032 ಯುಧಿಷ್ಠಿರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಕೈರಾತ ಪರ್ವ

ಅಧ್ಯಾಯ 32

ಸಾರ

ತಾನು ಫಲವನ್ನು ಬಯಸಿ ಧರ್ಮವನ್ನು ಆಚರಿಸುತ್ತಿಲ್ಲ; ಆದರೆ ಅದು ಫಲ ಕೊಡಲಿ ಅಥವಾ ಕೊಡದಿರಲಿ, ಒಬ್ಬ ಗೃಹಸ್ಥನು ಮಾಡಬೇಕಾದ್ದನ್ನು ಮಾಡುತ್ತಿದ್ದೇನೆ ಎಂದು ಯುಧಿಷ್ಠಿರನು ಹೇಳುವುದು (1-22). ಧರ್ಮವು ನಿಷ್ಫಲವಾಗಿದ್ದರೆ ಪ್ರಪಂಚವೇ ಗಾಢಾಂಧಕಾರದಲ್ಲಿ ಮುಳುಗಿಹೋಗುತ್ತಿತ್ತು; ಧರ್ಮದ ಫಲವನ್ನು ಸದ್ಯ ಕಾಣದ ಮಾತ್ರಕ್ಕೆ ಧರ್ಮವನ್ನೂ ದೇವತೆಗಳನ್ನೂ ಶಂಕಿಸಬಾರದೆಂದು ಹೇಳುವುದು (23-40).

03032001 ಯುಧಿಷ್ಠಿರ ಉವಾಚ।
03032001a ವಲ್ಗು ಚಿತ್ರಪದಂ ಶ್ಲಕ್ಷ್ಣಂ ಯಾಜ್ಞಸೇನಿ ತ್ವಯಾ ವಚಃ।
03032001c ಉಕ್ತಂ ತಚ್ಛ್ರುತಮಸ್ಮಾಭಿರ್ನಾಸ್ತಿಕ್ಯಂ ತು ಪ್ರಭಾಷಸೇ।।

ಯುಧಿಷ್ಠಿರನು ಹೇಳಿದನು: “ಯಾಜ್ಞಸೇನಿ! ನೀನು ಹೇಳಿದ ಮಾತುಗಳು ಉತ್ತಮ ಶಬ್ಧಗಳನ್ನೊಡಗೂಡಿವೆ ಮತ್ತು ಚೆನ್ನಾಗಿದೆ. ಆದರೆ ನೀನು ಹೇಳುವುದು ನಾಸ್ತಿಕರ ಭಾಷೆಯಂತೆ ನನಗೆ ಕೇಳುತ್ತಿದೆ.

03032002a ನಾಹಂ ಧರ್ಮಫಲಾನ್ವೇಷೀ ರಾಜಪುತ್ರಿ ಚರಾಮ್ಯುತ।
03032002c ದದಾಮಿ ದೇಯಮಿತ್ಯೇವ ಯಜೇ ಯಷ್ಟವ್ಯಮಿತ್ಯುತ।।

ರಾಜಪುತ್ರಿ! ನಾನು ಧರ್ಮದ ಫಲವನ್ನು ಬಯಸಿ ನಡೆಯುತ್ತಿಲ್ಲ. ಕೊಡಬೇಕು ಎಂದು ಕೊಡುತ್ತೇನೆ ಮತ್ತು ಯಾಜಿಸಬೇಕೆಂದು ಯಜ್ಞಗಳನ್ನು ಮಾಡುತ್ತೇನೆ.

03032003a ಅಸ್ತು ವಾತ್ರ ಫಲಂ ಮಾ ವಾ ಕರ್ತವ್ಯಂ ಪುರುಷೇಣ ಯತ್।
03032003c ಗೃಹಾನಾವಸತಾ ಕೃಷ್ಣೇ ಯಥಾಶಕ್ತಿ ಕರೋಮಿ ತತ್।।

ಕೃಷ್ಣೇ! ಅದು ಫಲವನ್ನು ಕೊಡಲಿ ಅಥವಾ ಕೊಡದಿರಲಿ, ಒಬ್ಬ ಗೃಹಸ್ಥ ಪುರುಷನು ಮಾಡಬೇಕಾದುದನ್ನು ಯಥಾಶಕ್ತಿ ಮಾಡುತ್ತೇನೆ.

03032004a ಧರ್ಮಂ ಚರಾಮಿ ಸುಶ್ರೋಣಿ ನ ಧರ್ಮಫಲಕಾರಣಾತ್।
03032004c ಆಗಮಾನನತಿಕ್ರಮ್ಯ ಸತಾಂ ವೃತ್ತಮವೇಕ್ಷ್ಯ ಚ।
03032004e ಧರ್ಮ ಏವ ಮನಃ ಕೃಷ್ಣೇ ಸ್ವಭಾವಾಚ್ಚೈವ ಮೇ ಧೃತಂ।।

ಸುಶ್ರೋಣಿ! ನಾನು ಧರ್ಮದಲ್ಲಿ ನಡೆಯುತ್ತೇನೆ. ಆದರೆ ಧರ್ಮದಿಂದ ನಡೆಯುವುದು ಫಲವನ್ನು ಕೊಡುತ್ತದೆ ಎನ್ನುವ ಕಾರಣದಿಂದಲ್ಲ. ಧರ್ಮವನ್ನು ಅತಿಕ್ರಮಿಸಬಾರದೆಂದು ಮತ್ತು ಸತ್ಯವಂತರಂತೆ ನಡೆದುಕೊಳ್ಳಬೇಕೆಂದು. ಕೃಷ್ಣೇ! ಸ್ವಭಾವತಃ ನನ್ನ ಮನಸ್ಸು ಧರ್ಮದಲ್ಲಿಯೇ ದೃಢವಾಗಿದೆ.

