035 ಯುಧಿಷ್ಠಿರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 35

ಸಾರ

ಭೀಮನ ಮಾತಿಗೆ ಬೇಸತ್ತು, ದುಃಖಿತಾಗಿ ಯುಧಿಷ್ಠಿರನು ತಾನು ಧೃತರಾಷ್ಟ್ರನ ಮಕ್ಕಳಿಂದ ರಾಜ್ಯವನ್ನು ಪಡೆಯುವ ಇಚ್ಛೆಯಿಂದ ಜೂಜಿನ ದಾಳಗಳನ್ನು ಹಿಡಿದನೆಂದು ಮತ್ತು ಶಕುನಿಯ ಮೇಲಿನ ಕೋಪದಿಂದಲೇ ಜೂಜನ್ನು ಮುಂದುವರೆಸಿದುದೆಂದು ಹೇಳುವುದು (1-6). ಪುನಃ ದ್ಯೂತಕ್ಕೆ ಬಂದಾಗ ಮಾಡಿಕೊಂಡ ಒಪ್ಪಂದವನ್ನು ಈಗ ಹೇಗೆ ಮುರಿಯಬಹುದು ಎಂದು ಪ್ರಶ್ನಿಸುವುದು (7-14). ಒಪ್ಪಂದವನ್ನು ಮಾಡಿಕೊಳ್ಳುವ ಮೊದಲೇ ನೀನು ಈ ಪೌರುಷದ ಮಾತನ್ನು ಏಕೆ ಆಡಲಿಲ್ಲ, ನನ್ನ ಕೈಗಳನ್ನು ಏಕೆ ಸುಡಲಿಲ್ಲವೆಂದು ಬೀಮನನ್ನು ಕೇಳುವುದು (15-16). ಕಾಲಕ್ಕೆ ಕಾಯಬೇಕೆಂದು ಹೇಳುವುದು (17-21).

03035001 ಯುಧಿಷ್ಠಿರ ಉವಾಚ।
03035001a ಅಸಂಶಯಂ ಭಾರತ ಸತ್ಯಮೇತದ್ । ಯನ್ಮಾ ತುದನ್ವಾಕ್ಯಶಲ್ಯೈಃ ಕ್ಷಿಣೋಷಿ।।
03035001c ನ ತ್ವಾ ವಿಗರ್ಹೇ ಪ್ರತಿಕೂಲಮೇತನ್ । ಮಮಾನಯಾದ್ಧಿ ವ್ಯಸನಂ ವ ಆಗಾತ್।।

ಯುಧಿಷ್ಠಿರನು ಹೇಳಿದನು: “ಭಾರತ! ನಿನ್ನ ಮಾತುಗಳು ನನ್ನನ್ನು ಚುಚ್ಚುತ್ತಿವೆ ಮತ್ತು ಕಾಡುತ್ತಿವೆ ಎನ್ನುವುದು ನಿಸ್ಸಂಶಯವಾಗಿಯು ಸತ್ಯ. ನಿನ್ನ ಕಡುಮಾತುಗಳಿಗೆ ನಾನು ನಿನ್ನನ್ನು ಜವಾಬ್ಧಾರನೆಂದು ತಿಳಿಯುವುದಿಲ್ಲ ಯಾಕೆಂದರೆ ನನ್ನ ತಪ್ಪಿನಿಂದಾಗಿಯೇ ನಿನಗೆ ಈ ವ್ಯಸನವು ಬಂದಿರುವುದು.

03035002a ಅಹಂ ಹ್ಯಕ್ಷಾನನ್ವಪದ್ಯಂ ಜಿಹೀರ್ಷನ್ । ರಾಜ್ಯಂ ಸರಾಷ್ಟ್ರಂ ಧೃತರಾಷ್ಟ್ರಸ್ಯ ಪುತ್ರಾತ್।।
03035002c ತನ್ಮಾ ಶಠಃ ಕಿತವಃ ಪ್ರತ್ಯದೇವೀತ್ । ಸುಯೋಧನಾರ್ಥಂ ಸುಬಲಸ್ಯ ಪುತ್ರಃ।।

ನಾನು ಧೃತರಾಷ್ಟ್ರನ ಮಕ್ಕಳಿಂದ ರಾಜ್ಯ ಮತ್ತು ರಾಷ್ಟ್ರವನ್ನು ಪಡೆಯುವ ಇಚ್ಛೆಯಿಂದ ಜೂಜಿನ ದಾಳಗಳನ್ನು ಹಿಡಿದೆ. ಆದರೆ ಸುಬಲನ ಮಗ ಶಕುನಿಯು ಸುಯೋಧನನ ಪರವಾಗಿ ನನ್ನ ಎದುರಾಳಿಯಾಗಿ ಆಡಿ ಮೋಸಮಾಡಿದನು.

