033 ದ್ರೌಪದೀಪರಿತಾಪವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 33

ಸಾರ

ಜೀವಿಗಳು ಕರ್ಮದಿಂದಲೇ ಎಲ್ಲವನ್ನೂ ಪಡೆಯುತ್ತವೆ ಎನ್ನುವುದನ್ನೂ (1-11), ಅದೃಷ್ಟ ಮತ್ತು ದೈವನಿಶ್ಚಯದ ಪಾತ್ರವನ್ನೂ (12-22), ಪುರುಷ ಪ್ರಯತ್ನದ ಪ್ರಭಾವವನ್ನೂ (23-30) ದ್ರೌಪದಿಯು ಪ್ರತಿಪಾದಿಸುವುದು. ಆದರೆ ಕರ್ಮವನ್ನೇ ಮಾಡದಿದ್ದರೆ ಫಲವೇ ದೊರೆಯುವುದಿಲ್ಲವೆನ್ನುವುದು (31-58).

03033001 ದ್ರೌಪದ್ಯುವಾಚ।
03033001a ನಾವಮನ್ಯೇ ನ ಗರ್ಹೇ ಚ ಧರ್ಮಂ ಪಾರ್ಥ ಕಥಂ ಚನ।
03033001c ಈಶ್ವರಂ ಕುತ ಏವಾಹಮವಮಂಸ್ಯೇ ಪ್ರಜಾಪತಿಂ।।

ದ್ರೌಪದಿಯು ಹೇಳಿದಳು: “ಪಾರ್ಥ! ನಾನು ಯಾವುದೇ ರೀತಿಯಲ್ಲಿ ಧರ್ಮದ ಅವಹೇಳನ ಮಾಡುವುದಿಲ್ಲ ಮತ್ತು ತಿರಸ್ಕರಿಸುವುದಿಲ್ಲ. ಪ್ರಜಾಪತಿ ಈಶ್ವರನನ್ನು (ಚರಾಚರ ಪ್ರಾಣಿಗಳಿಗೂ ಸ್ವಾಮಿಯಾದ ಪರಮಾತ್ಮನನ್ನು) ನಾನೇಕೆ ನಿಂದಿಸಲಿ?

03033002a ಆರ್ತಾಹಂ ಪ್ರಲಪಾಮೀದಮಿತಿ ಮಾಂ ವಿದ್ಧಿ ಭಾರತ।
03033002c ಭೂಯಶ್ಚ ವಿಲಪಿಷ್ಯಾಮಿ ಸುಮನಾಸ್ತನ್ನಿಬೋಧ ಮೇ।।

ಭಾರತ! ದುಃಖಿತಳಾಗಿ ಪ್ರಲಾಪಮಾಡುತ್ತಿದ್ದೇನೆ ಎಂದು ನನ್ನನ್ನು ಅರ್ಥಮಾಡಿಕೋ. ಈ ರೀತಿ ಹಿಂದೆಯೂ ವಿಲಪಿಸಿದ್ದೆ. ಈಗಲೂ ವಿಲಪಿಸುತ್ತಿದ್ದೇನೆ. ನನ್ನನ್ನು ಅರ್ಥಮಾಡಿಕೋ.

03033003a ಕರ್ಮ ಖಲ್ವಿಹ ಕರ್ತವ್ಯಂ ಜಾತೇನಾಮಿತ್ರಕರ್ಶನ।
03033003c ಅಕರ್ಮಾಣೋ ಹಿ ಜೀವಂತಿ ಸ್ಥಾವರಾ ನೇತರೇ ಜನಾಃ।।

ಅಮಿತ್ರಕರ್ಶನ! ಹುಟ್ಟಿರುವ ಎಲ್ಲವಕ್ಕೂ ಕರ್ಮಮಾಡುವುದು ಕರ್ತವ್ಯ ತಾನೆ? ಸ್ಥಾವರಗಳು (ಜೀವವಿಲ್ಲದವುಗಳು) ಮಾತ್ರ ಕರ್ಮಮಾಡುವುದಿಲ್ಲ. ಇತರ ಎಲ್ಲರೂ ಕರ್ಮಗಳನ್ನು ಮಾಡುತ್ತಾರೆ.

03033004a ಆ ಮಾತೃಸ್ತನಪಾನಾಚ್ಚ ಯಾವಚ್ಶಯ್ಯೋಪಸರ್ಪಣಂ।
03033004c ಜಂಗಮಾಃ ಕರ್ಮಣಾ ವೃತ್ತಿಮಾಪ್ನುವಂತಿ ಯುಧಿಷ್ಠಿರ।।
03033005a ಜಂಗಮೇಷು ವಿಶೇಷೇಣ ಮನುಷ್ಯಾ ಭರತರ್ಷಭ।
03033005c ಇಚ್ಚಂತಿ ಕರ್ಮಣಾ ವೃತ್ತಿಮವಾಪ್ತುಂ ಪ್ರೇತ್ಯ ಚೇಹ ಚ।।

ಯುಧಿಷ್ಠಿರ! ಭರತರ್ಷಭ! ತಾಯಿಯ ಮೊಲೆಯ ಹಾಲನ್ನುಣ್ಣುವುದರಿಂದ ಹಿಡಿದು ಸಾವಿನ ಹಾಸಿಗೆಹಿಡಿಯುವವರೆಗೆ ಚಲಿಸುವ ಎಲ್ಲವೂ, ಅವರಲ್ಲೂ ಮುಖ್ಯವಾಗಿ ಮನುಷ್ಯನು, ಕರ್ಮಮಾಡಿಯೇ ಜೀವವೇತನವನ್ನು ಗಳಿಸುತ್ತವೆ. ಕರ್ಮಗಳ ಮೂಲಕವೇ ಇಲ್ಲಿಯ ಮತ್ತು ಮುಂದಿನ ಜೀವಗಳನ್ನು ಗಳಿಸುತ್ತಾರೆ (ಕರ್ಮಗಳ ಮೂಲಕವೇ ಬೇರೆ ಬೇರೆ ಜನ್ಮಗಳನ್ನು ಪಡೆಯುತ್ತಾರೆ)1.

03033006a ಉತ್ಥಾನಮಭಿಜಾನಂತಿ ಸರ್ವಭೂತಾನಿ ಭಾರತ।
03033006c ಪ್ರತ್ಯಕ್ಷಂ ಫಲಮಶ್ನಂತಿ ಕರ್ಮಣಾಂ ಲೋಕಸಾಕ್ಷಿಕಂ।।

ಭಾರತ! ಸರ್ವಜೀವಿಗಳೂ ಉತ್ಥಾನವನ್ನು (ವಿಕಾಸವನ್ನು) ಚೆನ್ನಾಗಿ ತಿಳಿದುಕೊಂಡಿವೆ. ಎಲ್ಲ ಲೋಕಗಳಿಗೂ ಕಾಣಿಸುವಂತೆ ಪ್ರತ್ಯಕ್ಷವಾಗಿ ತಮ್ಮ ತಮ್ಮ ಕರ್ಮಗಳ ಫಲವನ್ನು ಅನುಭವಿಸುತ್ತವೆ.

03033007a ಪಶ್ಯಾಮಿ ಸ್ವಂ ಸಮುತ್ಥಾನಮುಪಜೀವಂತಿ ಜಂತವಃ।
03033007c ಅಪಿ ಧಾತಾ ವಿಧಾತಾ ಚ ಯಥಾಯಮುದಕೇ ಬಕಃ।।

ನನಗೆ ಕಾಣುವಂತೆ ಹುಟ್ಟಿದವೆಲ್ಲವೂ, ಧಾತಾ (ಫಲವನ್ನು ಕೊಡುವವನು), ವಿಧಾತ (ಕರ್ಮಗಳನ್ನು ನಡೆಸುವವನು) ರನ್ನೂ, ನೀರನಲ್ಲಿರುವ ಬಕಪಕ್ಷಿಯೂ ಸೇರಿ, ತಮ್ಮ ತಮ್ಮ ವಿಕಾಸವನ್ನು ಮತ್ತೆ ಮತ್ತೆ ಬದುಕುತ್ತಿದ್ದಾರೆ2.

03033008a ಸ್ವಕರ್ಮ ಕುರು ಮಾ ಗ್ಲಾಸೀಃ ಕರ್ಮಣಾ ಭವ ದಂಶಿತಃ।
03033008c ಕೃತ್ಯಂ ಹಿ ಯೋಽಭಿಜಾನಾತಿ ಸಹಸ್ರೇ ನಾಸ್ತಿ ಸೋಽಸ್ತಿ ವಾ।।

ಆದುದರಿಂದ ನಿನ್ನಕರ್ಮವನ್ನು ಮಾಡು! ಅನುಮಾನಪಡಬೇಡ (ಹಿಂಜರಿಯಬೇಡ)! ಕರ್ಮದಿಂದ ಗಟ್ಟಿಯಾಗು (ಕರ್ಮದ ಕವಚವನ್ನು ಕಟ್ಟಿಕೋ)! ಯಾಕೆಂದರೆ ತಾನು ಇದೇ ಕರ್ಮವನ್ನು ಮಾಡಬೇಕು ಎಂದು ತಿಳಿದವನು ಸಾವಿರರಲ್ಲಿ ಒಬ್ಬನಾದರೂ ಇರುವನೋ ಇಲ್ಲವೋ3!

03033009a ತಸ್ಯ ಚಾಪಿ ಭವೇತ್ಕಾರ್ಯಂ ವಿವೃದ್ಧೌ ರಕ್ಷಣೇ ತಥಾ।
03033009c ಭಕ್ಷ್ಯಮಾಣೋ ಹ್ಯನಾವಾಪಃ ಕ್ಷೀಯತೇ ಹಿಮವಾನಪಿ।।

ತನ್ನ ಅಭಿವೃದ್ಧಿಗೋಸ್ಕರ ಮತ್ತು ರಕ್ಷಣೆಗೋಸ್ಕರ ಕೆಲಸವನ್ನು ಮಾಡಲೇ ಬೇಕಾಗುತ್ತದೆ. ಇನ್ನೂ ಗಳಿಸದೇ ಗಳಿಸಿದುದೆಲ್ಲವನ್ನೂ ತಿಂದರೆ ಹಿಮಾಲಯಪರ್ವತದಷ್ಟಿದ್ದರೂ ಸಾಕಾಗುವುದಿಲ್ಲ.