03032005a ನ ಧರ್ಮಫಲಮಾಪ್ನೋತಿ ಯೋ ಧರ್ಮಂ ದೋಗ್ಧುಮಿಚ್ಚತಿ।
03032005c ಯಶ್ಚೈನಂ ಶಂಕತೇ ಕೃತ್ವಾ ನಾಸ್ತಿಕ್ಯಾತ್ಪಾಪಚೇತನಃ।।

ಧರ್ಮವನ್ನು ಬಳಸಿಕೊಳ್ಳಲು ಬಯಸುವವನು, ಮತ್ತು ಧರ್ಮದಂತೆ ನಡೆದುಕೊಂಡು ಆಮೇಲೆ ಅದರ ಕುರಿತು ಶಂಕಿಸುವವನು, ಮತ್ತು ನಾಸ್ತಿಕನಾಗಿದ್ದುಕೊಂಡು ಧರ್ಮವನ್ನು ಪಾಲಿಸುವವನು ಮತ್ತು ಪಾಪಬುದ್ಧಿಯಿಂದ ಧರ್ಮಾಚರಣೆ ಮಾಡುವವನು ಧರ್ಮದ ಫಲವನ್ನು ಹೊಂದುವುದಿಲ್ಲ.

03032006a ಅತಿವಾದಾನ್ಮದಾಚ್ಚೈವ ಮಾ ಧರ್ಮಮತಿಶಂಕಿಥಾಃ।
03032006c ಧರ್ಮಾತಿಶಂಕೀ ಪುರುಷಸ್ತಿರ್ಯಗ್ಗತಿಪರಾಯಣಃ।।

ನಾನು ವೇದಪ್ರಾಮಾಣ್ಯದಿಂದಲೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ವೇದಗಳ ಪ್ರಮಾಣವೇ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ವೇದಪ್ರಮಾಣವಾಗಿರುವ ಧರ್ಮದ ವಿಷಯದಲ್ಲಿ ಖಂಡಿತವಾಗಿಯೂ ಸಂಶಯಪಡಬೇಡ. ಯಾವನು ಧರ್ಮದ ವಿಷಯದಲ್ಲಿ ಸಂಶಯಪಡುವನೋ ಅವನು ಜನ್ಮಾಂತರದಲ್ಲಿ ತಿರ್ಯಗ್ಯೋನಿಯಲ್ಲಿ ಪಶು-ಪಕ್ಷಿಗಳಾಗಿ ಹುಟ್ಟುತ್ತಾನೆ.

03032007a ಧರ್ಮೋ ಯಸ್ಯಾತಿಶಂಕ್ಯಃ ಸ್ಯಾದಾರ್ಷಂ ವಾ ದುರ್ಬಲಾತ್ಮನಃ।
03032007c ವೇದಾಚ್ಶೂದ್ರ ಇವಾಪೇಯಾತ್ಸ ಲೋಕಾದಜರಾಮರಾತ್।।

ಯಾರಿಗೆ ಧರ್ಮದ ವಿಷಯದಲ್ಲಿ ಋಷಿಪ್ರೋಕ್ತ ಪ್ರವಚನಗಳ ವಿಷಯದಲ್ಲಿ ದುರ್ಬಲ ಬುದ್ಧಿಯಿರುವುದೋ ಅವರಿಗೆ, ಶ್ರೂದ್ರರಿಗೂ ವೇದಗಳಿಗೂ ಎಷ್ಟು ಅಂತರವಿರುವುದೋ ಅಷ್ಟೇ ಉತ್ತಮಲೋಕಗಳೂ ಮತ್ತು ಮೋಕ್ಷಮಾರ್ಗವೂ ಅತಿದೂರವಾಗುವವು.

03032008a ವೇದಾಧ್ಯಾಯೀ ಧರ್ಮಪರಃ ಕುಲೇ ಜಾತೋ ಯಶಸ್ವಿನಿ।
03032008c ಸ್ಥವಿರೇಷು ಸ ಯೋಕ್ತವ್ಯೋ ರಾಜಭಿರ್ಧರ್ಮಚಾರಿಭಿಃ।।

ಉತ್ತಮ ಕುಲದಲ್ಲಿ ಹುಟ್ಟಿದ ಯಶಸ್ವಿನೀ ವೇದಾಧ್ಯಾಯೀ ಧರ್ಮಪರನನ್ನು ಧರ್ಮಾತ್ಮರು ಕೇವಲ ಜ್ಞಾನಕ್ಕೆ ಮತ್ತು ಧರ್ಮಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟು ರಾಜರ್ಷಿಗಳಂತೆ ಪೂಜಿಸಿ ಗೌರವಿಸುತ್ತಾರೆ.