03035003a ಮಹಾಮಾಯಃ ಶಕುನಿಃ ಪಾರ್ವತೀಯಃ । ಸದಾ ಸಭಾಯಾಂ ಪ್ರವಪನ್ನಕ್ಷಪೂಗಾನ್।।
03035003c ಅಮಾಯಿನಂ ಮಾಯಯಾ ಪ್ರತ್ಯದೇವೀತ್ । ತತೋಽಪಶ್ಯಂ ವೃಜಿನಂ ಭೀಮಸೇನ।।

ಆ ಮಹಾಮಾಯಿ, ಪರ್ವತಪ್ರದೇಶದಲ್ಲಿ ವಾಸಿಸುವ ಶಕುನಿಯು ಸಭೆಯಲ್ಲಿ ಜೂಜಿನ ದಾಳಗಳನ್ನು ಎಸೆದು ಮಾಯೆಯನ್ನೇ ತಿಳಿಯದ ನನ್ನೊಡನೆ ಮಾಯೆಯನ್ನು ಬಳಸಿದನು. ಭೀಮಸೇನ! ಆಗ ನಾನು ಅವನ ಕಪಟತನವನ್ನು ಕಂಡು ಕುಪಿತನಾದೆ.

03035004a ಅಕ್ಷಾನ್ ಹಿ ದೃಷ್ಟ್ವಾ ಶಕುನೇರ್ಯಥಾವತ್ । ಕಾಮಾನುಲೋಮಾನಯುಜೋ ಯುಜಶ್ಚ।।
03035004c ಶಕ್ಯಂ ನಿಯಂತುಮಭವಿಷ್ಯದಾತ್ಮಾ । ಮನ್ಯುಸ್ತು ಹಂತಿ ಪುರುಷಸ್ಯ ಧೈರ್ಯಂ।।

ಸರಿಯಿರಲಿ, ಬೆಸೆಯಿರಲಿ ದಾಳಗಳು ಶಕುನಿಯು ಬಯಸಿದಂತೆ ಬೀಳುತ್ತಿವೆ ಎಂದು ನೋಡಿದಾಗಲಾದರೂ ನಾನು ನನ್ನನ್ನು ನಿಯಂತ್ರಿಸಿಕೊಳ್ಳಬಹುದಾಗಿತ್ತು. ಆದರೆ ಕೋಪವು ಮನುಷ್ಯನ ಆಲೋಚನೆಯನ್ನು ಕೊಲ್ಲುತ್ತದೆ.

03035005a ಯಂತುಂ ನಾತ್ಮಾ ಶಕ್ಯತೇ ಪೌರುಷೇಣ । ಮಾನೇನ ವೀರ್ಯೇಣ ಚ ತಾತ ನದ್ಧಃ।।
03035005c ನ ತೇ ವಾಚಂ ಭೀಮಸೇನಾಭ್ಯಸೂಯೇ । ಮನ್ಯೇ ತಥಾ ತದ್ಭವಿತವ್ಯಮಾಸೀತ್।।

ತಮ್ಮ! ಪೌರುಷ, ಮಾನ ಮತ್ತು ವೀರ್ಯವು ಕಡೆಯುತ್ತಿರುವಾಗ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಭೀಮಸೇನ! ನಿನ್ನ ಮಾತುಗಳನ್ನು ನಾನು ಅಲ್ಲಗಳೆಯುವುದಿಲ್ಲ. ಅದು ಹಾಗೆಯೇ ಆಗಬೇಕೆಂದಿದ್ದಿತು ಎಂದು ತಿಳಿಯುತ್ತೇನೆ.

