036 ಭೀಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 36

ಸಾರ

ಶರೀರವಿದ್ದವರಿಗೆ ಶರೀರದ ಮರಣವು ನಿತ್ಯ ಮತ್ತು ನಿಶ್ಚಯ. ಆದುದರಿಂದ ಸಮಯಕ್ಕೆ ಕಾಯುವ ಬದಲು ಈಗಲೇ ಪ್ರಯತ್ನ ಮಾಡಿ ರಾಜ್ಯವನ್ನು ಹಿಂದೆ ತೆಗೆದುಕೊಳ್ಳೋಣ! ಎಂದು ಭೀಮನು ಯುಧಿಷ್ಠಿರನನ್ನು ಒತ್ತಾಯಿಸಿದುದು (1-34).

03036001 ಭೀಮಸೇನ ಉವಾಚ।
03036001a ಸಂಧಿಂ ಕೃತ್ವೈವ ಕಾಲೇನ ಅಂತಕೇನ ಪತತ್ರಿಣಾ।
03036001c ಅನಂತೇನಾಪ್ರಮೇಯೇನ ಸ್ರೋತಸಾ ಸರ್ವಹಾರಿಣಾ।।
03036002a ಪ್ರತ್ಯಕ್ಷಂ ಮನ್ಯಸೇ ಕಾಲಂ ಮರ್ತ್ಯಃ ಸನ್ಕಾಲಬಂಧನಃ।
03036002c ಫೇನಧರ್ಮಾ ಮಹಾರಾಜ ಫಲಧರ್ಮಾ ತಥೈವ ಚ।।

ಭೀಮಸೇನನು ಹೇಳಿದನು: “ಮಹಾರಾಜ! ನೀನು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದುದೇನೋ ಸರಿ! ಆದರೆ ಕಾಲಬಂಧನಕ್ಕೊಳಗಾದ, ನೊರೆಯ ಗುಳ್ಳೆಯಂತಿರುವ ಮತ್ತು ಗಳಿತ ಹಣ್ಣು ಮರದಿಂದ ಹೇಗೆ ಯಾವಾಗಲಾದರೂ ಬೀಳಬಹುದೋ ಹಾಗಿರುವ ಮನುಷ್ಯನಿಗೆ ರೆಕ್ಕೆಗಳನ್ನು ಹೊಂದಿರುವ, ಅನಂತ, ಅಪ್ರಮೇಯ, ಸರ್ವರನ್ನೂ ತೆಗೆದುಕೊಂಡು ಹೋಗುವ, ಎಲ್ಲಿಯಾದರೂ ಕ್ಷಿಪ್ರವಾಗಿ ಹೋಗಬಲ್ಲ ಕಾಲ ಅಂತಕನು ಯಾವಾಗಬೇಕಾದರೂ ಪ್ರತ್ಯಕ್ಷನಾಗಬಹುದು1.

03036003a ನಿಮೇಷಾದಪಿ ಕೌಂತೇಯ ಯಸ್ಯಾಯುರಪಚೀಯತೇ।
03036003c ಸೂಚ್ಯೇವಾಂಜನಚೂರ್ಣಸ್ಯ ಕಿಮಿತಿ ಪ್ರತಿಪಾಲಯೇತ್।।

ಕೌಂತೇಯ! ಸೂಜಿಯ ಮೊನೆಯಿಂದ ತೆಗೆದು ಕಣ್ಣಿಗೆ ಹಚ್ಚಿಕೊಂಡರೂ ಡಬ್ಬದಲ್ಲಿರುವ ಕಾಡಿಗೆಯು ಕೆಲವೇ ಸಮಯದ ನಂತರ ಮುಗಿದುಹೋಗುವುದಿಲ್ಲವೇ? ಅದೇ ರೀತಿ ನಮ್ಮ ಆಯಸ್ಸೂ ಕೂಡ ಕಣ್ಣು ರೆಪ್ಪೆ ಬಡಿಯುವಿಕೆಯಲ್ಲಿಯೇ ಮುಗಿದುಹೋಗಿ ಬಿಡುತ್ತದೆ. ಹೀಗಿದ್ದರೂ ನೀನು ಕಾಲವನ್ನು ನಂಬಿ ಕುಳಿತಿರುವೆಯಲ್ಲ!

03036004a ಯೋ ನೂನಮಮಿತಾಯುಃ ಸ್ಯಾದಥ ವಾಪಿ ಪ್ರಮಾಣವಿತ್।
03036004c ಸ ಕಾಲಂ ವೈ ಪ್ರತೀಕ್ಷೇತ ಸರ್ವಪ್ರತ್ಯಕ್ಷದರ್ಶಿವಾನ್।।
03036005a ಪ್ರತೀಕ್ಷಮಾಣಾನ್ಕಾಲೋ ನಃ ಸಮಾ ರಾಜಂಸ್ತ್ರಯೋದಶ।
03036005c ಆಯುಷೋಽಪಚಯಂ ಕೃತ್ವಾ ಮರಣಾಯೋಪನೇಷ್ಯತಿ।।