03032009a ಪಾಪೀಯಾನ್ ಹಿ ಸ ಶೂದ್ರೇಭ್ಯಸ್ತಸ್ಕರೇಭ್ಯೋ ವಿಶೇಷತಃ।
03032009c ಶಾಸ್ತ್ರಾತಿಗೋ ಮಂದಬುದ್ಧಿರ್ಯೋ ಧರ್ಮಮತಿಶಂಕತೇ।।

ಶಾಸ್ತ್ರಗಳನ್ನು ತಿರಸ್ಕರಿಸಿ ಧರ್ಮವನ್ನು ಶಂಕಿಸಿಸುವ ಮಂದಬುದ್ಧಿಯು ಶೂದ್ರರು ಮತ್ತು ಕಳ್ಳರಿಗಿಂತಲೂ ಪಾಪಿ.

03032010a ಪ್ರತ್ಯಕ್ಷಂ ಹಿ ತ್ವಯಾ ದೃಷ್ಟ ಋಷಿರ್ಗಚ್ಚನ್ಮಹಾತಪಾಃ।
03032010c ಮಾರ್ಕಂಡೇಯೋಽಪ್ರಮೇಯಾತ್ಮಾ ಧರ್ಮೇಣ ಚಿರಜೀವಿತಾಂ।।
03032011a ವ್ಯಾಸೋ ವಸಿಷ್ಠೋ ಮೈತ್ರೇಯೋ ನಾರದೋ ಲೋಮಶಃ ಶುಕಃ।
03032011c ಅನ್ಯೇ ಚ ಋಷಯಃ ಸಿದ್ಧಾ ಧರ್ಮೇಣೈವ ಸುಚೇತಸಃ।।

ಇಲ್ಲಿಗೆ ಬಂದಿದ್ದ ಮಹಾತಪಸ್ವಿ ಋಷಿಗಳನ್ನು -ಅಪ್ರಮೇಯಾತ್ಮ, ಧರ್ಮದಿಂದ ಚಿರಂಜೀವಿಯಾಗಿರುವ ಮಾರ್ಕಂಡೇಯ, ವ್ಯಾಸ, ವಸಿಷ್ಠ, ಮೈತ್ರೇಯ, ನಾರದ, ಲೋಮಶ, ಶುಕ ಮತ್ತು ಧರ್ಮದಲ್ಲಿಯೇ ನಿರತರಾಗಿರುವ ಸಿದ್ಧ ಸುಚೇತಸ ಋಷಿಗಳನ್ನು-ನೀನು ಪ್ರತ್ಯಕ್ಷವಾಗಿ ಕಂಡಿದ್ದೀಯೆ.

03032012a ಪ್ರತ್ಯಕ್ಷಂ ಪಶ್ಯಸಿ ಹ್ಯೇತಾನ್ದಿವ್ಯಯೋಗಸಮನ್ವಿತಾನ್।
03032012c ಶಾಪಾನುಗ್ರಹಣೇ ಶಕ್ತಾನ್ದೇವೈರಪಿ ಗರೀಯಸಃ।।

ದೇವತೆಗಳಿಗಿಂತಲೂ ಹಿರಿಯರಾದ, ಶಾಪ ಮತ್ತು ಅನುಗ್ರಹಗಳನ್ನು ನೀಡಲು ಶಕ್ಯರಾದ ಈ ದಿವ್ಯಯೋಗಸಮನ್ವಿತರನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ.

03032013a ಏತೇ ಹಿ ಧರ್ಮಮೇವಾದೌ ವರ್ಣಯಂತಿ ಸದಾ ಮಮ।
03032013c ಕರ್ತವ್ಯಮಮರಪ್ರಖ್ಯಾಃ ಪ್ರತ್ಯಕ್ಷಾಗಮಬುದ್ಧಯಃ।।

ಅಮರರಿಗೆ ಸಮಾನರಾದ, ಪ್ರತ್ಯಕ್ಷವಾಗಿ ಆಗಮಗಳ ವಿಚಾರವನ್ನು ಕಂಡುಕೊಂಡ ಇವರೇ ನನಗೆ ಸದಾ ಧರ್ಮದಲ್ಲಿಯೇ ನಡೆದುಕೊಳ್ಳಲು ಹೇಳುತ್ತಾ ಬಂದಿದ್ದಾರೆ.

03032014a ಅತೋ ನಾರ್ಹಸಿ ಕಲ್ಯಾಣಿ ಧಾತಾರಂ ಧರ್ಮಮೇವ ಚ।
03032014c ರಜೋಮೂಢೇನ ಮನಸಾ ಕ್ಷೇಪ್ತುಂ ಶಂಕಿತುಮೇವ ಚ।।

ಕಲ್ಯಾಣಿ! ಆದುದರಿಂದ ರಜೋಗುಣದಿಂದ ಪ್ರಭಾವಿತ ಮನಸ್ಸಿನಿಂದ ನೀನು ಧಾತರನನ್ನು ಮತ್ತು ಧರ್ಮವನ್ನು ಅವಹೇಳನಮಾಡುವುದು ಮತ್ತು ಶಂಕಿಸುವುದು ಸರಿಯಲ್ಲ.