03033010a ಉತ್ಸೀದೇರನ್ಪ್ರಜಾಃ ಸರ್ವಾ ನ ಕುರ್ಯುಃ ಕರ್ಮ ಚೇದ್ಯದಿ।
03033010c ಅಪಿ ಚಾಪ್ಯಫಲಂ ಕರ್ಮ ಪಶ್ಯಾಮಃ ಕುರ್ವತೋ ಜನಾನ್।
03033010e ನಾನ್ಯಥಾ ಹ್ಯಭಿಜಾನಂತಿ ವೃತ್ತಿಂ ಲೋಕೇ ಕಥಂ ಚನ।।

ತಮ್ಮ ತಮ್ಮ ಕೆಲಸಗಳನ್ನು ಮಾಡದೇ ಇದ್ದರೆ ಪ್ರಾಣಿಗಳೆಲ್ಲವೂ ನಾಶಹೊಂದುತ್ತಿದ್ದವು! ಕರ್ಮಗಳನ್ನು ಮಾಡಿಯೂ ಫಲವನ್ನು ಪಡೆಯದೇ ಇರುವ ಪ್ರಾಣಿಗಳನ್ನು ನೋಡಿದ್ದೇವೆಯೇ? ವೃತ್ತಿಯನ್ನು ಮಾಡದೇ ಇರುವವರನ್ನು ಲೋಕಗಳಲ್ಲಿ ಯಾರನ್ನೂ ತಿಳಿದಿಲ್ಲ4!

03033011a ಯಶ್ಚ ದಿಷ್ಟಪರೋ ಲೋಕೇ ಯಶ್ಚಾಯಂ ಹಠವಾದಕಃ।
03033011c ಉಭಾವಪಸದಾವೇತೌ ಕರ್ಮಬುದ್ಧಿಃ ಪ್ರಶಸ್ಯತೇ।।

ಲೋಕದಲ್ಲಿ ಎಲ್ಲವೂ ಮೊದಲೇ ನಿಶ್ಚಿತವಾಗಿರುತ್ತದೆ ಎಂದು ಹೇಳುವವರು ಮತ್ತು ಲೋಕದಲ್ಲಿ ಎಲ್ಲವೂ ಅದೃಷ್ಟ (ಯಾವುದೂ ನಿಶ್ಚಿತವಾಗಿಲ್ಲ! ಎಲ್ಲವೂ ತನಗಿಷ್ಟಬಂದಂತೆ ನಡೆಯುತ್ತವೆ) ಎನ್ನುವವರು ಇಬ್ಬರೂ ಹಠವಾದಿಗಳು (ಪರಸ್ಪರರನ್ನು ವಿರೋಧಿಸುವವರು). ಇವೆರಡು ವಾದಗಳಿಗಿಂತಲೂ, ಲೋಕದಲ್ಲಿ ಎಲ್ಲವೂ ಕರ್ಮವನ್ನು ಮಾಡುವವನ ಬುದ್ಧಿಯ ಮೇಲೆ ಅವಲಂಬಿಸಿದೆ ಎನ್ನುವ ವಾದವನ್ನೇ ಪ್ರಶಂಸಿಸಬೇಕು[^5].

03033012a ಯೋ ಹಿ ದಿಷ್ಟಮುಪಾಸೀನೋ ನಿರ್ವಿಚೇಷ್ಟಃ ಸುಖಂ ಸ್ವಪೇತ್।
03033012c ಅವಸೀದೇತ್ಸುದುರ್ಬುದ್ಧಿರಾಮೋ ಘಟ ಇವಾಂಭಸಿ।।

ದೈವವನ್ನು (ಲೋಕದಲ್ಲಿ ನಡೆಯುವುದೆಲ್ಲವೂ ಮೊದಲೇ ನಿರ್ಧರಿತಕೊಂಡಿದೆ ಎಂದು) ನಂಬಿ, ಏನನ್ನೂ ಮಾಡದೇ ಸುಖದ ನಿದ್ದೆಯನ್ನು ಮಾಡುವ ಸುದುರ್ಬುದ್ಧಿಯು ನೀರಿನಲ್ಲಿ ತುಂಬಿದ ಕೊಡಪಾನದಂತೆ ಮುಳುಗಿ ಹೋಗುತ್ತಾನೆ5.

03033013a ತಥೈವ ಹಠಬುದ್ಧಿರ್ಯಃ ಶಕ್ತಃ ಕರ್ಮಣ್ಯಕರ್ಮಕೃತ್।
03033013c ಆಸೀತ ನ ಚಿರಂ ಜೀವೇದನಾಥ ಇವ ದುರ್ಬಲಃ।।

ಹಾಗೆಯೇ ಅದೃಷ್ಟವನ್ನೇ ನಂಬಿರುವವನು, ಕರ್ಮವನ್ನೆಸಗಲು ಶಕ್ತನಿದ್ದರೂ ಕರ್ಮಮಾಡದೇ ಕುಳಿತುಕೊಳ್ಳುವವನು, ರಕ್ಷಣೆಯೇ ಇಲ್ಲದ ದುರ್ಬಲನಂತೆ ಹೆಚ್ಚು ಕಾಲ ಬದುಕುವುದಿಲ್ಲ6.

03033014a ಅಕಸ್ಮಾದಪಿ ಯಃ ಕಶ್ಚಿದರ್ಥಂ ಪ್ರಾಪ್ನೋತಿ ಪೂರುಷಃ।
03033014c ತಂ ಹಠೇನೇತಿ ಮನ್ಯಂತೇ ಸ ಹಿ ಯತ್ನೋ ನ ಕಸ್ಯ ಚಿತ್।।

ಅಕಸ್ಮಾತ್ತಾಗಿ ಒಬ್ಬ ಪುರುಷನು ಸಂಪತ್ತನ್ನು ಪಡೆದರೆ ಅವನಿಗೆ ಅದು ಅದೃಷ್ಟವಶಾತ್ ದೊರೆಯಿತೆಂದು ಹೇಳುತ್ತಾರೆಯೇ ಹೊರತು ಅದು ಅವನ ಪ್ರಯತ್ನದಿಂದ ದೊರೆಯಿತು ಎಂದು ಯಾರೂ ಹೇಳುವುದಿಲ್ಲ.

03033015a ಯಚ್ಚಾಪಿ ಕಿಂ ಚಿತ್ಪುರುಷೋ ದಿಷ್ಟಂ ನಾಮ ಲಭತ್ಯುತ।
03033015c ದೈವೇನ ವಿಧಿನಾ ಪಾರ್ಥ ತದ್ದೈವಮಿತಿ ನಿಶ್ಚಿತಂ।।

ಏನನ್ನು ಪಡೆದರೂ ಅದನ್ನು ಅವರು ದೈವವೆಂದು (ಇದು ಮೊದಲೇ ನಿಶ್ಚಯಿಸಲ್ಪಟ್ಟಿತ್ತು ಎಂದು) ಕರೆಯುತ್ತಾರೆ ಎಂದು ಮೊದಲೇ ದೈವದಿಂದ ನಿಶ್ಚಿತಗೊಂಡಿರುತ್ತದೆ7.

03033016a ಯತ್ಸ್ವಯಂ ಕರ್ಮಣಾ ಕಿಂ ಚಿತ್ಫಲಮಾಪ್ನೋತಿ ಪೂರುಷಃ।
03033016c ಪ್ರತ್ಯಕ್ಷಂ ಚಕ್ಷುಷಾ ದೃಷ್ಟಂ ತತ್ಪೌರುಷಮಿತಿ ಸ್ಮೃತಂ।।

ಆದರೆ ತನ್ನದೇ ಕರ್ಮದಿಂದ ಒಬ್ಬ ಪುರುಷನು ಕಣ್ಣುಗಳಿಗೆ ಕಾಣುವಂತಹ ಪ್ರತ್ಯಕ್ಷ ಏನಾದರೂ ಫಲವನ್ನು ಪಡೆದನೆಂದರೆ ಅದು ಪುರುಷಪ್ರಯತ್ನದಿಂದ ಆಯಿತು ಎನ್ನುತ್ತಾರೆ.

03033017a ಸ್ವಭಾವತಃ ಪ್ರವೃತ್ತೋಽನ್ಯಃ ಪ್ರಾಪ್ನೋತ್ಯರ್ಥಾನಕಾರಣಾತ್।
03033017c ತತ್ಸ್ವಭಾವಾತ್ಮಕಂ ವಿದ್ಧಿ ಫಲಂ ಪುರುಷಸತ್ತಮ।।

ಪುರುಷಸತ್ತಮ! ಸ್ವಭಾವತಃ ಕರ್ಮಗಳನ್ನೆಸಗುವಂಥಿರುವವನು ತನ್ನ ಪ್ರಯತ್ನದಿಂದ ಹೊರತಾಗಿ ಬೇರೆ ಯಾವ ಕಾರಣದಿಂದಲೂ ಸಂಪತ್ತನ್ನು ಹೊಂದುವುದಿಲ್ಲ. ಅದು (ಪ್ರಯತ್ನಕ್ಕೆ ಪ್ರತಿಯಾಗಿ) ಸ್ವಾಭಾವಿಕವಾಗಿ ತಾನಾಗಿಯೇ ಬಂದ ಫಲ ಎಂದು ತಿಳಿ8.

03033018a ಏವಂ ಹಠಾಚ್ಚ ದೈವಾಚ್ಚ ಸ್ವಭಾವಾತ್ಕರ್ಮಣಸ್ತಥಾ।
03033018c ಯಾನಿ ಪ್ರಾಪ್ನೋತಿ ಪುರುಷಸ್ತತ್ಫಲಂ ಪೂರ್ವಕರ್ಮಣಃ।।

ಹೀಗೆ ಅದೃಷ್ಟದಿಂದ ಮತ್ತು ದೈವನಿಶ್ಚಯದಿಂದ, ಸ್ವಾಭಾವಿಕವಾಗಿ ಅಥವಾ ತನ್ನ ಪ್ರಯತ್ನದಿಂದ ಏನನ್ನು ಹೊಂದುತ್ತಾನೋ ಅದೇ ಅವನ ಪೂರ್ವಕರ್ಮದ ಫಲ9.

