034 ಭೀಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 34

ಸಾರ

ರಾಜಧರ್ಮವನ್ನು ತೊರೆದು ನಾವು ಏಕೆ ಕಾನನದಲ್ಲಿ ವಾಸಿಸುತ್ತಿದ್ದೇವೆ ಎಂದು ಕುಪಿತನಾಗಿ ಭೀಮನು ಯುಧಿಷ್ಠಿರನನ್ನು ಪ್ರಶ್ನಿಸಿದನು (1-20). ತನ್ನನ್ನೂ ಮತ್ತು ಮಿತ್ರರನ್ನೂ ಸಂಕಟಕ್ಕೊಳಪಡಿಸುವ ಧರ್ಮವು ಧರ್ಮವೆನಿಸಿಕೊಳ್ಳುವುದಿಲ್ಲ; ಕಾಮ-ಅರ್ಥ-ಧರ್ಮಗಳನ್ನು ಕ್ರಮವಾಗಿ ಪಾಲಿಸಬೇಕೆಂಬುದೇ ಶಾಸ್ತ್ರಗಳಲ್ಲಿ ಮಾಡಿಟ್ಟ ವಿಧಿಯೆಂದು ಹೇಳುವುದು (21-41). ಇತರ ಜಾತಿಯರ ಧರ್ಮವನ್ನು ಅನುಸರಿಸುವುದಕ್ಕಿಂತ ಸ್ವಧರ್ಮವಾದ ಕ್ಷತ್ರಿಯಧರ್ಮವನ್ನೇ ಆಚರಿಸಬೇಕು ಎನ್ನುವುದು (42-60). ತನ್ನ ಸತ್ವ ಬಲದಿಂದ ಪಾಲನ ಮಾಡುವುದೇ ತಮ್ಮ ಪುರಾತನ ಧರ್ಮವೆಂದೂ; ಅದನ್ನು ಸಾಧಿಸುವಾಗ ಅಲ್ಪ ಪಾಪಗಳನ್ನೆಸಗಿದರೂ ವಿಪುಲದಕ್ಷಿಣಗಳನ್ನಿತ್ತು ಯಜ್ಞಗಳ ಮೂಲಕ ನಿವಾರಿಸಿಕೊಳ್ಳಬಹುದೆಂದು ಹೇಳುವುದು (61-77). ಇಂದೇ ಹಸ್ತಿನಾಪುರದ ಮೇಲೆ ಧಾಳಿಯಿಟ್ಟು ನಿನ್ನ ಸಂಪತ್ತನ್ನು ಹಿಂದೆ ಪಡೆಯೆಂದು ಭೀಮನು ಯುಧಿಷ್ಠಿರನಿಗೆ ಹೇಳುವುದು (78-85).

03034001 ವೈಶಂಪಾಯನ ಉವಾಚ।
03034001a ಯಾಜ್ಞಸೇನ್ಯಾ ವಚಃ ಶ್ರುತ್ವಾ ಭೀಮಸೇನೋಽತ್ಯಮರ್ಷಣಃ।
03034001c ನಿಃಶ್ವಸನ್ನುಪಸಂಗಮ್ಯ ಕ್ರುದ್ಧೋ ರಾಜಾನಮಬ್ರವೀತ್।।
03034002a ರಾಜ್ಯಸ್ಯ ಪದವೀಂ ಧರ್ಮ್ಯಾಂ ವ್ರಜ ಸತ್ಪುರುಷೋಚಿತಾಂ।
03034002c ಧರ್ಮಕಾಮಾರ್ಥಹೀನಾನಾಂ ಕಿಂ ನೋ ವಸ್ತುಂ ತಪೋವನೇ।।

ವೈಶಂಪಾಯನನು ಹೇಳಿದನು: “ಯಾಜ್ಞಸೇನಿಯ ಮಾತುಗಳನ್ನು ಕೇಳಿದ ಭೀಮಸೇನನು ಅತಿ ಕುಪಿತನಾಗಿ ನಿಟ್ಟುಸಿರು ಬಿಡುತ್ತಾ ಕೃದ್ಧನಾಗಿ ರಾಜನಿಗೆ ಹೇಳಿದನು: “ಸತ್ಪುರುಷರಿಗೆ ಉಚಿತವಾದ ರಾಜಧರ್ಮದ ಮಾರ್ಗದಲ್ಲಿ ನಡೆ! ಧರ್ಮ, ಕಾಮ ಮತ್ತು ಅರ್ಥಹೀನರಾಗಿ ಹೀಗೆ ಏಕೆ ತಪೋವನದಲ್ಲಿ ವಾಸಿಸುತ್ತಿದ್ದೇವೆ?

03034003a ನೈವ ಧರ್ಮೇಣ ತದ್ರಾಜ್ಯಂ ನಾರ್ಜವೇನ ನ ಚೌಜಸಾ।
03034003c ಅಕ್ಷಕೂಟಮಧಿಷ್ಠಾಯ ಹೃತಂ ದುರ್ಯೋಧನೇನ ನಃ।।

ದುರ್ಯೋಧನನು ನಮ್ಮ ರಾಜ್ಯವನ್ನು ಧರ್ಮದಿಂದ ಅಥವಾ ಪ್ರಾಮಾಣಿಕತೆಯಿಂದ ಅಥವಾ ವೀರತನದಿಂದ ತೆಗೆದುಕೊಳ್ಳಲಿಲ್ಲ. ಅವನು ಮೋಸದ ಜೂಜಿನ ಮೂಲಕ ಅಪಹರಿಸಲಿಲ್ಲವೇ?

03034004a ಗೋಮಾಯುನೇವ ಸಿಂಹಾನಾಂ ದುರ್ಬಲೇನ ಬಲೀಯಸಾಂ।
03034004c ಆಮಿಷಂ ವಿಘಸಾಶೇನ ತದ್ವದ್ರಾಜ್ಯಂ ಹಿ ನೋ ಹೃತಂ।।

ಒಂದು ದುರ್ಬಲ ನರಿಯು ಬಲವಂತ ಸಿಂಹದ ಬಾಯಿಯಿಂದ ಹಸಿಮಾಂಸದ ತುಂಡನ್ನು ಕಸಿದುಕೊಂಡಂತೆ ನಮ್ಮ ರಾಜ್ಯವನ್ನು ನಮ್ಮಿಂದ ಕಸಿದುಕೊಳ್ಳಲಾಯಿತು.

03034005a ಧರ್ಮಲೇಶಪ್ರತಿಚ್ಚನ್ನಃ ಪ್ರಭವಂ ಧರ್ಮಕಾಮಯೋಃ।
03034005c ಅರ್ಥಮುತ್ಸೃಜ್ಯ ಕಿಂ ರಾಜನ್ದುರ್ಗೇಷು ಪರಿತಪ್ಯಸೇ।।

ರಾಜನ್! ಧರ್ಮವೆಂಬ ಹರಿದುಹೋದ ಚಾದರವನ್ನು ಹೊದ್ದು ಧರ್ಮ ಮತ್ತು ಕಾಮಗಳಿಗೆ ಮೂಲವಾದ ಅರ್ಥವನ್ನು ಬಿಸಾಡಿ ಈ ದಟ್ಟ ಕಾಡಿನಲ್ಲಿ ಏಕೆ ಪರಿತಪಿಸುತ್ತಿರುವೆ?

03034006a ಭವತೋಽನುವಿಧಾನೇನ ರಾಜ್ಯಂ ನಃ ಪಶ್ಯತಾಂ ಹೃತಂ।
03034006c ಅಹಾರ್ಯಮಪಿ ಶಕ್ರೇಣ ಗುಪ್ತಂ ಗಾಂಡೀವಧನ್ವನಾ।।

ಗಾಂಡೀವ ಧನುಸ್ಸನ್ನು ಹಿಡಿದ ಅರ್ಜುನನಿಂದ ರಕ್ಷಿಸಲ್ಪಟ್ಟ ನಮ್ಮ ರಾಜ್ಯವನ್ನು ಶಕ್ರನೂ ಕಸಿದುಕೊಳ್ಳಲು ಅಸಾಧ್ಯನಾಗಿರುವಾಗ, ನಿನ್ನ ಅನುಯಾಯಿಗಳಾದ ನಾವು ನೋಡುತ್ತಿದ್ದಂತೆಯೇ ನಮ್ಮಿಂದ ಅದನ್ನು ಅಪಹರಿಸಲಾಯಿತು.

03034007a ಕುಣೀನಾಮಿವ ಬಿಲ್ವಾನಿ ಪಂಗೂನಾಮಿವ ಧೇನವಃ।
03034007c ಹೃತಮೈಶ್ವರ್ಯಮಸ್ಮಾಕಂ ಜೀವತಾಂ ಭವತಃ ಕೃತೇ।।

ಕೈಯಿಲ್ಲದವನು ಬಿಲ್ವದ ಹಣ್ಣನ್ನು ಕಿತ್ತುಕೊಂಡಂತೆ ಮತ್ತು ಕುಂಟನು ಹಸುವನ್ನು ಕದ್ದುಕೊಂಡು ಹೋದಂತೆ, ನಿನ್ನ ಕಾರಣದಿಂದ, ನಾವಿಲ್ಲರೂ ಜೀವಂತವಿರುವಾಗಲೇ ನಮ್ಮ ಐಶ್ವರ್ಯವನ್ನು ಅಪಹರಿಸಿಕೊಂಡು ಹೋದರಲ್ಲ!

03034008a ಭವತಃ ಪ್ರಿಯಮಿತ್ಯೇವಂ ಮಹದ್ವ್ಯಸನಮೀದೃಶಂ।
03034008c ಧರ್ಮಕಾಮೇ ಪ್ರತೀತಸ್ಯ ಪ್ರತಿಪನ್ನಾಃ ಸ್ಮ ಭಾರತ।।

ಭಾರತ! ಧರ್ಮದಲ್ಲಿಯೇ ನಡೆಯುವುದರಲ್ಲಿ ಸುಖವನ್ನು ಪಡೆಯುವ ನಿನಗೆ ಇಷ್ಟವಾದುದನ್ನು ಮಾಡಲೆಂದು ನಾವು ಈ ಮಹಾ ವ್ಯಸನವನ್ನು ಸಹಿಸಿಕೊಂಡಿದ್ದೇವೆ.

03034009a ಕರ್ಶಯಾಮಃ ಸ್ವಮಿತ್ರಾಣಿ ನಂದಯಾಮಶ್ಚ ಶಾತ್ರವಾನ್।
03034009c ಆತ್ಮಾನಂ ಭವತಃ ಶಾಸ್ತ್ರೇ ನಿಯಮ್ಯ ಭರತರ್ಷಭ।।

ಭರತರ್ಷಭ! ನಿನ್ನ ಸಿದ್ಧಾಂತವನ್ನು ಅನುಸರಿಸಿ ನಾವು ನಮ್ಮ ಮಿತ್ರರಿಂದ ದೂರರಾಗಿ ಶತ್ರುಗಳಿಗೆ ಆನಂದವನ್ನು ನೀಡುತ್ತಿದ್ದೇವೆ.

