037 ಕಾಮ್ಯಕವನಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 37

ಸಾರ

ದಿವ್ಯಾಸ್ತ್ರಗಳನ್ನು ಪಡೆದಿರುವ ಭೀಷ್ಮ-ದ್ರೋಣರನ್ನೂ ಮಹಾರಥಿಕರ್ಣನನ್ನೂ ಗೆಲ್ಲುವ ಯೋಜನೆಯಿಲ್ಲದೇ ಯುದ್ಧದಲ್ಲಿ ಜಯವು ಅಸಾಧ್ಯವೆಂದು ಯುಧಿಷ್ಠಿರನು ತನ್ನ ಚಿಂತೆಯನ್ನು ಭೀಮನಲ್ಲಿ ಹೇಳಿಕೊಂಡಿದುದು (1-19). ಅಷ್ಟರಲ್ಲಿ ವ್ಯಾಸನು ಆಗಮಿಸಿ, ಏಕಾಂತದಲ್ಲಿ ಯುಧಿಷ್ಠಿರನಿಗೆ ಪ್ರತಿಸ್ಮೃತಿ ವಿದ್ಯೆಯನ್ನಿತ್ತು ಅಸ್ತ್ರಗಳಿಗಾಗಿ ರುದ್ರ, ಮಹೇಂದ್ರ, ವರುಣ, ಕುಬೇರ ಮತ್ತು ಯಮರಲ್ಲಿಗೆ ಅರ್ಜುನನನ್ನು ಕಳುಹಿಸಬೇಕೆಂದು ಸೂಚಿಸುವುದು (20-35). ವ್ಯಾಸನ ಆದೇಶದಂತೆ ಪಾಂಡವರು ಕಾಮ್ಯಕವನಕ್ಕೆ ಪುನಃ ಹೋದುದು (36-41).

03037001 ವೈಶಂಪಾಯನ ಉವಾಚ।
03037001a ಭೀಮಸೇನವಚಃ ಶ್ರುತ್ವಾ ಕುಂತೀಪುತ್ರೋ ಯುಧಿಷ್ಠಿರಃ।
03037001c ನಿಃಸೃಸ್ಯ ಪುರುಷವ್ಯಾಘ್ರಃ ಸಂಪ್ರದಧ್ಯೌ ಪರಂತಪಃ।।

ವೈಶಾಂಪಾಯನನು ಹೇಳಿದನು: “ಭೀಮಸೇನನ ಮಾತುಗಳನ್ನು ಕೇಳಿ ಕುಂತೀಪುತ್ರ ಪುರುಷವ್ಯಾಘ್ರ ಪರಂತಪ ಯುಧಿಷ್ಠಿರನು ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು.

03037002a ಸ ಮುಹೂರ್ತಮಿವ ಧ್ಯಾತ್ವಾ ವಿನಿಶ್ಚಿತ್ಯೇತಿಕೃತ್ಯತಾಂ।
03037002c ಭೀಮಸೇನಮಿದಂ ವಾಕ್ಯಮಪದಾಂತರಮಬ್ರವೀತ್।।

ಸ್ವಲ್ಪ ಹೊತ್ತು ಯೋಚಿಸಿ ಹೀಗೇ ಮಾಡಬೇಕು ಎಂದು ನಿರ್ಧರಿಸಿ ತಕ್ಷಣವೇ ಭೀಮಸೇನನಿಗೆ ಈ ಮಾತುಗಳನ್ನು ಹೇಳಿದನು:

03037003a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ।
03037003c ಇದಮನ್ಯತ್ಸಮಾಧತ್ಸ್ವ ವಾಕ್ಯಂ ಮೇ ವಾಕ್ಯಕೋವಿದ।।

“ಮಹಾಬಾಹೋ! ಭಾರತ! ಇದು ನೀನು ಹೇಳಿದ ಹಾಗೆಯೇ ಇದೆ. ಆದರೆ, ವಾಕ್ಯಕೋವಿದ! ನಾನು ಹೇಳುವ ಬೇರೆ ವಿಷಯವನ್ನೂ ಮನದಟ್ಟು ಮಾಡಿಕೋ.

03037004a ಮಹಾಪಾಪಾನಿ ಕರ್ಮಾಣಿ ಯಾನಿ ಕೇವಲಸಾಹಸಾತ್।
03037004c ಆರಭ್ಯಂತೇ ಭೀಮಸೇನ ವ್ಯಥಂತೇ ತಾನಿ ಭಾರತ।।

ಭೀಮಸೇನ! ಭಾರತ! ಕೇವಲ ಸಾಹಸದಿಂದ1 ಕೈಗೊಳ್ಳುವ ಮಹಾ ಪಾಪ ಕರ್ಮಗಳು ವ್ಯಥೆಯನ್ನೇ ತರುತ್ತವೆ.

03037005a ಸುಮಂತ್ರಿತೇ ಸುವಿಕ್ರಾಂತೇ ಸುಕೃತೇ ಸುವಿಚಾರಿತೇ।
03037005c ಸಿಧ್ಯಂತ್ಯರ್ಥಾ ಮಹಾಬಾಹೋ ದೈವಂ ಚಾತ್ರ ಪ್ರದಕ್ಷಿಣಂ।।

ಚೆನ್ನಾಗಿ ಆಲೋಚಿಸಿದ, ಚೆನ್ನಾಗಿ ತಯಾರಿಸಲ್ಪಟ್ಟ, ಚೆನ್ನಾಗಿ ಕಾರ್ಯಗತಗೊಂಡ ಒಳ್ಳೆಯ ವಿಚಾರದ ಯೋಜನೆಯು ಫಲವನ್ನು ಕೊಡುತ್ತದೆ ಮತ್ತು ದೈವವೂ ಅದಕ್ಕೆ ಬಲಗೈಯನ್ನು ನೀಡುತ್ತದೆ2.