03035006a ಸ ನೋ ರಾಜಾ ಧೃತರಾಷ್ಟ್ರಸ್ಯ ಪುತ್ರೋ । ನ್ಯಪಾತಯದ್ವ್ಯಸನೇ ರಾಜ್ಯಮಿಚ್ಚನ್।।
03035006c ದಾಸ್ಯಂ ಚ ನೋಽಗಮಯದ್ಭೀಮಸೇನ । ಯತ್ರಾಭವಚ್ಶರಣಂ ದ್ರೌಪದೀ ನಃ।।

ರಾಜ ಧೃತರಾಷ್ಟ್ರನ ಮಗನು ನಮ್ಮಿಂದ ರಾಜ್ಯವನ್ನು ಕಸಿದುಕೊಳ್ಳುವ ಹಠ ಮಾಡಿದ್ದುದರಿಂದ ನಮಗೆ ಈ ಕಷ್ಟವು ಬಂದೊದಗಿದೆ. ಭೀಮಸೇನ! ಅದರಿಂದ ದ್ರೌಪದಿಯು ನಮ್ಮನ್ನು ಪಾರುಮಾಡುವ ವರೆಗೆ ನಮಗೆ ದಾಸತ್ವವು ಬಂದಿತು.

03035007a ತ್ವಂ ಚಾಪಿ ತದ್ವೇತ್ಥ ಧನಂಜಯಶ್ಚ । ಪುನರ್ದ್ಯೂತಾಯಾಗತಾನಾಂ ಸಭಾಂ ನಃ।।
03035007c ಯನ್ಮಾಬ್ರವೀದ್ಧೃತರಾಷ್ಟ್ರಸ್ಯ ಪುತ್ರ । ಏಕಗ್ಲಹಾರ್ಥಂ ಭರತಾನಾಂ ಸಮಕ್ಷಂ।।

ನಾವು ಪುನಃ ದ್ಯೂತಕ್ಕೆ ಸಭೆಗೆ ಬಂದಾಗ ಧೃತರಾಷ್ಟನ ಮಗನು ನನಗೆ ಏನು ಹೇಳಿದ ಎನ್ನುವುದನ್ನು ನೀನು ಮತ್ತು ಧನಂಜಯ ಇಬ್ಬರೂ ತಿಳಿದಿದ್ದೀರಿ. ಮತ್ತು ದಾಳದ ಒಂದು ಎಸೆತಕ್ಕೆ ಪಣವಾಗಿ ಏನನ್ನು ಇಡಬೇಕು ಎನ್ನುವುದನ್ನು ಅಲ್ಲಿ ಸೇರಿದ್ದ ಭಾರತರೂ ಕೇಳಿಸಿಕೊಂಡರು.

03035008a ವನೇ ಸಮಾ ದ್ವಾದಶ ರಾಜಪುತ್ರ । ಯಥಾಕಾಮಂ ವಿದಿತಮಜಾತಶತ್ರೋ।।
03035008c ಅಥಾಪರಂ ಚಾವಿದಿತಂ ಚರೇಥಾಃ । ಸರ್ವೈಃ ಸಹ ಭ್ರಾತೃಭಿಶ್ಚದ್ಮಗೂಢಃ।।

“ಅಜಾತಶತ್ರು! ರಾಜಪುತ್ರ! ಹನ್ನೆರಡು ವರ್ಷಗಳು ನಿನಗಿಷ್ಟಬಂದಹಾಗೆ ವನದಲ್ಲಿ ಎಲ್ಲರಿಗೂ ತಿಳಿಯುವ ರೀತಿಯಲ್ಲಿ ವಾಸಿಸುತ್ತೀಯೆ. ಅದರ ನಂತರ ಒಂದು ವರ್ಷ ಯಾರಿಗೂ ತಿಳಿಯದಂತೆ ಗೂಢವಾಗಿ ಮರೆಮಾಡಿಕೊಂಡು ಎಲ್ಲ ಸಹೋದರರೊಂದಿಗೆ ವಾಸಿಸುತ್ತೀಯೆ.