03033019a ಧಾತಾಪಿ ಹಿ ಸ್ವಕರ್ಮೈವ ತೈಸ್ತೈರ್ಹೇತುಭಿರೀಶ್ವರಃ।
03033019c ವಿದಧಾತಿ ವಿಭಜ್ಯೇಹ ಫಲಂ ಪೂರ್ವಕೃತಂ ನೃಣಾಂ।।

ಈಶ್ವರ ಧಾತನೂ ಕೂಡ ಇದೇ ಕಾರಣಗಳಿಂದಾಗಿ ತನ್ನ ಕರ್ಮವನ್ನು ಮಾಡುತ್ತಾನೆ ಮತ್ತು ಮನುಷ್ಯರಲ್ಲಿ ಅವರ ಪೂರ್ವಜನ್ಮದ ಕರ್ಮಗಳಿಗನುಗುಣವಾಗಿ ಫಲವನ್ನು ಹಂಚುತ್ತಾನೆ.

03033020a ಯದ್ಧ್ಯಯಂ ಪುರುಷಃ ಕಿಂ ಚಿತ್ಕುರುತೇ ವೈ ಶುಭಾಶುಭಂ।
03033020c ತದ್ಧಾತೃವಿಹಿತಂ ವಿದ್ಧಿ ಪೂರ್ವಕರ್ಮಫಲೋದಯಂ।।

ಮನುಷ್ಯನು ಶುಭಾಶುಭವಾದ ಏನನ್ನು ಮಾಡಿದರೂ ಅದು ಅವನ ಪೂರ್ವಕರ್ಮದ ಫಲದ ಆಧಾರದ ಮೇಲೆ ಧಾತುವು ನಿಶ್ಚಯಿಸಿದುದು ಎಂದು ತಿಳಿ.

03033021a ಕಾರಣಂ ತಸ್ಯ ದೇಹೋಽಯಂ ಧಾತುಃ ಕರ್ಮಣಿ ಕರ್ಮಣಿ।
03033021c ಸ ಯಥಾ ಪ್ರೇರಯತ್ಯೇನಂ ತಥಾಯಂ ಕುರುತೇಽವಶಃ।।

ಈ ದೇಹವು ಕರ್ಮವನ್ನು ಮಾಡಿಸಲು ಧಾತುವು ಬಳಸುವ ಒಂದು ಸಾಧನ ಮಾತ್ರ. ಅವನೇ ಮನುಷ್ಯನನ್ನು ಪ್ರಚೋದಿಸುವುದು; ಮತ್ತು ಮನುಷ್ಯನು ಅವನ ಪ್ರಚೋದನೆಗೆ ಸಿಕ್ಕಿ, ಅಸಹಾಯಕನಾಗಿ, ಕರ್ಮಗಳನ್ನು ಮಾಡುತ್ತಿರುತ್ತಾನೆ10.

03033022a ತೇಷು ತೇಷು ಹಿ ಕೃತ್ಯೇಷು ವಿನಿಯೋಕ್ತಾ ಮಹೇಶ್ವರಃ।
03033022c ಸರ್ವಭೂತಾನಿ ಕೌಂತೇಯ ಕಾರಯತ್ಯವಶಾನ್ಯಪಿ।।

ಕೌಂತೇಯ! ಮಹೇಶ್ವರನು ಒಂದೆಲ್ಲಾ ಒಂದು ಕಾರ್ಯದಲ್ಲಿ ಸರ್ವಭೂತಗಳನ್ನೂ ತೊಡಗಿಸುತ್ತಾನೆ ಮತ್ತು ಅದಕ್ಕೆ ಇಷ್ಟವಿದ್ದರೂ ಇಲ್ಲದಿದ್ದರೂ ಕಾರ್ಯಮಾಡುವುದನ್ನು ಅನಿವಾರ್ಯವನ್ನಾಗಿಸುತ್ತಾನೆ.

03033023a ಮನಸಾರ್ಥಾನ್ವಿನಿಶ್ಚಿತ್ಯ ಪಶ್ಚಾತ್ಪ್ರಾಪ್ನೋತಿ ಕರ್ಮಣಾ।
03033023c ಬುದ್ಧಿಪೂರ್ವಂ ಸ್ವಯಂ ಧೀರಃ ಪುರುಷಸ್ತತ್ರ ಕಾರಣಂ।।

ಮನಸ್ಸಿನಲ್ಲಿ ಗುರಿಯನ್ನು ನಿಶ್ಚಯಿಸಿ ನಂತರ ಅದನ್ನು ಕರ್ಮದಿಂದ ಪಡೆಯುತ್ತಾನೆ. ಬುದ್ಧಿವಂತ ಪುರುಷನು ಪಡೆಯುವುದೆಲ್ಲಕ್ಕೂ ಕಾರಣ ತಾನು ಮೊದಲು ಮನಸ್ಸುಮಾಡಿರುವುದು11.

03033024a ಸಂಖ್ಯಾತುಂ ನೈವ ಶಕ್ಯಾನಿ ಕರ್ಮಾಣಿ ಪುರುಷರ್ಷಭ।
03033024c ಅಗಾರನಗರಾಣಾಂ ಹಿ ಸಿದ್ಧಿಃ ಪುರುಷಹೈತುಕೀ।।

ಪುರುಷರ್ಷಭ! ಕರ್ಮಗಳನ್ನು ಎಣಿಸುವುದು ಶಕ್ಯವಿಲ್ಲ ತಾನೇ? ಮಹಾಸೌಧಗಳು ಮತ್ತು ನಗರಗಳು ಪುರುಷಪ್ರಯತ್ನದಿಂದ ಸಾಧಿಸಿರುವಂಥವುಗಳಲ್ಲವೇ?

03033025a ತಿಲೇ ತೈಲಂ ಗವಿ ಕ್ಷೀರಂ ಕಾಷ್ಠೇ ಪಾವಕಮಂತತಃ।
03033025c ಧಿಯಾ ಧೀರೋ ವಿಜಾನೀಯಾದುಪಾಯಂ ಚಾಸ್ಯ ಸಿದ್ಧಯೇ।।
03033026a ತತಃ ಪ್ರವರ್ತತೇ ಪಶ್ಚಾತ್ಕರಣೇಷ್ವಸ್ಯ ಸಿದ್ಧಯೇ।
03033026c ತಾಂ ಸಿದ್ಧಿಮುಪಜೀವಂತಿ ಕರ್ಮಣಾಮಿಹ ಜಂತವಃ।।

ಎಳ್ಳಿನಲ್ಲಿ ಎಣ್ಣೆಯಿದೆ, ಹಸುವಿನಲ್ಲಿ ಹಾಲಿದೆ ಮತ್ತು ಕಟ್ಟಿಗೆಯಲ್ಲಿ ಬೆಂಕಿಯಿದೆ ಎನ್ನುವುದನ್ನು ತನ್ನದೇ ಬುದ್ಧಿಯಿಂದ ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ತನ್ನ ಬುದ್ಧಿ ಓಡಿಸಿಯೇ ಪಡೆಯಬೇಕಾಗುತ್ತದೆ. ಈ ಕರ್ಮಸಿದ್ಢಿಗಳ ಆಧಾರದ ಮೇಲೆಯೇ (ಕರ್ಮ ಮಾಡುವುದರಲ್ಲಿ ಫಲವಿದೆ ಎನ್ನುವುದರ ಆಧಾರದ ಮೇಲೆಯೇ) ಇಲ್ಲಿ ಜೀವಿಗಳು ಬದುಕುತ್ತಾರೆ12.

03033027a ಕುಶಲೇನ ಕೃತಂ ಕರ್ಮ ಕರ್ತ್ರಾ ಸಾಧು ವಿನಿಶ್ಚಿತಂ।
03033027c ಇದಂ ತ್ವಕುಶಲೇನೇತಿ ವಿಶೇಷಾದುಪಲಭ್ಯತೇ।।

ಚೆನ್ನಾಗಿ ವಿನಿಶ್ಚಿತಗೊಂಡ, ಕುಶಲತೆಯಿಂದ ಮಾಡಿದ ಕೆಲಸವನ್ನು ಇನ್ನೊಂದು ಕೆಲಸದೊಂದಿಗೆ ಹೋಲಿಸಿ ಇದು ಒಬ್ಬ ಕುಶಲನು ಮಾಡಿದ ಕೆಲಸ ಎಂದು ವ್ಯತ್ಯಾಸಗಳನ್ನು ತಿಳಿಯಬಹುದು13.

03033028a ಇಷ್ಟಾಪೂರ್ತಫಲಂ ನ ಸ್ಯಾನ್ನ ಶಿಷ್ಯೋ ನ ಗುರುರ್ಭವೇತ್।
03033028c ಪುರುಷಃ ಕರ್ಮಸಾಧ್ಯೇಷು ಸ್ಯಾಚ್ಚೇದಯಮಕಾರಣಂ।।

ಪುರುಷನ ಕಾರ್ಯಸಾಧನೆಯು ಇವಕ್ಕೆಲ್ಲ್ಲ ಕಾರಣವಲ್ಲ ಎಂದಿದ್ದರೆ ಯಾಗಗಳಿಗಾಗಲೀ ದಾನಗಳಿಗಾಗಲೀ ಫಲವು ದೊರೆಯುತ್ತಿರಲಿಲ್ಲ ಮತ್ತು ಗುರು-ಶಿಷ್ಯರೂ ಇರುತ್ತಿರಲಿಲ್ಲ14.

03033029a ಕರ್ತೃತ್ವಾದೇವ ಪುರುಷಃ ಕರ್ಮಸಿದ್ಧೌ ಪ್ರಶಸ್ಯತೇ।
03033029c ಅಸಿದ್ಧೌ ನಿಂದ್ಯತೇ ಚಾಪಿ ಕರ್ಮನಾಶಃ ಕಥಂ ತ್ವಿಹ।।

ಪುರುಷನೇ ಕರ್ತೃ ಎಂದು ತಿಳಿದಿರುವುದರಿಂದಲೇ ಕರ್ಮಸಿದ್ಧಿಯನ್ನು ಪ್ರಶಂಸಿಸುತ್ತಾರೆ, ಮತ್ತು ಸಾಧಿಸದೇ ಇರುವವನನ್ನು ನಿಂದಿಸುತ್ತಾರೆ. ಹಾಗಿರುವಾಗ, ಕರ್ಮವು ನಾಶವಾಗುತ್ತದೆ ಎಂದು ಹೇಗೆ ಹೇಳಬಹುದು15?