ರಾಜನ್! ಯಾರಿಗೆ ಚಿರಾಯುಷ್ಯವಿರುವುದೋ, ಯಾರು ತಮ್ಮ ಜೀವನದ ಮುಂದಿನ ದಿನಗಳು ಇದೇ ರೀತಿ ಇರುತ್ತದೆ ಎಂದು ತಿಳಿದಿರುವವರೋ, ಯಾರಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ವಿಷಯಗಳ ಅರಿವು ಇಂದೇ ಇರುವುದೋ ಅಂಥಹ ಕಾಲಜ್ಞರು ಮಾತ್ರ ಸಮಯದ ನಿರೀಕ್ಷಣೆ ಮಾಡುತ್ತಾ ಕುಳಿತುಕೊಳ್ಳಬಹುದು. ಆದರೆ ಮುಂದಿನ ಹದಿಮೂರು ವರ್ಷಗಳಲ್ಲಿ ನಾವು ಇರುತ್ತೀವೋ ಅಥವಾ ಸಾಯುತ್ತೀವೋ ಎನ್ನುವುದರ ಅರಿವೇ ಇಲ್ಲದ ನಾವು ನಿಷ್ಕಾರಣವಾಗಿ ಈ ಹದಿಮೂರು ವರ್ಷಗಳನ್ನೂ ಕಾಡಿನಲ್ಲಿ ಕಳೆದೆವೆಂದಾದರೆ ಯಾವ ವಿಧದ ಪ್ರಯೋಜನವೂ ಇಲ್ಲದೇ ನಮ್ಮ ಆಯಷ್ಯವು ಕ್ಷಯಿಸಿಹೋಗುತ್ತದೆ.

03036006a ಶರೀರಿಣಾಂ ಹಿ ಮರಣಂ ಶರೀರೇ ನಿತ್ಯಮಾಶ್ರಿತಂ।
03036006c ಪ್ರಾಗೇವ ಮರಣಾತ್ತಸ್ಮಾದ್ರಾಜ್ಯಾಯೈವ ಘಟಾಮಹೇ।।

ಶರೀರವಿದ್ದವರಿಗೆ ಶರೀರದ ಮರಣವು ನಿತ್ಯ ಮತ್ತು ನಿಶ್ಚಯ. ಆದುದರಿಂದ ಸಮಯಕ್ಕೆ ಕಾಯುವ ಬದಲು ಈಗಲೇ ಪ್ರಯತ್ನ ಮಾಡಿ ರಾಜ್ಯವನ್ನು ಹಿಂದೆ ತೆಗೆದುಕೊಳ್ಳೋಣ!

03036007a ಯೋ ನ ಯಾತಿ ಪ್ರಸಂಖ್ಯಾನಮಸ್ಪಷ್ಟೋ ಭೂಮಿವರ್ಧನಃ।
03036007c ಅಯಾತಯಿತ್ವಾ ವೈರಾಣಿ ಸೋಽವಸೀದತಿ ಗೌರಿವ।।

ಯಾರು ವೈರಿಗಳನ್ನು ಧ್ವಂಸಮಾಡುವುದರಿಂದ ಪ್ರಾಪ್ತವಾಗುವ ಕೀರ್ತಿ-ಪ್ರತಿಷ್ಠೆಗಳನ್ನು ಪಡೆಯದೇ ಲೋಕದಲ್ಲಿ ಅಗಣ್ಯನಾಗಿರುವನೋ ಅವನು ಬಂಜೆ ಹಸುವಿನಂತೆ ಕೆಲ ಸಮಯ ಭೂಮಿಗೆ ಭಾರನಾಗಿದ್ದು ಸಾಯುತ್ತಾನೆ.

03036008a ಯೋ ನ ಯಾತಯತೇ ವೈರಮಲ್ಪಸತ್ತ್ವೋದ್ಯಮಃ ಪುಮಾನ್।
03036008c ಅಫಲಂ ತಸ್ಯ ಜನ್ಮಾಹಂ ಮನ್ಯೇ ದುರ್ಜಾತಜಾಯಿನಃ।।

ಯಾರು ದೌರ್ಬಲ್ಯ ಮತ್ತು ಹೇಡಿತನದಿಂದ ಶತ್ರುಗಳನ್ನು ವಿನಾಶಗೊಳಿಸಲು ಯತ್ನಿಸದೇ ಆಲಸಿಕೆಯಿಂದ ಇರುವನೋ ಅವನ ಜನ್ಮವೇ ವ್ಯರ್ಥ ಮತ್ತು ಅವನ ಹುಟ್ಟೂ ಅತ್ಯಂತ ಕುತ್ಸಿತವಾದುದು ಎಂದು ತಿಳಿಯುತ್ತೇನೆ2.

03036009a ಹೈರಣ್ಯೌ ಭವತೋ ಬಾಹೂ ಶ್ರುತಿರ್ಭವತಿ ಪಾರ್ಥಿವ।
03036009c ಹತ್ವಾ ದ್ವಿಷಂತಂ ಸಂಗ್ರಾಮೇ ಭುಕ್ತ್ವಾ ಬಾಹ್ವರ್ಜಿತಂ ವಸು।।

ಪಾರ್ಥಿವ! ನಿನ್ನ ಬಾಹುಗಳು ಚಿನ್ನದವು. ಸಂಗ್ರಾಮದಲ್ಲಿ ನಿನ್ನ ಬಾಹುಗಳಿಂದ ದ್ವೇಷಿಗಳನ್ನು ಕೊಂದು ಸಂಪತ್ತನ್ನು ಗಳಿಸಿ ಪ್ರಖ್ಯಾತನಾಗುವೆ3.