03035009a ತ್ವಾಂ ಚೇಚ್ಛ್ರುತ್ವಾ ತಾತ ತಥಾ ಚರಂತಂ । ಅವಭೋತ್ಸ್ಯಂತೇ ಭಾರತಾನಾಂ ಚರಾಃ ಸ್ಮ।।
03035009c ಅನ್ಯಾಂಶ್ಚರೇಥಾಸ್ತಾವತೋಽಬ್ದಾಂಸ್ತತಸ್ತ್ವಂ । ನಿಶ್ಚಿತ್ಯ ತತ್ಪ್ರತಿಜಾನೀಹಿ ಪಾರ್ಥ।।

ನೀನು ಹೀಗೆ ವಾಸಿಸುತ್ತಿರುವಾಗ ಆ ವರ್ಷದಲ್ಲಿ ಭಾರತರ ಗೂಢಚಾರರು ನಿನ್ನ ಕುರಿತು ಕೇಳಿದರೆ ಮತ್ತು ಗುರುತಿಸಿದರೆ ನೀನು ಅಷ್ಟೇ ವರ್ಷಗಳು ಪುನಃ ಅದೇ ರೀತಿಯಲ್ಲಿ ವಾಸಿಸುತ್ತೀಯೆ. ಪಾರ್ಥ! ನಿಶ್ಚಯವಾಗಿ ಈ ರೀತಿ ಭರವಸೆಯನ್ನು ನೀಡು.

03035010a ಚರೈಶ್ಚೇನ್ನೋಽವಿದಿತಃ ಕಾಲಮೇತಂ । ಯುಕ್ತೋ ರಾಜನ್ಮೋಹಯಿತ್ವಾ ಮದೀಯಾನ್।।
03035010c ಬ್ರವೀಮಿ ಸತ್ಯಂ ಕುರುಸಂಸದೀಹ । ತವೈವ ತಾ ಭಾರತ ಪಂಚ ನದ್ಯಃ।।

ರಾಜನ್! ಭಾರತ! ಆ ಸಮಯದಲ್ಲಿ ನಿನ್ನನ್ನು ಹುಡುಕಲಿಕ್ಕಾಗದಿದ್ದರೆ ಮತ್ತು ನಮ್ಮವರನ್ನು ನೀನು ಮೋಸಮಾಡಿದರೆ, ಈ ಕುರುಸಂಸದಿಯಲ್ಲಿ ಸತ್ಯವನ್ನು ಹೇಳುತ್ತಿದ್ದೇನೆ ಈ ಐದುನದಿಗಳು ನಿನ್ನದಾಗುತ್ತವೆ.

03035011a ವಯಂ ಚೈವಂ ಭ್ರಾತರಃ ಸರ್ವ ಏವ । ತ್ವಯಾ ಜಿತಾಃ ಕಾಲಮಪಾಸ್ಯ ಭೋಗಾನ್।।
03035011c ವಸೇಮ ಇತ್ಯಾಹ ಪುರಾ ಸ ರಾಜಾ । ಮಧ್ಯೇ ಕುರೂಣಾಂ ಸ ಮಯೋಕ್ತಸ್ತಥೇತಿ।।

ನಿನ್ನಿಂದ ನಾವು ಸೋಲಿಸಲ್ಪಟ್ಟರೆ, ನಾವೂ ಕೂಡ, ಎಲ್ಲ ಸಹೋದರರೂ, ಭೋಗಗಳನ್ನು ತೊರೆದು ಅಷ್ಟೊಂದು ಸಮಯ ಪುರದ ಹೊರಗೆ ವಾಸಿಸುತ್ತೇವೆ.” ಹೀಗೆಂದು ರಾಜನು ಕುರುಗಳ ಮಧ್ಯದಲ್ಲಿ ಹೇಳಿದಾಗ ನಾನು “ಹಾಗೆಯೇ ಆಗಲಿ!” ಎಂದಿದ್ದೆ.

03035012a ತತ್ರ ದ್ಯೂತಮಭವನ್ನೋ ಜಘನ್ಯಂ । ತಸ್ಮಿಂ ಜಿತಾಃ ಪ್ರವ್ರಜಿತಾಶ್ಚ ಸರ್ವೇ।।
03035012c ಇತ್ಥಂ ಚ ದೇಶಾನನುಸಂಚರಾಮೋ । ವನಾನಿ ಕೃಚ್ಚ್ರಾಣಿ ಚ ಕೃಚ್ಚ್ರರೂಪಾಃ।।

ಅಲ್ಲಿ ಆಗ ಅತ್ಯಂತ ಮೋಸದ ಆಟವು ಆರಂಭವಾಯಿತು. ನಾವು ಸೋತೆವು ಮತ್ತು ನಾವೆಲ್ಲರೂ ಕಾಡಿಗೆ ಹೊರಟೆವು. ಈಗ ನಾವು ಕೃಚ್ಛರಾಗಿ ಕೃಚ್ಛರೂಪದಲ್ಲಿ ವನ-ದೇಶಗಳಲ್ಲಿ ಸುತ್ತಾಡುತ್ತಿದ್ದೇವೆ.