03037006a ತ್ವಂ ತು ಕೇವಲಚಾಪಲ್ಯಾದ್ ಬಲದರ್ಪೋಚ್ಚ್ರಿತಃ ಸ್ವಯಂ।
03037006c ಆರಬ್ಧವ್ಯಮಿದಂ ಕರ್ಮ ಮನ್ಯಸೇ ಶೃಣು ತತ್ರ ಮೇ।।
03037007a ಭೂರಿಶ್ರವಾಃ ಶಲಶ್ಚೈವ ಜಲಸಂಧಶ್ಚ ವೀರ್ಯವಾನ್।
03037007c ಭೀಷ್ಮೋ ದ್ರೋಣಶ್ಚ ಕರ್ಣಶ್ಚ ದ್ರೋಣಪುತ್ರಶ್ಚ ವೀರ್ಯವಾನ್।।
03037008a ಧಾರ್ತರಾಷ್ಟ್ರಾ ದುರಾಧರ್ಷಾ ದುರ್ಯೋಧನಪುರೋಗಮಾಃ।
03037008c ಸರ್ವ ಏವ ಕೃತಾಸ್ತ್ರಾಶ್ಚ ಸತತಂ ಚಾತತಾಯಿನಃ।।

ನೀನಾದರೋ ಈಗ ನಿನ್ನ ಸ್ವಂತ ಬಲದರ್ಪ ಮತ್ತು ಚಪಲತೆಯಿಂದ ಇದನ್ನೇ ಮಾಡಬೇಕೆಂದು ಯೋಚಿಸುತ್ತಿರುವೆ. ಆದರೆ ಅದರ ಕುರಿತು ನನ್ನನ್ನು ಕೇಳು3. ಭೂರಿಶ್ರವ, ಶಲ, ವೀರ್ಯವಾನ್ ಜಲಸಂಧ, ಭೀಷ್ಮ, ದ್ರೋಣ, ಕರ್ಣ, ವೀರ್ಯವಾನ್ ದ್ರೋಣಪುತ್ರ (ಅಶ್ವತ್ಧಾಮ), ದುರ್ಯೋಧನನೇ ಮೊದಲಾದ ದುರ್ಧರ್ಷ ಧಾರ್ತರಾಷ್ಟ್ರರು4 ಎಲ್ಲರೂ ಅಸ್ತ್ರಗಳನ್ನು ಪಡೆದವರು ಮತ್ತು ಸದಾ ಯುದ್ಧಕ್ಕೆ ಸಿದ್ಧರಾಗಿರುವವರು5.

03037009a ರಾಜಾನಃ ಪಾರ್ಥಿವಾಶ್ಚೈವ ಯೇಽಸ್ಮಾಭಿರುಪತಾಪಿತಾಃ।
03037009c ಸಂಶ್ರಿತಾಃ ಕೌರವಂ ಪಕ್ಷಂ ಜಾತಸ್ನೇಹಾಶ್ಚ ಸಾಂಪ್ರತಂ।।

ನಮ್ಮಿಂದ ಕಾಡಿಸಲ್ಪಟ್ಟ ರಾಜ-ಪಾರ್ಥಿವರು ಕೌರವನ ಪಕ್ಷವನ್ನು ಸೇರಿಕೊಂಡಿದ್ದಾರೆ ಮತ್ತು ಅವರ ಮೇಲೆ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ6.

03037010a ದುರ್ಯೋಧನಹಿತೇ ಯುಕ್ತಾ ನ ತಥಾಸ್ಮಾಸು ಭಾರತ।
03037010c ಪೂರ್ಣಕೋಶಾ ಬಲೋಪೇತಾಃ ಪ್ರಯತಿಷ್ಯಂತಿ ರಕ್ಷಣೇ।।

ಭಾರತ! ಅವರು ಈಗ ದುರ್ಯೋಧನನ ಹಿತದಲ್ಲಿ ತೊಡಗಿದ್ದಾರೆ, ನಮ್ಮ ಜೊತೆಗಿಲ್ಲ. ಕೋಶವು ತುಂಬಿರುವುದರಿಂದ ಅವರು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಪಂಗಡದವರನ್ನು ಭದ್ರವನ್ನಾಗಿಟ್ಟುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ.

03037011a ಸರ್ವೇ ಕೌರವಸೈನ್ಯಸ್ಯ ಸಪುತ್ರಾಮಾತ್ಯಸೈನಿಕಾಃ।
03037011c ಸಂವಿಭಕ್ತಾ ಹಿ ಮಾತ್ರಾಭಿರ್ಭೋಗೈರಪಿ ಚ ಸರ್ವಶಃ।।

ಕೌರವ ಸೈನ್ಯದ ಎಲ್ಲರೂ - ಮಕ್ಕಳು, ಅಮಾತ್ಯರು ಮತ್ತು ಸೈನಿಕರು - ಎಲ್ಲ ಸಂಪತ್ತು ಭೋಗಗಳನ್ನೂ ತಮ್ಮ ತಮ್ಮಲ್ಲಿಯೇ ಹಂಚಿಕೊಂಡಿದ್ದಾರೆ.

03037012a ದುರ್ಯೋಧನೇನ ತೇ ವೀರಾ ಮಾನಿತಾಶ್ಚ ವಿಶೇಷತಃ।
03037012c ಪ್ರಾಣಾಂಸ್ತ್ಯಕ್ಷ್ಯಂತಿ ಸಂಗ್ರಾಮೇ ಇತಿ ಮೇ ನಿಶ್ಚಿತಾ ಮತಿಃ।।

ದುರ್ಯೋಧನನಿಂದ ವಿಶೇಷವಾಗಿ ಸಮ್ಮಾನಿತರಾದ ಆ ವೀರರು ಸಂಗ್ರಾಮದಲ್ಲಿ ಅವನಿಗೇ ತಮ್ಮ ಪ್ರಾಣವನ್ನು ಪಣವನ್ನಾಗಿಡುತ್ತಾರೆ ಎಂದು ನನ್ನ ನಿಶ್ಚಯ.