03034010a ಯದ್ವಯಂ ನ ತದೈವೈತಾನ್ ಧಾರ್ತರಾಷ್ಟ್ರಾನ್ನಿಹನ್ಮಹಿ।
03034010c ಭವತಃ ಶಾಸ್ತ್ರಮಾದಾಯ ತನ್ನಸ್ತಪತಿ ದುಷ್ಕೃತಂ।।

ನಿನ್ನ ಶಾಸ್ತ್ರವನ್ನು ಸ್ವೀಕರಿಸಿ ಅಂದೇ ನಾವು ಧಾರ್ತರಾಷ್ಟ್ರರನ್ನು ಕೊಲ್ಲದೇ ಇದ್ದುದೇ ತಪ್ಪಾಗಿ ಹೋಯಿತು. ಅದಕ್ಕಾಗಿಯೇ ನಾವು ಈ ದುಷ್ಕೃತವನ್ನು ಅನುಭವಿಸುತ್ತಿದ್ದೇವೆ.

03034011a ಅಥೈನಾಮನ್ವವೇಕ್ಷಸ್ವ ಮೃಗಚರ್ಯಾಮಿವಾತ್ಮನಃ।
03034011c ಅವೀರಾಚರಿತಾಂ ರಾಜನ್ನ ಬಲಸ್ಥೈರ್ನಿಷೇವಿತಾಂ।।

ಮೃಗದಂತೆ ಜೀವಿಸುತ್ತಿರುವುದನ್ನು ನೋಡು. ರಾಜನ್! ವೀರರಲ್ಲದವರು ಈ ರೀತಿ ನಡೆದುಕೊಳ್ಳುತ್ತಾರೆಯೇ ಹೊರತು ಬಲವಿರುವವರು ಹೀಗೆ ನಡೆದುಕೊಳ್ಳುವುದಿಲ್ಲ.

03034012a ಯಾಂ ನ ಕೃಷ್ಣೋ ನ ಬೀಭತ್ಸುರ್ನಾಭಿಮನ್ಯುರ್ನ ಸೃಂಜಯಃ।
03034012c ನ ಚಾಹಮಭಿನಂದಾಮಿ ನ ಚ ಮಾದ್ರೀಸುತಾವುಭೌ।।

ನಿನ್ನ ಈ ನಡತೆಯನ್ನು ಕೃಷ್ಣನಾಗಲೀ, ಬೀಭತ್ಸುವಾಗಲೀ, ಅಭಿಮನ್ಯುವಾಗಲೀ, ಸೃಂಜಯನಾಗಲೀ, ನಾನಾಗಲೀ ಮತ್ತು ಈ ಇಬ್ಬರು ಮಾದ್ರೀ ಸುತರಾಗಲೀ ಖಂಡಿತವಾಗಿಯೂ ಅನುಮೋದಿಸುವುದಿಲ್ಲ.

03034013a ಭವಾನ್ಧರ್ಮೋ ಧರ್ಮ ಇತಿ ಸತತಂ ವ್ರತಕರ್ಶಿತಃ।
03034013c ಕಚ್ಚಿದ್ರಾಜನ್ನ ನಿರ್ವೇದಾದಾಪನ್ನಃ ಕ್ಲೀಬಜೀವಿಕಾಂ।।

ನೀನು ಧರ್ಮ ಧರ್ಮ ಎಂದು ಸತತವೂ ವ್ರತನಿರತನಾಗಿರುತ್ತೀಯೆ. ರಾಜನ್! ಈ ಜೀವನ ಕಷ್ಟವನ್ನು ಸಹಿಸಲಾಗದೆ ನಿರಾಸೆಯುಂಟಾಗಿ ಈ ವಿಧದ ನಪುಂಸಕ ಜೀವನವನ್ನು ಅವಲಂಬಿಸಿಲ್ಲ ತಾನೇ?

03034014a ದುರ್ಮನುಷ್ಯಾ ಹಿ ನಿರ್ವೇದಮಫಲಂ ಸರ್ವಘಾತಿನಂ।
03034014c ಅಶಕ್ತಾಃ ಶ್ರಿಯಮಾಹರ್ತುಮಾತ್ಮನಃ ಕುರ್ವತೇ ಪ್ರಿಯಂ।।

ದುರ್ಬಲರಾದವರು ಮಾತ್ರ ತಾವು ಕಳೆದುಕೊಂಡ ಸಂಪತ್ತನ್ನು ಪುನಃ ಪಡೆಯಲು ಅಸಮರ್ಥರಾಗಿ ನಿರಾಶೆಹೊಂದುತ್ತಾರೆ. ಜೀವನದಲ್ಲಿ ನಿರಾಶೆಯು ಸರ್ವಘಾತಕವಾದುದು ಮತ್ತು ನಿಷ್ಫಲವಾದುದು.

03034015a ಸ ಭವಾನ್ದೃಷ್ಟಿಮಾಂ ಶಕ್ತಃ ಪಶ್ಯನ್ನಾತ್ಮನಿ ಪೌರುಷಂ।
03034015c ಆನೃಶಂಸ್ಯಪರೋ ರಾಜನ್ನಾನರ್ಥಮವಬುಧ್ಯಸೇ।।

ರಾಜನ್! ನಿನಗೆ ದೂರದೃಷ್ಠಿಯಿದೆ ಮತ್ತು ಶಕ್ತನಾಗಿರುವೆ. ನಾವು ಪರಾಕ್ರಮಿಗಳೆಂದು ನಿನಗೆ ಗೊತ್ತು. ಆದರೂ ಶಾಂತಪರನಾದ ನೀನು ಆಗಿರುವ ಅನರ್ಥವನ್ನು ಅರ್ಥಮಾಡಿಕೊಳ್ಳುತ್ತಿಲ್ಲ.

03034016a ಅಸ್ಮಾನಮೀ ಧಾರ್ತರಾಷ್ಟ್ರಾಃ ಕ್ಷಮಮಾಣಾನಲಂ ಸತಃ।
03034016c ಅಶಕ್ತಾನೇವ ಮನ್ಯಂತೇ ತದ್ದುಃಖಂ ನಾಹವೇ ವಧಃ।।

ತುಂಬಾ ಕ್ಷಮಾಪರರಾಗಿರುವ ನಮ್ಮನ್ನು ಧಾರ್ತರಾಷ್ಟ್ರರು ಅಶಕ್ತರೆಂದೇ ತಿಳಿದುಕೊಂಡಿದ್ದಾರೆ. ಇದು ರಣದಲ್ಲಿ ಸಾಯುವುದಕ್ಕಿಂತಲೂ ದುಃಖತರವಾದುದು.

03034017a ತತ್ರ ಚೇದ್ಯುಧ್ಯಮಾನಾನಾಮಜಿಹ್ಮಮನಿವರ್ತಿನಾಂ।
03034017c ಸರ್ವಶೋ ಹಿ ವಧಃ ಶ್ರೇಯಾನ್ಪ್ರೇತ್ಯ ಲೋಕಾಽಲ್ಲಭೇಮಹಿ।।

ನೇರವಾಗಿ, ಹಿಂದಿರುಗದೇ, ಅಲ್ಲಿಯೇ ಯುದ್ಧಮಾಡಿದ್ದರೆ ಚೆನ್ನಾಗಿರುತ್ತಿತ್ತು. ನಾವೆಲ್ಲರೂ ಸತ್ತರೂ ನಂತರ ಶ್ರೇಯವಾದ ಲೋಕಗಳನ್ನು ಪಡೆಯುತ್ತಿದ್ದೆವು.

03034018a ಅಥ ವಾ ವಯಮೇವೈತಾನ್ನಿಹತ್ಯ ಭರತರ್ಷಭ।
03034018c ಆದದೀಮಹಿ ಗಾಂ ಸರ್ವಾಂ ತಥಾಪಿ ಶ್ರೇಯ ಏವ ನಃ।।

ಭರತರ್ಷಭ! ಅಥವಾ ಅವರನ್ನು ಸಂಹರಿಸಿ ನಮ್ಮ ಭೂಮಿ ಸರ್ವವನ್ನೂ ಹಿಂದೆ ತೆಗೆದುಕೊಂಡಿದ್ದರೆ ಅದೂ ಶ್ರೇಯಸ್ಕರವೇ ಆಗುತ್ತಿರಲಿಲ್ಲವೇ?

03034019a ಸರ್ವಥಾ ಕಾರ್ಯಮೇತನ್ನಃ ಸ್ವಧರ್ಮಮನುತಿಷ್ಠತಾಂ।
03034019c ಕಾಂಕ್ಷತಾಂ ವಿಪುಲಾಂ ಕೀರ್ತಿಂ ವೈರಂ ಪ್ರತಿಚಿಕೀರ್ಷತಾಂ।।

ನಮ್ಮ ಧರ್ಮದಂತೆ ನಡೆದುಕೊಳ್ಳಬೇಕೆಂದರೆ, ವಿಪುಲ ಕೀರ್ತಿಯನ್ನು ಬಯಸಿದರೆ, ವೈರಿಗಳನ್ನು ಎದುರಿಸಿ ಕಾರ್ಯನಿರತರಾಗುವುದೇ ಸರ್ವಥಾ ಒಳ್ಳೆಯದು.

03034020a ಆತ್ಮಾರ್ಥಂ ಯುಧ್ಯಮಾನಾನಾಂ ವಿದಿತೇ ಕೃತ್ಯಲಕ್ಷಣೇ।
03034020c ಅನ್ಯೈರಪಹೃತೇ ರಾಜ್ಯೇ ಪ್ರಶಂಸೈವ ನ ಗರ್ಹಣಾ।।

ಅನ್ಯರಿಂದ ಅಪಹೃತವಾದ ರಾಜ್ಯಕ್ಕಾಗಿ ನಾವು ಯುದ್ಧಮಾಡಿದೆವೆಂದರೆ ನಾವು ಸರಿಯಾದುದನ್ನೇ ಮಾಡಿದೆವೆಂದು ತಿಳಿಯುತ್ತಾರೆ. ಎಲ್ಲರೂ ಹೊಗಳುತ್ತಾರೆಯೇ ಹೊರತು ನಿಂದಿಸುವುದಿಲ್ಲ.