03035013a ಸುಯೋಧನಶ್ಚಾಪಿ ನ ಶಾಂತಿಮಿಚ್ಚನ್ । ಭೂಯಃ ಸ ಮನ್ಯೋರ್ವಶಮನ್ವಗಚ್ಚತ್।।
03035013c ಉದ್ಯೋಜಯಾಮಾಸ ಕುರೂಂಶ್ಚ ಸರ್ವಾನ್ । ಯೇ ಚಾಸ್ಯ ಕೇ ಚಿದ್ವಶಮನ್ವಗಚ್ಚನ್।।

ಸುಯೋಧನನೂ ಶಾಂತಿಯನ್ನು ಬಯಸುತ್ತಿಲ್ಲ. ಅವನು ತನ್ನ ಸಿಟ್ಟಿಗೆ ಸಿಲುಕಿ ತುಂಬಾ ತಪ್ಪನ್ನು ಮಾಡುತ್ತಾನೆ. ಅವನು ಸರ್ವ ಕುರುಗಳನ್ನೂ ತನ್ನವರನ್ನಾಗಿ ಮಾಡಿಕೊಂಡಿದ್ದಾನೆ ಮತ್ತು ಅವನ ವಶದಲ್ಲಿರುವವರು ಅವನನ್ನೇ ಅನುಸರಿಸುತ್ತಾರೆ.

03035014a ತಂ ಸಂಧಿಮಾಸ್ಥಾಯ ಸತಾಂ ಸಕಾಶೇ । ಕೋ ನಾಮ ಜಹ್ಯಾದಿಹ ರಾಜ್ಯಹೇತೋಃ।।
03035014c ಆರ್ಯಸ್ಯ ಮನ್ಯೇ ಮರಣಾದ್ಗರೀಯೋ । ಯದ್ಧರ್ಮಮುತ್ಕ್ರಮ್ಯ ಮಹೀಂ ಪ್ರಶಿಷ್ಯಾತ್।।

ಸತ್ಯವಂತರ ಸಮ್ಮುಖದಲ್ಲಿ ಒಪ್ಪಿಕೊಂಡ ಒಪ್ಪಂದವನ್ನು ರಾಜ್ಯಕ್ಕೋಸ್ಕರ ಯಾರುತಾನೇ ಮುರಿಯುತ್ತಾರೆ? ಧರ್ಮವನ್ನು ಉಪಕ್ರಮಿಸಿ ಭೂಮಿಯನ್ನು ಆಳುವುದು ಆರ್ಯರಿಗೆ ಮರಣಕ್ಕಿಂತ ಹೆಚ್ಚಿನದು ಎಂದು ತಿಳಿದಿದ್ದೇನೆ.

03035015a ತದೈವ ಚೇದ್ವೀರಕರ್ಮಾಕರಿಷ್ಯೋ । ಯದಾ ದ್ಯೂತೇ ಪರಿಘಂ ಪರ್ಯಮೃಕ್ಷಃ।।
03035015c ಬಾಹೂ ದಿಧಕ್ಷನ್ವಾರಿತಃ ಫಲ್ಗುನೇನ । ಕಿಂ ದುಷ್ಕೃತಂ ಭೀಮ ತದಾಭವಿಷ್ಯತ್।

ದ್ಯೂತದ ಸಮಯದಲ್ಲಿ ನೀನು ಒಂದು ವೀರಕರ್ಮವನ್ನೇ ಮಾಡಲು ಮುಂದಾಗಿದ್ದೆ. ಪರಿಘೋಪಮವಾದ ನಿನ್ನ ಬಾಹುಗಳನ್ನು ಮುಟ್ಟಿಕೊಂಡು ನನ್ನ ಕೈಗಳನ್ನು ಸುಡಲು ನಿಶ್ಚಯಿಸಿದ್ದೆ. ಅರ್ಜುನನು ತಡೆದಿದ್ದುದರಿಂದ ನನ್ನ ಕೈಗಳನ್ನು ಸುಡಲಿಲ್ಲ. ಭೀಮ! ನೀನು ನನ್ನ ಕೈಗಳನ್ನು ಸುಟ್ಟಿದ್ದರೆ ಯಾವ ದುಷ್ಕೃತವಾಗುತ್ತಿತ್ತು?