03037013a ಸಮಾ ಯದ್ಯಪಿ ಭೀಷ್ಮಸ್ಯ ವೃತ್ತಿರಸ್ಮಾಸು ತೇಷು ಚ।
03037013c ದ್ರೋಣಸ್ಯ ಚ ಮಹಾಬಾಹೋ ಕೃಪಸ್ಯ ಚ ಮಹಾತ್ಮನಃ।।
03037014a ಅವಶ್ಯಂ ರಾಜಪಿಂಡಸ್ತೈರ್ನಿರ್ವೇಶ್ಯ ಇತಿ ಮೇ ಮತಿಃ।

ಭೀಷ್ಮ, ಮಹಾಬಾಹು ದ್ರೋಣ, ಮತ್ತು ಮಹಾತ್ಮ ಕೃಪನು ನಮ್ಮ ಮತ್ತು ಅವರೊಂದಿಗೆ ಒಂದೇ ಸಮನಾಗಿ ನಡೆದುಕೊಂಡರೂ, ರಾಜನ ಅನ್ನತಿಂದುದರ ಋಣದಲ್ಲಿರುತ್ತಾರೆ ಎಂದು ನನಗನ್ನಿಸುತ್ತದೆ.

03037014c ತಸ್ಮಾತ್ತ್ಯಕ್ಷ್ಯಂತಿ ಸಂಗ್ರಾಮೇ ಪ್ರಾಣಾನಪಿ ಸುದುಸ್ತ್ಯಜಾನ್।।
03037015a ಸರ್ವೇ ದಿವ್ಯಾಸ್ತ್ರವಿದ್ವಾಂಸಃ ಸರ್ವೇ ಧರ್ಮಪರಾಯಣಾಃ।

ಆದುದರಿಂದಲೇ ಆ ಎಲ್ಲ ದಿವ್ಯಾಸ್ತ್ರಗಳ ವಿಧ್ವಾಂಸರು, ಎಲ್ಲ ಧರ್ಮಪರಾಯಣರು ಸಂಗ್ರಾಮದಲ್ಲಿ ಎಷ್ಟೇ ಅಮೂಲ್ಯವಾಗಿದ್ದರೂ ತಮ್ಮ ಪ್ರಾಣವನ್ನು ಅವನಿಗಾಗಿ ತೊರೆಯಲು ಸಿದ್ಧರಾಗಿದ್ದಾರೆ.

03037015c ಅಜೇಯಾಶ್ಚೇತಿ ಮೇ ಬುದ್ಧಿರಪಿ ದೇವೈಃ ಸವಾಸವೈಃ।।
03037016a ಅಮರ್ಷೀ ನಿತ್ಯಸಂಹೃಷ್ಟಸ್ತತ್ರ ಕರ್ಣೋ ಮಹಾರಥಃ।
03037016c ಸರ್ವಾಸ್ತ್ರವಿದನಾಧೃಷ್ಯ ಅಭೇದ್ಯಕವಚಾವೃತಃ।।

ಇಂದ್ರನ ನಾಯಕತ್ವದಲ್ಲಿದ್ದ ದೇವತೆಗಳಿಂದಲೂ ಅವರು ಅಜೇಯರು ಎಂದು ನನಗನ್ನಿಸುತ್ತದೆ. ಅವರಲ್ಲಿರುವ ಕರ್ಣನಾದರೋ ಓರ್ವ ಮಹಾರಥಿ. ಸೇಡಿಟ್ಟುಕೊಳ್ಳುವವನು. ನಿತ್ಯವೂ ಸಂಹೃಷ್ಟನಾಗಿರುವವನು. ಸರ್ವಾಸ್ತ್ರಗಳನ್ನೂ ತಿಳಿದವನು, ಮತ್ತು ಅಭೇದ್ಯ ಕವಚದಿಂದ ರಕ್ಷಿತನಾಗಿರುವವನು7.

03037017a ಅನಿರ್ಜಿತ್ಯ ರಣೇ ಸರ್ವಾನೇತಾನ್ಪುರುಷಸತ್ತಮಾನ್।
03037017c ಅಶಕ್ಯೋ ಹ್ಯಸಹಾಯೇನ ಹಂತುಂ ದುರ್ಯೋಧನಸ್ತ್ವಯಾ।।
03037018a ನ ನಿದ್ರಾಮಧಿಗಚ್ಚಾಮಿ ಚಿಂತಯಾನೋ ವೃಕೋದರ।
03037018c ಅತಿ ಸರ್ವಾನ್ಧನುರ್ಗ್ರಾಹಾನ್ಸೂತಪುತ್ರಸ್ಯ ಲಾಘವಂ।।

ಈ ಎಲ್ಲ ಪುರುಷಸತ್ತಮರನ್ನೂ ರಣದಲ್ಲಿ ಗೆಲ್ಲದೇ ದುರ್ಯೋಧನನನ್ನು ಕೊಲ್ಲಲು, ಬೇರೆ ಯಾರದ್ದೂ ಸಹಾಯವಿಲ್ಲದೇ, ನಿನಗೆ ಸಾಧ್ಯವಿಲ್ಲ. ವೃಕೋದರ! ಎಲ್ಲ ಧನುಸ್ಸನ್ನು ಹಿಡಿದವರಲ್ಲಿಯೂ ಅತಿ ಲಾಘವವನ್ನು ಪಡೆದಿರುವ ಸೂತಪುತ್ರನ ಕುರಿತು ಚಿಂತಿಸಿ ನನಗೆ ನಿದ್ರೆಯೇ ಬರುತ್ತಿಲ್ಲ.”