03034021a ಕರ್ಶನಾರ್ಥೋ ಹಿ ಯೋ ಧರ್ಮೋ ಮಿತ್ರಾಣಾಮಾತ್ಮನಸ್ತಥಾ।
03034021c ವ್ಯಸನಂ ನಾಮ ತದ್ರಾಜನ್ನ ಸ ಧರ್ಮಃ ಕುಧರ್ಮ ತತ್।।
03034022a ಸರ್ವಥಾ ಧರ್ಮನಿತ್ಯಂ ತು ಪುರುಷಂ ಧರ್ಮದುರ್ಬಲಂ।
03034022c ಜಹತಸ್ತಾತ ಧರ್ಮಾರ್ಥೌ ಪ್ರೇತಂ ದುಃಖಸುಖೇ ಯಥಾ।।

ತನ್ನನ್ನೂ ಮತ್ತು ಮಿತ್ರರನ್ನೂ ಸಂಕಟಕ್ಕೊಳಪಡಿಸುವ ಧರ್ಮವು ಧರ್ಮವೆನಿಸುವುದೇ? ರಾಜನ್! ಅದು ಧರ್ಮವಲ್ಲ, ಕುಧರ್ಮ. ಯಾವಾಗಲೂ ಧರ್ಮವೆಂದು ಕುಳಿತಿರುವ ಪುರುಷನನ್ನು ಧರ್ಮವೇ ದುರ್ಬಲನನ್ನಾಗಿ ಮಾಡಿಬಿಡುತ್ತದೆ. ಸತ್ತವನನ್ನು ದುಃಖಸುಖಗಳು ಪರಿತ್ಯಜಿಸುವಂತೆ ದುರ್ಬಲನಾದವನನ್ನು ಧರ್ಮಾರ್ಥಗಳೆರಡೂ ತೊರೆಯುತ್ತವೆ.

03034023a ಯಸ್ಯ ಧರ್ಮೋ ಹಿ ಧರ್ಮಾರ್ಥಂ ಕ್ಲೇಶಭಾಮ್ನ ಸ ಪಂಡಿತಃ।
03034023c ನ ಸ ಧರ್ಮಸ್ಯ ವೇದಾರ್ಥಂ ಸೂರ್ಯಸ್ಯಾಂಧಃ ಪ್ರಭಾಮಿವ।।

ಧರ್ಮಕ್ಕಾಗಿ ಕಷ್ಟಪಡುವುದು ಪಂಡಿತನ ಧರ್ಮವಲ್ಲ. ಒಬ್ಬ ಕುರುಡನು ಸೂರ್ಯನ ಬೆಳಕನ್ನು ಅರಿಯದೇ ಇರುವಂತೆ ಅಂಥವನು ಧರ್ಮದ ಅರ್ಥವನ್ನು ತಿಳಿದುಕೊಂಡಿರುವುದಿಲ್ಲ.

03034024a ಯಸ್ಯ ಚಾರ್ಥಾರ್ಥಮೇವಾರ್ಥಃ ಸ ಚ ನಾರ್ಥಸ್ಯ ಕೋವಿದಃ।
03034024c ರಕ್ಷತೇ ಭೃತಕೋಽರಣ್ಯಂ ಯಥಾ ಸ್ಯಾತ್ತಾದೃಗೇವ ಸಃ।।

ಅದರಂತೆ ಕೇವಲ ಐಶ್ವರ್ಯಕ್ಕಾಗಿಯೇ ಹಣದ ಸಂಪಾದನೆ ಮಾಡುವವನು ಹಣದ ಪ್ರಯೋಜನವನ್ನು ತಿಳಿಯಲಾರನು. ಅರಣ್ಯದಲ್ಲಿ ಕೂಲಿಗಾಗಿ ದನಗಳನ್ನು ಕಾಯುವ ಗೋಪಾಲಕನಂತೆ ಅವನು ಹಣದ ರಕ್ಷಣೆಯಲ್ಲಿ ಮಾತ್ರ ಆಸಕ್ತನಾಗಿರುತ್ತಾನೆ.

03034025a ಅತಿವೇಲಂ ಹಿ ಯೋಽರ್ಥಾರ್ಥೀ ನೇತರಾವನುತಿಷ್ಠತಿ।
03034025c ಸ ವಧ್ಯಃ ಸರ್ವಭೂತಾನಾಂ ಬ್ರಹ್ಮಹೇವ ಜುಗುಪ್ಸಿತಃ।।

ಅತಿಯಾಗಿ ಹಣವನ್ನು ಸಂಪಾದನೆ ಮಾಡುವವನು, ಇತರ ಎರಡು ಗುರಿಗಳನ್ನು (ಧರ್ಮ ಮತ್ತು ಕಾಮ) ನಿರ್ಲಕ್ಷಿಸಿದರೆ ಸರ್ವಜೀವಿಗಳಿಂದಲೂ ವಧ್ಯ ಮತ್ತು ಬ್ರಾಹ್ಮಣನನ್ನು ಕೊಂದವನಷ್ಟು ಎಲ್ಲರ ನಿಂದೆಗೆ ಪಾತ್ರನಾಗುತ್ತಾನೆ.

03034026a ಸತತಂ ಯಶ್ಚ ಕಾಮಾರ್ಥೀ ನೇತರಾವನುತಿಷ್ಠತಿ।
03034026c ಮಿತ್ರಾಣಿ ತಸ್ಯ ನಶ್ಯಂತಿ ಧರ್ಮಾರ್ಥಾಭ್ಯಾಂ ಚ ಹೀಯತೇ।।

ಹಾಗೆಯೇ, ಸದಾ ಕಾಮಗಳನ್ನು ಪೂರೈಸುವುದರಲ್ಲಿ ತೊಡಗಿ, ಇತರ ಎರಡು ಪುರುಷಾರ್ಥಗಳನ್ನು ನಿರ್ಲಕ್ಷಿಸುವವನಿಗೆ ಮಿತ್ರರು ಇಲ್ಲವಾಗುತ್ತಾರೆ ಮತ್ತು ಅವನು ಧರ್ಮ ಮತ್ತು ಅರ್ಥಗಳೆರಡನ್ನೂ ಕಳೆದುಕೊಳ್ಳುತ್ತಾನೆ.

03034027a ತಸ್ಯ ಧರ್ಮಾರ್ಥಹೀನಸ್ಯ ಕಾಮಾಂತೇ ನಿಧನಂ ಧ್ರುವಂ।
03034027c ಕಾಮತೋ ರಮಮಾಣಸ್ಯ ಮೀನಸ್ಯೇವಾಂಭಸಃ ಕ್ಷಯೇ।।

ಧರ್ಮ ಮತ್ತು ಅರ್ಥಹೀನನಾದವನು ಕಾಮಗಳನ್ನು ಪೂರೈಸಿಕೊಂಡ ನಂತರ, ಕೊಳವು ಬತ್ತಿಹೋಗುವ ತನಕ ಕಾಮದಲ್ಲಿ ರಮಿಸುತ್ತಿರುವ ಮೀನಿನಂತೆ ಸಾಯುವುದು ಸತ್ಯ.

03034028a ತಸ್ಮಾದ್ಧರ್ಮಾರ್ಥಯೋರ್ನಿತ್ಯಂ ನ ಪ್ರಮಾದ್ಯಂತಿ ಪಂಡಿತಾಃ।
03034028c ಪ್ರಕೃತಿಃ ಸಾ ಹಿ ಕಾಮಸ್ಯ ಪಾವಕಸ್ಯಾರಣಿರ್ಯಥಾ।।

ಈ ಕಾರಣದಿಂದಲೇ ಪಂಡಿತರು ಧರ್ಮಾರ್ಥಗಳ ವಿಷಯದಲ್ಲಿ ಬಹಳ ಜಾಗರೂಕತೆಯಿಂದಿರುತ್ತಾರೆ. ಅಗ್ನಿಗೆ ಅರಣಿಯು ಪ್ರಕೃತಿಯಾಗಿರುವಂತೆ ಕಾಮಪ್ರಾಪ್ತಿಗೆ ಧರ್ಮಾರ್ಥಗಳೆರಡೂ ಮುಖ್ಯಾಂಗಗಳು.

03034029a ಸರ್ವಥಾ ಧರ್ಮಮೂಲೋಽರ್ಥೋ ಧರ್ಮಶ್ಚಾರ್ಥಪರಿಗ್ರಹಃ।
03034029c ಇತರೇತರಯೋನೀ ತೌ ವಿದ್ಧಿ ಮೇಘೋದಧೀ ಯಥಾ।।

ಅರ್ಥವೂ ಸರ್ವಥಾ ಧರ್ಮದ ಮೂಲವಾಗಿರಬೇಕು. ಅದರಂತೆ ಧರ್ಮವೂ ಅರ್ಥಪ್ರಯೋಜನವುಳ್ಳದ್ದಾಗಿರಬೇಕು. ಸಮುದ್ರವು ಮೋಡವನ್ನೂ, ಮೋಡವು ಸಮುದ್ರವನ್ನೂ ಅವಲಂಬಿಸಿಕೊಂಡಿರುವಂತೆ ಧರ್ಮಾರ್ಥಗಳೆರಡೂ ಒಂದನ್ನೊಂದು ಅವಲಂಬಿಸಿ ನಿಂತಿವೆ.

03034030a ದ್ರವ್ಯಾರ್ಥಸ್ಪರ್ಶಸಂಯೋಗೇ ಯಾ ಪ್ರೀತಿರುಪಜಾಯತೇ।
03034030c ಸ ಕಾಮಶ್ಚಿತ್ತಸಂಕಲ್ಪಃ ಶರೀರಂ ನಾಸ್ಯ ವಿದ್ಯತೇ।।

ದ್ರವ್ಯಾರ್ಥಗಳ ಸ್ಪರ್ಷಸಂಯೋಗದಿಂದಲೇ ಪ್ರೀತಿ (ಕಾಮ) ಉಂಟಾಗುತ್ತದೆ. ಕಾಮವೆಂಬುದು ಕೇವಲ ಮನಸ್ಸಿನಲ್ಲಿರುವುದೇ ಹೊರತು ಅದಕ್ಕೆ ಬೇರೆಯ ಶರೀರವಿಲ್ಲ. ಅದು ಅನಂಗ. ಯಾರೂ ಅದನ್ನು ನೋಡಲು ಸಾಧ್ಯವಿಲ್ಲ.