03035016a ಪ್ರಾಗೇವ ಚೈವಂ ಸಮಯಕ್ರಿಯಾಯಾಃ ।। ಕಿಂ ನಾಬ್ರವೀಃ ಪೌರುಷಮಾವಿದಾನಃ।
03035016c ಪ್ರಾಪ್ತಂ ತು ಕಾಲಂ ತ್ವಭಿಪದ್ಯ ಪಶ್ಚಾತ್ ।। ಕಿಂ ಮಾಮಿದಾನೀಮತಿವೇಲಮಾತ್ಥ।।

ಒಪ್ಪಂದವನ್ನು ಮಾಡಿಕೊಳ್ಳುವ ಮೊದಲೇ ನೀನು ಈ ರೀತಿಯ ಪೌರುಷದ ಮಾತನ್ನು ಏಕೆ ಹೇಳಲಿಲ್ಲ? ಈಗ ನಿನಗೆ ಇದಕ್ಕೆ ಸಮಯ ದೊರಕಿದೆ. ಆದರೆ ತುಂಬಾ ತಡವಾಯಿತು. ನಿನ್ನ ಸಮಯವನ್ನು ಕಳೆದುಕೊಂಡ ನೀನು ಈಗ ನನ್ನನ್ನು ನಿಂದಿಸುತ್ತಿದ್ದೀಯಾ?

03035017a ಭೂಯೋಽಪಿ ದುಃಖಂ ಮಮ ಭೀಮಸೇನ । ದೂಯೇ ವಿಷಸ್ಯೇವ ರಸಂ ವಿದಿತ್ವಾ।।
03035017c ಯದ್ಯಾಜ್ಞಸೇನೀಂ ಪರಿಕೃಷ್ಯಮಾಣಾಂ । ಸಂದೃಶ್ಯ ತತ್ ಕ್ಷಾಂತಮಿತಿ ಸ್ಮ ಭೀಮ।।

ಭೀಮಸೇನ! ವಿಷದ ರುಚಿಯನ್ನು ತಿಳಿದ ನಾವೆಲ್ಲರೂ ನೋಡುತ್ತಿರುವಾಗಲೇ ಯಾಜ್ಞಸೇನಿಯನ್ನು ಎಳೆದಾಡಿದರು ಮತ್ತು ಅದನ್ನು ನೋಡಿಯೂ ನಾವು ಶಾಂತರಾಗಿದ್ದೆವು ಎನ್ನುವುದೇ ನನಗೆ ಅತ್ಯಂತ ದುಃಖವನ್ನು ನೀಡುತ್ತಿದೆ.

03035018a ನ ತ್ವದ್ಯ ಶಕ್ಯಂ ಭರತಪ್ರವೀರ । ಕೃತ್ವಾ ಯದುಕ್ತಂ ಕುರುವೀರಮಧ್ಯೇ।।
03035018c ಕಾಲಂ ಪ್ರತೀಕ್ಷಸ್ವ ಸುಖೋದಯಸ್ಯ । ಪಕ್ತಿಂ ಫಲಾನಾಮಿವ ಬೀಜವಾಪಃ।।

ಭರತಪ್ರವೀರ! ಇಂದು ನಾವು ಏನು ಮಾಡಲೂ ಶಕ್ಯರಿಲ್ಲ. ಬೀಜಬಿತ್ತಿದವನು ಬೆಳೆಗೆ ಹೇಗೆ ಕಾಯುತ್ತಾನೋ ಹಾಗೆ ಕುರುವೀರರ ಮಧ್ಯದಲ್ಲಿ ಹೇಳಿದಂತೆ ಮಾಡಿ ನಾವು ಸುಖೋದಯದ ಕಾಲವನ್ನು ಪ್ರತೀಕ್ಷಿಸೋಣ.