03037019a ಏತದ್ವಚನಮಾಜ್ಞಾಯ ಭೀಮಸೇನೋಽತ್ಯಮರ್ಷಣಃ।
03037019c ಬಭೂವ ವಿಮನಾಸ್ತ್ರಸ್ತೋ ನ ಚೈವೋವಾಚ ಕಿಂ ಚನ।।

ಅತ್ಯಮರ್ಷಣ ಭೀಮಸೇನನು ಈ ಮಾತುಗಳನ್ನು ತಿಳಿದುಕೊಂಡು ದುಃಖಿತನಾದನು ಮತ್ತು ಅಪಾಯವನ್ನು ಅರಿತುಕೊಂಡು ಮುಂದೆ ಏನನ್ನೂ ಮಾತನ್ನಾಡಲಿಲ್ಲ.

03037020a ತಯೋಃ ಸಂವದತೋರೇವಂ ತದಾ ಪಾಂಡವಯೋರ್ದ್ವಯೋಃ।
03037020c ಆಜಗಾಮ ಮಹಾಯೋಗೀ ವ್ಯಾಸಃ ಸತ್ಯವತೀಸುತಃ।।

ಆ ಪಾಂಡವರಿಬ್ಬರೂ ಹೀಗೆ ಪರಸ್ಪರ ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿಗೆ ಸತ್ಯವತೀ ಸುತ, ಮಹಾಯೋಗಿ ವ್ಯಾಸನು ಆಗಮಿಸಿದನು.

03037021a ಸೋಽಭಿಗಮ್ಯ ಯಥಾನ್ಯಾಯಂ ಪಾಂಡವೈಃ ಪ್ರತಿಪೂಜಿತಃ।
03037021c ಯುಧಿಷ್ಠಿರಮಿದಂ ವಾಕ್ಯಮುವಾಚ ವದತಾಂ ವರಃ।।

ಅವನು ಬರುತ್ತಿದ್ದಂತೇ ಪಾಂಡವರು ಅವನನ್ನು ಯಥಾನ್ಯಾಯವಾಗಿ ಪೂಜಿಸಿದರು. ಅನಂತರ ಆ ಮಾತನಾಡುವರಲ್ಲಿ ಶ್ರೇಷ್ಠನು ಯುಧಿಷ್ಠಿರನಿಗೆ ಈ ಮಾತುಗಳನ್ನಾಡಿದನು:

03037022a ಯುಧಿಷ್ಠಿರ ಮಹಾಬಾಹೋ ವೇದ್ಮಿ ತೇ ಹೃದಿ ಮಾನಸಂ।
03037022c ಮನೀಷಯಾ ತತಃ ಕ್ಷಿಪ್ರಮಾಗತೋಽಸ್ಮಿ ನರರ್ಷಭ।।

“ಮಹಾಬಾಹೋ! ಯುಧಿಷ್ಠಿರ! ನರರ್ಷಭ! ನಿನ್ನ ಮನಸ್ಸು-ಹೃದಯಗಳಲ್ಲಿರುವ ವಿಷಯವನ್ನು ತಿಳಿದಿದ್ದೇನೆ. ಆದುದರಿಂದಲೇ ನಾನು ಬೇಗನೇ ಇಲ್ಲಿಗೆ ಬಂದಿದ್ದೇನೆ.

03037023a ಭೀಷ್ಮಾದ್ದ್ರೋಣಾತ್ಕೃಪಾತ್ಕರ್ಣಾದ್ದ್ರೋಣಪುತ್ರಾಚ್ಚ ಭಾರತ।
03037023c ಯತ್ತೇ ಭಯಮಮಿತ್ರಘ್ನ ಹೃದಿ ಸಂಪರಿವರ್ತತೇ।।
03037024a ತತ್ತೇಽಹಂ ನಾಶಯಿಷ್ಯಾಮಿ ವಿಧಿದೃಷ್ಟೇನ ಹೇತುನಾ।
03037024c ತಚ್ಛೃತ್ವಾ ಧೃತಿಮಾಸ್ಥಾಯ ಕರ್ಮಣಾ ಪ್ರತಿಪಾದಯ।।

ಭಾರತ! ಅಮಿತ್ರಘ್ನ! ಭೀಷ್ಮ, ದ್ರೋಣ, ಕೃಪ, ಕರ್ಣ, ಮತ್ತು ದ್ರೋಣಪುತ್ರರ ಕುರಿತು ನಿನ್ನ ಹೃದಯವನ್ನು ಆವರಿಸಿರುವ ಭಯವನ್ನು ನಾನು ವಿಧಿಯ ದೃಷ್ಟಿಯನ್ನು ಕಾರಣವನ್ನಾಗಿಟ್ಟುಕೊಂಡು ನಾಶಪಡಿಸುತ್ತೇನೆ. ಇದನ್ನು ಕೇಳಿ ನಿನ್ನ ಧೃತಿಯನ್ನು ಹಿಂದೆ ಪಡೆ ಮತ್ತು ಇದನ್ನು ಕಾರ್ಯಗತಗೊಳಿಸು.”