03033030a ಸರ್ವಮೇವ ಹಠೇನೈಕೇ ದಿಷ್ಟೇನೈಕೇ ವದಂತ್ಯುತ।
03033030c ಪುರುಷಪ್ರಯತ್ನಜಂ ಕೇ ಚಿತ್ತ್ರೈಧಮೇತನ್ನಿರುಚ್ಯತೇ।।

ನಡೆಯುವುದೆಲ್ಲವೂ ಆಕಸ್ಮಿಕ ಎನ್ನುವವರಿದ್ದಾರೆ. ನಡೆಯುವುದೆಲ್ಲವೂ ದೈವನಿಶ್ಚಿತ ಎನ್ನುವವರಿದ್ದಾರೆ ಮತ್ತು ನಡೆಯುವುದೆಲ್ಲವೂ ಪುರುಷನ ಪ್ರಯತ್ನದಿಂದ ಹುಟ್ಟಿದವು ಎಂದು ಹೇಳುವವರಿದ್ದಾರೆ. ಈ ರೀತಿ ಮೂರು ಬಗೆಯಲ್ಲಿ ಹೇಳುವವರಿದ್ದಾರೆ.

03033031a ನ ಚೈವೈತಾವತಾ ಕಾರ್ಯಂ ಮನ್ಯಂತ ಇತಿ ಚಾಪರೇ।
03033031c ಅಸ್ತಿ ಸರ್ವಮದೃಶ್ಯಂ ತು ದಿಷ್ಟಂ ಚೈವ ತಥಾ ಹಠಃ।
03033031e ದೃಶ್ಯತೇ ಹಿ ಹಠಾಚ್ಚೈವ ದಿಷ್ಟಾಚ್ಚಾರ್ಥಸ್ಯ ಸಂತತಿಃ।।

ಇನ್ನು ಕೆಲವರು ನಡೆಯುವುದೆಲ್ಲವನ್ನೂ ತಿಳಿದುಕೊಳ್ಳಲು ಈ ಮೂರು ವಿಷಯಗಳು ಮಾತ್ರ ಸಾಲದು ಎಂದು ಹೇಳುತ್ತಾರೆ. ಎಲ್ಲವನ್ನೂ ದೈವವು ತಂದಿದೆಯೋ ಅಥವಾ ಅದೃಷ್ಟವು ತಂದಿದೆಯೋ ಎಂದು ಕಾಣದೇ ಇದ್ದರೂ, ಪ್ರತಿಯೊಂದಕ್ಕೂ ದೈವದಿಂದಲೂ ಹುಟ್ಟಿರಬಹುದು ಅಥವಾ ಅದೃಷ್ಟದಿಂದಲೂ ಹುಟ್ಟಿರಬಹುದು - ಒಂದಕ್ಕೊಂದು ಪೋಣಿಸಿಕೊಂಡಿರುವ ಘಟನೆಗಳ ಸರಪಳಿಯಿದೆ.

03033032a ಕಿಂ ಚಿದ್ದೈವಾದ್ಧಠಾತ್ಕಿಂ ಚಿತ್ಕಿಂ ಚಿದೇವ ಸ್ವಕರ್ಮತಃ।
03033032c ಪುರುಷಃ ಫಲಮಾಪ್ನೋತಿ ಚತುರ್ಥಂ ನಾತ್ರ ಕಾರಣಂ।
03033032e ಕುಶಲಾಃ ಪ್ರತಿಜಾನಂತಿ ಯೇ ತತ್ತ್ವವಿದುಷೋ ಜನಾಃ।।

ಕೆಲವು ಆಕಸ್ಮಿಕವಾಗಿ ಬರುತ್ತವೆ, ಕೆಲವು ದೈವದತ್ತವಾಗಿ ಬರುತ್ತವೆ, ಕೆಲವು ಸ್ವಕರ್ಮದಿಂದ ಬರುತ್ತವೆ. ಈ ರೀತಿಯಲ್ಲಿ ಮನುಷ್ಯನು ಫಲವನ್ನು ಹೊಂದುತ್ತಾನೆ. ಬೇರೆ ಯಾವ ನಾಲ್ಕನೆಯ ಕಾರಣಗಳಿಂದಲೂ ಅಲ್ಲ ಎಂದು ಕುಶಲರು, ತತ್ವಗಳನ್ನು ತಿಳಿದವರು ಹೇಳುತ್ತಾರೆ.

03033033a ತಥೈವ ಧಾತಾ ಭೂತಾನಾಮಿಷ್ಟಾನಿಷ್ಟಫಲಪ್ರದಃ।
03033033c ಯದಿ ನ ಸ್ಯಾನ್ನ ಭೂತಾನಾಂ ಕೃಪಣೋ ನಾಮ ಕಶ್ಚನ।।

ಆದರೂ ಧಾತನು ಜೀವಿಗಳಿಗೆ ಇಷ್ಟ ಮತ್ತು ಅನಿಷ್ಟ ಫಲಗಳನ್ನು ಕೊಡುತ್ತಾನೆ. ಹಾಗಿಲ್ಲದೇ ಇದ್ದರೆ (ಕೊಡುವವನು ಅವನಲ್ಲ ಎಂದಿದ್ದರೆ) ಜೀವಿಗಳು ಎಂದೂ ಬಡತನದಲ್ಲಿರುತ್ತಿರಲಿಲ್ಲ16.

03033034a ಯಂ ಯಮರ್ಥಮಭಿಪ್ರೇಪ್ಸುಃ ಕುರುತೇ ಕರ್ಮ ಪೂರುಷಃ।
03033034c ತತ್ತತ್ಸಫಲಮೇವ ಸ್ಯಾದ್ಯದಿ ನ ಸ್ಯಾತ್ಪುರಾಕೃತಂ।।

ಅವನಿಗೆ ಬೇಕಾದುದೆಲ್ಲವನ್ನೂ ಕರ್ಮಮಾಡಿ ಪಡೆದುಕೊಳ್ಳುತ್ತಿದ್ದ. ಕರ್ಮವನ್ನು ಮೊದಲು ಮಾಡಿದರೆ ತಾನೆ ಫಲ ದೊರೆಯುವುದು? ಮುಂದೆ ಮಾಡುವ ಕಾರ್ಯಕ್ಕೆ ಇಂದೇ ಫಲವು ದೊರೆಯುವುದಿಲ್ಲವಲ್ಲ?

03033035a ತ್ರಿದ್ವಾರಾಮರ್ಥಸಿದ್ಧಿಂ ತು ನಾನುಪಶ್ಯಂತಿ ಯೇ ನರಾಃ।
03033035c ತಥೈವಾನರ್ಥಸಿದ್ಧಿಂ ಚ ಯಥಾ ಲೋಕಾಸ್ತಥೈವ ತೇ।।

ಈ ಮೂರು ರೀತಿಯ ಅರ್ಥಸಿದ್ಧಿಗಳನ್ನು ಯಾರು ಕಾಣುವುದಿಲ್ಲವೋ ಅಂಥಹ ಮನುಷ್ಯರು ಲೋಕದಲ್ಲಿ ಅರ್ಥಸಿದ್ಧಿಯು ಹೇಗೆ ಬರುತ್ತದೆಯೋ ಹಾಗೆಯೇ ತೆಗೆದುಕೊಳ್ಳುತ್ತಾರೆ.

03033036a ಕರ್ತವ್ಯಂ ತ್ವೇವ ಕರ್ಮೇತಿ ಮನೋರೇಷ ವಿನಿಶ್ಚಯಃ।
03033036c ಏಕಾಂತೇನ ಹ್ಯನೀಹೋಽಯಂ ಪರಾಭವತಿ ಪೂರುಷಃ।।

ಮಾನವನು ಕರ್ಮವನ್ನು ಮಾಡಲೇ ಬೇಕು ಎಂದು ಮನುವು ತನ್ನ ನಿಶ್ಚಯವನ್ನು ನೀಡಿದ್ದಾನೆ. ಪ್ರಯತ್ನಪಡದೇ ಇರುವ ಮನುಷ್ಯನು ಸಂಪೂರ್ಣವಾಗಿ ಸೋಲನ್ನು ಹೊಂದುತ್ತಾನೆ.

03033037a ಕುರ್ವತೋ ಹಿ ಭವತ್ಯೇವ ಪ್ರಾಯೇಣೇಹ ಯುಧಿಷ್ಠಿರ।
03033037c ಏಕಾಂತಫಲಸಿದ್ಧಿಂ ತು ನ ವಿಂದತ್ಯಲಸಃ ಕ್ವ ಚಿತ್।।

ಯುಧಿಷ್ಠಿರ! ಕರ್ಮಗಳನ್ನು ಮಾಡಿದರೆ ತಾನೇ ಪ್ರಯತ್ನವು ಸಫಲವಾಗುವುದು! ಆಲಸ್ಯದಿಂದ ಏನನ್ನೂ ಮಾಡದೇ ಕುಳಿತಿರುವವನು ಎಂದೂ ಫಲಸಿದ್ಧಿಯನ್ನು ಹೊಂದುವುದಿಲ್ಲ.

03033038a ಅಸಂಭವೇ ತ್ವಸ್ಯ ಹೇತುಃ ಪ್ರಾಯಶ್ಚಿತ್ತಂ ತು ಲಕ್ಷ್ಯತೇ।
03033038c ಕೃತೇ ಕರ್ಮಣಿ ರಾಜೇಂದ್ರ ತಥಾನೃಣ್ಯಮವಾಪ್ಯತೇ।।

ಒಂದುವೇಳೆ ಸರಿಯಾದ ಕಾರಣದಿಂದಲೇ ಮಾಡಿದ ಕರ್ಮಕ್ಕೆ ತಕ್ಕುದಾದ ಫಲವು ದೊರೆಯದಿದ್ದರೆ ಅದಕ್ಕೆ ಪ್ರಾಯಶ್ಚಿತ್ತವು ಇದೆ. ರಾಜೇಂದ್ರ! ಕರ್ಮವನ್ನು ಮಾಡುವುದರಿಂದ ಮನುಷ್ಯನು ತನ್ನ ಋಣದಿಂದ ಮುಕ್ತನಾಗುತ್ತಾನೆ.