03032015a ಧರ್ಮಾತಿಶಂಕೀ ನಾನ್ಯಸ್ಮಿನ್ಪ್ರಮಾಣಮಧಿಗಚ್ಚತಿ।
03032015c ಆತ್ಮಪ್ರಮಾಣ ಉನ್ನದ್ಧಃ ಶ್ರೇಯಸೋ ಹ್ಯವಮನ್ಯಕಃ।।

ಧರ್ಮದಲ್ಲಿ ಅತಿಯಾಗಿ ಸಂಶಯವಿರುವವನಿಗೆ ಪ್ರಮಾಣವೆನ್ನುವುದು ಏನೂ ದೊರೆಯದೇ ತನ್ನನ್ನೇ ಪ್ರಮಾಣವೆಂದು ತಿಳಿದು ಇತರರ ಶ್ರೇಯಸ್ಸನ್ನು ಅಲ್ಲಗಳೆಯುತ್ತಾನೆ.

03032016a ಇಂದ್ರಿಯಪ್ರೀತಿಸಂಬದ್ಧಂ ಯದಿದಂ ಲೋಕಸಾಕ್ಷಿಕಂ।
03032016c ಏತಾವಾನ್ಮನ್ಯತೇ ಬಾಲೋ ಮೋಹಮನ್ಯತ್ರ ಗಚ್ಚತಿ।।

ಕಣ್ಣಿಗೆ ಕಾಣುವ ಮತ್ತು ಇಂದ್ರಿಯಸುಖಕ್ಕೆ ಸಂಬಂಧಿಸಿದ ಲೋಕವೇ ಸಾಕ್ಷಿಯೆಂದು ತಿಳಿದು ಬುದ್ಧಿಯಿಲ್ಲದ ಬಾಲಕನಂತೆ ಬೇರೆ ಎಲ್ಲಿಯೋ ಹೋಗುತ್ತಾನೆ.

03032017a ಪ್ರಾಯಶ್ಚಿತ್ತಂ ನ ತಸ್ಯಾಸ್ತಿ ಯೋ ಧರ್ಮಮತಿಶಂಕತೇ।
03032017c ಧ್ಯಾಯನ್ಸ ಕೃಪಣಃ ಪಾಪೋ ನ ಲೋಕಾನ್ಪ್ರತಿಪದ್ಯತೇ।।

ಧರ್ಮದಲ್ಲಿ ಸಂಶಯವನ್ನಿಟ್ಟುಕೊಂಡು ನಡೆಯುವವನಿಗೆ ಪ್ರಾಯಶ್ಚಿತ್ತವೆನ್ನುವುದೇ ಇಲ್ಲ. ಎಷ್ಟೇ ಯೋಚಿಸಿದರೂ ಅಂಥಹ ಪಾಪಿ ಕೃಪಣನು ಲೋಕಗಳನ್ನು ಹೊಂದುವುದಿಲ್ಲ.

03032018a ಪ್ರಮಾಣಾನ್ಯತಿವೃತ್ತೋ ಹಿ ವೇದಶಾಸ್ತ್ರಾರ್ಥನಿಂದಕಃ।
03032018c ಕಾಮಲೋಭಾನುಗೋ ಮೂಢೋ ನರಕಂ ಪ್ರತಿಪದ್ಯತೇ।।

ವೇದಪ್ರಮಾಣಗಳನ್ನು ನಿರಾಕರಿಸುವವನು, ವೇದ ಮತ್ತು ಶಾಸ್ತ್ರಗಳ ಅರ್ಥಗಳನ್ನು ನಿಂದಿಸುವವನು, ಮತ್ತು ಕಾಮಲೋಭಗಳ ಹಿಂದೆಹೋಗುವ ಮೂಢನು ನರಕವನ್ನು ಹೊಂದುತ್ತಾನೆ.

03032019a ಯಸ್ತು ನಿತ್ಯಂ ಕೃತಮತಿರ್ಧರ್ಮಮೇವಾಭಿಪದ್ಯತೇ।
03032019c ಅಶಂಕಮಾನಃ ಕಲ್ಯಾಣಿ ಸೋಽಮುತ್ರಾನಂತ್ಯಮಶ್ನುತೇ।।

ಕಲ್ಯಾಣಿ! ಯಾರು ವೇದ ಮತ್ತು ಧರ್ಮಗಳ ವಿಷಯದಲ್ಲಿ ಶಂಕಿಸದೇ ಕರ್ತವ್ಯದೃಷ್ಟಿಯಿಂದ ನಿತ್ಯವೂ ಧರ್ಮಾಚರಣೆ ಮಾಡುವನೋ ಅಂತವನಿಗೆ ನಿಶ್ಚಯವಾಗಿಯೂ ಉತ್ತಮ ಲೋಕಗಳು ಸಿಗುತ್ತವೆ.

03032020a ಆರ್ಷಂ ಪ್ರಮಾಣಮುತ್ಕ್ರಮ್ಯ ಧರ್ಮಾನಪರಿಪಾಲಯನ್।
03032020c ಸರ್ವಶಾಸ್ತ್ರಾತಿಗೋ ಮೂಢಃ ಶಂ ಜನ್ಮಸು ನ ವಿಂದತಿ।।

ಋಷಿಗಳ ಪ್ರಮಾಣಗಳನ್ನು ಅಲ್ಲಗಳೆಯುತ್ತಾ ಧರ್ಮವನ್ನು ಪರಿಪಾಲಿಸದೇ ಸರ್ವ ಶಾಸ್ತ್ರಗಳನ್ನು ವಿರೋಧಿಸಿ ನಡೆದುಕೊಳ್ಳುವ ಮೂಢನು ಜನ್ಮಜನ್ಮಾಂತರಗಳಲ್ಲಿಯೂ ಸುಖವನ್ನು ಹೊಂದುವುದಿಲ್ಲ.