03037025a ತತ ಏಕಾಂತಮುನ್ನೀಯ ಪಾರಾಶರ್ಯೋ ಯುಧಿಷ್ಠಿರಂ।
03037025c ಅಬ್ರವೀದುಪಪನ್ನಾರ್ಥಮಿದಂ ವಾಕ್ಯವಿಶಾರದಃ।।

ಆಗ ಆ ವಾಕ್ಯವಿಶಾರದ ಪಾರಾಶರ್ಯನು ಯುಧಿಷ್ಠಿರನನ್ನು ಏಕಾಂತದಲ್ಲಿ ಕರೆದು ಅತಿ ಪ್ರಮುಖವಾದ ಈ ಮಾತುಗಳನ್ನು ಹೇಳಿದನು:

03037026a ಶ್ರೇಯಸಸ್ತೇ ಪರಃ ಕಾಲಃ ಪ್ರಾಪ್ತೋ ಭರತಸತ್ತಮ।
03037026c ಯೇನಾಭಿಭವಿತಾ ಶತ್ರೂನ್ರಣೇ ಪಾರ್ಥೋ ಧನಂಜಯಃ।।

“ಭರತಸತ್ತಮ! ಪಾರ್ಥ ಧನಂಜಯನು ಮುಂದೆ ರಣದಲ್ಲಿ ಶತ್ರುಗಳನ್ನು ಹಿಂದಾಗಿಸಿದಾಗ ನಿನಗೆ ಶ್ರೇಯಸ್ಸಾಗುವ ಕಾಲವು ಪ್ರಾಪ್ತವಾಗುತ್ತದೆ.

03037027a ಗೃಹಾಣೇಮಾಂ ಮಯಾ ಪ್ರೋಕ್ತಾಂ ಸಿದ್ಧಿಂ ಮೂರ್ತಿಮತೀಮಿವ।
03037027c ವಿದ್ಯಾಂ ಪ್ರತಿಸ್ಮೃತಿಂ ನಾಮ ಪ್ರಪನ್ನಾಯ ಬ್ರವೀಮಿ ತೇ।
03037027e ಯಾಮವಾಪ್ಯ ಮಹಾಬಾಹುರರ್ಜುನಃ ಸಾಧಯಿಷ್ಯತಿ।।

ಈಗ ನಾನು ಸಿದ್ಧಿಯೇ ಮೂರ್ತಿಮತ್ತಾಗಿರುವ ಪ್ರತಿಸ್ಮೃತಿ ಎಂಬ ಹೆಸರಿನ ವಿದ್ಯೆಯನ್ನು ಶರಣು ಬಂದಿರುವ ನಿನಗೆ ಹೇಳಿಕೊಡುತ್ತೇನೆ. ಸ್ವೀಕರಿಸು. ನಿನ್ನಿಂದ ಇದನ್ನು ಪಡೆದು ಮಹಾಬಾಹು ಅರ್ಜುನನು ಸಾಧಿಸುತ್ತಾನೆ.

03037028a ಅಸ್ತ್ರಹೇತೋರ್ಮಹೇಂದ್ರಂ ಚ ರುದ್ರಂ ಚೈವಾಭಿಗಚ್ಚತು।
03037028c ವರುಣಂ ಚ ಧನೇಶಂ ಚ ಧರ್ಮರಾಜಂ ಚ ಪಾಂಡವ।
03037028e ಶಕ್ತೋ ಹ್ಯೇಷ ಸುರಾನ್ದ್ರಷ್ಟುಂ ತಪಸಾ ವಿಕ್ರಮೇಣ ಚ।।

ಪಾಂಡವ! ಅಸ್ತ್ರಗಳಿಗಾಗಿ ಅವನು ಮಹೇಂದ್ರ, ರುದ್ರ, ವರುಣ, ಧನೇಶ (ಕುಬೇರ) ಮತ್ತು ಧರ್ಮರಾಜ (ಯಮ) ರಲ್ಲಿಗೆ ಹೋಗಬೇಕು. ತನ್ನ ತಪಸ್ಸು-ವಿಕ್ರಮಗಳಿಂದ ಮತ್ತು ಇದರಿಂದ ಅವನು ಸುರರನ್ನು ನೋಡಲು ಶಕ್ತನಾಗುತ್ತಾನೆ.

03037029a ಋಷಿರೇಷ ಮಹಾತೇಜಾ ನಾರಾಯಣಸಹಾಯವಾನ್।
03037029c ಪುರಾಣಃ ಶಾಶ್ವತೋ ದೇವೋ ವಿಷ್ಣೋರಂಶಃ ಸನಾತನಃ।।

ಇವನು ಮಹಾತೇಜಸ್ವಿ. ನಾರಾಯಣನ ಸಹಾಯಕ. ಪುರಾತನ. ಸನಾತನ. ಶಾಶ್ವತ. ವಿಷ್ಣುವಿನ ಅಂಶದ ದೇವ ಮತ್ತು ಋಷಿ.

03037030a ಅಸ್ತ್ರಾಣೀಂದ್ರಾಚ್ಚ ರುದ್ರಾಚ್ಚ ಲೋಕಪಾಲೇಭ್ಯ ಏವ ಚ।
03037030c ಸಮಾದಾಯ ಮಹಾಬಾಹುರ್ಮಹತ್ಕರ್ಮ ಕರಿಷ್ಯತಿ।।

ಇಂದ್ರ, ರುದ್ರ ಮತ್ತು ಲೋಕಪಾಲಕರಿಂದ ಅಸ್ತ್ರಗಳನ್ನು ಪಡೆದು ಈ ಮಹಾಬಾಹುವು ಮಹಾಕಾರ್ಯವನ್ನು ಎಸಗುತ್ತಾನೆ.

03037031a ವನಾದಸ್ಮಾಚ್ಚ ಕೌಂತೇಯ ವನಮನ್ಯದ್ವಿಚಿಂತ್ಯತಾಂ।
03037031c ನಿವಾಸಾರ್ಥಾಯ ಯದ್ಯುಕ್ತಂ ಭವೇದ್ವಃ ಪೃಥಿವೀಪತೇ।।

ಪೃಥಿವೀಪತೇ! ಕೌಂತೇಯ! ಈ ವನವನ್ನು ಬಿಟ್ಟು ನಿನಗೆ ನಿವಾಸಕ್ಕೆ ಯೋಗ್ಯವಾದ ಬೇರೆ ಯಾವುದಾದರೂ ವನಕ್ಕೆ ಹೋಗುವ ಯೋಚನೆಮಾಡು.