03033039a ಅಲಕ್ಷ್ಮೀರಾವಿಶತ್ಯೇನಂ ಶಯಾನಮಲಸಂ ನರಂ।
03033039c ನಿಃಸ್ಸಂಶಯಂ ಫಲಂ ಲಬ್ಧ್ವಾ ದಕ್ಷೋ ಭೂತಿಮುಪಾಶ್ನುತೇ।।

ಆಲಸ್ಯದಿಂದ ಮಲಗಿರುವ ಮನುಷ್ಯನಿಗೆ ದರಿದ್ರವೇ ಉಂಟಾಗುವುದು. ಆದರೆ ದಕ್ಷನಾದವನು ಫಲವನ್ನು ಹೊಂದಿ ಸಂಪತ್ತನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

03033040a ಅನರ್ಥಂ ಸಂಶಯಾವಸ್ಥಂ ವೃಣ್ವತೇ ಮುಕ್ತಸಂಶಯಾಃ।
03033040c ಧೀರಾ ನರಾಃ ಕರ್ಮರತಾ ನ ತು ನಿಃಸ್ಸಂಶಯಂ ಕ್ವ ಚಿತ್।।

ಸಂಶಯದಲ್ಲಿರುವವರಿಗೆ ಫಲವು ದೊರೆಯದೇ ಇರಬಹುದು. ನಿಸ್ಸಂಶಯನಾಗಿ ಕರ್ಮಮಾಡುವ ಧೀರನಾದ ಕರ್ಮರತ ಮನುಷ್ಯನು ನಿಸ್ಸಂಶಯವಾಗಿಯೂ ಫಲವನ್ನು ಪಡೆಯುತ್ತಾನೆ.

03033041a ಏಕಾಂತೇನ ಹ್ಯನರ್ಥೋಽಯಂ ವರ್ತತೇಽಸ್ಮಾಸು ಸಾಂಪ್ರತಂ।
03033041c ನ ತು ನಿಃಸ್ಸಂಶಯಂ ನ ಸ್ಯಾತ್ತ್ವಯಿ ಕರ್ಮಣ್ಯವಸ್ಥಿತೇ।।

ಈ ಸಮಯದಲ್ಲಿ ನಾವು ಮತ್ತು ನಾವು ನಡೆದುಕೊಂಡ ರೀತಿ ಎಲ್ಲವೂ ಅನರ್ಥವಾಗಿವೆ (ಫಲವನ್ನು ಕೊಡುತ್ತಿಲ್ಲ). ಆದರೆ ನೀನು ಕರ್ಮದಲ್ಲಿ ನಿರತನಾಗಿದ್ದರೆ ಯಾವುದೂ ಸಂಶಯಾಸ್ಪದವಾಗಿ ಉಳಿಯುವುದಿಲ್ಲ.

03033042a ಅಥ ವಾ ಸಿದ್ಧಿರೇವ ಸ್ಯಾನ್ಮಹಿಮಾ ತು ತಥೈವ ತೇ।
03033042c ವೃಕೋದರಸ್ಯ ಬೀಭತ್ಸೋರ್ಭ್ರಾತ್ರೋಶ್ಚ ಯಮಯೋರಪಿ।।

ಒಂದುವೇಳೆ ನಿನಗೆ ಯಶಸ್ಸು ದೊರೆಯದೇ ಇದ್ದರೂ ಕೂಡ ಅದು ನಿನ್ನ ಮತ್ತು ನಿನ್ನ ಭ್ರಾತರಾದ ವೃಕೋದರ, ಬೀಭತ್ಸು ಮತ್ತು ಯಮಳರಿಗೆ ಕೀರ್ತಿಯನ್ನು ತರುತ್ತದೆ.

03033043a ಅನ್ಯೇಷಾಂ ಕರ್ಮ ಸಫಲಮಸ್ಮಾಕಮಪಿ ವಾ ಪುನಃ।
03033043c ವಿಪ್ರಕರ್ಷೇಣ ಬುಧ್ಯೇತ ಕೃತಕರ್ಮಾ ಯಥಾ ಫಲಂ।।

ಅವರ ಕರ್ಮಗಳು ಇತರರಿಗೆ ಸಫಲವಾಗಿದೆ ಎಂದಾದರೆ ನಮ್ಮ ಕರ್ಮಗಳೂ ಪುನಃ ಫಲವನ್ನೀಯುವವು. ಆದರೆ ಕರ್ಮವನ್ನು ಮಾಡಿದವನಿಗೆ ಮಾತ್ರ ಆ ಕರ್ಮದ ಫಲವೇನೆಂದು ಮೊದಲು ತಿಳಿಯುವುದು.

03033044a ಪೃಥಿವೀಂ ಲಾಂಗಲೇನೈವ ಭಿತ್ತ್ವಾ ಬೀಜಂ ವಪತ್ಯುತ।
03033044c ಆಸ್ತೇಽಥ ಕರ್ಷಕಸ್ತೂಷ್ಣೀಂ ಪರ್ಜನ್ಯಸ್ತತ್ರ ಕಾರಣಂ।।

ರೈತನು ಭೂಮಿಯನ್ನು ನೇಗಿಲಿನಿಂದ ಹೂಳಿ, ಬೀಜವನ್ನು ಬಿತ್ತಿ ಸುಮ್ಮನೇ ಕುಳಿತುಕೊಳ್ಳುತ್ತಾನೆ ಮತ್ತು ಮಳೆಯು ಅಲ್ಲಿ ಕೆಲಸಮಾಡುತ್ತದೆ.

03033045a ವೃಷ್ಟಿಶ್ಚೇನ್ನಾನುಗೃಹ್ಣೀಯಾದನೇನಾಸ್ತತ್ರ ಕರ್ಷಕಃ।
03033045c ಯದನ್ಯಃ ಪುರುಷಃ ಕುರ್ಯಾತ್ಕೃತಂ ತತ್ಸಕಲಂ ಮಯಾ।।

ಒಂದುವೇಳೆ ಮಳೆಯು ಬಂದು ಅವನಿಗೆ ಅನುಗ್ರಹಿಸದೇ ಇದ್ದರೂ, ರೈತನನ್ನು ಅಲ್ಲಿ ದೂರಲಿಕ್ಕಾಗುವುದಿಲ್ಲ. ಯಾಕೆಂದರೆ ಅವನು ಇನ್ನೊಬ್ಬನು ಮಾಡುವ ಸಕಲ ಕರ್ಮಗಳನ್ನೂ ಮಾಡಿದ್ದಾನೆ.

03033046a ತಚ್ಚೇದಫಲಮಸ್ಮಾಕಂ ನಾಪರಾಧೋಽಸ್ತಿ ನಃ ಕ್ವ ಚಿತ್।
03033046c ಇತಿ ಧೀರೋಽನ್ವವೇಕ್ಷ್ಯೈವ ನಾತ್ಮಾನಂ ತತ್ರ ಗರ್ಹಯೇತ್।।

ಒಂದುವೇಳೆ ನಾವು ಅಸಫಲರಾದರೆ ಅದರಲ್ಲಿ ನಮ್ಮ ಅಪರಾಧ ಸ್ವಲ್ವವೂ ಇರುವುದಿಲ್ಲ. ಈ ರೀತಿಯಲ್ಲಿ ಬುದ್ಧಿವಂತನು ಕಾಣುತ್ತಾನೆ, ಅಸಫಲನಾದರೆ ತನ್ನನ್ನು ತಾನು ನಿಂದಿಸಿಕೊಳ್ಳುವುದಿಲ್ಲ.

03033047a ಕುರ್ವತೋ ನಾರ್ಥಸಿದ್ಧಿರ್ಮೇ ಭವತೀತಿ ಹ ಭಾರತ।
03033047c ನಿರ್ವೇದೋ ನಾತ್ರ ಗಂತವ್ಯೋ ದ್ವಾವೇತೌ ಹ್ಯಸ್ಯ ಕರ್ಮಣಃ।
03033047e ಸಿದ್ಧಿರ್ವಾಪ್ಯಥ ವಾಸಿದ್ಧಿರಪ್ರವೃತ್ತಿರತೋಽನ್ಯಥಾ।।

ಭಾರತ! ಕಾರ್ಯಮಾಡಿದರೂ ಸಿದ್ಧಿಯು ದೊರೆಯಲಿಲ್ಲವೆಂದಾದರೆ ಅದರಲ್ಲಿ ನಿರಾಸೆಹೊಂದಲು ಕಾರಣವಿಲ್ಲ. ಯಾಕೆಂದರೆ ಯಾವುದೇ ಕರ್ಮಕ್ಕೂ ಎರಡು ಫಲಗಳಿರುತ್ತವೆ: ಸಿದ್ಧಿಯಾಗುವುದು ಅಥವಾ ಸಿದ್ಧಿಯಾಗದೇ ಇರುವುದು. ಆದರೆ ಕರ್ಮವನ್ನೇ ಮಾಡದಿರುವುದು ಇನ್ನೊಂದು ವಿಷಯ.

03033048a ಬಹೂನಾಂ ಸಮವಾಯೇ ಹಿ ಭಾವಾನಾಂ ಕರ್ಮ ಸಿಧ್ಯತಿ।
03033048c ಗುಣಾಭಾವೇ ಫಲಂ ನ್ಯೂನಂ ಭವತ್ಯಫಲಮೇವ ವಾ।
03033048e ಅನಾರಂಭೇ ತು ನ ಫಲಂ ನ ಗುಣೋ ದೃಶ್ಯತೇಽಚ್ಯುತ।।

ಒಂದು ಕರ್ಮವು ಸಿದ್ಧಿಯಾಗಬೇಕಾದರೆ ಅದಕ್ಕೆ ಹಲವಾರು ಅಂಶಗಳು ಒಂದುಗೂಡಿ ಬರಬೇಕಾಗುತ್ತದೆ. ಕಾರ್ಯಗುಣದ ಅಭಾವದಲ್ಲಿ ಫಲವು ಕೆಟ್ಟದಾಗಬಹುದು ಅಥವಾ ಫಲವು ದೊರೆಯದೇ ಇರಬಹುದು. ಅಚ್ಯುತ! ಆರಂಭವನ್ನೇ ಮಾಡಿರದ ಕಾರ್ಯದ ಗುಣವನ್ನಾಗಲೀ ಫಲವನ್ನಾಗಲೀ ಕಾಣಲಿಕ್ಕಾಗುವುದಿಲ್ಲವಲ್ಲ!

03033049a ದೇಶಕಾಲಾವುಪಾಯಾಂಶ್ಚ ಮಂಗಲಂ ಸ್ವಸ್ತಿ ವೃದ್ಧಯೇ।
03033049c ಯುನಕ್ತಿ ಮೇಧಯಾ ಧೀರೋ ಯಥಾಶಕ್ತಿ ಯಥಾಬಲಂ।।

ತಿಳಿದವನು ಯಥಾಶಕ್ತಿಯಾಗಿ ಯಥಾಬಲವಾಗಿ ದೇಶ, ಕಾಲ, ಉಪಾಯಗಳನ್ನು ಬುದ್ಧಿಯಿಂದ ಒಟ್ಟುಸೇರಿಸಿ ತನ್ನ ಮಂಗಳ-ಒಳಿತಿಗಾಗಿ ಮನಸ್ಸುಮಾಡುತ್ತಾನೆ.