03034031a ಅರ್ಥಾರ್ಥೀ ಪುರುಷೋ ರಾಜನ್ಬೃಹಂತಂ ಧರ್ಮಮೃಚ್ಚತಿ।
03034031c ಅರ್ಥಮೃಚ್ಚತಿ ಕಾಮಾರ್ಥೀ ನ ಕಾಮಾದನ್ಯಮೃಚ್ಚತೀ।।
03034032a ನ ಹಿ ಕಾಮೇನ ಕಾಮೋಽನ್ಯಃ ಸಾಧ್ಯತೇ ಫಲಮೇವ ತತ್।
03034032c ಉಪಯೋಗಾತ್ಫಲಸ್ಯೇವ ಕಾಷ್ಠಾದ್ಭಸ್ಮೇವ ಪಂಡಿತಃ।।

ರಾಜನ್! ಅರ್ಥವನ್ನು ಅರಸುವ ಪುರುಷನು ಅದನ್ನು ಧರ್ಮದಿಂದ ಪಡೆಯುತ್ತಾನೆ. ಕಾಮಾರ್ಥಿಯು ಅದನ್ನು ಅರ್ಥದಿಂದ ಪಡೆಯುತ್ತಾನೆ. ಆದರೆ ಕಾಮದಿಂದ ಎನನ್ನು ಪಡೆಯಲೂ ಸಾಧ್ಯವಿಲ್ಲ. ಯಾಕೆಂದರೆ, ಕಾಮದಿಂದ ಇನ್ನೊಂದು ಕಾಮವು ಫಲವಾಗಿ ಹುಟ್ಟುವುದಿಲ್ಲ. ಕಾಮವನ್ನೇ ಫಲವೆಂದು ಉಪಭೋಗಮಾಡುವುದರಿಂದ ಕಟ್ಟಿಗೆಯನ್ನು ಸುಟ್ಟರೆ ಭಸ್ಮವೇ ಉಳಿದುಕೊಳ್ಳುವಂತೆ ಕಾಮದಿಂದ ಬೇರೆ ಏನು ಫಲವೂ ದೊರೆಯುವುದಿಲ್ಲ.

03034033a ಇಮಾಂ ಶಕುನಿಕಾನ್ರಾಜನ್ ಹಂತಿ ವೈತಂಸಿಕೋ ಯಥಾ।
03034033c ಏತದ್ರೂಪಮಧರ್ಮಸ್ಯ ಭೂತೇಷು ಚ ವಿಹಿಂಸತಾಂ।।

ರಾಜನ್! ಈ ಅರಣ್ಯದಲ್ಲಿರುವ ಪಕ್ಷಿಗಳನ್ನು ಬೇಡನು ಹೇಗೆ ಹಿಂಸೆಪಡಿಸುತ್ತಾನೋ ಹಾಗೆ ಅಧರ್ಮವು ಲೋಕದ ಜೀವಿಗಳನ್ನು ಹಿಂಸಿಸುತ್ತದೆ.

03034034a ಕಾಮಾಲ್ಲೋಭಾಚ್ಚ ಧರ್ಮಸ್ಯ ಪ್ರವೃತ್ತಿಂ ಯೋ ನ ಪಶ್ಯತಿ।
03034034c ಸ ವಧ್ಯಃ ಸರ್ವಭೂತಾನಾಂ ಪ್ರೇತ್ಯ ಚೇಹ ಚ ದುರ್ಮತಿಃ।।

ಕಾಮಲೋಭಗಳಿಗೆ ಅಧೀನನಾಗಿ ಧರ್ಮದ ನಿಜಸ್ವರೂಪವನ್ನು ಯಾರು ತಿಳಿಯುವುದಿಲ್ಲವೋ ಅವನು ವಧಾರ್ಹ. ಇಹ-ಪರಗಳೆರಡರಲ್ಲೂ ಅವನು ದುರ್ಮತಿಯೆನಿಸಿಕೊಳ್ಳುತ್ತಾನೆ.

03034035a ವ್ಯಕ್ತಂ ತೇ ವಿದಿತೋ ರಾಜನ್ನರ್ಥೋ ದ್ರವ್ಯಪರಿಗ್ರಹಃ।
03034035c ಪ್ರಕೃತಿಂ ಚಾಪಿ ವೇತ್ಥಾಸ್ಯ ವಿಕೃತಿಂ ಚಾಪಿ ಭೂಯಸೀಂ।।

ರಾಜನ್! ಅರ್ಥವೆಂದರೆ ದ್ರವ್ಯಪರಿಗ್ರಹ ಎನ್ನುವುದು ನಿನಗೆ ತಿಳಿದೇ ಇದೆ. ಅರ್ಥದ ನಿಜಸ್ವರೂಪವನ್ನೂ ವಿಕೃತಿಯನ್ನೂ ನೀನು ಚೆನ್ನಾಗಿ ತಿಳಿದುಕೊಂಡಿದ್ದೀಯೆ.

03034036a ತಸ್ಯ ನಾಶಂ ವಿನಾಶಂ ವಾ ಜರಯಾ ಮರಣೇನ ವಾ।
03034036c ಅನರ್ಥಮಿತಿ ಮನ್ಯಂತೇ ಸೋಽಯಮಸ್ಮಾಸು ವರ್ತತೇ।।

ವೃದ್ಧಾಪ್ಯದಲ್ಲಿ ಅಥವಾ ಮರಣಕಾಲದಲ್ಲಿ ಐಶ್ವರ್ಯವು ನಾಶವಾದರೆ ಅನರ್ಥ‌ಎಂದು ತಿಳಿಯುತ್ತಾರೆ. ಅಂಥಹ ಪರಿಸ್ಥಿತಿ ಈಗ ನಮ್ಮದಾಗಿದೆ.

03034037a ಇಂದ್ರಿಯಾಣಾಂ ಚ ಪಂಚಾನಾಂ ಮನಸೋ ಹೃದಯಸ್ಯ ಚ।
03034037c ವಿಷಯೇ ವರ್ತಮಾನಾನಾಂ ಯಾ ಪ್ರೀತಿರುಪಜಾಯತೇ।
03034037e ಸ ಕಾಮ ಇತಿ ಮೇ ಬುದ್ಧಿಃ ಕರ್ಮಣಾಂ ಫಲಮುತ್ತಮಂ।।

ಪಂಚೇಂದ್ರಿಯಗಳು, ಮನಸ್ಸು ಮತ್ತು ಹೃದಯವು ವಿಷಯದಲ್ಲಿ ತೊಡಗಿದಾಗ ಉಂಟಾಗುವುದೇ ಕಾಮ. ಎಲ್ಲ ಕರ್ಮಗಳಿಂದ ದೊರೆಯುವ ಉತ್ತಮ ಫಲವೇ ಕಾಮ ಎಂದು ನನ್ನ ಅಭಿಪ್ರಾಯ.

03034038a ಏವಮೇವ ಪೃಥಗ್ದೃಷ್ಟ್ವಾ ಧರ್ಮಾರ್ಥೌ ಕಾಮಮೇವ ಚ।
03034038c ನ ಧರ್ಮಪರ ಏವ ಸ್ಯಾನ್ನ ಚಾರ್ಥಪರಮೋ ನರಃ।
03034038e ನ ಕಾಮಪರಮೋ ವಾ ಸ್ಯಾತ್ಸರ್ವಾನ್ಸೇವೇತ ಸರ್ವದಾ।।

ಆದುದರಿಂದಲೇ ಧರ್ಮ, ಅರ್ಥ, ಕಾಮಗಳನ್ನು ಬೇರೆ ಬೇರೆಯಾಗಿ ನೋಡಬಾರದು. ಮನುಷ್ಯನು ಮೊದಲು ಧರ್ಮಪರನಾಗಿದ್ದು ನಂತರ ಅರ್ಥವನ್ನು ಪಡೆದು ತದನಂತರ ಕಾಮವನ್ನು ಪೂರೈಸಿಕೊಳ್ಳಬೇಕು. ಯಾವಾಗಲೂ ಈ ಮೂರನ್ನೂ ಸೇವಿಸಬೇಕು1.

03034039a ಧರ್ಮಂ ಪೂರ್ವಂ ಧನಂ ಮಧ್ಯೇ ಜಘನ್ಯೇ ಕಾಮಮಾಚರೇತ್।
03034039c ಅಹನ್ಯನುಚರೇದೇವಮೇಷ ಶಾಸ್ತ್ರಕೃತೋ ವಿಧಿಃ।।

ದಿನದ ಮೊದಲಭಾಗದಲ್ಲಿ ಧರ್ಮವನ್ನೂ, ಮಧ್ಯಭಾಗದಲ್ಲಿ ಧನವನ್ನೂ ಮತ್ತು ಅಂತ್ಯದಲ್ಲಿ ಕಾಮವನ್ನೂ ಆಚರಿಸಬೇಕು. ಇದೇ ಶಾಸ್ತ್ರಗಳು ಮಾಡಿಟ್ಟ ವಿಧಿ2.

03034040a ಕಾಮಂ ಪೂರ್ವಂ ಧನಂ ಮಧ್ಯೇ ಜಘನ್ಯೇ ಧರ್ಮಮಾಚರೇತ್।
03034040c ವಯಸ್ಯನುಚರೇದೇವಮೇಷ ಶಾಸ್ತ್ರಕೃತೋ ವಿಧಿಃ।।

ಮೊದಲು ಕಾಮವನ್ನು ಅರಸಬೇಕು, ಮಧ್ಯದಲ್ಲಿ ಅರ್ಥವನ್ನು ಪಡೆಯಬೇಕು ಮತ್ತು ಜೀವನದ ಕೊನೆಯ ಭಾಗದಲ್ಲಿ ಧರ್ಮವನ್ನು ಪಾಲಿಸಬೇಕು. ಒಂದಾದ ನಂತರ ಇನ್ನೊಂದು. ಇದೇ ಶಾಸ್ತ್ರಗಳು ಮಾಡಿಟ್ಟ ವಿಧಿ.

03034041a ಧರ್ಮಂ ಚಾರ್ಥಂ ಚ ಕಾಮಂ ಚ ಯಥಾವದ್ವದತಾಂ ವರ।
03034041c ವಿಭಜ್ಯ ಕಾಲೇ ಕಾಲಜ್ಞಃ ಸರ್ವಾನ್ಸೇವೇತ ಪಂಡಿತಃ।।

ಮಾತನಾಡುವವರಲ್ಲಿ ಶ್ರೇಷ್ಠನೇ! ಧರ್ಮ, ಅರ್ಥ, ಕಾಮಗಳನ್ನು ಯಥಾವತ್ತಾಗಿ ಕಾಲಕ್ಕೆ ಸರಿಯಾಗಿ ವಿಭಜನೆ ಮಾಡಿ ಕಾಲವನ್ನರಿತ ಪಂಡಿತನು ಈ ಮೂರನ್ನೂ ಸೇವಿಸುತ್ತಾನೆ.