03035019a ಯದಾ ಹಿ ಪೂರ್ವಂ ನಿಕೃತೋ ನಿಕೃತ್ಯಾ । ವೈರಂ ಸಪುಷ್ಪಂ ಸಫಲಂ ವಿದಿತ್ವಾ।।
03035019c ಮಹಾಗುಣಂ ಹರತಿ ಹಿ ಪೌರುಷೇಣ । ತದಾ ವೀರೋ ಜೀವತಿ ಜೀವಲೋಕೇ।।

ಹಿಂದೆ ಶತ್ರುವಿನ ವಂಚನೆಯಿಂದ ವಂಚಿತನಾದ ವೀರನು ವೈರಿಯು ಪುಷ್ಪ-ಫಲಗಳಿಂದ ಕೂಡಿರುವನೆಂಬುದನ್ನು ಅರಿತು, ಸಮಯವನ್ನು ತಿಳಿದು ಶತ್ರುವಿನ ಮಹಾಗುಣವನ್ನು ಪೌರುಷದಿಂದ ಯಾವಾಗ ಅಪಹರಿಸುವನೋ ಆಗಲೇ ಆ ವೀರನು ಪ್ರಪಂಚದಲ್ಲಿ ಕೀರ್ತಿವಂತನಾಗಿ ಬಾಳುತ್ತಾನೆ.

03035020a ಶ್ರಿಯಂ ಚ ಲೋಕೇ ಲಭತೇ ಸಮಗ್ರಾಂ । ಮನ್ಯೇ ಚಾಸ್ಮೈ ಶತ್ರವಃ ಸಮ್ನಮಂತೇ।।
03035020c ಮಿತ್ರಾಣಿ ಚೈನಮತಿರಾಗಾದ್ಭಜಂತೇ । ದೇವಾ ಇವೇಂದ್ರಮನುಜೀವಂತಿ ಚೈನಂ।।

ಅವನು ಲೋಕದಲ್ಲಿರುವ ಸಮಗ್ರ ಸಂಪತ್ತನ್ನೂ ಪಡೆಯುತ್ತಾನೆ ಮತ್ತು ಅವನ ಶತ್ರುಗಳೇ ಅವನನ್ನು ಗೌರವಿಸುತ್ತಾರೆ. ಅವನ ಮಿತ್ರರು ಅವನನ್ನು ಅಧಿಕವಾಗಿ ಪ್ರೀತಿಸುತ್ತಾರೆ ಮತ್ತು ದೇವತೆಗಳು ಇಂದ್ರನ ಸೇವೆಯನ್ನು ಹೇಗೆ ಮಾಡುತ್ತಾರೋ ಹಾಗೆ ಅನುಸರಿಸಿಕೊಂಡಿರುತ್ತಾರೆ.

03035021a ಮಮ ಪ್ರತಿಜ್ಞಾಂ ಚ ನಿಬೋಧ ಸತ್ಯಾಂ । ವೃಣೇ ಧರ್ಮಂ ಅಮೃತಾಜ್ಜೀವಿತಾಚ್ಚ।।
03035021c ರಾಜ್ಯಂ ಚ ಪುತ್ರಾಶ್ಚ ಯಶೋ ಧನಂ ಚ । ಸರ್ವಂ ನ ಸತ್ಯಸ್ಯ ಕಲಾಮುಪೈತಿ।।

ನನ್ನ ಪ್ರತಿಜ್ಞೆಯು ಸತ್ಯವಾದುದೆಂದು ತಿಳಿ. ಜೀವನ ಮತ್ತು ಅಮೃತತ್ವಕ್ಕೆ ಬದಲಾಗಿ ಧರ್ಮವನ್ನು ಆರಿಸಿಕೊಂಡಿದ್ದೇನೆ. ರಾಜ್ಯವಾಗಲೀ, ಪುತ್ರರಾಗಲೀ, ಯಶಸ್ಸಾಗಲೀ, ಧನವಾಗಲೀ ಎಲ್ಲವೂ ಸೇರಿಯೂ ಸತ್ಯದ ಒಂದಂಶಕ್ಕೂ ಸಮನಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಯುಧಿಷ್ಠಿರವಾಕ್ಯೇ ಪಂಚತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಯುಧಿಷ್ಠಿರವಾಕ್ಯದಲ್ಲಿ ಮೂವತ್ತೈದನೆಯ ಅಧ್ಯಾಯವು.