03033050a ಅಪ್ರಮತ್ತೇನ ತತ್ಕಾರ್ಯಮುಪದೇಷ್ಟಾ ಪರಾಕ್ರಮಃ।
03033050c ಭೂಯಿಷ್ಠಂ ಕರ್ಮಯೋಗೇಷು ಸರ್ವ ಏವ ಪರಾಕ್ರಮಃ।।

ಪರಾಕ್ರಮವು ತೋರಿಸಿದಂತೆ ಅಪ್ರಮತ್ತನು ಕಾರ್ಯಮುಖನಾಗಬೇಕು. ಕರ್ಮಯೋಗಗಳಲ್ಲಿ ಪರಾಕ್ರಮವೇ ಎಲ್ಲಕ್ಕಿಂತ ಮುಖ್ಯ ಅಂಶ.

03033051a ಯಂ ತು ಧೀರೋಽನ್ವವೇಕ್ಷೇತ ಶ್ರೇಯಾಂಸಂ ಬಹುಭಿರ್ಗುಣೈಃ।
03033051c ಸಾಮ್ನೈವಾರ್ಥಂ ತತೋ ಲಿಪ್ಸೇತ್ಕರ್ಮ ಚಾಸ್ಮೈ ಪ್ರಯೋಜಯೇತ್।।

ಬಹಳಷ್ಟು ಗುಣಗಳಲ್ಲಿ ತನಗಿಂತ ಶ್ರೇಷ್ಠನಾಗಿರುವವನನ್ನು ಕಂಡಾಗ ಮನುಷ್ಯನು ಅವನೊಂದಿಗೆ ಸೌಮ್ಯ ಉಪಾಯಗಳಿಂದ ತನ್ನ ಕಾರ್ಯಸಾಧನೆಯನ್ನು ಮಾಡಿಕೊಳ್ಳಬೇಕು.

03033052a ವ್ಯಸನಂ ವಾಸ್ಯ ಕಾಂಕ್ಷೇತ ವಿನಾಶಂ ವಾ ಯುಧಿಷ್ಠಿರ।
03033052c ಅಪಿ ಸಿಂಧೋರ್ಗಿರೇರ್ವಾಪಿ ಕಿಂ ಪುನರ್ಮರ್ತ್ಯಧರ್ಮಿಣಃ।।

ಯುಧಿಷ್ಠಿರ! ಸಮಯವರಿತು ಅಂಥವನ ವಿನಾಶಕ್ಕೆ ಯತ್ನಿಸುತ್ತಲೇ ಇರಬೇಕು. ಅವನು ಸಿಂಧುನದಿಯಂತಿರಬಹುದು ಅಥವಾ ಪರ್ವತದಂತಿರಬಹುದು. ಮನುಷ್ಯಧರ್ಮಕ್ಕೊಳಗಾದವನು ತಾನೇ?

03033053a ಉತ್ಥಾನಯುಕ್ತಃ ಸತತಂ ಪರೇಷಾಮಂತರೈಷಣೇ।
03033053c ಆನೃಣ್ಯಮಾಪ್ನೋತಿ ನರಃ ಪರಸ್ಯಾತ್ಮನ ಏವ ಚ।।

ಪ್ರಯತ್ನಶೀಲನಾದವನು ಶತ್ರುವಿನಲ್ಲುಂಟಾಗಬಹುದಾದ ನ್ಯೂನತೆಯನ್ನು ಹುಡುಕಿ ಅವನ ವಿನಾಶಕ್ಕೆ ಯತ್ನಿಸಿ ತಾನೂ ನಿರ್ದೋಷಿಯಾಗುತ್ತಾನೆ ಮತ್ತು ತನ್ನ ಸಲಹೆಗಾರರನ್ನೂ ನಿರ್ದೋಷಿಗಳನ್ನಾಗಿ ಮಾಡುತ್ತಾನೆ.

03033054a ನ ಚೈವಾತ್ಮಾವಮಂತವ್ಯಃ ಪುರುಷೇಣ ಕದಾ ಚನ।
03033054c ನ ಹ್ಯಾತ್ಮಪರಿಭೂತಸ್ಯ ಭೂತಿರ್ಭವತಿ ಭಾರತ।।

ಮನುಷ್ಯನು ಎಂದೂ ತನ್ನನ್ನು ತಾನು ಕೀಳಾಗಿ ಕಾಣಬಾರದು. ಭಾರತ! ತನ್ನನ್ನು ಕೀಳಾಗಿ ಕಾಣುವವನಿಗೆ ಯಶಸ್ಸು ದೊರೆಯಲಾರದು.

03033055a ಏವಂ ಸಂಸ್ಥಿತಿಕಾ ಸಿದ್ಧಿರಿಯಂ ಲೋಕಸ್ಯ ಭಾರತ।
03033055c ಚಿತ್ರಾ ಸಿದ್ಧಿಗತಿಃ ಪ್ರೋಕ್ತಾ ಕಾಲಾವಸ್ಥಾವಿಭಾಗತಃ।।

ಭಾರತ! ಇದೇ ಲೋಕ ಸಿದ್ಧಿಯ ಅಡಿಪಾಯ. ಸಿದ್ಧಿಗೆ, ಕಾಲ ಮತ್ತು ಅವಸ್ಥೆಗಳ ಆಧಾರದ ಮೇಲೆ ಬಹಳಷ್ಟು ದಾರಿಗಳಿವೆ ಎಂದು ಹೇಳುತ್ತಾರೆ.

03033056a ಬ್ರಾಹ್ಮಣಂ ಮೇ ಪಿತಾ ಪೂರ್ವಂ ವಾಸಯಾಮಾಸ ಪಂಡಿತಂ।
03033056c ಸೋಽಸ್ಮಾ ಅರ್ಥಮಿಮಂ ಪ್ರಾಹ ಪಿತ್ರೇ ಮೇ ಭರತರ್ಷಭ।।

ನನ್ನ ತಂದೆಯು ಹಿಂದೆ ನಮ್ಮ ಮನೆಯಲ್ಲಿ ಓರ್ವ ಪಂಡಿತನನ್ನು ಇರಿಸಿಕೊಂಡಿದ್ದನು. ಭರತರ್ಷಭ! ಅವನೇ ನನ್ನ ತಂದೆಗೆ ಈ ವಿಷಯಗಳನ್ನು ಹೇಳಿದನು.

03033057a ನೀತಿಂ ಬೃಹಸ್ಪತಿಪ್ರೋಕ್ತಾಂ ಭ್ರಾತೄನ್ಮೇಽಗ್ರಾಹಯತ್ಪುರಾ।
03033057c ತೇಷಾಂ ಸಾಂಕಥ್ಯಮಶ್ರೌಷಮಹಮೇತತ್ತದಾ ಗೃಹೇ।।

ಅವನು ಹಿಂದೆ ಬೃಹಸ್ಪತಿಯಿಂದ ಹೇಳಲ್ಪಟ್ಟ ಇದೇ ಸಿದ್ಧಾಂತವನ್ನು ನನ್ನ ಸಹೋದರರಿಗೆ ಕೊಟ್ಟಿದ್ದನು ಮತ್ತು ಅವರ ಸಂಭಾಷಣೆಯನ್ನು ನಾನು ನನ್ನ ಮನೆಯಲ್ಲಿ ಆಗ ಕೇಳಿಕೊಂಡಿದ್ದೆ.

03033058a ಸ ಮಾಂ ರಾಜನ್ಕರ್ಮವತೀಮಾಗತಾಮಾಹ ಸಾಂತ್ವಯನ್।
03033058c ಶುಶ್ರೂಷಮಾಣಾಮಾಸೀನಾಂ ಪಿತುರಂಕೇ ಯುಧಿಷ್ಠಿರ।।

ರಾಜನ್! ಯುಧಿಷ್ಠಿರ! ಯಾವುದೋ ಕೆಲಸಕ್ಕೆಂದು ಅಲ್ಲಿಗೆ ಹೋಗಿದ್ದ ನನ್ನನ್ನು ಅವನು ಸಂತವಿಸಿದಾಗ, ತಂದೆಯ ತೊಡೆಯಮೇಲೆ ಕುಳಿತುಕೊಂಡು ಕೇಳಿದ್ದೆನು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದ್ರೌಪದೀಪರಿತಾಪವಾಕ್ಯೇ ತ್ರಯಸ್ತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದ್ರೌಪದೀಪರಿತಾಪವಾಕ್ಯದಲ್ಲಿ ಮೂವತ್ತ್ಮೂರನೆಯ ಅಧ್ಯಾಯವು.

[^5] ಭಾರತದರ್ಶನ ಸಂಪುಟ: ಪ್ರಪಂಚದಲ್ಲಿ ದೈವಮಾತ್ರವನ್ನೇ ನಂಬಿ ಸಕಲವನ್ನೂ ಸಾಧಿಸ ಬಯಸುವವನು ಮತ್ಟು ಅದೃಷ್ಟಪರೀಕ್ಷಕನು -ಈ ಇಬ್ಬರನ್ನೂ ನಾನು ಪುರುಷಾಧಮರೆಂದೇ ಭಾವಿಸುತ್ತೇನೆ. ಯಾವನು ಯಾವಾಗಲೂ ಕಾರ್ಯೋನ್ಮುಖನಾಗಿರುವವೋ ಅವನೇ ಪ್ರಶಂಸಾರ್ಹನು.


