನು ಕಾಣಲು ಪ್ರಯತ್ನ ಮಾಡಬೇಕು. ಕೌಂತೇಯ! ಅವನ ದರ್ಶನ ಪಡೆದ ನಂತರ ಸ್ವರ್ಗಕ್ಕೆ ಬರಲು ಸಿದ್ಧನಾಗುವೆ.”
03038045a ಇತ್ಯುಕ್ತ್ವಾ ಫಲ್ಗುನಂ ಶಕ್ರೋ ಜಗಾಮಾದರ್ಶನಂ ತತಃ।
03038045c ಅರ್ಜುನೋಽಪ್ಯಥ ತತ್ರೈವ ತಸ್ಥೌ ಯೋಗಸಮನ್ವಿತಃ।।
ಫಲ್ಗುನನಿಗೆ ಹೀಗೆ ಹೇಳಿ ಶಕ್ರನು ಅಂತರ್ಧಾನನಾದನು. ಆಗ ಅರ್ಜುನನು ಅಲ್ಲಿಯೇ ಯೋಗಸಮನ್ವಿತನಾಗಿ ನಿಂತುಕೊಂಡನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಇಂದ್ರದರ್ಶನೇ ಅಷ್ಟಾತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಇಂದ್ರದರ್ಶನದಲ್ಲಿ ಮೂವತ್ತೆಂಟನೆಯ ಅಧ್ಯಾಯವು.
-
ಈ ವಿದ್ಯೆಯಿಂದ ನಿನಗೆ ತ್ರಿಜಗತ್ತುಗಳಲ್ಲಿ ನಡೆಯುತ್ತಿರುವ ವಿಷಯಗಳೆಲ್ಲವೂ ವೇದ್ಯವಾಗುವವು. ↩︎
-
ದೀಕ್ಷಾಬದ್ಧನಾಗಿ ತಪಶ್ಚರಣೆಗೆ ಹೋಗಿ ಬರಲು ಆದೇಶವನ್ನಿತ್ತನು. ↩︎
-
ನೀನು ಹುಟ್ಟಿದಾಗ ಕುಂತಿಯು ನಿನ್ನಿಂದ ಏನಾಗಬೇಕೆಂಬುದನ್ನು ಬಯಸಿದ್ದಳೋ, ಮತ್ತು ಇಂದು ನೀನು ಯಾವುದನ್ನು ಬಯಸಿ ಪ್ರಯಾಣಸಿದ್ಧನಾಗಿರುವೆಯೋ - ಅವೆರಡೂ ಫಲಿತವಾಗಲಿ. ↩︎
-
ನಿಶ್ಚಯವಾಗಿಯೂ ಇನ್ನು ಮುಂದೆ ನಮ್ಮಲ್ಲಿ ಯಾರಿಗೂ ಕ್ಷತ್ರಿಯ ವಂಶದಲ್ಲಿ ಜನ್ಮ ಪ್ರಾಪ್ತಿಯಾಗುವುದು ಬೇಡ! ಯಾವ ವಿಧದ ಮನಃಕ್ಲೇಶ-ಕಾಯಕ್ಲೇಶಗಳೂ ಇಲ್ಲದೇ ಕೇವಲ ಭಿಕ್ಷಾಟನೆಯಿಂದ ಜೀವಿಸುವ ಬ್ರಾಹ್ಮಣರಿಗೆ ನನ್ನ ಅನಂತಾನಂತ ಧನ್ಯವಾದಗಳು. ↩︎
-
ಶಕುನ ಶಾಸ್ತ್ರದ ಪ್ರಕಾರ ಪ್ರಯಾಣ ಹೊರಟ ಕಾಲದಲ್ಲಿ ಪ್ರಾಣಿಗಳು ಅಡ್ಡಲಾಗಿ ಹೋಗುವುದು ಅಥವಾ ಎದುರಾಗಿ ಬರುವುದು ಅಶುಭಸೂಚಕ. ↩︎