03036010a ಹತ್ವಾ ಚೇತ್ಪುರುಷೋ ರಾಜನ್ನಿಕರ್ತಾರಮರಿಂದಮ।
03036010c ಅಹ್ನಾಯ ನರಕಂ ಗಚ್ಚೇತ್ಸ್ವರ್ಗೇಣಾಸ್ಯ ಸ ಸಮ್ಮಿತಃ।।

ರಾಜನ್! ಅರಿಂದಮ! ಮೋಸಮಾಡುವವನನ್ನು ಕೊಂದರೆ ಆ ಪುರುಷನು ನರಕಕ್ಕೆ ಹೋದರೂ ಅದು ಅವನಿಗೆ ಸ್ವರ್ಗವಾಗಿ ಅನುಭವವಾಗುತ್ತದೆ4.

03036011a ಅಮರ್ಷಜೋ ಹಿ ಸಂತಾಪಃ ಪಾವಕಾದ್ದೀಪ್ತಿಮತ್ತರಃ।
03036011c ಯೇನಾಹಮಭಿಸಂತಪ್ತೋ ನ ನಕ್ತಂ ನ ದಿವಾ ಶಯೇ।।

ಅಮರ್ಷದಿಂದ ಹುಟ್ಟಿದ ಸಂತಾಪವು ಉರಿಯುತ್ತಿರುವ ಪಾವಕನಿಗಿಂತಲೂ ಹೆಚ್ಚು; ಮತ್ತು ಅದರಿಂದ ಬೇಯುತ್ತಿರುವ ನನಗೆ ಹಗಲಾಗಲೀ ರಾತ್ರಿಯಾಗಲೀ ನಿದ್ದೆಯಿಲ್ಲ.

03036012a ಅಯಂ ಚ ಪಾರ್ಥೋ ಬೀಭತ್ಸುರ್ವರಿಷ್ಠೋ ಜ್ಯಾವಿಕರ್ಷಣೇ।
03036012c ಆಸ್ತೇ ಪರಮಸಂತಪ್ತೋ ನೂನಂ ಸಿಂಹ ಇವಾಶಯೇ।।

ಇಲ್ಲಿ ಬಿಲ್ಲುಗಾರಿಕೆಯಲ್ಲಿ ಪ್ರವೀಣ, ಪಾರ್ಥ ಬೀಭತ್ಸುವು ಗುಹೆಯೊಳಗಿನ ಸಿಂಹದಂತೆ ಪರಿಸಂತಪ್ತನಾಗಿದ್ದಾನೆ.

03036013a ಯೋಽಯಮೇಕೋಽಭಿಮನುತೇ ಸರ್ವಾಽಲ್ಲೋಕೇ ಧನುರ್ಭೃತಃ।
03036013c ಸೋಽಯಮಾತ್ಮಜಮೂಷ್ಮಾಣಂ ಮಹಾಹಸ್ತೀವ ಯಚ್ಚತಿ।।

ಈ ಧನುರ್ಧಾರಿಯೊಬ್ಬನೇ ಸರ್ವಲೋಕವನ್ನು ಎದುರಿಸಲು ಕಾತರಿಸುತ್ತಿದ್ದಾನೆ. ಮತ್ತು ಮಹಾ ಆನೆಯಂತೆ5 ತನ್ನಲ್ಲಿರುವ ಕೋಪವನ್ನು ತಡೆಹಿಡಿದುಕೊಳ್ಳುತ್ತಿದ್ದಾನೆ.

03036014a ನಕುಲಃ ಸಹದೇವಶ್ಚ ವೃದ್ಧಾ ಮಾತಾ ಚ ವೀರಸೂಃ।
03036014c ತವೈವ ಪ್ರಿಯಮಿಚ್ಚಂತ ಆಸತೇ ಜಡಮೂಕವತ್।।

ನಿನ್ನದೇ ಒಳಿತನ್ನು ಇಚ್ಛಿಸುವ6 ನಕುಲ, ಸಹದೇವ, ಮತ್ತು ಪ್ರೌಢ ವೀರರ ತಾಯಿ7 ಮೂಕರಂತೆ ಜಡವಾಗಿ ಕುಳಿತಿದ್ದಾರೆ.

03036015a ಸರ್ವೇ ತೇ ಪ್ರಿಯಮಿಚ್ಚಂತಿ ಬಾಂಧವಾಃ ಸಹ ಸೃಂಜಯೈಃ।
03036015c ಅಹಮೇಕೋಽಭಿಸಂತಪ್ತೋ ಮಾತಾ ಚ ಪ್ರತಿವಿಂಧ್ಯತಃ।।
03036016a ಪ್ರಿಯಮೇವ ತು ಸರ್ವೇಷಾಂ ಯದ್ಬ್ರವೀಮ್ಯುತ ಕಿಂ ಚನ।
03036016c ಸರ್ವೇ ಹೀ ವ್ಯಸನಂ ಪ್ರಾಪ್ತಾಃ ಸರ್ವೇ ಯುದ್ಧಾಭಿನಂದಿನಃ।।