03034042a ಮೋಕ್ಷೋ ವಾ ಪರಮಂ ಶ್ರೇಯ ಏಷ ರಾಜನ್ಸುಖಾರ್ಥಿನಾಂ।
03034042c ಪ್ರಾಪ್ತಿರ್ವಾ ಬುದ್ಧಿಮಾಸ್ಥಾಯ ಸೋಪಾಯಂ ಕುರುನಂದನ।।
03034043a ತದ್ವಾಶು ಕ್ರಿಯತಾಂ ರಾಜನ್ಪ್ರಾಪ್ತಿರ್ವಾಪ್ಯಧಿಗಮ್ಯತಾಂ।
03034043c ಜೀವಿತಂ ಹ್ಯಾತುರಸ್ಯೇವ ದುಃಖಮಂತರವರ್ತಿನಃ।।

ರಾಜನ್! ಕುರುನಂದನ! ಸುಖವನ್ನು ಅರಸುವವನಿಗೆ ಸರ್ವಪರಿತ್ಯಾಗವು ಒಳ್ಳೆಯದೋ ಅಥವಾ ಸಾಧಿಸುವುದು ಒಳ್ಳೆಯದೋ ಎನ್ನುವುದಕ್ಕೆ ಬುದ್ಧಿಯುಪಯೋಗಿಸಿ ಉತ್ತರವನ್ನು ಕಂಡುಕೊಳ್ಳುಬೇಕು. ರಾಜನ್! ಅದನ್ನು ನಿರ್ಧರಿಸಿದ ನಂತರ ತಕ್ಷಣವೇ ಮೊದಲನೆಯದನ್ನು ಮಾಡಬೇಕು ಅಥವಾ ಸಾಧನೆಗೆ ಪ್ರಯತ್ನಿಸಬೇಕು. ಯಾಕೆಂದರೆ ಇವೆರಡರ ಮಧ್ಯೆ ಓಲಾಡುವವನ ಜೀವನವು ರೋಗಿಷ್ಟನ ದುಃಖಕ್ಕೆ ಸಮಾನವಾದುದು.

03034044a ವಿದಿತಶ್ಚೈವ ತೇ ಧರ್ಮಃ ಸತತಂ ಚರಿತಶ್ಚ ತೇ।
03034044c ಜಾನತೇ ತ್ವಯಿ ಶಂಸಂತಿ ಸುಹೃದಃ ಕರ್ಮಚೋದನಾಂ।।

ನೀನು ಧರ್ಮವನ್ನು ತಿಳಿದಿದ್ದೀಯೆ ಮತ್ತು ಸದಾ ಧರ್ಮದಲ್ಲಿಯೇ ನಡೆದುಕೊಂಡು ಬಂದಿದ್ದೀಯೆ. ನಿನ್ನ ಸ್ನೇಹಿತರು ನಿನ್ನನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ನಿನ್ನ ಕರ್ಮಚೋದನೆಯನ್ನು ಪ್ರಶಂಸಿಸುತ್ತಾರೆ.

03034045a ದಾನಂ ಯಜ್ಞಃ ಸತಾಂ ಪೂಜಾ ವೇದಧಾರಣಮಾರ್ಜವಂ।
03034045c ಏಷ ಧರ್ಮಃ ಪರೋ ರಾಜನ್ಫಲವಾನ್ಪ್ರೇತ್ಯ ಚೇಹ ಚ।।

ರಾಜನ್! ದಾನ, ಯಜ್ಞ, ಸಂತರ ಪೂಜೆ, ವೇದಧಾರಣ, ಮಾರ್ಜವ ಇವೆಲ್ಲವೂ ಫಲವನ್ನು ನೀಡುವ ಉತ್ತಮ ಧರ್ಮವೇ ಸರಿ.

03034046a ಏಷ ನಾರ್ಥವಿಹೀನೇನ ಶಕ್ಯೋ ರಾಜನ್ನಿಷೇವಿತುಂ।
03034046c ಅಖಿಲಾಃ ಪುರುಷವ್ಯಾಘ್ರ ಗುಣಾಃ ಸ್ಯುರ್ಯದ್ಯಪೀತರೇ।।

ಆದರೆ ರಾಜನ್! ಅರ್ಥವಿಹೀನನಾದವನು (ಬಡವನು) ಇದನ್ನು (ಧರ್ಮವನ್ನು) ಸೇವಿಸಲು ಶಕ್ತನಾಗುವುದಿಲ್ಲ. ಪುರುಷವ್ಯಾಘ್ರ! ಬೇರೆ ಯಾವುದು ಇದ್ದರೂ ಈ ಗುಣಗಳನ್ನು ಸಂಪೂರ್ಣವಾಗಿ ಇರಿಸಿಕೊಳ್ಳಬೇಕು.

03034047a ಧರ್ಮಮೂಲಂ ಜಗದ್ರಾಜನ್ನಾನ್ಯದ್ಧರ್ಮಾದ್ವಿಶಿಷ್ಯತೇ।
03034047c ಧರ್ಮಶ್ಚಾರ್ಥೇನ ಮಹತಾ ಶಕ್ಯೋ ರಾಜನ್ನಿಷೇವಿತುಂ।।

ರಾಜನ್! ಈ ಜಗತ್ತಿನ ಮೂಲ ಧರ್ಮ. ಧರ್ಮಕ್ಕಿಂತ ಹಿರಿದಾದುದು ಬೇರೆ ಯಾವುದೂ ಇಲ್ಲ. ರಾಜನ್! ಮತ್ತು ಈ ಧರ್ಮವನ್ನು ಮಹಾ ಸಂಪತ್ತಿನಿಂದ ಮಾತ್ರ ಸೇವಿಸಲು ಸಾಧ್ಯ.

03034048a ನ ಚಾರ್ಥೋ ಭೈಕ್ಷಚರ್ಯೇಣ ನಾಪಿ ಕ್ಲೈಬ್ಯೇನ ಕರ್ಹಿ ಚಿತ್।
03034048c ವೇತ್ತುಂ ಶಕ್ಯಃ ಸದಾ ರಾಜನ್ಕೇವಲಂ ಧರ್ಮಬುದ್ಧಿನಾ।।

ಅಂಥಹ ಸಂಪತ್ತನ್ನು ಬೇಡುವುದರಿಂದಾಗಲೀ ದೀನತೆಯಿಂದಾಗಲೀ ಎಂದೂ ಪಡೆಯಲಿಕ್ಕಾಗುವುದಿಲ್ಲ. ರಾಜನ್! ಕೇವಲ ಸದಾ ಧರ್ಮಬುದ್ಧಿಯಿಂದ ಮಾತ್ರ ಅದನ್ನು ಸಂಪಾದಿಸಲು ಶಕ್ಯ.

03034049a ಪ್ರತಿಷಿದ್ಧಾ ಹಿ ತೇ ಯಾಚ್ಮಾ ಯಯಾ ಸಿಧ್ಯತಿ ವೈ ದ್ವಿಜಃ।
03034049c ತೇಜಸೈವಾರ್ಥಲಿಪ್ಸಾಯಾಂ ಯತಸ್ವ ಪುರುಷರ್ಷಭ।।

ದ್ವಿಜರಿಗೆ ಸಿದ್ಧಿಯನ್ನು ತರುವ ಯಾಚನೆಯು ನಿನಗೆ ನಿಷಿದ್ಧವಾದುದು. ಆದುದರಿಂದ, ಪುರುಷರ್ಷಭ! ನಿನ್ನ ತೇಜಸ್ಸಿನಿಂದ ಸಂಪತ್ತಿನ ನಿನ್ನ ಕೊರತೆಯನ್ನು ಪೂರೈಸಿಕೋ.

03034050a ಭೈಕ್ಷಚರ್ಯಾ ನ ವಿಹಿತಾ ನ ಚ ವಿಟ್ಶೂದ್ರಜೀವಿಕಾ।
03034050c ಕ್ಷತ್ರಿಯಸ್ಯ ವಿಶೇಷೇಣ ಧರ್ಮಸ್ತು ಬಲಮೌರಸಂ।।

ಭಿಕ್ಷಾಟನೆ ಮಾಡುವುದಾಗಲೀ, ವೈಶ್ಯರ ಅಥವಾ ಶೂದ್ರರ ಜೀವನವನ್ನು ಅನುಸರಿಸುವುದಾಗಲೀ ಕ್ಷತ್ರಿಯರಿಗೆ ಸರಿಯಾದುದಲ್ಲ. ಕ್ಷತ್ರಿಯರಿಗೆ ಅವನ ಎದೆಯ ಬಲವೇ ಅತಿದೊಡ್ಡ ಧರ್ಮ.

03034051a ಉದಾರಮೇವ ವಿದ್ವಾಂಸೋ ಧರ್ಮಂ ಪ್ರಾಹುರ್ಮನೀಷಿಣಃ।
03034051c ಉದಾರಂ ಪ್ರತಿಪದ್ಯಸ್ವ ನಾವರೇ ಸ್ಥಾತುಮರ್ಹಸಿ।।
03034052a ಅನುಬುಧ್ಯಸ್ವ ರಾಜೇಂದ್ರ ವೇತ್ಥ ಧರ್ಮಾನ್ ಸನಾತನಾನ್।
03034052c ಕ್ರೂರಕರ್ಮಾಭಿಜಾತೋಽಸಿ ಯಸ್ಮಾದುದ್ವಿಜತೇ ಜನಃ।।

ಉದಾರತೆಯೇ ಧರ್ಮವೆಂದು ತಿಳಿದ ವಿದ್ವಾಂಸರು ಹೇಳುತ್ತಾರೆ. ಉದಾರತೆಯನ್ನು ನಿನ್ನದಾಗಿಸಿ ಅದರಮೇಲೆ ಸ್ಥಿರನಾಗಿ ನಿಲ್ಲು. ರಾಜೇಂದ್ರ! ಎದ್ದೇಳು! ಸನಾತನ ಧರ್ಮವನ್ನು ನೀನು ತಿಳಿದಿದ್ದೀಯೆ. ಇತರರಿಗೆ ಕಷ್ಟಕೊಡುವ ಕ್ರೂರ ಕರ್ಮಗಳನ್ನು ಕೊನೆಗೊಳಿಸಲೇ ನೀನು ಹುಟ್ಟಿದ್ದೀಯೆ.

03034053a ಪ್ರಜಾಪಾಲನಸಂಭೂತಂ ಫಲಂ ತವ ನ ಗರ್ಹಿತಂ।
03034053c ಏಷ ತೇ ವಿಹಿತೋ ರಾಜನ್ಧಾತ್ರಾ ಧರ್ಮಃ ಸನಾತನಃ।।

ಪ್ರಜಾಪಾಲನೆಯಿಂದ ನೀನು ಪಡೆಯುವ ಫಲವನ್ನು ಯಾರೂ ನಿಂದಿಸಲಾರರು. ರಾಜನ್! ಇದೇ ಧಾತನು ನಮಗೆ ವಿಹಿಸಿದ ಸನಾತನ ಧರ್ಮವಲ್ಲವೇ?

03034054a ತಸ್ಮಾದ್ವಿಚಲಿತಃ ಪಾರ್ಥ ಲೋಕೇ ಹಾಸ್ಯಂ ಗಮಿಷ್ಯಸಿ।
03034054c ಸ್ವಧರ್ಮಾದ್ಧಿ ಮನುಷ್ಯಾಣಾಂ ಚಲನಂ ನ ಪ್ರಶಸ್ಯತೇ।।

ಪಾರ್ಥ! ಇದರಿಂದ ನೀನು ವಿಚಲಿತನಾದರೆ ಲೋಕದ ಹಾಸ್ಯಕ್ಕೆ ಒಳಪಡುತ್ತೀಯೆ. ಯಾಕೆಂದರೆ, ಸ್ವಧರ್ಮಕ್ಕೆ ಹೊರತಾಗಿ ನಡೆದುಕೊಳ್ಳುವ ಮನುಷ್ಯರನ್ನು ಪ್ರಶಂಸಿಸುವುದಿಲ್ಲ.