  1. ಭಾರತದರ್ಶನದ ಸಂಪುಟದಲ್ಲಿ ಈ ಶ್ಲೋಕಗಳ ಅರ್ಥವನ್ನು ಈ ರೀತಿ ನೀಡಲಾಗಿದೆ: ಯಾವ ರೀತಿಯಲ್ಲಿ ಹುಟ್ಟಿದೊಡನೆಯೇ ಕರುವು ಯಾರಿಂದಲೂ ನಿರ್ದೇಶಿಸಲ್ಪಡದಿದ್ದರೂ ತನ್ನ ತಾಯಿಯ ಕೆಚ್ಚಲನ್ನು ಹುಡುಕಿಕೊಂಡು ಹೋಗುವುದೋ ಮತ್ತು ಯಾವ ರೀತಿಯಲ್ಲಿ ನೆರಳಿರುವ ಕಡೆ ವಿಶ್ರಮಿಸಿಕೊಳ್ಳುವುದೋ -ಅದೇ ರೀತಿಯಲ್ಲಿ ಸಮಸ್ತ ಪ್ರಾಣಿಗಳೂ ಕರ್ಮದಿಂದಲೇ ಜೀವನಿರ್ವಹಣೆಯನ್ನು ಮಾಡುತ್ತವೆ. ಆದರೆ ಪ್ರಾಣಿಕೋಟಿಯಲ್ಲಿ ಮನುಷ್ಯನನ್ನುಳಿದು ಇತರ ಪ್ರಾಣಿಗಳು ಸ್ವಭಾವಜನ್ಯವಾದ ಕಾರ್ಯ ಮಾಡುತ್ತವೆಯೇ ಹೊರತು ಆಮುಷ್ಮಿಕ ಸುಖಗಳನ್ನು ಅನುಭವಿಸುವ ಕರ್ಮಗಳನ್ನು ಮಾಡಲಾರವು. ಮನುಷ್ಯನು ಮಾತ್ರ ಇಹ-ಪರಗಳಲ್ಲಿ ತನ್ನ ಉಚ್ಛ್ರಾಯಕ್ಕಾಗಲೀ, ಅಧೋಗತಿಗಾಗಲೀ ಸಾಧಕವಾದ ಕಾರ್ಯ ಮಾಡಲು ಸಮರ್ಥನಾಗಿರುತ್ತಾನೆ. ↩︎

  2. ಭಾರತದರ್ಶನ ಸಂಪುಟದಲ್ಲಿ ಈ ಶ್ಲೋಕದ ಅರ್ಥವು ಈ ರೀತಿಯಿದೆ: ಸಕಲಪ್ರಾಣಿಗಳು ಅಭಿವೃದ್ಧಿ ಹೊಂದುವ ಉದ್ಯೋಗವನ್ನು ಆಶ್ರಯಿಸಿ ಜೀವಿಸುತ್ತವೆ. ಸರೋವರದ ಸಮೀಪದಲ್ಲಿ (ಮೀನನ್ನು ಹಿಡಿಯಲು) ಬಕವು ಕಣ್ಣುಮುಚ್ಚಿಕೊಂಡು ಧ್ಯಾನಮಾಡುತ್ತಿರುವಂತೆ ನಿಂತಿರುತ್ತದೆ. ಹೀಗೆ ಮಾಡಬೇಕೆಂದು ಯಾರಾದರೂ ಅದಕ್ಕೆ ಹೇಳಿಕೊಟ್ಟಿರುವರೇ? ಇದು ಬಕದ ಸ್ವಭಾವಜನ್ಯವಾದ ಕರ್ಮ. ಅದೇ ರೀತಿಯಲ್ಲಿ ಸಕಲಪ್ರಾಣಿಗಳೂ ತಮ್ಮ ಸ್ವಾಭಾವಿಕವಾದ ಕರ್ಮಗಳಿಂದ ಜೀವನನಿರ್ವಹಣೆಯನ್ನು ಮಾಡಿಕೊಳ್ಳುತ್ತವೆ. ಬ್ರಹ್ಮನೂ ಹಿಂದೆ ಸೃಷ್ಟಿಸಿದಂತೆಯೇ ಈ ಜಗತ್ತನ್ನು ಪುನಃ ಸೃಷ್ಟಿಸಿದ್ದಾನೆ ಧಾತಾ ಯಥಾಪೂರ್ವಪಕಲ್ಪಯತ್ ಎಂಬ ಶ್ರುತಿಪ್ರಮಾಣದಂತೆ ಪ್ರಪಂಚವನ್ನು ಪುನಃ ಪುನಃ ಸೃಷ್ಟಿಸುತ್ತಿರುವುದೇ ಬ್ರಹ್ಮನ ಸ್ವಭಾವಜನ್ಯವಾದ ಕರ್ಮ. ↩︎

  3. ಭಾರತದರ್ಶನ ಸಂಪುಟ: ತಾನು ಹಿಂದೆ ಮಾಡಿದ ಕರ್ಮದ ಫಲವೇ ಇಂದು ತಾನು ಅನುಭವಿಸುತ್ತಿರುವ ಕಷ್ಟ ಅಥವಾ ಸುಖ ಎಂದು ನೆನಪಿಗೆ ತಂದುಕೊಳ್ಳಬಲ್ಲವನು ಸಹಸ್ರ ಜನರಲ್ಲಿ ಒಬ್ಬನಾದರೂ ಇರುವನೋ ಇಲ್ಲವೋ! ↩︎

  4. ಭಾರತದರ್ಶನ ಸಂಪುಟ: ಫಲವಿಲ್ಲದ ಕಾರ್ಯವನ್ನು ಮಾಡುತ್ತಿರುವ ಜನರನ್ನು ಕೆಲವು ವೇಳೆ ನೋಡುತ್ತೇವೆ. ಆದರೆ ಕರ್ಮಮಾಡದೆಯೇ ಜನರು ಜೀವನ ವೃತ್ತಿಯನ್ನು ಹೇಗೂ ಹೊಂದಲಾರರು. ಆದುದರಿಂದ ಕರ್ಮವನ್ನು ಬಿಡಲು ಸಾಧ್ಯವಿಲ್ಲ. ↩︎

  5. ಭಾರತದರ್ಶನ ಸಂಪುಟ: ಯಾವನು ಯಾವಾಗಲೂ ಮನುಷ್ಯಯತ್ನವನ್ನೇ ಮಾಡದೇ ದೈವದ ಪ್ರಭಾವವನ್ನೇ ನಂಬಿ ಮಲಗಿರುವನೋ ಅವನು ಹಸಿಮಡಕೆಯು ನೀರಿನಲ್ಲಿ ಕರಗಿಹೋಗುವಂತೆ ವಿನಾಶಹೊಂದುತ್ತಾನೆ. ↩︎

  6. ಕಾರ್ಯಮಾಡಲು ಶರೀರದಾರ್ಢ್ಯವಿದ್ದರೂ ಅದೃಷ್ಟವನ್ನೇ ನಂಬಿ (ಜೂಜು ಮೊದಲಾದವುಗಳಲ್ಲಿ) ಐಶ್ವರ್ಯವು ಬರುತ್ತದೆಂದು ಕುಳಿತುಕೊಳ್ಳುವವನೂ ದುರ್ಬಲನಾದ ಅನಾಥನೊಬ್ಬನು ವಿನಾಶಹೊಂದುವಂತೆ ಬಹಳ ಶೀಘ್ರವಾಗಿ ವಿನಾಶಹೊಂದುತ್ತಾನೆ. (ದುರ್ಬಲನಾದ ಅನಾಥನೆಂದು ಅದೃಷ್ಟಾಕಾಂಕ್ಷಿಗೆ ಉಪಮಾನಕೊಟ್ಟಿರುವುದು ಹೃದಯಂಗಮವಾಗಿದೆ. ಹೇಗೆಂದರೆ: ದೈವವನ್ನಾದರೂ ನಂಬಿ ಕುಳಿತವನು ದುರ್ಬಲನೇ ಹೊರತು ಅನಾಥನಲ್ಲ. ದೈವವನ್ನೇ ನಾಥನೆಂದಾದರೂ ನಂಬಿರುತ್ತಾನೆ. ಒಂದು ವೇಳೆ ಕಟ್ಟಕಡೆಗೆ ದೈವವಾದರೂ ಸ್ವಲ್ಪ ಕರುಣೆಯನ್ನು ತೋರಬಹುದು. ಆದರೆ ಕೇವಲ ಅದೃಷ್ಟವಾನೇ ನಂಬಿರುವವನಿಗೆ ದೈವಬಲವೂ ಇಲ್ಲದೇ ಅನಾಥನಂತಾಗುತ್ತಾನೆ. ಮೊದಲೇ ದುರ್ಬಲನಾಗಿದ್ದು ಹೇಳುವ-ಕೇಳುವವರೂ ಇಲ್ಲದ ಅನಾಥನೂ ಆದರೆ ಅವನ ಪಾಡು ನಿಶ್ಚಯವಾಗಿಯೂ ಅತಿದಾರುಣವಲ್ಲವೇ? ↩︎

  7. ಭಾರತದರ್ಶನ ಸಂಪುಟ: ಮಂತ್ರಜಪ-ಹೋಮಾದಿಗಳನ್ನು ಮಾಡಿ ಐಶ್ವರ್ಯವನ್ನು ಪಡೆದಲ್ಲಿ ಅದನ್ನು ದೈವಾಯತ್ತವಾದ ಐಶ್ವರ್ಯವೆನ್ನುತ್ತಾರೆ. ↩︎

  8. ಭಾರತದರ್ಶನ ಸಂಪುಟ: ಮನುಷ್ಯನು ಕಾರ್ಯೋನ್ಮುಖನಾಗಿರುವಾಗ ಎಂದರೆ -ಭೂಮಿಯನ್ನು ಕಾರಣಾಂತರದಿಂದ ಅಗೆಯುವ ಕಾಲದಲ್ಲಿ ನಿಧಿಯು ಸಿಕ್ಕುವಂತೆ -ಐಶ್ವರ್ಯವು ಪ್ರಾಪ್ತಿಯಾದರೆ ಅದನ್ನು ಸ್ವಭಾವಜನ್ಯವಾದ ಐಶ್ವರ್ಯವೆಂದೇ ಭಾವಿಸಬೇಕು. ↩︎

  9. ಭಾರತದರ್ಶನ ಸಂಪುಟ: ಈ ರೀತಿಯಲ್ಲಿ ಆಕಸ್ಮಿಕವಾಗಿ ಪ್ರಾಪ್ತವಾಗುವ ಐಶ್ವರ್ಯ, ದೈವಿಕವಾಗಿ ಪ್ರಾಪ್ತಿಯಾಗುವ ಐಶ್ವರ್ಯ, ಮಂತ್ರಜಪ-ಹೋಮಗಳಿಂದ ಪ್ರಾಪ್ತವಾಗುವ ಐಶ್ವರ್ಯ ಮತ್ತು ಸ್ವಭುಜಬಲ-ಪರಾಕ್ರಮಗಳಿಂದ ಸಂಪಾದಿಸುವ ಐಶ್ವರ್ಯ ಇವೆಲ್ಲವೂ ಹಿಂದಿನ ಜನ್ಮಗಳ ಕರ್ಮಗಳನ್ನೇ ಅನುಸರಿಸಿ ಲಭ್ಯವಾಗುತ್ತವೆ. ↩︎