ನಿನ್ನ ಎಲ್ಲ ಬಾಂಧವರೊಂದಿಗೆ ಸೃಂಜಯರು ನಿನಗೆ ಒಳ್ಳೆಯದನ್ನೇ ಬಯಸುತ್ತಾರೆ8. ನಾನು ಮತ್ತು ಪ್ರತಿವಿಂಧ್ಯನ ತಾಯಿ9 ಮಾತ್ರ ಕೋಪದಿಂದ ಸಂತಪ್ತರಾಗಿ ಮಾತನಾಡುತ್ತಿದ್ದೇವೆ10. ಆದರೂ ನಾನು ಹೇಳುವುದೆಲ್ಲ ಅವರಿಗೂ ಸರಿಯೆನಿಸುತ್ತದೆ. ಯಾಕೆಂದರೆ ಅವರೂ ಕೂಡ ವ್ಯಸನವನ್ನು ಹೊಂದಿದ್ದಾರೆ ಮತ್ತು ಎಲ್ಲರೂ ಯುದ್ಧವನ್ನು ಸ್ವಾಗತಿಸುತ್ತಾರೆ.

03036017a ನೇತಃ ಪಾಪೀಯಸೀ ಕಾ ಚಿದಾಪದ್ರಾಜನ್ಭವಿಷ್ಯತಿ।
03036017c ಯನ್ನೋ ನೀಚೈರಲ್ಪಬಲೈ ರಾಜ್ಯಮಾಚ್ಚಿದ್ಯ ಭುಜ್ಯತೇ।।

ರಾಜನ್! ನಮಗಿಂತಲೂ ನೀಚ ಮತ್ತು ಅಲ್ಪಬಲರಾದವರು ನಮ್ಮ ರಾಜ್ಯವನ್ನು ಕಸಿದುಕೊಂಡು ಭೋಗಿಸುತ್ತಿದ್ದಾರೆ ಎಂದರೆ ಇದಕ್ಕಿಂತಲೂ ದೊಡ್ಡ ಪಾಪವು ನಡೆಯಲು ಸಾಧ್ಯವಿಲ್ಲ11.

03036018a ಶೀಲದೋಷಾದ್ ಘೃಣಾವಿಷ್ಟ ಆನೃಶಂಸ್ಯಾತ್ಪರಂತಪ।
03036018c ಕ್ಲೇಶಾಂಸ್ತಿತಿಕ್ಷಸೇ ರಾಜನ್ನಾನ್ಯಃ ಕಶ್ಚಿತ್ಪ್ರಶಂಸತಿ।।

ಪರಂತಪ! ರಾಜನ್! ಶೀಲವನ್ನು ಕಳೆದುಕೊಳ್ಳುವ ಭಯದಿಂದ ಮೃದುತ್ವ-ಕೋಮಲತೆಗಳನ್ನು ಬಳಸಿ ಕಷ್ಟಗಳನ್ನು ಸಹಿಸಿಕೊಳ್ಳುತ್ತಿದ್ದರೆ ಬೇರೆ ಯಾರೂ ನಿನ್ನನ್ನು ಹೊಗಳುವುದಿಲ್ಲ.

03036019a ಘೃಣೀ ಬ್ರಾಹ್ಮಣರೂಪೋಽಸಿ ಕಥಂ ಕ್ಷತ್ರೇ ಅಜಾಯಥಾಃ।
03036019c ಅಸ್ಯಾಂ ಹಿ ಯೋನೌ ಜಾಯಂತೇ ಪ್ರಾಯಶಃ ಕ್ರೂರಬುದ್ಧಯಃ।।

ಮೃದುವಾದ ಬ್ರಾಹ್ಮಣನಂತಿರುವ ನೀನು ಕ್ಷತ್ರಿಯಕುಲದಲ್ಲಿ ಹೇಗೆ ಹುಟ್ಟಿದೆ? ಪ್ರಾಯಶಃ ಕ್ರೂರ ಬುದ್ಧಿಗಳೇ ಕ್ಷತ್ರಿಯ ಯೋನಿಯಲ್ಲಿ ಜನಿಸುತ್ತಾರೆ.

03036020a ಅಶ್ರೌಷೀಸ್ತ್ವಂ ರಾಜಧರ್ಮಾನ್ಯಥಾ ವೈ ಮನುರಬ್ರವೀತ್।
03036020c ಕ್ರೂರಾನ್ನಿಕೃತಿಸಮ್ಯುಕ್ತಾನ್ವಿಹಿತಾನಶಮಾತ್ಮಕಾನ್।।

ಮನುವು ಹೇಳಿರುವ ರಾಜಧರ್ಮವನ್ನು ನೀನು ಕೇಳಿದ್ದೀಯೆ - ಕ್ರೌರ್ಯ, ಮೋಸಗಳಿಂದ ಕೂಡಿ ವೈರಿಗಳನ್ನು ಸಂಹರಿಸಬೇಕು.

03036021a ಕರ್ತವ್ಯೇ ಪುರುಷವ್ಯಾಘ್ರ ಕಿಮಾಸ್ಸೇ ಪೀಠಸರ್ಪವತ್।
03036021c ಬುದ್ಧ್ಯಾ ವೀರ್ಯೇಣ ಸಂಯುಕ್ತಃ ಶ್ರುತೇನಾಭಿಜನೇನ ಚ।।

ಪುರುಷವ್ಯಾಘ್ರ! ಕೆಲಸ ಬಹಳಷ್ಟಿದೆ. ಆಲಸ್ಯದಿಂದ ಮಲಗಿರುವ ಹೆಬ್ಬಾವಿನಂತೆ ಏಕೆ ಇರುವೆ. ನಿನ್ನಲ್ಲಿ ಬುದ್ಧಿ, ವೀರ್ಯ, ವಿದ್ಯೆ ಮತ್ತು ಉತ್ತಮ ಕುಲವಿದೆ12.