03034055a ಸ ಕ್ಷಾತ್ರಂ ಹೃದಯಂ ಕೃತ್ವಾ ತ್ಯಕ್ತ್ವೇದಂ ಶಿಥಿಲಂ ಮನಃ।
03034055c ವೀರ್ಯಮಾಸ್ಥಾಯ ಕೌಂತೇಯ ಧುರಮುದ್ವಹ ಧುರ್ಯವತ್।।

ನಿನ್ನ ಹೃದಯವನ್ನು ಕ್ಷತ್ರಿಯ ಹೃದಯವನ್ನಾಗಿಸಿ ಮನಸ್ಸಿನಲ್ಲಿರುವ ದುರ್ಬಲತೆಯನ್ನು ಕಿತ್ತಿ ಹಾಕು. ಕೌಂತೇಯ! ವೀರ್ಯವನ್ನು ತೋರಿಸು ಮತ್ತು ಹೋರಾಡಬೇಕಾದ ಯುದ್ಧವನ್ನು ಹೋರಾಡು.

03034056a ನ ಹಿ ಕೇವಲಧರ್ಮಾತ್ಮಾ ಪೃಥಿವೀಂ ಜಾತು ಕಶ್ಚನ।
03034056c ಪಾರ್ಥಿವೋ ವ್ಯಜಯದ್ರಾಜನ್ನ ಭೂತಿಂ ನ ಪುನಃ ಶ್ರಿಯಂ।।

ರಾಜನ್! ಕೇವಲ ಧರ್ಮಾತ್ಮನಾಗಿದ್ದುಕೊಂಡು ಯಾವ ರಾಜನೂ ಪೃಥ್ವಿಯನ್ನು ಗೆಲ್ಲಲಿಲ್ಲ ಅಥವಾ ಸಂಪತ್ತನ್ನು ಗಳಿಸಲಿಲ್ಲ.

03034057a ಜಿಹ್ವಾಂ ದತ್ತ್ವಾ ಬಹೂನಾಂ ಹಿ ಕ್ಷುದ್ರಾಣಾಂ ಲುಬ್ಧಚೇತಸಾಂ।
03034057c ನಿಕೃತ್ಯಾ ಲಭತೇ ರಾಜ್ಯಮಾಹಾರಮಿವ ಶಲ್ಯಕಃ।।

ನರಿಯು ತನ್ನ ಆಹಾರವನ್ನು ಪಡೆಯುವಂತೆ, ಕ್ಷುದ್ರರೂ ಲೋಭಿಗಳೂ ಆದ ಜನರಿಗೆ ಸಿಹಿಮಾತುಗಳನ್ನಿತ್ತು ಮೋಸಮಾಡಿ ರಾಜ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ3.

03034058a ಭ್ರಾತರಃ ಪೂರ್ವಜಾತಾಶ್ಚ ಸುಸಮೃದ್ಧಾಶ್ಚ ಸರ್ವಶಃ।
03034058c ನಿಕೃತ್ಯಾ ನಿರ್ಜಿತಾ ದೇವೈರಸುರಾಃ ಪಾಂಡವರ್ಷಭ।।

ಪಾಂಡವರ್ಷಭ! ದೇವತೆಗಳ ಅಣ್ಣಂದಿರಾದ, ಅವರಿಗಿಂತ ಮೊದಲೇ ಹುಟ್ಟಿದ್ದ, ಎಲ್ಲ ರೀತಿಯಲ್ಲಿಯೂ ಸುಸಮೃದ್ಧರಾಗಿದ್ದ ಅಸುರರನ್ನು ದೇವತೆಗಳು ಮೋಸದಿಂದಲೇ ಸೋಲಿಸಿದರು.

03034059a ಏವಂ ಬಲವತಃ ಸರ್ವಮಿತಿ ಬುದ್ಧ್ವಾ ಮಹೀಪತೇ।
03034059c ಜಹಿ ಶತ್ರೂನ್ಮಹಾಬಾಹೋ ಪರಾಂ ನಿಕೃತಿಮಾಸ್ಥಿತಃ।।

ಮಹೀಪತೇ! ಮಹಾಬಾಹೋ! ಸರ್ವವೂ ಬಲಶಾಲಿಗೇ ಸೇರಿದ್ದು ಎಂದು ತಿಳಿದು, ಮೋಸದಿಂದ ನಿನ್ನ ಶತ್ರುಗಳನ್ನು ಗೆಲ್ಲುವುದೇ ಶ್ರೇಷ್ಠ.

03034060a ನ ಹ್ಯರ್ಜುನಸಮಃ ಕಶ್ಚಿದ್ಯುಧಿ ಯೋದ್ಧಾ ಧನುರ್ಧರಃ।
03034060c ಭವಿತಾ ವಾ ಪುಮಾನ್ಕಶ್ಚಿನ್ಮತ್ಸಮೋ ವಾ ಗದಾಧರಃ।।

ಯುದ್ಧದಲ್ಲಿ ಧನುರ್ಧರ ಅರ್ಜುನನ ಸಮನಾದ ಇನ್ನೊಬ್ಬ ಯೋಧನಿಲ್ಲ. ಗದಾಧರನಾದ ನನ್ನ ಸಮನಾದವರು ಯಾರಿದ್ದಾರೆ?

03034061a ಸತ್ತ್ವೇನ ಕುರುತೇ ಯುದ್ಧಂ ರಾಜನ್ಸುಬಲವಾನಪಿ।
03034061c ನ ಪ್ರಮಾಣೇನ ನೋತ್ಸಾಹಾತ್ಸತ್ತ್ವಸ್ಥೋ ಭವ ಪಾಂಡವ।।

ರಾಜನ್! ಪಾಂಡವ! ಉತ್ತಮ ಬಲಶಾಲಿಯೂ ಕೂಡ ತನ್ನ ಸತ್ವದ ಆಧಾರದ ಮೇಲೆಯೇ ಯುದ್ಧವನ್ನು ಮಾಡುತ್ತಾನೆ. ನೀನೂ ಕೂಡ ಪ್ರಮಾಣದಿಂದಲ್ಲದೇ, ಉತ್ಸಾಹದಿಂದಲ್ಲದೇ, ಸತ್ವದಿಂದ ಹೋರಾಡು.

03034062a ಸತ್ತ್ವಂ ಹಿ ಮೂಲಮರ್ಥಸ್ಯ ವಿತಥಂ ಯದತೋಽನ್ಯಥಾ।
03034062c ನ ತು ಪ್ರಸಕ್ತಂ ಭವತಿ ವೃಕ್ಷಚ್ಚಾಯೇವ ಹೈಮನೀ।।

ಸತ್ವವೇ ಅರ್ಥದ ಮೂಲ ಮತ್ತು ಇದಕ್ಕೆ ಹೊರತಾದುದು ಸುಳ್ಳು. ಛಳಿಗಾಲದಲ್ಲಿ ಮರದ ನೆರಳಿನಂತೆ ಇದು ಸುಳ್ಳಲ್ಲ.

03034063a ಅರ್ಥತ್ಯಾಗೋ ಹಿ ಕಾರ್ಯಃ ಸ್ಯಾದರ್ಥಂ ಶ್ರೇಯಾಂಸಮಿಚ್ಚತಾ।
03034063c ಬೀಜೌಪಮ್ಯೇನ ಕೌಂತೇಯ ಮಾ ತೇ ಭೂದತ್ರ ಸಂಶಯಃ।।

ಕೌಂತೇಯ! ಬೀಜವನ್ನು ಬಿತ್ತುವ ಹಾಗೆ ಸಂಪತ್ತನ್ನು ಪಡೆಯಬೇಕೆಂದರೆ ಸ್ವಲ್ಪ ಸಂಪತ್ತನ್ನು ತ್ಯಾಗಮಾಡಬೇಕಾಗುತ್ತದೆ. ಇದರಲ್ಲಿ ನಿನಗೆ ಸಂಶಯವಿಲ್ಲದಿರಲಿ.

03034064a ಅರ್ಥೇನ ತು ಸಮೋಽನರ್ಥೋ ಯತ್ರ ಲಭ್ಯೇತ ನೋದಯಃ।
03034064c ನ ತತ್ರ ವಿಪಣಃ ಕಾರ್ಯಃ ಖರಕಂಡೂಯಿತಂ ಹಿ ತತ್।।

ಆದರೆ ಯಾವುದರಲ್ಲಿ ಹಾಕಿದ ಬಂಡವಾಳದಷ್ಟೇ ಅಥವಾ ಅದಕ್ಕಿಂತಲೂ ಕಡಿಮೆ ದೊರೆಯುತ್ತದೆಯೋ ಅಲ್ಲಿ ಬಂಡವಾಳವನ್ನು ಹಾಕಬಾರದು, ಯಾಕೆಂದರೆ ಅದು ತುರಿಕೆಯನ್ನು ತುರಿಸಿಕೊಂಡಹಾಗೆ.

03034065a ಏವಮೇವ ಮನುಷ್ಯೇಂದ್ರ ಧರ್ಮಂ ತ್ಯಕ್ತ್ವಾಲ್ಪಕಂ ನರಃ।
03034065c ಬೃಹಂತಂ ಧರ್ಮಮಾಪ್ನೋತಿ ಸ ಬುದ್ಧ ಇತಿ ನಿಶ್ಚಿತಃ।।

ಮನುಷ್ಯೇಂದ್ರ! ಅದೇ ರೀತಿಯಲ್ಲಿ ಸ್ವಲ್ಪ ಧರ್ಮವನ್ನು ತೊರೆದು ಮನುಷ್ಯನು ಅಧಿಕ ಧರ್ಮವನ್ನು ಪಡೆಯುತ್ತಾನೆ. ಅಂಥವನು ತಿಳಿದವನು ಎಂದು ನಿಶ್ಚಿತನಾಗುತ್ತಾನೆ.

03034066a ಅಮಿತ್ರಂ ಮಿತ್ರಸಂಪನ್ನಂ ಮಿತ್ರೈರ್ಭಿಂದಂತಿ ಪಂಡಿತಾಃ।
03034066c ಭಿನ್ನೈರ್ಮಿತ್ರೈಃ ಪರಿತ್ಯಕ್ತಂ ದುರ್ಬಲಂ ಕುರುತೇ ವಶೇ।।

ಪಂಡಿತರು ತಮ್ಮ ಮಿತ್ರರ ಮೂಲಕ ಶತ್ರುಗಳನ್ನು ಅವರ ಮಿತ್ರರಿಂದ ಬೇರ್ಪಡಿಸುತ್ತಾರೆ. ಮಿತ್ರರಿಂದ ಬೇರೆಯಾಗಿ, ಅವರಿಂದ ಪರಿತ್ಯಕ್ತನಾಗಿ ದುರ್ಬಲನಾದಾಗ ಅವನನ್ನು ವಶಪಡಿಸಿಕೊಳ್ಳುತ್ತಾರೆ.