03037032a ಏಕತ್ರ ಚಿರವಾಸೋ ಹಿ ನ ಪ್ರೀತಿಜನನೋ ಭವೇತ್।
03037032c ತಾಪಸಾನಾಂ ಚ ಶಾಂತಾನಾಂ ಭವೇದುದ್ವೇಗಕಾರಕಃ।।
03037033a ಮೃಗಾಣಾಮುಪಯೋಗಶ್ಚ ವೀರುದೋಷಧಿಸಂಕ್ಷಯಃ।
03037033c ಬಿಭರ್ಷಿ ಹಿ ಬಹೂನ್ವಿಪ್ರಾನ್ವೇದವೇದಾಂಗಪಾರಗಾನ್।।

ಒಂದೇ ಜಾಗದಲ್ಲಿ ತುಂಬಾ ಸಮಯ ಇರುವುದರಿಂದ ಸಂತೋಷವಾಗುವುದಿಲ್ಲ. ಮತ್ತು ಇದರಿಂದ ತಾಪಸಿಗಳ ಶಾಂತತೆಗೆ ಭಂಗಮಾಡಿದಹಾಗೂ ಆಗುತ್ತದೆ. ನೀವು ಬಹಳಷ್ಟು ವೇದವೇದಾಂಗಪಾರಂಗತ ವಿಪ್ರರನ್ನು ಪಾಲಿಸುತ್ತಿರುವುದರಿಂದ ಮೃಗಗಳನ್ನು ಬೇಟೆಯಾಡಿ ಕಡಿಮೆಮಾಡುತ್ತೀರಿ. ಸಸ್ಯಗಳು ಮತ್ತು ಔಷಧಿಗಳು ಕಡಿಮೆಯಾಗುತ್ತವೆ8.”

03037034a ಏವಮುಕ್ತ್ವಾ ಪ್ರಪನ್ನಾಯ ಶುಚಯೇ ಭಗವಾನ್ಪ್ರಭುಃ।
03037034c ಪ್ರೋವಾಚ ಯೋಗತತ್ತ್ವಜ್ಞೋ ಯೋಗವಿದ್ಯಾಮನುತ್ತಮಾಂ।।
03037035a ಧರ್ಮರಾಜ್ಞೇ ತದಾ ಧೀಮಾನ್ವ್ಯಾಸಃ ಸತ್ಯವತೀಸುತಃ।
03037035c ಅನುಜ್ಞಾಯ ಚ ಕೌಂತೇಯಂ ತತ್ರೈವಾಂತರಧೀಯತ।।

ತನಗೆ ಶರಣುಬಂದಿದ್ದ ಶುಚನಿಗೆ ಹೀಗೆ ಹೇಳಿ ಭಗವಾನ್ ಪ್ರಭು ಯೋಗತತ್ವಜ್ಞ ಸತ್ಯವತೀಸುತ ವ್ಯಾಸನು ಆ ಅನುತ್ತಮ ಯೋಗವಿದ್ಯೆಯನ್ನು ಧೀಮಂತ ಧರ್ಮರಾಜನಿಗೆ ಹೇಳಿಕೊಟ್ಟನು. ಕೌಂತೇಯನಿಗೆ ಅಪ್ಪಣೆಯನ್ನಿತ್ತು ಅಲ್ಲಿಯೇ ಅಂತರ್ಧಾನನಾದನು.

03037036a ಯುಧಿಷ್ಠಿರಸ್ತು ಧರ್ಮಾತ್ಮಾ ತದ್ಬ್ರಹ್ಮ ಮನಸಾ ಯತಃ।
03037036c ಧಾರಯಾಮಾಸ ಮೇಧಾವೀ ಕಾಲೇ ಕಾಲೇ ಸಮಭ್ಯಸನ್।।

ಧರ್ಮತ್ಮ ಮೇಧಾವೀ ಯುಧಿಷ್ಠಿರನಾದರೋ ಪುನಃ ಪುನಃ ಅಭ್ಯಾಸಮಾಡಿ ಆ ಬ್ರಹ್ಮನನ್ನು ತನ್ನ ಮನಸ್ಸಿನಲ್ಲಿ ಇಟ್ಟುಕೊಂಡನು.

03037037a ಸ ವ್ಯಾಸವಾಕ್ಯಮುದಿತೋ ವನಾದ್ದ್ವೈತವನಾತ್ತತಃ।
03037037c ಯಯೌ ಸರಸ್ವತೀತೀರೇ ಕಾಮ್ಯಕಂ ನಾಮ ಕಾನನಂ।।

ವ್ಯಾಸನ ಮಾತಿನಿಂದ ಸಂತೋಷಗೊಂಡ ಅವನು ದ್ವೈತವನವನ್ನು ಬಿಟ್ಟು ಸರಸ್ವತೀ ತೀರದಲ್ಲಿರುವ ಕಾಮ್ಯಕ ಎನ್ನುವ ಕಾನನಕ್ಕೆ ಹೋದನು.

03037038a ತಮನ್ವಯುರ್ಮಹಾರಾಜ ಶಿಕ್ಷಾಕ್ಷರವಿದಸ್ತಥಾ।
03037038c ಬ್ರಾಹ್ಮಣಾಸ್ತಪಸಾ ಯುಕ್ತಾ ದೇವೇಂದ್ರಮೃಷಯೋ ಯಥಾ।।

ಮಹಾರಾಜ! ಋಷಿಗಳು ದೇವೇಂದ್ರನನ್ನು ಹಿಂಬಾಲಿಸುವಂತೆ ಶಿಕ್ಷಾಕ್ಷರವಿದರಾದ ಬ್ರಾಹ್ಮಣರೂ ತಪಸ್ವಿಗಳು ಸೇರಿಕೊಂಡು ಅವನನ್ನು ಹಿಂಬಾಲಿಸಿದರು.