03036022a ತೃಣಾನಾಂ ಮುಷ್ಟಿನೈಕೇನ ಹಿಮವಂತಂ ತು ಪರ್ವತಂ।
03036022c ಚನ್ನಮಿಚ್ಚಸಿ ಕೌಂತೇಯ ಯೋಽಸ್ಮಾನ್ಸಂವರ್ತುಮಿಚ್ಚಸಿ।।

ಕೌಂತೇಯ! ನಮ್ಮನ್ನು ಅಡಗಿಸಿ ಇಡಲು ನೀನು ಏನನ್ನು ಬಯಸುತ್ತಿದ್ದೀಯೋ ಅದು ಒಂದು ಮುಷ್ಟಿ ಹುಲ್ಲಿನಿಂದ ಹಿಮಾಲಯ ಪರ್ವತವನ್ನೇ ಮುಚ್ಚಿಬಿಡಲು ಪ್ರಯತ್ನಿಸುವಂತೆ!

03036023a ಅಜ್ಞಾತಚರ್ಯಾ ಗೂಢೇನ ಪೃಥಿವ್ಯಾಂ ವಿಶ್ರುತೇನ ಚ।
03036023c ದಿವೀವ ಪಾರ್ಥ ಸೂರ್ಯೇಣ ನ ಶಕ್ಯಾ ಚರಿತುಂ ತ್ವಯಾ।।

ಪಾರ್ಥ! ಸೂರ್ಯನು ಹೇಗೆ ಆಕಾಶದಲ್ಲಿ ಅಡಗಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಹಾಗೆ ಇಡೀ ಪೃಥ್ವಿಯಲ್ಲಿಯೇ ವಿಶ್ರುತನಾದ ನಿನಗೆ ಗುಪ್ತವಾಗಿ ಅಜ್ಞಾತವಾಸವನ್ನು ಮಾಡಲು ಸಾಧ್ಯವಿಲ್ಲ.

03036024a ಬೃಹಚ್ಚಾಲ ಇವಾನೂಪೇ ಶಾಖಾಪುಷ್ಪಪಲಾಶವಾನ್।
03036024c ಹಸ್ತೀ ಶ್ವೇತ ಇವಾಜ್ಞಾತಃ ಕಥಂ ಜಿಷ್ಣುಶ್ಚರಿಷ್ಯತಿ।।

ದೊಡ್ಡ ಶಾಲವೃಕ್ಷ ಮತ್ತು ಪುಷ್ಪಭರಿತ ರೆಂಬೆಗಳಿಂದ ಕೂಡಿದ ಪಲಾಶವೃಕ್ಷದಂತಿರುವ, ಬಿಳಿಯ ಆನೆಯಂತಿರುವ13 ಜಿಷ್ಣುವಾದರೂ ಅಜ್ಞಾತನಾಗಿ ಹೇಗೆ ವಾಸಿಸಬಲ್ಲನು?

03036025a ಇಮೌ ಚ ಸಿಂಹಸಂಕಾಶೌ ಭ್ರಾತರೌ ಸಹಿತೌ ಶಿಶೂ।
03036025c ನಕುಲಃ ಸಹದೇವಶ್ಚ ಕಥಂ ಪಾರ್ಥ ಚರಿಷ್ಯತಃ।।

ಪಾರ್ಥ! ಸಿಂಹಸಂಕಾಶರಾದ ಈ ಇಬ್ಬರು ಕಿರಿಯ ಸಹೋದರ ನಕುಲ-ಸಹದೇವರು ಹೇಗೆ ಅಜ್ಞಾತರಾಗಿ ಇರಬಲ್ಲರು?

03036026a ಪುಣ್ಯಕೀರ್ತೀ ರಾಜಪುತ್ರೀ ದ್ರೌಪದೀ ವೀರಸೂರಿಯಂ।
03036026c ವಿಶ್ರುತಾ ಕಥಮಜ್ಞಾತಾ ಕೃಷ್ಣಾ ಪಾರ್ಥ ಚರಿಷ್ಯತಿ।।

ಪಾರ್ಥ! ಪುಣ್ಯಕೀರ್ತಿ, ರಾಜಪುತ್ರಿ, ವೀರರ ತಾಯಿ, ಪ್ರಸಿದ್ಧ ಕೃಷ್ಣೆ ದ್ರೌಪದಿಯು ಹೇಗೆ ತಾನೇ ಯಾರಿಗೂ ತಿಳಿಯದಂತೆ ವಾಸಿಸಬಲ್ಲಳು?