03032021a ಶಿಷ್ಟೈರಾಚರಿತಂ ಧರ್ಮಂ ಕೃಷ್ಣೇ ಮಾ ಸ್ಮಾತಿಶಮ್ಕಿಥಾಃ।
03032021c ಪುರಾಣಮೃಷಿಭಿಃ ಪ್ರೋಕ್ತಂ ಸರ್ವಜ್ಞೈಃ ಸರ್ವದರ್ಶಿಭಿಃ।।

ಕೃಷ್ಣೇ! ಶಿಷ್ಠರು ಆಚರಿಸುವ, ಸರ್ವವನ್ನೂ ತಿಳಿದಿರುವ, ಸರ್ವವನ್ನೂ ಪ್ರಮಾಣಪೂರ್ವಕವಾಗಿ ಕಂಡಿರುವ ಪುರಾಣ ಋಷಿಗಳು ಹೇಳಿದ ಧರ್ಮದ ಕುರಿತು ಸಂಶಯಪಡಬೇಡ.

03032022a ಧರ್ಮ ಏವ ಪ್ಲವೋ ನಾನ್ಯಃ ಸ್ವರ್ಗಂ ದ್ರೌಪದಿ ಗಚ್ಚತಾಂ।
03032022c ಸೈವ ನೌಃ ಸಾಗರಸ್ಯೇವ ವಣಿಜಃ ಪಾರಮೃಚ್ಚತಃ।।

ದ್ರೌಪದಿ! ಸ್ವರ್ಗಕ್ಕೆ ಹೋಗುವವರಿಗೆ ಧರ್ಮವೊಂದೇ ನೌಕೆ. ಬೇರೆ ಯಾವುದೂ ಅಲ್ಲ. ಅದು ಸಾಗರದ ಇನ್ನೊಂದು ದಡವನ್ನು ಸೇರಲು ಬಯಸುವ ವರ್ತಕರಿಗಿರುವ ಹಡಗಿನಂತೆ.

03032023a ಅಫಾಲೋ ಯದಿ ಧರ್ಮಃ ಸ್ಯಾಚ್ಚರಿತೋ ಧರ್ಮಚಾರಿಭಿಃ।
03032023c ಅಪ್ರತಿಷ್ಠೇ ತಮಸ್ಯೇತಜ್ಜಗನ್ಮಜ್ಜೇದನಿಂದಿತೇ।।
03032024a ನಿರ್ವಾಣಂ ನಾಧಿಗಚ್ಚೇಯುರ್ಜೀವೇಯುಃ ಪಶುಜೀವಿಕಾಂ।
03032024c ವಿಘಾತೇನೈವ ಯುಜ್ಯೇಯುರ್ನ ಚಾರ್ಥಂ ಕಿಂ ಚಿದಾಪ್ನುಯುಃ।।

ಅನಿಂದಿತೇ! ಒಂದುವೇಳೆ ಧರ್ಮಚಾರಿಗಳು ಅನುಸರಿಸುವ ಈ ಧರ್ಮವು ನಿಷ್ಫಲವೇ ಆಗಿದ್ದರೆ ಈ ವೇಳೆಗೆ ಇಡೀ ಪ್ರಪಂಚವೇ ಗಾಢಾಂಧಕಾರದಲ್ಲಿ ಮುಳುಗಿಹೋಗುತ್ತಿತ್ತು. ನಿರ್ವಾಣದ ಹಿಂದೆ ಯಾರೂ ಹೋಗುತ್ತಿರಲಿಲ್ಲ. ಮನುಷ್ಯರು ಪಶುಗಳಂತೆ ಜೀವಿಸುತ್ತಿದ್ದರು. ಯಾಗಗಳನ್ನು ಮಾಡುತ್ತಿರಲಿಲ್ಲ ಅಥವಾ ಯಾಗಗಳಿಗೆ ವಿಘ್ನಗಳನ್ನೇ ತರುತ್ತಿದ್ದರು ಮತ್ತು ಅದರಿಂದ ಯಾವ ಲಾಭವನ್ನೂ ಪಡೆಯುತ್ತಿರಲಿಲ್ಲ.