03037039a ತತಃ ಕಾಮ್ಯಕಮಾಸಾದ್ಯ ಪುನಸ್ತೇ ಭರತರ್ಷಭಾಃ।
03037039c ನ್ಯವಿಶಂತ ಮಹಾತ್ಮಾನಃ ಸಾಮಾತ್ಯಾಃ ಸಪದಾನುಗಾಃ।।

ಕಾಮ್ಯಕವನವನ್ನು ಪುನಃ ಸೇರಿ ಆ ಮಹಾತ್ಮ ಭರತರ್ಷಭರು ಅಮಾತ್ಯರು ಮತ್ತು ಅನುಚರರೊಂದಿಗೆ ವಾಸಿಸತೊಡಗಿದರು.

03037040a ತತ್ರ ತೇ ನ್ಯವಸನ್ರಾಜನ್ಕಂ ಚಿತ್ಕಾಲಂ ಮನಸ್ವಿನಃ।
03037040c ಧನುರ್ವೇದಪರಾ ವೀರಾಃ ಶೃಣ್ವಾನಾ ವೇದಮುತ್ತಮಂ।।

ರಾಜನ್! ಆ ಮನಸ್ವಿ ವೀರರು ಧನುರ್ವೇದಪರರಾಗಿ ಮತ್ತು ಉತ್ತಮ ವೇದಗಳನ್ನು ಕೇಳುತ್ತಾ ಅಲ್ಲಿ ಸ್ವಲ್ಪ ಕಾಲ ನೆಲೆಸಿದರು.

03037041a ಚರಂತೋ ಮೃಗಯಾಂ ನಿತ್ಯಂ ಶುದ್ಧೈರ್ಬಾಣೈರ್ಮೃಗಾರ್ಥಿನಃ।
03037041c ಪಿತೃದೈವತವಿಪ್ರೇಭ್ಯೋ ನಿರ್ವಪಂತೋ ಯಥಾವಿಧಿ।।

ನಿತ್ಯವೂ ಅವರು ಶುದ್ಧ ಬಾಣಗಳಿಂದ (ವಿಷದಿಂದ ಲೇಪಿತವಾಗಿರದ) ಮೃಗಗಳನ್ನು ಹುಡುಕುತ್ತಾ ಬೇಟೆಗೆ ಹೋಗುತ್ತಿದ್ದರು ಮತ್ತು ಯಥಾವಿಧಿಯಾಗಿ ಪಿತೃ, ದೇವತೆಗಳು ಮತ್ತು ಬ್ರಾಹ್ಮಣರಿಗೆ ನಿವೇದಿಸುತ್ತಿದ್ದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಕಾಮ್ಯಕವನಗಮನೇ ಸಪ್ತತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಕಾಮ್ಯಕವನಗಮನದಲ್ಲಿ ಮೂವತ್ತೇಳನೆಯ ಅಧ್ಯಾಯವು.


  1. ಚೆನ್ನಾಗಿ ವಿಚಾರಮಾಡದೇ ದುಡುಕಿ ಮಾಡುವ ↩︎

  2. ಸಾಹಸವನ್ನು ಬಲವನ್ನು ಪ್ರಯೋಗಿಸಬೇಕಾದರೆ ಪೂರ್ವಾಪರವಿವೇಚನೆಯನ್ನು ಮಾಡಬೇಕು. ಧರ್ಮಕ್ಕೂ ನ್ಯೂನತೆಯುಂಟಾಗದಂತೆ ಕಾರ್ಯಗತಗೊಳಿಸಬೇಕು. ಬಲಪ್ರಯೋಗದಿಂದ ಒದಗಬಹುದಾದ ಅಪಾಯವನ್ನು ಮನಗಂಡು ಉಪಾಯವನ್ನು ಸಿದ್ಧಪಡಿಸಬೇಕು. ಕೋಪಕ್ಕೆ ಎದೆಗೊಟ್ಟು ಕಾರ್ಯಮಾಡದೇ, ಪ್ರತಿಯೊಂದನ್ನೂ ಕೂಲಂಕುಷವಾಗಿ ತರ್ಕಿಸಿ ಕಾರ್ಯಗತಗೊಳಿಸಬೇಕು. ಹೀಗೆ ಕಾರ್ಯಮಾಡಿದರೆ, ದೈವಸಹಾಯವೂ ಸಿಕ್ಕಿ ಕಾರ್ಯಗಳೂ ಸಿದ್ಧಿಸುತ್ತವೆ. [ಅಂದರೆ, ಮನುಷ್ಯ ಮತ್ತು ದೈವ ಎವೆರಡೂ ಅತ್ಮದ ಸಿದ್ಧಿಗೆ ಕಾರಣರು. ಮನುಷ್ಯನು ಧರ್ಮಕ್ಕೆ ವಿರುದ್ಧ ನಡೆಯದೇ, ಎಲ್ಲವನ್ನೂ ಸರಿಯಾಗಿ ಆಲೋಚಿಸಿ ವಿವೇಕದಿಂದ ಯೋಜನೆಯನ್ನು ಕಾರ್ಯಗತಗೊಳಿಸುತ್ತಾನೋ ಅವನ ಸ್ವಪ್ರಯತ್ನದ ಫಲದಲ್ಲಿ ವಿಧಿಯೂ ಕೈಗೂಡಿಸುತ್ತದೆ. ಮನುಷ್ಯನ ಅಂಥಹ ಕಾರ್ಯಗಳಿಂದ ವಿಧಿಯನ್ನೂ ಬದಲಾಯಿಸಬಹುದು. ಆದರೆ, ಧರ್ಮಕ್ಕೆ ವಿರುದ್ಧವಾಗಿ ನಡೆದರೆ, ಅದನ್ನು ವಿವೇಕವು ಎಷ್ಟೇ ಪ್ರೋತ್ಸಾಹಿಸಿದ್ದರೂ, ಚೆನ್ನಾಗಿ ಕಾರ್ಯಗತಗೊಳಿಸಿದರೂ ವಿಧಿ ಏನು ಬರೆದಿತ್ತೋ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅಂಥಹ ಯೋಜನೆಯನ್ನು ಮನುಷ್ಯನು ಕಾರ್ಯಗತ ಗೊಳಿಸಿದರೂ ಒಂದೇ ಅಥವಾ ಕಾರ್ಯಗತಗೊಳಿಸದೇ ಸುಮ್ಮನಿದ್ದರೂ ಒಂದೇ. ಆಗುತ್ತದೆ ಎಂದಿರುವುದು ಆಗಿಯೇ ಆಗುತ್ತದೆ! ↩︎