03036027a ಮಾಂ ಚಾಪಿ ರಾಜಂ ಜಾನಂತಿ ಆಕುಮಾರಮಿಮಾಃ ಪ್ರಜಾಃ।
03036027c ಅಜ್ಞಾತಚರ್ಯಾಂ ಪಶ್ಯಾಮಿ ಮೇರೋರಿವ ನಿಗೂಹನಂ।।

ರಾಜನ್! ಮೇರು ಪರ್ವತದಂತೆ ಕಾಣುವ ನನ್ನನ್ನು ಅಜ್ಞಾತವಾಸದಲ್ಲಿ ಅಡಗಿ ವಾಸಿಸುವಾಗ ಮಕ್ಕಳನ್ನೂ ಸೇರಿ ಜನರು ಗುರುತಿಸಬಲ್ಲರು.

03036028a ತಥೈವ ಬಹವೋಽಸ್ಮಾಭೀ ರಾಷ್ಟ್ರೇಭ್ಯೋ ವಿಪ್ರವಾಸಿತಾಃ।
03036028c ರಾಜಾನೋ ರಾಜಪುತ್ರಾಶ್ಚ ಧೃತರಾಷ್ಟ್ರಮನುವ್ರತಾಃ।।

ಅಲ್ಲದೇ ನಾವು ಬಹಳಷ್ಟು ರಾಷ್ಟ್ರಗಳಿಂದ ರಾಜರನ್ನು ಮತ್ತು ರಾಜಪುತ್ರರನ್ನು ತೆಗೆದು ಹಾಕಿದ್ದೇವೆ. ಅವರು ಈಗ ಧೃತರಾಷ್ಟ್ರನನ್ನು ಅನುಸರಿಸುತ್ತಾರೆ.

03036029a ನ ಹಿ ತೇಽಪ್ಯುಪಶಾಮ್ಯಂತಿ ನಿಕೃತಾನಾಂ ನಿರಾಕೃತಾಃ।
03036029c ಅವಶ್ಯಂ ತೈರ್ನಿಕರ್ತವ್ಯಮಸ್ಮಾಕಂ ತತ್ಪ್ರಿಯೈಷಿಭಿಃ।।

ಪದಚ್ಯುತರಾದ ಅವರು ಅವರಿಗಾದ ಅಪಮಾನವನ್ನು ನಿಜವಾಗಿಯೂ ಇನ್ನೂ ಮರೆತಿಲ್ಲ ಮತ್ತು ಅವನಿಗೆ ಸಂತೋಷವನ್ನು ತರಲು ನಮ್ಮನ್ನು ಸದೆಬಡಿಯಲು ಪ್ರಯತ್ನಿಸುತ್ತಾರೆ.

03036030a ತೇಽಪ್ಯಸ್ಮಾಸು ಪ್ರಯುಂಜೀರನ್ಪ್ರಚ್ಚನ್ನಾನ್ಸುಬಹೂಂ ಜನಾನ್।
03036030c ಆಚಕ್ಷೀರಂಶ್ಚ ನೋ ಜ್ಞಾತ್ವಾ ತನ್ನಃ ಸ್ಯಾತ್ಸುಮಹದ್ಭಯಂ।।

ಅವರು ನಮ್ಮ ಮೇಲೆ ಬಹಳಷ್ಟು ಗೂಢಚರರನ್ನು ಬಿಡುತ್ತಾರೆ, ಅವರು ನಮ್ಮನ್ನು ಹುಡುಕಿ ಅವರಿಗೆ ನಮ್ಮ ಕುರಿತು ವರದಿ ಮಾಡುತ್ತಾರೆ. ಅದು ನಮಗೆ ಮಹಾ ಭಯವನ್ನು ತಂದೊಡ್ಡುತ್ತದೆ.

03036031a ಅಸ್ಮಾಭಿರುಷಿತಾಃ ಸಮ್ಯಗ್ವನೇ ಮಾಸಾಸ್ತ್ರಯೋದಶ।
03036031c ಪರಿಮಾಣೇನ ತಾನ್ಪಶ್ಯ ತಾವತಃ ಪರಿವತ್ಸರಾನ್।।

ನಾವು ಈಗಾಗಲೇ ಹದಿಮೂರು ತಿಂಗಳು ಪೂರ್ತಿ ವನದಲ್ಲಿ ವಾಸಿಸಿದ್ದೇವೆ. ಅವುಗಳನ್ನು ಅಷ್ಟೇ ಸಂಖ್ಯೆಯ ವರ್ಷಗಳೆಂದು ತಿಳಿ.

03036032a ಅಸ್ತಿ ಮಾಸಃ ಪ್ರತಿನಿಧಿರ್ಯಥಾ ಪ್ರಾಹುರ್ಮನೀಷಿಣಃ।
03036032c ಪೂತಿಕಾನಿವ ಸೋಮಸ್ಯ ತಥೇದಂ ಕ್ರಿಯತಾಮಿತಿ।।

ಪೂತಿಕಗಳು ಸೋಮವನ್ನು ಪ್ರತಿನಿಧಿಸುವಂತೆ ಒಂದು ತಿಂಗಳನ್ನು ಒಂದು ವರ್ಷವೆಂದು ತೆಗೆದುಕೊಳ್ಳಬಹುದು ಎಂದು ತಿಳಿದವರು ಹೇಳುತ್ತಾರೆ14.