  10. ಭಾರತದರ್ಶನ ಸಂಪುಟ (೪, ೨೦೬೬): ಕರ್ಮಪ್ರವರ್ತಕವಾಗಿರುವ ಈ ಶರೀರವು ಬ್ರಹ್ಮನಿಂದ ನಿಯೋಜಿತವಾಗಿ ಕಾರ್ಯಮಾಡಲು ಕೇವಲ ಸಾಧನಭೂತವಾಗಿರುತ್ತದೆ. ಆದುದರಿಂದಲೇ, ಬ್ರಹ್ಮಪ್ರೇರಣೆಯಂತೆ ಶರೀರಿಯು ಅಸ್ವತಂತ್ರನಾದರೂ ತಾನು ಸ್ವತಂತ್ರನೆಂದೇ ಭಾವಿಸಿ ಸ್ವೇಚ್ಛಾಪ್ರಾರಬ್ಧಫಲಾನುಭವಕ್ಕಾಗಿ ಕಾರ್ಯ ಮಾಡುತ್ತಿರುತ್ತಾನೆ. ↩︎

  11. ಭಾರತದರ್ಶನ: ಮನುಷ್ಯನು ಮೊದಲು ತನ್ನ ಪೂರ್ವಜನ್ಮದ ಅನುಬಂಧದಿಂದ ಯಾವುದಾದರೂ ಕಾರ್ಯವಾಡಲು ಸಂಕಲ್ಪಿಸುತ್ತಾನೆ. ಅನಂತರದಲ್ಲಿ ಬುದ್ಧಿಯ ಚಾತುರ್ಯದಿಂದ ಸಂಕಲ್ಪಿಸಿದ ಕಾರ್ಯವನ್ನು ಪೂರೈಸುತ್ತಾನೆ. ಆದುದರಿಂದ ದೈವ ಪ್ರೇರಣೆಯಿಂದಾಗಿ ಸಂಕಲ್ಪಿಸಿದ ಕಾರ್ಯವನ್ನು ಪೂರ್ಣಮಾಡಲು ಪುರುಷನು ಕಾರಣನಾಗುತ್ತಾನೆ. (ದ್ರೌಪದಿಯು ಹೇಳಿರುವುದನ್ನು ಈ ರೀತಿಯಾಗಿಯೂ ತರ್ಕಿಸಬಹುದಾಗಿದೆ. ಮಾನುವನು ಮಾಡಿದ ಕರ್ಮಾನುಸಾರವಾಗಿ ದೈವವು ಫಲಕೊಡಲು ಸಮರ್ಥವಾಗುವುದೇ ಹೊರತು ಮಾನವನು ಈ ಜನ್ಮದಲ್ಲಿ ಕರ್ಮಮಾಡದಿದ್ದರೆ ಮುಂದಿನ ಜನ್ಮದಲ್ಲಿ ದೈವವು ಫಲಕೊಡಲಾರದು. ಮಾನವನು ಮಾಡಿದ ಕರ್ಮಫಲವನ್ನು ಪರಮಾತ್ಮನು ಕೊಡುವನೇ ಹೊರತು ಕರ್ಮಮಾಡದೇ ಫಲವನ್ನು ಪರಮಾತ್ಮನು ಕೊಡಲಾರನು. ಆದುದರಿಂದ ಮನುಷ್ಯನು ತಾನು ಮಾಡುವ ಕರ್ಮಕ್ಕೆ ತಾನೇ ಪೂರ್ಣ ಸ್ವತಂತ್ರನು. ಸಂಕಲ್ಪಿಸಿದುದನ್ನು ಬುದ್ಧಿಯ ಸಹಾಯದಿಂದ ಪೂರ್ಣಮಾಡುವ ಸಾಮರ್ಥ್ಯವು ಮಾನವನಿಗಲ್ಲದೇ ಬೇರಾರಿಗೂ ಇರುವುದಿಲ್ಲ.) ↩︎

  12. ಭಾರತದರ್ಶನ ಸಂಪುಟ: ಮನುಷ್ಯನು ಬುದ್ಧಿಶಕ್ತಿಯಿಂದಲೇ ಎಲ್ಲೀನಿಂದ ಎಣ್ಣೆಯನ್ನು ತೆಗೆಯಲು ತಿಳೀದುಕೊಂಡನು. ಹಸುವಿನಲ್ಲಿರುವ ಹಾಲನ್ನು ಕರೆದು ಆ ಹಾಲನ್ನು ಮೊಸರುಮಾಡಲು ತಿಳೀದುಕೊಂಡನು. ಕಟ್ಟಿಗೆಯಲ್ಲಿರುವ ಬೆಂಕಿಯನ್ನು ಹೊತ್ತಿಸಿ ಆಹಾರವನ್ನು ಬೇಯಿಸಿ ತಿನ್ನಲೂ ಮನುಷ್ಯನು ತನ್ನ ಬುದ್ಧಿಶಕ್ತಿಯಿಂದಲೇ ಅರಿತನು. ಪದಾರ್ಥಗಳನ್ನು ಸಿದ್ಧಪಡಿಸುವ ರೀತಿಯನ್ನು ತಿಳಿದನಂತರ ಮನುಷ್ಯನು ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನೂ ಒದಗಿಸಿಕೊಳ್ಳುತ್ತಾನೆ. ತಾವು ಮಾಡಿದ ಕಾರ್ಯಗಳಿಗೆ ಒಡನೆಯೇ ಫಲವು ಸಿಕ್ಕುವ ಕಾರಣದಿಂದಲೇ ಮಾನವನು ಪೃಥ್ವಿಯಲ್ಲಿ ಜೀವಿಸಲು ಸಾಧ್ಯವಾಗಿದೆ. ↩︎

  13. ಆದರೆ ಸಾಮಗ್ರಿಗಳು ಸಿದ್ಧವಾದಾಗಲೂ ಅಕುಶಲನಾದವನು ಅಥವಾ ವಿನಿಯೋಗವನ್ನು ಸರಿಯಾಗಿ ತಿಳಿಯದಿರುವವನು ಉತ್ತಮಫಲವನ್ನು ಪಡೆಯಲಾರನು. ವಿನಿಯೋಗವನ್ನು ಪೂರ್ಣವಾಗಿ ತಿಳಿದವನು ಉತ್ತಮಫಲವನ್ನು ಪಡೆಯುತ್ತಾನೆ. ಒಬ್ಬನು ಸಿದ್ಧಪಡಿಸಿದ ವಸ್ತುವನ್ನು ನೋಡಿಯೇ ನಾವು ಅದನ್ನು ಮಾಡಿದವನು ಕುಶಲನೇ ಅಥವಾ ಅಕುಶಲನೇ ಎಂಬುದನ್ನು ತಿಳೀದುಕೊಳ್ಳಬಹುದಾಗಿದೆ. ↩︎

  14. ಪುರುಷಸಾಧ್ಯವಾದ ಕರ್ಮಗಳಲ್ಲಿಯೂ ಪುರುಷನು ಕಾರಣನಲ್ಲ, ದೈವವೇ ಕಾರಣ ಎನ್ನುವುದಾದರೆ ಯಜ್ಞ-ಯಾಗಾದಿಗಳೂ, ವಾಪೀ-ಕೂಪ-ತಟಾಕಾದಿ ಧಾರ್ಮಿಕಕ್ರಿಯೆಗಳೆಲ್ಲವೂ ನಿಷ್ಫಲಗಳೇ ಆಗುತ್ತವೆ. ಪ್ರಪಂಚದಲ್ಲಿ ಗುರು-ಶಿಷ್ಯ ಮೊದಲಾದ ತಾರತಮ್ಯಕ್ಕೇ ಅವಕಾಶವಿರುವುದಿಲ್ಲ. ↩︎

  15. ಆದುದರಿಂದ ಮಾನವನು ತನ್ನ ಕಾರ್ಯಕ್ಕೆ ತಾನೇ ಕರ್ತನಾಗುತ್ತಾನೆ. ಅವನು ತನ್ನ ಕರ್ತವ್ಯದಲ್ಲಿ ವಿಜಯಿಯಾದರೆ ಎಲ್ಲರಿಂದಲೂ ಶ್ಲಾಘೀಸಲ್ಪಡುತ್ತಾನೆ. ಒಂದು ವೇಳೆ ವಿಜಯಿಯಾಗದಿದ್ದರೆ ಅಪಯಶಸ್ಸಿಗೆ ಗುರಿಯಾಗುತ್ತಾನೆ. ಮಾನವನು ತನ್ನ ಕಾರ್ಯಗಳಿಗೆ ತಾನೇ ಕರ್ತನೆಂದು ಸಿದ್ಧಾಂತವಾಗದಿದ್ದರೆ ಕಾರ್ಯದಲ್ಲಿ ವಿಜಯಿಯಾದಾಗ ಶ್ಲಾಘಿಸುವುದೇಕೆ? ಕಾರ್ಯದಲ್ಲಿ ಪರಾಜಿತನಾದಾಗ ಅವನನ್ನು ನಿಂದೆ ಮಾಡುವುದೇಕೆ? ಆದುದರಿಂದ ಮಾನವನ ಸುಖ-ದುಃಖಗಳಿಗೆ, ಜಯಾಪಜಯಗಳಿಗೆ, ಯಶಸ್ಸು-ಅಪಯಶಸ್ಸುಗಳಿಗೆ ಅವನು ಮಾಡುವ ಕರ್ಮ ಅಥವಾ ಕ್ರಿಯೆಯೇ ಕಾರಣವೆಂದು ಸಿದ್ಧಾಂತಮಾಡಬಹುದಾಗಿದೆ. ↩︎

  16. ಒಂದುವೇಳೆ ಪೂರ್ವಜನ್ಮದಲ್ಲಿ ಮಾಡಿರುವ ಪಾಪ-ಪುಣ್ಯಕಾರ್ಯಗಳ ಫಲವನ್ನು ದೈವವು ಯಥಾಕ್ರಮವಾಗಿ ಕೊಡದಿದ್ದರೆ - ಈ ಪ್ರಪಂಚದಲ್ಲಿ ಹುಟ್ಟಿದ ಪ್ರಾಣಿಯು ಕಷ್ಟ-ಸುಖಗಳನ್ನೇಕೆ ಅನುಭವಿಸಬೇಕಾಗಿದ್ದಿತು? ಪೂರ್ವಜನ್ಮದ ಕರ್ಮಫಲವಿರದಿದ್ದರೆ ಹುಟ್ಟಿದವರೆಲ್ಲರೂ ಸುಖವಾಗಿಯೇ ಇರಬೇಕಾಗಿತ್ತಲ್ಲವೇ? ↩︎