03034067a ಸತ್ತ್ವೇನ ಕುರುತೇ ಯುದ್ಧಂ ರಾಜನ್ಸುಬಲವಾನಪಿ।
03034067c ನೋದ್ಯಮೇನ ನ ಹೋತ್ರಾಭಿಃ ಸರ್ವಾಃ ಸ್ವೀಕುರುತೇ ಪ್ರಜಾಃ।।

ರಾಜನ್! ಉತ್ತಮ ಬಲಶಾಲಿಗಳೂ ಕೂಡ ಸತ್ವದಿಂದಲೇ ಯುದ್ಧವನ್ನು ಮಾಡುತ್ತಾರೆ. ಕೇವಲ ಶ್ರಮದಿಂದ ಅಥವಾ ಸಿಹಿಮಾತುಗಳಿಂದ ಎಲ್ಲರೂ ಪ್ರಜೆಗಳನ್ನಾಗಿ ಸ್ವೀಕರಿಸುವುದಿಲ್ಲ.

03034068a ಸರ್ವಥಾ ಸಂಹತೈರೇವ ದುರ್ಬಲೈರ್ಬಲವಾನಪಿ।
03034068c ಅಮಿತ್ರಃ ಶಕ್ಯತೇ ಹಂತುಂ ಮಧುಹಾ ಭ್ರಮರೈರಿವ।।

ದುರ್ಬಲರು ಒಟ್ಟಾಗಿ ಮಿತ್ರರಿಲ್ಲದ ಬಲಶಾಲಿಯನ್ನೂ ಕೂಡ ಜೇನನ್ನು ಕೀಳುವವನನ್ನು ಜೇನುಹುಳಗಳು ಹೇಗೋ ಹಾಗೆ ಸಂಹರಿಸುತ್ತಾರೆ.

03034069a ಯಥಾ ರಾಜನ್ಪ್ರಜಾಃ ಸರ್ವಾಃ ಸೂರ್ಯಃ ಪಾತಿ ಗಭಸ್ತಿಭಿಃ।
03034069c ಅತ್ತಿ ಚೈವ ತಥೈವ ತ್ವಂ ಸವಿತುಃ ಸದೃಶೋ ಭವ।।

ರಾಜನ್! ಸೂರ್ಯನು ಹೇಗೆ ತನ್ನ ಕಿರಣಗಳಿಂದ ಸರ್ವ ಪ್ರಜೆಗಳನ್ನೂ ಪಾಲಿಸುತ್ತಾನೋ ಹಾಗೆ ನೀನೂ ಕೂಡ ಸೂರ್ಯನಂತೆ ಆಗಬೇಕು.

03034070a ಏತದ್ಧ್ಯಪಿ ತಪೋ ರಾಜನ್ಪುರಾಣಮಿತಿ ನಃ ಶ್ರುತಂ।
03034070c ವಿಧಿನಾ ಪಾಲನಂ ಭೂಮೇರ್ಯತ್ಕೃತಂ ನಃ ಪಿತಾಮಹೈಃ।।

ರಾಜನ್! ನಮ್ಮ ಪಿತಾಮಹರು ಮಾಡಿದಹಾಗೆ ವಿಧಿಯಿಂದ ಈ ಭೂಮಿಯನ್ನು ಪಾಲನ ಮಾಡುವುದೇ ನಮ್ಮ ಪುರಾತನ ತಪಸ್ಸು ಎಂದು ಕೇಳಿಲ್ಲವೇ?

03034071a ಅಪೇಯಾತ್ಕಿಲ ಭಾಃ ಸೂರ್ಯಾಲ್ಲಕ್ಷ್ಮೀಶ್ಚಂದ್ರಮಸಸ್ತಥಾ।
03034071c ಇತಿ ಲೋಕೋ ವ್ಯವಸಿತೋ ದೃಷ್ಟ್ವೇಮಾಂ ಭವತೋ ವ್ಯಥಾಂ।।

ನಿನ್ನ ಈ ವ್ಯಥೆಯನ್ನು ನೋಡಿ ಲೋಕದ ಜನರು ಸೂರ್ಯನು ತನ್ನ ಕಾಂತಿಯನ್ನು ಮತ್ತು ಚಂದ್ರನು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದಾರೋ ಎಂದು ಚಿಂತೆಗೊಳಗಾಗಿದ್ದಾರೆ.

03034072a ಭವತಶ್ಚ ಪ್ರಶಂಸಾಭಿರ್ನಿಂದಾಭಿರಿತರಸ್ಯ ಚ।
03034072c ಕಥಾಯುಕ್ತಾಃ ಪರಿಷದಃ ಪೃಥಗ್ರಾಜನ್ಸಮಾಗತಾಃ।।

ರಾಜನ್! ಜನರು ಸೇರಿದ ಪರಿಷತ್ತುಗಳಲ್ಲೆಲ್ಲ ನಿನ್ನ ಪ್ರಶಂಸೆ ಮತ್ತು ಇತರರ ನಿಂದನೆಯೇ ನಡೆಯುತ್ತದೆ.

03034073a ಇದಮಭ್ಯಧಿಕಂ ರಾಜನ್ಬ್ರಾಹ್ಮಣಾ ಗುರವಶ್ಚ ತೇ।
03034073c ಸಮೇತಾಃ ಕಥಯಂತೀಹ ಮುದಿತಾಃ ಸತ್ಯಸಂಧತಾಂ।।
03034074a ಯನ್ನ ಮೋಹಾನ್ನ ಕಾರ್ಪಣ್ಯಾನ್ನ ಲೋಭಾನ್ನ ಭಯಾದಪಿ।
03034074c ಅನೃತಂ ಕಿಂ ಚಿದುಕ್ತಂ ತೇ ನ ಕಾಮಾನ್ನಾರ್ಥಕಾರಣಾತ್।।

ರಾಜನ್! ಇದಕ್ಕೂ ಹೆಚ್ಚಿನದುದೆಂದರೆ, ಬ್ರಾಹ್ಮಣರು, ಹಿರಿಯರು ಒಟ್ಟಿಗೆ ಸೇರಿದಾಗಲೆಲ್ಲ, ಮೋಹವಿಲ್ಲದ, ಕಾರ್ಪಣ್ಯದಿಂದಲ್ಲದ, ಲೋಭದಿಂದಲ್ಲದ, ಭಯದಿಂದಲ್ಲದ, ಅನೃತವಲ್ಲದ, ಕಾಮದಿಂದಲ್ಲದ, ಅರ್ಥಕ್ಕಾಗಿರದ ನಿನ್ನ ಈ ಸತ್ಯಸಂಧತೆಯನ್ನೇ ಸಂತೋಷದಿಂದ ಮಾತನಾಡಿಕೊಳ್ಳುತ್ತಾರೆ.

03034075a ಯದೇನಃ ಕುರುತೇ ಕಿಂ ಚಿದ್ರಾಜಾ ಭೂಮಿಮವಾಪ್ನುವನ್।
03034075c ಸರ್ವಂ ತನ್ನುದತೇ ಪಶ್ಚಾದ್ಯಜ್ಞೈರ್ವಿಪುಲದಕ್ಷಿಣೈಃ।।

ಭೂಮಿಯನ್ನು ಪಡೆಯುವಾಗ ರಾಜನು ಸ್ವಲ್ಪ ಏನಾದರೂ ಪಾಪವನ್ನು ಗಳಿಸಿದರೂ ಅವೆಲ್ಲವನ್ನೂ ನಂತರ ವಿಪುಲ ದಕ್ಷಿಣೆಗಳನ್ನಿತ್ತು ಯಜ್ಞಗಳ ಮೂಲಕ ಇಲ್ಲವಾಗಿಸಬಹುದು.

03034076a ಬ್ರಾಹ್ಮಣೇಭ್ಯೋ ದದದ್ಗ್ರಾಮಾನ್ಗಾಶ್ಚ ರಾಜನ್ಸಹಸ್ರಶಃ।
03034076c ಮುಚ್ಯತೇ ಸರ್ವಪಾಪೇಭ್ಯಸ್ತಮೋಭ್ಯ ಇವ ಚಂದ್ರಮಾಃ।।

ಚಂದ್ರನ ಮೂಲಕ ಕತ್ತಲೆಯಿಂದ ಬಿಡುಗಡೆಹೊಂದುವಂತೆ ಬ್ರಾಹ್ಮಣರಿಗೆ ಗ್ರಾಮಗಳನ್ನೂ, ಸಹಸ್ರಾರು ಗೋವುಗಳನ್ನೂ ಕೊಡುವುದರಿಂದ ಸರ್ವಪಾಪಗಳಿಂದ ಬಿಡುಗಡೆಯಾಗುತ್ತದೆ.

03034077a ಪೌರಜಾನಪದಾಃ ಸರ್ವೇ ಪ್ರಾಯಶಃ ಕುರುನಂದನ।
03034077c ಸವೃದ್ಧಬಾಲಾಃ ಸಹಿತಾಃ ಶಂಸಂತಿ ತ್ವಾಂ ಯುಧಿಷ್ಠಿರ।।

ಕುರುನಂದನ! ಯುಧಿಷ್ಠಿರ! ಗ್ರಾಮೀಣ ಮತ್ತು ಪುರಜನರೆಲ್ಲರೂ, ವೃದ್ಧರೂ ಬಾಲಕರೂ ಸೇರಿ ನಿನ್ನನ್ನು ಪ್ರಾಯಶಃ ಹೊಗಳುತ್ತಾರೆ.

03034078a ಶ್ವದೃತೌ ಕ್ಷೀರಮಾಸಕ್ತಂ ಬ್ರಹ್ಮ ವಾ ವೃಷಲೇ ಯಥಾ।
03034078c ಸತ್ಯಂ ಸ್ತೇನೇ ಬಲಂ ನಾರ್ಯಾಂ ರಾಜ್ಯಂ ದುರ್ಯೋಧನೇ ತಥಾ।।
03034079a ಇತಿ ನಿರ್ವಚನಂ ಲೋಕೇ ಚಿರಂ ಚರತಿ ಭಾರತ।
03034079c ಅಪಿ ಚೈತತ್ಸ್ತ್ರಿಯೋ ಬಾಲಾಃ ಸ್ವಾಧ್ಯಾಯಮಿವ ಕುರ್ವತೇ।।

ಭಾರತ! ದುರ್ಯೋಧನನಲ್ಲಿ ರಾಜ್ಯವಿರುವುದು ನಾಯಿಯ ಚರ್ಮದಿಂದ ಮಾಡಿದ ಚೀಲದಲ್ಲಿ ಹಾಲಿರುವಂತೆ, ಕೀಳುಜಾತಿಯವನಲ್ಲಿ ವೇದಗಳಿರುವಂತೆ, ಕಳ್ಳನಲ್ಲಿ ಸತ್ಯಭಾಷಣವಿರುವಂತೆ ಮತ್ತು ಹೆಂಗಸರಲ್ಲಿ ಪರಾಕ್ರಮವಿರುವಂತೆ ಸರ್ವಥಾ ಅನುಚಿತವಾದುದು ಎಂದು ಜನರು ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ನಿರ್ವಚನವು ಹಿಂದಿನಿಂದಲೂ ಲೋಕದಲ್ಲಿ ಪ್ರಸಿದ್ಧವಾಗಿದೆ. ವಟುಗಳು ಅನುದಿನವೂ ವೇದವನ್ನು ಅಧ್ಯಯನ ಮಾಡುವಂತೆ ಸ್ತ್ರೀಯರೂ ಮಕ್ಕಳೂ ಈ ಶ್ಲೋಕವನ್ನು ಹೇಳುತ್ತಿರುತ್ತಾರೆ.