03036033a ಅಥ ವಾನಡುಹೇ ರಾಜನ್ಸಾಧವೇ ಸಾಧುವಾಹಿನೇ।
03036033c ಸೌಹಿತ್ಯದಾನಾದೇಕಸ್ಮಾದೇನಸಃ ಪ್ರತಿಮುಚ್ಯತೇ।।

ರಾಜನ್! ಅಥವಾ ನೀನು ಒಂದು ಹೆಚ್ಚು ಭಾರವನ್ನು ಹೊತ್ತು ಹೋಗುವ ಒಳ್ಳೆಯ ಎತ್ತಿಗೆ ತೃಪ್ತಿಯಾಗುವವರೆಗೆ ತಿನ್ನಿಸುವುದರಿಂದ ಈ ಪಾಪದಿಂದ ವಿಮುಕ್ತನಾಗಬಲ್ಲೆ!15

03036034a ತಸ್ಮಾಚ್ಶತ್ರುವಧೇ ರಾಜನ್ಕ್ರಿಯತಾಂ ನಿಶ್ಚಯಸ್ತ್ವಯಾ।
03036034c ಕ್ಷತ್ರಿಯಸ್ಯ ತು ಸರ್ವಸ್ಯ ನಾನ್ಯೋ ಧರ್ಮೋಽಸ್ತಿ ಸಂಯುಗಾತ್।।

ರಾಜನ್! ಆದುದರಿಂದ ನೀನು ಶತ್ರುಗಳನ್ನು ವಧಿಸುವ ನಿರ್ಧಾರ ಮಾಡಬೇಕು. ಯಾಕೆಂದರೆ, ಎಲ್ಲ ಕ್ಷತ್ರಿಯರಿಗೆ ಯುದ್ಧಮಾಡುವುದರ ಹೊರತಾಗಿ ಬೇರೆ ಯಾವುದೂ ಧರ್ಮವಲ್ಲ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಭೀಮವಾಕ್ಯೇ ಷಟ್‌ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಭೀಮವಾಕ್ಯದಲ್ಲಿ ಮೂವತ್ತಾರನೆಯ ಅಧ್ಯಾಯವು.


  1. ಕಾಲದ ಉಡಿಯಲ್ಲಿ ಸಿಲುಕಿರುವ ನಾವು ಹದಿಮೂರು ವರ್ಷಗಳ ಪರ್ಯಂತವೂ ಜೀವಂತರಾಗಿ ಉಳೀಯುವೆವೆಂಬ ಭರವಸೆಯಾದರೂ ಎಲ್ಲಿದೆ? ↩︎

  2. ಆದುದರಿಂದ ಇಂಥಹ ಅಪಯಶಸ್ಸಿಗೆ ಎಡೆಕೊಡಬೇಡ. ↩︎

  3. ಸಂಗ್ರಾಮದಲ್ಲಿ ಶತ್ರುಗಳನ್ನು ಸಂಹರಿಸಿ ನಿನ್ನ ಕೈಗಳು ಹಿರಣ್ಮಯವಾಗುವಂತೆ ಮಾಡಿಕೋ. ಕನಕಾಂಗದ ಕೇಯೂರಗಳಿಂದ ನಿನ್ನ ಕೈಗಳು ಅಲಂಕೃತವಾಗುತ್ತವೆ. ಅಥವಾ ದಾನ ನೀಡಲು ಸದಾ ನಿನ್ನ ಕೈಯಲ್ಲಿ ಹಿರಣ್ಯವಿರುತ್ತದೆ. ಕೀರ್ತಿವಂತನಾಗುತ್ತೀಯೆ. ↩︎

  4. ‘ಧರ್ಮ! ದರ್ಮ!’ಎಂದು ಹೇಳಿಕೊಂಡು ಅವಸಾನಕಾಲದ ವರೆಗೂ ಕಾಡಿನಲ್ಲಿ ಕಷ್ಟವನ್ನನುಭವಿಸಿ ಅನಂತರ ಧರ್ಮಮೂಲವಾಗಿ ಪ್ರಾಪ್ತವಾಗುವ ಸ್ವರ್ಗಕ್ಕಿಂತಲೂ ನಮ್ಮನ್ನು ವಂಚಿಸಿದ ಶತ್ರುಗಳನ್ನು ರಣರಂಗದಲ್ಲಿ ಈಗಲೇ ಸಂಹರಿಸಿ ಪ್ರತಿಜ್ಞಾ ಭಂಗದಿಂದ ಪ್ರಾಪ್ತವಾಗುವ ನರಕವೇ ಲೇಸು ಎಂದು ನನ್ನ ಅಭಿಪ್ರಾಯ. ↩︎

  5. ಮದಿಸಿದ ಆನೆಯು ಬಿಸಿಲಿನ ತಾಪವನ್ನು ಅತಿಕಷ್ಟದಿಂದ ತಡೆದುಕೊಳ್ಳುವಂತೆ ↩︎

  6. ಆದರೆ ಈ ವನವಾಸವನ್ನು ಸಹಿಸದ ↩︎

  7. ಕುಂತಿ . ↩︎

  8. ನಮ್ಮ ಬಂಧು-ಮಿತ್ರರೂ ಸೃಂಜಯರೂ ನಿನಗೆ ಬೇಸರ ಮಾಡಬಾರದೆಂಬ ಭಾವನೆಯಿಂದ ನಿನ್ನ ಅಭಿಪ್ರಾಯಕ್ಕೆ ವಿರೋಧವಾಗಿ ಮಾತನಾಡುತ್ತಿಲ್ಲವೇ ಹೊರತು ಅವರು ನಿನ್ನ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತಿದ್ದಾರೆಂದು ತಿಳಿಯಬೇಡ! ↩︎