  3. ನಾವು ಎದುರಿಸಬೇಕಾಗಿರುವ ಶತ್ರುಗಳಾದರೂ ಯಾರು? ಅವರ ಪರಾಕ್ರಮವೇನು? ಎನ್ನುವುದನ್ನಾದರೂ ವಿವೇಚಿಸಿರುವೆಯಾ? ↩︎

  4. ದುರ್ಯೋಧನ ಪ್ರಮುಖರಾದ ಧೃತರಾಷ್ಟ್ರನ ನೂರು ಮಂದಿ ಮಕ್ಕಳು. ↩︎

  5. ಇವರೆಲ್ಲರೂ ಸಾಮಾನ್ಯರೆಂದು ತಿಳಿಯಬೇಡ! ↩︎

  6. ಅದರ ಜೊತೆಗೆ ನಮ್ಮಿಂದ ಪರಾಜಿತರಾಗಿದ್ದ ಭೂಪಾಲರೆಲ್ಲರೂ ದುರ್ಯೋಧನನ ಪಕ್ಷವನ್ನು ಸೇರಿರುತ್ತಾರೆ. ದುರ್ಯೋಧನನಿಗೆ ಅವರ ಮೇಲಿದ್ದ ಮೈತ್ರಿಯಿಂದಾಗಿ ಅವರೂ ಅವನ ಹಿತವನ್ನೇ ಬಯಸುವವರಾಗಿರುತ್ತಾರೆ. ↩︎

  7. ಶತ್ರುಪಕ್ಷದವರು ಇಷ್ಟು ಪ್ರಬಲರಾಗಿರುವಾಗ ನಾವು ಪ್ರತಿಜ್ಞೆಯನ್ನು ಮುರಿದು ಅಧರ್ಮಿಗಳೆಂದು ಎನಿಸಿಕೊಂಡೂ, ಅಸಹಾಯಕರಾಗಿ ನಮ್ಮ ಶತ್ರುಗಳನ್ನು ವಿನಾಶಮಾಡುವ ಸಾಧ್ಯತೆಯಿದೆಯೇ ಭೀಮಸೇನ? ↩︎

  8. ನೀನು ಈ ದ್ವೈತವನದಲ್ಲಿಯೂ ಹೆಚ್ಚು ಕಾಲ ಇರಬೇಡ. ಬೇರೆಯಾವುದಾದರೂ ಅರಣ್ಯಕ್ಕೆ ಹೋಗಲು ನಿಶ್ಚಯಿಸು. ಏಕೆಂದರೆ, ಒಂದೆಡೆಯಲ್ಲಿಯೇ ಇದ್ದು ಬಿಡುವುದು ಮನಸ್ಸಿಗ ಹಿತನೆನಿಸುವುದಿಲ್ಲ. ಮೇಲಾಗಿ, ಇಲ್ಲಿರುವ ತಪಸ್ವಿಗಳಿಗೂ ಕಾಲಕ್ರಮೇಣವಾಗಿ ನಿನ್ನ ವಾಸವು ಸಹ್ಯವಾಗದಿರಬಹುದು. ನಿನ್ನ ಪರಿವಾರವು ಬಹಳ ದೊಡ್ಡದು. ನಿನ್ನನ್ನೇ ಅನುಸರಿಸಿ ಬಂದಿರುವ ವೇದವೇದಾಂಗ ಪಾರಂಗತ ಅನೇಕ ಬ್ರಾಹ್ಮಣರು ಬಂದಿರುತ್ತಾರೆ. ಇವರೆಲ್ಲರ ರಕ್ಷಣಾಭಾರವೂ ನಿನ್ನದಾಗಿದೆ. ಜನರ ಆಹಾರಕಾಗಿ ಇಲ್ಲಿರುವ ಜಿಂಕೆಗಳೂ ಕಂದಮೂಲಗಳು ಉಪಯೋಗಿಸಲ್ಪಡುತ್ತಿವೆ. ಇನ್ನು ಮುಂದೆಯೂ ನೀನು ಇದೇ ವನದಲ್ಲಿ ಇರುವೆಯಾದರೆ ಜಿಂಕೆಗಳೇ ದೊರಕದ ಕಾಲವೂ ಬರಬಹುದು. ಕಂದಮೂಲಫಲಗಳೂ ಸಿಕ್ಕದಿರಬಹುದು. ಇದರಿಂದಾಗಿ, ಇಲ್ಲಿಯೇ ಶಾಶ್ವತವಾಗಿ ನೆಲೆಸಿರುವ ಋಷಿಗಳಿಗೆ ಬಹಳ ಕಷ್ಟವಾಗಬಹುದು. ↩︎