03032025a ತಪಶ್ಚ ಬ್ರಹ್ಮಚರ್ಯಂ ಚ ಯಜ್ಞಃ ಸ್ವಾಧ್ಯಾಯ ಏವ ಚ।
03032025c ದಾನಮಾರ್ಜವಮೇತಾನಿ ಯದಿ ಸ್ಯುರಫಲಾನಿ ವೈ।।
03032026a ನಾಚರಿಷ್ಯನ್ಪರೇ ಧರ್ಮಂ ಪರೇ ಪರತರೇ ಚ ಯೇ।
03032026c ವಿಪ್ರಲಂಭೋಽಯಮತ್ಯಂತಂ ಯದಿ ಸ್ಯುರಫಲಾಃ ಕ್ರಿಯಾಃ।।

ತಪಸ್ಸು, ಬ್ರಹ್ಮಚರ್ಯ, ಯಜ್ಞ ಮತ್ತು ಸ್ವಾಧ್ಯಾಯ, ಅದರಂತೆಯೇ ದಾನ, ಆರ್ಜವ ಮುಂತಾದವುಗಳು ನಿಷ್ಪ್ರಯೋಜಕವಾಗಿದ್ದರೆ ಹಿಂದಿನವರು, ಅವರ ಹಿಂದಿನವರು ಮತ್ತು ಅವರ ಹಿಂದಿನವರು ಧರ್ಮದಲ್ಲಿ ನಡೆದುಕೊಳ್ಳುತ್ತಿರಲಿಲ್ಲ. ಒಂದುವೇಳೆ ಈ ಕ್ರಿಯೆಗಳೆಲ್ಲವೂ ನಿಷ್ಪ್ರಯೋಜಕವಾಗಿದ್ದರೆ ಇವುಗಳನ್ನು ಆಚರಿಸಿದವರು ಅತ್ಯಂತ ವಂಚನೆಗೊಳಗಾಗಿದ್ದರು ಎಂದು ಹೇಳಬಹುದು!

03032027a ಋಷಯಶ್ಚೈವ ದೇವಾಶ್ಚ ಗಂಧರ್ವಾಸುರರಾಕ್ಷಸಾಃ।
03032027c ಈಶ್ವರಾಃ ಕಸ್ಯ ಹೇತೋಸ್ತೇ ಚರೇಯುರ್ಧರ್ಮಮಾದೃತಾಃ।।

ಋಷಿಗಳು, ದೇವತೆಗಳು, ಗಂಧರ್ವರು, ಅಸುರರು, ರಾಕ್ಷಸರು ಎಲ್ಲರೂ ಬಲಶಾಲಿಗಳು. ಯಾವ ಕಾರಣಕ್ಕಾಗಿ ಇವರು ಅತಿ ನಂಬಿಕೆಯಿಂದ ಧರ್ಮವನ್ನು ಆಚರಿಸುತ್ತಿದ್ದರು?

03032028a ಫಲದಂ ತ್ವಿಹ ವಿಜ್ಞಾಯ ಧಾತಾರಂ ಶ್ರೇಯಸಿ ಧ್ರುವೇ।
03032028c ಧರ್ಮಂ ತೇ ಹ್ಯಾಚರನ್ಕೃಷ್ಣೇ ತದ್ಧಿ ಧರ್ಮಸನಾತನಂ।।

ಕೃಷ್ಣೇ! ಧರ್ಮವು ಖಂಡಿತವಾಗಿಯೂ ಫಲದಾಯಕ, ಮತ್ತು ಧರ್ಮವನ್ನಾಚರಿಸಿದರೆ ಧಾತಾರನು ಶ್ರೇಯಸ್ಸನ್ನು ನೀಡುತ್ತಾನೆ ಎಂದು ತಿಳಿದೇ ಅವರು ಸನಾತನ ಧರ್ಮವನ್ನು ಆಚರಿಸುತ್ತಾ ಬಂದಿದ್ದಾರೆ.

03032029a ಸ ಚಾಯಂ ಸಫಲೋ ಧರ್ಮೋ ನ ಧರ್ಮೋಽಫಲ ಉಚ್ಯತೇ।
03032029c ದೃಶ್ಯಂತೇಽಪಿ ಹಿ ವಿದ್ಯಾನಾಂ ಫಲಾನಿ ತಪಸಾಂ ತಥಾ।।

ವಿದ್ಯೆ ಮತ್ತು ತಪಸ್ಸು ಫಲವನ್ನು ನೀಡುತ್ತವೆ ಎಂದು ಪ್ರತ್ಯಕ್ಷವಾಗಿ ಕಂಡಿದ್ದೇವೆ ಮತ್ತು ತಿಳಿದಿದ್ದೇವೆ. ಧರ್ಮವು ಫಲವನ್ನು ನೀಡುತ್ತದೆ ಮತ್ತು ನಿಷ್ಫಲವಾಗುವುದಿಲ್ಲ ಎಂದು ಹೇಳುತ್ತಾರೆ.

03032030a ತ್ವಯ್ಯೇತದ್ವೈ ವಿಜಾನೀಹಿ ಜನ್ಮ ಕೃಷ್ಣೇ ಯಥಾ ಶ್ರುತಂ।
03032030c ವೇತ್ಥ ಚಾಪಿ ಯಥಾ ಜಾತೋ ಧೃಷ್ಟದ್ಯುಮ್ನಃ ಪ್ರತಾಪವಾನ್।।
03032031a ಏತಾವದೇವ ಪರ್ಯಾಪ್ತಮುಪಮಾನಂ ಶುಚಿಸ್ಮಿತೇ।

ಕೃಷ್ಣೇ! ಶುಚಿಸ್ಮಿತೇ! ನಿನ್ನ ವಿಷಯದಲ್ಲಿಯೂ ಇದೇ ಆಗಲಿಲ್ಲವೇ? ನಿನ್ನ ಜನ್ಮದ ಕುರಿತು ನೀನು ಏನನ್ನು ಕೇಳಿಕೊಂಡಿದ್ದೀಯೋ ಅದನ್ನೇ ಸ್ಮರಿಸಿಕೋ. ಪ್ರತಾಪಿ ಧೃಷ್ಟದ್ಯುಮ್ನನೂ ಹೇಗೆ ಹುಟ್ಟಿದ ಎನ್ನುವುದನ್ನು ನೀನು ತಿಳಿದಿದ್ದೀಯೆ. ಇದೇ ಅದಕ್ಕೆ (ತಪಸ್ಸು ಫಲವನ್ನು ನೀಡುತ್ತದೆ ಎನ್ನುವುದಕ್ಕೆ) ಸರಿಯಾದ ಉಪಮಾನ.