  9. ದ್ರೌಪದಿ . ↩︎

  10. ನಮ್ಮಿಬ್ಬರ ಹೃದಯವೇದನೆಯನ್ನು ನಿರೋಧಿಸಲು ಸಾಧ್ಯವಾಗದೇ ನಮ್ಮ ಅಭಿಪ್ರಾಯವನ್ನು ನಿನಗೆ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ನಾವಿಬ್ಬರೂ ಹೇಳಿರುವ ಮಾತುಗಳಿಗೆ ಎಲ್ಲರ ಒಪ್ಪಿಗೆಯೋ ಇದೆ. ಏಕೆಂದರೆ ಎಲ್ಲರೂ ದುಃಖದಲ್ಲಿ ನಿಮಗ್ನರಾಗಿದ್ದಾರೆ ಮತ್ತು ಯುದ್ಧಾಕಾಂಕ್ಷಿಗಳಾಗಿದ್ದಾರೆ. ↩︎

  11. ಇದಕ್ಕಿಂತಲೂ ಹೆಚ್ಚಿನ ದುರ್ಗತಿಯನ್ನು ನಾವು ಇನ್ನೂ ಅನುಭವಿಸಬೇಕೆ? ↩︎

  12. ನೀನು ಬಲಶಾಲಿ, ಬುದ್ಧಿಶಾಲಿ, ಶಾಸ್ತ್ರಗಳನ್ನು ಅಧ್ಯಯನ ಮಾಡಿರುವೆ, ಮತ್ತು ಒಳ್ಳೆಯ ವಂಶದಲ್ಲಿ ಜನ್ಮತಾಳಿರುವೆ. ಇಷ್ಟಿದ್ದರೂ ವಿಷವಿಲ್ಲದ ಸರ್ಪದಂತೆ ಅಥವಾ ಸಿಂಹಾಸನದಲ್ಲಿ ಕೆತ್ತಿರುವ ಹಾವಿನಂತೆ ಪೌರುಷವಿಲ್ಲದವನಾಗಿರುವೆ. ಕರ್ತ್ಯವ್ಯ ಪರಿಪಾಲನೆಯಲ್ಲಿ ವಿಮುಖನಾಗಿರುವೆ. ↩︎

  13. ಇಂದ್ರನ ಐರಾವತವೆಂಬ ಬಿಳಿಯ ಆನೆಯನ್ನು ಯಾರಿಗೂ ಕಾಣದಂತೆ ಮುಚ್ಚಿಡಲು ಸಾಧ್ಯವೇ? ↩︎

  14. ಆಪತ್ಕಾಲದಲ್ಲಿ ಮಾಸಗಳನ್ನೇ ವರ್ಷಗಳನ್ನಾಗಿ ಪರಿಗಣಿಸಬಹುದೆಂದು ಧರ್ಮಜ್ಞರು ಹೇಳುತ್ತಾರೆ. ಯೋ ಮಾಸಃ ಸ ಸಂವತ್ಸರಃ ಎಂದು ಶ್ರುತಿಗಳೂ ಹೇಳುತ್ತವೆ. ಯಾಗಗಳಲ್ಲಿಯೂ ಸೋಮಲತೆಯು ಸಿಕ್ಕದಿದ್ದರೆ ಅದಕ್ಕೆ ಬದಲಾಗಿ ಪೂತಿಕಾ ಎಂಬ ಲತೆಯನ್ನು ಉಪಯೋಗಿಸುತ್ತಾರೆ. ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಆಪದ್ಧರ್ಮವೆಂಬ ಪ್ರತಿನಿಯಮವು ಇದ್ದೇ ಇರುವುದು. ಅದನ್ನು ಋಷಿ-ಮಹರ್ಷಿಗಳೂ ಒಪ್ಪುತ್ತಾರೆ. ಆದುದರಿಂದ ಹದಿಮೂರು ತಿಂಗಳುಗಳನ್ನೇ ಹದಿಮೂರು ವರ್ಷಗಳೆಂದು ತಿಳಿದು ಕಾರ್ಯಪರರಾಗೋಣ! ↩︎

  15. ಇಷ್ಟಾದರೂ ನಿನಗೆ ಸತ್ಯಭ್ರಷ್ಟನಾಗುವೆನೆಂಬ ಮನಃಕ್ಲೇಶವಿರುವುದಾದರೆ ಅನಡುಹೇ ಪೂರ್ಣಂ ಘಾಸಮುಪಾಹೃತ್ಯಾನೃತಾನ್ಮುಚ್ಯತೆ ಎಂಬ ಧರ್ಮಶಾಸ್ತ್ರೋಕ್ತಿಯಂತೆ ಸಾಧು ಸತ್ಪುರುಷರನ್ನು ಹೊರುವ ಎತ್ತುಗಳಿಗೆ ಹುಲ್ಲು-ನೀರು ಕೊಟ್ಟು ಪಾಪವಿಮೋಚನೆಯನ್ನು ಮಾಡಕೊಳ್ಳಬಹುದು. ಆದುದರಿಂದ ಶತ್ರು ಸಂಹಾರಕ್ಕೆ ಇಂದೇ ಸಂಕಲ್ಪಿಸು! ↩︎