03034080a ಸ ಭವಾನ್ರಥಮಾಸ್ಥಾಯ ಸರ್ವೋಪಕರಣಾನ್ವಿತಂ।
03034080c ತ್ವರಮಾಣೋಽಭಿನಿರ್ಯಾತು ಚಿರಮರ್ಥೋಪಪಾದಕಂ।।
03034081a ವಾಚಯಿತ್ವಾ ದ್ವಿಜಶ್ರೇಷ್ಠಾನದ್ಯೈವ ಗಜಸಾಹ್ವಯಂ।

ನಿನ್ನ ರಥವನ್ನೇರಿ, ಸರ್ವೋಪಕರಣಗಳನ್ನೂ ತೆಗೆದುಕೊಂಡು, ತ್ವರೆಮಾಡಿ, ದ್ವಿಜಶ್ರೇಷ್ಠರು ನಿನಗೆ ಸಿದ್ಧಿಯು ಬೇಗ ಆಗಲಿ ಎಂದು ವಾಚಿಸುತ್ತಿರಲು, ಇಂದೇ ಗಜಸಾಹ್ವಯಕ್ಕೆ ಹೊರಡು.

03034081c ಅಸ್ತ್ರವಿದ್ಭಿಃ ಪರಿವೃತೋ ಭ್ರಾತೃಭಿರ್ದೃಢಧನ್ವಿಭಿಃ।।
03034081e ಆಶೀವಿಷಸಮೈರ್ವೀರೈರ್ಮರುದ್ಭಿರಿವ ವೃತ್ರಹಾ।।

ಅಸ್ತ್ರದಂತಿರುವ ನಿನ್ನ ಈ ತಮ್ಮಂದಿರಿಂದ ಸುತ್ತುವರೆಯಲ್ಪಟ್ಟು, ಸರ್ಪಗಳ ವಿಷಸಮಾನ ಅವರ ಆಯುಧಗಳೊಂದಿಗೆ ಮರುತ್ತುಗಳೊಡನೆ ವೃತ್ರಹನು ಹೇಗೋ ಹಾಗೆ ಹೊರಡು.

03034082a ಅಮಿತ್ರಾಂಸ್ತೇಜಸಾ ಮೃದ್ನನ್ನಸುರೇಭ್ಯ ಇವಾರಿಹಾ।
03034082c ಶ್ರಿಯಮಾದತ್ಸ್ವ ಕೌಂತೇಯ ಧಾರ್ತರಾಷ್ಟ್ರಾನ್ಮಹಾಬಲ।।

ಕೌಂತೇಯ! ಮಹಾಬಲ! ಅಸುರರನ್ನು ಇಂದ್ರನು ಸಂಹರಿಸಿದಂತೆ ನಿನ್ನ ತೇಜಸ್ಸಿನಿಂದ ಶತ್ರುಗಳನ್ನು ಸಂಹರಿಸಿ ನಿನ್ನ ಸಂಪತ್ತನ್ನು ತಿರುಗಿ ಪಡೆ.

03034083a ನ ಹಿ ಗಾಂಡೀವಮುಕ್ತಾನಾಂ ಶರಾಣಾಂ ಗಾರ್ಧ್ರವಾಸಸಾಂ।
03034083c ಸ್ಪರ್ಶಮಾಶೀವಿಷಾಭಾನಾಂ ಮರ್ತ್ಯಃ ಕಶ್ಚನ ಸಂಸಹೇತ್।।

ಗಾಂಡೀವದಿಂದ ಬಿಡಲ್ಪಟ್ಟ ಹದ್ದಿನ ಪುಕ್ಕಗಳನ್ನು ಧರಿಸಿದ ಬಾಣಗಳ ಆಘಾತವನ್ನು ತಡೆದುಕೊಳ್ಳುವ ಯಾವ ಮನುಷ್ಯನೂ ಈ ಭೂಮಿಯಲ್ಲಿ ಇಲ್ಲ.

03034084a ನ ಸ ವೀರೋ ನ ಮಾತಂಗೋ ನ ಸದಶ್ವೋಽಸ್ತಿ ಭಾರತ।
03034084c ಯಃ ಸಹೇತ ಗದಾವೇಗಂ ಮಮ ಕ್ರುದ್ಧಸ್ಯ ಸಂಯುಗೇ।।

ಭಾರತ! ಯುದ್ಧದಲ್ಲಿ ಕೃದ್ಧನಾದ ನನ್ನ ಗದಾವೇಗವನ್ನು ಸಹಿಸುವ ಯಾರೊಬ್ಬ ವೀರನೂ ಇಲ್ಲ, ಆನೆಯೂ ಇಲ್ಲ, ಮತ್ತು ಒಳ್ಳೆಯ ಕುದುರೆಯೂ ಇಲ್ಲ.

03034085a ಸೃಂಜಯೈಃ ಸಹ ಕೈಕೇಯೈರ್ವೃಷ್ಣೀನಾಮೃಷಭೇಣ ಚ।
03034085c ಕಥಂ ಸ್ವಿದ್ಯುಧಿ ಕೌಂತೇಯ ರಾಜ್ಯಂ ನ ಪ್ರಾಪ್ನುಯಾಮಹೇ।।

ಸೃಂಜಯರ, ಕೈಕೇಯರ, ವೃಷ್ಣಿವೃಷಭರ ಜೊತೆಗೂಡಿ ನಮಗೆ ಯುದ್ಧದಲ್ಲಿ ರಾಜ್ಯವನ್ನು ಹಿಂದೆ ಪಡೆಯಲು ಏಕೆ ಸಾಧ್ಯವಾಗುವುದಿಲ್ಲ?”

ಸಮಾಪ್ತಿ

ಇತಿ ಶ್ರೀ ಆರಣ್ಯಕಪರ್ವಣಿ ವನಪರ್ವಣಿ ಕೈರಾತಪರ್ವಣಿ ಭೀಮವಾಕ್ಯೇ ಚತುಸ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಭೀಮವಾಕ್ಯದಲ್ಲಿ ಮೂವತ್ತ್ನಾಲ್ಕನೆಯ ಅಧ್ಯಾಯವು.


  1. ಭಾರತದರ್ಶನ: ಈ ಕಾರಣದಿಂದಲೇ ಧರ್ಮಾರ್ಥಕಾಮಗಳು ಹಿರಿಯರಿಂದ ಅನುಕ್ರಮವಾಗಿ ಹೇಳಲ್ಪಟ್ಟಿವೆ. ಧರ್ಮದಿಂದ ಅರ್ಥಪ್ರಾಪ್ತಿಯೂ ಅರ್ಥದಿಂದ ಕಾಮಪ್ರಾಪ್ತಿಯೂ ಆಗುತ್ತದೆ. ಯಾರೇ ಆಗಲೀ ಕೇವಲ ಧರ್ಮವನ್ನೇ ಅನುಸರಿಸುತ್ತಾ ಅರ್ಥ-ಕಾಮಗಳನ್ನು ತಿರಸ್ಕರಿಸಬಾರದು. ಅರ್ಥವನ್ನೇ ಆಶ್ರಯಿಸಿ ಧರ್ಮ-ಕಾಮಗಳನ್ನು ಬಿಡಬಾರದು. ಅಥವಾ ಕೇವಲ ಕಾಮಿಯಾಗಿ ಧರ್ಮಾರ್ಥಗಳನ್ನೂ ಅಲಕ್ಷಿಸಬಾರದು. ↩︎

  2. ಭಾರತ ದರ್ಶನ: ದಿನದ ಪೂರ್ವಾಹ್ಣದಲ್ಲಿ ಧರ್ಮಕಾರ್ಯಗಳನ್ನು ಮಾಡಬೇಕು, ಮಧ್ಯಾಹ್ನದಲ್ಲಿ ಧನಾರ್ಜನೆಯನ್ನು ಮಾಡಬೇಕು, ಸಾಯಂಕಾಲದಲ್ಲಿ ತನ್ನ ಮನೋಗತವಾದ ಅಭಿಲಾಷೆಯನ್ನು ಪೂರೈಸಿಕೊಳ್ಳಬೇಕು. ಹೀಗೆ ಮಾಡಬೇಕೆಂಬುದೇ ಶಾಸ್ತ್ರವಿಧಿಯಾಗಿದೆ. ↩︎

  3. ಭಾರತದರ್ಶನ: ಬೇಡನು ಕಾಡುಪ್ರಾಣಿಗಳಿಗೆ ಆಹಾರವನ್ನು ಎರಚಿ ಅವು ಬಂದೊಡನೆಯೇ ಬಲೆಯನ್ನು ಬೀಸಿ ಅವುಗಳನ್ನು ಹಿಡಿಯುವಂತೆ ಅಥವಾ ಬೆಸ್ತನು ಗಾಳಕ್ಕೆ ಹುಳುವನ್ನು ಕಟಿ ಅದನ್ನು ನೀರಿನಲ್ಲಿ ಬಿಟ್ಟು ಮೀನು ಹಿಡಿಯುವಂತೆ, ರಾಜರು ಶತ್ರುಪಕ್ಷದಲ್ಲಿರುವ ಅಧಿಕಾರಿಗಳನ್ನು ಏಕಾಂತದಲ್ಲಿ ಸಂಧಿಸಿ, ಅವರಿಗೆ ಯಥೇಚ್ಛ ಧನ-ಕನಕ-ವಸ್ತು-ವಾಹನಗಳನ್ನು ಕೊಡುವುದಾಗಿ ಮಾತುಕೊಟ್ಟು, ಅವರನ್ನು ಶತ್ರುರಾಜನಿಂದ ಬೇರ್ಪಡಿಸಿ, ಶತ್ರುರಾಜ್ಯದ ರಹಸ್ಯಗಳನ್ನು ತಿಳಿದು, ಶತ್ರುರಾಜರನ್ನು ಪರಾಭವಗೊಳಿಸಿ ರಾಜ್ಯವನ್ನು ವಶಪಡೆದುಕೊಳ್ಳುತ್ತಾರೆ. ↩︎