03032031c ಕರ್ಮಣಾಂ ಫಲಮಸ್ತೀತಿ ಧೀರೋಽಲ್ಪೇನಾಪಿ ತುಷ್ಯತಿ।।
03032032a ಬಹುನಾಪಿ ಹ್ಯವಿದ್ವಾಂಸೋ ನೈವ ತುಷ್ಯಂತ್ಯಬುದ್ಧಯಃ।
03032032c ತೇಷಾಂ ನ ಧರ್ಮಜಂ ಕಿಂ ಚಿತ್ಪ್ರೇತ್ಯ ಶರ್ಮಾಸ್ತಿ ಕರ್ಮ ವಾ।।

ಕರ್ಮಗಳಿಂದ ಫಲದೊರೆಯುತ್ತದೆ ಎಂದು ತಿಳಿದು ಸ್ವಲ್ಪದರಲ್ಲಿಯೇ ತೃಪ್ತಿಪಡೆಯುವವನು ವಿದ್ವಾಂಸನು. ಬುದ್ಧಿಯಿಲ್ಲದವರು ಯಾವಾಗಲೂ ಎಷ್ಟೇ ಸಿಕ್ಕಿದರೂ ಅಸಂತುಷ್ಟರಾಗಿದ್ದುಕೊಂಡು ಇಲ್ಲಿಯೂ ಸಂತೋಷಪಡುವುದಿಲ್ಲ ಮತ್ತು ಧರ್ಮಾಚರಣೆಯನ್ನು ಮಾಡದೇ ಇದ್ದ ಅವರಿಗೆ ಪರಲೋಕದಲ್ಲಿಯೂ ಧರ್ಮಜನಿತ ಸುಖವು ದೊರೆಯುವುದಿಲ್ಲ.

03032033a ಕರ್ಮಣಾಮುತ ಪುಣ್ಯಾನಾಂ ಪಾಪಾನಾಂ ಚ ಫಲೋದಯಃ।
03032033c ಪ್ರಭವಶ್ಚಾಪ್ಯಯಶ್ಚೈವ ದೇವಗುಹ್ಯಾನಿ ಭಾಮಿನಿ।।

ಭಾಮಿನಿ! ಕರ್ಮಗಳಿಗೆ ಪಾಪ-ಪುಣ್ಯಫಲಗಳು ಹೇಗೆ ಪ್ರಾಪ್ತವಾಗುತ್ತವೆ ಮತ್ತು ಕರ್ಮಗಳು ಹೇಗೆ ಹುಟ್ಟುತ್ತವೆ ಮತ್ತು ನಾಶವಾಗುತ್ತವೆ ಎನ್ನುವುದು ದೇವರಹಸ್ಯ.

03032034a ನೈತಾನಿ ವೇದ ಯಃ ಕಶ್ಚಿನ್ಮುಹ್ಯಂತ್ಯತ್ರ ಪ್ರಜಾ ಇಮಾಃ।
03032034c ರಕ್ಷ್ಯಾಣ್ಯೇತಾನಿ ದೇವಾನಾಂ ಗೂಢಮಾಯಾ ಹಿ ದೇವತಾಃ।।

ಇವುಗಳನ್ನು ಯಾರೂ ತಿಳಿದಿಲ್ಲ, ಪ್ರಜೆಗಳು ಇದರ ಕುರಿತು ಕತ್ತಲೆಯಲ್ಲಿಯೇ ಇದ್ದಾರೆ. ದೇವತೆಗಳ ಈ ಗೂಢ ಮಾಯೆಯನ್ನು ದೇವತೆಗಳು ರಕ್ಷಿಸುತ್ತಿದ್ದಾರೆ.

03032035a ಕೃಶಾಂಗಾಃ ಸುವ್ರತಾಶ್ಚೈವ ತಪಸಾ ದಗ್ಧಕಿಲ್ಬಿಷಾಃ।
03032035c ಪ್ರಸನ್ನೈರ್ಮಾನಸೈರ್ಯುಕ್ತಾಃ ಪಶ್ಯಂತ್ಯೇತಾನಿ ವೈ ದ್ವಿಜಾಃ।।

ಪಾಪ ಕರ್ಮಗಳನ್ನು ತಪಸ್ಸಿನಿಂದ ಸುಟ್ಟುಹಾಕಿದ, ಕೃಶಾಂಗ ಸುವ್ರತ ಪ್ರಸನ್ನ ಮನಸ್ಸನ್ನು ಹೊಂದಿದ ದ್ವಿಜರು ಮಾತ್ರ ಇವುಗಳನ್ನು ಕಂಡುಕೊಂಡಿದ್ದಾರೆ.

03032036a ನ ಫಲಾದರ್ಶನಾದ್ಧರ್ಮಃ ಶಂಕಿತವ್ಯೋ ನ ದೇವತಾಃ।
03032036c ಯಷ್ಟವ್ಯಂ ಚಾಪ್ರಮತ್ತೇನ ದಾತವ್ಯಂ ಚಾನಸೂಯತಾ।।
03032037a ಕರ್ಮಣಾಂ ಫಲಮಸ್ತೀತಿ ತಥೈತದ್ಧರ್ಮ ಶಾಶ್ವತಂ।
03032037c ಬ್ರಹ್ಮಾ ಪ್ರೋವಾಚ ಪುತ್ರಾಣಾಂ ಯದೃಷಿರ್ವೇದ ಕಶ್ಯಪಃ।।

ಧರ್ಮದ ಫಲವನ್ನು ಸದ್ಯ ಕಾಣದ ಮಾತ್ರಕ್ಕೆ ಧರ್ಮವನ್ನೂ ದೇವತೆಗಳನ್ನೂ ಶಂಕಿಸಬೇಡ. ಅಪ್ರಮತ್ತನಾಗಿ ಯಜ್ಞ-ಯಾಗಗಳನ್ನು ಮಾಡಬೇಕು ಮತ್ತು ಅಸೂಯೆಪಡದೇ ದಾನಮಾಡಬೇಕು. ಕರ್ಮಗಳಿಗೆ ಫಲವಿದ್ದೇ ಇದೆ. ಆದುದರಿಂದಲೇ ಧರ್ಮವು ಶಾಶ್ವತವಾಗಿದೆ ಎಂದು ಬ್ರಹ್ಮನು ಕಶ್ಯಪನೇ ಮೊದಲಾದ ತನ್ನ ಮಕ್ಕಳಿಗೆ ಹೇಳಿದ್ದನು.

03032038a ತಸ್ಮಾತ್ತೇ ಸಂಶಯಃ ಕೃಷ್ಣೇ ನೀಹಾರ ಇವ ನಶ್ಯತು।
03032038c ವ್ಯವಸ್ಯ ಸರ್ವಮಸ್ತೀತಿ ನಾಸ್ತಿಕ್ಯಂ ಭಾವಮುತ್ಸೃಜ।।

ಕೃಷ್ಣೇ! ಆದುದರಿಂದ ಮಂಜು ಕರಗುವಂತೆ ನಿನ್ನ ಸಂಶಯವು ನಾಶವಾಗಲಿ. ಎಲ್ಲವೂ ಹೀಗೆಯೇ ಎಂದು ನಿಶ್ಚಯಿಸಿ ನಿನ್ನ ಮನಸ್ಸಿನಲ್ಲಿ ಹುಟ್ಟಿದ ನಾಸ್ತಿಕ್ಯಭಾವವನ್ನು ತೊರೆ.

03032039a ಈಶ್ವರಂ ಚಾಪಿ ಭೂತಾನಾಂ ಧಾತಾರಂ ಮಾ ವಿಚಿಕ್ಷಿಪಃ।
03032039c ಶಿಕ್ಷಸ್ವೈನಂ ನಮಸ್ವೈನಂ ಮಾ ತೇ ಭೂದ್ಬುದ್ಧಿರೀದೃಶೀ।।

ಪ್ರಾಣಿಗಳಿಗೆ ಧಾತಾರನಾಗಿರುವ, ಸರ್ವಾಂತರ್ಯಾಮಿಯಾಗಿರುವ, ಎಲ್ಲರಿಗೂ ಸ್ವಾಮಿಯಾಗಿರುವ ಪರಮ ಪುರುಷನನ್ನು ನಿಂದಿಸಬೇಡ. ಅವನನ್ನು ಸೇರುವುದು ಹೇಗೆಂಬುದನ್ನು ತಿಳಿದು ಅವನಿಗೆ ಶರಣಾಗತಳಾಗು.

03032040a ಯಸ್ಯ ಪ್ರಸಾದಾತ್ತದ್ಭಕ್ತೋ ಮರ್ತ್ಯೋ ಗಚ್ಚತ್ಯಮರ್ತ್ಯತಾಂ।
03032040c ಉತ್ತಮಂ ದೈವತಂ ಕೃಷ್ಣೇ ಮಾತಿವೋಚಃ ಕಥಂ ಚನ।।

ಕೃಷ್ಣೇ! ಯಾರ ಪ್ರಸಾದದಿಂದ ಮನುಷ್ಯನು ಅಮರ್ತ್ಯನಾಗುತ್ತಾನೋ ಅಂಥಹ ಪರಮ ಪುರುಷನನನ್ನು ಯಾವ ಕಾರಣದಿಂದಲೂ ಅನಾದರಿಸಬೇಡ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಯುಧಿಷ್ಠಿರವಾಕ್ಯೇ ದ್ವಾತ್ರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಯುಧಿಷ್ಠಿರವಾಕ್ಯದಲ್ಲಿ ಮೂವತ್ತೆರಡನೆಯ ಅಧ್ಯಾಯವು.